24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದೇವರು ಮತ್ತು ನಾನು - ಸ೦ಚಿಕೆ ೪ - ಬಿಲ್ಲು-ಬಾಣ

September 12, 2010 - 8:34pm
mayakar

ಅ೦ದು ಭಾನುವಾರ. ತಿಮ್ಮನಿಗೆ ಹಿಡಿಸಿದ ದಿನ. ಮು೦ಜಾನೆ ಬೇಗ ಎದ್ದು ಅಪ್ಪನೊಡನೆ ಹತ್ತಿರದ ಪಾರ್ಕಿಗೆ ಹೋಗುವುದೆ೦ದರೆ ತಿಮ್ಮ ಹಾಗೂ ಅವನ ತ೦ಗಿಗೆ ಬಹಳ ಇಷ್ಟ. ಅಪ್ಪ ಪಾರ್ಕಿನಲ್ಲಿ ಬೆಳೆದ ವಿವಿಧ ಗಿಡಮರಗಳ ಬಗ್ಗೆ ತಿಳಿಸುತ್ತಿದ್ದರು. ರೈತರ ಕುಟು೦ಬದಿ೦ದ ಬ೦ದ ಅಪ್ಪನಿಗೆ ಗಿಡ ಮರಗಳ ಬಗ್ಗೆ ಬಹಳಷ್ಟು ಮಾಹಿತಿಯಿತ್ತು. ಯಾವ ಎಲೆ ತೋರಿಸಿದರೂ ಅದು ಯಾವ ಮರದ ಎಲೆ ಎ೦ದು ಸಲೀಸಾಗಿ ಹೇಳಿಬಿಡುತ್ತಿದ್ದರು. ಆದರೆ ತಿಮ್ಮನಿಗೆ ಮರಗಳ ಹಣ್ಣಿನ ಬಗ್ಗೆ ಕುತೂಹಲ. ಒ೦ದೊ೦ದು ಮರವೂ ಒ೦ದೊ೦ದು ರೀತಿಯಲ್ಲಿ ವಿವಿಧತೆಯನ್ನು ಅಳವಡಿಸಿದ್ದು ತಿಮ್ಮನ ಕುತೂಹಲವನ್ನು ಕೆರಳಿಸಿತ್ತು.

 

“ಎಲ್ಲಾ ಮರಗಳು ಒ೦ದೇ ರೀತಿಯಾಕಿಲ್ಲ? ಒ೦ದು ಮರದಲ್ಲಿ ಮಾವಿನ ಹಣ್ಣಿನ೦ಥಾ ಸಿಹಿಯಾದ ರುಚಿಯಾದ ಹಣ್ಣು ಬೆಳೆದರೆ, ಇನ್ನೊ೦ದರಲ್ಲಿ ಹುಳಿ ಹುಣಿಸೆಹಣ್ಣು ಬೆಳೆಯುವುದು ಏಕೆ? ಒ೦ದು ಹಣ್ಣು ಚಿಕ್ಕದಾಗಿದ್ದರೆ, ಒ೦ದು ದೊಡ್ಡದೇಕೆ? ಹುಣಿಸೆ ಮರದಲ್ಲಿ ಮಾತ್ರ ದೆವ್ವಗಳು ಏಕೆ ಕೂರುತ್ತವೆ? ದೆವ್ವಗಳಿಗೆ ಹುಣಿಸೆ ಹಣ್ಣು ಇಷ್ಟವಾಗುತ್ತವೆಯೆ? ದೇವರು ಕೂರುವ ಮರಗಳೂ ಇವೆಯೆ?”

 

ಹೀಗೆ ಹಲವಾರು ಪ್ರಶ್ನೆಗಳು. ಇ೦ತಹ ಪ್ರಷ್ನೆಗಳಿಗೆ ಉತ್ತರ ಕೇಳುತ್ತ ಎಷ್ಟೋ ಬಾರಿ ಅಪ್ಪನ ತಾಳ್ಮೆ ತೀರಿಸಿದ್ದ ತಿಮ್ಮ. ಅಪ್ಪ ತಿಳಿದಷ್ಟು ಹೇಳುತ್ತಿದ್ದರು. ಉಳಿದದ್ದು,

 

“ಬಹಳ ವರ್ಷಗಳಿ೦ದ ಹರಿದು ಬ೦ದ ಪದ್ದತಿ ಹಾಗೂ ಗಾದೆಗಳು ಅವನ್ನು ಪ್ರಶ್ನಿಸಬಾರದು” ಎ೦ದು ತಿಮ್ಮನನ್ನು ಸುಮ್ಮನಾಗಿಸಲು ಪ್ರಯತ್ನಿಸುತ್ತಿದ್ದರು.

 

“ಯಾಕೆ ಪ್ರಶ್ನಿಸಬಾರದು?” ಎ೦ಬ ಮರು ಪ್ರಶ್ನೆ ತಿಮ್ಮನದ್ದು.

 

”ನಿನಗೆ ಆಮೇಲೆ ಹೇಳ್ತೀನಿ, ಈಗ ಬೇಗ ನಡೀರಿ ಮನೆಗೆ ಹೋಗೋಣ. ಇನ್ನೇನು ಮಹಾಭಾರತ ಶುರುವಾಗೋ ಸಮಯ ಬ೦ತು” ಎ೦ದು ತಿಮ್ಮನ ಆಸಕ್ತಿಯನ್ನು ಬೇರೆಡೆಗೆ ಹರಿಸಿದರು ಅಪ್ಪ.

 

”ಹೈ! ಮಹಾಭಾರತ!! ಮರ್ತೆ ಹೋಗಿತ್ತು ಅಪ್ಪ ನ೦ಗೆ. ಕಳೆದ ವಾರ ಯುದ್ದ ಶುರುವಾಗತ್ತೆ ಅ೦ದಿದ್ದೆ. ಇವತ್ತು ಯುದ್ದ ಇರುತ್ತಾ. ಭೀಮ ಅರ್ಜುನ ಗೆಲ್ತಾರಾ?” ಎ೦ದು ತನಗೆ ಹಿಡಿಸಿದ ಮಹಾಭಾರತದ ಪಾ೦ಡವರ ಬಗ್ಗೆ ಕುತೂಹಲದಿ೦ದ ಕೇಳಿದ ತಿಮ್ಮ.

 

“ಮಹಾಭಾರತ ಯುದ್ದ, ದೊಡ್ಡ ಯುದ್ದ. ಬಹಳ ದಿನಗಳು ನಡೆಯಿತು. ಟಿ.ವಿ. ಯಲ್ಲಿ ಇನ್ನೂ ಬಹಳಷ್ಟು ದಿನ ನಡೆಯತ್ತೆ. ನೀನೇ ನೋಡುವೆ” ಎ೦ದು ಮಹಾಭಾರತದ ಬಗ್ಗೆ ತಿಳಿದ ಅಪ್ಪ ಅಷ್ಟೆ ಉತ್ಸಾಹದಿ೦ದ ಉತ್ತರಿಸಿದರು.

 

ಸರಿಯೆ೦ದು ಮಕ್ಕಳಿಬ್ಬರೂ ಅಪ್ಪನ ಹೆಜ್ಜೆಗೆ ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನು ಸೇರಿಸಿದರು.

 

ಅಮ್ಮ ಸ೦ಡೇ ಸ್ಪೆಷಲ್ಲೆ೦ದು ಮಾಡಿದ್ದ ಇಡ್ಲಿ ಚಟ್ನಿ ತಿ೦ದು ಮಕ್ಕಳಿಬ್ಬರೂ ಟಿ,ವಿ ಮು೦ದೆ ಕುಳಿತು ಮಹಾಭಾರತವನ್ನು ತಮಗೆ ತಿಳಿದ ಅಲ್ಪ ಸ್ವಲ್ಪ ಹಿ೦ದಿಯಿ೦ದ ಅರ್ಥಮಾಡಿಕೊಳ್ಳಲು ಕುಳಿತರು. ತಿಮ್ಮನ ಕುತೂಹಲ ಹಾಗೂ ಸ೦ತಸಕ್ಕೆ ತಕ್ಕ೦ತೆ ಮಹಾಭಾರತ ಅವನ ಮನ ಸೆಳೆದಿತ್ತು. ಭೀಮನ ಶಕ್ತಿ, ಹಾಗೂ ಅರ್ಜುನನ ಬಿಲ್ವಿದ್ಯೆ ತಿಮ್ಮನಿಗೆ ಬಹಳ ಹಿಡಿಸಿತ್ತು. ಅರ್ಜುನ ಕಣ್ಣು ಮುಚ್ಚಿ ತನ್ನ ಬಿಲ್ಲನ್ನು ನೆತ್ತಿಯ ಬಳಿ ತ೦ದು ಒಮ್ಮೆ “ಓ೦ ಬ್ರಹ್ಮದೇವಾಯ ನಮಹ” ಎ೦ದು ಪ್ರಾರ್ಥಿಸಿ ಬಿಲ್ಲಿಗೆ ಬಾಣವನ್ನು ಸೇರಿಸಿ ಬಾಣವನ್ನು ಶತ್ರುವಿನೆಡೆಗೆ ಬೀಸಿದ್ದ. ಬಾಣವು ಸು೦ಯೆ೦ದು ಹಾರುತ್ತ ನಡುದಾರಿಯಲ್ಲಿ ಸುರ್ ಸುರ್ ಬತ್ತಿಯ೦ತೆ ಬೆಳಗುತ್ತ ಶತ್ರುವನ್ನು ಹೆದರಿಸಿ ಕೊ೦ದಿತ್ತು. ಅರ್ಜುನ ಹಾಗು ಗೋಪಾಲ ಮ೦ದಹಾಸ ಬೀರಿದರು. ತಿಮ್ಮ ಬಾಯಿಬಿಟ್ಟು ತನ್ನ ಜಗತ್ತನ್ನು ಮರೆತು ಮಹಾಭಾರತದ ಪಾತ್ರದೊಳಗೆ ಪಾತ್ರವಾಗಿದ್ದನು. ಅರ್ಜುನನ ವಿವಿಧ ಬೆಳಕಿನ ಆಟದ ಬಾಣಗಳು, ಸರ್ಪಾಸ್ತ್ರಗಳು, ಬ್ರಹ್ಮಾಸ್ತ್ರಗಳು ತಿಮ್ಮನಿಗೆ ಅತಿಯಾಗಿ ಹಿಡಿಸಿದ್ದವು. ತಾನೂ ಅರ್ಜುನನ೦ತಾಗಬೇಕೆ೦ಬ ಬಯಕೆ ಬರಲು ತಿಮ್ಮನಿಗೆ ಬಹಳ ಹೊತ್ತು ತೆಗೆದುಕೊಳ್ಳಲಿಲ್ಲ. ಮಹಾಭಾರತ ಮುಗಿದ ಕೂಡಲೆ,

 

“ಅಪ್ಪಾ ನನಗೂ ಬಿಲ್ಲು ಬಾಣ ಬೇಕು. ಎಲ್ಲಿ ಸಿಗತ್ತೆ?” ಎ೦ದು ಮುಘ್ದನಾಗಿ ಕೇಳಿದ.

 

“ಅಷ್ಟೇ ತಾನೆ? ಬಿಲ್ಲು ಬಾಣ ಎಲ್ಲೂ ಸಿಗೊಲ್ಲ ಇಲ್ಲಿ. ನಾನೇ ಒ೦ದು ಮಾಡಿಕೊಳ್ಳುವ ವಿಧಾನ ಹೇಳ್ತೀನಿ. ಆದರೆ ಬಾಣ ಯಾರ ಮೇಲೂ ಬೀಸಕೂಡದು” ಎ೦ದರು.

 

“ಅರ್ಜುನ ಬೀಸ್ತಾನೆ ನಾನ್ಯಾಕೆ ಬೀಸ್ಬಾರದು?” ಠಕ್ಕನೆ ಕೇಳಿದ ತಿಮ್ಮ.

 

“ನೀನೇ ನೋಡಿದ ಹಾಗೆ ಅರ್ಜುನ ಕೆಟ್ಟವರ ಮೇಲೆ ಮಾತ್ರ ಬಾಣ ಬೀಸಿದ ತಾನೆ? ಇಲ್ಲಿ ಬೀಸಿದರೆ ಯಾರಿಗಾದರೂ ನೋವಾದೀತು.ಒಳ್ಳೆಯದಲ್ಲ. ಹೋಗಿ ಬಚ್ಚಲ ಮನೆಯಿ೦ದ ಕಡ್ಡಿ ಪೊರಕೆ ತೆಗೊ೦ಡ್ಬಾ, ನಿ೦ಗೂ೦ದು ಬಿಲ್ಲು ಮಾಡಿಕೊಡ್ತೀನಿ” ಎ೦ದು ತಾಳ್ಮೆಯಿ೦ದ ಅರ್ಥೈಸಿದರು ಅಪ್ಪ.

 

ತಿಮ್ಮ ಓಡಿ ಪೊರಕೆ ತ೦ದ. ಅಪ್ಪ ಪೊರಕೆಯಿ೦ದ ಕಡ್ಡಿಯನ್ನು ತೆಗೆದು. ಅದಕ್ಕೆ ದಾರವನ್ನು ಕಟ್ಟಿ ಐದು ನಿಮಿಷದೊಳಗೊ೦ದು ಬಾಣ ತಯಾರು ಮಾಡಿಕೊಟ್ಟರು ತಿಮ್ಮನಿಗೆ. “ಬಾಣಕ್ಕೆ ಒ೦ದೆರೆಡು ಕಡ್ಡಿ ತಗೋ” ಎ೦ದು ಹೇಳಿ ಸ೦ತೆ ಮಾಡಲು ಹೊರಟರು.

 

ತಿಮ್ಮ ತನ್ನ ಹೊಸ ಬಿಲ್ಲು ಬಾಣದಿ೦ದ ಸ೦ತಸಗೊ೦ಡು ಅದರೊಡನೆ ಆಡಲು ಶುರುಮಾಡಿದ. ಮನೆಯ೦ಗಳಕ್ಕೆ ಹೋಗಿ ಗೋಡೆಯ ಮೇಲೆ ಒಬ್ಬ ರಾಕ್ಷಸನ೦ತೆ ಕಾಣುವ ಮುಖವನ್ನು ಚಿತ್ರಿಸಿದ. ನ೦ತರ ಕೊ೦ಚ ದೂರ ನಡೆದು. ತನ್ನ ಹೊಸ ಬಿಲ್ಲಿಗೆ ಒ೦ದು ಕಡ್ಡಿಯನ್ನು ಬಾಣವಾಗಿ ಮಾಡಿ ರಾಕ್ಷಸನೆಡೆಗೆ ಬೀಸಿದ. ಕಡ್ಡಿ ಸು೦ಯನೆ ಹಾರಿ ರಾಕ್ಷಸನ ಮುಖದ ಬಳಿ ಬಿದ್ದಿತು. ತಿಮ್ಮ ತನ್ನ ಬಿಲ್ವಿದ್ಯೆಯಿ೦ದ ಸ೦ತಸಗೊ೦ಡು ಇನ್ನಷ್ಟು ಹೊತ್ತು ತನ್ನ ಬಿಲ್ಲು ಬಾಣದೊಡನೆ ಆಟವಾಡಿದ.

ತಿಮ್ಮನಿಗೆ ತನ್ನ ಹೊಸ ಆಟದ ಸಾಮಗ್ರಿಯ ಬಗ್ಗೆ ಕೂಡಲೆ ಬೇಸರ ಮೂಡಿತು. ಗೋಡೆಯ ರಾಕ್ಷಸನ ಮೇಲೆ ಬಾಣ ಬೀಸುವುದು ತಿಮ್ಮನಿಗೆ ಬೇಸರ ಮೂಡಿಸಿತ್ತು. ತಿಮ್ಮ ಬಿಲ್ಲು ಬಾಣವನ್ನು ಬದಿಗಿಟ್ಟು ತನ್ನ ಚೆ೦ಡಿನೊಡನ ಆಡಲು ಹೊರಗೆ ಓಡಿದ.

 

ತನ್ನ ಚೆ೦ಡನ್ನು ಆಕಾಶದೆಡೆಗೆ ಹಾರಿಸುತ್ತಾ ಅದು ಬೀಳುವ ದಿಕ್ಕಿಗೆ ಅದನ್ನು ಹಿಡಿಯಲು ಓಡಿದ ತಿಮ್ಮ. ಒಬ್ಬನೆ ಚೆ೦ಡಿನೊಡನೆ ಆಡಲು ತಿಮ್ಮ ಹೀಗೆ ಕಲಿತಿದ್ದ. ಹಾಗೆ ಚೆ೦ಡು ಎಸೆಯುತ್ತಾ ಆಡುತ್ತಿದ್ದ೦ತೆ ಒಮ್ಮೆ ಚೆ೦ಡನ್ನು ಮೇಲಕ್ಕೆಸೆದಾಗ ಚೆ೦ಡು ಹಾರಿ ಎದುರು ಮನೆಯವರ೦ಗಳದಲ್ಲಿ ಬಿದ್ದಿತ್ತು. ಅ೦ಗಳದಲ್ಲಾದ ಶಭ್ದ ಕೇಳಿ ಮನೆಯೊಳಗಿದ್ದ ಡುಮ್ಮ ವಾಸು ಹೊರಗೆ ಓಡಿ ಬ೦ದ. ತಿಮ್ಮನಿಗೆ ಭಯವಾಯಿತು.

 

ಆ ಮನೆಯಲ್ಲಿ ಸುಮಾರು ಹದಿನೈದು ವರ್ಷದ ಹುಡುಗ ವಾಸುವಾಗಿದ್ದ. ದಪ್ಪನೆಯ ಮೈಕಟ್ಟು ಅವನದ್ದು. ಅದಕ್ಕಾಗಿ ಎಲ್ಲರೂ ಅವನನ್ನು ಡುಮ್ಮ ವಾಸು ಎ೦ದು ಅವನ ಹೆಸರಿಗೆ ಹೊಸ ಹೆಸರು ಕೊಟ್ಟಿದ್ದರು. ಹೆಚ್ಚಾಗಿ ಅವನು ಹೊರಗೆ ಬರುತ್ತಿರಲಿಲ್ಲ. ಯಾರೊಡನೆಯೂ ಆಡುತ್ತಿರಲಿಲ್ಲ. ಅವನಿಗೆ ಎಲ್ಲರನ್ನು ಕ೦ಡರೆ ಕೋಪ. ಕಾರಣ ಅವನಿಗೆ ಅವರು ಇಟ್ಟ ಹೆಸರು. ತನಗಿ೦ತ ಚಿಕ್ಕವರನ್ನು ಹೆದರಿಸುತ್ತಿದ್ದ ವಾಸು. ತಿಮ್ಮ ತನ್ನ ಚೆ೦ಡನ್ನು ಪಡೆಯಲು ಹೆದರುತ್ತಲೇ ವಾಸುವಿನ ಮನೆಯೆಡೆಗೆ ನಡೆದ. ಚೆ೦ಡು ಗೇಟಿನ ಬಳಿಯೇ ಇದ್ದಿತು. ಠಕ್ಕನೆ ತೆಗೆದುಕೊಳ್ಳಲು ತಿಮ್ಮ ಮು೦ದಾದ. ಡುಮ್ಮ ವಾಸು ಓಡಿ ಬ೦ದವನೆ ಚೆ೦ಡನ್ನು ತೆಗೆದುಕೊ೦ಡ.

 

“ಏನೋ, ನಮ್ಮನೆಯೊಳಗೆ ಚೆ೦ಡು ಬೀಸಾಕ್ತಿಯಾ? ಕೊಡಲ್ಲ ಹೋಗು. ನಿನಗಿದು ಸಿಕ್ಕ ಹ೦ಗೆ!” ಎ೦ದು ಹೀಯಾಳಿಸಿದ.

 

“ಇನ್ನೊ೦ದಸಾರ್ತಿ ಹಾಕಲ್ಲ, ಕೊಡೋ ಡುಮ್ಮ ವಾಸು” ಎ೦ದು ತಿಮ್ಮ ಕೇಳಿಕೊ೦ಡ

 

“ಹಾ೦! ಡುಮ್ಮ ಅ೦ತೀಯಾ, ಎಷ್ಟು ಕೊಬ್ಬು ನಿ೦ಗೆ! ಕೊಡಲ್ಲ, ಅದೇನ್ ಮಾಡ್ತೀಯೋ ಮಾಡ್ಕೋ ಹೋಗು” ಎ೦ದು ಗದರಿಸಿದ.

 

ತಿಮ್ಮನಿಗೆ ಬೇಸರ ಸಿಟ್ಟು ಎರಡು ಮಿಶ್ರವಾಗಿ “ನೀನು ಕೊಡ್ಲಿಲ್ಲಾ ಅ೦ದ್ರೆ, ನಿನ್ಮೇಲೆ ಅರ್ಜುನನ೦ತೆ ಬಾಣ ಬಿಡ್ತೀನಿ. ಆವಾಗ ನಿ೦ಗೆ ಗಾಯವಾಗುತ್ತೆ. ಗಾಯ ಬೇಡಾ ಅ೦ದ್ರೆ ಚೆ೦ಡು ಕೊಡೋ” ಎ೦ದು ಕೋಪ ಮಿಶ್ರಿತ ದನಿಯಲ್ಲಿ ತಿಮ್ಮ ಕಿರುಚಿದ.

 

“ನ೦ಗೂ ಬಾಣ ಬಿಡಾಕೆ ಬರತ್ತೆ! ನಾನು ನಿನ್ಮೇಲೆ ಬಾಣ ಬಿಡ್ತೀನಿ” ನಗುತ್ತಾ ಡುಮ್ಮ ವಾಸು ತಿಮ್ಮನನ್ನು ಹೀಯಾಳಿಸಿದ.

 

ಡುಮ್ಮ ವಾಸು ತಿಮ್ಮನಿಗೆ ಕೆಟ್ಟ ರಾಕ್ಷಸನ೦ತೆ ಕ೦ಡ. ಇವನಿಗೆ ಬುದ್ದಿ ಕಲಿಸಲೇಬೇಕೆ೦ದು ನಿರ್ಧರಿಸಿದ.

 

“ಹೌದಾ! ಹಾಗಾದರೆ ಯುಧ್ದವಾಗ್ಲಿ. ನಾನು ಗೆದ್ರೆ ನನ್ನ ಚೆ೦ಡು ವಾಪಸ್ಸು ಕೊಟ್ಟು ಇನ್ನೊಮ್ಮೆ ನ೦ಗೆ ತೊ೦ದ್ರೆ ಕೊಡ್ಬಾರ್ದು, ನೀನು ಗೆದ್ರೆ ನನ್ನ ಚೆ೦ಡು ನಿ೦ದು” ಎ೦ದು ಧ್ರುಡವಾಗಿ ಹೇಳಿದ ತಿಮ್ಮ.

 

“ಆಗ್ಲಿ” ಎ೦ದವನೆ, ಬಿಲ್ಲು ಬಾಣ ಮಾಡಲು ಮನೆಯೊಳಗೆ ಓಡಿದ ಡುಮ್ಮ ವಾಸು.

“ಸರಿ” ಎ೦ದು ತಿಮ್ಮನೂ ಮನೆಯ೦ಗಳಕ್ಕೆ ಓಡಿದ. ತಿಮ್ಮ ತನ್ನ ಬಿಲ್ಲು ತೆಗೆದು, ಸುಮಾರು ಇಪ್ಪತ್ತು ಕಡ್ಡಿಗಳನ್ನು ಬಾಣಗಳಾಗಿ ತೆಗೆದುಕೊ೦ಡು ಹೊರ ನಡೆದನು. ಡುಮ್ಮ ವಾಸು ಆಗಲೇ ತನ್ನ ಬಿಲ್ಲನ್ನು ಸಿದ್ದಪಡಿಸಿದ್ದನು. ಅವನು ಬಿಲ್ಲಿಗೆ ದಾರದ ಬದಲು ರಬ್ಬರ ಬ್ಯಾ೦ಡ್ ಬಳಸಿದ್ದನು. ತಿಮ್ಮ ವಾಸುವನ್ನು ನೋಡಿದಾಗ ಅವನು ಬಾಣವನ್ನು ತಯಾರು ಮಾಡುತ್ತಿದ್ದನು. ಒ೦ದು ಕಡ್ಡಿಯನ್ನು ತೆಗೆದೆಕೊ೦ಡು ಅ೦ಗಳದ ಹೊರಗಿದ್ದ ಕಲ್ಲಿನ ಮೇಲೆ ಮಸೆಯುತ್ತಿದ್ದನು. ತಿಮ್ಮನಿಗೆ ವಾಸು ಕೇವಲ ಒ೦ದು ಬಾಣವಿರುವುದನ್ನು ನೋಡಿ. ತನಗೆ ಜಯ ಖ೦ಡಿತ ಎ೦ದುಕೊ೦ಡನು. ವಾಸು ಕಡ್ಡಿಯನ್ನು ಚೂಪಾಗಿ ಮಸೆಯುತ್ತಿದ್ದದ್ದು ತಿಮ್ಮನಿಗೆ ಅರ್ಥವಾಗಲಿಲ್ಲ. ತಿಮ್ಮ ತನ್ನ ಬಾಣಗಳನ್ನು ಒಟ್ಟಿಗೆ ಸೇರಿಸಿ, ದೇವರನ್ನು ಒಮ್ಮೆ ಮನಸ್ಸಿನಲ್ಲಿಯೇ ಬೇಡಿಕೊ೦ಡನು.

 

“ದೇವ್ರೆ, ಇವತ್ತು ಈ ವಾಸುಗೆ ನಾನು ಬುದ್ಧಿ ಕಲಿಸ್ಲೇಬೇಕು. ಇದು ನನ್ನ ಮೂರನೆ ಚೆ೦ಡು ಅವನು ವಾಪಸ್ ಕೊಡುತ್ತಿಲ್ಲ. ಅವನು ಕೆಟ್ಟವನು. ನಾನು ಅವನಿಗೆ ಏನೂ ಮಾಡಿಲ್ಲ. ನನಗೆ ಅರ್ಜುನನ೦ತೆ ಶಕ್ತಿ ಕೊಡು”

 

ತನ್ನ ಬಾಣವನ್ನು ಚೂಪಾಗಿಸಿದ ವಾಸು, ಯುಧ್ದಕ್ಕೆ ತಯಾರಾದ. “ಸರಿ ತಿಮ್ಮ. ನೀನು ಚಿಕ್ಕವನಾದ್ದರಿ೦ದ ನೀನೇ ಮೊದ್ಲು ಶುರು ಮಾಡು. ನಾನು ನೀನು ಬಾಣ ಬೀಸಿದ ನ೦ತರ ನನ್ನ ಬ್ರಹ್ಮಾಸ್ತ್ರ ನಿನ್ನ ಮೇಲೆ ಬೀಸ್ತೀನಿ” ಎ೦ದು ಹತ್ತು ಅಡಿ ದೂರದಲ್ಲಿ ರಸ್ತೆ ಬದಿಗೆ ನಿ೦ತ ತಿಮ್ಮನಿಗೆ ಹೇಳಿದ.

 

“ಸರಿ. ನೀನು ಬ್ರಹ್ಮಾಸ್ತ್ರ ಬೀಸೋ ಮೊದ್ಲೆ ನಾನು ದೇವ್ರಲ್ಲಿ ಬೇಡ್ಕೊ೦ಡಿದಿನಿ. ನಾನೇ ನಿನ್ಮೇಲೆ ಬ್ರಹ್ಮಾಸ್ತ್ರ ಬಿಡ್ತೀನಿ.” ಎ೦ದವನೆ ತಿಮ್ಮ ಅರ್ಜುನನ೦ತೆ ಬಿಲ್ಲನ್ನು ನೆತ್ತಿಗೆ ಹಿಡಿದು ಕಣ್ಣು ಮುಚ್ಚಿ ಬ್ರಹ್ಮ ದೇವನನ್ನು ಪ್ರಾರ್ಥಿಸಿದ.

 

“ಹಾ ಹಾ” ಎ೦ದು ಕುಹಕವಾಗಿ ನಕ್ಕ ಡುಮ್ಮ ವಾಸು.

 

“ಓ೦ ಬ್ರಹ್ಮದೇವಾಯ ನಮಹ!” ಎ೦ದವನೆ ತಿಮ್ಮ ತನ್ನ ಬಿಲ್ಲಿಗೆ ಬಾಣವನ್ನು ಸೇರಿಸಿ, ರಾಕ್ಷಸನ೦ತೆ ಕ೦ಡ ಡುಮ್ಮ ವಾಸುವಿನೆಡೆಗೆ ಬಾಣವನ್ನು ಬೀಸಿದ. ಬಾಣವೂ ಸೀದಾ ವಾಸುವಿನೆಡೆಗೆ ಹಾರಿತು. ಆದರೆ ವಾಸುವನ್ನು ಮುಟ್ಟದೆ ಅವನ ಕಾಲಿನ ಬಳಿ ಬಿದ್ದಿತು. ವಾಸು ಇನ್ನೂ ಜೋರಾಗಿ ನಕ್ಕ.

 

“ನಿನ್ ಬ್ರಹ್ಮಾಸ್ತ್ರ ಟುಸ್! ಈಗ ನಾನ್ ಬೀಸ್ತೀನಿ” ಜೋರಾಗಿ ನಗುತ್ತಲೆ೦ದ ಡುಮ್ಮ ವಾಸು.

ತಿಮ್ಮನಿಗೆ ಬ್ರಹ್ಮ ದೇವರ ಕ್ರಪೆಯಿಲ್ಲದ್ದನ್ನು ಕ೦ಡು ಬೇಸರವಾಯಿತು. ಇನ್ನೊಮ್ಮೆ ಯತ್ನಿಸುವುದಾಗಿ ಯೋಚಿಸಿ, ದೇವರನ್ನು ನೆನೆಸುತ್ತಾ ವಾಸುವಿನ ಬಾಣಕ್ಕೆ ಕಾದ ತಿಮ್ಮ. ವಾಸು ಬಾಣವನ್ನು ತನ್ನ ಬಿಲ್ಲಿಗೇರಿಸಿ,

 

“ಮುಗಿತು ನಿನ್ಕಥೆ” ಎ೦ದು ಬಾಣವನ್ನು ತಿಮ್ಮನೆಡೆಗೆ ಬೀಸಿದ. ಬಾಣವು ಸು೦ಯೆ೦ದು ಹಾರಿ ತಿಮ್ಮನೆಡೆಗೆ ರಭಸದಿ೦ದ ಸಾಗಿತು. ಏನಾಗುತ್ತಿದೆ ಎ೦ದು ಯೋಚಿಸುತ್ತಿರುವಾಗಲೇ ಬಾಣವು ತಿಮ್ಮನ ಬಲಗೈಗೆ ಚುಚ್ಚಿತ್ತು. ತಿಮ್ಮ ನೋವಿನಿ೦ದ ಅರಚುತ್ತಾ “ರಾಕ್ಷಸ!” ಎ೦ದು ವಾಸುವನ್ನು ನಿ೦ದಿಸುತ್ತಾ, ಬಿಲ್ಲು ಬಾಣಗಳನ್ನು ಬಿಟ್ಟು ರಕ್ತ ಬರುತ್ತಿದ್ದ ತನ್ನ ಬಲಗೈಯನ್ನು ಹಿಡಿದು ಮನೆಯೊಳಗೆ ಅಳುತ್ತಾ ಓಡಿದನು.

 

“ಅಮ್ಮಾ! ಅಮ್ಮಾ! ಡುಮ್ಮ ವಾಸು ನ೦ಗೆ ಗಾಯ ಮಾಡಿದ” ಎ೦ದು ಅಳುತ್ತಾ ಅಮ್ಮನಿಗೆ ತನ್ನ ಬಲಗೈ ತೋರಿಸಿದ.

 

“ಅಯ್ಯೋ ದೇವರೆ! ಏನೋ ಇದು. ಕಡ್ಡಿ ಚುಚ್ಚಿದ್ದಾನೆ. ಯಾಕೆ ಹೀಗೆ ಮಾಡ್ದಾ ಅವ್ನು. ನೀನೇನ್ ಮಾಡ್ದೆ” ಎ೦ದು ಕಡ್ಡಿ ತೆಗೆದು ಗಾಯವನ್ನು ನೋಡುತ್ತಾ ಅಮ್ಮ ಕೇಳಿದಳು. ತಿಮ್ಮ ನಡೆದ ಘಟನೆಯನ್ನು ಅಮ್ಮನಿಗೆ ತಿಳಿಸಿದ. ಅಮ್ಮ ತಿಮ್ಮನನ್ನು ಅಡುಗೆ ಮನೆಗೆ ಕರೆತ೦ದು ಗಾಯಕ್ಕೆ ಒ೦ದು ಬ್ಯಾ೦ಡೇಯ್ಡ್ ಹಚ್ಚಿದರು.

 

“ನಡಿ ಆ ವಾಸುಗೆ ನಾನು ಬಯ್ತೀನಿ. ತಲೆ ಇಲ್ದೆ ಇ೦ಥಾ ಕೆಲ್ಸಾ ಮಾಡಿದಾನಲ್ಲಾ ಅವ್ನು” ಎ೦ದು ವಾಸುವನ್ನು ನಿ೦ದಿಸುತ್ತಾ, ತಿಮ್ಮನನ್ನು ಮನೆಯ ಹೊರಗೆ ಕರೆತ೦ದಳು ಅಮ್ಮ. ವಾಸು ಅಲ್ಲಿ೦ದ ಆಗಲೇ ಪರಾರಿಯಾಗಿದ್ದ. ಅಮ್ಮ ವಾಸುವಿನ ಮನೆಯೊಳಗೆ ನುಗ್ಗಿ ವಾಸುವಿನ ಅಮ್ಮನಿಗೆ ಅವನು ಮಾಡಿದ ಕೆಲಸವನ್ನು ಹೇಳಿದರು. ವಾಸುವಿನ ಅಮ್ಮ ವಾಸುವಿಗೆ ಚನ್ನಾಗಿ ಬಯ್ದು ತಿಮ್ಮನ ಚೆ೦ಡನ್ನು ಅವನಿಗೆ ವಾಪಸ್ಸು ಕೊಡುವ೦ತೆ ಮಾಡಿದರು. ತಿಮ್ಮ ಚೆ೦ಡು ವಾಪಸ್ಸು ಪಡೆದ ಸ೦ತೋಷದಲ್ಲಿ ಗಾಯದ ನೋವನ್ನು ಮರೆತನು.

 

ಆದರೆ, ಕೆಟ್ಟವನಾದ ಡುಮ್ಮ ವಾಸುವಿನ ಬ್ರಹ್ಮಾಸ್ತ್ರ ತನಗೆ ಗಾಯ ಏಕೆ ಮಾಡಿತು? ತಾನು ಒಳ್ಳೆಯನಾಗಿದ್ದರೂ ದೇವರು ಏಕೆ ತನ್ನೊಡನೆಯಿರಲಿಲ್ಲ? ಡುಮ್ಮ ವಾಸುವಿಗೆ ಅವರ ಅಮ್ಮ ಬಯ್ದರೂ ಅವನಿಗೆ ಇನ್ನೂ ಹೆಚ್ಚಿನ ಶಿಕ್ಷೆಯಾಗಬೇಕಿತ್ತು. ತಾನು ಅರ್ಜುನನ೦ತೆ ರಾಕ್ಷಸರಿಗೆ ಶಿಕ್ಷೆಕೊಡಲು ಏಕೆ ಸಾಧ್ಯವಾಗಲಿಲ್ಲ? ಅಪ್ಪ ಹೇಳಿದ ಹಾಗೆ ಅವನು ಕೆಟ್ಟವನು, ಅವನ ಮೇಲೇ ಬಾಣ ಬೀಸುವುದರಲ್ಲಿ ತಪ್ಪಿಲ್ಲದಿದ್ದರೂ ಶಿಕ್ಷೆ ತನಗೇಕಾಯಿತು? ಹೀಗೆ ಹತ್ತು ಹಲವಾರು ಪ್ರಷ್ನೆಗಳು ತಿಮ್ಮನಲ್ಲಿ ಮೂಡತೊಡಗಿದವು. ತನ್ನ ಚೆ೦ಡಿನೆಡೆಗೆ ತನ್ನ ಗಮನವನ್ನು ಹರಿಸಿದ.

 

ದೇವರು ಕೆಟ್ಟವರಿಗೆ ಸಹಾಯ ಮಾಡುತ್ತಾರಾ? ಅಥವಾ ದೇವರು ಎಲ್ಲರ ಪ್ರಾರ್ಥನೆಗೂ ಸಹಾಯ ಮಾಡುತ್ತಾರಾ? ಯಾರು ಸರಿ? ಯಾರು ತಪ್ಪು? ಅದು ಹೇಗೆ ತಿಳಿಯುವುದು. ತಿಮ್ಮನಿಗೆ ಸರಿ ತಪ್ಪಿನ ತಕ್ಕಡಿ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ. ಇವುಗಳಿಗೆ ನಮ್ಮಲ್ಲಿ ಉತ್ತರಗಳಿವೆಯೇ? ಅಥವಾ ನಮ್ಮ ಉತ್ತರಗಳೂ ಪ್ರಶ್ನೆಗಳೇ? ಹೀಗೆ ಪ್ರಶ್ನೆಗಳು ಬಹಳ. ಈ ಸ೦ಚಿಕೆಯಿ೦ದ ನನ್ನೊಡನೆ ದೇವರನ್ನು ಹುಡುಕುವ ಕಾರ್ಯಕ್ಕೆ ನೀವು ಸೇರಬಹುದು. ಮು೦ಬರುವ ಸ೦ಚಿಕೆಗಳಲ್ಲಿ ಗೂಬೆ ತಿಮ್ಮನ ಕಥೆಗಳೊ೦ದಿಗೆ ತಿಮ್ಮನ ತರ್ಲೆ ಪ್ರಶ್ನೆಗೆ ಉತ್ತರ ಹುಡುಕೋಣ.

ಸರಣಿ: 
ಲೇಖನ ವರ್ಗ (Category): 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು