ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಉದ್ದಿನ ವಡೆ ಅಥವಾ ಮೆದು ವಡಾ ?

ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲೇ, ಅಲ್ಲಿ ಹೋಗೋಣ...ಟೇಸ್ಟು ಚೆನ್ನಾಗಿದೆ" ಅಂದ. ಸರಿ ನಡಿ ಅಂತಾ ಹೊರಟ್ವಿ.

"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ). ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.

ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.

ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.

"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,

ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.

ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"

ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.

ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"

ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"

ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"

ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"

ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"

ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"

ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"

ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"

ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"

ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"

ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.

ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.

ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.

ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?

ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.

ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.

ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Your rating: None Average: 3.3 (8 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನಿಮ್ಮ "ಕನ್ನಡ ಬಳಸಿ, ಕನ್ನಡ ಉಳಿಸಿ" ಘೋಷಣೆಯನ್ನು ನೀವೇ ಮೊದಲು ಪಾಲಿಸಿದರೆ ಉಚಿತ. ನಿಮ್ಮ ಬರಹದಲ್ಲಿ ಕೆಳಗೆ ಪಟ್ಟಿ ಮಾಡಿದ ಇಂಗ್ಲೀಷು ಪದಗಳನ್ನು ಮೊದಲು ಕನ್ನಡೀಕರಿಸಿ.
>>> ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ?

ಮೀಟ್
ಟೇಸ್ಟು
ಗ್ರೈಂಡರ್ ನನ್ ಮಕ್ಳು
ಕ್ಯಾಶ್ ಕೌಂಟರಿನಲ್ಲಿ
ಡಿಸೈಡ್
ಮೆನ್ನು ಬೋರ್ಡಿನ
ಚೇಂಜ್
Objection
ಪ್ರಾಬ್ಲಮ್
ಐಟಮ್ಮಾ
ಮೀಲ್ಸ್
Prominance
Suggestion
Atleast

ಉ: ಉದ್ದಿನ ವಡೆ ಅಥವಾ ಮೆದು ವಡಾ ?

vinideso's picture

ಬಾಳಿಗರೇ ,ಸೌತ್ ಎಂಡ್ ಸರ್ಕಲ್ ಕೂಡ ಆಂಗ್ಲ ಪದ ಅಲ್ವಾ ಏನಂತೀರಿ ? ;)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ಅದೂ ಅಲ್ದೆ ಇನ್ನಷ್ಟು ಇಂಗ್ಲಿಷ್ ಪದಗಳೂ ಇವೆ. ಹೋಟ್ಲು, ಪಾರ್ಕು, ಸರ್ಕಲ್ಲು.
ನನಗೆ ಅದರಲ್ಲೇನೂ ಅಭ್ಯಂತರವಿಲ್ಲ. ಅವರು ಬಳಸಲಿ ಬಿಡಿ. ಅವರೇ ಪ್ರತಿಪಾದಿಸುತ್ತಿರುವ ನಿಯಮವನ್ನು ಅವರೇ ಪಾಲಿಸುತ್ತಿಲ್ಲ ಎನ್ನುವುದಷ್ಟೇ ನನ್ನ ಅಭಿಪ್ರಾಯ.
ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಅನಾವಶ್ಯಕ ಅಸಹನೆಯನ್ನು ಎತ್ತಿ ತೋರಿಸುತ್ತಿದೆ ಈ ಬರಹ. ಮೊದಲು ಬೆಂಗಳೂರಿಗರು ಕರಗಿ ಹೋಗುತ್ತಿರುವ ತಮ್ಮ ಆಡು ಭಾಷೆಯನ್ನು ಸರಿ ಮಾಡಲಿ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

vinideso's picture

ನೀವು ಹೇಳುತ್ತಿರುವಂತೆ ಲೇಕನದ ಹಿಂದಿರುವ ಉದ್ದೇಶ ಉತ್ತಮವಾದದ್ದೇ .
ಆದರೆ ವಿವರಿಸುವುದರಲ್ಲಿ ಸ್ವಲ್ಪ ಎಡವಿದ್ದಾರೆ ಅಷ್ಟೇ ಅನ್ಸುತ್ತೆ .
ಆದರೆ ಲೇಕನದಲ್ಲಿ ಹೇಳಹೊರಟಿರುವ ಕನ್ನಡದ ಬಗೆಗಿನ ಕಾಳಜಿಗೆ ನನ್ನ ಬೆಂಬಲವಿದೆ .

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಅಲ್ರೀ ಬಾಳಿಗರೆ..
ನೀವು ದಿನನಿತ್ಯದಲ್ಲಿ ಮಾತಾಡುವಾಗ ಇಂಗ್ಲಿಷ್ ಪದ ಪ್ರಯೋಗ ಮಾಡೋದಿಲ್ವಾ?
ನಾನು ಆಡುಭಾಷೆ ಅಥವ ಮಾತನಾಡುವ ಶೈಲಿಯಲ್ಲಿ ಬರೆದರೆ ಅದು ಇನ್ನೂ ಪರಿಣಾಮಕಾರಿ (Effective) ಆಗಿ ಇರುತ್ತೆ ಅಂತಾ ಮಧ್ಯೆ ಮಧ್ಯೆ ಇಂಗ್ಲಿಷ್ ಪದಪ್ರಯೋಗ ಮಾಡಿರುವೆ.
ನಾನು ಹೇಳ ಹೊರಟಿರುವ ವಿಷಯವನ್ನು ಬಿಟ್ಟು ಬರೀ ನಾನು ಬರೆಯುವ ಶೈಲಿ ಬಗ್ಗೆ ಮಾತಾಡ್ತೀರಲ್ಲ.. ನಿಮ್ಮ ಈ ದೃಷ್ಟಿಯ ಬಗ್ಗೆ ಏನು ಹೇಳಬೇಕೋ ನನಗೆ ತೋಚುತ್ತಿಲ್ಲ.
ಇಂಥ ಒಂದು ಆಂತರಿಕ ಕಚ್ಚಾಟದಿಂದ ನಮ್ಮ ಕನ್ನಡ ಇನ್ನೂ ಹಿಂದುಳಿಯುತ್ತಾ ಇರೋದು.

ಬಿಡೀ, ಇದು ನೀವು ನಿಮ್ಮ ದೃಷ್ಟಿಕೋನದಿಂದ ಕೊಟ್ಟಿರುವ ಅಭಿಪ್ರಾಯ. ಇದರ ಬಗ್ಗೆ ನಾನು ಮಾತನಾಡಬಾರದು.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನಿಮ್ಮ ಕನ್ನಡ ಹೋರಾಟದ ಬಗ್ಗೆ ನಿಮ್ಮಲ್ಲೇ ಸಾಕಷ್ಟು ಗೊಂದಲ ಇದೆ. ಅದನ್ನು ಮೊದಲು ನಿವಾರಿಸಿಕೊಳ್ಳಿ. ಆ ಬಳಿಕ ಚರ್ಚೆ ಮಾಡೋಣ. :) ಅಲ್ಲಿಯವರೆಗೆ ಶುಭಾಶಯಗಳು.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಬಾಳಿಗರೆ..
ದಯವಿಟ್ಟು ನಿಮ್ಮ ಈ ಒಂದು ಯೋಚನಾ ರೀತಿ ನಂಗೆ ಅರ್ಥ ಆಗ್ಲಿಲ್ಲ.
ಇನ್ನು ನೀವು ಕಳಿಸಿರುವ Banglish Kanglish ರೀತಿಯಂತೂ ಖಂಡಿತ ನನ್ನ ಭಾಷೆಯಲ್ಲಾ.
ಹುಟ್ಟೂ ಮೈಸೂರಿಗ. ಆದ್ದರಿಂದ ಇವತ್ತಿಗೂ ಬೆಂಗಳೂರಿನಲ್ಲಿ ನನ್ನನ್ನು ಕೇಳುತ್ತಾರೆ. ನೀವು ಮೈಸೂರಿನವರಾ ಸಾರ್.
ನಿಮ್ಮ ಭಾಷೆ ಬೆಂಗಳೂರಿನ ಮಂದಿಯ ಹಾಗಿಲ್ಲ ಅಂತ.
ಲೇಖನಗಳಲ್ಲಿ ಮಧ್ಯೆ ಮಧ್ಯೆ ಇಂಗ್ಲಿಷ್ ಪದ ಸೇರಿಸಿ ಬರೆಯುವುದು ನನ್ನ ಶೈಲಿ. ಇದನ್ನು ನೀವು ನನ್ನ ಕನ್ನಡಾಭಿಮಾನದ ಬಗ್ಗೆ
ಬೆರಳೆತ್ತುವ ಅವಶಯಕತೆ ಇಲ್ಲಾ. ನಾನು ಹೇಳಹೊರಟಿರುವ ವಿಚಾರದ ಬಗ್ಗೆ ಯೋಚನೆ ಮಾಡಿ. ನನ್ನ ಬಗ್ಗೆ ಅಲ್ಲ.
ನನ್ನ ಕನ್ನಡಾಭಿಮಾನ ಏನು ಎಂದು ನನಗೆ ಗೊತ್ತು. ಅದನ್ನ ನಿಮಗೆ ಮನದಟ್ಟು ಮಾಡುವ ಯವುದೇ ಉಮೇದು ನನಗೆ ಇಲ್ಲ.
ನಿಮ್ಮ ವಿಮರ್ಶೆ ಗೆ ಧನ್ಯವಾದಗಳು.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ತಿಂಡಿಯ ಹೆಸರಿನಲ್ಲಿ ತೋಳೇರಿಸಿ ಕನ್ನಡ ಉಳಿಸ ಹೊರಟವರು ಆಡು ಭಾಷೆಯ ಉಳಿವಿಗಾಗಿ ತಮ್ಮ ಶ್ರಮವನ್ನು ತೊಡಗಿಸಬೇಕು. ಬೆಂಗಳೂರಿನ ಕನ್ಲಿಶ್ ಬಗ್ಗೆ ಹಂಸಾನಂದಿ ಬರೆದಿರುವ ಈ ಲೇಖನ ಓದಿ. ಹಾಂ... ಅದು ಈಗಾಗಲೇ ಫ್ಲಾಗ್ ಆಗಿದೆ. ಅಸಹನೆ :)
http://sampada.net/b...

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ನೋಡಿ ಬಾಳಿಗರೆ..
ನನ್ನ ಆಡುಭಾಷೆಯಲ್ಲಿ ಇಂಗ್ಲಿಷ್ ಸೇರಿದೆ ಅಂದ್ರೆ ನಿಜ.
ಆದರೆ ನೀವು ಈ ರೀತಿ ಮಾತನಾಡದೆ ಇದ್ದ ಪಕ್ಷದಲ್ಲಿ ಮಾತ್ರ ನನ್ನನ್ನು Crticize ಮಾಡೋ ನೈತಿಕ ಹಕ್ಕು ಇರುತ್ತದೆ.
ಇನ್ನು ಬರೀ ಹೋಟೆಲಿನ ಮೆನು ಕನ್ನಡದ ಬಗ್ಗೆ ತೋಳೇರಿಸಿ ಹೊರಟಿದೀನಿ ಅನ್ನೋ ನಿಮ್ಮ ಪ್ರತಿಕ್ರಿಯೆ, ನನ್ನ ಈ ಒಂದು ಅನುಭವವನ್ನು ವ್ಯಂಗ್ಯವಾಗಿ
ವಿಮರ್ಶಿಸಿದೀರ.
ನೀವು ಮಾತನಾಡೋ ಕನ್ನಡದಲ್ಲಿ ಆಂಗ್ಲ ಪದಗಳು ಮಿಶ್ರವಿಲ್ಲವೇ ?

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನೋಡೀ ಶಂಕ್ರ,
>>> ಆದರೆ ನೀವು ಈ ರೀತಿ ಮಾತನಾಡದೆ ಇದ್ದ ಪಕ್ಷದಲ್ಲಿ ಮಾತ್ರ ನನ್ನನ್ನು Crticize ಮಾಡೋ ನೈತಿಕ ಹಕ್ಕು ಇರುತ್ತದೆ.
ನಿಮ್ಮ ಈ ನಿಯಮವನ್ನು ಆ ನಿಮಗೂ ಅನ್ವಯಿಸಿದರೆ ನೀವು ತಿಂಡಿಯ ಹೆಸರಿನ ಬಗ್ಗೆ "ದಬಾಯಿಸಿದ್ದು" ನಿಮ್ಮ ಯಾವ ನೈತಿಕ ಹಕ್ಕಿನಿಂದ ? :)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ನಾನು ತಿಂಡೀಯನ್ನು ನಮ್ಮ ಭಾಷೆಯಲ್ಲಿ ಹೆಸರು ಹಾಕಿ ಎಂದು ದಬಾಯಿಸಿದ್ದು.
ಅದನ್ನು ಕೇಳುವ ನೈತಿಕ ಹಕ್ಕು ನನಗೆ ಇದೆ. ಏಕೆಂದರೆ ಭಾಷೆಯ ಬಗ್ಗೆ ನನಗೆ ಗೌರವ ಇದೆ.
ಆದ್ದರಿಂದ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನಿಮ್ಮ ಭಾಷೆಯ ಬಗೆಗಿನ ಗೌರವ ತಿಂಡಿಯ ಹೆಸರಿಗಷ್ಟೇ ಸೀಮಿತ ಎನ್ನುವುದನ್ನೇ ನಾನು ನನ್ನ ಪ್ರತಿಕ್ರಿಯೆಯಲ್ಲಿ ಹೇಳಿದ್ದು.
ಅದರಲ್ಲೂ "ದಬಾಯಿಸುವುದು" ಒಂದು ನಾಗರಿಕ ವರ್ತನೆಯಲ್ಲ. ಗೂಂಡಾಗಿರಿ. :)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ರೀ... ನಿಮ್ಮ ಈ ಬಾಲಿಶವಾದ ಯೋಚನೆ ಬಗ್ಗೆ ನನ್ನ ಸಂತಾಪವಿದೆ.
ನನ್ನ ಭಾಷಾಭಿಮಾನ ಬರೀ ತಿಂಡಿಯ ಬಗ್ಗೆ ಇದೆ ಎನ್ನುವುದು ನಿಜಕ್ಕೂ ನಿಮ್ಮ ಯೋಚನಾ ಮಟ್ಟವನ್ನು ತೋರಿಸುತ್ತದೆ.
ಇನ್ನು ದಬಾಯಿಸುವುದು ಗೂಂಡಾಗಿರಿ ಎನ್ನುವುದಾದರೆ, ನೀವು ಯಾವ ರೀತಿ ಇದೀರ ??
ಯಾರ ಮೇಲೂ ದಬಾಯಿಸಿಲ್ಲವೆ ನೀವು ? ಸುಮ್ಮನೆ ಕಮೆಂಟು ಮಾಡುವ ಉಮೇದಿಗೆ, ಕೈ ಕಡಿತ ತೀರಿಸಿಕೊಳ್ಳುವ ಚಪಲಕ್ಕೆ ಕಮೆಂಟು ಮಾಡಬೇಡಿ.
ಏನು ಹೇಳ್ತಾ ಇದೀರಾ ಅನ್ನೋದು ಸ್ವಲ್ಪ ಗಮನದಲ್ಲಿ ಇರಲಿ.
Be Sensible

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನಿಮ್ಮ ಗೂಂಡಾಗಿರಿ ಇಲ್ಲಿಯೂ ಮುಂದುವರೆದಿದೆ. :)
ದಯವಿಟ್ಟು ಶಾಂತರಾಗಿ. ಅಸಹನೆ ಒಳ್ಳೆಯದಲ್ಲ. :)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಅಸಹನೆ ಪಡದೆ ಇನ್ನೇನು ಮಾಡಬೇಕು ?
ನೀವು ನನ್ನನ್ನು ಗೂಂಡಾ ಎಂದು ಕರೆದರೆ ಇನ್ನೇನು ಮಾಡ್ಲಿ ?
ನಿಮ್ಮ ಬೌದ್ಧಿಕ ಮಟ್ಟ ಯಾವ ರೀತ್ಯಾಗಿದೆ ಎನ್ನೋದು ತೋರಿಸುತ್ತೆ.
ದಬಾಯಿಸೋದು ಗೂಡಾಗಿರಿಯಾದರೆ ಎಲ್ರೂ ಗೂಂಡಾಗಳೇ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ನೋಡಿ ಶಂಕ್ರ.
ಕನ್ನಡ ಉಳಿಸಬೇಕು ಎನ್ನುವ ಪ್ರಶ್ನೆ ಎತ್ತಿದ್ದು ನೀವು. ಸರಿ. ಆ ಕಾಳಜಿ ನಿಮ್ಮ ಬರಹದ ಭಾಷೆಯಲ್ಲೇ ಇರಲಿಲ್ಲ ಎಂದು ನನ್ನ ಪ್ರತಿಕ್ರಿಯೆ.
ಅಷ್ಟೇ. ಶಾಂತರಾಗಿ. :)
ನಿಮ್ಮನ್ನು ಗೂಂಡಾ ಎನ್ನಲಿಲ್ಲ ನಿಮ್ಮ ವರ್ತನೆಯನ್ನು ಗೂಂಡಾಗಿರಿ ಎಂದೆ. :) ನೋವಾಗಿದ್ದರೆ ಕ್ಷಮಿಸಿ. :)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ನನ್ನ ವರ್ತನೆಯನ್ನು ಗೂಂಡಾಗಿರಿ ಎಂದರೆ, ನಾನು ಗೂಂಡಾ ಎಂದಾಯ್ತು.
ಕನ್ನಡ ಈ ರೀತಿಯಾಗಿ ಕಡೆಗಾಣಿಸಲ್ಪಡುವುದರ ಬಗ್ಗೆ ಕಾಳಜಿ ಇದ್ದದ್ದಕ್ಕೇ ಹೀಗೆ ನಾನು ಹೋಟೆಲಿನಲ್ಲಿ ಕೇಳಿದ್ದು, ದಬಾಯಿಸಿದ್ದು.
ಇನ್ನು ನಾನು ಅಲ್ಲಿ ಮಾತಾಡಲು ಶುರು ಮಾಡಿದ ಮೇಲೆ ಅಕ್ಕ ಪಕ್ಕದ ಸುಮಾರು ಜನ ಬಂದು ದನಿಗೂಡಿಸಿದರು.
ಯಾಕೆ ??? ನಾನು ಮಾತನಾಡುವ ಮುಂಚೆ ಇದು ಇರಲಿಲ್ಲವೇ ? ಒಬ್ಬ ಮಾತಾಡಲು ಶುರು ಮಾಡಿದ ಮೇಲೆ ಬರುವ ಹೋರಾಟಗಾರರು.
ನೀವೂ ಕೂಡಾ ಈ ಗುಂಪಿಗೆ ಸೇರುತ್ತೀರ. ನನ್ನ ಪ್ರಕಾರ ನನ್ನ ಭಾಶಾಭಿಮಾನಕ್ಕೂ ನಾನು ಬರೆಯುವ ಶೈಲಿಗೂ ಯಾವುದೇ ಕನೆಕ್ಷನ್ ಇಲ್ಲ.
ಬರೆಯುವ ಶೈಲಿ ಒಂದು ಮಾಧ್ಯಮ ಮಾತ್ರ. ನನ್ನ ಯೋಚನೆ, ಭಾವನೆ ಹಾಗು ನನ್ನ ವಿಚಾರಗಳನ್ನು ಜನರಿಗೆ ಆದಷ್ಟು ಪರಿಣಾಮಕಾರಿಯಾಗಿ ತಲುಪಿಸುವ ವಿಧಾನ.
ಇದನ್ನು ನೀವು ಅರ್ಥ ಮಾಡಿಕೊಂಡಿಲ್ಲ ಅಷ್ಟೆ. ಇನ್ಮೇಲೆ ಒಬ್ಬ ಮನುಷ್ಯನ ಭಾಷಾಭಿಮಾನವನ್ನು ಆತನ ಲಿಖಿತ ಭಾಷೆಯ ಮೇರೆಗೆ ತೀರ್ಮಾನಿಸಬೇಡಿ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ಶಂಕರ್ - ನೀವು ಏನು ಹೇಳೋದಿಕ್ಕೆ ಹೊರಟಿದ್ದೀರಾ ಅನ್ನೋದು ತಿಳೀತಾನೇ ಇಲ್ಲ. ನಾನು ಹೀಗೆ, ನನ್ನ ಶೈಲಿ ಹೀಗೆ ಅನ್ನೋ ತರಹಾನೇ ಆ ಹೋಟೆಲಿನವರು ಕೂಡಾ ಅದನ್ನೇ ಮಾತನಾಡಬಹುದಲ್ಲವೇ? ಅದರ ಬದಲು ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ನಿಮ್ಮ ಬರವಣಿಗೆಯಲ್ಲಿ ಕನ್ನಡತನವನ್ನು ಉಳಿಸಿಕೊಂಡಿದ್ದರೆ, ನಿಮ್ಮ ಬರವಣಿಗೆಯ ಉದ್ಧೇಶವೂ ಸಾರ್ಥಕವಾಗುತ್ತಿತ್ತು. ಭಾಷೆಗೆ ಮಾತನಾಡುವ ಭಾಷೆ, ಲಿಖಿತ ಭಾಷೆ, ಓದುವ ಭಾಷೆ ಎಂದು ವಿಂಗಡನೆ ಮಾಡಲಾಗುತ್ತದೆಯೇ? ನಿಮ್ಮ ಲಿಖಿತ ಭಾಷೆ, ನಮಗೆ ಓದುವ ಭಾಷೆಯಲ್ಲವೇ? (ಹೇಗೆ ಹೋಟೆಲಿನವನ ಲಿಖಿತ ಭಾಷೆ ನಿಮಗೆ ಓದುವ ಭಾಷೆಯಾಯಿತೋ, ಅದೇ ರೀತಿ) ನನಗೂ ಕೂಡ ಅಷ್ಟಾಗಿ ಕನ್ನಡ ಪದಗಳು ಪಕ್ಕನೆ ನೆನಪಾಗುವುದಿಲ್ಲ. ಸಂಪದದ ಉದ್ಧೇಶವೇ ಕನ್ನಡವನ್ನು ಉಳಿಸುವುದು, ಬೆಳೆಸುವುದು ಆಗಿರುವಾಗ, ನಾವು ಸಂಪದದಲ್ಲಿ ಬರೆಯುವಾಗ ಕನ್ನಡ ಪದಗಳನ್ನೇ (ನೆನಪಾಗದಿದ್ದರೂ, ನೆನಪು ಮಾಡಿಕೊಂಡು) (ನಮ್ಮ ಶೈಲಿಯಲ್ಲದಿದ್ದರೂ, ಓದುಗರಿಗಾಗಿ) ಬಳಸಬೇಕಲ್ಲವೇ? ಅದು ಬಿಟ್ಟು ಭಾಷಾಭಿಮಾನಕ್ಕೂ, ಬರೆಯುವ ಶೈಲಿಗೂ ಸಂಬಂಧವೇ ಇಲ್ಲ ಎನ್ನುವುದು ವಿತಂಡವಾದವಲ್ಲವೇ?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಇಲ್ಲಿ ಎಲ್ಲರೂ ಹೇಗೆ ಮಾತಾಡ್ತಾ ಇದಾರೆ ಎಂದರೆ, ಯಾರೂ ಕಂಗ್ಲಿಶ್ ಪ್ರಯೋಗ ಮಾಡೋದೇ ಇಲ್ಲವೆನ್ನುವ ರೀತಿ.
ನಾನು ಬೆಂಗಳೂರಿನ ಹೋಟೆಲಿನಲ್ಲಿ ಉದ್ದಿನ ವಡೆಯನ್ನು ಮೆದು ವಡೆ ಎನ್ನುವುದರ ಬಗ್ಗೆ ಆಕ್ಷೇಪಣೆ ತೋರಿಸಿದೆ.
ಅದನು ಹೇಳಿದ್ದು ಕಂಗ್ಲಿಶಿನಲ್ಲಿ. ಈ ಕಾರಣಕ್ಕೆ ನನ್ನ ವಿಚಾರವನ್ನು ವಿತಂಡವಾದ , ಗೂಂಡಾಗಿರಿ ಇತ್ಯಾದಿ ಬಿರುದು ಸಿಕ್ಕಿದೆ.
ಈ ರೀತಿಯಾದ Motivation ಇದ್ರೆ ಯಾರಿಗೆ ಈ ವಿಚಾರವಾಗಿ ಮಾತನಾಡಬೇಕು ಎನಿಸುತ್ತದೋ ?
ಎಲ್ರೂ ಪೇಪರ್ ಟೈಗರ್ ಗಳೇ.

ಬಿಟ್ಟಾಕಿ. ಇದನ್ನು ಬರೆದು ತಪ್ಪು ಮಾಡಿದೆ ಅನ್ನುಸ್ತಾ ಇದೆ ನನಗೆ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ಇಲ್ಲಿ ಯಾರೂ ಹೋಟೆಲಿನವನನ್ನು ದೂಷಿಸಿದ್ದು ತಪ್ಪು ಅನ್ನುತ್ತಿಲ್ಲ. ಆತ ಉದ್ದಿನ ವಡೆಯನ್ನು ಮೆದು ವಡೆ ಎಂದದ್ದು ತಪ್ಪೇ. ಎಲ್ಲರೂ ಒಪ್ಪುತ್ತೇವೆ. ಆದರೆ ಕನ್ನಡದ ಬಗ್ಗೆ ಅಷ್ಟು ಕಾಳಜಿ ಇರುವವರು, ಕನ್ನಡವನ್ನು ಮಾತಾಡುವಾಗಲೂ, ಬರೆಯುವಾಗಲೂ ಕನ್ನಡವನ್ನೇ ಬಳಸಿ ಎನ್ನುತ್ತಿದ್ದೇವೆ. ಕಂಗ್ಲೀಶಿನ ಬಳಕೆ ಏಕೆ ಬೇಕು? ಕಂಗ್ಲೀಶಿನ ಬಳಕೆ ನಿಮಗೆ ಇಷ್ಟವಾದರೆ, ಹೋಟೆಲಿನವನ ಬಗ್ಗೆ ದೂಷಣೆ ಮಾಡುವ ನೈತಿಕ ಹಕ್ಕು ನಿಮಗೆಲ್ಲಿ ಇರುತ್ತದೆ? ಈಗ ನಾನು ನಿಮ್ಮೊಂದಿಗೆ ಮಾತನಾಡುವಾಗ ಹಿಂದಿ ಮಿಶ್ರಿತ ಕನ್ನಡವನ್ನೋ, ತಮಿಳು ಮಿಶ್ರಿತ ಕನ್ನಡವನ್ನೋ ಮಾತಾನಾಡುವುದು ತಪ್ಪಾದರೆ, ಆಂಗ್ಲ ಮಿಶ್ರಿತ ಕನ್ನಡವೂ ಕೂಡ ತಪ್ಪಲ್ಲವೇ?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ನೀವು ಈಗ ನನ್ನನ್ನು ವಿಮರ್ಶಿಸಬೇಕಾದರೆ ಕನ್ನಡ ಉಪಯೋಗಿಸುತ್ತಾ ಇದೀರ. ಇನ್ನು ಆಡುಭಾಷೆಯಲ್ಲಿ ನೀವು ಕಂಗ್ಲಿಷ್ ಉಪಯೋಗಿಸೋದಿಲ್ಲವೆ ?
ನೀವು ಹಾಗೆ ಮಧ್ಯೆ ಮಧ್ಯೆ ಇಂಗ್ಲಿಷ್ ಪದಪ್ರಯೋಗ ಮಾಡಿದರೆ, ನನ್ನನ್ನು ವಿಮರ್ಶಿಸುವ ನೈತಿಕ ಹಕ್ಕು ನಿಮಗೆ ಇರುತ್ತದೆಯೆ ?
ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ಖಂಡಿತ ಇರುವುದಿಲ್ಲ. ಹಾಗಾಗಿಯೇ ನಾವು ಕೂಡಾ ಹೇಳಿದ್ದು ನಿಮ್ಮ ಬರವಣಿಗೆಯಲ್ಲಿನ ಆಂಗ್ಲ ಪದಗಳನ್ನು ತೆಗೆದು ಕನ್ನಡದಲ್ಲಿ ಬರೆದರೆ ಈ ಬರವಣಿಗೆಯ ಉದ್ಧೇಶಕ್ಕೆ ಒಂದು ಅರ್ಥ ಸಿಗುವುದು. ಕನಿಷ್ಟ ಪಕ್ಷ ಈ ಒಂದು ಬರವಣಿಗೆಯಲ್ಲಿ ಕನ್ನಡ ಪದಗಳನ್ನು ಮಾತ್ರ ಉಪಯೋಗಿಸಿ ನೀವು ಬರೆದಿದ್ದರೆ ಇನ್ನೂ ಹಲವರಿಗೆ ಕಂಗ್ಲೀಶ್ ನ ಬಳಕೆ ತಪ್ಪು ಎಂದರಿವಾಗಬಹುದು. ನೀವು ಕಂಗ್ಲೀಷ್ ಸರಿ ಎಂದು ವಾದ ಮಾಡುವಿರಾದರೆ, ಆ ಹೋಟೆಲಿನವನು ಬರೆದದ್ದು ಕೂಡಾ ತಪ್ಪಲ್ಲ. ಎಲ್ಲರೂ ಇದು ನಮ್ಮ ಶೈಲಿ, ನಮ್ಮ ಶೈಲಿ, ಎಂದು ಕಂಗ್ಲೀಶ್, ತಮಿಳ್ಗನ್ನಡ, ಬಳಸುತ್ತಾ ಹೋದರೆ, ಕನ್ನಡ ಉಳಿಯುವುದು ಹೇಗೆ?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ನಾನು ಹೇಳ ಹೊರಟಿದ್ದು ತಮ್ಮ ವ್ಯಾಪರಕ್ಕೆ ಅನ್ಯಭಾಶಿಕರನ್ನು ಸೆಳೆಯಲು ಅವರಿಗೆ ಮಣೆ ಹಾಕುವುದಕ್ಕೆ ಕನ್ನಡವನ್ನು ಕಡೆಗಾಣಿಸುವ ಅವರ ವರ್ತನೆಯ ಬಗ್ಗೆ.
ಇದು ಖಂಡನಾರ್ಹ ಎನ್ನುವುದು ನನ್ನ ಅಂಬೋಣ. ಇದನ್ನು ನಾನು ಕಂಗ್ಲಿಶಿನಲ್ಲಿ ಹಾಕಿದ್ದು. ಮಾತಾಡಿದ್ದನ್ನು ಯಥಾವತ್ತಾಗಿ ಹಾಕಿರುವೆ.
ಮಾತಾಡುವಾಗ ಕಂಗ್ಲಿಷು, ಅದನ್ನು ಬರವಣಿಗೆಯ ರೂಪದಲ್ಲಿ ಅಚ್ಚ ಕನ್ನಡದಲ್ಲಿ ಹಾಕಿದರೆ ನಾನು ಭಾಶಾಭಿಮಾನಿ ಆಗ್ತಾ ಇದ್ನಾ ?
ನಾನು ಕಂಗ್ಲಿಷಿನಲ್ಲಿ ಕನ್ನಡಾಭಿಮಾನದ ಬಗ್ಗೆ ಬರೆಯುವುದನ್ನು ಡಬಲ್ ಸ್ಟಾಂಡರ್ಡ್ ಎನ್ನುವುದಾದರೆ, ಕಂಗ್ಲಿಷಿನಲ್ಲಿ ದಿನಪೂರ್ತಿ ಮಾತಾಡಿ, ಅಚ್ಚ ಕನ್ನಡದಲ್ಲಿ ಭಾಶಭಿಮಾನದ ಬಗ್ಗೆ, ಕಂಗ್ಲಿಷ್ ವಿರುದ್ಧ ಬರೆದರೆ ಅದು ಕೂಡಾ ಡಬಲ್ ಸ್ಟಾಂಡರ್ಡ್ ಆಗಲಿಲ್ಲವೇ ಇಂಚರ ಅವರೆ ?
ಹೀಗೆ ಮಾಡುವವರ ಕನ್ನಡಾಭಿಮಾನದ ಬಗ್ಗೆ ನಾನು ಕೂಡಾ ಬೊಟ್ಟೂ ಎತ್ತಬಹುದು ಅಲ್ಲವೆ? ಇನ್ನು ಈ ರೀತಿ ಇದ್ದಾಗ ನೈತಿಕ ಹಕ್ಕಿನ ಬಗ್ಗೆ ಮಾತಾಡಲೂ ನಮಗೆ ಹಕ್ಕು ಇರುವುದಿಲ್ಲ ತಾನೆ ?

ಇದು ನಿಮಗೂ ಅನ್ವಯಿಸುತ್ತದೆ :)

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ಈ ಪ್ರತಿಕ್ರಿಯೆ ಪೂರ್ತಿಯಾಗಿ ಕನ್ನಡದಲ್ಲಿಯೇ ಇದೆ. ಧನ್ಯವಾದಗಳು. (ಒಂದು ಪದ ಬಿಟ್ಟು - ಡಬಲ್ ಸ್ಟಾಂಡರ್ಡ್ - ಇಬ್ಬಗೆ ನೀತಿ)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಹೂಂ ಇಂಚರ ಅವರೇ... ಡಬಲ್ ಸ್ಟಾಂಡರ್ಡ್ ಅನ್ನೋ ಪದದ ಕನ್ನಡದ ಅವತರಣೆ ಕೂಡಾ ಗೊತ್ತು.
ನಾನು ಹೇಳಿದ ವಿಚಾರ ನಿಮಗೆ ಸಮ್ಮತವೋ ಇಲ್ಲವೋ ಹೇಳಿ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ಶಂಕ್ರ..

ನಿಮ್ಮೆಲ್ಲಾ ಮೇಲಿನ ಪ್ರತಿಕ್ರಿಯೆಯಲ್ಲಿ ನೀವೇ ಹೇಳಿಕೊಂಡಂತೆ ನೀವು ಆಡು ಮಾತಿನಲ್ಲಿ ಸಾಕಷ್ಟು ಇಂಗ್ಲಿಷ್ ಪದಗಳನ್ನು ಬಳಸುತ್ತಿರಾ. ನಿಮ್ಮ ಬರಹದಲ್ಲೂ ಸಾಮಾನ್ಯ ಬಳಕೆಯ ಕನ್ನಡ ಪದಗಳಿಗೂ ಇಂಗ್ಲಿಷ್ ಪದಗಳನ್ನು ಬಳಸಿದ್ದೀರಿ. (suggestion, objection, atleast, ಇತ್ಯಾದಿ..)
ಬರಹದಲ್ಲಿ ವಿವರಿಸುವ ಘಟನೆಯು ಕನ್ನಡದ ಪದಗಳನ್ನು, ಹೆಸರುಗಳನ್ನು ಬಳಸುವ ವಿಷಯಕ್ಕೆ ನಡೆದಿದೆ.
ಆದ ಕಾರಣ ನಿಮ್ಮ ಕನ್ನಡ ಬಳಕೆಯ ನಿಯಮವು ನಿಮ್ಮ ಸ್ವಂತಕಲ್ಲ ಪರರಿಗೆ ಮಾತ್ರ ಅನ್ವಯಿಸುತ್ತದೆ ಎನ್ನುವ ನಿಲುವನ್ನು ಹೊಂದಿದ್ದೀರಿ. ಮತ್ತದದನ್ನು ಮತ್ತೆ ಮತ್ತೆ ನಿಮ್ಮ ಪ್ರತಿಕ್ರಿಯೆಗಳಲ್ಲಿ ಅಸಹನೆಯಿಂದ ವ್ಯಕ್ತ ಪಡಿಸಿದ್ದೀರಿ.
ಮತ್ತೊಮ್ಮೆ.. ನಿಮ್ಮ ಕನ್ನಡ ಹೋರಾಟದ ಬಗ್ಗೆ ನಿಮ್ಮಲ್ಲಿ ಗೊಂದಲಗಳಿವೆ. :) ಶಾಂತವಾಗಿ ಚರ್ಚಿಸಿ. :)

ಇನ್ನು ದಬಾಯಿಸುವಿಕೆ ನಾನು ಮಾಡಿದರೂ ನೀವು ಮಾಡಿದರೂ ಅದು ಅಸಭ್ಯವೂ ಅನಾಗರಿಕವೂ ಆದ ವರ್ತನೆ. ಅದನ್ನು ಆಡು ಮಾತಿನಲ್ಲಿ ಗೂಂಡಾಗಿರಿ ಎನ್ನುತ್ತಾರೆ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ದಬಾಯಿಸುವುದು ಗೂಂಡಾಗಿರಿ ಅಲ್ಲಾ.
ನಮ್ಮ ವಿಚಾರವನ್ನು ಮನದಟ್ಟು ಮಾಡಿಸಲು ಸ್ವಲ್ಪ ಏರು ದನಿಯಲ್ಲಿ ಮಾತಾಡಿದರೆ ಅದು ಗೂಂಡಾಗಿರಿ ಆಗೋದಿಲ್ಲಾ.
ನನ್ನ ನಿಮ್ಮ ವಿಚಾರಗಳಲ್ಲಿ ಬಹಳ ಅಂತರವಿದೆ.
ಸುಮ್ನೆ ಕಿತ್ತಾಟ ಬೇಡ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ಕೊನೆಗೆ..
ಭಾಷಾ ಅಭಿಮಾನ, ಗೌರವ, ಕಾಳಜಿ ಇವೆಲ್ಲ ಸ್ವಂತ ಆಚರಣೆಯಲ್ಲಿ ಪ್ರತಿಪಾದಿಸಬೇಕಾದ ವಿಚಾರಗಳು.
ಪರರ ಮೇಲೆ ದಬಾಯಿಸುವುದರಿಂದಲ್ಲ.
ಧನ್ಯವಾದಗಳು. :)

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಬಿಡಿ ಸ್ವಾಮಿ.
ನಿಮ್ಮ ಹಾಗು ನನ್ನ ವಿಚಾರಗಳಲ್ಲಿ ಬಹಳ ಅಂತರವಿದೆ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

ಸರಿ..

ಉ: ಉದ್ದಿನ ವಡೆ ಅಥವಾ ಮೆದು ವಡಾ ?

somayaji's picture

ಇಬ್ಬರು ಭಾಷಾಭಿಮಾನಿಗಳು ಸೇರ್ಕೊಂಡು ಕನ್ನಡವನ್ನು ಉಳಿಸೋದರೆ ಬಗ್ಗೆ ಎರಡು ದೃಷ್ಟಿಕೋನಗಳಲ್ಲಿ ಒಂದೆ ವಿಷಯವನ್ನು ಚರ್ಚಿಸುತ್ತಾ ಇದ್ದೀರ..
ಗುರು ಹೇಳಿರೋದ್ರಲ್ಲಿ ಅರ್ಥ ಇದೆ.. ಇಂಗ್ಲಿಶ್ ಬೇಕೇ ಬೇಕು.. ಇಂಗ್ಲಿಶನ್ನ ಸರಿಯಾಗಿ ಕಲಿಯೋಣ.. ಕನ್ನಡದ ಬಗ್ಗೆ ಅಭಿಮಾನ ಇರ್ಲಿ. ಆದ್ರೆ ಕಂಗ್ಲಿಶ್ ಮಾಡಿ ಕನ್ನಡವನ್ನು ಅಧ್ವಾನ ಮಾಡುವುದಕ್ಕೆ ನನ್ನ ಆಕ್ಷೇಪ ಇದೆ..
ಭಾಷೆಯ ಜೊತೆ ಸಂಸ್ಕ್ರತಿ ಬೆಸೆದುಕೊಂಡಿರುತ್ತಂತೆ.. ಕನ್ನಡದಲ್ಲಿ ಸಂಸ್ಕೃತದ ಪದಗಳೆಷ್ಟೊ.. ಆದ್ರೆ ಇವು ಯಾವುವೂ ನಮಗೆ ಹೊರಗಿನಂತೆ ಅನಿಸಲೇ ಇಲ್ಲ(ಇದು ನನ್ನ ಅನಿಸಿಕೆ). ಆದ್ರೆ ಯಾವಾಗ ನಮ್ಮ ಭಾಷೆಯ ಆಡುನುಡಿಗಳನ್ನು ಬೇರೆ ಭಾಷೆಯಲ್ಲಿ ಹೇರಲು ಪ್ರಯತ್ನಿಸುತ್ತಾರೊ, ಆಗ ನಮ್ಮೊಳಗಿನ ಅಹಂ ಗೆ ಪೆಟ್ಟು ಬೀಳುವುದು ಸಹಜ.. ಆಗ ಇಂತಹ ಸಂಘರ್ಷಗಳು ಅವಶ್ಯಕ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

mavipra's picture

ನಿಮ್ಮ ಮಾತು ನೂರುಪಟ್ಟು ನಿಜ. ಭೋಧಿಸುವುದು ನೀರು, ಕುಡಿಯುವುದು ಹೆಂಡ.
ಲೇಖಕ ಬಳಸಿರುವ ಎಲ್ಲಾ ಪರಭಾಷೆಯ ಮಾತುಗಳಿಗೆ ಸಾಕಷ್ಟು ಕನ್ನಡ ಪದಗಳುಂಟು.
ಕೆಲವು ಮಾತುಗಳಂತೂ ಅತಿ ಸಾಮಾನ್ಯವಾದ ಬಳಕೆಯಲ್ಲಿರುವ ನುಡಿಗಳು.
ಅದೇ ರೀತಿ ಇಂಗ್ಲೆಂಡ್ ನಲ್ಲಿ ಬೆರಕೆ ಭಾಷೆಯಲಿ ಮಾತನಾಡಿದರೆ ....?
ಸ್ವಚ್ಛ ಸವಿಗನ್ನಡ ಬರೆಯಲು ತೊಂದರೆ ಏನು?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಅಲ್ಲಾ ಸ್ವಾಮಿ ಮಹೇಂದ್ರ ವಿಜಯ ಅವರೆ,

ಕೊಂಕಣ ಸುತ್ತಿ ಮೈಲಾರಕ್ಕೆ ಬರೋ ಹಾಗೆ ಪುನಃ ನನ್ನ ಬರವಣಿಗೆ ಬಗ್ಗೆ ತಕರಾರು ತೆಗೀತಾ ಇದೀರಲ್ಲಾ.. ನಾನು ಮುಂಚೆಯೇ ಹೇಳಿದ ಹಾಗೆ ಆಡು ಭಾಷೆಯಲ್ಲಿಲ್ ಬರೆದಿರೋದು.. ಅಂದ್ರೆ ಅಲ್ಲಿ ಮಾತಾಡಿದ್ದನ್ನು ಯಥಾವತ್ತಾಗಿ ಇಲ್ಲಿ ಹಾಕಿದೀನಿ. ನಾನು ಇದಕ್ಕೆ ಮುಂಚೆ ಗುರು ಬಾಳಿಗ ಹಾಗು ಇಂಚರ ಅವರ ಜೊತೆ ವಾದ ಮಾಡಿದ್ದನ್ನೇ ಇಲ್ಲಿ ಹಾಕ್ತಾ ಇದೀನಿ.
ನಾನು ಬರೆಯುವ ಕಂಗ್ಲಿಷ್ ಲೇಖನದಿಂದ ನನ್ನ ಕನ್ನಡಾಭಿಮಾನವನ್ನು ಅಳೆಯಬೇಡಿ.

ಶಂಕ್ರ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ನನ್ನ ಸಮ್ಮತವಿಲ್ಲ. ನಿಮಗೆ ಕನ್ನಡ ಪದದ ಅವತರಣಿಕೆ ಗೊತ್ತಿದೆಯೆಂದಾದ ಮೇಲೆ ಅದನ್ನು ಕೊನೆಯ ಪಕ್ಷ ಬರವಣಿಗೆಯಲ್ಲಾದರೂ ಬಳಸಿರಿ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

msprasad's picture

ಬಿಡಿ ಇಂಚರ ಅವರೆ... ಈ ವಾದ ವಿನಿಮಯ ಮುಗಿಯೋದಿಲ್ಲ.
ನನ್ನ ಬರವಣಿಗೆಯೆ ಶೈಲಿ ಹೀಗೆ ಇರೋದು. ನಿಮ್ಮ ವಿಮರ್ಶೆಯನ್ನ ಮನದಲ್ಲಿ ಇಟ್ಟುಕೊಂಡು ಇನ್ಮೇಲೆ
ಕನ್ನಡ ಪದಪ್ರಯೋಗ ಹೆಚ್ಚು ಮಾಡ್ತೀನಿ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

somayaji's picture

ಎಂಚಿನ ಮರಾಯ್ರೆ.. ನಿಮ್ಮ ಕಥೆ ಎಲ್ಲಿಯವರೆಗೆ ಬಂತು??

ಉ: ಉದ್ದಿನ ವಡೆ ಅಥವಾ ಮೆದು ವಡಾ ?

ಮಾಯ್ಸ೨'s picture

ಎಂಚಿನ ಅಂದ್ರೆ ಯಾವ ಸೀಮೆ ಕನ್ನಡ?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

hpn's picture

ಶಂಕರ್, ಸಂಪದದಲ್ಲಿ ಲೇಖನದೊಳಗೆ ನಿಮ್ಮ ಬ್ಲಾಗಿಗೆ ಲಿಂಕ್ ಹಾಕಿದಲ್ಲಿ ಅದನ್ನು ವಿಂಡೋ ಆರ್ಟಿಕಲ್ ಎಂದು ಪರಿಗಣಿಸಿ ಅಳಿಸಿಹಾಕಲಾಗುವುದು. ನಿಮ್ಮ ಬ್ಲಾಗಿನ URL ಸಂಪದದ ನಿಮ್ಮ ಪ್ರೊಫೈಲಿನಲ್ಲಿ ಹಾಕಿಕೊಂಡರೆ ಉತ್ತಮ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

srivathsajoshi's picture

ಇಷ್ಟೆಲ್ಲ "ಬಿಸಿ ಬಿಸಿ" ಚರ್ಚೆ ಇಲ್ಲಿ ಆಗುವಾಗ ಅಲ್ಲಿ (ಆ ಉಪಾಹಾರಗೃಹದಲ್ಲಿ) ವಡೆ ತಣ್ಣಗಾಗಿ ಹೋಯ್ತೆಂದು ಅಂದಾಜಿಸಲಾಗಿದೆ. :-)

ಈ ಮೇಲಿನ ಹೇಳಿಕೆಗೆ

೧) ಸಾಪೇಕ್ಷ ಸಿದ್ಧಾಂತ (ಥಿಯರಿ ಆಫ್ ರಿಲೇಟಿವಿಟಿ) ಬಳಸಲಾಗಿದೆ. ಅಂದರೆ, ಚರ್ಚೆ ಮತ್ತು ವಡೆ ಇವುಗಳಲ್ಲಿ ಒಂದಕ್ಕೊಂದು ಹೋಲಿಸಿದಾಗ ಯಾವುದು ಬಿಸಿ ಎಂದು ಮಾಡಿದ ಹೋಲಿಕೆ :-)

೨) "ಅಪ್ಪ-ಅಮ್ಮ ಜಗಳದಲಿ... ಕೂಸು ಬಡವಾಯ್ತು..." ಹಾಡಿಗೊಂದು ಅಣಕುವಾಡು ಮಾಡಿ "ಶಂಕ್ರ-ಬಾಳಿಗ ಜಗಳದಲಿ... ವಡೆ ತಣ್ಣಗಾಯ್ತು..." ಎನ್ನಲಾಗಿದೆ.

===

ನನ್ನ ಸ್ವಭಾವ. ಗಂಭೀರ‍ ಚರ್ಚೆ ನಡೆಯುತ್ತಿದ್ದಾಗ ಅಲ್ಲೊಂದು ನಗು ಮೂಡಿಸುವ ಪ್ರಯತ್ನ ಮಾಡುವುದು. ಕೆಲವರಿಗೆ ಇಷ್ಟ ಆಗಲಿಕ್ಕಿಲ್ಲ. ಚರ್ಚಿತ ವಿಷಯವನ್ನು ಲಘುವಾಗಿಸುವುದು ನನ್ನ ಉದ್ದೇಶವೂ ಅಲ್ಲ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

gurubaliga's picture

:D

ಉ: ಉದ್ದಿನ ವಡೆ ಅಥವಾ ಮೆದು ವಡಾ ?

Narayana's picture

ಮೆದು ವಡೆಗೆ ಮುಂಬಯಿ ಮರಾಠಿಗರು ಹೇಳುವುದು "ಮೆಂದು ವಡಾ" ಅಂತ. ಮೆಂದು ಅಂದರೆ ಮೆದುಳು ಅಂತ.

ನೋಡಿ ನಮ್ಮ ಉದ್ದಿನ ವಡೆಗೂ , ಮೆದುಳಿಗೂ ಎಲ್ಲಿಂದೆಲ್ಲಿಗೆ ಸಂಬಂಧ :-)

ವಿಷಯಕ್ಕೆ ಬಂದರೆ, ನೀವು ಹೋಟೆಲಿನವರಿಗೆ ಕೇಳಿದ್ದು ಸರಿ ಅಂತ ನನ್ನ ಅಭಿಪ್ರಾಯ.

ತಮಿಳರು ತಾವು ಮಾತಾಡುವಾಗ ಬೇಕಾದಷ್ಟು ಇಂಗ್ಲೀಷ್ ಉಪಯೋಗಿಸಿದರೂ, ತಮಿಳು ಭಾಷೆಯ ಪ್ರಶ್ನೆ ಬಂದಾಗ ಅವರು ಯಾವತ್ತೂ ಒಂದೇ.

ನಮ್ಮ ಕನ್ನಡಿಗರ ಸಮಸ್ಯೆ ಇರುವುದೇ ಅಲ್ಲಿ. ಸಾರ್ವಜನಿಕವಾಗಿ ಕನ್ನಡದ ತಾತ್ಸಾರ ಅಥವಾ ಕಡೆಗಣಿಕೆ ಕಂಡುಬಂದಾಗ ನಾವು ಪ್ರತಿಭಟಿಸುವುದಕ್ಕೆ ಹಿಂದೇಟು ಹಾಕುತ್ತೇವೆ. ನಾವೂ ಪ್ರತಿಭಟಿಸುವ ಗುಣ ಮೈಗೂಡಿಸಿಕೊಳ್ಳಬೇಕು .

ಮುಂಬಯಿಯಲ್ಲಿ ಅಂಗಡಿ ಬೋರ್ಡುಗಳ ಹೆಸರು ಮರಾಠಿಯಲ್ಲಿರಬೇಕು ಅಂತ ಕಾನೂನಿದೆ. ನಮ್ಮಲ್ಲಿಯಂತೆ, ಬರಿ ಹೆಸರಿಗೆ ಅಷ್ಟೇ.

ಕಳೆದ ವರ್ಷ ರಾಜ್ ಠಾಕರೆ, ಎಲ್ಲಾ ಅಂಗಡಿಗಳವರಿಗೆ ಒಂದು Ulimatum ಕೊಟ್ಟ. ಇಂಥಾ ತಾರೀಖಿನ ಒಳಗೆ ಮರಾಠೀ ಬೋರ್ಡು ಹಾಕದಿದ್ದರೆ , ಪರಿಣಾಮ ಎದುರಿಸಬೇಕಾಗುತ್ತದೆ ಅಂತ. ಅಷ್ಟೇ ಅಲ್ಲ. Count Down ಕೂಡಾ ಶುರು ಮಾಡಿದ. ತಗೊಳ್ಳಿ, ರಾತೋ ರಾತ್ರಿ ಬೋರ್ಡುಗಳು ಮರಾಠಿಗೆ ಬದಲಾದವು.

ಇದು ಗೂಂಡಾಗಿರಿಯೇ? ಹೌದು . ಆದರೆ , ಸಾಮ,ದಾನ,ಭೇದ , ದಂಡದಲ್ಲಿ ದಂಡವೂ ಒಂದು ಉಪಾಯ ಎಂದು ಹೇಳಲಾಗಿದೆಯಲ್ಲ :-)

ಸರಕಾರ ಸಾಮ , ದಾನ,ಭೇದ ಮಾಡದೆಯೇ ಇದ್ದಿದ್ದರಿಂದ ಬೇರೆಯವರು ದಂಡೋಪಾಯ ಮಾಡಬೇಕಾದ ಅಗತ್ಯ ಬಂತೇ? ನನಗೆ ಗೊತ್ತಿಲ್ಲ.

ನಾರಾಯಣ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

hamsanandi's picture

ಹೌದ್ರಿ, ನಮ್ಮ ಊಟಕ್ಕೆ ಬೇರೆ ಹೆಸ್ರು ಕೊಡೋದು ನಂಗೂ ಹಿಡಿಸೋಲ್ಲ. ಇದರ ಬಗ್ಗೆ ನಾನೂ ಒಂದ್ಸಲ ಬರ್ದಿದ್ದೆ...

ಉ: ಉದ್ದಿನ ವಡೆ ಅಥವಾ ಮೆದು ವಡಾ ?

bhasip's picture

ಮಾಹಿತಿಹೆ ಧನ್ಯವಾದಗಳು. ಇಂತಹ ಸ್ಥಳಗಳಿಗೆ ಭೇಟಿಕೊಡುವುದು ಬೇಡ ಎಂದು ನನ್ನ ಸ್ಣೆಹಿತರಿಗೆ ತಿಳಿಸುತ್ತೇನೆ

ಉ: ಉದ್ದಿನ ವಡೆ ಅಥವಾ ಮೆದು ವಡಾ ?

ಮಾಯ್ಸ೨'s picture

ಇದು ಒಳ್ಳೆಯ ನಿರ್ಧಾರ. ನಾನೂ ಇದನ್ನೇ ಪಾಲಿಸುವೆನು.!

ಉ: ಉದ್ದಿನ ವಡೆ ಅಥವಾ ಮೆದು ವಡಾ ?

manju787's picture

ಇದೇನಪ್ಪಾ, ವಡೆಯ ಬಗ್ಗೆ ಇಷ್ಟೊಂದು ಬಿಸಿ ಬಿಸಿ ಚರ್ಚೆ ನಡೀತಾ ಇದೆಯಲ್ಲಾಂತ ಒಮ್ಮೆ ತಲೆ ಹಾಕಿದೆ ! ಹಾಗೇ ತಲೆ ಗಿರ್ರಂತು!! ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ, ಕನ್ನಡ ಉಳಿಸಿ, ಬೆಳೆಸುವ ಚರ್ಚೆ ? ಮೈಸೂರಿನಲ್ಲಿ ಹುಟ್ಟಿದ ನಾನು ಅಮ್ಮನಿಂದ ನನಗೆ ಬಳುವಳಿಯಾಗಿ ಬಂದ " ಅಪ್ಪಟ ಕನ್ನಡ" ವನ್ನು ಹೋದಲ್ಲೆಲ್ಲಾ ಪಸರಿಸುವ ಕಾಯಕವನ್ನು ಸಂತೋಷದಿಂದ ಮಾಡುತ್ತಿದ್ದೇನೆ, ಅದು ನನಗೆ ತುಂಬಾ ಸಂತೋಷ ನೀಡುತ್ತಿದೆ ಕೂಡಾ. ದುಬೈನಲ್ಲಿರುವ ನಾಲ್ಕಾರು ಉಡುಪಿ ಹೋಟೆಲ್ ಗಳನ್ನು ಹುಡುಕಿಕೊಂಡು ಹೋಗಿ, ಅವರೊಡನೆ ಕನ್ನಡದಲ್ಲಿಯೇ ಮಾತಾಡಿ, ಊಟ ಮಾಡಿ ಬರುವಾಗ ನನಗೆ ಅಮ್ಮನ ಕೈ ತುತ್ತು ತಿಂದಂತಾಗುತ್ತದೆ. ಅದು ನಮ್ಮ ಭಾಷೆಯ ಹಿರಿಮೆ. "ಗೂಂಡಾಗಿರಿ"ಯ ವಿಚಾರಕ್ಕೆ ಬಂದಾಗ, ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ, ಕನ್ನಡವನ್ನು, ಕನ್ನಡಿಗರನ್ನು ಅವಹೇಳನ ಮಾಡಿದ ತಮಿಳರನ್ನು ಅದೂ "ಹಲಸೂರಿನಲ್ಲಿ" ಹಿಂದೆ ಮುಂದೆ ನೋಡದೆ, ಚೆನ್ನಾಗಿ ಹಿಡಿದು ತದುಕಿದ್ದೂ ಉಂಟು. ಆದರೆ ಸಂಪದ ದಂತಹ ಸುಂದರ ವೇದಿಕೆಯಲ್ಲಿ ಈ ಚರ್ಚೆಗಳು ಸ್ವಲ್ಪ ಅತಿರೇಕವೇ ಅನ್ನಿಸುತ್ತಿದೆ. ನಾವು ನಮ್ಮ ಭಾಷೆಗಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡಿದಾಗ, "ಅದು ನಮ್ಮ ಹಕ್ಕು ಕೂಡಾ", ಅದನ್ನು ನಮ್ಮವರೊಂದಿಗೆ ಹಂಚಿಕೊಳ್ಳುವಾಗ, ಅದು ಅಪ್ಪಟ ಮೈಸೂರು ಕನ್ನಡದಲ್ಲಿದ್ದರೆ, ನಿಜಕ್ಕೂ " ಕನ್ನಡಮ್ಮ" ನಮ್ಮನ್ನು ಮೆಚ್ಚಿ ಕೊಂಡಾಡಿಯಾಳು!

ಕಟ್ಟೆ ಶಂಕ್ರ ರವರಿಗೆ ಹಾಗೂ ನನ್ನೆಲ್ಲ ಸಂಪದ ಮಿತ್ರರಿಗೆ ಒಂದು ವಿನಮ್ರ ಮನವಿ, ಸಾಗರದಾಚೆಯಿಂದ, ನಿಮ್ಮ ಯಾವುದೇ ಅನಿಸಿಕೆ, ಲೇಖನ, ಕವನ, ಬ್ಲಾಗ್ ಬರಹ, ಪ್ರತಿಕ್ರಿಯೆಗಳೆಲ್ಲವನ್ನೂ ಸಾಧ್ಯವಾದಷ್ಟೂ ಕನ್ನಡದಲ್ಲಿಯೇ ಬರೆಯಲು ಪ್ರಯತ್ನಿಸಿ. ನಮ್ಮ ದೈನಂದಿನ ಮಾತುಕತೆಗಳಲ್ಲಿ ನಾವು ಆಂಗ್ಲ ಭಾಷೆಯನ್ನು ಬೆರೆಸಿ ಮಾತಾಡಬಹುದು, ಅದು ಕೆಲವೊಮ್ಮೆ ಅನಿವಾರ್ಯ, ಆದರೆ ನಮ್ಮ ಬರವಣಿಗೆಗಳಲ್ಲಿ ನಮಗೆ "ಕಂಗ್ಲೀಷ್" ಬೇಡ, ನಮ್ಮ ಕನ್ನಡವೇ ಸಾಕು. ಅದು ನಾವು ನಮ್ಮ ತಾಯ್ನುಡಿಗೆ ಮಾಡುವ ಅಳಿಲು ಸೇವೆ.. ತಪ್ಪಾಗಿ ನುಡಿದಿದ್ದರೆ ಕ್ಷಮೆಯಿರಲಿ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

inchara123's picture

ಇದು ನಿಜವಾಗಲೂ ಒಳ್ಳೆಯ ಮಾತು. ಪ್ರತಿಯೊಬ್ಬರೂ ಅನುಸರಿಸುವಂತಹದ್ದು. ಧನ್ಯವಾದಗಳು.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

createam's picture

ಎಲ್ಲಾ ಸರಿ, ಆದರೆ,

Quote:

ಅದನ್ನು ನಮ್ಮವರೊಂದಿಗೆ ಹಂಚಿಕೊಳ್ಳುವಾಗ, ಅದು ಅಪ್ಪಟ ಮೈಸೂರು ಕನ್ನಡದಲ್ಲಿದ್ದರೆ, ನಿಜಕ್ಕೂ " ಕನ್ನಡಮ್ಮ" ನಮ್ಮನ್ನು ಮೆಚ್ಚಿ ಕೊಂಡಾಡಿಯಾಳು!

ಅಂದರೆ ಮೈಸೂರು ಕನ್ನಡ ಮಾತ್ರ ಕನ್ನಡಮ್ಮನ ಪ್ರೀತಿಯ ಕನ್ನಡ ಅಂತನಾ? ಅಥವಾ ಅದೇ ಶುದ್ಧ ಕನ್ನಡ ಅಂತನ? ಅಥವಾ ಕನ್ನಡ ಅಂದ್ರೆ ಅದು ಮಾತ್ರ ಅಂತನ?

ಉ: ಉದ್ದಿನ ವಡೆ ಅಥವಾ ಮೆದು ವಡಾ ?

ಮಾಯ್ಸ೨'s picture

ಬೆಂಗಳೂರಲ್ಲಿ ಆಡೋದು ಮಯ್ಸೂರ್‍ ಕನ್ನಡ ಅಂತ. ಅದಕ್ಕೆ ಅಲ್ಲಿಯ ಲೋಕಲ್ ನುಡಿಯಲ್ಲಿರಬೇಕೂ ಅಂತ ಹೇಳ್ತಿದ್ದಾರೆ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

manju787's picture

ಮನೋಜ್ ರವರೆ, ಮೈಸೂರು ಕನ್ನಡವೆಂದರೆ, " ವಜ್ರದಂತೆ, ಅದು ಅಪ್ಪಟ ಶುದ್ಧ ಕನ್ನಡ, ಕಲಬೆರಕೆ ಕಾಣುವುದಿಲ್ಲ. ಬೇರೆ ಭಾಗಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳ ಪದಗಳನ್ನು ಬೆರೆಸಿಕೊಂಡು ಮಾತಾಡುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಆ ಅರ್ಥದಲ್ಲಿ ನಾನು ಹೇಳಿದ್ದು, ಇರಲಿ, ಒಂದು ಅರ್ಥಪೂರ್ಣ ಚರ್ಚೆ, ಅನರ್ಥಕಾರಿಯಾಗಿ ಪರ್ಯವಸಾನಗೊಳ್ಳುವ ಎಲ್ಲಾ ಲಕ್ಷಣಗಳೂ ಇಲ್ಲಿ ಕಾಣುತ್ತಿವೆ. " ನಂನಮ್ಮ ಭಾವಕ್ಕೆ, ನಂನಮ್ಮ ಭಕುತಿಗೆ" ತಕ್ಕಂತೆ ನಾವು ಕನ್ನಡಮ್ಮನ ಸೇವೆ ಮಾಡೋಣ. ಎಲ್ಲ ಸಂಪದಿಗರ ಸಹಮತ ಇದೆ ಅಂದುಕೊಳ್ಳುತ್ತಾ ಈ ಚರ್ಚೆಗೆ ಪೂರ್ಣವಿರಾಮ ಹಾಕೋಣ.

ಉ: ಉದ್ದಿನ ವಡೆ ಅಥವಾ ಮೆದು ವಡಾ ?

manju787's picture

ಮನೋಜ್ ರವರೆ, ಮೈಸೂರು ಕನ್ನಡವೆಂದರೆ, " ವಜ್ರದಂತೆ, ಅದು ಅಪ್ಪಟ ಶುದ್ಧ ಕನ್ನಡ, ಕಲಬೆರಕೆ ಕಾಣುವುದಿಲ್ಲ. ಬೇರೆ ಭಾಗಗಳಲ್ಲಿ ತೆಲುಗು, ತಮಿಳು, ಮಲಯಾಳಂ, ಮರಾಠಿ ಭಾಷೆಗಳ ಪದಗಳನ್ನು ಬೆರೆಸಿಕೊಂಡು ಮಾತಾಡುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಆ ಅರ್ಥದಲ್ಲಿ ನಾನು ಹೇಳಿದ್ದು, ಇರಲಿ, ಒಂದು ಅರ್ಥಪೂರ್ಣ ಚರ್ಚೆ, ಅನರ್ಥಕಾರಿಯಾಗಿ ಪರ್ಯವಸಾನಗೊಳ್ಳುವ ಎಲ್ಲಾ ಲಕ್ಷಣಗಳೂ ಇಲ್ಲಿ ಕಾಣುತ್ತಿವೆ. " ನಂನಮ್ಮ ಭಾವಕ್ಕೆ, ನಂನಮ್ಮ ಭಕುತಿಗೆ" ತಕ್ಕಂತೆ ನಾವು ಕನ್ನಡಮ್ಮನ ಸೇವೆ ಮಾಡೋಣ. ಎಲ್ಲ ಸಂಪದಿಗರ ಸಹಮತ ಇದೆ ಅಂದುಕೊಳ್ಳುತ್ತಾ ಈ ಚರ್ಚೆಗೆ ಪೂರ್ಣವಿರಾಮ ಹಾಕೋಣ.