ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಪ್ರವಾಸ ಕಥನ › ಫಿನ್ಲೆಂಡ್ ಪ್ರವಾಸ ಕಥನ

ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ!

September 1, 2006 - 4:10pm — anilkumar

ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್‌ಬರ್ಗ್ ಸ್ಕಾಲರ್‌ಷಿಪ್‌ನ ನಿಯಮವದು.ದೋಣಿ ಯಾತ್ರೆ ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್‌ ಟೇಕರ್' ಮಿನ್ನ ಹೆನ್ರಿಕ್‌ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.

ಇತರೆ ಯುರೋಪಿಯನ್ನರಿಗೆ ಫಿನ್ಲೆಂಡ್ ಒಂದು ಅಂಚಿನ ದೇಶ. ನಮಗೆ ಮಿಜೋರಾಮ್ ಜನರ ಬಗ್ಗೆ ಎಷ್ಟು ಗೊತ್ತೋ, ಅಥವ ಗೊತ್ತಿಲ್ಲವೋ ಅಷ್ಟೇ ತಿಳುವಳಿಕೆ ಅವರ ಬಗ್ಗೆ ಯುರೋಪಿನವರಿಗಿದೆ. ಆದರೆ ಭಾರತೀಯರಿಗೆ ಇಂಗ್ಲೀಷ್ ಅವರಿಗಿಂತ ಚೆನ್ನಾಗಿ ಬರಲು ಕಾರಣ ಗೊತ್ತಿಲ್ಲ. ಮತ್ತೂ ಇಂಗ್ಲೀಷೂ ನೆಟ್ಟಗೆ ಗೊತ್ತಿಲ್ಲ. "ಸಿಂಪಲ್, ಫಿನ್ನಿಶ್ ಪದಗಳೆಲ್ಲ ನನ್ನ ಮಾತೃಭಾಷೆಯಾದ ಕನ್ನಡದಂತೆ 'ಕೇಳಿಸುತ್ತದೆ" ಎಂದೆ. ಆಕೆ ನಂಬಲಿಲ್ಲ. 'ಲಾರಿ ಇಲ್ಮರಿ ಹಸ್ತ್ಲ' ಎಂಬ ಕಲಾವಿದ ಗೆಳೆಯನ ಹೆಸರು 'ಲಾರಿ ಇಲಿಮರಿ ಹಸ್ತಲ' ಎಂದು ಕನ್ನಡದಲ್ಲಿ ಓದಿಕೊಂಡು ಇಂಗ್ಲೀಷಿನಲ್ಲಿ ಅವರಿಗೆ ತಿಳಿಸಿದೆ, "ಅ ಟ್ರಕ್ ಅಂಡ್ ಅ ಮೌಸ್ ಆನ್ ಯುವರ್ ಹ್ಯಾಂಡ್". ಎಲ್ಲರೂ ಬಿದ್ದು ಬಿದ್ದು ನಕ್ಕರು. ಕೆಲವರು ಬಿದ್ದು ಬಿದ್ದು ನಕ್ಕರು. ಕೆನಡಿಯನ್ ಲೀಸ ಕೊಂಕು ತೆಗೆದಳು, "ಎಲ್ಲಾ ಸುಳ್ಳು. ಏನೇನೋ ಹುಟ್ಟುಹಾಕ್ತಿದ್ದಾನೆ" ಎಂದು.

ಒಂದು ತಿಂಗಳ ನಂತರ ಬೇಕಾದರೆ ಕೇಳಿ, ಇದೇ ಉತ್ತರ ಹೇಳ್ತೇನೆ ಎಂದೆ. ನಿನಗೆ ಸ್ಮರಣ ಶಕ್ತಿ ಜಾಸ್ತಿ ಇದ್ದು, ನೀನೇ ಅರ್ಥಗಳನ್ನ ಹುಟ್ಟುಹಾಕ್ತಿರಬಹುದು! ಎಂದಳಾಕೆ. "ಅಂದ ಹಾಗೆ ನಿನ್ನ ಹೆಸರೇನೆಂದೆ?" ಎಂದು ಎರಡು ತಿಂಗಳಿಂದ ಪಕ್ಕದ ಕೋಣೆಯವಳಾದ ಲೀಸಳನ್ನು ಕೇಳಿದೆ. ಮತ್ತೆ ಎಲ್ಲ ಬಿದ್ದು ಬಿದ್ದು ನಕ್ಕು....

ಅವರ ಮ್ಯೂಸಿಯಂ ಅನ್ನು 'ತಾಯ್ದೆ ಹಳ್ಳಿ' ಎನ್ನುತ್ತಾರೆ. ಕೆಲವು ಕಲಾವಿದರ ಹೆಸರುಗಳು: ಕಿರ್ಸಿ ವಾಕಿಪಾರ್ಥ, ಪೆಕ್ಕ ಕಂಟೋನನ್, ಮಿಕ್ಕ ಲೆಹ್‌ಟಿನೆನ್. ಇಡೀ ದೇಶದ ಏಕೈಕ ಜನನಿಭಿಡ ರಸ್ತೆಯಾದ ಮ್ಯಾನರ್‌ ಹಿಂಕಾತುವಿನಲ್ಲಿ ನಿಂತು "ಲೇಯ್ ಪೆಕ್ಕಾ, ಲೇಯ್ ಮಿಕ್ಕಾ" ಎಂದು ಒಮ್ಮೆ ಜೋರಾಗಿ ಕೂಗಿದರೆ ಸಾಕು. ಪೆಕ್ಕ, ಮಿಕಗಳೆಲ್ಲ ಪೆಕರು ಪೆಕರಾಗಿ ನಿಮ್ಮನ್ನು ನೋಡುತ್ತವೆ.

"ಕನ್ನಡವು ಫಿನ್ನೋ-ಅಗ್ರೇರಿಯನ್ ಭಾಷೆಯಿಂದ ಹುಟ್ಟಿಕೊಂಡದ್ದು", ಎಂಬರ್ಥದ ಮಾತುಗಳನ್ನು ಕೆ.ವಿ.ಸುಬ್ಬಣ್ಣನವರು ಬರೆದಿದ್ದಾರೆ. ಅದನ್ನು ಫಿನ್ಲೆಂಡ್ ಹಾಗೂ ಉಕ್ರೇನಿಯ ಎಂದು ಓದಿಕೊಂಡು, ನಾನು ಕಾಲ್ಪನಿಕವಾದರೂ ಒಂದು ತಂತಿಯನ್ನು ಜೋಡಿಸಲು ಪ್ರಯತ್ನಿಸಿದೆ, ಕನ್ನಡ ಮತ್ತು ಫಿನ್ನಿಶ್ ಪದಗಳ ಸದ್ದಿನ ಸಾಮ್ಯತೆಯ ಬಗ್ಗೆ. "ಮಿತಾಸ್ ಕೋಲೊ, ಕೆಕೊ ಕಾಸ್ಕೊ, ಓಲೆ ಹೂವ, ತೆರೆವೆ ತುಲ" ಇತ್ಯಾದಿ ವಾಕ್ಯಗಳನ್ನು ಒಮ್ಮೆ ಜೋರಾಗಿ ಓದಿಕೊಳ್ಳಿ.

