ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ಹುಟ್ಟಿ ಹತ್ತನೇ ತರಗತಿಯವರೆಗೆ ಬೆಳೆದಿದ್ದು ಕೊಪ್ಪಳ ಜಿಲ್ಲೆ ಅಳವಂಡಿ ಎಂಬ ಸಾಧಾರಣ ಊರಿನಲ್ಲಿ. ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವಿಲ್ಲ. ಹಲವಾರು ಕೆಲಸಗಳನ್ನು ಮಾಡಿದ ನಂತರ ಇಷ್ಟವಾಗಿ ಉಳಿದುಕೊಂಡಿದ್ದು ಪತ್ರಿಕೋದ್ಯಮದಲ್ಲಿ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.
ನನ್ನ ಕನ್ನಡ ಬ್ಲಾಗ್‌: http://chamarajsavad...
ವ್ಯಕ್ತಿತ್ವ ವಿಕಸನ ಬ್ಲಾಗ್‌: http://matumanikya.b...

ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ...

ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್‌ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್ಯಮಮಿತ್ರರ ನಡುವೆ ಅವರ ಸಾವಿನ ಸುದ್ದಿ ಗುಸುಗುಸು ರೂಪದಲ್ಲಿ ಹರಿದಾಡುತ್ತಲೇ ಇತ್ತಾದರೂ ಸಂಬಂಧಿಸಿದವರು ಅದನ್ನು ದೃಢಪಡಿಸಲಿಲ್ಲ. ಜೀವರಕ್ಷಕ ಸಾಧನಗಳ ಮೂಲಕ ಬದುಕಿದ್ದಾರೆ ಎಂದೇ ಹೇಳುತ್ತಿದ್ದರು. ಈ ಕುರಿತು ಪರಿಶೀಲಿಸಲು ಆಸ್ಪತ್ರೆಗೆ ಹೋದ ಮಾಧ್ಯಮದವರಿಗೆ ಪ್ರವೇಶ ದೊರೆಯಲಿಲ್ಲ. ಅಶ್ವಥ್‌ ಇನ್ನಿಲ್ಲ ಎಂಬುದು ಬಹುತೇಕರಿಗೆ ಗೊತ್ತಾಗಿದ್ದರೂ, ಅವರ ಜನ್ಮದಿನದಂದೇ ಸಾವಿನ ಸುದ್ದಿ ಪ್ರಕಟಿಸುವ ಉದ್ದೇಶ ಕೆಲವರಿಗೆ ಇತ್ತೆನಿಸುತ್ತದೆ. ಅದೀಗ ಈಡೇರಿದೆ.

ಸಿಕ್ಕಾಪಟ್ಟೆ ಮುಂಗೋಪಿ, ತಮ್ಮದೇ ಬೆಸ್ಟ್‌ ಎಂಬ ಕಲಾವಿದನ ಸಹಜ ಅಹಂ, ವಿಮರ್ಶಕರ ಬಗ್ಗೆ ಅಸಹನೆ ಹಾಗೂ ಅಪಾರ ಪ್ರತಿಭೆ ಹೊಂದಿದ್ದ ಸುಗಮ ಸಂಗೀತದ ಮೇರು ವ್ಯಕ್ತಿ ಸಿ. ಅಶ್ವಥ್‌ ಹಾಡು ಮುಗಿಸಿ ಎದ್ದು ಹೋಗಿದ್ದಾರೆ. ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹಲವಾರು ದಿನಗಳ ಕಾಲ ಸೆಣಸಿದ ಗಾನಕೋಗಿಲೆ ’ಇನ್ನು ಸಾಕು’ ಎಂದು ಹಾರಿಹೋಗಿದೆ.

ಹಲವಾರು ಕವಿಗಳ ಕವಿತೆಗಳಿಗೆ ಕಂಠವಾದ ಅಶ್ವಥ್‌ ಅತ್ಯಂತ ಇಂಪಾದ ರಾಗಗಳನ್ನು ಸಂಯೋಜಿಸಿದರು. ಅಷ್ಟೇ ಅಲ್ಲ, ಅವನ್ನು ಅತ್ಯಂತ ಸಮರ್ಥವಾಗಿ ಹಾಡಿದರು. ಕೇವಲ ಸಾಹಿತ್ಯಾಸಕ್ತರ ಮಧ್ಯೆ ಮಾತ್ರ ಜೀವಂತವಾಗಿದ್ದ ಕನ್ನಡದ ಹಲವಾರು ಕವಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಅಶ್ವಥ್‌ ಒಬ್ಬ ಕಲಾವಿದನ ಕನ್ನಡ ಸೇವೆಗೆ ಉತ್ತಮ ಉದಾಹರಣೆ.

ಭಾವಗೀತೆಗಳೆಂದರೆ ಭಾವತೀವ್ರತೆ ಹೊಂದಿದ ಗೀತೆಗಳೆಂಬುದನ್ನು ದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಅಶ್ವಥ್‌ ಸಾಧನೆ. ಅದುವರೆಗೆ ಭಾವಗೀತೆಗಳೆಂದರೆ ಶಾಸ್ತ್ರೀಯ ಸಂಗೀತದ ಮುಂದುವರಿದ ಭಾಗದಂತೆ ಭಾಸವಾಗುವ ವಾತಾವರಣ ಇತ್ತು. ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾವ್‌ ಮುಂತಾದವರು ಆಗಾಗ ಈ ಅಭಿಪ್ರಾಯವನ್ನು ಬದಲಿಸುವಂಥ ಹಾಡುಗಳನ್ನು ನೀಡಿದ್ದರಾದರೂ, ಅಶ್ವಥ್‌ ಅದನ್ನೊಂದು ಸಂಚಲನೆ ಎಂಬಂತೆ ಬೆಳೆಸಿದರು. ಜೊತೆಗೆ ತಾವೂ ಬೆಳೆದರು. ಕನ್ನಡ ಗೀತೆಗಳನ್ನು ಆಲಿಸುವ ಅಭಿರುಚಿ ಹಾಗೂ ಕನ್ನಡ ಸಂಗೀತ ಮುದ್ರಿಕೆಗಳಿಗೆ ದೊಡ್ಡ ಮಾರುಕಟ್ಟೆಯನ್ನೂ ಸೃಷ್ಟಿಸಿದರು.

ಕೆ.ಎಸ್‌. ನರಸಿಂಹಸ್ವಾಮಿಯವರ ’ಮೈಸೂರು ಮಲ್ಲಿಗೆ’ ಜನರನ್ನು ತಲುಪಿದ್ದು ಹೀಗೆ. ಅದೇ ರೀತಿ, ಬಹುತೇಕ ಅನಾಮಧೇಯರಾಗಿಯೇ ಉಳಿದಿದ್ದ ಸಂತ ಶಿಶುನಾಳ ಶರೀಫರು ಜನಮಾನಸ ತಲುಪಿದ್ದೂ ಅಶ್ವಥ್‌ ಅವರ ಸಂಗೀತ ಗಾರುಡಿಯಿಂದಲೇ. ಇವೆರಡೂ ಕವಿಗಳ ಗೀತೆಗಳ ಮಾಧುರ್ಯ ಕನ್ನಡಿಗರನ್ನು ಅದ್ಯಾವ ಪರಿ ಹುಚ್ಚೆಬ್ಬಿಸಿತ್ತೆಂದರೆ, ನಿರ್ದೇಶಕ ಟಿ.ಎಸ್‌. ನಾಗಾಭರಣ, ಹಾಡುಗಳ ಆಧಾರದ ಮೇಲೆಯೇ ’ಮೈಸೂರು ಮಲ್ಲಿಗೆ’ ಹಾಗೂ ’ಸಂತ ಶಿಶುನಾಳ ಶರೀಫ’ ಚಿತ್ರಗಳನ್ನು ಮಾಡಿದರು. ಇದು ಅಶ್ವಥ್‌ ಸಂಗೀತ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಗಾಯಕನೊಬ್ಬ ಹಾಡುವುದನ್ನೇ ವೃತ್ತಿಯಾಗಿ ಸ್ವೀಕರಿಸಿ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದು ಅಶ್ವಥ್‌ ಅವರ ವಿಶೇಷತೆ.

ಟಿವಿಯಲ್ಲಿ ಅವರ ಅಂತಿಮ ದರ್ಶನದ ಚಿತ್ರಗಳನ್ನು ನೋಡುತ್ತಿದ್ದಂತೆ ಮನಸ್ಸು ಮೂಕವಾಗುತ್ತಿದೆ. ಎಷ್ಟೊಂದು ಸುನೀತ ಭಾವನೆಗಳನ್ನು ಕೆರಳಿಸಿದ್ದವು ಅವರ ಹಾಡುಗಳು! ತಲೆಮಾರಿಗೆ ತಲೆಮಾರೇ ನಾದಗುಂಗಿನಲ್ಲಿ ತೇಲುವಂತೆ ಮಾಡಿದ್ದ ಈ ಗಾನಗಾರುಡಿಗ ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತಿದೆ. ’ಬಂಗಾರ ತೀರ ಕಡಲಾಚೆಗೀಚೆಗಿದು ನೀಲ ನೀಲ ತೀರ...’ ಎಂದು ಹಾಡುತ್ತ ಹೊರಟುಹೋಗಿರುವ ಅಶ್ವಥ್‌ ಇನ್ನೊಂದಿಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ಇನ್ನೊಂದಿಷ್ಟು ಕವಿತೆಗಳಿಗೆ ಹಾಡಾಗಬೇಕಿತ್ತು. ಭಾವನೆಗಳಿಗೆ ತೇರಾಗಬೇಕಿತ್ತು. ಎದೆಯೊಳಗೆ ಅವಿತುಕೂಡುವ ಭಾವನೆಗಳನ್ನು ಹೊರಹಾಕುವ ದಾರಿಯಾಗಬೇಕಿತ್ತು. ಓದಿ ಅನುಭವಿಸಬೇಕಿದ್ದ ಎಷ್ಟೋ ಕವಿತೆಗಳನ್ನು ಕೇಳಿ ಅನುಭವಿಸುವಂತೆ ಮಾಡುತ್ತಿದ್ದ ಅಪರೂಪದ ಕಾಯಕವನ್ನು ಮುಂದುವರಿಸಬೇಕಿತ್ತು.

ಮನಸ್ಸು ಮತ್ತೆ ಮತ್ತೆ ಅವರ ಹಾಡುಗಳನ್ನು ನೆನಪಿಸಿಕೊಳ್ಳುತ್ತದೆ. ಹೃದಯ ಮತ್ತೆ ಮತ್ತೆ ಕಣ್ಣೀರಿಡುತ್ತದೆ.

- ಚಾಮರಾಜ ಸವಡಿ

(ಚಿತ್ರ ಕೃಪೆ: ಡಿ.ಜಿ. ಮಲ್ಲಿಕಾರ್ಜುನ)

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
umeshhubliwala's picture

ಸವಡಿ ಅವರು ಸೋರಟ್ ಅಶ್ವಥ್ ಅಲ್ಲ ಅವ್ರು ಸಿ. ಅಶ್ವಥ್ ....!

Chamaraj's picture

ಥ್ಯಾಂಕ್ಸ್‌ ಉಮೇಶ್‌. ತಿದ್ದಿದ್ದೇನೆ. ಸಿ. ಅಂದ್ರೆ ಚನ್ನರಾಯಪಟ್ಟಣ ಅಂತಾನಾ? ನನಗೆ ಗೊಂದಲ.

vinay_2009's picture

ಹೌದು ಸರ್, ಸಿ. ಅಂದ್ರೆ ಚನ್ನರಾಯಪಟ್ಟಣ ವೇ

-- ವಿನಯ್

ASHOKKUMAR's picture

ನಾಗಮಂಡಲ ಕೂಡಾ ಅಶ್ವಥ್ ಸಂಗೀತ ನೀಡಿದ ಚಿತ್ರ-ನಾಗಾಭರಣ ನಿರ್ದೇಶನ. ಇದೂ ಕೂಡಾ ಹಾಡುಗಳ ಮೂಲಕವೇ ಕತೆ ಹೇಳುವ ತಂತ್ರ ಬಳಸಿದ ಸಂಗೀತ ಪ್ರಧಾನ ಚಿತ್ರ. ಅಲ್ಲವೇ?

anil.ramesh's picture

ಹಾಡುಗಳಿಗೋಸ್ಕರವೇ ಚಲನಚಿತ್ರವನ್ನು ಮಾಡಿದ ಸಾಲಿಗೆ 'ನಾಗಮಂಡಲ' ಚಿತ್ರವೂ ಸೇರುತ್ತೆ.

-ಅನಿಲ್

ಶ್ರೀನಿವಾಸ ವೀ. ಬ೦ಗೋಡಿ's picture

ಇಲ್ಲ, ನಾಗಮಂಡಲ ಹಾಡುಗಳಿಗೋಸ್ಕರ ಮಾಡಿದ ಚಿತ್ರವಲ್ಲ. ಅದು ಗಿರೀಶ್ ಕಾರ್ನಾಡರವರ ನಾಟಕ ಆಧರಿಸಿದ ಚಿತ್ರ. Ofcourse, ನಾಗಮಂಡಲದ ಹಾಡುಗಳು ಅದ್ಭುತವಾಗಿವೆ.
ಮೈಸೂರು ಮಲ್ಲಿಗೆ ಮಾತ್ರ ಹಾಡುಗಳನ್ನೆ ಆಧರಿಸಿ ಮಾಡಿದ ಚಿತ್ರ.

Chamaraj's picture

ಹೌದು ಅಶೋಕ್‌. ಸಂಗೀತಪ್ರಧಾನ ಚಿತ್ರಗಳು ಮತ್ತೆ ಮಿಂಚಲು ಅಶ್ವಥ್‌ ಮುಖ್ಯ ಕಾರಣಕರ್ತರು. ನಾಗಾಭರಣ ಅದನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯವಾಯ್ತು.

Chamaraj's picture

ಹಾಸನ ಜಿಲ್ಲೆಯವರಾದರೂ ಅಶ್ವಥ್‌ ಅದನ್ನು ಹೆಚ್ಚಿಗೆ ಹೇಳಿಕೊಂಡಿಲ್ಲ. ಹೀಗಾಗಿ, ಒಂದು ಕ್ಷಣ ಗೊಂದಲವಾಯ್ತು ವಿನಯ್‌.

savithru's picture

ಕಂಚ್ಜಿನ ಕಂಠ ಮರೆಯಾದದ್ದು ನಿಜಕ್ಕೂ ನೋವಿನ ಸಂಗತಿ.

'ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು' ಅನ್ನೋ ವಚನ ಇದೆ.
ಇದು ಅಶ್ವಥ್ ಅಂತ ವ್ಯಕ್ತಿಗಳಿಗೂ ಅನ್ವಯಿಸುತ್ತೆ.

ಅವರು ಹಾಡಿರುವ ಭಾವಗೀತೆಗಳೇ ಮುಂತಾದ ಗೀತೆಗಳ ಮೂಲಕ ಯಾವಾಗಲೂ ಜೋತೆಯಲ್ಲಿರ್ತಾರೆ.

hsprabhakara's picture

ಅಶ್ವತ್ಥ್ ನಮ್ಮನ್ನಗಲಿಲ್ಲ ಸವಡಿ! ಅವರ ಗಾನ ಮಾಧುರ್ಯ ಈ ಲೋಕದ ನೆನಪಲ್ಲಿ ಗುನುಗುನಿಸುತ್ತಿರುವವರೆಗೂ ಅವರು ಜೀವಂತವಾಗಿಯೇ ಇರುತ್ತಾರೆ. ಒಳ್ಳೆಯ ನುಡಿ ನಮನ ಸಲ್ಲಿಸಿದ್ದೀರಿ. ಧನ್ಯವಾದಗಳು.

Prabhu Murthy's picture

ಅಶ್ವಥ್ ಅವರನ್ನು ೮೦ರ ದಶಕದಲ್ಲಿ ಬೆಂಗಳೂರು ಐ. ಟಿ. ಐನ Transmission R&Dಯಲ್ಲಿ ಕೆಲಸ ಮಾಡುವಾಗ ದಿನಾಲು ದೂರದಿಂದ ನೋಡುತ್ತಿದ್ದ ನೆನಪು! ಎಲ್ಲರಂತೆ ನೀಲಿ ಬಣ್ಣದ ಅಫೀಸರ್ ಯೂನಿಫಾರ್ಮ್ ತೊಟ್ಟು ಕ್ಯಾಂಟಿನ್, ಕಾಫಿ ಕಿಯೊಸ್ಕ್ಗಳಲ್ಲಿ ಬೆರೆಯುತ್ತಿದ್ದ ಅವರು ಆ ಬಳಿಕದ ಎರಡು ದಶಕಗಳಲ್ಲಿ ತಮ್ಮ ಅಗಾಧ ಪ್ರತಿಭೆ ಮತ್ತು ಜನಪ್ರಿಯತೆಗಳಿಂದ ಸಫಲವಾದ ಕಲಾಜೀವನವನ್ನು ಮೆರೆದರು. ಮೈಸೂರು ಮಲ್ಲಿಗೆಯ ತಿಳಿಯಾದ ಭಾವಗಳಲ್ಲಿ, ಶರೀಫರ ಗಾಢವಾದ ಅನುಭಾವಗಳಲ್ಲಿ ಹಾಗೆ ಕೈಲಾಸಂರ ಹಗುರವಾದ ಅಸಾಂಗತ್ಯಗಳಲ್ಲಿ ಅವರು ನೆನಪಿನಲುಳಿಯುತ್ತಾರೆ. ಕಾಳಿಂಗ ರಾವ್ ಮತ್ತು ಅನಂತಸ್ವಾಮಿಗಳು ಬಿತ್ತುಬೆಳೆಸಿದ ಭಾವಗೀತಗಾಯನದ ಸಸಿಯು ಇಂದು ಅಶ್ವತ್ಥವೃಕ್ಷವಾಗಿ ಬೆಳೆದು ನಿಂತಿದ್ದರೆ ಅದರ ಪೋಷಕರಲ್ಲಿ ಅಗ್ರಗಣ್ಯರು ಅಶ್ವಥ್.

ಚಾಮರಾಜ್ ಅವರೆ ನಿಮ್ಮ ನುಡಿನಮನಕ್ಕೆ ಧನ್ಯವಾದಗಳು.

ಪ್ರಭು

Prabhu Murthy's picture

ಕಳೆದ ವರ್ಷ ಅಶ್ವಥ್ ಅವರು ಸ್ಯಾನ್ ಫ್ರಾಂಸಿಸ್ಕೋ ಬೇ ಏರಿಯಾಕ್ಕೆ ಭೇಟಿ ಕೊಟ್ಟಾಗ, ಮಧು ಕೃಷ್ಣಮೂರ್ತಿಯವರು, ಅವರೊಡನೆ KZSU Stanford FM radioನಲ್ಲಿ ನಡೆಸಿದ ಸಂದರ್ಶನ ಇಲ್ಲಿದೆ:

http://www.itsdiff.c...
http://www.itsdiff.c...

ಪ್ರಭು

shreekant.mishrikoti's picture

ಕೊಂಡಿಗಳಿಗಾಗಿ ಧನ್ಯವಾದಗಳು . ಅಲ್ಲಿ www.caswath.com ತಾಣದ ಬಗ್ಗೆ ಗೊತ್ತಾಯಿತು .

venkatesh's picture

ಹೋದ ವರ್ಷ ಅಂದರೆ, ೨೦೦೮ ರ ಆಗಸ್ಟ್ ತಿಂಗಳಲ್ಲಿ ನಾವು ಸಿ. ಅಶ್ವಥ್ ರವರ ಅಮೋಘ ಶೈಲಿಯ ಗಾನ ಸುಧೆಯನ್ನು ಅಮೆರಿಕದ, ಚಿಕಾಗೋ ನಗರದ, ’ ಸ್ಟೀಫನ್ಸ್ ಸಭಾಂಗಣ’ ದಲ್ಲಿ ಸವಿದಿದ್ದೆವು. ಇಳಿವಯಸ್ಸಿನಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಈ ’ದಣಿವರೆಯದ ಮಿಂಚಿನ ಅಲುಗು’ ಮಿಂಚಿನಂತೆ ಒಮ್ಮೆಲೇ ಬಂದು, ನಿಸರ್ಗದಲ್ಲಿ ಲೀನವಾಯಿತು !

ಓಹ್ ! ಮುಂಬೈನಲ್ಲಿ 'ಶಣ್ಮುಖಾನಂದ ಹಾಲ್ 'ದಲ್ಲಿ ಅವರು ಹಾಡಿದಾಗ, 'ಮುಂಬೈನ ಕನ್ನಡ ಜನಸ್ತೋಮ 'ವೇ ಅವರ ಎದುರಿಗಿತ್ತು ! "ಆ ಚೇತನ, ಎಂದೂ ನಂದದ, ಗಾಳಿಗೆ ಹೊಯ್ದಾಡದ ನಂದಾದೀಪ " !

ಸದಾ ಕನ್ನಡಿಗರ ತನುಮನಗಳಲ್ಲಿ 'ಅಶ್ವಥ್ ' ಅಮರರಾಗಿ ಉಳಿಯುತ್ತಾರೆ ! ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಬಂಧುಗಳಿಗೆ ಈ ದುಖಃದ ಗಳಿಗೆಯಲ್ಲಿ ದೇವರು ಮನೋಸ್ಥೈರ್ಯವನ್ನು ಕರುಣಿಸಲಿ.

Aravind M.S's picture

ಗುಣ ಸಿಂಗ್ ಎಂಬ ‘ನಾಕು ತಂತಿ’ ಸಂಕಲನಕ್ಕೆ ಸಂಗೀತ ನೀಡಿದವರು ಅಶ್ವತ್ಥ್ ಅವರ ಸಂಗೀತಕ್ಕೆ ಸಾಟಿ ಎನಿಸುತ್ತಿದ್ದರು ನನಗೆ. ಗುಣ ಸಿಂಗರ ಇತರೆ ಕೃತಿ ತಿಳಿದವರು ಹಂಚಿಕೊಂಡಾರ ಎಂದು ಕಾತರಿಸುತ್ತೇನೆ.

ಆದರೆ ‘ನಾಕು ತಂತಿ’ ಒಂದರಿಂದಲೇ ನಿರ್ಧರಿಸುವುದು ದುಡುಕೆಂದೂ ತಿಳಿದ್ದೇನೆ.

- ಅರವಿಂದ

gvmt's picture

ಇದು callous ಎನಿಸಬಹುದೇನೊ, ಆದರೆ ಅಶ್ವತ್ಥರ ಛಾಯಾಚಿತ್ರ ಬಹಳ ಚೆನ್ನಾಗಿದೆ. ಯಾರು ತೆಗೆದದ್ದು?

- ವೆಂ.

Chamaraj's picture

ಅಂತರ್ಜಾಲದಲ್ಲಿ ಹುಡುಕಿದಾಗ, ಕಾಮತ್‌.ಕಾಮ್‌ನಲ್ಲಿ ಈ ಚಿತ್ರ ಕಂಡಿತು ವೆಂಕಟೇಶಮೂರ್ತಿಯವರೇ. ಅಶ್ವಥ್‌ ಅವರ ಸಾವು ಅಧಿಕೃತವಾಗಿ ಪ್ರಕಟವಾಗುವುದಕ್ಕೂ ಮುಂಚೆ ಹಿಂದಿನ ರಾತ್ರಿ ಬರೆದಿದ್ದ ಬರಹದಲ್ಲಿ ಚಿತ್ರ ಕೃಪೆ ಹಾಕಿದ್ದೇನೆ. ಬೆಳಿಗ್ಗೆ ಅವರ ಸಾವು ಘೋಷಣೆಯಾದ ನಂತರ ಬರೆದ ಬರಹದಲ್ಲಿ ಹಿಂದಿನ ಚಿತ್ರವನ್ನೇ ಬಳಸಿದೆ.

ಆದರೆ, ಈ ಚಿತ್ರವನ್ನು ವೃತ್ತಿಪರ ಛಾಯಾಗ್ರಾಹಕರು ತೆಗೆದಿರಬಹುದು ಅನಿಸುತ್ತದೆ. ಅವಸರದಲ್ಲಿ ನಾನು ವಿಸ್ತೃತವಾಗಿ ಪರೀಕ್ಷಿಸಲು ಹೋಗಿಲ್ಲ. ಯಾರಾದರೂ ಮಾಹಿತಿ ನೀಡಿದರೆ, ಖಂಡಿತ ಚಿತ್ರಕೃಪೆ ಹಾಕುತ್ತೇನೆ.

gvmt's picture

kamat.comನಿಂದಾದರೆ ಕಾಮತರದೆ ಇದ್ದೀತು. ಚಿತ್ರ ಬಹಳ ಚೆನ್ನಾಗಿದೆ. ನನ್ನ (ಅತ್ಯಲ್ಪ) ಅನುಭವದಲ್ಲಿ ಹೇಳುವುದಾದರೆ ಬೆಟ್ಟದ ಚಿತ್ರ ತೆಗೆಯಬಹುದು, ಮನುಷ್ಯರ ಚಿತ್ರ ತೆಗೆಯುವುದು ಕಷ್ಟದ ಕೆಲಸ.

- ವೆಂ.

Vasanth Kaje's picture

ಇಲ್ಲ. 99% ಇದು ಮಲ್ಲಿಕಾರ್ಜುನ್ ತೆಗೆದ ಫೊಟೊ. http://dgmalliphotos...

Chamaraj's picture

ಥ್ಯಾಂಕ್ಸ್‌ ವಸಂತ್‌. ಚಿತ್ರ ಕೃಪೆ ಸೇರಿಸಿದ್ದೇನೆ.

santhosh_87's picture

ಶಬ್ದಗಳಿಗೆ ಜೀವ ಕೊಟ್ಟ ಮಾಂತ್ರಿಕ ಅಶ್ವಥ್. ಅವರಿಲ್ಲ ಎಂಬ ಕೊರಗು ಯಾವತ್ತೂ ಕಾಡಿದರೂ ಅವರ ಸಂಗೀತದಿಂದ ಅವರು ನಮ್ಮೊಡನೆ ಎಂದಿಗೂ ಇರುತ್ತಾರೆ.

venkatesh's picture

ಅಂವ ಅಂಥಾವ್ನೇ ನೋಡಿ !