ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಮುನ್ನುಡಿ
ಕನ್ನಡ ಎಂಬ ಪದವು ಅನೇಕ ಸಾಮಾಜಿಕ ಮೌಲ್ಯಗಳನ್ನು (ಅಂದರೆ ಭಾಷೆ, ಜನ, ಮಾರುಕಟ್ಟೆ, ಬೇಸಾಯ, ಉದ್ಯೋಗ, ಕಲಿಕೆ, ಚಿಂತನೆ....) ಹೊರಸೂಸುತ್ತದೆಯಾದರೂ, ಈ ಲೇಖನದಲ್ಲಿ ನುಡಿ ಎಂಬುದಾಗಿ ಅರ್ಥೈಸಿಕೊಳ್ಳೋಣ.
ಕರಡು
ಶತಮಾನಗಳಿಂದ ನಮ್ಮ ಕನ್ನಡ ಭಾಷೆ ಯಾವುದೇ ಮಡಿವಂತಿಕೆಯನ್ನು ಬೆಳೆಸಿಕೊಳ್ಳದೆ, ಬೇರೆ ಬೇರೆ ಸಮುದಾಯಗಳಿಂದ ಎಷ್ಟೋ ವಿಚಾರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಾ ಮುನ್ನಡೆದಿರುವದು ಹೆಮ್ಮೆಯ ವಿಷಯವೇ ಸರಿ. ಆದರೆ ನಾವು ಹೊಸತನ್ನು ಬರಮಾಡಿಕೊಳ್ಳುವ ಆತುರದಲ್ಲಿ ನಮ್ಮದೇ ಎಷ್ಟೋ ಅನರ್ಘ್ಯ ರತ್ನಗಳನ್ನು ಚೆಲ್ಲಿಬಿಟ್ಟಿದ್ದೇವೆಯೇ ಎಂಬು ಅನುಮಾನ ಕೆಲವೊಮ್ಮೆ ಕಾಡದೇ ಇರುವದಿಲ್ಲ. ಈ ವಿಷಯವಾಗಿ ಯೋಚಿಸಿದಾಗ ಕೆಲವೊಮ್ಮೆ ಎಷ್ಟೋ ವಿಚಾರಗಳು ಉತ್ತರ ಸಿಗದೇ ಹೋಗುತ್ತವೆ. ಈ ನಿಟ್ಟಿನಲ್ಲಿ ಕೆಲವು ವಿಚಾರವನ್ನು ನಿಮ್ಮ ಮುಂದಿಟ್ಟು, ಕೊನೆಯಲ್ಲಿ ಒಂದು ಉದಾಹರಣೆಯನ್ನು ನೀಡುತ್ತದೆ ಈ ಲೇಖನ. ಕನ್ನಡದ ನುಡಿಯ ಬಗ್ಗೆ ಹೆಚ್ಚು ಅಭ್ಯಾಸ ಮಾಡಿದವರು, ಈ ಲೇಖನದಲ್ಲಿರಬಹುದಾದ ತಪ್ಪುಗಳನ್ನು ತಿದ್ದಿ, ಈ ನಿಟ್ಟಿನಲ್ಲಿ ಕನ್ನಡದ ಬೆಳಕು ಎಲ್ಲರಿಗೂ ಸಿಗುವಂತೆ ಮಾಡಬೇಕೆಂದು ಕೋರಿಕೆ.
ಹಳಗನ್ನಡವೆಂಬ ಜ್ಞಾನಭಂಡಾರ
ಹಳಗನ್ನಡದಿಂದ ಹೊಸಗನ್ನಡದಲ್ಲಾದ ಎಷ್ಟೋ ಬದಲಾವಣೆಗಳಲ್ಲಿ ಅತಿಮುಖ್ಯವಾಗಿ ನಾವು ಪ->ಹ ಮಾರ್ಪಾಟನ್ನು ಕಾಣಬಹುದು. ಈ ಪ->ಹ ವಿಚಾರಕ್ಕೆ ಬಂದರೆ, ಎಷ್ಟೋ ಬಳಕೆಗಳು ನಮ್ಮ ಮುಂದೆ ಸುಳಿಯುತ್ತವೆ. ಪಾಲು->ಹಾಲು, ಪಣೆ->ಹಣೆ, ಪಾಡು->ಹಾಡು, ಪನಿ->ಹನಿ, ಪಲವು->ಹಲವು, ಪಳ್ಳ->ಹಳ್ಳ, ಪೞೆಯ->ಹಳೆಯ. ಇವುಗಳನ್ನು ಕುರಿತಾಗಿ ಎಷ್ಟೋ ವೇಳೆ ನಾವು ತಪ್ಪು ತಿಳಿಯುವದು. ಪನಿ, ಪಾಲು ಮುಂತಾದವು ತಮಿಳು ಪದಗಳು, ತಮಿಳಿನಿಂದ ಮಾರ್ಪಾಟಾಗಿ ಹನಿ, ಹಾಲು ಅಂತ ಕನ್ನಡಕ್ಕೆ ಬಂದಿದೆ ಎಂಬುದಾಗಿ. ಇದು ನಮ್ಮ ತಪ್ಪು ತಿಳಿವಳಿಕೆ. ನಿಜವಾಗಿ ಪರಿಶೀಲಿಸಿ ನೋಡಿದಾಗ ಕನ್ನಡ ಕಾವ್ಯಗಳಲ್ಲಿಯೂ ಇದರ ಬಳಕೆಗಳು ಹಲವಾರು ಕಂಡುಬರುತ್ತದೆ. ಪಲವುಂ ಪಳ್ಳ ಸಮುದ್ರವೈ ಅಂತ ಸೋಮೇಶ್ವರ ಶತಕದ ಮೊದಲ ಪದ್ಯದಲ್ಲಿಯೇ ಇದೆ (೧೨ನೇ ಶತಮಾನವಿರಬಹುದು). ಈ ಪ->ಹ ಮಾರ್ಪಾಟುಗಳನ್ನು ಕವಿರಾಜಮಾರ್ಗದಲ್ಲಿಯೂ ಕೆಲವೆಡೆ ಕಾಣಬಹುದು. ಕವಿರಾಜಮಾರ್ಗ (ಸುಮಾರು ೮೫೦ ಎ.ಡಿ) ರಚಿತವಾದ ಕಾಲಕ್ಕೇ ಕನ್ನಡವು ಆಗಿನ ಕಾಲಕ್ಕೆ ಹಳೆಯದಾಗಿತ್ತು. ಇದರ ಬಗ್ಗೆ ಕವಿರಾಜಮಾರ್ಗದ ಕರ್ತೃವೇ ಹಿಂದಿನ ಕವಿಗಳು ಪೞಗನ್ನಡದಲ್ಲಿ ಕಾವ್ಯ ರಚಿಸಿರುವರು, ಅದು ಆಗಿನ ಕಾಲಕ್ಕೆ ಸರಿಹೊಂದಿದ್ದಿರಬಹುದು, ಆದರೆ ಈಗ ತಾನು ಹೊಸ ಪ್ರಯೋಗ ಮಾಡುತ್ತೇನೆ ಎಂಬಂತಹ ಮಾತುಗಳನ್ನಾಡಿದ್ದಾನೆ. ಏಕೆ ಈ ಪ್ರಸ್ತಾಪ ಮಾಡಿದೆನಂದರೆ ಕನ್ನಡ ಭಾಷೆ ತುಂಬಾ ಹಳೆಯದು ಎಂದು ಹೇಳುವದಕ್ಕಲ್ಲ, ಬದಲಾಗಿ ಪನಿ, ಪಾಲು ಇವುಗಳು ಕೇವಲ ತಮಿಳು ಪದಗಳು, ಕನ್ನಡ ಪದಗಳಲ್ಲ ಎಂಬ ತಪ್ಪುಗ್ರಹಿಕೆ ದೂರಮಾಡಲು ಹೇಳಿದೆನಷ್ಟೇ.
ಹೀಗಾಗಿ ವಿದ್ವಾಂಸರುಗಳು ಪೂರ್ವಹಳೆಗನ್ನಡ, ಹಳೆಗನ್ನಡ ಮತ್ತು ಹೊಸಗನ್ನಡ ಎಂಬ ಬಳಕೆಗಳನ್ನು ರೂಢಿಗೆ ತಂದಿದ್ದಾರೆ.
