ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅಳಿಯದೇವರಿಗೆ ಅನ್ಯಾಯ!

August 17, 2006 - 10:34am — benaka

"ಅಗಣಿತ ತಾರಾಗಣಗಳ ನಡುವೆ ಚಂದ್ರಗೆ ಮೆರವಣಿಗೆ....
ಬಾನಲಿ ಚಂದ್ರಗೆ ಮೆರವಣಿಗೆ....."
ಶಬ್ದಗಾರುಡಿಗ ವರಕವಿ ಬೇಂದ್ರೆಯವರ ಕವನದ ಈ ಸಾಲುಗಳನ್ನು ಮೆಲುಕುಹಾಕುತ್ತಾ ಇರುಳಿನಾಗಸದಲ್ಲಿ ದಿಟ್ಟಿ ನೆಟ್ಟವನಿಗೆ 'ಹೌದಲ್ಲವೇ' ಎನಿಸದಿರದು. ಈ 'ಅಕ್ಷಿನಿಮೀಲನ ಮಾಡುವ ನಕ್ಷತ್ರಗಳು' ಅಗಣಿತವೆಂಬುದು ಎಲ್ಲರಿಗೂ ಗೊತ್ತು; ಆದರೆ ಕಣ್ಣೆವೆಯಿಕ್ಕದ ಚುಕ್ಕಿಗಳ ಅಂದರೆ ಗ್ರಹಗಳ ಸಂಖ್ಯೆ ಎಷ್ಟೆಂದು ಎಲ್ಲರಿಗೂ ತಿಳಿದಿದೆಯಲ್ಲವೇ. ಸೌರವ್ಯೂಹದ ಮಟ್ಟಿಗಂತೂ ಗ್ರಹಗಳು ಒಂಬತ್ತು ಎಂದು ಎಲ್ಲರಿಗೂ ತಿಳಿದಿದೆ ಎನ್ನುವಿರಾ? ಇಂದಿನಿಂದ ಸೆರೆಸ್, ಶಾರನ್, ಕ್ಸೇನ ಈ ಮೂರನ್ನು ಸೇರಿಸಿಕೊಳ್ಳಿ - ಒಟ್ಟು ಹನ್ನೆರಡು ಗ್ರಹಗಳು! ಅಯ್ಯಯ್ಯೋ ಎಂಥಾ ಕೆಲಸವಾಯಿತು ಸ್ವಾಮೀ, ಇನ್ನುಮುಂದೆ ಅಳಿಯನನ್ನು ಹತ್ತನೇ ಗ್ರಹವೆಂದು ಕರೆಯುವ ಭಾಗ್ಯ ಹೋಯಿತಲ್ಲಾ ಎಂದು ಹೆಣ್ಣುಹೆತ್ತವರು ಪೇಚಾಡಬೇಕೇನೋ! ಹೋಗಲಿ ಹದಿಮೂರನೆ ಗ್ರಹವೆನ್ನೋಣವೇ ಎಂದರೆ, ಊಹ್ಞೂಂ! ಸಾಧ್ಯವಿಲ್ಲ; ಈಗಾಗಲೇ ಮತ್ತೊಂದಿಷ್ಟು ಉಂಡೆಗಳು ಗ್ರಹಗಳಾಗಲು ಕಾಯುತ್ತಿವೆ!

ಯುರೇನಸ್, ನೆಪ್ಚೂನ್, ಪ್ಲೂಟೋಗಳನ್ನು ಗ್ರಹಗಳೆಂದಾಗ ಭಾರತೀಯರು ಯಥಾಪ್ರಕಾರ 'ತಮಗೆಲ್ಲಾ ಮೊದಲೇ ತಿಳಿದಿತ್ತೆಂಬ' ವಿಶ್ವವಿಖ್ಯಾತ ಮನೋಭಾವದಿಂದ, ಇಂದ್ರ-ನಿರ್‍ಋತಿ-ವರುಣ ಎಂದು ಅವಕ್ಕೆ ಹೆಸರಿಟ್ಟು ನಗೆಪಾಟಲಿಗೀಡಾದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಮೂರಕ್ಕೆ ಏನು ಹೆಸರಿಡುತ್ತಾರೋ ನೋಡಬೇಕು! ಮೂರೇನು ಮೂವತ್ತಾಗಲಿ, ರವಿಯ ಸುತ್ತಲೂ ಚೆಲ್ಲಿಕೊಂಡು ಉಂಡೆಗಳಾಗಿ ದಿಕ್ಕಾಪಾಲಾದವಕ್ಕೆಲ್ಲಾ, ದಿಕ್ಪಾಲಕರ ಹೆಸರಿಟ್ಟು ಕೈಮುಗಿದರೆ ಆಯಿತು! ಇನ್ನು ಜೋಯಿಸರ ಪಾಡೇನು? ಹೊಟ್ಟೆಪಾಡಿಗೇನೂ ತೊಂದರೆಯಿಲ್ಲ ಬಿಡಿ; ಹೊಸ ಗ್ರಹಗಳ ದಶಾ-ಭುಕ್ತಿಗಳನ್ನು, ಗೋಚಾರಫಲಗಳನ್ನು ಸೃಷ್ಟಿಸಿ, ಏಳರಾಟ-ಎಂಟರಾಟ-ಸಣ್ಣಾಟ-ದೊಡ್ಡಾಟ ಎಲ್ಲ ಆಟಗಳನ್ನೂ ಆಡಿಸಿ, ತಕ್ಕ ಶಾಂತಿ ಮಾಡಿಸಿಬಿಡುತ್ತಾರೆ! ಅಂತೂ ಸೆರೆಸ್-ಶಾರನ್-ಕ್ಸೇನ ಗಳು ಸದ್ಯದಲ್ಲೇ ಸುರಸಾ-ಶಾರ್ಙ-ವಿಶ್ವಕ್ಸೇನ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸುತ್ತಿದೆ! ಈ ಮಧ್ಯೆ 'ಒಫಿಯುಕಸ್' ‍- 'ಉರಗಧರ' ಎಂಬ ಹದಿಮೂರನೇ ರಾಶಿಯನ್ನೂ ಸೇರಿಸಬೇಕೆಂದು ಒತ್ತಾಯಿಸುವವರು ಹೆಚ್ಚಬಹುದೇನೋ!

ಜ್ಯೋತಿಷ ತಿಳಿದವರಿಗೆ ಈ ಹಾಸ್ಯ ಮುದನೀಡುತ್ತದೆ:

ಸದಾ ವಕ್ರೀ ಸದಾ ಕ್ರೂರೀ ಸದಾ ಪೂಜಾಮಪೇಕ್ಷತೇ |
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮಗ್ರಹಃ ||

ಸದಾ ಹಿಮ್ಮುಖನಾಗಿ ಚಲಿಸುವ(ವಕ್ರ ನಡೆ-ನುಡಿಯ), ಸದಾ ಶಾಂತಿಪೂಜೆ(ಉಪಚಾರ)ಗಳನ್ನು ಬಯಸುವ
ಸದಾ ಕನ್ಯಾ ರಾಶಿ(ಹೆಂಡತಿಯ ಮನೆ)ಯಲ್ಲೇ ಇರುವ ಅಳಿಯನೇ ಹತ್ತನೆಯ ಗ್ರಹ!

ಇನ್ನು ಈ ಹಾಸ್ಯಕ್ಕೆ ಜಾಗವಿಲ್ಲವೇನೋ! ಅಳಿಯಂದಿರು ನಿಟ್ಟುಸಿರಿಡಬಹುದು! ಒಟ್ಟಿನಲ್ಲಿ, ಕೆಲವರಿಗೆ ಶುಕ್ರದಶೆಯಾದರೆ[ಏಳಿಗೆ], ಹಳೆಯ ಪಠ್ಯಗಳಿಗೆ ಅಷ್ಟಮಶನಿ[ಜೀವಭಯ]!
ಏನೇ ಆಗಲಿ, ಅಳಿಯದೇವರ 'ಗ್ರಹ' ಸ್ಥಿತಿ ಅಳಿದದ್ದು ಮಾತ್ರ ಅನ್ಯಾಯ!

ನಿಮ್ಮವ
ಬೆನಕ

  • ಪ್ರಚಲಿತ
~.~
  • Login or register to post comments
  • 1416 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 17, 2006 - 12:38pm — benaka

ಅಳಿಯದೇವರು:ತಿದ್ದುಪಡಿ

benaka's picture

ಗೆಳೆಯರೇ,
ಮೇಲಿನ ಹಾಸ್ಯಕಾವ್ಯದ ತಾತ್ಪರ್ಯದಲ್ಲಿ, ಉದ್ದೇಶಪೂರ್ವಕವಾಗಿ ಅಲ್ಲವಾದರೂ,
'ಸದಾ ಕ್ರೂರೀ' = ಸದಾ ಕಷ್ಟನೀಡುವ(ಕಾಟಕೊಡುವ) ಎಂಬುದು ಬಿಟ್ಟುಹೋಗಿದೆ; ದಯವಿಟ್ಟು ಸೇರಿಸಿಕೊಳ್ಳಿ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2006 - 4:05pm — ahoratra

ಆ.ರಾ. ಮಿತ್ರರ ಬರಹವನ್ನು ಹೋಲುವ ಹಾಸ್ಯ ಬೆನಕರದು.

ahoratra's picture

ಸವಿಯಾದ ಹಾಸ್ಯ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2006 - 7:54am — benaka

ಕತ್ತೆಮರಿ

benaka's picture

ಅಹೋರಾತ್ರರೆ,
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು! ಎಲ್ಲಿ ಇತ್ತೀಚೆಗೆ ಹೆಚ್ಚಾಗಿ ನಿಮ್ಮ ಬರಹ ಕಾಣದಲ್ಲಾ? 'ಸ್ವಾತಂತ್ರ್ಯದ ಮಂತ್ರ' ಚೆನ್ನಾಗಿದೆ; ಹೀಗೆಯೇ ಬರೆಯುತ್ತಿರಿ.

ಅ.ರಾ.ಮಿತ್ರರೆಂದರೆ ನನಗೆ ನೆನಪಾಗುವುದು ಅವರು ಸದಾ ಹೇಳುವ ಈ ಹಾಸ್ಯ:

ಕತ್ತೆಮರಿ ಚಿಕ್ಕಂದಿನಲ್ಲಿ ಬಹಳ ಚೆನ್ನಿತ್ತು!
ದೊಡ್ಡದಾದ ಮೇಲೆ ಅದರಪ್ಪನಂತಾಗಿ ತಾನೂ ಹಾಳಾಯ್ತು!

ಬರಲೇ,

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2006 - 7:17am — benaka

ಅಳಿಯಾಟ!

benaka's picture

ಇದಪ್ಪಾ ವರಸೆ!
ಹತ್ತನೇ ಗ್ರಹದ ಆಗ್ರಹಕ್ಕೆ ಸಿಲುಕಿ, ನಿಲುಕದಷ್ಟು ದೂರದಲ್ಲಿ ಕಾಯುತ್ತಿದ್ದ ಉಂಡೆಗಳೆಲ್ಲಾ ಪೆಚ್ಚಾಗಿಹೋದವು! ಅವೆಲ್ಲಾ ಗ್ರಹಗಳಾಗುವುದಿರಲಿ, ಮೊನ್ನೆ ತಾನೆ ಗ್ರಹಪೀಠವನ್ನೇರಿದ್ದ ಸೆರೆಸ್, ಶಾರನ್, ಕ್ಸೇನ ಕೂಡ ತಮ್ಮ ಸಿಂಹಾಸನವನ್ನು ಕಳೆದುಕೊಂಡು ಹಿಗ್ಗೆಲ್ಲ ಶಿವಕಾಶಿಯ ಪಟಾಕಿಯಂತೆ ಥುಸ್ಸ್..... !!! ಸಾಲದ್ದಕ್ಕೆ ಮೃತ್ಯುದೇವತೆ ನಿರ್ಋತಿಯ ಹೆಸರಿಟ್ಟುಕೊಂಡ ಪ್ಲೂಟೋದ ಗ್ರಹತ್ವಕ್ಕೇ ಮೃತ್ಯು! ಏನೇನೋ ಬಡಬಡಿಸುತ್ತಿದ್ದೇನೆಯೇ? ಆಗಿದ್ದು ಇಷ್ಟೇ:

ಮೊನ್ನೆ ತಾನೆ ಮೂರು ಗ್ರಹಗಳನ್ನು ಸೌರವ್ಯೂಹಕ್ಕೆ ಸೇರಿಸಿದ ಖಗೋಳತಜ್ಞರು ಇಂದು ಆ ಮೂರಿರಲಿ, ಜೊತೆಗೆ ಪ್ಲೂಟೋವನ್ನೂ 'ಗ್ರಹ' ಎಂದು ಪರಿಗಣಿಸಬಾರದೆಂದು ಅಂತರ್ರಾಷ್ಟ್ರೀಯ ಖಗೋಳಶಾಸ್ತ್ರ ಸಹಕಾರ ಸಂಘದ ಅಧಿವೇಶನದಲ್ಲಿ ನಿರ್ಣಯಿಸಿದ್ದಾರೆ. ಆದ್ದರಿಂದ ಈಗ ಸೌರವ್ಯೂಹದ ಗ್ರಹಗಳ ಸಂಖ್ಯೆ ಎಂಟು! ಒಂದೆಡೆ ಪಠ್ಯಪುಸ್ತಕಗಳು ಬದಲಾಗುವ ಚಿಂತೆಯಾದರೆ, ಅಳಿಯದೇವರಿಗೆಲ್ಲಾ ಮತ್ತೆ ಗ್ರ-ಹಾ-ಸ್ಯದ ಕಿರಿಕಿರಿ! ಈ ಬಾರಿ ಹತ್ತರಿಂದ ಒಂಬತ್ತಕೇರಿದ ಸ್ಥಿತಿಯಿಂದ ಹಿಗ್ಗುವುದೇನೂ ಇಲ್ಲವೇನೋ! ಯಾವುದು ಗ್ರಹವೆಂಬ ಚಿಂತೆ ಖಗೋಳಶಾಸ್ತ್ರಿಗಳಿಗಾದರೆ, ಇತ್ತ ಜ್ಯೋತಿಷಶಾಸ್ತ್ರಿಗಳಿಗೆ ಗ್ರಹಗಳು ಹೆಚ್ಚದೆ ನಿಶ್ಚಿಂತೆ! ಜೋಯಿಸರೆನ್ನುತ್ತಾರೆ:
"ಅಲ್ಲಾ ಸ್ವಾಮೀ, ಶನಿಗ್ರಹದ ನಂತರ ಬರಿಗಣ್ಣಿಗೆ ಕಾಣದವು ಗ್ರಹಗಳೇ ಅಲ್ಲ! ರಾಹು-ಕೇತುಗಳು ನೆರಳಿನಂತಹ ಬಿಂದುಗಳು; ಇವೆರಡನ್ನೂ ಸೇರಿಸಿ ಒಟ್ಟು ಗ್ರಹಗಳು ಒಂಬತ್ತೇ!"
"ಮತ್ತೆ, ಇಂದ್ರ, ವರುಣ, ನಿರ್‍ಋತಿ?"
"ಅವುಗಳನ್ನು ಸೇರಿಸಿದ್ದು ಭಾರತೀಯ ಜ್ಯೋತಿಷವಲ್ಲ; ತಿಳಿಗೇಡಿ ಜೋಯಿಸರು!"
"ಉಳಿದ ಗ್ರಹಗಳ ಬಗ್ಗೆ ಏನೆನ್ನುತ್ತೀರಿ?"
"ಅವೆಲ್ಲವನ್ನೂ ಅಳಿಯನಲ್ಲಿ ಆವಾಹಿಸಿಬಿಟ್ಟಿದ್ದೇವಲ್ಲ! ಹೆಹ್ಹೆಹ್ಹೆ...." ಎನ್ನುತ್ತಾ ಹಲ್ಲುಕಿರಿದರು!
ಎಂಬಲ್ಲಿಗೆ, ಅಳಿಯನ ಗ್ರಹಸ್ಥಿತಿ ಎಂದೆಂದೂ ಅಳಿಯದೇ, ಪೆಣ್‍ಪೆತ್ತವರಿಗೆ ಹತ್ತನೆಯ(?) ಗ್ರಹದ ಗ್ರಹಣ ತಪ್ಪಿದ್ದಲ್ಲವೆಂದಾಯಿತು! ಒಂಬತ್ತನೇ ಗ್ರಹವೇ ಇಲ್ಲದಿರುವಾಗ ಹತ್ತನೆಯದೆಲ್ಲೆಂದು ಅಳಿಯನಿಲ್ಲದ ಖಗೋಳಜ್ಞರು ಫಕಫಕನೆ ನಕ್ಕಾರು! ಎಚ್ಚರಿಕೆ ಸ್ವಾಮೀ, ಅಳಿಯಾಟ ಶುರುವಾದೀತು!

ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2006 - 10:48am — benaka

ಮಾಜಿ ಒಂಬತ್ತನೇ ಗ್ರಹ!

benaka's picture

ಗೆಳೆಯರೇ,
ಪ್ಲೂಟೊ ಎಂಬ ಮಾಜಿ ಒಂಬತ್ತನೇ ಗ್ರಹವನ್ನು ಮೊದಲು ಕಂಡುಹಿಡಿದವನು ಭಾರತೀಯನೆಂದು ಮೊನ್ನೆ ಕನ್ನಡಪ್ರಭದಲ್ಲಿ ಸುದ್ದಿ ನೋಡಿ ತಿಳಿಯಿತು. ಆತ ಬೇರಾರೂ ಅಲ್ಲ, ಹೆಸರಾಂತ ಖಗೋಲಶಾಸ್ತ್ರಜ್ಞ ಶ್ರೀ. ವೆಂಕಟೇಶ ಕೇತಕರ್. ಭಾರತೀಯ ಪಂಚಾಂಗ ಗಣನೆಗೆ ತಳಹದಿಯಾದ ನಿರಯಣ ರಾಶಿಚಕ್ರ ಅಥವಾ ಫಿಕ್ಸೆಡ್ ಜೋಡಿಯಾಕ್ ಅನ್ನು ಲೆಕ್ಕಹಾಕಲು ಬೇಕಾದ 'ಅಯನಾಂಶ'ವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಿರ್ಧರಿಸುತ್ತಿದ್ದಾಗ, ಅಚ್ಚರಿಯುಂಟುಮಾಡುವಂತೆ ಕೇತಕರರು ನಿಖರವಾದ ತಮ್ಮ 'ಕೇತಕೀಯ ಧನಾಯನಾಂಶ'ವನ್ನು ಪ್ರಕಟಿಸಿದರು. ಇದು ಜ್ಯೋತಿಷವಲಯದಲ್ಲೇ ಬೊಬ್ಬೆ ಎಬ್ಬಿಸಿದ ಘಟನೆ! ಕೇತಕರರು ಯಾವುದನ್ನು 'ನಿಖರ'ವೆಂದು ಹೇಳಿದ್ದರೋ ಅದು ಕೇವಲ ಕಲ್ಪಿತವಾಗಿದ್ದು, ಕಾಕತಾಳೀಯವಾಗಿ ಅಯನಾಂಶ ಒಂದೆರಡು ವರ್ಷಗಳಿಗೆ ಹೊಂದುತ್ತಿತ್ತು ಅಷ್ಟೇ. ಇದನ್ನೆಲ್ಲ ಮನಗಂಡ ಭಾರತ ದಿನದರ್ಶಿ ಸಮಿತಿ, ಶ್ರೀ. ಎನ್.ಸಿ.ಲಹಿರಿ ಅವರ ಮುಂದಾಳುತನದಲ್ಲಿ ಚಿತ್ರಾಪಕ್ಷೀಯ ಅಯನಾಂಶವನ್ನು ಮಾನ್ಯಮಾಡಿ ವಿವಾದಕ್ಕೆ ತೆರೆ ಎಳೆಯಿತು. ಕೇತಕರ್ ತಮ್ಮ ಗಣಿತದಲ್ಲಿ ಪ್ಲೂಟೋ ವಿನ ಕಕ್ಷೆಯನ್ನು ಮೊದಲೇ ಲೆಕ್ಕಹಾಕಿದ್ದರಂತೆ; ಆದರೆ ಅಮೆರಿಕದ ವಿಜ್ಞಾನಿಯಿಂದ ಪ್ಲೂಟೋವಿನ ಆವಿಷ್ಕಾರವಾಗುವವರೆಗೂ ಯಾರೂ ಅವರನ್ನು ಆದರಿಸಲಿಲ್ಲ. ಏನಾಯಿತೋ ಏನೋ, ಅದೇ ವರ್ಷ ೧೯೩೭ ರಲ್ಲಿ ಕೇತಕರ್ ಪಾರ್ಶ್ವವಾಯು ಹಿಡಿದು, ನರಳಿ ಕೊನೆಯುಸಿರೆಳೆದರು! 'ಗ್ರಹಚಾರ'ವೆಂದರೆ ಇದೇ ಇರಬೇಕೇನೋ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2006 - 5:52pm — pavanaja

ಪ್ಲೂಟೊ ಓಕೆ, ಬೋಸ್ ಇಲ್ಲ ಯಾಕೆ?

pavanaja's picture

ಅಂತಾರಾಷ್ಟ್ರೀಯ ಸಮುದಾಯದವರು ಪ್ಲೂಟೋವನ್ನು ನವಗ್ರಹಗಳ ಪಟ್ಟಿಯಿಂದ ಹೊರಹಾಕಿದ ಒಂದು ದಿನದಲ್ಲಿಯೇ ಎನ್ ಸಿ ಆರ್ ಟಿ ಯವರು ನಮ್ಮ ಪಠ್ಯಪುಸ್ತಕಗಳನ್ನು ತಿದ್ದುವುದಾಗಿ ಘೋಷಿಸಿದರು. ಆದರೆ ವೈರ್‌ಲೆಸ್ ಕಂಡುಹುಡುಕಿದವರು ಮಾರ್ಕೋನಿ ಅಲ್ಲ ನಮ್ಮವರೇ ಆದ ಜಗದೀಶಚಂದ್ರ ಬೋಸ್ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯದವರು ಒಪ್ಪಿಕೊಂಡು ಏಳು ವರ್ಷಗಳೇ ಕಳೆದರೂ ಇದೇ ಎನ್ ಸಿ ಆರ್ ಟಿ ಯವರಿಗೆ ಯಾಕೆ ಇನ್ನೂ ಎಚ್ಚರವಾಗಿಲ್ಲ? ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ - http://vishvakannada.com/node/285

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 31, 2006 - 9:29am — benaka

ಕುಂಭಕರ್ಣನ ಪೀಳಿಗೆಯೋ...

benaka's picture

ಪವನಜರೆ,

ಸರ್ ಜಗದೀಶಚಂದ್ರ ಬೋಸ್ ಇರಲಿ, ಮನೆಮನೆ ಮಾತಾಗಿದ್ದ ಸುಭಾಸ್ ಚಂದ್ರರನ್ನೂ ಸರ್ಕಾರ ಮೊನ್ನೆ ಮೊನ್ನೆ ನೆನಪಿಸಿಕೊಂಡು ರಾಜೀವ್ ಗಾಂಧಿಯವರ ಜೊತೆಗೆ ಭಾರತರತ್ನ ಪ್ರಕಟಿಸಿಲಿಲ್ಲವೇ! ಯಾರಿಗೆ ಯಾವಾಗ ಎಂತಹ ಮನ್ನಣೆ ಕೊಡಬೇಕೆಂದು ಸರ್ಕಾರೀ ಕೃಪಾಪೋಷಿತ ಸಂಸ್ಥೆಗಳಿಗೆ ಯಾರು ಹೇಳಿಕೊಡುವರೋ, ದೇವನೇ ಬಲ್ಲ! ಬಹುಶಃ ಎನ್.ಸಿ.ಇ.ಆರ್.ಟಿ ಯವರಿಗೆ ಹಿಡಿದಿದ್ದ ಗ್ರಹಣ, ಪ್ಲೂಟೋ ಜೊತೆಗೇ ಕಳೆದಾಯಿತು ಎಂದುಕೊಂಡು ಮುಂದಾದರೂ ಅದು ಎಚ್ಚೆತ್ತುಕೊಳ್ಳುವುದೇನೋ ನೋಡೋಣ! ಅಥವಾ ಕುಂಭಕರ್ಣನ ಪೀಳಿಗೆಯೋ.....

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2008 - 12:35pm — kannadakanda

ಉ: ಅಳಿಯದೇವರಿಗೆ ಅನ್ಯಾಯ!

kannadakanda's picture

ಇದೇ ಅರ್ಥವುಳ್ಳ ಸ್ವಲ್ಪ ಪಾಠಾಂತರವಿರುವ ಪದ್ಯ ಹೀಗಿದೆ.

ಸದಾ ವಕ್ರಃ ಸದಾ ರುಷ್ಟಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||

ಬೆನಕರಿಗೆ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • (ಮನೆ) ಅಳಿಯ! ಮನೆ ತೊಳಿಯ !!
  • *ಆಹ್ವಾನ ಬರುವೆನೆಂದವಳಿಗೆ*
  • *ಸ್ಪೂರ್ತಿಯ ಲೈಟು*
  • ಸಾಹಿತ್ಯ
  • ನುಡಿ ಮುತ್ತುಗಳು
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator