ಭಾರತದ ಹೀ-ನಾಯ ಸೋಲು!
ಭಾರತದ ಹೀ-ನಾಯ ಸೋಲು!
-----------------
ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟದೇಶದೊ
ಳಿರುವ ಬಣ್ಣದ ಬೆಂಗಳೂರಿನ ಕತೆಯ ಮತ್ತೆ ನಾನಿಂದು ಪೇಳ್ವೆನು!
ಕಾಲುಚೆಂಡನು ಆಡಲೋಸುಗ
ಕಾಲು ಹಿಡಿದು ಬೇಡಿ ಕಾಡಿ
ಸೋಲುಬುರುಕರ ತಂಡಕಟ್ಟುವ ಮಂದಿಯಿರುವುದು ಇಲ್ಲಿಯೇ!
ಹಿಂದೆ ಬಂದರೆ ತಡೆಯಲಾರರು
ಮುಂದೆ ಬಂದರೆ ಒದೆಯಲಾರರು
ಕೊಂದರೂ ಒಂದು ಗೋಲು ಹೊಡೆಯರು ಚೆಂಡು ಇವರಿಗೆ ಏತಕೆ?
ಇಂತಿರುಪ ಕುಂತಲದ ಸುತರು
ಕುಂತಿರಲು ಆಕಳಿಸಿ ಸುಮ್ಮನೆ
ಬಂತಿದೋ ಆಹ್ವಾನ ನೋಡೈ ಜಪಾನಿನೊಡನೆ ಆಟಕೆ!
ತಟ್ಟಿದರು ತೊಡೆ ರಟ್ಟೆಗಳನು
ಕಟ್ಟಿದರು ತಮ್ಮ ಟೊಂಕಕರಿವೆಯ
ಜಟ್ಟಿಗಳು ನಾವೆನುತ ಬಾಯಲಿ ಬಿಟ್ಟ ಜುಟ್ಟನು ಕಟ್ಟುತಾ!
ಕಿರಿಯ ಕಣ್ಣಿನ ಹಿರಿಯ ಪಟುಗಳು
ಬರಿಯದೇತಕೆ ಮಾತು ಎನ್ನುತ
ಭಾರತದ ಈ ಪೆರ್ಮೆ ನೆಲಕೆ ತಮ್ಮ ಪಾದವನಿಟ್ಟರು!
ಬೆಂಗಳೂರಿನ ಗೊಡವೆ ತಿಳಿಯದೆ
ಅಂಗಳದಲಿ ಬಂದಿಳಿದು ನೋಡೆ
ಕಂಗಳನೆ ತಾವ್ ನಂಬದಾದರು ಶಿಥಿಲ ಕ್ರೀಡಾಂಗಣದಲಿ!
ಹುಲ್ಲ ಕಾಣದ ಧೂಳು ನೆಲದಲಿ
ಎಲ್ಲ ಪಟುಗಳು ಬಂದು ನಿಂತು
ಮೆಲ್ಲ ಮೆಲ್ಲನೆ ನಿಜವನರಿಯಲು ಅಲ್ಲಿ ಮೊಳಗಿತು ಗೀತೆಯು!
ಕಣ್ಣ ಹರಿಸಲು ಬರಿಯ ಅಂಗಳ
ಬಣ್ಣವರಿಯದ ಬಿರುಕು ತಂಗಳ
ಮಣ್ಣ ಹೊದ್ದ ಗೋಡೆ ಮೆಟ್ಟಲ ಮೇಲೆ ಕಾಣನು ನರಪಿಳ್ಳೆಯೂ!
ಲೆಕ್ಕಿಸದೆ ಏನನೂ ಆಟಕಿಳಿದು
ಮುಕ್ಕಿಸುತ ಭಾರತಕೆ ಚಳ್ಳೆಯ
ಮಕ್ಕಳಾಟವ ಹೋಲುವಂದದಿ ನುಗ್ಗಿ ಹೊಡೆದರು ಗೋಲ್ಗಳ!
ಕನಲಿ ಸಂಜೆ ಮಬ್ಬಡರಿ ಪೋಗಿ
ಹೊನಲ ಬೆಳಕಿನ ಪಂಜು ಬೆಳಗಲು
ಜನಗಳೆಲ್ಲ ಒಬ್ಬೊಬ್ಬರಾಗಿ ಬಂದು ಸೇರಿದರಲ್ಲಿಯೇ!
ಮೇಲೆರಗಿ ಆಡುವ ದಾಳಿಕೋರರ
ಕಾಲ ಒದೆತಕೆ ಬೆಬ್ಬಿಳಿದು ನೋಡುತ
ಗೋಲ ರಕ್ಷಕ ನಂದಿಕೇಶ್ವರ ಕುಸಿದು ಬಿದ್ದನು ಅಲ್ಲಿಯೇ!
ಎಲ್ಲ ಚೆನ್ನಿರೆ ಎಲ್ಲ ಕಾದಿರೆ
ಎಲ್ಲ ನೋಡಲು ತವಕದಿಂದಿರೆ
ಅಲ್ಲಿ ಆರಿತು ಹೊನಲ ಬೆಳಕು ಬೆಂಗಳೂರಿನ ಮಹಿಮೆಗೆ!
ಒಂಟಿ ಪಂಜಲಿ ಮಬ್ಬು ಬೆಳಕಲಿ
ಸೊಂಟ ಕಾಲನು ಒತ್ತಿ ಹಿಡಿಯುತ
ಭಂಟರೆಲ್ಲರು ಮುಂದುವರಿಯಲು ಝಗ್ಗನೆ ಬೆಳಕಾಯಿತು!
ಸುಯ್ದರೋ ನಿಡಿದಾಗಿ ಜನರು
ಕಾಯ್ದರವರಾಕಕ್ಷ ಭಟರು
ಬಯ್ದರೋ ಹೊರನಾಡ ಜನರು, ನಕ್ಕರೋ ಆತಿಥೇಯರು!
ಮೂರು ಗೋಲ್ಗಳ ಹೊಡೆಸಿಕೊಂಡು
ಮಾರು ದೂರಕೆ ಚೆಂಡನೊದೆಯುವ
ಹಾರಿ ತಡೆಯದೆ ಸೋತ ಭಾರತ ಜೋಲುಮೋರೆಯ ಹಾಕಿತು!
ಆಡಿ ಮುಗಿಸಲು ಚಣಗಳಿರಲು
ನಾಡ ಭಕುತ ಬೀದಿ ನಾಯಿ
ಓಡುತಾ ತಾನಾಡಲೆಂದು ಹಾರಿತು ಮೈದಾನಕೆ!
ಅಮ್ಮಗಳಿರಾ ಅಪ್ಪಗಳಿರಾ
ಎಮ್ಮ ಅನ್ನದಾತಗಳಿರಾ
ಸುಮ್ಮನೆ ಸೋಲುವಿರಿ ಏಕೆ? ನಾನು ಆಡುವೆ ಎಂದಿತು!
ಆರ ಚೆಂಡನು ಒದೆಯಲಮ್ಮಾ!
ಆರ ಕಾಲನು ಕಚ್ಚಲಮ್ಮಾ!
ಆರ ಮೇಲೆರಗಲಮ್ಮಾ! ಆರು ನಮ್ಮನು ಗೆಲುವರು?
ಕಟ್ಟೆಯೊಡೆಯಿತು ನಗೆಯ ಹೊನಲು
ಚಟ್ಟವೇರಿತು ನಗರ ಕೀರುತಿ
ನಟ್ಟ ನಡುವಲಿ ಆಟ ನಿಲ್ಲಲು ತಲೆಯ ಬಾಗಿದರೆಲ್ಲರೂ!
ಸಾಲದೆನ್ನಲು ಮತ್ತೆ ಆರಿತು
ಕಾಲಕಾಲಕೆ ಹೊನಲ ಬೆಳಕು
ಕಾಲವಾಯಿತು ಬೆಂಗಳೂರಿನ ಸಾಲಮಾಡಿದ ಪೆರ್ಮೆಯು!
ಪಕ್ಕೆಹಿಡಿದು ನಗುತ ಹೊರಳುವ
ಪಕ್ಕದಲಿಹ ಜಪಾನಿ ಜನರ
ಮಿಕ್ಕ ಮಾತಿಗೆ ಸಿಲುಕದೆಯೆ ನಾ ಮೂಕನಾದೆನು ಇಲ್ಲಿಯೇ!
ನಿತ್ಯವೂ ಅಪಮಾನಗೊಳ್ಳುವ ಭಾರತೀಯನ ಕಥೆಯಿದು!
- ಬೆನಕ
(೨೦೦೬.೧೦.೧೧ ರಂದು ಬೆಂಗಳೂರಿನಲ್ಲಿ ನಡೆದ ಭಾರತ-ಜಪಾನ್ ಹೊನಲು ಬೆಳಕಾರಿದ ಪಂದ್ಯವನ್ನೂ, ಮೈದಾನಕ್ಕೆ ನುಗ್ಗಿದ ಬೀದಿನಾಯಿಯನ್ನೂ ಜಗಜ್ಜಾಹೀರು ಮಾಡಿ ಬೆಂಗಳೂರಿನ ನೈಜತೆಯನ್ನು ತೋರಿಸಿದ ಜಪಾನ್ ದೂ.ದ ನೇರಪ್ರಸಾರದಿಂದ ನೊಂದ ಬಳಿಕ ಬರೆದದ್ದು)

- Login or register to post comments
- 618 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬಹಳ ಚೆನ್ನಾಗಿದೆ
ಬಹಳ ಚೆನ್ನಾಗಿದೆ, ಬೆನಕರೆ!
ಯಾವ ಫುಟ್ಬಾಲ್ ಮ್ಯಾಚ್ ಇದು ಅಂತ ನಮ್ಮ ಸಂಪದ ಮಿತ್ರರು ತಲೆಕೆಡಿಸಿಕೊಳ್ಳುತ್ತಿದ್ದರೆ ಈ ಪುಟ ನೋಡಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸಕತ್ತಾಗಿದ
ಸಕತ್ತಾಗಿದೆ ಸಾರ್!