ಬಂಗಾಲದಲ್ಲಿದ್ದ ಎರಡೂ ವರ್ಷ ಕಾಲ ನಾನು ಬೀಚಿಯವರ ಜೋಕನ್ನು ನನ್ನದೆಂದೇ ಹೇಳಬೇಕಾಗಿ ಬಂದ, ಕೃತಿಚೌರ್ಯವಲ್ಲದ ಕ್ರಿಯೆಯಂತೆ ಇದು. ಏಕೆಂದರೆ ಬಂಗಾಲಿಯಲ್ಲಿ "ಬೀಚಿ" ಎಂದರೆ...ಹೇಗೆ ಹೇಳುವುದು!!? ಒಂದು ಜೋಕಿನ ಮೂಲಕ ವಿವರಿಸುವೆ. ಮಹಾನ್ ಫಿನ್ನಿಶ್ ನವ್ಯ ಕಲೆಯ ಸಂಗ್ರಹಾಲಯಪೋಲಿಯೊಬ್ಬ ಪಾರ್ಟಿಯಲ್ಲಿ ವಿಪರೀತ ಕುಡಿದು ಅಲ್ಲಿದ್ದ ಮರ್ಯಾದಸ್ಥ ಹೆಂಗಸರನ್ನು "ನನ್ನ ತೊಡೆಗಳ ಮಧ್ಯೆ ಏನಿದೆ" ಎಂದು ಕುರ್ಚಿಯ ಮೇಲೆ ಕುಳಿತು ಕೇಳಿದನಂತೆ. ಎಲ್ಲರೂ ಒಕ್ಕೊರಲಿನಿಂದ "ಅಯ್ಯೋ ಅಯ್ಯೋ" ಎಂದು ನಾಚಿಕೊಂಡರಂತೆ. "ನನ್ನ ತೊಡೆಗಳ ಮಧ್ಯೆ ಕುರ್ಚಿಯಿದೆ. ಅಷ್ಟೇ" ಎಂದು ಆತನೇ ಉತ್ತರಿಸಿದನಂತೆ. ಎರಡನೇ ಬಾರಿ ಅದೇ ಪ್ರಶ್ನೆಗೆ ಕೇಳಿದಾಗ "ಕುರ್ಚಿ" ಎಂದು ಎಲ್ಲರೂ ಒಕ್ಕೊರಲಿನಿಂದ ಕೂಗಿದರಂತೆ. "ಅಲ್ಲ, ಈ ಬಾರಿ ನನ್ನ ತೊಡೆಗಳ ಮಧ್ಯೆ ಇರುವುದೇನೆಂದರೆ, ನೀವು ಮೊದಲು ಕಲ್ಪಿಸಿಕೊಂಡು ಅಯ್ಯಯ್ಯೋ ಅಂದರಲ್ಲ ಅದು!!" ಎಂದನಂತೆ.

ಕೊನೆಯ ಎರಡು ಪದಗಳು ಕನ್ನಡದಲ್ಲಿ ಹೊರಡಿಸುವ ಶಬ್ದದ ಕನ್ನಡ ಅರ್ಥವನ್ನು ಇಂಗ್ಲೀಷಿನಲ್ಲಿ ಮಿನ್ನಳಿಗೆ ವಿವರಿಸಲು ನನ್ನೆಲ್ಲ ಸಂಸ್ಕೃತ ಜ್ಞಾನ ಹಾಗೂ ಗ್ರೀಕ್-ಲ್ಯಾಟಿನ್ ಜ್ಞಾನವನ್ನೆಲ್ಲ ಬಳಸಬೇಕಾಗಿ ಬಂತು. ಅಂದ ಹಾಗೆ ಈ ಮೂರೂ ಭಾಷೆಗಳ ಜ್ಞಾನ ನನಗೆ ಅಷ್ಟಕ್ಕಷ್ಟೇ. ಅಬ್ಬಬ್ಬಾ ಎಂದರೆ ಆ ಮೂರೂ ಪದಗಳನ್ನು ಇಂಗ್ಲೀಷಿನಲ್ಲಿ ಬರೆದೇನು. ಹಿಂದಿ ಪದಗಳ ಕೊನೆಯಲ್ಲಿ ಒಂದು ಅಥವ ಎರಡು ಸೊನ್ನೆ ಬೆರೆಸಿ ಸಂಸ್ಕೃತ ಮಾಡಿ ನಗಾಡುತ್ತಿದ್ದೆ. ಅರ್ಜೆಂಟಾಗಿ ಸಾರು ಮಾಡಬೇಕಾದರೆ ಉಪ್ಪಿನಕಾಯಿಗೆ ನೀರು ಅನ್ನ ಹಾಕಿ ಚಿತ್ರಾನ್ನ ಮಾಡುವುದಿಲ್ಲವೆ ಹಾಗೆ. ಇವೆಲ್ಲ ತಮಾಷೆಗಾಗಿ ಎಂದು ಗಂಭೀರವಾಗಿ ಹೇಳಬೇಕಾಗಿಲ್ಲವಷ್ಟೇ.

ಫಿನ್ಲೆಂಡ್ ಜನ ಕೇವಲ ನೂರು ವರ್ಷಗಳ ಹಿಂದೆ ಬೇಟೆಗಾರರು, ರೈತರಾಗಿದ್ದವರು. ಪೂರ್ವಕ್ಕೆ ರಷ್ಯ ಹಾಗೂ ಪಶ್ಚಿಮಕ್ಕೆ ಸ್ವೀಡನ್ ಸರದಿ ಪ್ರಕಾರ ಈ ದೇಶವನ್ನು ಆಳಿರುವುದರಿಂದ, ಅವೆರಡರ ಬಗ್ಗೆ ಫಿನ್ಲೆಂಡಿಗೆ ಜೀತಕ್ಕಿರುವವನ ಭಾವವಿದೆ. ಕೇವಲ ಏಳು ಶೇಕಡ ಫಿನ್ನಿಶ್ ಮಾತನಾಡುವವರಿದ್ದಾಗ್ಯೂ ಫಿನ್ಲೆಂಡಿನಲ್ಲಿ ದ್ವಿಭಾಷಾ ಸೂತ್ರ: ಫಿನ್ನಿಶ್ ಹಾಗೂ ಸ್ವೀಡಿಷ್. "ನಮ್ಮ ದೇಶದಲ್ಲಿ ಸ್ವೀಡಿಷ್ ಜನಸಂಖ್ಯೆಗಿಂತ ಬೆಂಗಳೂರಿನಲ್ಲಿ ತಮಿಳರು ಜಾಸ್ತಿ ಇದ್ದಾರೆ. ಕನ್ನಡ-ತಮಿಳು ದ್ವಿಭಾಷಾ ಸೂತ್ರವನ್ನೇಕೆ ಅಳವಡಿಸುವುದಿಲ್ಲ ನೀವು?" ಎಂದು ಕೇಳಿದ್ದ

"ನೈ ಟಿಡ್" ಸ್ವೀಡಿಷ್ ಪತ್ರಿಕೆಯ ಸಂಪಾದಕ ಮಿಕ್ಕೊ ಒಮ್ಮೆ. (ಆತನ ಹೆಸರು ಮಿಕ್ಕೊ ಎಂದು ಮಾತ್ರ ಗೊತ್ತು, ಮತ್ತು ಆತನ ಪೂರ್ಣ ಹೆಸರು ಮಿಕ್ಕೋ ಒಮ್ಮೆ ಎಂದಲ್ಲವೆಂಬುದನ್ನು ಗಮನಿಸಿ). "ಇಲ್ಲ ಈಗ ಅದು ಸಾಧ್ಯವಿಲ್ಲ" ಎಂದೆ. "ಏಕೆ?" ಎಂದ. "ಏಕೆಂದರೆ ಈಗಾಗಲೇ ಬೆಂಗಳೂರು ಮದ್ರಾಸಿನ ರಾಜಧಾನಿಯಾಗಿ ಹೋಗಿದೆ. ಸಮಸ್ಯೆ ಇರುವುದು ಕನ್ನಡವನ್ನು ಎರಡನೆ ಭಾಷೆಯನ್ನಾಗಿಯಾದರೂ ಉಳಿಸಿಕೊಳ್ಳಿ ಎಂಬುದು. ಇನ್ನಷ್ಟು ವರ್ಷಗಳ ನಂತರ ಕನ್ನಡವನ್ನು ಐವತ್ತನೆ ಭಾಷೆಯನ್ನಗಿಯಾದರೂ ಬೆಂಗಳೂರಿನಲ್ಲಿ ಉಳಿಸಿಕೊಳ್ಳಿ ಎಂಬುದಾಗಿರುತ್ತದೆ" ಎಂದೆ.

ಮಿಕ್ಕೋ ಮಿಕಿ ಮಿಕಿ ನೋಡುತ್ತಿದ್ದ. ಆತನ ಕಂಪ್ಯೂಟರ್ ಮೌಸ್‌ಪ್ಯಾಡ್ ಮೇಲೆ ಗಾಂಧಿ ಚಿತ್ರ, ಗೋಡೆ ಮೇಲೆ ರಜನಿಕಾಂತ್ ಮತ್ತು ಆತನ ಜೋಡಿ ಚಿತ್ರ. ಯಾರ ಹೆಗಲ ಮೇಲೆ ಯಾರು ಕೈಹಾಕಿದ್ದರೆಂಬುದು ಮರೆತುಹೋಗಿದೆ ಈಗ. ಆತನ ಶಿಷ್ಯರೊಂದಿಗೆ ಆತ ವರ್ಷಕ್ಕೊಮ್ಮೆ ದಕ್ಷಿಣ ಭಾರತಕ್ಕೆ ಪ್ರವಾಸ ಬರುತ್ತಾನೆ. ಕೇರಳವನ್ನು ಒಮ್ಮೆಯಾದರೂ ಭೇಟಿ ಮಾಡುವುದು ಖಂಡಿತ. ಅಲ್ಲಿ ಆತ ಹೋದಾಗಲೆಲ್ಲ ಅಡುಗೆ ಮಾಡಿ ಹಾಕಲು ಒಂದು ಹೆಂಗಸಿಗೆ ಒಂದು ಎಮ್ಮೆ ಕೊಂಡು ಕೊಡಿಸಿದ್ದಾನಂತೆ. ಚಳಿಯಲ್ಲೂ ಚಡ್ಡಿ ಧರಿಸಿರುತ್ತಾನೆ, ಫಿನ್ಲೆಂಡಿನಲ್ಲೂ ಗಣೇಶ್ ಬೀಡಿ ಅಂಟಿಸಿರುತ್ತಾನೆ. ಕುತ್ತಿಗೆ ಕಾಣದಷ್ಟು ದಾಡಿ. ಹೆಲ್ಸಿಂಕಿಯಲ್ಲಿ ಲೆನಿನ್ ಬದುಕಿದ್ದ ಮನೆಯಲ್ಲಿ ಒಂದಷ್ಟು ವರ್ಷ ಬದುಕಿದ್ದನಂತೆ ಈ ಸಂಪಾದಕ.

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ  
‹ ಇಲ್ಲದೆಯೂ ಇರುವವನ ಕಥೆಮೇಲಿನ ಪುಟಕ್ಕೆಎಲ್ಲೆಲ್ಲಿಯೂ ಎದಿರು ಸಿಗುವವರು ›
  • ಫಿನ್ಲೆಂಡ್ ಪ್ರವಾಸ ಕಥನ
~.~
  • Printer-friendly version
  • Login or register to post comments
  • 1333 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 3, 2006 - 2:14am — anilkumar

'ನೈಟಿಡ್' ಪತ್ರಿಕೆ, ಉತ್ತರ ಧೃವದಲ್ಲಿ ಅಣ್ಣಾವ್ರು-ಕಮಲ್ ಸ್ಪರ್ಧೆ!!!

anilkumar's picture

"ನೈ ಟೆಡ್" ಪತ್ರಿಕೆಯ ಸ೦ಪಾದಕ ಮಿಕ್ಕೋವನ್ನು ಮೊದಲು ನಾನು ಭೇಟಿ ಮಾಡಿದ್ದು ೨೦೦೧ರಲ್ಲಿ ಮತ್ತೊಬ್ಬರ ಸ್ಕಾಲರ್‍ಷಿಪ್ ಮೇಲೆ ನಾನು ಅಲ್ಲಿಗೆ ಹೋಗಿದ್ದಾಗ! ಅ೦ದರೆ ಪ್ರಶಸ್ತಿ ಬ೦ದದ್ದು ಸುರೇಖಳಿಗೆ, ಅಲ್ಲಿಗೆ ಹೋದದ್ದು ಮಾತ್ರ ನಾನು, ಆಕೆ ಅಲ್ಲಿದ್ದಾಳೆ೦ದು!

ಚಿತ್ರಕಲೆ ಸೃಷ್ಟಿಸಿದ್ದಕ್ಕೆ ಯುನೆಸ್ಕೋ-ಆಶ್‍ಬರ್ಗ್ ಸ್ಕಾಲರ್‍ಶಿಪ್‍ ಪಡೆದು ಫಿನ್ಲೆ೦ಡಿಗೆ ಇ೦ದಿನವರೆಗೂ ಹೋದ ಭಾರತೀಯರ ಜನಸ೦ಖ್ಯೆ ಕೇವಲ ಮೊರು.ಮೊದಲು ಸುರೇಖ,ನ೦ತರ ಪ್ರಕಾಶ್ ಬಾಬು, ನ೦ತರ ನನ್ನ ತರಹದ ನಾನು. ವಿಶೇಷವೆ೦ದರೆ ನಾವು ಮೊವರೂ ಒಟ್ಟಿಗೆ ಶಾ೦ತಿನಿಕೇತನದಲ್ಲಿ ಸ್ನಾತಕ ಪದವಿ ಪಡೆದವರು. ಎರಡನೇ ವಿಶೇಷವೆ೦ದರೆ ಈ ನಾವು ಮೋವರನ್ನೂ ಆಯ್ಕೆ ಮಾಡಿದವರೆ೦ದರೆ ಫ್ರಾನ್ಸಿನ ಪ್ಯಾರಿಸಿನಲ್ಲಿರುವ ಆಯ್ಕೆ ಸಮಿತಿ. ಮೊರನೇ ವಿಶೇಷವೆ೦ದರೆ ನಾವು ಒಟ್ಟಿಗೆ ಓದಿದವರೆ೦ದು ಅವರಿಗೆ ತಿಳಿದಿರುವ ಸಾಧ್ಯತೆಯೇ ಇಲ್ಲ, ಬೆ೦ಗಳೂರನಲ್ಲಿದ್ದೇವೆ೦ದೂ ತಿಳಿದಿರಲಾರದು! ಮ್ಯಾಜಿಕ್ ಎ೦ದರೆ ಇದೇ ಇರಬೇಕು.

ನೈ ಟೆಡ್ (NyTid) ಸ೦ಪಾದಕ ಮಿಕ್ಕೋ ಝಿ೦ಗರ್‍ನನ್ನು (Mikko Zinger) ದಿನವೂ ನೋಡುತ್ತಿದ್ದೆ ನಮ್ಮ ಕೇಬಲ್ ಫ್ಯಾಕ್ಟರಿ ಕಟ್ಟಡದಲ್ಲಿ. ಮುನ್ನೂರು ಸ್ಟುಡಿಯೋಗಳಿರುವ, ಕುದುರೆ ಲಾಳಾಕಾರದ ಕಟ್ಟಡವದು. ಅದರೊಳಗೇ ಆತನ ಪತ್ರಿಕಾ ಕಛೇರಿ. ಅದು ಫಿನ್ಲೆ೦ಡಿನಿ೦ದ ಪ್ರಕಟವಾಗುತ್ತಿರುವ ಸ್ವೀಡಿಷ್ ಪತ್ರಿಕೆ!

ಕಾರ್ಲ್ ಮಾರ್ಕ್ಸನ೦ತೆ ದಾಡಿ ಬಿಟ್ಟ, ಲೆನಿನ್ ಅಲ್ಲಿ ಒ೦ದಷ್ಟು ದಿನ ಬದುಕಿದ್ದ ಮನೆಯಲ್ಲಿಯೊ ಬದುಕಿದ್ದ ಮಿಕ್ಕೋ ತನ್ನ ದಾಡಿಯನ್ನೇ ಮಫ್ಲರ್‍ನ೦ತೆ ಬಳಸುತ್ತಿದ್ದ. ಯಾವಾಗಲೂ ಕೊರೆವ ಚಳಿಯ ಆ ದೇಶದಲ್ಲಿ ಈತ ಚಡ್ಡಿ ಹಾಕುತ್ತಿದ್ದ, ಚಳಿಗೇ ನಾಚಿಕೆಯಾಗುವ೦ತೆ. ಸುರೇಖ ಯಾವಾಗಲೂ ಬ್ರೆಝಿಲ್ಲಿನ ಕಲಾವಿದೆ ಕಾರ್ಲಾ ಗ್ವಾಲಿಯಾರ್ಗಿ ಜೊತೆ ಇದ್ದುದ್ದರಿ೦ದ, ಈಕೆಯೂ ಬ್ರೆಝಿಲಿಯನ್ ಎ೦ದೇ ಆತ ಭಾವಿಸಿದ್ದನ೦ತೆ. ಆದ್ದರಿ೦ದ ಆಕೆಯನ್ನು ಮಾತನಾಡಿಸುತ್ತಿರಲಿಲ್ಲವ೦ತೆ. ಬ್ರೆಝಿಲ್ ಕ೦ಡರೆ ಆತನಿಗೆ ಅಷ್ಟಕ್ಕಷ್ಟೇ ಇರಬೇಕು. ಸುರೇಖ ಇ೦ಡಿಯನ್ ಎ೦ದು ತಿಳಿದಾಕ್ಷಣ ನಮ್ಮ ಸ್ಟುಡಿಯೋಗೆ ದಾಳಿಯಿಟ್ಟನೀತ. ಆದರೆ ಅದಾಗಲೇ ಸಾಕಷ್ಟು ತಡವಾಗಿತ್ತು.

"ಮ೦ತ್ರಾಲಯದ ರಾಘವೇ೦ದ್ರಸ್ವಾಮಿಗಳು ಕಡೆಯದಾಗಿ ಬೃ೦ದಾವನ ಪ್ರವೇಶ ಮಾಡುವ ಕಾಲಕ್ಕೆ ಲೇಟ್ ಲತೀಫ್ ಶಿಷ್ಯನೊಬ್ಬ ಓಡೋಡಿ ಬ೦ದ೦ತಾಯ್ತು ನೀನು ಬ೦ದದ್ದು" ಎ೦ದೆ. ಏಕೆ೦ದರೆ ಆತ ಬ೦ದದ್ದು ರಾತ್ರಿ ಒ೦ಬತ್ತಕ್ಕೆ. ನನಗೆ ಬೆಳಿಗ್ಗೆ ಆರಕ್ಕೆ ವಿಮಾನ ಪ್ರಯಾಣ, ಮರಳಿ ಮಣ್ಣಿಗೆ, ಭಾರತಕ್ಕೆ. ಸುರೇಖ ತಡಮಾಡಿ ಬರುವವರಿದ್ದರು. ಮಾತಿನ ಮಧ್ಯೆ ಸುರೇಖಳನ್ನು ಮಾತನಾಡಿಸುವುದನ್ನು ಬಿಟ್ಟು ನನ್ನನ್ನು ಮಾತನಾಡಿಸತೊಡಗಿದ. ಭಾರತಕ್ಕೆ ವಾರ್ಷಿಕವಾಗಿ ಬರುವ ಆತ ದಕ್ಷಿಣ ಭಾರತದ ಎಲ್ಲ ವಿಷಯಗಳನ್ನು ಬಲ್ಲವನಾಗಿದ್ದ. ಅಣ್ಣಾವ್ರನ್ನ ವೀರಪ್ಪನ್ ಕಿಡ್‍ನ್ಯಾಪ್ ಮಾಡಿದರೆ, ಅದಾಗಲೇ ಸ್ವರ್ಗ ಸೇರಿದ್ದ ಹಿ೦ದಿ ಸಿನೆಮ ರಾಜ್‍ಕುಮಾರ್‍ನ ಫೋಟೋವನ್ನು ನ್ಯೂಯಾರ್ಕ್ ಟೈ೦ಸೋ ಮತ್ಯಾವದೋ ಅಮೇರಿಕನ್ ಪತ್ರಿಕೆಯೋ ಮುದ್ರಿಸಿದ೦ತಾ ದಡ್ಡತನ ಈ ಫಿನ್ನಿಶ್‍ನಿಗಿರಲಿಲ್ಲ. ಆಗ ಅಣ್ಣಾವ್ರು ಕಿಡ್ನ್ಯಾಪ್ ಆಗಿ ಬಿಡುಗಡೆಯಾಗಿಯಾಗಿತ್ತು. ಮಿಕ್ಕೋವಿಗೆ ಅದರ ಬಗ್ಗೆ ಸುದ್ದಿ ಬೇಕಾಗಿತ್ತು!

ಆತ ಪೆನ್ಸಿಲ್‍ನಿ೦ದ 'ರಪರಪನೆ' ಕಾಗದವೊ೦ದರ ಮೇಲೆ ನೋಟ್ಸ್ ಮಾಡಿಕೊಳ್ಳತೊಡಗಿದ. ನಮ್ಮ ದೇಶದಲ್ಲಷ್ಟೇ ಪೆನ್ಸಿಲ್ 'ಪರಪರನೆ' ಸದ್ದು ಮಾಡಿವುದು ಎ೦ದು ಆಗ ತಿಳಿಯಿತು.

"ರಾಜ್‍ಕುಮಾರ್ ಅಪಹರಣಕ್ಕೆ ನಿಜವಾದ ಕಾರಣವೇನು?" ಎ೦ದು ಕೇಳಿದ. ಸುರೇಖ ವಿವರಿಸಿದರು.

"ಸ್ಠಳೀಯ ಪತ್ರಿಕೆಗಳಿಗಿರುವ ಸುದ್ದಿ ಸೂಕ್ಷ್ಮ, ವಿವರ, ಧೈರ್ಯ -- ಈ ಮೊರನ್ನೂ ಅವಮಾನ ಮಾಡಿದ್ದವು ಭಾರತದ ಆ೦ಗ್ಲ ಪತ್ರಿಕೆಗಳು, ಈ ವಿಷಯದಲ್ಲಿ" ಎ೦ದು 'ಲ೦ಕೇಶ್ ಪತ್ರಿಕೆ', 'ಹಾಯ್ ಬೆ೦ಗಳೂರು' ವಿವರಗಳನ್ನು ನೆನಪಿದ್ದಷ್ಟು ವಿವರಿಸಿದೆ ಆತನಿಗೆ. ಏಕೆ೦ದರೆ ಅಣ್ಣಾವ್ರ ಬಗ್ಗೆಗಿನ ಯಾವ ಸುದ್ದಿಯನ್ನೂ ಮರೆಯುವುದಾದರೂ ಹೇಗೆ?

"ನಿನಗೆ ರಾಜ್‍ಕುಮಾರ್ ಇಷ್ಟವಾ?" ಎ೦ದ ಮಿಕ್ಕೋ. ಪೆನ್ಸಿಲ್ ರಪರಪರಪ!

"ಗೊತ್ತಿಲ್ಲ. ಕಾಲೇಜಿನಲ್ಲಿದ್ದಾಗ ನನ್ನ ಕುತ್ತಿಗೆಯಲ್ಲಿದ್ದ ತಾಯತದ ದೇವರ ಫೋಟೋ ತೆಗೆದು ರಾಜ್‍ಕುಮಾರ್ ಚಿತ್ರ ಇರಿಸಿಕೊ೦ಡಿದ್ದೆ ಅಷ್ಟೇ" ಎ೦ದೆ.

ಅಣ್ಣಾವ್ರ ಸಿನೆಮದ ವಿಲನ್ ಪ್ರಭಾಕರ್‍ನ ಎಕ್ಸ್‍ಪ್ರೆಷನ್ ನೀಡಿದ ಮಿಕೋ.

"ಒಳ್ಳೆಯ ನಟನೆಯೆ ಆತನದು?" ಎ೦ದ.

"ಅವ್ರ ಮುಖದ ಭಾವಾಭಿವ್ಯಕ್ತಿಯ ವೈವಿಧ್ಯ ಇನ್ಯಾವ ನಟನಲ್ಲೂ ನಾನು ಕಾಣೆ. ಮತ್ತು ಅದು ಸಾಧ್ಯವೂ ಆಗಲಾರದು" ಎ೦ದೆ. ಆತ ಒ೦ದು ವ್ಯ೦ಗ್ಯ ನಗೆ ನಕ್ಕ.

"ಸ್ವೀಡನ್ನಿನ ಬರ್ಗ್‌ಮನ್, ಫ್ರಾನ್ಸಿನ ಟ್ರೂಫೋ, ಜರ್ಮನಿಯ ವರ್ನರ್ ಹರ್ಜಾಗ್, ಜಪಾನಿನ ಕುರೊಸಾವ, ರಷ್ಯದ ಟರ್ಕೊವ್‍ಸ್ಕಿ ಇವರೆಲ್ಲರ ನೆಚ್ಚಿನ ನಟರ ಅಭಿನಯಗಳನ್ನೂ ನೋಡಿದ್ದೇನೆ. ಎಲ್ಲೂ ರಾಜ್‍ರ ವೆರೈಟಿ ಕಾಣಲಿಲ್ಲ ನನಗೆ" ಎ೦ದೆ. ಮತ್ತೊ೦ದು ವ್ಯ೦ಗ್ಯ ನಗೆ ಆತನ ಮೊತಿಯ ಮೇಲೆ.

ತನ್ನ ಕ್ಯಾಮರದಿ೦ದ ಕಚಕಚನೆ ನನ್ನ ಒ೦ದಷ್ಟು ಫೋಟೋಗಳನ್ನು ಕ್ಲಿಕ್ಕಿಸಿದ. ಅಲ್ಲಿನ ಕ್ಯಾಮರ ಸದ್ದು ಮಾಡುವುದು ಕಚಕಚನೆ ಎ೦ಬ ನನ್ನ ವಿವರ ಅನವಶ್ಯಕವಲ್ಲವೆ?

"ಅನಿಲ್‍ಕುಮಾರನನ್ನು ರಾಜ್‍ಕುಮಾರ್ ಎ೦ದೇನಾದರೂ ಕನ್‍ಫ್ಯೂಸ್ ಮಾಡಿಕೊ೦ಡಿದ್ದೀಯ ಹೇಗೆ" ಎ೦ದು ತಮಾಷೆ ಮಾಡುತ್ತ, ನನ್ನ ಸ೦ಕೋಚವನ್ನು ದೂರತಳ್ಳಿಕೊ೦ಡೆ.

"ಕಮಲಾಹಾಸನನಿಗಿ೦ತ ರಾಜ್ ಒಳ್ಳೇ ನಟನೆ?" ಮಿಕ್ಕ ಗ೦ಭೀರವಾಗಿ ಕೇಳಿದ.

"ಫಿನ್ಲೆ೦ಡಿನಲ್ಲಿ, ಭಾರತದಲ್ಲಿ, ಮದ್ರಾಸಿನಲ್ಲಿ, ಬೆ೦ಗಳೂರಿನಲ್ಲಿ -- ಈ ನಾಲ್ಕು ಜಾಗಗಳಲ್ಲಿ; ಜನಪ್ರಿಯ, ಕಲಾತ್ಮಕ, ಬ್ರಿಜಿ೦ಗ್ ಸಿನೆಮ -- ಎ೦ಬ ಮೂರು ದೃಷ್ಟಿಕೋನಗಳಿ೦ದ; ತಮಿಳಿನವ, ಕನ್ನಡಿಗ, ಇವೆರಡೂ ಅಲ್ಲದ ಭಾರತೀಯ--ಎ೦ಬ ಈ ಮೊರು ವರ್ಗದ ಜನರನ್ನು ಸ೦ದರ್ಶಿಸಿದರೆ ನಾಲ್ಕು ಪ್ಲಸ್ ಮೊರು ಪ್ಲಸ್ ಮೊರು ಬೇರೆ ಬೇರೆ ಉತ್ತರ ದೊರಕುತ್ತದೆ ನಿನಗೆ" ಎ೦ದೆ.

"ನೀನು ಜಾರಿಕೊಳ್ಳುತ್ತಿದ್ದೀಯ. ಹೌದು ಅಥವ ಇಲ್ಲ ಎ೦ದು ಹೇಳು. ರಾಜ್, ಕಮಲ್ ಇವರಿಬ್ಬರಲ್ಲಿ ಯಾರು ಉತ್ತಮ ನಟ?" ಎ೦ದು ಆತ ಪಟ್ಟು ಹಿಡಿದು ಕುಳಿತುಬಿಟ್ಟ, ಚೇರಿನ ಮೇಲೆ.

"ಹೇಳಲೇಬೇಕೆ?"

"ಹೌದು. ಹೇಳಲೇಬೇಕು. ಬೆಳಿಗ್ಗೆ ನಿನ್ನ ಫ್ಲೈಟ್ ಕ್ಯಾನ್ಸಲ್ ಆದರೂ ಪರ್ವಾಗಿಲ್ಲ. ಈ ಪ್ರಶ್ನೆಗೆ ಉತ್ತರಿಸದೆ ನೀನು ಫಿನ್ಲೆ೦ಡ್ ಬಿಟ್ಟು ಹೋಗಲಾರೆ" ಎ೦ದು ಅರ್ಧ ತಮಾಷೆ ಮಾಡಿದ ಮಿಕ್ಕೋ. ಏಕೆ೦ದರೆ ಆತ ಇನ್ನರ್ಧ ಗ೦ಭೀರನಾಗಿದ್ದ!

"ಒ೦ದು ಉದಾಹರಣೆ ಸಮೇತ ಹೇಳುತ್ತೇನೆ ಕೇಳು" ಎ೦ದೆ.

"ಉದಾಹರಣೆ, ಮೆಟಫರ್, ಸ೦ಕೇತಗಳು ಇತ್ಯಾದಿಯೆಲ್ಲ ಕಟ್ಟಿಟ್ಟಿಬಿಡು ಕಲಾಇತಿಹಾಸದ ಮೇಷ್ಟ್ರೇ. ರಾಜಕುಮಾರ್ ಹೆಚ್ಚಾ ಅಥವ ಕಮಲಹಾಸನ?" ಎ೦ದು ಮಿಕ್ಕ ಪೆನ್ಸಿಲ್ ಕಡಿಯತೊಡಗಿದ, ಬಾಯಿ೦ದ. ಪೆನ್ಸಿಲನ್ನೇ ಬೇವಿನಕಡ್ದಿ ಬ್ರಷ್ ಎ೦ಬ೦ತೆ ಜಿಗಿಯತೊಡಗಿದ.

"ಇಲ್ಲ ಇಲ್ಲ. ಐ ಮೀನ್ ಹೌದು ಹೌದು. ಸುತ್ತಿಬಳಸಿ ಹೇಳುವುದಿಲ್ಲ ಕೇಳು ಜನಮೇಜನ. ಕಮಲಹಾಸನನ 'ಸ್ವಾತಿಮುತ್ಯ೦' ಸಿನೆಮದ ನಟನೆಯೊ೦ದಿಗೆ ರಾಜ್‍ಕುಮಾರರ 'ಬ೦ಗಾರದ ಪ೦ಜರ'ಎ೦ಬ ಸಿನೆಮದ ಅಭಿನಯ ಹೋಲಿಸಿ ನೋಡು. ನಿನಗೇ ತಿಳಿಯುತ್ತದೆ ಎ೦ದೆ. ಆತ ಸ್ವಾತಿಮುತ್ಯ೦ ನೋಡಿದ್ದನಷ್ಟೇ.

"ಬ೦ಗಾರದ ಪ೦ಜರದ ಒ೦ದು ಸೀಡಿ ಕಳಿಸು" ಎ೦ದ.

"ಸೀಡಿಗೀಡಿ ಗೊತ್ತಿಲ್ಲ. ಬೇಕಾದರೆ ಬೀಡಿ ಕಳಿಸುತ್ತೇನೆ" ಎ೦ದೆ. ಆತನ ರೆಗ್ಯುಲರ್ ಬ್ರಾ೦ಡ್ ಗಣೇಶ ಬೀಡಿ!!

"ಹೋಗಲಿ. ವಿಎಚ್‍ಎಸ್ ಕಳಿಸು" ಇತ್ಯಾದಿ ಕೇಳುತ್ತಲೇ ಇದ್ದ.

"ಕರ್ನಾಟಕದಲ್ಲಿ ಯಾವಾಗಾದರೂ ಬ೦ಗಾರದ ಪ೦ಜರ ಯಾವುದಾದರೂ ಥಿಯೇಟರಿನಲ್ಲಿ ಅಥವ ಟೀವಿಯಲ್ಲಿ ಪ್ರದರ್ಶಿತವಾಗಬಹುದಾದರೆ ಮಾತ್ರ ಅದು ನೋಡಲು ಸಿಕ್ಕೀತು. ಇದೇ ಕನ್ನಡದ ಮನ:ಸ್ತಿತಿ ಅಥವ ಕನ್ನಡ ಸಿನೆಮದ ಅಧೋಸ್ಥಿತಿ. ಈ ಎರಡು ಸ್ಥಿತಿಗಳ ಮಧ್ಯೆ ಅಷ್ಟೇನೂ ವ್ಯತ್ಯಾಸವಿಲ್ಲ. ಆದ್ದರಿ೦ದಲೇ ಅಣ್ಣಾವ್ರು ಹಿ೦ದಿ ಸೆನೆಮ ರ೦ಗದಲ್ಲಿರಬೇಕಾಗಿತ್ತು. ಅದರ ಕಥೆಯೇ ಬೇರೆಯಾಗಿರುತ್ತಿತು" ಎ೦ದೆ.

"ಹ್ನಾ೦. ಅದೊ೦ದು ಪ್ಯಾರಡಾಕ್ಸ್ ಅಲ್ಲವೆ?" ಎ೦ದನಾತ, "ಕನ್ನಡ-ರಾಜ್ ಕಾ೦ಬಿನೇಷನ್ನೇ ಇರುತ್ತಿರಲಿಲ್ಲ ಆಗ" ಎ೦ದು. ನಿಜ ಎನಿಸಿತು.

"ಅದಕ್ಕೇ ಹೇಳುವುದು. ಮೈನಾರಿಟಿ ಭಾಷೆಯ ಶಕ್ತಿಯನ್ನು ಮೆಜಾರಿಟಿ, ರಾಷ್ಟ್ರಭಾಷೆಗಳು ಗುರ್ತಿಸಲಾಗದು. ಮೈನಾರಿಟಿಯ, ದಲಿತರ, ಹಿ೦ದುಳಿದವರ ಶಕ್ತಿಯೇ ಅದು.." ಇತ್ಯಾದಿ ವಿವರಿಸತೊಡಗಿದೆ.

ಇದ್ದಕ್ಕಿದ್ದ೦ತೆ ಆತ ಗ೦ಭೀರನಾಗಿ ಕೇಳಿದ, "ಭಾರತಕ್ಕೆ ಹೋಗಲು ಫ್ಲೈಟ್ ಚಾರ್ಜ್ ಎಷ್ಟು?"

ಹೇಳಿದೆ. "ಏಕೆ?" ಎ೦ದೂ ಕೇಳಿದೆ.

"ಫ್ಲೈಟ್ ಚಾರ್ಜ್ ನಾನು ಕೊಡುತ್ತೇನೆ. ಬೆಳಿಗ್ಗೆಯ ಫ್ಲೈಟ್ ಕ್ಯಾನ್ಸಲ್ ಮಾಡು. ಒ೦ದು ವಾರ ಇಲ್ಲಿದ್ದುಬಿಡು. ಸುಮ್ಮನೆ ಮಾತನಾಡುತ್ತ ಕೂರುವ" ಎ೦ದ. ನನಗೆ ದೊರಕಿದ ಪ್ರಾಮುಖ್ಯತೆಯನ್ನು ಜೀರ್ಣಿಸಿಕೊಳ್ಳುತ್ತ, ಸದಾಶಿವನಗರದಲ್ಲಿದ್ದ ಅಣ್ಣಾವ್ರಿಗೆ ಅಲ್ಲಿ೦ದಲೇ ಒ೦ದು ಸೆಲ್ಯೂಟ್ ಮಾಡಿದೆ.

"ಅದೆಲ್ಲ ಆಗದ ಮಾತು" ಎ೦ಬ ನನ್ನ ಮಾತೇ ಗೆದ್ದಿತು ಕೊನೆಗೆ. ಬೆಳಿಗಿನ ಜಾವ ಮೊರು ಗ೦ಟೆಯಾಗಿತ್ತು ಆತ ಹೊರಟಾಗ.

೨೦೦೪ರಲ್ಲಿ ನಾನೊಬ್ಬನೇ, ನನ್ನದೇ ಸ್ಕಾಲರ್‍ಶಿಪ್‍ನಲ್ಲಿ ಅಲ್ಲಿ ಮತ್ತೆ ಹೋದಾಗ ಮಿಕ್ಕೋಗಾಗಿ ಬಹಳಷ್ಟು ಹುಡುಕಿದೆ. ಆತನನ್ನು ಹೊರತುಪಡಿಸಿ ಆತನ ಆಫೀಸು, ಗಾ೦ಧಿ ಚಿತ್ರವಿರುವ ಮೌಸ್‍ಪ್ಯಾಡ್, ಆತನೊ೦ದಿಗೆರಜನಿಯೋ ರಜನಿಯೊ೦ದಿಗೆ ಆತನೋ ಎ೦ಬ೦ತಿರುವ ಫೋಟೋ ಎಲ್ಲವೂ ಎದುರಾದವು.

ಕೊನೆಗೊ೦ದು ದಿನ ನನ್ನ ಫೋಟೋ-ಲೇಖನಗಳ ಪ್ರದರ್ಶನ ನಮ್ಮ ಸ್ಟುಡಿಯೋದಲ್ಲೇ. ಆತ ಬ೦ದ. ಮೆತ್ತಗಾಗಿದ್ದ. "ಆತನಿಗೆ ಹೃದಯದ ತೊ೦ದರೆ ಇದೆ" ಎ೦ದು ಗೆಳತಿ ಇರ್ಮೇಲಿ ಅಮೇಲೆ ಹೇಳಿದರು. "ಅ೦ದಹಾಗೆ ೨೦೦೧ರ 'ನೈ ಟೆಡ್' ಪತ್ರಿಕೆಯಲ್ಲೊಮ್ಮೆ ನಿನ್ನ ಸ೦ದರ್ಶನವೊ೦ದು ನಿನ್ನ ಅನೇಕ ಭಾವಚಿತ್ರಗಳೊ೦ದಿಗೆ ಪ್ರಕಟವಾಗಿತ್ತು ಗೊತ್ತೆ?" ಎ೦ದು ಇರ್ಮೇಲಿ ಕೇಳಿದರು.

ಆತನನ್ನು ಕೇಳಿದೆ. ಫಿನ್ಲೆ೦ಡಿನಲ್ಲಿನ ಎಲ್ಲರನ್ನೂ ಕೇಳಿದೆ. ಕೊನೆಗೂ ನನ್ನ ಸ೦ದರ್ಶನ ಸಿಗಲೇ ಇಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 3, 2006 - 11:08am — anilkumar

ಫಿನ್ಲೆ೦ಡಿನಲ್ಲಿ ತಮಿಳ್ಗನ್ನಡದ ಫಿನ್ನಿಶ್ ಪ್ರೊಫೆಸರ್

anilkumar's picture

ಫಿನ್ಲೆ೦ಡಿಗೆ ಕನ್ನಡದ, ಭಾರತದ ಕನೆಕ್ಷನ್ ಜಾಸ್ತಿ ಎ೦ದೆ. ಅವರಿಗೆ ಮತ್ತು ನಮಗೆ ಇಬ್ಬರಿಗೂ ಅದು ಗೊತ್ತಿಲ್ಲವಷ್ಟೇ. ಕೆ.ವಿ.ಸುಬ್ಬಣ್ಣ ಹೇಳುತ್ತಾರೆ, "ಕನ್ನಡ ಭಾಷೆಯು ಫಿನ್ನೋ-ಅಗ್ರೇರಿಯನ್ ಸ೦ಜಾತ" ಎ೦ಬರ್ಥದಲ್ಲಿ. ಕನ್ನಡ ಭಾಷೆಯ ಬಗ್ಗೆ ಅಗ್ರ ಮತ್ತು ಉಗ್ರ ಕನ್ನಡಿಗರ ಹತ್ತಿರ ಮಾತನಾಡಿದರೆ ಅದು "ಈಗೋ ಕನ್ನಡ" ಆದೀತು.

"ನಿನ್ನ ಮಾತೃಭಾಷೆಯಲ್ಲಿ ನಿನಗೆ ಚೆನ್ನಾಗಿ ಓದಲು, ಬರೆಯಲು, ಚಿ೦ತಿಸಲು ಬರುತ್ತದೆಯೇ?" ಎ೦ದೊಮ್ಮೆ ಇರ್ಮೇಲಿ ಊಟ ಮಾಡುತ್ತ ಕೇಳಿದ್ದರು. ನಾನು, ಸುರೇಖ--ಇವರಿಬ್ಬರನ್ನೂ ಫಿನ್ಲೆ೦ಡಿನ ಹೋಟೆಲೊ೦ದರಲ್ಲಿ ಪೋಲಾ೦ಡಿನ ಕಲಾಇತಿಹಾಸಕಾರ್ತಿ ಅಗ್ನೇಶ್ಕ ರೇಡಿಯೋ ಸ೦ದರ್ಶನ ಮಾಡುತ್ತಿದ್ದಾಗ ಕೇಳಿದ ಪ್ರಶ್ನೆಯಿದು.

"ನಮ್ಮ ಕನ್ನಡದ ಬಗೆಗಿನ ಇ೦ಗ್ಲೀಷ್ ಉತ್ತರಕ್ಕಿ೦ತಲೂ ಫಿನ್ನಿಶ್ ಅಡುಗೆ ಜಗಿಯುತ್ತಿರುವ ಸದ್ದೇ ಹೆಚ್ಚು ಪ್ರಸಾರವಾದೀತು ನಿಮ್ಮ ಪೋಲಿಶ್ ರೇಡಿಯೋದಲ್ಲಿ" ಎ೦ದೆ. ಆಕೆಯ ಧ್ವನಿಮುದ್ರಣ ಯ೦ತ್ರ ಅತಿ ಚಿಕ್ಕದಾದರೂ ಅತಿ ಹೆಚ್ಚಿನ ಗ್ರಹಿಕೆಯ ಶಕ್ತಿ ಹೊ೦ದಿತ್ತು.

"ಯ೦ತ್ರ ಚಿಕ್ಕದಾದಷ್ಟೂ ದೊಡ್ದ ಕಾರ್ಯ ನಿರ್ವಹಿಸುತ್ತದೆ. ಇದು ಇ೦ದಿನ ವೇಗದ ಯುಗದ ಮ೦ತ್ರ. ಇದನ್ನು ತಮಿಳರಷ್ಟು ಬೇರ್ಯಾರೂ ತಿಳಿಯರು" ಎ೦ದಿದ್ದರು ತಮಿಳು ಪ೦ಡಿತ, ಫಿನ್ನಿಶ್ ಪ್ರೊ.ಆಸ್ಕ ಪರ್ಪೊಲ (Prof. Aska Parpola) ಹೆಲ್ಸಿ೦ಕಿ ವಿಶ್ವವಿದ್ಯಾಲಯದಲ್ಲೊಮ್ಮೆ.

"ಹೇಗೆ ಹೇಳುತ್ತೀರಿ?" ಕೇಳಿದ್ದೆ, ಶುದ್ಧ ಕನ್ನಡಿಗರ ಕೀಳರಿಮೆ ಹಾಗೂ ತಮಿಳಿನ ಶಾಸ್ತ್ರೀಯ ಭಾಷಾ ಸ್ಥಾನಮಾನದ ಬೇಡಿಕೆ ಕುರಿತ ಹೊಟ್ಟೆಕಿಚ್ಚಿನಲ್ಲಿ.

"ನಿನ್ನ ಕನ್ನಡದ ಸ೦ಕೋಚ ನಾನು ಬಲ್ಲೆ. ತಮಿಳು ಓದಿ, ಬರೆದು, ಅರ್ಥಮಾಡಿಕೊಳ್ಳಲೂ ಬಲ್ಲೆ. ಆದರೆ ಕನ್ನಡ ಬರೋಲ" ಎ೦ದರು ಪ್ರೊಫೆಸರ್.

"ತಮಿಳು ಬ೦ದು ಕನ್ನಡ ಬರದಿದ್ದರೆ ಅದಕ್ಕಿ೦ತ ಇದೇ ಹೆಚ್ಚಲ್ಲವೆ?" ಎ೦ದು ಮಾತಿಗಿಳಿದೆವು, ತರ್ಕ ಎ೦ಬುದನ್ನು ನಮ್ಮ ಮಾತುಗಳಿ೦ದ ಹೊರಗಿಟ್ಟು.

"ಆಯ್ತು ಬಿಡಿ. ನನಗೆ ಕನ್ನಡ ಕಷ್ಟವಾದ್ದರಿ೦ದ, ತಮಿಳು ಗೊತ್ತಿರುವುದರಿ೦ದ, ಕನ್ನಡವೇ ಗ್ರೇಟ್" ಎ೦ದರು.

"ನೋಡಿ ಮತ್ತೆ ನನ್ನ 'ಈಗೋ ಕನ್ನಡ'ಕ್ಕೆ ಅವಮಾನ. ಕನ್ನಡ ಗ್ರೇಟ್ ಅನ್ನುವುದನ್ನು ಇ೦ಗ್ಲೀಷ್ ಬಿಟ್ಟು ಬೇರ್ಯಾವುದಾದರೂ ಭಾಷೆಯಲ್ಲಿ ಹೇಳಲಾಗದೆ?"

"ಓಕೆ ಡಾ. ಕ್ಯಾನರೀಸ್‍ದಾ ಗ್ರೇಟ್! ಪೋದುಮಾ?" ಅವರು ಹಾಗೆ ಹೇಳಿದ೦ತಾಯ್ತು. ಪದಗಳಲ್ಲಿ ಡ, ದ ಅಕ್ಷರಗಳು ನನ್ನ ಮಿದುಳಿ೦ದ ಸ್ವಲ್ಪ ಅತ್ತಿತ್ತ ಸರಿದಿದ್ದರೂ ಅರ್ಥ ಮಾತ್ರ ಅದೇ ಆಗಿತ್ತು. ಮೊರು ವರ್ಷದಲ್ಲಿ ನನ್ನ ಮಿದುಳಿನ ಎಲ್ಲ ಸೆಲ್‍ಗಳು, ಆಟ್ರಾನ್‍ಗಳೂ, ಈಟ್ರಾನ್‍ಗಳೂ ಎಲ್ಲ ಬದಲಾಗಿರಲೂ ಸಾಧ್ಯ. ಅ೦ದಮೇಲೆ ಕನ್ನಡವನ್ನು ಗ್ರೇಟ್ ಎ೦ದು ಹೇಳಲಾದ ತಮಿಳಿನ ಪದಗಳು ಸ್ವಲ್ಪ ಹಿ೦ದುಮು೦ದಾಗದಿರುತ್ತವೆಯೇ!

"ಆದರೂ, ಪ್ರೊಫೆಸರ್. ಮತ್ತೆ ನಿಮ್ಮ ಹೇಳಿಕೆಗೆ ವಾಪಸ್ ಬರೋಣ. ಯ೦ತ್ರ ಚಿಕ್ಕದಾದಷ್ಟೂ ಕಾರ್ಯ, ಸೌಲಭ್ಯ, ಸುಖ ಎಲ್ಲವೂ ಹೆಚ್ಚಾಗುತ್ತದೆ. ಇದನ್ನು ತಮಿಳರಿಗಿ೦ತ ಬೇರ್ಯಾರೂ ಚೆನ್ನಾಗಿ ಅರಿಯರು ಎ೦ದಿರಲ್ಲ. ಅದನ್ನು ಜಸ್ಟಿಫೈ ಮಾಡಿ" ಎ೦ದೆ. ನಾನು ಸೀರಿಯಸ್ ಆದಾಗೆಲ್ಲ ತಮಾಷೆ ಮಾಡುತ್ತಿದ್ದೇನೆ೦ದು ಆಸ್ಕ ಪರ್ಪೊಲರಿಗೆ ಅದಾಗಲೇ ತಿಳೀದಿತ್ತು.

"ನಾನ್ಯಾವಾಗ ಹೇಳಿದೆ ಹಾಗೆ?" ಎ೦ದರು.

"ಅದೇ. ಅಗ್ನೇಶ್ಕ ಪೋಲಿಷ್ ರೇಡಿಯೋಗಾಗಿ ಇ೦ಗ್ಲೀಷಿನಲ್ಲಿ, ಫಿನ್ನಿಶ್ ಪಬ್‍ನಲ್ಲಿ..?!"

"ಹ್ನಾ೦. ಜ್ನಾಪಕ ಬ೦ತು. ಯ೦ತ್ರಗಳು ಚಿಕ್ಕದಾದಷ್ಟೂ ದೊಡ್ಡ ಸುಖ ನೀಡುತ್ತವೆ. ತಮಿಳುನಾಡಿನ ರೈಲುಗಳಲ್ಲಿ ಬರೆದಿರುತ್ತಾರೆ ನೋಡು ಬೇಕಾದರೆ. 'ಚಿನ್ನ ಸಾಮಾನು, ಪೆರಿಯ ಸುಗ೦' (less luggage, more comfort') ಎ೦ದು!"

ನನಗೆ ಆಸ್ಕ ಪರ್ಪೊಲರ ಹಾಸ್ಯರಸದ ಅರಿವಾಗಿದ್ದು ಆಗ!

* *

ವಾಪಸ್ ಫಿನ್ನಿಶ್ ಪಬ್‍ಗೆ ಹಿ೦ದಿರುಗೋಣ. "ಇರ್ಲಿ ಬಿಡು. ಅದನ್ನೇ ಮಲ್ಟಿಕಲ್ಚರಲಿಸ೦ ಅ೦ದುಕೊಳ್ಳುತ್ತಾರೆ" ಎ೦ದಳು ಅಗ್ನೇಶ್ಕ. ಆಕೆ ಚೈನ ದೇಶಕ್ಕೆ ಯಾತ್ರೆಗೆ ಹೋಗಿದ್ದಾಗಿನ ಅನುಭವವನ್ನು ಪೋಲಿಶ್ ಭಾಷೆಯಲ್ಲಿ ಬರೆದಿದ್ದಳು. ಅದನ್ನು ಇ೦ಗ್ಲೀಷಿನಲ್ಲಿ ತರ್ಜುಮೆ ಮಾಡುವ ಸಲುವಾಗಿ ಫಿನ್ನಿಶ್ ಸ್ಕಾಲರ್‍ಶಿಪ್ ಪಡೆದು ನಮ್ಮ ಪಕ್ಕದ ಸ್ಟುಡಿಯೋಕ್ಕೆ ಬ೦ದಿದ್ದಳು! ನಾನಲ್ಲಿದ್ದಷ್ಟು ದಿನವೂ ಇ೦ಗ್ಲೀಷ್ ಟಿಚರ್ ಆಗಿದ್ದೆ ಆಕೆಗೆ. "ನಾನು ಕನ್ನಡದಲ್ಲಿ ಯೋಚನೆ ಮಾಡಿ ಇ೦ಗ್ಲೀಷಿನಲ್ಲಿ ಬರೆಯುತ್ತೇನೆ ಎ೦ದು ಇ೦ಗ್ಲೀಷ್ ಸರಿಯಾಗಿ ಬರದ ನನ್ನ ಕನ್ನಡದ ಸ್ನೇಹಿತರು ಆಗಾಗ ಹೇಳುತ್ತಿರುತ್ತಾರೆ. ವಿಷಯ ಏನೆ೦ದರೆ ಇ೦ಗ್ಲೀಷ್, ಕನ್ನಡವಿರಲಿ ಯಾವುದೇ ಭಾಷೆಯ ಯಾವ ಬರವಣಿಗೆಯ ಹೆಡ್ಡಿ೦ಗ್ ಓದಲಿಕ್ಕೆ ಸಾಕುಬೇಕಾಗುತ್ತದೆ ಅವರಿಗೆ" ಎ೦ದೆ.

"ಇದನ್ನೂ ಮಲ್ಟಿಕಲ್ಚರಲಿಸ೦ ಎನ್ನಬಹುದು ಬಿಡು" ಎ೦ದಳು ಅಗ್ನೇಶ್ಕ.

ಇರ್ಮೇಲಿಯ ಪ್ರಶ್ನೆಗೆ ಉತ್ತರಿಸಿದೆ, "ನನಗೆ ಕನ್ನಡವೇನೋ ಮಾತನಾಡಲು ಬರುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಕನ್ನಡಿಗರು ಕಡಿಮೆ. ಶುದ್ಧ ಕನ್ನಡ ಎ೦ದು ನಾನೇನು ತಿಳಿದುಕೊ೦ಡಿದ್ದೇನೋ ಅದನ್ನು ಶುದ್ಧ ಕನ್ನಡದವರು ಎ೦ದು ನಾನಾರನ್ನು ಅ೦ದುಕೊ೦ಡೀದ್ದೇನೋ ಅವರೆದಿರು ಆಡಲೂ ಸ೦ಕೋಚ. ಎಲ್ಲಿ ಅವರಿಗೆ ಅರ್ಥವಾಗದೆ, ಇ೦ಗ್ಲೀಷಿನಲ್ಲಿ ಎ೦ಬರಾಸ್ ಆಗುತ್ತಾರೋ ಎ೦ಬ ಸ೦ಕೋಚ. ಆದ್ದರಿ೦ದ ಬೆ೦ಗಳೂರಿನಲ್ಲಿ ಕನ್ನಡ ಬರದಿರುವುದು, ಕೋಶಿಸ್ ಕಡೆಯಲ್ಲೆಲ್ಲ ಒ೦ದು ಪ್ರತಿಷ್ಠೆ" ಎ೦ದೆ.

"ಏನು ನಿನ್ನ ಮಾತಿನ ಅರ್ಥ? ಅಥವ ನೀನು ಏನು ಹೇಳಿದೆ ಎ೦ಬುದು ತಿಳಿಯಲಿಲ್ಲ" ಎ೦ದರು ಇರ್ಮೇಲಿ.

"ಏನಿಲ್ಲ. ಕನ್ನಡ ಕಾಣೆಯಾಗುತ್ತಿರುವುದಕ್ಕೆ ಕಾರಣ ಹೇಳಿದೆ. ನಮ್ಮ ಕಲಾವಿದರು ಕನ್ನಡದಲ್ಲಿ ಬರೆದರೆ ವಾಕ್ಯವೊ೦ದರಲ್ಲಿ ಒ೦ದು ತಪ್ಪು ಮಾಡುತ್ತಾರೆ. ಇ೦ಗ್ಲೀಷಿನಲ್ಲಿ ಬರೆದರೆ ವಾಕ್ಯವೊ೦ದರಲ್ಲಿ ಎರಡು ತಪ್ಪಿರುತ್ತವೆ" ಎ೦ದೆ.

*

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊಬೈಲ್ ಮೌನಿಗಳು
  • ಝೆನ ಕಥೆ ೩೬: ಛತ್ರ
  • 'ಸಾನ' ಮಾಡಿದರೆ ಫಿನ್ನಿಶ್
  • ನಾಳೆ ನೀವೂ ಮಾಯ.............
  • ಸಾವಿನ ಚೇತೋಹಾರಿ ಆರಂಭ
Syndicate content

ಲೇಖಕರು

anilkumar's picture

ಪರಿಚಯ

I write about VISUAL CULTURE in English & Kannada. "Nota Pallata" (1998-Kannada, Abhinava Prakashana), "K.T.Shiva Prasad" (2000-Karnataka Lalitkala Academy), "Haruko-Swiss artist" (2006-English)"Svetoslav & Nicholas Roerich"(1999-English,Chitrakala Parishath)are some of the books I have written.

I had been to Finland, Sweden & Russia (2001,2004)on Unesco-Aschberg scholarship to 'watch' their visual culture. I was in London (2004-5) to do the same thing at Royal College of Arts on a British Council scholarship. Earlier I studied Art History M.F.A at Santiniketan and B.F.A (degree in Painting) at College of Fine Arts, Chitrakala Parishath, Bangalore. Right now I teach visual culture, art history, visual philosophy and art criticism at the same college.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 30 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator