ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಹಾರಾಜ ಸ್ವಾತಿತ್ತಿರುನಾಳ್ - ೧

೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು 'ಸಂಗೀತ ಯುಗ' ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿತ್ತಿರುನಾಳ್ ಸಹ ಒಬ್ಬರು. 

ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು. ಅಪಾರವಾದ ಸಂಗೀತಜ್ಞಾನವನ್ನೂ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದ ಸ್ವಾತಿತ್ತಿರುನಾಳ್, ಸಂಗೀತ ಪ್ರಪಂಚಕ್ಕೆ ಅಮಿತಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರ ನಂತರ ಸಂಗೀತ ಪ್ರಪಂಚ ಅವರನ್ನು 'ಅಭಿನವ ತ್ಯಾಗರಾಜ' ಎಂಬ ಹೆಸರಿನಿಂದ ಗೌರವಿಸಲಾರಂಭಿಸಿತು.

ಸ್ವತಃ ಮಹಾರಾಜನಾದರೂ ವಿದ್ಯೆಯ ದಾಹ ಇವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.

ಸ್ವಾತಿತ್ತಿರುನಾಳ್ ಅವರ ಕಾಲಕ್ಕೆ ಮೊದಲು, ಕೇರಳದಲ್ಲಿ ಸಂಗೀತವು ತನ್ನದೇ‌ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ 'ಆಟಕಥಾ ಸಂಗೀತ' ಎಂದು ಹೆಸರಿತ್ತು.

ಅಶ್ವಿನಿತ್ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು. ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು.

ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿತ್ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದು.

ತಿರುವಾಂಕೂರು ಅರಸು ಮನೆತನದಲ್ಲಿ ೧೮೧೩ನೇ ಇಸವಿಯ ಏಪ್ರಿಲ್ ೧೬ನೇ ತಾರೀಖು ಸ್ವಾತಿತ್ತಿರುನಾಳ್ ಅವರು ಜನಿಸಿದರು. ಹುಟ್ಟುವಾಗಲೇ ಮಕುಟ ಧರಿಸುವ ಯೋಗ ಇವರಿಗಾಯಿತು. ಇವರ ಹಿಂದಿನ ದೊರೆ ಬಾಲರಾಮವರ್ಮ ಮಹಾರಾಜರ ಕಾಲ ೧೮೧೧ನೇ ಇಸವಿಗೆ ಮುಗಿದು ಅವರಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರ ತಂಗಿ ರಾಣಿ ಸೇತುಕ್ಷ್ಮಿಬಾಯಿಯೇ ಗದ್ದುಗೆ ಏರಿದರು. ಇವರು ಶ್ರೀ ಪದ್ಮನಾಭಸ್ವಾಮಿಯ ಅನನ್ಯ ಭಕ್ತರು. ಆ ಸ್ವಾಮಿಯ ಅನುಗ್ರಹದಿಂದ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಕುಮಾರನೇ ಸ್ವಾತಿ ತ್ತಿರುನಾಳ್.

ಚಿಕ್ಕಂದಿನಲ್ಲೇ ಮಾತೆಯನ್ನು ಕಳೆದುಕೊಂಡ ಸ್ವಾತಿತ್ತಿರುನಾಳ್ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಶುಕ್ಲ ಪಕ್ಷದ ಚಂದ್ರನಂತೆ ಇವರ ದೇಹ, ಮನಸ್ಸು, ಬುದ್ಧಿ ಎಲ್ಲವೂ ಬೆಳೆದವು, ಬೆಳಗಿದವು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ ಕಲೆ, ಯುದ್ಧಕಲೆ, ಹೀಗೆ ಎಲ್ಲದರಲ್ಲೂ ಮಹಾಮೇಧಾವಿ ಎನಿಸಿಕೊಂಡರು.

೧೬ನೇ ವಯಸ್ಸಿನಲ್ಲಿ, ಚಿಕ್ಕಮ್ಮ ಗೌರಿ ಪಾರ್ವತಿಬಾಯಿ ಅವರು ತಮ್ಮ ಅಮೃತ ಹಸ್ತದಿಂದ ಸ್ವಾತಿತ್ತಿರುನಾಳ್ ಅವರಿಗೆ ಮಕುಟಾಭಿಷೇಕ ಮಾಡಿದರು.

ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ಇವರು ರಾಜ್ಯಭಾರವನ್ನು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿದರು. ಕಲಾವಿದರಿಗೆ ಇವರು ಕೊಡಿತ್ತಿದ್ದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅನೇಕ ಸಂಗೀತಗಾರರಿಗೆ, ಕಲಾವಿದರಿಗೆ ಸ್ವತಃ ಧನಸಹಾಯ ನೀಡಿ ವಿದ್ಯೆಕಲಿಸುವ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭೆ ಇರುವವರಿಗೆ ವಿಶೇಷ ಗೌರವ ಸಲ್ಲಿಸಿ ಪ್ರಶಸ್ತಿ ನೀಡುತ್ತಿದ್ದರು.

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳು ದೇಶಗಳಿಂದೆಲ್ಲ ಸಂಗೀತ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು. ಅವರಲ್ಲಿ ಹಲವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ರಾಜ್ಯವು ಸಂಪತ್ಸಮೃದ್ಧವಾಗಿತ್ತಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾದವು.

(ಸಶೇಷ)

Your rating: None Average: 5 (20 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
thesalimath's picture

ಇವರ ವಂಶಜರಾದ ಮಹಾರಾಜ ಚಿತ್ರತ್ತಿರುನಾಳ್ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಹರಿಜನರಿಗೆ ದೇಗುಲಗಳಲ್ಲಿ ಪ್ರವೇಶ ಕೊಡುವ ಕ್ರಾಂತಿಕಾರಕ ನಿರ್ಣಯಗಳನ್ನು ಕೈಗೊಂಡಿದ್ದರು.
ಇವರಿಂದ ಪ್ರೇರಿತರಾಗಿ ಗಾಂಧೀಜಿ ಮತ್ತಿತರರು ದಲಿತರಿಗೆ ದೇವಸ್ತಾನಕ್ಕೆ ಪ್ರವೇಶ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು!
ತಮಿಳುನಾಡಿನ ಊರೊಂದಕ್ಕೆ (ಆಗ ತಿರುವಾಯಂಕೂರು ರಾಜ್ಯದಲ್ಲಿದ್ದ ) ಚಿತ್ರತ್ತಿರುನಾಳ್ ಮಹಾರಾಜರ ಹೆಸರಿಟ್ಟು ಗೌರವಿಸಲಾಗಿದೆ. ಬಯೋಟೆಕ್ನಾಲಾಜಿಯ ಸಂಶೋಧನೆಯ ಕೇಂದ್ರವನ್ನು ಅಲ್ಲಿ ಸ್ಥಾಪಿಸಲಾಗಿದೆ!

hamsanandi's picture

ಮುಂದಿನ ಭಾಗಗಳನ್ನು ಬೇಗನೆ ಹಾಕಿ :)

ಸ್ವಾತಿತ್ತಿರುನಾಳ್ ಅಂತ ಬರೆದಿದ್ದು ಯಾಕೆ ಅಂತ ತಿಳೀಲಿಲ್ಲ - ಸ್ವಾತಿ ತಿರುನಾಳ್ ಅಂತ ಬರೀಬಹುದಿತ್ತಲ್ವೇ? ಏನಾದರೂ ವಿಶೇಷ ಕಾರಣವಿತ್ತೇ?

Shamala's picture

ಅನಿಲ್ ಒಳ್ಳೆಯ ವಿಚಾರವನ್ನು ಆರಂಭಿಸಿದ್ದೀರಿ. ಬೇಗ ಮುಂದುವರೆಸಿ.... ಅವರು ’ಮಹಾರಾಜ ಸ್ವಾತಿ ತಿರುನಾಳ್’ ಎಂದೇ ಪ್ರಸಿದ್ಧರಾದವರಲ್ಲವೇ? ಅವರ ಕೃತಿಗಳ ವಿಶ್ಲೇಷಣೆಯನ್ನೂ ಮಾಡುತ್ತೀರಲ್ಲವೇ?........

ಶ್ಯಾಮಲ

anil.ramesh's picture

ಶ್ಯಾಮಲ,
ಸ್ವಾತಿತ್ತಿರುನಾಳ್ ಅವರ ಕೃತಿಗಳ ಬಗ್ಗೆಯೂ ಬರೆಯಬೇಕೆಂದು ಯೋಚಿಸಿರುವೆ.

-ಅನಿಲ್

anil.ramesh's picture

ಬರೆಯುವೆ. :)

AIR ಅಲ್ಲಿ 'ಸ್ವಾತಿತ್ತಿರುನಾಳ್' ಅವರ ಕೃತಿಗಳ ಬಗ್ಗೆ ಹೇಳುವಾಗ ಒತ್ತಕ್ಷರ ಸೇರಿಸಿ ಹೇಳೋದು ಕೇಳಿರುವೆ. ಹಾಗಾಗಿ ನಾನೂ ಒತ್ತಕ್ಷರ ಸೇರಿಸಿ ಬರೆದಿರುವೆ.
ಬಹುಶಃ ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ರೀತಿ ಉಚ್ಚರಿಸುತ್ತಾರೆ ಎಂದೆನಿಸುತ್ತದೆ.

-ಅನಿಲ್

anil.ramesh's picture

ಶ್ರೀಹರ್ಷ,
ಮಾಹಿತಿಗೆ ಧನ್ಯವಾದಗಳು.

-ಅನಿಲ್

kpbolumbu's picture

ಕನ್ನಡದ ಎನನ್ಸಿಯೇಟಿವಿನಲ್ಲಿ "ಸ್ವಾತಿ ತಿರುನಾಳ್ ". ಇನ್ನು "ಸ್ವಾತಿತ್ತಿರುನಾಳ್" ಎಂಬುದು ದ್ರಾವಿಡಾದಿಯ ಉಚ್ಚಾರವೂ ಅಲ್ಲ.
"ಹುಟ್ಟುವಾಗಲೇ ಮಕುಟ ಧರಿಸುವ ಯೋಗ" ಅಲ್ಲ - ತಾಯ ಬಸಿರಿನಲ್ಲಿದ್ದಾಗಲೇ ಮಕುಟ ಧರಿಸುವ ಯೋಗ. ಇದರಿನ್ದಾಗಿಯೇ 'ಆಗರ್ಭಶ್ರೀಮಾನ್' ಎಂಬ ಬಿರುದು ದೊರೆಯಿತು. ವಿಶೇಷವೆನ್ದರೆ ಕನ್ನಡದಲ್ಲಿ ಒನ್ದು ಕೀರ್ತನೆಯನ್ನೂ ರಚಿಸಿದ್ದಾರೆ. (ಅಣ್ಣೆಗನ್ನಡದಲ್ಲಲ್ಲ! ;) )
ಒಳ್ಳೆಯ ಮಾಹಿತಿ.

anil.ramesh's picture

ಕೃಷ್ಣಪ್ರಸಾದ್,
>>"ಹುಟ್ಟುವಾಗಲೇ ಮಕುಟ ಧರಿಸುವ ಯೋಗ" ಅಲ್ಲ - ತಾಯ ಬಸಿರಿನಲ್ಲಿದ್ದಾಗಲೇ ಮಕುಟ ಧರಿಸುವ ಯೋಗ. ಇದರಿನ್ದಾಗಿಯೇ 'ಆಗರ್ಭಶ್ರೀಮಾನ್' ಎಂಬ ಬಿರುದು ದೊರೆಯಿತು.
ಈ ಮಾಹಿತಿ ಗೊತ್ತಿರಲಿಲ್ಲ.
ಧನ್ಯವಾದಗಳು.

-ಅನಿಲ್

hamsanandi's picture

ಹೌದು - ರಾಜೀವಾಕ್ಷ ಬಾರೋ ಕೃಷ್ಣ ಎಂಬ ಶಂಕರಾಭರಣ ರಾಗದಲ್ಲಿರುವ ರಚನೆ ಕನ್ನಡದಲ್ಲಿದೆ.

ಅಲ್ಲದೆ ಹಿಂದೂಸ್ತಾನಿ ಶೈಲಿಯ ಧ್ರುಪದ್, ಭಜನ್ ಮೊದಲಾದ ಪ್ರಕಾರಗಳನ್ನೂ ಇವರು ರಚಿಸಿದ್ದಾರೆ.

anil.ramesh's picture

ಹೌದು, ಕನ್ನಡದ ಈ ಕೃತಿಯನ್ನು ಆಕಾಶವಾಣಿಯಲ್ಲಿ ಕೇಳಿರುವೆ.
ಆದರೆ ಸಾಹಿತ್ಯದ ಶೋಧನೆಯಲ್ಲಿದ್ದೇನೆ. ಸಿಕ್ಕರೆ ಹಂಚಿಕೊಳ್ಳುವೆ.

-ಅನಿಲ್

kamalap09's picture

ಒಂದು ಒಳ್ಳೆಯ ವಿಷಯ ಪ್ರಾರಂಭಿಸಿದ್ದೀರ ಅನಿಲ್.
ಮುಂದಿನ ಭಾಗ ಬೇಗ ಪ್ರಕಟಿಸಿ.

anil.ramesh's picture

ಬರೆಯುವೆ, ಕಾದು ನೋಡಿ.

-ಅನಿಲ್

hariharapurasridhar's picture

ಅನಿಲ್ ಒಳ್ಳೆಯ ಲೇಖನಮಾಲೆ ಶುರು ಮಾಡಿದ್ದೀರಿ. ಕೆಲವು ಸಂಗೀತ ರಚನೆಗಳ ಧ್ವನಿಯನ್ನು ಕೇಳಿಸುವ ವ್ಯವಸ್ಥೆ ಮಾಡುವಿರಾದರೆ ಚೆನ್ನಾಗಿರುತ್ತೆ.ಕೆಳಗಿನ ಕೊಂಡಿಯಲ್ಲಿ ಅಪ್ಲೋಡ್ ಮಾಡಬಹುದಲ್ಲಾ?
http://www.binfire.com

anil.ramesh's picture

ಶ್ರೀಧರ್,
ಗೂಗಲ್ ಅಲ್ಲಿ ಹುಡುಕಿದರೆ ರಚನೆಗಳು ಸಿಗಬಹುದು.
ನೀವು ಕೊಟ್ಟಿರುವ ಕೊಂಡಿಯಲ್ಲಿ ಅಪ್ಲೋಡ್ ಮಾಡಲು ಪ್ರಯತ್ನಿಸುವೆ.

-ಅನಿಲ್

Sunil Jayaprakash's picture

ನನಗೆ ಇಲ್ಲಿ ಕೊಟ್ಟಿರುವ ಯಾವ ವಿಚಾರವೂ ತಿಳಿದಿರಲಿಲ್ಲ. ನನ್ನಿ.

ತಿರುವನಂತಪುರದ ವಿಮಾನನಿಲ್ದಾಣದಲ್ಲಿ ಇರುವ ಪಾಪೆ ಇವರದ್ದೇ ಅಲ್ವೇ ? ಬಲ್ಲವರು ಹೇಳಿ.

anil.ramesh's picture

ಇನ್ನಷ್ಟು ಮಾಹಿತಿ ಮುಂದಿನ ಭಾಗದಲ್ಲಿ..

-ಅನಿಲ್

hamsanandi's picture

ನನಗೆ ನೆನಪಿರುವಂತೆ ಹಾಡು ಹೀಗಿದೆ:

ರಾಜೀವಾಕ್ಷ ಬಾರೋ ಕೃಷ್ಣ
ರಾಧಾ ರಮಣ ಬಾರೋ ಕೃಷ್ಣ

ಮತ್ಸ್ಯ ಕೂರ್ಮ ರೂಪ ಧರ ಮಾಧವ ನೀ ಬಾರೋ
........................... ಮೂಲ ಮುಕುಂದ ಬಾರೋ || ರಾಜೀವಾಕ್ಷ ||

ಮುಂದಿನ ಚರಣ ಮರೆತಿರುವೆ :(

rasikathe's picture

ಈ ಹಾದನ್ನು ತುಂಬಾ ಕೇಳಿ, ಇಷ್ಟಪಟ್ಟಿದ್ದೇನೆ. ನಮ್ಮ ಮನೆಯಲ್ಲೇ ಸಿಡಿ ಇದೆ ಅಂತನಿಸಿದೆ. ಏಕೆಂದರೆ ತುಂಬಾ ಸಲ ಕೇಳಿದ್ದರಿಂದ...... ಶಂಕರನ್ ನಂಬೋಧರಿ, ಬಾಳಮುರಳಿ, ಅಥವಾ ಉನ್ನಿಕ್ರ್‍ಇಷಣನ್ ಹಾಡಿರುವುದು ಇರಬಹುದು. ಮತ್ತೆ ಹೆಚ್ಚಿನ ಮಾಹಿತಿ ಸಿಕ್ಕಾಗ ಬರೆಯುವೆ.

~ಮೀನಾ

anil.ramesh's picture

ಸಿಡಿ ಸಿಕ್ಕರೆ, ಈ ಕೃತಿಯನ್ನು ಹಂಚಿಕೊಳ್ಳಿರಿ.
ಸಾಹಿತ್ಯವನ್ನೂ ಹಾಕಿದರೆ ಖುಷಿ ಆಗತ್ತೆ.

-ಅನಿಲ್

anil.ramesh's picture

>>ರಾಜೀವಾಕ್ಷ ಬಾರೋ ಕೃಷ್ಣ
ರಾಧಾ ರಮಣ ಬಾರೋ ಕೃಷ್ಣ
ನನಗೆ ಈ ಎರಡು ಸಾಲುಗಳು ಮಾತ್ರ ನೆನಪಿತ್ತು.

-ಅನಿಲ್

nkumar's picture

ಕೆಲವರು ಹೇಳುತ್ತಾರೆ ಅವರು ರಚಿಸಿರುವ ಪದಗಳು ನಿಜವಾಗಿ ಬರೆದವರು ಪದ್ಮನಾಭ ಎಂಬ ಕವಿ ಎಂದು. ಆ ಕಾಲದಲ್ಲಿ ಕವಿಗಳು ಮಹಾರಾಜರನ್ನು ಆಶ್ರಯಸುತ್ತಿದ್ದರಿಂದ ಕ್ರೆಡಿಟ್ಸ್ ಎಲ್ಲಾ ಮಹಾರಾಜರಿಗೆ ಸಲ್ಲುತ್ತಿತ್ತು. ಈ ವಿಷಯ ನಿಜವೋ ಸುಳ್ಳೋ ತಿಳಿದಿಲ್ಲ.

ಆದರೂ ಮಹಾರಾಜರ ಸಂಗೀತಾಸಕ್ತಿಯ ಬಗ್ಗೆ ಎರಡು ಮಾತಿಲ್ಲ. ಕೆಲವು ಹಾಡುಗಳಂತು ನನಗೆ ತುಂಬಾ ಇಷ್ಟ.

ಕಾನಡ ರಾಗದ ಮಾಮವ ಸದಾ ಜನನಿ, ಅದೇ ರಾಗದ ತಿಲ್ಲಾನ (ಕೆ.ವಿ. ನಾರಾಯಣಸ್ವಾಮಿಯವರು ಬಹಳಷ್ಟು ಸಲ ಹಾಡಿದ್ದಾರೆ), ಪೂರ್ವಿಕಲ್ಯಾಣಿಯ "ದೇವ ದೇವ ಜಗದೀಶ್ವರ", ಸಿಂಧುಭೈರವಿಯ "ವಿಶ್ವೇಶ್ವರ ದರುಶನಕರ", ನಾಟಕುರಂಜಿಯ "ಅಂಬ ಪಾಹಿ ಜನನಿ", ಭೈರವಿಯ "ಜನನಿ ಮಾಮವ", ರಾಗಮಾಲಿಕೆಯ "ಭಾವಯಾಮಿ ರಘುರಾಮಂ", ನವರಾತ್ರಿ ಕೀರ್ತನೆಗಳು ಇನ್ನು ಸುಮಾರು ಇದೆ. ಆದರೂ ಕಚೇರಿಯಲ್ಲಿ ಇವರ ರಚನೆಗಳನ್ನು ಹಾಡುವವರು ಬಹಳ ವಿರಳ. ಕೇರಳದ ಸಂಗೀತ ಕಲಾವಿದರು ಹೆಚ್ಚಾಗಿ ಹಾಡುತ್ತಾರೆ.

ಟಿ.ವಿ.ಶಂಕರನಾರಯಣ್ ಅವರು ಬಹಳಷ್ಟು ಕಚೇರಿಗಳಲ್ಲಿ ’ರಾಜೀವಾಕ್ಷ ಬಾರೋ ಕೃಷ್ಣ’ ಹಾಡನ್ನು ಹಾಡಿದ್ದಾರೆ. ಮೈಸೂರಿನಲ್ಲಿ ಹಲವು ಬಾರಿ ಕೇಳಿದ್ದೇನೆ.

ಮುಂದಿನ ಭಾಗದ ನಿರೀಕ್ಷೆಯಲ್ಲಿ

hamsanandi's picture

>>ಕೆಲವರು ಹೇಳುತ್ತಾರೆ ಅವರು ರಚಿಸಿರುವ ಪದಗಳು ನಿಜವಾಗಿ ಬರೆದವರು ಪದ್ಮನಾಭ ಎಂಬ ಕವಿ ಎಂದು. ಆ ಕಾಲದಲ್ಲಿ ಕವಿಗಳು ಮಹಾರಾಜರನ್ನು ಆಶ್ರಯಸುತ್ತಿದ್ದರಿಂದ ಕ್ರೆಡಿಟ್ಸ್ ಎಲ್ಲಾ
>>ಮಹಾರಾಜರಿಗೆ ಸಲ್ಲುತ್ತಿತ್ತು. ಈ ವಿಷಯ ನಿಜವೋ ಸುಳ್ಳೋ ತಿಳಿದಿಲ್ಲ

ಈ ರೀತಿಯ ವಿವಾದಗಳು ಹಲವಾರು ವಾಗ್ಗೇಯಕಾರ ಅರಸರ ಬಗ್ಗೆ ಇವೆ. ಇವುಗಳಲ್ಲಿ ತುಸುಮಟ್ಟಿನ ಸತ್ಯಾಂಶವೂ ಇರಬಹುದು. ಅಲ್ಲದೆ. ಸ್ವಾತಿ ತಿರುನಾಳರ ಹಲವು ಕೃತಿಗಳು ಕೇರಳದಿಂದ ಹೊರಗೆ ಪ್ರಚಲಿತದಲ್ಲಿ ಬಂದಿರಲೇ ಇಲ್ಲ. ಇಪ್ಪತ್ತನೇ ಶತಮಾನದಲ್ಲಿ ಮುತ್ತಯ್ಯ ಭಾಗವತರು ಮತ್ತು ಸೆಮ್ಮಂಗುಡಿ ಶ್ರೀನಿವಾಸಯ್ಯರ್ ಇವರುಗಳು ಹಲವಾರು ರಚನೆಗಳಿಗೆ (ತಮ್ಮದೇ ಆದ) ಮಟ್ಟುಗಳನ್ನು ಹಾಕಿರುವ ನಿದರ್ಶನವೂ ಇದೆ. (ಉದಾಹರಣೆಗೆ ಸ್ವಾತಿತಿರುನಾಳರ ಸಿದ್ಧಿವಿನಾಯಕಂ ಸೇವೇಹಂ ಅನ್ನುವ ಮೋಹನಕಲ್ಯಾಣಿ ರಾಗದ ರಚನೆಯ ಧಾತು ಮುತ್ತಯ್ಯ ಭಾಗವತರದ್ದು; ಪ್ರಸಿದ್ಧವಾದ ಭಾವಯಾಮಿ ರಘುರಾಮಂ ರಚನೆಯನ್ನು ರಾಗಮಾಲಿಕೆಯಾಗಿ ಮಾಡಿದ್ದು ಸೆಮ್ಮಂಗುಡಿ ಶ್ರೀನಿವಾಸಯ್ಯರ್).

ವಡಿವೇಲು, ಇರಯ್ಯಮ್ಮನ್ ತಂಬಿ, ಪರಮೇಶ್ವರಭಾಗವತರ್ ಮೊದಲಾದವರು ಕೂಡ ಪದ್ಮನಾಭ, ಜಲಜನಾಭ ಮೊದಲಾದ ಅಂಕಿತಗಳನ್ನೇ ಇಟ್ಟಿರುವುದರಿಂದ ಇದು ಇಂತಹವರದ್ದೇ ಎಂದು ಹೇಳುವುದಕ್ಕೆ ಕೆಲವೊಮ್ಮೆ ಕಡಿಮೆ ಆಧಾರಗಳಿರುತ್ತವೆ. ವೈಣಿಕ ಬಾಲಚಂದರ್ ಅಂತೂ ಸ್ವಾತಿ ತಿರುನಾಳ್ ಎಂಬ ವ್ಯಕ್ತಿ ವಾಗ್ಗೇಯಕಾರರೇ ಅಲ್ಲ ಅಂತಲೂ ವಾದಿಸಿದ್ದುಂಟು.