ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!
ಗುಬ್ಬಿಗೆ ಎಷ್ಟು ಜನ ಗಂಡಂದಿರು?
ನಮ್ಮ ದೇಶದ ಖ್ಯಾತ ಪಕ್ಷಿ ಶಾಸ್ತ್ರಜ್ಞ ಡಾ. ಸಲೀಂ ಮೊಯಿಜುದ್ದೀನ್ ಅಬ್ದುಲ್ ಅಲಿ ಅವರಿಗೂ ಈ ಪ್ರಶ್ನೆ ಕಾಡಿತ್ತು!
ನಮ್ಮ ಮನೆಗಳಲ್ಲಿ ಗೋಡೆಗೆ ನೇತು ಹಾಕಲಾಗಿರುವ ಹಿರಿಯರ ಫೊಟೋ ಫ್ರೇಮ್ ಗಳ ಹಿಂಬದಿಯಲ್ಲಿ ಆಶ್ರಯ ಪಡೆದು ಸಂಸಾರ ಹೂಡುತ್ತಿದ್ದ ಗುಬ್ಬಕ್ಕ ಡಾ. ಸಲೀಂ ಅಲಿ ಅವರ ಕುದುರೆ ಲಾಯದ ಮೇಲ್ಛಾವಣಿಯ ಹೆಂಚುಗಳ ಬುಡದಲ್ಲಿ ಗೂಡು ಕಟ್ಟಿತ್ತು.
ಹೆಣ್ಣು ಗುಬ್ಬಚ್ಚಿ ಹುಲ್ಲಿನ ಗೂಡಿನಲ್ಲಿ ಮೊಟ್ಟೆ ಇಟ್ಟುದನ್ನು ಡಾ. ಅಲಿ ಖಾತ್ರಿ ಪಡಿಸಿಕೊಂಡರು. ಅಮ್ಮಾವ್ರ ಗಂಡನಂತಿದ್ದ, ಆಹಾರ ನೀಡಲು ಆಗಮಿಸುತ್ತಿದ್ದ ಗಂಡು ಗುಬ್ಬಣ್ಣನನ್ನು ಏರ್ ಗನ್ ಬಳಸಿ ಅವರು ಹೊಡೆದು ಹಾಕಿದರು. ಹತ್ತು ನಿಮಿಷ ಗತಿಸಿರಲಿಲ್ಲ..ಮತ್ತೊಂದು ಗಂಡು ಗುಬ್ಬಿ ಆಹಾರ ಒದಗಿಸಲು ಸಿದ್ಧವಾಗಿ ನಿಂತಿತ್ತು!
೭-೮ ದಿನಗಳ ಬಳಿಕ ಡಾ. ಅಲಿ ಗೂಡನ್ನು ಪರೀಕ್ಷಿಸಿದರು. ಮೊಟ್ಟೆಯೊಡೆದು ೩ ಮರಿಗಳು ಜನ್ಮ ತಾಳಿದ್ದವು. ಈ ಹಸಿ ಬಾಣಂತಿ ಗುಬ್ಬಕ್ಕನಿಗೆ ಗಂಡು ಗುಬ್ಬಿ ಬಂದು ಆಹಾರ ಒದಗಿಸುತ್ತಿತ್ತು. ಮತ್ತೆ ಏರ್ ಗನ್ ಹಿಡಿದು ಬೇಟೆಗೆ ಸನ್ನದ್ಧರಾದರು. ಕೆಲ ನಿಮಿಷಗಳಲ್ಲಿ ಆ ಗಂಡು ಗುಬ್ಬಿಯನ್ನೂ ಸಹ ಅವರು ಹೊಡೆದು ಉರುಳಿಸಿದರು. ಇತ್ತ ಪಾಪ ಗಂಡನನ್ನು ಕಳೆದುಕೊಂಡು ವಿಧವೆಯಾದ ಗುಬ್ಬಕ್ಕ ಶೋಕ ಆಚರಿಸುತ್ತಾಳೆ ಎಂದು ಊಹಿಸಿದ್ದ ಡಾ. ಅಲಿಗೆ ಮತ್ತೆ ಆಶ್ಚರ್ಯ ಕಾದಿತ್ತು! ಮತ್ತೊಂದು ಗಂಡು ಗುಬ್ಬಿ ಈ ವಿಧವೆಗೆ ಆಸರೆಯಾಗಿ ಆಹಾರ ಒದಗಿಸಲು ಟೊಂಕ ಕಟ್ಟಿ ನಿಂತಿತ್ತು. ಹೀಗೆ ಒಟ್ಟು ೮ ಗಂಡು ಗುಬ್ಬಿಗಳನ್ನು ಇವರು ಹೊಡೆದು ಉರುಳಿಸಿದರೂ ಹೆಣ್ಣು ಗುಬ್ಬಿ ‘ನಿತ್ಯ ಸುಮಂಗಲಿಯಾಗಿತ್ತು’!
ವಿಧವಾ ವಿವಾಹ, ಮಹಿಳೆಯರ ಹಕ್ಕು, ಮಕ್ಕಳ ಹಕ್ಕು ಈ ಯಾವ ಹಕ್ಕುಗಳಿಗೂ ಗುಬ್ಬಿಗಳ ಸಮುದಾಯದಲ್ಲಿ ಚ್ಯುತಿಬಾರದು!
ಸಾರಸ್ ಕ್ರೇನ್ ಎಂದು ಕರೆಯಲ್ಪಡುವ ಕ್ರೌಂಚ ಪಕ್ಷಿ ಅಪ್ಪಟ ಸಂಪ್ರದಾಯವಾದಿ. ಚುಂಚಿಗೆ ಚುಂಚು ತಾಕಿಸಿ ವಿವಾಹ ಬಂಧನಕ್ಕೆ ಒಳಗಾದ ಗಂಡು ಇಲ್ಲವೆ ಹೆಣ್ಣು ಕ್ರೌಂಚ ಪಕ್ಷಿ ಜೀವನಪರ್ಯಂತ ಏಕ ಪತಿ ಅಥವಾ ಪತ್ನಿ ವೃತಸ್ಥವಾಗಿ ಜೀವನ ಸಾಗಿಸುತ್ತವೆ. ಇಬ್ಬರಲ್ಲಿ ಒಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದರೂ ಮರು ಮದುವೆಯ ಮಾತಿಲ್ಲ! ಜೀವನ ಪರ್ಯಂತ ಒಂಟಿಯಾಗಿಯೇ ಬದುಕುತ್ತವೆ.
ಆದರೆ ಜಕಾನಾ ಎಂಬ ನೀರು ಹಕ್ಕಿಯ ವರ್ತನೆ ಮಾತ್ರ ತೀರ ವಿಚಿತ್ರ. ಗೂಡು ಕಟ್ಟುವುದು, ಮೊಟ್ಟೆಗಳಿಗೆ ಕಾವು ಕೊಡುವುದು ಹಾಗು ಮರಿಗಳ ಲಾಲನೆ, ಪಾಲನೆ ಮಾಡುವುದು ಗಂಡಿನ ಜವಾಬ್ದಾರಿ! ಗೂಡಿನಲ್ಲಿ ಕೊನೆಯ ತತ್ತಿ ಇಟ್ಟ ಬಳಿಕ ಹೆಣ್ಣು ಪಕ್ಷಿ ಎಲ್ಲ ಹೊಣೆಯನ್ನು ಗಂಡಿಗೆ ನೀಡಿ ಅಲ್ಲಿಂದ ಕಾಲ್ತೆಗೆಯುತ್ತದೆ. ಒಟ್ಟಾರೆ ಹೆಣ್ಣು ಜಕಾನಾ ಬಜಾರಿಯಾಗುತ್ತದೆ. ಗೂಡಿನ ಎದುರೇ ಹಾರಾಡುತ್ತ ಮತ್ತೊಂದು ಗೂಡನ್ನು ಕಟ್ಟಿಕೊಂಡು ಹಳೆಯ ಗಂಡಿಗೆ ವಿಚ್ಛೇದನ ಬಿಸಾಕುತ್ತದೆ! ಬಡಪಾಯಿ ಈ ಮಾಜಿ ಗಂಡ ಜಕಾನಾ ಪ್ರೀತಿಸಿ ಕೈಹಿಡಿದ ಹೆಂಡತಿ ಮನೆ ಬಿಟ್ಟು ಹೋದ ವೇದನೆ ಅನುಭವಿಸುತ್ತ ಮೊಟ್ಟೆಗಳಿಗೆ ಕಾವು ಕೊಡುತ್ತ, ಮರಿಗಳ ಪೋಷಣೆ ಮಾಡಬೇಕು.
ಇತ್ತ ಬಜಾರಿ ಹೆಣ್ಣು ಜಕಾನಾ ಸೊಕ್ಕಿನಿಂದ ಹೊಸ ಗಂಡಿನೊಂದಿಗೆ ಸರಸ ಆರಂಭಿಸುತ್ತದೆ. ತನ್ನ ಹಳೆಯ ಗಂಡನ ಮನೆ ಎದುರು ಹಾರಾಡುತ್ತ ಮಕ್ಕಳ ಸಾಕಣೆ ಹೇಗೆ ನಡೆದಿದೆ ಎಂದು ಮೇಲುಸ್ತುವಾರಿ ನಡೆಸುತ್ತದೆ. ಹೀಗೆ ಹೆಣ್ಣು ಜಕಾನಾ ಯಾವತ್ತೂ ಸದಾ ವಿಚ್ಛೇದನ ಪತ್ರ ಇಟ್ಟುಕೊಂಡೇ ಪ್ರತಿ ಬಾರಿ ಹಸೆಮಣೆ ಏರುತ್ತದೆ. ನಾಲ್ಕಾರು ಗಂಡುಗಳಿಗೆ ಹೀಗೆ ಸಲೀಸಾಗಿ, ರಾಜಾರೋಷವಾಗಿ ವಿಚ್ಛೇದನಾ ಚೀಟಿ ನೀಡುತ್ತ, ತನ್ನ ಸಂತಾನೋತ್ಪತ್ತಿ ಕೆಲಸ ಅನಾಯಾಸವಾಗಿ ನಡೆಸುತ್ತದೆ.
ಡಾ. ಸಲೀಂ ಅಲಿ ತಮ್ಮ ಆತ್ಮ ಕಥೆಯಲ್ಲಿ ಗೀಜಗ ಪಕ್ಷಿ ಹಾಗು ಸುಂದರವಾದ ಆ ಪಕ್ಷಿಯ ಗೂಡಿನ ಬಗ್ಗೆ ಅತ್ಯಂತ ಮುತುವರ್ಜಿಯಿಂದ ಉಲ್ಲೇಖಿಸುತ್ತಾರೆ. ಸಿವಿಲ್ ಇಂಜಿನೀಯರಿಂಗ್ ನಲ್ಲಿ ಪರಿಣತಿ ಪಡೆದಂತೆ ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಭತ್ತ ಹಾಗು ಮೆದೆಯ ಹಸಿರು ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಈ ಗಂಡು ಕಟ್ಟಿದ ಗೂಡು ನೋಡಲು ವಧುಗಳ ದಂಡೇ ನೆರೆಯುತ್ತದೆ. ಮುಕ್ಕಾಲು ಭಾಗದಷ್ಟು ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ನಂತರ ನೂತನ ಗೃಹ ಪ್ರವೇಶದ ನಂತರ ‘ಹನಿಮೂನ್’.
ಈ ಸರಸದ ಬಳಿಕ ಹೆಣ್ಣು ಗೀಜಗ ಗೂಡಿನಲ್ಲಿ ಮೊದಲ ತತ್ತಿ ಇಟ್ಟ ವಿಚಾರ ತಿಳಿಯುತ್ತಲೇ ಗಂಡು ಗೂಡಿನಿಂದ ಪಡಪೋಷಿಯಂತೆ ಪರಾರಿ! ಕೆಲವೇ ತಾಸುಗಳಲ್ಲಿ ಮತ್ತೊಂದೆಡೆಗೆ ಹೊಸ ಗೂಡನ್ನು ನೇಯಲು ಪ್ರಾರಂಭಿಸುತ್ತದೆ. ಇಲ್ಲಿಯೂ ಮುಕ್ಕಾಲು ಭಾಗ ಗೂಡಿನ ರಚನೆಯಾದ ನಂತರ ಹೊಸ ವಧುವಿನ ಆಗಮನ. ಮತ್ತೆ ಅದೇ ಕಥೆಯ ಪುನರಾವರ್ತನೆ. ಹೀಗೆ ಹತ್ತಾರು ಹೆಣ್ಣು ಗೀಜಗಗಳಿಗೆ ತನ್ನ ಹೊಸ ಹೊಸ ಮನೆಗಳನ್ನು ತೋರಿಸಿ ಮರುಳು ಮಾಡಿ ಗರ್ಭದಾನ ಮಾಡುತ್ತದೆ ಗಂಡು ಗೀಜಗ.
ಹೇಗಿದೆ ಪಕ್ಷಿ ಲೋಕದ ಸಾಂಸಾರಿಕ ಜೀವನ? ಅದು ವಿಸ್ಮಯಗಳ ಆಗರ. ಇಲ್ಲಿ ಪ್ರೇಮ ಪತ್ರಗಳ ಬಟವಾಡೆ ಇದೆ. ವಧು-ವರರ ಅನ್ವೇಷಣೆಯ ಸಂಭ್ರಮವಿದೆ. ಹೆಣ್ಣನ್ನು ಗೆಲ್ಲಲು ನಾನಾ ತಂತ್ರ ಹೂಡುವ ಗಂಡುಗಳು, ಹಾಗೆಯೇ ಮನಸೋತ ಹೆಣ್ಣಿನ ಸೆರಗು ಹಿಡಿದು ಅಮ್ಮವ್ರ ಗಂಡ ಎನಿಸಿಕೊಳ್ಳುವ ಮಾವನ ಮನೆಯ ಅಳಿಯಂದಿರು ಇಲ್ಲಿದ್ದಾರೆ! ಎಲ್ಲ ಮುಗಿದ ಬಳಿಕ ಕೈಕೊಡುವ ಹೆಣ್ಣುಗಳ ಇಲ್ಲಿದ್ದಾರೆ! ಹಾಗೆಯೇ ಕೈಕೊಡುವ ಪಡಪೋಷಿ ಗಂಡಂದಿರು ಸಹ ಇರುವ ಸೋಜಿಗ ಇಲ್ಲಿ ಮನೆ ಮಾಡಿದೆ. ನಾಲ್ಕಾರು ಹುಡುಗಿಯರನ್ನು ಪ್ರೀತಿಸಿದ, ವಿರಹ ವೇದನೆಯಲ್ಲಿ ಬೆಂದ ಹುಡುಗರಿದ್ದಾರೆ. ಹೆಣ್ಣನ್ನು ಹೆರುವ ಯಂತ್ರವಾಗಿಸಿ ಅಂಡಲೆಯುವ ಪೋಲಿ ಗಂಡುಗಳಿದ್ದಾರೆ. ಬಯಲಿಗೆ ಬಿದ್ದ ಕಥೆಗೆ ಜೀವನ ಪೂರ್ತಿ ಅಳುವ ಹುಡುಗಿಯ ಪ್ರಾರಬ್ಧವಿದೆ. ಸಮಾಜ ಮನ್ನಣೆ ನೀಡುವ ಬದುಕಿನ ಆದರ್ಶವೆಂದು ಏಕ ಪತ್ನಿ ಹಾಗು ಏಕಪತಿ ವೃತಸ್ಥರಾಗಿ ಜೀವನಯಾನ ನಡೆಸುವ ಜೀವಲೋಕದ ವೈಚಿತ್ರ್ಯಗಳಿವೆ! ಹಾಗೆಯೇ ಸಂಪ್ರದಾಯದ ಹೆಸರಿನಲ್ಲಿ ವಿಧವೆ-ವಿಧುರರ ಶೋಕ ಗೀತೆಗಳೂ ಇವೆ.
ಅಂದಹಾಗೆ ಇಷ್ಟೆಲ್ಲ ನೆನಪಾಗಲು ಕಾರಣವಿದೆ. ನನ್ನ ಮಿತ್ರ ಛಾಯಾಪತ್ರಕರ್ತ ಕೇದಾರನಾಥ್ ಇಲ್ಲಿಗೆ ಸಮೀಪದ ಬೆಳಗಾವಿ ನಾಕಾ ಬಳಿಯ ಬಾಯ್ ಪಾಸ್ ರಸ್ತೆಯ ಮೇಲೆ ಗೂಡು ಕಟ್ಟಿ ಹೊಸ ವಧುವಿನ ಅನ್ವೇಷಣೆಯಲ್ಲಿ ತೊಡಗಿದ್ದ ಗಂಡು ಗೀಜಗನ ಅಪರೂಪದ ಫೊಟೋ ಕ್ಲಿಕ್ಕಿಸಿದ್ದಕ್ಕಾಗಿ ನಾನು ಕೀಲಿ ಮಣೆಯಲ್ಲಿ ಈ ಕಥಾ ಹಂದರ ಹೆಣೆಯಬೇಕಾಯಿತು!
- Login or register to post comments
- 922 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಎಷ್ಟೊ೦ದು ಸೃಷ್ಟಿ ವೈಚಿತ್ರ್ಯಗಳನ್ನು ತೆರೆದಿಟ್ಟಿದ್ದೀರಿ!! ಎಲ್ಲ ಕುತೂಹಲಕರ ಮಾಹಿತಿಗಳಿಗೆ ವ೦ದನೆಗಳು.
ಆತ್ಮೀಯ ವಿನುತ,
ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು. ನಾನು ನೀಡಿದ ಮಾಹಿತಿಗಳು ನಿಮಗೆ ಕುತೂಹಲಕಾರಿ ಎನಿಸಿದ್ದರೆ ನನ್ನ ಪ್ರಯತ್ನ ಸಾರ್ಥಕ.
ಧನ್ಯವಾದಗಳು.
ಉತ್ತಮವಾದ ಬರಹ.
ಪಕ್ಷಿಲೋಕದ ಬಗ್ಗೆ ಆಕರ್ಷಕವಾಗಿ ಬರೆದಿದ್ದೀರಿ.
ಆತ್ಮೀಯ ಸುಪ್ರೀತ್,
ಪ್ರತಿಕ್ರಿಯೆ ಚೇತೋಹಾರಿಯಾಗಿದೆ. ನನಗೂ ಖುಷಿಯಾಯಿತು ನಿಮ್ಮ ಪ್ರತಿಕ್ರಿಯೆ ಓದಿ. ಧನ್ಯವಾದಗಳು.
ಒಳ್ಳೆಯ ಮಾಹಿತಿ....
ಆದ್ರೆ ನನಗೊಂದು ಸಂದೇಹ... ಪಕ್ಷಿಪ್ರೇಮಿಯಾಗಿದ್ದ ಸಲೀಂ ರವರು .. ಗುಬ್ಬಚ್ಚಿಯನ್ನು ಹೊಡೆದುರುಳಿಸಿದರಾ.. :(
ಏರ್ ಗನ್ನಿನಲ್ಲಿ ಹೊಡೆದರೆ ಪಕ್ಷಿಗಳು ಸಾಯುತ್ತವಾ? ಅಥವಾ ಕೇವಲ ಹೊಡೆದ ತಿಂದು ಎಚ್ಚರ ತಪ್ಪಿ ಉರುಳುತ್ತವಾ?
ನನಗೂ ಸಂಶಯ ಬಂದಿತ್ತು.
ಆತ್ಮೀಯ ಸುಪ್ರೀತ್,
ಏರ್ ಗನ್ ನಿಂದ ಪಕ್ಷಿಗಳು ಸಾಯುತ್ತವೆ. ಏರ್ ಗನ್ ಸೀಸದ ಬುಲೆಟ್ ಗಳು ಜೀವ ತೆಗೆಯಬಲ್ಲವು. ಇದು ಶಿಕಾರಿಯ ಚಾಣಾಕ್ಷತೆ ಹಾಗು ಹಕ್ಕಿಯ ಗಾತ್ರ ಮತ್ತು ಗುಂಡು ಹಾರಿದ ಸಾಮಿಪ್ಯ ಎಲ್ಲವೂ ಮುಖ್ಯವಾಗುತ್ತವೆ. ರೆಕ್ಕೆಗೆ ಬಿದ್ದರೆ ಗಾಯಗೊಂಡು ನೆಲಕ್ಕುರುಳುತ್ತವೆ. ಆದರೆ ಗುಂಡಿನ ಸಪ್ಪಳಕ್ಕೆ ಅಂಜಿ ರೆಕ್ಕೆ ಬಿಚ್ಚಿ ಹಾರುವಾಗ ದೇಹಕ್ಕೆ ತಾಕಿದರೆ ಉಳಿಯಲಾರವು. ಏರ್ ಗನ್ ಹದ್ದುಗಳಿಗೂ ಮಾರಣಾಂತಿಕವಾಗಬಲ್ಲುದು!
ನಾವು ಪಿಕಳಾರಗಳನ್ನು ಚಿಕ್ಕವನಿದ್ದಾಗ ಗುಲೇಲ್ ಬಳಸಿ ಕಲ್ಲಿನಿಂದ ನೆಲಕುರುಳಿಸಿದ್ದೇನೆ. ಕೆಲ ದಿನಗಳ ಆರೈಕೆಯ ನಂತರ ಅವು ಜೀವತೆತ್ತಿವೆ. ಇನ್ನು ಕೆಲವು ಸತ್ತು ನೆಲಕ್ಕುರುಳಿವೆ. ಈಗ ಪಶ್ಚಾತ್ತಾಪವಾಗುತ್ತದೆ.
ನಿಮ್ಮ ಜಿಜ್ಞಾಸೆಗೆ ಉತ್ತರ ಸಿಕ್ಕಿದೆ ಎಂದು ಕೊಳ್ಳುತ್ತೇನೆ.
ನಿಮ್ಮ ಈ ಪ್ರತಿಕ್ರಿಯೆಯಿಂದ ನನ್ನ ಸಂಶಯ ನಿವಾರಣೆಯಾಯ್ತು. ಧನ್ಯವಾದಗಳು ಸರ್.
ಈ ಮಾಹಿತಿಯಿಂದ ನಾವು ಸಲೀಂ ಅಲಿಯವರ ಬಗ್ಗೆ ಯಾವ ತೀರ್ಮಾನಗಳಿಗೂ ಬರುವ ಆವಶ್ಯಕತೆಯಿಲ್ಲ. ಅವರೊಬ್ಬ ವಿಜ್ಞಾನಿ, ಸತ್ಯ ಶೋಧಕರು. ಕಪ್ಪೆಯೊಂದರ ಬಗ್ಗೆ ತಿಳಿಯಬೇಕಾದರೆ, ಜಿರಲೆಯನ್ನು ಅಧ್ಯಯನ ಮಾಡಬೇಕಾದರೆ ನಾವೂ ಅವನ್ನು ಕೊಂದೇ ಅಭ್ಯಸಿಸುವುದು. ಪ್ರಯೋಗಶಾಲೆಯಲ್ಲಿ ಮದ್ದುಗಳ ಪರಿಣಾಮ ತಿಳಿಯುವುದಕ್ಕೆ ಪ್ರಾಣಿಗಳನ್ನು ಬಳಸುವುದು ಇದೆ. ಹೀಗಾಗಿ ಅದು ಜ್ಞಾನ ವಿಸ್ತರಣೆಗಾಗಿ ಮಾಡಿದ ಕೆಲಸವಷ್ಟೇ. ಮೇಲಾಗಿ ಅಂತಹ ಪಕ್ಷಿ ಪ್ರೇಮಿಗೆ ಯಾವ ಪಕ್ಷಿಗಳು ಅವನತಿಯ ಅಂಚಿನಲ್ಲಿವೆ ಯಾವುವು ಸಮೃದ್ಧವಾಗಿವೆ ಎಂಬ ಅರಿವೂ ಇರುತ್ತದೆ.
>>ಈ ಮಾಹಿತಿಯಿಂದ ನಾವು ಸಲೀಂ ಅಲಿಯವರ ಬಗ್ಗೆ ಯಾವ ತೀರ್ಮಾನಗಳಿಗೂ ಬರುವ ಆವಶ್ಯಕತೆಯಿಲ್ಲ.
ಹೌದು, ಯಾಕೆಂದರೆ ಬರಹದಲ್ಲಿ ಒದಗಿಸಿದ ಮಾಹಿತಿಯ ಆಧಾರ ಸ್ಪಷ್ಟವಾಗಿಲ್ಲ.
>>ಕಪ್ಪೆಯೊಂದರ ಬಗ್ಗೆ ತಿಳಿಯಬೇಕಾದರೆ, ಜಿರಲೆಯನ್ನು ಅಧ್ಯಯನ ಮಾಡಬೇಕಾದರೆ ನಾವೂ ಅವನ್ನು ಕೊಂದೇ ಅಭ್ಯಸಿಸುವುದು.
ಕಪ್ಪೆಗಳ ಸೋಶಿಯಲ್ ಬಿಹೇವಿಯರ್, ಅದರ ಆಹಾರಾಭ್ಯಾಸ, ಜೀವನ ಶೈಲಿಯನ್ನು ಅರಿಯಬೇಕೆಂದರೆ ಅವನ್ನು ಕೊಂದು ಅಭ್ಯಸಿಸಲಾಗದು. ಕೊಂದು ಅಭ್ಯಸಿಸುವುದು ಶರೀರ ಶಾಸ್ತ್ರದ ತಿಳಿವಿಗಲ್ಲವೇ?
>>> ಹೌದು, ಯಾಕೆಂದರೆ ಬರಹದಲ್ಲಿ ಒದಗಿಸಿದ ಮಾಹಿತಿಯ ಆಧಾರ ಸ್ಪಷ್ಟವಾಗಿಲ್ಲ.
ತಮ್ಮ ಪ್ರತಿಕ್ರಿಯೆಯಲ್ಲಿ ಹರ್ಷರವರು ಸ್ಪಷ್ಟಪಡಿಸಿದ್ದಾರೆ. ಈ ಮಾಹಿತಿಯನ್ನು ಅವರು ಸಲೀಂ ಅಲಿಯವರ ಆತ್ಮಕತೆಯಿಂದ ಪಡೆದದ್ದು ಎಂದು.
ಆಧಾರ ಸ್ಪಷ್ಟವಾದರೂ ಅದು ಸಲೀಂ ಅಲಿಯವರ ಬಗ್ಗೆ ಅವಸರದ ತೀರ್ಮಾನಗಳಿಗೆ ಬರಲು ಸೂಕ್ತವಾದದ್ದಲ್ಲ.
>>> ಕಪ್ಪೆಗಳ ಸೋಶಿಯಲ್ ಬಿಹೇವಿಯರ್, ಅದರ ಆಹಾರಾಭ್ಯಾಸ, ಜೀವನ ಶೈಲಿಯನ್ನು ಅರಿಯಬೇಕೆಂದರೆ ಅವನ್ನು ಕೊಂದು ಅಭ್ಯಸಿಸಲಾಗದು. ಕೊಂದು ಅಭ್ಯಸಿಸುವುದು ಶರೀರ ಶಾಸ್ತ್ರದ ತಿಳಿವಿಗಲ್ಲವೇ?
ನನ್ನ ಪ್ರತಿಕ್ರಿಯೆಯ ಭಾವವನ್ನು ಗ್ರಹಿಸುವುದರಲ್ಲಿ ನೀವು ಅವಸರ ಮಾಡಿದ್ದೀರಿ. ಪಕ್ಷಿಗಳನ್ನಾಗಲಿ, ಪ್ರಾಣಿಗಳನ್ನಾಗಲಿ ಅಧ್ಯಯನದ, ಜ್ಞಾನಾರ್ಜನೆಯ ಉದ್ದೇಶದಿಂದ ಕೊಲ್ಲುವುದಕ್ಕೂ ಮೋಜಿಗಾಗಿ ಹಿಂಸಾ ವಿನೋದಕ್ಕಾಗಿ ಕೊಲ್ಲುವುದು ವ್ಯತ್ಯಾಸವಿದೆ ಎಂಬುದು ನನ್ನ ಪ್ರತಿಕ್ರಿಯೆಯ ಉದ್ದೇಶವಾಗಿತ್ತು.
>>ನನ್ನ ಪ್ರತಿಕ್ರಿಯೆಯ ಭಾವವನ್ನು ಗ್ರಹಿಸುವುದರಲ್ಲಿ ನೀವು ಅವಸರ ಮಾಡಿದ್ದೀರಿ. ಪಕ್ಷಿಗಳನ್ನಾಗಲಿ, ಪ್ರಾಣಿಗಳನ್ನಾಗಲಿ
ಅಧ್ಯಯನದ, ಜ್ಞಾನಾರ್ಜನೆಯ ಉದ್ದೇಶದಿಂದ ಕೊಲ್ಲುವುದಕ್ಕೂ ಮೋಜಿಗಾಗಿ ಹಿಂಸಾ ವಿನೋದಕ್ಕಾಗಿ ಕೊಲ್ಲುವುದು ವ್ಯತ್ಯಾಸವಿದೆ
ಎಂಬುದು ನನ್ನ ಪ್ರತಿಕ್ರಿಯೆಯ ಉದ್ದೇಶವಾಗಿತ್ತು.
ಉದ್ದೇಶ ಸ್ಪಷ್ಟ ಪಡಿಸಿದ್ದಕ್ಕೆ ವಂದನೆಗಳು. ನಿಮ್ಮ ಪ್ರತಿಕ್ರಿಯೆಯ ಭಾವ ಗ್ರಹಿಸುವಲ್ಲಿ ವಿಫಲನಾಗಿ ಪ್ರತಿಕ್ರಿಯಿಸಿದ್ದದು ಆದರೆ ಅವಸರದಲ್ಲಿ ಪ್ರತಿಕ್ರಿಯಿಸಿದ್ದಲ್ಲ. ಮೇಲಿನ ಪ್ರತಿಕ್ರಿಯೆಯಲ್ಲಿ ನೀಡಿದ ವಿವರಣೆ ಜನರಲ್ಲಾಗಿ ಒಪ್ಪಬಹುದಾದರೂ ಮೇಲಿನ ಸೋಶಿಯಲ್ ಬಿಹೇವಿಯರ್ ಅಧ್ಯಯನ ಮಾಡಲು ಸಲೀಂ ಅಲಿಯವರು ಬಳಸಿದ ವಿಧಾನದ ಸಮರ್ಥನೆಗೆ ಬಳಸಲಾಗದು.
ಇಷ್ಟಕ್ಕೂ ಇಲ್ಲಿ ನಡೆಸುತ್ತಿರುವ ಜ್ಞಾನಾರ್ಜನೆಗೆ ಗುಬ್ಬಿಯ ಸಾವು ಅನಿವಾರ್ಯವಿರಲಿಲ್ಲ. ಒಂದು ಹೆಣ್ಣು ಗುಬ್ಬಿ ಒಂದು ಋತುಚಕ್ರದಲ್ಲಿ ಎಷ್ಟು ಗಂಡಿನೊಡನೆ ಕೂಡುತ್ತದೆ ಎಂದು ಇಲ್ಲಿ ಸ್ಪಷ್ಟವಾಗಿಲ್ಲ. ಒಂದು ಗುಬ್ಬಿ ಸತ್ತು ಹೋಗಿ ಇನ್ನೊಂದು ಗುಬ್ಬಿ ಹೆಣ್ಣು ಗುಬ್ಬಿಗೆ ಆಹಾರ ಒದಗಿಸುವ ಗುಣದಿಂದ ಅವೆಲ್ಲಾ ಗಂಡ ಹೆಂಡಿರೆಂದು ತೀರ್ಮಾನಿಸುವುದು ಸರಿಯಲ್ಲ!
ಇನ್ನು ಮೋಜಿಗಾಗಿ, ವಿನೋದಕ್ಕಾಗಿ ಕೊಲ್ಲುವವರೂ ಕೂಡ, ಮೋಜಿಗಾಗಿ ಅಲ್ಲ ನನ್ನ ಗುರಿ ಹಿಡಿಯುವ ಅರಿವಿಗಾಗಿ ಒಟ್ಟಿನಲ್ಲಿ ಜ್ಞಾನಾರ್ಜನೆಗಾಗಿ ಕೊಂದಿದ್ದು ಎಂದೂ ಸಮರ್ಥಿಸಿಕೊಳ್ಳಬಹುದು.
>>ತಮ್ಮ ಪ್ರತಿಕ್ರಿಯೆಯಲ್ಲಿ ಹರ್ಷರವರು ಸ್ಪಷ್ಟಪಡಿಸಿದ್ದಾರೆ. ಈ ಮಾಹಿತಿಯನ್ನು ಅವರು ಸಲೀಂ ಅಲಿಯವರ ಆತ್ಮಕತೆಯಿಂದ ಪಡೆದದ್ದು ಎಂದು.
ಇಲ್ಲಿ ನಾನು ಅವಸರಿಸಿದ್ದು, ಅದಕ್ಕೆ ಕ್ಷಮೆಯಿರಲಿ
ಸಲೀಂ ಅಲಿಯವರ ಪಕ್ಷಿ ಕಾಳಜಿಯ ಬಗ್ಗೆ ಚರ್ಚೆ ನಡೆಸುವಷ್ಟು ಅವರು ನನಗೆ ತಿಳಿದಿಲ್ಲ. ವಿವರವಾದ ಮಾಹಿತಿ ಇಲ್ಲದೆ ಅವರು ಮಾಡಿದ್ದು ಸರಿಯೋ ತಪ್ಪೋ ಎಂದು ತೀರ್ಮಾನಿಸುವ ಆಸಕ್ತಿಯೂ ನನಗಿಲ್ಲ. ಅಸಲಿಗೆ ಅವೆಲ್ಲ ನನಗೆ ಲೇಖನದ ಮೂಲ ಉದ್ದೇಶವನ್ನು ಡಿಸ್ಟ್ರ್ಯಾಕ್ಟ್ ಮಾಡುವ ಸಂಗತಿಯಾಗಿಯೇ ಕಾಣುತ್ತವೆ.
