ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ
ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕೊಳ್ಳುತ್ತೇವೆ. ಮತ್ತೆ ತಿನ್ನುತ್ತೇವೆ. ಹತ್ತು ದಿನವಾದರೂ ಬಂದೀತೆಂದು ಭಾವಿಸಿಕೊಂಡಿದ್ದ ಎಂಟಿಆರ್, ಮೂರು ದಿನಗಳಲ್ಲಿ 'ಎಂಪ್ಟಿ'ಯಾಗಿತ್ತು. ಅದರ ರುಚಿ ಹಾಗಿತ್ತೆಂದೇನಲ್ಲ. ನಮ್ಮ ಭಾರತೀಯ ಹೊಟ್ಟೆಯ ಹಸಿವು ಫಾರಿನ್ ಲೊಕೇಶನ್ನಿನಲ್ಲಿ ಹಾಗಿತ್ತು.
ಒಂದೇ ಅಡುಗೆ ಎರಡು ದೇಶಗಳಲ್ಲಿ ಎರಡು ರುಚಿ ಪಡೆವ 'ರಸ'ಸ್ವಾದ ಆಶ್ಚರ್ಯಕರ! ಭಾರತದಲ್ಲಿ ಉಪ್ಪಿಟ್ಟಿನಂತೆ ಅನ್‌ವಾಂಟೆಡ್ ಆದ ಎಂಟಿಆರ್ ಅದೇ ಫಿನ್ಲೆಂಡಿನಲ್ಲಿ ಮೃಷ್ಟಾನ್ನ. ಕಳೆದ ವಾಕ್ಯದ ಕೊನೆಗೆ ಬರುವ ಫುಲ್‌ಸ್ಟಾಪ್‌ನ ಮುಂಚಿನ ಪದದ ಅರ್ಥ ನನಗೆ ಗೊತ್ತಿಲ್ಲದಿದ್ದರೂ ಎಂಟಿಆರ್ ಫಿನ್ಲೆಂಡಿನಲ್ಲಿ ಅದಾಗಿತ್ತು. 
ತಲಾ ನಮ್ಮ ತರ್ಟಿ-ಫಾರ್ಟಿ ಸೈಟಿನ ಅಳತೆಯ ಎರಡು ಸ್ಟುಡಿಯೊ. ಮಧ್ಯದಲ್ಲಿ ಕಾಮನ್ ಅಡುಗೆಮನೆ. ಹೆಲ್ಸಿಂಕಿಯ ವಿಯಟ್ನಾಮಿ ಅಂಗಡಿಯಲ್ಲಿ ಭಾರತೀಯ ದಿನಸಿ ಹಾಗೂ ಆಫ್ರಿಕನ್ ಅಂಗಡಿಯಲ್ಲಿ ಮಸಾಲೆಗಳನ್ನು ಕೊಂಡಿದ್ದೆ. ನಿಜವಾದ ಮಲ್ಟಿ ಕಲ್ಚರಲ್ ಎಂದರೆ ಇದೇ ಅಲ್ಲವೆ. ಅಡುಗೆ ಮಾಡಲು ಪ್ರಾರಂಭಿಸಿದೆ. ಆರಾರು ವರ್ಷಕಾಲ ನಮ್ಮ ಡೆಡ್‌ಬಾಡಿ ಡೆಡ್ಲಿಯಾಗಿದ್ದರೂ "ಕ್ಯಾರೆತುಮಾರೆ" ಎನ್ನದವರು ಫಿನ್ನಿಶ್ ಮಂದಿ ಎಂದು ಈಗಾಗಲೇ ನಿಮಗೆ ತಿಳಿಸಿರುವೆ. ಹಾಗಂತ ನನಗೆ ನಾನೇ ಹೇಳಿಕೊಂಡೆ ಕೂಡ-ಅಡುಗೆ ಮಾಡುವ ಮೊದಲು! ಏಕೆಂದರೆ ಅಡುಗೆ ಮನೆಯಲ್ಲಿ ಮತ್ತು/ಅಥವ ಸ್ಟುಡಿಯೊದಲ್ಲಿ ಸಿಗರೇಟು ಸೇದುವಂತಿಲ್ಲ. ಅದರ ಹೊಗೆ (ಯಾವ ಹೊಗೆಯಾದರೂ ಸರಿ) ಸೀದ ಹೊಗೆ-ಸೆನ್ಸರ್‌ಅನ್ನು ತಲುಪಿ ಅದು ಸೀದ ಅಗ್ನಿಶಾಮಕ ದಳಕ್ಕೆ ಬಿಸಿ ಮುಟ್ಟಿಸಿ ಅವರು ಸೀದ ನಮ್ಮ ಸ್ಟುಡಿಯೋಕ್ಕೆ ಬರುವುದು ವಾಡಿಕೆಯಾಗಿತ್ತು. ಏಕೆಂದರೆ ಪರದೇಶಿ ಕಲಾವಿದರು ರೂಲ್ಸ್ ಮುರಿಯುವಲ್ಲಿ ನಿಷ್ಣಾತರು. ದಂಡ ಭಾರತೀಯ ಕರೆನ್ಸಿಯಲ್ಲಿ ಕೇವಲ ಎಂಟು ಸಾವಿರ ರೂಪಾಯಿ. ಆದ್ದರಿಂದ ಹುಷಾರಾಗಿ ಅಡುಗೆ ಮಾಡತೊಡಗಿದೆ.
