ಹೀಗೊಂದು ಚಿಂತನೆ
ಮೊನ್ನೆ ನಾನು ತೆಗೆದುಕೊಂಡ ವಿಷಯಗಳಿಗೆ ಗ್ರೇಡುಗಳು ಬಂದಿದ್ದವು. ಹೀಗೆ ಗ್ರೇಡುಗಳು ಬಂದಾಗಲೆಲ್ಲಾ ನನಗೆ ಈ ಪ್ರಪಂಚದ ನಶ್ವರತೆ-ವೈರಾಗ್ಯ ಮುಂತಾದ ಯೋಚನೆಗಳು ಹೆಚ್ಚಾಗುತ್ತವೆ. ಇದೂ ಒಂದು ರೀತಿಯ ಮಸಣ ವೈರಾಗ್ಯ.ಮಹಾಭಾರತ ಯುದ್ಧ ಮುಗಿದ ನಂತರ ಯುಧಿಷ್ಟಿರನಿಗೆ ಆದಂತೆ. ಇರಲಿ.. ಹೆಚ್ಚಿಗೆ ಹರಟೆ ಹೊಡೆಯದೇ ನೇರವಾಗಿ ಮಾತಿಗೆ ಬರುತ್ತೇನೆ.
ಪ್ರಶ್ನೆ:
ಜೀವ (ಅಥವಾ ಆತ್ಮ??) ಎಂದರೆ ಏನು? ಜೀವಿಗೆ ಒಂದೇ ಜೀವವೇ? ಅನೇಕ ಜೀವಗಳು ಸೇರಿ ಉನ್ನತ ಜೀವಿವೇ?
ಒಳನೋಟ:
ಉದಾಹರಣೆಗೆ ಮನುಷ್ಯನನ್ನೇ ತೆಗೆದುಕೊಳ್ಳೋಣ. ಮನುಷ್ಯ ಜೀವಿಸುತ್ತಿದ್ದಾನೆ ಎಂದರೆ ಅವನ ಮುಖ್ಯವಾದ ಎಲ್ಲಾ ಅಂಗಗಳೂ ಕೆಲಸ ಮಾಡುತ್ತಿವೆ ಎಂದರ್ಥ. ಅಂಗಗಳ ಕೆಲಸಕ್ಕೆ ಜೀವಕೋಶಗಳು ಬದುಕಿರಬೇಕು ಅಲ್ಲವೇ? ಜೀವಕೋಶಗಳು ಬದುಕಿವೆ ಎಂದರೆ ಜೀವಾಣುಗಳು ಬದುಕಿರಬೇಕು ತಾನೆ? ಅಷ್ಟಕ್ಕೂ ಜೀವಾಣುಗಳಿಗೆ ಕಾರಣವಾಗುವ ಇಂಗಾಲದ ಅಣು - ಅದರ ಎಲೆಕ್ಟ್ರೊನ್ ಬದುಕಿವೆಯೇ? ಇಲ್ಲ ಎಂದಾದರೆ ಬದುಕಿರದ ವಸ್ತುಗಳು ಸೇರಿ ಬದುಕನ್ನು ಹುಟ್ಟಿಸುತ್ತಿವೆಯೇ?ಎಲ್ಲಿಂದ?ಹೇಗೆ?
ಉಪಪ್ರಶ್ನೆ:
ಮನುಷ್ಯನಿಗೆ ಯೋಚನಾ ಶಕ್ತಿ ಇದೆ ಎಂದಾದರೆ ಅಂಗ-ಜೀವಕೊಶ-ಜೀವಾಣುವಿಗೂ ತನ್ನದೇ ಆದ ಯೋಚನಾ ಶಕ್ತಿ ಇರಬೇಕಲ್ಲವೇ?ಪ್ರತಿಯೊಂದು ಜೀವಾಣುವೂ ಆದಷ್ಟು ಕಾಲ ಬದುಕಬೇಕು-ಇನ್ನಷ್ಟು ತನ್ನಂತೆಯೇ ಇರುವ ಜೀವಾಣುವನ್ನು ಹುಟ್ಟಿಸಬೇಕು ಎನ್ನುವ ಯೊಚನೆಯಂತೂ ಮಾಡಿಯೇ ಮಾಡುತ್ತಿರಬೇಕಲ್ಲವೇ? ಇದಕ್ಕೂ ಸಾಧಾರಣ ಮನುಷ್ಯನ ಯೋಚನೆಗಳಿಗೂ ವ್ಯತ್ಯಾಸ ಇದೆಯೇ?
ಹೊರನೋಟ:
ಅನೇಕ ಪ್ರಾಣಿ-ಪಕ್ಷಿ-ಮರ-ಗಿಡ ಮುಂತಾದ ಜೀವಸಂಕುಲಗಳು ಸೇರಿ ಭೂಮಿ. ಅನೇಕ ಇಂತಹ ಗ್ರಹಗಳು ಸೇರಿ ಸೂರ್ಯಮಂಡಲ, ಅನೇಕ ಸೂರ್ಯಮಂಡಲಗಳು ಸೇರಿ ತಾರಾಸಮೂಹ, ಅನೇಕ ಸಮೂಹಗಳು ಸೇರಿ ಬ್ರಹ್ಮಾಂಡ. ಒಳನೋಟದ ದಾರಿಯಲ್ಲೇ ಹೋದರೆ, ತಾರಾಸಮೂಹ-ಬ್ರಹ್ಮಾಂಡಗಳೂ ಬದುಕಿವೆಯೇ? ಅವಕ್ಕೂ ಸ್ವತಂತ್ರ ಯೋಚನೆ ಇದೆಯೇ?
ಇದೆಲ್ಲಾ ಒಂದೇ ಉನ್ನತ ಜೀವಿಯೇ. ಇದೇ ಬ್ರಹ್ಮಜ್ಞಾನವೇ??
ಇಲ್ಲ ಎಂದಾದರೆ ಜೀವನ(ಬದುಕಿರುವವು ಎಂಬರ್ಥದಲ್ಲಿ) ಎನ್ನುವುದು ಎಲ್ಲಿಗೆ ನಿಲ್ಲುತ್ತದೆ?
ಬಹಳ ಪ್ರಶ್ನೆಗಳಾದವು ಅನ್ನಿಸುತ್ತದೆ. ಅಥವಾ ಈ ಪ್ರಶ್ನೆಗಳೇ ಉತ್ತರವೇ??
ನಿಮ್ಮ ಅಭಿಪ್ರಾಯಗಳೇನು?
ಸದ್ಯಕ್ಕೆ ಇಲ್ಲಿಗೆ ಕೊರೆತ ಮುಗಿಸುತ್ತಿದ್ದೇನೆ. ಈ ಎಲ್ಲಾ ಹುಳಗಳೂ ಎಲ್ಲರ ತಲೆಯಲ್ಲೂ ಓಡಾಡಲಿ.

- Login or register to post comments
- 627 hits
- Email this page





RSS:
ಪ್ರತಿಕ್ರಿಯೆಗಳು
Re: ಹೀಗ್ಯಾಕೆ ಚಿಂತನೆ?
ಶ್ರೀನಿಧಿಯವರೆ, ಕಾಕತಾಳೀಯವೊ ಏನೊ ಎಂಬಂತೆ ನಿಮ್ಮೀ ಲೇಖನವನ್ನು ಓದುವ ಮುನ್ನ, ಕುವೆಂಪುರವರ ಸ್ಮರಣಾರ್ಥವಿರುವ www.kuvempu.com ವೆಬ್|ಸೈಟ್|ನ್ನು ನೋಡುತ್ತಿದ್ದೆ. ಅದರ ಮುಖಪುಟದಲ್ಲಿ ನಿಮ್ಮೀ ಜಿಜ್ಞಾಸೆಗೆ ಉತ್ತರವೊ ಎಂಬಂತೆ, ಕುವೆಂಪುರವರ ಈ ಕವನವು ನನಗೆ ಕಂಡು ಬಂದಿತು:
``ಅದರರ್ಥಗಿರ್ಥಗಳು ಸೃಷ್ಟಿಕರ್ಥನಿಗರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರಿಯುವಾ ಯಾವ ಜನ್ಮದ ಮೈತ್ರಿ"
Re: ಹೀಗ್ಯಾಕೆ ಚಿಂತನೆ?
ಅದೆಲ್ಲಾ ಸರಿ. ಆದರೆ "ಹೀಗ್ಯಾಕೆ ಚಿಂತನೆ" ಎಂದು ಕೇಳುವಂತಿಲ್ಲ
ಭಟ್ರು ಔಟಾದ್ರು!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಹೀಗ್ಯಾಕೆ ಚಿಂತನೆ?
On a serious note, though, ಹಲವು ಬಾರಿ ತಲೆಯೊಳಗಿನ ತಳಮಳಕ್ಕೆ ಸ್ವತಃ ಉತ್ತರಿಸಿಕೊಳ್ಳಲಾಗದು. ಬೇರೆಡೆಯಿಂದಲೇ ಉತ್ತರ ಹುಡುಕಬೇಕು. ಸ್ವತಃ ಹುಡುಕಿದರೆ ಹುಲ್ಲುಗಾಡಿನಲ್ಲಿ ಗರಿಕೆ ಹುಡುಕಿದಂತೆ ಹುಡುಕಬೇಕು. ತಕ್ಷಣ ಕಾಕತಾಳೀಯದಂತೆ ಉತ್ತರ ಮುಂದೆ ಬಂದು ಹೋಗುವುದು ಬಹು ವಿರಳ - ಕೆಲವು ಸಮಯ ಹಾಗೆ ಬಂದು ಹೋದದ್ದೂ ಕಣ್ಣಿಗೆ ಕಾಣದೇ ಹೋಗಬಹುದು!
ನಮ್ಮನ್ನು ಬಿಟ್ಟು ಉಳಿದವರಿಗೆ ನಮ್ಮ ಕಷ್ಟಕ್ಕೆ ಉತ್ತರ ಬಹು ಬೇಗ ದೊರೆದೀತು. ಅದು ಸಹಜ ಕೂಡ.
ಆದರೆ ಜೀವನ, ಆತ್ಮ ಇವುಗಳ ಬಗ್ಗೆ ಹೀಗೆ ಉತ್ತರ ಹುಡುಕಿ ಹೋಗುವುದಕ್ಕೇ ಅಧ್ಯಾತ್ಮವೆನ್ನುತ್ತಾರಲ್ಲವೇ? ವಯಸ್ಸಾಗುತ್ತ ಈ ಅಧ್ಯಾತ್ಮ ಚಿಂತನೆ ಹೆಚ್ಚಾಗುತ್ತದೆಂದು ತಮಾಷೆ ಮಾಡುತ್ತಿದ್ದರು ನಮ್ಮ ಅಜ್ಜ, ಆಜ್ಜಿಯವರಿಗೆ.
ನಮ್ಮ ಟಾ_ರಸ ರನ್ನು ಒಮ್ಮೆ ವಿಚಾರಿಸಿ ನೋಡಬೇಕು. ಜ್ಞಾನಿಗಳಾದ ಅಲ್ ಹಾಲ್ ಶಿಷ್ಯ ಟಾ_ರಸ ದಾರಿ ತೋರಿಸಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಹೀಗ್ಯಾಕೆ ಚಿಂತನೆ?
ಟಾ_ರಸನ ಕಥೆ ಚೆನ್ನಾಗಿದೆ ಮಾರಾಯ ಒಳ ಅರ್ಥ ಇನ್ನೂ ಚೆನ್ನ!!
ಅಂದಹಾಗೆ ಕುವೆಂಪು ಅವರು ಹೇಳಿದ ಹಾಗೆ ಮಾಡಿದರೂ ತಲೆ ಕೇಳಬೇಕಲ್ಲ? ಒಂದಲ್ಲ ಒಂದು ಯೋಚನೆ ಮಾಡುತ್ತಲೇ ಇರುತ್ತದೆ.
ತತ್ವಶಾಸ್ತ್ರದ ಅಧ್ಯಯನದಲ್ಲಿ ಸ್ವತಂತ್ರ ಯೋಚನಾ ಶಕ್ತಿ ಅನ್ನುವುದು ಬಹಳ ಹಳೆಯ ಪ್ರಶ್ನೆ. ಒಂದು ರೀತಿಯ ಮೊದಲ ಹೆಜ್ಜೆ. ನನ್ನ ಯೋಚನೆಗಳಿಗೆ ಇಂಬು ಕೊಡುವಂತೆ ಈ ಕೆಲವು ಲೇಖನಗಳು
ಸ್ವತಂತ್ರ ಯೋಚನೆ (ವಿಕಿಪೀಡಿಯ)
ನಿರ್ದಿಷ್ಟತೆ (ವಿಕಿಪೀಡಿಯ)
ಪ್ರಾಯಶಃ ಕುವೆಂಪು ಅವರು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದರೋ ಏನೋ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಹೀಗ್ಯಾಕೆ ಚಿಂತನೆ?
ಡಿವಿಜಿಯವರನ್ನೂ ಆ ಪಟ್ಟಿಗೆ ಸೇರಿಸಿಕೊಳ್ಳಬಹುದು. ಈ ಬಗ್ಗೆ ಆಲೋಚಿಸುತ್ತಾ ಇರುವಾಗಲೇ "ಕಗ್ಗದಲ್ಲಿರುವ ಪ್ರತಿಯೊಂದೂ ಸಾಲು ನನಗೆ ನಿಜವಾಗಲೂ ಅರ್ಥವಾಗೋದು ಯಾವಾಗ" ಎಂದು ಆಲೋಚಿಸುತ್ತಿರುತ್ತೇನೆ.
ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಕೆಲವು ದಿನಗಳ ಹಿಂದೆ ಒಮ್ಮೆ ಲೇಖನ ಬಂದಿತ್ತು -
Free Will: Now you have it, now you don't
ನಮ್ಮೆಲ್ಲರಿಗೆ (at least ನಮ್ಮಲ್ಲಿ ಕೆಲವರಿಗೆ) ಚಿರಪರಿಚಿತ Scott Adams ಕೂಡ ಇದರ ಬಗ್ಗೆ ಇತ್ತೀಚೆಗೆ ಬರೆದಿದ್ದ.
"ತಲೆಕೆಡಿಸಿಕೊಳ್ಳಬೇಡಿ, ತಲೆಕೆಡುತ್ತಿದ್ದರೆ ನಾವೆಲ್ಲ ಮನುಷ್ಯರೇ" ಎಂದರ್ಥ ಅಲ್ಲವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನನ್ನನಿಸಿಕೆ: ಹೀಗೊಂದು ಚಿಂತನೆ
ಭಟ್ತರೇ,
ಕುವೆಂಪುರವರ "ಯಾವ ಜನ್ಮದ ಮೈತ್ರಿ"ಯ ಉಲ್ಲೇಖ ಸಮಯೋಚಿತವಾಗಿದೆ. "ಮಂಕುತಿಮ್ಮನ ಕಗ್ಗ"ದಲ್ಲಿ ಕೂಡಾ ಡಿ.ವಿ.ಜಿ.ಯವರು ಇದೇ ಸಂದೇಶವನ್ನು ಹಲವು ಬಾರಿ ಹೇಳಿದ್ದಾರೆ.
ಹರಿ ಪ್ರಸಾದ್ ನಾಡಿಗರೇ, ಭಟ್ತರಿಗೆ ಹೀಗೆ ಹೇಳಿದರೆ ಹೇಗಿರುತ್ತೆ? "ಎಲ್ಲಾ ಓಕೆ, ಹೀಗ್ಯಾಕೆ ಚಿಂತನೆ ಅಂತ ಪ್ರಶ್ನೆ ಯಾಕೆ?" (ನಮ್ಮ ಉಪ್ಪಿ ಶೈಲಿಯಲ್ಲಿ)
- ಶ್ಯಾಮ್ ಕಿಶೋರ್
Re: ಹೀಗೊಂದು ತತ್ವಜ್ಞಾನ
ಇದನ್ನು ನೋಡಿ - ತತ್ವಜ್ಞಾನ - ಯಾರು ಹೇಳಿದ್ದು ಗೊತ್ತಿಲ್ಲ -
ರಾತ್ರಿ ಮಲಗುವದು ಬೆಳಗ್ಗೆ ಏಳಲೆಂದು.
ತಿನ್ನುವದು ಅಮೇಧ್ಯವಾಗಲೆಂದು.
ಎಲ್ಲದರ ಕೊನೆಗೆ ಬರುವದು
ತಣ್ಣಗೆ ಸಾವು.
ಬಹುಶ: ಇದೇ ನಿಜ ಏನೋ?!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಹೀಗೊಂದು ತತ್ವಜ್ಞಾನ
ನಿಜಾನೋ ಸುಳ್ಳೋ, Hitch Hiker's guide to the Galaxy ಎಷ್ಟರ ಮಟ್ಟಿಗೆ ತತ್ವಜ್ಞಾನವೋ, ಇದೂ ಅಷ್ಟೇ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು
ಶ್ರೀನಿಧಿಯವರೇ,
ನಿಮ್ಮ ಚಿಂತನೆಗಳನ್ನು ಓದಿದ ಮೇಲೆ ನನಗೆ ಇದರ ಬಗ್ಗೆ ಉಲ್ಲೇಖ ಮಾಡದೇ ಇರಲು ಸಾಧ್ಯವೇ ಆಗುತ್ತಿಲ್ಲ.
ಈ ರೀತಿಯ ಚಿಂತನೆಗಳು ನನಗೂ ಆಗಾಗ ಎದುರಾಗುತ್ತಲೇ ಇರುತ್ತವೆ (ಗ್ರೇಡ್ ಕಮ್ಮಿ ಬಂತು ಅಂತಲ್ಲ!). ಆಗೆಲ್ಲ ಪದೇ ಪದೇ "ಸಿದ್ಧಾರ್ಥ"ವನ್ನು ತಿರುವಿ ಹಾಕುತ್ತೇನೆ. ಆಧ್ಯಾತ್ಮಿಕ ಮತ್ತು ಜೀವನದ ಉದ್ದೇಶಗಳ ಬಗೆಗಿನ ಚಿಂತನೆಗಳ ಬಗ್ಗೆ ಬಂದಿರುವ ಅತ್ಯುತ್ತಮ ಪುಸ್ತಕಗಳಲ್ಲೊಂದು ಹರ್ಮನ್ ಹಸ್ (1946ರ ನೊಬೆಲ್ ಪ್ರಶಸ್ತಿ ವಿಜೇತರು) ಅವರ "ಸಿದ್ಧಾರ್ಥ". ಇಪ್ಪತ್ತನೇ ಶತಮಾನದ ಕ್ಲಾಸಿಕ್ ಪುಸ್ತಕಗಳಲ್ಲೊಂದು ಅಂದರೂ ತಪ್ಪೇನಿಲ್ಲ. ಅದರ online edition ಲಭ್ಯವಿದೆ. ಈ ರೀತಿಯ ವಿಚಾರಗಳಲ್ಲಿ, ಉತ್ತರ ಹುಡುಕುವಲ್ಲಿ ಆಸಕ್ತಿಯಿದ್ದಲ್ಲಿ ತಪ್ಪದೇ ಓದಿ. ಅದರ ಕೊಂಡಿ ಇಲ್ಲಿದೆ: ಹರ್ಮನ್ ಹಸ್ ಅವರ ಸಿಧ್ಧಾರ್ಥ
ಇನ್ನೊ ಸ್ವಲ್ಪ ಆಳವಾಗಿ ಶೋಧಿಸುವ ಆಸಕ್ತಿಯಿದ್ದಲ್ಲಿ, ಸ್ವಾಮಿ ರಾಮತೀರ್ಥರ In Woods of God Realization (Vol 1 to 8 ಗಳಲ್ಲಿ Vol 1 to 4) ಓದಿನೋಡಿ. ಅದರ ಪರಿಚಯದ ಕೊಂಡಿ ಇಲ್ಲಿದೆ: ಸ್ವಾಮಿ ರಾಮತೀರ್ಥ
ಆದರೆ ನನಗೆ ವೈಯಕ್ತಿಕವಾಗಿ ಈ ವಿಷಯದಲ್ಲಿ ರಾಮಕೃಷ್ಣ ಪರಮಹಂಸರ ವಿಚಾರಧಾರೆ ಸಮಂಜಸ ಅನ್ನಿಸುತ್ತದೆ. ಈ ಪ್ರಶ್ನೆಗಳು ಎದುರಾದಾಗ ಉತ್ತರ ಹುಡುಕಲೇಬೇಕೆಂಬ ಹಂಬಲ ಮತ್ತು "ಕತ್ತಿಯಲುಗಿನಂತಹ ಸತ್ಯದ ಹಾದಿಯಲ್ಲಿ" ನಡೆಯುವ ಧೈರ್ಯ ಎರಡೂ ಇದ್ದಲ್ಲಿ, ಯಾವ ಪುಸ್ತಕ ಕೂಡಾ ಉಪಯೋಗಕ್ಕೆ ಬರೋದಿಲ್ಲ. ನಮ್ಮ ಪ್ರಶ್ನೆಗೆ ನಾವೇ ಉತ್ತರ ಹುಡುಕಬೇಕು.
- ಶ್ಯಾಮ್ ಕಿಶೋರ್
Re: ಮತ್ತಷ್ಟು: ಉತ್ತಮ ಕೈಪಿಡಿಗಳು
ರಮಣ ಮಹರ್ಷಿ, ಡಿ. ವಿ. ಜಿ (ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ; ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ, ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ), ಜಿಡ್ಡು ಕೃಷ್ಣಮೂರ್ತಿ, .. ಎಲ್ಲರೂ ಹೇಳುವುದು ಇದನ್ನೇ! ಅಷ್ಟೇಕೆ, ವೇದಗಳೂ ಸಹ ಇದನ್ನೇ ಸಾರುತ್ತವೆ.
ಶ್ಯಾಮ್ ಕಿಶೋರ್ ನಿಮ್ಮ ಉಪ್ಪಿ ಶೈಲಿಯ ಉತ್ತರ ಚೆನ್ನಾಗಿದೆ
ಶ್ರೀನಿಧಿಯವರೆ, ನಿಮ್ಮ ಚಿಂತನೆಗಳಿಗೆ ನನ್ನದೂ ಕೆಲ ಕೈಪಿಡಿಗಳಿರಲಿ
೧. ರಮಣ ಮಹರ್ಷಿಯ ಎಲ್ಲಾ ಪುಸ್ತಕಗಳು, ಅದರಲ್ಲೂ ವಿಶೇಷವಾಗಿ, Shambala Dragon ಪ್ರಕಾಶನದ, "The Spiritual Teachings of Bhagawan Ramana Maharshi," ಮತ್ತು
೨. ಜಿಡ್ಡು ಕೃಷ್ಣಮೂರ್ತಿ ಹಾಗೂ ವಿಜ್ಞಾನಿ ಡೇವಿಡ್ ಬ್ಹೋಮ್ ನಡುವಿನ ಸಂವಾದಗಳ ಸಂಕಲನ: The Limits of Thought
Re: ಪುಸ್ತಕ ಜ್ಞಾನ
ಈ ನಿಟ್ಟಿನಲ್ಲಿ ಸರ್ವಜ್ಞನ ವಚನವೊಂದನ್ನು ಹೇಳಲು ಮರತಿದ್ದೆ!
``ಅಕ್ಕರವು ಲೆಖ್ಖಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕೆ
ಎರಡಕ್ಷರವೇ ಸಾಕು - ಸರ್ವಜ್ಞ"
Re: ಪುಸ್ತಕ ಜ್ಞಾನ
"೪೨" !!
ಎರಡಂಕೆಗಳೂ ಇರಬಹುದು!!
ಈ ಗೂಗಲ್ ಕೊಂಡಿ ನೋಡಿ
hitch hiker's guide to galaxy ಓದಿದವರಿಗೆ ಬೇಗ ಅರ್ಥವಾದೀತು.
ಭಟ್ರೇ, ನಾಡಿಗರೇ, ಶ್ಯಾಮ್ ಅವರೇ,
ಚೆಂದದ ಪುಸ್ತಕಗಳನ್ನು ತೋರಿಸಿಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ನಾನು ಆಭಾರಿ.
ನೀವು ಹೇಳಿದಂತೆ ಪುಸ್ತಕಗಳು ನನಗೆ ಉತ್ತರಗಳನ್ನು ಕೊಡದಿದ್ದರೂ ಅವನ್ನು ತಿಳಿಯುವ ದಾರಿಯೆಡೆಗೆ ಬೊಟ್ಟು ಮಾಡುತ್ತವೆ ಅಲ್ಲವೇ? ಆದರೆ ನಾವು ತಲುಪಬೇಕಾದ ಗುರಿಯಡೆಗೆ ನಾವೇ ಹೆಜ್ಜೆ ಹಾಕಬೇಕು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಪುಸ್ತಕ ಜ್ಞಾನ
ಭಟ್ಟರು ಒಂದಷ್ಟು ಬಹಳ ಒಳ್ಳೆಯ ನುಡಿಮುತ್ತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಆದರೆ ತರ್ಕ ಅಧ್ಯಾತ್ಮದ್ದಲ್ಲ - ತರ್ಕ "Free will" ಕುರಿತು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎರಡಕ್ಷರವಿರಲಿ, ಅಥವ "೪೨" ಇರಲಿ
, ಮನಸ್ಸಿನಲ್ಲಿ ಈ ಆಲೋಚನೆಗಳು "ಉತ್ತರ ಕಂಡುಕೊಂಡೆವು" ಎಂದುಕೊಂಡಾಗಲೂ ಬಹುಶಃ ಬರದೆ ಹೋಗದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"