ಸಂಪದಿಗರಲ್ಲಿ ಮನವಿ
ಸಂಪದಿಗರೆ,
೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ ಅದರ ಮೂಲಕ ನಮ್ಮ ತಿಳಿವನ್ನು ವಿಸ್ತರಿಸಿಕೊಳ್ಳುವುದರಲ್ಲಿ. ಇದಕ್ಕೆ ಯಾವುದೇ ಭಾವನೆಗಳ ಒತ್ತಡ ಹೇರುವವರನ್ನು ದಯವಿಟ್ಟು ನಿರ್ಲಕ್ಷಿಸಿ.
೨) ಅನುಮಾನ, ನಗು ಹಾಗು ತಮಾಷೆಯಷ್ಟೇ ಸಹಜವಾದ ಪ್ರತಿಕ್ರಿಯೆ - ಸಿಟ್ಟು ಹಾಗು ಅಸಹನೆ ಕೂಡ. ಅಸಹನೆ ಅಥವಾ ಸಿಟ್ಟಿನಲ್ಲಿ ಹುಟ್ಟಿದ ನಿಮ್ಮ ಅನಿಸಿಕೆಯನ್ನು ಸಂಯಮದಿಂದ ನಿರೂಪಿಸುವುದು ಸುಲಭವಲ್ಲ. ಆದರೂ ಮಾಡಲೇಬೇಕಾದ ಕೆಲಸ. ಹೇಳಿದ್ದನ್ನೇ ಹೇಳುತ್ತಾ, ಕಕ್ಕಿದ್ದನ್ನೇ ಕಕ್ಕುವವರ ಬರವಣಿಗೆಯ ಬಗ್ಗೆ ಅಸಹನೆ ಇರುವುದು ಒಳ್ಳೆಯದೇ. ಆ ಅಸಹನೆ ಅವರು ಬರೆದ ಸಂಗತಿಯ ಬಗ್ಗೆ ಇರುವುದರಿಂದ ಅದಕ್ಕೆ ಹಾಗೇ ಪ್ರತಿಕ್ರಿಯಿಸುವುದೂ ಒಳ್ಳೆಯದೇ.
೩) ನಿಮಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳುವುದಕ್ಕೆ ಯಾರ ಅಪ್ಪಣೆಯ ಅಗತ್ಯವೂ ಇಲ್ಲ. ಅವರ ಮನಸ್ಸಿಗೆ ನೋವಾಗಬಹುದು, ಇವರು ಏನು ಅಂದುಕೊಳ್ಳುತ್ತಾರೋ ಎಂದುಕೊಂಡು ಹಿಂಜರಿಯುವುದರಿಂದ ಯಾರಿಗೂ ಲಾಭವಿಲ್ಲ. ಯಾಕೆಂದರೆ ನಿಷ್ಠರುವಾಗಿದ್ದಾಗಲೇ ಒಟ್ಟಾಗಿ ಚರ್ಚಿಸಿ ಅರಿಯಲು ಸಾಧ್ಯ.
೪) ತಪ್ಪು/ಸುಳ್ಳು ಹೇಳಿ ತೋರಿಸಿಕೊಟ್ಟಾಗ ಒಪ್ಪಲು ಮನಸ್ಸಿಲ್ಲದವರು ಮೇಲೆ ಹೇಳಿರುವುದಕ್ಕೆ ಉತ್ತರವಾಗಿ ಎರಡು ಬಗೆಯಲ್ಲಿ ಹೆದರಿಸುತ್ತಾರೆ.
ಮೊದಲನೆಯದಾಗಿ - "ಮೇಲೆ ಹೇಳಿದ ಹಾಗೆ ನಡೆದುಕೊಂಡರೆ ಸಂಪದ ರಣರಂಗವಾಗಿಬಿಡುತ್ತದೆ" ಎಂದು. ಈ ಮಾತನ್ನು ದಯವಿಟ್ಟು ನಂಬಬೇಡಿ. ಚರ್ಚೆ ವಸ್ತುನಿಷ್ಠವಾಗಿದ್ದರೆ ಯಾವತ್ತೂ ರಣರಂಗವಾಗಬೇಕಾಗಿಲ್ಲ, ರಣರಂಗವಾಗುವುದಿಲ್ಲ. ಎರಡನೆಯದಾಗಿ - ಜನ ಬೇಸರಗೊಂಡು ಸಂಪದ ಬಿಟ್ಟು ಹೊರಟು ಹೋಗುತ್ತಾರೆ ಎಂದು. ಈ ಮಾತು ನಿಜವಾದರೂ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಯಾರೊಬ್ಬರು ಬಿಟ್ಟು ಹೋದರೂ ಸಂಪದ ಬಡವಾಗುತ್ತದೆ ಎಂಬುದು ನಿಜ. ಆದರೆ ಅದು ನೀಗಿಕೊಳ್ಳಲಾರದಂತಹ ಬಡತನವೇನಲ್ಲ. ಯಾರೇ ಬರೆಯದಿದ್ದರೂ ಕೂಡ ಉಳಿದವರಿಂದ ಸಂಪದ ಮುಂದುವರೆಯಬಲ್ಲುದು. ಅಷ್ಟು ಗಟ್ಟಿತನ ಸಂಪದಿಗರಲ್ಲಿದೆ.
೫) ಪ್ರಾಮಾಣಿಕವಾಗಿ ನಿಮ್ಮ ಅಸಹನೆಯನ್ನು ಹೇಳಿದಾಗ, ಅನುಮಾನ ಪಟ್ಟು ಪ್ರಶ್ನಿಸಿದಾಗ ನಿಮ್ಮಲ್ಲೇ ವಯ್ಯಕ್ತಿಕವಾಗಿ ಹುಳುಕು ಹುಡುಕುತ್ತಾರೆ. ಚಂದ್ರಮೋಹನ ಜೈನನ ಬಗೆಗಿನ ಬರಹದಲ್ಲಿ - "ಎಲ್ಲರೂ ಓದಿ ಸುಮ್ಮನಿದ್ದಾರೆ, ನೀವು ಮಾತ್ರ ಯಾಕೆ ಹೀಗೆ ಪ್ರತಿಕ್ರಿಯಿಸುತ್ತಿದ್ದೀರ?" ಎಂದು ವಯ್ಯಕ್ತಿಕವಾದ ಪ್ರಶ್ನೆ ನನ್ನನ್ನು ಕೇಳಲಾಯಿತು. ಇದು ಧೃತಿಗೆಡಿಸಲೆಂದೇ ಕೇಳುವಂತಹ ಪ್ರಶ್ನೆ. ನಿಮ್ಮಲ್ಲೇ ಏನೋ ನ್ಯೂನತೆ ಇದೆ ಎಂದು ಹಿಮ್ಮೆಟ್ಟಿಸುವುದಕ್ಕಾಗಿಯೇ ಕೇಳುವುದು. ಇದು ತುಂಬಾ ಹಳೆಯ ಟ್ರಿಕ್ಕು. ಇಲ್ಲಿ ಯಾರೂ ಯಾಕೆ ಪ್ರತಿಕ್ರಯಿಸುತ್ತಿದ್ದೀರ ಎಂದು ಜಸ್ಟಿಫೈ ಮಾಡಿಕೊಳ್ಳಬೇಕಾಗಿಲ್ಲ. ನಿಮ್ಮ ಪ್ರತಿಕ್ರಿಯೆ ಏನು ಎಂಬುದಷ್ಟೇ ಮುಖ್ಯ. ಆ ಪ್ರತಿಕ್ರಿಯೆ ನನ್ನ ಬಗ್ಗೆ ಹೇಳಿದ್ದಾದರೂ, ಸಂಪದದ ಬಗ್ಗೆ ಏನೋ ಹೇಳುತ್ತದಲ್ಲ ಅನಿಸಿತು.
೬) ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಈ ಬರಹವನ್ನು ಗಮನಿಸಿ. ಅದರಲ್ಲಿ ಯಾಣದ ಬಗ್ಗೆ ವಿವರಿಸುತ್ತಾ ಲೇಖಕರು ಹೇಳಿರುವ ಸುಳ್ಳು/ತಪ್ಪು ಹಾಗೇ ಇದೆ. ಸುಮಾರು ೫೧೦ ಸಲ ಓದಲ್ಪಟ್ಟಿದೆ. ಹುಡುಕಿದರೆ ಆ ಉತ್ಪ್ರೇಕ್ಷೆಯ ಮಾತುಗಳು ಎಷ್ಟು ತಪ್ಪು ಎಂದು ಎರಡು ನಿಮಿಷದಲ್ಲಿ ತಿಳಿಯುತ್ತದೆ. ವೆನುಜುವೆಲಾದ ಏಂಜಲ್ ಫಾಲ್ಸ್ ಜಲಪಾತಕ್ಕೆ ಕೆರೆಪ್ ಎಂಬ ನದಿಯ ನೀರಿನ ಸೆಲೆ ಇದೆ. ಲೇಖಕರು ಇಲ್ಲ ಎನ್ನುತ್ತಾರೆ. ಹಾಗೆಯೇ ಟ್ರಾಪಿಕಲ್ ಅರಣ್ಯದಲ್ಲಿ ವರ್ಷಕ್ಕೆ ಸಾವಿರಾರು ಲೀಟರ್ ನೀರು ಆವಿಯಾಗಬಹುದು ಅಷ್ಟೆ. ಆದರೆ "ಲಕ್ಷಾಂತರ ಟನ್" ಎಂದು ಲೇಖಕರು ಫ್ಯಾಕ್ಟು-ಪ್ರಿನ್ಸಿಪಲ್ಲು ಎಂದು ಹೇಳಿರುವುದನ್ನು ಯಾರೂ ಅನುಮಾನಿಸಿಲ್ಲ, ಪ್ರಶ್ನಿಸಿಲ್ಲ. ನಾನು ಓದಿದಾಗ ಒಂದು ಬಗೆಯ ಸೋಷಿಯಲಾಜಿಕಲ್ ಎಕ್ಸ್‌ಪೆರಿಮೆಂಟ್ ಎಂದು ಸುಮ್ಮನಿದ್ದೆ. ಸಂಪದಿಗರು ಅದರತ್ತ ಗಮನವೇ ಹರಿಸಿಲ್ಲ. ಇಗ್ನೋರ್ ಮಾಡಿರಬಹುದು. ಆದರೆ, ಹೀಗೆ ಇಗ್ನೋರ್ ಮಾಡುತ್ತಲೇ ಇದ್ದರೆ, ಇಗ್ನೊರೆನ್ಸ್ ಪ್ರದರ್ಶನಕ್ಕೆ ಇಟ್ಟಂತೆ ಆದೀತು ಅಲ್ಲವೆ? ಟೈಮು ಮಾಡಿಕೊಂಡು ಬರೆಯುವವರು, ಟೈಮು ಮಾಡಿಕೊಂಡು ಓದುವವರಿಗೆ ಸುಳ್ಳು/ತಪ್ಪು ಮಾಹಿತಿ ಕೊಡುವುದೂ ದೊಡ್ಡ ತಪ್ಪೇ.
ಯಾಕೆ ಹೇಳಿದೆನೆಂದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳ ಮಟ್ಟದ ಬಗ್ಗೆ ಸಂಪದಿಗರು ಯೋಚಿಸಬೇಕು. ಬರೆಯುವವರಲ್ಲದೆ ಓದುವವರೂ ಅದನ್ನು ತಮ್ಮ ಜವಾಬ್ದಾರಿ ಅಂದುಕೊಳ್ಳಬೇಕು. ಬರೆಯುವವರಿಗೆ ಚೆಕ್ ಮಾಡುವ ಸೌಜನ್ಯ ಇಲ್ಲದಿದ್ದರೆ ಅದನ್ನು ಓದುಗರು ನೆನಪಿಸಬೇಕು. ಅದೇ ಸಂಪದದಂತಹ ಜೀವಂತ ವೇದಿಕೆಯ ಲಕ್ಷಣ.
ವಯ್ಯಕ್ತಿಕ ಟೀಕೆ ಸರಿಯಲ್ಲ ಎಂದು ಬೇರೆ ಹೇಳಬೇಕಿಲ್ಲ. ಅಂದರೆ ನೈತಿಕವಾಗಿ ಅದು ತಪ್ಪು ಅನ್ನುತ್ತಿಲ್ಲ (ಹಾಗೆ ಹೇಳಲು ನಾನ್ಯಾರು). ವಿಷಯದ ಚರ್ಚೆಗೆ ಅದು ನೆರವಾಗುವುದಿಲ್ಲ ಎಂಬುದಷ್ಟೇ ನನ್ನ ಅನಿಸಿಕೆ. ಹಾಗಾಗಿ ವಯ್ಯಕ್ತಿಕ ಟೀಕೆಯಿಂದ ಪ್ರಯೋಜನವಿಲ್ಲ ಎಂದು ಬಗೆಯುತ್ತೇನೆ.
ಹಾಗೆಯೇ ಸ್ನೇಹ, ಶಾಂತಿ, ಸಹನೆ ಇವೆಲ್ಲವೂ ಇರಬೇಕು. ಆದರೆ ಇವೆಲ್ಲಾ ವಸ್ತುನಿಷ್ಠತೆಯನ್ನು ಬಲಿಕೊಡುವ ಗೊಡ್ಡು ಮೌಲ್ಯವಾಗಕೂಡದು, ಅಷ್ಟೆ.
- Login or register to post comments
- 1110 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಬೆಳಕಿಗೆ ತರುವ ಕಾಮೆಂಟು :)
ಹ್ಹಿ ಹ್ಹಿ, ಹಳೇ ಟ್ರಿಕ್ಕು,,, ಮನವಿ ಚೆನ್ನಾಗಿದೆ
ಹಳೇ ಟ್ರಿಕ್ಕು...
ಈಗ ಕೆಲಸ ಮಾಡೋ ಹಂಗೆ ಕಾಣಲ್ಲ... :)
ಬ್ಲಾಗ್ಗೊಳ ಸಂಖೆಗಿಂತ ಮನ್ವಿಗಳೆ ಜಾಸ್ತಿ ಆಗ್ತಿರಂಗದೆ!!!
:)
ಹೆಡ್ಡಿಂಗ್ ಓದಿದ್ರಿ ಅಂತ ಗೊತ್ತಾಯ್ತು... ಮನವಿ ಓದಿದ್ದರೆ, ಅದರಲ್ಲಿ ಹೇಳಿದ್ದು ಏನೂ ಅನ್ನಿಸಲಿಲ್ಲವ?!
ಮನ್ವಿನೂ ಓದ್ದೆ ರೀ.. ನೀವೇಳದೆಲ್ಲ ಸರೀನೆ.. ಆದ್ರೆ ಕೆಲವು ಸಲ ಕೆಲವು ವಿಷಯದಲ್ಲಿ ಓದೋರಿಗೆ ಒಂದು ಬ್ಲಾಗ್ನಲ್ಲಿ ಆಸಕ್ತಿ ಇರಲ್ಲ ಆವಾಗ ಪ್ರತಿಕ್ರಿಯೆ ಕೊಡಾಕ್ ಹೆಂಗ್ ಸಾಧ್ಯ? ಅದು ಸರೀನೊ ತಪ್ಪೊ ಅನ್ನೋದ್ ತಿಳ್ಕೊಳ್ಳೋದೆ ನಂಗ್ ಬೇಕಾಗಿಲ್ಲ ಅನ್ಸತ್ತೆ.. ಉದಾಹರಣೆಗೆ, ದೇವ್ರಿದಾನೊ ಇಲ್ವೋ ? ಸಸ್ಯಾಹಾರವೋ ಮಾಂಸಾಹಾರವೋ? ಈ ಧರ್ಮವೋ ಆ ಧರ್ಮವೋ? ಇದರಲ್ಲಿ ವಾದ ಮಾಡೊರು ಚೆನ್ನಾಗಿ ಬರೀತಾರೆ, ನಾನ್ ಬರೀ ಓದ್ತೀನಿ. ಕೆಲವು ಪ್ರತಿಕ್ರಿಯೆ ನೋಡಿ "ಈ ಹುಡ್ಗ ಎಷ್ಟ್ ಚೆನ್ನಾಗ್ ತಿಳ್ಕೊಂಡಿದಾನೆ ಈ ವಿಷ್ಯ" ಅನ್ಸತ್ತೆ. ಆದ್ರೆ ನಾನಲ್ಲಿ ಓದಿದ ವಿಷ್ಯಗಳಲ್ಲಿ ತಪ್ಪು 'ದತ್ತ'ವಿರಬಹುದು. ಅವರು ಹೇಳಿದ್ ಸರೀನೋ ತಪ್ಪೋ ನಂಗೆ ಪರೀಕ್ಷೆ ಮಾಡ್ಬೇಕು ಅನ್ಸಲ್ಲ.. "ಈ ತರ ಪ್ರತಿಕ್ರಿಯಿಸಬೇಡಿ" ಅನ್ನದ್ ತಪ್ಪು ಅಂದ್ಮೇಲೆ "ಈ ತರ ಪ್ರತಿಕ್ರಿಯಿಸಿ ಅಂತೇಳೋದೂ ತಪ್ಪಲ್ವೇ?"
ವಿನಯ್ ಕುಮಾರ್,
ಎಲ್ಲಾರೂ ಎಲ್ಲಾದಕ್ಕೂ ಪ್ರತಿಕ್ರಿಯೆ ಕೊಡಬೇಕು ಅಂತ ಯಾರು ಹೇಳ್ತಿಲ್ಲ. ಏನಾದರೂ ಓದಿದಾಗ ಏನೂ ಅನ್ನಿಸದೇ ಇರೋದು ಹೆಂಗೆ ಸಾಧ್ಯ ಅಂತ ಅರ್ಥ ಆಗಲಿಲ್ಲ.
ನಿಮಗೆ ಸರೀನೋ ತಪ್ಪೋ ಅನ್ನೋದೇ ಮುಖ್ಯ ಅಲ್ಲ ಅಂದರೆ, ಏನೂ ಹೇಳಕ್ಕೆ ಆಗಲ್ಲ. ignorance is bliss! ಖುಷಿಯಾಗಿರಿ :)
>>"ಈ ತರ ಪ್ರತಿಕ್ರಿಯಿಸಿ ಅಂತೇಳೋದೂ ತಪ್ಪಲ್ವೇ?"
ತಪ್ಪು. ಹಂಗೆ ಯಾರೂ ಹೇಳ್ತಿಲ್ಲ. ಸುಮ್ಮನೇ ಹೌದೌದು ಅಂತ ತಲೆ ಹಾಕೋದರ ಬದಲು ಪ್ರಶ್ನೆ ಮಾಡಿ, ಚರ್ಚೆ ಮಾಡೋದು ಒಳ್ಳೇದು ಅಂತ ನನ್ನ ಅನಿಸಿಕೆ - ಅದನ್ನ ಹೇಳಿದೆ ಅಷ್ಟೆ. ನಿಮ್ಮ ಅನಿಸಿಕೆ ಹಂಗಿಲ್ಲ ಅಂತ ಗೊತ್ತಾಯ್ತು. ಸರಿ ಬಿಡಿ.
ಹೌದು..
ಕೆಲವು ವಿಷ್ಯದಲ್ಲಿ "ಇಗ್ನೋರೆನ್ಸ್ ಇಸ್ ಬ್ಲಿಸ್ಸ್"..
ನಿಮ್ಮ ಮನವಿ ಮುಂದುವರ್ಸಿ. :)
ಚೆನ್ನಿದೆ...
ನಿಮ್ಮದು ಅನಿವಾಸಿ ಗದ್ಯ
ನನ್ನದು ಸದಾ ಹಸಿ ಪದ್ಯ
ನಮ್ಮೀರ್ವರ ಅನಿಕೆಗಳಲೂ ಇದೆ ಸಾಮ್ಯತೆ
ಪ್ರತಿಕ್ರಿಯೆಗಳಲಿ ಇರಬೇಕು ಸದಾ ಸೌಮ್ಯತೆ
ಅರಿಯದ್ದನ್ನು ಅರಿಯುವ ಜಿಜ್ಞಾಸೆ ಮನದಲಿರಬೇಕೆ ಹೊರತು
ದೂಷಿಸಬಾರದು ತಾನೂ ಬರಹಗಾರನೆಂಬುದನ್ನೇ ಮರೆತು
ಬರಹದಲಿ ಬರೆದವನ ಸಂಸ್ಕಾರದ ಅರಿವೂ ನಮಗಾಗುತ್ತದೆ
ವ್ಯಕ್ತಿಯ ಭಾವವನರಿತು ಪ್ರತಿಕ್ರಿಯಿಸಿದರೆ ಚೆನ್ನಾಗಿರುತ್ತದೆ
ಆಸುರವರೆ,
ಪದ್ಯದ ಅನಿರ್ದಿಷ್ಟತೆ ತುಸು ತೊಂದರೆ ಕೊಟ್ಟಿತು.
ಇದೆಲ್ಲಾ ನನಗೆ ಹೇಳುತ್ತಿದ್ದೀರ?
ಅಂದರೆ ನನಗೆ ಸೌಮ್ಯತೆ ಇಲ್ಲ, ದೂಷಿಸುತ್ತಿದ್ದೇನೆ, ಬರಹದಲ್ಲಿ ನನ್ನ "ಸಂಸ್ಕಾರ" ಕಾಣುತ್ತಿದೆ, ಭಾವವನ್ನು ಅರಿಯದೆ ಪ್ರತಿಕ್ರಯಿಸಿದ್ದೇನೆ...
ಅನಿವಾಸಿ ಗದ್ಯ ಅಂದರೆ ಏನು?!
ಮನ್ನಿಸಿ, ಅರ್ಥವಾಗಲಿಲ್ಲ.
>>ಪದ್ಯದ ಅನಿರ್ದಿಷ್ಟತೆ ತುಸು ತೊಂದರೆ ಕೊಟ್ಟಿತು. <<
ಇದು ನನ್ನ ಬರಹದಲ್ಲಿನ ಸೋಲು. ಅದಕ್ಕಾಗಿ ಕ್ಷಮೆ ಇರಲಿ.
>>ಇದೆಲ್ಲಾ ನನಗೆ ಹೇಳುತ್ತಿದ್ದೀರ?<<
ಇಲ್ಲ.
ನಮ್ಮಿಬ್ಬರ ಅನಿಸಿಕೆಗಳಲ್ಲೂ ಸಾಮ್ಯತೆ ಇದೆ ಅಂದೆ. ನೀವು ಅನ್ನುತಿರುವುದಕ್ಕೆ ನನ್ನ ಸಹಮತ ಸೂಚಿಸಿದೆ ಅಷ್ಟೆ.
>>ಅಂದರೆ ನನಗೆ ಸೌಮ್ಯತೆ ಇಲ್ಲ, ದೂಷಿಸುತ್ತಿದ್ದೇನೆ, ಬರಹದಲ್ಲಿ ನನ್ನ "ಸಂಸ್ಕಾರ" ಕಾಣುತ್ತಿದೆ, ಭಾವವನ್ನು ಅರಿಯದೆ ಪ್ರತಿಕ್ರಯಿಸಿದ್ದೇನೆ...<<
ಯಾರದೇ ಯಾವುದೇ ಪ್ರತಿಕ್ರಿಯೆಯಲ್ಲಿ ಸೌಮ್ಯತೆ ಇರಲಿ.
ಯಾವುದೇ ಬರಹಗಾರನ ಬರಹದಲ್ಲಿ ಆತನ ಸಂಸ್ಕಾರದ ಸೂಚನೆ ಇರುತ್ತದೆ.
ಇವು ನನ್ನ ಅನಿಸಿಕೆಯಾಗಿತ್ತು. ಇದು ತಪ್ಪಾಗಿರಲೂ ಬಹುದು. ಏಕೆಂದರೆ, ನಾನು ಎಲ್ಲ ಬಲ್ಲವನಲ್ಲ.
>>ಅನಿವಾಸಿ ಗದ್ಯ ಅಂದರೆ ಏನು?!<<
ಅನಿವಾಸಿಯವರ ಗದ್ಯ ಅನ್ನುವ ಅರ್ಥದಲ್ಲಿ ಬರೆದೆ, ಅಷ್ಟೆ.
ನಿಮ್ಮ ಮನಸ್ಸಿಗೆ ಘಾಸಿ ಆಗಿದ್ದರೆ ಕ್ಷಮಿಸಿ.
’ಸಂಸ್ಕಾರ’ :) ಹೆ ಹೆ
<<ಭಾವವನರಿತು ಪ್ರತಿಕ್ರಿಯಿಸಿದರೆ ಚೆನ್ನಾಗಿರುತ್ತದೆ>>
ಹೆಗಡೆಯವರೆ, ಇದು ಕಷ್ಟ. ಏಕೆಂದರೆ ಭಾವನೆಗಳು ಪ್ರತಿಯೊಬ್ಬನಿಗೂ Exclusive ಆಗಿ ಇರುತ್ತದೆ. ಅದರಲ್ಲೂ ಹಲವು ವಿಭಾಗಗಳು ಇವೆ Old Type (ಹಳೆ ಕಾಲದ) / New Type (ಹೊಸ ಕಾಲದ) / Out Dated (ಚಲಾವಣೆ ಇಲ್ಲದ), ಇತ್ಯಾದಿ. ಒಟ್ಟಿನಲ್ಲಿ ಎಲ್ಲರನ್ನೂ ತೃಪ್ತಿ ಪಡಿಸಲಾಗದು ಒಂದು ಲೇಖನದಿಂದ :).ಭಾವವನರಿತು>
ಲೇಖನ ಕೆಲವರಿಗೆ ಇಷ್ಟ ಆಗಬಹುದು, ಆಗದಿರಬಹುದು. ಉದಾಹರಣೆಗೆ ಈ ಕೆಳಗಿನ ಕೊಂಡಿಯ ಬರಹದಲ್ಲಿ ಹೇಳುವ ಭಾವನೆ ಕೆಲವ್ರಿಗೆ ಅರ್ಥ ಆಗಲಿಲ್ಲ. ಈ ಬರಹಕ್ಕೆ ಬಂದ ಆಕ್ಷೇಪಣೆ ನೋಡಿ !
http://www.sampada.n...
- ಅರವಿಂದ
ಅರವಿಂದ್,
ನನ್ನದೇನೂ ಭಿನ್ನಾಭಿಪ್ರಾಯ ಇಲ್ಲ.
ಬರಹಗಾರನ ಭಾವವನರಿತು ಪ್ರತಿಕ್ರಿಯಿಸಿದರೆ ಚೆನ್ನಾಗಿ ಇರುತ್ತದೆ
ಭಾವವನರಿತು ಪ್ರತಿಕ್ರಿಯಿಸದೇ ಇದ್ದಲ್ಲಿ ಪ್ರತಿಕ್ರಿಯೆ ಮಾತ್ರ ಇರುತ್ತದೆ.
ನಾನು ಹೇಳಿದ್ದನ್ನೇ ಎಲ್ಲಾರೂ ಮಾಡಬೇಕೆಂಬ ಭಾವ ನನ್ನದಂತೂ ಅಲ್ಲ.
<<ಭಾವವನರಿತು ಪ್ರತಿಕ್ರಿಯಿಸದೇ ಇದ್ದಲ್ಲಿ ಪ್ರತಿಕ್ರಿಯೆ ಮಾತ್ರ ಇರುತ್ತದೆ>> :) . :) ಭಾವವನರಿತು>
- ಅರವಿಂದ
ಹ್ಹ ಹ್ಹ
>>ಬರಹದಲಿ ಬರೆದವನ ಸಂಸ್ಕಾರದ ಅರಿವೂ ನಮಗಾಗುತ್ತದೆ
ಆಹಾ! ಎಂಥಾ ಸಂಸ್ಕಾರ! ಎಂಥಾ ಆತ್ಮವಿಮರ್ಶೆ!!
ಹ್ಹ ಹ್ಹ ಹ್ಹ
ಆತ್ಮವಿದ್ದವಗೆ ಆತ್ಮವಿಮರ್ಶೆಯೂ ಇಹುದು
ಆತ್ಮವಿಲ್ಲದವಗೆ ಆ ಚಿಂತೆ ಎಲ್ಲಿಹುದು?
ಸಂಸ್ಕಾರವನ್ನರಿವ ಪರಿಣತರಿಲ್ಲೆಂದಿಲ್ಲ
ಪರಿಣತರಲ್ಲದವರಿಗೆ ಇದನ್ವಯಿಸುವುದಿಲ್ಲ
ಅನಿವಾಸಿಯವರೇ,
ಒಳ್ಳೆಯ ಅಬ್ಸರ್ವೆಶನ್ಸ್ ಮತ್ತು ಟಿಪ್ಪಣಿಗಳು.
ಕೆಲವೊ೦ದು ಮಾಹಿತಿ ಭರಿತ ಲೇಖನಗಳನ್ನು ಓದುವಾಗ ಆ ಮಾಹಿತಿಯನ್ನು ಪುನರ್ಪರಿಶೀಲಿಸುವ ವ್ಯವಧಾನ ಹಾಗು ಸಮಯ ಎರಡೂ ಓದುಗನಿಗಿರಬೇಕಾಗುತ್ತದೆ. ಕೆಲವೊಮ್ಮೆ ಉದ್ದೇಶಿತ ನಿರ್ಲಕ್ಷ್ಯವಿರಲಾರದು. ನೀವು ಉದಾಹರಿಸಿದ ಬರಹವನ್ನೇ ತೆಗೆದುಕೊಳ್ಳುವುದಾದರೆ, ನನಗೆ ಲೇಖಕರು ಹೇಳಿದ ವೆನುಜುವೆಲಾದ ಏಂಜಲ್ ಫಾಲ್ಸ್ ಬಗ್ಗೆ ಆ ಮಾಹಿತಿ ಇರಲಿಲ್ಲ. ಹುಡುಕುತಿದ್ದೆ. ಅಷ್ಟರಲ್ಲಿ ಬೇರೇನೋ ಕೆಲಸ ಬ೦ದು ಅದು ಅಲ್ಲಿಗೇ ನಿ೦ತಿತು. ನ೦ತರ ಮರೆತೇ ಹೋಯಿತು. ಎಲ್ಲೋ ಒ೦ದುಕಡೆ ಓದುಗರಿಗಿ೦ತ ಲೇಖಕರಿಗೆ ಹೆಚ್ಚಿನ ಜವಾಬ್ದಾರಿಗಳಿರಬೇಕೆನೋ ಅನಿಸುತ್ತದೆ.
ವಿನುತರವರೆ,
>>ಎಲ್ಲೋ ಒ೦ದುಕಡೆ ಓದುಗರಿಗಿ೦ತ ಲೇಖಕರಿಗೆ ಹೆಚ್ಚಿನ ಜವಾಬ್ದಾರಿಗಳಿರಬೇಕೆನೋ ಅನಿಸುತ್ತದೆ.
ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ, ಬರಹದಲ್ಲಿರುವುದನ್ನು ಗಮನಿಸಿ:
ವಿಭಿನ್ನ ಮನವಿ ಅಂತ ಮಾತ್ರ ಹೇಳ್ತಿನಿ :)
ನೀವು ಹೇಳಿದ ಹಾಗೆ ಲೇಖನ ಸಿರಿಯಸ್ಸಾಗಿ ತೊಗೊಂಡಾಗ ಮಾತ್ರ ತಪ್ಪು ಮಾಹಿತಿ ಬಗ್ಗೆ ಹುಡುಕೋ ವಿಚಾರ ಬರುತ್ತೆ ....
ನಾನು ಯಾವಾಗ್ಲೂ ನಂಬೋ ಥೆರಿ ಅಂದ್ರೆ 'Criticize the performance not the performer' ಅಂತ ...
ವ್ಯಾಸರಾಜರೆ,
ವಿಭಿನ್ನ ಯಾಕೆ?!
ನನ್ನ ಕುತೂಹಲ : ಯಾವ ಲೇಖನವನ್ನು ಸಿರಿಯಸ್ಸಾಗಿ ತಗೋಬೇಕು/ಬಾರದು ಎಂದು ಹೇಗೆ ನಿರ್ಧರಿಸ್ತೀರ?
ನೀವು ನಂಬುವ ಥಿಯರಿ ಸರಿಯಾದ್ದೆ. ಕೆಲವೊಮ್ಮೆ ಕಷ್ಟವೇನೆಂದರೆ, performer ಹಾಗು performance ಅನ್ನು ಬೇರ್ಪಡಿಸುವುದು ಸುಲಭವಲ್ಲ, ಅಲ್ಲವೆ?
<<ವಿಭಿನ್ನ ಯಾಕೆ?!>>ವಿಭಿನ್ನ>
ಇಲ್ಲಿವರ್ಗೂ ಹೋಗಿ/ಬನ್ನಿ ಇಂಥವೇ ಮನವಿ ಓದ್ತಾ ಇದ್ದೆ ಅದ್ಕೆ ....
<<ಯಾವ ಲೇಖನವನ್ನು ಸಿರಿಯಸ್ಸಾಗಿ ತಗೋಬೇಕು/ಬಾರದು ಎಂದು ಹೇಗೆ ನಿರ್ಧರಿಸ್ತೀರ?>>
ನನ್ನ ಅನಿಸಿಕೆ ಹೇಳೋದಾದ್ರೆ ನಾನು ಇಲ್ಲಿಂದ ವಿಶಯ ಮಾತ್ರ ತೊಗೊತೀನಿ ನಂತರ ಆ ವಿಶಯದ ಬಗ್ಗೆ ನಂಬಲರ್ಹ ಮೂಲಗಳಿಂದ ಹೆಚ್ಚಿನ ವಿಚಾರ ಓದೊಕ್ಕೆ ಪ್ರಯತ್ನ ಮಾಡ್ತಿನಿ ....
ಮುಂಚೆ ಕೆಲವೊಬ್ರ ಲೇಖನಗಳನ್ನ ಹೆಚ್ಚು ಕಮ್ಮಿ ನಿಜಾನೆ ಅಂತ ತಿಳ್ಕೊಳ್ತಾ ಇದ್ದೆ ... ಆದ್ರೆ ನಿಮ್ಮ 'ಭೈರಪ್ಪನವರ ಮತಾಂತರದ ಬಗ್ಗೆ ಬರೆದ facts ಮೂಲ ಓದಿ ಈಗ ಏನಿದ್ರು ಇಶ್ಟವಾದದ್ದನ್ನ ಬೇಕಿದ್ದಲ್ಲಿ ಹೆಚ್ಚಿಗೆ ಓದ್ತಿನಿ ....ಯಾವ>
ಆದ್ರೆ ನಿಮ್ಮ ಮಾತು ನಿಜ ತಪ್ಪಿದ್ದಲ್ಲಿ ತಿದ್ದಬೇಕು ...
<
>
ನಿಜ, ಇದು ತುಂಬಾ ಕಷ್ಟದ ಕೆಲಸ ... ಅದೇನೋ ಹೇಳ್ತಾರಲ್ಲ thin line separating ಅಂತ, ಹಾಗೆ ... ಆದ್ರೆ ಇತ್ತೀಚಿನ ಪ್ರತಿಕ್ರಿಯೆ ನೋಡ್ತಾ ಇದ್ರೆ ಎಲ್ಲವು personal ಆಗ್ತಾ ಇದೆ ಅನ್ಸುತ್ತೆ ...
ಅನಿವಾಸಿ ಅವರೆ,
ಉತ್ತಮ ಮನವಿ. ಪ್ರಶ್ನೆ ಕೇಳುವುದೇ taboo ಆಗಿ, ಅನುಮಾನ ವ್ಯಕ್ತ ಪಡಿಸಿದವರನ್ನೇ ಅನುಮಾನಿಸಿ, ಸೌಜನ್ಯ - ಗೌರವಗಳ ಮುಸುಕಿನಲ್ಲಿ ತಪ್ಪು ಮಾಹಿತಿ/ವಿಚಾರಗಳನ್ನು ಹರಡುವುದು ಕಾಣಿಸುತ್ತಿರುವಾಗ ನಿಮ್ಮ ಲೇಖನ ಸಮಯೋಚಿತ.
ಸೌಜನ್ಯ/ಗೌರವಗಳ ಚೌಕಟ್ಟನ್ನು ಗೌರವಿಸಲು individualityಯನ್ನು ದಮನ ಮಾಡುವುದು ಭಾರತೀಯ ಸಂಸ್ಕ್ರುತಿಯ ಒಂದು ಅವಿಭಾಜ್ಯ ಅಂಗವಾಗಿ ಬೆಳೆದಿರುವುದು ವಿಷಾದಕರ.
ಇನ್ನೂ ಬೇಜಾರಿನ ಸಂಗತಿ ಎಂದರೆ ನೀವು ಹೇಳಿದಹಾಗೆ ಬಹಳ ಲೇಖನಗಳಲ್ಲಿನ factual ದೋಷಗಳತ್ತ ಸಂಪದ ಓದುಗರು ತಲೆ ಕೆಡಿಸಿಕೊLLಉವುದೇ ಕಾಣಿಸಿವುದಿಲ್ಲ. (ಉದಾ: http://sampada.net/a...) ಕರ್ನಾಟಕದ ವಿದ್ಯಾವಂತ ಸಮಾಜದ cross-section ಆಗಿರುವಂತಹ ಸಂಪದದಲ್ಲೇ ಇಂತಹ ಗತಿ ಎಂದರೆ ಉಳಿದ ಜನರ ಬೌಧ್ಧಿಕ ಪ್ರೌಢತೆಯ ಬಗ್ಗೆ ನೆನೆಸಿಕೊಂಡರೆ ಭಯವಾಗುತ್ತದೆ.
