23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೊಂಕಣಿಗಳ ಕೊಂಕಣಿ ಪ್ರೇಮ

June 13, 2009 - 12:59pm
gurubaliga
"ಇಬ್ಬರು ಕೊಂಕಣಿಗಳು ಒಟ್ಟು ಸೇರಿದರೆ ಮುಗಿಯಿತು. ತಮ್ಮೊಂದಿಗೆ ಬೇರೆಯವರಿದ್ದಾರೆಂದು ಗಣಿಸದೇ ಅವರು ಕೊಂಕಣಿಯಲ್ಲಿಯೇ ಮಾತನಾಡುವುದು." ಎನ್ನುವುದು ತುಳುನಾಡಿನ ಇತರ ಭಾಶಿಕರ ಕಂಪ್ಲೇಂಟು. ಕೊಂಕಣಿಗಳ ಕೊಂಕಣಿ ಪ್ರೇಮ ಅಷ್ಟು ಕುಪ್ರಸಿದ್ಧ. ಮೇಲಿನ ಕಂಪ್ಲೇಂಟು ಬಹುಶ ಹೊರನಾಡಿನಲ್ಲಿ ಒಂದು ಸೇರುವ ಒಂದೇ ಭಾಶೆಯ ಎಲ್ಲರಿಗೂ ಅನ್ವಯವಾಗುವುದು ಸತ್ಯವಾದರೂ ಮಂಗಳೂರಿನಲ್ಲಿ ಅದು ಕೊಂಕಣಿಗಳಿಗೇ ಸೀಮಿತ. ತುಳುನಾಡಿನ ಎರಡು ಪ್ರಮುಖ ಭಾಶೆಗಳಾದ ಕನ್ನಡ ಮತ್ತು ತುಳುವನ್ನು ಎಲ್ಲರೂ ಮಾತನಾಡುವುದು ಅದಕ್ಕೆ ಕಾರಣ. ಕೊಂಕಣಿಗಳಿಗಿರುವ ಇನ್ನೊಂದು ಹೆಚ್ಚು ಗಮನಕ್ಕೆ ಬಾರದ ಗುಣವೆಂದರೆ ತಾನು ಮಾತನಾಡಬೇಕಾದ ವ್ಯಕ್ತಿಯ ಬಳಿ ಆ ವ್ಯಕ್ತಿಗೆ (ಸಹಜವಾಗಿಯೇ) ಪರಮಪ್ರಿಯವಾಗಿರುವ ಆತನ/ಆಕೆಯ ತಾಯ್ನುಡಿಯಲ್ಲೇ ಮಾತನಾಡುವುದು. ಆದಕಾರಣ ತುಳುನಾಡಿನಲ್ಲಿ ಬಹುಶ ಎಲ್ಲರಿಗಿಂತ ಹೆಚ್ಚು ಭಾಶೆ ಮಾತನಾಡಲು ತಿಳಿದಿರುವುದು ಕೊಂಕಣಿಗಳಿಗೆ. (ಮೇಲಾಗಿ ಅವರಿಗೆ ಕೊಂಕಣಿಯೂ ಗೊತ್ತಲ್ಲ!) ಅದು ತಮ್ಮ ಕುಲವೃತ್ತಿಯಾಗಿರುವ ವ್ಯಾಪಾರದ ಮೂಲಭೂತ ಅಗತ್ಯವೂ ಹೌದು. ಮನೆಯಾಚೆ ಕಾಲಿಡಲು ಬಿಡದೇ ಅಚ್ಚಾಗಿ ಬೆಳೆಸಿದ ಕೊಂಕಣಿ ಮಗು, ಕೊಂಕಣಿ ಬಿಟ್ಟು ಬೇರಾವ ಭಾಶೆಯನ್ನೂ ಕೇಳಿರದ ಮಗು, ಬಾಲವಾಡಿಗೆ ಹೋದ ಎರಡನೇ ದಿನಕ್ಕೇ ಸಲೀಸಾಗಿ ಕನ್ನಡ ಮಾತನಾಡುವುದು ಹೇಗೆ ಸಾಧ್ಯ ಎಂದು ನಾನು ಯೋಚಿಸಿದ್ದಿದೆ. ಶಾಲೆಗೆ ಹೋಗಲು ಶುರುಹಚ್ಚಿದ ಕೆಲವು ದಿನ ಕನ್ನಡವನ್ನು ನಿದ್ರೆಯಲ್ಲೂ ಕನವರಿಸಿದ್ದು, ಬಡಬಡಿಸಿದ್ದು ಪ್ರತೀ ಕೊಂಕಣಿಯ ಬದುಕಿನಲ್ಲೂ ನಡೆದಿರಬಹುದಾದ ಘಟನೆ. ಕನ್ನಡದ ಬದಲು ಯಾವ ಭಾಶೆ ಇದ್ದಿದ್ದರೂ ಹಾಗೇ ಆಗಬಹುದು. ಭಾಶೆಯ ಕಲಿಕೆಗೆ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾರೀಸಿನ ಬೀದಿಗಳಲ್ಲಿ ಜೋಳ ಮಾರುವ ಬಿಹಾರಿ ಹುಡುಗರು ನಿರರ್ಗಳ ಫ್ರೆಂಚ್ ಮಾತನಾಡುವುದು, ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದ ಮಲಯಾಳಿ ಹುಡುಗಿಯರು ಅರೇಬಿಕ್ ಮಾತನಾಡುವುದು ಇವೆಲ್ಲ ಅನಿವಾರ್ಯ ಸನ್ನಿವೇಶಗಳಲ್ಲಿ ಭಾಶೆ ಬಲವಂತವಾಗಿ ಅನ್ಯಭಾಷಿಕರನ್ನು ಆವರಿಸಿಕೊಳ್ಳುವ ನಿದರ್ಶನಗಳು. ಆದರೆ ಸಾಹಿತ್ಯಕವಾಗಿ ಒಂದು ಭಾಶೆ ಬೆಳೆಯಬೇಕಾದರೆ ಅದಕ್ಕೆ ವ್ಯವಸ್ಥಿತವಾದ ನೆಲೆಗಟ್ಟು ಇರಬೇಕಾದುದು ಅತ್ಯವಶ್ಯ. ನನ್ನ ತಾಯ್ನುಡಿ ಕೊಂಕಣಿ. ನನ್ನ ಒಳಗಿನ ಸಂವಹನದಲ್ಲಿ ನಾನು ಬಳಸುವುದು ಕೊಂಕಣಿಯನ್ನೇ. ಆದರೆ ಕೊಂಕಣಿಯಲ್ಲಿ ಇದುವರೆಗೆ ನನಗೆ ಬರೆಯಲು ಸಾಧ್ಯವಾದದ್ದು ಒಂದು ಒಂಟಿ ಕವಿತೆ ಮಾತ್ರ. ಅದೂ ಇಂಗ್ಲಿಷ್ ಕವಿತೆಯೊಂದರ ಅನುವಾದ. ಕನ್ನಡದಲ್ಲಾದರೋ ನಾನು ಒಂದಿಷ್ಟು ಕತೆಗಳನ್ನೂ, ಒಂದಷ್ಟು ಕವಿತೆಗಳನ್ನೂ, ಮತ್ತಷ್ಟು ಲೇಖನಗಳನ್ನೂ ಬರೆದಿದ್ದೇನೆ. ಕಾಲೇಜು ದಿನಗಳಲ್ಲಿ ಸಾಕಷ್ಟು ಅಪ್ರಬುದ್ಧ ಕವಿತೆಗಳನ್ನು ಕೊರೆದಿದ್ದರೂ ನನ್ನಲ್ಲಿ ಕನ್ನಡ ಸಾಹಿತ್ಯದಲ್ಲಿ ಸೀರಿಯಸ್ಸಾಗಿ ತೊಡಗಿಕೊಳ್ಳುವ ಹುರುಪು ಬಂದಿದ್ದು ನಾನು ದೆಹಲಿಗೆ ಬಂದ ಬಳಿಕ. ದೆಹಲಿಯ ಏಕಾಂಗಿತನದಲ್ಲಿ ಕನ್ನಡದಷ್ಟೇ ಕೊಂಕಣಿಯೂ ಕೊರಗಿದರೂ ನನ್ನೊಳಗಿನ ಸಾಹಿತ್ಯ ಸೃಷ್ಟಿಗೆ ಒದಗಿ ಬಂದ ಭಾಶೆ ಕನ್ನಡ. ಇದು ಬರೇ ನನ್ನ ಒಬ್ಬನ ಅನುಭವವಲ್ಲ. ಕೊಂಕಣಿ ತಾಯ್ನುಡಿಯ ಎಲ್ಲ ಕನ್ನಡ ಬರಹಗಾರರೂ ಕೊಂಕಣಿಯಲ್ಲಿ ಬರೆದಿರುವುದು ಬಹಳ ಕಡಿಮೆ. ಇದು ಕೊಂಕಣಿ ಭಾಶೆಯ ನಷ್ಟವೂ ಹೌದು. ಕನ್ನಡದ ಹೆಸರಾಂತ ಬರಹಗಾರರಾದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಗುಲ್ವಾಡಿ ವೆಂಕಟರಾಯರು, ಗೌರೀಶ ಕಾಯ್ಕಿಣಿ, ಗಿರೀಶ್ ಕಾರ್ನಾಡ್, ಯಶವಂತ ಚಿತ್ತಾಲ, ದಿನಕರ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಇನ್ನೂ ಅನೇಕ ಬರಹಗಾರರು ಕೊಂಕಣಿ ಮನೆಮಾತಿನವರು. ಅವರು ಕೊಂಕಣಿಯಲ್ಲಿ ಬರೆದಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕೊಂಕಣಿ ತಾಯಿಯ ಮೊಲೆಯಲ್ಲಿ ಹಾಲಿಲ್ಲ. ಆದುದರಿಂದ ತಾನು ಕನ್ನಡ ತಾಯ ಮೊಲೆ ಹೀರಿ ಬೆಳೆದೆ ಎಂದ ಮಂ. ಗೋವಿಂದ ಪೈಯವರು ಒಂದಿಷ್ಟು ಕೊಂಕಣಿಯಲ್ಲೂ ಬರೆದಿಡುತ್ತಿದ್ದಿದ್ದರೆ ಬಳಿಕದ ಮಕ್ಕಳಿಗೆ ಕೊಂಚ ಹಾಲಾದರೂ ಊಡುತ್ತಿತ್ತು. ಬಹುಶ ಇದು ಕನ್ನಡ ನಾಡಿನ ಹೊರಗೆಯೂ ನಡೆದಿರುವ ಸಂಗತಿ. ಕೊಂಕಣಿ- ಮರಾಠಿ, ಕೊಂಕಣಿ- ಮಲಯಾಳಂ, ಮುಂತಾದ ಸಂದರ್ಭಗಳಲ್ಲಿಯೂ ಕೊಂಕಣಿಗೆ ನಷ್ಟವಾಗಿರುವುದನ್ನು ಗಮನಿಸಬೇಕು. ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿರುವ ಸಾರಸ್ವತರು ಇದೀಗ ಹೆಚ್ಚು ಹೆಚ್ಚು ಮರಾಠಿಯನ್ನೇ ಮನೆಮಾತಾಗಿಸಿಕೊಂಡು ಕೊಂಕಣಿಯು ಮರಾಠಿಯ ಉಪಭಾಶೆ ಎನ್ನುವ ಸವಕಲು ಅಪನಂಬಿಕೆಯನ್ನೇ ಅನೌಪಚಾರಿಕ ವೇದಿಕೆಗಳಲ್ಲಿ ಉರುಹೊಡೆಯುವುದು ಕಾಣಸಿಗುತ್ತದೆ. ಕೊಂಕಣಿಗಳೆಂದೇ ಕರೆಯಲ್ಪಡುವ ಸಾರಸ್ವತರಿಗಿಂತ ಮಂಗಳೂರು ಕ್ಯಾಥೋಲಿಕರಿಗೆ ಕೊಂಕಣಿಯ ಮೇಲೆ ಹೆಚ್ಚು ಅಭಿಮಾನ. ಚರ್ಚಿನ ಕ್ಯಾಥೆಚಿಸಂ ಎನ್ನುವ ಅಧ್ಯಯನದ ಮಾಧ್ಯಮವಾಗಿ ಕನ್ನಡ ಲಿಪಿಯ ಕೊಂಕಣಿಯನ್ನು ದಕ್ಶಿಣಕನ್ನಡದಲ್ಲಿ ಜಾರಿಗೊಳಿಸಿದ್ದು ಕ್ಯಥೋಲಿಕರಲ್ಲಿ ಕೊಂಕಣಿಗೊಂದು ಭದ್ರ ನೆಲೆಗಟ್ಟನ್ನು ನೀಡಿತ್ತು. ಸಾರಸ್ವತರು ತಮ್ಮ ವೈಯಕ್ತಿಕ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸಿದರೆ ಕ್ಯಾಥೊಲಿಕರು ಕೊಂಕಣಿಯಲ್ಲಿಯೇ ನಡೆಸುವುದು ರೂಢಿಯಾಯಿತು. ಇದರಿಂದಾಗಿಯೇ ಇಂದು ಕ್ಯಾಥೋಲಿಕರ ಸಮುದಾಯದಲ್ಲಿ ಹೆಚ್ಚು ಕೊಂಕಣಿ ಸಾಹಿತಿಗಳಿರುವುದು. ಕೊಂಕಣಿಯ ಲಿಖಿತ ಶಬ್ದ ಭಂಡಾರ ನಿಸ್ಸಂಶಯವಾಗಿ ಸಾರಸ್ವತರಿಗಿಂತ ಕ್ಯಥೊಲಿಕರಲ್ಲಿ ಹೆಚ್ಚು ಬಳಕೆಯಲ್ಲಿದೆ. ಕ್ಯಥೋಲಿಕರು ಕೊಂಕಣಿಯನ್ನು ಲಿಖಿತ ರೂಪದಲ್ಲಿ ತೊಡಗಿಸಿಕೊಂಡು ಸಾಹಿತ್ಯ ರಚಿದರೆ ಸಾರಸ್ವತರು ಮೌಖಿಕ ಸಾಹಿತ್ಯವನ್ನಷ್ಟೇ ಕೊಂಕಣಿಯಲ್ಲಿ ರೂಢಿಸಿದರು. ಇವುಗಳಲ್ಲಿ ಕೊಂಕಣಿ ನಾಟಕಗಳು ಪ್ರಮುಖ ಮಾಧ್ಯಮವಾಯಿತು. ಟೀವಿ ಯುಗದ ಮೊದಲು ಕೊಂಕಣಿಗಳ ದೇವಸ್ಥಾನಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊಂಕಣಿ ನಾಟಕಗಳ ಒಂದು ಜನಪ್ರಿಯ ಚಳುವಳಿಯಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸುತ್ತಿದ್ದೇನೆ. ಆದರೆ ಟೀವಿಯುಗದಲ್ಲಿ ಕೊಂಕಣಿ ನಾಟಕಗಳ ಬೇಡಿಕೆ ಕುಸಿದಿದೆ. ಈ ನಾಟಕಗಳು ಟೀವಿ ಮಾಧ್ಯಮವನ್ನು ಬಳಸಿಕೊಳ್ಳಬಹುದಾಗಿತ್ತಾದರೂ ವೆಚ್ಚದಾಯಕವಾದ ನಿರ್ಮಾಣ ಕಾರ್ಯ ಆಸಕ್ತರನ್ನು ಹಿಂಜರಿಯುವಂತೆ ಮಾಡಿದೆ. ಉತ್ಸಾಹಿ ಸಾರಸ್ವತರು ಕೊಂಕಣಿ ದೇವರಪದಗಳನ್ನು ರಚಿಸಿ ಹಾಡಿದರು. ಬಾಲಗೀತೆಗಳು, ಹಸೆ ಹಾಡುಗಳು, ಕೊಂಕಣಿ ಜನಪದ ಕತೆಗಳು ವಿಪುಲವಾಗಿದ್ದರೂ ಅವು ಮೌಖಿಕ ಪರಂಪರೆಯಲ್ಲಷ್ಟೆ ಬೆಳೆದಂತವುಗಳು. ಬರೆದವರ ಹೆಸರು ದಾಖಲಾಗದೇ ಜನಪದದಲ್ಲಿ ಹರಡಿದವುಗಳು. ಭಾಶೆ ಪ್ರಾಥಮಿಕ ಶಾಲಾಸ್ತರದಲ್ಲಿ ಅಧ್ಯಯನದ ಅಂಗವಾದರೆ ಅದು ಸಾಹಿತ್ಯಕವಾಗಿ ಬೆಳೆಯುತ್ತದೆ ಎಂಬುದಕ್ಕೆ ಸಾರಸ್ವತರು ಮತ್ತು ಕ್ಯಥೋಲಿಕರ ಭಾಷೆಯ ಬಳಕೆಯ ತುಲನಾತ್ಮಕ ಅಧ್ಯಯನ ನಿಚ್ಚಳ ತೋರಿಸಿಕೊಡುತ್ತದೆ. ಇದನ್ನು ದಾಖಲಿಸಲು ಒಂದು ಅಕಾಡೆಮಿಕ್ ಅಧ್ಯಯನದ ಅವಕಾಶವಿದೆ. ದಿನಕರ ದೇಸಾಯಿಯವರ ಒಂದು ಚುಟುಕು ಅಪೇಕ್ಷಿಸುವ ಒಂದು ಉದಾತ್ತ ಸನ್ನಿವೇಶ ಹೀಗಿದೆ. ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ ಒಂದುಗೂಡಿದ ಎರಡು ಜೀವನಾಡಿ ಎರಡು ಪಕಳೆಯ ಹೂವು ಮಿಡಿಯಾಗಿ ಕಾಯಿ ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ.
ಲೇಖನ ವರ್ಗ (Category): 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by dvkini on
may be another complaint- 'ಕೊಂಕಣಿಗಳು ಕನ್ನಡಮಾತನಾಡುವುದಿಲ್ಲ, ಬದಲಿಗೆ, ಕೊಂಕಣಿಯಲ್ಲಿ ಇದ್ದದ್ದನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಹೇಳುತ್ತಾರೆ, ಹಾಗಾಗಿ ಇವರು ಕನ್ನಡ ಮಾತನಾಡುವಾಗ ಕೊಂಕಣಿಗಳು ಎಂದು ತಿಳಿಯುತ್ತದೆ' ಎಂದು ನನ್ನ ಕನ್ನಡ ಮಾಷ್ಟ್ರೊಮ್ಮೆ ಹೇಳಿದ್ದರು.

