ನನಸಾಗುವುದಿಲ್ಲ ಏಕೀ ಕನಸುಗಳು?
**** ನನಸಾಗುವುದಿಲ್ಲ ಏಕೀ ಕನಸುಗಳು? *****
ಏನೆಲ್ಲ ಕಲ್ಪನೆಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಬದುಕೆಂದರೆ ಶುಭ್ರ, ವಿಶಾಲ, ತಿಳಿನೀಲಿ ಬಾಂದಳದಂತೆ,
ಗರಿಗೆದರಿ ಮನದುಂಬಿ ಹಾರಾಡಬಹುದಾದ ಆಂಗಣದಂತೆ,
ಬದುಕೆಂದರೆ ಅನಂತ, ನಿಗೂಢ, ತಾರೆಗಳ ತೋಟದಂತೆ.
ಏನೆಲ್ಲ ಕನಸುಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ವಿಜ್ಞಾನಿಯಾಗಿ ಹೊಸತೇನನ್ನೋ ಕಂಡುಹಿಡಿದಂತೆ,
ಗಗನಯಾತ್ರಿಯಾಗಿ ತಿಂಗಳನ ಅಂಗಳದಿ ನಡೆದಾಡಿದಂತೆ,
ಹಿಮಕವಿದ ಉನ್ನತ ಗಿರಿ-ಶಿಖರಗಳನ್ನು ಮೆಟ್ಟಿ ನಿಂತಂತೆ!
ಏನೆಲ್ಲ ತುಡಿತಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ಹತ್ತು ಮಂದಿಗೆ ಪಾಠ ಕಲಿಸುವ ಗುರುವು ನಾವಾದಂತೆ,
ಚಿತ್ರಕಾರನಾಗಿ ಹೊಸ ಬಣ್ಣಗಳಲಿ ಜಗವ ತೋಯಿಸಿದಂತೆ,
ವೈದ್ಯನಾಗಿ ಜನರ ಸೇವೆಯಲ್ಲಿಯೇ ಧನ್ಯತೆಯ ಪಡೆದಂತೆ!
ಏನೆಲ್ಲ ಆದರ್ಶಗಳು ಬಾಲ್ಯದಲ್ಲಿ, ಎಳೆಯ ಮನದಲ್ಲಿ;
ನವಭಾರತ ನಿರ್ಮಾಣವೆಂಬ ಯಜ್ಞದಲ್ಲಿ ಭಾಗಿಗಳಾದಂತೆ,
ಗಾಂಧಿ, ಸುಭಾಷರ ಧ್ಯೇಯಗಳಿಗೆ ಮರುಜೀವವಿತ್ತಂತೆ,
ನಮ್ಮ ಸಾಧನೆಯ ಚೆಂಬೆಳಕಲ್ಲಿ ಸಮಾಜವನ್ನು ಬೆಳಗಿದಂತೆ.
ನಾವು ಬೆಳೆದಂತೆ ನಮ್ಮ ಕನಸುಗಳ ರಾಶಿ ಕರಗುವುದು ಏಕೆ?
ಯಾಂತ್ರಿಕ ಬಾಳಬಂಡಿಯೋಟವೇ ಕೇಂದ್ರವಾಗುವುದು ಏಕೆ?
ಇಷ್ಟೆಲ್ಲ ತುಡಿತಗಳು, ಕನಸುಗಳು, ನನಸಾಗುವುದಿಲ್ಲವೇಕೆ?
ನಮ್ಮ ಕನಸುಗಳ ಸ್ಫೂರ್ತಿ ಸೆಲೆಯೇ ಬತ್ತಿ ಹೋಗುವುದೇಕೆ?

- Login or register to post comments
- 451 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ನನಸಾಗುವುದಿಲ್ಲ ಏಕೀ ಕನಸುಗಳು?
ತುಂಬಾ ಸುಂದರ ಕವನ ಕಿಶೋರ್. ಚಿಕ್ಕವನಿದ್ದಾಗ ನಾನಂತೂ ಬಸ್ ಡ್ರೈವರ್ ಆಗಬೇಕು ಅಂದುಕೊಂಡಿದ್ದೆ
http://hisushrutha.blogspot.com/
Re: ನನಸಾಗುವುದಿಲ್ಲ ಏಕೀ ಕನಸುಗಳು?
ನಿಮ್ಮ ಕನಸುಗಳು ಸೂಪರ್ ಅಗಿದೆ...
ಅದನ್ನ ನನಸು ಮಾಡಲು ಈ ನನ್ನ ಕವಿತೆ ಓದಿ

http://sampada.net/blog/betala/11/12/2006/2555
-ನಿಮ್ಮ ಬೆಂಬಿಡದ ಬೇತಾಳ .....
Re: ನನಸಾಗುವುದಿಲ್ಲ ಏಕೀ ಕನಸುಗಳು?
ಬೇತಾಳ ಮಹಾಶಯರೇ (ತಪ್ಪು ತಿಳೀಬೇಡೀಪ್ಪ! ನಿಮ್ಮ ಕಾವ್ಯನಾಮದಿಂದ ಸಂಬೋಧಿಸಿದ್ದೇನೆ ಅಷ್ಟೆ),
ನಿಮ್ಮ ಕವನ (ಕನಸುಗಳು ಎಲ್ಲಿ) ಓದಿದೆ. ಚೆನ್ನಾಗಿದೆ. ಸುನೀಲ್ ಹೇಳಿದಂತೆ ನೀರಿನಲ್ಲಿ ನೆನೆದ ಕಲ್ಲುಗಳ ಉಪಮೆ ಸುಂದರವಾಗಿದೆ.
ಕನಸು ಅಂದ ತಕ್ಷಣ ನನಗೆ ನೆನಪಾಗೋದು "ನಾದವಿರದ ಬದುಕೆ..." ಕವನ.
"ಕಲೆಯೆಷ್ಟೆ ಇದ್ದರೇನು,ಕನಸಿರದ ಬಾಳು ಬಾಳೇ?
ಮಳೆಬಿಲ್ಲು ಸಿಂಗರಿಸದ ಕರಿಮುಗಿಲಿನೊಂದು ಮಾಲೆ..."
ಎಂತಹ ಸುಂದರವಾದ ಸಾಲುಗಳು ಅಲ್ಲವೇ?
-ಶ್ಯಾಮ್ ಕಿಶೋರ್