ಅಮಾವಾಸ್ಯೆಯ ಒಂದು ರಾತ್ರಿ !
ಜಮೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿತು ಅಂತಲೇ ಅರ್ಥ. ಹೆಂಡತಿ ಶಾಂತಮ್ಮ ಹೆಸರಿಗೆ ತಕ್ಕ ಹಾಗೇ ಶಾಂತ ಸ್ವಭಾವದವರು. ಗಂಡನಿಗೆ ಎಂದೂ ಎದುರು ಆಡಿದವರಲ್ಲ. ಅದರ ಪ್ರಮೇಯವೇ ಇರಲಿಲ್ಲ ಬಿಡಿ.
ಏನಿದ್ದರೇನು ಮಕ್ಕಳಿಲ್ಲ ಎಂಬ ಕೊರಗು ಅವರಿಗೆ ಇದ್ದೇ ಇತ್ತು. ಮನೆಯ ಕೆಲಸದಾಳು ಊರಿನಲ್ಲಿ ಯಾವಾಗಲೋ ಒಮ್ಮೆ ಈ ಮಾತು ಬಂದಾಗ "ಸದ್ಯ ಒಳ್ಳೇದಾಯ್ತು" ಎಂದಷ್ಟೇ ನುಡಿದು ಸುಮ್ಮನಾಗಿದ್ದ. ಇದಾದ ಎರಡು ದಿನದಲ್ಲೇ ಅವನ ಬಾಯಿ ನಿಂತು, ಏನೇನೋ ಆಗಿ ಕಣ್ಮರೆಯಾಗಿ ಹೋದ. ಈ ವಿಷಯ ಅರಿತು ಜಮೀನ್ದಾರರು ಮಮ್ಮಲ ಮರುಗಿದರು. ಅವನ ಸಂಸಾರಕ್ಕೆ ಒಂದಷ್ಟು ದುಡ್ಡು ಕೊಟ್ಟು "ಸುಮ್ಮನೆ ಜನರ ಬಾಯಿಗೆ ಬೀಳುವುದು ಏಕೆ? ನೀವುಗಳು ಬೇರೆಲ್ಲಾದರೂ ಬದುಕಿಕೊಳ್ಳಿ" ಎಂದು ಬೇರೆ ಊರಿಗೇ ಕಳಿಸಿಕೊಟ್ಟು, ಜೀವನದ ವ್ಯವಸ್ಥೆ ಮಾಡಿಕೊಟ್ಟಿದ್ದರು. ಒಳ್ಳೆಯ ಜನರ ಬಗ್ಗೆ ಅಡ್ಡ ಮಾತನಾಡಿದ ಅವನಿಗೆ ಸರಿಯಾದ ಶಾಸ್ತಿಯಾಯಿತು ಎಂದರಿತು ಜನ ಆ ವಿಷಯದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿರಲಿಲ್ಲ. ಪಟ್ಟಣದಲ್ಲಿ ಅಲ್ಪ ಸ್ವಲ್ಪ ಓದಿಕೊಂಡು ಬಂದಿದ್ದ ಸೋಮನಿಗೆ ಆ ಕೆಲಸ ಸಿಕ್ಕಿತ್ತು. ಸ್ವಲ್ಪ ಓದು ಬರಹ ಬಲ್ಲವನಾದ್ದರಿಂದ ಹೊರಗಿನ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತಿದ್ದ.
ಹೀಗೆ ಒಂದು ಅಮಾವಾಸ್ಯೆ ರಾತ್ರಿ ಪರ ಊರಿನಲ್ಲೇನೋ ಕೆಲಸ ಮುಗಿಸಿಕೊಂಡು ತನ್ನೂರಿಗೆ ವಾಪಸ್ಸು ಬರುತ್ತಿದ್ದ ಸೋಮ. ಬಹಳ ತಡವಾಗಿತ್ತು. ಗ್ರಹಚಾರಕ್ಕೆ, ಮಾರ್ಗ ಮಧ್ಯದಲ್ಲಿ ಗಾಡಿ ಸುಮ್ಮನೆ ಹಾಗೇ ಕೆಟ್ಟು ನಿಂತಿತು. ಮೊನ್ನೆ ತಾನೇ ರಿಪೇರಿಯಾಗಿ ಬಂದಿದೆ. ಟ್ಯಾಂಕಿನಲ್ಲಿ ಎಣ್ಣೆ ಇದ್ದರೂ ಇದ್ಯಾಕೆ ಕೆಡ್ತು ಎಂದು ಯೋಚಿಸತೊಡಗಿದ ಸೋಮ. ಓಬೀರಾಯನ ಕಾಲದ ಈ ಗಾಡಿ ಬಿಟ್ಟು ಬೇರೆ ಗಾಡಿ ಕೊಳ್ಳಬೇಕು ಅನ್ನೋ ಯೋಚನೆ ಬಹಳ ದಿನದಿಂದ ಇದ್ದಿದ್ದು, ಈಗ ಬಲವಾಯ್ತು.
ಪಟ್ಟಣದ ಹಾದಿಯ ರೋಡಿನಲ್ಲಿ ಹೀಗಾಗಿದ್ದಿದ್ದರೆ ಬರುವ ಯಾವುದಾದರೂ ಗಾಡಿಯವರನ್ನು ಬೇಡಿ ಹೇಗೋ ಮನೆ ಸೇರಿಕೊಳ್ಳಬಹುದಿತ್ತು. ಇದೋ ಎರಡು ಊರಿನ ಮಧ್ಯೆಯ ಕಚ್ಚಾ ರಸ್ತೆ. ಗಾಡಿ ನೂಕಿಕೊಂಡೇ ಸ್ವಲ್ಪ ದೂರ ಹೋದ ಸೋಮ. ಆ ಕಡೆ ಸ್ವಲ್ಪ ದೂರದಲ್ಲೊಂದು ಕಾರು !! ಬೆಳಿಗ್ಗೆ ನರಿ ಮುಖ ನೋಡಿರಬೇಕು ನಾನು ಎಂದುಕೊಳ್ಳುತ್ತ ಸ್ವಲ್ಪ ಹತ್ತಿರ ಹೋದರೆ ಅದು ಜಮೀನ್ದಾರರ ಕಾರು ಎಂದು ಅರಿವಾಯ್ತು.
ಅದೂ ಸರಿಯೇ ಅನ್ನಿ. ಇಂತಹ ಕಾರು ಅವರ ಬಳಿ ಅಲ್ಲದೇ ಇನ್ಯಾರ ಬಳಿ ಇರುತ್ತೆ ಈ ಊರಿನಲ್ಲಿ? ಈ ಕೆಟ್ಟಿರೋ ಗಾಡಿ ಇಲ್ಲೇ ಹಾಕಿ ಅವರೊಂದಿಗೇ ಮನೆಗೆ ಹೋದರಾಯ್ತು ಎಂದು ಅಂದುಕೊಳ್ಳುತ್ತಿರುವಾಗಲೇ ಥಟ್ಟನೆ ಮನಕೆ ಬಂದ ಆಲೋಚನೆ ಅವನನ್ನು ಅಲ್ಲೇ ನಿಲ್ಲುವಂತೆ ಮಾಡಿತು.
ದಿನವೂ ಒಂಬತ್ತಕ್ಕೆಲ್ಲ ಮಲಗೋ ಧಣಿ, ನಮ್ ಜಾಮೀನ್ದಾರರಿಗೆ ಎರಡು ಊರಿನ ಮಧ್ಯೆಯ ಈ ರಸ್ತೆಯಲ್ಲಿ ಅದೂ ಈ ಸರಿರಾತ್ರಿಯಲ್ಲೇನು ಕೆಲಸ ???
ತನ್ನ ಗಾಡಿಯನ್ನು ಅಲ್ಲೇ ಪೊದೆಯಲ್ಲಿ ತೂರಿಸಿ ಮೆಲ್ಲಗೆ ಕಾರಿನ ಬಳಿ ನೆಡೆದ ಸೋಮ. ಆಕಡೆ ಈ ಕಡೆ ನೋಡಿ ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡು ಕಾರಿನ ಕಿಟಕಿಯಲ್ಲಿ ಬಗ್ಗಿ ನೋಡಿದ. ಮೊದಲೇ ಕತ್ತಲು, ಏನು ಕಂಡೀತು? ತಾನು ’ಇರಲಿ’ ಎಂದು ತಂದಿದ್ದ ಸಣ್ಣ ಟಾರ್ಚಿನ ಬೆಳಕಿನಲ್ಲಿ ನೋಡಿದಾಗ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು. ಸೀಟಿನ ಮೇಲೆ ಸಿಗರೇಟಿನ ಪ್ಯಾಕೆಟ್ !!
ಯಜಮಾನರು ಸಿಗರೇಟ್ ಸೇದೋದನ್ನ ನಾನೆಂದೂ ಕಂಡಿಲ್ಲ ! ಇದೇನು ಹೊಸ ಅವತಾರ? ಅಥವಾ ಅವರ ಕಾರನ್ನು ಆ ಕೆಂಪು ಕಣ್ಣಿನ ಡ್ರೈವರ್ ಏನಾದ್ರೂ ತಂದಿದ್ದಾನಾ? ಕಾರಿನಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಕಾರಿನ ಇನ್ನೊಂದು ಬದಿ ಬಂದು ನೋಡಿದಾಗ ಸಣ್ಣ ಕಾಲುದಾರಿ ಗೋಚರಿಸಿತು. ಕಾರನ್ನು ಇಲ್ಲಿ ನಿಲ್ಲಿಸಿ ಈ ಕಡೆ ನೆಡೆದುಕೊಂಡು ಹೋಗಿರಬಹುದು ಎಂದು ಅನ್ನಿಸಿ, ಅದೇ ದಾರಿಯಲ್ಲಿ ತಾನೂ ನೆಡೆದ ಸೋಮ.
ಶಬ್ದ ಬರದಂತೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ನೆಡೆದಂತೆ ಯಾರೋ ಇಬ್ಬರು ಮಾತನಾಡುತ್ತ ನಿಂತಿದ್ದಂತೆ ಕಂಡಿತು. ಗಕ್ಕನೆ ಹಾಗೇ ಮರಕ್ಕೆ ಒರಗಿ ನಿಂತ. ಮರದ ಮೇಲೆ ಸದ್ದಾಯ್ತು. ಕಾಲ ಕೆಳಗಿನ ಎಲೆ ಕೂಡ ಸದ್ದಾಯಿತು. ಆ ಇಬ್ಬರೂ ತಿರುಗಿ ನೋಡಿದರು. ಸ್ವಲ್ಪ ಹೊತ್ತು ಹಾಗೇ ನೋಡುತ್ತಿದ್ದವರು ಏನೂ ಇಲ್ಲ ಎನ್ನಿಸಿತೋ ಏನೋ ಇಬ್ಬರೂ ಹೊರಟರು. ಸ್ವಲ್ಪ ದೂರ ಹೋಗುತ್ತಲೇ ಸೋಮನೂ ಅವರನ್ನು ಹಿಂಬಾಲಿಸಿದ.
ಮುಂದೆ ಹೋಗುತ್ತಿದ್ದ ಇಬ್ಬರು, ಒಂದು ಪಾಳು ಬಿದ್ದ ಮನೆಯ ಮುಂದೆ ನಿಂತರು. ’ಭೂತ ಬಂಗಲೆ’ ಅದೂ ಇದೂ ಅಂತೆಲ್ಲ ಈ ಮನೆಯ ಬಗ್ಗೆ ಜನರು ಆಡಿಕೊಳ್ಳುತ್ತಿದರೂ ಸೋಮ ಅದನ್ನು ನಂಬಿರಲಿಲ್ಲ. ಮೊದಲೇ ಭೂತ-ಪ್ರೇತಗಳ ಬಗ್ಗೆ ಅವನಿಗೆ ನಂಬಿಕೆ ಇಲ್ಲ. ತನ್ನ ನಂಬಿಕೆ ಈಗ ನಿಜ ಅನ್ನಿಸಿತು ಸೋಮನಿಗೆ. ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು. ವಿಷಯ ತಿಳಿದುಕೊಂಡು ಜಮೀನ್ದಾರರಿಗೆ ನಾಳೇನೇ ಒಪ್ಪಿಸಬೇಕು.
ಆ ಇಬ್ಬರು, ಭೂತ ಬಂಗಲೆಯ ಬಾಗಿಲು ತೆರೆದುಕೊಂಡು ಹೋದರು. ಹಿಂದೆಯೇ ಬಾಗಿಲೂ ಮುಚ್ಚಿಕೊಂಡಿತು. ಸೋಮ ಸ್ವಲ್ಪ ಹೊತ್ತು ತಡೆದು ತಾನೂ ಆ ಮನೆಯ ಕಡೆ ನೆಡೆದ. ಬಾಗಿಲ ಬಳಿ ಬಂದು ನಿಂತ.
ಮೆಲ್ಲಗೆ ಬಾಗಿಲು ನೂಕಿದ ! ಚಿಲುಕ ಹಾಕಿರಲಿಲ್ಲ !! ಕಿರ್ ಎಂದು ಬಾಗಿಲು ತೆರೆದುಕೊಂಡಿತು. ಥತ್! ಕೆಲಸ ಕೆಟ್ಟಿತು ... ಶಬ್ದ ಆಗಬಾರದು ಅಂದುಕೊಂಡ್ರೆ ಎಂದು ಮನದಲ್ಲಿ ಬೈದುಕೊಳ್ಳುತ್ತಲೇ, ಅಡಿ ಇರಿಸಿದ ...
ಒಳಗೋ ಗಮಟು ವಾಸನೆ.
ಹಾಗೇ ಒಳ ನೆಡೆದ. ಎರಡು ಹೆಜ್ಜೆ ಇಡುತ್ತಿದ್ದಂತೆಯೇ ಬಾಗಿಲು ಮುಚ್ಚಿಕೊಂಡಿತು.
ಮೊದಲ ಬಾರಿಗೆ ಭೀತನಾದ ಸೋಮ. ಟಾರ್ಚ್ ತೆಗೆಯಲು ಜೇಬಿಗೆ ಕೈ ಹಾಕಿದ. ಖಾಲೀ !!!!! ಈಗ ತಾನೇ ಕಾರಿನ ಬಳಿ ಉಪಯೋಗಿಸಿದ್ದೆನಲ್ಲ? ಎಲ್ಲಿ ಹೋಯ್ತು ??
ಎಲ್ಲೆಲ್ಲೂ ಕತ್ತಲು. ಒಳಗೆ ಹೋಗಲೋ? ಹೊರಗೆ ಓಡಿಬಿಡಲೋ? ಮನಸ್ಸು ಹೊಯ್ದಾಟದಲ್ಲಿರುವಾಗಲೇ ದನಿಯೊಂದು ಮೂಡಿಬಂತು "ನಿನ್ನ ಟಾರ್ಚ್ ಸಿಗಲಿಲ್ವಾ ಸೋಮಾ?". ಅರ್ರೇ ! ಜಮೀನ್ದಾರರ ದನಿ !! "ಆಗ್ಲಿಂದಾನೂ ಇವನೇ ಧಣಿ ನಮ್ ಹಿಂದೆ ಬರ್ತಿದ್ದೋನು" ಅನ್ನೋ ಮತ್ತೊಂದು ದನಿ. ಓ! ಇದು ಆ ಕೆಂಪು ಕಣ್ಣಿನ ಡ್ರೈವರ್ ದನಿ.
ಹೃದಯವೇ ಬಾಯಿಗೆ ಬಂದ ಹಾಗೆ ಆಯ್ತು ಸೋಮನಿಗೆ. ಹರ ಕೊಲ್ಲಲ್ ಪರ ಕಾಯ್ವನೇ? ಏನೋ ಹೇಳಲು ಬಾಯಿ ತೆರೆದ. ಆಗ ...
---
"ಓ! ಏನ್ರಮ್ಮಾ? ಎಲ್ಲರದೂ ಊಟ ಆಯ್ತಾ? ಹೋಗ್ರೋ ಮಾಕ್ಳಾ ... ಈಗ ಎಲ್ರೂ ಮನೆಗೆ ಹೋಗಿ ಮಲಗಿಕೊಳ್ಳಿ ... ಕಥೆ ನಾಳೆ ಹೇಳ್ತೀನಿ"
ಮೂಲೆ ಮನೆ ರಿಟೈರ್ಡ್ ಶಾಲಾ ಮೇಷ್ಟ್ರು ಇಷ್ಟು ಹೊತ್ತೂ ಹೇಳ್ತಿದ್ದ ಕಥೆಯನ್ನ ಬಾಯಿ ಬಿಟ್ಟುಕೊಂಡು ಕೇಳ್ತಿದ್ರು ಮಕ್ಕಳು. ಅವರಿಗೇ ಅರಿವಿಲ್ಲದಂತೆ ಅವರ ಅಮ್ಮಂದಿರು ಇಡುತ್ತಿದ್ದ ಅನ್ನದ ತುತ್ತುಗಳನ್ನು ಒಂದರ ಮೇಲೊಂದರಂತೆ ಸ್ವಹಾ ಮಾಡುತ್ತಿದ್ದರು.
ಏನೂ ರಗಳೆ ಇಲ್ಲದೆ ಮಕ್ಕಳ ಊಟ ಆಯ್ತು ಅನ್ನೋ ಸಮಾಧಾನ ಅಮ್ಮಂದಿರಿಗೆ. ಸಂಜೆ ಹೊತ್ತು ಸ್ವಲ್ಪ ಟೈಮ್ ಪಾಸ್ ಮೇಷ್ಟ್ರಿಗೆ. ಆದರೆ ಮೇಷ್ಟರ ಪತ್ನಿ ಮಾತ್ರ "ಮಕ್ಕಳಿಗೆ ರಾಮಾಯಣವೋ ಮಹಾಭಾರತವೋ ಹೇಳೋದು ಬಿಟ್ಟು ಇಂಥಾ ಕಥೆಗಳನ್ನೇ ಹೇಳೋದೂ? ಅದೂ ಯಾವಾಗಲೂ ಇದೇ ಅರ್ಧ ಕಥೆ? ಮಕ್ಕಳು ಹೆದರಿಕೊಂಡು ಬಟ್ಟೆ ಒದ್ದೆ ಮಾಡಿಕೊಳ್ಳೋಲ್ವೇ ?" ಅಂತ ಮೂದಲಿಸಿದರು. "ಹಂಗಾದ್ರೂ ಹಾಸಿಗೆಯ ಬಟ್ಟೆ ಒಗೀತಾರೆ ಬಿಡು ಈ ಅಮ್ಮಣ್ಣೀರು. ಕಥೆ ಪೂರ್ತಿ ಹೇಳೋಕೆ ಮುಂದೆ ಎನಾಗುತ್ತೆ ಅಂತ ನನಗೇನು ಗೊತ್ತು? " ಅಂತ ಬೊಚ್ಚು ಬಾಯಿ ಬಿಟ್ಕೊಂಡು ನಗುತ್ತ ಒಳ ನೆಡೆದರು ಮೇಷ್ಟ್ರು.
- Login or register to post comments
- 868 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಭಲ್ಲೆಯವರೇ,
ಕಥೆ ಸೊಗಸಾಗಿದೆ.
ಆದರೆ climax ಇಲ್ಲಾ.
ಧನ್ಯವಾದಗಳು.
ಧನ್ಯವಾದಗಳು ... ಇದು ಇನ್ನೊಂದು ರೀತಿಯ ಪ್ರಯೋಗ ...
ಸಖತ್ತಾಗಿದೆ, ಸೃಷ್ಟಿಸಿದ ಸಸ್ಪೆನ್ಸ್ ನಿವಾರಿಸಿಕೊಂಡ ರೀತಿ. ತುಂಬಾ ಚೆನ್ನಾಗಿದೇರಿ.
ಧನ್ಯವಾದಗಳು ರಮೇಶ್ :-)
ಥೂ ನಿಮ್ಮ!
ಸಸ್ಪೆನ್ಸ್ ಇಟ್ಟು ಹೀಗಾ ಕೈ ಕೊಡೋದು?
ನಾನು ಕೊಡಾ ಬಾಯಿ ಬಿಟ್ಟುಕೊಂಡು ಓದಿದೆ. ನಮ್ಮದಿನ್ನೂ ಊಟ ಮುಗಿದಿಲ್ಲ, ಉಳಿದ ಕತೆ ಹೇಳಿ.
ಯಾಕೋ ಸಂಯುಕ್ತ ಸಿನೆಮಾದ ಕತೆ ನೆನಪಾಯ್ತು.
ಹಾಗೇ ದರ್ಶನ್ ಸಿನೆಮಾವೊಂದರಲ್ಲಿ ಶ್ರೀನಿವಾಸ ಮೂರ್ತಿಗಳ ಪಾತ್ರವೊಂದು ನೆನಪಾಯಿತು.
ಇತೀ,
ಉಉನಾಶೆ
ಧನ್ಯವಾದಗಳು ಉಮೇಶ್
ಬೇಗ ಊಟ ಮಾಡೀಪ್ಪಾ .... ನಾನು ದ್ವಿತೀಯಾರ್ಧ ಯೋಚನೆ ಮಾಡಿ ಬರೆಯೋ ತನಕ ಉಪವಾಸ ಇರಬೇಡಿ :-)
ನಾನು ಈ ಎರಡೂ ಸಿನಿಮಾಗಳೂ ನೋಡಿಲ್ಲ :-(
ವಿಭಿನ್ನವಾಗಿರೋ ಪತ್ತೇದಾರಿ ಕಥೆ ಬರೆಯೋ ಆಸೆ ಇದೆ ... ನೋಡಬೇಕು
ಸಂಯುಕ್ತ ನೋಡಿ .. ಚೆನ್ನಾಗಿದೆ.
ನೋಡುತ್ತೇನೆ .... ಅಂದ ಹಾಗೆ ದರ್ಶನ್ ಅವರ ಚಿತ್ರದ ಹೆಸರೇನು?
ಹೆಸರು ನೆನಪಿಲ್ಲ.
ದರ್ಶನ್ ಪಾತ್ರ ಅನಾಥ.
ಊರ ಪೂಜಾರಿ (ಲೋಕನಾಥ್) ದರ್ಶನ್ ನನ್ನು ಸಾಕುತ್ತಿರುತ್ತಾನೆ.
ಪೂಜಾರಿಗೊಬ್ಬ ಮಗಳಿರುತ್ತಾಳೆ (ತಾರ)
ದರ್ಶನ್ ಜಮೀನ್ದಾರರ (ಶ್ರೀನಿವಾಸ ಮೂರ್ತಿ) ಮಗಳನ್ನು ಪ್ರೀತಿಸುತ್ತಾನೆ. ನಾಯಕಿ ಯಾರು ನೆನಪಿಲ್ಲ.
ಇನ್ನೇನು ಮದುವೆ ಆಗಬೇಕು ಅನ್ನುವಾಗ ಪೂಜಾರಿ ಬಂದು ಬಿಟ್ಟು ...."ನಿಲ್ಸಿ" ಅಂತಾನೆ.
ಅವ ಏನು ಹೇಳಿದ? ಮದುವೆ ನಿಂತಿತೋ? ಇಲ್ಲವೋ? ತಿಳಿಯಲು ಸಿನೆಮಾ ನೋಡಿ. ;೦)
ಯಾವ ಸಿನೆಮಾ? ಸಂಪದದಲ್ಲಿ ಯಾರಾದರೂ ಅದನ್ನು ನೋಡಿದವರು ಹೇಳಬಹುದು.
ಭಲ್ಲೆಯವರೆ,
ಇಂಥ ಕತೆ ಮಕ್ಕಳಿಗೆ ಹೇಳೋದು, ಅವು ಕೇಳೋದೇ ಮಜ. ನನ್ನ ಮಗನಿಗೂ ಹೀಗೇ ಹೇಳ್ತಿರ್ತೇನೆ, ಕೊಳ್ಳಿ ದೆವ್ವ, ಮೋಹಿನಿ ದೆವ್ವ, ಅದು ಇದು, ಅಂತ.
ಊಟ-ನಿದ್ದೆ ಮಾಡಿಸಲು, ಇದಕ್ಕಿಂತ ಇಲ್ಲ ಉಪಾಯ !
- ಅರವಿಂದ
ಅರವಿಂದ್ರವರೆ
ಮಕ್ಕಳಿಗೆ ಊಟ ಮಾಡಿಸಲೋಸುಗವೋ ಅಥವಾ ಇನ್ಯಾವುದೋ ರೀತಿಯ ರಂಜನೆಗೋ ದೆವ್ವ ಪ್ರೇತಗಳ ಬಗ್ಗೆ ಹೇಳಿ ಅವರ ಕುತೂಹಲ ಹೆಚ್ಚಿಸುವುದರ ಜೊತೆ ಜೊತೆಗೆ ಅವರ ಮಾನಸಿಕ ಸ್ಥೈರ್ಯದ ಬುಡಕ್ಕೇ ಪೆಟ್ಟು ಕೊಡುವುದು ಎಷ್ಟು ಸರಿ. ಎಳೆಯ ಮನ್ನಸ್ಸಿನಲ್ಲಿ ಇಂತಹ ಬಹುತೇಕ ವಿಷಯಗಳು ಆಳವಾಗಿ ಬೇರೂರಿ, ಕತ್ತಲೆಂದರೆ ಹೆದರುವ ಪ್ರವೃತ್ತಿ ಬೆಳೆದುಬಿಡುತ್ತದೆ. ಈ ಮಕ್ಕಳು ಮುಂದೆ ಜೀವನದಲ್ಲಿ ಸಣ್ಣ ಪುಟ್ಟ ಕಹಿ ಘಟನೆಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧಗೊಳ್ಳದವರಾಗುತ್ತಾರೆ. ನಂತರ ನಾವು ದೆವ್ವ ಪಿಶಾಚಿ ಎಲ್ಲ ಭ್ರಮೆ ಎಂದು ಎಷ್ಟೇ ಸಮಜಾಯಿಷಿ ಕೊಟ್ಟರೂ ಕೇಳದ ಮನಸ್ಥಿತಿ ನಿರ್ಮಾಣವಾಗಿಬಿಟ್ಟಿರುತ್ತದೆ. ಬಹುತೇಕ ತಾಯಂದಿರು ಮಾಡುವ ತಪ್ಪು ಇದು. ಮಕ್ಕಳನ್ನು ನಿರ್ಭಯರನ್ನಾಗಿ ಬೆಳೆಸಿದಷ್ಟೂ ಅವರ ಜೀವನ ಉಜ್ವಲವಾಗಲು ನಾವು ಅನುವು ಮಾಡಿಕೊಟ್ಟಂತಲ್ಲವೇ?
ಅಂದಹಾಗೆ ಈ ದೆವ್ವ ಪಿಶಾಚಿಗಳ ಕಥೆಗೆ ಮಾರು ಹೋಗಿ ಕತ್ತಲೆಂದರೆ ಈಗಲೂ ಭಯ ಪಡುತ್ತಿರುವವನಲ್ಲಿ ನಾನೂ ಒಬ್ಬ. ಈಗ ನನ್ನ ಹಿರಿಯರನ್ನು ಎಷ್ಟು ಬೈದುಕೊಂಡು ಏನು ಪ್ರಯೋಜನ?
ನಾನೇನೂ ಇದರ ಬಗ್ಗೆ ಸಂಶೋಧನೆ ಮಾಡಿಲ್ಲ ಆದರೆ ತೀರ ಇತ್ತೀಚೆಗೆ ಓದಿದ ಡಾ. ಸಿ.ಆರ್ ಚಂದ್ರಶೇಖರ್ ಅವರ ಲೇಖನ ನನಗೆ ಈ ವಿಷಯದ ಸಲುವಾಗಿ ಹೆಚ್ಚಿನ ಮಾಹಿತಿಯೊದಗಿಸಿತು.
ಹೆಚ್ಚಿನ ಮಾಹಿತಿಗಾಗಿ ನೀವು ಡಾ. ಸಿ.ಆರ್ ಚಂದ್ರಶೇಖರ್ ಅವರನ್ನು ನೇರವಾಗಿ ಸಂಪರ್ಕಿಸಬಹುದು.
Phone: (Office) +91-80-26995200 / 26995255
Email: ms@nimhans.kar.nic.in
ಹೌದು ಮಂಜುನಾಥ್ ...
ಮಕ್ಕಳು ದೆವ್ವ ಭೂತ ಎಂದರೆ ಹೆದರುತ್ತಾರೆ ನಿಜ ... ದೆವ್ವ, ಭೂತ ಕಥೆಗಳನ್ನು ಹೇಳಿ ಆ ಕಥೆಯನ್ನು ಅದರ ಜಗತ್ತಿನಲ್ಲೇ ಬಿಡುವ ಬದಲು, ಈ ಕೆಳಗಿನ ಸಾಲುಗಳಲ್ಲಿ ಹೇಳಿರುವಂತೆ ಪರಿಹಾರ ಸೂಚಿಸಿ ತಿಳಿಸಿದಲ್ಲಿ ಮಕ್ಕಳು ಸುಮ್ಮನೆ ಹೆದರುವ ಬದಲು ವಿಚಾರ ಮಾಡಲು ಶುರು ಮಾಡಬಹುದು ಎಂದು ನನ್ನ ಭಾವನೆ. ಏನಂತೀರಾ?
>>ಭೂತದ ಹೆಸರಿನಲ್ಲಿ ಮನುಷ್ಯರು ಮಾಡುತ್ತಿರುವ ಮೋಸ ಇರಬೇಕು<<
ಈ ಸಾಲುಗಳನ್ನು ’ಗಂಧದ ಗುಡಿ’ ಚಿತ್ರದ ಸನ್ನಿವೇಶಗಳಿಗೆ ಜೋಡಿಸಿದಾಗ ಸತ್ಯ ಎನಿಸುತ್ತದೆ
ಮಂಜುನಾಥರೆ,
ಪ್ರತಿಕ್ರಿಯೆ ತಡವಾದಕ್ಕೆ ಮನ್ನಿಸಿ. ಪ್ರತಿಕ್ರಿಯೆಗೆ ವಂದನೆಗಳು
ನೀವು ಹೇಳೋದೇನೋ ಸರಿ. ಆದ್ರೆ ನಾನು ಹೇಳಿದ್ದು ಅದಲ್ಲ - ಹೆದರ್ಸಿ ಮಲಗಿಸಿಬಿಡೋದಲ್ಲ. ಬದಲಾಗಿ ಒಂದು ನೀತಿ ಕತೆಯಂತೆ ಹೆಣೆದು ಹೇಳೋದು. ಉದಾ : ಛೋಟಾ ಚೇತನ್ ಎಂಬ ೩ ಡಿ ಸಿನಿಮಾ, ಇಂಗ್ಲಿಷಿನ ಕ್ಯಾಸ್ಪರ್, ಇತ್ಯಾದಿ. ಇನ್ನೂ ಅನೇಕ ಚಂದಮಾಮದ ಭೂತ ಕತೆಗಳಂತೆ.
ಕೆಲವೊಂದು ಸಲ ದೃಷ್ಟಿ ದೋಷ ನಿವಾರಣೆಗೂ ಈ ಕತೆಗಳು ಪ್ರಯೋಜನಕಾರಿ - ಪ್ರೀತಿ ಇದ್ದಷ್ಟೂ ಭೀತಿಯೂ ಬೇಕು ಅನ್ನುತ್ತೆ ಒಂದು ಗಾದೆ. ಇಂಗ್ಲಿಷಿನ ಪ್ರಖ್ಯಾತ ಹಾರರ್ ಕಾದಂಬರಿಕಾರನ (ಭೂತ ಕತೆ ಬರೆಯಕ್ಕೆ) ಪ್ರೇರೇಪಣೆ ಏನು ಗೊತ್ತಾ. ಒಂದು ಕಾಣದ ಕೈ ಬಂದು ನಿನ್ನ ಹಿಡಿಯಿತು ಎಂಬ ಕಲ್ಪನೆಯಲ್ಲಿ ಕೊನೆಗೆ ಅದರ ರಕ್ಷಕನಾಗಿ ತಂದೆಯಿಂದ ಮಗುವಿಗೆ ಬರುವ ಒಂದು ಬೆಚ್ಚನೆಯ ಅನುಭವ ಇದೆಯಲ್ಲ - ಅದು.
- ಅರವಿಂದ
ನಿಮ್ಮ ಉತ್ತರ ಚೆನ್ನಾಗಿದೆ ...
ಧನ್ಯವಾದಗಳು ಅರವಿಂದ
ಪಾಪ ಕಣ್ರೀ ... ಮಗು ಹೆದರೋಲ್ವೇ? ನನ್ನ ಮಗನಿಗೆ ಈ ರೀತಿ ಕಥೆಗಳನ್ನು, ರಾತ್ರಿ ಬಿಡಿ ಬೆಳಿಗ್ಗೇನೂ ಹೇಳೋಕ್ಕೆ ಆಗಲ್ಲ.. ಹೆದರಿಕೊಳ್ತಾನೆ :-( ...
ಭಲ್ಲೆಯವರೆ,
ಪ್ರತಿಕ್ರಿಯೆ ತಡವಾದಕ್ಕೆ ಮನ್ನಿಸಿ. ಉತ್ರ ಮೇಲೆ ನಾ ಬರೆದಂತೆ :)
:-)
ಪ್ರಯೋಗ ಚೆನ್ನಾಗಿದೆ :) . ಹಾಗೆ ಯಂಡಮೂರಿ ವಿರೇಂದ್ರನಾಥ್ ರವರ ದುಡ್ಡು ದುಡ್ಡು ದುಡ್ಡು climax ನೆನಪಿಗೆ ಬಂತು. ಬಹುಷಃ ನೀವು ಓದಿದ್ದೀರ ಅಂದ್ಕೊಳ್ತ್ಹಿನಿ. ಇಲ್ಲಾಂದ್ರೆ ಇನ್ನೊಮ್ಮೆ ಭೇಟಿಯಾದಾಗ ತಿಳಿಸುತ್ತೇನೆ.- Raghu
ಧನ್ಯವಾದಗಳು ... ದುಡ್ಡು ದುಡ್ಡು ದುಡ್ಡು ಓದಿದ್ದೇನೆ ... ಇದರ ಬಗ್ಗೆ ಮಾತನಾಡೋಣ ...