September 12, 2006 - 10:49am
ದಾಯ್ ಜನ್ ಗುಮ್!
ಗೆಳೆಯರೇ,
ಜಪಾನಿನ ದೂರದರ್ಶನದ ದುರ್ದರ್ಶನದ ಬಗ್ಗೆ ಈ ಹಿಂದೆ ಬರೆದಿದ್ದೆನಲ್ಲವೇ? ಇದ್ದುದರಲ್ಲಿ ಉತ್ತಮವೆನ್ನುವಂಥ, ಮನೆಮಂದಿಯೆಲ್ಲ ಕುಳಿತು ನೋಡುವಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ಸರ್ಕಾರೀ ಕೃಪಾಪೋಷಿತ ವಾಹಿನಿ ಎನ್ ಎಚ್ ಕೆ [ನಿಹೋನ್ ಹೋಸೋ ಕ್ಯೋಕಯ್ = ಜಪಾನ್ ಪ್ರಸಾರ ಸಹಕಾರ ಸಂಘ] ಒಳ್ಳೆಯ ಹೆಸರು ಪಡೆದಿದೆ. ಎಲ್ಲ ದೇಶದ ಉತ್ತಮ ಕಾರ್ಯಕ್ರಮಗಳನ್ನೂ, ಸಾಂಸ್ಕೃತಿಕ ವೈವಿಧ್ಯಗಳನ್ನೂ ಸಂಗ್ರಹಿಸಿ ಜಪಾನ್ ಭಾಷೆಯ ದನಿಗೂಡಿಸಿ ಜನರು ಮೆಚ್ಚುವಂತೆ ಒಳ್ಳೆಯ ಗುಣಮಟ್ಟದ ಸರಣಿಯನ್ನು, ಗಣಕ ಚಿತ್ರಣಗಳನ್ನೂ, ಉತ್ತಮ ವಿವರಣೆಯನ್ನೂ ಸೇರಿಸಿ ಪ್ರಸಾರ ಮಾಡುತ್ತದೆ. ತನ್ನದೇ ಆದ ಛಾಪು ಮೂಡಿಸುವ ಕಿರುಚಿತ್ರ, ಧಾರಾವಾಹಿಗಳನ್ನೂ ನಿರ್ಮಿಸಿ ಒಳ್ಳೆಯ ಹೆಸರುಗಳಿಸಿದೆ. ೧೯೮೦ ರ ದಶಕದಲ್ಲಿ ಭಾರತದಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳಾಗಿದ್ದ 'ಜಯಂಟ್ ರೋಬೋಟ್', 'ಓಶಿನ್' ಗಳನ್ನು ನಿರ್ಮಿಸಿದ್ದೇ ಈ ವಾಹಿನಿ. ಇತ್ತೀಚೆಗೆ ಈ ವಾಹಿನಿಯಲ್ಲಿ (ಜಪಾನಿನಲ್ಲಿ) 'ನಮ್ಮ ಭೂಮಿ' ಎಂಬ ಸೊಗಸಾದ ವೈಜ್ಞಾನಿಕ ಧಾರಾವಾಹಿ ಪ್ರಸಾರವಾಯಿತು; ಅದನ್ನು ನೋಡಿದ ಎಂತಹ ದಡ್ಡನಿಗೂ ಭೂಮಿಯ ಹುಟ್ಟಿನಿಂದ ಅಂತ್ಯದವರೆಗಿನ ಸಕಲವೂ ತಿಳಿಯುವಂತಿತ್ತು! ಭಾರತದಲ್ಲಿ ಇನ್ನೂ ಅತ್ತೆ-ಸೊಸೆಯ ಜಗಳವೇ ಬಂಡವಾಳವಾಗಿರುವ ದೈನಂದಿನ ಧಾರಾವಾಹಿಗಳೇ ಓಡುತ್ತಿವೆ; ಎಲ್ಲಾ ಒಂದೇ ರೀತಿಯ ಕಥೆಗಳು!!! ಸುಮ್ಮನೆ ಐಟಿ ! ಐಟಿ ! ಎಂದು ಕೂಗಿದರೇನು ಬಂತು? ಜನಕ್ಕೆ ಮಾಹಿತಿಯನ್ನು ತಲುಪಿಸಲು ಭಾರತದ ವಾಹಿನಿಗಳಿಗೆ ಬಿಡುವೇ ಇಲ್ಲ! ನೂರು 'ಮನೆ ಮನೆ ಕತೆ'ಗಳಿಗೊಂದು 'ಜ್ಞಾನಾರ್ಜನೆಯಾಗುವ ಕತೆ' ಬೇಡವೆ? ಯಾವಾಗ ಭಾರತದ ಉಪಗ್ರಹವಾಹಿನಿಗಳಿಗೆ ಬುದ್ಧಿ ಬರುವುದೋ ತಿಳಿಯದು!
ಸರಿ ನಮ್ಮವರಿಗೆ ಸಹಸ್ರನಾಮಾರ್ಚನೆ ಮಾಡುವುದಕ್ಕೆ ಇನ್ನೂ ಜನ ಸಾಲಿನಲ್ಲಿದ್ದಾರೆ; ಅದನ್ನು ಬಿಡಿ. ನಾನು ಹೇಳುತ್ತಿದ್ದ ಎನ್.ಎಚ್.ಕೆ ವಾಹಿನಿ ಸುಮಾರು ಒಂದೂವರೆ ವರ್ಷದಿಂದ ಹೊಸ ಸಾಪ್ತಾಹಿಕ ಧಾರಾವಾಹಿಯನ್ನು ಪ್ರಸಾರಮಾಡುತ್ತಿದೆ - ಕೊರಿಯಾದ ಇತಿಹಾಸದ ಪ್ರಸಿದ್ಧ ಮೊದಲ ಅರಮನೆಯ ವೈದ್ಯೆ 'ದಾಯ್ ಜನ್ ಗುಮ್'ಳ ಬದುಕಿನ ಕಥೆ. ಜಪಾನಿನಲ್ಲಿ ಅದರ ಹೆಸರು 'ಚಂಗುಮು ನೊ ಚಿಕಾಯ್' ಅಂದರೆ 'ಚಗುಂಳ ಶಪಥ'. ನೀವೆಂದುಕೊಳ್ಳಬಹುದಾದಂತೆ ಇದು ಇನ್ನೊಂದು 'ಅತ್ತೆ -ಸೊಸೆ' , 'ತುಳಸಿ', 'ಪಾರ್ವತಿ', 'ಸರೋಜಿನಿ' ಅಲ್ಲ! ಅಲ್ಲವೇ ಅಲ್ಲ! ಬದಲಿಗೆ, 'ಮಂಗಮ್ಮನ ಶಪಥ', 'ಕಿತ್ತೂರು ಚೆನ್ನಮ್ಮ', 'ರಾಣಿ ಲಕ್ಷ್ಮೀಬಾಯಿ', 'ಒನಕೆ ಓಬವ್ವ' ನಂತಹ ಕತೆ! ಪೌರಾಣಿಕವೂ ಅಲ್ಲದ ಆಧುನಿಕವೂ ಅಲ್ಲದ ಮಧ್ಯಕಾಲೀನ ಕೊರಿಯಾದ ಅರಸೊತ್ತಿಗೆಯ ಇತಿಹಾಸದ ಪುಟಗಳಲ್ಲಿ ಬರೆದಿಟ್ಟ ಕತೆ!
ಎಂತಹ ಅದ್ಭುತ ನಿರ್ದೇಶನವೆಂದರೆ, ಪ್ರತಿವಾರ ಒಂದು ಗಂಟೆ ದೂ.ದ. ಬಿಟ್ಟು ಅತ್ತಿತ್ತ ಕದಲಲು ಸಾಧ್ಯವಿಲ್ಲ! ಕತೆಗೆ ತಕ್ಕ ಸ್ವಲ್ಪ ಒಗ್ಗರಣೆ ಇದ್ದೇ ಇದ್ದರೂ, ಎಲ್ಲಿಯೂ ಹದತಪ್ಪದೆ ಮೂಡಿಬಂದಿದೆ. ಮೂರು ವರ್ಷಗಳ ಹಿಂದೆ ಜಪಾನಿನ ಬೇರೆ ವಾಹಿನಿಯೊಂದು ಜಪಾನಿನ ಇತಿಹಾಸದಲ್ಲಿ ಕುಖ್ಯಾತ ರಾಣಿಯೊಬ್ಬಳ ಸುತ್ತ ಹೆಣೆದ 'ಓಒಕು'(=ಅಂತಃಪುರ)ವನ್ನು ಪ್ರಸಾರ ಮಾಡಿತ್ತಾದರೂ, ಕೊರಿಯಾದ ಅಭಿರುಚಿಯ ಕಾಲುಗುರಿಗೂ ಸಮವಾಗಿರಲಿಲ್ಲ! ನಾನಂತೂ ಕೊರಿಯಾದ ನಾಲ್ಕೈದು ಧಾರಾವಾಹಿಗಳನ್ನು ನೋಡಿ, ಜಪಾನಿನವುಗಳನ್ನು ನೀವಾಳಿಸಿ ಎಸೆಯಬೇಕೆಂದುಕೊಂಡದ್ದೂ ಇದೆ! ಜೊತೆಗೆ ಕೊರಿಯದ ತರುಣಿಯರು ಇಷ್ಟೊಂದು ಸುಂದರಿಯರೇ ಎಂದು ನಾನಲ್ಲ..... ಜಪಾನೀಯರೇ ಹೊಟ್ಟೆಯುರಿದುಕೊಂಡದ್ದಿದೆ! ಐದು ವರ್ಷಗಳ ಹಿಂದೆ ಪ್ರಸಾರವಾದ 'ಫುಯು ನೊ ಸೊನಾತ'( = 'ಶಿಶಿರದ ಜತಿಸ್ವರ')ದ ನಾಯಕ-ನಾಯಕಿಯರಾದ 'ಪೇ ಯೊನ್ ಜುನ್ - ಚೆ ಜು' ಜೋಡಿಯ ಮೋಡಿಗೆ ಎಲ್ಲರೂ ಮೋಹಗೊಂಡು ಹಾನ್-ಗುಲ್(ಕೊರಿಯದ ಭಾಷೆ) ಕಲಿಯಲು ಆರಂಭಿಸಿದ್ದಾರೆ! ಮೊನ್ನೆ ಮೊನ್ನೆ ಪೇ ಯೊನ್ ಜುನ್ ಇಲ್ಲಿಗೆ ಬಂದಾಗ ಮಧ್ಯವಯಸ್ಕ ಯುವತಿಯರೆಲ್ಲ ಮುಗಿಬಿದ್ದು 'ಯೊನ್ ಸಮ...'(ಯೊನ್ ಅವರೇ..) ಎಂದು ರಾಮನನ್ನು ಕಂಡ ಶಬರಿಯರಂತೆ ಮೂರ್ಛೆಬಿದ್ದದ್ದೂ ಇದೆ!
ಅಂತಹ ಸುಂದರ-ಸುಂದರಿಯರು ಹೇರಳವಾಗಿರುವ 'ದಾಯ್ ಜನ್ ಗುಮ್' ಶನಿವಾರ ರಾತ್ರಿ ೧೧ ರಿಂದ ೧೨ ರವರೆಗೆ ಜಾಹಿರಾತುಗಳ ಕಾಟವಿಲ್ಲದೆ ನಿರಂತರ ಒಂದು ಗಂಟೆ ಕಾಲ ಜಪಾನನ್ನು ಮನೆಗಳಲ್ಲಿ ಹಿಡಿದಿಡುತ್ತದೆ! ಈಗಾಗಲೇ ಇದು ಕೊರಿಯಾ, ಚೀನಾ, ಹಾಂಗ್-ಕಾಂಗ್, ತೈವಾನ್, ಮಲೇಷಿಯಾ, ಸಿಂಗಪುರ, ಫಿಲಿಫೈನ್ಸ್, ಅಮೆರಿಕ, ಕೆನಡಾ ದೇಶಗಳಲ್ಲಿ ಗಳಲ್ಲಿ ಪ್ರಸಾರವಾಗಿದೆ. ನೋಡಿ:ದಾಯ್ ಜನ್ ಗುಮ್. ಆಂಗ್ಲದಲ್ಲಿ ಕಥೆಯೂ ಹಾಂಗ್-ಕಾಂಗ್ ನ ಈ ಕೊಂಡಿಯಲ್ಲಿ ಲಭ್ಯವಿದೆ:ದಾಯ್ ಜನ್ ಗುಮ್ - ಕಥೆ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಮ್
ಪುಟವಿಡಲು ನುಡಿಯೇನು, ನೆಲವೇನು, ಹೊಳೆವುದೀ ನಾಡಿನಲಿ ಚಿನ್ನವಾಗಿ!
ಲೇಖನ ವರ್ಗ (Category):





ಪ್ರತಿಕ್ರಿಯೆಗಳು
ಒಪ್ಪಬಹುದಾದಂತಹ ಮಾತು
ಯೂ. ಜಿ. ಸಿ. ಕಾರ್ಯಕ್ರಮಗಳು
ಉ: ಯೂ. ಜಿ. ಸಿ. ಕಾರ್ಯಕ್ರಮಗಳು ಈಗಲೂ ಬೆಳಿಗ್ಗೆ ಇವೆ ; ಜ್ಞಾನವಾಣಿ FM
ರಾತ್ರಿ ೧೦:೩೦ ಗೆ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಭಾರತೀಯರ ಬೇಜವಾಬ್ದಾರಿ
ಉ: ದಾಯ್ ಜನ್ ಗುಮ್!
ಬೆನಕ,
ನಿಮ್ಮ ಲೇಖನ ಇಂದಿನ ಎಲ್ಲಾ ದೂರದರ್ಶನದ ಕಾರ್ಯಕ್ರಮಗಳಿಗೆ ಹಿಡಿದ ಕೈಗನ್ನಡಿ.........!
ಡಿ.ಡಿ.೧ ರಲ್ಲಿ ಹಿಂದೆ ಸಿದ್ದಾರ್ಥ್ ಕಕ್ ಮತ್ತು ರೇಣುಕಾ ಶಹಾನೆ ನಡೆಸಿಕೊಡುತ್ತಿದ್ದ " ಸುರಭಿ "(ಹಿಂದಿ) ಕಾರ್ಯಕ್ರಮವನ್ನು ನೋಡಲು ಕಾಯುತ್ತಿದ್ದೆವು. ಅದೇ ರೀತಿಯ ಕಾರ್ಯಕ್ರಮಗಳು ಇಂದು ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ......! ಈ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭವಾಗಬೇಕಾಗಿದೆ.