ಈಗಿನಂತೆ 4 ಸದಸ್ಯರು ಮತ್ತು 88 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕ್ಷುಲ್ಲಕ ಕಾರಣ, ಅಮಾಯಕರ ಸಾವು
abdul's picture
ಅಬ್ದುಲ್ ಲತೀಫ್ ಸಯ್ಯದ್
21
Jul
2011
ಲೇಖನ
ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ...
ಪ್ರತಿಕ್ರಿಯೆಗಳು: 15
ಹಿಟ್ಸ್ : 738
ಆಧ್ಯಾತ್ಮ ಸಾಧಕ ಶ್ರೀ ಮುಕುಂದೂರು ಸ್ವಾಮಿಗಳು
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Sep
2011
ಲೇಖನ

(ಇದು ಪುಸ್ತಕ ಪರಿಚಯದ ರೂಪದಲ್ಲಿರುವ ಲೇಖನ.

ಮೂಲ ಪುಸ್ತಕದ ಹೆಸರು : ಯೇಗ್ದಾಗೆಲ್ಲಾ ಐತೆ. ಲೇಖಕರು : ಶ್ರೀ...

ಪ್ರತಿಕ್ರಿಯೆಗಳು: 15
ಹಿಟ್ಸ್ : 221
ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
04
Jun
2010
ಪುಟ

ಎಲ್ಲ ಓದುಗರ ಗಮನಕ್ಕೆ,

ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ:

 

ಪುಟಗಳಲ್ಲಿ...

ಪ್ರತಿಕ್ರಿಯೆಗಳು: 48
ಹಿಟ್ಸ್ : 1,733
ಚೀನಾ, ತವಾಂಗ್, ಮತ್ತು ಬೈಲಕುಪ್ಪೆ ಟಿಬೆಟಿಯನ್ನರು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
13
Nov
2009
ಪುಟ

  ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,230
ಭೀಮೇಶ್ವರದ ತುಪ್ಪದ ಕೊಡ
devaru.rbhat's picture
ದೇವರು ಆರ್ ಭಟ್
18
Jan
2011
ಲೇಖನ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 768
ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨
anilkumar's picture
ಎಚ್.ಎ. ಅನಿಲ್ ಕುಮಾರ್
21
Mar
2011
ಬ್ಲಾಗ್ ಬರಹ

 (೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ...

ಪ್ರತಿಕ್ರಿಯೆಗಳು: 1
ಹಿಟ್ಸ್ : 420
ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
19
May
2010
ಪುಟ

...

ಪ್ರತಿಕ್ರಿಯೆಗಳು: 5
ಹಿಟ್ಸ್ : 870
ದುಬೈನ ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ
manju787's picture
ಹೊಳೆ ನರಸೀಪುರ ಮಂಜುನಾಥ
05
Jan
2010
ಪುಟ

...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,639
ಅಂದಿನ ಆಂಧ್ರ
addoor's picture
ಅಡ್ಡೂರು ಕೃಷ್ಣ ರಾವ್
31
Oct
2011
ಲೇಖನ

ಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ,...

ಪ್ರತಿಕ್ರಿಯೆಗಳು: 8
ಹಿಟ್ಸ್ : 257
ಅರುಂಧತೀ ದರ್ಶನ
hamsanandi's picture
ಹಂಸಾನಂದಿ
03
Aug
2011
ಬ್ಲಾಗ್ ಬರಹ

ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ...

ಪ್ರತಿಕ್ರಿಯೆಗಳು: 17
ಹಿಟ್ಸ್ : 559

ಆಯ್ದ ಲೇಖನಗಳು

ರೇಖಾ ಬಿಜೂರ್ ಹೆರೆಂಜಾಲ್
Dr. T.N. Vasudevamurthy
(1 ಪ್ರತಿಕ್ರಿಯೆ)
ಶ್ರೀಕಾಂತ ಮಿಶ್ರಿಕೋಟಿ
(8 ಪ್ರತಿಕ್ರಿಯೆ)
ಅಡ್ಡೂರು ಕೃಷ್ಣ ರಾವ್
(3 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(13 ಪ್ರತಿಕ್ರಿಯೆ)
ಹನುಮಂತ ಪಾಟೀಲ
(24 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(4 ಪ್ರತಿಕ್ರಿಯೆ)

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

ಬಸ್‌ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್‌ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್‌ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್‌ ತಲುಪುತ್ತದೆ. ಕೃಷ್ಣಾ ಟಾಕೀಸ್‌ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್‌ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.

ಅದೃಷ್ಟವಶಾತ್‌ ಬಸ್‌ ಕೆಟ್ಟು ನಿಲ್ಲಲಿಲ್ಲ. ಗದಗ್‌ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್‌ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.

ಟಿಕೆಟ್‌ ಕೌಂಟರ್‌ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್‌’ ಬೋರ್ಡ್‌. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್‌ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್‌ ಕೊಂಡು ಥೇಟರ್‌ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.

ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್‌ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.

*****

ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.

ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಮುಂದೆ ವಿಷ್ಣುವರ್ಧನ್‌ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್‌ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.

ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್‌ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.

*****

ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್‌. ವಿಷ್ಣುವರ್ಧನ್‌ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.

ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.

ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.

- ಚಾಮರಾಜ ಸವಡಿ

Average: 4.8 (13 votes)
2422 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
vinay_2009's picture
30
Dec
2009
3:10

ಮೇಲೆ ತಿಳಿಸಿದಂತೆ "ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ..."ಮತ್ತು "ಗಂಧದ ಗುಡಿ" ಚಿತ್ರೀಕರ್ಣ ಸಮಯದಲ್ಲಿ ತಮ್ಮಿಂದಾಗದ ತಪ್ಪಿಗೂ ನಿಂದನೆಗೆ ಗುರಿಯಾದ ಅವರು,ಎಲ್ಲವ ಸಹಿಸಿಕೊಂಡು ಮುಂದೆ ಅದೇ ಕುಟುಂಬದವರು ವಿಷ್ಣು ಅವರ ಬಳಿ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದರು.ತಮ್ಮ ಸ್ವಪ್ರತಿಭೆಯಿಂದ ಕನ್ನಡ ನಾಡಿನ ಜನರ ಮನ ಗೆದ್ದ "ಸಾಹಸ ಸಿಂಹ" ನಿಗೆ ನುಡಿ ನಮನ... -- ವಿನಯ್

Chamaraj's picture
30
Dec
2009
4:57

ಹಾಗೆ ನೋಡಿದರೆ, ರಾಜ್‌ ಕುಟುಂಬ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಕ್ಷಮೆ ಕೇಳಬೇಕಾದ ಪ್ರಸಂಗಗಳು ಸಾಕಷ್ಟಿವೆ ವಿನಯ್‌. ಆದರೇನು, ಹಳೆಯ ಕೊಂಡಿಗಳು ಒಂದೊಂದಾಗಿ ಕಳಚಿಹೋಗುತ್ತಿವೆ. ಈಗ ಕ್ಷಮೆ ಕೇಳಿದರೂ ಉಪಯೋಗವಿಲ್ಲ. ಮೊದಲಿನಂತೆ ದಬ್ಬಾಳಿಕೆ ಈಗ ನಡೆಯುವುದೂ ಇಲ್ಲ. ಕಾಲ ಬದಲಾಗಿದೆ. ಜನರೂ ತಕ್ಕಮಟ್ಟಿಗೆ ಬದಲಾಗಿದ್ದಾರೆ.

Rakesh Shetty's picture
30
Dec
2009
5:09

ವಿಷ್ಣು ಅವರ ಬಗ್ಗೆ ನಿಮ್ಮ ಬರಹದ ನೀರಿಕ್ಷೆಯಲ್ಲಿದ್ದೆ ಚಾಮರಾಜ್ ಸರ್.
<<ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.>>

ನಿಜ.ಬಹುಷಃ ಅವರ ಈ ಗುಣವನ್ನೇ ಹಲವು ಜನ ವಿಷ್ಣು ಯಾವುದಕ್ಕೂ ಬರುವುದಿಲ್ಲ ಅನ್ನೋ ರೀತಿಯಲ್ಲಿ ಮಾತಾಡುತಿದ್ದರು. ಅನುಭವಗಳು ಅವರನ್ನ ಹೀಗೆ ಮಾಡಿದ್ದವೋ ಏನೋ!

Chamaraj's picture
30
Dec
2009
5:34

ವಿಷ್ಣುವರ್ಧನ್‌ ಎಷ್ಟೋ ಸಾರಿ ಕೋಪಿಸಿಕೊಳ್ಳುತ್ತಿದ್ದುದೂ ಉಂಟು ರಾಕೇಶ್‌. ಆದರೆ, ವಯಸ್ಸಾದಂತೆ, ದುಡುಕು ವ್ಯರ್ಥ ಅಂತ ಅವರಿಗೆ ಗಾಢವಾಗಿ ಅನ್ನಿಸಿರಬೇಕು. ಹೀಗಾಗಿ, ಅಧ್ಯಾತ್ಮದತ್ತ ವಾಲಿದರು. ವಿವಾದಗಳಿಂದ ದೂರ ಉಳಿಯಲು ಇಷ್ಟಪಟ್ಟರು. ಆದರೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಅವರು ಹಿಂದೆ ಉಳಿದಿದ್ದು ಬಹುಶಃ ಇಲ್ಲ. ಯಾರ ಪರವಾಗಿಯೂ ಚುನಾವಣಾ ಪ್ರಚಾರ ಮಾಡದ ವಿಷ್ಣು, ಕಲಾವಿದರು ಸ್ಪರ್ಧಿಸಿದಾಗ ಖುದ್ದಾಗಿ ಹೋಗಿ ಪ್ರಚಾರ ಮಾಡಿ ಬಂದಿದ್ದಾರೆ. ಸಾಕಷ್ಟು ಜನರಿಗೆ ಹಣಕಾಸಿನ ನೆರವನ್ನೂ ನೀಡಿದ್ದಾರೆ.

Aravind M.S's picture
30
Dec
2009
5:27

<<ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು>>
‘ಆಪ್ತ ಮಿತ್ರ’, ‘ಈ ಬಂಧನ’, ‘ನಿಷ್ಕರ್ಷ’ ಇವೆಲ್ಲಾ ಸಿದ್ಧ ಮಾದರಿಯ ಚಿತ್ರಗಳೇ ಸವಡಿಯವರೆ ! ಚಿತ್ರ ರೀಮೇಕ್ ಆದರೆ ಮಾತ್ರ ಪಾರ್ಟ್ ಮಾಡುವೆ ಎಂದಿದ್ದೂ ಇದೆ.

- ಅರವಿಂದ

Chamaraj's picture
30
Dec
2009
5:38

ಬಹುಶಃ ನನ್ನ ಹೇಳಿಕೆಯನ್ನು ನೀವು ಬೇರೆ ರೀತಿ ಅರ್ಥೈಸಿಕೊಂಡಿದ್ದೀರಿ ಅಂತ ಕಾಣುತ್ತೆ ಅರವಿಂದ್‌. ಸಿದ್ಧಮಾದರಿ ಶಬ್ದ ಬಳಸಿದ್ದು ರಾಜಕುಮಾರ್‌ ಚಿತ್ರಗಳ ಹಿನ್ನೆಲೆಯಲ್ಲಿ. ಆದರ್ಶಪುರುಷನಂತೆ ಚಿತ್ರಿಸುವ ಕಥೆಗಳನ್ನು ಸಿದ್ಧಮಾದರಿ ಎಂಬರ್ಥದಲ್ಲಿ ಹೇಳಿದ್ದು. ವಿಷ್ಣು ಅಂಥ ಮಾದರಿಗೆ ಅಂಟಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭಿನ್ನವಾಗಿ ಕಂಡರು ಎಂಬುದನ್ನು ಹೇಳುವುದು ನನ್ನ ಉದ್ದೇಶವಾಗಿತ್ತು. ಉಳಿದಂತೆ, ವಿಷ್ಣು ಕೂಡ ಸಾಕಷ್ಟು ವಿವಾದಾತ್ಮಕ ನಿಲುವನ್ನು ಹೊಂದಿದ್ದೂ ಹೌದು. ಆದರೆ, ಅದು ಗಂಭೀರ ಮಟ್ಟದಲ್ಲಿದ್ದಿಲ್ಲ. ಒಟ್ಟು ಪರಿಣಾಮವನ್ನಷ್ಟೇ ನಾನು ಅವಲೋಕಿಸಲು ಯತ್ನಿಸಿದ್ದೇನೆ.

Aravind M.S's picture
30
Dec
2009
8:57

ಅದನ್ನು ನಾನೂ ಒಪ್ಪುವೆ ಚಾಮರಾಜರೆ. ಅವರ ವ್ಯಕ್ತಿತ್ವವೂ ಆಧುನಿಕ ಮಾದರಿ ಇದ್ದಿತು. ಲೇಖನ ಒಳ್ಳೆಯ ವಿಶ್ಲೇಷಣೆ ಮಾಡಿದೆ. ವಂದನೆಗಳು.

ASHOKKUMAR's picture
30
Dec
2009
6:13

ಕೊನೆಯ ಬಿಡುಗಡೆಯಾದ "ಬಳ್ಳಾರಿ ನಾಗ"ದ ಕ್ಲಿಪ್ಪಿಂಗ್ ನೋಡಿದರೆ,ಅದರಲ್ಲೂ ಅವರು ವಿಭಿನ್ನವಾಗಿ ಅಭಿನಯಿಸಿದ ಹಾಗಿದೆ.

bhalle's picture
30
Dec
2009
6:33

>>>ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ.<<<

ಇತ್ತೀಚೆಗೆ ’ಗಂಧದ ಗುಡಿ’ ಚಿತ್ರ ಮತ್ತೆ ನೋಡಿದ್ದೆ. ನೆನ್ನೆಯ ಸುದ್ದಿ ಕೇಳಿ ಅನ್ನಿಸಿದ್ದು:
ರಾಜ್, ನರಸಿಂಹರಾಜು, ಎಂ.ಪಿ.ಶಂಕರ್, ತೂಗುದೀಪ ಶ್ರೀನಿವಾಸ್, ಬಾಲಣ್ಣ, ಪ್ರಭಾಕರ್ .... ಮತ್ತು ಈಗ ವಿಷ್ಣು :-( .... ಎಲ್ಲರೂ ಕೇವಲ ನೆನಪುಗಳು ಮಾತ್ರ !

Chamaraj's picture
30
Dec
2009
6:46

ಬರೀ ನೆನಪುಗಳಲ್ಲ ಶ್ರೀನಾಥ್‌, ಸವಿ ನೆನಪುಗಳು. ನಮ್ಮ ಸುಖ, ದುಃಖಕ್ಕೆ ಹಾಡು, ದೃಶ್ಯ ಕಟ್ಟಿಕೊಟ್ಟವರಿವರು. ನಮ್ಮ ಕಳೆದ ದಿನಗಳನ್ನು ಸಹನೀಯವಾಗಿಸಿದವರು. ಅವರೊಳಗೆ ನಮ್ಮನ್ನು ನಾವು ಕಂಡುಕೊಂಡಿದ್ದೇವೆ. ನಲಿದಿದ್ದೇವೆ, ಕಲಿತಿದ್ದೇವೆ. ಹೊಸ ಕನಸುಗಳನ್ನು ಕಂಡಿದ್ದೇವೆ. ಅವರೆಲ್ಲ ಸುಂದರ ನೆನಪುಗಳು. ನಮ್ಮೆಲ್ಲರ ಮಾನಸಕೋಶ ಸಮೃದ್ಧವಾಗಿಸಿದವರು.

manjunath s reddy's picture
30
Dec
2009
11:56

ಕಲಾವಿದರು ಸಾಯಬಹುದೇ ಹೊರತು ಅವರ ಕಲೆಯಲ್ಲ... ಅವರ ಬೌತಿಕ ದೇಹ ಮಾಯವಾದರು ಅವರು ಕಲೆಯ ಮೂಲಕ ಸದಾ ನಮ್ಮೊಡನೆ ಇದ್ದೇ ಇರುತ್ತಾರೆ,,, ಕಲಾವಿದರ ಕಲೆಯನ್ನು ನಾವು ಭೂತಕಾಲಕ್ಕೆ ಸೇರಿಸಲಾಗುವುದಿಲ್ಲ.. ಅವು ಸದಾ ವರ್ತಮಾನಕಾಲದಲ್ಲೆ ಇರುತ್ತವೆ..
ಪ್ರತಿ ಕ್ಷಣವೂ ನಮ್ಮ ವರ್ತಮಾನದೊಂದಿಗೆ ಮುಂದಿನ ಭವಿಷ್ಯದೆಡೆಗೆ ಸಾಗುತ್ತಲೆ ಇರುತ್ತವೆ...

manju787's picture
31
Dec
2009
12:46

ನಿಮ್ಮ ಮಾತು ನಿಜ ಮಂಸೋರೆ, ಕಲಾವಿದರು ಸಾಯಬಹುದೇ ಹೊರತು ಅವರು ಉಳಿಸಿ ಬೆಳೆಸಿದ ಕಲೆಗೆ ಸಾವಿಲ್ಲ. ಅವರು ಎಂದಿಗೂ ನಮ್ಮ ಮಧ್ಯೆ ಜೀವಂತವಾಗಿರುತ್ತಾರೆ. ಕಲೆಗೆ ಎಂದೂ ಸಾವಿಲ್ಲ. ಅದು ಅಜರಾಮರ. ಅದು ಭೂತದಿಂದ ಭವಿಷ್ಯದೆಡೆಗೆ ಸಾಗಿಸುವ ಅಮರ ವಾಹನವಿದ್ದಂತೆ. ಅಗಲಿದ ಆತ್ಮಗಳಿಗೆ ಚಿರಶಾಂತಿ ಸಿಗಲಿ. ಅವರ ಬಾಳು ನಮಗೆ ಮಾರ್ಗದರ್ಶಕವಾಗಲಿ.

lodyaashi's picture
30
Dec
2009
11:34

ಬೆಳಗ್ಗೆ ಎದ್ದು ಬಂದು ಮಿಂಚೆ ನೋಡಿದೆ...ಏನಪ್ಪಾ ಜನ ಎಂತಹ ವಿಷ್ಯಾಕ್ಕೆಲ್ಲಾ ತಮಾಷೇ ಮಾಡ್ಟಾರಲ್ಲಾ ಅನ್ನಿಸ್ತು...ಅದ್ರೂ ನೋಡೋಣ ಅಂತ ಅಲ್ಲಿ ಇಲ್ಲಿ ನೋಡ್ಟೀನಿ...

ನನಗಂತೂ ನಂಬೋಕ್ಕೆ ಆಗ್ಲಿಲ್ಲ. ಈ ದೇಹ ಅನ್ನೋ ಯಂತ್ರಕ್ಕೆ ಜೀವ ಅನ್ನೋ ಎಂಜಿನ್ ಬರೀ ನೀರಿನ ಮೇಲಿನ ಗುಳ್ಳೆ ಅಷ್ಟೇ...ಈ ಗುಳ್ಳೆ ಯಾವಾಗ..ಯಾಕೆ..ಎಲ್ಲಿ...ಹೇಗೆ...ಯಾರಿಂದ...ಹೊಡ್ದೋಗುತ್ತೆ ಅನ್ನೋದು ಯಾರೆಗೂ ಗೊತ್ತಾಗಲ್ಲ.. :(

smurthygr's picture
31
Dec
2009
12:05

ಸ್ವಾಮೀ, ನೀವು ವಿಷ್ಣುರನ್ನು ಹೊಗಳುವಾಗಲೂ ರಾಜ್ ಕುಮಾರರ ಬಗ್ಗೆ ಕೇವಲವಾಗಿ ಮಾತಾಡುವುದು ತುಂಬಾ ಕೆಟ್ಟೆನಿಸುತ್ತದೆ. ಅವರನ್ನು ಇಲ್ಲಿ ಎಳೆಯುವ ಅವಶ್ಯಕತೆ ಇತ್ತೇ... ರಾಜ್ ಕುಟುಂಬದ ಬಗ್ಗೆ ನಿಮಗೆ ದ್ವೇಷವಿದ್ದರೆ ಅದರ ಬಗ್ಗೆ ಬೇರೆ ಲೇಖನ ಬರೆದು ಸಂತೋಷಿಸಿ. ಒಂದು ದುಃಖದ ಸನ್ನಿವೇಶದಲ್ಲೂ ನಿಮ್ಮ ಕಹಿ ಬೇಡ.

Rakesh Shetty's picture
31
Dec
2009
3:44

ಈ ಲೇಖನದಲ್ಲಿ ನೀವು ಹೇಳಿದಂತೆ ಏನಾದರು ಇದೆಯಾ ಅಂತ ಮತ್ತೊಮ್ಮೆ ಓದಿ ನೋಡಿದೆ, ಏನು ಸಿಗಲಿಲ್ಲ!
ರಾಜ್ ಬಗ್ಗೆ ಇಲ್ಲಿ ಕೇವಲವಾಗಿ ಮಾತಾಡಿಲ್ಲ , ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಕಷ್ಟ ಬಿಡಿ ಎನ್ಮಾಡೋಕಾಗೋಲ್ಲ ! , ಇವತ್ತಿನ ವಿಜಯಕರ್ನಾಟಕದ ಲವಲವಿಕೆ ಒಮ್ಮೆ ಓದಿ.

malleshgowda's picture
31
Dec
2009
4:22

ಸರಿಯಾಗಿ ಹೇಳಿದಿರಿ ರಾಕೇಶ್,

ಒಬ್ಬ ಕಲಾವಿದನೊಬ್ಬ ಬೆಳೆದು ಎಲ್ಲಿ ನಮ್ಮ ಸ್ಟಾರ್ ಗಿರಿ ಕಳಚಿ ಬೀಳುತ್ತೋ ಎ೦ದು ಸಿಕ್ಕಲ್ಲೆಲ್ಲ ಮಾತಿನ ಮೋಡಿಯಿ೦ದ ಕನ್ನಡಿಗರಿಗೆ ಕ೦ಡೂ ಕಾಣದ ಕೈ ಬಗ್ಗುಬಡಿದಿದೆ, ಅದಿಕ್ಕೆ ಇರಬಹುದು ಕನ್ನಡ ನಾಡು ರಕ್ಷಣೆ ಎ೦ದರೆ ವಿಷ್ಣು ಹಿ೦ದೆ ಸರಿದುದ್ದು೦ಟು. ಕಾಲ ಬದಲಾಗಿದೆ. ವಿಷ್ಣು ಶಾ೦ತಿಯಿ೦ದ ವಿರಮಿಸಿದ್ದಾರೆ, ಬೇರೆಯವರಿಗೆ ಹೋಲಿಸಿದ್ದಲ್ಲಿ ಎಸ್ಟೋ ಕೋಟಿ ಪಾಲು ಮೇಲು (ಕೆಲವರು ಕೊಡುತ್ತಿದ್ದ ಕೇವಲ ಐವತ್ತು ಸಾವಿರಕ್ಕೆ ಮಾಧ್ಯಮದ ಮು೦ದೆ ತುತ್ತುರಿ ನಡೆದಿತ್ತು ಒ೦ದು ಕಾಲದಲ್ಲಿ).

ಇವೆಲ್ಲ ಮುಗಿದ ಅಧ್ಯಾಯ.

ಮಲ್ಲೇಶ್

malleshgowda's picture
31
Dec
2009
4:41

ತಮ್ಮ ಸ೦ಸ್ಠೆಯಿ೦ದ ಕೇವಲ ತಮ್ಮ ಕುಟು೦ಬದವರಿಗೆ ಮಾತ್ರ ಅವಕಾಶವಿರುತ್ತಿತ್ತು. ಬೇರೆ ಕಲಾವಿದರು ಕಣ್ಣಿಗೆ ಬೀಳಲ್ಲಿಲ್ಲವೆನೋ; ಇದು ನಮ್ಮವರಿಗೆ ಎಕೆ ಅರ್ಥವಾಗೊಲ್ಲ. ಅಬ್ಬ ಎ೦ತ ಮುಖಗಳ ನಾಯಕರಾಗಿರುವವರು.

skchomi's picture
31
Dec
2009
7:24

ಸವಡಿಯವರೆ,
ನಿಮ್ಮ ಲೇಖನ ಚೆನ್ನಾಗಿದೆ. Super!
ಅದನ್ನು ಒದಿದ್ಮೆಲೆ ನಾನು college daysನಲ್ಲಿ ಚಕ್ಕರ್ ಹಾಕಿ ವಿಷ್ಣುವರ್ದನ್ ಅವರ ಚಿತ್ರಗಳನ್ನು ನೊಡುತ್ತಿದ್ದು ನೆನಾಪಾಗುತದೆ.

ವಿಷ್ಣುವರ್ದನ್ ಅವರ ಸಾವು, ನಿಜವಾಗಿಯು ಇದೊ೦ದು ಭರಿಸಲಾಗದ ನಷ್ಟ.

- ಅಶ್ವಿನಿ ಕುಮಾರ್

venkatesh's picture
01
Jan
2010
12:29

"ಚಿತ್ರದುರ್ಗ" ದ ಊರಿನವನಾದ ನನಗೆ "ವಿಷ್ಣು" ಪ್ರಿಯ ಏಕೆಂದರೆ, "ನಾಗರಹಾವು" ಚಿತ್ರದಲ್ಲಿ ಅವರ ಅಭಿನಯವನ್ನು ನಾವು ನೋಡಿದಾಗಿನಿಂದ. ನನ್ನ ಭಾವಮೈದುನರೆಲ್ಲಾ, "ಚಿತ್ರದುರ್ಗ" ಕ್ಕೆ ನಾನು ಹೋದಾಗಲೆಲ್ಲ ನನ್ನನ್ನು "ಕೋಟೆ" ಯ ಬಳಿ ಕರೆದುಕೊಂಡು ಹೋಗುತ್ತಿದ್ದರು. "ಅಲಮೇಲು" ಮನೆ, ಆಗ ಶೂಟಿಂಗ್ ಆದಾಗಿನಿಂದ ಹಿಡಿದು, ಪ್ರತಿಯೊಂದು ಸನ್ನಿವೇಷಗಳ ಚಿತ್ರೀಕರಣದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಕೊಡುತ್ತಿದ್ದರು. ಊರಿನ ಜನರಿಗೆಲ್ಲಾ ಸಂಭ್ರಮವೋ ಸಂಭ್ರಮ ! ವಿವರಣೆಕೊಡುವಾಗ ಅವರ ಕಣ್ಣುಗಳಲ್ಲಿ ಮಿಂಚನ್ನು ನಾನು ಕಾಣುತ್ತಿದ್ದೆ. ಇದು ಸುಮಾರು ಸಮಯ ನಡೆದು ನನಗಂತೂ ಎಲ್ಲ ಬಾಯಿಪಾಠವಾಗಿತ್ತು !

ಬೆಟ್ಟದಮೇಲೆ "ರಾಮಾಚಾರಿ" ಹಾಡಿನ ದೃಷ್ಯವನ್ನಂತೂ ಅದೆಷ್ಟು ಆಸ್ತೆಯಿಂದ ನಮ್ಮನ್ನು ತಿವಿದು ತಿವಿದು ಹೇಳುತ್ತಿದ್ದರೋ ಮರೆಯಲು ಸಾಧ್ಯವಿಲ್ಲ. ಮನೆಗೆ ಬಂದಾಗ ಇನ್ನಿತರರು, ಪುನಃ ಅದನ್ನೇ ಹೇಳಿ ಕೊನೆಗೆ ಬೇಸರಬರುವಷ್ಟು ಮಾಹಿತಿಗಳನ್ನು ಒದಗಿಸುತ್ತಿದ್ದರು !

"ಖಲೀಲ್" ಪಾತ್ರ "ಅಂಬರೀಶ್ " ಮಾಡಿದ್ದರಲ್ಲವೇ ! ಅವರ ಬಗ್ಗೆಯೂ ನನಗೆ ತುಂಬಾ ಆಸಕ್ತಿ !
ಯಜಮಾನ ಮತ್ತೊಂದು ಚಿತ್ರ ನನಗೆ ಮೆಚ್ಚುಗೆಯಾಯಿತು !

ಒಟ್ಟಿನಲ್ಲಿ ಒಬ್ಬ ತುಂಬು ಪ್ರತಿಭೆಯ ನಟ, ಇನ್ನೂ ತನ್ನ ಸಂಪೂರ್ಣ ನಟನೆಯ ಸವಿಯನ್ನು ನಮಗೆ ನೀಡುವ ಮೊದಲೇ ಆ "ಜಗನ್ನಿಯಾಮಕ" ನಿಗೆ ಪ್ರಿಯನಾಗಿದ್ದು, ದಾಖಲಿಸಲು ಯೋಗ್ಯವಾದ ಸಂಗತಿ !

Chamaraj's picture
01
Jan
2010
2:04

ನೆನಪುಗಳೇ ಹಾಗೆ ಅಲ್ವಾ ವೆಂಕಟೇಶ್‌ ಸರ್‌. ಕೈಗಂಟಿದ ಸುಗಂಧದ್ರವ್ಯವನ್ನು ಬಟ್ಟೆಗೆ ಒರೆಸಿಕೊಂಡಂತೆ ಅದು. ಕೈಯಿಂದ ಸುಗಂಧ್ರದ್ರವ್ಯ ಮಾಯವಾದರೂ, ಅದರ ಪರಿಮಳ ತಾಕುತ್ತಲೇ ಇರುತ್ತದೆ. ವಿಷ್ಣುವರ್ಧನ್‌ ಅಂಥ ನೆನಪಿನ ಪರಿಮಳ. ಅಷ್ಟು ಬೇಗ ಮರೆಯಾಗದು.

Chamaraj's picture
01
Jan
2010
2:02

ಥ್ಯಾಂಕ್ಸ್‌ ಅಶ್ವಿನಿ ಕುಮಾರ್‌. ಕಾಲೇಜಿಗೆ ಚಕ್ಕರ್‌ ಹಾಕಿ ಮಾಡಿದ ಕೆಲಸಗಳೇ ಇವತ್ತಿನ ಸವಿ ನೆನಪುಗಳು. ವಿಷ್ಣುವರ್ಧನ್‌ ಆ ನೆನಪಿನ ಸುಂದರ ಭಾಗ.