22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ಜಗತ್ತಿನಲ್ಲಿ ಸ್ವಘಟ್ಟಿ ಇಲ್ಲ!

November 4, 2009 - 8:29pm
uniquesupri

ಮನುಷ್ಯ ಕೇವಲ ಬುದ್ಧಿಶಕ್ತಿಯಿಂದ ಬದುಕಲು ಸಾಧ್ಯವಿಲ್ಲ. ಹೃದಯವಿಲ್ಲದ ಮೆದುಳು ನಿರ್ದಯಿ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಹೃದಯವಿಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ. ಪ್ರೇಮ, ಕರುಣೆ, ಭಯ, ಭಕ್ತಿ, ವಿನಯ, ಔದಾರ್ಯ, ಸೌಹಾರ್ದ್ಯ ಎಲ್ಲವೂ ಹೃದಯ ಸಾಮ್ರಾಜ್ಯದ ಸಿರಿ ಸಂಪತ್ತುಗಳು. ಒಣ ಬೌದ್ಧಿಕತೆಯಿಂದ ಒಂದು ಹೂ ಬಿರಿಯುವುದೂ ಅಸಾಧ್ಯ. ಮನುಷ್ಯನ ಹೃದಯದಲ್ಲಿ ಹರಿಯುವ ಭಾವನೆಗಳಿಂದಲೇ ಜಗತ್ತಿಷ್ಟು ಸುಂದರವಾಗಿರುವುದು. ನನಗೆ ಗೊತ್ತು, ಇಷ್ಟು ಓದುವಷ್ಟರಲ್ಲಿ ನೀವು ಅನೇಕ ಕಡೆ ನಕ್ಕಿರಲಿಕ್ಕೂ ಸಾಕು. ಹೃದಯವೆಂಬ ಮುಷ್ಟಿಯ ಗಾತ್ರದ ಅಂಗದಲ್ಲಿ ಆಮ್ಲಜನಕ ಬೆರೆತ ರಕ್ತ ಬಿಟ್ಟರೆ (ಕೆಲವರಲ್ಲಿ ಕೊಲೆಸ್ಟ್ರಾಲ್ ಕಣಗಳೂ ಇರುತ್ತವೆ) ಬೇರೆ ಏನೂ ಹರಿಯುವುದಿಲ್ಲ ಎಂದು ವಾದಿಸಬಹುದು. ನಮ್ಮ ಎಲ್ಲಾ ಭಾವನೆಗಳು ನಮ್ಮ ದೇಹದೊಳಗಿನ ಹಾರ್ಮೋನುಗಳೆಂಬ ನಾಟಕ ಮಾಸ್ತರರ ಕಪಟ ನಾಟಕದ ಪಾತ್ರಗಳು. ಹಾರ್ಮೋನ್ ಮಾಸ್ತರರ ಸಮ್ಮತಿಯಿಲ್ಲದಿದ್ದರೆ ಹೂವನ್ನು ನೋಡಿದರೆ ಸಂತೋಷವಾಗುವುದಿಲ್ಲ. ಮಗುವಿನ ನಗುಮುಖವನ್ನು ಕಂಡರೆ ಮನಸ್ಸು ಅರಳುವುದಿಲ್ಲ ಎಂದು ವಿಜ್ಞಾನವನ್ನು ಮುಂದೊಡ್ಡಬಹುದು. ಭಾವನೆ, ಕನಸು, ಅಧ್ಯಾತ್ಮಿಕ ನೆಮ್ಮದಿ ಎಲ್ಲವೂ ಮೆದುಳಿನ ಸರಹದ್ದಿನ ಸಂಗತಿಗಳೇ ಎಂದು ಸಾಬೀತು ಪಡಿಸಬಹುದು. 

ಆದರೆ ಸೂಕ್ಷ್ಮವಾಗಿ ಗಮನಿಸಿ. ಇವೆಲ್ಲವೂ ನಿಮ್ಮ ಒಣಬೌದ್ಧಿಕತೆಯೇ. ಹೃದಯಕ್ಕೆ ಲಾಜಿಕ್ ಇರುವುದಿಲ್ಲ. ತರ್ಕವೆಂಬ ಎರಡಲುಗಿನ ಕತ್ತಿಯ ಸರದಾರ ಹೃದಯವಲ್ಲ. ಇಡೀ ಜಗತ್ತೇ ಎದುರಾಗಿ ನಿಂತು ಸತ್ಯವನ್ನು ಕಣ್ಣಿನೊಳಕ್ಕೆ ತುರುಕಿದರೂ ಹೃದಯ ವಿಚಲಿತವಾಗುವುದಿಲ್ಲ. ವಿಜ್ಞಾನ ಕ್ಷಣ ಕ್ಷಣಕ್ಕೆ ಬದಲಾಗುತ್ತದೆ. ದಿನ ದಿನವೂ ಅದರ ಸತ್ಯವು ಬದಲಾಗುತ್ತದೆ. ಹುಡುಗರನ್ನು ಬದಲಾಯಿಸುವ ಬೆಂಗಳೂರಿನ ಹುಡುಗಿಯರು ಸಹ ವಿಜ್ಞಾನದ ಮುಂದೆ ಸೋಲೊಪ್ಪಿಕೊಳ್ಳಬೇಕು. ಹೃದಯ ಬದಲಾಗುವುದಿಲ್ಲ. ಎಷ್ಟೇ ಸಾಕ್ಷಿ ಆಧಾರಗಳು ಸಿಕ್ಕರೂ ಹೃದಯದ ತೀರ್ಪು ಬದಲಾಗುವುದಿಲ್ಲ. ತನ್ನ ನಿಲುವು ತಪ್ಪೆಂದು ಇಡೀ ಬ್ರಹ್ಮಾಂಡವೇ ಸಾಬೀತು ಪಡಿಸಿದರೂ ಹೃದಯ ಅಚಲ. ಚಪ್ಪಟೆಯಾದ ಭೂಮಿ ಅದಕ್ಕೆಂದೂ ಚಪ್ಪಟೆಯೇ. ಆಮೆಯ ಬೆನ್ನ ಮೇಲಿನ ವಿಶ್ವ ಎಂದೂ ಕೆಳಕ್ಕಿಳಿಯದು. 

ತಮ್ಮ ಮೆದುಳಿನ ಬಂಧಿಖಾನೆಯಲ್ಲಿ ಖೈದುಗೊಂಡವರಿಗೆ ಪ್ರತಿ ಘಳಿಗೆಯೂ ಆತಂಕವೇ. ಗೊಂದಲಗಳೇ. ಹೊಸ ಅನ್ವೇಷಣೆಗೆ, ಹೊಸ ಉತ್ತರಗಳಿಗೆ ಸದಾ ತುಡಿಯುತ್ತ ತಮ್ಮ ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲವನ್ನೂ ಪ್ರಶ್ನಿಸುತ್ತ ಯಾವುದರ ಪಾವಿತ್ರ್ಯವನ್ನೂ ಉಳಿಸದೆ ಎಲ್ಲವನ್ನೂ ಭಗ್ನಗೊಳಿಸುತ್ತಾರೆ. ದಿನಕ್ಕೊಂದು ಆವಿಷ್ಕಾರಗಳನ್ನು ಮಾಡುತ್ತ, ಇನ್ನೇನನ್ನೋ ಸಾಧಿಸುವುದಕ್ಕೆ ಮುನ್ನುಗ್ಗುತ್ತಾರೆ. ಹೃದಯಕ್ಕೆ ಈ ಹುಂಬ ಓಟದಲ್ಲಿ ನಂಬಿಕೆಯಿಲ್ಲ. ಹೃದಯದಲ್ಲಿ ನೆಲೆಸಿರುವ ವ್ಯಕ್ತಿ ಎಲ್ಲಿಗೂ ಓಡುವುದಿಲ್ಲ. ಯಾವುದನ್ನೂ ಪ್ರಶ್ನಿಸುವುದಿಲ್ಲ. ಆತ ಹೃದಯವಂತಿಕೆಯನ್ನು ಎಲ್ಲೆಡೆ ಹರಿಸಿ ಮೆದುಳಿನ ಗುಲಾಮರು ತಯಾರು ಮಾಡಿದ ಹೊಸ ಮೊಬೈಲ್ ಫೋನು, ಕಂಪ್ಯೂಟರು, ಇಂಟರ್ನೆಟ್, ಏರ್ ಕಂಡೀಶನರ್, ಮರ್ಸಿಡೀಸ್, ಜೆಟ್‌ಗಳನ್ನು ಯಾವ ಆತಂಕವೂ ಇಲ್ಲದೆ ಬಳಸುತ್ತ ಹೃದಯವಂತರಾಗಿ ಉಳಿಯುತ್ತಾರೆ. ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ಹಾರುವ ವಿಮಾನದಲ್ಲಿ ಕುಳಿತು ಇವರು ಆಮೆಯ ಬೆನ್ನ ಮೇಲೆ ವಿಶ್ವವು ಸ್ಥಾಪಿತವಾಗಿದೆ ಎಂದೇ ಹೇಳುವರು. ಇದು ನಿಜವಾದ ಹೃದಯವಂತಿಕೆ, ಹೊರಗಿನ ಯಾವ ಬದಲಾವಣೆಗಳೂ, ಸ್ಥಿತ್ಯಂತರಗಳೂ ಬದಲಾಯಿಸಲಾಗದ ಸ್ಥಿತಪ್ರಜ್ಞ ಸ್ಥಿತಿ!

ಮೆದುಳೆಂಬ ಯಜಮಾನನ ನಾಡಿನ ಜೀತದಾಳುಗಳು ಈ ಜಗತ್ತಿನಲ್ಲಿ ಸ್ವಘಟ್ಟಿ  ಎಂಬ ಮೂರು ಕೈಗಳ, ನಾಲ್ಕು ನಾಲಿಗೆಗಳ, ಎರಡು ತಲೆಗಳ, ಹದಿನಾರು ಕಿಡ್ನಿಗಳ ಮನುಷ್ಯ  ಇಲ್ಲವೇ ಇಲ್ಲ ಎಂದು ವಾದಿಸುವರು. ಇದುವರೆಗೆ ನಮ್ಮ ಬರಿಗಣ್ಣು, ಮಸೂರದ ಹಿಂದಿನ ಕಣ್ಣು, ಹಬಲ್ ಟೆಲಿಸ್ಕೋಪಿನ ಕಣ್ಣು ದಿಟ್ಟಿಸಿದ ದೂರದವರೆಗೆ ಇಂತಹ ಯಾವ ಜೀವಿಯೂ ಇಲ್ಲ ಎಂಬುದು ಅನಾಗರೀಕರಾದ, ಕಾಮನ್ ಸೆನ್ಸ್ ಇಲ್ಲದ, ಭಾವನೆಗಳ ಬಂಡವಾಳವಿಲ್ಲದ, ವಿತಂಡ ವಾದಿಗಳಾದ, ನರಕವನ್ನೇ ಭವಿಷ್ಯವನ್ನಾಗಿ ಹೊಂದಿರುವ ನಾಸ್ತಿಕರ ವಾದ. ಇವರು ನಮ್ಮೆಲ್ಲರನ್ನು ಕಾಯುವ, ತನ್ನ ಹದಿನಾಲ್ಕು ಕಿಡ್ನಿಗಳಿಂದ ನಮ್ಮ ಪಾಪಗಳನ್ನು ಶುದ್ಧೀಕರಿಸಿ ಜಗತ್ತನ್ನು ಉದ್ಧಾರ ಮಾಡುವ ಸ್ಬಘಟ್ಟಿಯ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ತೀರಾ ಪವಿತ್ರವಾದ ನಮ್ಮ ಸ್ವಘಟ್ಟಿ ನಂಬಿಕೆಗಳನ್ನೇ ಗೇಲಿಮಾಡುತ್ತಾರೆ. 
  
ಇವರಿಗೆ ಸ್ವಘಟ್ಟಿಯ ಮಹಿಮೆಯ ಬಗ್ಗೆ ಆತನ ಮೂರು ಕೈಯ ವೈಶಿಷ್ಟ್ಯದ ಬಗ್ಗೆ ಹೇಳಲು ಹೋದರೆ, ಸ್ವಘಟ್ಟಿಯನ್ನು ಆರಾಧಿಸಿ ಎನ್ನಲು ಹೋದರೆ ಸ್ವಘಟ್ಟಿ ಇರುವುದಕ್ಕೆ ಸಾಧ್ಯವೇ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ಸಾಕ್ಷಿ ಕೊಡಿ ಎನ್ನುತ್ತಾರೆ. ಮನುಷ್ಯನಿಗೆ ಎರಡು ಕೈ ಒಂದು ತಲೆ, ಒಂದು ನಾಲಿಗೆ ಇರುತ್ತೆ(ಕೆಲವರು ಅದನ್ನು ಎರಡಾಗಿ ಬಳಸುತ್ತಾರೆ) , ಎರಡು ಕಿಡ್ನಿಗಳಿರುತ್ತೆ(ಕೆಲವರ ಒಂದು ಕಿಡ್ನಿ ಮಾರಾಟವಾಗಿರುತ್ತೆ) - ಸ್ವಘಟ್ಟಿಯಂಥ ಮನುಷ್ಯ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಆತ ಇದ್ದಾನೆ ಎನ್ನುವುದಕ್ಕೆ ನೀವೇನಾದರೂ ಅವನನ್ನು ನೋಡಿದ್ದೀರಾ ಎಂದು ಉದ್ಧಟತನದ ಮಾತನಾಡುತ್ತಾರೆ. ಆತ ಎಲ್ಲಿದ್ದಾನೆ ತೋರಿಸಿ ಎಂದು ಸ್ವಘಟ್ಟಿನಿಂದನೆಗೆ ಇಳಿಯುತ್ತಾರೆ. ಮುಗ್ಧ ಸ್ವಘಟ್ಟಿ ಭಕ್ತರ ಕೋಮಲ ಹೃದಯಗಳಿಗೆ ತಮ್ಮ ಹರಿತವಾದ ತರ್ಕದ ಅಲಗುಗಳಿಂದ ಇರಿಯುತ್ತಾರೆ. 

ಸ್ವಘಟ್ಟಿಯನ್ನು ನಮ್ಮ ಮನದಾಳದಲ್ಲಿ ಸ್ಥಾಪಿಸಿಕೊಂಡು ಪ್ರತಿದಿನ ಆತನ ಮೂರು ನಾಲಿಗೆಗಳಲ್ಲಿ ಮೆದುಳನ್ನು  ನೆಕ್ಕಿಸಿಕೊಳುವ ನಾವೇನು ಆತನನ್ನು ನೋಡಿಲ್ಲ. ಆತನನ್ನು ನಮ್ಮ ಮುತ್ತಾತನ ಮುತ್ತಾತನ ಮುತ್ತಾತ ಕಂಡಿದ್ದನಂತೆ. ಆಗ ಸ್ವಘಟ್ಟಿ ತಾನೇ ಬರೆದ ನಾಲ್ಕು ವಿಶ್ವಕೋಶಗಳನ್ನು ನಮ್ಮ ಹಿರಿಯನಿಗೆ ಕೊಟ್ಟಿದ್ದನಂತೆ. ಅನಂತರದಲ್ಲಿ ಸ್ವಘಟ್ಟಿಯ ವಿವಿಧ ಮೂರ್ತಿಗಳು, ನಾನಾ ಆಕಾರದ ಚಿತ್ರಗಳನ್ನಿಟ್ಟುಕೊಂಡು ನಾವು ಪೂಜಿಸುತ್ತೇವೆ. ಆದರೆ ಇತ್ತೀಚೆಗೆ ಕೆಲವು ಸ್ವಘಟ್ಟಿ ಭಕ್ತರು ಸ್ವಘಟ್ಟಿಗೆ ಯಾವ ರೂಪವೂ ಇಲ್ಲ, ಆತನೊಂದು ಶಕ್ತಿ ಎಂದದ್ದು ಅನೇಕ ಮಂದಿ ಆಧುನಿಕರಲ್ಲಿ ಪುಳಕ ಹುಟ್ಟಿಸಿದೆ. ಮೆದುಳಿನ ಜೈಲಿನ ಖೈದಿಗಳಾದ ವಿಜ್ಞಾನಿಗಳನೇಕರು ಸಹ ಈ ಹೊಸ ವಿಚಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ನಾವೂ ಸಹ ಸ್ವಘಟ್ಟಿ ಎನ್ನುವವನೊಬ್ಬ ಮನುಷ್ಯ ಅಲ್ಲ, ಅದೊಂದು ಶಕ್ತಿ ಎಂದು ಹೇಳುತ್ತೇವೆ. ಆದರೆ ಕಣ್ಣಿಗೆ ಕಾಣದ ಶಕ್ತಿ ನಮ್ಮ ಹಿರಿಯರ ಕಣ್ಣಿಗೆ ಹೇಗೆ ಕಂಡಿತ್ತು, ಅದು ಹೇಗೆ ವಿಶ್ವಕೋಶ ಬರೆದಿತ್ತು... ಎಂದು ನಾವು ಚಿಕ್ಕಂದಿನಲ್ಲಿ ಕೇಳಿದ್ದ ಪ್ರಶ್ನೆಗೆ ನಮ್ಮ ಬೆನ್ನ ಮೇಲೆ ಬಾಸುಂಡೆಗಳಾಗಿ ಮೂಡಿದ ಉತ್ತರ ನಮ್ಮನ್ನು ಸಮಾಧಾನ ಪಡಿಸಿತು. ಇನ್ನು ಆ ಪ್ರಶ್ನೆ ನಮ್ಮನ್ನು ಕಾಡದು. ಆದರೂ ಹದಿನಾಲ್ಕು ಕಿಡ್ನಿಗಳಿಲ್ಲದೆ ಸ್ವಘಟ್ಟಿ ಅದು ಹೇಗೆ ಜಗತ್ತಿನ ಕೊಳಕನ್ನು ಶುದ್ಧೀಕರಿಸುತ್ತಾನೆ ಎನ್ನುವುದು ನಮಗಿನ್ನೂ ತೀವ್ರ ಆಧ್ಯಾತ್ಮಿಕ ಜಿಗ್ನಾಸೆಯಾಗಿಯೇ ಉಳಿದಿದೆ.  ಏನೇ ಆದರೂ ಇಂದಿಗೂ ನಾವು ಆ ನಾಲ್ಕು ವಿಶ್ವಕೋಶಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತೇವೆ. ನಮ್ಮೆಲ್ಲಾ ಸಮಸ್ಯೆಗಳಿಗೆ ಅವುಗಳಲ್ಲಿ ಉತ್ತರವಿದೆಯಂತೆ. ಇವ್ನು ಅದ್ಯಾರು ಗುರುಪ್ರಸಾದ್ ಅನ್ನೋನು `ಎದ್ದೇಳು ಮಂಜುನಾಥ' ಅಂತ ಸಿನೆಮಾ ತೆಗೆದಿದ್ದಾನಲ್ಲ, ಅದರಲ್ಲಿನ ಜೋಕುಗಳು ಭಾರಿ ಬುದ್ಧಿವಂತಿಕೆಯವಾಗಿದ್ದಾವಂತೆ. ಎಲ್ಲರೂ ಗುರುಪ್ರಸಾದನನ್ನು ಹೊಗಳುತ್ತಿದ್ದಾರೆ. ಆದರೆ ಆ ಜೋಕುಗಳು ಸ್ವಘಟ್ಟಿಯ ವಿಶ್ವಕೋಶದಲ್ಲಿ ಎಂದೋ ದಾಖಲಾಗಿದ್ದವಂತೆ.  ಹಾಗಂತ ಅನೇಕ ಸಂಶೋಧಕರು ಈಗ ವರದಿ ಮಾಡಿದ್ದಾರೆ. ನಾನೇನು ಅವುಗಳನ್ನು ಸಂಪೂರ್ಣವಾಗಿ ಓದಿಲ್ಲ. ಆದರೆ ಸ್ವಘಟ್ಟಿಗೆ ತಿಳಿಯದಿದ್ದದ್ದು ಏನಾದರೂ ಇದೆಯೇ? 

ಸ್ವಘಟ್ಟಿಯಲ್ಲಿ ನಂಬಿಕೆ ಇಟ್ಟವರು ನಾವು. ಅವನಿಂದಲೇ ಎಲ್ಲವೂ ನಡೆಯುವುದು ಎಂದು ನಂಬಿದವರು ನಾವು. ಈ ನಮ್ಮ ನಂಬಿಕೆಗೆ ಯಾವ ಸಾಕ್ಷಿಯೂ ಬೇಕಿಲ್ಲ. `ಇವತ್ತು ನಂಗೆ ಹತ್ತು ರುಪಾಯಿ ಕೊಡು ನಾಳೆ ನಿನಗೆ ಹಿಂದಿರುಗಿಸುತ್ತೇನೆ' ಎಂದು ಗೆಳೆಯ ಹೇಳಿದರೆ ನಮಗೆ ಆತನ ಮಾತಿಗೆ ಸಾಕ್ಷಿಬೇಕು. ಈ ಪೆನ್ನಿನಲ್ಲಿ ಯಾವ ಬಣ್ಣದಲ್ಲಿ ಬೇಕಾದರೂ ಬರೆಯಬಹುದು ಎಂದಕೂಡಲೆ ನಾವು ಪೇಪರಿನ ಮೇಲೆ ಗೀಚಿ ಪರೀಕ್ಷಿಸಿ ನೋಡ್ತೇವೆ. ನಾನು ಪೋಲೀಸ್ ಎಂದವನಿಗೆ `ಹಾಗಾದ್ರೆ ಎಲ್ಲಿ ಯುನಿಫಾರ್ಮು, ಬ್ಯಾಡ್ಜು' ಎಂದು ಕೇಳುತ್ತೇವೆ. ಅಪರಿಚಿತನ ಗಾಡಿಯ ಹಿಂದೆ ಕೂರುವ ಮೊದಲು ಆತನಿಗೆ ಡ್ರೈವಿಂಗ್ ಬರುತ್ತಾ ಎಂದು ಲೈಸೆನ್ಸ್ ಪರೀಕ್ಷಿಸುತ್ತೇವೆ. ರಸ್ತೆ ಬದಿಯಲ್ಲಿ ಕಾಚ ಖರೀದಿಸುವಾಗಲೂ ಮೂರ್ನಾಲ್ಕು ಬಾರಿ ಕೆರೆದು ಬಣ್ಣವನ್ನು, ಬಟ್ಟೆಯ ಗುಣಮಟ್ಟವನ್ನೂ ಪರೀಕ್ಷಿಸುತ್ತೇವೆ. ಆದರೆ ನಮ್ಮ ಬದುಕಿನ ಅಸ್ತಿತ್ವ ಎಂದೇ ನಾವು ಭಾವಿಸಿರುವ ಸ್ವಘಟ್ಟಿಯ ಬಗ್ಗೆ ನಾವು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ಏಕೆಂದರೆ ಪ್ರಶ್ನೆಗಳನ್ನು ಕೇಳಬಾರದು ಎಂದು ಆತನೇ ಹೇಳಿದ್ದಾನೆ.  

ಆದರೂ ಈ ನಾಸ್ತಿಕರು, ಮುಠ್ಠಾಳರು, ಬುದ್ಧಿವಂತಿಕೆ ಅಟ್ಟಹಾಸದಲ್ಲಿ ಭಾವವನ್ನು ಕಡೆಗಣಿಸುವವರು, ಬುದ್ಧಿಜೀವಿಗಳು ಸ್ವಘಟ್ಟಿಯನ್ನೇ ಪ್ರಶ್ನಿಸುತ್ತಾರೆ. ಅವರನ್ನು ಆ ಸ್ವಘಟ್ಟಿ  ಚೆನ್ನಾಗಿಡಲಿ (ಆದರೆ ನಮ್ಮಷ್ಟಲ್ಲ), ಅವರ ಪಾಪಗಳನ್ನು ಕ್ಷಮಿಸಲಿ (ಇದರಲ್ಲೂ ಮೊದಲ ಪ್ರಿಫರೆನ್ಸ್ ಭಕ್ತರಿಗೇ ಇರತಕ್ಕದ್ದು). 

ಯಾವತ್ತೋ ನನಗೆ ಬಂದ ಮೇಲ್ ನಲ್ಲಿ ಈ ಕಥೆ ಇತ್ತು , ಇದರಲ್ಲಿ ಸ್ವಘಟ್ಟಿಯ ಅಸ್ತಿತ್ವವನ್ನೇ ಪ್ರಶ್ನಿಸುವ ಮೂರ್ಖ ಹಜಾಮನಿಗೆ ಸಾತ್ವಿಕ ಸ್ವಘಟ್ಟಿ ಭಕ್ತರು ಕಣ್ತೆರೆಸಿದ ಅದ್ಭುತವಾದ ಘಟನೆಯ ವಿವರವಿದೆ. 

ಹಿರಿಯರೊಬ್ಬರು ಹಜಾಮನ ಅಂಗಡಿಗೆ ಕ್ಷೌ ರಕ್ಕೆಂದು ಹೋದರು .ಆಗ ಹಜಾಮ ತನ್ನ ಕೆಲಸ ಪ್ರಾರಂಭಿಸಿದ.ತುಸು ಹೊತ್ತಾದ ಮೇಲೆ ಮಾತು ಪ್ರಾರಂಭಿಸಿದರು .ಅವರು ರಾಜಕೀಯದಿಂದ ಹಿಡಿದು ಎಲ್ಲ ವಿಷಯಗಳ ಬಗ್ಗೆ ಮಾತನಾಡಿದರು . ಕೊನೆಗೆ ಮಾತು ಸ್ವಘಟ್ಟಿ ಕಡೆ ತಿರುಗಿತು,ಆಗ ಕ್ಷೌ ರಿಕ " ನಾನು ಸ್ವಘಟ್ಟಿ ಇದ್ದಾನೆ ಎಂದು ಖಂಡಿತ ನಂಬುವದಿಲ್ಲ " ಹಾಗೇಕೆ ಹೇಳುತ್ತೀ ಎಂದು ಹಿರಿಯರು ಕೇಳಿದರು . ಆಗ ಕ್ಷೌ ರಿಕ ಈಗ ಸ್ವಘಟ್ಟಿ ಯಿಲ್ಲ ಎಂದು ಅರ್ಥವಾಗಬೇಕಾದರೆ ನೀವು ಅಂಗಡಿಯಿಂದ ಹೊರಗೆ ಹೋಗಿ ನೋಡಿ ,ಎಷ್ಟೊಂದು ಜನ ಅನಾಥರು, ಅನಾರೋಗ್ಯರು ಮತ್ತು ಹತಭಾಗ್ಯರು ಇದ್ದಾರೆಂದು. ಆತನಿಗೆ ಹದಿನಾರು ಕಿಡ್ನಿಗಳಿರುವುದು ಸತ್ಯವೇ ಆದರೆ ನಮ್ಮ ಮೋರಿಗಳಲ್ಲಿ ಇಷ್ಟು ಹೊಲಸು ಇರಲಿಕ್ಕೆ ಸಾಧ್ಯವೇ? ನೀವು ಹೇಳುವ ಪ್ರಕಾರ ಸ್ವಘಟ್ಟಿ ಇದ್ದರೆ ಇಷ್ಟೊಂದು ಜನ ನಿರ್ಗತಿಕರು ,ಅನಾಥರು ಇರಲು ಸಾಧ್ಯವೇ ? ಎಂದು ಕ್ಷೌರಿಕ ಹಿರಿಯರನ್ನ ಪ್ರಶ್ನಿಸಿದ . ಆಗ ಕ್ಷೌರಿಕ ಮುಂದು ವರೆಸಿದ ಅಕಸ್ಮಾತ್ ಪ್ರೀತಿಯ ಪ್ರತೀಕವಾದ ಸ್ವಘಟ್ಟಿ ಇದ್ದರೇ ಈ ಜಗತ್ತಿನಲ್ಲಿ ದುಃಖವೇ ಇರಬಾರದಾಗಿತ್ತು . ಸ್ವಘಟ್ಟಿಯ ಕಿಡ್ನಿ ಹಾಗೂ ನಾಲಿಗೆಗಳಿರುವುದು ಸತ್ಯವೆಂದಾದರೆ ಈ ಜಗತ್ತಿನಲ್ಲಿ ಗಲೀಜೆಂಬುದೇ ಇರಬಾರದಿತ್ತು. ಇಲ್ಲಿ ನೋಡಿ ನಿಮ್ಮ ತಲೆಯಲ್ಲೇ ಎಷ್ಟು ಗಲೀಜು ಇದೆ, ಸ್ನಾನ ಮಾಡಿ ಎಷ್ಟು ಪಕ್ಷಗಳು ಉರುಳಿದವು?

ಹಿರಿಯರು ಅವನ ಮಾತನ್ನ ಮೌನ ದಿಂದ ಕೇಳಿದರು ,ಅವನಿಗೆ ಯಾವ ಉತ್ತರವನ್ನೂ ಕೊಡಲಿಲ್ಲ, ಯಾಕೆಂದರೆ ಆ ಸಮಯದಲ್ಲಿ ಅವರು ಏನೇ ಹೇಳಿದ್ದರೂ ಅದೊಂದು ವಾದ -ವಿವಾದ ವಾಗುತ್ತಿತ್ತು, ಸ್ವಘಟ್ಟಿಯನ್ನು ಸಮರ್ಥಿಸಿಕೊಳ್ಳುವಂತೆ ಹೃದಯವು ಅರಚಿದರೂ ಕೈಯಲ್ಲಿ ರೇಜರ್ ಹಿಡಿದು ನಿಂತಿದ್ದ ಬಲಿಷ್ಠ ಬಾಹುಗಳ ಹಜಾಮನನ್ನು ಕೆಣಕುವುದು ವಿವೇಕವಲ್ಲ ಎಂಬ ಮೆದುಳಿನ ಪಿಸುಮಾತು ಆಪ್ತವೆನಿಸಿತು. ಅದಕ್ಕೆಂದು ಹಿರಿಯರು ಸುಮ್ಮನೆ ಇದ್ದರು .ಆ ಸಮಯಕ್ಕೆ ಕ್ಷೌರಿಕ ತನ್ನ ಕೆಲಸ ಮುಗಿಸಿದ, ಅವನಿಗೆ ಹಣ ಕೊಟ್ಟು ಹಿರಿಯರು ಅಂಗಡಿಯಿಂದ ಹೊರನಡೆದರು . 

ಸ್ವಲ್ಪ ದೂರ ಹೋದಬಳಿಕ ,ರಸ್ತೆಯಲ್ಲಿ ಆ ಹಿರಿಯರು ಒಬ್ಬ ವ್ಯಕ್ತಿಯನ್ನು ಕಂಡರು ,ಆ ವ್ಯಕ್ತಿ ತನ್ನ ತಲೆತುಂಬ ಕೂದಲು ಬೆಳೆಸಿದ್ದ ,ಅದನ್ನ ಸರಿಯಾಗಿ ಬಾಚಿಕೊಂಡಿರಲಿಲ್ಲ ನೋಡಲು ತುಂಬಾ ವಿಕಾರವಾಗಿ ಕಾಣುತ್ತಿದ್ದ ,ಅವನ ಗಡ್ಡ ಬೆಳೆದು ಮತ್ತಷ್ಟು ಅವನನ್ನು ಮತ್ತಷ್ಟು ವಿಕಾರ ಗೊಳಿಸಿತ್ತು .ಅವನು ಕೊಳಕಾಗಿ ಕಾಣುತ್ತಿತ್ತು. ಕೆಲವರು ಅವನನ್ನು ಋಷಿ ತಪಸ್ವಿ ಎನ್ನುತ್ತಿದ್ದರು. ಋಷಿಯಾದ ಮಾತ್ರಕ್ಕೆ ಗಡ್ಡ ಬೋಳಿಸದಿರುವ ಸ್ವಾತಂತ್ರ್ಯ ಸಿಕ್ಕಿಬಿಡುತ್ತದೆಯೇ ಎಂದುಕೊಂಡ ಹಿರಿಯರು ಮತ್ತೆ ಮರಳಿ ಹಜಾಮನ ಅಂಗಡಿಗೆ ಹೋದರು ,ಆಗ ಹಜಾಮನನ್ನು ಕುರಿತು ," ಈ ಜಗತ್ತಿನಲ್ಲಿ ಹಜಾಮರೇ ಇಲ್ಲ , ಅಕಸ್ಮಾತ ಹಜಾಮರು ಇದ್ದರೇ ಈ ರೀತಿ ಆಗುತ್ತಿರಲಿಲ್ಲ " ಎಂದು ಹೇಳಿದರು . . 

ಆಗ ಹಜಾಮ ನಾನು ಇಲ್ಲಿದ್ದೇನೆ ,ಈದೀಗ ತಾನೇ ನಿಮ್ಮ ಕ್ಷೌರ ಮಾಡಿದ್ದೇನೆ, ಇಪ್ಪತ್ತು ರುಪಾಯಿ ಬದಲಾಗಿ ಇಪ್ಪತ್ತೈದು ರುಪಾಯಿ ನಿಮ್ಮಿಂದ ಪಡೆದಿದ್ದೇನೆ ಎಂದು ಹೇಳಿದ .ಆಗ ಹಿರಿಯರು ಇಲ್ಲ ಹಜಾಮರು ಇಲ್ಲವೇ ಇಲ್ಲ ,ಅವರು ಇದ್ದರೇ ಈ ಜಗತ್ತಿನಲ್ಲಿ ಈ ರೀತಿ ಕೂದಲು ಬೆಳೆಸಿದ ಕೊಳಕರು ಇರುತ್ತಿರಲಿಲ್ಲ ಎಂದು ಹಿರಿಯರು ನುಡಿದರು.
 
ಆಗ ಹಜಾಮ ಅದಕ್ಕೆ ನಾನೇನು ಮಾಡಲಿ ಅವರು ನನ್ನ ಬಳಿಗೆ ಬರುವದಿಲ್ಲ ಬಂದಿದ್ದರೇ ನಾನು ಕ್ಷೌರ ಮಾಡುತ್ತಿದ್ದೆ ಎಂದ .ನನ್ನ ಬಳಿಗೆ ಬರದಿದ್ದರೆ ಅವರ ಗತಿ ಹೀಗೆಯೇ. ನನ್ನ ಬಳಿ ಬಂದರೂ ಅವರ ಬಳಿ ಹಣವಿಲ್ಲದಿದ್ದರೆ ನಾನೇನು ಮಾಡಲಿ? ಹಣವಿಲ್ಲದಿದ್ದರೆ ನನಗೆ ಶರ್ಟು, ಪಂಚೆಯನ್ನಾದರೂ ನೀಡಬಹುದಿತ್ತು. ಬಂಗಾರದಲ್ಲದಿದ್ದರೂ ಹಿತ್ತಳೆಯ ಕಿರೀಟ, ಹೋಗಲಿ ಬೆಳ್ಳಿಯ ಮೀಸೆ... ಯಾವುದೂ ಇಲ್ಲದಿದ್ದರೆ ನಾನು ಏನು ಮಾಡಲು ಸಾಧ್ಯ?
 
ಆಗ ಹಿರಿಯರು ಸರಿಯಾದ ಮಾತು ,ಇದೆ ಉತ್ತರ ಸ್ವಘಟ್ಟಿಗೂ ಅನ್ವಯಿಸುತ್ತದೆ , ಇವರ್ಯಾರೂ ಸ್ವಘಟ್ಟಿಯ ಬಳಿ ಹೋಗದೆ ಇದ್ದರೇ ಸ್ವಘಟ್ಟಿಯಾದರು ಏನು ಮಾಡಿಯಾನು, ಒಂದು ವೇಳೆ ಹೋದರೂ ಬರಿಗೈಲಿ ತಲುಪಿದರೆ ದಯಾಮಯನಾದ ಸ್ವಘಟ್ಟಿ ತಾನೆ ಏನು ಮಾಡಬಲ್ಲ ಎಂದು ಹೇಳಿದರು.


ತನ್ನ ಪಾಪದ ಅರಿವಾದ ಹಜಾಮ ತನ್ನ ಕೈಲಿದ್ದ ರೇಜರಿನಲ್ಲಿ ಕತ್ತು ಕುಯ್ದುಕೊಂಡು ಸ್ವಘಟ್ಟಿಯ ಪಾದಕ್ಕೆ ತನ್ನ ಪ್ರಾಣವನ್ನರ್ಪಿಸಿದ.  



ಲೇಖನ ವರ್ಗ (Category): 
Average: 3.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by inchara123 on

ಸಂಪದಿಗರ ಬಾಯಲ್ಲಿ ಸ್ವಘಟ್ಟಿ ಚರಿತೆ ನಲಿದಾಡಿ ಸಂಪದವೇ ನಿಂತು ಹೋಗಿತ್ತು! ಜೊತೆಗೆ ಆ ಲೇಖನಗಳು (ಕ್ಷಮಿಸಿ, ಚರಿತಾಮೃತ) ಸೇವ್ ಕೂಡ ಆಗಿರಲಿಲ್ಲ. ಮತ್ತೆ ಬೇಕಿತ್ತೇ ಇದು?

Submitted by uniquesupri on

ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬ ಮೂಲಭೂತವಾದಿ, ಅಪ್ರಮಾಣಿಕ ಆಲೋಚನೆಯ ಬಲಿಪಶುವಾಗಿ ಸ್ವಘಟ್ಟಿಯನ್ನು ಬಳಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

Submitted by shreekant.mishrikoti on

ಬೇಕಿತ್ತು !!

ನಾನೇ ಬೇಡಿದ್ದೆ , ಆಗ ಉಳಿಸಿಕೊಂಡಿರಲಿಲ್ಲ ; ಆದರೆ ಬಹುವಾಗಿ ಮೆಚ್ಚಿಕೊಂಡಿದ್ದೆ . ಸಂಪದ ಮತ್ತೆ ಶುರುವಾದಾಗ ಸ್ವಘಟ್ಟಿ ಚರಿತಾಮೃತವನ್ನು ಮತ್ತೆ ಹಾಕಲು ಕೇಳಿಕೊಂಡಿದ್ದೆ.

Submitted by uniquesupri on

ಸ್ವಘಟ್ಟಿ ನನ್ನೊಂದಿಗೆ ನೇರವಾಗಿ ಎಂದೂ ಮಾತಾಡಿಲ್ಲ. ಅಂತಹ ಪುಣ್ಯ ಗಳಿಸಿ ಬಂದವ ನಾನಲ್ಲ. ಸ್ವಘಟ್ಟಿ ಎಂಬ ಪ್ರಭೆಯನ್ನು ಸಣ್ಣ ಗಾಜಿನ ಚೂರಾದ ನಾನು ಕೈಲಾದಷ್ಟರ ಮಟ್ಟಿಗೆ ಪ್ರತಿಫಲಿಸುತ್ತೇನಷ್ಟೇ. ಪ್ರತಿಬಿಂಬದಲ್ಲಿ ಗಾಜಿನ ಎಲ್ಲಾ ಅಪೂರ್ಣತೆಗಳ ನಡುವೆಯೇ ಮೂಲ ಪ್ರಭೆಯ ಅಲ್ಪ ಸ್ವಲ್ಪ ಅಂಶ ತೂರಿ ಬಂದರೂ ನನ್ನ ಪ್ರಯತ್ನ ಸಾರ್ಥಕ.

Submitted by ಹೇಮ ಪವಾರ್ on

ಮನುಷ್ಯ ಹೃದಯವಿಲ್ಲದೆಯೂ ಬದುಕಬಲ್ಲ, ಮೆದುಳು ಇಲ್ಲದೆಯೂ ಬದುಕಬಲ್ಲ, ಕಿಡ್ನಿ ಇಲ್ಲದೆಯೂ ಬದುಕಬಲ್ಲ. ಆದರೆ ಸ್ವಘಟ್ಟಿಯನ್ನು ಮರೆತರೆ ಅವನ ಇರುವನ್ನು ಪ್ರಶ್ನಿಸಿದರೆ ಇವೆಲ್ಲಾ ಅಂಗಗಳು ಒಂದೊಂದು ಜೊತೆ ಹೆಚ್ಚಿದ್ದರೂ ಬದುಕಲಾರ ಎಂಬ ಜ್ಞಾನೋದಯವನ್ನು ನೀಡುವಂತಹ ಈ ಬರಹ ಮುಚ್ಚಿದ್ದ ನಮ್ಮ ಕಣ್ಣನ್ನು ಬೆಂಗಳೂರಿನ ಮ್ಯಾನ್ ಹೋಲ್ ಗಳ ತರಹ ದೊಡ್ಡದಾಗಿ ತೆರೆಸಿದೆ. ಸ್ವಘಟ್ಟಿಯ ಪ್ರತಿಪಾದಕರಾದ ಸುಪ್ರೀತರೆ ನಿಮ್ಮ ಅಕೌಂಟಿಗೆ ಜಮೆಯಾದ ಪುಣ್ಯವು ಬಹುಶಃ ಲೆಕ್ಕಕ್ಕೆ ಸಿಗಲಾರದ್ದು.

ಜೈ ಸ್ವಘಟ್ಟಿ, ನನ್ನಲ್ಲೂ ನಿಮ್ಮಲ್ಲೂ ಇರುವ ಸ್ವಘಟ್ಟಿಗೆ ನನ್ನ ನಮನ.

ಹೇಮ ಪವಾರ್

Submitted by Shreekar on

[quote] ಎಲ್ಲ ಸ್ವಘಟ್ಟಿ ಹಿರಿಮೆ, ಆತನ ಮಹಿಮೆ! [/quote]

ನಿನ್ನೆ ನೋಡಿದಾಗ, ಸ್ವಘಟ್ಟಿಯ ಈ ಚರಿತಾಮೃತ ದಲ್ಲಿ ಸಾಲೀಮಠದ ಸ್ವಾಮಿಗಳ ನಾಲ್ಕೈದು ಪ್ರತಿ ಕ್ರಿಯೆಗಳಿದ್ದವು. ಇಂದು ನೋಡುತ್ತೇನೆ, ಒಂದೂ ಇಲ್ಲ. ಎಲ್ಲ ಸ್ವಘಟ್ಟಿ ಹಿರಿಮೆ, ಆತನ ಮಹಿಮೆ!

ಅಥವಾ ನನ್ನ ಕನಸೋ ಹೇಗೆ?

ಈ ಜಗತ್ತಿನಲ್ಲಿ ಸ್ವಘಟ್ಟಿ ಇರಬಹುದು ಅಥವಾ ಬೇರೆ ಯಾವುದೋ ಜಗತ್ತಿನಲ್ಲಿ ವಿಹರಿಸುತ್ತಿರಬಹುದು. ಆದರೆ ಅವನ ಮಹಿಮೆಗೆ ಉತ್ತಮ ಜ್ವಲಂತ ನಿದರ್ಶನ ಇಲ್ಲಿ ಕಂಡು ಧನ್ಯನಾದೆ.

ಆಧುನಿಕ ಹಿರಣ್ಯಕಶಿಪುರೂಪಿಪ್ರತಿಕ್ರಿಯೆಗಳ ಗತಿ ಏನಾಗುತ್ತದೆ ಸ್ವಘಟ್ಟಿಯ ಮಹಿಮೆಯಿಂದ ನೋಡಿದಿರಾ?

Submitted by thesalimath on

ಅವು ಪ್ರತಿಕ್ರಿಯೆಗಳಲ್ಲ. ಪ್ಅರಸ್ಪರರ ಆತ್ಮಸಂಶೋಧನೆ ನಡೆಸಲು ಕೈಗೊಂಡ ಆಧ್ಯಾತ್ಮಿಕ ಚಿಂತನೆಗಳು. ನಮ್ಮನ್ನು ಸ್ವಾಮಿ ಎಂದು ದಯವಿಟ್ಟು ಕರೆಯಬೇಡಿ. ಅದು ಎಕ್ಸ್ ಕ್ಲುಸಿವ್ ನಮ್ಮ ಸಿಸ್ಯರ ಪೇಟೆಂಟು.

Submitted by uniquesupri on

ಜಗತ್ತಿನ ಸಮಸ್ತ ಕೊಳಕನ್ನೂ ಫಿಲ್ಟರಿಸುವ ಸ್ವಘಟ್ಟಿಯ ಹದಿನಾರು ಕಿಡ್ನಿಗಳಿರುವಾಗ ಭಯವೆಂಥದ್ದು? ಅಲ್ಲವೇ?
ಅಂದಹಾಗೆ ಇನ್ನೊಬ್ಬರ ಭಾವನೆಗಳಿಗೆ ಘಾಸಿ ಮಾಡುವ ತರಬೇತಿ ಎಲ್ಲಿ ಸಿಕ್ಕುತ್ತದೆ? ಈ ಜಗತ್ತಿನಲ್ಲಿ ಸ್ವಘಟ್ಟಿ ಇಲ್ಲ ಎಂದುದು ನಮ್ಮ ಮನಸ್ಸಿನಾಳದ ಎಲ್ಲಾ ಭಾವನೆಗಳಿಗೆ ವಿಪರೀತವಾದ ಘಾಸಿಯನ್ನುಂಟು ಮಾಡಿದೆ. ನಿಮ್ಮ ಕ್ಷಮೆಯನ್ನು ಸ್ವಘಟ್ಟಿಗೆ ಅರ್ಪಿಸಬಿಡಿ :)

Submitted by thesalimath on

<<ಅಂದಹಾಗೆ ಇನ್ನೊಬ್ಬರ ಭಾವನೆಗಳಿಗೆ ಘಾಸಿ ಮಾಡುವ ತರಬೇತಿ ಎಲ್ಲಿ ಸಿಕ್ಕುತ್ತದೆ?>>

ಲಾಲೂ ಯಾದವರು ಭ್ರಷ್ಟಾಚಾರದ ತರಬೇತಿ ಎಲ್ಲಿ ಸಿಗುತ್ತದೆ ಎಂದು ಕೇಳಿದ ಹಾಗಾಯಿತು!

Submitted by Shreekar on

[quote]ಲಾಲೂ ಯಾದವರು ಭ್ರಷ್ಟಾಚಾರದ ತರಬೇತಿ ಎಲ್ಲಿ ಸಿಗುತ್ತದೆ ಎಂದು ಕೇಳಿದ ಹಾಗಾಯಿತು![/quote]
ವಾಹ್ ವಾಹ್ !
ಬಹುತ್ ಖೂಬ್, ಬಹುತ್ ಖೂಬ್!
ಬಹಳ ಚೆನ್ನಾಗಿ ಹೇಳಿದಿರಿ, ಸಾಲಿಮಠರೇ!

Submitted by Shreekar on

ಕ್ಷಮಿಸಿ, ಸ್ವಘಟ್ಟಿಗೆ ಜನ್ಮ ನೀಡಿದ ಕಲಿಯುಗದ ವಸುದೇವ ಅಥವಾ ಜೋಸೆಫ್ ರೂಪಿ ಸುಪರೀತರೇ! :-)

ನಿಮ್ಮ ಸುಕೋಮಲ ಭಾವನೆಗಳಿಗೆ ಅರಿಯದೆ ಉಂಟು ಮಾಡಿದ ಘಾಸಿಗೆ ಕ್ಷಮೆ ಬೇಡುತ್ತೇನೆ.

ಧ್ರಡಚಿತ್ತ, ಹಾಗೂ ಧಾರವಾಡದ ಎಮ್ಮೆಗಳಿಗಿರುವಂತ ದಪ್ಪಚರ್ಮ ಇವುಗಳನ್ನು ದೇವರ ದೇವ ಸ್ವ -ಘಟ್ಟಿಯು ನಿಮಗೆ ಕೊಟ್ಟು, ನಿಮ್ಮನ್ನು ಒಬ್ಬ ಜಟ್ಟಿಯಂತೆ ಮಾಡುವಂತಾಗಲಿ ಎಂದು ಅವನಲ್ಲಿ ಪ್ರಾರ್ಥಿಸುತ್ತೇನೆ.

ಒಂದು ಚಿಕ್ಕ ಸ್ಪಷ್ಟನೆ: ಈ ಜಗತ್ತು ಎಂದಾಗ ನನ್ನ ಮನಸಿನಲ್ಲಿದ್ದದ್ದು ಈ ನಮ್ಮ ಭೂಮಿ ಮಾತ್ರ.

ಭೌತಶಾಸ್ತ್ರವನ್ನೋದಿದ ನಿಮಗೆ ಬ್ರಹ್ಮಾಂಡ, milky way, blackhole ಮುಂತಾದವುಗಳ ಬಗ್ಗೆ, ಭೂಮಿಯಂತಹ ಇತರ ಗ್ರಹಗಳಲ್ಲಿ ಇರಬಹುದಾದ ಜೀವಿಗಳ ಬಗ್ಗೆ ನಾನು ಹೇಳಿಕೊಡಬೇಕಾಗಿಲ್ಲ. ಬೆಳಕಿಗಿಂತಲೂ ವೇಗವಾಗಿ, ಮನೋವೇಗವನ್ನೂ ಮೀರಿ ಭೂಮಿ ಎಂಬ ಈ ಜಗತ್ತನ್ನು ನಾಳೆ ಬಿಟ್ಟು, ಎಷ್ಟೋ ಸಾವಿರ ಪ್ರಕಾಶವರ್ಷಗಳಷ್ಟು ದೂರದ ಜಗತ್ತಿಗೆ ನಿನ್ನೆಯೋ, ಮೊನ್ನೆಯೋ ಹೋಗಿ ಸೇರುವುದು ಸ್ವ-ಘಟ್ಟಿಗೆ ಎಡಗೈ ಕಿರುಬೆರಳಿಂದ ಚಿಟಿಕೆ ಹೊಡೆದಷ್ಟು ಸುಲಭವೆಂಬುದರಲ್ಲಿ ನಿಮಗೇನಾದರೂ ಎಳ್ಳಷ್ಟೂ ಸಂಶಯ ಉಂಟೇ?

ಈಗ ಹೇಳಿ, ನಾನು ಪ್ರತ್ಯೇಕವಾಗಿ ಸ್ವ-ಘಟ್ಟಿಯಲ್ಲಿ ಕ್ಷಮೆ ಕೇಳುವ ಅವಶ್ಯಕತೆ ಇದೆಯೇ?
ಜಗತ್ತಿನ ಹುಲ್ಲುಕಡ್ಡಿಯೂ ಸರ್ವಶಕ್ತನಾದ ಅವನ ಅಪ್ಪಣೆ, ಪ್ರೇರಣೆ ಇಲ್ಲದೆ ಅಲುಗಾಡುವಂತಿಲ್ಲ ಎಂದಿರುವಾಗ ಇಲ್ಲಿ ನಾನು ಬರೆಯುವುದಕ್ಕೆ, ಬರೆದಿರುವದಕ್ಕೆ, ಕಾರಣಪುರುಷ ಅವನಲ್ಲವೇ?

ಆದ್ದರಿಂದ ನಿಮ್ಮ ಹೆಣ್ಣಿನಂಥ ಮ್ರದುಭಾವನೆಗಳಿಗೆ ಘಾಸಿ ಉಂಟಾಗುವುದಕ್ಕೆ ಕಾರಣಕರ್ತ ಅವನಲ್ಲವೇ?

Submitted by uniquesupri on

ಶ್ರೀಕರರೇ,
ಸ್ವಘಟ್ಟಿ ನಿಂದನೆಯನ್ನು ನಾವು ಮುಕ್ತ ಮನಸ್ಸಿನಿಂದ, ಕ್ರೀಡಾ ಮನೋಭಾವದಿಂದ ಸ್ವೀಕರಿಸಿದಂತೆಯೇ ಎಲ್ಲರೂ ಸ್ವೀಕರಿಸಬೇಕು ಎಂದು ನೀವು ಅಪೇಕ್ಷಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ!

ಜೋಸೆಫ್ ಯಾರಿಗೂ ಜನ್ಮ ನೀಡಲಿಲ್ಲ. ಯೇಸುವು ಕನ್ಯೆಯಾದ ಮೇರಿ ಹಾಗೂ ಪವಿತ್ರ ಪ್ರೇತಾತ್ಮದ ಒಬ್ಬನೇ ಮಗನು. ಜೋಸೆಫ್ ಅಮಾಯಕ!

ತನಗೆ ಜನಿಸುವ ಮಕ್ಕಳನ್ನು ಕಂಸ ಕೊಲ್ಲುವನೆಂದು ತಿಳಿದೂ ಸಹ ಕ್ರಿಕೆಟ್ ಟೀಮ್ ಕಟ್ಟುವ ಹುಮ್ಮಸ್ಸಿನಲ್ಲಿ ವಸುದೇವ ಬ್ಯಾಟಿಂಗ್ ಮಾಡಿದ್ದು ದ್ವಾಪರ ಯುಗದ ನೂರ ಎಂಟು ಜೋಕುಗಳಲ್ಲಿ ಒಂದು!

ಸ್ವಘಟ್ಟಿಯೇ ನನ್ನ ಮೂಲಕ ಕ್ಷಮೆಯನ್ನು ಒಪ್ಪಿಕೊಂಡಿರುವಾಗ ಅದರ ಬಗೆಗಿನ ಹೆಚ್ಚಿನ ಚರ್ಚೆ ಅನವಶ್ಯಕ ಅನ್ನಿಸುತ್ತದೆ.

ಲಿಂಗಗಳಲ್ಲಿ ಎರಡು ಮತ್ತೊಂದು ವಿಧ ಎಂದಷ್ಟೇ ತಿಳಿದಿದ್ದ ನಮಗೆ ಭಾವನೆಗಳಿಗೂ ಲಿಂಗವಿದೆ ಎಂದು ತಿಳಿಸಿಕೊಟ್ಟದ್ದಕ್ಕೆ ನಾವು ಆಭಾರಿ. ಭಾವನೆಗಳಿಗೆ ಲಿಂಗವಿದೆ ಎಂಬ ನಿಮ್ಮ ಸಂಶೋಧನೆಯ ಪ್ರಕಾರ ನೀವು ಹೆಣ್ಣಿಗೆ ಘಾಸಿಯುಂಟು ಮಾಡಿದರೆ ಅತ್ಯಾಚಾರದ ಪಾಪಕ್ಕೆ ಗುರಿಯಾಗುವಿರಲ್ಲವೇ?!

Submitted by Shreekar on

೧.
>>ಸ್ವಘಟ್ಟಿ ನಿಂದನೆಯನ್ನು ನಾವು ಮುಕ್ತ ಮನಸ್ಸಿನಿಂದ, ಕ್ರೀಡಾ ಮನೋಭಾವದಿಂದ ಸ್ವೀಕರಿಸಿದಂತೆಯೇ ಎಲ್ಲರೂ ಸ್ವೀಕರಿಸಬೇಕು ಎಂದು ನೀವು ಅಪೇಕ್ಷಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ!<<

ಅರ್ಥವಾಗಲಿಲ್ಲ, ಸ್ವಘಟ್ಟಿ ನಿಂದನೆ ಎಲ್ಲಿ, ಯಾರಿಂದ, ಯಾವಾಗ, ಯಾಕೆ ಆಯಿತು ಎಂದು ವಿವರವಾಗಿ ಹೇಳುವಿರಾ?

೨.
"ಹೆಣ್ಣಿನಂಥ ಮೃದುಭಾವನೆ" ಪದಪ್ರಯೋಗ ನಿಮ್ಮಲ್ಲಿ ವಿಪರೀತ ಅನರ್ಥ ಉಂಟು ಮಾಡಿದೆ - ಹೆಣ್ಣಿನಂಥ = "ಹೆಣ್ಣ ಹಾಗಿರುವ" ಎಂದೇ ಹೊರತು "ಹೆಣ್ಣಾಗಿರುವ" ಎಂದಲ್ಲ, ಇದು ನನ್ನ ತಿಳುವಳಿಕೆ. ತಪ್ಪ್ಗಿದ್ದರೆ ದಯವಿಟ್ಟು ತಿದ್ದಿಕೊಳ್ಳಿ.

ನಿಮ್ಮಲ್ಲೂ, ನನ್ನಲ್ಲೂ, ಎಲ್ಲರಲ್ಲೂ, ಎಲ್ಲದರಲ್ಲೂ ಇರುವ ಸ್ವಘಟ್ಟಿಗೆ ನಮೋನ್ನಮಃ.

Submitted by RAVIKIRAN K on

ಸ್ವಘಟ್ಟಿ ಎಂದರೆ ಏನು? ದಯವಿಟ್ಟು ತಿಳಿದವರಾರಾದರೂ ನನಗೆ ವಿಷದವಾಗಿ ತಿಳಿಸಿ. ಅದೇನು ಭೂತವೇ? ದೇವರೇ? ಅತಿಮಾನುಷ ಶಕ್ತಿಯೇ? ಒಬ್ಬ ಮನುಷ್ಯನೇ? ಆಗಿ ಹೋದ ಮನುಷ್ಯನೆ?ಸ್ತುತ್ಯಾರ್ಹವಾದ ವ್ಯಕ್ತಿಯೇ? ನಾನು ಇದುವರೆವಿಗೂ ಸಂಪದದಲ್ಲಿ ಬಿಟ್ಟರೆ ಯಾರ ಬಾಯಲ್ಲೂ ಕೇಳಿದವನಲ್ಲ, ಕಣ್ಣಾರೆ ನೋಡಿಯೂ ಇಲ್ಲ. ಹೀಗೆ ಕೇಳಿದ್ದಕ್ಕೆ ನೀವ್ಯಾರೂ ನನ್ನನ್ನು ಅಪಹಾಸ್ಯ ಮಾಡೋಲ್ಲ ತಾನೇ!?

Submitted by allama on

ಇ೦ತಹ ವಿಕೃತ ಶಬ್ದಗಳಿಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ರವಿಕಿರಣ್ ಸ೦ಪದದಲ್ಲಿ ಮನಸ್ಸನ್ನು ಅರಳಿಸುವ ಅನೇಕ ಬರಹಗಳಿವೆ ಅವುಗಳತ್ತ ತಲೆಹಾಕಿ.

Submitted by savithru on

ಅಲ್ಲಮರೆ

ಈ "ವಿಕೃತ" ಪದದ ಅರ್ಥವನ್ನ ಸ್ವಲ್ಪ ಬಿಡಿಸಿ ಹೇಳುತ್ತೀರಾ? "ಸ್ವಘಟ್ಟಿ" ಅದು ಹೇಗೆ "ವಿಕೃತ" ಪದ ಅಂತ ತಿಳ್ಕೊಬೇಕು ಅಂತ ಆಸೆ. ;)

Submitted by uniquesupri on

:)

Submitted by roopablrao on

ಸ್ವಘಟ್ಟಿಯ ಮಹಿಮೆಗಿಂತ ನಿನ್ನ ನಿರೂಪಣೆಯೇ ಚೆನ್ನಾಗಿದೆ
ಇನ್ನು ಆ ಮಹಾ ಮಹಿಮ ಸ್ವಘಟ್ಟಿ ತನ್ನ ನಾಲ್ಕು ನಾಲಿಗೆಗಳನ್ನೂ ಮೂರು ಕೈಗಳನ್ನು ನಿನಗೆ ಕೊಟ್ಟು ಆತನ ಮಹಿಮೆಯನ್ನ ಸಾರುವ ದೂತನನ್ನಾಗಿ ಮಾಡಿರುವುದು ಅತೀವ ಸಂತಸ ತಂದಿದೆ.
ಹೀಗೆ ಆ ಸ್ವಘಟ್ಟಿ ಎಂಬ ಮಹಾ ಮಹಿಮಾತ್ಮನನ್ನ ಕೊಂಡಾಡುವಲ್ಲಿ(?) ಮಾತ್ರ ತಮ್ಮ ಬುದ್ದಿ ಶಕ್ತಿಯನ್ನು ಸದ್ವಿನಿಯೋಗಿಸಿಕೊಂಡರೆ ಸ್ವಘಟ್ಟಿಯಲ್ಲದ ಇತರ ದೇವರುಗಳು ನಿನ್ನನ್ನು ಹರಸುತ್ತಾರೆ.

>>" ಒಂದು ವೇಳೆ ಹೋದರೂ ಬರಿಗೈಲಿ ತಲುಪಿದರೆ ದಯಾಮಯನಾದ ಸ್ವಘಟ್ಟಿ ತಾನೆ ಏನು ಮಾಡಬಲ್ಲ ಎಂದು ಹೇಳಿದರು."
ನಿಮ್ಮ ಸ್ವಘಟ್ಟಿ ಬರಿ ಗೈನಲ್ಲಿ ಹೋದರೆ ಏನು ಮಾಡುವುದಿಲ್ಲವೇ? ಹಾಗಿದ್ದಲ್ಲಿ ನಿಮ್ಮ ಸ್ವಘಟ್ಟಿ ಏನನ್ನು ಅಪೇಕ್ಷಿಸುತ್ತಾನೆ ? ತನ್ನ ಮೂರು ಕೈಗಳ ತುಂಬಾ ಹಣವನ್ನೇ?.ಹಾಗಿದ್ದಲಿ ಆತ ಲಂಚಕೋರ ಅಥವ ತಿಂಡಿಯನ್ನೇ ಹಾಗಿದ್ದಲ್ಲಿ ಆತ ತಿಂಡಿ ಪೋತ.
ಮತ್ತಿನ್ನೇನು ಕೇಳುತ್ತಾನೆ ನಿಮ್ಮ ಆ ಸ್ವಘಟ್ಟಿ
ಅವರ ಈ ಚರಿತೆಯನ್ನು ಹೇಳುವಂತಹವರಾಗಿ

Submitted by uniquesupri on

>>> ಸ್ವಘಟ್ಟಿಯ ಮಹಿಮೆಗಿಂತ ನಿನ್ನ ನಿರೂಪಣೆಯೇ ಚೆನ್ನಾಗಿದೆ

ದೂತನನನ್ನು ಒಡೆಯನ ವಿರುದ್ಧ ಎತ್ತಿಕಟ್ಟುವ ಸಂಚೇ ಇದು?

>>> ಹೀಗೆ ಆ ಸ್ವಘಟ್ಟಿ ಎಂಬ ಮಹಾ ಮಹಿಮಾತ್ಮನನ್ನ ಕೊಂಡಾಡುವಲ್ಲಿ(?) ಮಾತ್ರ ತಮ್ಮ ಬುದ್ದಿ ಶಕ್ತಿಯನ್ನು ಸದ್ವಿನಿಯೋಗಿಸಿಕೊಂಡರೆ ಸ್ವಘಟ್ಟಿಯಲ್ಲದ ಇತರ ದೇವರುಗಳು ನಿನ್ನನ್ನು ಹರಸುತ್ತಾರೆ.

‘ಇತರೆ ದೇವರುಗಳು’ ಎಂದು ಆಮಿಷವನ್ನೊಡ್ಡಿ ಸ್ವಘಟ್ಟಿ ಸತ್ವಪಥದಿಂದ ನನ್ನನ್ನು ವಿಮುಖನನ್ನಾಗಿಸುವ ಸಂಚೇ ಇದು?

>>> ನಿಮ್ಮ ಸ್ವಘಟ್ಟಿ ಬರಿ ಗೈನಲ್ಲಿ ಹೋದರೆ ಏನು ಮಾಡುವುದಿಲ್ಲವೇ? ಹಾಗಿದ್ದಲ್ಲಿ ನಿಮ್ಮ ಸ್ವಘಟ್ಟಿ ಏನನ್ನು ಅಪೇಕ್ಷಿಸುತ್ತಾನೆ ? ತನ್ನ ಮೂರು ಕೈಗಳ ತುಂಬಾ ಹಣವನ್ನೇ?.ಹಾಗಿದ್ದಲಿ ಆತ ಲಂಚಕೋರ ಅಥವ ತಿಂಡಿಯನ್ನೇ ಹಾಗಿದ್ದಲ್ಲಿ ಆತ ತಿಂಡಿ ಪೋತ.

ಸ್ವಘಟ್ಟಿಯು ಐದು ನೂರ ಅರವತ್ತನೆಯ ಬಾರಿ ಸೀನುವಾಗ ಸಿಂಬಳವು ತನ್ನದೇ ಬಿಂಬವಾದ ಪರಘಟ್ಟಿಯ ಮೇಲೆ ಜಿನುಗಿತು. ಪರಘಟ್ಟಿಯು ಸ್ವಘಟ್ಟಿಯ ಮೇಲೆ ಮೊಕದ್ದಮೆಯನ್ನು ಬರೆಸಿ ಎಪ್ಪತ್ತು ಕೋಟಿ ಘಟ್ಟಾಲರುಗಳನ್ನು ಪರಿಹಾರವಾಗಿ ಕೇಳಿದನು. ಅಂದಿನಿಂದ ಸ್ವಘಟ್ಟಿಯು ತನ್ನ ಭಕ್ತರಿಂದ ಪಡೆದ ಕಾಣಿಕೆ ಪೈಸಾ ಪೈಸಾವನ್ನು ಒಟ್ಟುಗೂಡಿಸಿ ಪರಘಟ್ಟಿಗೆ ಸಲ್ಲಿಸುತ್ತಿರುವನು. ಆದರೆ ಬಡ್ಡಿಯ ಮೇಲೆ ಬಡ್ಡಿಯು ಬೆಳೆಯುತ್ತ ಹೋಗಿ ಇಂದಿಗೂ ಸ್ವಘಟ್ಟಿಯು ಪೈಸೆ ಪೈಸೆಗಾಗಿ ಬೆವರುಸುರಿಸುತ್ತಿರುವನು!

Submitted by Shreekar on

ಪ್ರಶ್ನೆ ಉತ್ತರಗಳೆಂಬ ಬಿಂಬ ಪ್ರತಿಬಿಂಬ!

ರೂಪಾ ಯಿಗಳಿಗೆ ಪೈಸೆ
ಡಾಲರ್ ಗಳಿಗೆ ಶೆಂಟುಗಳು,
ಘಟ್ಟಾಲರುಗಳಿಗೆ ?

Submitted by roopablrao on

ನಡೆಯಲಿ ನಡೆಯಲಿ ಸ್ವಘಟ್ಟಿಯ ಚರಿತಾಮೃತ ಹೀಗೆ
ಸ್ವಘಟ್ಟಿಯ ಬಿಂಬವೋ ಪ್ರತಿ ಬಿಂಬವೋ ಏನೋ ಅಂತೂ ಸ್ವಘಟ್ಟಿಯ ಪುಣ್ಯವೋ ಪುಣ್ಯ , ಸುಪ್ರೀತನ ಬಾಯಿಂದ(ಕೈಯಿಂದ )ಸಹಸ್ರ ನಾಮಾವಳಿಗಳ ಧಾಳಿಗಳಿಗೆ ಸಿಲುಕಿರುವುದರಿಂದ .
ರಾಜನನ್ನು ಬೈಯ್ಲ್ಲಲಾಗದವನು ಯಾವುದೋ ಮರವನ್ನು ಅಂದು ಚಪಲ ತೀರಿಸಿಕೊಳ್ಳುವ ದೃಶ್ಯ ಏಕೋ ಕಣ್ಣಿಗೆ ಕಟ್ಟುತ್ತಿದೆ

Submitted by uniquesupri on

ನಿಮ್ಮ ಮೆಚ್ಚುವಿಕೆಗೆ ಧನ್ಯವಾದಗಳು. ಸ್ವಘಟ್ಟಿಯನ್ನು ನೀವೇ ಮೆಚ್ಚಿದಿರಿ ಎಂದ ಮೇಲೆ ನನಗೆ ಇನ್ನ್ಯಾವ ಸಾಕ್ಷಿಯೂ ಬೇಡ ಸ್ವಘಟ್ಟಿ ಪಥವೇ ಸತ್ಯದ ಪಥ ಎಂದು ನಂಬಲಿಕ್ಕೆ.
>>> ರಾಜನನ್ನು ಬೈಯ್ಲ್ಲಲಾಗದವನು ಯಾವುದೋ ಮರವನ್ನು ಅಂದು ಚಪಲ ತೀರಿಸಿಕೊಳ್ಳುವ ದೃಶ್ಯ ಏಕೋ ಕಣ್ಣಿಗೆ ಕಟ್ಟುತ್ತಿದೆ
ಹೌದು ಸ್ವಘಟ್ಟಿಯನ್ನು ಬಯ್ಯುವವರನ್ನು ಕಂಡರೆ ಹಾಗೇ ಅನ್ನಿಸುತ್ತದೆ ನನಗೂ :)