ಪ->ಹ ಮಾರ್ಪಾಟು
ಸಂಸ್ಕೃತಕ್ಕೆ ಹೊರತಾದ ಕನ್ನಡದಲ್ಲಿಯೇ ಈ ಪ->ಹ ಪ್ರಕ್ರಿಯೆ ಪ್ರಾರಂಭವಾಗಿದೆ. ಕಡೇ ಪಕ್ಷ ೯ನೇ ಶತಮಾನದಿಂದಲಾದರೂ. ಕನ್ನಡವು ಕೆಲವು ಶತಮಾನಗಳಿಂದ ಕಳೆದುಕೊಳ್ಳುತ್ತಿರುವ ಈ "ಪ" ಅಕ್ಷರವನ್ನು ಈಗಿನವರಾದ ನಾವು ಹೇಗೆ ಬಳಸಿಕೊಳ್ಳಬಹುದು ? ಈ "ಪ" ಅಕ್ಷರವನ್ನು ಈಗಿನ ಕಾಲಕ್ಕೆ ಪ್ರಸ್ತುತವಾಗಿಸಬಹುದೇ ? ಪ್ರಸ್ತುತವಾಗಿಸಬಹುದಾದರೆ ಹೇಗೆ ಆಗಿಸುವದು. ಹಾಂ! ನಾವು ಈ ದಿಸೆಯಲ್ಲಿ ಅಗತ್ಯವಾಗಿ ನೆನಪಿನಲ್ಲಿಡಬೇಕಾದದ್ದು, "ಪ" ಪ್ರಸ್ತುತವಾಗಿಸೋಣ ಎಂದ ಮಾತ್ರಕ್ಕೆ ಈ ಕ್ಷಣದಿಂದಲೇ ಎಲ್ಲರೂ ಪಾಲು, ಪಾಡು, ಪಲವು ಎಂಬು ಪದಗಳನ್ನು ಬಳಸೋಣ ಎಂಬುದಲ್ಲ. ಪ->ಹ ಮಾರ್ಪಾಟು ಕನ್ನಡದ ಮಟ್ಟಿಗೆ ಒಂದು ಒಳ್ಳೆಯದೇ ಆಗಿದೆ. ಎಷ್ಟೋ ವೇಳೆ, "ಹ"ದಿಂದ ಪ್ರಾರಂಭವಾಗುವ ಪದಗಳು (ಹಾಡು) ಕ್ರಿಯಾಪದ ಇಲ್ಲವೇ, ವಿಶೇಷಣ ಇವುಗಳನ್ನು ಪಡೆದಿವೆ, ಆದರೆ "ಪ"ದಿಂದ ಪ್ರಾರಂಭವಾಗುವ ಅದರ ಹಳೆಯ ರೂಪಗಳು ಇಂದಿಗೆ ಇನ್ನೂ ನಾಮಪದದ ರೂಪವನ್ನು ಉಳಿಸಿಕೊಂಡಿವೆ(ಪಾಡು). ಇದೊಂದು falsifiable ವಾಕ್ಯವಿರಬಹುದು. ಇದಕ್ಕೆ ಆಧಾರವಾಗಿ ಬಳಕೆಗಳನ್ನು ನೀಡಬಹುದಷ್ಟೇ. ಆದರೆ ಆಧಾರಸಮೇತ ನಿರೂಪಿಸಲಾಗುವದಿಲ್ಲ.
ಈಗ್ಗೆ ಕೆಲವು ದಿನಗಳಿಂದ ನನಗೆ ಹೊಳೆದಿದ್ದ ಆಲೋಚನೆಯೆಂದರೆ ಈ "ಪ" ಅಕ್ಷರವನ್ನು ನಾವು conceptualizationಗೆ ಬಳಸಿಕೊಂಡು ಅದರ "ಹ" ಪ್ರಯೋಗಗಳನ್ನು ಅದರ implementationಗಳಿಗೆ ಬಳಸಿಕೊಳ್ಳಬಹುದೇ ? ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.
ಉದಾಹರಣೆಗೆ -
ಹನಿಗಳು, ಹನಿಗಳಿಂದ, ಹನಿಯನ್ನು, ಹನಿಸು, ಹನಿಕು ಈ ಪ್ರಯೋಗಗಳಿಗೆ ಹಳೆಗನ್ನಡದ ಪನಿ ಎಂಬ ಪದವೇ ಆಧಾರ. ಈಗಿನ ಕಾಲಘಟ್ಟದಲ್ಲಿರುವ ನಮಗೆ ಪನಿ ಎಂಬ ಪದವು ಒಂದು ನಾಮಪದವನ್ನು ಮಾಡಲು ಸಹಕಾರಿಯಾಗುತ್ತದೆ. ಅಂದರೆ ಪನಿ ಎಂಬುದು ಒಂದು concept ಆಗಿ ಅದರ ವಿವಿಧ ರೂಪಗಳಾದ ಹನಿ, ಹನಿಕೆಗಳು ಇವಗಳು implementationಗಳಾಗಿವೆ. ಹಾಗೆಯೇ ಹಾಡು, ನಾವುಗಳಿಂದು "ಹಾಡುವಾಗ, ಹಾಡುತ್ತಿದ್ದಾಗ, ಹಾಡುಗಳು" ಎಂಬುದಾಗಿ ಬಳಸುವದಕ್ಕೆ ಹಳೆಗನ್ನಡದ ಪಾಡು ಸಹಾಯಕ್ಕೆ ಬರುತ್ತದೆ. ಈಗಿನ ನಮ್ಮ ದಿನನಿತ್ಯದ ಮಾತಿನಲ್ಲಿ ಪಾಡುವಾಗ ಎಂಬ ಬಳಕೆ ದೂರ ಸರಿದಿದೆ.
conceptualization ನಿಂದ ಆಗುವ ಪ್ರಯೋಜನಗಳು
ಈಗಿನ ಎಷ್ಟೋ ತಾಂತ್ರಿಕ ಮಂದಿ GRE ಇಂಗ್ಲೀಷ್ ಅಭ್ಯಾಸ ಮಾಡುವಾಗ ಇದು ಗಮನಕ್ಕೆ ಬಂದಿರುತ್ತದೆ. ಯಾವುದೋ, ಕಂಡಿಯೇ ಇರದ, ಕೇಳಿಯೇ ಇರದ ಪದಕ್ಕೆ Synonym ಹುಡುಕುವಾಗ ಸಹಾಯಕ್ಕೆ ಬರುವದು ಆ ಪದದ roots. ಈ rootಗಳ ಆಧಾರದಲ್ಲಿ ಈ ಪದದ ಅರ್ಥ ಹೀಗಿರಬಹುದು ಎಂಬುದನ್ನು ಊಹಿಸಬಹುದು.
ಇದಕ್ಕೊಂದು ಉದಾಹರಣೆ
ಈ ದಿನ ಗೂಗಲ್ನಲ್ಲಿ ಚಾಟ್ ಮಾಡುವಾಗ, Status Message ಎಂಬುದಕ್ಕೆ ಕನ್ನಡದಲ್ಲಿ ಏನು ಹೇಳಬಹುದು ಎಂದು ಯೋಚಿಸುತ್ತಿದ್ದೆ. ಏಲ್ಲೆಲ್ಲೋ ಹೋಗಿ ಕೊನೆಗೆ ಅಲ್ಲಿಗೆ ಬಂದರು ಎನ್ನುವ ನಾಣ್ಣುಡಿಯ ಹಾಗೆ ಒಂದು ಒಳ್ಳೆಯ ವಿಚಾರ ಹೊಳೆಯಿತು. ಈ ವಿಚಾರವು ಹೊಳೆದಾಗಿನಿಂದ ನನ್ನ ಆತ್ಮವಿಶ್ವಾಸವಂತೂ ಹೆಚ್ಚಾಗಿದೆ. ನಿಮಗೂ ಇದರ ಅನುಭವವಾದರೆ ಈ ಲೇಖನದ ಉದ್ದೇಶ ಸಾರ್ಥಕವಾದಂತೆ.
ನಾವೆಲ್ಲರೂ, ಹೀಗೊಂದು ವಚನವನ್ನು ಓದಿರುತ್ತೇವೆ, ಅಥವಾ ಕೇಳಿರುತ್ತೇವೆ. ಬಹುಶಃ ಬಸವಣ್ಣನವರದ್ದಿರಬಹುದು. ಏನು ಬಂದಿರಿ ಹದುಳಿದ್ದಿರೆ ಎಂದರೆ ನಿಮ್ಮ ಐಸಿರಿ ಹಾರಿ ಹೋವುದೇ? ..ಹೀಗೆ ಸಾಗುತ್ತದೆ ಆ ವಚನ, ನನಗೆ ಪೂರ್ತಿ ತಿಳಿದಿಲ್ಲ. ತಿಳಿದವರು ಪೂರ್ತಿ ಪದ್ಯವನ್ನು ಹಾಕಿದರೆ ಒಳ್ಳೆಯದಾಗುವದು. ಇಲ್ಲಿ ಹದುಳ ಎಂದರೆ ಏನು ಗೊತ್ತೇ ? ಅಚ್ಚಗನ್ನಡದವರು ಅಥವಾ ಆಂಡಯ್ಯನ ಅಭಿಮಾನಿಗಳು ಹಮ್ಮೆಪಡಬಹುದಾದಂತಹ ಪದವಿದು.
ಗೆಳೆಯರೆ ಮೇಲಿನ ವಚನದಲ್ಲಿ ಬಂದಿರುವ ಅಚ್ಚಗನ್ನಡದ ಹದುಳ ಎಂಬ ಪದವನ್ನು ಗಮನಿಸಿ, ಈ ಪದದ root ಕಂಡುಹಿಡಿಯಬಲ್ಲಿರಾ ? ಈ ಹದುಳ ಎಂಬ ಪದವು ಹಳೆಗನ್ನಡದ ಪದುಳ ಎಂಬುದರಿಂದ ಬರುತ್ತದೆ. ಈ ಪದುಳ ಎಂಬ ಪದದ root ಪದ. ಅಚ್ಚಕನ್ನಡದ ಹದುಳ ಪದದ root ಸಂಸ್ಕೃತದ ಪದವೇ ಎಂದು ಹುಬ್ಬೇರಿಸಬೇಡಿ. ಸರಿ, ಈಗ "ಪದ" ಎಂಬ ಪದದ ಬಗ್ಗೆ ನೀವುಗಳು ವಿವರಣೆ ನೀಡಬಲ್ಲಿರಾ ? ನಾವುಗಳಿಂದು ತಿಳಿದುಕೊಂಡಿರುವ ಹಾಗೆ ಪದ ಎಂಬ ಪದವು ಸಂಸ್ಕೃತದ್ದು ಎಂಬುದಾಗಿ. ಆದರೆ ನಾವಿಂದು ಬಳಸುವ "ಪದ" ಎಂಬ ಪದ ಸಂಸ್ಕೃತದ್ದು ಎಂದು ಹೇಳುವುದಕ್ಕೆ ಬರುವದಿಲ್ಲ. ಕನ್ನಡದಲ್ಲಿಯೂ "ಪದ" ಎಂಬ ಪದವಿದೆ. ಆದರೆ ಹಳೆಗನ್ನಡದಿಂದ ಹೊಸಗನ್ನಡಕ್ಕೆ ನಾವು ಪಲ್ಲಟವಾಗುವಾಗ ಇದರ ಮಹತ್ವವನ್ನು ಅರಿಯದೇ ಸುಮ್ಮನಾಗಿಬಿಟ್ಟಿದ್ದೇವೆ. ಹಳೆಗನ್ನಡದ "ಪದ" ಎಂಬ ಪದವು ಹೊಸಗನ್ನಡದಲ್ಲಿ "ಹದ" ಎಂದಾಗಿದೆ. ಪದ ಎಂದರೆ ಒಳ್ಳೆಯ ಸ್ಥಿತಿಯಲ್ಲಿರುವದು, ಚೆನ್ನಾಗಿ ಕಳಿತಿರುವದು. ಕಿಟ್ಟೆಲ್ ಪದಕೋಶವನ್ನು ಆಧಾರವಾಗಿಟ್ಟುಕೊಂಡಿರುವ ಡ್ರಾವಿಡಿಯನ್ ಪದಕೋಶ ಹೀಗೆ ಹೇಳುತ್ತದೆ.
Ka. pada proper or good state or condition, the right degree of ripeness....
ಈ ಕಾರಣದಿಂದಲೇ ಪದ್ಯ, ಪದಪುಂಜ ಎಂಬು ಪ್ರಯೋಗಗಳೂ ಕನ್ನಡಿಗರಿಗೆ ಹತ್ತಿರವೆನಿಸುತ್ತವೆ. "ಪದ" ಎಂಬ ಪದ ಕನ್ನಡದ್ದೇ ಎಂದು ತಿಳಿದಾಗ ಸಂತೋಷವಾಯಿತೇ ? ಅಗತ್ಯವಾಗಿ ತಿಳಿಸಿ. ಇದನ್ನು ತಿಳಿಯದಿದ್ದ ನಾನೇ ಪದ ಎಂಬುದಕ್ಕೆ ಬದಲಾಗಿ ಒರೆ ಎಂದು ಕೆಲವೆಡೆ ಬಳಸುತ್ತಿದ್ದೆ, ಆದರೆ ಯಾವ ದಿನ ಪದ ಎಂಬುದು ಕನ್ನಡದ್ದೇ ಎಂದು ತಿಳಿಯಿತೋ ಆದಿನ ಆದ ಆನಂದ ಅಷ್ಟಿಷ್ಟಲ್ಲ. ಗ್ರಾಮ್ಯವಲ್ಲದೆಯೂ ಕನ್ನಡವಿದೆ ಎಂಬ ನನ್ನ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ. ಇಂತಹ ಇನ್ನೂ ಎಷ್ಟೋ ಅನರ್ಘ್ಯ ರತ್ನಗಳು ಕನ್ನಡದಲ್ಲಿರಬಹುದು. ಅವುಗಳು ಕಂಡಾಗ ಎಲ್ಲರೊಡನೆ ಹಂಚಿಕೊಳ್ಳೋಣ.
ಈ ರೀತಿಯ ಪದಪ್ರಯೋಗಗಳ(ಪದಪ್ರಯೋಗವೆಂದರೆ ಚೆನ್ನಾಗಿರುವ ಪ್ರಯೋಗಗಳು ಎಂತಲೂ ಅರ್ಥೈಸಬಹುದು, word'uಗಳ ಬಳಕೆಗಳಲ್ಲ) ಜ್ಞಾನವಿದ್ದ ನಮ್ಮ ಹಿಂದಿನವರು ಯಾವ ಯಾವ ಪದಗಳನ್ನು ಬಳಸಬೇಕು, ಎಂತಹ ಪದಗಳನ್ನು ಬೇರೆ ಭಾಷೆಯಿಂದ ಎರವಲು ಪಡೆಯಬೇಕು, ಎಂತಹವನ್ನು ಬಿಡಬೇಕು ಇತ್ಯಾದಿಯಾಗಿ ಯೋಚಿಸುತ್ತಿದ್ದರೆಂದು ಕಾಣುತ್ತದೆ. ಆದರೆ ಈಗಿನ ಕನ್ನಡಿಗರಾದ ನಾವು, ಸಮಯದ ಅಭಾವ ಹಾಗು Globalization, Liberalization ಪರಿಣಾಣದ ಮೇಲೆ ಬೊಟ್ಟು ಮಾಡಿ ಕನ್ನಡದಲ್ಲಿಯೇ ಇರುವ ಇಂತಹ ರತ್ನಗಳ ಬಗ್ಗೆ ಚರ್ಚಿಸದೇ ಇವುಗಳನ್ನು ಕಳೆದುಕೊಳ್ಳಲು ಸಿದ್ಧರಾಗೋಣವೇ ?
ಮುಗಿಸುವ ಮುನ್ನ
ಸರಿ, ಒಂದು ಉದಾಹರಣೆ ನೀಡುತ್ತೇನೆ ಎಂದು ಹೇಳಿದ್ದೆ, Status Messageಗೆ ಕನ್ನಡದಲ್ಲಿ ಏನು ಹೇಳಬಹುದು. ಸಂಸ್ಕೃತದ ಸ್ಧಿತಿ(?????). ಸ್ಥಿತಿ ಎನ್ನುವದು State ಅನ್ನು ಸೂಚಿಸುತ್ತದೆಯೇ ಹೊರತು Status(??).
ಲೇಖನವನ್ನು ಪೂರ್ಣವಾಗಿ ಓದುವಾಗ ನಿಮ್ಮ ಗಮನಕ್ಕೆ "ಪದ" ಬಂದಿರಬಹುದು.
pada - proper or good state or condition, proper degree or temperature, the seasoning of any food, the right degree of ripeness, keenness of edge or sharpness;
paduḷa - well-being, prosperity, happiness, tranquillity, security, safety;
Status Message ಎನ್ನುವದಕ್ಕೆ ಕನ್ನಡದಲ್ಲಿ ಪದ ಅಥವಾ ಹೆಚ್ಚು ಪಕ್ವವಾಗಿ ಪದುಳ ಎಂಬುದಾಗಿ ಬಳಸಬಹುದು. ಇದಕ್ಕೆ ಸಹಾಯಕ್ಕೆ ಕನ್ನಡ ಕಾವ್ಯವೂ ಬೆನ್ನುಲುಬಾಗಿ ನಿಲ್ಲುತ್ತದೆ.
ಕನ್ನಡದಲ್ಲಿರುವ ಇಂತಹ ಅನರ್ಘ್ಯ ರತ್ನಗಳನ್ನು ಹೆಕ್ಕಿ ತೆಗೆಯಲು ನಾವೇನು ಹರಸಾಹಸ ಮಾಡಬೇಕಿಲ್ಲ. ನಾವುಗಳು ಏನನ್ನಾದರೂ ಓದುವಾಗ ಇಂತಹ ವಿಚಾರಗಳು ಎದುರಾದರೆ ಎಲ್ಲರೊಡನೆ ಹಂಚಿಕೊಂಡರೆ ಸಾಕು. ನಮಗಿಂತ ಹೆಚ್ಚು ತಿಳಿದವರು ಇದರ ಬಗ್ಗೆ ಚರ್ಚಿಸುತ್ತಾರೆ. ಹೆಚ್ಚು ಹೆಚ್ಚು ವಿಚಾರ ವಿನಿಮಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನುಡಿಯ ಬಗೆಗಿನ ಹೆಮ್ಮೆ ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ನುಡಿಯ ಬಗ್ಗೆ ನಮಗೆ ನಾವೇ ಸಂಕುಚಿತ ಭಾವನೆ ಬೆಳೆಸಿಕೊಂಡು, ನಮ್ಮ ಹಣವಂತಿಕೆಯ ಬಗ್ಗೆ ಎಷ್ಟು ಕೊಚ್ಚಿದರೆ ಏನು ಬಂತಲ್ಲವೇ ಭಾಗ್ಯ.
ಕೊನೆಯ ಮಾತು
ಲೇಖನ ನಿಮಗೆ ಹಿಡಿಸಿತೇ ? ಲೇಖನದ ಉದ್ದೇಶದ ಬಗ್ಗೆ ನೀವೇನಾದರೂ ಹೇಳಬಯಸುವಿರೇ ? ಏನಾದರೂ ಹೇಳಬೇಕೆನಿಸಿದರೆ ಅಗತ್ಯವಾಗಿ ನಿಮ್ಮ ಅಭಿಪ್ರಾಯಗಳನ್ನು ಮುಂದಿಡಿ.

- Login or register to post comments
- 826 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಬಾಗಲಕೋಟೆಯಲ್ಲು "ಹದುಳ ಬನ್ನಿ" ಎಂಬ ಬ್ಯಾನರ್ ಕಾಲೇಜಿನ ಪಕ್ಕ ಇರುತಿತ್ತು. ಸ್ವಾಗತ ಎಂದರ್ಥವೇನೋ?
>>ಕನ್ನಡದಲ್ಲಿಯೇ ಇರುವ ಇಂತಹ ರತ್ನಗಳ ಬಗ್ಗೆ ಚರ್ಚಿಸದೇ ಇವುಗಳನ್ನು ಕಳೆದುಕೊಳ್ಳಲು ಸಿದ್ಧರಾಗೋಣವೇ ?
ಖಂಡಿತಾ ಹೀಗಾಗಲು ಬಿಡಬಾರದು. ಮಡಿವಂತಿಕೆ ಸಲ್ಲದು ಎಂದು ಸಿಕ್ಕ ಸಿಕ್ಕ ಪದಗಳನ್ನು ಕನ್ನಡಕ್ಕೆ ಸೇರಿಸುವುದು ಸರಿಯಲ್ಲ.
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಪ್ರೀತಿಯ ಸುನೀಲ್ ಜಯಪ್ರಕಾಶ್ ಅವರೇ,
ನಿಮ್ಮ ಅಪೇಕ್ಷೆಯಂತೆ ಆ ವಚನದ ಪೂರ್ಣ ಪಾಠವನ್ನು ಇಲ್ಲಿ ಕೊಟ್ಟಿದ್ದೇನೆ:
'ಏನಿ ಬಂದಿರಿ, ಹದುಳವಿದ್ದಿರೆ?' ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದ?
'ಕುಳ್ಳಿರೆಂ'ದರೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು ?
-ಬಸವಣ್ಣ
ಈ ಪಾಠವನ್ನು ಶಿ.ಶಿ. ಬಸವನಾಳ ಅವರ ಪುಸ್ತಕದಿಂದ ತೆಗೆದು ಕೊಟ್ಟದ್ದೇನೆ. ನೀವು ನಡೆಸುತ್ತಿರುವ ಹುಡುಕಾಟಕ್ಕೆ ವಚನಗಳು ಅತ್ಯುತ್ತಮ ಆಕರಗಳು. ಅಲ್ಲಿನ ಅನೇಕ ಪದಗಳು ಹಳಗನ್ನಡದಿಂದ ಮತ್ತು ಸಂಸ್ಕೃತದಿಂದ ದೂರವಾಗಿ ಹೊಸ ರೂಪಗಳನ್ನು ಪಡೆಯುತ್ತಿರುತ್ತವೆ.
ಇನ್ನು ನಿಮ್ಮ ವಿಚಾರಗಳ ಬಗ್ಗೆ, ಬಹಳ ಸಂಗ್ರಹವಾಗಿ ಪ್ರತಿಕ್ರಿಯಿಸುತ್ತೇನೆ.
೧. ಯಾವುದೇ ಭಾಷೆಯ ಚರಿತ್ರೆಯಲ್ಲಿ ನೀವು ಸೂಚಿಸಿರುವಂತಹ ಬದಲಾವಣೆಗಳು (ಧ್ವನಿವ್ಯತ್ಯಾಸಗಳು) ಕಾಲದಿಂದ ಕಾಲಕ್ಕೆ ನಡೆಯುತ್ತವೆ. ಹಾಗೆ ಆಗಲು ಕಾರಣಗಳಿರುತ್ತವೆ. ಒಂದು ಅವಧಿಯ ನಂತರ ಅವು ನಿಂತುಹೋಗುತ್ತವೆ. ಉದಾಹರಣೆಗೆ ಈಗ ಪ ಕಾರದಿಂದ ಮೊದಲಾಗುವ ಪದಗಳು ಹ ಕಾರಾದಿ ಆಗುವುದಿಲ್ಲ.
೨. ಒಂದು ಪದದ ಮೂಲ ರೂಪ ಮತ್ತು ಹೊಸ ರೂಪಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಬಳಸುವ ಕೆಲಸವು ಭಾಷೆಯಲ್ಲಿ ನಡೆಯುತ್ತದೆ. ಉದಾ: ಯೋಗಿ-ಜೋಗಿ, ಯಾತ್ರೆ-ಜಾತ್ರೆ, ಸಂಸ್ಥೆ-ಸಂತೆ ಇತ್ಯಾದಿ.
೩. ಒಂದು ರೂಪವನ್ನು ನಾಮಪದವಾಗಿ ಮತ್ತೊಂದನ್ನು ಕ್ರಿಯಾಪದವಾಗಿ ಬಳಸುವ ನಿಮ್ಮ ಸೂಚನೆಯು ಕುತೂಹಲಕಾರಿಯಾಗಿದೆ. ಈಗ ಇರುವಂತೆ ಒಂದೇ ಪದವು ಸಂದರ್ಭಕ್ಕೆ ಅನುಗುಣವಾಗಿ ಎರಡೂ ಕೆಲಸಗಳನ್ನು ನಿರ್ವಹಿಸುತ್ತದೆ.
ಉದಾ: ನೀನು ಒಂದು ಹಾಡು ಹಾಡು.
೪. ಹೊಸ ಪದಗಳನ್ನು ಹೊಸ ಅರ್ಥದಲ್ಲಿ ಮತ್ತು ಹಳೆಯ ಪದಗಳನ್ನು ಹೊಸ ಅರ್ಥದಲ್ಲಿ ಬಳಸುವ ಕೆಲಸವು ಒಬ್ಬ ವ್ಯಕ್ತಿಯಿಂದ ಮೊದಲಾದರೂ ಕ್ರಮೇಣ ಎಲ್ಲ ಕಡೆಯೂ ಚಾಲ್ತಿಗೆ ಬರಬಹುದು.
ಉದಾ: ಶ್ರೀಸಾಮಾನ್ಯ, ಹಂಸಗೀತೆ
ಪಾರಿಭಾಷಿಕವಾಗಿ ಬಳಸಿದರೆ, ಆ ಅರ್ಥವನ್ನು ವಿವರಿಸುವ ಹೊಣೆಯು ಬಳಸುವವನಿಗೆ ಇರುತ್ತದೆ.
ಉದಾ: Status Message = 'ಹದುಳ ಸಂದೇಶ' ವೇ?
