Skip to main content

ಕಾಡುವ ಭೂಮಿ ಹುಣ್ಣಿಮೆಯ ನೆನಪುಗಳು...!

To prevent automated spam submissions leave this field empty.

ಇವತ್ತು ಮಧ್ಯಾಹ್ನ ನಾಳೆ ಭೂಮಿ ಹುಣ್ಣಿಮೆ ಅಂತ  ಅತ್ತೆ  ಹೇಳಿದ ಕ್ಷಣದಿಂದ ನನಗೆ ನನ್ನ ಬಾಲ್ಯದ ನೆನೆಪು ಬಹಳ ಕಾಡಲು ಶುರುವಾಗಿದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ  ಯಾವುದೇ ಹಬ್ಬ ಹುಣ್ಣಿಮೆಯನ್ನ ಅಮ್ಮ ವಿಶೇಷವಾಗಿ ಏನು ಆಚರಿಸುತ್ತಿರಲಿಲ್ಲ. ಆದರೆ ಇದಕ್ಕೆ ಭೂಮಿ ಹುಣ್ಣಿಮೆ ಮತ್ತು ದೀಪಾವಳಿ ಮಾತ್ರ ಹೊರತಾಗಿತ್ತು. ಈ ಎರಡು ಹಬ್ಬಗಳು ತಪ್ಪದೇ  ನಮ್ಮ ಮನೆಯಲ್ಲಿ ನೆಡೆಯುತ್ತಿತ್ತು. ನಮಗೆ ಕಾರಣ ಮಾತ್ರ  ಆಗ ತಿಳಿದಿರಲಿಲ್ಲ. ಆದರೆ ನಾವು  ಕೃಷಿಕರಾಗಿದ್ದೇ ಈ ಹಬ್ಬದ ಬಗ್ಗೆ  ಹೆಚ್ಚಿನ ಒಲವಿಗೆ ಕಾರಣ ಎಂಬುದು ಈಗ ಅರ್ಥವಾಗಿದೆ. ಹಾಗೆ ನನಗೂ  ಈ ಎರಡು ಹಬ್ಬಗಳು  ಬೇರೆ ಕಾರಣಗಳಿಗೆ ಇಂದಿಗೂ ಅತೀ ಪ್ರಿಯವಾದವು. ಇವುಗಳು ನನ್ನ ಬಾಲ್ಯದ ಮಧುರ ನೆನೆಪುಗಳೊಂದಿಗೆ ಬೆಸೆದು ಕೊಂಡಿವೆ.
 ಅಪ್ಪನಿಗೆ  ಹೇಳಿ ಕೇಳಿ ಈ ಪೂಜೆ ಪುನಸ್ಕಾರ, ಹಬ್ಬ ಹರಿದಿನಗಳೆಂದರೆ ಮಾರು ದೂರು.  ಆದರೆ ಈ ಹಬ್ಬದಲ್ಲಿ ಮಾತ್ರ ತೋಟ ಗದ್ದೆಗೆ ಅಪ್ಪನದೇ ಪೂಜೆ. ನಾವು ಮೂರು ಮಕ್ಕಳು ಅಪ್ಪನ ಬಾಲ ಹಿಡಿದು ಈ ಪೂಜೆಯಲ್ಲಿ ಭಾಗವಹಿಸುತ್ತಿದ್ದೆವು. ಹಬ್ಬದ ಪ್ರಯುಕ್ತ ನಿತ್ಯಕ್ಕಿಂತ ಸ್ವಲ್ಪ  ಬೇಗ ಏಳುವುದು ಮಾತ್ರ ನಿದ್ರೆ ಗುಮ್ಮನಾದ ನನಗೆ ಸಂಕಟ ತರಿಸುತ್ತಿತ್ತು. ಆದರೆ ಅಮ್ಮ ಬಿಡಬೇಕಲ್ಲಾ!! ನಾನೇ ಹಿರಿಯವಳಾದ  ಕಾರಣ ನನ್ನ ಹೆಸರೇ ಮೊದಲು, ಪಲ್ಯಕ್ಕೆ ಸೊಪ್ಪು ತರಬೇಕು ಏಳರೇ  ಅನ್ನುವ ಸುಪ್ರಭಾತದಿಂದ ದಿನ  ಶುರುವಾಗುತ್ತಿತ್ತು. ಈ ಹಬ್ಬದ ವಿಶೇಷ ಅಡಿಗೆ ಅಂದರೆ ಬೆರಕೆ (ಮಿಶ್ರ) ಸೊಪ್ಪಿನ ಪಲ್ಯ. ಅಪ್ಪನ ಜೊತೆ ನಾವು ಮೂರು ಜನ ಮಕ್ಕಳು  ಮನೆ ಸುತ್ತಮುತ್ತ  ಇರುವ ಸೊಪ್ಪು ತರಲು ಹೋಗುವುದು ನನಗೆ ಇನ್ನು ನಿನ್ನೆ ಮೊನ್ನೆ ನೆಡೆದ ಹಾಗೆ ಅನಿಸುತ್ತದೆ. ಎಲ್ಲಾ ಗಿಡದ್ದೂ ಹತ್ತು ಹತ್ತು ಎಲೆ ಕುಯ್ಯಿರಿ ಸಾಕು ಅಂತ ಅಪ್ಪ ಹೇಳೆದೆ ತಡ , ನಾವು ಪಾರ್ಥೇನಿಯಂ ಸೇರಿಸಿ ಇದ್ದ ಬದ್ದ ಗಿಡದ ಎಲೆ  ಎಲ್ಲಾ ಬುಟ್ಟಿಗೆ ಸೇರಿಸುತ್ತಿದ್ದೇವು. ಅಪ್ಪನಿಗೆ ಅಡಿಗೆ ಯೋಗ್ಯವಾದ ಎಲೆಗಳನ್ನು ಬೇರೆ ಮಾಡುವುದೇ ಒಂದು ಕೆಲಸವಾಗುತ್ತಿತ್ತು. ನಮ್ಮ ಅವಾಂತರ ನೋಡಿ,  ಬರೀ  ತಿನ್ನಲು ಆಗುವಂತಹ ಎಲೆಗಳನ್ನು  ಮಾತ್ರ  ಕುಯ್ಯಿಬೇಕು  ಅಂತ ಅಪ್ಪ ಹೇಳಿದರೆ,  ಪ್ರತಿಯೊಂದು ಎಲೆಯನ್ನು ತೋರಿಸಿ ಇದು ಆಗುತ್ತಾ ? ಇದು ಆಗುತ್ತಾ? ಅಂತ ಮೂರು ಜನನ್ನು ಅಪ್ಪನ ತಲೆ ಚಿಟ್ಟು ಹಿಡಿಸಿ ಬಿಡುತ್ತಿದ್ದೀವಿ. ನಂತರ ತೋಟಕ್ಕೆ ಹೋಗಿ  ಪೂಜೆ ಮಾಡುವ ಜಾಗ ಸರಿ ಮಾಡಿ ಬರುವ ಕೆಲಸಕ್ಕೆ ಅಪ್ಪನ ಜೊತೆ ತೋಟಕ್ಕೂ ದಾಳಿ ಇಟ್ಟು, ಅಲ್ಲಿ ಸ್ವಲ್ಪ ಗಲಾಟೆ ಮಾಡಿ, ಮನೆಗೆ ಬರೋ ಅಷ್ಟೋತ್ತಿಗೆ ಅಮ್ಮ ಅಡಿಗೆಯಲ್ಲಿ ಬ್ಯುಸಿಯಾಗಿರುತ್ತಿದ್ದಳು. ನಾವು ಸ್ನಾನದ ಶಾಸ್ತ್ರ ಮುಗಿಸೋ ವೇಳೆಗೆ, ಮನೆ ತುಂಬಾ ನನ್ನ ಫೆವರೇಟ್ ಬೆರಕೆ ಸೊಪ್ಪಿನ ಪಲ್ಯದ ಗಮ. ಆದರೆ ತಿನ್ನೊಕ್ಕೆ ಪೂಜೆ  ಮುಗಿಯದೆ ಅನುಮತಿಯಿಲ್ಲ. ಅದರೆ ಈ ಪಲ್ಯಕ್ಕೆ ಉಪ್ಪು ಹಾಕದೆ ಮಾಡಲಾಗುತ್ತಿತ್ತು. ಕಾರಣ ಮಾತ್ರ ನನಗೆ ಇವತ್ತಿಗೂ  ಗೊತ್ತಿಲ್ಲ. ಅಮ್ಮ  ಒಂದು ಪಾತ್ರೆಗೆ ಅನ್ನ ಮತ್ತು ಪಲ್ಯ ಹಾಕಿ ಕಲಸಿ ಪೂಜೆಗೆ ಕಳುಹಿಸುತ್ತಿದ್ದಳು. ಪೂಜೆ ಯ ನಂತರ ಅದನ್ನು ತೋಟಕ್ಕೆ ಬೀರುವುದು ವಾಡಿಕೆ. ಅಪ್ಪ ಮುಂದೆ ಮುಂದೆ ಪಲ್ಯದ ಅನ್ನವನ್ನು ಬೀರುತ್ತಾ ಹೋದ ಹಾಗೆ ನಾನು ಅವನ ಹಿಂದೆ   ಪಾತ್ರೆ ಹಿಡಿದು ಹಿಂಬಾಲಿಸುತ್ತಿದ್ದೆ, ಅಪ್ಪನಿಗೆ ಕಾಣದ ಹಾಗೆ  ಸಾಕಷ್ಟು ಅನ್ನ ನನ್ನ ಹೊಟ್ಟೆ ಸೇರಿರುತ್ತಿತ್ತು. ಇದಕ್ಕಾಗಿಯೇ ನಾನು ತೋಟಕ್ಕೆ ಹೋಗುತ್ತಿದ್ದೆ ಅನ್ಸುತ್ತೆ.  ಆದರೆ  ತೋಟ ಗದ್ದೆಗೆ ಅನ್ನ ಚೆಲ್ಲುವುದು ಮಾತ್ರ ನನಗೆ ಇಷ್ಟ ಆಗುತ್ತಿರಲ್ಲಿಲ್ಲ.  ವೇಸ್ಟ್ ಅನ್ನೋದು ನನ್ನ ಭಾವನೆಯಾಗಿತ್ತು. ಅಗ  ಅಪ್ಪ ನಮ್ಮ ಜೀವನ ನೆಡೆಯೋದೆ ಈ ಜಮೀನಿನಿಂದ, ಇಡೀ ವರ್ಷ ಇದರಿಂದ ಲಾಭ ಪಡೆಯುತ್ತೇವೆ, ಒಂದು ದಿನ ಇದಕ್ಕಾಗಿ ನಾವು ಸ್ಪಲ್ಪ ಖರ್ಚು ಮಾಡಿದ್ದರೆ ಅದು ನಾವು ಭೂಮಿಗೆ ಸಲ್ಲಿಸುವ ಕೃತಜ್ಞತೆ ಅಂತ ಬುದ್ಧಿ ಹೇಳುತ್ತಿದ್ದ. ನಾವು ದೊಡ್ಡವರಾದ ಹಾಗೆ ಕಾಲೇಜು, ಹಾಸ್ಟೇಲ್ ಅಂತ ಹಬ್ಬಕ್ಕೆ ಮನೆಯಲ್ಲಿ  ಇರುತ್ತಿರಲಿಲ್ಲ.  ಹಾಗೆ ಹಬ್ಬದೊಂದಿಗಿನ  ನಂಟು ಕಡಿಮೆಯಾಗುತ್ತಾ ಬಂತು.
 ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ  ಆಳುಗಳು ಈ ಹಬ್ಬವನ್ನು ಬೇರೆ ತರ ಆಚರಿಸುತ್ತಿದ್ದರು. ರಾತ್ರಿ ಎಲ್ಲಾ ಅಡಿಗೆ ಮಾಡಿ, ಮುಂಜಾನೆ ಕಾಗೆ ಕೂಗುವ ಮುನ್ನ ಜಮೀನಿಗೆ ಪೂಜೆ ಮಾಡಿ, ಮಾಡಿದ ಭಕ್ಷ್ಯಗಳನ್ನು ಭೂ ತಾಯಿಗೆ ಅರ್ಪಿಸುತ್ತಿದ್ದರು. ಅವರಲ್ಲಿ  ಕೊಟ್ಟೆ  ಕಡಬು ಅ ದಿನ ವಿಶೇಷ, ಅದನ್ನು ಭೂಮಿಯ ಒಳಗೆ ಹೂಳಿ, ಗದ್ದೆ ಕುಯ್ಲಿನ ಸಮಯದಲ್ಲಿ ತೆಗೆದು ತಿನ್ನುವುದು ಅವರ ಆಚರಣೆ.  ಅವರ ಮನೆಗೆ ಹಬ್ಬಕ್ಕೆ ಹೋಗುವ ನನ್ನ ಆಸೆ ಮಾತ್ರ ಆಸೆಯಾಗಿಯೆ ಉಳಿಯಿತು. ಅದನ್ನು ಅಮ್ಮನ ಬಳಿ  ಹೇಳಿದಾಗ ಚೆನ್ನಾಗಿ ಬೈಯಿದು, ಬಾಯಿ ಮುಚ್ಚಿಸಿದ್ದಳು.
ಈಗ ಹಬ್ಬ ಮಾಡಿದರೂ, ಆ ಸಂಭ್ರಮ  ಇಲ್ಲ.  ಆದರೂ ನನಗೆ ಭೂಮಿ ಹುಣ್ಣಿಮೆ ಅತಿ ಪ್ರಿಯವಾದ ಹಬ್ಬ. ಹಲವು ವರ್ಷಗಳ ನಂತರವೂ ಬಾಲ್ಯದ ಈ ಹಬ್ಬದ ಆ ದಿನಗಳ ನೆನಪು ಹಸಿರಾಗಿದೆ, ಪ್ರತಿ ವರ್ಷವೂ ಅವುಗಳನ್ನು  ಮಿಸ್ ಮಾಡ್ಕೊಳುತ್ತೀನಿ ಮತ್ತು ನೆನೆಪುಗಳು ಕಾಡುತ್ತವೆ. ಆದರೆ ಈ ಬಾರಿ  ನನ್ನ ಮಗಳೊಂದಿಗೆ ಈ ಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅವಳಿಗೂ ಬಾಲ್ಯದ ಸುಂದರ ದಿನಗಳ  ನೆನಪುಗಳನ್ನು  ಉಳಿಸುವ ನಿಟ್ಟಿನಲ್ಲಿ...

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಿಂದೆಲ್ಲಾ ಪ್ರತಿಯೊಂದು ಹಬ್ಬ ಹರಿದಿನದಲ್ಲಿ ಒಂದಾಗುತ್ತಿದ್ದ ಸಂಬಂಧಿಕರೆಲ್ಲಾ, ಈಗ ಮದುವೆ ಮತ್ತು ಸಾವಿನ ಮನೆಗಳಲ್ಲಷ್ಟೇ ಸೇರಿಕೊಳ್ಳುವಲ್ಲಿಗೆ ಬಂದು ನಿಂತಿದೆ. ಇನ್ನೂ ಸ್ವಲ್ಪ ಕಾಲದ ನಂತರ ಅಲ್ಲಿಂದಲೂ ಮಾಯವಾಗುತ್ತಾರೆ, ಸಂಬಂಧಿಕರು! ತಮ್ಮ ನೆನಪಿನ ಬುತ್ತಿಯನ್ನು ನಮ್ಮ ಮುಂದೆ ಬಿಚ್ಚಿಟ್ಟುದುದಕ್ಕೆ ಧನ್ಯವಾದಗಳು. - ಆಸು ಹೆಗ್ಡೆ

ಧನ್ಯವಾದಗಳು!! ನಿಮ್ಮ ಮಾತು ನಿಜ ಅಸು ಹೆಗ್ಡೆ ಅವರೆ, ಈಗ ಒಡಹುಟ್ಟಿದವರೆ ಹಬ್ಬ ಹುಣ್ಣಿಮೆಗಳಿಗೆ ಒಟ್ಟು ಸೇರುವುದು ಅಪರೂಪವಾಗಿದೆ! ಇನ್ನೂ ಸಂಬಂಧಿಕರಂತೂ ದೂರದ ಮಾತು. ಹೀಗೆ ಮುಂದುವರೆದರೆ ನಮ್ಮ ಮಕ್ಕಳಿಗೆ ನಮ್ಮವರು ತಮ್ಮವರು ಅನ್ನುವ ಭಾವನೆಯೆ ಬೆಳೆಯುವುದು ಅಸಾಧ್ಯ. -ರಶ್ಮಿ.