Submitted by gurubaliga on
ತಾಯ್ನುಡಿಯಲ್ಲೇ ಇತರ ನುಡಿಗಳನ್ನು ಕಟ್ಟಿ ಮಾತನಾಡುವುದು ಸಾರ್ವತ್ರಿಕವಾದ ಗುಣ. ತುಳುನಾಡಿನಲ್ಲಿ ಕೊಂಕಣಿ ಗಳಿಗೆ ಆರೋಪಿಸಲಾಗುತ್ತದೆ. ದೆಹಲಿಯಲ್ಲಿ ದಕ್ಷಿಣ ಭಾರತೀಯರಿಗೆ. :)

Submitted by ಉಉನಾಶೆ on
ಬಾಳಿಗರೇ, ಒಳ್ಳೆಯ ಲೇಖನ. ನೀವು ಹೇಳಿದ "ಇಬ್ಬರು ಕೊಂಕಣಿಗಳು ಒಟ್ಟು ಸೇರಿದರೆ ಮುಗಿಯಿತು. ತಮ್ಮೊಂದಿಗೆ ಬೇರೆಯವರಿದ್ದಾರೆಂದು ಗಣಿಸದೇ ಅವರು ಕೊಂಕಣಿಯಲ್ಲಿಯೇ ಮಾತನಾಡುವುದು." ಎಂಬ ಆರೋಪವನ್ನು ನಾನೂ ಕೇಳಿದ್ದೇನೆ. ನನಗೆ ತುಂಬ ಮಂದಿ ಕೊಂಕಣಿ ಸ್ನೇಹಿತರಿದ್ದಾರೆ. ಆದರೆ ನನಗೆ ಆ ಅನುಭವವಾಗಿಲ್ಲ. ನನಗೆ ಕೊಂಕಣಿ (ಬಹಳಷ್ಟು) ಅರ್ಥವಾಗುತ್ತದೆ, ಆದರೆ ಮಾತಾಡಿ ರೂಢಿಯಿಲ್ಲ. "ಭಾಷಾಭಿಮಾನ", "ತಮ್ಮವರು (ಅಮ್ಚಿಗೆಲೆ) ಎಂಬ ಅಭಿಮಾನ"ದ ಹದ ಎಷ್ಟಿರಬೇಕು ಎಂಬುದಕ್ಕೆ ಕೊಂಕಣಿಜನ ಉತ್ತಮ ಮಾದರಿ - ಅಂತ ನನ್ನ ಅಭಿಪ್ರಾಯ. ಇತೀ, ಉಉನಾಶೆ

Submitted by gurubaliga on
ಧನ್ಯವಾದಗಳು ಉಮೇಶ್. >>> "ತಮ್ಮವರು (ಅಮ್ಚಿಗೆಲೆ) ಎಂಬ ಅಭಿಮಾನ"ದ ಹದ ಎಷ್ಟಿರಬೇಕು ಎಂಬುದಕ್ಕೆ ಕೊಂಕಣಿಜನ ಉತ್ತಮ ಮಾದರಿ - ಅಂತ ನನ್ನ ಅಭಿಪ್ರಾಯ. ಇದು ಒಂದು ಜನರಲ್ ಅಭಿಪ್ರಾಯವೂ ಹೌದು. ಹಾಗಿಲ್ಲ ಅನ್ನುವುದೇ ನನ್ನ ಲೇಖನದ ಒಳ ಉದ್ದೇಶ. :)

Submitted by umeshhubliwala on
ಕೊಂಕಣಿಗೆ ಲಿಪಿ ಇದೆಯೇ ಅಥವಾ ಅದು ದೇವನಾಗರಿಯ ಮೇಲೆ ಅವಲಂಬಿತ ವಾಗಿದೆಯೆ ...ಅದೇನೇ ಇರಲಿ ನಮ್ಮ ಕನ್ನಡ ತಾಯಿಯ ಮಗಳಲ್ಲಿ ಇವಳೂ ಒಬ್ಬಳು...!

Submitted by gurubaliga on
ಎಲ್ಲ ಇಂಡೋ ಆರ್ಯನ್ ಭಾಷೆಗಳು ಬ್ರಾಹ್ಮಿ ಮೂಲದ ಲಿಪಿಗಳನ್ನು ಬಳಸುವುದು. ದೇವನಾಗರಿ ಹೆಚ್ಚಿನ ಇಂಡೋ ಆರ್ಯನ್ ಭಾಷೆಗಳಿಗೆ ಲಿಪಿ. ಕೊಂಕಣಿಗೂ ಸಹ. ಇದು ಕೊರತೆ ಅಲ್ಲ. ಕೊಂಕಣಿ ಕನ್ನಡ ತಾಯಿಯ ಮಗಳಲ್ಲ. ಸಹೋದರಿಯೂ ಅಲ್ಲ. :) ಕನ್ನಡ ದ್ರಾವಿಡ ಭಾಷಾ ಕುಟುಂಬದ್ದಾದರೆ ಕೊಂಕಣಿ ಇಂಡೋ ಆರ್ಯನ್ ಮೂಲಕ್ಕೆ ಸೇರಿದ್ದು.

Submitted by manjunath s reddy on
ಬಾಳಿಗರೆ ತುಂಬಾ ದಿನಗಳಾಯ್ತು ನಿಮ್ಮ ಲೇಖನ ಓದಿ... ನನಗೆ ಕೊಂಕಣಿಯ ಮೂಲವನ್ನು ತಿಳಿದುಕೊಳ್ಳುವ ಬಯಕೆ ಇದೆ.... ಮೇಲೆ ನೀವು ಹೇಳಿರುವ ಇಂಡೋ ಆರ್ಯನ್ ಮೂಲಕ್ಕೆ ಸೇರಿದ್ದು ಎಂದು ಅದರ ವಿವರಗಳನ್ನು ನೀಡಲು ಸಾದ್ಯವೇ..

Submitted by aniljoshi on
ಗುರು ಬಾಳಿಗರೆ, ಬರಹ ಚನ್ನಾಗಿದೆ. ಬಹಳ ಹಿಂದೆ ಸಂತೋಷಕುಮಾರ ಗುಲ್ವಾಡಿ ಕೊಂಕಣಿಗರ ಒಗ್ಗಟ್ಟು, ಭಾಷಾಭಿಮಾನದ ಬಗ್ಗೆ ಬರೆದದ್ದನ್ನ (ತರಂಗದಲ್ಲಿ?) ಓದಿದ ನೆನಪಾಯಿತು. ನಿಮ್ಮ ಬರಹ ಅದರ ಇನ್ನೊಂದು ಮಗ್ಗುಲನ್ನ ಪರಿಚಯಿಸುವಂತಿದೆ. >>ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ. ನಿಮ್ಮ ಆಶಯ ನೆರವೇರಲಿ, ನಿಮ್ಮ ಕೊಡುಗೆಯೂ ಇರಲಿ :) - ಅನಿಲ

Submitted by gurubaliga on
ಹೌದು! ತಮ್ಮ ಸಂಪಾದಕೀಯ ಅಂತರಂಗ ಬಹಿರಂಗದಲ್ಲಿ "ಕನ್ನಡ ಕೊಂಕಣಿ ಭಾಷಾ ಭಾಂಧವ್ಯ" ದ ಬಗ್ಗೆ ಅವರು ಬರೆದಿದ್ದರು. ಅವರೂ ಒಬ್ಬ ಕೊಂಕಣಿ ಮನೆ ಮಾತಿನ ಕನ್ನಡ ಬರಹಗಾರ. ನಂನಿ ಅನಿಲ್ :)

Submitted by kpbolumbu on
ಅನಿಂಕ್ಲೂಸಿವ್ ಆಗುತ್ತಿರುವ ಇನ್ದಿನ ಕನ್ನಡ ಸಂಸ್ಕೃತಿಯೂ ನಿಮ್ಮ ಈ ಕೊಂಕಣಿಪ್ರೇಮ ಮತ್ತೆ ಕುಡಿಯೊಡೆಯಲು ಕಾರಣವಾಯಿತೇ?

Submitted by gurubaliga on
ಅನ್ ಇನ್ಕ್ಲೂಸಿವ್ ಆಗುತ್ತಿರುವುದು ಕನ್ನಡ ಸಂಸ್ಕೃತಿಯೋ ಬೆಂಗಳೂರಿನವರ ಮನಸೋ ಎನ್ನುವುದು ಪ್ರಶ್ನೆ. ನನಗಂತೂ ಕನ್ನಡ ಇನ್ ಕ್ಲೂಸಿವ್ ಸಂಸ್ಕೃತಿಯೇ. ನನ್ನ ಕೊಂಕಣಿ ಪ್ರೇಮ ಯಾವ ತರದ್ದು ಎನ್ನುವುದನ್ನು ಲೇಖನದ ಕೊನೆಯ ವಾಕ್ಯದ ಆಶಯದಲ್ಲಿ ಹೇಳಿದ್ದೇನೆ.

Submitted by savithru on
ಗುರು ಬಾಳಿಗರೇ ದೂರದ ಉತ್ತರ ಭಾರತದ ಕೆಲ ಸಂಸ್ಕೃತಿಗಳ ಅರಿವಿದ್ದಷ್ಟೂ ( ಅಲ್ಲಿನ ನನ್ನ ಸ್ನೇಹಿತರು ಇದ್ದಾರೆ) ನನಗೆ ನಮ್ಮ ದೇ ನಾಡಿನ ಕೊಂಕಣಿ ಸಂಸ್ಕೃತಿ ಬಗ್ಗೆ ಅರಿವಿಲ್ಲ. ಕೊಂಕಣಿ ಸಂಸ್ಕೃತಿಯ ಬಗ್ಗೆ ಒಂದು ಸಣ್ಣ ನೋಟವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ದಯವಿಟ್ಟು ಹೆಚ್ಚು ಬರೆಯಿರಿ. ವಿವಿಧ ಸಂಸ್ಕೃತಿಗಳ ಬಗ್ಗೆ ನನಗೆ ಅಲ್ಪ ಸ್ವಲ್ಪ ಆಸಕ್ತಿ ಇದೆ. >ಎರಡು ಪಕಳೆಯ ಹೂವುಗಳು ಸಾಹಿತ್ಯದಲ್ಲಿಯೂ ಚಿಗುರಿಕೊಳ್ಳಲಿ ಮತ್ತು ಎರಡರ ಘಮವೂ ಸೇರಿ ಇನೊಂದುತ್ತಮ ಘಮ ಹೊರಸೂಸಲಿ. :)

Submitted by asuhegde on
ಗುರು, ಒಳ್ಳೆಯ ಲೇಖನ. ಕೊಂಕಣಿ ಮತ್ತು ತುಳು ಎರಡೂ ಕೊರಗುತ್ತಿವೆ ಅಂತ ನನ್ನ ಅನಿಸಿಕೆ. ಕೊಂಕಣಿ ಒಂದು ಪಂಗಡಕ್ಕೆ ಸೀಮಿತವಾದ ಭಾಷೆ, ಹಾಗಾಗಿ ಕೊರಗುತ್ತಿದೆ ಅಂತ ಅನ್ನಿಸಿದರೂ, ತುಳುವಿಗೆ ಅಂತಹ ಕಾರಣವಿಲ್ಲದೆಯೂ ಕೊರಗುತ್ತಿದೆ ಏಕೆ, ಅನ್ನುವ ಪ್ರಶ್ನೆ ಮೂಡುತ್ತದೆ. ನಾನೂ ಕೂಡ ಕನ್ನಡದಲ್ಲಿ ಗೀಚಿದಷ್ಟು ತುಳುವಿನಲ್ಲಿ ಗೀಚಲು ಪ್ರಯತ್ನಿಸಲೇ ಇಲ್ಲ. ಇದು ಯಾಕಿರಬಹುದು? ನನ್ನ ತಲೆಯಲ್ಲಿ ಈ ಪ್ರಶ್ನೆಯ ಹುಳ ಹರಿದಾಡುತ್ತಿದೆ ಈಗ, ನಿಮ್ಮಿಂದಾಗಿ: "ನಾನು ಇನ್ನು ತುಳುವಿನಲ್ಲೂ ಬರೆಯಲು ಪ್ರಯತ್ನಿಸಲೇ...?"

Submitted by gurubaliga on
ಚಿತ್ಪಾವನಿ ತಾಯ್ನುಡಿಯ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿ ಗುರ್ತ ಅನ್ನುವ ತುಳು ಕಬಿತೆಗಳ ಗೊಂಚಿಲ್ ಒಂದನ್ನು ರಚಿಸಿದ್ದಾರೆ. ತುಳುವನ್ನು ಅವರು ದುಡಿಸಿರುವ ರೀತಿ, ತುಳುವಿನಲ್ಲಿ ತುಳುಕಾಡುವ ಹಾಸ್ಯಪ್ರಜ್ಞೆ, ಮತ್ತು ಜೋಷಿಯವರ ವಿದ್ವತ್ತು ಹೆಮ್ಮೆ ಅನಿಸುತ್ತೆ. ನೀವು ತುಳುವಿನಲ್ಲಿ ಬರೆಯಬೇಕು. ಬರೆಯಲೇ ಬೇಕೆನ್ನುವ ಹಪಾಹಪಿಯನ್ನು ಬೆಳೆಸಿಕೊಳ್ಳಬೇಕು. ಆಗ ನಾವು ಕನ್ನಡದಲ್ಲೂ ಬರೆಯುವ ಸಂಗತಿಗಳು ಇನ್ನಷ್ಟು ಒರಿಜಿನಲ್ ಆಗುತ್ತವೆ.

Submitted by asuhegde on
ಧನ್ಯವಾದಗಳು. ಯಾನ್ ಅರಿಯಂದೆ ಪೋಯೆ ತುಳು ಭಾಷೆದ ಪೊರ್ಲ್ ಎಂಕ್ ದಾಯೆ ನನಲಾ ಕನ್ನಡೊಡೇ ಬರೆಪಿನ ಮರ್ಲ್ (ನಿರ್ವಾಹಕರ ಕ್ಷಮೆ ಕೋರುತ್ತೇನೆ-ಇಲ್ಲಿ ಕನ್ನಡದಲ್ಲೇ ಬರೆಯಬೇಕೆಂಬ ನಿಯಮವನ್ನು ಮೀರಿದ್ದಕ್ಕೆ)

Submitted by gurubaliga on
ನಿಮ್ಮ ಕವನ ನೋಡಿ ತುಳು ಚಿತ್ರವೊಂದರ ಗೀತೆ ನೆನಪಾಯಿತು. ದಾನೆ ಪೊಣ್ಣೆ, ನಿನ್ನಾ ಮನಸೆನ್ಕ್ ತೆರಿಯಂದೆ ಪೋವಾ :)

Submitted by Shreekar on

@ ಆಸು ಹೆಗ್ಡೆ

>>>> ">>>> "ಕೊಂಕಣಿ ಒಂದು ಪಂಗಡಕ್ಕೆ ಸೀಮಿತವಾದ ಭಾಷೆ, ಹಾಗಾಗಿ ಕೊರಗುತ್ತಿದೆ ಅಂತ ಅನ್ನಿಸಿದರೂ, ತುಳುವಿಗೆ ಅಂತಹ ಕಾರಣವಿಲ್ಲದೆಯೂ ಕೊರಗುತ್ತಿದೆ ಏಕೆ, ಅನ್ನುವ ಪ್ರಶ್ನೆ ಮೂಡುತ್ತದೆ."

ಕೊಂಕಣಿ ಒಂದು ಪಂಗಡಕ್ಕೆ ಸೀಮಿತವಾದ ಭಾಷೆ ಎನ್ನುವ ತಪ್ಪು ಕಲ್ಪನೆಯನ್ನು ತಿದ್ದುವುದಕ್ಕಾಗಿ ಈ ಪ್ರತಿಕ್ರಿಯೆ.

ಗೋವಾ ಮಂಗಳೂರುಗಳಲ್ಲಿ ಕ್ರಿಶ್ಚಿಯನ್ನರೂ, ಭಟ್ಕಳ, ಕಾರವಾರಗಳಲ್ಲಿ ನವಾಯತ ಮತ್ತಿತರ ಮುಸಲ್ಮಾನರೂ, ಯಲ್ಲಾಪುರ ಮುಂಡಗೋಡದ ಕಾಡುಗಳಲ್ಲಿರುವ ಆಫ್ರಿಕಾ ಮೂಲದ ಸಿದ್ಧಿಗಳೂ, ಕೇರಳ, ಮಂಗಳೂರು, ಶಿವಮೊಗ್ಗೆ, ಗೋವಾ, ರತ್ನಾಗಿರಿಯ ತನಕ ಇರುವ ಸಾರಸ್ವತ ಬ್ರಾಹ್ಮಣರು, ದೈವಜ್ನ ಬ್ರಾಹ್ಮಣರು, ರಾಜಾಪುರ ಸಾರಸ್ವತರು, ವಾಣಿ, ದೇವಲಿ ಜನಾಂಗದವರು, ಮತ್ತು ಯುದ್ಧ, ಬೇಟೆಗಳ ಉತ್ಸಾಹಿ ಕುಣುಬಿ ಜನಾಂಗದವರು ಇವರೆಲ್ಲ ಮಾತಾಡುವುದು ಕೊಂಕಣಿಯನ್ನೇ !

ಕರ್ನಾಟಕ ಸಂಗೀತದ ಪ್ರಸಿದ್ದ ಪುರಂದರದಾಸರು ಪೂರ್ವಾಶ್ರಮದಲ್ಲಿ ಶ್ರೀನಿವಾಸ ನಾಯಕ ಎಂಬ ಕೊಂಕಣಿ ರತ್ನವ್ಯಾಪಾರಿಗಳಾಗಿದ್ದರಂತೆ !

‍‍

Submitted by Rakesh Shetty on
@ಗುರು ಒಳ್ಳೆ ಲೇಖನ , ನನ್ನ ರೂಂಮೆಟ್ ಸಹ ಕೊಂಕಣಿ.ಹಾಗಾಗಿ ಈ ಪ್ರೇಮ ನನ್ನ ಅರಿವಿಗೂ ಬಂದಿದೆ :) @ ಆಸು ಎಡ್ಡೆ ಬರೆತರ್ ,ಈರ್ ಸಂಪದಡು ತುಳುಟು ಬರೆವೋಲಿ ಅತ್ತ? (ಚಂದ ಬರೆದಿದ್ದೀರ ,ನೀವು ಸಂಪದದಲ್ಲಿ ತುಳುವಿನಲ್ಲಿ ಬರೆಯಬಹುದಲ್ವಾ?) ಹಿಂದೊಮ್ಮೆ ತುಳು ಲಿಪಿಯ ಬಗ್ಗೆ ಸಂಪದದಲ್ಲಿ ಚರ್ಚಿಸಿದ್ದೆವು, ಇಲ್ಲಿ ನೋಡಿ http://www.yakshagan... http://www.yakshagan... http://sampada.net/b... ರಾಕೇಶ್ ಶೆಟ್ಟಿ :)

Submitted by rekhash on
ಬಾಳಿಗರೇ, ನಿಮ್ಮ ಲೇಖನ ಓದಿದೆ, ಭಾಳ ಚೆನ್ನಾಗಿದೆ, ಆದ್ರೆ ನಾನು ಗಮನಿಸಿದ ಹಾಗೆ ಜಿ.ಎಸ್.ಬಿ. ಪಂಗಡದಲ್ಲಿರುವಷ್ಟು ಭಾಷಾಪ್ರೇಮ ಇತರರಲ್ಲಿ ಅದರಲ್ಲೂ ಸಿ.ಎಸ್.ಬಿ (ಚಿತ್ರಾಪುರ ಸಾರಸ್ವತ ಬ್ರಾಹ್ಮಣ) ಗಳಲ್ಲಿ ಕಡಿಮೆ ಎಂದೇ ಹೇಳಬೇಕು. ಅದರಲ್ಲೂ ಮುಂಬೈ, ಬೆಂಗಳೂರು ತರಹದ ’ಸೋ ಕಾಲ್ಡ್’ ಮಹಾನಗರಗಳಲ್ಲಿರುವವರಿಗಂತೂ, ಮುಖ್ಯವಾಗಿ ಯುವಜನರಿಗೆ ಕೊಂಕಣಿ ಜೊತೆಗೆ ಕನ್ನಡ ಭಾಷಾಪ್ರೇಮ ಬಹಳವೇ ಕಡಿಮೆ. ಪಂಜೆ ಮಂಗೇಶರಾಯರು, ಪದುಕೋಣೆ ಸದಾಶಿವರಾಯರು, ಗಿರೀಶ್ ಕಾರ್ನಾಡ್, ಸಂತೋಷ್ ಕುಮಾರ್ ಗುಲ್ವಾಡಿ ಮೊದಲಾದ ಕನ್ನಡಕ್ಕಾಗಿ ಕೆಲಸ ಮಾಡಿದ ಮಹನೀಯರು ಇದೇ ಪಂಗಡಕ್ಕೆ ಸೇರಿದವರು. ನಾನೂ ಒಬ್ಬ ಸಿ. ಎಸ್. ಬಿ ಕೊಂಕಣಿಗಳಾಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. ನಮ್ಮ ಜನರೇ ನಮ್ಮ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿರುವು ನಿಜಕ್ಕೂ ಬೇಸರ ತರುತ್ತದೆ. ಹಾಗೇ ಜಿ.ಎಸ್.ಬಿಗಳ / ಕ್ಯಾಥೋಲಿಕ್ಕರ ಕೊಂಕಣಿ ಪ್ರೇಮ ಕಂಡು ಹೀಗಾದ್ರೂ ನಮ್ಮ ಭಾಷೆ ಉಳಿಯಲಿ ಅಂತ ಮನಸ್ಸು ಹಾರೈಸುತ್ತದೆ. ರೇಖಾ

Submitted by gurubaliga on
ಅಷ್ಟೇ ಅಲ್ಲ ಅನಂತ+ಶಂಕರ್ ನಾಗ್, ಶ್ಯಾಮ್ ಬೆನಗಲ್, ಕಮಲಾದೇವಿ ಚಟ್ಟೋಪಾಧ್ಯಾಯ.... ಇತ್ಯಾದಿ. ಭಾಷೆ ಉಳಿಯುತ್ತದೆ. ಖಂಡಿತ. :-)

Submitted by rekhash on
ಅನಂತ್+ಶಂಕರ್ ನಾಗ್, ಶ್ಯಾಂ ಬೆನಗಲ್ .... ಅಷ್ಟೇ ಏಕೆ? ಪ್ರಕಾಶ್ ಪಡುಕೋಣೆ, ದೀಪಿಕಾ ಪಡುಕೋಣೆ, ಎಲ್ಲಾ ಇದ್ದಾರೆ ಎಷ್ಟೋ ಜನರ ಹೆಸರನ್ನು ನಾನು ಬಿಟ್ಟಿರಲೂಬಹುದು, ಕೆಲವರು ’ಎಲೆ ಮರೆಯಕಾಯಿ’ ಆಗಿರಲೂಬಹುದು, ನಾನು ಮೊದಲಿಗೆ ಹೇಳಿದ್ದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಷ್ಟೆ :-) ಕೊಂಕಣಿ ಭಾಷೆ ಖಂಡಿತಾ ಉಳಿಯುತ್ತದೆ ಎಂದ ನಿಮ್ಮ ಮಾತಿಗೆ -" ತುಂಗೆಲೆ ತೊಂಡಾ ಸಾಖರ!" :-)