ಸಾಮಾನ್ಯವಾಗಿ 'ಹದುಳ' ಎಂದರೆ "ಯೋಗಕ್ಷೇಮ' ಎನ್ನುವುದಕ್ಕೆ ಹತ್ತಿರವಾದ ಪದ. ಕಂಪ್ಯುಟರ್ ಅನ್ನು ಬಳಸುವವರಿಗೆ ಆ ಅರ್ಥಛಾಯೆಯು ಹೇಗೂ ಗೊತ್ತಿರುವುದಿಲ್ಲ. ಆದ್ದರಿಂದ ಇದು ಹೇಗೂ ಹೊಸ ಪದವೇ ಆಗುತ್ತದೆ.
೫. ನಿಮಗೆ ಅಗತ್ಯವೆನಿಸಿದರೆ, ಈ ಚರ್ಚೆಯನ್ನು ಮುಂದುವರಿಸೋಣ.
H.S.Raghavendra Rao
ಚಿಂತನಾ ಬರಹದ ಆಶಯ
ಮೊಟ್ಟಮೊದಲಿಗೆ ಕ್ಷಮೆಯಿರಲಿ. ಈ ಎಳೆಯನ್ನು ಪ್ರಾರಂಭಿಸಿದರೂ, ಪ್ರತಿಕ್ರಿಯೆ ನೀಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ.
ನಲ್ಮೆಯ ಹೆಚ್.ಎಸ್.ಆರ್.ರಾಘವೇಂದ್ರ ರಾವ್ ಅವರೇ,
ಬಸವಣ್ಣನವರ ವಚನವನ್ನು ಹಾಕಿದ್ದು ತುಂಬಾ ನೆರವಿಗೆ ಬಂತು. ಅದಕ್ಕಾಗಿ ಸವಿನೆರವು ಮತ್ತು ಸವಿಯೊದಗು. (ಸರಿಯಾದ ಸಮಯದಲ್ಲಿ ಒದಗಿ ಬಂದ ಸವಿಯಾದ ವಚನ. ನಾನು ಗಮನಿಸಿದ ಹಾಗೆ ಬರವಣಿಗೆಯಲ್ಲಿ ಕೆಲವೊಮ್ಮೆ ಧನ್ಯವಾದಗಳಿಗಿಂತ ಸವಿಯೊದಗು ಸೂಕ್ತವಾಗಿ ಹೊಂದುತ್ತದೆ). ಹಾಂ!, ಖಂಡಿತವಾಗಿಯೂ ಸಮಯ ಸಿಕ್ಕಾಗ ಬಸವಣ್ಣನವರ ವಚನಗಳನ್ನು ಓದುವ ಜತುನಗೈಯುತ್ತೇನೆ.
ಅಂದ ಹಾಗೆ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ನೀವೀಗಾಗಲೇ ಗ್ರಹಿಸಿರುವಂತೆ, ನಾನು ಹಳಗನ್ನಡದಲ್ಲಿರಬಹುದಾದ ಸರಳ ಕನ್ನಡ ಪದಗಳನ್ನು ಈಗಿನ ವ್ಯವಹಾರದಲ್ಲಿ ಹೇಗೆ ನಾಮಪದಗಳನ್ನಾಗಿ ಬಳಸಬಹುದು ಎಂಬುದರ ಬಗ್ಗೆ ಚಿಂತನೆಗೈಯುತ್ತಿದ್ದೇನೆ. ಈ ಚಿಂತನೆಯಲ್ಲಿ ನಾನು ಉದಾಹರಣೆಯಾಗಿ ಹೇಳಬಯಸಿದ್ದು, Status Message = ಪದುಳ, ಅಂದರೆ ಪದುಳ ಎಂಬುದೇ Message ಅನ್ನು ಒಳಗೊಂಡಂತಹ ಪದವಾಗಬಹುದೇ ?.
ಏಕೆಂದರೆ ನೀವೂ ಪ್ರಸ್ತಾಪಿಸಿದ ಹಾಗೆ, ಪದುಳ = ಯೋಗಕ್ಷೇಮ.
ಡಿಕ್ಷನರಿ ಪ್ರಕಾರ,
[http://dsal.uchicago.edu/cgi-bin/philologic/getobject.pl?c.1:1:1323.burrow|paduḷa well-being, prosperity, happiness, tranquillity, security, safety;]
ಹಾಗಾಗಿ, ಪದುಳ ಎಂಬುದನ್ನೇ ನಾಮಪದ ಮಾಡಿದರೆ, ಅದು ಒಬ್ಬ ವ್ಯಕ್ತಿಯ well-being (ಸುಸ್ಥಿತಿ ಎಂದು ಅರ್ಥೈಸಿದರೂ, ಸ್ಥಿತಿ ಗತಿ ಎಂದೂ ಅರ್ಥೈಸಬಹುದು) ಪದುಳ ಸಂದೇಶ ಎಂದು explicit ಆಗಿ ಹೇಳಬೇಕಿರುವುದಿಲ್ಲ. ಪದುಳ ಎಂಬುದೇ ಸಂದೇಶವನ್ನು ಒಳಗೊಂಡಿರುತ್ತದೆ, ಹಾಗಾಗಿ Status Message = ಪದುಳ. ಪದುಳ ಸಂದೇಶವಲ್ಲ.
ಹಿಂದೆ - ಸ್ಟೇಟಸ್ ಮೆಸೇಜಿನಲ್ಲಿ ಏನು ಸೂಚಿಸಿದ್ದೀಯಾ ನೋಡು ?
ಈಗ - ಪದುಳದಲ್ಲಿ ಏನು ಬರ್ದೀದ್ದೀಯಾ ನೋಡು ? ಅಥವಾ ವೇಗವಾಗಿ ಮಾತನಾಡುವಾಗ ಪದದಲ್ಲಿ ಏನು ಬರ್ದಿದ್ದೀಯಾ ನೋಡು ಎಂದರೂ ಅರ್ಥವಾಗುತ್ತದೆ.
ಮತ್ತೊಂದು ಬಳಕೆ - ಸ್ಥಿತಿ ಸಂದೇಶದಲ್ಲಿ ಏನೆಂದು ಸೂಚಿಸಿದ್ದೀಯಾ ನೋಡು (??)
@ಎಲ್ಲರೂ,
ಪದುಳ ಎನ್ನುವದನ್ನು ನಾವು conceptualizationಗೆ ಬಳಸಬೇಕು. ಪದುಳ ಪದದ ಹಕಾರಾದಿಗಳು ಪದುಳದ ವಿವಧ ಸ್ಥಿತಿಯನ್ನು ನಿರೂಪಿಸಬೇಕು.
೧. ಹದುಳದಿಂದಿದ್ದೇನೆ ಎಂದರೆ ಚೆನ್ನಾಗಿದ್ದೇನೆ ಎಂದರ್ಥೈಸಬಹುದು.
೨. ಹದುಳ ಬನ್ನಿ ಎಂಬ ಬಳಕೆ ಅಶೋಕ್ ಅವರು ಪ್ರಸ್ತಾಪಿಸಿದ ಹಾಗೆ ಇನ್ನೂ ಬಳಕೆಯಲ್ಲಿದೆ. welcome ಎನ್ನುವುದಕ್ಕೆ ಕನ್ನಡದ ಸೊಗಡಿನಲ್ಲಿ ಕನ್ನಡ ನಾಡಿನ ಬೇರೆ ಬೇರೆ ಸೀಮೆಗಳಲ್ಲಿ ಈ ರೀತಿಯ ಬಳಕೆಗಳಿರಬಹುದು. ಕೇವಲ ಮೈಸೂರು ಸೀಮೆ ಮಾತ್ರವೇ ಕನ್ನಡನಾಡಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕಷ್ಟೇ.
ಅದೂ ಅಲ್ಲದೆ,
೧. Status Message ಅನ್ನು ಸಂದೇಶ ಎನ್ನುವಾಗ, ಸಂದೇಶವನ್ನು ಯಾರಿಗಾದರೂ ಕಳುಹಬೇಕು. ಆದರೆ ನಾವು ಚಾಟ್ ಮಾಡುವಾಗ Status Message ಅನ್ನು Set ಮಾಡುತ್ತೇವೆಯೇ ಹೊರತು ಯಾರಿಗೂ ನಮ್ಮ ಸಂದೇಶ ಕಳುಹುವುದಿಲ್ಲ. ಹಾಗಾಗಿ Status Message ಎನ್ನುವದನ್ನು ಸ್ಥಿತಿ ಸಂದೇಶ ಎನ್ನುವದು ಕನ್ನಡದ ಮಟ್ಟಿಗೆ ತರವಲ್ಲ ಎಂಬುವದು ನನ್ನ ಅಂಬೋಣ.
೨. ಇಂತಹ ಪ್ರಯೋಗಗಳನ್ನು (Status Message = ಪದುಳ, ಕೇವಲ ಒಂದು ಉದಾಹರಣೆ) ಮಾಡುವದರಿಂದ ಅನೇಕ ಪ್ರಯೋಜನಗಳುಂಟು.
೨.೧ ಕನ್ನಡ ನಾಡು ಭಾವನಾತ್ಮಕವಾಗಿ ಒಂದಾಗಲು ಒಂದು ಕಣ ಮರಳಿನಷ್ಟಾದರೂ ಸಹಾಯಕವಾಗುತ್ತದೆ. ಈ ಮೇಲಿನ ಮಾತನ್ನು ಓದಿ ಕೆಲವರಿಗೆ ನಗು ಬರಬಹುದು. ಆದರೆ, ಇದು ಕೇವಲ ಪದುಳ ಪದದ ಕುರಿತಾಗಿ ಅಲ್ಲ. ಅದಕ್ಕಿಂತ ದೊಡ್ಡ ಆಶಯದ್ದು. ಈಗಾಗಲೇ, ಅಶೋಕ್ ಕುಮಾರ್ ಅವರು ಪ್ರಸ್ತಾಪಿಸಿದ ಹಾಗೆ ಪದುಳ ಎಂಬುವದು ಇನ್ನೂ ಬಳಕೆಯಲ್ಲಿದೆ. ಮೈಸೂರು ಸೀಮೆಯಲ್ಲಿ ಪದುಳವಿಲ್ಲದಿದ್ದ ಮಾತ್ರಕ್ಕೆ ಅದು ಕನ್ನಡಿಗರಿಂದ ದೂರವಾಗಿದೆ ಎಂದು ಅರ್ಥೈಸಲು ಆಗದು.
೨.೨ ಬಹುಶಃ ವಚನಗಳನ್ನು, ಹಳೆಗನ್ನಡ ಕಾವ್ಯಗಳನ್ನು ಓದಿ, ಅದರಲ್ಲಿರಬಹುದಾದ ಪದಗಳನ್ನು ಹೆಕ್ಕಿ ಈಗಿನ ಕಾಲಕ್ಕೆ ಪ್ರಸ್ತುತವಾಗಿಸಿದರೆ, ಕನ್ನಡ ನಾಡಿನ ವಿವಿಧ ಸಮುದಾಯಗಳು ಕಡೇಪಕ್ಷ ಭಾಷೆಯ ವಿಷಯವಾಗಿಯಾದರೂ ಒಂದಾಗಬಹುದು. ಹಿಂದೆ ಒಕ್ಕಲಿಗರೂ, ಲಿಂಗಾಯತರೂ ಒಂದಾಗಲು ಸಾಧ್ಯವೇ ಎಂಬುದಾಗಿ ಚರ್ಚೆ ನಡೆದದ್ದು ನಿಮ್ಮ ಗಮನದಲ್ಲಿರಬಹುದು.
ನೆನಪಿರಲಿ, ಇದು ಒಂದು ಚಿಂತನಾ ಬರಹ. ಎಲ್ಲದಕ್ಕೂ ಸಮಯದ ಅಭಾವ ಮತ್ತು Globalization ಮೇಲೆ ಬೊಟ್ಟುಮಾಡಿ, ಬೇರೆ ಬೇರೆ ಭಾಷೆಗಳಿಂದ ಸ್ವೀಕರಿಸಬೇಕಾದ್ದು, ಸ್ವೀಕರಿಸಬೇಡದ್ದು ಎಲ್ಲವನ್ನೂ ಸ್ವೀಕರಿಸುತ್ತಿರುವ ನಾವುಗಳು, ನಮ್ಮದೇ ಕನ್ನಡವನ್ನು (ಮುಖ್ಯವಾಗಿ ಹಳೆಗನ್ನಡವನ್ನು) ಯಾವ ರೀತಿ conceptualizationಗೆ ಬಳಸಬಹುದು ಎಂಬುದನ್ನು ತಿಳಿಸಲು ಬರೆದದ್ದು.
Status Message
State = ಇರುವು
Status = ಇರುವ ಬಗೆ/ ಇರುವ ಮಟ್ಟ / ಇರುವ ತೆರ
Message ಅಂದರೆ information ಅಂತ ಕೂಡ ಆಗುವುದು.
ಕನ್ನಡದಲ್ಲಿ ಅರಿಕೆ( ಅಱಿಕೆ )/ಅರಿಮೆ ಅಂತ ಗೊತ್ತು.
ಅಂತು..
ಇರುವ/ಇರುವಿನ ಅರಿಕೆ
[ ಹಳಗನ್ನಡದಂತೆ ಇರ್ + ಅರಿಕೆ = ಇರರಿಕೆ
ಮಾಡಬಹುದು ]
ಮಾಹಿತಿ ಇದು ಯಾವ ನುಡಿಯ ಪದ? ಸಂಸ್ಕೃತವೇ?
ಇರುವು/ಇರುವಿನ ಮಾಹಿತಿ ಯೂ ಆಗಬಹುದು..
ಆದೆ ಸಂಸ್ಕೃತದಲ್ಲಿ ಸ್ಥಿತಿ ಅಂದರೆ status ಗಿಂತ state/ಅವಸ್ಥೆ ಅಂತ ಅರ್ಥ ಅಂತ ನನ್ನರಿವು.
ಸ್ಥಾನ ಅಂದರೆ ಸಂಸ್ಕೃತದಲ್ಲಿ status!
ಸಂಸ್ಕೃತದಲ್ಲಿ ’ಸ್ಥಾನ’ ಮತ್ತು ’ಸ್ಥಳ’ ಗಳ ಅರ್ಥ ಬೇರೆ ಬೇರೆ.
ಆದರೆ ಅವು ಕನ್ನಡದಲ್ಲಿ adjustment ಇಂದ ಒಂದೇ ಅರ್ಥದಲ್ಲಿ ಬಳಕೆಯಾಗೆ ಇರಬಹುದು
"classical language status" "ಶಾಸ್ತ್ರೀಯಭಾಷಾಸ್ಥಾನಮಾನ" ಇದನ್ನು ಗವನಿಸಬಹುದು. ಅಲ್ಲಿ ’ಮಾನ’ ಇರದಿದ್ದರು ನಡೆಯುತ್ತದೆ.
ಆದರೆ "ಶಾಸ್ತ್ರೀಯಭಾಷಾಸ್ಥಿತಿ" ಇದು ಹೊಂದುವುದಿಲ್ಲ!!
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
Status message ಗೆ ಕನ್ನಡದಲ್ಲಿ ಸ್ಥಿತಿ ಸಂದೇಶ ಎನ್ನಬಹುದು. Status ಎನ್ನುವುದಕ್ಕೆ ಕನ್ನಡದಲ್ಲಿ ಸ್ಥಿತಿ ಎಂದು ಬಳಸಲಾಗುತ್ತಿದೆ. ಸ್ಥಿತಿ ಎನ್ನುವುದಕ್ಕೆ state ಎಂಬ ಅರ್ಥವೂ ಬರುತ್ತದೆ, ಇಲ್ಲವೆಂದಲ್ಲ. ಕೆಲವೊಮ್ಮೆ ಇಂಗ್ಲೀಷ್ ಭಾಷೆ ಕನ್ನಡಕ್ಕಿಂತ ಶ್ರೀಮಂತ ಎಂಬ ಭಾವನೆ ಬರುತ್ತದೆ, ಇನ್ನು ಕೆಲವೊಮ್ಮೆ ಕನ್ನಡ ಭಾಷೆ ಶ್ರೀಮಂತ ಎಂಬ ಭಾವನೆಯೂ ಬರುತ್ತದೆ. ಉದಾ -ಎಡ ಎನ್ನುವ ಕನ್ನಡ ಪದಕ್ಕೂ ಉಳಿದ ಎಂಬ ಪದಕ್ಕೂ ಇಂಗ್ಲೀಷಿನಲ್ಲಿ left ಎಂಬ ಪದ ಬಳಕೆಯಾಗುತ್ತಿದೆ.
ಗಣಕ ಪಾರಿಭಾಷಿಕ ಪದಗಳ ರಚನೆ ಮಾಡುವಾಗ ನಾನು ಎಷ್ಟು ಕಷ್ಟ ಪಟ್ಟಿದ್ದೆ ಎಂಬುದು ಹಲವರಿಗೆ ಗೊತ್ತಿರಲಾರದು. ಆ ಬಗ್ಗೆ ಲೇಖನವನ್ನೇ ಬರೆದಿದ್ದೆ. ಅಂತರಜಾಲದಲ್ಲಿರುವ, ಮೈಕ್ರೋಸಾಫ್ಟ್‌ನವರ ಸಮುದಾಯ ಪದಕೋಶಕ್ಕೆ ನಾನು ನಿರ್ವಾಹಕ (moderator) ಆಗಿದ್ದೆ. ಈ ಪದಕೋಶಕ್ಕೆ ಎಲ್ಲರೂ ಪದಗಳನ್ನು ಸೇರಿಸಿ ಎಂದು ಕೋರಿ ಬರೆದ ನನ್ನ ಪತ್ರ ಪ್ರಜಾವಾಣಿಯಲ್ಲೂ ಪ್ರಕಟವಾಗಿತ್ತು. ಆದರೆ ಬಂದ ಪ್ರತಿಕ್ರಿಯೆ ತುಂಬ ನೀರಸವಾಗಿತ್ತು. ಕನ್ನಡ ಯುನಿಕೋಡ್‌ನಲ್ಲಿ ಪದಗಳನ್ನು ಸೇರಿಸಿದವರ ಸಂಖ್ಯೆ ಐದನ್ನೂ ದಾಟಿರಲಿಲ್ಲ. ಸೂಚಿಸಿದ ಪದಗಳೂ ಸ್ವೀಕರಿಸುವಂತಿರಲಿಲ್ಲ. ಕೊನೆಗೆ ಎಲ್ಲ ಪದಗಳನ್ನು ನಾನೇ, ನನ್ನ ಇನ್ನೊಬ್ಬ ಸ್ನೇಹಿತರಾದ ಸತ್ಯನಾರಾಯಣರ ಜೊತೆ ಕೂತು, ತಯಾರಿಸಿದೆನು(ವು).
ದಯವಿಟ್ಟು ಪಾರಿಭಾಷಿಕ ಪದಗಳನ್ನು ಸೃಷ್ಟಿ ಮಾಡುವ ಮೊದಲು ಈ ಪದಕೋಶದ ಕಡೆಗೆ ಸ್ವಲ್ಪ ಕಣ್ಣು ಹಾಯಿಸಿ. ಇಲ್ಲಿರುವ ಪದಗಳು ಶ್ರೇಷ್ಠ ಅಥವಾ ಅವೇ ಅಂತಿಮ ಎಂದೇನೂ ನಾನು ಸೂಚಿಸುತ್ತಿಲ್ಲ. ಪದಗಳ ಸಂಖ್ಯೆಯೂ ಎರಡು ಸಾವಿರದಷ್ಟಿವೆಯಷ್ಟೆ. ಸಾಧ್ಯವಿದ್ದಷ್ಟೂ ಒಂದು ವಿಷಯವನ್ನು ಸೂಚಿಸಲು ಒಂದೇ ಪದವನ್ನು ಎಲ್ಲರೂ ಬಳಸಿದರೆ ಒಳ್ಳೆಯದು, ಅಷ್ಟೆ. ಉದಾಹರಣೆಗೆ software. ಇದಕ್ಕೆ ಕನ್ನಡದಲ್ಲಿ ತಂತ್ರಾಂಶ ಎಂಬ ಪದ ಬಳಕೆಗೆ ಬಂದಿದೆ. ತಂತ್ರಭಾಗ ಎಂದರೆ ತಪ್ಪೇನೂ ಆಗುವುದಿಲ್ಲ. ಆದರೆ ತಂತ್ರಾಂಶ ಎನ್ನುವುದು ಬಳಕೆಗೆ ಬಂದಿರುವುದರಿಂದ ಅದನ್ನೇ ಬಳಸೋಣ. ಹಾಗೆಯೇ input = ಊಡಿಕೆ, output = ನೀಡಿಕೆ, ಇತ್ಯಾದಿ.
localization ಬಗ್ಗೆ ದೇಶದ ಯಾವ ಮೂಲೆಯಲ್ಲೇ ಆದರೂ ವಿಚಾರ ಸಂಕಿರಣ ನಡೆದಾಗ ನಾನೂ ಸಾಮಾನ್ಯವಾಗಿ ಅದರಲ್ಲಿ ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ನಾನು ಸಾಮಾನ್ಯವಾಗಿ ಎಲ್ಲರಲ್ಲಿ, ಮುಖ್ಯವಾಗಿ ಮುಕ್ತ ತಂತ್ರಾಂಶ ಪ್ರವರ್ತಕರಲ್ಲಿ, ಕೇಳಿಕೊಳ್ಳುವುದೇನೆಂದರೆ ಮೈಕ್ರೋಸಾಫ್ಟ್ ಮತ್ತು ಮುಕ್ತ ತಂತ್ರಾಂಶಗಳಲ್ಲಿ ಒಂದು ವಿಷಯಕ್ಕೆ ಒಂದೇ ಪದ ಇರುವಂತೆ ನೋಡಿಕೊಳ್ಳಿ ಎಂದು. ಇದೇ ಉದ್ದೇಶದಿಂದ ಕನ್ನಡ ಮುಕ್ತ ತಂತ್ರಾಂಶಗಳಿಗೆ ಪದಗಳ ತಯಾರಿಯ ಕಾರ್ಯಾಗಾರಗಳಲ್ಲಿ ನಾನೂ ಭಾಗವಹಿಸಿದ್ದೇನೆ.
ಸಿಗೋಣ,
ಪವನಜ
-----------
Vishva Kannada Think globally, Act locally
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಶ್ರೀಯುತ ಪವನಜರವರೆ,
ವೈಜ್ಞಾನಿಕ ಪದಗಳ ಸಂಶೋಧನೆಗಳಲ್ಲಿ ಪ್ರಮುಖರಾದವರೆಂದರೆ ಶ್ರೀ ಜಿ. ಟಿ. ನಾರಯಣರಾಯರೂ ಒಬ್ಬರು. ಅವರು ಎಷ್ಟೋ ವೈಜ್ಞಾನಿಕ ಬರಹಗಳನ್ನು ಹಾಗು ಪುಸ್ತಿಕೆಗಳನ್ನು ಪ್ರಕಟಿಸಿದ್ದಾರೆ. ಅವರು ಬರೆದ "ವಿಜ್ಞಾನ ಸಪ್ತರ್ಷಿಗಳು" ನಾನು ಓದಿದ್ದೇನೆ. ಅವರು ಅದರಲ್ಲಿ ಏಳು ಜನ ವಿಜ್ಞಾನಿಗಳ ಬಗ್ಗೆ ಹಾಗು ಅವರುಗಳ ಸಂಶೋಧನೆಗಳನ್ನು ತುಂಬಾ ಸೊಗಸಾಗಿ ವಿವರಸಿದ್ದಾರೆ. ಅದರಲ್ಲಿ ಅನೇಕ ಕನ್ನಡದಲ್ಲಿಯೇ ವಿಜ್ಞಾನ ಪದಪುಂಜಗಳನ್ನು ಕೂಡ ಸೃಷ್ಟಿಸಿದ್ದಾರೆ. ಪೀಠಿಕೆಯಲ್ಲಿ ವೈಜ್ಞಾನಿಕ ಪದಗಳನ್ನು ಕನ್ನಡದಲ್ಲಿ ಹೇಗೆ ಸೃಷ್ಟಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದಾರೆ. ಅವರು ಗಣಿತ ಶಿಕ್ಷರೂ ಆಗಿದ್ದರು. ಆದರೆ ಅವರೀಗ ನಿವೃತ್ತರಾಗಿ ತುಂಬಾ ದಿನಗಳಾಗಿವೆ. ಈಗ ಅವರು ನೆಲೆಸಿರುವುದು ಮೈಸೂರಿನಲ್ಲಿ. ಒಮ್ಮೆ ಅವರನ್ನು ಭೇಟಿಯಾದರೆ ಮಾಹಿತಿ ತಂತ್ರಜ್ಞಾನದಲ್ಲಿ ಹೇಗೆ ಪದಕೋಶ ರಚಿಸಬಹುದು ಎಂಬುದರಲ್ಲಿ ಸಹಾಯ ಮಾಡಬಲ್ಲರು. (ನಾವೇ ಅವರನ್ನು ನೇರವಾಗಿ ಭೇಟಿಯಾದರೆ ಒಳೀತು).
ಇನ್ನೊಂದು ವಿಷಯ ಅವರು ಬರೆದ ಪುಸ್ತಿಕೆಗಳು ತುಂಬಾ ಅಗ್ಗ ದರದಲ್ಲಿ ದೊರೆಯುತ್ತಿವೆ. ಆದ್ದರಿಂದ ನಾವು ಯಾರಿಗಾದರೂ (ಅದರಲ್ಲೂ ಮಕ್ಕಳಿಗೆ) ಉಡುಗೊರೆ ಅಥವಾ ಕಾಣಿಕೆಯಾಗಿ ನೀಡುವಾಗ ಈ ಪುಸ್ತಕಗಳನ್ನೆ ಕೊಡಬಹುದು.
ಅಂದ ಹಾಗೆ ತೇಜಸ್ವಿಯವರೂ ಸಹಾಯ ಮಾಡಬಲ್ಲ್ರರಲ್ಲವೆ?
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
RBIN/ECD1
Mailto:Vinayak.Khavasi@in.bosch.com
or Khavasi.Vinayak@boschrexroth.de
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು,
ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“ – ಕುವೆಂಪು.
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಕಾಳಿದಾಸನು "ಪದು" ಅಂದರೆ ಒಳ್ಳೆಯದು ಎಂಬ ತಿಳಿವಿನಲ್ಲಿ ಬಲು ಎಡೆ ಬಳಸಿದ್ದಾನಂತೆ!!
ಅವನಿಗೆ ಈ ’ಪದು’ ಬಲು ಮೆಚ್ಚಂತೆ!
ಇದಲಿ..
ಈ ಸಕ್ಕದ ಒರೆಗಳ ಗುಟ್ಟೇನು?
ಪದುಮ = ಒಳ್ಳೆಯದು, ಸುಂದರ?(one in proper condition)
ಪದಕ = ತಾಯತ, safetyಗಾಗಿ ತಾಯತ.
ಪದವಿ = ಒಳ್ಳೆಯ ಇಕ್ಕೆ/ಜಾಗ, ಮೇಲ್ಮಟ್ಟದ ಹೆಸರು
ಇರಬಹುದಾ?
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಸುನೀಲ್ ,
ನಿಮ್ಮ ಸ್ಥಿತಿ-ಪದುಳ-ಹದುಳ ಕುರಿತ ಬರಹ ಓದುವಾಗ ಒಂದ್ ವಿಚಾರ ಬಂತು
ಪಾಡು ಶಬ್ದ ಏಕೆ ಬಳಸಬಾರ್ದು ? (ಪದುಳ ಬಹಳ ಜನಕ್ಕೆ ಹೊಸದು ... ಪಾಡು ಬಹಳ ಜನಕ್ಕೆ ಗೊತ್ತು )
- ಅವನ ಪಾಡು ಅವನಿಗೆ ....
- ನನ್ನ ಪಾಡೆನಗಿರಲಿ ....
ಅಷ್ಟೇ ಅಲ್ಲದೆ ಚೆನ್ನಾಗಿದ್ದೀರಾ ? ಅನ್ನೋ ಅರ್ಥ ದಲ್ಲಿ ಜನ ಬಳಸೋದೂ ಇದೆ .
ಹೆಂಗದೀರೀ ? ಪಾಡಾಗಿದ್ದೀರಾ ? ಪಾಡ್ ಅದೀರಾ ? - ಹದುಳವಿದ್ದೀರಾ ? ಅಂದ ಹಾಗೆ
ಈಗ ಪಾಡಾತು ನೋಡು ---- ( ಈಗ ಚಲೋ ಆಯ್ತು , ನೋಡು )
ಅಂದ ಹಾಗೆ
ನೀವು ಇಂಗ್ಲೀಷಿನಲ್ಲಿ ಓದಿದ್ದು - pada - ಇದೇ ಆಗಿರಲಿಕ್ಕೂ ಸಾಕು
ಈಗ ಪಾಡಿಗೆ ಬಂದಿದೆ - ಅಂದ್ರೆ ಪಕ್ವವಾಗಲು ಬಂದಿದೆ . ಅದೇ ripeness ಉ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಆಹಾ!!! ಸೂಪರ್ ಮಿಶ್ರಿಕೋಟಿ ನೀವು. ಸ್ಟೇಟಸ್ ಮೆಸೇಜಿಗೆ "ಪಾಡು" ಎನ್ನುವುದು ಸರಿಯಾದ ಆಯ್ಕೆ. ಹಳಗನ್ನಡದ ಗಣಿಯಲ್ಲಿ ಅದೆಷ್ಟು ರತ್ನಗಳಿವೆ ನೋಡಿ.
ಪಾಡು ೧ - ಸ್ಧಿತಿಗತಿ (Technically Status Message. ಯಾವ ಕನ್ನಡ-ಸೀಮೆಯವರು ಬೇಕಾದರೂ ಬಳಸಬಹುದು), ಪಾಡು ೨ -> ಹೊಸಗನ್ನಡದಲ್ಲಿ ಹಾಡು.
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
"ಹೊಸಗನ್ನಡದಲ್ಲಿ ಪಾಡು ಎಂದರೆ ಹಾಡು " ಎಂದಿರಿ
ಹೊಟ್ಟೆಪಾಡು , ನಾಯೀಪಾಡು ಇವಕ್ಕೆ ಏನು ಹೇಳ್ತೀರಾ ;
ಪಾಡು ಅಂದ್ರೆ ಸ್ಥಿತಿ ಎಂದೇ ;
ನನ್ನ ಪಾಡೆನಗಿರಲಿ .... ಅರ್ಥ ನನ್ನ ಪಾಡು ನನಗಿರಲಿ , ನೋವು , ದು:ಖ ಎಲ್ಲ ನನಗಿರಲಿ , ಸುಖ ಸಂತೋಷದ ಹಿಗ್ಗಿನ ಹಾಡನ್ನ ನಿಮಗೆ ಕೊಡುವೆ ಅಂತ ಕವಿ ಹೇಳೋದು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಮಿಶ್ರಿಕೋಟಿ ಅದನ್ನೇ ನಾನು ಹೇಳುತ್ತಿರುವುದು. ಈ ಬರಹದ ಆಶಯ ನೋಡಿ. ಹಳಗನ್ನಡದ ಪ->ಹ ಪಲ್ಲಟವನ್ನು ನಾವು ಈಗ ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದರ ಬಗ್ಗೆಯಷ್ಟೇ ಇದು ಮಾತನಾಡುತ್ತೆ. ಹಳಗನ್ನಡದ ಪ->ಹ ಹೊರಳಾಟದಿಂದಾಗಿ ಇಂದು ಹೊಸಗನ್ನಡದಲ್ಲಿ "ಪಾಡು = Status Message, ಹಾಡು = song" ಎಂಬುದಾಗಿ ಯಾವುದೇ ಡೌಟಿಲ್ಲದೆ ಇಟ್ಟುಕೊಳ್ಳೋಣ. ಪ->ಹ ಹೊರಳಾಟದಿಂದ ಹೊಸಪದಗಳ ಸೃಷ್ಟಿಗೆ ತುಂಬಾ ಬಾಗಿಲುಗಳು ತೆರೆದುಕೊಂಡಿದೆ.
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಪಾಡು = ಸ್ಥಿತಿ, ಪರಿಸ್ಥಿತಿ..
http://dsal.uchicago.edu/cgi-bin/philologic/getobject.pl?c.1:1:1269.burr...
Ka. ಪಡು/paḍu (paṭṭ-) to get, obtain, catch, incur, undergo, experience, feel, suffer; n. getting, etc.;
ಪಡುವಿಕೆ/paḍuvike getting, experiencing, etc.; paḍal incurring or suffering;
ಪಡೆ/paḍe to get, undergo, experience, acquire, obtain; procreate, bear; n. getting, etc.;
ಪಡಪು/paḍapu, ಪಡೆಯುವಿಕೆ/paḍeyuvike obtaining, etc.;
ಪಾಡು/ಪಾಟು/pāḍu, pāṭu id., suffering, trouble, state, manner, fitness, likeness; (PBh.) { ಏರ್ಪಾಟು = state of arranged, ಮಾರ್ಪಾಟು = state of changed }
ಪಾಡು/pāḍu proper state or form;
ಪಾಟಿ/pāṭi manner, fitness, likeness. { ಈ ಪಾಟಿ, in this manner(ಬಳಕೆ ಇದೆ ) }
ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಬರೀ ಸುನೀಲರಿಗೆ (ಸಲಿಗೆಯಿಂದ),
"...ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ.."
ಇಲ್ಲಿ 'ಅಙ್ಞಾತ'ದ ಬದಲು 'ಗೊತ್ತಿಲ್ಲದಿರುವ' ಬಳಸಬಹುದಲ್ಲವೆ ?
ಹಾಗೆಯೆ ಕನ್ನಡದ 'ಗೊತ್ತು' ಸಕ್ಕದಕ್ಕೆ ಹೋಗಿ 'ಙ್ಞಾತ' ವಾಗಿದಿಯೇನೊ ಎಂಬ ಐಬು ನನಗೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು