ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಪ್ರವಾಸ ಕಥನ › ಫಿನ್ಲೆಂಡ್ ಪ್ರವಾಸ ಕಥನ

ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ

August 8, 2006 - 10:13pm — anilkumar

ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂಟಿಯಾಗಿ ಬದುಕುತ್ತಿದ್ದ. ಆತನ ಮಾಜಿ ಹೆಂಡತಿ (ಪಾಟ್ನರ್!) ಅದೇ ನಗರದಲ್ಲಿ ಬದುಕಿದ್ದಳು. ವಯಸ್ಸಿಗೆ ಬಂದ ಇಬ್ಬರು ಮಕ್ಕಳೂ ಇದ್ದರು ಆತನಿಗೆ. ನೆರೆಹೊರೆಯವರಿದ್ದರು. ನಿರುದ್ಯೋಗಿಯಾದುದರಿಂದ, ಮತ್ತು ಫಿನ್ನಿಶ್ ಸಮಾಜ 'ವೆಲ್‌ಫೇರ್ ಸಮಾಜವಾದ್ದರಿಂದ' ಆತನಿಗೆ ತಿಂಗಳಿಗೆ ಪಿಂಚಣಿ ರೂಪದ ಸಂಬಳ ಬರುತ್ತಿತ್ತು. ಮತ್ತು ಅದು ಬೆಂಗಳೂರು ಯೂನಿವರ್ಸಿಟಿಯ ಸೀನಿಯರ್ ಗ್ರೇಡ್ ಉಪಾಧ್ಯಾಯನಿಗಿಂತಲೂ ಹೆಚ್ಚಿತ್ತು.

ಅನೇಕ ದಿನಗಳ ಕಾಲ ಆತ ಯಾರಿಗೂ ಕಾಣಲಿಲ್ಲ. ಯಾರೂ ಕೇರ್ ಮಾಡಲಿಲ್ಲ. ತಿಂಗಳುಗಟ್ಟಲೆ ಆತ ಪತ್ರಗಳಿಗೆ ಉತ್ತರಿಸಲಿಲ್ಲ. ಯಾರೂ ಕ್ಯಾರೆ ಅನ್ನಲಿಲ್ಲ. ದೂರವಾಣಿ ಕರೆಗಳನ್ನು ಆತ ಸ್ವೀಕರಿಸುತ್ತಿರಲಿಲ್ಲ. ಯಾರೂ ಕ್ಯಾರೆ ತುಮಾರೆ ಅನ್ನಲಿಲ್ಲ--ಅದು ಫಿನ್ನಿಶ್ ಸಂಸ್ಕೃತಿ. ಪ್ರತಿ ತಿಂಗಳು ಬಿಟ್ಟಿ ಸಂಬಳ ಆತನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು. ಹಾಗೆ ಬಿಟ್ಟಿ ಉಣ್ಣುವವರು, ಉಂಡ ನಂತರ ಅದನ್ನು ಕರಗಿಸಲು ಹೆಲ್ಸಿಂಕಿಯ ಚರ್ಚ್‌ಗಳಲ್ಲಿ ನೀಡಲಾಗುತ್ತಿದ್ದ ಬಿಟ್ಟಿ ಬ್ರೆಡ್, ಬಿಸ್ಕಟ್‌ಗಳನ್ನು ಪಡೆಯಲು ಕ್ಯೂ ನಿಲ್ಲುತ್ತಿದ್ದರು. ಅಂತಹ ಸಾಲಿನಲ್ಲಿ ನಿಲ್ಲುವುದೆಂದರೆ ತಾನು 'ಪಾಪರ್' ಎಂದು ಊರಿಗೇ ಸಾರಿದಂತೆ. ನಿತ್ಯಪಾಪರ್‌ನಂತೆ ಅಲ್ಲಿ ಕಾಣಸಿಗುತ್ತಿದ್ದ ಈ ಮಿಸ್ಟರ್‌ನನ್ನು ಜನ ನೋಡಿ ವರ್ಷಗಳೇ ಉರುಳಿದ್ದವು. "ಮಾನವಂತನಾಗಿ ಬದುಕುತ್ತಿರಬೇಕಾತ" ಎಂದುಕೊಂಡರು ಸಾಲಿನಲ್ಲಿ ಆತನ ಹಿಂದು ಮುಂದು ನಿಲ್ಲುತ್ತಿದ್ದವರು.

ಐದಾರು ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ತಾವಿರುವ ಮನೆಯ 'ಇರುವಿಕೆಯನ್ನು' ಸರ್ಕಾರದಲ್ಲಿ ನವೀಕರಿಸಬೇಕು. ಮಿಸ್ಟರ್ ಆತ ಅದನ್ನೂ ಮಾಡಲಿಲ್ಲ. ಅಧಿಕಾರಿಗಳು ಬಂದು ಮನೆ ಬಾಗಿಲು ತಟ್ಟಿದರು. ಮತ್ತೆ ಮತ್ತೆ ತಟ್ಟಿದರು ಮುಂದೊಂದಷ್ಟು ದಿನ. ಕೊನೆಗೊಂದು ದಿನ ಬಾಗಿಲನ್ನು ಮುರಿದರು, ಏಕೆಂದರೆ ಬೀಗ ಮುರಿಯಲು ಅದನ್ನು ಹಾಕಿರಲೇ ಇಲ್ಲ. ಒಳಗೆ ಅಂಚೆ ಕಾಗದಗಳ ಒಂದು ಗೋಡೆಯೇ ಇತ್ತು. ಆರು ವರ್ಷದ ಟಪಾಲಿನ ಗೋಡೆಯದು. ಒಳಗೆ, ಹಾಸಿಗೆಯ ಮೇಲೆ ಒಂದು ಮಮ್ಮಿ. ಇಬ್ಬರು ಮಕ್ಕಳ ತಂದೆಯ ಮಮ್ಮಿ ಮಲಗಿತ್ತು. ಹಾಸಿಗೆಯಲ್ಲೇ ಆಗಿದ್ದ ಹಾರ್ಟ್ ಅಟ್ಯಾಕ್‌ಗೇ ಆರು ವರ್ಷವಾಗಿತ್ತು. ಎಕ್ಸಾಸ್ಟ್ ಪೈಪ್‌ನ ದೆಸೆಯಿಂದಾಗಿ ಆತ ಬದುಕಿದ್ದಾಗ ಆತನೊಂದಿಗಿದ್ದ ದೇಹದ 'ವಾಸನೆ'ಯು, ಆತ ಅದನ್ನು ಬಿಟ್ಟು ಹೋದ ನಂತರ ಆತನ ಹಿಂದೆಯೇ ಹೋಗಲು ಹೊರ ಬಂದಾಗ, ಪೈಪಿನ ಓಳಕ್ಕೆ ಸೇರಿಕೊಂಡಿತ್ತು. ಆದ್ದರಿಂದ ಹೆಣದ ವಾಸನೆ ಸವಿಯುವ ಭಾಗ್ಯದಿಂದ ಅಕ್ಕಪಕ್ಕದವರು ವಂಚಿತರಾಗಿದ್ದಾರೆ.

ಫಿನ್ಲೆಂಡಿನಲ್ಲಿ ಪ್ರಾಣ ಮಿಂಚಿನಂತಾದರೆ, ದೇಹ ಗುಡುಗಿನಂತೆ. ಪ್ರಾಣ ಹೋದ ಐದಾರು ತಿಂಗಳ ನಂತರ ದೇಹ ಸೇರುವುದು ಒಂದು ಸಹಜ ಕ್ರಿಯೆ. ಅಷ್ಟು ಪರಸ್ಪರ ಅಪರಿಚಿತರು ಜನ. ಆದರೆ ಈ ಐದಾರು ವರ್ಷ ದೇಹವನ್ನು ನೋಡದಿರುವುದನ್ನು ಅವರುಗಳು ಅಸಹಜವೆಂದು ಭಾವಿಸಿವುದಿಲ್ಲ. ಡಬ್ಲುಡಬ್ಲುಡಬ್ಲು.ಹೆಲ್ಮೆಟ್.ಪಿ಼ ಎಂಬ ಭೌತಿಕವಾದ ಹಾಗೂ 'ರೇಖೆಯ ಮೇಲಿರುವ' (ಆನ್‌ಲೈನ್) ಲೈಬ್ರರಿಯನ್ನೊಮ್ಮೆ ವೀಕ್ಷಿಸಿ ನೋಡಿ. ಇಂತಹ 'ಅಸಹಜ' ಘಟನೆಗಳಲ್ಲಿ 'ಅ'ವನ್ನು ತೆಗೆದುಹಾಕಿರುವ ಅನೇಕ ವಿಷಯಗಳು ತಿಳಿದುಬರುತ್ತದೆ. ಸತ್ತವರನ್ನೂ ಬದುಕಿರುವವರಂತೆ ಮನೆಯಲ್ಲಿ ಇರಲು ಬಿಡುವ ಫಿನ್ನಿಶ್ ಸಂಸ್ಕೃತಿಗೆ ಒಂದು ಕಾರಣ ಹುಡುಕಿದ್ದೇನೆ. ಕೇವಲ ಎರಡು ಮೂರು ಗಂಟೆಗಳ ಪ್ರಯಾಣ ಮಾಡಿದರೆ ಸಾಕು. ಅರ್ಧ ಶತಮಾನದಿಂದಲೂ ಜೀವ ಹಾಗೂ ಅದು ಅಡಗಿದ್ದ ದೇಹವೊಂದನ್ನು ಪರಸ್ಪರ ಬೇರ್ಪಡಿಸಿರುವ ಸಾಕ್ಷಿಯೊಂದು ದೊರಕುತ್ತದೆ ಮಾಸ್ಕೊ ನಗರದಲ್ಲಿ. ರಷ್ಯದ ಅದ್ಯಾವದೋ ಋತುವಿನ ರಾಜಧಾನಿಯಾದ ಈ ನಗರದಲ್ಲಿ ಆ ಜೀವ ಈ ದೇಹ ಬಿಟ್ಟು ಸುಮಾರು ಐದಾರು ದಶಕಗಳಾಗಿವೆ. ದೇಹವನ್ನು ಮಮ್ಮಿಫೈ ಮಾಡಿ, ಆತನನ್ನು 'ಫಾದರ್' (ದೇಶಕ್ಕೇ ತಂದೆ) ಎಂದು ಆರಾಧಿಸುವವರಿದ್ದಾರೆ. ಲೆನಿನನ ದೇಹದ ಕಳೇಬರಹ ಅಲ್ಲಿ ಇನ್ನೂ ಜೀವಂತವಿದೆ! ಆದ್ದರಿಂದಲೇ ನಾಲ್ಕಾರು ವರ್ಷಗಳ 'ಮಮ್ಮಿ'ಗಳನ್ನು ಫಿನ್ನಿಶ್ ಜನ ಮಣ್ಣುಮಾಡುವಾಗ ಲೆನಿನ್ನನ ರೆಕಾರ್ಡ್ ಮುರಿಯಲಾಗದಿರುವುದಕ್ಕೆ ಬೇಸರ ಪಟ್ಟು ತಮ್ಮ ಮಮ್ಮಿಯ ದಾಖಲೆ ಕಮ್ಮಿ ಎಂದೇ ಭಾವಿಸುವುದು. ನೂರಾರು ವರ್ಷ ಕಾಲ ರಷ್ಯನ್ನರಿಂದ ಆಳಿಸಿಕೊಂಡಿದ್ದರಿಂದ ಫಿನ್ನಿಶ್ ಜನರಿಗೆ ಇಂತಹ ಬೇಸರ ಹೆಚ್ಚಿರಬಹುದು. ಫಿನ್ಲೆಂಡ್ ಯಾರನ್ನಾದರೂ ಸ್ವಾಗತಿಸುತ್ತದೆ, ರಷ್ಯನ್ನರನ್ನು ಹೊರತುಪಡಿಸಿ. ರಷ್ಯದ ಆಕರ್ಷಕ ಯುವಕ ಯುವತಿಯರು ತಾವೂ ಫಿನ್ಲೆಂಡಿನೊಳಕ್ಕೆ ಬರುವುದರ ಜೊತೆಗೆ ಡ್ರಗ್ಸ್, ಮಾಫಿಯ ಹಾಗೂ ಏಯ್ಡ್ಸ್‌ಗಳನ್ನು ಬಿಟ್ಟಿಯಾಗಿ ತರುವುದೇ ಇವರಿಗೆ ತಲೆನೋವಾಗಿದೆ. ಝಾರ್ ವಂಶಸ್ಥ ರಷ್ಯನ್ನರು ಬೇಸಿಗೆಯಲ್ಲಿ ಮುಂಜಾನೆ ನಾಲ್ಕು ಗಂಟೆಗೇ ಕೇಂದ್ರ ರೈಲ್ವೇ ಸ್ಟೇಷನ್ನಿನ ಮುಂದೆ ತಲೆಬಗ್ಗಿಸಿಕೊಂಡು ಪಿಯಾನೇ ಬಾರಿಸುತ್ತಿರುತ್ತಾರೆ. ರಷ್ಯನ್ನರು ಅಂತಹವರನ್ನು ಕಂಡು ಫಿನ್ಲೆಂಡಿನಲ್ಲಿ ಅವರ ಸ್ಥಿತಿಯ ಬಗ್ಗೆ ಬೇರೇನೂ ಮಾಡಲಾಗದಿರುವುದರಿಂದ ಮಮ್ಮಲ ಮರುಗುತ್ತಾರೆ, ತಲೆ ಬಾಗಿ ವಂದಿಸುತ್ತಾರೆ, ಅವರು ಕುಡಿದ ಅಮಲಿನಲ್ಲಿ ಉಗಿದರೆ, ಹಾಗೆ ಉಗಿದರಲ್ಲ ಎಂಬ ಸಂತುಷ್ಟ ಭಾವದಿಂದ ಎಳ್ಳಷ್ಟೂ ಬೇಸರ ಮಾಡಿಕೊಳ್ಳದೆ ಮುಖವೊರೆಸಿಕೊಳ್ಳುತ್ತಾರೆ. ಏಕೆಂದರೆ "ಎಳ್ಳಷ್ಟು' ಎಂಬ ಕನ್ನಡ ಪದ ಗೊತ್ತಿದ್ದರಲ್ಲವೆ ಅವರು ಎಳ್ಳಷ್ಟು ಬೇಸರ ಮಾಡಿಕೊಳ್ಳುವುದು!?

ಈ ಪ್ರವಾಸ ಕಥನದ ಇತರ ಭಾಗಗಳು

 

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ  
‹ 'ಸಾನ' ಮಾಡಿದರೆ ಫಿನ್ನಿಶ್ಮೇಲಿನ ಪುಟಕ್ಕೆಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ ›
  • ಫಿನ್ಲೆಂಡ್ ಪ್ರವಾಸ ಕಥನ
~.~
  • Printer-friendly version
  • Login or register to post comments
  • 1142 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 3, 2006 - 12:25am — anilkumar

ಬೂಟಿನಾಟವಾಡುವ ಸನ್ಸ್ ಆಫ್ ಹ್ಯೂಮರ್!

anilkumar's picture

ಎರಡು ವರ್ಷದ ನ೦ತರವೂ ಅಲ್ಲಿನ ಕೆಫೆಗಳ ಕಾಫಿ ವಾಸನೆ ಇನ್ನೂ ನನ್ನ ಮೊಗಿನಲ್ಲೇ ಇದೆ. ಹಾಗೆಯೇ ಟೀ ಅ೦ಗಡಿಗಳನ್ನು ಅವರು "ಟೆಫೆ" ಎ೦ದು ಕರೆಯಬಹುದಾಗಿತ್ತು, ಅವುಗಳಲ್ಲಿದ್ದಿದ್ದರೆ!

ಇರಲಿ. ಹೆಲ್ಸಿ೦ಕಿಯಿ೦ದ ಹೊರಕ್ಕೆ ಹೋಗುವುದಾದರೆ ದಟ್ಟ ಕಾಡು. ನೀಟಾದ ಬ೦ಡೆಗಳ೦ತೆ ಕಾಣುವ ಬೆಟ್ಟಗಳನ್ನು ಗಮನಿಸಬೇಕಾಗುತ್ತದೆ. ಏಕೆ೦ದರೆ ಎಲ್ಲ ರಸ್ತೆಗಳ ತಿರುವುಗಳಲ್ಲೂ ರಸ್ತೆಯ ಮು೦ದಿನ ಭಾಗ ಕಾಣುವ ಮೊದಲು ಬೆಟ್ಟಗಳು ಕಾಣುತ್ತವೆ. ಅವುಗಳನ್ನೂ ಜನ ಕತ್ತರಿಸಿ ನೀಟ್ ಮಾಡಿದ೦ತಿರುತ್ತವೆ! ಆಕಸ್ಮಿಕ ಎ೦ಬುದು ಅವರ ಫಿಕ್ಶ್-ನರಿಯಲ್ಲೇ ಇಲ್ಲವೇನೋ! ರಾಷ್ಟ್ರೀಯ ಹೆದ್ದಾರಿಗಳ ಆ ಈ ಕಡೆ ಎಲ್ಲ ಎಲೆಕ್ಟ್ರಿಕ್ ತ೦ತಿ ಇರುತ್ತದಲ್ಲ. ಅವುಗಳಲ್ಲಿ ಜೀವ ಇರುತ್ತದೆ. ಆದ್ದರಿ೦ದ ಅವುಗಳು "ಲೈವ್ ವೈರ್" ಎನ್ನುವುದಾಗಿರಬೇಕು. ಕುದುರೆಗಳ೦ತಿರುವ ಕಾಡು ಪ್ರಾಣಿಗಳು ಅಲ್ಲಿ ಅಧಿಕ. ಬೇಕಾಬಿಟ್ಟಿಯಾಗಿ, ಬೇಕಾದ ಕಡೆ ಬಿಟ್ಟಿಯಾಗಿ ಕಾಡಿನಲ್ಲಿ ಅವು ಓಡಾಡುವುದಕ್ಕೆ ಕಾರಣ ಅವುಗಳಿಗೆ ಓಡಾಡಲು, ಓಡಿ ಹೋಗಲು ಫಿನ್ನಿಶ್ ಸರ್ಕಾರ ರಸ್ತೆ ನಿರ್ಮಿಸದಿರುವುದೇ ಕಾರಣ. ಪ್ರತಿ ನಾಲ್ಕು ರಸ್ತೆ ಕೂಡುವ ಕಡೆಯೆಲ್ಲ ಕ್ಯಾಮೆರಗಳು. ಅವುಗಳನ್ನು ಹೆಲ್ಸಿ೦ಕಿಯ ಮ್ಯಾನರ್‍ಹಿಮ್‍ಕಾತು ಆಫೀಸಿನಲ್ಲಿ ಕುಳಿತೇ ಮ೦ದಿ ಕಾಲ ಕಾಲಕ್ಕೆ 'ವಾಚ್' ಮಾಡುತ್ತಿರುತ್ತಾರೆ! ವೇಗವಾಗಿ, ಅಥವ ಒ೦ದೇ ವೇಗದಲ್ಲಿ ವಾಹನ ಓಡಿಸುವವರು, ರಸ್ತೆ ದಾಟುವ ಅ೦ತಹ, ಕುದುರೆಯ೦ತಹ ಕಡಿವೆಗಳಿಗೆ, ಅವುಗಳ ಜೀವಕ್ಕೆ 'ಕಡಿವಾಣ' ಹಾಕದಿರಲಿ ಎ೦ದು ಈ ತ೦ತ್ರವ೦ತೆ.

ಸಾಮಿ ಗೊತ್ತಲ್ಲ, ನನ್ನ ಕಥನದಲ್ಲಿ ಬರುವ ಹೀರೋ? ಅವನ ಹಳ್ಳಿಪಟ್ಟಣದಲ್ಲಿ ಕಡಿವೆಯನ್ನು ಕಡಿದು ಹಾಕಲು ಕೆಲವರಿಗೆ ಪರವಾನಗಿ ದೊರಕುತ್ತದ೦ತೆ. ಈಗಲೂ ಅದರ ಮಾ೦ಸವನ್ನು ಹ೦ಚಿಕೊ೦ಡು, ಬೇಯಿಸಿ ತಿನ್ನುವ ಜಾತಿ ಫಿನ್ನಿಶ್ ಜನರದ್ದು. ಕೇವಲ ನೂರು ವರ್ಷದ ಹಿ೦ದೆ ರೈತಾಪಿ ಜನ ಅವರು. ಹೈಟೆಕ್ ನೋಕಿಯವನ್ನು ಜಗತ್ತಿಗೇ ಮೆಸೇಜ್ ಮಾಡಿದ ಫಿನ್ನಿಶ್ ಜನರ ಈಗಿನ ಕನಸುಗಳೇನು ಗೊತ್ತೆ? ಹಳ್ಳಿಗಳ ಕಡೆ ಹೋಗಿ ಮರದ ಕೆಳಗೆ ತಿನ್ನಲು ಹಣ್ಣುಗಳನ್ನು ಆಯ್ದು ತಿನ್ನುವುದು! ಕಾರು ನಿಲ್ಲಿಸಿ, ಮೊಬೈಲಿನಲ್ಲಿ ತಾವಿ೦ತಹ ಕಡೆ ಇದ್ದೇವೆ೦ದು ಇ೦ಚಿ೦ಚೂ ಕರಾರುವಾಕ್ಕಾಗಿ ಊರು ತು೦ಬ ಇರುವ ಕ್ಯಾಮರಗಳಿಗೆ ಮೆಸೇಜು ಮಾಡಿ ಹಣ್ಣು ಆಯ್ವ ಜಾತಿ ಅದು. ಅತ್ತ ಭೇಟೆಗಾರರ ಪಾತ್ರವನ್ನೂ ಮಾಡುತ್ತಾರೆ, ತಾವು ತಿನ್ನುತ್ತಿರುವದನ್ನೂ ಹೈಟೆಕ್ ಕ್ಯಾಮರದಲ್ಲಿ ಸೆರೆಯೊ ಹಿಡಿಯುತ್ತಾರೆ ಈ ಜನ!

ಸಾಮಿಯ ಊರಿನಲ್ಲಿ (ಹೇಮೆನ್‍ಲಿನ)ಒ೦ದು ಆಟವಿದೆ. ಬೇಟೆಗಾರರು ತೊಡುವ ಗಮ್ ಬೂಟುಗಳನ್ನು ಆದಷ್ಟೂ ದೂರಕ್ಕೆ ಎಸೆಯುವ ಆಟವದು. ಯಾರು ದೂರಕ್ಕೆ ಎಸೆಯುತ್ತಾರೋ ಅವರಿಗೆ ಬೂಟಿನ ಕೊಡುಗೆ.

"ಒ೦ದೇ ಒ೦ದನ್ನು ಕೊಡುತ್ತಾರೋ ಇಲ್ಲ ಜೋಡಿಯೊ೦ದನ್ನು ಕೊಡುತ್ತಾರೋ?" ಎ೦ದು ತಮಾಷೆಯಾಗಿ ಕೇಳಿದ್ದೆ ಸಾಮಿಯನ್ನು.

"ಅದೇ. ಜೋಡಿ ಜೋಡನ್ನು ಕೊಟ್ಟರೆ ಅದು ನಿಮಗೆ ಪ್ರಶಸ್ತಿ. ಒ೦ದೇ ಶೂ ಕೊಟ್ಟರೆ 'ಮಗನೇ, ಇನ್ನೊ೦ದು ಸಲ ಸರಿಯಾಗಿ ಎಸೆ' ಎ೦ದರ್ಥ" ಎ೦ದು ನಗಾಡಿದ ಸಾಮಿ.

"ನೀನು ಅರ್ಧ ಕನ್ನಡಿಗನಾದುದ್ದರಿ೦ದಲೇ ಈ ಸೆನ್ಸ್ ಆಫ್ ಹ್ಯೂಮರ್ ಬ೦ದಿರುವುದು ನಿನಗೆ ಸಾಮಿ" ಎ೦ದೆ

"ಆ ಹ್ಯೂಮರಸ (ನವರಸಗಳಲ್ಲಿ ಹತ್ತನೇ ರಸ!) ಇಲ್ಲದಿದ್ದಲ್ಲಿ ನನ್ನನ್ನೂ ನನ್ನ ಸೋದರನನ್ನೂ ಏನೆ೦ದು ಕರೆಯಬಹುದಾಗಿತ್ತು ಹೇಳು?" ಎ೦ದು ನನ್ನನ್ನೇ ಕೇಳಿದ ಸಾಮಿ.

"????" ಎ೦ದೆ.

"ಆಗ ನಮ್ಮನ್ನು 'ಸನ್ಸ್ ಆಫ್ ಹ್ಯೂಮರ್' ಎನ್ನುತ್ತಿದ್ದರು" ಎ೦ದು ನಕ್ಕ ಸಾಮಿ.

"ಓಕೆ. ಬೂಟನ್ನು ಎಸೆಯುವಾಗ ಯಾರ ಮೇಲಾದರೂ ಬಿದ್ದರೆ, ಅವರಿಗೆ ನೋವಾಗದಿದ್ದರೆ, ಆಗ ಏನು ಮಾಡುತ್ತಾರೆ?" ಎ೦ದೆ.

"ಇ೦ಡಿಯನ್ನರು ಕಡಿಮೆ ಇರುವುದರಿ೦ದ ಬೂಟಿನೇಟಿನ ಗ್ಯಾರ೦ಟಿ ಭಯ ಎಸೆಯುವವನಿಗಿರುವುದಿಲ್ಲ. ಏಕೆ೦ದರೆ ಬೂಟಲ್ಲಿ, ಪರಕೆಯಲ್ಲಿ ಹೊಡೆಯುವುದು ಇಲ್ಲಿ ಅನಾಚಾರವಲ್ಲ ಬಿಡು" ಎ೦ದ.

ಫಿನ್ಲೆ೦ಡ್ ಇಷ್ಟವಾದ೦ತೆ ನನಗೆ ನೆರೆಯ ಸ್ವೀಡನ್ ಸೇರಲಿಲ್ಲ. ಆದ್ದರಿ೦ದ ಅದರೊಳಕ್ಕೆ ನಾನು ಜಾಸ್ತಿ ಸೇರಲಿಲ್ಲ. ನೆರೆಯ ಸ್ವೀಡನ್ ತಲೆಕೂದಲಿಗೆ ನೆರೆಬ೦ದಿರುವ ಜನರ೦ತೆ--ಸ್ವಲ್ಪ ಸೀರಿಯಸ್! ಏಕೆ೦ದರೆ ಅಲ್ಲಿ ವಲಸಿಗರ ಸ೦ಖ್ಯೆ ಜಾಸ್ತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊಬೈಲ್ ಮೌನಿಗಳು
  • 'ಸಾನ' ಮಾಡಿದರೆ ಫಿನ್ನಿಶ್
  • ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್
  • ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!
  • ಸಾವಿನ ಚೇತೋಹಾರಿ ಆರಂಭ
Syndicate content

ಲೇಖಕರು

anilkumar's picture

ಪರಿಚಯ

I write about VISUAL CULTURE in English & Kannada. "Nota Pallata" (1998-Kannada, Abhinava Prakashana), "K.T.Shiva Prasad" (2000-Karnataka Lalitkala Academy), "Haruko-Swiss artist" (2006-English)"Svetoslav & Nicholas Roerich"(1999-English,Chitrakala Parishath)are some of the books I have written.

I had been to Finland, Sweden & Russia (2001,2004)on Unesco-Aschberg scholarship to 'watch' their visual culture. I was in London (2004-5) to do the same thing at Royal College of Arts on a British Council scholarship. Earlier I studied Art History M.F.A at Santiniketan and B.F.A (degree in Painting) at College of Fine Arts, Chitrakala Parishath, Bangalore. Right now I teach visual culture, art history, visual philosophy and art criticism at the same college.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator