ಒಂದು ರೇಡಿಯೋ ಕವಿತೆ
ಆಗ ರೇಡಿಯೋ ಇರಲಿಲ್ಲ . ಆದರೆ ದೊಡ್ಡ ಬೀಟೆಯ ಮರದ ಪೆಟ್ಟಿಗೆ ಮಾತ್ರ ಉಳಿದಿತ್ತು
ಒಳಗೆ ಅಪ್ಪನ ಬೀಡಿ ಪೊಟ್ಟಣ, ಅರಬಿ ಪುಸ್ತಕ, ಕೆಮ್ಮಿನ ಔಷದಿ,
ಮೊಲದ ಬೇಟೆಗೆ ತಂದು ಇಟ್ಟಿದ್ದ ನಾಡಕೋವಿಯ ತೋಟೆ,
ಅವರ ಕನ್ನಡಕ,ಅಂಗಡಿಯ ಸಾಲದ ಪುಸ್ತಕ, ನಮಗೆ ಕದ್ದು ಮುಚ್ಚಿ
ಮುದ್ದು ಮಾಡಲು ತಂದಿಟ್ಟಿದ್ದ ಮಿಠಾಯಿ ಮತ್ತು ಅವರ ಮೂಗು ಒರೆಸಿಟ್ಟ ಕರ್ಚೀಪು.
ನಮ್ಮಷ್ಟಕ್ಕೆ ನಮಗೆ ಯಾವುದೂ ಎಟುಕುತ್ತಿರಲಿಲ್ಲ. . . . .
ಮತ್ತು ರೇಡಿಯೋ ಅಂದರೆ ಏನು ಅಂತ ಗೊತ್ತಿರಲಿಲ್ಲ
ಈಗ ರೇಡಿಯೋ ಕೈಗೆಟುಕುತ್ತಿದೆ. ಅಪ್ಪ ನೋಡಲು ಸಿಗುತ್ತಿಲ್ಲ
ಅವರ ಸದ್ದು, ಆಕಾರ, ರೇಡಿಯೋ ಪೆಟ್ಟಿಗೆಯಂತಿರುವ ಅವರ ನೆನಪುಗಳು
ಎಲ್ಲ ಕೇಳಿಸುತ್ತಿದೆ.. ಅವರ ಕೈ ಹಿಡಿದು ಕೊಳ್ಳಲು ಸಿಗುತ್ತಿಲ್ಲ
ಆಗ `ಆ' ಹೇಗೆ `ಹಾ' ಹೇಗೆ
`ಕ' ಹೇಗೆ `ಖ' ಹೇಗೆ ಹೇಳಲಾಗದೆ ಪಂಡಿತರು ಒದೆಯುತ್ತಿದ್ದರು
ಪಂಡಿತರ ಹೆಂಡತಿ ಭಾಗವತರ ಜೊತೆ ಊರು ಬಿಟ್ಟಾಗ
ಅವರ ಒದೆತಕ್ಕೆ ಕಾರಣ ಗೊತ್ತಾಗಿ ಅವರ ಮುಖ ನೋಡಿ
ಅಳು ಬಂದಿತ್ತು.
ಈಗ ಒಮ್ಮೊಮ್ಮೆ `ಅ' ಮತ್ತು `ಹ' ಕೆಟ್ಟು ಹೋದಾಗ
ಸಣ್ಣಗೆ ಖುಷಿಯಾಗುತ್ತದೆ . ಪಂಡಿತರ ಓದು, ಭಾಗವತರ ಹಾಡು
ಮತ್ತು ಓಡಿಹೋದವಳ ನೆಲೆಯಿಲ್ಲದ ಪ್ರಣಯ!
ರೇಡಿಯೋ ಮಾತನಾಡುವುದು, ಹಾಡುವುದು,
ದೊಡ್ಡ ದೊಡ್ಡ ಮಾತುಗಳ ಹೇಳುವುದು
ಯಾವ ದನಿಯೂ ಕೇಳಿಸದೆ ಸುಮ್ಮನೆ ಮುಖ ನೋಡುತ್ತ ನಿಂತು ಬಿಡುತ್ತೇನೆ
ಓಡಿಹೋಗುವ ಖುಷಿ ಇನ್ನೆಲ್ಲಿದೆ ಅನಿಸುತ್ತದೆ
ರೇಡಿಯೋ ಮಾತನಾಡುತ್ತಿರುತ್ತದೆ.. .. .. ..
ಈಗ ನೋಡಿದರೆ ಅನ್ನ ಬಟ್ಟೆ ಮಾಡು ಎಲ್ಲವೂ ರೇಡಿಯೋದ್ದೇ..!
ಅಂಗೈಯಲ್ಲಿರುವ ಚಂದದ ಪೆಟ್ಟಿಗೆಯಲ್ಲಿ ನನ್ನದೇ ಉಲಿಯುವಿಕೆ!
ಕಣ್ಣುತುಂಬುತ್ತದೆ ಮತ್ತು ಎಂತಹದೋ ಮಂದಹಾಸ
ಸಣ್ಣದಿರುವಾಗ ಖಾಲಿ ರೇಡಿಯೋ ಪೆಟ್ಟಿಗೆಯೊಳಕ್ಕೆ
ಕೈ ಎಟುಕುವುದು ಯಾವಾಗ..ಕಾಲುಗಳು..ಕೈಗಳು..ಬೆರಳುಗಳು
ಬೆಳೆದು ದೊಡ್ಡದಾಗುವುದು ಯಾವಾಗ ಎಂದು ಅಪ್ಪನನ್ನು ನೋಡಿ
ನೊಂದುಕೊಳ್ಳುತ್ತಿದುದು ನೆನಪಾಗುತ್ತಿದೆ.

- Login or register to post comments
- 750 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಒಳ್ಳೆಯ ಕವಿತೆ
ಬಹಳ ದಿನಗಳ ನಂತರ ಒಳ್ಳೆಯದೊಂದು ಕವಿತೆ ಓದಿದೆ. ರಶೀದ್ ಅವರಿಗೆ ಅಭಿನಂದನೆಗಳು, ಧನ್ಯವಾದಗಳು.
-ಯಾಮಿ
ಉ: ಒಳ್ಳೆಯ ಕವಿತೆ
ರಶೀದರು ಬರೆಯೋ ಬ್ಲಾಗು ನೋಡಿದ್ದೀರಾ?
ಅಲ್ಲಿ ಕೆಲವು ಬಹಳ ಒಳ್ಳೆಯ ಲೇಖನಗಳಿವೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಒಂದು ರೇಡಿಯೋ ಕವಿತೆ
ಚೆನ್ನಾಗಿದೆ ಕವಿತೆ,
ಅಂಗೈಯಲ್ಲಿರುವ ಚಂದದ ಪೆಟ್ಟಿಗೆಯಲ್ಲಿ ನನ್ನದೇ ಉಲಿಯುವಿಕೆ!
ಸರ್, ನೀವು ಯಾವ ರೇಡಿಯೋನಲ್ಲಿ ಕೆಲಸ ಮಾಡೋದು?
Re: ಒಂದು ರೇಡಿಯೋ ಕವಿತೆ
ಅಬ್ದುಲ್ ರಶೀದ್ ಅವರೆ ನಿಮ್ಮ ಒಂದು ರೇಡಿಯೋ ಕವಿತೆ ತುಂಬಾ ಸೊಗಸಾಗಿದೆ ನಿಮ್ಮ ಕಾವ್ಯ ಕೃಷಿಗೆ ನಮ್ಮ ವಂದನಾಭಿನಂದನೆಗಳು ನಿಮ್ಮಿಂದ ಕಾವ್ಯದಾರೆ ಈಗೇ ಸದಾ ಹರಿಯುವಂತಾಗಲಿ ನಿಮ್ಮ ಕವಿತೆಯಲ್ಲಿನ "ಕೆಗಳು..."ಎಂದರೆ ಏನೆಂದು ತಿಳಿಯಲಿಲ್ಲ ದಯಮಾಡಿ ತಿಳಿಸಿ ನಾನು ಅದನ್ನು ಕೈಗಳು ಎಂದು ಓದಿಕೊಂಡಿದ್ದೇನೆ ಸರಿಯೆ?
ಕೃಷ್ಣಮೊರ್ತಿಅಜ್ಜಹಳ್ಳಿ
ಕೆ ಅಲ್ಲ ಕೈ
ಗೆಳೆಯರೇ ಕವಿತೆ ಓದಿ ಮೆಚ್ಚಿಕೊಂಡವರಿಗೆಲ್ಲಾ ನನ್ನ ಕೃತಜ್ಞತೆಗಳು. ಕೃಷ್ಣಮೂರ್ತಿಯವರು ಬೊಟ್ಟು ಮಾಡಿರುವ ತಪ್ಪನ್ನು ಸರಿಪಡಿಸಲಾಗಿದೆ. 'ಕೆಗಳು' ಅಲ್ಲ 'ಕೈಗಳು'. ಸಂಗನಗೌಡರು ನಾನು ಯಾವ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದೇನೆಂದು ಕೇಳಿದ್ದಾರೆ. ನಾನು ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೈಸೂರು ನಿಲಯದಲ್ಲಿ ಕಾರ್ಯಕ್ರಮ ನಿರ್ವಾಹಕನಾಗಿದ್ದೇನೆ.
-ರಶೀದ್
Re: ಒಂದು ರೇಡಿಯೋ ಕವಿತೆ
ಚಿತ್ರವತ್ತಾದ ವಿವರಣೆಗಳಿಂದ ಕೂಡಿದ ತುಂಬಾ ಒಳ್ಳೆಯ ಕವಿತೆ ರಶೀದ್‍ರವರೇ. ಓದಿ ಏನೇನೆಲ್ಲಾ ನೆನಪಾಯಿತು...!
-ಸುಶ್ರುತ ದೊಡ್ಡೇರಿ
Re: ಒಂದು ರೇಡಿಯೋ ಕವಿತೆ
ಕೈಗೆಟುಕದೇ ಇದ್ದ ರೇಡಿಯೋದ ತಲೆಯ ಮೇಲೆ ಏರಿ ಕುಳಿತ ರಶೀದರ "ಈಗ ನೋಡಿದರೆ ಅನ್ನ ಬಟ್ಟೆ ಮಾಡು ಎಲ್ಲವೂ ರೇಡಿಯೋದ್ದೇ" ಎನ್ನುವ ಕೃತಾರ್ಥ ಭಾವ ಖುಶಿ ಕೊಟ್ಟಿತು!
-ಗೋಪೀನಾಥ ರಾವ್
Re: ಒಂದು ರೇಡಿಯೋ ಕವಿತೆ
ಅದೇನೋ ಗೊತ್ತಿಲ್ಲ, ಕವಿತೆಗಳು ನನಗೆ ಸೋಜಿಗವೆನಿಸುತ್ತವೆ. ಲೇಖನ, ಕತೆ, ಕಾದಂಬರಿಗಳನ್ನು ಅರ್ಥಮಾಡಿಕೊಂಡಂತೆ ನನಗೆ ಕವಿತೆಗಳನ್ನು
ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬಹುಶಃ ಲೇಖನ, ಕತೆಗಳನ್ನು ಓದುವಾಗ ಇರುವ ವೇಗದ ಮನಸ್ಥಿತಿಯನ್ನೇ ನಾನು
ಕವಿತೆಗಳಿಗೀ ಬಳಸುವುದು ಅದಕ್ಕೆ ಕಾರಣವೋ, ಇಲ್ಲ ಸುಲಭವಾಗಿ ತನ್ನಂತರಂಗವನ್ನು ಬಿಟ್ಟುಕೊಡದಿರುವುದೇ ಅವುಗಳ ಹಿರಿಮೆಯೋ,
ನನಗೆ ಗೊತ್ತಿಲ್ಲ. ಎಲ್ಲೋ ಅಲ್ಲಲ್ಲಿ ಅರ್ಥವಾದಂತೆ, ಏನೋ ಹೊಳೆದಂತೆ ಕಂಡು ಮಾಯವಾಗುವ ಭಾವನೆಗಳನ್ನು ಹೊಮ್ಮಿಸುವ
ಕವಿತೆಗಳು ನನಗೆ ತಿಳಿಯದಿದ್ದರೂ ನನಗಿಷ್ಟವಾಗುತ್ತವೆ. ಬಹುಶಃ ಇದೇ ಅವುಗಳ ಶಕಿ ಇದ್ದರೂ ಇರಬಹುದು. ಅಲ್ಲವೇ?
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
Re: ಒಂದು ರೇಡಿಯೋ ಕವಿತೆ
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಬಹಳ ಸುಂದರವಾದ ಮಾತು. ಹಾಗೆ ನೋಡಿದರೆ, ನಿಜವಾದ ಪ್ರೀತಿಯಿಂದ ಮಾಡುವ ಎಲ್ಲ ಕೆಲಸವೂ ಅಸಾಮಾನ್ಯವೇ! ಕವಿತೆ ಹೆಚ್ಚಲ್ಲ, ಕೃಷಿ ಕಡಿಮೆಯಲ್ಲ.
H.S.Raghavendra Rao