ಎಣ್ಣೆ ಹಾಕಿ, ಉರಿ ಜೋರು ಮಾಡಿ, ಒಂದಿಡೀ ಒಂದು ಹಿಡಿ ಸಾಸಿವೆಯನ್ನು ಬಾಣಲೆಯ ಮೇಲೆ ಎಸೆದೆ ಬ್ರೂಸ್ಲಿಯಂತೆ, ಮೂರಡಿ ದೂರದಿಂದ. ಸ್ವಲ್ಪ ಜೀರಿಗೆ ಹಾಕಿ, ಈರುಳ್ಳಿ ಚೂರು ಚೂರು ಮಾಡುತ್ತಿದ್ದೆ, ಕಣ್ಮುಚ್ಚಿಕೊಂಡು. ಬಾಣಲೆಯ ಉರಿ ಹಾಗೂ ಈರುಳ್ಳಿಯನ್ನು ಕಟ್ ಮಾಡಲು ಇರುವ ಕಣ್ತೆರೆಸುವ ಉಪಾಯವೆಂದರೆ ಕಣ್ಣು ಮುಚ್ಚಿಕೊಂಡುಬಿಡುವುದು. ಹೊರಗೆ ಯಾರದೋ ಹೆಜ್ಜೆಯ ಸಪ್ಪಳ. ಮನುಷ್ಯನೊಬ್ಬನ ಹೆಜ್ಜೆಯ ಸದ್ದು ಆ ಮುನ್ನೂರೂ ಚಿಲ್ಲರೆ ಸ್ಟುಡಿಯೋಗಳಿರುವ ಕಟ್ಟಡದಲ್ಲಿ ಒಂದು 'ಸುದ್ದಿ' ಎಂದರೆ ನಂಬುತ್ತೀರ? ಅಂತಹುದರಲ್ಲಿ ಇಬ್ಬರು ಮನುಷ್ಯರ ಹೆಜ್ಜೆ ಕೇಳಿ ಇದು 'ಬ್ರೇಕಿಂಗ್ ನ್ಯೂಸ್' ಎಂದು ತಮಾಷೆಯಾಗಿ ನನಗೆ ನಾನೇ ಹೇಳಿಕೊಂಡೆ.
ಈ ಸುದ್ದಿಯನ್ನು ಇನ್ನೊಬ್ಬರಿಗೆ ಹೇಳಲು ಸಾಧ್ಯವಾದರೆ, ಹೀಗೆ ಹೇಳುವ ಸುದ್ದಿಯೇ ಒಂದು ಎಮರ್ಜೆನ್ಸಿ ನ್ಯೂಸ್ ಆಗಿಬಿಡಬಹುದು-ಎಂದೂ ನನಗೆ ನಾನೇ ಹೇಳಿಕೊಂಡೆ. ಯಾರೋ ಕ್ಷೀಣವಾಗಿ ಬಾಗಿಲು ತಟ್ಟಿದ ಸದ್ದು. ಹೆಲ್ಸಿಂಕಿಯ ಮುಖ್ಯ ರಸ್ತೆಯಲ್ಲಿ (ನಮ್ಮ ಎಂ.ಜಿ.ರೋಡಿನಂತಹದ್ದು) ಜೋರಾಗಿ ಹಾರನ್ ಬಾರಿಸುವ ಡ್ರೈವರ್ ಕಂಡರೆ ಆತನನ್ನು ರಷ್ಯನ್ ಅಥವ ಅನಾಗರೀಕ ಎಂದು ಕರೆಯುತ್ತಾರೆ ಜನ. ಅಂತಹ ಸೂಕ್ಷ್ಮವಂತರು ಫಿನ್ನಿಶ್ ಜನ. ಕಿವುಡರು ಹೇಗಪ್ಪಾ ಬದುಕುವುದು ಇಂತಹ ನಾಡಿನಲ್ಲಿ! ಹೋಗಿ ಬಾಗಿಲು ತೆಗೆದೆ.
ಹುಡುಗ ಆಗಲೇ ಮೊಬೈಲ್ ಚಾಲು ಮಾಡುತ್ತಿದ್ದ, ಬಾಯನ್ನು ಕರ್ಚೀಫಿನಲ್ಲಿ ಮುಚ್ಚಿಕೊಂಡೇ. ಹುಡುಗಿಯೂ ಬಾಯಿ ಮುಚ್ಚಿಕೊಂಡಿದ್ದಳು. ಕಣ್ಣೀರ ಧಾರೆ ಬೇರೆ. "ಮಿತಾಸ್ ಕೋಲೋ?" ಎಂದಳು. "ವಾಟ್" ಎಂದೆ. "ಬೆಂಕಿ ಹತ್ತಿದೆ ನಿನ್ನ ಕೋಣೆಗೆ" ಎಂದಳು. "ಒಹೋ, ಇಲ್ಲ, ಇಲ್ಲ. ಅಡುಗೆ ಮಾಡುತ್ತಿದ್ದೇನೆ. ಭಾರತೀಯ ಅಡುಗೆ" ಎಂದೆ. "ಎನೋ ಸೀದು ಹೋಗುತ್ತಿದೆ?!" ಎಂದಳು.
"ಸೀದು ಹೋಗುವುದನ್ನು ನಮ್ಮಲ್ಲಿ 'ಒಗ್ಗರಣೆ' ಎನ್ನುತ್ತೇವೆ. ಅಡುಗೆ ಪ್ರಾರಂಭವಾಗುವ ಮುಂಚಿನಿಂದಲೇ, ಮೂಗಿನಿಂದ ನಾವು ಅಡುಗೆಯನ್ನು ಆಸ್ವಾದಿಸಲು ತೊಡಗುವುದು ಭಾರತೀಯರ ವಿಧಾನ" ಎಂದೆ. ಆಕೆಗೆ ತಿಳಿಯಲಿಲ್ಲ, ಅಥವ ತಿಳಿದಿದ್ದರೂ ಅದು ನನ್ನ ಅಡುಗೆ ತಂತ್ರಗಾರಿಕೆಯ ಸ್ವಯಂಲೇವಡಿ ಎಂದು ಆಕೆಗೆ ತಿಳಿಯಲಿಲ್ಲ.
ಜೋಕ್ ಹೇಳಿದರೂ ಕಂಪ್ಯೂಟರ್ ಸಿಸ್ಟಂ ಆಫ್ ಮಾಡಿ ನಂತರ ನಗುವ ಜನರಲ್ಲವೆ ಫಿನ್ನಿಶ್. "ಅಂದರೆ ನೀನು ಸೇಫ್ ತಾನೇ?" ಎಂದಳು. ಖಂಡಿತ. ಆದರೆ ನನ್ನ ಅಡುಗೆಯನ್ನು ನಾನು ತಿಂದ ನಂತರ ಅದೇ ಮಾತನ್ನು ನನ್ನ ಬಗ್ಗೆಯೇ ನಾನು ಹೇಳಲಾರೆ. ಟೇಸ್ಟ್ ಮಾಡುವುದಾದರೆ ಭಾರತೀಯ ಊಟ ಬಡಿಸುವೆ" ಎಂದೆ ಪಕ್ಕದ ಸ್ಟುಡಿಯೋದ ಆ ಹುಡುಗ ಹುಡುಗಿಗೆ.
ಉತ್ತರ ಕರ್ನಾಟಕದ ಹಸಿಮೆಣಸಿನಕಾಯಿ ಒಣರೊಟ್ಟಿ ತಿಂದ ಉತ್ತರ ಕರ್ನಾಟಕದವರಲ್ಲದವರ ಎಕ್ಸ್‌ಪ್ರೆಶನ್ ಅವರ ಮುಖಗಳಲ್ಲಿತ್ತು.
ಅಡುಗೆ ಮಾಡಿದೆ. ನಮ್ಮದೇ ಸ್ಟುಡಿಯೋದ ಎರಡನೇ ಕೋಣೆಯಲ್ಲಿದ್ದ ಕೆನಡಾದ ಲಿಸ ಕ್ಲಾಪ್‌ಸ್ಟಾಕಳಿಗೆ ರುಚಿ ನೋಡಲು ನೀಡಿದೆ. ಕೊಟ್ಟದ್ದನ್ನು ನುಂಗಿ ನೀರು ಕುಡಿದಳು. ಭಾರತಕ್ಕೆ ಸಾಕಷ್ಟು ಸಾರಿ ಬಂದು ಹೋಗಿದ್ದಳಾಕೆ. "ವೆರಿ ಗುಡ್. ನೀನು ಒಳ್ಳೆಯ ಅಡುಗೆ ಮಾಡುತ್ತೀ" ಎಂದಳು. "ನನಗೆ ಭಾರತೀಯ ಅಡುಗೆ ಮಾಡಲು ಬರದು" ಎಂದು ಸುಳ್ಳು ಹೇಳಿದ್ದೆ. ನಿಜವೇನೆಂದರೆ ನನಗೆ ಯಾವ ಅಡುಗೆಯನ್ನೂ ಮಾಡಲು ಬರದಿರುವುದು. ಪ್ರತಿದಿನ ನಾನು ತಿನ್ನುವ ಮುನ್ನ ಆಕೆಗೆ ಒಂದು ಬಟ್ಟಲಿನಲ್ಲಿ ಅಡುಗೆ ನೀಡುತ್ತಿದ್ದೆ. ಆಕೆ ಸರಾಗವಾಗಿ ಧನ್ಯವಾದ ಹೇಳಿ ತಿಂದುಬಿಡುತ್ತಿದ್ದಳು. ಬದಲಿಗೆ ಹೆಸರು ಕುಲ ಹಾಗೂ ಗೋತ್ರ ಗೊತ್ತಿಲ್ಲದ, ಭಾರತದಲ್ಲಿ ನಾನೂರರಿಂದ ಆರುನೂರು ರೂಗಳವರೆಗೆ ಬೆಲೆ ಬರಬಹುದಾದ (ಕೆಜಿಗೆ) ಹಣ್ಣುಗಳನ್ನು ಕೊಡುತ್ತಿದ್ದಳು. ನನಗೆ ತಿನ್ನಲು ಭಯ. ನನ್ನ ರೂಮಿನಲ್ಲಿ ಮೈತುಂಬ ಮುಳ್ಳುಗಳಿದ್ದ ಆ ಹಣ್ಣುಗಳು ಕೊನೆಯವರೆಗೂ ಕೊಳೆಯುತ್ತಿದ್ದವು.
ಕ್ರಮೇಣ ಒಬ್ಬನಿಗಾಗಿ ಮಾಡುತ್ತಿದ್ದ ಅಡುಗೆ ಇಬ್ಬರಿಗೆ ಮಾಡಬೇಕಾಗಿ ಬರುತ್ತಿತ್ತು . ಹೊರಗೆ ತಿನ್ನೋಣವೆಂದರೆ ಒಂದೂಟಕ್ಕೆ ಕೇವಲ ಐದಾರು ಯೂರೊ ( ಮುನ್ನೂರು-ನಾನ್ನೂರು ರೂಪಾಯಿ, ಒಂದೊತ್ತಿಗೆ).
ಹೇಗಾದರೂ ಲೀಸಳಿಗೆ ನನ್ನ ಪಾಲಿನ ಊಟ ನೀಡುವುದು ನಿಲ್ಲಿಸಬೇಕೆಂದುಕೊಂಡೆ. ನನಗೆ ನಾನೇ ಹೇಳಿಕೊಂಡದ್ದೇನೆಂದರೆ ಆಕೆ ನನ್ನ ಅಡುಗೆ ತಿಂದ ನಂತರ ಹತ್ತು ನಿಮಿಷದಲ್ಲಿ ಸ್ವತಃ ರೆಡಿಮೇಡ್ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಳು. ಒಮ್ಮೆ ಮಾತಿಗೆ, "ನಾನು ಶುದ್ಧ ಸಸ್ಯಾಹಾರಿ" ಎಂದಳು. ನನಗಷ್ಟೇ ಸಾಕಾಗಿತ್ತು. ಪ್ರತಿದಿನ ಸಸ್ಯಾಹಾರಿ ಅಡುಗೆ ಮಾಡುತ್ತಿದ್ದೆ. ಕೊನೆಗೆ ಬೇಯಿಸಿರುವ ಬೇಕಾನ್ ಮಾಂಸವನ್ನು ಸಣ್ಣದಾಗಿ ಹಚ್ಚಿ ಸಾರಿನೊಳಕ್ಕೆ ಪ್ರೋಕ್ಷಿಸುತ್ತಿದ್ದೆ. ದೊಡ್ಡ ದೊಡ್ಡ ಪೀಸ್‌ಗಳನ್ನು ಹಾಕಿದರೆ ಅವುಗಳನ್ನು ತೆಗೆದು ಬದಿಗಿರಿಸಿ, ಅದನ್ನೇ ಸಸ್ಯಾಹಾರಿ ಭಾರತೀಯ ಅಡುಗೆ ಎಂದುಕೊಂಡು ಆಕೆ ತಿನ್ನುವ ಚಾನ್ಸ್ ಇರುತ್ತಿತ್ತಲ್ಲ! ಅಲ್ಲಿಗೆ ಖರ್ಚಿನ ಗಂಡಾತರ ನಿಂತಂತಾಯಿತು. ಅಥವ ನಾನು ಹಾಗೆಂದುಕೊಂಡಿದ್ದೆ.
ಒಂದು ದಿನ ನಮ್ಮ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬನಾದ ಪೆಕ್ಕ ಕಂಟೋನೆನ್ ಸ್ಟುಡಿಯೋಗೆ ಬಂದ. ತಿನ್ನಲು 'ಭಾರತೀಯ' ಎಂದು ನಾನೇ ಹೆಸರಿಸಿಬಿಟ್ಟಿದ್ದ ಅಡುಗೆ ನೀಡಿದೆ. ಭಾರತೀಯರಲ್ಲದವರು ಮಾತ್ರ ನನ್ನ ಅಡುಗೆಯ ರುಚಿ ನೋಡಿದ್ದರು. ಹಾಗೂ ನಾನು ಭಾರತೀಯನಾದುದರಿಂದಾಗಿ ನನ್ನ ಅಡುಗೆಯನ್ನು 'ಭಾರತೀಯ' ಎಂದು ಅನುಮಾನಾತೀತವಾಗಿ ಅನುಮೋದಿಸಿದ್ದರು.
"ಅನಿಲ್ ಅಡುಗೆ ತುಂಬ ಚೆನ್ನಾಗಿ ಮಾಡುತ್ತಾನೆ" ಎಂದು ಲೀಸ ತಾರೀಫು ಮಾಡಿದಳು. ಯಾವುದೇ ಲಾಭದ ಉದ್ದೇಶವಿಲ್ಲದೆ ಮಾತನ್ನೂ ಆಡದ ಕಲಾವಿದೆ ಲೀಸ. "ಇಂಗು ಮತ್ತು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ ಎಂದು ನಮ್ಮಲ್ಲಿ ಗಾಧೆಯೇ ಇದೆ" ಎಂದೆ. ಲೀಸ ನನ್ನನ್ನು ಒಂದು ಸುತ್ತು ಹಾಕಿ, ದಿಟ್ಟಿಸಿ, "ನೀನು ಮಂಗನಂತೆ ಕಾಣುತ್ತಿಲ್ಲವಲ್ಲ. ಅಡುಗೆ ಹೇಗೆ ಮಾಡಿದೆ" ಎಂದಳು.
ತಿಂಗಳಾಯಿತು. ಪೆಕ್ಕ ಕಂಟೋನೆನ್‌ನಿಂದ ಫೋನ್. "ಇನ್ನು ಹದಿನೈದು ದಿನಕ್ಕೆ ನಮ್ಮಲ್ಲಿ ಪಾರ್ಟಿ ಇದೆ. ನೀನು ಬರಲೇಬೇಕು. ಬೇರೇನಾದರೂ ಪ್ರೋಗ್ರಾಂ ಇದೆಯೇ?" ಎಂದು ಕೇಳಿದ. "ಇದು ನನಗೆ, ಭಾರತಕ್ಕೆ ಸಂದ ಮರ್ಯಾದೆ" ಎಂದುಕೊಂದು, ಜೋರಾಗಿ ಆತನಿಗೆ ಫೋನಿನಲ್ಲಿ ಕೇಳುವಂತೆ ಅಂದೂ ಬಿಟ್ಟೆ. ಸಂಪಿಗೆಹಳ್ಳಿ, ಯಶ್ವಂತ್‌ಪುರ, ಮಲ್ಲೇಶ್ವರದಿಂದ ಜಗತ್ತಿನ ತುತ್ತತುದಿಯಾದ ಉತ್ತರ ಫಿನ್ಲೆಂಡಿನವರೆಗೂ "ಎಲ್ಲಿಂದ ಎಲ್ಲಿಗೆ ಬಂದ್ಯೋ ಮಗ" ಎಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಅಲ್ಪಸ್ವಲ್ಪ ಯೋಗ ಮಾಡಿದ್ದರಿಂದ ನನ್ನ ಬೆನ್ನನ್ನು ನಾನೇ ತಲುಪಲು ಸಾಧ್ಯವಾಯಿತು.
ಮರುದಿನ ಮತ್ತೆ ಪೆಕ್ಕನ ಫೋನ್, "ಮೂವತ್ತು ಜನ ಬರುತ್ತಿದ್ದಾರೆ ಪಾರ್ಟಿಗೆ. ಬಂದೇ ಬರುತ್ತೀಯಲ್ಲವೆ?"
"ಖಂಡಿತ"
"ಅವರೆಲ್ಲಾ ಫಿನ್ಲೆಂಡಿನ ದೃಶ್ಯಕಲೆಯ ಹಣೆಯಬರಹ ನಿರ್ಧರಿಸುವವರು. ನೀನು ಲಕ್ಕಿ" ಎಂದ.
"ಥ್ಯಾಂಕ್ಸ್" ಎಂದೆ.
ನನ್ನಂತ ಉದಾಸೀನನಲ್ಲದ, ಮಹತ್ವಾಕಾಂಕ್ಷೆಯಿರುವ ನಮ್ಮ ಅಥವಾ ನನ್ನ ಬೆಂಗಳೂರಿನ ಕಲಾವಿದರಾಗಿದ್ದರೆ ಫೋನಿನಲ್ಲೇ ಕುಣಿದು ಕುಪ್ಪಳಿಸಿಬಿಡುತ್ತಿದ್ದರೇನೋ. ನನಗೂ ಒಳಗೊಳಗೇ ಖುಷಿ. ಮರುದಿನ ಪೆಕ್ಕನ ಫೋನ್, 'ಡೆಜಾವೂ'ನಂತೆ (ಇದೇ ಮುಂಚೆಯೇ ಹೀಗಿಯೇ ನಡೆದಂತೆನಿಸುತ್ತದೆ ಎಂಬ ನಾಲ್ಕು ಕನ್ನಡ ಪದಕ್ಕೆ ಸಮ ಈ ಫ್ರೆಂಚ್ ಪದ-ಡೆಜಾವು).
"ಅನಿಲ್, ಲಿಸ ಹೇಳಿದಳು. ನಾನೂ ಪರೀಕ್ಷಿಸಿಯಾಯಿತು. ಎಲ್ಲರಿಗೂ ಹೇಳಿದ್ದೂ ಆಯ್ತು. ನಮ್ಮ ಮನೆಗೆ ಬರುವ ಮೂವತ್ತು ಮಂದಿ ಫಿನ್ಲೆಂಡಿನ ಕಲೆಯ ಹಣೆಯ ಬರಹಗಾರರಿಗೆ ನಿನ್ನ ಕೈಯಿಂದ ಭಾರತೀಯ ಅಡುಗೆ ಸ್ಪೆಷಲ್!" ಎಂದು ಫೋನಿಟ್ಟ.
ಈ ಹಣೆಯಬರಹಗಾರರ ಹಣೆಯಬರಹವೇ ನನ್ನ ಕೈಯಲ್ಲಿತ್ತು. ಪಾರ್ಟಿಯ ಮರುದಿನದ, ಫಿನ್ಲೆಂಡಿನ ರಾಷ್ಟ್ರೀಯ ಪತ್ರಿಕೆಯಾದ "ಹೆಲ್ಸಿಂಕಿ ಸೊನೊಮತ್"ನ ಹೆಡ್‌ಲೈನ್ಸ್ ನೆನೆಸಿಕೊಂಡೆ, ಓದಲಾಗಲಿಲ್ಲ ಏಕೆಂದರೆ ಅದು ಫಿನ್ನಿಶ್ ಭಾಷೆಯಲ್ಲಿತ್ತು.
"ಭಾರತೀಯ ಕಲಾವಿಮರ್ಶಕನಿಂದ ಫಿನ್ಲೆಂಡಿನ ಕಲಾವಿದರ ಭೀಕರ ವಿಮರ್ಶೆ: ವಿಮರ್ಶಕನ ಭಾರತೀಯ ಅಡುಗೆ, ಮುವತ್ತು ಮಂದಿ ಕಲಾವಿದರು ಫಿನಿಶ್!"
ಈ ಪ್ರವಾಸ ಕಥನದ ಇತರ ಭಾಗಗಳು

- Printer-friendly version
- Login or register to post comments
- 1291 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಎಂ ಟಿ ಆರ್ ಪ್ಯಾಕೆಟ್ಟುಗಳು
ಇತ್ತೀಚೆಗೆ ಸ್ನೇಹಿತರೊಬ್ಬರು ಅಮೇರಿಕೆಗೆ ಹೊರಡುವ ಮುನ್ನ ಹೀಗೆಯೇ ಎಂ ಟಿ ಆರ್ ಪ್ಯಾಕೆಟುಗಳನ್ನು ಕೊಂಡು ತಂದಿದ್ದೆವು. ಕೊನೆಗೆ ಚಕ್ಕುಲಿ, ನಿಪ್ಪಟ್ಟುಗಳ ಜೊತೆಗೆ ೩೦ ಕೆ ಜಿ ಮೀರಿದ ಸೂಟ್ ಕೇಸ್ ನೋಡಿ ಹೆದರಿ ತಂದ ಎಷ್ಟೋ ಪ್ಯಾಕೆಟ್ಟುಗಳನ್ನು ಹಾಗೇ ಬಿಟ್ಟು ಹೋದರು. ಸೂಪರ್ ಮಾರ್ಕೆಟ್ಟಿನಲ್ಲಿ ಎಂ ಟಿ ಆರ್ ಕೊಳ್ಳುವಾಗ "ಇದು ಚೆನ್ನಾಗಿರುತ್ತೆ, ನೋಡಿ. ಪೊಂಗಲ್ ತುಂಬ ಚೆನ್ನಾಗಿರುತ್ತೆ" ಎಂದು ಯಾವ ಹುರುಪಿನಲ್ಲಿ ಹೇಳಿದೆನೊ, ಮಾರನೆಯ ದಿನ ಅದು ನನ್ನ ಪ್ಲೇಟಿಗೇ ಬಂದಿತ್ತು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಮೀನು, ಆಲೂ, ಟಾಯ್ಲೆಟ್, ಬೋಟು ಹಾಗೂ ತಿನ್ನುವ ಶೈಲಿ!
ಡಿಯರ್ ನಾಡಿಗ್,
ಪರದೇಶಕ್ಕೆ ಹೋಗುವ ಪ್ರತಿಯೊಬ್ಬ ಕನ್ನಡಿಗನ ನಾಡಿ ಹಿಡಿದಿದ್ದೀರ ನಿಮ್ಮ ಒ೦ದು ಪ್ಯಾರಾಗ್ರಾಫದಲ್ಲಿ. ಕನ್ನಡಿಗರು ಮಾತು ಬದಲಿಸಿಯಾರು, ಹೊಟ್ಟೆಯನ್ನಲ್ಲ! ಅನ್ನವಿಲ್ಲದೆ ನನಗೆ ಅಲ್ಲಿ ಇರಲಾಗುತ್ತಿರಲಿಲ್ಲ. ಅಕ್ಕಿ ಮಾತ್ರ ಅಲ್ಲಿನ ವಿಯಟ್ನಾಮಿ ಅಥವ ಆಫ್ರಿಕನ್ ಅ೦ಗಡಿಯದ್ದು. ಅದೂ ಎಲ್ಲ ಅಕ್ಕಿಯೊ ಸ್ತ್ರೀವಾದಿಯೇ, ಹೆಸರು ಬಾ-'ಸುಮತಿ'ಯೇ. ಬ್ರಾಕ್ಲಿಯನ್ನು ಮೊದಲು ತಿ೦ದದ್ದು ಅಲ್ಲಿಯೇ.
ಹೋಟೆಲಿನ ಊಟ ಒ೦ದಕ್ಕೆ ಐದಾರು ಯುರೋ (ಅರವತ್ತೈದು ರೂಪಾಯಿ)!
ಅ೦ದರೆ ನಾನೂರೈನೂರು ರೂ ಒ೦ದು ಊಟಕ್ಕೆ ಕೊಡುವವರು ಯಾರೋ!
ಮೊದಲ ಸಲ ನಾನು ಫಿನ್ನಿಶ್ ಊಟ ಮಾಡುವವರನ್ನು ನೋಡಿದ್ದು ಪ್ರಕೃತಿಯ ಕರೆಗೆ ಓಗೊಡಬೇಕಾಗಿ ಬ೦ದಾಗ. ಗೊತ್ತಲ್ಲ ಬೆ೦ಗ್ಳೂರ್ ಟೆಕ್ನಿಕ್ಕು? ಒ೦ದು ಕಾಫಿ ಕುಡಿಯುವುದು, ಅವರ ಬಾತ್‍ರೂಮ್ ಬಳಸಲು. ಆದರೆ ಒಮ್ಮೆ ಫ್ಲೀ-ಮಾರ್ಕೆಟ್ (ಸೆಕೆ೦ಡ್ ಹ್ಯಾ೦ಡ್ ಅ೦ಡ್ ಲೆಗ್ ಮಾರ್ಕೆಟ್)ಬಳಿ ಒ೦ದು ನಾಲ್ಕು ರಸ್ತೆಗಳ ಮಧ್ಯೆ ಪ್ರತಿಷ್ಠಾಪಿಸಲಾಗಿದ್ದ ಟಾಯ್ಲೆಟ್ ನೋಡಿದೆ. ಅದನ್ನು ಏಲಿಯನ್‍ಗಳು ಮಾತ್ರ ಡಿಸೈನ್ ಮಾಡಲು ಸಾಧ್ಯವೆನಿಸುವ೦ತಿತ್ತು. ಬಾಗಿರುವ ಬಾಗಿಲು ಎಲ್ಲಾದರೂ ನೋಡಿದ್ದೀರ? ಅದಕ್ಕಿದಿತ್ತು. ಸರಿ, ಟಾಯ್ಲೆಟ್ ನೋಡಿದ ಮೇಲೆ ನನಗೆ ಅದರೊಳಗೆ ಹೋಗಬೇಕೆನಿಸಿತೋ ಅಥವ ನನನಗಿಸಿದ್ದರಿ೦ದ ಅದು ಅಲ್ಲಿ ಪ್ರತ್ಯಕ್ಷವಾಯಿತೋ ತಿಳಿಯದು. ಈ ಮು೦ಚಿನ ವಾಕ್ಯದ ಎರಡೂ ಕಾರಣಗಳೂ ಅಸಹಜವೇ ಬಿಡಿ!
ರಸ್ತೆಯ ಆ ಬದಿಯಲ್ಲಿ ಒ೦ದೈವತ್ತು ಜನ, ಬಿಸಿಲಿನಲ್ಲಿ, ಬಿಸಿಲಿಗಾಗಿ, ಬಿಸಿಲಿ೦ದ ಹೊರಗೆ ಹರಡಲಾಗಿದ್ದ ಟೇಬಲ್‍ಗಳ ಬಳಿ ಊಟ ಮಾಡಿತ್ತಿದ್ದರು. ಮತ್ತೊ೦ದು ಬದಿಯಲ್ಲಿ ಎ೦ದೂ ಮು೦ದು ಹೋಗದ ದೊಡ್ಡ ಹಡಗು. ಮಗದೊ೦ದು ಕಡೆ ಒ೦ದು ನೂರು ಟೇಬಲ್ ಹರಡಿಕೊ೦ಡ ಫ್ಲೀಮಾರ್ಕೆಟ್ ಅಥವ ಆಲ್‍ಮೋಸ್ಟ್ ಫ್ರೀ ಮಾರ್ಕೆಟ್. ಟಾಯ್ಲೆಟ್ ಬಾಗಿಲಿನೊಳಕ್ಕೆ, ಹಾಕಬೇಕಾದೆಡೆ ಕಾಸು ಹಾಕಿ, ಅದು ತೆರೆಯಲೆ೦ದು ಕಾಯುತ್ತ ಈ ಮೊರೂ ದೃಶ್ಯ ನೋಡುತ್ತ ನಿ೦ತಿದ್ದೆ. ಯಾರೋ ಕರೆದರು, ಹೆಸರು ಹಿಡಿದೇನಲ್ಲ ಬಿಡಿ. ಗ೦ಡಹೆ೦ಡತಿಯರಿಬ್ಬರು ಕೈಬಾಯಿ ಸ೦ಜ್ನೆ ಮಾಡುತ್ತ ನನಗೇ ಏನೋ ಹೇಳುತ್ತಿದ್ದರು. ಏನೆ೦ದು ಅರ್ಥ ಮಾಡಿಕೊಳ್ಳಲು ಮೊವತ್ತೊ೦ದು ಸೆಕೆ೦ಡ್ ಹಿಡಿಯಿತು. ಅಷ್ಟರಲ್ಲಿ ನಾನು ಹಾಕಿದ್ದ ಕಾಸಿನ ಪ್ರಭಾವದಿ೦ದ ಟಾಯ್ಲೆಟ್ ಬಾಗಿಲು ತೆಗೆದುಕೊ೦ಡು ಮುವತ್ತು ಸೆಕೆ೦ಡಿನಲ್ಲಿ ಮತ್ತೆ ಮುಚ್ಚಿಕೊ೦ಡಿತ್ತು. 'ಕೌನ್ ಬನೇಗ ಟಾಯ್ಲೆಟ್‍ಪತಿ'ಯಲ್ಲಿ ಅಮಿತಾಬ್ ಕೊಡುವ ಸಮಯದಷ್ಟೇ ಈ ಟಾಯ್ಲೆಟ್‍ನ ಜೀವ! ಆ ದಮ್ ಪತಿಗಳು ಹೇಳುತ್ತಿದ್ದುದ್ದೂ ಅದನ್ನೇ.
"ಟಾಯ್ಲೆಟ್ ಬಾಗಿಲು ತೆರೆದುಕೊ೦ಡಿತು, ಆ ಕಡೆ ತಿರುಗು, ತಿರುಗಿ ನೋಡು, ನೋಡು, ಸಮಯ ಮೀರಿ ಹೋಗುತ್ತಿದ್ದೆ. ಹ್ನಾ೦ ಈಗ ಮುಚ್ಚಿಕೊ೦ಡುಬಿಟ್ಟಿತು. ಗುಡ್" ಎ೦ಬುದು ಅವರ ಮೊವತ್ತೊ೦ದು ಸೆಕೆ೦ಡುಗಳ ಕಾಮೆ೦ಟರಿಯ ಸಾರಾ೦ಶ. ಅಷ್ಟರಲ್ಲಿ ಸುಮಾರು ಹತ್ತದಿನೈದು ಮ೦ದಿ ನನ್ನನ್ನೇ ನೋಡುತ್ತಿದ್ದರು. ಪರದೇಶೀಯರದ್ದು ಫಿನ್ಲೆ೦ಡ್ ಟಾಯ್ಲೆಟ್‍ಗಳ ಸಮೀಪ ಇ೦ತಹ ಫಜೀತಿ ಸರ್ವೇಸಾಮಾನ್ಯವಾದ್ದರಿ೦ದ ಸರ್ವರ್, ಸಪ್ಲೈಯರ್‍ಗಳೂ ನನ್ನನ್ನು ನೋಡಿ ನಗುತ್ತಿದ್ದರು, "ತಿನ್ನುವುದಕ್ಕಷ್ಟೇ ಲಾಯಕ್ಕು ನೀನು ಖಾಲಿ ಮಾಡಲಿಕ್ಕಲ್ಲ" ಎ೦ಬ೦ತೆ!
ಸರಿ. ಅದೇ ಹೋಟೆಲ್ ಹೊಕ್ಕೆ. ಭಯ೦ಕರ ರಷ್ ಇದ್ದದ್ದರಿ೦ದ ಟಾಯ್ಲೆಟ್ಟಿಗೆ ಹೋಗಿಬ೦ದು ಕಾಫಿ ಆರ್ಡರ್ ಮಾಡಿದೆ. "ಕಾಫಿ ಇಲ್ಲ"ವೆ೦ದರು. ಏನಾದರೂ ತಿನ್ನಲೇ ಬೇಕಲ್ಲ. ಫಿನ್ನಿಶ್ ರಾಷ್ಟ್ರೀಯ ಊಟ ಆರ್ಡರ್ ಮಾಡಿದೆ. ಒ೦ದರ್ಧ ಕೇಜಿ ಬೇಯಿಸಿದ ಆಲುಗಡ್ಡೆ. ಸರಿಯಾಗಿ ಅದರೆ ಚರ್ಮ ನಿಕಾಲ್ ಮಾಡಿದ್ದರು. ಅದರ ಮೇಲೆ ಒ೦ದರ್ಧ ಡಜನ್ ಸಣ್ಣಸಣ್ಣ, ಸಣ್ಣಪುಟ್ಟ ಉದ್ದನೇ ಮೀನು. ಹೆರ್ರಿ೦ಗ್ಸ್ ಎ೦ದೇನೋ ಕರೆಯುತ್ತಾರದನ್ನು. ಮೊದಲ ಬಾರಿ ನಾನು ಮೀನನ್ನು ಸರಿಯಾಗಿ ತಿನ್ನುವುದನ್ನು ಅಲ್ಲಿ ಕಲಿತೆ.
ಬೆ೦ಗಳೂರಿನಲ್ಲಾದರೆ ಪ್ರತಿ ಮೀನಿನ ಪ್ರತಿ ಮೊಳೆಯನ್ನು ಎಣಿಸಿ, ಕೌ೦ಟ್ ಮಾಡಿ, ವೈರಸ್-ಸ್ಕ್ಯಾಮ್-ಜ೦ಕ್ ಮೈಲನ್ನು ಮಾಡುವ೦ತೆ ನ೦ತೆ ಡಿಲೀಟ್ ಮಾಡಿ, ಉಳಿದದ್ದನ್ನು ತಿನ್ನುವುದು ನನ್ನ ವಾಡಿಕೆ. ಇಲ್ಲಾದರೆ ಮೊಳೆ ಬಿಟ್ಟು ಮತ್ತೇನೂ ಇದ್ದ೦ತೆ ಕಾಣಲಿಲ್ಲ ಈ ಮೀನುಗಳಲ್ಲಿ. 'ಸೋ ಮೀನ್' ಎ೦ದುಕೊ೦ಡೆ. ಒಳ್ಳೆ ಫಿಗರ್ ಮೈನ್‍ಟೈನ್ ಮಾಡಿದ್ದವು ಅವುಗಳೆಲ್ಲ!
ರೀಸೈಕಲ್ ಬಿನ್ನಿಗೆ ಹಾಕಿ ಅಲ್ಲಿ೦ದಲೂ ಡಿಲೀಟ್ ಮಾಡಿಬಿಟ್ಟೆ. ಅ೦ದರೆ ಮೊಳೆ ಪೇಸ್ಟ್ ಆಗುವ೦ತೆ ಅದರ ಸಮೇತ ತಿ೦ದುಮುಗಿಸಿದೆ. ಮೊರು ದಿನ ಆಲೂಗಡ್ಡೆಯೆಲ್ಲ ನನ್ನ ದೇಹದ ಗೋಡೆಯ ಒಳಗಿನ ಭಾಗದಲ್ಲೆಲ್ಲ ಅ೦ಟಿಕ್೦ಡ೦ತಹದ್ದೇ ಭಾವನೆ. ನಡೆದಾಡುವಾಗ ನನ್ನ ದೇಹ ಒ೦ದು ಕೇಜಿ ತೂಕ ಹೆಚ್ಚಾದ೦ತೆನಿಸುತ್ತಿತ್ತು. ಈ 'ಮೀನ್' ಊಟ ಕೊಡುಸಿದ್ದು ಸುರೇಖ. ಆಕೆ ಇಲ್ಲದಿದ್ದರೆ ನಾನು ನೋಡಿದ್ದು, ಮಾಡಿದ್ದು, ತಿ೦ದು ತೇಗಿದ್ದು, ಜನರನ್ನು ಭೇಟಿ ಮಾಡಿದ್ದು--ಎಲ್ಲವೂ ಒ೦ದೈವತ್ತು ಶೇಕಡ ಕಡಿಮೆಯಾಗುತ್ತಿತ್ತೇನೋ!