ಹರ್ಷರವರು ಸಲೀಂ ಅಲಿಯವರ ಆತ್ಮಕತೆಯಲ್ಲಿನ ಆ ಅಂಶವನ್ನು ಪ್ರಸ್ತಾಪಿಸದೆಯೇ ಸಲೀಂ ಅಲಿಯವರು ಕಂಡುಕೊಂಡ ಪಕ್ಷಿ ಜೀವ ಜಗತ್ತಿನ ವಿಸ್ಮಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರೆ ನಾವು ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ ಅಲ್ಲವೇ? ನಮಗಿಲ್ಲಿ ಸಿಕ್ಕ ಅಡಿಶನಲ್ ಮಾಹಿತಿ ನಮ್ಮನ್ನು ದಾರಿ ತಪ್ಪಿಸುತ್ತಿದೆ. ಇದರ ಜೊತೆಗೆ ಇನ್ನಷ್ಟು ಮಾಹಿತಿ ಒದಗಿಸಿಕೊಟ್ಟರೆ ನಮ್ಮ ತೀರ್ಮಾನ ಬದಲಾಗುತ್ತೆ. ಇದು ಒಂದು ರೀತಿಯಲ್ಲಿ ತಕ್ಕಡಿಯಿದ್ದ ಹಾಗೆ. ಯಾವ ತಟ್ಟೆಗೆ ಹೆಚ್ಚು ಮಾಹಿತಿ ಬೀಳುತ್ತದೆಯೋ ಹೆಚ್ಚು ಸಮರ್ಥನೆ, ಸಾಕ್ಷಿ ದಾಖಲಾಗುತ್ತದೆಯೋ ಅತ್ತ ಕಡೆ ನಮ್ಮ ತಕ್ಕಡಿ ವಾಲುತ್ತದೆ!
ಹೀಗಾಗಿ ತೀರ್ಮಾನಗಳಿಗೆ ಬರುವುದನ್ನು ನಾನು ರೆಸಿಸ್ಟ್ ಮಾಡುತ್ತೇನೆ. ನಿಮ್ಮ ತೀರ್ಮಾನಗಳಿಗೆ ನನ್ನ ಗೌರವವಿದೆ.
ನಿಜ, ಯಾವ ಕಡೆಯ ತಕ್ಕಡಿ ಗೆ ಜಾಸ್ತಿ, ಸರಿಯಾದ ಮಾಹಿತಿ ಬೀಳುತ್ತದೆಯೋ ಅದರ ಮೇಲೆ, ಅಲ್ಲದೆ ಯಾರ ಏಳಿಗೆಯ ಉದ್ದೇಶವು ಪ್ರೈಮರಿ importance ಆಗಿದೆ ಎನ್ನುವ ನಿರ್ಧಾರದ ಮೇಲೆ ತಕ್ಕಡಿ ಆಯಾ ಕಡೆ ಯಥೋಚಿತವಾಗಿ ವಾಲುತ್ತದೆ.
ಮಾಹಿತಿಯೇ ಬೇಡ, ನನಗೆ ಬೇಕಾದ ನಿರ್ಧಾರವನ್ನು ನಾನು ನನಗೆ ಬೇಕಾದಂತೆ ತೆಗೆದುಕೊಳ್ಳುತ್ತೇನೆ, ಅಥವಾ ನಿರ್ಧಾರ ತೆಗೆದುಕೊಳ್ಳುವುದಿಲ್ಲ( ಇವೆರಡರ ಮಧ್ಯ ಜಾಸ್ತಿ ವ್ಯತ್ಯಸವಿಲ್ಲವಷ್ಟೇ? ತೆಗೆದುಕೊಂಡ ನಿರ್ಧಾರಗಳು ಕೂಡ ಮಾಹಿತಿಯ ಆಧಾರಕ್ಕನುಗುಣವಾಗಿ ಬದಲಾಗುತ್ತವೆ ಎಂದಾಗ) ಎನ್ನುವುದು ನಮ್ಮನ್ನು ಮಾಹಿತಿ ಇಂದ ವಂಚಿಸುತ್ತದೆಯೇ ಹೊರತು, ಮತ್ತಿನ್ನೇನೂ ಇಲ್ಲ.
ಮನುಷ್ಯ, ಸಾಧಾರಣವಾಗಿ ಪ್ರಾಣಿಗಳಿಗೂ 'humanity' ಯನ್ನು ಆರೋಪಿಸುತ್ತಾನೆ. ನಾಯಿಯೊಂದು ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡುತ್ತಿದ್ದರೆ, ನನ್ನ ನಾಯಿ, ನನಗೆ ಏನೋ ಹೇಳಬೇಕೆಂದು ಬಯಸುತ್ತದೆ ಎಂದು. ಪಾಪ ನಾಯಿ ಸುಮ್ಮನೆ ನೋಡುತ್ತಿರುತ್ತದೆ, ಅಷ್ಟೇ. (http://news.bbc.co.u... )
ಈ ಲೇಖನದಲ್ಲಿ ಬರುವ ಕೆಲವು ವಿವರಣೆಗಳನ್ನೇ ನೋಡಿ. 'ಕ್ರೌಂಚ ಪಕ್ಷಿ ಅಪ್ಪಟ ಸಂಪ್ರದಾಯವಾದಿ' ಕ್ರೌಂಚ ಪಕ್ಷಿ ಗೇನು ಗೊತ್ತು ಅಪ್ಪಟ ಸಂಪ್ರದಾಯ? ಅದರ ಪಾಡಿಗೆ ಅದು ಇದೆ. ಅಷ್ಟೇ. 'ಸೊಕ್ಕಿನ ಜಕಾನಾ -ವಿಚ್ಛೇದನ' ಇತ್ಯಾದಿ. ಅದಕ್ಕೆಲ್ಲಿಯ ಸೊಕ್ಕು, ಎಲ್ಲಿಯ ವಿಚ್ಛೇದನ? ಅದರ evolution ಹೇಗೆ ಆಗ್ತಾ ಇರುತ್ತೋ ಹಾಗೇ ಆಗ್ತಾ ಇರುತ್ತೆ ಅಲ್ವೇ?
ಆದರೂ ಲೇಖನವನ್ನು ಓದಿದಾಗ, ಛೆ ಎಂಥ ಸಲೀಂ ಅಲಿ, ಪಾಪ, ಗುಬ್ಬಿ, ಗುಬ್ಬಿ ಸಂಸಾರ - ಏನೋ ತಿಳಿದು ಕೊಳ್ಳುವುದಿಕ್ಕೆ- ಅದೂ ಬರಿ ನಮ್ಮ ಜ್ಞಾನ ಕ್ಕೆ ಮಾತ್ರ, ಅದರಿಂದ ಗುಬ್ಬಿಗೇನೂ ಲಾಭವಿಲ್ಲ ಎನ್ನಿಸಿದ್ದು ಸುಳ್ಳಲ್ಲ.
ಈ ರೀತಿ ನಮ್ಮ ತನವನ್ನು ನಾವು ಪ್ರಾಣಿಗಳಿಗೆ ಪಕ್ಷಿಗಳಿಗೆ ಆರೋಪಿಸುವುದರಿಂದ, ನಮಗೆ ಯಾವ ರೀತಿ evolutionary advantage ಇರಬಹುದು, ಯೋಚನೆ ಮಾಡ್ತಾ ಇದ್ದೀನಿ.
ಆತ್ಮೀಯ ಸುಪ್ರೀತ,
ನಿಮ್ಮ ಪ್ರತಿಕ್ರಿಯೆಯಿಂದ ನನ್ನ ಪ್ರತಿಕ್ರಿಯೆಗಳಿಗೆ ಒಂದು ಹೊಸ ಹೊಳವು ಸಿಕ್ಕಿದೆ. ಧನ್ಯವಾದಗಳು.
ಆತ್ಮೀಯ ಮಂಸೋರೆ,
ಬರೆಯುವಾಗ ನನಗೂ ಈ ಗೊಂದಲ ಉಂಟಾಗಿತ್ತು. ಡಾ. ಸಲೀಂ. ಅಲಿ ಅವರ ಈ ಪ್ರಯೋಗ ಸಾಕಷ್ಟು ಪುಸ್ತಕಗಳಲ್ಲಿ ದಾಖಲಾಗಿದೆ. ಶ್ರೀ. ಶಿವಾನಂದ ಕಳವೆ ಅವರು ಬರೆದ ‘ಕಾನ್ ಚಿಟ್ಟೆ’ ಪುಸ್ತಕ ನೀವು ಪರಾಮರ್ಶಿಸಬಹುದು. ಗುಬ್ಬಚ್ಚಿಗಳ ಜೀವನ ನಿರ್ವಹಣೆ ತಿಳಿಯಲು ಜೊತೆಗೆ ನಾನು ದಾಖಲಿಸಿದ ಗೀಜಗ ಹಕ್ಕಿಯನ್ನು ಸಹ ಅವರು ಒಮ್ಮೆ ಹೊಡೆದುರುಳಿಸಿ ಮುಂಬೈ ಬಿ.ಎನ್.ಎಚ್.ಎಸ್ ಗೆ ಕೊಂಡೊಯ್ದು ಪರೀಕ್ಷಿಸಿದ್ದರು. ಆಗ ಗುಬ್ಬಚ್ಚಿಗಳ ಸಂಖ್ಯೆಯೂ ಕೂಡ ಸಾಕಷ್ಟಿತ್ತು. ಈಗ ಗುಬ್ಬಚ್ಚಿಗಳ ಸಾವು ಕಳವಳಕಾರಿ ವಿಷಯ.
ಈ ಪ್ರಯೋಗದಿಂದ ಹಕ್ಕಿಗಳ ವಿಸ್ಮಯ ಲೋಕದ ಬದುಕಿನ ಬಗ್ಗೆ ನಾವೆಲ್ಲ ತಿಳಿದುಕೊಳ್ಳುವಂತಾಯಿತಲ್ಲ!
ಧನ್ಯವಾದಗಳು.
ನಿಮ್ಮ ಈ ಬರಹ ಸಲೀಂ ಅಲಿ ಅವರ ಮೇಲೆ ನನಗಿದ್ದ ಅಭಿಪ್ರಾಯವನ್ನು ಬದಲಿಸಿದೆ. ಗುಬ್ಬಿಗಳ ಜೀವನ ವಿಧಾನ ಅವರು ತಿಳಿದುಕೊಂಡರೂ ಅದರಿಂದ ಗುಬ್ಬಿ ಸಮೂಹಕ್ಕೆ ಏನಾದರೂ ಲಾಭವಾಗಿದೆಯೇ?
ನನಗಂತೂ ಗುಬ್ಬಿಗೆ ಎಷ್ಟು ಗಂಡಂದಿರು ಎಂದು ತಿಳಿದು ಕೊಳ್ಳಲು ಅವನ್ನು ಕೊಲ್ಲುತ್ತಾ ಹೋಗುವ ವಿಧಾನ ಅನಾಗರಿಕವೂ, ಕ್ರೂರವೂ, ಅಮಾನವೀಯವೂ ಆಗಿ ಕಾಣುತ್ತಿದೆ.
ಆತ್ಮೀಯ ಗುರು,
ನಮ್ಮ ದೇಶದ ಸಹಸ್ರಾರು ಔಷಧೀಯ ಪ್ರಯೋಗಾಲಯಗಳಲ್ಲಿ ಲಕ್ಷಾಂತರ ಗಿನಿ ಹಂದಿ, ಇಲಿಗಳು ಹಾಗು ಮೊಲ, ಮಂಗಗಳ ಮೇಲೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ, ಸಾಯಿಸಿ, ಅಪಂಗರಾಗಿಸಿ, ಕೊನೆಗೆ ಚಿತ್ರ ಹಿಂಸೆಗೆ ಗುರಿ ಪಡಿಸಿ ತರಹೇವಾರಿ ಔಷಧ ತಯಾರಿಸಲಾಗುತ್ತದೆ. ಈ ಪ್ರಯೋಗಾಲಯಗಳು ಪ್ರಮಾಣೀಕರಿಸಿದ ಮೇಲೆ ಮನುಷ್ಯರಿಗೆ ಖಾಯಿಲೆಗಳನ್ನು ವಾಸಿ ಮಾಡಲು ಬಳಸಲಾಗುತ್ತದೆ. ಒಂದೇ ಏಟಿಗೆ ಕೊಂದ ಡಾ. ಸಲೀಂ ಅಲಿ ಅವರಿಗೂ, ನಿತ್ಯ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ ನಮಗೂ ವ್ಯತ್ಯಾಸಗಳಿವೆ.
ಹಾಗೆಯೇ..ಈ ಪ್ರಯೋಗಗಳಿಂದ ಆ Laboratory Animal ಗಳಿಗೇನಾದರೂ ಉಪಕಾರವಾಗಿದೆಯೇ? ನಮಗಂತೂ ಆಗಿದೆ! ನಮ್ಮವರಿಗೂ ಆಗಿದೆ. ನಮ್ಮ ಬೆನ್ನು ನಮಗೆ ಕಾಣಿಸುವುದಿಲ್ಲ. ಡಾ. ಸಲೀಂ ಅಲಿ ಕೈಗೊಂಡ ಕಾರ್ಯಕ್ಕೆ ಪದ್ಮಭೂಷಣ, ಪದ್ಮವಿಭೂಷಣ ಕೂಡ ದೊರಕಿದೆ. ಅವರ ಸಾವಿರಾರು ಒಳ್ಳೆಯ ಕೆಲಸಗಳಿಗಾಗಿ ಅವರನ್ನು ಕೃತಜ್ಞತೆಯಿಂದ ನಾವು ಸ್ಮರಿಸೋಣ. ಅವರ ಬಗ್ಗೆ ಇರುವ ನಿಮ್ಮ ಅಭಿಪ್ರಾಯ ದಯವಿಟ್ಟು ಬದಲಾಯಿಸಿಕೊಳ್ಳಬೇಡಿ.
ಧನ್ಯವಾದ.
ಪ್ರಿಯ ಹರ್ಷ
ನನ್ನ ಪ್ರತಿಕ್ರಿಯೆಯಲ್ಲಿ ಪ್ರಯೋಗ ಪಶುಗಳ ಬಗ್ಗೆ ಸಮರ್ಥನೆ ಇದೆಯೇ?
ನನ್ನ ಪ್ರತಿಕ್ರಿಯೆ ಡಾ. ಸಲೀಂ ಅಲಿ ಅವರ ಈ ಕೃತ್ಯದ ಬಗ್ಗೆ ಮಾತ್ರ.
ಅವರ ಕಾರ್ಯರಂಗದಲ್ಲಿ ಅವರ ತೊಡಗುವಿಕೆ ಮತ್ತು ಆಸಕ್ತಿಗೆ ಆ ಪಕ್ಷಿ ಸಂಕುಲದ ಬಗ್ಗೆ ಅವರಿಗಿರುವ ಸಾತ್ವಿಕ ಪ್ರೇಮವೆ ಕಾರಣ ಎಂದು ತಿಳಿದುಕೊಂಡಿದ್ದೆ. ಆದರೆ ಅದು ಹಾಗಲ್ಲ ಅವರದು ಒಂದು ಬಗೆಯ "ಶೀತಲ ಕಾರ್ಪೋರೆಟ್ ಕಾರ್ಯವಿಧಾನ" ಎಂದು ನಿಮ್ಮ ಬರಹದ ಮೂಲಕ ತಿಳಿದುಕೊಂಡೆ.
ನಿಮಗೆ ಅವರ ಈ ಕೃತ್ಯವು ಮಾನವೀಯ ಎಂದು ತೋರುತ್ತಿದೆಯೇ ಹರ್ಷ? ಹಾಗಿದ್ದರೆ ನಿಮ್ಮೆಲ್ಲಾ ಲೇಖನಗಳನ್ನು ಹೊಸ ನೋಟದಲ್ಲೊಮ್ಮೆ ಓದಬೇಕು ಅನಿಸುತ್ತಿದೆ.
ಆತ್ಮೀಯ ಗುರು,
ನಿಜ. ಅದು ಅಮಾನವೀಯ. ಈ ಲೋಕದೊಳಗೆ ಎಲ್ಲ ಹೊಸತು ಕೂಡ ಒಂದು ರೀತಿಯಲ್ಲಿ ಅತ್ಯಾಚಾರದ ಪರಿಭ್ರಮಿತ ಮಿತಿಗಳೇ. ಡಾ. ಸಲೀಂ ಅಲಿ ಅವರ ದೃಷ್ಟಿಕೋನ ಏನಿತ್ತು? ಎಂಬುದು ನನಗೂ ನಿಗೂಢ. ಆದರೆ ಹೊಸ ಅನ್ವೇಷಣೆಯ ಹಾದಿಯಲ್ಲಿ ಅವರು ಈ ಕಾಲುದಾರಿಯನ್ನು ಸಹ ಆಶ್ರಯಿಸಿದ್ದರು ಎಂಬುದು ನನ್ನ ಜ್ಞಾನದ ಮಿತಿಗೆ ಕಂಡ ಸತ್ಯ. ನನ್ನ ಎಲ್ಲ ಲೇಖನಗಳಿಗೆ ಹೊಸ ಓದಿನ ಅವಶ್ಯಕತೆ ಇದೆ ಎಂದು ತಮಗನ್ನಿಸಿದರೆ ಹಾಗೆಯೇ ಮಾಡಿ, ಹೊಸ ಹೊಳವುಗಳೇನಾದರೂ ಕಂಡರೆ ನನಗೂ ತಿಳಿಸಿ.
ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬಾರದು ಎಂಬ ತತ್ವ ನನ್ನದು. ಆದಷ್ಟು ಸತ್ಯದ ಪಕ್ಷಪಾತಿಯಾಗಿರಲು, ವಸ್ತುನಿಷ್ಠತೆ ಪ್ರೀತಿಸಲು ನಾನು ನನ್ನ ಲೇಖನಗಳಲ್ಲಿ ಹೆಣಗುತ್ತೇನೆ. ಹಾಗೆಯೇ, ನಮ್ಮ ಕ್ಷೇತ್ರಕ್ಕೆ ಸಂಬಂಧಿಸದ ವಿಷಗಳ ಕುರಿತು ಅರಿಯುವಾಗ INSIGHTFUL and Reading between the lines ಮುಖ್ಯವಾಗುತ್ತದೆ. ಸೂಕ್ತ ವಿವರಣೆಗಳು ಬೇಕಾಗುತ್ತವೆ.
ನಿಮ್ಮ ಆಶಯವನ್ನು ನಾನು ಗೌರವಿಸುತ್ತೇನೆ.
ಪ್ರಿಯ ಹರ್ಷ.
ನಿಮಗೆ ಅದು ಅಮಾನವೀಯ ಅನಿಸಿದ್ದು ನನಗೆ ಮುಖ್ಯ. ಅದು ನಿಮ್ಮ ಬಗೆಗಿನ ನನ್ನ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಹೀಗೆಯೇ ಅಲ್ಲವೇ ನನ್ನೊಳಗೆ ನೀವು ನಿರ್ಮಾಣವಾಗುವುದು. ಅಥವಾ ಬೇರೊಂದು ವ್ಯಕ್ತಿ.?
ಆತ್ಮೀಯ ಗುರು,
ನಿಜವಾಗಿಯೂ. ಆದರೆ ನಮ್ಮ ಅಭಿಲಾಷೆಗಳನ್ನು ಆ ತಜ್ಞನೋರ್ವನ ವ್ಯವಸ್ಥೆ ಅಥವಾ ಅವಸ್ಥೆ, ಅಧ್ಯಯನ ಮಿತಿಗಳಿಗೆ ಅಥವಾ ಅರಿಕೆಗೆ ಜೋಡಿಸಲು ಸಾಧ್ಯವೇ? ಪ್ರಾಮಾಣಿಕವಾಗಿ ಆ ಕೃತ್ಯ ಅಮಾನವೀಯ ಎಂದು ನಾನೂ ಒಪ್ಪುತ್ತೇನೆ. ಆದರೆ ಆ ಕೃತ್ಯದ ಹಿಂದಿನ ಉದ್ದೇಶ ಆ ತಿಳಿವಳಿಕೆ ಇದ್ದ ಮಹನೀಯನಿಗೇ ಗೊತ್ತು ಅಲ್ಲವೇ?
ಧನ್ಯವಾದ.
ಯಾವ ಉದ್ದೇಶವಿದ್ದರೂ ಆ ಎಂಟು ಗುಬ್ಬಿಗಳಿಗೆ ಅದರಿಂದ ವ್ಯತ್ಯಯವಾಗುವುದೇ? ಇರಲಿ. ನಿಮ್ಮ ಅಭಿಪ್ರಾಯ ತಿಳಿಯಿತು ಅಷ್ಟು ಸಾಕು. :)
<<ಆಗ ಗುಬ್ಬಚ್ಚಿಗಳ ಸಂಖ್ಯೆಯೂ ಕೂಡ ಸಾಕಷ್ಟಿತ್ತು. ಈಗ ಗುಬ್ಬಚ್ಚಿಗಳ ಸಾವು ಕಳವಳಕಾರಿ ವಿಷಯ. >>ಆಗ>
ಸಾರ್,
ಈಗ ಮನುಷ್ಯರ ಸಂಖ್ಯೆಯೂ ಸಾಕಷ್ಟಿದೆ ;-). ಇದು ನಿಮ್ಮನ್ನು ಕುರಿತ ಟೀಕೆಯಲ್ಲ. ಅವರು ಕೊಂದ ೮ ಪಕ್ಷಿಗಳಿಗೆ ಹನಿ ಕಂಬನಿ. ನಾವು ಅಧ್ಯಯನ ಮಾಡುವುದಕ್ಕಾಗಿ ಅವುಗಳನ್ನು ಕೊಂದಿದ್ದು ಉಹುಂ
ಹರ್ಷ ಅವರೆ,
ಎಂದಿನಂತೆ, ನಿಮ್ಮ "ಪ್ರಕೃತಿ ವಿಸ್ಮಯ" ಮಾಹಿತಿಯನ್ನೊಳಗೊಂಡ ಲೇಖನ ಮನೋಹರವಾಗಿ ಅಭಿನಂದನಾರ್ಹ!
ನನ್ನಿ, ಮೀನಾ.
ಆತ್ಮೀಯ ಡಾ. ಮೀನಾ ಸುಬ್ಬರಾವ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನು ಕಿಂಚಿತ್ ಹೊಸ ಮಾಹಿತಿ ತಮಗೆ ನೀಡಿದ್ದೇನೆ ಎಂದಾದರೂ ನನ ಶ್ರಮ ಸಾರ್ಥಕ.
ಧನ್ಯವಾದ.
>> ಒಟ್ಟು ೮ ಗಂಡು ಗುಬ್ಬಿಗಳನ್ನು ಇವರು ಹೊಡೆದು ಉರುಳಿಸಿದರೂ<<
ಯಾಕೋ ಈ ಮಾಹಿತಿ ಸರಿ ಹೋಗಲಿಲ್ಲ :(
ಆತ್ಮೀಯ ಶ್ರೀನಾಥ,
ನಾನು ಯಾವುದೇ ಮಾಹಿತಿಯನ್ನು ಉಲ್ಲೇಖಿಸುವಾಗ ಅಳೆದು, ತೂಗಿ, ಕ್ರಾಸ್ ಚೆಕ್ ಮಾಡಿ ದಾಖಲಿಸುತ್ತೇನೆ. ನನಗೂ ಹಾಗೆ ಅನ್ನಿಸಿತು. ಇದು ಸರಿದೂಗದು ಎಂದು. ಆದರೆ ಡಾ. ಸಲೀಂ ಅಲಿ ಅವರ ಆತ್ಮಚರಿತ್ರೆಯಲ್ಲಿ ಈ ಉಲ್ಲೇಖವಿದೆ. ತಾವೇ ೮ ಗಂಡು ಗುಬ್ಬಿಗಳನ್ನು ಹೊಡೆದು ಉರುಳಿಸಿದ್ದಾಗಿ ದಾಖಲಿಸಿದ್ದಾರೆ. ಇಲ್ಲಿ ಯಾವುದೇ ಮಾಹಿತಿಯನ್ನು ನನ್ನ ಕಥೆಗೆ ಪೂರಕವಾಗುವಂತೆ ಉತ್ಪ್ರೇಕ್ಷಿಸಿ ಸರಿ ಹೊಂದುವಂತೆ ಮಾಡಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಒಳ್ಳೆಯ ಮಾಹಿತಿ....
ಗೀಜಗ ಹಕ್ಕಿ ಬಗ್ಗೆ ಕುವೆಂಪು ಅವರ ಅಭಿಪ್ರಾಯ....
http://kuvempu.com/n...
ಆತ್ಮೀಯ ಸುನೀಲ್,
ನಿಮ್ಮ ಹೊಸ ಕೊಂಡಿಯ ಜೋಡಣೆಯಿಂದ ನನ್ನ ಲೇಖನದ ಮೌಲ್ಯ ವರ್ಧನೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಮ್ಮ ಸಹೃದಯತೆಗೆ ನಾನು ಆಭಾರಿ.
ಚೇತೋಹಾರಿ ಪ್ರತಿಕ್ರಿಯೆಗೆ ಧನ್ಯವಾದ.
ಆತ್ಮೀಯ ಸುನೀಲ್,
ನಿಮ್ಮ ಹೊಸ ಕೊಂಡಿಯ ಜೋಡಣೆಯಿಂದ ನನ್ನ ಲೇಖನದ ಮೌಲ್ಯ ವರ್ಧನೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಮ್ಮ ಸಹೃದಯತೆಗೆ ನಾನು ಆಭಾರಿ.
ಚೇತೋಹಾರಿ ಪ್ರತಿಕ್ರಿಯೆಗೆ ಧನ್ಯವಾದ.
ಆತ್ಮೀಯ ಸುನೀಲ್,
ನಿಮ್ಮ ಹೊಸ ಕೊಂಡಿಯ ಜೋಡಣೆಯಿಂದ ನನ್ನ ಲೇಖನದ ಮೌಲ್ಯ ವರ್ಧನೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ತಮ್ಮ ಸಹೃದಯತೆಗೆ ನಾನು ಆಭಾರಿ.
ಚೇತೋಹಾರಿ ಪ್ರತಿಕ್ರಿಯೆಗೆ ಧನ್ಯವಾದ.
ಗೀಜಗನ ಗೂಡಿನ೦ತೆ ನೀವು ಹೆಣೆದ ಕಥಾ ಹ೦ದರವೂ ಸೊಗಸಾಗಿದೆ.
ಆತ್ಮೀಯ ಎ.ಎಂ.ಜಿ,
ದೊಡ್ಡ ಮನಸ್ಸಿನ ಪ್ರತಿಕ್ರಿಯೆಗೆ ಧನ್ಯವಾದ.
ತುಂಬಾನೇ ಚೆನ್ನಾಗಿ ಬರೆದಿದ್ದೀರಿ ಹರ್ಷರವರೇ...
ನೀವ್ಹೇಳಿದಂತೆ ಪಕ್ಷಿ ಲೋಕವದು ಅದ್ಭುತವೇ ಸರಿ...
ಆತ್ಮೀಯ ಕುಣಿಗಲ್ ಮಂಜುನಾಥ್,
ಚೇತೋಹಾರಿ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ವಿಶ್ವಾಸದ ಮಾತುಗಳು ನನ್ನ ಮನೋಬಲ ಹೆಚ್ಚಿಸಿದೆ.
ಅಬ್ಬ ಅಧ್ಬುತ ಪಕ್ಶಿ ಲೋಕ.....
ಆತ್ಮೀಯ ಮಾಲತಿ,
ಪ್ರತಿಕ್ರಿಯೆಗೆ ಧನ್ಯವಾದ. ಪಕ್ಷಿಗಳ ಸಮುದ್ರದಂತಹ ಅದ್ಭುತ ಲೋಕದಿಂದ ನಾನು ಅಕ್ಕಿಕಾಳಿನಷ್ಟು ಹೆಕ್ಕಿತಂದು ಸಂಪದಿಗರಿಗೆ ನೀಡಿದ್ದೇನೆ.
ಲೇಖನ ಏನೋ ತುಂಬಾನೆ ಚೆನ್ನಾಗಿದೆ. ಪಕ್ಷಿಲೋಕ ಅದ್ಭುತವೇ ಸರಿ. ಆದರೆ ಹತವಾದ ೮ ಗುಬ್ಬಿಗಳ ನೆನಪಾದಾಗ, ಮನಸ್ಸು ಮುದುಡುತ್ತೆ. ಇಲ್ಲಿ ಗುಬ್ಬಿಗಳ ಸಂತತಿಯೇ ನಶಿಸಿಹೋಗಿದೆ, ಆದರೆ ನಾವು ಪ್ರವಾಸ ಹೋದಾಗ ಎಲ್ಲಾ ಕಡೆ ಬೇಕಾದಷ್ಟು ಗುಬ್ಬಿಗಳನ್ನು ನೋಡಿ, ಸಂತೋಷ ಪಟ್ಟೆವು.
ಶ್ಯಾಮಲ
ಆತ್ಮೀಯ ಶಾಮಲಾ ಅವರೆ,
ಪ್ರತಿಕ್ರಿಯೆಗೆ ಧನ್ಯವಾದ. ಹಾವೇರಿಯಲ್ಲಿ ೯ನೇ ತರಗತಿ ಓದುತ್ತಿರುವ ಸಂತೋಷ ಎಂಬ ಬಾಲಕನೋರ್ವ ಸ್ವಯಂ ಪ್ರೇರಣೆಯಿಂದ ತನ್ನ ಮನೆ ಹಾಗು ಶಾಲಾ ಆವರಣದಲ್ಲಿ ಪಿಗ್ಗಿ ಬ್ಯಾಂಕ್ ಉಳಿತಾಯ ಹಣದಿಂದ ಗಿಡಗಳಿಗೆ ಸಣ್ಣ ಗಡಿಗೆಗಳನ್ನು ಖರೀದಿಸಿ ತಂದು ಕಟಿದ್ದಾನೆ. ಹಾಗೆಯೇ ಸಮಾನಮನಸ್ಕ ಗೆಳೆಯರೊಂದಿಗೆ ಸಮಾಲೋಚನೆ ನಡೆಸಿ ಅವುಗಳಲ್ಲಿ ನೀರು ಹಾಗು ಕಾಳುಗಳನ್ನು ಸುರಿದು ನೂರಾರು ಪಕ್ಷಿ ಹಾಗು ಪ್ರಾಣಿಗಳಿಗೆ ಆಹಾರ ದಾತ ಎನಿಸಿದ್ದಾನೆ. ನಮ್ಮ ಮನೆಗಳ ಅಂಗಳದಲ್ಲಿಯೂ ಹೀಗೆ ನಾವು ಮಾಡಬಹುದಲ್ಲವೇ?
ಸಂತೋಷನ ತಂದೆ ಓರ್ವ ಮಧ್ಯಮ ವರ್ಗದ ದರ್ಜಿ. ಹಣಕಾಸಿನ ದೃಷ್ಟಿಯಿಂದ ಹೇಳಿಕೊಳ್ಳುವಂತಹ ಸ್ಥಿತಿವಂತರೇನಲ್ಲ.
ಧನ್ಯವಾದಗಳು.
ಹರ್ಷ,
ಲೇಖನ ಓದಿ ಖುಷಿಯಾಯಿತು. ಧನ್ಯವಾದಗಳು.
- ಅರವಿಂದ
ಆತ್ಮೀಯ ಅರವಿಂದ,
ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಓದಿ ಸಂಪದಿಗರ ಬೆನ್ನು ತಟ್ಟುತ್ತಿರಿ.
ಯಾವ ಉದ್ದೇಶದಿಂದ ಕೊಲ್ಲಿಸಿ ಕೊಳ್ಳುತ್ತಿದ್ದೇನೆ ಎಂದು ಸಾಯುತ್ತಿರುವ ಆ ಗುಬ್ಬಿಗೆ ತಿಳಿದರೆ, ಅದಕ್ಕೆ ವ್ಯತ್ಯಾಸವಾಗುತ್ತದೆ ಎನ್ನುತ್ತೀರಾ!
ದೇಶಕ್ಕಾಗಿ, ಧರ್ಮಕ್ಕಾಗಿ ಮತ್ತು ಮಾನವ ಸಂಕುಲಕ್ಕಾಗಿ ಕೆಲವು ಮಾನವರು ಹುತಾತ್ಮರಾಗುತ್ತಾರಲ್ಲ. ಹಾಗೆಯೇ ವ್ಯತ್ಯಾಸವಾಗಬಹುದು. ಅವುಗಳಿಗೆ ಅರ್ಥವಾಗುವಂತೆ ತಿಳಿಸುವ ಬಗೆ ಹಕ್ಕಿತಾತನಿಗೆ ತಿಳಿದಿರಬಹುದು. :)
ನನಗೂ ಗುಬ್ಬಿಗೆಲ್ಲಿಯ ವ್ಯತ್ಯಾಸ ಎಂದು ಯೋಚಿಸುವಾಗ, 'ಹುತಾತ್ಮರ' ಅಥವ ಹಾಗೆಂದುಕೊಳ್ಳುವವರ ಯೋಚನೆ ಬಂದಿದ್ದು ಸುಳ್ಳಲ್ಲ. ಯಾರದೋ ಯಾವುದೊ ಮೌಢ್ಯ ಕ್ಕೆ , (ಅಥವ ಜ್ಞಾನ ವೆಂದು ಕರೆಯಿರಿ) ಎಷ್ಟು ಮನುಷ್ಯ ಗುಬ್ಬಚ್ಚಿ ಗಳೇ ಬಲಿ ಆಗುತ್ತಿರುವಾಗ, ಈ ಗುಬ್ಬಿಗಳು ನಿಜವಾದ ಗುಬ್ಬಿಗಳ ಬಗ್ಗೆ ಯೋಚಿಸುವುದು, ಮ್, ಡೌಟ್.
ಆಫ್ ದಿ ಟಾಪಿಕ್, ಇದ್ದಿಲ ಚೂರು ಮತ್ತು ಮಂತ್ರ ದಂಡ ತುಂಬಾ ಚೆನ್ನಾಗಿ ಬಂದಿದೆ. ಆದರೆ ಹಾಗೆ ಅಂದರೆ ಏನೂ ಅಂದಂತೆ ಆಗುವದಿಲ್ಲ ಅಲ್ಲವೇ?. 'Matured' ಲೇಖನ. :)
:) ನಂನಿ