18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

March 22, 2010 - 8:52pm
Rakesh Shetty

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.

ಅವರು ಹುತಾತ್ಮರಾಗಿ ಇಂದಿಗೆ ೭೯ ವರ್ಷಗಳಾಯಿತು.ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ  ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್.ಚಂದ್ರ ಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು.ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ.ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ,ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ ಇವೆರಡು ಘಟನೆಗಳು ಭಗತ್ ಸಿಂಗ್ನ  ಮುಂದಿನ ಜೀವನ ದಿಕ್ಕನ್ನು ಬದಲಾಯಿಸಿದವು ಅನ್ನಬಹುದೇನೋ?

ಆ ನಂತರ ಅವನು ಆರಿಸಿಕೊಂಡಿದ್ದು ಕ್ರಾಂತಿ ಮಾರ್ಗವನ್ನ.ಕಾಲೇಜಿನ ದಿನಗಳಲ್ಲೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರವರ ‘ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್ ಸದಸ್ಯನಾಗಿ ಚಳುವಳಿಗೆ ಧುಮುಕಿದ.ಕಾಕೋರಿ ಪ್ರಕರಣದ ನಂತರ ಮೂಂಚೂಣಿ ಕ್ರಾಂತಿಕಾರಿ ನಾಯಕರಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರನ್ನ ಬ್ರಿಟಿಶ್ ಸರ್ಕಾರ ಗಲ್ಲಿಗೇರಿಸಿತು.ಭಗತ್ ಸಿಂಗ್ಗೆ ಗುರುವಿನಂತಿದ್ದ ಮತ್ತೊಬ್ಬ ಮಹಾನ್ ಹೋರಾಟಗಾರ ಚಂದ್ರ ಶೇಖರ್ ಆಜಾದ್ ಭೂಗತರಾಗಬೇಕಾಯಿತು.ಈ ಸಂಧರ್ಭದಲ್ಲಿ ಕ್ರಾಂತಿಕಾರಿಗಳ ನಾಯಕನಾಗಿ ಹೊಮ್ಮಿದವನು ಭಗತ್ ಸಿಂಗ್. ನೌಜವಾನ್ ಭಾರತ ಸಭಾದ ಸದಸ್ಯನು ಆಗಿದ್ದ ಭಗತ್, ದೆಹಲಿಯಲ್ಲಿ ಕರೆದಿದ್ದ ಕ್ರಾಂತಿಕಾರಿಗಳ ಸಭೆಯಲ್ಲಿ ನಮ್ಮ ಗುರಿ ಸ್ವಾತಂತ್ರ್ಯಗಳಿಸುವುದಷ್ಟೇ ಅಲ್ಲ.ಸ್ವಾತಂತ್ರ್ಯ ನಂತರದ ಸಮಗ್ರ ಭಾರತ ಹೇಗಿರಬೇಕು ಎಂಬ ಚಿತ್ರಣವು ಇತ್ತು ಅವನಿಗಿತ್ತು.ಇಪ್ಪತ್ತರ ಆಸು ಪಾಸಿನ ಹುಡುಗ ಆ ಮಟ್ಟಕ್ಕೆ ಯೋಚಿಸಬಲ್ಲವನಾಗಿದ್ದ.

‘ಸೈಮನ್ ಕಮಿಷನ್’ ವಿರುದ್ಧ ಗುಡುಗಿದ ಲಾಲ ಲಜಪತ ರಾಯ್ ಅವರನ್ನ ಪೊಲೀಸರು ಹೊಡೆದು ಕೊಂದಾಗ,ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದುಕೊಳ್ಳಲು ಶಪತ ಮಾಡಿದರು ಮತ್ತು ಅದರಂತೆ ಕಾರ್ಯ ರೂಪಕ್ಕೆ ತರಲು ಭಗತ್ನೊಂದಿಗೆ ಕೈ ಜೋಡಿಸಿದವರು ರಾಜಗುರು,ಸುಖದೇವ್ ಮತ್ತು ಜೈ ಗೋಪಾಲ್. ಅವರು ಬಲಿತೆಗೆದು ಕೊಳ್ಳಬೇಕಿದ್ದಿದ್ದು  ಪೋಲಿಸ್ ಮುಖ್ಯಸ್ಥ ಸ್ಕಾಟ್ ಅನ್ನು,ಆದರೆ ಜೈ ಗೋಪಾಲ್ ಇಶಾರೆ ಮಾಡುವಾಗ ತಪ್ಪಿ ತೋರಿಸಿದ್ದು ಅವನ ಕೆಳಗಿನ ಅಧಿಕಾರಿ ಸ್ಯಾಂಡರ್ಸ್ನನ್ನ.ಅವನನ್ನು ಹತ್ಯೆಗೈದು ಅಲ್ಲಿಂದ ತಪ್ಪಿಸಿಕೊಂಡ ಭಗತ್ ಮತ್ತು ಸಂಗಡಿಗರು ವೇಷ ಬದಲಿಸಿ ಕೆಲಕಾಲ ದೂರವಿದ್ದರು.

ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ ಅವನು ಹೇಳಿದ್ದು “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು”.ಹಾಗೆ ಭಗತ್ನೊಂದಿಗೆ ಅಲ್ಲಿ ಶರಣಾದ ಮತ್ತೊಬ್ಬ ಕ್ರಾಂತಿಕಾರಿ ಭಟುಕೇಶ್ವರ್ ದತ್ತ.ಆ ನಂತರ ಬ್ರಿಟಿಶ್ ಸರ್ಕಾರಕ್ಕೆ  ಸ್ಯಾನ್ದರ್ಸ್ನ ಹತ್ಯೆಯ ರೂವಾರಿ ಭಗತ್ ಅನ್ನುವುದನ್ನು ತಿಳಿಯಿತು ಉಳಿದ ಎಲ್ಲ ಸಂಗಡಿಗರ ಬಂಧನವೂ ಆಯಿತು.

ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ಎಲ್ಲ ಕ್ರಾಂತಿಕಾರಿಗಳು ಭಗತ್ ನೇತೃತ್ವದಲ್ಲಿ ಉಪವಾಸಕ್ಕಿಳಿದರು.ಆಗ ಅವರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡುತಿದ್ದ ಆಗಿನ ಮಹಾನ್ (?) ನಾಯಕರ ಮಧ್ಯೆ ಅವರೊಬ್ಬ ಮಹಮ್ಮದ್ ಅಲಿ ಜಿನ್ನಾ ಮಾತ್ರ ಬಹಿರಂಗವಾಗೇ “ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” ಅಂದಿದ್ದರು.

ಎಲ್ಲ ಆರೋಪಗಳು ಸಾಬಿತಾದ ಮೇಲೆ ಭಗತ್ ಸಿಂಗ್,ರಾಜ್ ಗುರು,ಸುಖ್ದೇವ್ ಅವರಿಗೆ ೧೯೩೧ರ ಮಾರ್ಚ್ ೨೩ರನ್ದು ಮರಣದಂಡನೆ ಶಿಕ್ಷೆ ವಿಧಿಸಲಾಯಿತು.ಇದನ್ನ ವಿರೋಧಿಸಿ ಹಲ ಹೋರಾಟಗಳು,ಮನವಿ ಪತ್ರಗಳು,ಸಹಿ ಸಂಗ್ರಹಣೆ ಎಲ್ಲ ನಡೆದವು ಆದರೆ ಯಾವುದು ಪ್ರಯೋಜನಕ್ಕೆ ಬರಲಿಲ್ಲ.ಭಗತ್ ಸಿಂಗ್ ಅವರ ತಂದೆ ಕಿಶನ್ ಸಿಂಗ್ ಅವರು ಬ್ರಿಟಿಷರಿಗೆ ಶಿಕ್ಷೆಯನ್ನ ರದ್ದು ಪಡಿಸುವಂತೆ ಮನವಿ ಮಾಡಿದಾಗ ಖುದ್ದು ಭಗತ್ ಸಿಂಗ್  “ನಾನು ಬದುಕುವುದಕ್ಕಿಂತ ಬಲಿದಾನ ಮಾಡುವುದರಿಂದಲೇ ಬ್ರಿಟಿಶ್ ಸಾಮ್ರಾಜ್ಯದ ಪತನವಾಗುತ್ತದೆ” ಅಂದವನೇ ಆ ಪತ್ರವ ಹಿಂಪಡೆಯುವಂತೆ ಮಾಡಿದ್ದ.

ಇನ್ನು ಭಗತ್ ಹಾಗು ಸಂಗಡಿಗರ ಶಿಕ್ಷೆಯನ್ನ,ಗಾಂಧೀಜಿಯವರು ‘ಗಾಂಧೀ-ಇರ್ವಿನ್’ ಒಪ್ಪಂದದ ಸಮಯದಲ್ಲಿ ಪಟ್ಟು ಹಿಡಿದು ಕುಳಿತಿದ್ದರೆ ತಪ್ಪಿಸಬಹುದಿತ್ತು ಅನ್ನುವ ಮಾತುಗಳಿವೆ.ಆ ಬಗ್ಗೆ ಹಲವು ವಿವಾದಗಳು ಸಮರ್ಥನೆಗಳು ಇವೆ.ಕ್ರಾಂತಿಕಾರಿಗಳ ಪರವಾಗಿರುವವರು ‘ಗಾಂಧೀಜಿ ಅಂತ ಪ್ರಯತ್ನವನ್ನೇ ಮಾಡಲಿಲ್ಲ’ ಅಂದರೆ, ಗಾಂಧೀ ಪರವಾದವರು “ಗಾಂಧೀಜಿ ಸರ್ವ ಪ್ರಯತ್ನವನ್ನು ಮಾಡಿದ್ದರು ಆದರೆ ಸಫಲರಾಗಲಿಲ್ಲ” ಅನ್ನುತ್ತಾರೆ. ಇವೆಲ್ಲದರ ಮಧ್ಯೆ ಕಾಡುವ ವಿಷಯವೆಂದರೆ ಶಿಕ್ಷೆಗೆ ಎರಡು  ದಿನ ಮೊದಲು ಸುಖ್ ದೇವ್ ಗಾಂಧೀಜಿಗೆ ಬರೆದ ಅನ್ನುವ ಪತ್ರ(ಅದು ಅವರಿಗೆ ತಲುಪಿದ್ದು ಅವನ ಮರಣದ ನಂತರ).ಪತ್ರದ ಒಕ್ಕಣೆ “ಅವರಲ್ಲಿ ಒಬ್ಬ”.  ಆ ಪತ್ರದಲ್ಲಿ ಸುಖ್ ದೇವ್  ಹೀಗೆ ಬರೆಯುತ್ತಾನೆ

“ನೀವು ನಿಮ್ಮ ಚಳುವಳಿ ನಿಲ್ಲಿಸಿದಿರಿ.ಹಾಗಾಗಿ ನಿಮ್ಮವರೆಲ್ಲ ಬಿಡುಗಡೆಯಾಗಿದ್ದಾರೆ.ಆದರೆ ನಾವು ಕ್ರಾಂತಿಕಾರಿಗಳು ಏನು ಮಾಡಬೇಕು?ನಮ್ಮ ಗತಿ ಏನು?೧೯೧೫ ರಿಂದಲೂ ಗದರ್ ಪಾರ್ಟಿಯ ಜನ ಜೈಲಿನಲ್ಲಿ ಕೊಳೆಯುತಿದ್ದಾರೆ.ಬಬ್ಬರ್ ಅಖಾಲಿ,ಕಾಕೋರಿ,ಮಾಚುವ ಬಜಾರ್,ಲಾಹೋರ್ ಪೀತೂರಿ ಕೇಸಿನಲ್ಲಿ ಸಿಕ್ಕಿರುವ ಕ್ರಾಂತಿಕಾರಿಗಳೆಲ್ಲ ಕಂಬಿ ಎಣಿಸುತಿದ್ದಾರೆ.ಅವುಗಳೆಲ್ಲದರ ವಿಚಾರಣೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ.ಎಷ್ಟೋ ಜನ ಕ್ರಾಂತಿಕಾರಿಗಳ ಪತ್ತೆಯೇ ಇಲ್ಲ.ಅವರೆಲ್ಲ ಏನಾದರು ಯಾರಿಗೂ ಗೊತ್ತಿಲ್ಲ.ಹಾಗೆ ನಾಪತ್ತೆಯಾದವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ.ಜೈಲಿನಲ್ಲಿರುವ ಅರ್ಧದಷ್ಟು ಮಂದಿಗೆ ಮರಣದಂಡನೆಯಾಗುವುದು ಖಾತ್ರಿ.ಈ ಬಗ್ಗೆ ನಿಮಗೆ ಯಾಕೆ ಆಸಕ್ತಿ ಇಲ್ಲ”.

ಭಗತ್ ಸಿಂಗ್,ಸುಖ ದೇವ್.ರಾಜ್ ಗುರು ಅವರ ಬಲಿದಾನ ಭಾರತೀಯರಲ್ಲಿ ಹೋರಾಟ ಕಿಚ್ಚು ಹಚ್ಚುವಲ್ಲಿ ಸಫಲವಾಯಿತು.ಹಾಗೆ ಅವರು ಹಚ್ಚಿದ ಕ್ರಾಂತಿ ಜ್ಯೋತಿಗೆ ನಿರ್ಣಾಯಕ ತಿರುವು ಕೊಟ್ಟವರು ಸಮರ ಸೇನಾನಿ ಸುಭಾಷ್ ಚಂದ್ರ ಬೋಸ್.೪೭ರಲ್ಲಿ ಸ್ವಾತಂತ್ರ್ಯವೇನೋ ಸಿಕ್ಕಿತು.ಆದರೆ ನಂತರೆ ನಮ್ಮ ಇತಿಹಾಸದ ಪುಸ್ತಕದಲ್ಲಿ ಕ್ರಾಂತಿಕಾರಿಗಳೆಲ್ಲ ಮೂಲೆ ಸೇರಿಬಿಟ್ಟರಲ್ಲ.ಭಗತ್ ಸಿಂಗ್,ರಾಜ್ ಗುರು,ಸುಖ್ ದೇವ್,ಚಂದ್ರ ಶೇಖರ್ ಆಜಾದ್,ಲಾಲ ಹರದಯಾಳ್,ಖುದೀರಾಂ ಬೋಸ್,ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ ಖಾನ್,ಅರ್ಜುನ್ ಸಿಂಗ್,ಮೋಹನ್ ಸಿಂಗ್,ರಾಸ್ ಬಿಹಾರಿ ಬೋಸ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ಬಗ್ಗೆ ಹೆಚ್ಚೆಂದರೆ ಒಂದೆರಡು ಸಾಲುಗಳಿದ್ದವು ಅಷ್ಟೇ.ಇದ್ದುದ್ದರಲ್ಲಿ ಸ್ವಲ್ಪ ಕಾಣಿಸಿಕೊಂಡವರು ಸುಭಾಷ್ ಮಾತ್ರ.
ಸೇರಿಸಿದಿದ್ದರೆ ಪರವಾಗಿಲ್ಲ ಆದರೆ, ೨೦೦೬-೦೭ ರ ಸುಮಾರಿನಲ್ಲಿ ಮೊಬೈಲ್ಗಳಿಗೆ ಒಂದು ಸಂದೇಶ ಬರುತಿತ್ತು ‘ಭಗತ್ ಸಿಂಗ್ ನನ್ನು ಕ್ರಾಂತಿಕಾರಿ ಉಗ್ರಗಾಮಿ ಎಂದು ಕೇಂದ್ರ ಸರ್ಕಾರದ ಪುಸ್ತಕದಲ್ಲಿ (ಬಹುಷಃ ಯು.ಪಿ.ಎಸ್.ಸಿನಲ್ಲಿರಬೇಕು) ಬರೆಯಲಾಗಿದೆ.ಇದರ ವಿರುದ್ಧ ಧ್ವನಿಯೆತ್ತಿ ಇದನ್ನ ಎಲ್ಲರಿಗೂ ತಿಳಿಸಿ” ಅಂತ.ಆ ಸಂದೇಶವನ್ನ ಕಳಿಸಿದರೆ ಹಲವಾರು ಗೆಳೆಯರು ನಕ್ಕಿದ್ದರು.ಅವರಿಗೆ ಅದೊಂದು ದೊಡ್ಡ ವಿಷಯವೂ ಆಗಿರಲಿಲ್ಲ.ತನ್ನ ಮಾತೃ ಭೂಮಿಯ ಜನರೇ ಹೀಗೆ ಮುಂದೊಂದು ದಿನ ನನ್ನನ್ನು ಉಗ್ರಗಾಮಿ ಎಂದು ಕರೆದಾರು ಅನ್ನೋ ವಿಷಯ ಅವನಿಗೆ ಮೊದಲೇ ತಿಳಿದಿದ್ದರೆ, ಅವನು ನೇಣುಗಂಬವನ್ನ ಏರುತ್ತಲೇ ಇರಲಿಲ್ಲವೇನೋ!?

मरके कैसे जीते है
इस दुनिया को बतलाने
तेरे लाल चले है माहे
अब तेरी लाज बचाने

(ಸತ್ತು ಬದುಕುವುದೇ ಹೇಗೆಂದು
ತೋರಿಸಲು ಹೊರಟೆವು
ನಿನ್ನ ಮಕ್ಕಳು,ತಾಯಿ
ನಿನ್ನ ಮಾನ ಉಳಿಸಲು ಇಂದು)

ಎಂದು ಹಾಡುತ್ತ ಹೊರಟವನು ‘ಸತ್ತು ಬದುಕುವುದು ಹೇಗೆ ಅನ್ನುವುದನ್ನ ಜಗತ್ತಿಗೆ ಹೇಳಿಕೊಟ್ಟು ಹೋದ.’

ಆ ಅಮರ ಸೇನಾನಿಗಳ ನೆನಪಿಗೆ ನನ್ನ ನುಡಿ ನಮನ.

ಇಂಕ್ವಿಲಾಬ್ ಜಿನ್ದಾಬಾದ್.

(ಚಿತ್ರ ಕೃಪೆ :www.desicomments.com)

Average: 5 (9 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ananthesha nempu on

ಸ್ವಾತಂತ್ರ್ಯ ಸೇನಾನಿಗಳನ್ನು ಪರಿಚಯಿಸುವ, ನೆನಪಿಸುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

ಅವರ ಕನಸಿನ ಭಾರತವನ್ನು ನಿರ್ಮಿಸಲು ಪ್ರಯತ್ನಿಸುವ ಮೂಲಕ ಅವರುಗಳ ಬಲಿದಾನವನ್ನು ಸಾರ್ಥಕಗೊಳಿಸೋಣ.

Submitted by Rakesh Shetty on

ಅವರು ಕಂಡ ಕನಸನ್ನು ಸಾಕಾರಗೊಳಿಸುವುದೇ ನಾವು ಆ ದಿವ್ಯ ಚೇತನಗಳಿಗೆ ಕೊಡಬಹುದಾದ ಗೌರವ.
ಧನ್ಯವಾದಗಳು ಅನಂತೇಶ :)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by harsha.st on

ಲೇಖನ ಚನ್ನಾಗಿದೆ ರಾಕೇಶ್. . ಸ್ವಾತಂತ್ರ್ಯ ಬಂದ ನಂತರ ನಮ್ಮ ನಾಯಕರು ತುಂಬಾ ಉಪಾಯದಿಂದ ಕ್ರಾಂತಿಕಾರಿಗಳನ್ನು ಮೂಲೆಗುಂಪು ಮಾಡಿದರು..

Submitted by Rakesh Shetty on

ಹೌದು ಹರ್ಷ. ಕ್ರಾಂತಿಕಾರಿಗಳ ಸಾಧನೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗಿದೆ.ಇದನ್ನೇ ಓದಿ ಬೆಳೆದೆ ಜನ ಅದೆಷ್ಟೇ ಹೇಳಿದರೂ ಪುಸ್ತಕದಲ್ಲಿರುವುದೇ ನಮ್ಮ ನೈಜ ಇತಿಹಾಸ ಎಂದು ಹೇಳುವ ಮಟ್ಟಿಗೆ ಇತಿಹಾಸ ಬರೆಸಿದ ಬರೆದ ಜನ ಸಫಲರೂ ಆಗಿದ್ದಾರೆ.

ಇದರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ
http://sampada.net/b...

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by Harish Athreya on

ಉತ್ತಮವಾದ ಲೇಖನ
ಗಾ೦ಧಿಯವರು ಮನಸ್ಸು ಮಾಡಿದ್ದಿದ್ದರೆ ಭಗತ್ ಸಿ೦ಗ್ ರಾಜ್ ಗುರು ಸಖ ದೇವ್ ರ೦ಥವರು ಉಳಿಯುತ್ತಿದ್ದರು ಮತ್ತು ಸ್ವತ೦ತ್ರ್ಯಬೇಗ ಸಿಗುತ್ತೇನೋ
ಒ೦ದ೦ತೂ ಸ್ಪಷ್ಟ ಕೇವಲ ಕ್ರಾ೦ತಿಕಾರಿಗಳಿ೦ದ ಸ್ವಾತ೦ತ್ಯ ದೊರಕಿತೇ ಪರ೦ತು ಶಾ೦ತಿ ಉಪವಾಸದಿ೦ದಲ್ಲ.
ಭಗತ್ ಸಿ೦ಗ್ ಮತ್ತು ಇತರರನ್ನು ಗಲ್ಲಿಗೇರಿಸುವ ಹೊತ್ತಿಗೆ ಬ್ರಿಟಿಷರಿಗೆ ಅರ್ಥವಾಗಿಹೋಗಿತ್ತು ಇನ್ನು ಉಳಿಗಾಲವಿಲ್ಲವೆ೦ದು
ನೇತಾಜಿಯ ಸೈನ್ಯ ಜಮಾವಣೆ ಕ೦ಡು ನಡುಗಿಹೋಗಿದ್ದರು ಆ೦ಗ್ಲರು ಆದರೆ ನೇತಾಜಿ ಅಪಘಾತದಲ್ಲಿ ಮ್ರುತರಾದರು
ಕೇವಲ ಗಾ೦ಧಿಯಿ೦ದಲೇ ಸ್ವಾತ೦ತ್ಯ ಬ೦ತು ಎ೦ಬುದು ಹಾಸ್ಯಾಸ್ಪದ.ನಿಜವಾದ ನಾಯಕರೆ೦ದರೆ ಭಗತ್,ರಾಜ್ಗುರು,ಸಖದೇವ,ಮ೦ಗಲ್ ಪಾ೦ಡೆಯವರು
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ೦ಥವರಿಗೆ ಯಾವ ಜಯ೦ತಿ ವರ್ಧ೦ತಿಗಳಿಲ್ಲ ಮೇಲಾಗಿ ಅವರನ್ನು ಉಗ್ರಗಾಮಿ ಳೆ೦ದ ಮು೦ದಿನ ಪೀಳಿಗೆಗೆ ಪರಿಚಯ ಮಾಡಿಕೊಡುತ್ತಿದ್ದಾರೆ
ಭಗತ್ ಸಿ೦ಗ್ ರಾಜಗುರು ಸಖದೇವರಿಗೆ ನಮನ
ಹರಿ

Submitted by Rakesh Shetty on

ಹರೀಶ್,

ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ವೈಯುಕ್ತಿಕ ಅಭಿಪ್ರಾಯ ಹೀಗಿದೆ.

>> ಗಾ೦ಧಿಯವರು ಮನಸ್ಸು ಮಾಡಿದ್ದಿದ್ದರೆ ಭಗತ್ ಸಿ೦ಗ್ ರಾಜ್ ಗುರು ಸಖ ದೇವ್ ರ೦ಥವರು ಉಳಿಯುತ್ತಿದ್ದರು ಮತ್ತು ಸ್ವತ೦ತ್ರ್ಯಬೇಗ ಸಿಗುತ್ತೇನೋ.

ಈ ಬಗ್ಗೆ ಲೇಖನದಲ್ಲಿ ಹೇಳಿದ್ದೇನೆ.ಗಾಂಧೀಜಿ ಒಂದು ಬಿಡಿಸಲಾಗದ ಒಗಟು.ಅದೇನು ಮಾಡಿದ್ದರೋ ಅವರ್ಗೊಬ್ಬರಿಗೆ ಗೊತ್ತು.ಇದೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೋ ಓದಿದ ಇನ್ನೊಂದು ವಿಷಯ ನೆನಪಿಗೆ ಬಂತು. 'ಭಗತ್ ಮತ್ತು ಸಂಗಡಿಗರ ನೆನಿನಿಂದ ತಪ್ಪಿಸಿದರೆ ಕ್ರಾಂತಿಕಾರಿಗಳೆಲ್ಲ ಶಸ್ತ್ರ ತ್ಯಾಗ ಮಾಡುತ್ತೇವೆ ಅಂತ ಅಜಾದ್ ಅವರು ನೆಹರೂರವರ ಬಳಿ ಕೇಳಿದ್ದರು,ಆದರೆ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ'. ಸತ್ಯ ಅದ್ಯಾವ ಮೂಲೆಯಲ್ಲಿ ಒದ್ದು ಮಲಗಿದೆಯೋ ಗೊತ್ತಿಲ್ಲ.

>> ಒ೦ದ೦ತೂ ಸ್ಪಷ್ಟ ಕೇವಲ ಕ್ರಾ೦ತಿಕಾರಿಗಳಿ೦ದ ಸ್ವಾತ೦ತ್ಯ ದೊರಕಿತೇ ಪರ೦ತು ಶಾ೦ತಿ ಉಪವಾಸದಿ೦ದಲ್ಲ.ಭಗತ್ ಸಿ೦ಗ್ ಮತ್ತು ಇತರರನ್ನು ಗಲ್ಲಿಗೇರಿಸುವ ಹೊತ್ತಿಗೆ ಬ್ರಿಟಿಷರಿಗೆ ಅರ್ಥವಾಗಿಹೋಗಿತ್ತು ಇನ್ನು ಉಳಿಗಾಲವಿಲ್ಲವೆ೦ದು

ಶಾಂತಿ ಮತ್ತು ಕ್ರಾಂತಿ ಇವೆರಡು ಭಾರತ ಸ್ವಾತಂತ್ರ್ಯದ ಎರಡು ಹಾದಿಗಳು.ಎರಡು ಮಾರ್ಗಗಳ ಅಗತ್ಯತೆ ಇತ್ತು ಅನ್ನಿಸುತ್ತದೆ.

>> ನೇತಾಜಿ ಅಪಘಾತದಲ್ಲಿ ಮ್ರುತರಾದರು
ಈ ವಿಷಯದ ಬಗ್ಗೆ ಈಗಾಗಲೇ ಬರೆದಿದ್ದೇನೆ
http://sampada.net/a...

>> ಕೇವಲ ಗಾ೦ಧಿಯಿ೦ದಲೇ ಸ್ವಾತ೦ತ್ಯ ಬ೦ತು ಎ೦ಬುದು ಹಾಸ್ಯಾಸ್ಪದ.
ಗಾಂಧಿಜಿಯಿಂದಲೇ ಸ್ವಾತ೦ತ್ಯ ಬ೦ತು ಅನ್ನುವ ಜನರಿಗೆ ಇತಿಹಾಸವನ್ನ ವಸ್ತು ನಿಷ್ಟವಾಗಿ ನೋಡುವ ಮನಸೇ ಇಲ್ಲ.

>>ನಿಜವಾದ ನಾಯಕರೆ೦ದರೆ ಭಗತ್,ರಾಜ್ಗುರು,ಸಖದೇವ,ಮ೦ಗಲ್ ಪಾ೦ಡೆಯವರು
ಹೀಗೆ ಹೇಳಿಬಿಟ್ಟರೆ 'ಮಹಾತ್ಮ'ರನ್ನ 'ಪರಮಾತ್ಮ'ರನ್ನಾಗಿಸುವ ಜನರಿಗೂ ನಮಗೂ ಯಾವುದೇ ವ್ಯತ್ಯಾಸವಿರುವುದಿಲ್ಲ ಹರೀಶ್.

>>ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ೦ಥವರಿಗೆ ಯಾವ ಜಯ೦ತಿ ವರ್ಧ೦ತಿಗಳಿಲ್ಲ ಮೇಲಾಗಿ ಅವರನ್ನು ಉಗ್ರಗಾಮಿ ಳೆ೦ದ ಮು೦ದಿನ ಪೀಳಿಗೆಗೆ ಪರಿಚಯ ಮಾಡಿಕೊಡುತ್ತಿದ್ದಾರೆ
ಹೌದು ಈ ಮಾತು ಒಪ್ಪುವನ್ತದ್ದೆ.ಅವರನ್ನು ನೆನೆಯದಿದ್ದರೆ ಬೇಡ ಆದರೆ ಹೆಸರು ಕೆಡಿಸುವ ವಿಕೃತಿ ಏಕೆ ಈ ಜನರಿಗೆ?

ಧನ್ಯವಾದಗಳು ಹರಿ :)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by Harish Athreya on

<<ಶಾಂತಿ ಮತ್ತು ಕ್ರಾಂತಿ ಇವೆರಡು ಭಾರತ ಸ್ವಾತಂತ್ರ್ಯದ ಎರಡು ಹಾದಿಗಳು.ಎರಡು ಮಾರ್ಗಗಳ ಅಗತ್ಯತೆ ಇತ್ತು ಅನ್ನಿಸುತ್ತದೆ.>>
ಶಾ೦ತಿಯ ಮಾರ್ಗದಲ್ಲಿ ಹೋರಡುವುದಕ್ಕೂ ಒ೦ದು ಮಿತಿಯಿದೆಯಲ್ಲವೇ ಒ೦ದು ವರ್ಷ ಎರಡು ವರ್ಷ ತಲೆ ತಗ್ಗಿಸಿ ಬಾಳುವುದು ಒ೦ದು ಬಾಳೆ? ಒ೦ದುಹ೦ತದವರೆಗೆ ಇದು ಗಾ೦ಧಿಗೂ ಅರಿವಿತ್ತೆ೦ದು ತೋರುತ್ತದೆ.ಶಾ೦ತಿ ಕ್ರಾ೦ತಿ ಭಾರತದರ ಎರಡು ಮಾರ್ಗಗಳು ಒಪ್ಪುತ್ತೇನೆ ಆದರೆ ಶಾ೦ತಿಯಿ೦ದ ಸಾಧಿಸಲಾಗುವುದಿಲ್ಲ ಎ೦ಬುದನ್ನರಿತ ಮೇಲೆ ಕ್ರಾ೦ತಿಗೆ ಪ್ರೋತ್ಸಾಹ ಕೊಡಬೇಕಿತ್ತು
<<'ಮಹಾತ್ಮ'ರನ್ನ 'ಪರಮಾತ್ಮ'ರನ್ನಾಗಿಸುವ>> ಹೋರಾಟಗಾರರನ್ನು ಗುರುತಿಸಿದರೆ ಸಾಕು ಮಹಾತ್ಮ ಪರಮಾತ್ಮ ಬೇಡ
ಹರಿ

Submitted by thesalimath on

ಹರೀಶ ಅವರು ಚೆನ್ನಾಗಿ ಕಾಮೆಡಿ ಮಾಡ್ತಾರೆ...!!! ಒಳ್ಳೇ ಪಂಚಿಂಗ್ ಡಯಲಾಗ್ಸ್ ;)
ಇಂತಹ ಗಂಭೀರ ವಿಷಯ ಮಾತನಾಡುವಾಗಲೂ ಹಾಸ್ಯವೇ?

Submitted by vasant.shetty on

ಒಳ್ಳೇ ಬರಹ ರಾಕೇಶ್, ಧನ್ಯವಾದಗಳು.
ಇದರ ಜೊತೆಗೆ, ಸಾಧ್ಯವಾದರೇ, ನಮ್ಮ ಕುಡ್ಲದ ಕಾರ್ನಾಡ್ ಸದಾಶಿವರಾಯರ ಬಗ್ಗೆ, ಧಾರವಾಡದ ಆಲೂರು ವೆಂಕಟರಾಯರ ಬಗ್ಗೆ, ಕೆಳದಿ ಶಿವಪ್ಪ ನಾಯಕನ ಬಗ್ಗೆಯೂ ಬರೆಯಿರಿ.
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕರ್ನಾಟಕದಿಂದ ದೊಡ್ಡ ಕೊಡುಗೆ ಕೊಟ್ಟ ಸಾಧಕರಲ್ಲಿ ಇವರು ಕೆಲವರು.

Submitted by Rakesh Shetty on

ಖಂಡಿತ ಬರೆಯುವೆ ವಸಂತ್
ಧನ್ಯವಾದಗಳು :)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by manju787 on

ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ವೀರರನ್ನು ನೆನಪಿಸಿದ ನಿಮಗೆ ಧನ್ಯವಾದಗಳು. ಇಂದು ಬದುಕಿಯೂ ಸತ್ತಂತಿರುವ ಅದೆಷ್ಟೋ ಮಂದಿಗೆ ಇವರ ಹೆಸರುಗಳೇ ಗೊತ್ತಿಲ್ಲದಿರುವುದು ಇಂದಿನ ದುರಂತ.

Submitted by Rakesh Shetty on

ಧನ್ಯವಾದಗಳು ಮಂಜುನಾಥ್ :)

ಗೊತ್ತಿಲ್ಲದವರಿಗೆ ನಮ್ಮ ಕೈ ಚಾಚಬಹುದಾದಷ್ಟು ದೂರದವರೆಗಾದರು ಹೇಳಿಕೊಡೋಣ ಅನ್ನುವುದೇ ನನ್ನ ಆಶಯ.
ಚಿಕ್ಕಂದಿನಲ್ಲೇ ಮಕ್ಕಳಿಗೆ ಕಥೆಯ ಜೊತೆಗೆ ಇಂತವರ ಜೀವನ ಚರಿತ್ರೆಯನ್ನ ಹೇಳಿಕೊಡಬಹುದಲ್ಲವೆ.

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by Shamala on

ಉತ್ತಮ ಲೇಖನ ರಾಕೇಶ್...

ನಾವೆಲ್ಲರೂ ಆ ಕೆಲಸ ಖಂಡಿತಾ ಮಾಡಬೇಕು. ಮನೆಯಲ್ಲಿ ಚಿಕ್ಕವಯಸ್ಸಿನಿಂದಲೇ ನಾವು ಇಂಥವರ ಜೀವನ ಕಥೆಗಳನ್ನು ಹೇಳುವುದರಿಂದ, ದೇಶ ಪ್ರೇಮದ ಜೊತೆಗೆ, ವ್ಯಕ್ತಿತ್ವ ವಿಕಸನವೂ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಧನ್ಯವಾದಗಳು ರಾಕೇಶ್.........

Submitted by rennie606 on

ನಂಗು ಧನ್ಯವಾದ ಹೇಳಿ ರಾಕೇಶ್, ನಿಮ್ಮ ಉತ್ತಮ ಲೇಖನಕ್ಕೆ ಐದು ನಕ್ಷತ್ರ ಹಾಕಿದ್ದೆ ಮಾತಿನಲ್ಲಿ ವ್ಯಕ್ತಪಡಿಸಿರಲಿಲ್ಲ ಅಷ್ಟೆ :)..
ಎಲ್ಲೋ ಓದಿದ ನೆನಪು.. ಭಗತ್ ಸಿಂಗ್ ನಿಜ ಜೀವನದಲ್ಲಿ ಟೋಪಿ ಹಾಕುತ್ತಿರಲಿಲ್ಲವಂತೆ (ಅವರ ಜನಪ್ರಿಯ ಚಿತ್ರಗಳಲ್ಲಿ ಟೋಪಿ ಹಾಕಿಕೊಂಡಂತೆ ಹೆಚ್ಚಾಗಿ ಕಾಣಿಸಿಕೊಳ್ಳುವುದು) ನೀವು ಹಾಕಿದ ಚಿತ್ರದಲ್ಲಿ ಮುಂಡಾಸು ಇರೊದು ನೋಡಿ ಆ ವಿಚಾರ ಜ್ಞಾಪಕವಾಯಿತು. ನಿಮಗೇನಾದರು ಗೊತ್ತಿದೆಯೆ ಈ ವಿಚಾರ??

Submitted by Rakesh Shetty on

ಟೋಪಿಯ ವಿಷಯ ನಂಗೂ ಗೊತ್ತಿಲ್ಲ ಪ್ರಸಾದ್.ಪಾಪ ನಮ್ಮ ಭಗತ್ಗೆ ಅವಕಾಶ ಸಿಕ್ಕಿದಾಗಲೆಲ್ಲ ಟೋಪಿ ಹಾಕ್ತಾರೆ ಬಿಡಿ ;)

ಹಾಂ! ಡಬಲ್ ಧನ್ಯವಾದಗಳು :)

Submitted by kamalap09 on

>>ಅವರು ಬಲಿತೆಗೆದು ಕೊಳ್ಳಬೇಕಿದ್ದಿದ್ದು ಪೋಲಿಸ್ ಮುಖ್ಯಸ್ಥ ಸ್ಕಾಟ್ ಅನ್ನು,ಆದರೆ ಜೈ ಗೋಪಾಲ್ ಇಶಾರೆ ಮಾಡುವಾಗ ತಪ್ಪಿ ತೋರಿಸಿದ್ದು ಅವನ ಕೆಳಗಿನ ಅಧಿಕಾರಿ ಸ್ಯಾಂಡರ್ಸ್ನನ್ನ.ಅವನನ್ನು ಹತ್ಯೆಗೈದು ಅಲ್ಲಿಂದ ತಪ್ಪಿಸಿಕೊಂಡ ಭಗತ್ ಮತ್ತು ಸಂಗಡಿಗರು ವೇಷ ಬದಲಿಸಿ ಕೆಲಕಾಲ ದೂರವಿದ್ದರು.

ಭಗತ್ ಈ ಸಮಯದಲ್ಲೇ ವೇಷ ಬದಲಿಸಿಕೊಂಡಾಗ ಟೋಪಿ ಧರಿಸಿದ್ದು.

Submitted by vijay pai on

ರಾಕೇಶ್..
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ನೆನಪಿನಲ್ಲಿ, ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್ ಬಗ್ಗೆ ಬರೆದ ಲೇಖನ ಅರ್ಥಪೂರ್ಣವಾಗಿದೆ. ಉದ್ದೇಶಪೂರ್ವಕವಾಗಿ ತಿರುಚಲ್ಪಟ್ಟ ಇತಿಹಾಸದಿಂದ ಈ ಕ್ರಾಂತಿಕಾರಿಗಳ ಕೆಚ್ಚು, ಶೌರ್ಯ ಮುಂದಿನ ಪಿಳೀಗೆಗಳಿಗೆ ವರ್ಗಾಯಿಸಲ್ಪಡದ್ದು ನಮ್ಮ ದೇಶದ ದುರಂತ. ಪರಿಣಾಮವೆ ನಮ್ಮ ಈಗಿನ ದೇಶಪ್ರೇಮ ಬರಿ ಮಾತುಗಳ ಮಾಲೆ ಪೋಣಿಸುವಲ್ಲೇ ಮುಗಿದುಹೋಗುತ್ತಿದೆ.
ಈ ಎಡಪಂತೀಯ, ಬಲಪಂತೀಯ ವಿಚಾರಧಾರೆಗಳ ಕಾಲೇಳೆಯುವಿಕೆ, ಕೆಸರೆರುಚುವಿಕೆಯಲ್ಲಿ ನಿಜವಾದ ಇತಿಹಾಸ ನಮಗೆ ತಲುಪಲೇ ಇಲ್ಲ. ಸ್ವಾತಂತ್ರ್ಯಾನಂತರದ ಕಾಲದಲ್ಲಿ ಒಬ್ಬರನ್ನು ನಾಯಕ, ಇನ್ನೊಬ್ಬರನ್ನು ಖಳನಾಯಕನನ್ನಾಗಿ ಮಾಡುವ ಕ್ರಿಯೆಗಳೆ ಪ್ರಾಮುಖ್ಯ ಪಡೆದವು. ಸತ್ಯ ಅರಿಯುವುದಕ್ಕಿಂತ ನಾವು ಗುಂಪುಗಾರಿಕೆಯಲ್ಲಿ ತೊಡಗಿದೆವು..ಈಗ ನಮಗೆ ನಿಜ ಗಾಂಧೀಜಿಯವರ ಬಗ್ಗೆಯೂ ಗೊಂದಲ, ನಿಜವಾದ ವೀರ ಸಾವರ್ಕರರ ಬಗ್ಗೆಯೂ ಗೊಂದಲ .
ಪೂರ್ವಾಗ್ರಹಪೀಡೀತರಾಗದೆ,ಯಾವುದೇ ಗುಂಪಿಗೆ ಸೇರದೆ, ತಟಸ್ಥವಾಗಿ ಸತ್ಯವನ್ನು ತಿಳಿಯುವತ್ತ ತೊಡಗುವುದೊಂದೆ ನಾವು ಈಗ ಮಾಡಬಹುದಾಗಿದ್ದು. ಇದು ಸಾಧ್ಯವಾದರೆ ನಾವು ಗಾಂಧೀಜಿಯ ಆತ್ಮಕಥೆಯನ್ನು ಮತ್ತು ನಾಥೂರಾಂ ಗೊಡ್ಸೆಯ 'ನಾನೇಕೆ ಗಾಂಧೀಜಿಯವರನ್ನು ಕೊಂದೆ' ಎರಡನ್ನು ತಟಸ್ಥ ಮನಸ್ಸಿನಿಂದ ಓದಿ ನಮ್ಮ ಸ್ವಂತವೆನಿಸುವ ಅಭಿಪ್ರಾಯವನ್ನು ಹೊಂದಬಹುದು ಎಂದು ನನಗನಿಸುತ್ತದೆ.

Submitted by Rakesh Shetty on

>>ಈ ಎಡಪಂತೀಯ, ಬಲಪಂತೀಯ ವಿಚಾರಧಾರೆಗಳ ಕಾಲೇಳೆಯುವಿಕೆ, ಕೆಸರೆರುಚುವಿಕೆಯಲ್ಲಿ ನಿಜವಾದ ಇತಿಹಾಸ ನಮಗೆ ತಲುಪಲೇ ಇಲ್ಲ
ಹೌದು ವಿಜಯ್.ಎಲ್ಲ ಪಂಥಿಯರದ್ದು ಒಂದೊಂದು ಇತಿಹಾಸವಿದೆ ಇಲ್ಲಿ.ಸತ್ಯ ಅದ್ಯಾವ ಮೂಲೆಯಲ್ಲಿ ಮಲಗಿದೆಯೋ?

>>ಪೂರ್ವಾಗ್ರಹಪೀಡೀತರಾಗದೆ,ಯಾವುದೇ ಗುಂಪಿಗೆ ಸೇರದೆ, ತಟಸ್ಥವಾಗಿ ಸತ್ಯವನ್ನು ತಿಳಿಯುವತ್ತ ತೊಡಗುವುದೊಂದೆ ನಾವು ಈಗ ಮಾಡಬಹುದಾಗಿದ್ದು. ಇದು ಸಾಧ್ಯವಾದರೆ ನಾವು ಗಾಂಧೀಜಿಯ ಆತ್ಮಕಥೆಯನ್ನು ಮತ್ತು ನಾಥೂರಾಂ ಗೊಡ್ಸೆಯ 'ನಾನೇಕೆ ಗಾಂಧೀಜಿಯವರನ್ನು ಕೊಂದೆ' ಎರಡನ್ನು ತಟಸ್ಥ ಮನಸ್ಸಿನಿಂದ ಓದಿ ನಮ್ಮ ಸ್ವಂತವೆನಿಸುವ ಅಭಿಪ್ರಾಯವನ್ನು ಹೊಂದಬಹುದು ಎಂದು ನನಗನಿಸುತ್ತದೆ.
ಇತಿಹಾಸವನ್ನ ಪೂರ್ವಾಗ್ರಹ ಪೀಡಿತರಾಗಿ ನೋಡದೆ ವಸ್ತು ನಿಷ್ಠ ಅಧ್ಯಯನ ಮಾಡಿದರೆ ಮಾತ್ರ ಅರಿವಿಗೆ ಬರುತ್ತದೆ.

ಇಷ್ಟವಾಯಿತು ನಿಮ್ಮ ಮಾತುಗಳು.

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by abdul on

"ಪೂರ್ವಾಗ್ರಹಪೀಡೀತರಾಗದೆ,ಯಾವುದೇ ಗುಂಪಿಗೆ ಸೇರದೆ, ತಟಸ್ಥವಾಗಿ ಸತ್ಯವನ್ನು ತಿಳಿಯುವತ್ತ ತೊಡಗುವುದೊಂದೆ ನಾವು ಈಗ ಮಾಡಬಹುದಾಗಿದ್ದು. ಇದು ಸಾಧ್ಯವಾದರೆ ನಾವು ಗಾಂಧೀಜಿಯ ಆತ್ಮಕಥೆಯನ್ನು ಮತ್ತು ನಾಥೂರಾಂ ಗೊಡ್ಸೆಯ 'ನಾನೇಕೆ ಗಾಂಧೀಜಿಯವರನ್ನು ಕೊಂದೆ' ಎರಡನ್ನು ತಟಸ್ಥ ಮನಸ್ಸಿನಿಂದ ಓದಿ ನಮ್ಮ ಸ್ವಂತವೆನಿಸುವ ಅಭಿಪ್ರಾಯವನ್ನು ಹೊಂದಬಹುದು"
ತಮ್ಮ ಮಾತು oppa takkanthadde, ವಿಜಯ್. ಆದರೆ ತಾವು ಹೇಳಿದ ಅವೆರಡೂ ಪುಸ್ತಕಗಳನ್ನು ಓದಿ ಒಂದು ತೀರ್ಮಾನಕ್ಕೆ ಬಂದರೆ ನಾವು ಯಾವುದಾದರೂ ಒಂದು ಕ್ಯಾಂಪನ್ನು ಸೇರಿದಂತಾಗುವುದಿಲ್ಲವೇ? ಹಠ, ಜಿದ್ದಿನಿಂದ ನಾನು ನನ್ನ ಮೂಗಿನ ನೇರಕ್ಕೆ ಯೋಚಿಸುವುದು, ನನ್ನ ideology ಬಾಲವನ್ನೇ naanu (ಅದು ಎಷ್ಟೇ ಡೊಂಕಾಗಿದ್ದರೂ) ಹಿಡಿಯುವುದು ಎಂದು ಕೂತಾಗ ಒಮ್ಮತದ ಮಾತು ದೂರ ಉಳಿಯಿತು ಅಲ್ಲವೇ?

Submitted by vijay pai on

ಇದನ್ನೆ ನಾನು ಹೇಳಬಯಸಿದ್ದು ಅಬ್ದುಲ್ :)..ಅಂದರೆ ನಾವು ಮಾಡಬೇಕಾಗಿದ್ದು...ಎರಡು ಪುಸ್ತಕ ಓದಿದ ಮೇಲೂ ಇಬ್ಬರ ಗುಣಾವಗುಣಗಳನ್ನು ವಿಶ್ಲೇಷಿಸುವ ನಮ್ಮ ವಿಚಾರ ಸ್ವಾತಂತ್ರ್ಯ ಕಾದುಕೊಳ್ಳುವುದು, ಯಾವುದೇ ಪಂಥೀಯ/ವಾದಿಯ ಉನ್ಮಾದತೆಯಿಂದ ಮುಕ್ತವಾಗಿರುವುದು ಮತ್ತು ಕ್ಯಾಂಪಗಳನ್ನು ಸೇರದಿರುವುದು!.

Submitted by abdul on

ಭಾರತದ ಸ್ವಾತಂತ್ರ್ಯಕಾಗಿ, ತಮಗಾಗಿ ಅಲ್ಲದಿದ್ದರೂ ಕಡೆ ಪಕ್ಷ ಮುಂದಿನ ಪೀಳಿಗೆಯಾದರೂ ದಾಸ್ಯದಿಂದ ಮುಕ್ತಿ ಹೊಂದಿ ತಮ್ಮ ನಾಡನ್ನು ತಾವೇ ಆಳಿಕೊಂಡು ಬದುಕಲು ಅನುವು ಮಾಡಿಕೊಟ್ಟ, ಆ ಹೋರಾಟದಲ್ಲಿ ಪ್ರಾಣ ತೆತ್ತ ಕಲಿಗಳು ಅಸಂಖ್ಯ. ಆದರೆ ದುರದೃಷ್ಟವಶಾತ್ ಈ ವೀರಗಾಥೆಗಳು ನಮ್ಮ ಮಕ್ಕಳಿಗೆ ಇನ್ನೂ ತಲುಪಿಲ್ಲ. ಇದೇ ರೀತಿ ನಮಗೆ ತಿಳಿಯದ ಹೋರಾಟಗಳು ಬಹಳಷ್ಟಿವೆ.
ಬ್ರಿಟಿಷರ ವಿರುದ್ಧ ಟಿಪ್ಪು (ಟಿಪ್ಪು ಹುತಾತ್ಮರಾದದ್ದನ್ನು ಕಂಡ ಕೂಡಲೇ ಬ್ರಿಟಿಷ್ ಸೇನಾಧಿಕಾರಿ ಉದ್ಗರಿಸಿದ್ದು "ಇನ್ನು ಭಾರತ ನಮ್ಮದು" ಎಂದು) ನಂತರದ ವ್ಯವಸ್ಥಿತ ಸಶಸ್ತ್ರ ಹೋರಾಟ ನವಾಬ್ ಅಮೀರ್ ಅಲಿ ಖಾನ್ ಮತ್ತು ಮಹಾರಾಜ ಜಸ್ವಂತ್ ರಾವ್ ಅವರುಗಳ ನೇತೃತ್ವದಲ್ಲಿ ನಡೆಯಿತು. ಬಾಲಾಕೊಟ್ ಕದನದಲ್ಲಿ ದಂಗೆಯ ನಾಯಕರಾದ ಸಯ್ಯದ್ ಅಹ್ಮದ್ ಶಹೀದ್ ಮತ್ತು ಶಾ ಇಸ್ಮಾಯಿಲ್ ಸೇರಿದಂತೆ ಸುಮಾರು ೩೦೦ ದೇಶಪ್ರೇಮಿಗಳು ತಮ್ಮ ಪ್ರಾಣ ಕಳೆದು ಕೊಂಡರು.
ಅದೇ ರೀತಿ ಕೇರಳದ ತೀರದಲ್ಲಿ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತನ್ನ ಪ್ರಾಣ ಕಳೆದುಕೊಂಡ ಕುಂಜಾಲಿ ಮರಿಕ್ಕಾರ್ ಬಗ್ಗೆಯೂ ಬಹಳಷ್ಟು ಜನರಿಗೆ ತಿಳಿದಿಲ್ಲ.
ಇನ್ನು ಸಶಸ್ತ್ರ ಹೋರಾಟ ನಡೆಸಿದ ಕಲಿಗಳಿಗೂ, ಶಾಂತಿಯ ದ್ಯೋತಕವಾಗಿ ವಿಶ್ವಕ್ಕೆ ಸಹನೆ ಎಂದರೇನು ಎಂದು ಬೋಧಿಸಿದ ಮಹಾತ್ಮ ಗಾಂಧಿಯವರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡಲಾಗದು. ಇವರೀರ್ವರೂ ತಮ್ಮದೇ ಆದ ಶೈಲಿಯಲ್ಲಿ ದೇಶ ಪ್ರೇಮ ಮೆರೆದರು ಮತ್ತು ಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕುವುದಿಲ್ಲ ಎಂದು ಗಾಂಧೀಜಿ ಕಂಡು ಕೊಂಡಿದ್ದರಿಂದ ಭಾರತ ಸ್ವತಂತ್ರವಾಯಿತು.

Submitted by Rakesh Shetty on

ಅಬ್ದುಲ್,
ಹಲವು ಹೆಸರಗಳನ್ನ ನಾನು ಮೊದಲನೇ ಬಾರಿಗೆ ಕೇಳುತಿದ್ದೇನೆ.ಇವರ ಪರಿಚಯವನ್ನ ಇನ್ನು ವಿವರವಾಗಿ ಮಾಡಿಕೊಟ್ಟರೆ ಒಳ್ಳೆಯದು.

>>ಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕುವುದಿಲ್ಲ ಎಂದು ಗಾಂಧೀಜಿ ಕಂಡು ಕೊಂಡಿದ್ದರಿಂದ ಭಾರತ ಸ್ವತಂತ್ರವಾಯಿತು.

ಈ ಮಾತಿನ ಅರ್ಥ ಗಾಂಧೀಜಿಯ ಮಾರ್ಗದಿಂದಲೇ ಭಾರತ ಸ್ವತಂತ್ರವಾಯಿತು ಅನ್ನುವುದೇ ಆಗಿದ್ದರೆ, ನಾನದನ್ನು ಒಪ್ಪಲಾರೆ.ಹಾಗೇನಾದರು ಅವರ ಮಾರ್ಗವೊಂದೇ ಮತ್ತು ಅವರೊಬ್ಬರೇ ಕಾರಣ ಎಂದು ಹೇಳುವುದು ಉಳಿದ ಹೋರಾಟಗಾರರಿಗೆ ಅವರ ಬಲಿದಾನಕ್ಕೆ ಮಾಡುವ ಅವಮಾನ ಎಂದಷ್ಟೇ ಹೇಳಬಲ್ಲೆ.

ಧನ್ಯವಾದಗಳು :)

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ||'

Submitted by ksraghavendranavada on

ನಮಸ್ಕಾರ ಶೆಟ್ರೇ,

ನನಗನ್ನಿಸುತ್ತೇ, ಅಬ್ಧುಲ್ ಕೇವಲ ಗಾ೦ಧೀಜಿ ಒಬ್ಬರನ್ನು ಮಾತ್ರವೇ ಸಮೀಕರಿಸಿ ಇದನ್ನು ಹೇಳಿಲ್ಲ. ಗಾ೦ಧೀಜಿ ಆ ಸತ್ಯವನ್ನು ಕ೦ಡುಕೊ೦ಡರು ಅದಕ್ಕೆ ತಕ್ಕ೦ತೆ ಅವರ ಬೆಟಾಲಿಯನ್ ಅನ್ನು ಹುರಿದು೦ಬಿಸಿದರು ಎ೦ದು ಅರ್ಥೈಸಿಕೊಳ್ಳೋಣ.ಆದರೆ ನಮ್ಮ ಸ್ವಾತ೦ತ್ರ್ಯ ಸ೦ಗ್ರಾಮದ ಕಥೆ ``ಕೇವಲ ಗಾ೦ಧಿಯ ಸುತ್ತ ಸುತ್ತುವ ಗಾ೦ಧೀಜಿಯ ಯಶೋಗಾಥೆ``ಯಾಗಿ ಇತಿಹಾಸದಲ್ಲಿ ದಾಖಲಾಗಿದೆ ಅಷ್ತೇ.ಅದು ಮಾತ್ರ ನೋವಿನ ಸ೦ಗತಿ.

Submitted by prasca on

<<‘ಭಗತ್ ಸಿಂಗ್ ನನ್ನು ಕ್ರಾಂತಿಕಾರಿ ಉಗ್ರಗಾಮಿ ಎಂದು ಕೇಂದ್ರ ಸರ್ಕಾರದ ಪುಸ್ತಕದಲ್ಲಿ (ಬಹುಷಃ ಯು.ಪಿ.ಎಸ್.ಸಿನಲ್ಲಿರಬೇಕು) ಬರೆಯಲಾಗಿದೆ.ಇದರ ವಿರುದ್ಧ ಧ್ವನಿಯೆತ್ತಿ ಇದನ್ನ ಎಲ್ಲರಿಗೂ ತಿಳಿಸಿ” ಅಂತ.ಆ ಸಂದೇಶವನ್ನ ಕಳಿಸಿದರೆ ಹಲವಾರು ಗೆಳೆಯರು ನಕ್ಕಿದ್ದರು.ಅವರಿಗೆ ಅದೊಂದು ದೊಡ್ಡ ವಿಷಯವೂ ಆಗಿರಲಿಲ್ಲ.ತನ್ನ ಮಾತೃ ಭೂಮಿಯ ಜನರೇ ಹೀಗೆ ಮುಂದೊಂದು ದಿನ ನನ್ನನ್ನು ಉಗ್ರಗಾಮಿ ಎಂದು ಕರೆದಾರು ಅನ್ನೋ ವಿಷಯ ಅವನಿಗೆ ಮೊದಲೇ ತಿಳಿದಿದ್ದರೆ, ಅವನು ನೇಣುಗಂಬವನ್ನ ಏರುತ್ತಲೇ ಇರಲಿಲ್ಲವೇನೋ!?>>

ಇಲ್ಲಿದೆ ನೋಡಿ

http://thatskannada....