ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

"ನಮ್ಮ ದೇಶ ಜಾತ್ಯಾತೀತ ದೇಶ", ನಮ್ಮದು "ಧರ್ಮ ನಿರಪೇಕ್ಷ ದೇಶ", ನಾವು "ದೇಶದ ಹಿಂದುಳಿದವರನ್ನು ಉದ್ಧರಿಸಿಬೇಕು" ಎಂಬ ದೊಡ್ಡ ದೊಡ್ಡ ಮಾತುಗಳನ್ನು ಭಾರತದಲ್ಲಿ ಕೇಳುತ್ತಾ ಬೆಳೆಯದ ಮಕ್ಕಳೇ ಇಲ್ಲ ಎಂದುಕೊಳ್ಳುತ್ತೇನೆ. ತಾತ್ವಿಕವಾಗಿ ಇದು ತುಂಬಾ ಘನವಾದ ಮಾತು. ಈ ಮಾತಿನಲ್ಲಿ ತುಂಬಾ ಮೌಲಿಕವಾದ ವಿಚಾರಗಳಿವೆ. ನಮ್ಮನ್ನು ನಾವು ನೋಡಿಕೊಳ್ಳುವ ರೀತಿಯನ್ನು ಇದು ನಿರ್ದೇಶಿಸುತ್ತದೆ, ನಿರೂಪಿಸುತ್ತದೆ. ಯಾವುದೋ ಅಮೂರ್ತವಾದ ನೆಲೆಯಲ್ಲಿ ನಮ್ಮ ದೇಶದ ಹಿರಿಮೆಯನ್ನು ನಾವು ಅರಿಯುವಂತೆ, ಕೊಂಡಾಡುವಂತೆ, ಸಂಭ್ರಮಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಮನಸ್ಸಿನಲ್ಲಿ ದೇಶದ ಬಗ್ಗೆ ಅಮೂಲ್ಯವಾದ ಪರಿಕಲ್ಪನೆಗಳನ್ನು ಬಿತ್ತುತ್ತವೆ.

ಆದರೆ ಈ ಎಲ್ಲ ವಿಚಾರವಾಹಿನಿಗಳು ನಮ್ಮ ದೇಶದ ಜಾತಿಯತೆಯನ್ನು, ಜಾತಿವಾದವನ್ನು ಅಳಿಸಲು ಸಾಧ್ಯವಾಗಿದೆಯೆ ಎಂಬುದು ಪ್ರಶ್ನೆ. ಇಂದಿಗೂ ಜಾತೀಯ ರಾಜಕೀಯ ಫಲ ಕೊಡುತ್ತಲೇ ಇರುವುದು, ಮೀಸಲಾತಿಯಿದ್ದೂ ಹಿಂದುಳಿದ ಜನಾಂಗಗಳು ಹಿಂದುಳಿದೇ ಇರುವುದು, ದಲಿತರ ಮತ್ತು ಹಿಂದುಳಿದವರ ಮೇಲೆ ಸಣ್ಣಪುಟ್ಟ ವಿಷಯಕ್ಕೂ ದೌರ್ಜನ್ಯ ನಡೆಯುವುದು ನಮ್ಮ ದೇಶದಲ್ಲಿ ನಡೆಯುತ್ತಲೇ ಬಂದಿದೆ. ಇಪ್ಪತ್ತೊಂದನೆಯ ಶತಮಾನದಲ್ಲೂ ಜಾತೀಯತೆ ನಮ್ಮ ನಡುವೆ ಪಿಡುಗಾಗಿ ಉಳಿದೇ ಇದೆ. ವೈಜ್ಞಾನಿಕವಾಗಿ ಜಾತಿಯ ಅಸಂಬದ್ಧತೆ ಗೊತ್ತಿದ್ದೂ, ಸಾಮಾಜಿಕವಾಗಿ ಅದರ ಕ್ರೌರ ಗೊತ್ತಿದ್ದೂ, ವಯ್ಯುಕ್ತಿಕವಾಗಿ ಅದರ ಪರಿಣಾಮ ಗೊತ್ತಿದ್ದೂ ಯಾಕೆ ಜಾತಿ ಹಾಗೆಯೇ ಉಳಿದಿದೆ? ಬೆಂಕಿ ಸುಡುತ್ತದೆ ಎಂದು ಗೊತ್ತಿದ್ದೂ ಅದರಿಂದ ಯಾಕೆ ದೂರ ಸರಿಯುತ್ತಿಲ್ಲ?

ರಾಜಕೀಯವನ್ನು ದೂರುವ ಮಾತನ್ನು ಸದ್ಯಕ್ಕೆ ಪಕ್ಕಕ್ಕಿಡುತ್ತೇನೆ. ಏಕೆಂದರೆ, ಜಾತ್ಯಾಧಾರಿತ ರಾಜಕೀಯವನ್ನು ನಾವು ಗೊಣಗುತ್ತಾ ಸಹಿಸಿಕೊಂಡು ಬಂದಿರುವುದನ್ನು ಗಮನಿಸಿ. ಆಗೀಗ ಅದರ ಬಗ್ಗೆ ಬಯ್ಯುತ್ತಾ ಇದ್ದೇವೆಯೇ ಹೊರತು ಅದರ ಬಗ್ಗೆ ಗಂಭೀರವಾದ ಪ್ರತಿಕ್ರಿಯೆ ಬಂದಿರುವುದು ಕಾಣುವುದಿಲ್ಲ. ಪ್ರತಿಕ್ರಿಯೆ ಮಾತಿನಲ್ಲಿ ಬಂದಿರಬಹುದು, ಭಾಷಣ ಲೇಖನಗಳಲ್ಲಿ ಇರಬಹುದು. ಆದರೆ ಕ್ರಿಯೆಯಲ್ಲಿ ಏನಾಗಿದೆ ಎಂದು ನೋಡಿದಾಗ ನಿರಾಶೆಯಾಗದೆ ಇರಲಾರದು. ಆದ್ದರಿಂದ ಜಾತಿ ಪರಿಸ್ಥಿತಿಗೆ ರಾಜಕೀಯವೇ ಕಾರಣ ಎಂದು ಪರಿಗಣಿಸದೆ ಅದೂ ಕೂಡ ನಮ್ಮ ಮತ್ತಾವುದೋ ಸೋಲಿನ ಒಂದು ಪರಿಣಾಮ ಎಂದು ನೋಡುವುದು ಹೆಚ್ಚು ಸೂಕ್ತ ಅನಿಸುತ್ತದೆ. ಜಾತಿ ರಾಜಕೀಯ ಖಂಡಿತವಾಗಿಯೂ ಜಾತೀಯತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ಕಾಪಾಡಿ ಬೆಳೆಸುತ್ತಿರುವುದು ಒಂದು ಮಟ್ಟದಲ್ಲಿ ನಿಜ ಎಂದು ಅನ್ನಿಸಿಯೂ ಈ ಮಾತು ಹೇಳುತ್ತಿದ್ದೇನೆ.

ಜಾತ್ಯಾತೀತ ರಾಜಕೀಯ, ಮೀಸಲಾತಿ, ಅಂತರ್‍-ಜಾತೀಯ ವಿವಾಹ ಇತ್ಯಾದಿಗಳನ್ನು ಜಾತಿ ನಿವಾರಣೆಗೆ ಮುಖ್ಯವಾದ ಪರಿಹಾರ ಮಾರ್ಗಗಳೆಂದು ಪರಿಗಣಿಸುತ್ತೇವೆ. ಇದು ಒಂದು ಅರ್ಥದಲ್ಲಿ ನಿಜವೂ ಹೌದು. ಅವುಗಳಿಂದ ಸ್ವಲ್ಪ ಮಟ್ಟಿಗಾದರೂ ಜಾತಿನಿವಾರಣೆಯ ಕೆಲಸ ಆಗುತ್ತಿದೆ ಎನ್ನುವುದು ಸುಳ್ಳಲ್ಲ. ಆದರೆ ಇವುಗಳೆಲ್ಲಾ ಜಾತಿಯನ್ನು ಸಾಮಾಜಿಕ ಮತ್ತು ಸಾಮುದಾಯಿಕ ಸಮಸ್ಯೆಯಾಗಿ ಮಾತ್ರ ನೋಡುವುದರಿಂದ ಕಾಣುವ ಪರಿಹಾರ ಮಾರ್ಗಗಳು ಮತ್ತು ಜಾತೀಯ ಮನಸ್ಸಿನ ಜತೆಗಿನ ನಮ್ಮ ಸಂಘರ್ಷಕ್ಕೆ ತುಂಬಾ ತಡವಾದ ಪ್ರತಿಕ್ರಿಯೆ. ರಾಜಕೀಯ, ಮೀಸಲಾತಿ, ವಿವಾಹ ಇತ್ಯಾದಿಗಳ ಹಂತಕ್ಕೆ ಬರುವ ಎಷ್ಟೋ ಮುಂಚೆಯೇ ಆಗಬೇಕಾದ ಕೆಲಸವನ್ನು ನಾವು ಮರೆಯುತ್ತಿದ್ದೇವೆ. ಎಳೆಯ ಮನಸ್ಸುಗಳಲ್ಲೇ ಇದರ ವಿಚಾರವನ್ನು ಹುಟ್ಟು ಹಾಕುವುದು ಮುಖ್ಯವಲ್ಲವೆ? ಅದು ವಿಚಾರವಾದ ಆದರಷ್ಟೇ ಸಾಲದು. ಶಿಕ್ಷಣ, ವಿದ್ಯೆ ಆದರಷ್ಟೇ ಸಾಲದು. ಅದು ತರಬೇತಿಯಾಗಬೇಕು. ಅಂದರೆ ನಿಜ ಜೀವನದಲ್ಲಿ ಜಾತಿಯ ನಿಷ್ಫಲತೆಯನ್ನು ಮನಗಾಣಿಸಲು ಶಿಬಿರಗಳು, ಕಾರ್ಯಾಗಾರಗಳು ಬೇಕಾಗುತ್ತವೆ. ಅವು ಒಟ್ಟಾರೆ ಜಾತಿಬೇಧ, ವರ್ಣಬೇಧ, ಲಿಂಗಬೇಧ ಇತ್ಯಾದಿಯಾಗಿ ಎಲ್ಲ ರೀತಿಯ ಬೇಧಭಾವಗಳನ್ನು ಹೋಗಲಾಡಿಸುವ ಕಾರ್ಯಾಗಾರವಾಗಬೇಕಾಗುತ್ತದೆ.

ಶಿಕ್ಷಣ, ವಿದ್ಯೆಗೂ ತರಬೇತಿಗೂ ಇರುವ ವ್ಯತ್ಯಾಸ ಎಲ್ಲರಿಗೂ ತಿಳಿದಿರುವಂಥದೇ. ತರಬೇತಿಯಲ್ಲಿ ಸಲಕರಣೆ ಸಾಧನಗಳು ಲಭ್ಯವಾಗುತ್ತದೆ. ಶಿಕ್ಷಣ, ವಿದ್ಯೆಯಲ್ಲಿ ಸಲಕರಣೆ ಸಾಧನಗಳ ಹಿಂದಿನ ತಿಳುವಳಿಕೆ ಮುಖ್ಯವಾಗುತ್ತದೆ. ಆದರೆ ಪ್ರತಿದಿನದ ಜೀವನದಲ್ಲಿ ಜಾತಿಬೇಧವನ್ನು ಎದುರಿಸಲು ನಮಗೆ ಇಲ್ಲದಿರುವ ಮುಖ್ಯ ಅಂಶ ಸಲಕರಣೆಗಳು. ಎದುರಿಸಬೇಕಾದ ಪರಿಸ್ಥಿತಿಗಳಲ್ಲಿ ನಾವು ಉಪಯೋಗಿಸಬೇಕಾದ ತಂತ್ರಗಳು. ನಮಗೆ ಅತಿ ಹತ್ತಿರದವರು, ನಮಗೆ ಜೀವನದಲ್ಲಿ ತುಂಬಾ ಸಹಾಯ ಮಾಡಿದವರು ಜಾತಿಬೇಧ ಮಾಡಿದಾಗ ಅದನ್ನು ಹೇಗೆ ಎದುರಿಸಬೇಕು? ಆಗ ನಮಗಾಗುವ ಮುಜುಗರವನ್ನು ಹೇಗೆ ವ್ಯಕ್ತಪಡಿಸುವುದು? ಜಾತಿಬೇಧಕ್ಕೆ ಗುರಿಯಾದವರಷ್ಟೇ ಅಲ್ಲ ಜಾತಿಬೇಧಮಾಡಿದವರಿಗೂ ಒಳ್ಳೆಯದಾಗುವಂತೆ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುವುದು? ಜಾತೀಯ ಮನಸ್ಸುಗಳೊಂದಿಗೆ ವ್ಯವಹರಿಸಲು ಬೇಕಾದ ಅತಿಮುಖ್ಯವಾದ ವ್ಯಾವಹಾರಿಕ ಸಲಕರಣೆ ನಮಗೆ ಇಲ್ಲದಾಗಲೇ ಸಿಟ್ಟು, ಕೂಗಾಟ, ಜಗಳ ಇತ್ಯಾದಿಗಳಲ್ಲಿ ನಮ್ಮ ಮಾತು ಪರ್ಯಾವಸನಗೊಂಡು ದ್ವೇಷ, ಹಗೆತನದ ಪರಿಸ್ಥಿತಿ ಏರ್ಪಡುತ್ತದೆ.

ಆಡಿಕೊಂಡು ಖುಷಿಯಾಗಿರಬೇಕಾದ ಮನಸ್ಸುಗಳಲ್ಲಿ ಜಾತಿಯಂಥ ವಿಚಾರಗಳನ್ನು ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಏಳಬಹುದು. ಆದರೆ, ಬ್ರಾಹ್ಮಣ ಜಾತಿಯಲ್ಲಿ ಏಳೆಂಟು ವರ್ಷದವರಿಗೆ ಉಪನಯನ ಮಾಡುವುದು ನಮಗೆ ಗೊತ್ತಿದೆ. ಬೇರೆ ಬೇರೆ ಜಾತಿಗಳಲ್ಲಿ ಇಂತಹ ನೂರಾರು ಜಾತೀಯ ಆಚರಣೆಗಳು ಎಳೆಯ ಮನಸ್ಸುಗಳ ಮೇಲೆ ಪರಿಣಾಮ ಬೀರದೇ ಇರುತ್ತದೆಯೆ? ಮಕ್ಕಳ ಮನಸ್ಸುಗಳ ಉಪಪ್ರಜ್ಞೆಯಲ್ಲಿ ಸ್ಥಾಪಿತವಾಗುವ ಇಂಥ ಜಾತೀಯ ವಿಚಾರಗಳನ್ನು ಹೊರಗೆ ತಂದು ಚರ್ಚಿಸುವ ಕೆಲಸವೂ ಸಣ್ಣ ವಯಸ್ಸಲ್ಲೇ ಆಗಬೇಕಲ್ಲವೆ? ಇಂಥ ವ್ಯವಸ್ಥೆ ನಮ್ಮ ಶಾಲೆಗಳಲ್ಲಿ ಇರಬೇಕಲ್ಲವೆ?

ಈ ರೀತಿಯ ತರಬೇತಿಯ ಬಗ್ಗೆ ಯೋಚಿಸಿದಾಗ ಒಂದೆರಡು ಉದಾಹರಣೆಗಳು ನೆನಪಾದವು. ಮೊದಲನೆಯದು ಜೇನ್ ಎಲಿಯಟ್ ಎಂಬ ಶಾಲಾ ಶಿಕ್ಷಕಿ ೧೯೬೮ರಲ್ಲಿ ನಡೆಸಿದ ಪ್ರಯೋಗದ ಬಗ್ಗೆ ನಾನು ನೋಡಿದ ಒಂದು ಸಾಕ್ಷ್ಯಚಿತ್ರ. ಬರೀ ಬಿಳಿಯರೇ ಇರುವ ಪುಟ್ಟ ಮಕ್ಕಳ ಶಾಲಾ ತರಗತಿಯೊಂದಕ್ಕೆ ವರ್ಣಬೇಧವನ್ನು ತಿಳಿಹೇಳಲು ನಡೆಸಿದ ಪ್ರಯೋಗ ಅದು. ನೀಲಿಗಣ್ಣು ಮತ್ತು ಕಂದುಗಣ್ಣಿನ ಆಧಾರದ ಮೇಲೆ ಶಾಲಾ ಮಕ್ಕಳನ್ನು ಬೇರ್ಪಡಿಸಿ ಕರಿಜನರನ್ನು ಅಮೇರಿಕ ನಡೆಸಿಕೊಳ್ಳುತ್ತಿದ್ದ ರೀತಿಯಲ್ಲಿ ನೀಲಿಗಣ್ಣಿನ ಮಕ್ಕಳನ್ನು ನಡೆಸಿಕೊಂಡು, ಕಂದುಬಣ್ಣದವರನ್ನು ಬೇಕಂತಲೇ ನೀಲಿಗಣ್ಣಿನ ಮಕ್ಕಳಿಗಿಂತ ಉಚ್ಛವಾಗಿ ನಡೆಸಿಕೊಳ್ಳುವುದೇ ಆ ಪ್ರಯೋಗದ ಮೂಲ ರೂಪ. ಅಮೇರಿಕದಲ್ಲಿ ನೀಲಿಗಣ್ಣು ಬಿಳಿಯ ಜನರಲ್ಲೇ ಉತ್ಕೃಷ್ಟತೆಯ ಸಂಕೇವಾಗಿ ಪರಿಗಣಿಸಲ್ಪಡುವುದು ನಿಮಗೆ ತಿಳಿದಿರಬಹುದು. ಆಗ ತಿಳಿದುಬಂದ ಒಂದು ವಿಷಯವೆಂದರೆ ಪ್ರಯೋಗದ ವೇಳೆಯಲ್ಲಿ ಬೇರೆ ಕ್ಲಾಸಿನಲ್ಲೂ ಕಂದುಬಣ್ಣದ ಮಕ್ಕಳು ಚೆನ್ನಾಗಿ ಪಾಠವನ್ನು ಕಲಿಯುತ್ತಿದ್ದು, ನೀಲಿಗಣ್ಣಿನ ಮಕ್ಕಳು ಹಿಂದೆ ಬಿದ್ದದ್ದು. ಮುಂದೆ ಜೇನ್ ಎಲಿಯಟ್ ದೊಡ್ಡವರಿಗೂ ಇಂಥ ಕಾರ್ಯಾಗಾರವನ್ನು ನಡೆಸಿ ಈಗ ಕಂಪನಿಗಳ ಕೆಲಸಗಾರರಿಗೂ ಅದನ್ನು ನಡೆಸುತ್ತಾಳೆ. ಆಕೆಯ ಪ್ರಯೋಗಗಳ ಬಗ್ಗೆ, ಕಾರ್ಯಾಗಾರದ ಬಗ್ಗೆ ವಾದವಿವಾದಗಳು ಏನೇ ಇದ್ದರು ಆಕೆಯ ಮೂಲ ಆಶಯ ತುಂಬಾ ಘನವಾದುದು ಎಂದು ನನಗನಿಸುತ್ತದೆ. ಇಷ್ಟಾಗಿಯೂ ಇದು ಅಮೇರಿಕ/ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಈಗಲೂ ಸಾಕಷ್ಟು ಪ್ರಚಲಿತದಲ್ಲಿರುವ ವರ್ಣಬೇಧದ ಬಗೆಗೆ ಅರಿವು ಮೂಡಿಸುವ, ಮಾನಸಿಕ ತಯಾರಿ ನಡೆಸುವ ಕಾರ್ಯಾಗಾರ ಅಷ್ಟೆ. ನಾವೇ ಬೇಧಕ್ಕೆ ಗುರಿಯಾದಾಗ ಅಥವಾ ನಮ್ಮ ಎದುರೇ ಬೇಧಕೃತ್ಯ ನಡೆದಾಗ ಅದನ್ನು ನಿಭಾಯಿಸಲು ಬೇಕಾದ ಸಾಧನ ಸಲಕರಣೆಗಳನ್ನು ನೀಡುವುದಿಲ್ಲ.

ಮತ್ತೊಂದು ಉದಾಹರಣೆ ಆಸ್ಟ್ರೇಲಿಯಾದ ಶಾಲೆಗಳಲ್ಲಿ ಆರೇಳು ವರ್ಷದ ಪುಟ್ಟ ಮಕ್ಕಳಿಗೆ ಲೈಂಗಿಕ ಬೋಧನೆಯ ತರಗತಿಗಳು ಇರುತ್ತವೆ. ಈ ತರಗತಿಗಳಿಗೆ ಮಕ್ಕಳನ್ನು ಕಳಿಸಲು ತಂದೆ-ತಾಯಂದರು ಒಪ್ಪಗೆ ಸೂಚಿಸಬೇಕು. ಈ ತರಗತಿಗಳಲ್ಲಿ ಮಕ್ಕಳಿಗೆ ಲೈಂಗಿಕ ಅಂದರೆ, ಲೈಂಗಿಕ ಅತಿಕ್ರಮಣದಿಂದ ತಮ್ಮನ್ನು ಕಾಪಾಡಿಕೊಳ್ಳವುದರ ಬಗ್ಗೆ ಬೋಧನೆಯಾಗುತ್ತದೆ. ಯಾರಾದರೂ ಹಿರಿಯರು ಮಕ್ಕಳ ಹತ್ತಿರ ಬಂದು ಮುಟ್ಟಬಾರದ ಮೈ ಭಾಗಗಳನ್ನು ಮುಟ್ಟಿದರೆ ಹೇಗೆ ಹುಷಾರಾಗಿರಬೇಕು. ಹೇಗೆ ತಂದೆ-ತಾಯಂದಿರಿಂದ ಸಹಾಯ ಪಡೆಯಬೇಕು ಎಂದೆಲ್ಲಾ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ ಹಾಗೆ ತಿಳಿಹೇಳಲಾಗುತ್ತದೆ. ಇದು ಯಾಕೆ ಮುಖ್ಯವೆಂದರೆ ಮಕ್ಕಳ ಲೈಂಗಿಕ ಅತಿಕ್ರಮಣದ ಅಂಕಿ ಅಂಶಗಳ ಪ್ರಕಾರ ಅತಿ ಹೆಚ್ಚಿನ ಸಂದರ್ಭಗಳಲ್ಲಿ ಅತಿಕ್ರಮಣಕಾರರು ಕುಟುಂಬದವರೋ, ಕುಟುಂಬದ ಪರಿಚಿತರೋ, ಒಟ್ಟಾರೆ ಮಕ್ಕಳಿಗೆ ಪರಿಚದವರೇ ಆಗಿರುತ್ತಾರೆ. ಆದ್ದರಿಂದ ಮಕ್ಕಳಿಗೆ ಅತಿಕ್ರಮಣ ನಡೆಸಿದವರ ಮೇಲೆ ದೂರು ಹೇಳಲು ಅಂಜಿಕೆ ಇರುತ್ತದೆ. ಅತಿಕ್ರಮಣಕಾರರೊಡನೆ ತಂದೆ-ತಾಯಂದಿರು ಚೆನ್ನಾಗಿ ನಡೆದುಕೊಳ್ಳುವುದು ಇವರಿಗೆ ಮಾನಸಿಕ ಗೊಂದಲ ಉಂಟು ಮಾಡುತ್ತದೆ. ಹಾಗಾಗಿಯೆ ಮಕ್ಕಳಿಗೆ ಇಂಥ ಬೋಧನೆಯ ಅಗತ್ಯ ತುಂಬಾ ಇರುತ್ತದೆ. ಭಾರತೀಯ ಸಮಾಜದಲ್ಲಿ ಮಕ್ಕಳಿಗೆ ಲೈಂಗಿಕ ಬೋಧನೆ ನಡೆಸಬೇಕಾದ ಅವಶ್ಯಕತೆ ಸದ್ಯಕ್ಕೆ ಇಲ್ಲದಿರಬಹುದು. ಏಕೆಂದರೆ ನಮ್ಮ ಸಮಾಜ ಪಾಶ್ಚಿಮಾತ್ಯ ಸಮಾಜದಷ್ಟು ಇನ್ನೂ ಲೈಂಗೀಕೃತಗೊಂಡಿಲ್ಲ. ಆದರೂ ಲೈಂಗಿಕ ವಿಕೃತಿ ಇಲ್ಲ್ಲಎಂದು ಹೇಳಲು ಬರುವುದಿಲ್ಲ. ಆದರೆ ಆರೋಗ್ಯಕರ ಲೈಂಗಿಕತೆಯ ಚರ್ಚೆಯ ಅನಿವಾರ್ಯತೆಯಂತೂ ಇದೆ. ನಾನಿಲ್ಲಿ ಉದಾಹರಣೆಯನ್ನು ಎತ್ತಿಕೊಂಡ ಕಾರಣ ಲೈಂಗಿಕ ಚರ್ಚೆಯಲ್ಲ. ಪುಟ್ಟ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಮಾರಕವಾಗುವಂಥ ಲೈಂಗಿಕ ಅತಿಕ್ರಮಣಗಳಿಂದ ಅವರನ್ನು ರಕ್ಷಿಸಲು ಅವರನ್ನು ತರಬೇತು ಮಾಡುವುದು, ತಮ್ಮನ್ನು ತಾವು ರಕ್ಷಿಸಿಕೊಳ್ಳವುದನ್ನು ಅವರಿಗೆ ಕಲಿಸುವುದು ಎಷ್ಟು ಮುಖ್ಯ ಮತ್ತು ಉಪಯುಕ್ತ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಜಾತಿಯ ವಿಷಯದಲ್ಲೂ ಕೂಡ ಸಣ್ಣ ವಯಸ್ಸಿನಲ್ಲೇ ಇಂಥ ತರಬೇತಿಯ ಅಗತ್ಯವಿದೆ. ದಿನವಹಿ ನಡೆಯುವ ಆಚರಣೆಗಳಲ್ಲಿ ಜಾತಿಬೇಧ ಹೇಗೆ ರೂಪ ಪಡೆಯುತ್ತಿದೆ ಎಂಬ ಅಂಶ. ಮನೆಯಲ್ಲಿ ಪ್ರೀತಿಪಾತ್ರರಾದ ತಂದೆ-ತಾಯಂದಿರು ಜಾತೀಯವಾಗಿ ನಡೆದುಕೊಂಡಾಗ ಮಕ್ಕಳು ಅದನ್ನು ಹೇಗೆ ನಿಭಾಯಿಸಬೇಕು. ತಮ್ಮ ಹತ್ತಿರದ ಸ್ನೇಹಿತರು ಒಡನಾಡಿಗಳು ಜಾತೀಯವಾಗಿ ನಡೆದುಕೊಂಡಾಗ ಹೇಗೆ ವ್ಯವಹರಿಸಬೇಕು ಎಂಬಂಥ ತರಬೇತಿ ತುಂಬಾ ಮುಖ್ಯ. ಇಂಥ ತರಬೇತಿ ಹೊಂದಿದ ಮನಸ್ಸು ಬೆಳೆದು ದೊಡ್ಡದಾದ ಮೇಲೆ ಸಿಟ್ಟು, ಕೂಗಾಟ ಜಗಳವನ್ನು ಸ್ವಲ್ಪ ಮಟ್ಟಿಗಾದರೂ ಹತ್ತಿಕ್ಕಿ ಮುಖ್ಯವಾದ ಅಂಶದತ್ತ ಗಮನ ಹರಿಸಲು ಸಾಧ್ಯವಾಗಬಹುದು. ರಾಜಕೀಯ ಅಂಥ ಮನಸ್ಸನ್ನು ಸ್ವಾಧೀನ ಮಾಡಿಕೊಳ್ಳುವುದು ಕಷ್ಟವಾಗಬಹುದು.

ಇಷ್ಟು ಆಶಯಗಳನ್ನು ನಿಮ್ಮ ಮುಂದಿಟ್ಟು, ನೆನದೊಡನೆ ನಿದ್ದೆಯಿಂದ ಧಿಗ್ಗನೆ ಎಚ್ಚರವಾಗುವಂಥ ಕಳವಳವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಇವು ಯಾವುದೂ ಭಾರತೀಯ ಮನಸ್ಸಿಗೆ ಹೊಳೆಯದಂಥ ವಿಷಯವೇನೂ ಅಲ್ಲ. ನಮ್ಮ ವಿಚಾರವಂತರಿಗೆ, ಸಾಹಿತಿಗಳಿಗೆ, ಸಾಮಾಜಿಕ ನೇತಾರರಿಗೆ ಗೊತ್ತಿರದ ವಿಷಯವೇನಲ್ಲ. ಆದರೆ ಆ ದಿಕ್ಕಿನಲ್ಲಿ ಬೇಕಾದ ಕೆಲಸವಾಗದೇ ಇರುವುದು ನೋಡಿದರೆ ನಮಗೆ ಜಾತಿ ಬಗೆಗೆ ನಿಜವಾದ ಆತಂಕವಿದೆಯೆ ಎಂದು ಯೋಚಿಸುತ್ತೇನೆ. ಸಂಸ್ಕೃತಿ ಪರಂಪರೆ ಎಂಬಿತ್ಯಾದಿ ಅಂಶಗಳನ್ನು ಜಾತೀಯತೆಯೊಂದಿಗೆ ಕಲಸುಮೇಲೋಗರ ಮಾಡಿ ಇಂಥ ಹೀನ ಆಚರಣೆಯನ್ನು ಕಾಪಾಡಿಕೊಂಡು ಬರುತ್ತಿದೇವಾ ಎಂದು ಚಿಂತೆಯಾಗುತ್ತದೆ.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

Yamini's picture

ಜಾತೀಯತೆಯನ್ನು ಗ್ರಹಿಸುವುದರಲ್ಲಿಯೇ ಏನೋ ತಪ್ಪಿದೆ ಅನಿಸುತ್ತದೆ. ನೀವೇ ಹೇಳಿದಂತೆ ಇದು ಕೇವಲ ಒಂದು 'ಸಾಮಾಜಿಕ ಸಮಸ್ಯೆ' ಅಲ್ಲ ಮತ್ತು ಹೌದು. ಈ ಸಂಕೀರ್ಣತೆಯೇ ಜಾತೀಯತೆಯ ನಿವಾರಣೆಗೆ ಇರುವ ಅತಿ ದೊಡ್ಡ ತೊಡಕು. ಬಹುಶಃ ಗಾಂಧೀಜಿ ಮತ್ತು ಕೇರಳದ ಸಮಾಜ ಸುಧಾರಕ ನಾರಾಯಣ ಗುರು ಇದನ್ನು ಸರಿಯಾಗಿ ಗ್ರಹಿಸಿದ್ದರು ಎನಿಸುತ್ತದೆ. ನಾರಾಯಣ ಗುರುಗಳು 'ಜಾತಿ ಹೇಳು ಮತ್ತು ಜಾತಿ ಕೇಳು' ಎಂದು ಒಂದು ಸಂದರ್ಭದಲ್ಲಿ ಹೇಳಿದ್ದರು ಎಂದು ಎಲ್ಲೋ ಓದಿದ್ದು ನೆನಪಾಗುತ್ತದೆ. ಗಾಂಧೀಜಿ ಚಾತುರ್ವರ್ಣ ಪದ್ಧತಿಯಲ್ಲಿ ನಂಬಿಕೆ ಇದೆ ಎಂದು ಹೇಳಿಯೇ ಅಸ್ಪೃಶ್ಯತಾ ನಿವಾರಣೆಗೆ ಪ್ರಯತ್ನಿಸಿದ್ದರು.

ಇಬ್ಬರೂ ಜಾತಿಗಳನ್ನು ನಿರಾಕರಿಸಲಿಲ್ಲ. ಬದಲಿಗೆ ಅವುಗಳನ್ನು ಧನಾತ್ಮಕವಾಗಿ ಆಧುನೀಕರಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಮ್ಮ ಶಿಕ್ಷಿತ, ನಗರೀಕೃತ ಮಧ್ಯಮ ವರ್ಗ ಜಾತಿಯನ್ನು ಋಣಾತ್ಮಕವಾಗಿ ಗ್ರಹಿಸಿ ಅದನ್ನು 'ನಿವಾರಿಸಲು' ಪ್ರಯತ್ನಿಸುತ್ತದೆ. ಇದು ಕೊನೆಯಲ್ಲಿ ಕ್ರಿಶ್ಚಿಯಾನಿಟಿ, ಇಸ್ಲಾಂಗಳಂಥ ಧರ್ಮಗಳಲ್ಲಿರುವ ಸಮಾನತೆಯನ್ನು ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಕ್ಕೆ ಅನ್ವಯಿಸಲು ಪ್ರಯತ್ನಿಸುತ್ತದೆ. ಸಂಘ ಪರಿವಾರದ ಸಂಘಟನೆಗಳು ಹೇಳುವ 'ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು' ಎಂಬ ಘೋಷಣೆಯೂ ಈ ಬಗೆಯ ಗ್ರಹಿಕೆಯಿಂದಲೇ ಹೊರಟದ್ದು. ಈ ಘೋಷಣೆ ಘೋಷಣೆಯಾಗಿಯೇ ಉಳಿದು ಸಂಘಪರಿವಾರದ ನಾಯಕತ್ವ ವಹಿಸುವವರೆಲ್ಲಾ 'ಹಿಂದೂ'ಗಳಲ್ಲಿ ಇರುವ ಮೇಲ್ಜಾತಿಯವರೇ ಆಗಿರಬೇಕೆಂಬ ಅಘೋಷಿತ ನಿಯಮವಾಗಿಬಿಡುತ್ತದೆ.

ಜಾತಿ ಎಂಬ ಸಂಸ್ಥೆ ಪೂರೈಸುತ್ತಿರುವ ಸಾಮಾಜಿಕ ಅಗತ್ಯಗಳ ಜತೆಗೆ ಯೋಚಿಸಿದರೆ ಜಾತೀ ವ್ಯವಸ್ಥೆಯ ಶೋಷಣೆಯನ್ನು ತಡೆಯಲು ಸಾಧ್ಯವೇನೋ. ಇದು ಬಹಳ ಸಂಕೀರ್ಣ ವಿಷಯವಾಗಿರುವುದರಿಂದ ಈ ಕುರಿತು ಮತ್ತೊಂದು ಲೇಖನವನ್ನೇ ಬರೆಯುತ್ತಿದ್ದೇನೆ.

-ಯಾಮಿ 

Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

anivaasi's picture

ಬಹಳ ಹಿಂದೆ ನಾರಾಯಣಗುರುಗಳ ಬಗ್ಗೆ ಡಿ.ಆರ್‌.ನಾಗರಾಜರ ಲೇಖನವೊಂದನ್ನು ಓದಿದ ನೆನಪು. ಆದರೆ ನಾರಾಯಣ ಗುರುಗಳು ಜಾತಿಯನ್ನು ಒಪ್ಪಲಿಲ್ಲ ಎಂದೇ ನನಗೆ ಆಗ ಅನಿಸಿದ್ದು. ಅವರು ಜಾತಿಯನ್ನು ನಿರಾಕರಿಸಿದ್ದರು ಎಂದೇ ನಾನಂದುಕೊಂಡದ್ದು. 'ಜಾತಿಯನ್ನು ಹೇಳು-ಜಾತಿಯನ್ನು ಕೇಳು' ಎಂದು ಯಾವ ಸಂದರ್ಭದಲ್ಲಿ ಹೇಳಿದ್ದರೋ ಗೊತ್ತಿಲ್ಲ. ಬಹುಶಃ ಜಾತಿಯ ಬಗ್ಗೆ ಅರಿವು/ಎಚ್ಚರ ಇರಬೇಕು ಎಂಬರ್ಥದಲ್ಲಿ ಹೇಳಿದ್ದರೇನೋ. ಅದನ್ನೇ ಮಕ್ಕಳಿಗೆ ತರಬೇತಿಯಲ್ಲಿ ಅಳವಡಿಸಬೇಕು ಎಂದು ನನ್ನ ಅಭಿಪ್ರಾಯ.
ಇನ್ನು ಗಾಂಧಿಯ ಬಗ್ಗೆ ನೀವು ಹೇಳಿದ ಮಾತು ಸರಿಯೆ. ಆದ್ದರಿಂದಲೇ ಗಾಂಧಿ ತಮ್ಮ ಮುಂದಿದ್ದ ಒಂದು ಐತಿಹಾಸಿಕ ಅವಕಾಶವನ್ನು ಬಿಟ್ಟುಕೊಟ್ಟರು ಎಂದು ನಾನೆಣಿಸುತ್ತೇನೆ. ಅಥವಾ ಎಲ್ಲ ಕೆಲಸವನ್ನೂ ಒಬ್ಬರಿಂದಲೇ ಅಪೇಕ್ಷಿಸುವದು ತಪ್ಪೇನೊ!

Quote:
ಆದರೆ ನಮ್ಮ ಶಿಕ್ಷಿತ, ನಗರೀಕೃತ ಮಧ್ಯಮ ವರ್ಗ ಜಾತಿಯನ್ನು ಋಣಾತ್ಮಕವಾಗಿ ಗ್ರಹಿಸಿ ಅದನ್ನು 'ನಿವಾರಿಸಲು' ಪ್ರಯತ್ನಿಸುತ್ತದೆ

ಈ ಮಾತು ನನ್ನ ಬಗ್ಗೆ ಹೇಳಿದ್ದೀರೋ ಅಥವಾ ಸಾರ್ವತ್ರಿಕವಾಗಿ ಹೇಳಿದ್ದೀರೋ ಗೊತ್ತಾಗಲಿಲ್ಲ. ಎರಡರ್ಥದಲ್ಲೂ, ಈ ಮಾತಿನ ಹಿಂದಿರುವ ವ್ಯಂಗ್ಯದ ಅಗತ್ಯ ಕಾಣುತ್ತಿಲ್ಲ. ಅಷ್ಟಲ್ಲದೆ, ಜಾತಿ 'ನಿವಾರಣೆ' ಯ 'ಫಲ'ಕೊಡುವಂಥ ಪ್ರಯತ್ನ ಆಗಿಲ್ಲ ಎಂಬ ಆತಂಕದೊಂದಿಗೆ ನನ್ನ ಮಾತು ಮುಗಿಸಿದ್ದೇನೆ. ಹಾಗಾಗಿ ಜಾತಿ ನಿವಾರಣೆಯಲ್ಲಿ "ಶಿಕ್ಷಿತ, ನಗರೀಕೃತ ಮಧ್ಯಮ ವರ್ಗದ ಪ್ರಯತ್ನಗಳು" ಏನು ಎಂದು ತಿಳಿಯಲಿಲ್ಲ.
Quote:
ಕ್ರಿಶ್ಚಿಯಾನಿಟಿ, ಇಸ್ಲಾಂಗಳಂಥ ಧರ್ಮಗಳಲ್ಲಿರುವ ಸಮಾನತೆ

ಆ ಧರ್ಮಗಳಲ್ಲಿ ಸಮಾನತೆ ಇದೆ ಎಂದು ನಾನು ಒಪ್ಪುವುದಿಲ್ಲ. ಆದರೆ, ಅಲ್ಲಿರುವ ಅಸಮಾನತೆ ಜಾತಿಯೊಂದರಿಂದಲೇ ಹುಟ್ಟಿದ್ದು ಎನಿಸುವುದಿಲ್ಲ. ಸಂಘಪರಿವಾರದ ಬಗ್ಗೆಗಿನ ನಿಮ್ಮ ಮಾತು ಸರಿ. ಅಯೋಧ್ಯೆಯನ್ನು ಮೆಕ್ಕಾ-ಮದೀನ ಅಥವಾ ರೋಮಿನ ಹಾಗೆ ಧರ್ಮಕೇಂದ್ರ ಮಾಡುವ ಪ್ರಯತ್ನ ಅದರ ಇನ್ನೊಂದು ಮುಖ ಎಂದು ತಿಳಿಯುತ್ತೇನೆ.
ಇನ್ನು ಜಾತಿ ಪೂರೈಸುವ ಸಾಮಾಜಿಕ ಅಗತ್ಯಗಳು ಎಂದೆನುವ ಅಪಾಯದ ಬಗ್ಗೆ ಒಂದು ಉದಾಹರಣೆಯೊಂದಿಗೆ ನನ್ನ ನಿಲುವನ್ನು ಹೇಳುತ್ತೇನೆ. ಮೂಢನಂಬಿಕೆ, ಕಂದಾಚಾರಗಳಿಂದ ಜನರನ್ನು ಮೋಸ ಮಾಡುವ ಸ್ವಾಮಿಗಳು/ಗುರುಗಳು ಒಂದು ಶಾಲೆಯನ್ನೋ, ಆಸ್ಪತ್ರೆಯನ್ನೋ ತೆರೆದು ತಮ್ಮ ಸಾಮಾಜಿಕ ಅಗತ್ಯವನ್ನು ಸ್ಥಾಪಿಸಿಕೊಳ್ಳುವುದನ್ನು ನಾವು ನೋಡಿಲ್ಲವೆ? ಅಲ್ಲದೆ, ಇಂಥ ಅಗತ್ಯಗಳನ್ನು ಪೂರೈಸುವ ಸ್ಥೈರ್ಯ ಜಾತ್ಯತೀತ ಸಮುದಾಯಗಳಿಗೆ ಇಲ್ಲವೆಂದು ನಿಮ್ಮ ನಿಲುವೆ?
ಎಂಥ ಸಂಕೀರ್ಣ ಸಮಸ್ಯಯಾದರೂ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ ಎಂದು ನನ್ನ ನಂಬಿಕೆ. ಅದು ಜನರಿಂದಲೇ ಆಗಬೇಕು, ಹಾಗಾಗಿಯೇ ಮಕ್ಕಳಿಗೆ ನಾವು ಮೊರೆಹೋಗಬೇಕು! ಪುಟ್ಟ ಪುಟ್ಟ ಹೆಜ್ಜೆ ಇಡುವುದರಿಂದಾಗುವ ಇನ್ನೊಂದು ಅನುಕೂಲ, ನಮ್ಮ ಹೆ‌‌ಜ್ಜೆಯಲ್ಲಿ ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತಾ ಮುನ್ನಡೆಯುವ ಅವಕಾಶವಿರುತ್ತದೆ.

ಹುಟ್ಟಿನಿಂದ ನಿರ್ಧಾರವಾಗುವ ಜಾತಿಯ ಧನಾತ್ಮಕ ಗುಣಗಳ ಪಟ್ಟಿಗಾಗಿ ನಿಮ್ಮ ಲೇಖನವನ್ನು ಎದುರುನೋಡುತ್ತಿದ್ದೇನೆ Smiling

'ಸಮಾನತೆ'- ಒಂದು ಸ್ಪಷ್ಟೀಕರಣ

Yamini's picture

ಅನಿವಾಸಿಯವರು ಮತ್ತು ನನ್ನ ಪ್ರತಿಕ್ರಿಯೆಯ ಇತರ ಓದುಗರಲ್ಲಿ ಕ್ಷಮೆ ಕೋರುತ್ತಾ ಒಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾನು ಬರೆದಿರುವ 'ಕ್ರಿಶ್ಚಿಯಾನಿಟಿ, ಇಸ್ಲಾಂಗಳಂಥ ಧರ್ಮಗಳಲ್ಲಿರುವ ಸಮಾನತೆ' ಎಂಬ ಸಾಲು ಕೆಲವು ತಪ್ಪು ಅರ್ಥಗಳನ್ನು ಧ್ವನಿಸುತ್ತಿದೆ. ನಾನು ಬರೆಯಬೇಕು ನಾನಂದುಕೊಂಡ ಅರ್ಥ ಹೀಗೆ. ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂಗಳ Monolithic ಆದ ಬಾಹ್ಯ ಸ್ವರೂಪವನ್ನು (ಇದೂ ಕೂಡಾ ಒಂದು ಭ್ರಮೆ ಮಾತ್ರ. ಈ ಧರ್ಮಗಳೂ ಸಾಕಷ್ಟು ಭಿನ್ನತೆಗಳನ್ನು ಹೊಂದಿವೆ)ಮಾತ್ರ ನೋಡಿ ಅವುಗಳಲ್ಲಿ ಸಮಾನತೆ ಇದೆ ಎಂದುಕೊಳ್ಳಲಾಗುತ್ತದೆ. ಬ್ರಹ್ಮ ಸಮಾಜದಂಥ ಸುಧಾರಣಾವಾದಿ ಚಳವಳಿಗಳು ವೈದಿಕ ಧರ್ಮವನ್ನು ಈ ಬಗೆಯ ಬದಲಾವಣೆಯೊಂದಕ್ಕೆ ಒಳಪಡಿಸಲು ಪ್ರಯತ್ನಿಸಿದ್ದವು. ಈಗ ಸಂಘ ಪರಿವಾರ ಇದನ್ನು ಮತ್ತೊಂದು ರೀತಿಯಲ್ಲಿ ಮಾಡುತ್ತಿದೆ. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಯೂ ಇಸ್ಲಾಂನ ಅನುಯಾಯಿಗಳೆಲ್ಲಾ ಒಂದಾಗಿದ್ದಾರೆ. ಕ್ರಿಶ್ಚಿಯಾನಿಟಿಯನ್ನು ಪಾಲಿಸುವವರೆಲ್ಲಾ ಒಂದಾಗಿದ್ದಾರೆ ಎಂಬ ಗ್ರಹಿಕೆಯಿಂದಲೇ ಹೊರಟದ್ದು ಎಂಬುದು ನನ್ನ ಅನಿಸಿಕೆ.

-ಯಾಮಿ

Re: ಜಾತಿನಿವಾರಣೆ ಮತ್ತು ಲೈಂಗಿಕ ಬೋಧನೆ

H.S.R.Raghavendra Rao's picture

ನಿಮ್ಮ ಬರವಣಿಗೆಯ ಹಿಂದಿರುವ ಆರ್ದ್ರ ಕಾಳಜಿ ಮತ್ತು ಆಲೋಚನೆಗಳ ಗಹನತೆ ಎರಡೂ ನಿಜವಾಗಿಯೂ ಪ್ರಶಂಸನೀಯವಾದವು. ಇದಕ್ಕೆ ಆತುರದ ಪ್ರತಿಕ್ರಿಯೆಗಳನ್ನು ಕೊಡಲು ಇಷ್ಟವಾಗುವುದಿಲ್ಲ. ಸದ್ಯದಲ್ಲಿ ನನ್ನನ್ನು ಕಾಡುತ್ತಿರುವ ಭಾಷಣ-ಲೇಖನಗಳ 'ಹಿಂಸೆ'ಯಿಂದ ಬಿಡುಗಡೆಯಾದ ಕೂಡಲೇ ನನಗೆ ತೋರಿದ್ದನ್ನು ಬರೆಯುತ್ತೇನೆ. ಸುಮ್ಮನಿರಲು ಮನಸ್ಸು ಬರಲಿಲ್ಲ. ಆದರಿಂದ ಈ ಕಿರು ಟಿಪ್ಪಣಿ.

 

H.S.Raghavendra Rao

Syndicate content