ಅಲ್ಲಮ ಸಿದ್ದರಾಮರು ಕಲ್ಯಾಣದ ಹೊರವಳಯದಲ್ಲಿ ಬಂದು ನಿಂತರು . ಕಲ್ಯಾಣವನ್ನು ಅವರು ತಲುಪುತ್ತಿದ್ದಂತೆ ಕಲ್ಯಾಣದ ದಾರಿ ಗೌಜಿನಿಂದ ತುಂಬಿದ್ದು ಕಂಡಿತು . ಪಟ್ಟಣಕ್ಕೆ ಪ್ರತ್ಯೇಕ ಮಾರ್ಗದಲ್ಲಿ ಅವಸರದಿಂದ ಪ್ರವೇಶಿಸುತ್ತಿದ್ದ ಮತ್ತು ನಿರ್ಗಮಿಸುತ್ತಿದ್ದ ರಥಗಳು ಮತ್ತು ಆಶ್ವಗಳು ; ಇನ್ನೊಂದು ಮಾರ್ಗದಲ್ಲಿ ಸಾಲಾಗಿ ನಿಂತಿದ್ದ ಸರಕು ತುಂಬಿದ ಬಂಡಿಗಳು , ತೆರುವ ಸುಂಕವನ್ನು ತೆತ್ತು ನಿಧಾನಕ್ಕೆ ಪುರ ಪ್ರವೇಶ ಮಾಡುತ್ತಿದ್ದವು . ಒಳ ಪ್ರವೇಶಿಸುವ ಎಲ್ಲ ವಾಹನಗಳು , ಪಾದಚಾರಿಗಳು ಮತ್ತು ಪ್ರಾಣಿಗಳ ಸಕಲ ವಿವರಗಳನ್ನು ನಮೂದಿಸಿಕೊಳ್ಳುವ ಅನೇಕ ಸುಂಕದ ಕಟ್ಟೆಗಳು . ಇವೆಲ್ಲವನ್ನು ಕಂಡು ಅಚ್ಚರಿಗೊಂಡ ಸಿದ್ದರಾಮರು " ಸೊನ್ನಲಿಗೆ , ಮಂಗಳವೇಡೆಗಳಿಗಿಂತ ಇದು ಬಹಳ ದೊಡ್ಡ ನಗರ . ಇದರ ಪಾರುಪತ್ಯ ಬಸವೇಶ ಬಿಜ್ಜಳಾದಿಗಳಿಗೆ ಸಾಮಾನ್ಯವಲ್ಲ ,, ಎಂದರು .
ಪ್ರಭುದೇವರು ನಗುತ್ತಾ "ಕಲ್ಯಾಣ ಸಾಮಾನ್ಯ ನಗರವಲ್ಲ . ರಾಜಹಂಸಗಳು ತೇಲುವ ಸುಂದರಕೊಳ ; ಹಾಗೇಯೇ ಪಕ್ಕದಲ್ಲಿಯೇ ಕೊಳದ ಪರಿಚಯವೇ ಇಲ್ಲದೆ ಜವಾಬ್ದಾರಿಯ ಪರಿವೆ ಇಲ್ಲದೆ ಹರಟುತ್ತಾ , ಕೊಚ್ಚೆಗಳಲ್ಲಿಯೇ ಮುಳುಗೇಳುತ್ತಿರುವ ಕ್ರಿಮಿಗಳ ರಾಸಿಗಳು . ಒಂದೆರಡಲ್ಲ ಇದರ ಅದ್ಭುತಗಳು ! ಅರಸನಿಷ್ಟ ರಾಜದೂತರು ; ನಿಷ್ಟೆಯ ವೇಷ ತಳೆದ ಧೂರ್ತ ವಿದೂಷಕರು , ಹೊರಗೆ ಢಂಬದಿಂದ ಮೆರೆಯುತ್ತಾ , ಒಳಗೆ ಅಧಿಕಾರಸ್ಥರ ಕಾಲು ನೆಕ್ಕುವ ಶ್ವಪಚೋಪಜೀವಿಗಳು . ಹೊರಗೆ ನೋಡಲು ಸಾತ್ವಿಕ ಸುಪ್ರಸಿದ್ದ ಆಚಾರ ನಿಷ್ಟರು ; ಒಳಗೆ ಪರಧನ , ಪರಸ್ತ್ರೀ ಪರಸ್ವತ್ತುಗಳಿಗಾಗಿ ಬಾಯಿ ಬಾಯಿ ಬಿಡುತ್ತಿರುವ ಹಸೀ ಲಂಪಟರು . ಯಾರು ಬೇಕು ಸಿದ್ದರಾಮಯ್ಯ ನಿನಗೆ ? ರಾಜಕಾರಣದ ವಿಸ್ತಾರವಾದ ಮಜಲುಗಳು ಬೇಕೋ ? ಅಧ್ಯಾತ್ಮದ ಆಳವರಿಯಲಾರದದ ಅನುಭಾವ ಬೇಕೋ ? ನೀನು ಇಷ್ಟಪಡುವುದೆಲ್ಲ ಎಟುಕುತ್ತದೆ . ಹಾಗೆಯೇ ಅಧ್ಯಯನ ಧ್ಯಾನಸಂಪನ್ನ ಜ್ಞಾನಾರ್ಜನೆಯ ತಾಣಗಳು ಬೇಕೆ ? ಲೆಕ್ಕವಿಲ್ಲದಷ್ಟು ಅಂತಹ ಕೇಂದ್ರಗಳ ಮಾಹಿತಿಯನ್ನೇ ಚನ್ನಬಸವಣ್ಣ ಬಾಗಿಲಲ್ಲಿಯೇ ಟಂಕಿಸಿ ಹಾಕಿಸಿದ್ದಾರೆ ಆಯ್ಕೆ ಮಾತ್ರ ಅಂತರಂಗದ ಅಂತಸ್ತಿಗೆ ಬಿಟ್ಟದ್ದು .
" ಚನ್ನಬಸವಣ್ಣನವರ ಶಾಸನವನ್ನು ನಾನೂ ನೋಡಿದೆ , ಅದನ್ನು ನೋಡಿ ಅಚ್ಚರಿವಡೆದು ನಿಂತುಬಿಟ್ಟೆ , ಅಷ್ಟೆಲ್ಲಾ ಇರುವುದು ನಿಜವೆ ಕಲ್ಯಾಣಪಟ್ಟಣದಲ್ಲಿ ?
" ಅದನ್ನು ಪದಶಃ ಅರ್ಥವಿಸಲು ಏಕೆ ಹೋದೆ ಸಿದ್ದರಾಮಯ್ಯ ? ಅದರ ಅರ್ಥ ಸೀಮಿತವಲ್ಲ , ಸೀಮಾತೀತ . ಕಲ್ಯಾಣವೆಂಬುದು ಬರಿಯ ಪಟ್ಟಣವಲ್ಲ , ’ಹದಿನಾಲ್ಕು ಭುವನಕ್ಕೆ ಕಳಶವೆಂದಿನಿಸುವ ರುದ್ರಲೋಕವೆ ಮರ್ತ್ಯಲೋಕಕ್ಕಿಳಿತಂದು ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯ , ಎನ್ನುತ್ತಾರೆ ಚನ್ನ ಬಸವಣ್ಣ , ಏನು ಅದರ ಅರ್ಥ ? ಇಳೆಗಿಳಿದ ಅಪರೂಪದ ಮಾನವ ಜನ್ಮವೆಂದಲ್ಲವೆ . ಅರ್ಥವಾಗದವರಿಗೆ ಹೇಗೆ ಹೊಳೆದೀತು ಆದರ ಅರ್ಥ ? ಮನುಷ್ಯ , ಮನುಷ್ಯನ ದೇಹ ಎಂದ ಮೇಲೆ ಅಲ್ಲಿ ಏನಿಲ್ಲ ? ಏನುಂಟು ?ಸುಜ್ಞಾನದ ದೀವಟಿಕೆ ಹೊತ್ತಿ ಉರಿಯುತ್ತಿಲ್ಲವೇ ? ಅಜ್ಞಾನದ ಅಂಧಕಾರ ಮುತ್ತಿ ಕಾಡುತ್ತಿಲ್ಲವೇ ? ಅದರ ಪರಿಯನ್ನು ವಿವರಿಸಲು ಚನ್ನಬಸವಣ್ಣ ಹೆಣೆದ ಶಬ್ದಜಾಲ ಈ ಶಾಸನ . ಚನ್ನಬಸವಣ್ಣ ಹೊರಗೆ ತೋರಿಸಿರುವುದು ಕಲ್ಯಾಣ ಪಟ್ಟಣದ ವೀಧಿಗಳ ಪರಿಚಯ ; ಒಳಗೆ ಮಾಡಿಸುತ್ತಾ ಹೋಗುವುದು ಆತ್ಮ ನಡೆದು ಬಂದ ದಾರಿಗಳ ಇಣುಕು ನೋಟ . ಹೊರಗೆ ಕಲ್ಯಾಣದಲ್ಲಿ ಅಚ್ಚುವಡೆದಿರುವ ಅರಮನೆ ಮಂತ್ರಿ ಪಸಾಯಿತರ ಗೃಹಗಳ ಬಣ್ಣನೆ , ಒಳಗೆ ಮನೋಶೋಧನೆಯ ವಿಚಿತ್ರ ಕೋಶಗಳ ವ್ಯೂಹಾತ್ಮಕ ರಚನೆಗಳ ವಿನ್ಯಾಸದ ವರ್ಣನೆ ,, ಯಾವುದನ್ನು ನಂಬುತ್ತೀಯ ?
ತನುವೆಂಬ ದೇವಸ್ಥಾನದೊಳಗೆ
ಮಸ್ತಕಾಗ್ರವೆಂಬ ಸಜ್ಜಾಗೃಹದಲ್ಲಿ
ಪ್ರಾಣಲಿಂಗ ಸ್ವಯಂಭು ಪ್ರತಿಷ್ಟೆಯಾಗಿರಲು ..........
ಜ್ಞಾನ ಕ್ರಿಯೆ ಎರಡು ,
ಪಾದ ದ್ವಯವೆರಡು ಕೂಡಿ
ನಾಲ್ಕು ಗಾಲಿಗಳಂ ಹೂಡಿ
ಪಂಚೇಂದ್ರಿಯಗಳೆಂಬ ಪತಾಕೆಗಳ ಧರಿಸಿ
ಏಕೋಭಾವವೆಂಬ ಕಳಶವನಿಟ್ಟು
ದಶವಾಯುಗಳೆಂಬ ಪಾಶಮಂ ಬಂಧಿಸಿ.................
ಆನಂದವೆಂಬರಸು ನಿರಾಳವೆಂಬಪರಿಮಿತ ಪಟ್ಟಣವ
ಪ್ರವೇಶವಾದನು ಕಾಣಾ ಗುಹೇಶ್ವರ
ಚನ್ನಬಸವಣ್ಣ ಹುಡುಗ , ಹೊರಗೆ ನೋಡಿದರೆ ; ಒಳಗೆ ಪ್ರವೇಶಿಸಿದರೆ ಅತ್ಮವೃದ್ದ ಜ್ಞಾನಾವೃತ ಜೀವ ಅದು . ಬಸವಣ್ಣನ ಆಟಾಟೋಪ ಒಂದು ಘಳಿಗೆಯೂ ಇಲ್ಲ ; ಚನ್ನಬಸವಣ್ಣನೆಂಬ ಜ್ಞಾನಜ್ಯೋತಿ ಇಲ್ಲದಿದ್ದರೆ !
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ
ಕಾಳಾಂಧನೆಂಬ ಕಪ್ಪೆ -
ಅಂತಹ ಕಾಳೋರಗನ ಏಳ ನುಂಗಿತ್ತು
ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ
ಚೆನ್ನಬಸವಣ್ಣನಿಂದ ಗುಹೇಶ್ವರಲಿಂಗವೆಂಬುದು ಪ್ರಾಮಾಣಾಯಿತ್ತು
ಸಿದ್ದರಾಮರು "ನನಗಿದು ಹೊಳೆದೇ ಇರಲಿಲ್ಲ ಪ್ರಭುವೇ , ಆ ಇಡೀ ಶಾಸನವನ್ನು ಪ್ರತಿ ಮಾಡಿಕೊಳ್ಳುತ್ತೇನೆ , ಅದನ್ನು ನಾನು ಅಭ್ಯಾಸ ಮಾಡಬೇಕು ,,
" ಸಿದ್ದರಾಮಯ್ಯ , ಆ ಶಾಸನವನ್ನೇಕೆ ಪ್ರತಿಮಾಡಿಕೊಳ್ಳಲು ಹೋಗುವೆ ? ಆ ಚನ್ನಬಸವಣ್ಣನಿರುವ ಊರಿಗೇ ಬಂದಿದ್ದೀಯಲ್ಲ , ಅವರ ಹತ್ತಿರ ತಾನೇ ನೀನು ಹೋಗುತ್ತಿರುವುದು ; ಅಲ್ಲಿ
ಅಂತಹ ಎಷ್ಟು ಎಣಿಕೆ ಇಲ್ಲದ ವಚನಗಳು ಬೇಕು ? ನೀನು ಶ್ರೀಶೈಲದಲ್ಲಿ ಕಲಿತುದು ಮಾತ್ರ ವಿದ್ಯೆಯಲ್ಲ , ಅಲ್ಲಿ ಕಾಳಾಮುಖ ದರ್ಶನವನ್ನು ನಿನ್ನ ಗುರು ಕಪಿಲ ಸಿದ್ದರು ಮಾಡಿಸಿದರು ; ಇಲ್ಲಿ ನಿನಗಾಗಿ ಬಹು ಮುಖ ದರ್ಶನ ಕಾಯುತ್ತಾ ಕುಳಿತಿದೆ . ಒಂದು ಕಾಳಾಮುಖ , ಒಂದು ಕಾಪಾಲಿಕ , ಒಂದು ಪಾಶುಪತ ಇವೆಲ್ಲ ಏನು ? ಗಾಣ ತಿರುಗುವ ಎತ್ತಿನ ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿಗಳು , ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ವೃಷಭ ಬಲು ದೂರ ಸಂಚರಿಸಿರುವುದಾಗಿ ಭಾವಿಸಿರುತ್ತದೆ ಆದರೆ ಅದು ಹೊಡೆದಿರುವುದು ಮಾತ್ರ ಗಾಣಕ್ಕೆ ಸುತ್ತು . ಹಾಗೆಯೇ ಈ ಮತ ಪಂಥಗಳೆಂಬ ಗಾಣಗಳು ಜೀವವನ್ನು ತನ್ನ ಸುತ್ತ ಸುತ್ತು ಹೊಡೆಸುತ್ತವೆ . ಮುಂದಕ್ಕೆ ಕೈ ಹಿಡಿದು ನಡೆಸುವ ಯೋಗ್ಯತೆ ಅವಕ್ಕಿಲ್ಲ . ಕಣ್ಣಿನ ಕಪ್ಪು ಪಟ್ಟಿಯನ್ನು ಹರಿದು , ಸ್ವಛ್ಛಂದ ವಿಚಾರದ ಲಹರಿಗೆ ತೆರೆದುಕೊಳ್ಳದಲ್ಲದೆ ನವ ಜ್ಯೋತಿಯೂ ಇಲ್ಲ ; ನವ ವಾಯುವೂ ಇಲ್ಲ ; ನವ ದಿಗಂತಗಳೇ ಇಲ್ಲ . ಶ್ರೀಶೈಲದಲ್ಲಿ ನೀನು ಕಲಿತ ವಿದ್ಯೆಯ ಮುಂದಿನ ಭಾಗ ಇಲ್ಲಿದೆ ನಿನಗೆ ; ಈ ಕಲ್ಯಾಣದಲ್ಲಿ . ನಿನ್ನನ್ನು ಚನ್ನಬಸವಣ್ಣ ಕೈ ಹಿಡಿದು ನಡೆಸುತ್ತಾರೆ , ನಿನ್ನ ಶ್ರೀಶೈಲದ ಗುರು ಕಪಿಲ ಸಿದ್ದ ಮಲ್ಲಿಕಾರ್ಜುನರ ಮುಂದಿನ ಅವತಾರವೇ ಜ್ಞಾನಸಿದ್ದನಾದ ಚನ್ನಬಸವಣ್ಣನ ರೂಪದಲ್ಲಿ ಮೈದಳೆದು ನಿಂತಿದೆ . ನಿನಗೆ ನೆನಪಿದೆಯೇ ? ನಿನಗೆ ಅನುಗ್ರಹಿಸಬೇಕಾದುದನ್ನೆಲ್ಲ ಅನುಗ್ರಹಿಸಲಾಗುತ್ತಿಲ್ಲ ಸಿದ್ದರಾಮ ! ಈಗ ಅದು ನನ್ನಿಂದ ಸಾಧ್ಯವೂ ಇಲ್ಲ , ಆದರೆ ಖಂಡಿತ ಈ ಜನ್ಮದಲ್ಲಿಯೇ ನನ್ನನ್ನೇ ಧಾರೆ ಎರೆದು ನಿನ್ನೊಳಗೆ ಜ್ಯೋತಿಯಾಗಿ ಉರಿದು ಹೋಗುತ್ತೇನೆ . ಎಂದು ನಿನ್ನ ಗುರು ನಿನಗೆ ವಚನವಿತ್ತಿರಲಿಲ್ಲವೆ ? ಅದನ್ನು ಪೂರೈಸಲೆಂದೇ ನಾನು ನಿನ್ನನ್ನು ಇಲ್ಲಿಗೆ ಕರೆ ತಂದುದು , ಕಾರಣ ಜನ್ಮನಾದ ಚನ್ನಬಸವಣ್ಣನ ಮರ್ತ್ಯದ ಇರವು ಹೆಚ್ಚುದಿನ ಇಲ್ಲ ಸಿದ್ದರಾಮಯ್ಯ , ಕಲ್ಯಾಣದ ಪ್ರಣತಿಯನ್ನು ಮುಂದೆ ಹಿಡಿದು ನಡೆಸುವ ಧೀರ ಬೇಕು ; ಅದಕ್ಕಾಗಿ ಹಾತೊರೆಯುತ್ತಿದೆ ಚನ್ನ ಬಸವಣ್ಣನ ಆತ್ಮ ಜ್ಯೋತಿ , ಆ ಧೀರ ನೀನೆಂದು ನನ್ನ ಬಗೆಗೆ ಗೋಚರಿಸಿದುದರಿಂದ ನಿನ್ನನ್ನು ನಿನ್ನ ಕಾರ್ಯಕ್ಷೇತ್ರದಿಂದ ವಿಮುಖನನ್ನಾಗಿ ಮಾಡಿ ಇಲ್ಲಿಯವರೆಗೆ ಕರೆತರಬೇಕಾಯಿತು ,,
ಆಗ ಆರ್ತರಾದ ಸಿದ್ದರಾಮರು , " ಪ್ರಭುವೇ ನೀವು ಕಾರಣ ಜನ್ಮರು , ನಿಮ್ಮನ್ನು ಅರಿಯಲು ನಾನೆಷ್ಟರವನು ? ಕೈ ಹಿಡಿದು ಕರೆ ತಂದಿದ್ದೀರಿ , ಮುನ್ನಡೆಸುವ ಹೊಣೆ ನಿಮ್ಮದೇ , ನಿಮ್ಮ ಆಜ್ಞಾಧಾರಕ ಶಿಶು ಮಾತ್ರ ನಾನು ,, ಎಂದು ಅಂತಃಕರಣದುಂಬಿ ನುಡಿದರು ,
" ಹಾಗಲ್ಲ ಸಿದ್ದರಾಮಯ್ಯ , ಇಲ್ಲಿ ನಾನೂ ನೀನೂ ಎಷ್ಟರವರು ಎನ್ನುವುದು ಪ್ರಶ್ನೆಯಲ್ಲ , ತುಂಬಿಸಿಕೊಳ್ಳುವ ಯೋಗ್ಯತೆ ಇರುವ ಪಾತ್ರಕ್ಕೆ ಮಾತ್ರ ಧಾರೆ ಎರೆಯಲು ಸಾಧ್ಯ? ಅಪಾತ್ರಕ್ಕೆ ನಾನೆಲ್ಲಿಂದ ತಂದು ಸುರಿಯಲಿ ? ನನ್ನ ಪಾತ್ರವೂ ನಿನ್ನಹಾಗೆಯೇ ; ಸದ್ಯಕ್ಕೆ ಸುರಿಯುವ ಪಾತ್ರದಲ್ಲಿದ್ದೇನೆ ಸುರಿಯುತ್ತೇನೆ . ಪಾತ್ರ ಬದಲಾದರೆ ನೀನೇ ಸುರಿಯಬೇಕಾಗಿ ಬರಬಹುದು ಯಾರು ಬಲ್ಲ ,,ಎಂದು ನಕ್ಕುಬಿಟ್ಟರು .
ಕಾಲು, ಕರ , ಕಾಯ , ಜೀವದೊಳಗಾಡುವ ಭಾವವೇ ದೈವವೇ ?
ತಾನೆಂಬುದ ತಾನಳಿದಲ್ಲಿ ಗುಹೇಶ್ವರ ಲಿಂಗವು ತಾನೆ
ಕರ ಚರಣಾದಿಗಳು ಬೇರಾದವಲ್ಲದೆ
ಅರಿದು ಮುಟ್ಟುವುದೊಂದೆ
ಆತ್ಮಬಿಂದುವಿನೊಂದು ಸಾಗರದಲ್ಲಿ
ಸಸಿ ಹಲವು ನಾಮ ಬೆಳೆವಂತೆ !
ಗುಹೇಶ್ವರ ಲಿಂಗದಲ್ಲಿ ನಾನೀನೆಂಬ ಭಾವವಿಲ್ಲ ಸಿದ್ದರಾಮಯ್ಯ
ಸಿದ್ದರಾಮರು ಪ್ರಭುವಿನ ಮಾತುಗಳಿಂದ ಮಂಕುವಡೆದು ಹೋಗಿದ್ದರು , ಅಯ್ಯೋ ಈ ಪುಣ್ಯಾತ್ಮ ನನಗೆ ಅರ್ಥವೇ ಆಗುತ್ತಿಲ್ಲವೇ ? ಎಂದುಕೊಳ್ಳುತ್ತಾ .
ಕಲ್ಯಾಣದ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಂತೆಯೇ ಎಲ್ಲ ಒಳ ಪ್ರವೇಶಿಸುವವರ ತನಿಖೆ ನಡೆಯುತ್ತಿತ್ತು , ಅವರು ಯಾವ ದೇಶದವರು ? ಬಂದ ಕಾರಣ ಏನು ? ಉಳಿದುಕೊಳ್ಳುವುದೆಲ್ಲಿ ? ಪಟ್ಟಣದಲ್ಲಿ ಅವರ ಪರಿಚಿತರು ಯಾರು ಯಾರು ? ಎಲ್ಲ ವಿವರಗಳನ್ನು ನಮೂದಿಸಿ ಒಳ ಪ್ರವೆಶಿಸಬೇಕಾಗಿತ್ತು
ಆದರೆ ಸನ್ಯಾಸಿಯ ವೇಷದಲ್ಲಿದ್ದವರಿಗೆ ಯಾವ ಪರೀಕ್ಷೆಯೂ , ಪ್ರಶ್ನೆಗಳೂ ಏನೊಂದೂ ಇರಲಿಲ್ಲ . ನಮಸ್ಕರಿಸಿ ಒಳಗೆ ಬಿಡುತ್ತಿದ್ದ್ದರು . ಒಳ ಪ್ರವೇಶಿಸಿದ ಸಿದ್ದರಾಮರಿಗೆ ಇದು ತುಂಬಾ ವಿಚಿತ್ರವೆನಿಸಿತು " ಅಲ್ಲಮ ತಂದೆ , ಅದೇಕೆ ಇಲ್ಲಿ ಸನ್ಯಾಸಿಗಳಿಂದ ಯಾವ ಮಾಹಿತಿಗಳನ್ನೂ ಕೇಳುತ್ತಿಲ್ಲ ; ಸನ್ಯಾಸಿಗಳ ವೇಷದಲ್ಲಿ ಕಳ್ಳರು , ಸುಳ್ಳರು ಪುರಪ್ರವೇಶ ಮಾಡಬಾರದೆಂದಿದೆಯೇ ?,,ಎಂದು ಪ್ರಶ್ನಿಸಿದರು
" ಕಳ್ಳರೇನು ಪೆದ್ದರೆ , ಸನ್ಯಾಸಿಗಳ ವೇಷದಲ್ಲಿ ಪುರ ಪ್ರವೇಶ ಮಾಡಲು ? ಅವರಿಗೆ ಚನ್ನಾಗಿ ಗೊತ್ತು , ಇಲ್ಲಿ ಪ್ರಶ್ನೆಗಳಿಲ್ಲದೆ ಸಗೌರವಗಳಿಂದ ಒಳ ಕರೆದುಕೊಳ್ಳುವುದು ಕೇವಲ ತೋರಿಕೆಯ ಉಪಚಾರ ಮಾತ್ರ ಎಂಬುದು . ಸಾಮಾನ್ಯರಿಗೆ ಒಮ್ಮೆ ಮುಖ್ಯ ದ್ವಾರದಲ್ಲಿಯೇ ಎಲ್ಲ ಪರೀಕ್ಷೆಗಳೂ ನಡೆದು ಹೋಗುತ್ತವೆ , ನಂತರ ಪುರದಲ್ಲಿ ಅವರನ್ನು ಸಾಮಾನ್ಯವಾಗಿ ಯಾರೂ ಕೇಳುವವರಿರುವುದಿಲ್ಲ . ಆದರೆ ಸನ್ಯಾಸಿಯ ಪಾಡು ಹಾಗಲ್ಲ , ಹೆಜ್ಜೆ ಹೆಜ್ಜೆಗೆ ಅವನ ಮೇಲೆ ಹದ್ದಿನ ಕಣ್ಣಿರುತ್ತದೆ , ಅವನು ಪಟ್ಟಣದಲ್ಲಿ ಎಲ್ಲಿಗೆ ತೆರಳುತ್ತಾನೆ ? ಯಾರನ್ನೆಲ್ಲ ಭೇಟಿ ಮಾಡುತ್ತಾನೆ? ಅವರ ವಿವರಗಳೆಂತಹವು ಅವನು ಗೂಢಚಾರನೆ ? ಕಳ್ಳನೆ ? ಕೊಲೆಗಡುಕನೆ ? ಪಾತಕಿಯೆ ? ಎಲ್ಲ ವಿವರಗಳು ತಲುಪುವ ಜಾಗಕ್ಕೆ ತಲುಪುತ್ತಿರುತ್ತವೆ ,ಅನುಮಾನ ಬಲವಾದರೆ ಸೆರೆವಾಸ ತಪ್ಪಿದ್ದಲ್ಲ , ಯಾರು ಬಲ್ಲರು ? ನಮ್ಮನ್ನೂ ಬಂಧಿಸಿ ಸೆರೆಗೆ ದೂಡಬಹುದು ! ,,
ಪ್ರಭುವಿನ ಮಾತು ಕೇಳಿ ಸಿದ್ದರಾಮರಿಗೆ ನಗು ಬಂದಿತು . " ನಿಮ್ಮನ್ನು ಕೂಡಿ ಹಾಕುವಂತಹ ಸೆರೆಮನೆಯನ್ನು ಯಾರು ಕಟ್ಟಿದ್ದಾರೆ ದೊರೆಯೇ ? , ನಿಮ್ಮನ್ನು ಕೂಡಿಹಾಕಬಲ್ಲ ಶಕ್ತಿ ಇರುವುದು ಕಲ್ಯಾಣದ ಶರಣರ ಸಂದಣಿಗೆ ಮಾತ್ರ , ಪಾಪ ಅವರೂ ಸಹ ಎಷ್ಟೊಂದು ವರ್ಷಗಳು ನಿಮಗಾಗಿ ಕಾದು ಕುಳಿತರು ? , ಅವರಿಗೇ ನೀವು ದೊರಕಲು ಇಷ್ಟು ಕಷ್ಟವಾಗಿರುವಾಗ , ಇನ್ನು ಯಾವ ಅರಸ ತಾನೆ ನಿಮ್ಮ ತಂಟೆಗೆ ಬಂದಾನು , ಈಗ ನಾವು ತಮ್ಮ ಆಣತಿಯಂತೆ ಯಾವುದೇ ಮುನ್ಸೂಚನೆ ನೀಡದೆ ಕಲ್ಯಾಣಕ್ಕೆ ಬಂದಾಗಿದೆ , ತಾವು ಇಲ್ಲಿಯೇ ಇರುವ ಮಂಟಪಗಳಲ್ಲೊಂದರಲ್ಲಿ ವಿಶ್ರಮಿಸುತ್ತಿದ್ದರೆ , ನಾನು ಬೇಗನೆ ಮಹಾಮನೆಗೆ ತೆರಳಿ ಅಲ್ಲಮಪ್ರಭುದೇವರು ಬಂದಿರುವರೆಂಬ ಸಂತಸದ ಸುದ್ದಿಯನ್ನು ಅಲ್ಲಿ ಬಿತ್ತರಿಸುತ್ತೇನೆ , ಆಗ ಶರಣರು ಕಲಶ ಕನ್ನಡಿಗಳೊಡನೆ ಸಂಭ್ರಮದಿಂದ ನಿಮ್ಮನ್ನು ಸ್ವಾಗತಿಸಲು ಬರುವರು. ಕಲ್ಯಾಣಕ್ಕೆ ಅಲ್ಲಮಪ್ರಭುಗಳು ಬಂದಿರುವ ವಾರ್ತೆ ಮನೆ ಮನೆಗೆ ಪಸರಿಸಿ ನಗರಕ್ಕೆ ನಗರವೇ ಸಂಭ್ರಮಪಡುವುದು ,,





ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ ೮ (೧)
ಸೋಮಶೇಖರಯ್ಯನವರೇ
ಕುತೂಹಲಕಾರಿಯಾದದ್ದಷ್ಟೇ ಅಲ್ಲ ಈ ಸಾರಿಯ ನಿಮ್ಮ ಈ ಲೇಖನ
ಇನ್ನೂ ನಿಧಾನವಾಗಿ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಬಲ್ಲಂತಹದ್ದಾಗಿದೆ.
ಅಧ್ಯಾತ್ಮದ ಕಡೆಗಿನ ನಿಮ್ಮ ಒಲವೂ ಇರಬಹುದೇನೋ ಅದಕ್ಕೆ ಕಾರಣ
ಇದಲ್ಲದೇ ಬೇರೆ ಯಾವುದಾದರೂ ಕಥೆ ನೀವು ಬರೆದದ್ದಿದೆಯೇ ಹೇಗೆ?
ಉ: ಅನನ್ಯ ಅಲ್ಲಮ ೮ (೧)
ಆತ್ಮೀಯ ಗೋಪಿನಾಥ್ ಅವರೆ
ಸಣ್ಣ ಕಥೆ ನನಗೆ ಒಗ್ಗುವ ಪ್ರಾಕಾರವಲ್ಲ , ಪ್ರಯತ್ನಿಸಿ ವಿಫಲನಾಗಿದ್ದೇನೆ , ಬರೆಯುವಾಗಿನ ಉತ್ಸಾಹ ನಂತರ ಇರುವುದಿಲ್ಲವಾದ್ದರಿಂದ ಬರೆದುದು ಹಾಳಾದುದೇ ಹೆಚ್ಚು. ಸಂಪದದಲ್ಲಿ ಬರೆದ ಕೂಡಲೇ ಪ್ರಕಟಿಸುವ ಸೌಲಭ್ಯವಿರುವುದರಿಂದ ಇಷ್ಟಾದರೂ ಉಳಿದು ಹೊರ ಬರುತ್ತಿದೆ . ಅಲ್ಲಮನನ್ನು ಸಂಶೊಧನಾತ್ಮಕವಾಗಿ ಕೆಲವೇ ಲೇಖನಗಳಲ್ಲಿ ಪರಿಚಯಿಸಲು ತೊಡಗಿದ ಪ್ರಯತ್ನ ಇದು . ಸಂಶೊಧನೆಗೆ ಅಲ್ಲಮನ ವ್ಯಕ್ತಿತ್ವ ಒಗ್ಗುವುದಿಲ್ಲವೆಂಬುದನ್ನು ಕಂಡುಕೊಂಡ ನಂತರ ಅದನ್ನೇ ಕಾದಂಬರಿಯಾಗಿ ವಿಸ್ತರಿಸುತ್ತಿದ್ದೇನೆ ತಮ್ಮ ಕಾಳಜಿ ಮತ್ತು ಆಸಕ್ತಿಗಳಿಗೆ ಧನ್ಯವಾದಗಳು .
ಉ: ಅನನ್ಯ ಅಲ್ಲಮ ೮ (೧)
ಸೋಮಶೇಖರಯ್ಯನವರೇ
ಮಹತ್ವದ ಪ್ರಯತ್ನ ನಿಮ್ಮದು
ಅದರಲ್ಲಿ ನೀವು ಸಂಪೂರ್ಣ ಸಫಲರಾಗಿದ್ದೀರಾ
ಸಂಪದ ನನಗೆ ನಿಮ್ಮಂತಹ ತುಂಬಾ ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಸ್ನೇಹ ಒದಗಿಸಿಕೊಟ್ಟಿದೆ
ಹರಿಪ್ರಸಾದ ನಾಡಿಗರಿಗೆ ನಾವೆಲ್ಲಾ ಚಿರ ಋಣಿಗಳಾಗಿರಬೇಕು.
ಉ: ಅನನ್ಯ ಅಲ್ಲಮ ೮ (೧)
ಅನನ್ಯ ಅಲ್ಲಮ ಲೇಖನಮಾಲೆ ಕಾದಂಬರಿ ಪ್ರಾಕಾರಕ್ಕೂ ಹೊಂದುತ್ತದೋ ಅಥವಾ ಇದು ಬೇರೊಂದೇ ಮಾದರಿಯೋ ಎನ್ನುವುದೂ ಸಹ ಸರಿಯಾಗಿ ಹೊಳೆದಿಲ್ಲ !
ಪ್ರತಿಕ್ರಿಯೆಯಲ್ಲಿ ಸಂಶೋಧನೆ ಪ್ರಯೋಗ ತಪ್ಪಾಗಿದೆ ತಿದ್ದಿಕೊಳ್ಳಬೇಕು , ಹರಿಪ್ರಸಾದ್ ತರಹದ ಯುವಕರು ಕನ್ನಡಕ್ಕೆ ತುಂಬಾ ಬೇಕು
ಉ: ಅನನ್ಯ ಅಲ್ಲಮ ೮ (೧)
ಸೋಮಶೇಖರಯ್ಯನವರೇ, ಶರಣು. ಸೊಗಸಾದ ಆ ಕಾಲದ ವ್ಯವಸ್ಥೆ ಮೇಲೆ ಒಳ್ಳೆಯ ಬೆಳಕು ಮೂಡಿಸುತ್ತಿದ್ದೀರಿ.
ಉ: ಅನನ್ಯ ಅಲ್ಲಮ ೮ (೧)
ಸೋಮಶೇಖರಯ್ಯನವರೇ,
ಒ೦ದು ಕ೦ತಿನಿ೦ದ ಮತ್ತೊ೦ದು ಕ೦ತಿಗೆ ಕಾದ೦ಬರಿ ಕುತೂಹಲ ಮೂಡಿಸುತ್ತಾ ಹೋಗುತ್ತಿದೆ. ಈ ಭಾಗವ೦ತೂ ಅಧ್ಬುತ! ಸಿಧ್ಧರಾಮ ಹಾಗೂ ಅಲ್ಲಮ ಪ್ರಭುಗಳ ನಡುವಿನ ಸ೦ಭಾಷಣೆಯ ಬಗ್ಗೆ ಏನೂ ಬರೆಯಲು ತೋಚುತ್ತಿಲ್ಲ. ವರ್ಣಿಸಿದರೆ ಸ್ತುತಿಯಾಗಬಹುದೆ೦ಬ ಹೆದರಿಕೆ. ಆದರೂ
" ಹಾಗಲ್ಲ ಸಿದ್ದರಾಮಯ್ಯ , ಇಲ್ಲಿ ನಾನೂ ನೀನೂ ಎಷ್ಟರವರು ಎನ್ನುವುದು ಪ್ರಶ್ನೆಯಲ್ಲ , ತುಂಬಿಸಿಕೊಳ್ಳುವ ಯೋಗ್ಯತೆ ಇರುವ ಪಾತ್ರಕ್ಕೆ ಮಾತ್ರ ಧಾರೆ ಎರೆಯಲು ಸಾಧ್ಯ? ಅಪಾತ್ರಕ್ಕೆ ನಾನೆಲ್ಲಿಂದ ತಂದು ಸುರಿಯಲಿ ? ನನ್ನ ಪಾತ್ರವೂ ನಿನ್ನಹಾಗೆಯೇ ; ಸದ್ಯಕ್ಕೆ ಸುರಿಯುವ ಪಾತ್ರದಲ್ಲಿದ್ದೇನೆ ಸುರಿಯುತ್ತೇನೆ . ಪಾತ್ರ ಬದಲಾದರೆ ನೀನೇ ಸುರಿಯಬೇಕಾಗಿ ಬರಬಹುದು ಯಾರು ಬಲ್ಲ ,,ಎಂದು ನಕ್ಕುಬಿಟ್ಟರು .<<
ಈ ಮೇಲಿನ ಸಾಲುಗಳು ಅದೆಷ್ಟು ಆಧ್ಯಾತ್ಮಿಕ ಚಿ೦ತನೆಯನ್ನು ಮೂಡಿಸುತ್ತವೆಯೆ೦ದರೆ, ದಿನವಿಡೀ ಕುಳಿತು ಚಿ೦ತೆ ಮಾಡಿಸಿದರೂ ಮುಗಿದು ಹೋಗದಷ್ಟು!
ಕಾದ೦ಬರಿ ಪ್ರಾಕಾರಕ್ಕೆ ಇದು ಒಗ್ಗುತ್ತದೆ. ತ.ರಾ.ಸು.ರವರು ಚಿತ್ರದುರ್ಗದ ಇತಿಹಾಸವನ್ನು ಬರೆಯಲಿಲ್ಲವೇ? ಐತಿಹಾಸಿಕ ಕಾದ೦ಬರಿ ಗಳು ವಿರಳವಾಗುತ್ತಿರುವ ಈ ಸ೦ದರ್ಭದಲ್ಲಿ ನಿಮ್ಮ “ಅನನ್ಯ ಅಲ್ಲಮ“ ವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ, ಒ೦ದು ಅನನ್ಯ ಸ೦ಗ್ರಾಹ್ಯ ಗ್ರ೦ಥವಾಗಿ ಹೊರಹೊಮ್ಮುವುದರಲ್ಲಿ ನನಗ೦ತೂ ಯಾವುದೇ ಸ೦ಶಯಗಳು ಕ೦ಡು ಬರುತ್ತಿಲ್ಲ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಅನನ್ಯ ಅಲ್ಲಮ ೮ (೧)
ಅತ್ಮೀಯರಾದ ರಾಘವೇಂದ್ರನಾವಡರು , ಕವಿನಾಗರಾಜರು ನಿಮ್ಮ ಪ್ರತಿಕ್ರಿಯೆಗಳನ್ನು ನೋಡಿದೆ , ನಿಮಗೆ ಈ ಲೇಖನಮಾಲೆ ಸಂತೋಷ ಕೊಟ್ಟಿದ್ದರೆ ಅದಕ್ಕೆ ಕಾರಣ ಇದರಲ್ಲಿರುವ ವಿಷಯಗಳ ಮೇಲಿನ ನಿಮ್ಮ ಅತೀವ ಆಸಕ್ತಿ ಮತ್ತು ಸಹೃದಯತೆ ಕಾರಣ . ಸಮಾನ ಮನಸ್ಕತೆ ಇಲ್ಲದೆ ಯಾವುದೂ ಇಷ್ಟವಾಗುವುದಿಲ್ಲ , ಸಂಪದದ ಮೂಲಕ ಈ ರೀತಿಯ ಸ್ನೇಹ ನನಗೆ ದೊರಕಿದುದಕ್ಕೆ ನನಗೆ ತುಂಬಾ ಸಂತೋಷವೆನಿಸಿದೆ . ಈಗ ನೀವು ನನಗೆ ಧನ್ಯವಾದಗಳನ್ನು ಹೇಳುವುದಕ್ಕಿಂತ ಹೆಚ್ಚಿನ ಆತ್ಮೀಯರು ಎಂದು ಮಾತ್ರ ಹೇಳಬಲ್ಲೆ