ಪ್ರೀತಿಯ ಬಗೆಗೊಂದಿಷ್ಟು...!
ಇಂಥ ಕೆಲವು ಮಾತುಗಳನ್ನು ಗಮನಿಸಿದರೆ ಅವು ಅದೆಷ್ಟು ಅರ್ಥರಹಿತ ಹಾಗೂ ಬಾಲಿಶ ಅನ್ನಿಸುತ್ತವೋ ನೋಡಿ: `ನೀನೇ ನನ್ನ ಪ್ರಾಣ, `ನೀನಿಲ್ಲದೆ ನಾನು ಬದುಕಿರಲಾರೆ, ನಿನ್ನನ್ನು ನಾನು ಮನಸಾರೆ ಪ್ರೀತಿಸ್ತೀನಿ, `ನನ್ನದು ಪರಿಶುದ್ಧ ಪ್ರೇಮ, `ಪ್ರೇಮ ಅಮರ, ಅದ್ಭುತ, ಶ್ರೇಷ್ಠ, `ನಮ್ಮದು ಜನ್ಮ ಜನ್ಮದ ಅನುಬಂಧ, ಪ್ರಪಂಚವೇ ಎದುರಾದರೂ ಪ್ರೇಮ ಜಗ್ಗದು...
ಅರ್ಥಹೀನ ಭಾವುಕತೆಯನ್ನು ಬಿಟ್ಟು ನೋಡಿದರೆ ಈ ಮಾತುಗಳೆಲ್ಲಾ ಹುಚ್ಚು ಪ್ರಲಾಪ ಅನ್ನಿಸದಿರದು. ನಮ್ಮ ಬಾಳಿನಲ್ಲಿ ಹಾಸುಹೊಕ್ಕಾಗಿರಬೇಕಾದ ದಯೆ, ಕರುಣೆ, ಮಮತೆ, ಸಹಾನುಭೂತಿ, ಪ್ರಾಮಾಣಿಕತೆ, ಶಿಸ್ತು, ಸಂಯಮ, ದೇಶಭಕ್ತಿ, ಒಳ್ಳೆಯತನದಂತೆಯೇ ಪ್ರೀತಿಯೂ ಕೂಡ ಒಂದು ಆದರ್ಶವಷ್ಟೇ. ಇಂದು ನಮ್ಮ ಸಮಾಜದಲ್ಲಿ ಕಾವ್ಯ, ಕಥೆ, ಕಾದಂಬರಿ, ಚಲನಚಿತ್ರ, ಧಾರಾವಾಹಿಗಳಿಂದಾಗಿ ಈ ಪ್ರೀತಿ ಅನ್ನೋದಕ್ಕೆ ಅನೇಕ ಅರ್ಥಗಳು, ಅನೇಕ ಪೋಷಾಕುಗಳು ಬಂದಿವೆ.
ಲವ್ ಅಟ್ ಫರ್ಸ್ಟ್ ಸೈಟ್ ಎನ್ನುವುದು ಅದೆಂತಹ ಮೂರ್ಖ ಕಲ್ಪನೆಯೋ ನೋಡಿ, ಎಲ್ಲೋ ಅಜ್ಞಾತದಲ್ಲಿ ಹುಟ್ಟಿ ಬೆಳೆದು ಪರಸ್ಪರ ಏನೂ ಗೊತ್ತಿರದೆ, ತನ್ನ ಅಪ್ಪ ಪ್ರೀತಿಸುತ್ತಾ, ತನ್ನ ಶಾಲೆಯ ಮೇಷ್ಟ್ರನ್ನು ಮೆಚ್ಚಿಕೊಳ್ಳುತ್ತಾ, ಬಸ್ಸಿನಲ್ಲಿ ಕಂಡ ಹುಡುಗನೆಡೆಗೊಂದು ಕಳ್ಳ ನೋಟ ಬೀರುತ್ತಾ, ತನ್ನ ಕೋಣೆಯ ಬಾಗಿಲಿನ ಹಿಂದೆ ಶಾರುಖ್‌ನದೊಂದು ಆಳೆತ್ತರದ ಫೋಟೋ ಹಾಕಿಕೊಂಡು ಬೆಳೆಯುವ ಹುಡುಗಿ, ಪ್ರತಿನಿತ್ಯ ನೂರಾರು ಹುಡುಗಿಯರನ್ನು ಕಣ್ಣಂಚಿನಲ್ಲಿ ಅಳೆಯುತ್ತಾ ಅಲೆಯುವ ಹುಡುಗ ನೋಡಿದ ಒಂದೇ ಕ್ಷಣದಲ್ಲಿ ಅನುರಕ್ತರಾಗಿ ಬಿಡುತ್ತಾರೆ ಅಂದರೆ ಅದನ್ನು ಪ್ರೀತಿ ಅನ್ನಲು ಸಾಧ್ಯವಾ? ಆ ಹುಡುಗಿಯ ಅಭಿರುಚಿಯೇನು? ಆಕೆ ಎಂಥವಳು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಪ್ರೀತಿ ಹುಟ್ಟಿ ಬಿಟ್ಟಿತು ಎಂದು ಭಾವಿಸುವ ಮಂದಿ ಪ್ರೀತಿಗೂ ಆಕರ್ಷಣೆಗೂ ವ್ಯತ್ಯಾಸ ತಿಳಿಯದಂಥವರು. ಅಂಗಡಿಯಲ್ಲಿ ನೋಡಿದ ಯಾವುದೋ ಒಂದು ವಸ್ತು ಮೊದಲ ನೋಟದಲ್ಲೇ ನಮ್ಮ ಕಣ್ಣ ಸೆಳೆದುಬಿಡುತ್ತೆ, ಕೊಂಡುಕೊಂಡು ಬಿಡುತ್ತೇವೆ. ಹಾಗೆ ವ್ಯವಹರಿಸಲು ಪ್ರೀತಿಯೇನು ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಟ್ಟ ಬೇಲ್ ಪುರಿಯಾ?
ಪ್ರೀತಿಯ ಮತ್ತೊಂದು ಮುಖವೇ ಠಿossessiveಟಿess. ನೀನಂದ್ರೆ ನನಗೆ ಇಷ್ಟ ಎಂದು ಹೇಳುವ ಹುಡುಗ ನೀನು ನನಗೆ ಬೇಕು, ನನಗೊಬ್ಬನಿಗೆ... ಎನ್ನುವ ಭಾವನೆಯಿಂದಲೇ ಹಾಗೆ ಹೇಳುತ್ತಾನೆ. ಅಲ್ಲಿ ಪ್ರೀತಿ ತೀರಾ ಫಿಸಿಕಲ್ ಆಗಿ ಬಿಟ್ಟಿರುತ್ತೆ. ಪ್ರೀತಿ ಎನ್ನೋದು ಕೇವಲ ಯಜಮಾನಿಕೆಯಾಗಿ ಬಿಡುತ್ತೆ. ಒಂದು ವಸ್ತುವಿನ ಬಗೆಗಿನ ಮೋಹದಂತೆ ಪ್ರೀತಿಯೂ ಉಳಿದುಬಿಡುತ್ತೆ. ಆಗಲೇ ಹುಡುಗಿ ತನ್ನಿಂದ ದೂರವಾದಾಗ ತನಗೆ ದಕ್ಕಲಿಲ್ಲ ಎಂಬ ಭಾವನೆ ಹುಡುಗನಲ್ಲಿ ಮೊಳೆಯುತ್ತೆ. ನನಗೆ ಸಿಗದ ಆಕೆ ಬೇರಾರಿಗೂ ಸಿಗಬಾರದು ಎನ್ನುವ ಕ್ರೂರ ನಿರ್ಧಾರಕ್ಕೆ ಹುಡುಗ ಬಂದು ಬಿಡುತ್ತಾನೆ! ಆಕೆಗೆ ಹಾನಿ ಮಾಡಿಯಾದರೂ ತನ್ನ ಹಠವನ್ನು ಸಾಧಿಸಲು ನಿಂತು ಬಿಡುತ್ತಾನೆ. ಹಾಗಾದರೆ ಅವನಿಗೆ ಆ ಹುಡುಗಿಯೊಂದಿಗಿದ್ದದ್ದು ಪ್ರೀತಿಯಾ, ಯಜಮಾನಿಕೆಯಾ?
ಅದಕ್ಕೇ ಪ್ರೀತಿಯನ್ನು ನಾನು ಒಂದು ಆದರ್ಶ ಎಂದದ್ದು. ದೇಶಭಕ್ತಿ, ಕರ್ತವ್ಯನಿಷ್ಠೆ, ಮಾತೃಪ್ರೇಮದಂತೆಯೇ ಪ್ರೀತಿ ಕೂಡ ಒಂದು ಆದರ್ಶ. ದೇಶಭಕ್ತಿಯ ಸಿನೆಮಾವೊಂದನ್ನು ನೋಡಿ ಹೊರಬರುವಾಗ ಹೇಗೆ ನಮ್ಮೆದೆಯಲ್ಲಿ ದೇಶಭಕ್ತಿಯು ಉಕ್ಕಿ ಹರಿಯುತ್ತಿರುತ್ತದೆಯೋ, ದೇಶಕ್ಕಾಗಿ ಮನೆ- ಮಠ, ತಂದೆ-ತಾಯಿ, ಬಂಧುಗಳುನ್ನು ತೊರೆಯಲು ಬೇಕಾದರೂ ಸಿದ್ಧವೆಂದು ಭಾವಿಸುತ್ತೇವೋ, ಯಾವ ಬಲಿದಾನವನ್ನಾದರೂ ಮಾಡಿಯೇನು, ಪ್ರಾಣವನ್ನು ಬೇಕಾದರೆ ಕೊಟ್ಟುಬಿಡಬಲ್ಲೆವು ಅಂತ ಭಾವುಕರಾಗುತ್ತೇವೋ ಹಾಗೆಯೇ ಪ್ರೀತಿಯೂ ಕೂಡ. ಪ್ರೇಮದಲ್ಲಿ ಪ್ರೇಮಿಗಳು ಯಾರನ್ನಾದರೂ ತೊರೆಯಲು ಸಿದ್ಧರಾಗುತ್ತಾರೆ, ಜಗತ್ತನ್ನೇ ಎದುರು ಹಾಕಿಕೊಳ್ಳಲು ತಯಾರಾಗುತ್ತಾರೆ, ತಮ್ಮ ಪ್ರಾಣವನ್ನೂ ಬಲಿ ಪೀಠದ ಮೇಲಿಟ್ಟುಬಿಡಬಲ್ಲರು . ಆದರೆ ದೇಶದ ಬಗೆಗೆ ಅಷ್ಟು ಭಕ್ತಿಯುಳ್ಳ ಪ್ರತಿಯೊಬ್ಬ ಕೂಡ ಹೇಗೆ ಅಪ್ಪಟ ದೇಶ ಭಕ್ತನಾಗುವುದಿಲ್ಲವೋ, ದೇಶದ ಹಿತಕ್ಕಾಗಿ ಅದೇ ಹುಮ್ಮಸ್ಸಿನಿಂದ ದುಡಿಯಲು ಸಾಧ್ಯವಾಗದೆ ಅರ್ಧ ದಾರಿಯಲ್ಲೇ ತನ್ನ ಆದರ್ಶದಿಂದ ವಿಮುಖನಾಗ್ತಾನೋ ಹಾಗೆಯೇ ಪ್ರೀತಿಯೇ ದೇವರು ಎನ್ನುವ ಹುಡುಗನಿಗೆ, ಒಲವೇ ಬದುಕು ಎನ್ನುವ ಹುಡುಗಿಗೆ ಪ್ರೀತಿಯ ಒರತೆಯನ್ನು ಹರಿಯುತ್ತಿರುವಂತೆ ನೋಡಿಕೊಳ್ಳಲು ಸಾಧ್ಯವಾಗದು. ಪ್ರೀತಿಯಲ್ಲಿ ಬಿದ್ದವರು ಪ್ರೀತಿಯಿಂದ ಬಾಳಲಾಗದೆ ಹೋಗುತ್ತಾರೆ. ಅವರ ಪ್ರೀತಿ ಒಬ್ಬರಿಗೊಬ್ಬರು ಹತ್ತಿರವಾಗುವವರೆಗೆ ಜೊತೆ ನೀಡಿ ನಂತರ ಮದುವೆ ಮನೆಯಲ್ಲಿ ಊಟ ಮಾಡಿ ಜಾಗ ಖಾಲಿ ಮಾಡಿಬಿಡುತ್ತೆ!
ಆದರ್ಶವೊಂದು ನಮ್ಮ ಮನಸ್ಸಿನಲ್ಲಿ ಹಸಿರಾಗಿರಲು ನಿರಂತರವಾದ ಪ್ರಯತ್ನ ಹೇಗೆ ಅವಶ್ಯಕವೋ ಹಾಗೆಯೇ ಪ್ರೀತಿಸಲು ಆ ಪ್ರಯತ್ನ ಬೇಕೇ ಬೇಕು. ಪ್ರತಿಯೊಂದು ಆದರ್ಶದಂತೆಯೇ ಪ್ರೀತಿಯೂ ಕೂಡ ಕಾಲಕಾಲಕ್ಕೆ ಡಿeಟಿeತಿಚಿಟ ಆಗುತ್ತಿರಬೇಕು. ಹೇಗೆ ದೇಶಭಕ್ತಿಯೆಂಬ ಆದರ್ಶದಿಂದಾಗಿ ನಾವು ದೇಶಕ್ಕಾಗಿ ಶ್ರಮಿಸಲು ಮುಂದಾಗುತ್ತೇವೋ ಹಾಗೆಯೇ ಪ್ರೀತಿಗಾಗಿ, ಪ್ರೀತಿಸಿದವರ ಏಳ್ಗೆಗಾಗಿ ಬದುಕಲು ಪ್ರಾರಂಭಿಸಬೇಕು. ನಮ್ಮ ಆದರ್ಶದಂತೆ ಪ್ರೀತಿ ನಮ್ಮನ್ನು ಬೆಳೆಸಬೇಕು, ನಮ್ಮ ಗುರಿ ಸೇರಲು ಪ್ರೇರೇಪಿಸಬೇಕು. ಹಾಗಾಗದಿದ್ದಲ್ಲಿ ಅದು ಕೇವಲ ದೈಹಿಕ ಆಕರ್ಷಣೆಯಾಗಿ ಉಳಿದುಬಿಡುತ್ತೆ. ಏನಂತೀರಿ?

- Login or register to post comments
- 358 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: