ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!
ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು ಕೊಟ್ಟು ತನ್ನ ಭಾಗದ ಮೂಸಂಬಿಯನ್ನು ತಿನ್ನಲು ಪ್ರಾರಂಭಿಸಿದ.
"ಗುರುಗಳೇ, ನೀವು ಮಾಡುವ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ಹಾಗಿದ್ದ ಮೇಲೆ, ಈ ಮೂಸಂಬಿಯನ್ನು ಇಬ್ಭಾಗ ಮಾಡಿ ಹಂಚಿಕೊಳ್ಳುವುದರ ಮೂಲಕ ನನಗೇನಾದರೂ ಹೊಸ ಸಂದೇಶ ಕೊಡುತ್ತಿದ್ದೀರಾ?" ಕೇಳಿದ ಶಿಷ್ಯ. ಗುರು ಏನೂ ಉತ್ತರ ಹೇಳದೆ ಸುಮ್ಮನೆ ತನ್ನ ಪಾಡಿಗೆ ತಾನು ಮೂಸಂಬಿ ತಿನ್ನುವುದರಲ್ಲಿ ತಲ್ಲೀನನಾಗಿದ್ದ.
"ನೀವು ಮೌನವಾಗಿದ್ದೀರಿ ಅಂದರೆ ಏನನ್ನೋ ಆಳವಾಗಿ ಚಿಂತಿಸುತ್ತಿದ್ದೀರಿ ಅಂತನ್ನಿಸುತ್ತೆ" ಮುಂದುವರೆದ ಶಿಷ್ಯ ಹೇಳಿದ "ಓಹೋ, ಹೀಗಿರಬೇಕು: ಮೂಸಂಬಿ ತಿಂದಾಗ ಸಿಗುವ ಆನಂದ ಹಣ್ಣಿನಲ್ಲಿದೆಯೋ ಅಥವಾ ಅದನ್ನು ಅನುಭವಿಸುವ ನಾಲಗೆಯಲ್ಲಿದೆಯೋ ಎಂಬ ವಿಷಯದ ಬಗ್ಗೆ ನೀವು ಗಾಢವಾಗಿ ಆಲೋಚಿಸುತ್ತಿರಬೇಕು, ಅಲ್ಲವ್?". ಗುರು ಈಗಲೂ ಏನೂ ಮಾತಾಡಲಿಲ್ಲ.
ಇದರಿಂದ ಉತ್ತೇಜಿತನಾದ ಶಿಷ್ಯ ಮುಂದುವರೆದ; "ನಿಜ ಗುರುಗಳೆ, ಜೀವನದಲ್ಲಿ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ನನಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ! ತಪ್ಪಿದ್ದಲ್ಲಿ ತಿದ್ದಿ. ಹಣ್ಣನ್ನು ತಿಂದಾಗ ಸಿಗುವ ಆನಂದ ಬರಿಯ ಹಣ್ಣಿನಲ್ಲೂ ಇಲ್ಲ ಅಥವ ಬರಿಯ ನಾಲಗೆಯಲ್ಲೂ ಇಲ್ಲ. ಅದು ತಿನ್ನಲ್ಪಡುವ ವಸ್ತು ಮತ್ತು ಅದನ್ನು ಅನುಭ....". ಶಿಷ್ಯನ ಮಾತನ್ನು ಅರ್ಧಕ್ಕೇ ತಡೆದ ಗುರು ಹೇಳಿದ "ಸಾಕು ಮಾಡು ನಿನ್ನ ಹುಚ್ಚು ವಿಚಾರಗಳನ್ನು! ನಾನು ಬಿಸಿಲಿನಲ್ಲಿ ತಂಪಾಗಿರುತ್ತೆ ಅಂತ ಮೂಸಂಬಿಯೊಂದನ್ನು ತಿನ್ನಲು ಹೊರಟೆ. ಪಕ್ಕದಲ್ಲೇ ಇದ್ದೆಯಲ್ಲ ಅಂತ ನಿನಗೂ ಅರ್ಧ ಕೊಟ್ಟೆ, ಅಷ್ಟೆ. ನಿನಗೆ ಬೇಕಿದ್ದಲ್ಲಿ ಮೂಸಂಬಿಯನ್ನು ತಿಂದು ಆನಂದ ಅನುಭವಿಸು. ಮೂಸಂಬಿ ತಿನ್ನುವಾಗ ಸಿಗುವ ಆನಂದದ ಬಗ್ಗೆ ಕೂಡ ಯೋಚಿಸುತ್ತ ಆ ಆನಂದವನ್ನು ಕಳೆದುಕೊಳ್ಳಬೇಡ. ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು".

- Login or register to post comments
- 766 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಪಂಚಕೋಶ ವಿದ್ಯಾ
ಶ್ಯಾಮ್ ಕಿಶೋರ್(ಅವರೇಕಾಳು ಬೇಯಿಸುವುದು ಬೇಡ ಅಂತ ಈ ಸಂಬೋಧನೆ
),
ಈ ಕಥೆಯು ಚಿಕ್ಕದೂ ಸರಳವೂ, ಹಾಗೆಯೇ ಹಿತವೂ ಆಗಿದೆ. ಈ ಮೇಲಿನ ನುಡಿ, ಚರ್ಚಿಸಲು ಅನೇಕ ವಿಷಯಗಳು ದೊರಕಿಸಿಕೊಟ್ಟವು.
"ಪಂಚಕೋಶ ವಿದ್ಯಾ" - ಇದು ನಮಗೆ First PUC ಸಂಸ್ಕೃತದಲ್ಲಿದ್ದ ಮೊದಲ ಪಾಠ. ನಮಗೆ ಕಲಿಯಲು ಸಿಕ್ಕ ಎಷ್ಟೋ ಒಳ್ಳೆಯ ಪಾಠಗಳಲ್ಲಿ ಇದು ಅತ್ಯಂತ ಪ್ರಮುಖವಾದುದು ಎಂದು ನನಗೆ ಅನಿಸುವುದು. ಯಾವುದೋ ಉಪನಿಷತ್ತಿನ ಕುರಿತಾದ ಮಾತುಗಳಿದ್ದವು.
"ಭೃಗುರ್ವೈ ವಾರುಣಿಃ | ವರುಣಂ ಪಿತರಂ ಉಪಸಸಾರ | ಅಧೀಹಿ ಭಗವೋ ಬ್ರಹ್ಮೇತಿ | ತಸ್ಮಾ ಏತತ್ ಪ್ರೋವಾಗ | ತಪಸಾ ಬ್ರಹ್ಮ ವಿಜಿಜ್ಞಾಸಸ್ವ | ತಪೋ ಬ್ರಹ್ಮೇತಿ ||
ಸತಪೋತಪ್ಯತ | ಸತಪಸ್‌ತಪ್ತ್ವಾ...ಅನ್ನಂ ಬ್ರಹ್ಮ.............| ಪ್ರಾಣಂ ಬ್ರಹ್ಮ.........| ಮನೋಬ್ರಹ್ಮ..............| ವಿಜ್ಞಾನಂ ಬ್ರಹ್ಮ........| "
ಇದಾವುದೂ ಸರಿಹೊಂದದೆ, ಕೊನೆಯಲ್ಲಿ
ಆನಂದಂ ಬ್ರಹ್ಮೇತಿ ವ್ಯಜಾನಾತ್ | ಆನಂದಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ | ಆನಂದಾದ್ಯೇವ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಷಂತೀತಿ |.......
ಇಲ್ಲಿ, ಬರುವ ಪ್ರಮುಖ ಅಂಶವೆಂದರೆ, ಬ್ರಹ್ಮ ಎಂದರೇನು ತಿಳಿಯಬೇಕು ಎಂಬುದಾಗಿ ತೀವ್ರ ಕುತೂಹಲದಲ್ಲಿದ್ದ ಒಬ್ಬ ಶಿಷ್ಯನಿಗೆ ಆನಂದವೇ ಬ್ರಹ್ಮನೆಂಬ ಉತ್ತರ ಸಿಗುತ್ತದೆ.
ಅಂದರೆ ಉಪನಿಷತ್ತಿನ ಪ್ರಕಾರ, "ಆನಂದದಿಂದಲೇ ನಾವೆಲ್ಲರೂ ಹುಟ್ಟುವುದು, ಆನಂದದಿಂದಾಗಿಯೇ(ಆನಂದಕ್ಕೋಸ್ಕರವೇ) ಬದುಕುವುದು, ಕೊನೆಯಲ್ಲಿ ಆನಂದದಲ್ಲಿಯೇ ಲೀನವಾಗುವೆವು. ಇದುವೇ ಬ್ರಹ್ಮ". ಇದರ ಅರ್ಥ ಇನ್ನೂ ಸಂಕೀರ್ಣವಾಗಿರಬಹುದು, ಆದರೆ ಇದನ್ನು ಸರಳವಾಗಿ ಈ ರೀತಿ ನನ್ನ ಮನಸ್ಸಿಗೆ ತಿಳಿಸಿಕೊಟ್ಟಿದ್ದೇನೆ.
ಇಷ್ಟು ಸರಳವಾಗಿರುವ ವಾಕ್ಯವನ್ನು ಪುರಾಣ ಪುಣ್ಯ ಕಥೆಗಳು ರಬ್ಬರ್ ನಂತೆ ಎಳೆಯುತ್ತವೆ ಎಂಬುದು ನನ್ನ ಅನುಮಾನ . ಈ ಆನಂದವೇ ಬ್ರಹ್ಮ ಎಂಬುದರಲ್ಲಿ ಬರುವ ಬ್ರಹ್ಮನನ್ನು ಪುರಾಣ ಪುಣ್ಯಕಥೆಗಳು ಪೂಜೆಯನ್ನು ಬೇಡುವ ದೇವರಾಗಿ ಸಮೀಕರಿಸುತ್ತವೆ. ಆದರೆ ಈ ದೇವರು ಎಂಬುದು ಮುಖ್ಯವಾಗಿ ಭಕ್ತಿಮಾರ್ಗದಲ್ಲಿ ಮುನ್ನಡೆಸುವ ಸಾಧನಗಳು. ಆದರೆ ದೇವೆರೆಂಬುದು Eternal Truth ಆಗಲು ಸಾಧ್ಯವೇ?. ಉದಾ - ರಾವಣನಿಗೆ ಹತ್ತುತಲೆಗಳಿದ್ದವು, ದೇವತೆಗಳಿಗೆ ನಾಲ್ಕು ಕೈಗಳಿರುತ್ತವೆ, ವಿಷ್ಣುವಿನ ದಶಾವತಾರಗಳು ಹೀಗೆ.
ದೇವರೆಂಬ ಕಲ್ಪನೆಯು ಕಾಲಕಾಲಕ್ಕೆ ಬದಲಾಗುತ್ತದೆ ? ಉದಾ -
೧. ಬೌದ್ಧ ವಿಗ್ರಹವು ವೆಂಕಟೇಶನಾಗಿ ಪೂಜೆಗೈಯಲ್ಪಡುವುದು.
೨. ಶಿವನನ್ನು ಪೂಜಿಸುತ್ತಿದ್ದ ಒಂದು ಸಮುದಾಯ ಬಸವಣ್ಣನವರಿಗೇ ತಲೆಬಾಗಬಹುದು. ಬಸವಣ್ಣರಿಗೇ ದೇವರ ಸ್ಥಾನ ನೀಡಿ, ಬಸವಣ್ಣನವರನ್ನು ಪೂಜೆಗೈದರೆ ಶಿವನನ್ನು ಪೂಜಿಸದಂತೆಯೇ ಎಂಬಂತಹ ಮಾತುಗಳೂ ಕೆಲವೆಡೆ ಕೇಳಿಬರುತ್ತವೆ.
ದೇವರು, ಪೂಜೆ ಇವುಗಳು ಮುಖ್ಯವಾಗಿ ಜನರಲ್ಲಿ ಭಕ್ತಿಯನ್ನು ಸ್ಫುರಿಸುವ Economical means ?. Eternal Truth ಅಥವಾ ಸರ್ವಕಾಲಿಕ ಸತ್ಯಗಳೆಂದರೆ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ?
ಈ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ಅನೇಕ ಒಳ್ಳೆಯ ಚರ್ಚೆಯೆಡೆಗೆ ಕರೆದೊಯ್ಯುತ್ತವೆ.
೧. ಬ್ರಹ್ಮ ಎಂಬುದನ್ನು ದೇವರಾಗಿ ಸಮೀಕರಿಸು ಸಾಧ್ಯವೇ ? ಇದರ ಕುರಿತು ಬೇರೆ ಎಳೆಯಲ್ಲಿ ಹಾಕಲಿದ್ದೇನೆ.
) ನಂಬುವ ದೇವರು ಬದಲಾಗುತ್ತದೆ, ಆದರೆ ಭಕ್ತಿಯ ಸ್ವರೂಪ ಬದಲಾಗುತ್ತದೆಯೇ ?
೨. ದೇವರು ಎಂಬುವುದು ಸರ್ವಕಾಲಿಕ ಸತ್ಯವಾಗುತ್ತದೆಯೇ ?
೩. ಪೂಜೆಗಳಲ್ಲಿ (ಎಲ್ಲ ರೀತಿಯ ಪೂಜೆ, ಕೇವಲ ಒಂದು ಧರ್ಮದ ಅಥವಾ ಆಗಮ ಪದ್ಧತಿಯ ಪೂಜೆಯಷ್ಟೇ ಅಲ್ಲ), ನಾವು ಹೆಚ್ಚು ಪ್ರಾಮುಖ್ಯವನ್ನು ದೇವರಿಗೆ ನೀಡುತ್ತೇವೆಯೋ ಅಥವಾ ಭಕ್ತಿಗೆ(Materialistic ತನ್ಮಯತೆ) ನೀಡುತ್ತೇವೆಯೋ?
೪. ಭಕ್ತಿ ಮತ್ತು ದೇವರಲ್ಲಿ ಸರ್ವಕಾಲಿಕವಾದುದು ಯಾವುದು ?
೫. ಈಗ ಹಿಂದುವೊಬ್ಬ, ಕ್ರಿಶ್ಚಿಯನ್ ಅಥವಾ ಬೌದ್ಧ ಮತಕ್ಕೆ ಮತಾಂತರ ಹೊಂದಿದನೆನ್ನಿ. ಆಗ ಅವನು(ಅವನು ಎಂಬುದನ್ನು ಪುಲ್ಲಿಂಗವೆಂದು ತಿಳಿಯಬೇಡಿ
೬. ಯಾರು ಯಾವ ಪೂಜೆಗೈದರೂ, ಅಥವಾ ನಾಸ್ತಿಕರಾಗಿಯೇ ಉಳಿದರೂ ಉಪನಿಷತ್ತಿನಲ್ಲಿ ಬರುವ ಆನಂದವೇ ಬ್ರಹ್ಮ ಎಂಬಂತಹ ವಾಕ್ಯಗಳು ಸುಳ್ಳಾಗುತ್ತದೆಯೇ ?
ನೀವುಗಳೇನೆನ್ನುತ್ತೀರಿ ?
ಉ: ಪಂಚಕೋಶ ವಿದ್ಯಾ
ಸುನಿಲ್,
ನಿಮ್ಮ ಪ್ರತಿಕ್ರಿಯೆ ಮತ್ತು ಅದರಲ್ಲಿನ ವಿಚಾರಗಳು ಸರಳವಾಗಿ ಮತ್ತು ಸೊಗಸಾಗಿ ಮೂಡಿಬಂದಿವೆ. "ಪಂಚಕೋಶ ವಿದ್ಯಾ"ವನ್ನು ನೆನಪಿಸಿದ್ದಕ್ಕೆ ನಿಮಗೊಂದು ಸವಿಯೊದಗು. ಅಂದಹಾಗೆ ನಾನೂ "ಅವರೇಕಾಳು ಹಿಚುಕೋದನ್ನು" ಬಿಟ್ಟಿದ್ದೀನಿ! ಸ್ವಲ್ಪ "ಬಿಜಿ" ಇದ್ದಿದ್ದರಿಂದ ಉತ್ತರಿಸಲು ತಡವಾಯಿತು. ನಿಮ್ಮ ಪ್ರತಿಕ್ರಿಯೆಯಲ್ಲಿರುವ ವಿಚಾರಗಳ ಬಗ್ಗೆ ನನಗೆ ಹೊಳೆದಂತೆ, ತಿಳಿದಂತೆ, ಯಾವಾಗಲಾದರೂ ಲಹರಿ ಬಂದಂತೆಲ್ಲ ಬರೆಯೋಣ ಅಂದುಕೊಂಡಿದ್ದೀನಿ.
ಪ್ರತಿಕ್ರಿಯೆಯನ್ನು ಓದಿದಾಗ ಈ ವಿಷಯಗಳ - ಜೀವನದಲ್ಲಿ ಆಧ್ಯಾತ್ಮಿಕತೆ, ದೇವರು, ಅನುಭಾವ, ಪೂಜೆ-ಪುನಸ್ಕಾರ, ನಂಬಿಕೆ, ಆನಂದ ಇತ್ಯಾದಿ ವಿಷಯಗಳ - ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುವ, ಒಂದು ಸಂವಾದ ಪ್ರಾರಂಭವಾದರೆ ಎಷ್ಟು ಚೆನ್ನ ಅಂತನ್ನಿಸಿತು. ನಮಗಿರುವ ಅಲ್ಪ ಸ್ವಲ್ಪ ತಿಳಿವನ್ನು ಹಂಚಿಕೊಂಡು, ಹೆಚ್ಚಿಸಿಕೊಂಡು ಸಂತಸಪಡಬಹುದು ಅಲ್ಲವೇ? ನೀವುಗಳೇನನ್ನುತ್ತೀರಿ?
ಅಂದಹಾಗೆ ಈ ರೀತಿಯ (ಅಧ್ಯಾತ್ಮಿಕ) ವಿಚಾರಗಳ ಬಗ್ಗೆ ಸುಮಾರು ಒಂದೂವರೆ ವರ್ಷಗಳಿಂದ (ಅಥವಾ ಇನ್ನೂ ಮುಂಚಿನಿಂದ?) "ತರಂಗ"ದಲ್ಲಿ "ಸಂಧ್ಯಾ.ಎಸ್.ಪೈ"ರವರು ತಮ್ಮ ಸಂಪಾದಕೀಯದಲ್ಲಿ ಬಹಳ ಸೊಗಸಾಗಿ, ಸರಳವಾಗಿ (ಕೆಲವೊಮ್ಮೆ ಸುಂದರ ಕತೆಗಳ ಮೂಲಕ) ಬರೆಯುತ್ತಿದ್ದಾರೆ. ಕೆಲವೊಂದು ಲೇಖನಗಳಂತೂ ಮನಸ್ಸನ್ನು ಸ್ವಲ್ಪ ಕಾಲ ಕಟ್ಟಿ ನಿಲ್ಲಿಸಿಬಿಡುತ್ತೆ ಅಲ್ಲವೇ?
- ಶ್ಯಾಮ್ ಕಿಶೋರ್