ಇನ್ನು ಸಂಪದ ಬಡವಾಗುವುದರ ಬಗ್ಗೆ: emotional blackmail, ಸೌಜನ್ಯಗಳಿಗೆ ಅಂಜಿ, ಸಹಜವಾದ ಭಿನ್ನಾಭಿಪ್ರಾಯಗಳು ಮತ್ತು ಅನುಮಾನಗಳನ್ನು ಸಂಪದದ ಸದಸ್ಯರು ವ್ಯಕ್ತಪಡಿಸದೇ ಸಂಪದವು ಒಂದು 'ಹೌದಪ್ಪಗಳ ಕಟ್ಟೆ'ಯಾಗಿ 'ಸಮ್ರುದ್ಧ'ವಾಗುವುದಕ್ಕಿಂತ ವ್ಯಕ್ತಿಗಳಿಗೆ ಗೌರವ, ಎಲ್ಲ ವಿಚಾರಗಳಿಗೂ 'respectful scepticism' ಇರುವ ಸಮುದಾಯವಾಗಿ 'ಬಡ'ವಾಗುವುದು ಒLLಎಯದು. At least, ನನ್ನ ಅಭಿಪ್ರಾಯದಲ್ಲಿ.
[ಋ ಒತ್ತು, ಳ ಕ್ಕೆ ಳ ಒತ್ತುಗಳು, ಸರಿಯಾಗಿ ಮೂಡುತ್ತಿಲ್ಲ, ಅದಕ್ಕೆ ಸಿಕ್ಕಾಪಟ್ಟೆ ಕಾಗುಣಿತ ತಪ್ಪುಗಳು, ಮನ್ನಿಸಿ.]
summer_glau,
ನೀವು ಮೇಲೆ ಹೇಳಿದ ಲೇಖನದ ಸಂವಾದವನ್ನು ಕುತೂಹಲದಿಂದ ಓದಿದೆ. ನಿಜ ಹೇಳಬೇಕೆಂದರೆ, ನೀವು ಮೊದಲಿಗೆ naive ಆಗಿ "genuinely misinformed" ಎಂದು ಪ್ರತಿಕ್ರಿಯಿಸಿದಿರಿ ಅನಿಸಿತು. :) ಮುಂದೆ ಚರ್ಚೆ ಕ್ಲಾರಿಟಿ ಕಳಕೊಂಡು ಎತ್ತೆತ್ತಲೋ ಹೋಗಿದ್ದು ಕೂಡ ಉದ್ದೇಶಪೂರ್ವಕ ಎಂದು ನನ್ನ ಅನಿಸಿಕೆ.
ಬಡವಾಗುವುದರ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ, ಸಂಪದದಲ್ಲಿ ಅದು ಅಲ್ಪಸಂಖ್ಯರ ಅಭಿಪ್ರಾಯ ಎಂಬ ಅನುಮಾನವೂ ಇದೆ! :)
ಅನಿವಾಸಿಯವರೆ,
ಬರಹ, ಹಾಗೂ ಉದ್ದೇಶ ಹಿಡಿಸಿತು. ಆದರೆ ಒಂದೆರಡು ತಪ್ಪೊಪ್ಪು.
>>>>೬) ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಈ ಬರಹವನ್ನು ಗಮನಿಸಿ. ಅದರಲ್ಲಿ ಯಾಣದ ಬಗ್ಗೆ ವಿವರಿಸುತ್ತಾ ಲೇಖಕರು ಹೇಳಿರುವ ಸುಳ್ಳು/ತಪ್ಪು ಹಾಗೇ ಇದೆ. ಸುಮಾರು ೫೧೦ ಸಲ ಓದಲ್ಪಟ್ಟಿದೆ. ಹುಡುಕಿದರೆ ಆ ಉತ್ಪ್ರೇಕ್ಷೆಯ ಮಾತುಗಳು ಎಷ್ಟು ತಪ್ಪು ಎಂದು ಎರಡು ನಿಮಿಷದಲ್ಲಿ ತಿಳಿಯುತ್ತದೆ.
>>>ವೆನುಜುವೆಲಾದ ಏಂಜಲ್ ಫಾಲ್ಸ್ ಜಲಪಾತಕ್ಕೆ ಕೆರೆಪ್ ಎಂಬ ನದಿಯ ನೀರಿನ ಸೆಲೆ ಇದೆ. ಲೇಖಕರು ಇಲ್ಲ ಎನ್ನುತ್ತಾರೆ.
ಏಂಜಲ್ಸ್ ಫಾಲ್ಸ್ ವಿಷಯ ಗೊತ್ತಿಲ್ಲ, ಆದರೆ, ಹೀಗೆ ನದಿಯ ಸೆಲೆಯಿಲ್ಲದೆ, ನೀರು ಜಿನುಗುವುದು, ಜಲಪಾತವಾಗುವುದು ಉಂಟು.- ಉದಾಹರಣೆಗೆ ಐಡಹೋ (ಯುಎಸ್ ಎ) ನ Thousand Springs, Mossbrae Falls (CA) ಇತ್ಯಾದಿ.
>>>ಹಾಗೆಯೇ ಟ್ರಾಪಿಕಲ್ ಅರಣ್ಯದಲ್ಲಿ ವರ್ಷಕ್ಕೆ ಸಾವಿರಾರು ಲೀಟರ್ ನೀರು ಆವಿಯಾಗಬಹುದು ಅಷ್ಟೆ. ಆದರೆ "ಲಕ್ಷಾಂತರ ಟನ್" ಎಂದು ಲೇಖಕರು ಫ್ಯಾಕ್ಟು-
>>>ಪ್ರಿನ್ಸಿಪಲ್ಲು ಎಂದು ಹೇಳಿರುವುದನ್ನು ಯಾರೂ ಅನುಮಾನಿಸಿಲ್ಲ, ಪ್ರಶ್ನಿಸಿಲ್ಲ. ನಾನು ಓದಿದಾಗ ಒಂದು ಬಗೆಯ ಸೋಷಿಯಲಾಜಿಕಲ್ ಎಕ್ಸ್‌ಪೆರಿಮೆಂಟ್ ಎಂದು
>>>ಸುಮ್ಮನಿದ್ದೆ. ಸಂಪದಿಗರು ಅದರತ್ತ ಗಮನವೇ ಹರಿಸಿಲ್ಲ.
ಇದರಲ್ಲಿ ನೀವು ಹೇಳುವ ಸಾವಿರಾರು ಲೀಟರ್ ನೀರಿನಷ್ಟು ಮಾತ್ರ ಆವಿಯಾಗೋದಿಲ್ಲ. ಖಂಡಿತ ಇನ್ನೂ ಹೆಚ್ಚಿಗೆ ಆಗಬೇಕು ಅಂತೆನ್ನಿಸಿ, ಸ್ವಲ್ಪ ಗೂಗಲಿಸಿದಾಗ ದಿನಕ್ಕೆ ಒಂದು ಎಕರೆ ಕಾಡಿನಿಂದ, ಪ್ರತೀದಿನ ೭೬೦೦೦ ಲೀಟರಿನಷ್ಟು ನೀರು ಆವಿಯಾಗುತ್ತೆ ಅಂತ ಈ ವೆಬ್ಸೈಟ್ ಹೇಳುತ್ತಿದೆ. (http://www.coexplora...) ಇದೇನು ಸಿಕ್ಕಾಪಟ್ಟೆ ವೈಜ್ಞಾನಿಕ ವಿವರವಿರುವ ಸೈಟ್ ಅಲ್ಲದಿರಬಹುದು, ಆದರೂ ಈ ಅಂಕೆ ಸರಿಯಿದೆ ಎನ್ನಿಸುತ್ತಿದೆ. ಹೆಚ್ಚಿಗೆ ಹುಡುಕಿದರೆ, ಇನ್ನೂ ನಿಖರವಾಗಿ ಹೇಳಬಹುದೇನೋ.
ಶ್ರೀಹರ್ಷ ಅವರು ಬರಹದಲ್ಲಿ "ಲಕ್ಷಾಂತರ ಟನ್" ಅಂತ ಬರೆದಿದಾರೆ - ಅದು ಲಕ್ಷಾಂತರ ಲೀಟರ್ ಅಂದ್ರೆ ಸರಿ ಇರ್ತಿತ್ತು ಅನ್ಸತ್ತೆ.
-ಹಂಸಾನಂದಿ
ಹಂಸಾನಂದಿ,
ನಾನು ಹೇಳಿದ್ದು-
>>>ವೆನುಜುವೆಲಾದ ಏಂಜಲ್ ಫಾಲ್ಸ್ ಜಲಪಾತಕ್ಕೆ ಕೆರೆಪ್ ಎಂಬ ನದಿಯ ನೀರಿನ ಸೆಲೆ ಇದೆ. ಲೇಖಕರು ಇಲ್ಲ ಎನ್ನುತ್ತಾರೆ.
ನೀವು "ಏಂಜಲ್ಸ್ ಫಾಲ್ಸ್ ವಿಷಯ ಗೊತ್ತಿಲ್ಲ," ಎಂದು ಸುಲಭವಾಗಿ ಸಿಕ್ಕಬಹುದಾದ ಮಾಹಿತಿಯನ್ನು ಹುಡುಕದೆ ನಿರ್ಲಕ್ಷಿಸಿ, ನಾನು ಹೇಳುತ್ತಿರುವುದು ತಪ್ಪು (ತಪ್ಪೊಪ್ಪು) ಎಂದು ತಿದ್ದುತ್ತಿದ್ದೀರಿ!? ನೀವು ಕೊಟ್ಟ ಸ್ಪ್ರಿಂಗ್ಸ್ ಸಂಗತಿ ನಾನು ಹೇಳಲು ಹೊರಟಿದ್ದಕ್ಕೆ ದಾರಿ ತಪ್ಪಿಸಲು ಹೇಳಿದಂತಿದೆ.
>>ಪ್ರತೀದಿನ ೭೬೦೦೦ ಲೀಟರಿನಷ್ಟು ನೀರು ಆವಿಯಾಗುತ್ತೆ
ಇದು ತಪ್ಪು. ಈ ವೆಬ್ಸೈಟ್ನಲ್ಲಿ
http://leland.sjusd....
ಹಾಗು ಇನ್ನೂ ಹಲವಾರು ಕಡೆ ಹೇಳಿರುವ ಹಾಗೆ -
ಸಾವಿರ ಲೀಟರ್ಗೆ ಒಂದು ಟನ್ ಅನ್ನುವುದಾದರೆ, ವರ್ಷಕ್ಕೆ, ಎಕ್ಕರೆಗೆ ೭೬ ಟನ್ ಆಗುವುದನ್ನು "ಲಕ್ಷಾಂತರ ಟನ್" ಎಂದು ಹೇಳುವುದು ಸಣ್ಣ ತಪ್ಪು ಎಂದು ("ಲಕ್ಷಾಂತರ ಲೀಟರ್ ಅಂದ್ರೆ ಸರಿ ಇರ್ತಿತ್ತು") ಹೇಳುತ್ತಿದ್ದೀರಿ!? light years ಅನ್ನು years ಎಂದು ಹೇಳುವುದು ಸಣ್ಣ ತಪ್ಪು ಅಂದ ಹಾಗಾಯಿತು.
ನನ್ನ ಬರಹದ ಬಗ್ಗೆ "ಬರಹ, ಹಾಗೂ ಉದ್ದೇಶ ಹಿಡಿಸಿತು" ಎಂದಷ್ಟೇ ಹೇಳಿ ನಾನು ಉಲ್ಲೇಖಿಸಿದ ಬರಹದ ತಪ್ಪನ್ನು defend ಮಾಡಲು ನೀವು ತೋರಿರುವ ಆತುರ ಯಾಕಿರಬಹುದು ಎಂದು ಯೋಚಿಸುತ್ತಿದ್ದೇನೆ.
>>ನಾನು ಉಲ್ಲೇಖಿಸಿದ ಬರಹದ ತಪ್ಪನ್ನು defend ಮಾಡಲು ನೀವು ತೋರಿರುವ ಆತುರ ಯಾಕಿರಬಹುದು ಎಂದು ಯೋಚಿಸುತ್ತಿದ್ದೇನೆ.
ಹ್ಹಹ್ಹ :) ನಾನು ಖಂಡಿತ ಆ ಬರಹವನ್ನ ಡಿಫೆಂಡ್ ಮಾಡ್ತಿಲ್ಲ, ಮತ್ತೆ ಮಾಡೋ ಉದ್ದೇಶವೂ ಇರಲಿಲ್ಲ! ನಿಮಗೆ ಹಾಗನ್ನಿಸಿದ್ದರೆ, ನಾನು ಮತ್ತೊಂದ್ಸಲ ಓದಿ ನೋಡ್ತೀನಿ.
ಲಕ್ಷಾಂತರ ಲೀಟರ್ ಅಂದ್ರೆ ಸರಿ ಇರ್ತಿತ್ತು ಅನ್ನೋದು ದಿನಕ್ಕೆ ೭೬೦೦ ಲೀಟರ್ ಆವಿ ಆದರೆ ನಿಜವಾಗ್ತಿತ್ತು, ಅಲ್ಲವೆ? ನಾನು ಹೆಸರಿಸಿದ ಒಂದೇ ಕೊಂಡಿಯು ಎಷ್ಟು ನಂಬಲು ತಕ್ಕದ್ದು ಅನ್ನೋದು ನನಗೆ ಖಡಾ ಖಂಡಿತವಾಗಿ ಗೊತ್ತಿಲ್ಲ ಅನ್ನೋ ವಿಷಯ ಹೇಳೇ ಇದ್ದೇನೆ.
ನೀವು ಕೊಟ್ಟ ಲಿಂಕಲ್ಲೂ ೭೬೦೦೦ ಲೀಟರ್ ಅಂತ್ಲೇ ಇದೆ - ಆದರೆ ಅದು ವರ್ಷಕ್ಕೆ.
>>ನೀವು "ಏಂಜಲ್ಸ್ ಫಾಲ್ಸ್ ವಿಷಯ ಗೊತ್ತಿಲ್ಲ," ಎಂದು ಸುಲಭವಾಗಿ ಸಿಕ್ಕಬಹುದಾದ ಮಾಹಿತಿಯನ್ನು ಹುಡುಕದೆ ನಿರ್ಲಕ್ಷಿಸಿ, ನಾನು ಹೇಳುತ್ತಿರುವುದು ತಪ್ಪು (ತಪ್ಪೊಪ್ಪು) ಎಂದು ತಿದ್ದುತ್ತಿದ್ದೀರಿ!? ನೀವು ಕೊಟ್ಟ ಸ್ಪ್ರಿಂಗ್ಸ್ ಸಂಗತಿ ನಾನು ಹೇಳಲು ಹೊರಟಿದ್ದಕ್ಕೆ ದಾರಿ ತಪ್ಪಿಸಲು ಹೇಳಿದಂತಿದೆ.
ನನ್ನ ತಪ್ಪೊಪ್ಪು ಅನ್ನುವ ಪದದ ಬಳಕೆ ನಿಮಗೆ ಆಕ್ಷೇಪ ಮಾಡುವು ಹಕ್ಕು ಇದ್ದೇ ಇದೆ. ಬಹುಶಃ ನಾನು ಅದನ್ನು ಕೊಸರು ಅಂತಲೋ, ಟಿಪ್ಪಣಿ ಅಂತಲೂ ಬರೀಬೇಕಿತ್ತು. ಏಕೆಂದರೆ, ಅದರ ಉದ್ದೇಶವೂ ಅಷ್ಟಕ್ಕ ಪರಿಮಿತವಾಗಿತ್ತು. ಇದಕ್ಕೆ ನಿಮ್ಮ ಕ್ಷಮೆ ಕೋರುವೆ.
ಇನ್ನು -ಏಂಜಲ್ ಫಾಲ್ಸ ಬಗ್ಗೆ - ಸುಲಭವಾಗಿ ಸಿಕ್ಕಬಹುದಾದ ಮಾಹಿತಿ ನಿಜ - ನಾನು ಅದನ್ನು ಬರೆದಾಗ, ಹುಡುಕಿ ನೋಡುವ ಸಂದರ್ಭ ಇರಲಿಲ್ಲ.
ಸ್ಪ್ರಿಂಗ್ಸ್ ಬಗ್ಗೆ - ನಾನು ಯಾರನ್ನೂ ದಾರಿ ತಪ್ಪಿಸಲಿಕ್ಕೆ ಹೊರಟಿಲ್ಲ ಅಂತ ಮಾತ್ರ ಹೇಳಬಲ್ಲೆ. ಯಾಣವನ್ನು ನಾನು ನೋಡಿಯೂ ಇಲ್ಲ, ಆದರೆ ಆ ಬರಹದಲ್ಲಿದ್ದ ’ಬಂಡೆಯಲ್ಲಿ ನೀರು ಜಿನುಗುವುದು’ ಅನ್ನೋದನ್ನ ನೋಡಿದಾಗ, ನಾನು ನೋಡಿದ ಕೆಲವು ಸ್ಥಳಗಳ ನೆನಪಾಗಿ ಅದರ ಬಗ್ಗೆ ತಿಳಿದಿದ್ದನ್ನು ಬರೆದೆ.
ಹಂಸಾನಂದಿ,
ಕ್ಷಮೆ ಕೋರುವ ಅಗತ್ಯವೇನಿಲ್ಲ. :)
ಏಂಜಲ್ಸ್ ಫಾಲ್ಸ್ ನದಿಯ ಮೂಲದ ಬಗ್ಗೆ ನೋಡಿದಿರ?
ಹಾಗೇ, ಟ್ರಾಪಿಕಲ್ ಮಳೆಗಾಡಿನ ನೀರಾವಿ ಆಗುವುದರ ನೀರಿನ ಮೊತ್ತದ ಬಗ್ಗೆ ಏನನಿಸಿತು?
ನೀವು ಸ್ಪ್ರಿಂಗ್ಸ್ ಬಗ್ಗೆ ಹೇಳಿದ್ದು ಸಂಗತಿಯ ದಾರಿ ತಪ್ಪಿಸಲು ಅಂತಲ್ಲ. ಆದರೆ ಚರ್ಚೆಯ ದಾರಿ ತಪ್ಪೀತು ಎಂಬ ಆತಂಕ ಅಷ್ಟೆ.
> ಹಾಗೇ, ಟ್ರಾಪಿಕಲ್ ಮಳೆಗಾಡಿನ ನೀರಾವಿ ಆಗುವುದರ ನೀರಿನ ಮೊತ್ತದ ಬಗ್ಗೆ ಏನನಿಸಿತು?
ಅನಿವಾಸಿಯವರ ಪ್ರಶ್ನೆ ಹಂಸಾನಂದಿಯವರಿಗಾಗಿತ್ತಾದರು, ಕುತೂಹಲದಿಂದ ಹುಡುಕಿದೆ...
ಅಮೆಜಾನ್ ಕಾಡಿನ ಬಗ್ಗೆ ಈ ಮಾಹಿತಿ ಸಿಕ್ಕಿತು:
The volumes of water involved in this process can be huge. More moisture typically evaporates from rainforests than from the ocean. The Amazon rainforest, for example, releases 20 trillion litres of moisture every day.
(http://www.newscient...)
ಹಂಚಿಕೊಳ್ಳೋಣವೆನಿಸಿತು...
--ಶ್ರೀ
ಆಹ್! ದಿನಾಂಕ ನೋಡಿದ್ರೆ ಇದು ಏಪ್ರಿಲ್ ಫೂಲ್ ಬರಹ ಅನಿಸುತ್ತೆ :(
ಶ್ರೀನಿವಾಸ್,
ಏಪ್ರಿಲ್ ಫೂಲ್ ಇರಲಿಕ್ಕಿಲ್ಲ. ಸರಿಯೇ ಇರಬಹುದು. ಯಾಕೆಂದರೆ ದಿನಕ್ಕೆ ಒಟ್ಟು ೨೦ ಟ್ರಿಲಿಯನ್ ಅಂದರೆ, ಅದನ್ನು ಅಮೇಜಾನ್ ಕಾಡಿನ ವಿಸ್ತೀರ್ಣದಿಂದ ಭಾಗಿಸಬೇಕಲ್ಲವೆ? ವಿಸ್ತೀರ್ಣ ಸುಮಾರು ೬ ಮಿಲಿಯನ್ ಚದುರ ಕಿಮಿ. (ಅಂದರೆ ಸುಮಾರು ಒಂದೂವರೆ, ಎರಡು ಬಿಲಿಯನ್ ಎಕರೆ) ಅಲ್ಲವೆ?
ಈ ಚರ್ಚೆಯೆಲ್ಲಾ ಆ ಲೇಖನಕ್ಕೆ ನಡೆಯಬೇಕಾಗಿತ್ತು, ಅದೇ ನಾನು ಹೇಳ ಹೊರಟಿದ್ದು! :)
ಮಾಹಿತಿಗೆ-ಕೊಂಡಿಗೆ ಥ್ಯಾಂಕ್ಸ್.
ಅನಿವಾಸಿಯವರೆ,
ಬರಹದ ಉದ್ದೇಶ ಹಿಡಿಸಿತು.
<ಯಾಕೆ ಹೇಳಿದೆನೆಂದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳ ಮಟ್ಟದ ಬಗ್ಗೆ ಸಂಪದಿಗರು ಯೋಚಿಸಬೇಕು. ಬರೆಯುವವರಲ್ಲದೆ ಓದುವವರೂ ಅದನ್ನು ತಮ್ಮ ಜವಾಬ್ದಾರಿ ಅಂದುಕೊಳ್ಳಬೇಕು. ಬರೆಯುವವರಿಗೆ ಚೆಕ್ ಮಾಡುವ ಸೌಜನ್ಯ ಇಲ್ಲದಿದ್ದರೆ ಅದನ್ನು ಓದುಗರು ನೆನಪಿಸಬೇಕು. ಅದೇ ಸಂಪದದಂತಹ ಜೀವಂತ ವೇದಿಕೆಯ ಲಕ್ಷಣ.>
ದಿಟ.
ಸಂಪದ ಹೇಗಿರಬೇಕು, ಹೇಗಿರಬಾರದು ಎಂದು ಅಸ್ಪಷ್ಟವಾಗಿ ನೀತಿ ಸಂಹಿತೆಗಳು ರೂಪುಗೊಳ್ಳುತ್ತಿವೆ ಅನ್ನಿಸುತ್ತಿದೆ. ಹಲವರ ಮನವಿಗಳು ಹಲವು ದೃಷ್ಟಿಕೋನಗಳನ್ನು ಬಿಂಬಿಸುತ್ತಿವೆ.
ನಿಮ್ಮ ಮನವಿಯೆಡೆಗೆ ಹೆಚ್ಚು ಗಮನ ಕೊಡಬೇಕು ನೀವು ಎತ್ತಿರುವ ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಆಲೋಚಿಸಬೇಕು.