ನಾವು ಹಾಗೂ ನಮ್ಮ ಸಂಪದ
ಈ ಬರಹ ಬಹಳ ಪ್ರಸ್ತುತವೆನಿಸಿದ್ದರಿಂದ ನಿರ್ವಾಹಕರಿಂದ 'ಸೂಚನಾ ಫಲಕ' ಕ್ಕೆ ಸೇರಿಸಲ್ಪಟ್ಟಿದೆ.
ಸೂ: ದಯವಿಟ್ಟು ಮಾನ್ಯರ ಕೆಳಗಿನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಕಾಣುವ ಎರಡು ಪ್ರಸ್ತಾವನೆಗಳು:
೧) ವೈಯಕ್ತಿಕ ದೂಷಣೆಗಳು ಬೇಡ.
೨) ಕೋಪ-ತಾಪಗಳನ್ನು ಬಿಟ್ಟು ಸದಭಿರುಚಿಯ ಚರ್ಚೆ ನಡೆಯಲಿ.
ಎಂಬುದು ಬಹಳ ಪ್ರಸ್ತುತ.
ಆತ್ಮೀಯರೇ,
ಹಲವು ದಿನಗಳಿಂದ ಸಂಪದದಲ್ಲಿ ಬರುವ ಬರೆಹಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ. ನನ್ನ ಈ ಮುಂದಿನ ಮಾತುಗಳು ನನ್ನ ಮುಖಕ್ಕೆ ಹಿಡಿದುಕೊಂಡ ಕನ್ನಡಿಯೇ ವಿನಾ ಇತರರಿಗೆ ತೋರಿಸಿದ ದಾರಿದೀಪವಲ್ಲ. ಕೆಲವು ಬಾರಿ ಇದರಲ್ಲಿ ನನ್ನ ಮುಖದಂತೆಯೇ ನಿಮ್ಮ ಮುಖವೂ ಕಾಣಬಹುದು.
ಇಂತಹ ಸಾಮೂಹಿಕ ಪ್ರಯತ್ನಗಳಿಗೆ, ವೇದಿಕೆಗಳಿಗೆ ಎರಡು ಆಯಾಮಗಳಿರುತ್ತವೆ. ನಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವುಗಳ ಪರವಾಗಿ ವಾದಿಸುವುದು ಒಂದು ನೆಲೆಯಾದರೆ, ಇತರರಿಂದ ಕಲಿಯುವುದು ಮತ್ತು ಆ ಮೂಲಕ ನಾವೂ ಬೆಳೆಯುವುದು ಇನ್ನೊಂದು ನೆಲೆ. ಎರಡನೆಯ ನೆಲೆಗೆ ಸರಿಯಾದ ಮಹತ್ವ ಸಿಗದಿದ್ದರೆ, ನಾವು ಚರ್ಚಾಪಟುಗಳಾಗಿ ಬಿಡುತ್ತೇವೆ. ಇಲ್ಲಿ ನಡೆಯುವ ಕೆಲವು ಚರ್ಚೆಗಳಲ್ಲಿ ಅಂತಹ `ನಾನೆ ಸರಿತನ'ವು ಕಾಣಿಸಿಕೊಂಡಿದೆಯೆಂದು ನನಗೆ ತೋರುತ್ತದೆ. ಇಲ್ಲಿ ಅನೇಕ ಪೀಳಿಗೆಗಳಿಗೆ ಸೇರಿದ ಜನರು ಇರುವುದು ನಮಗೆಲ್ಲರಿಗೂ ಕಲಿಯುವ ಅವಕಾಶ. ಕಿರಿಯರಿಂದ ಅಂತೆಯೇ ಹಿರಿಯರಿಂದ. ನಮ್ಮ ಕ್ಷೇತ್ರಕ್ಕೆ ಸೇರಿದವರಿಂದ ಅಂತೆಯೇ ಅನ್ಯ ವಲಯಗಳಿಗೆ ಸೇರಿದ ಜಾಣರಿಂದ. ಕನ್ನಡ ಭಾಷೆ ಮತ್ತು ವ್ಯಾಕರಣಗಳ ಬಗ್ಗೆ ಚರ್ಚಿಸುವ ಸಾಫ್ಟ್ ವೇರ್ ಪರಿಣಿತರನ್ನು ಓದಿದಾಗ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ಮಠಗಳ ಬಗ್ಗೆಯೋ ಸುಸ್ಮಿತಾ ಸೇನ್ ಬಗ್ಗೆಯೋ ಚರ್ಚೆ ನಡೆದಾಗ ಬೆಳಕಿಗಿಂತ ಹೆಚ್ಚಾಗಿ ಬೆಂಕಿ ಹುಟ್ಟಿದಂತೆ ಕಾಣುತ್ತದೆ. ನಿಜ. ಬೆಂಕಿಯಿಲ್ಲದೆ ಬೆಳಕಿಲ್ಲ. ಆದರೆ ಇದು ನಮ್ಮ ಕೋಪ-ತಾಪಗಳ ಪ್ರದರ್ಶನಕ್ಕೆ ಮೀಸಲಾದ ರಣರಂಗವಲ್ಲ. ಇಂಥ ಕಡೆ, ಕಟಕಿ, ಕಟುಮಾತು ಮತ್ತು ವೈಯಕ್ತಿಕ ಟೀಕೆಗಳು ಖಂಡಿತವಾಗಿಯೂ ಅನಗತ್ಯ. ಇಲ್ಲಿ ನಾವೆಲ್ಲರೂ ಬೆಳೆಯೋಣ, ಬದಲಾಗೋಣ. ಯಾರಿಗಾದರೂ ಇದು ಅನಗತ್ಯವಾದ ಉಪದೇಶವೆನಿಸಿದರೆ, ದಯವಿಟ್ಟು ಕ್ಷಮಿಸಿ.

- Login or register to post comments
- 603 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಅನಿಸಿಕೆ: ನಾವು ಹಾಗೂ ನಮ್ಮ ಸಂಪದ
ಎಚ್.ಎಸ್.ಆರ್ ಸರ್,
ತಮ್ಮ ಹಿತೋಕ್ತಿಗೆ ಬಹಳ ಧನ್ಯವಾದಗಳು. ಇತ್ತೀಚಿನ ಕೆಲವು ಚರ್ಚೆಗಳಲ್ಲಿ ಭಾಗವಹಿಸಿದ್ದೆನಾದರೂ ಯಾಕೋ ಕೆಲವೊಮ್ಮೆ ಮನಸ್ಸಿಗೆ ಅಷ್ಟು ಹಿತ ಕೊಟ್ಟಿರಲಿಲ್ಲ. ನಿನ್ನೆ ಬಹುತೇಕ ನೀವು ಬರೆದಂತೆಯೇ ಒಂದು ಅನಿಸಿಕೆಯನ್ನು ಬರೆದಿಟ್ಟುಕೊಂಡು, ಸಂಪದದಲ್ಲಿ ಹಾಕಿಬಿಡೋಣ ಅಂತ ಹೊರಟೆ. ಆದರೆ ನನ್ನ ವಯಸ್ಸಿನ ಮಿತಿ ನನ್ನನ್ನು ತಡೆಯಿತು. ಈ ವಿಚಾರದಲ್ಲಿ ಅನಿಸಿಕೆ ಅಂತ ಬರೆದು ಹಾಕಿದರೂ, ಓದುವಾಗದು ಕಿವಿಮಾತೆಂಬಂತೆ ಧ್ವನಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ಇತರರಿಗೆ ಕಿವಿಮಾತು ಹೇಳುವಷ್ಟು ಯಾವ ರೀತಿಯಲ್ಲೂ (ವಯಸ್ಸು ಅಥವಾ ತಿಳಿವಳಿಕೆ) ನಾನಿನ್ನೂ ಬೆಳೆದಿಲ್ಲವೆನಿಸಿ ಸುಮ್ಮನಾದೆ. ತಾವು ಹಿರಿಯರು. ಕಿರಿಯರು ವಯಸ್ಸಿನ ಆವೇಗದಿಂದ "ಎಡವಿದಾಗ" ತಿದ್ದುವ ಹಕ್ಕು ಖಂಡಿತ ತಮಗಿದೆಯೆಂದು ನನ್ನ ವೈಯಕ್ತಿಕ ಅನಿಸಿಕೆ. ಚರ್ಚೆಯ ಎರಡು ಆಯಾಮಗಳ ಬಗ್ಗೆ ಕೂಲಂಕಷವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಸಾಕು ಬಿಡಿ, ಚರ್ಚೆಗಳ ಈ "ವಿಚಾರ ಮಂಥನ"ದಲ್ಲಿ ನಮ್ಮ ವಾದ-ವಿವಾದಗಳು "ಕಟು" ಭಾಗವಾದರೆ ತಮ್ಮ ಮಾತು "ಸವಿ" ಭಾಗ ಅಂದುಕೊಳ್ಳುತ್ತೀನಿ (ಉತ್ಪ್ರೇಕ್ಷೆಗಲ್ಲ)! ಇದು ನನ್ನ ವೈಯಕ್ತಿಕ ಅನಿಸಿಕೆಯಾದರೂ ಸಂಪದಿಗರು ಈ ವಿಷಯದಲ್ಲಿ ನನ್ನೊಂದಿಗಿದ್ದಾರೆ ಅಂತ ನನ್ನ ಭಾವನೆ.
- ಶ್ಯಾಮ್ ಕಿಶೋರ್
ಉ: ಅನಿಸಿಕೆ: ನಾವು ಹಾಗೂ ನಮ್ಮ ಸಂಪದ
flame warಗಳು ಅಂತರ್ಜಾಲದಲ್ಲಿ ಸರ್ವೇ ಸಾಮಾನ್ಯ. ಅದು ಅಂತರ್ಜಾಲದ ಪಿಡುಗು. ಎಲ್ಲ ಸಮುದಾಯಗಳಲ್ಲೂ ಇದು ಇದ್ದದ್ದೇ. ಆದರೆ ಅದು 'ugly turn' ತೆಗೆದುಕೊಳ್ಳೋದು ವೈಯಕ್ತಿಕ ದೂಷಣೆಗಳಿಗೆ ತಿರುಗಿದಾಗ. ವಿಷಯಕ್ಕೆ ಬದ್ಧವಾದ ಚರ್ಚೆಯಲ್ಲಿ ಈ ಸಮಸ್ಯೆ ಒದಗಿಬರುವುದಿಲ್ಲ.
ಆದರೆ ನನ್ನ ಅನಿಸಿಕೆಯಂತೆ ಇಲ್ಲಿ ಮಾನ್ಯ ಎಚ್ ಎಸ್ ಆರ್ ರಾವ್ ರವರು ಯಾರೊಬ್ಬರನ್ನೂ ದೂಷಿಸುತ್ತಿಲ್ಲ. ಬದಲಿಗೆ, 'ಇರುವ ಒಂದೆರಡು ಇಂತಹ ಕನ್ನಡ ವೇದಿಕೆಗಳಲ್ಲಿ ಇಂತಹ ಫ್ಲೇಮ್ ವಾರ್ ಗಳು ಅನಗತ್ಯ' ಎಂಬ ತಮ್ಮ ವಿಚಾರ ಮುಂದಿಟ್ಟಿದ್ದಾರೆ. ಅದು ಬಹಳ ಪ್ರಸ್ತುತವೂ ಹೌದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"