ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ ಎಂಬುದು ಒಂದು ವಿವರಣೆ. ಇನ್ನೊಂದು ಮಾದರಿ ವಿಶ್ಲೇಷಣೆ ಎಂದರೆ ಶಿವನು ಪರಮ ಪುರುಷನಾದರೆ, ಪಾರ್ವತಿಯು ಪರಮ ಪ್ರಕೃತಿ. ಆಕೆಯ ದೇಹದಲ್ಲಿನ ಕೊಳೆ ಎಂದರೆ ಅದು ಮಾಯಾ ಪ್ರಕೃತಿ. ಅದನ್ನು ಪಡೆದು ಹುಟ್ಟಿದವನು ಗಣಪತಿ. ಪರಶಿವನು ಈ ತಮೋಗುಣಗಳ ಶಿರವನ್ನು ತೆಗೆದು ಅದರಲ್ಲಿ ಬ್ರಹ್ಮ ಸ್ವರೂಪಿಯಾದ ಗಜ ಮುಖವನ್ನು ಇಟ್ಟಿದ್ದಾನೆ. ಹೀಗಾಗಿ ಮಾಯೆಯನ್ನು ಗೆದ್ದು ಸತ್ಯದ ಅರಿವು ಮೂಡಿಸಬಲ್ಲವನು ಎಂಬ ಅಂತರಾರ್ಥ ಗಣಪತಿಯ ಸ್ವರೂಪದಲ್ಲಿದೆ. ಚಿಂತನಾಕ್ರಮದಲ್ಲಿನ ಪರಿಶುದ್ಧತೆ ಮತ್ತು ಪರಿಪೂರ್ಣತೆಯೇ ಆತನ ಮೊದಲ ಪೂಜೆಗೆ ಕಾರಣವಾಗಿದೆ.
ಗಣಪತಿಯ ಮೂರ್ತಿಸ್ವರೂಪ.
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ.
ಗಣಪತಿಯ ಸ್ವರೂಪದಲ್ಲಿರುವ ಕುತೂಹಲಕರ ಅಂಶವೆಂದರೆ ಮುರಿದ ದಂತ. ಸಾಮಾನ್ಯವಾಗಿ ವಿಗ್ರಹಗಳಲ್ಲಿ ಕೊಂಚ ಭಿನ್ನ ಕಂಡರೂ ಅದು ಪೂಜೆಗೆ ಅರ್ಹವಾಗುವುದಿಲ್ಲ. ಆದರೆ ಗಣಪತಿಯ ದಂತ ಭಗ್ನವಾಗಿರುವುದೇ ಇಲ್ಲಿ ಸ್ವರೂಪವಾಗಿದೆ. ಇದು ಏಕೆ ಎಂದು ಯೋಚಿಸಿದಾಗ, ಕೆಲವು ಸತ್ಯಗಳ ಅರಿವಾಗುತ್ತದೆ. ಮೂಲಸ್ವರೂಪವಾದ 'ಸತ್ಯ' ಅಖಂಡವಾದದ್ದು. ಅದನ್ನು ಬಲ ಭಾಗದಲ್ಲಿರುವ ಪೂರ್ಣದಂತ ಸೂಚಿಸುತ್ತದೆ. ಪ್ರಪಂಚ ಮಾಯೆಗಳಿಂದ ತುಂಬಿ ಅಪರಿಪೂರ್ಣವಾಗಿದೆ. ಇದನ್ನು ಮುರಿದಿರುವ ಎಡದಂತವು ಸೂಚಿಸುತ್ತದೆ. ಪೂರ್ಣ ಮತ್ತು ಅಪೂರ್ಣಗಳೆರಡೂ ಬೇರೆಬೇರೆಯಾಗಿ ಕಂಡರೂ ಅವೆರಡೂ ಪರಮಾತ್ಮನ ರೂಪ ವಿಶೇಷಗಳೇ. ಇದನ್ನು ಗಣಪತಿಯ ದಂತಗಳು ಸೂಚಿಸುತ್ತದೆ.
(ಇನ್ನೂ ಇದೆ)









ಪ್ರತಿಕ್ರಿಯೆಗಳು
ಪ್ರಿಯ ಅನಿಲ್ ರಮೇಶ್, <<ಗಣಪತಿಯ
ಪ್ರಿಯ ಅನಿಲ್ ರಮೇಶ್,
<<ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. >>
ಕೆಲ ವರ್ಷಗಳ ಹಿಂದೆ ಅಭಾವೈವಿಸಂ ದಲ್ಲಿ ನಡೆದಿದ್ದ ಆರೋಗ್ಯ ಮೇಳವೊಂದರಲ್ಲಿ ಹೀಗೆ ಬರೆದಿದ್ದುದು ನೆನಪಾಯ್ತು : 'ಜಗತ್ತಿನ ಮೊತ್ತ ಮೊದಲ transgenic transplant ನಿಂದ ಗಣಪತಿ ಸೃಷ್ಟಿಯಾದ' (ಆ ಹೇಳಿಕೆ ಸಾಕಷ್ಟು ವಿವಾದಕ್ಕೆ ಎಡೆ ಮಾಡಿತ್ತು).
ಅಂದ ಹಾಗೆ 'ನಿಷ್ಕಾಮ' ಪದ ಇಲ್ಲಿ ಹೊಂದುತ್ತದೆಯೇ?
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟಿನ ಪ್ರಕಾರ
ನಿಷ್ಕಾಮ (ನಾಮಪದ) (ಸಂ) ೧ ಆಸೆಯಿಲ್ಲದಿರುವುದು, ನಿಸ್ವಾರ್ಥವಾದುದು ೨ ಆಸೆಯಿಲ್ಲದವನು, ನಿಸ್ವಾರ್ಥಿ
ನಿಷ್ಕಾಮ (ಗುಣವಾಚಕ) (ಸಂ) ಪ್ರತಿಫಲದ ಆಸೆಯಿಲ್ಲದ, ನಿಸ್ವಾರ್ಥವಾದ
ಆತ್ಮೀಯ ಶಿವರಾಮ್ ಶಾಸ್ತ್ರಿ,
ಆತ್ಮೀಯ ಶಿವರಾಮ್ ಶಾಸ್ತ್ರಿ,
>>ಅಂದಹಾಗೆ 'ನಿಷ್ಕಾಮ' ಪದ ಇಲ್ಲಿ ಹೊಂದುತ್ತದೆಯೇ?
"ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು." ಎಂದು ಮೊದಲ ಸಾಲಿನಲ್ಲಿ ಬರೆದಿರುವೆನಲ್ಲಾ? ಇರಲಿ.
ಸ್ತ್ರೀ-ಪುರುಷರ ಸಂಯೋಗವಿಲ್ಲದಿರುವುದು ನಿಷ್ಕಾಮ ಎಂದೇ ಅಲ್ವಾ?
ತಪ್ಪಿದ್ದರೆ ತಿದ್ದಿರಿ.
-ಅನಿಲ್
<<ಸ್ತ್ರೀ-ಪುರುಷರ
<<ಸ್ತ್ರೀ-ಪುರುಷರ ಸಂಯೋಗವಿಲ್ಲದಿರುವುದು ನಿಷ್ಕಾಮ ಎಂದೇ ಅಲ್ವಾ?>>
ನನಗೆ ತಿಳಿದಂತೆ "ಸ್ತ್ರೀ-ಪುರುಷರ ಸಂಯೋಗವಿಲ್ಲದಿರುವುದ"ಕ್ಕೆ, "ನಿಷ್ಕಾಮ" ಎಂಬುದು ಸೂಕ್ತ ಪದವಲ್ಲ. ಏಕೆಂದರೆ "ನಿಷ್ಕಾಮ" ಪದಕ್ಕೆ "ಪ್ರತಿಫಲದ ಆಸೆಯಿಲ್ಲದ" ಎಂಬ ಅರ್ಥವೇ ಸಾಧಾರಣವಾಗಿ ಬಳಕೆಯಲ್ಲಿದೆ.
ಈ ಕುರಿತು ಹೆಚ್ಚು ಬಲ್ಲವರ ಪ್ರತಿಕ್ರಿಯೆಗಳಿಗಾಗಿ ಆಶಿಸೋಣ/ಕಾಯೋಣ.
>>"ಸ್ತ್ರೀ-ಪುರುಷರ
>>"ಸ್ತ್ರೀ-ಪುರುಷರ ಸಂಯೋಗವಿಲ್ಲದಿರುವುದ"ಕ್ಕೆ, "ನಿಷ್ಕಾಮ" ಎಂಬುದು ಸೂಕ್ತ ಪದವಲ್ಲ.
ಹಾಗಾದರೆ ಸೂಕ್ತ ಪದ ಯಾವುದು?
-ಅನಿಲ್
ಅಯ್ಯೋ, ಅದೇ ಗೊತ್ತಿಲ್ಲ ಅನಿಲ್
ಅಯ್ಯೋ, ಅದೇ ಗೊತ್ತಿಲ್ಲ ಅನಿಲ್ :-) ಗೊತ್ತಿದ್ದಿದ್ರೆ ಮೊದಲೇ ಬರೆದುಬಿಡ್ತಿದ್ದೆ. ಹೈಸ್ಕೂಲ್ ಅಲ್ಲಿ ಜೀವಶಾಸ್ತ್ರ ಓದ್ತಿದ್ದಾಗ asexual reproduction ಅನ್ನೋದಕ್ಕೆ ಯಾವುದೋ ಒಂದು ಶಬ್ದ ಓದಿದ ನೆನಪು; ಅದು ಇಲ್ಲಿ ಸೂಕ್ತವಾಗಬಹುದೇನೋ?
ಹ್ಹಿ ಹ್ಹಿ! ನನಗೂ ಯಾವ ಪದ ಸೂಕ್ತ
ಹ್ಹಿ ಹ್ಹಿ!
ನನಗೂ ಯಾವ ಪದ ಸೂಕ್ತ ಎಂದು ಗೊತ್ತಾಗ್ತಿಲ್ಲ. :)
ಯಾರಾದ್ರೂ ಹೇಳ್ತಾರೇನೋ ಕಾಯೋಣ.
ಇದರ ಬಗ್ಗೆ ಬೇರೆ ಕಡೆ ಚರ್ಚಿಸೋಣ.
-ಅನಿಲ್
"ಅನೌರಸ " ಪುತ್ರ ಅನ್ನಬಹುದು
"ಅನೌರಸ " ಪುತ್ರ ಅನ್ನಬಹುದು .
ಅನೌರಸ ಅಂದರೆ "ಗರ್ಭದಲ್ಲಿ ಹುಟ್ಟದ" ಅಂತ ನನಗನ್ನಿಸುತ್ತದೆ. (ವಿರುದ್ಧ ಪದ ಔರಸ . ಸಂ. ಊರು - ತೊಡೆ )
ನಾರಾಯಣ
ಮಾನಸ ಪುತ್ರ ..?
ಮಾನಸ ಪುತ್ರ ..?
ಔರಸ: ಹೊಟ್ಟೆಯಲ್ಲಿ ಹುಟ್ಟಿದ ಮಗ.
ಔರಸ: ಹೊಟ್ಟೆಯಲ್ಲಿ ಹುಟ್ಟಿದ ಮಗ.
-ಅನಿಲ್
asexual reproduction -
asexual reproduction - ಅಲೈಂಗಿಕ ಸಂತಾನೋತ್ಪತ್ತಿ ಅಲ್ವೇನ್ರಿ?
'ಅಯೋನಿಜ' ಅಂತಾನೂ ಅನ್ನಬಹುದು.
'ಅಯೋನಿಜ' ಅಂತಾನೂ ಅನ್ನಬಹುದು.
...............
ಇಲ್ಲಿ ಗಣೇಶನ ಹುಟ್ಟಿನ ಬಗ್ಗೆ ಚರ್ಚೆ ನಡೀತಾ ಇರೋ ಈ ಸಂದರ್ಭದಲ್ಲಿ ಇವೆರಡು ಮಾತು!
ಗಣೇಶ ಯಾವುದೋ ಮಾತೃ ಪ್ರಧಾನ ಸಮಾಜದ ಕೊಡುಗೆ ಅಂತ ಅನ್ನಿಸುತ್ತೆ. ಪುರುಷನ "ಅವಶ್ಯಕತೆ" ಯನ್ನು / ಅವಲಂಬನೆಯನ್ನು ಪೂರ್ಣ ಮಟ್ಟದಲ್ಲಿ ನಿರಾಕರಿಸಿ ತೋರಿಸಿಕೊಡುವ , ಸಡ್ದು ಹೊಡೆಯುವ ಪ್ರಯತ್ನ ಈ ಗಣೇಶನ ಸೃಷ್ಟಿ.
ಶಿವ ಆತನ ತಲೆ ತೆಗೆಯುವ ಪ್ರಯತ್ನ.... ಪುರುಷನ ಅಸಹನೆ!
ಪುರುಷನ ಅವಲಂಬನೆಯಿಲ್ಲದ ಪ್ರಯತ್ನ .. ಅದು ವಿಕಾರ ಅಂತ ತೋರಿಸಿಕೊದೋ ಪ್ರಯತ್ನ!
-----------
-----------
ಹುಡುಕು ಪದ: ನಿಷ್ಕಾಮ ಪ್ರೊ. ಜಿ.
ಹುಡುಕು ಪದ: ನಿಷ್ಕಾಮ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ನಿಷ್ಕಾಮ ನಾಮಪದ
(ಸಂ) ೧ ಆಸೆಯಿಲ್ಲದಿರುವುದು, ನಿಸ್ವಾರ್ಥವಾದುದು ೨ ಆಸೆಯಿಲ್ಲದವನು, ನಿಸ್ವಾರ್ಥಿ
ನಿಷ್ಕಾಮ ಗುಣವಾಚಕ
(ಸಂ) ಪ್ರತಿಫಲದ ಆಸೆಯಿಲ್ಲದ, ನಿಸ್ವಾರ್ಥವಾದ
ಆಸು, ನಿಷ್ಕಾಮ ಪದದ ಅರ್ಥ
ಆಸು,
ನಿಷ್ಕಾಮ ಪದದ ಅರ್ಥ ಶಿವರಾಮರು ಬರೆದಿರುವರು.
-ಅನಿಲ್
ತಪ್ಪಾಯ್ತು ಅನಿಲ್, ನೋಡಿರಲಿಲ್ಲ,
ತಪ್ಪಾಯ್ತು ಅನಿಲ್, ನೋಡಿರಲಿಲ್ಲ, ಕ್ಷಮಿಸಿ!
ಆಸು, ಕ್ಷಮಿಸುವಷ್ಟು ದೊಡ್ಡವನು
ಆಸು,
ಕ್ಷಮಿಸುವಷ್ಟು ದೊಡ್ಡವನು ನಾನಲ್ಲ.
ಇಷ್ಟಕ್ಕೂ ಏನು ತಪ್ಪು ಮಾಡಿದಿರಿ ನೀವು?
-ಅನಿಲ್