ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ವಂಶದ ಕುಡಿ - ಒಂದು ಅಪೂರ್ಣ ಕಥೆ (ಸದಸ್ಯರು ಪೂರ್ಣಗೊಳಿಸಬೇಕೆಂದು ಕೋರುವೆ)

September 9, 2005 - 12:29pm — tvsrinivas41

ವಂಶದ ಕುಡಿ - ಭಾಗ ೧

ಪಾಂಡುರಂಗನನ್ನು ಮನೆಮಂದಿ ಮತ್ತು ಸ್ನೇಹಿತರೆಲ್ಲರೂ ಪ್ರೀತಿಯಾಗಿ ಪಾಂಡು ಅಂತ ಕರೆಯುತ್ತಿದ್ದರು. ತುಂಬಾ ಬುದ್ಧಿವಂತ, ಶಾಲಾಕಾಲೇಜುಗಳಲ್ಲಿ ಎಂದೂ ಮೊದಲನೇ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟವನಲ್ಲ. ಬಿ.ಕಾಂ. ಪದವಿಯನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.

ಪದವಿ ಪಡೆದ ಒಂದೆರಡು ದಿನಗಳಲ್ಲೇ ಬೆಂಗಳೂರಿನಲ್ಲೇ ಒಂದು ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಮುಂದೆ ಐ.ಸಿ.ಡಬ್ಲ್ಯು.ಏ. ಮಾಡಬೇಕೆಂದು ಯೋಚಿಸುತ್ತಿರುವಾಗಲೇ, ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಆಡಿಟರ್ ಆಗಿ ಕೆಲಸ ಸಿಕ್ಕಿತ್ತು. ಓದುವಾಗ ಹಾಸ್ಟಲ್‍ನಲ್ಲಿ ಇದ್ದವನು ಕೆಲಸ ಸಿಕ್ಕ ಕೂಡಲೇ ವಿಶ್ವೇಶ್ವರಪುರದಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದಿದ್ದ. ಮುಂದೆ ಓದಲು ಎಲ್ಲ ರೀತಿಯ ಅವಕಾಶಗಳಿದ್ದರೂ ಕೆಲಸ ಸಿಕ್ಕಿದುದರಿಂದಲೋ ಏನೋ ಮುಂದಿನ ಓದಿಗೆ ಶರಣು ಹೊಡೆದ. ಅಲ್ಲಿಯಾದರೋ ಅವನ ಅದೃಷ್ಟವೆಂಬಂತೆ ಅವನನ್ನು ಆಡಿಟ್ ಇಲಾಖೆಗೆ ಪೋಸ್ಟಿಂಗ್ ಮಾಡಿದ್ದರು. ಸರ್ಕಾರೀ ಸ್ವಾಮ್ಯದ ಇಲಾಖೆ, ಉದ್ಯಮಗಳ ಲೆಕ್ಕ ಪತ್ರಗಳ ತಪಾಸಣೆಯ ಕೆಲಸವನ್ನು ಮಾಡಬೇಕಿತ್ತು. ಮೊದಲನೆಯ ದಿನದಿಂದಲೇ ಶಿವಮೊಗ್ಗದ ಸಾರಿಗೆ ವಿಭಾಗದ ಆಡಿಟ್ ಕೆಲಸ ಮಾಡಬೇಕಿತ್ತು. ಇವನ ಜೊತೆಗೆ ಇಬ್ಬರು ಇವನದೇ ದರ್ಜೆಯ ಆಡಿಟರುಗಳು ಮತ್ತು ಒಬ್ಬರು ಸೆಕ್ಷನ್ ಆಫೀಸರು ಇರುತ್ತಿದ್ದರು. ಈ ಕೆಲಸದಲ್ಲಿ ಅವರೆಲ್ಲರೂ ನಿಷ್ಣಾತರಾಗಿದ್ದರು. ಮೊದಲು ಅವರುಗಳು ಇವನಿಗೆ ಆಡಿಟ್ ಮಾಡುವಾಗ ಹೇಗೆ ಹೇಗೆ ತಪ್ಪುಗಳನ್ನು ಹುಡುಕುವುದು, ಅದನ್ನು ಮುಚ್ಚಿ ಹಾಕಲು ಆ ವಿಭಾಗದವರನ್ನು ಹೇಗೆ ಉಪಯೋಗಿಸಿಕೊಳ್ಳುವುದು, ಹೊಟೆಲ್‍ನಲ್ಲಿ ನಾಲ್ಕೂ ಜನಗಳು ಒಂದೇ ರೂಮಿನಲ್ಲಿ ಇದ್ದು ಹೇಗೆ ಬೇರೆ ಬೇರೆಯ ರಸೀದಿಗಳನ್ನು ಪಡೆಯುವುದು ಎಂಬ ಎಲ್ಲ ಒಳಗುಟ್ಟುಗಳನ್ನೂ ತಿಳೀಸಿಕೊಟ್ಟಿದ್ದರು. ಇನ್ನು ರಿಪೋರ್ಟ್ ಕೊಡುವಾಗ ಹಿಂದಿನ ಬಾರಿ ಕೊಟ್ಟ ರಿಪೋರ್ಟ್ ತೆಗೆದು ಅಲ್ಲಿ ಇಲ್ಲಿ ಸ್ವಲ್ಪ ತಿದ್ದುಪಡಿ ಮಾಡಿ ಅದನ್ನೇ ಹೇಗೆ ಮತ್ತೆ ಕೊಡಬಹುದು ಎಂಬುದನ್ನೂ ತೋರಿಸಿಕೊಟ್ಟಿದ್ದರು. ತಿಂಗಳಲ್ಲಿ ಮೂರು ವಾರಗಳು ಆಡಿಟ್ ಕೆಲಸ. ಇನ್ನುಳಿದ ಒಂದು ವಾರದಲ್ಲಿ ಮೇಲಧಿಕಾರಿಗಳಿಗೆ ರಿಪೋರ್ಟ್ ತಯಾರಿಸಿ ಕೊಡುವುದು ಮತ್ತು ಅದು ಇದು ಕೆಲಸ ಮಾಡುವುದು ಇರುತ್ತಿತ್ತು. ಒಟ್ಟಿನಲ್ಲಿ ಆರಾಮಿನ ಜೀವನ. ಆದರೂ ಪಾಂಡು ಸುಲಭವಾಗಿ ದುಡ್ಡು ಮಾಡುವ ಕಾಯಕಕ್ಕೆ ಕೈ ಹಾಕಲಿಲ್ಲ. ಮತ್ತು ತನ್ನದೇ ಧಾಟಿಯಲ್ಲಿ ನಿಜಾಂಶ ತಿಳಿಸುವಂತಹ ರಿಪೋರ್ಟ್ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಹೀಗಾಗಿ ಮೇಲಧಿಕಾರಿಗಳಿಗೆ ಇವನ ಮೇಲೆ ಅಪರಿಮಿತ ನಂಬುಕೆ ಬಂದಿತ್ತು. ಇದಲ್ಲದೇ ಕೈತುಂಬಾ ಸಂಬಳ, ಅದರ ಮೇಲೆ ಆಡಿಟ್ ನಲ್ಲಿರುವಾಗ ಪ್ರತಿ ದಿನದ ಭತ್ಯೆ, ಇತ್ಯಾದಿಗಳಾಗಿ ಹಣ ಅನಾಯಾಸವಾಗಿ ಬಂದು ಕೈ ಸೇರುತ್ತಿತ್ತು. ಅದರಲ್ಲೇ ತನ್ನ ಖರ್ಚೆಲ್ಲವೂ ಆಗಿ ಹೋಗುತ್ತಿತ್ತು. ಅದಲ್ಲದೇ ಆಡಿಟ್‍ಗೆಂದು ಹೋದಾಗ ಆಯಾ ಡಿಪಾರ್ಟ್‍ಮೆಂಟಿನವರೇ ಊಟ ತಿಂಡಿ ಸಕಲವನ್ನೂ ವ್ಯವಸ್ಥೆ ಮಾಡುತ್ತಿದ್ದರು. ಹೀಗಾಗಿ ತಿಂಗಳಿಂದ ತಿಂಗಳಿಗೆ ಇವನ ಬ್ಯಾಂಕಿನ ಖಾತೆಯಲ್ಲಿ ಹಣ ಮೇಲೇರುತ್ತಿತ್ತೇ ಹೊರತು ಇಳಿಮುಖ ಕಾಣುತ್ತಲೇ ಇರಲಿಲ್ಲ.

ಇನ್ನು ಇವನ ಮನೆ ಕಡೇ ಅನುಕೂಲಸ್ಥರೇ. ಅವನ ತಂದೆ ರಾಮಸ್ವಾಮಯ್ಯನವರು ತುಮಕೂರಿನ ಜಿಲ್ಲೆಯ ಹಿರೇಹಳ್ಳಿಯ ಹತ್ತಿರದ ಒಂದು ಸಣ್ಣ ಹಳ್ಳಿಯಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದರು. ಐದು ಎಕರೆ ನೀರಾವರಿ ಜಮೀನು ಮತ್ತು ೫೦೦ ಮರಗಳ ತೆಂಗಿನ ತೋಟ ಅವರ ಹೆಸರಿನಲ್ಲಿ ಇದ್ದಿತ್ತು. ಅವರಿಗೆ ಹೊಟ್ಟೆ ಬಟ್ಟೆಗೇನೂ ಕೊರತೆ ಇಲ್ಲ. ಹೆಂಡತಿ ಲಕ್ಷ್ಮೀದೇವಿ ಗಂಡನಿಗೆ ತಕ್ಕಂತಿದ್ದಳು. ಇರುವನೊಬ್ಬನೇ ಮಗ. ಹುಡುಗ ಪಾಂಡುವಿನ ನಾಲ್ಕನೆಯ ತರಗತಿಯವರೆಗಿನ ವಿದ್ಯಾಭ್ಯಾಸ ತನ್ನೂರಿನಲ್ಲೇ ಮುಗಿದು, ಮುಂದೆ ಮಾಧ್ಯಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಹತ್ತಿರದ ಹಿರೇಹಳ್ಳಿಯಲ್ಲಿ ಮುಗಿದಿತ್ತು. ಹಿರೇಹಳ್ಳಿಗೆ ಪ್ರತಿದಿನ ತಂದೆಯು ಸೈಕಲ್ಲಿನ ಮೇಲೆ ಕೂಡ್ರಿಸಿಕೊಂಡು ಅವನನ್ನು ಶಾಲೆಗೆ ಬಿಟ್ಟು ಮತ್ತೆ ಕರೆದುತರುತ್ತಿದ್ದರು. ಅಲ್ಲಿಯವರೆವಿಗೆ ಹಿರೇಹಳ್ಳಿಯ ಶಾಲೆಗೆ ಪ್ರಥಮ ದರ್ಜೆಯಲ್ಲಿ ೧೦ನೇ ತರಗತಿಯನಲ್ಲಿ ಉತ್ತೀರ್ಣರಾದವರೇ ಇರಲಿಲ್ಲ. ಇವನೇ ಮೊದಲಿಗನಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ. ಶಾಲೆಯ ಮುಖ್ಯೋಪಾಧ್ಯಾಯರ ಶಿಫಾರಿಸಿನ ಮೇರೆಗೆ ಮುಂದಿನ ಕಾಲೇಜು ಅಭ್ಯಾಸಕ್ಕಾಗಿ ತುಮಕೂರಿಗೆ ಕಳುಹಿಸಿದ್ದರು. ಆಗ ತುಮಕೂರಿನಲ್ಲಿರುವ ಹಾಸ್ಟೆಲ್‍ನಲ್ಲಿ ಅವನ ವಾಸ. ಬಿ.ಕಾಂ. ಮುಗಿಯುವವರೆಗೂ ಅವನ ಓದು ಅಲ್ಲಿಯೇ ನಡೆದಿತ್ತು. ಓದು ಮುಗಿದ ಕೂಡಲೇ ಪ್ರೈವೇಟ್‍ನಲ್ಲಿ ಕೆಲಸ ಸಿಕ್ಕಿತೆಂದು ಬೆಂಗಳೂರಿಗೆ ಬಂದಿದ್ದನು. ಅಲ್ಲಿ ವಾಸ ಮಾಡಲು ಒಂದು ಸಣ್ಣ ಕೋಣೆಯನ್ನು ಮಾಡಿಕೊಂಡಿದ್ದನು.

ಹೇಗೂ ಮಗನ ಓದು ಮುಗಿದು ಒಳ್ಳೆಯ ಕಡೆ ಕೆಲಸ ಸಿಕ್ಕಿದ್ದಾಗಿದೆ. ಇನ್ನು ಕೈ ಬಾಯಿ ಸುಟ್ಟುಕೊಂಡು ಹೊಟ್ಟೆ ಹೊರೆಯುವ ಬದಲು ಮದುವೆ ಮಾಡಿಬಿಟ್ಟರೆ ಸರಿ, ತಮ್ಮ ಪಕ್ಕದ ಮನೆಯ ಹುಡುಗಿ ಜಯಲಕ್ಷ್ಮಿಯೇ ಸರಿಯಾದ ಜೋಡಿ ಎಂದು ಲಕ್ಷ್ಮೀದೇವಿ ತನ್ನ ಗಂಡನಿಗೆ ತಿಳಿಸಿದಳು. ಗಂಡನಾದರೋ ಇದಕ್ಕೇ ಕಾಯುತ್ತಿದ್ದವನಂತೆ ತಕ್ಷಣ ಒಪ್ಪಿಗೆ ಸೂಚಿಸಿದ. ಪಕ್ಕದ ಮನೆಯ ಜಯಲಕ್ಷಿಯ ತಂದೆಯಾದ ನರಸಿಂಹ ಮೂರ್ತಿಗಳಿಗೆ ಸ್ವರ್ಗ ಮೂರೇ ಗೇಣಿನಂತೆ ತೋರಿತ್ತು. ಇಷ್ಟು ಸುಲಭವಾಗಿ ಕನ್ಯಾಸೆರೆಯಿಂದ ಬಿಡುಗದೇ ಸಿಗುವುದೆಂದು ಎಂದು ಅವರು ಕನಸಿನಲ್ಲೂ ಎಣಿಸಿರಲಿಲ್ಲ. ಆದರೂ ಹುಡುಗನನ್ನು ಒಂದು ಮಾತು ಕೇಳಿ ಎಂದು ನರಸಿಂಹ ಮೂರ್ತಿಗಳು ರಾಮಸ್ವಾಮಯ್ಯನವರಿಗೆ ಹೇಳಿದರು.

ಅದಕ್ಕೆ ರಾಮಸ್ವಾಮಿಗಳು 'ಅಯ್ಯೋ, ಅವನನ್ನೇನು ಕೇಳೋದು, ಇನ್ನೂ ಹುಡುಗು ಮುಂಡೇದು. ಅವನಪ್ಪ ನಾನು ಅವನ ಪರವಾಗಿ ಹೇಳ್ತಿದ್ದೀನಿ, ಹುಡುಗ ಒಪ್ಪಿದ ಹಾಗೆಯೇ. ನೀವು ಬರುವ ಚೈತ್ರ ಮಾಸದಲ್ಲಿ ಒಳ್ಳೆಯ ಲಗ್ನ ನೋಡಿ ಮದುವೆ ಇಟ್ಟುಕೊಳ್ಳಿ, ಅದಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನೂ ಜೋಡಿಸಿಕೊಳ್ಳಿ' ಎಂದರು.

ಆದರೂ ನರಸಿಂಹ ಮೂರ್ತಿಗಳು, 'ಇನ್ನು ಹುಡುಗನಿಗೆ ವರೋಪಚಾರ ಎಂದೇನಾದರೂ ಬೇಕೋ ಹೇಗೆ ಕೇಳಿದರೆ ಒಳಿತು. ನೀವು ತಪ್ಪು ತಿಳಿಯದಿದ್ದರೆ ನಾನೇ ಒಂದು ಘಳಿಗೆ ಬೆಂಗಳೂರಿಗೆ ಹೋಗಿ ಪಾಂಡುವನ್ನು ನೋಡಿ ಬರುವೆ' ಎಂದರು.

ಅದಕ್ಕೆ ಪ್ರತಿಯಾಗಿ ರಾಮಸ್ವಾಮಿಗಳು, 'ಸರಿ, ನಿಮಗೆ ಹೇಗೆ ಬೇಕೋ ಹಾಗೆ ಮಾಡಿ. ಆದರೆ ವರದಕ್ಷಿಣೆ ಗಿರದಕ್ಷಿಣೆ ಅಂತೆಲ್ಲಾ ನೀವು ಅವನ ಮುಂದೆ ಏನೂ ಹೇಳಬೇಡಿ. ನಾನಿರುವವರೆಗೂ ಪಾಂಡುವೂ ಅದೇನನ್ನು ಕೇಳುವ ಹಾಗಿಲ್ಲ. ಅಷ್ಟು ಕೊಡಿಸಬೇಕೂಂತಿದ್ರೆ ಒಂದು ವಾಚು, ಉಂಗುರ, ಸೂಟು, ಬೂಟು ಇಷ್ಟೇ. ನೀವು ಬೇಕಿದ್ರೆ ಅವುಗಳ ಬಗ್ಗೆ ಅವನಿಗೇನು ಇಷ್ಟವೋ ಅದನ್ನು ಮಾತ್ರ ಕೇಳಿ ಅಷ್ಟೆ. ಹೇಗಿದ್ದರೂ ಅವನು ಆಡಿಟ್ ಮುಗಿಸಿ ಬೆಂಗಳೂರಿನಲ್ಲೇ ಇದ್ದಾನೆ, ನಾಳೆಯೇ ಹೋಗಿ ಬನ್ನಿ' ಎಂದರು.

ಆದರೂ ಮೂರ್ತಿಗಳ ಒಳ ಮನಸ್ಸು ಯಾಕೋ ಏನೋ ಈ ಆತುರದ ನಿರ್ಧಾರ ಸರಿ ಇಲ್ಲ ಅಂತಲೇ ಹೇಳ್ತಿತ್ತು. ಅದನ್ನು ರಾಮಸ್ವಾಮಿಗಳ ಮುಂದೆ ಹೇಳಿಕೊಳ್ಳಲಾಗ್ತಿಲ್ಲ. ಅದೇನೆಂದು ಎಂದು ಅವರಿಗೂ ಸರಿಯಾಗಿ ಚಿಂತಿಸಲಾಗುತ್ತಿಲ್ಲ. ಸರಿ ದೇವರಿಟ್ಟ ಹಾಗಾಗಲಿ, ಎಂದು ಮಾರನೆಯ ದಿನದ ಮೊದಲನೆ ಬಸ್ಸಿಗೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ನರಸಿಂಹ ಮೂರ್ತಿಗಳ ಏಕೈಕ ಪುತ್ರಿ ಜಯಲಕ್ಷ್ಮಿ ಹುಟ್ಟಿದ ವರುಷದಲ್ಲಿಯೇ ಅಮ್ಮನನ್ನು ಕಳೆದುಕೊಂಡಿದ್ದಳು. ಮಗಳಿಗೆ ಮಲತಾಯಿಯ ಕಾಟ ತಾಗಬಾರದೆಂದು ಮೂರ್ತಿಗಳು ಮತ್ತೆ ಮದುವೆಯಾಗಲಿಲ್ಲ. ಮಗಳನ್ನು ಅಂಗೈಯಲ್ಲಿ ಇಟ್ಟು ಸಾಕಿದರು. ಹೆಣ್ಣಿಲ್ಲದ ಮನೆಯಲ್ಲಿ ಹೆಣ್ಣು ಮಗವನ್ನು ಸಾಕುವುದು ಅಷ್ಟು ಸುಲಭವೇ? ಪಕ್ಕದಲ್ಲೇ ಇದ್ದ ಲಕ್ಷ್ಮೀದೇವಿಯವರು ಜಯಲಕ್ಷ್ಮಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಲಕ್ಷ್ಮೀದೇವಿಯವರಿಗೆ ಜಯಲಕ್ಷ್ಮಿ ಬಲು ಮೆಚ್ಚುಗೆಯ ಹುಡುಗಿಯಾಗಿದ್ದಳು. ಹುಡುಗಿ ಹಳ್ಳಿಯ ಶಾಲೆಯಲ್ಲಿಯೇ ನಾಲ್ಕನೆಯ ತರಗತಿಯವರೆವಿಗೆ ಓದಿದ್ದಳು. ಮುಂದಿನ ತರಗತಿ ಅಲ್ಲಿ ಇರಲಿಲ್ಲವಾಗಿ ಅವಳ ಓದು ಅಲ್ಲಿಗೇ ನಿಂತಿತ್ತು. ಲಕ್ಷ್ಮೀದೇವಿಯವರಿಂದ ಹಾಡು, ಹಸೆ, ಅಡುಗೆ ಎಲ್ಲವನ್ನೂ ಚೊಕ್ಕವಾಗಿ ಮಾಡುವುದನ್ನು ಕಲಿತಿದ್ದಳು. ಇವಳ ಜಾಣತನಕ್ಕೆ ಮೆಚ್ಚಿ ಲಕ್ಷ್ಮೀದೇವಿಯವರು ಇವಳೇ ತನ್ನ ಸೊಸೆಯಾಗಬೇಕೆಂದು ಬಹಳ ಹಿಂದೆಯೇ ಮನಸ್ಸು ಮಾಡಿದ್ದರು. ಆದರೆ ಈ ವಿಷಯವನ್ನು ಯಾರೊಂದಿಗೂ ಅರುಹಿರಲಿಲ್ಲವಷ್ಟೆ. ಮಧ್ಯೆ ಮಧ್ಯೆ ಅವಳೊಂದಿಗೆ ಪಾಂಡುವಿನ ವಿಷ್ಯವನ್ನೇನಾದರೂ ಹೇಳುತ್ತಿದ್ದರೆ ತದೇಕಚಿತ್ತಳಾಗಿ ಆ ಹುಡುಗಿ ಆಲಿಸುವುದು ನೋಡಿ ಅವರ ನಿರ್ಧಾರ ಇನ್ನೂ ಬಲವಾಗುತ್ತಿತ್ತು. ಈಗ ಪಕ್ಕದ ಮನೆಯಿಂದ ತನ್ನ ಮನೆಗೆ ಹೆಣ್ಣುಮಗುವನ್ನು ತುಂಬಿಸಿಕೊಳ್ಳುವ ಕಾಲ ಕೂಡಿ ಬಂದಿತ್ತು.

ಮೂರ್ತಿಗಳು ಪಾಂಡುವಿನ ಮನೆ ತಲುಪಿದಾಗ ಅವನ ಕೋಣೆಯ ಬಾಗಿಲಿಗೆ ಬಿಗ ಜಡಿದಿತ್ತು. ಪಕ್ಕದ ಮನೆಯವರು ತಿಳಿಸಿದು, ಹಿಂದಿನ ರಾತ್ರಿಯೇ ಅರ್ಜಂಟಾಗಿ ಪಾಂಡುವು ಆಡಿಟ್‍ಗಾಗಿ ಬೆಳಗಾವಿಗೆ ಬೆಳಗಾವಿಗೆ ಹೋಗಿದ್ದಾನೆ ಎಂತಲೂ, ಬರುವುದು ಇನ್ನೂ ಒಂದು ವಾರವಾಗಬಹುದು ಬಹಳ ದಿನಗಳಾಗುತ್ತದೆ.

ಅಂದೇ ಊರಿಗೆ ವಾಪಸ್ಸಾಗಿ ರಾಮಸ್ವಾಮಿಗಳಿಗೆ ವಿಷಯವನ್ನು ಅರುಹಿದರು. ಆಗ ರಾಮಸ್ವಾಮಿಗಳು, 'ನಾನು ಬೇಡಾಂದ್ರೂ, ನೀವ್ಯಾಕೆ ಹೋದ್ರಿ, ಹೋಗ್ಲಿ ಬಿಡಿ ಅದೇನು ಅರ್ಜೆಂಟ್ ಕೆಲಸವೋ ನನಗೋ ಅವನಿನ್ನೂ ತಿಳಿಸಿಲ್ಲ. ಎಷ್ಟೇ ಆಗಲಿ ಅವನು ನನ್ನ ಮಗ, ನಾನು ಹೇಳಿದ ಮೇಲೆ ಮುಗಿದುಹೋಯ್ತು. ನನ್ನ ಮಾತನ್ನು ಅವನು ತಳ್ಳಿಹಾಕುವುದಿಲ್ಲ. ನೀವು ಮದುವೆಗೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಳ್ಳಿ'.

ಎರಡು ದಿನಗಳ ನಂತರ ರಾತ್ರಿ ೮ ಘಂಟೆಗೆ ಪಾಂಡು ತನ್ನಮ್ಮನಿಗೆ ಬೆಳಗಾವಿಯಿಂದ ಫೋನ್ ಮಾಡಿ, ಬೆಳಗಾವಿಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಏನೋ ಅವ್ಯವಹಾರವಾಗಿ ತುರ್ತಾಗಿ ಅದರ ಆಡಿಟ್ ಮಾಡಬೇಕಾಗಿ ಅವನು ಅಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದ. ಆಗ ಅವನಮ್ಮ ಅವನ ಮದುವೆ ಬಗ್ಗೆ ತಿಳಿಸಿದಾಗ, ಅವನ ಮೊದಲ ಪ್ರತಿಕ್ರಿಯೆಯಾಗಿ 'ಅಯ್ಯೋ ಈಗಲೇ ಬೇಡಮ್ಮ, ನಾನಿನ್ನೂ ಎಸ್.ಏ.ಎಸ್. ಪರೀಕ್ಷೆ ತೆಗೆದುಕೊಳ್ಳಬೇಕು. ಅದರಲ್ಲಿ ಪಾಸಾದರೆ ಆಫೀಸರ್ ಆಗಬಹುದು, ಅದೇ ತನ್ನ ಉದ್ದೇಶ. ಆಫೀಸರ್ ಆದಮೇಲೆ ಮದುವೆ ಆದರೆ ಸಮಾಜದಲ್ಲಿ ತನ್ನ ಸ್ಥಾನವೇ ಬೇರೆಯದಾಗಿರತ್ತೆ' ಎಂದು ತಿಳಿಸಿದ್ದ. ಪ್ರತ್ಯುತ್ತರವಾಗಿ ಅವನಮ್ಮ, 'ಈ ವಿಷಯದಲ್ಲಿ ನಾನಿನ್ನೇನೂ ಹೆಚ್ಚಿಗೆ ಮಾತನಾಡೋಲ್ಲ, ಅವರೇ ಮಾತಾಡ್ತಾರೆ, ಕೇಳಿಸಿಕೋ' ಎಂದು ರಿಸೀವರ್ ಅನ್ನು ತನ್ನ ಗಂಡನ ಕೈಗೆ ಕೊಟ್ಟಿದ್ದಳು. ರಾಮಸ್ವಾಮಿಗಳದ್ದು ಸ್ವಲ್ಪ ಮುಂಗೋಪದ ಸ್ವಭಾವ. ಅವರು ಮಗನ ಸ್ವರವನ್ನು ಕೇಳುತ್ತಿದ್ದಂತೆಯೇ, ಕೋಪಗೊಂಡು, ಈ ಮನೆಯಲ್ಲಿ ನಾನು ಹೇಳಿದ್ದೇ ಕೊನೆ, ದೂಸರಾ ಮಾತನಾಡೋ ಹಕ್ಕು ಯಾರಿಗೂ ಇಲ್ಲ. ಇನ್ನು ಎರಡು ತಿಂಗಳಿಗೆ ಮದುವೆ ಎಂದು ನಿಷ್ಕರ್ಶೆ ಆಗಿದೆ, ರಜೆ ಹಾಕಿ ಊರಿಗೆ ಬರಬೇಕು ಅಷ್ಟೆ' ಎಂದು - ಪಾಂಡುವಿನಿಂದ ಮುಂದಿನ ಮಾತು ಕೇಳಿಸಿಕೊಳ್ಳುವ ಮುನ್ನವೇ ರಿಸೀವರ್ ಕೆಳಗೆ ಇಟ್ಟುಬಿಟ್ಟಿದ್ದರು.

ಅಪ್ಪನ ಒತ್ತಾಯದ ಮೇರೆಗೆ ಪಾಂಡು ಏಪ್ರಿಲ್ ನಲ್ಲಿ ಒಂದು ವಾರದ ಮಟ್ಟಿಗೆ ರಜೆ ಹಾಕಿ ಊರಿಗೆ ಬಂದಿದ್ದ. ಮದುವೆಯನ್ನು ಊರಿನಲ್ಲೇ ಮಾಡಿ ಮುಗಿಸಿದ್ದರು. ಇಲ್ಲಿಯವರೆವಿಗೆ ಬೆಂಗಳೂರಿನ ಥಳಕು ಬಳುಕಿನ ಹುಡುಗಿಯರನ್ನು ನೋಡಿದ್ದ ಪಾಂಡು ಈ ಹಳ್ಳಿಯ ಹುಡುಗಿಯನ್ನು ಮದುವೆ ಆಗಲು ಸ್ವಲ್ಪ ಇಷ್ಟವಿರಲಿಲ್ಲವಾಗಿ, ಮದುವೆಯ ಬಳಿಕವೂ ತನ್ನ ಹೆಂಡತಿಯೊಡನೆ ಸರಿಯಾಗಿ ಮಾತನ್ನೂ ಆಡಿರಲಿಲ್ಲ. ಮದುವೆ ಮುಗಿದ ಕೂಡಲೇ ಹೆಂಡತಿಯನ್ನೂ ಕರೆದೊಯ್ಯದೇ ತುರ್ತಾಗಿ ಕೆಲಸವಿದೆಯೆಂದು ಬೆಂಗಳೂರಿಗೆ ಹೊರಟುಹೋಗಿದ್ದ. ಹೋಗುವಾಗ ಜಯಲಕ್ಷ್ಮಿಗೆ ಒಂದು ಮಾತನ್ನೂ ಹೇಳಿರಲಿಲ್ಲ. ಪೆಚ್ಚು ಮೋರೆ ಹಾಕಿದ್ದ ಜಯಲಕ್ಷ್ಮಿಗೆ ಅವಳತ್ತೆ 'ನೀನೇನೂ ಬೇಜಾರು ಮಾಡ್ಕೋಬೇಡ. ಅವನ ಸ್ವಭಾವೇ ಹಾಗೆ. ಎಲ್ಲರೆದುರಿಗೆ ಜಾಸ್ತಿ ಮಾತನಾಡೋಲ್ಲ. ಅದೂ ಅಲ್ಲದೇ ಇಲ್ಲಿ ಅವನಪ್ಪನ ಭಯ ಅವನಿಗಿದೆ. ನಾವೇ ನಿನ್ನನ್ನು ಬೆಂಗಳೂರಿಗೆ ಕರೆದೊಯ್ಯುವೆವು. ಅಲ್ಲಿಗೆ ಹೋಗಿ ಮನೆತುಂಬಿಸಿಕೊಂಡ ಮೇಲೆ ಎಲ್ಲ ತನಗೆ ತಾನೇ ಸರಿ ಹೋಗುತ್ತದೆ' ಎಂದಿದ್ದರು. ಇಷ್ಟು ದಿನಗಳು ಅವರನ್ನು ಹತ್ತಿರ ನೋಡಿದ್ದ ಜಯಲಕ್ಷ್ಮಿಗೆ ಅವರೇ ತನ್ನ ತಾಯಿಯೇನೋ ಎನ್ನುವಂತಾಗಿ ಕಣ್ಣಲ್ಲಿ ಆನಂದಭಾಷ್ಪ ಇಣುಕಿ ನೋಡಿತ್ತು. ಯಾರಿಗೂ ಕಾಣಿಸದಂತೆ ಕಣ್ಣೊರೆಸಿಕೊಂಡಿದ್ದಳು.
ಮುಂದೆ ಇನ್ನೊಂದು ತಿಂಗಳವರೆಗೆ ಪಾಂಡುವಿನಿಂದ ಏನೂ ವಿಷಯ ತಿಳಿಯದಿರಲು, ರಾಮಸ್ವಾಮಿಗಳು ಲಕ್ಷ್ಮೀದೇವಿಯವರು, ಮತ್ತು ನರಸಿಂಹಮೂರ್ತಿಗಳು ಜಯಲಕ್ಷ್ಮಿ ತಮ್ಮ ಜೊತೆಗೆ ಕರೆದುಕೊಂಡು ಬೆಂಗಳೂರಿಗೆ ಬಂದಿದ್ದರು. ಆಗ ಪಾಂಡು ಊರಿನಲ್ಲೇ ಇದ್ದ. ಗಂಡನ ಸ್ವಭಾವವನ್ನರಿತಿದ್ದ ಲಕ್ಷ್ಮೀದೇವಿಯವರು ಊರಿನಿಂದ ಹೊರಡುವ ಮುಂಚೆಯೇ ತನ್ನ ಗಂಡನಿಗೆ - 'ಎಲ್ಲರ ಎದುರಿನಲ್ಲಿ ಪಾಂಡುವನ್ನು ಬೈಬೇಡಿ, ಅವನಿಗೆ ಅವಮಾನ ಆಗತ್ತೆ, ಅದರಿಂದ ಸೊಸೆಗೇ ತೊಂದರೆ ಆಗಬಹುದು' ಎಂದು ತಿಳಿಸಿದ್ದರು. ಬೆಂಗಳೂರಿಗೆ ಬಂದ ಮೇಲೆ ಅವರೇ ಪಾಂಡುವಿಗೆ ಸ್ವಲ್ಪ ಬುದ್ಧಿ ಹೇಳಿ ಇನ್ನು ಮುಂದೆ ಸೊಸೆಯೊಂದಿಗೆ ಸರಿಯಾಗಿ ಇರಲು ಹೇಳಿದ್ದರು. ಎರಡು ದಿನ ಎಲ್ಲರೂ ಅಲ್ಲಿಯೇ ಇದ್ದು, ನಂತರ ಊರಿಗೆ ವಾಪಸ್ಸಾಗಿದ್ದರು.

ಜಯಲಕ್ಷ್ಮಿ ಗಂಡನ ಮುಂದೆ ಭಯದಿಂದಲೇ ಇರುತ್ತಿದ್ದಳು. ಹೀಗೇ ಕಾಲ ಕಳೆಯುತ್ತಿದ್ದಂತೆ ಸ್ವಲ್ಪ ಕಾಲದಲ್ಲೆ ಜಯ ಗರ್ಭವತಿಯಾಗಿದ್ದಳು. ಜಯಾಳಿಗೆ ೪ ತಿಂಗಳು ತುಂಬುತ್ತಿದ್ದಂತೆಯೇ 'ಇಲ್ಲಿ ಯಾರೂ ನೋಡುವವರಿಲ್ಲವೆಂದೂ, ಮಗ ಎಂದೂ ಆಡಿಟ್ ಎಂದು ಅಲ್ಲಿ ಇಲ್ಲಿ ಅಲೆಯುತ್ತಿರುತ್ತಾನೆಂದೂ' ಲಕ್ಷ್ಮೀದೇವಿಯವರು ಸೊಸೆಯನ್ನು ಊರಿಗೆ ಕರೆದೊಯ್ದಿದ್ದರು. ಅತ್ತೆಯ ಆರೈಕೆಯಿಂದ ಗಂಡು ಮಗುವೇ ಹುಟ್ಟಿತ್ತು. ಮಗು ಹುಟ್ಟಿದಾಗಲೊಮ್ಮೆ ಪಾಂಡು ಊರಿಗೆ ಬಂದವನು, ಮತ್ತೆ ಈ ಕಡೆ ತಲೆಯೇ ಹಾಕಿರಲಿಲ್ಲ. ಮಗುವಿನ ಆರೈಕೆ ಮಾಡಲು ಬೆಂಗಳೂರಿನಲ್ಲಿ ಯಾರೂ ಇಲ್ಲವೆಂದು ಲಕ್ಷ್ಮೀದೇವಿಯವರು ಸೊಸೆಯನ್ನೂ ಬೆಂಗಳೂರಿಗೆ ಹೋಗಲು ತಕ್ಷಣ್ವವೇ ಬಿಟ್ಟಿರಲಿಲ್ಲ. ಹಾಗೇ ಜಯಗೂ ಅತ್ತೆಯ ಸನಿಹವೇ ಸುಖ ಸಿಕ್ಕಿತ್ತು. ಎಂದೂ ಮಗುವಿನ ಜೊತೆಗೇ ಇದ್ದು ಗಂಡನನ್ನು ಮರೆಯೋ ಸ್ಥಿತಿಗೆ ಬಂದು ಬಿಟ್ಟಿದ್ದಳು.

ಹೀಗೇ ಒಂದು ವರ್ಷ ಕಳೆಯುತ್ತಿರಲು, ಒಂದು ಪಾಂಡುವಿನಿಂದ ಫೋನ್ ಬಂದಿತ್ತು. ತಾನು ಎಸ್.ಏ.ಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದೂ ಒಂದು ತಿಂಗಳುಗಳಲ್ಲೇ ಪ್ರಮೋಶನ್ ಆಗುವುದೆಂದೂ ನವದೆಹಲಿಗೆ ಪೋಸ್ಟಿಂಗ್ ಕೊಟ್ಟಿರುವುದಾಗಿ ಮೊದಲು ಅಲ್ಲಿಗೆ ತಾನೊಬ್ಬನೇ ಹೊರಡಲು ತಯಾರಿ ನಡೇಸಿದ್ದೇನೆಂದೂ ತಿಳಿಸಿದ್ದನು. ಎಲ್ಲರಿಗೂ ಒಂದು ಕಡೆ ತಮ್ಮವನು ದೆಹಲಿಯಲ್ಲಿ ಆಫೀಸರ್ ಆಗಿರುವನೆಂದು ಸಂತೋಷವಾದರೂ ಇನ್ನೊಂದೆಡೆ ಸಂಸಾರದಿಂದ ವಂಚಿತನಾಗುತ್ತಿದ್ದಾನಲ್ಲಾ ಎಂಬ ಕೊರಗೂ ಇತ್ತು. ಊರಿನ ಕಡೆ ಬರದೇ ಪಾಂಡು ದೆಹಲಿಗೆ ಹೊರಟು ಹೋಗಿದ್ದ. ನಾಲ್ಕು ತಿಂಗಳ ಬಳಿಕ ರಾಮಸ್ವಾಮಿಗಳು ಹೃದಯಾಘಾತದಿಂದ ನಿಧನ ಹೊಂದಿದ್ದರು. ಆಗ ಪಾಂಡು ಊರಿಗೆ ಬರಲೇ ಬೇಕಾಗಿತ್ತು. ಎಲ್ಲ ಕಾರ್ಯಗಳೂ ಮುಗಿದ ಮೇಲೆ, ಲಕ್ಷ್ಮೀದೇವಮ್ಮನವರು ಜಯಾಳನ್ನೂ ಮಗುವನ್ನೂ ದೆಹಲಿಗೆ ಕರೆದೊಯ್ಯುವಂತೆ ಪಾಂಡುವಿಗೆ ತಿಳಿಸಿದರು. ಅದಕ್ಕೆ ಅವನು, ಅಮ್ಮ ನೀನಂತೂ ವರುಷ ಕಳೆಯುವವರೆಗೂ ಮನೆ ಬಿಡೋ ಹಾಗಿಲ್ಲ, ಹಾಗೇ ಅಲ್ಲಿಗೆ ಬರೋದಿಕ್ಕಾಗೋಲ್ಲ. ಅಲ್ಲಿಯಾದರೋ ಹಿಂದಿ ಇಂಗ್ಲೀಷ್ ಬಿಟ್ಟು ಬೇರೆ ಭಾಷೆಗಳಲ್ಲಿ ಮಾತನಾಡುವವರು ಇಲ್ಲವೇ ಇಲ್ಲ. ನಾನಂತೂ ನನ್ನ ಕೆಲಸಗಳಲ್ಲಿ ಮುಳುಗಿಹೋಗಿರ್ತೀನಿ. ಈ ಹಳ್ಳಿಗೊಡ್ಡು ಅಲ್ಲಿ ಹೇಗೆ ಸಂಸಾರ ನಡೆಸುತ್ತಾಳೆ. ಅವಳನ್ನು ನಾನು ಕರೆದೊಯ್ಯೋಲ್ಲ. ಮುಂದೆ ಯಾವಾಗಲಾದರೂ ನೋಡೋಣ ಎಂದು ಕೈಯಾಡಿಸಿ ಹೊರಟೇಬಿಟ್ಟ. ಈಗ ಅವನ ಮೇಲೆ ಕೋಪ ಮಾಡಿಕೊಂಡು ಬಯ್ಯಲು ಅವರಪ್ಪ ಇರ್ಲಿಲ್ವಲ್ಲ. ಅವನಿಗೆ ಹೇಳುವವರು ಕೇಳುವವರು ಯಾರಿದ್ದಾರೆ.

ಮುಂದಿನ ಭಾಗಕ್ಕೆ ನಿರೀಕ್ಷಿಸಿ.

  • ಕಥಾ ಮಾಲಿಕೆ
~.~
  • Login or register to post comments
  • 759 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 10, 2008 - 5:34pm — ASHMYA

ಉ: ವಂಶದ ಕುಡಿ - ಒಂದು ಅಪೂರ್ಣ ಕಥೆ (ಸದಸ್ಯರು ಪೂರ್ಣಗೊಳಿಸಬೇಕೆಂದು ಕೋರುವೆ)

ASHMYA's picture

'ಅತ್ತೆಯ ಆರೈಕೆಯಿಂದ ಗಂಡು ಮಗುವೇ ಹುಟ್ಟಿತ್ತು' ಎಂದು ಹೇಳಿರುವಿರಿ...ಆರೈಕೆ ಚೆನ್ನಾಗಿ ಮಾಡಿದರೆ ಗಂಡು ಮಗು ಹುಟ್ಟುತ್ತದೆ ಎನ್ನುವುದಾದರೆ, ಗಂಡು ಮಗು ಬೇಕೆನ್ನುವ ಎಲ್ಲಾ ಅತ್ತೆಯರು ಅದೇ ಮಾಡುತ್ತಿದ್ದರು ಅಲ್ಲವೆ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ಮಯೋಗಿ ಭಾಗ ೨
  • ಫಲಿಸಿದ ಪ್ರೇಮ
  • ನಾ ಅಮೆರಿಕೆಯಿಂದ ಬಂದಾಗ
  • ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೨
  • ಶನಿಕಾಟ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • Atlantadalli gaade gaurajji
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator