ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಉಗ್ರ ಪ್ರತಾಪಿ !!!
ರಾತ್ರಿ ಹನ್ನೆರಡೂವರೆಯ ಸಮಯ. ಎಚ್ಚರಿಕೆಯಾಯಿತು. ಬೆಳಗಿನ ಹೊತ್ತು ಶತ್ರುಗಳು ನನ್ನ ಸಾಮ್ರಾಜ್ಯದಲ್ಲಿ ಅಲ್ಲಲ್ಲೇ ತಿರುಗುವುದರ ಬಗ್ಗೆ ವರದಿಗಳು ಬಂದಿತ್ತು. ಜನರ ಮಧ್ಯೆಯೇ ಸಂಚರಿಸುತ್ತಿದ್ದುದರಿಂದ ಹಿಡಿದು ಕೊಲ್ಲಲು ಅವಕಾಶಗಳು ಕಡಿಮೆ ಇತ್ತು. ತಮ್ಮ ಯಾರಾದರೂ ಅನುಮಾನಿಸಿ ಧಾವಿಸಿ ಬಂದಲ್ಲಿ ತಕ್ಷಣವೇ ಸಿಕ್ಕೆಡೆ ನುಸುಳಿ ಪರಾರಿಯಾಗುವುದರಲ್ಲಿ ತೀವ್ರ ಚಾಣಾಕ್ಷತೆ ತೋರುತ್ತಿದ್ದರು. ನಿಶಬ್ದವಾಗಿರುವ ರಾತ್ರಿಯ ಹೊತ್ತು ಗುಂಪಾಗಿ ಕಾರ್ಯಾಚರಣೆ ನೆಡೆಸುತ್ತಾರೆಂದು ನಂಬಲರ್ಹ ಮೂಲಗಳು ತಿಳಿಸಿದ್ದರಿಂದ ಈ ರಾತ್ರಿ ಖುದ್ದಾಗಿ ನಾನೇ ಅವರ ಬಗ್ಗೆ ಹೆಚ್ಚು ವಿಷಯ ಅರಿಯಲು ಈ ಹೊತ್ತಿನಲ್ಲಿ ಎದ್ದಿದ್ದೆ.
ಸದ್ದಾಗದಂತೆ ಮಂಚದಿಂದೆದ್ದೆ. ಮಹತ್ಕಾರ್ಯಕ್ಕೆ ಹೊರಡುವ ಮುನ್ನ, ಪಕ್ಕಕ್ಕೆ ತಿರುಗಿ ಮಡದಿಯ ಮುಖವನ್ನು ನೋಡಿದೆ. ಕನಸಿನಲ್ಲಿ ಏನು ಕಂಡಳೋ, ತುಟಿ ಅಂಚಿನಲ್ಲಿ ಕಿರು ನಗು ಮೂಡಿತ್ತು. ಹಣೆಯ ಮೇಲೆ ಉರುಳಿದ್ದ ಮುಂಗೂದಲನ್ನು ಸರಿಸಬೇಕೆನ್ನಿಸಿದರೂ ಎದ್ದುಬಿಟ್ಟಾಳು ಎಂದುಕೊಂಡು, ಸದ್ದಾಗದಂತೆ ಎದ್ದು ಸರಿದೆ. ಹೆಜ್ಜೆ ಮೇಲೆ ಹೆಜ್ಜೆ ಇಡುತ, ಆಯುಧಸಹಿತನಾಗಿ ಶಯ್ಯಾಗೃಹದಿಂದ ಹೊರಬಿದ್ದೆ.
ಛಂಗನೆ ಹಾರಿ ಯಾರೋ ಓಡಿಹೋದ ಹಾಗೇ ಕಂಡಿತು. ಮಿಣುಕು ದೀಪದಲ್ಲಿ ಸ್ಪಷ್ಟವಾಗಿ ಕಾಣಲಿಲ್ಲ. ಹಾಗೇ ಅನುಸರಿಸಿ ಹೋದೆ. ನನ್ನಲ್ಲಿದ್ದ ದೀವಿಗೆಯನ್ನು ಹಚ್ಚಿದೆ. ಸಣ್ಣ ದೀಪದಲ್ಲೇ ಒಂದೆಡೆ ಗುಂಪಾಗಿ ನಿಂತು ಮಾತನಾಡಿಕೊಳ್ಳುತ್ತಿದ್ದ ಶತ್ರುಗಳನ್ನು ಕಂಡೆ. ಇಂತಹ ಸದಾವಕಾಶವನ್ನು ಬಿಡಬಾರದು ಎನ್ನಿಸಿ ಸಹಾಯಕ್ಕೆ ಜನರನ್ನು ಕರೆಯೋಣವೆಂದರೆ ಇದು ಮಧ್ಯರಾತ್ರಿಯ ಸಮಯ. ನನ್ನೊಂದಿಗೆ ಕೈಜೋಡಿಸಲು ಬರುವ ವೇಳೆಗೆ ಶತ್ರುಗಳು ಕೈ ತಪ್ಪಿ ಹೋಗಬಹುದು.
ವೀರಾಧಿವೀರರು ಹುಟ್ಟಿದ ಕನ್ನಡಭೂಮಿ ಇದು. ಕೇವಲ ಒನಕೆಯನ್ನು ಹಿಡಿದು ಶತ್ರುಗಳ ಧೂಳೀಪಟ ಮಾಡಲಿಲ್ಲವೇ ಆ ತಾಯಿ ಒನಕೆ ಓಬವ್ವ. ತನ್ನ ತಂದೆಯ ಗೈರುಹಾಜರಿಯಲ್ಲಿ ತಾನೊಬ್ಬನೇ ಚಕ್ರವ್ಯೂಹ ಭೇಧಿಸಿ ಪ್ರಾಣವನ್ನೇ ತೆರಲಿಲ್ಲವೇ ಆ ಅಭಿಮನ್ಯು. ಎಂಥಾ ಘೋರ ! ಒಂಟಿಯಾಗಿ ಹೋರಾಡಿ ನಾನು ಪ್ರಾಣ ತೆತ್ತರೂ ಸರಿಯೇ, ಮುಂದಕ್ಕೆ ಇಟ್ಟ ಹೆಜ್ಜೆ ಹಿಂದೆಗೆಯಬಾರದು. ವೀರರನ್ನು ನೆನೆದೊಡನೆ ಮೈಯಲ್ಲಿ ಉತ್ಸಾಹದ ಚಿಲುಮೆ ಏರಿತು. ಶತ್ರುಗಳನ್ನು ನೆನೆದೊಡನೆ ರಕ್ತ ಕುದಿಯತೊಡಗಿತು. ಏಕಾಂಗಿಯಾಗೇ ಚೆಂಡಾಡಿ ಕೊಲ್ಲುವ ನಿರ್ಧಾರ ತಳೆದು, ಕಣ್ಣು ಮುಚ್ಚಿ, ಕೈಯಲ್ಲಿನ ಆಯುಧವನ್ನು ಹಣೆಗೆ ಒತ್ತಿಕೊಂಡು, ಮಾಡು ಇಲ್ಲವೇ ಮಡಿ ಎಂಬ ಮಂತ್ರಘೋಷ ಮಾಡುತ್ತ, ಶತ್ರುಗಳ ಮೇಲೆ ಆಕ್ರಮಣ ನೆಡೆಸಿಯೇಬಿಟ್ಟೆ !
ನನ್ನ ದಾಳಿಗೆ ಪ್ರತಿದಾಳಿ ಮಾಡುವುದಕ್ಕೆ ಸಮಯವೇ ದೊರಯಲಿಲ್ಲ ಶತ್ರುಪಾಳ್ಯಕ್ಕೆ. ನನ್ನ ಕೈ ಮೇಲಾಯಿತು. ರುಂಡ ಮುಂಡಗಳು ಬೇರಾಯಿತು. ಹೆಣಗಳು ಉರುಳಿತು. ಎಲ್ಲವೂ ನಿಮಿಷ ಮಾತ್ರದಲ್ಲಿ ಮುಗಿದು ಹೋಯಿತು. ಪ್ರಜೆಗಳು ನನ್ನ ಮೇಲಿಟ್ಟಿದ್ದ ಭರವಸೆ ಹುಸಿಯಾಗಲಿಲ್ಲ. ನಿಂತಲ್ಲೇ ನಿಂತು ಸೂಕ್ಷ್ಮವಾಗಿ ಎಲ್ಲೆಡೆ ಒಮ್ಮೆ ನೋಡಿ ಯಾರೂ ಹೊಂಚುಹಾಕುತ್ತಿಲ್ಲ ಎಂದು ಮನವರಿಕೆ ಮಾಡಿಕೊಂಡು, ವಿಜಯಗರ್ವದಿಂದ ವಾಪಸ್ಸು ಹೊರಟೆ. ಬೆಳಿಗ್ಗೆ ಎದ್ದು ನೋಡಿದವರು ನನಗೆ ಜಯಕಾರ ಹಾಕುವುದರಲ್ಲಿ ಅನುಮಾನವಿಲ್ಲ.
ಪ್ರಜೆಗಳ ಕ್ಷೇಮವೇ ನನ್ನ ಪರಮ ಗುರಿ !
ಶಯ್ಯಾಗೃಹಕ್ಕೆ ಹಿಂದಿರುಗಿ ವಿರೋಚಿತವಾದ ನಿದ್ರೆಗೆ ಶರಣಾದೆ.
ಬೆಳಗಾಯಿತು. ಎಲ್ಲೆಲ್ಲೂ ಪ್ರಶಾಂತತೆ ತುಂಬಿತ್ತು. ನಾನೆಣೆಸಿದಂತೆ ಯಾವ ಘೋಷಣೆಗಳೂ ನನ್ನನ್ನು ಎಬ್ಬಿಸಲಿಲ್ಲ. ಶುಚಿರ್ಭೂತನಾಗಿ ಕೆಳಗಿಳಿದು ಹೋದೆ. ನನ್ನ ಕಂಡಕೂಡಲೆ ಮಹಾರಾಣಿ ಅಂದರೆ ನನ್ನ ವಿಶಾಲೂ ಘೊಳ್ಳನೆ ನಕ್ಕು ಬಿಡುವುದೆ ?
ನಾನುಗೈದ ಸಾಹಸಕ್ಕೆ ತನ್ನ ಕೈಗಳನ್ನೇ ಹಾರವನ್ನಾಗಿಸಿ ಕೊರಳಿಗೆ ಅರ್ಪಿಸುತ್ತಾಳೆ ಅಂತ ನಾನೆಂದುಕೊಂಡರೆ ಇಲ್ಲೇನೋ ವ್ಯತ್ಯಾಸ ಆಗಿದೆ. ನಾನು, ಅರ್ಥಾತ್ ರಾಮಣ್ಣಿ, ಯಥಾ ಪ್ರಕಾರ ಅರ್ಥವಾಗದೆ ಪೆಚ್ಚು ಮೋರೆ ಹಾಕಿಕೊಂಡು ಏನಾಯ್ತು ಎಂಬಂತೆ ನೋಡಿದೆ.
ಕಾಫೀ ಲೋಟ ಕೈಗಿಡುತ್ತ ’ನೆನ್ನೆ ರಾತ್ರಿ ಏನಾಯ್ತು’ ಎಂದು ನನ್ನನ್ನೇ ಕೇಳಿದಳು. ಸ್ತ್ಥೂಲವಾಗಿ ಹೇಳೋ ಬದಲು ನೇರವಾಗಿ ಇಂತೆಂದೆ ’ನಮ್ಮ ಮನೆ ಜಿರಳೆಗಳು ಬೆಳಿಗ್ಗೆ ಕೈಗೆ ಸಿಕ್ಕದೆ ತಪ್ಪಿಕೊಂಡು ಓಡಿ ಬಿಡುತ್ತೆ, ಆದರೆ ರಾತ್ರಿಹೊತ್ತು ಗುಂಪಾಗಿ ಸಿಗುತ್ತದೆ ಅಂತ ನೀನು ಹೇಳಿದ್ಯಲ್ಲ, ಅದಕ್ಕೆ ನಾನು ರಾತ್ರಿ ಎದ್ದು ಬಂದೆ. ಸಿಂಕ್ ಹತ್ತಿರ ನೆಲದ ಮೇಲೆ ಗುಂಪು ಗುಂಪಾಗಿ ಇದ್ದವು. ಮೊದಲೇ ನನಗೂ ಭಯ. ಹೆದರಿಕೆಗೆ ಪ್ರಾಣ ಹೋದರೂ ಸರಿ ಎಂದು, ಕೈಯಲ್ಲಿದ್ದ ಪೊರಕೆಯಿಂದ ರಪ ರಪ ಬಡಿದು ಕೊಂದುಹಾಕಿದೆ. ನೀನು ನೋಡಿದ ಮೇಲೆ ಕ್ಲೀನ್ ಮಾಡಿದರೆ ಆಯ್ತು ಅಂತ ಬಿಟ್ಟಿದ್ದೆ.... ಅಲ್ಲಾ, ಮಧ್ಯರಾತ್ರಿ ಎದ್ದು ಜಿರಳೆಗಳನ್ನು ಕೊಂದದ್ದಕ್ಕೆ ಮೆಚ್ಚೋದು ಬಿಟ್ಟು, ಹೀಗೆ ನಗ್ತೀಯಲ್ಲಾ ?’ ಎಂದೆ.
ವಿಶಾಲೂ ಹೇಳಿದಳು ’ನೀವು ಜಿರಳೇ ಕೊಂದಿದ್ದರೆ ನಾನು ಖಂಡಿತಾ ಮೆಚ್ಚುತ್ತಿದ್ದೆ. ಮಸಿ ಹಿಡಿದ ಪಾತ್ರೆಗೆ ಹಚ್ಚಲು ಇಟ್ಟುಕೊಂಡಿದ್ದ ಕಿವುಚಿದ ಹುಣಿಸೇ ಹಣ್ಣು ನೆಲದ ಮೇಲೆ ಬಿದ್ದಿತ್ತು. ಪಾತ್ರೆ ತೊಳೆದು ಮುಗಿಸೋ ಹೊತ್ತಿಗೆ ಯಾವುದೋ ಫೋನ್ ಬಂತು. ಹಾಗಾಗಿ ಆ ಗಲಾಟೆಯಲ್ಲಿ ಇದನ್ನು ತೆಗೆದಿಡೋದಕ್ಕೆ ಮರೆತುಹೋಯ್ತು. ನೀವು ಕತ್ತಲಲ್ಲಿ ಅದನ್ನು ಜಿರಳೇ ಗುಂಪು ಅಂತ ಅಂದುಕೊಂಡು ಪೊರಕೆಯಲ್ಲಿ ಹೊಡೆದು ಇಡೀ ಅಡಿಗೆ ಮನೆ ನೆಲ ಹುಣಿಸೇ ಹಣ್ಣು ಹರಡಿದ್ದೀರಿ. ಎಲ್ಲ ಕಡೆ ಅಂಟೋ ಅಂಟು. ಬೆಳಿಗ್ಗೆ ಇಂದ ಅದನ್ನೇ ಕ್ಲೀನ್ ಮಾಡ್ತಿದ್ದೀನಿ’ ಎಂದು ಮೂದಲಿಸಿದಳು.
ಪ್ರಜೆಗಳ ಕ್ಷೇಮ ನಮ್ಮ ಪರಮ ಗುರಿ... ಹಾಗಾಗಿ, ಮಹಾಪ್ರಭುಗಳಾದ ನಾವು ನೆಲ ಒರೆಸಲು ಮಹಾರಾಣಿಯವರಿಗೆ ಸಹಾಯಕ್ಕೆ ನಿಂತಿದ್ದೇವೆ. ತುಂಬಾ ಬ್ಯುಸಿ ಇರೋದ್ರಿಂದ ಆಮೇಲೆ ಮಾತನಾಡೋಣ......
- Login or register to post comments
- 437 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಸಕ್ಕತ್. :)
ಮಾಯ್ಸ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)
:) :)
ಸಂತೋಷ್’ಗೆ, ಆದ ಸಂತೋಷದಿಂದ ಪ್ರಭುಗಳಿಗೆ ಸಂತೋಷವಾಗಿದೆ :-)
ಈ ಪ್ರತಿಕ್ರಿಯೆ ಓದಲು ಮಹಾರಾಜರು ತಮ್ಮ ಬಿಡುವಿಲ್ಲದ ರಾಜಕಾರ್ಯದ ಮದ್ಯೆ ಬಂದು ಸಮಯ ಹಾಳು ಮಾಡಿಕೊಳ್ಳಬಾರದಾಗಿ ವಿನಂತಿ.. ;)
ಸಂಪದದ ಗೆಳೆಯರಿಗಾಗಿ ಮೀಸಲಿಟ್ಟಿರುವ ಸಮಯವನ್ನು ಪ್ರಭುಗಳು ಬಳಸಿಕೊಂಡು ಧನ್ಯವಾದ ಅರ್ಪಿಸುತ್ತಿದ್ದಾರೆ... ದಯವಿಟ್ಟು ಸ್ವೀಕರಿಸಿ :-)
"ಮಹಾಪ್ರಭುಗಳು ತಮ್ಮ ಸಮ್ರಾಜ್ಯದ ಯಾವತ್ತೂ ಆಗು-ಹೋಗುಗಳನ್ನು ಮುಂದೆಯೂ ಹೀಗೆಯೇ ಬಿತ್ತರಿಸುತ್ತಿರಬೇಕೆಂದು ಚಕ್ರವರ್ತಿಗಳ ಆಜ್ಞೆಯಾಗಿದೆ" ಎಂಬುದನ್ನು ತಿಳಿಸಲು ಈ ದೂತ ಈ ರಾತ್ರಿಯಲ್ಲೂ ತನ್ನ ಗಣಕ ಯಂತ್ರದ ಮುಂದೆ ಕುಳಿತು ತೂಕಡಿಸುತ್ತ ಟೈಪಿಸುತ್ತಿದ್ದಾನೆ.
cockರೋಚಕ ಅನುಭವ ಆಗಿರಬೇಕು ಆ ಕಿವುಚಿದ ಹುಣಿಸೇಹಣ್ಣಿನ ಚೂರುಗಳಿಗೆ ಮಹಾರಾಜರು ಪೊರಕಾಪ್ರಹಾರಗೈದಾಗ!
:-)
ಆತ್ಮೀಯ
ಪೊರಕೆಯ ಕೈಯಲಿ ಹಿಡಿದು ಜಿರಲೆಯ ಕೊಲುವೆನೆ೦ದ್ ಹೊರಟ ವೀರಾ ನೀನು
ಹುಣಸೆ ಹಣ್ಣನು ಬಡಿಯೋ ಗು೦ಡಿಗೆಯು ನಿನಗಿದೆಯೋ
ಮೆಚ್ಚಿದೆನು ನಿನ್ನಯ ಬರಹವನು ಉಗ್ರ ಪ್ರತಾಪಿಇಇಇಇಇಇ…
harish athreya
ಎಲೈ ಉಗ್ರ ಪ್ರತಾಪಿ ಮೆಚ್ಚ ಬೇಕಾದ್ದೆ ನಿನ್ನ ಶೌರತ್ವ...
ಉತ್ತರೆಯ ಪೌರುಷ ಹೆಂಗಳೆಯರ ಮುಂದೆ ಎನ್ನುವಂತೆ ನಿನ್ನ ಪ್ರತಾಪ ಹುಣುಸೆಹಣ್ಣಿನ ಮುಂದೆ...ಭಲೇ ಭಲೇ..