ಏನು ತಿನ್ನಬೇಕೆ೦ದು ತಿಳಿಯದ್ದರಿ೦ದ ಅಲ್ಲಿನ ಹೋಟೆಲ್‍ಗಳಿಗೆ ನಾನು ಹೋಗದಿದ್ದುದು ಎರಡನೇ ಕಾರಣ.
'ಮಾಮಿ' ಎ೦ಬ ಮತ್ತೊ೦ದು ರಾಷ್ಟ್ರೀಯ ತಿ೦ಡಿಯನ್ನು ಹೆದರಿಕೊ೦ಡೇ ಕೊಟ್ಟಿದ್ದಳು ಪರಿಚಯದ ಕಲಾವಿದೆ ಮಿನ್ನ, ಒಮ್ಮೆ, ಆಕೆಯ ಮನೆಯಲ್ಲಿ.
"ನಾನು ತಿನ್ನುವುದಿಲ್ಲ, ನೀನು ಬೇಕಾದರೆ ಅಥವ ಬೇಡವಾದರೆ ಬಿಟ್ಟುಬಿಡು... ಇಷ್ಟವಾಗಲಿಲ್ಲವೇ? ಇದು ಇಲ್ಲಿನ ಮನೆಗಳ ಸಾಮಾನ್ಯ ತಿನಿಸು" ಎ೦ದೆಲ್ಲ ಎಚ್ಚರಿಕೆ ನೀಡುತ್ತಿದ್ದಳು, ಇನ್ನೂ ಮೊದಲ ತುತ್ತು ಬಾಯಿಗಿಡುವ ಮುನ್ನವೇ.
"ಎಲ್ಲರೂ ಇದನ್ನು ಮಾಡಿ ತಿನ್ನದೆ ಬಿಟ್ಟುಬಿಡುತ್ತಾರೆಯೇ?" ಎ೦ದು ಕೇಳಿದ್ದೆ.
ನನಗೆ ವಾಕರಿಕೆ ಬರುವ ಕಪ್ಪನೆಯ ಬ್ಲಾಕ್‍ಫಾರೆಸ್ಟ್ ಐಸ್ ಕ್ರೀ೦ನ ಟೋಪಿ, ಅದರೊಳಗೆ ಬೆಳ್ಳನೆ ಮೊಟ್ಟೆ ಬೆರೆತ ಗಿಣ್ಣು, ಇತ್ಯಾದಿಯ ಕಾ೦ಬಿನೇಷನ್ ಅದು. ಆರಾಮವಾಗಿ ತಿ೦ದು ಮುಗಿಸಿದೆ, ಮಾಮಿಗೆ ಬೇಸರವಾಗದಿರಲಿ ಎ೦ದು. ಮಿನ್ನ ಸಹ ತಮಿಳಿನ ಮಾಮಿಯ೦ತೆಯೇ ಕಾಣುತ್ತಿದ್ದಳು ನನಗೆ, ನಾನು ತಿ೦ದು ಮುಗಿಸಿದ ಮೇಲೆ! ಮಾಮಿಯ ಪ್ರಭಾವವದು. ತದನ೦ತರ ಮೊರೂ ತಿ೦ಗಳು ಮಿನ್ನ ಎಲ್ಲರಿಗೂ ಹೇಳುತ್ತಿದ್ದಳು, "ಅನಿಲ್ ಮಾಮಿಯನ್ನು ಪೂರ್ತಿಯಾಗಿ ತಿ೦ದು ತೇಗಿದ" ಎ೦ದು. "ಎ೦ತಾ ಹಸಿವಾಗಿರಬೇಕು ಆತನಿಗೆ, ಪಾಪ!" ಎ೦ದು ಅರ್ಧ ಸೀರಿಯಸ್ ಆಗಿ, ಇನ್ನರ್ಧ ಗೊತ್ತಲ್ಲ?-ಆಗಿ ಪ್ರತಿಕ್ರಿಯಿಸಿದ ಗೆಳೆಯ ಸೆಪ್ಪೊ ರೆನ್ವಲ್. ಮಾಮಿಯನ್ನು ತಿ೦ದ ಮೊರು ದಿನ ಮಾವನಾಣೆಗೂ ಮತ್ತೇನನ್ನೂ ತಿನ್ನುವ ಸಾಹಸ ಮಾಡಲಿಲ್ಲವೆ೦ದು ಹೇಳಬೇಕಿಲ್ಲವಷ್ಟೇ!
ಇರ್ಮೇಲಿ ಹಾಗೂ ಸಕ್ಕರಿ ದ೦ಪತಿಗಳ ಮನೆಯಲ್ಲಿ ಊಟ ಮಾಡುವಾಗ ಚಕ್ಕ೦ಬಕ್ಕಳ ಹಾಕಿ ಊಟ ಮಾಡಿದೆ. ಆಮೇಲೆ ಚಕ್ಕ೦ಬಕ್ಕಳ ಹೇಗೆ ಹಾಕುವುದೆ೦ದು ಇರ್ಮೇಲಿಗೆ ಹೇಳಿಕೊಡಬೇಕಾಯಿತು. ಅಷ್ಟರಲ್ಲಿ ತಿ೦ದದ್ದೆಲ್ಲ ಕರಗಿತ್ತು. ಅ೦ದರೆ ಫಿನ್ಲೆ೦ಡಿನಲ್ಲಿ ತಿನ್ನುವುದಷ್ಟೇ ಅಲ್ಲ, ತಿನ್ನುವ ಶೈಲಿಯ ಬಗ್ಗೆಯೊ ಎಚ್ಚರವಾಗಿರಬೇಕು. ಪ್ರೈವೇಟ್ ಪಾರ್ಟಿಗಳೆ೦ದರೆ ಅಲ್ಲಿನ ಅವರ ಬೋಟ್‍ನಲ್ಲಿ 'ಮಧ್ಯ'ರಾತ್ರಿಯ ಪಾರ್ಟಿಗಳೇ!
somarithana matthu yogasana?
somarithana matthu yogasana?