ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಅಂತ್ಯಸಂಸ್ಕಾರ ಮತ್ತು ಭೂಮಿ ವ್ಯವಹಾರ

March 14, 2007 - 8:25pm — rasheed

ನನ್ನ ಪ್ರೀತಿಯ ಆಮಿತಾತ ಎಂಬ ಅಜ್ಜಿ ತೀರಿಹೋದರು ಎಂದು ನಿರ್ವಿಕಾರವಾಗಿ ಆಕೆಗೆ ಹೇಳಿ ಆಕೆಂದ ಅನುಕಂಪಭರಿತ ಸಾಂತ್ವನದ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಆದರೆ ಆಕೆಯೂ ಅಷ್ಟೇ ನಿರ್ವಿಕಾರವಾಗಿ ‘you lost your character’ ಅಂದಳು. ನನ್ನನ್ನು ಬಹಳ ಬಲ್ಲವಳಾಗಿದ್ದರಿಂದ ಸುಮ್ಮಗಾದೆ. ನಿನ್ನ ಪಾತ್ರಗಳು ನಿನಗೆ ಆನೆ ಇದ್ದಂತೆ. ಬದುಕಿರುವಾಗಲೂ ತೀರಿಹೋದಮೇಲೂ ನಿನಗೆ ಅವುಗಳು ಅಷ್ಟೇ ಬೆಲೆ ಬಾಳುತ್ತದೆ ಎನ್ನುವುದು ಅವಳ ಮಾತಿನ ಮರ್ಮವಾಗಿತ್ತು.

ಅವಳ ಮಾತುಗಳು ಯಾವಾಗಲೂ ಹೀಗೆಯೇ.ಮರ್ಮಕ್ಕೆ ತಾಗುವ ಹಾಗೇ ಮಾತನಾಡುತ್ತಾಳೆ.ಅವಳ ಮಾತು ನೂರಕ್ಕೆ ನೂರು ಸತ್ಯದ ಹಾಗೆ ಇರುತ್ತದೆ.ನಾನು ಬರೆದದ್ದನ್ನ ಕೆಲವೊಮ್ಮೆ ಓದಿ bull shit ಅನ್ನುತ್ತಾಳೆ. ಅಂದರೆ ಸಗಣಿ ಅಂತ ಅರ್ಥ.

ಇಟ್ಟರೆ ಸಗಣಿ ಯಾದೆ ತಟ್ಟಿದರೆ ಬೆರಣಿಯಾದೆ ನೀನಾರಿಗಾದೆಯೋ ಎಲೆಮಾನವಾ ಎಂದು ಯಾರಿಗೂ ಕ್ಯಾರೇ ಅನ್ನದೆ ನಾನು ಬರೆಯುತ್ತಲೇ ಇರುತ್ತೇನೆ.

ಈಗಲೂ ಅಷ್ಟೇ. ಆಮಿತಾತ ತೀರಿಹೋದರು ಅಂತ ಸುದ್ದಿ ಗೊತ್ತಾದಾಗ ನಾನು ಎಲ್ಲೋ ಬೀದಿ ಸುತ್ತುತ್ತಿದ್ದೆ. ಆಮೇಲೆ ಸುಮ್ಮನೆ ಮನೆಗೆ ಬಂದು ನಿದ್ದೆ ಹೋದೆ.ಇನ್ನೂ ಮಳೆ ಸುರಿಯುತ್ತಲೇ ಇತ್ತು. ಹಗಲು ಸುಸ್ತು ಹೊಡೆದಂತೆ ಮಂಕಾಗಿ ಹೋಗಿತ್ತು.

ಬಾಗಿಲು ಬಡಿಯುವ ಕರ್ಕಶ ಸದ್ದಿಗೆ ಹೆದರಿ ಎದ್ದು ಬಂದರೆ ಯಾವನೋ ಒಬ್ಬ ಜಮೀನು ದಲ್ಲಾಳಿ ಕಮಿಷನ್ ವಿಷಯಕ್ಕೆ ಜಗಳ ಕಾಯಲು ಬಂದು ಕೂತಿದ್ದ. ಹಳ್ಳಿಯ ದಲ್ಲಾಳಿ. ಆತನಿಗೆ ಜಮೀನು ವ್ಯವಹಾರದ ಆದುನಿಕೋತ್ತರ ನಯ ನಾಜೂಕು ಒಂದೂ ಗೊತ್ತಿದ್ದಂತಿರಲಿಲ್ಲ.ಕುರಿ ಮರಿ ವ್ಯಾಪಾರದವನಂತೆ ಜಗಳಕ್ಕೇ ನಿಂತು ಕೊಂಡಿದ್ದ.ನಾನೂ ಅಷ್ಟೆ. ಅಷ್ಟೇ ಮೊಂಡನಂತೆ ಇದಕ್ಕಿಂತ ಹೆಚ್ಚು ಒಂದು ಕಾಸು ಕೊಡುವುದಿಲ್ಲ.ಅದೇನು ಕಿಸೀತೀಯಾ ಕಿಸಿ ಅಂತ ನಿದ್ದೆಗಣ್ಣಲ್ಲಿ ಜಗಳಕ್ಕೆ ನಿಂತಿದ್ದೆ.

ಆತನೂ ಹೆಗಲಲ್ಲಿದ್ದ ಕೊಳಕು ಟವಲ್ಲು ಕೊಡವಿ `ಅದೆಂಗಾದಾತೂ.. ದೇಸದಲ್ಲಿ ನಡೀತಿರೋ ವ್ಯವಹಾರ ಬುಟ್ಟು ನಾನು ಬೇರೇನಾದ್ರೂ ಕೇಳಿವ್ನಾ? ನನ್ ಕೂಲಿ ಕೊಡಿ. ಇಲ್ಲಾ ನ್ಯಾಯ ತೀರ್ಮಾನ ಆಗ್ಲಿ" ಅಂತ ದಲ್ಲಾಳಿ ಕೆಲಸವನ್ನು ಕೂಲಿ ಕೆಲಸದ ಜೊತೆ ಸಮೀಕರಿಸಿಕೊಂಡು ಜಾಗತೀಕರಣ ಮುಕ್ತ ಮಾರುಕಟ್ಟೆ ಇತ್ಯಾದಿಗಳ ವಕ್ತಾರನಂತೆ ಸಡ್ಡು ಹೊಡೆಯುತ್ತಿದ್ದ.

ಸಿಕ್ಕಾಪಟ್ಟೆ ಕೋಪದ ನಡುವೆಯೂ ನಗು ಬರುತ್ತಿತ್ತು. ನಾನೇನೂ ದೊಡ್ಡ ಜಮೀನ್ದಾರನಾಗಲು ಹೊರಟಿರಲಿಲ್ಲ. ಎಷ್ಟು ಅಂತ ಈ ಊಳಿಗಮಾನ್ಯ ಜಮೀನ್ದಾರಿ ವ್ಯವಸ್ಥೆಯ ಕುರಿತು ಯೋಚಿಸುವುದು. ಅದಕ್ಕಿಂತ ಜಮೀನು ಹೊಂದುವುದೇ ಮಿಗಿಲು ಎಂದುಕೊಂಡು ಹೊರಟರೆ ಈ ವ್ಯವಹಾರ ಜ್ಞಾನವಿಲ್ಲದ ಹಳ್ಳಿಯ ದಲ್ಲಾಳಿ ವ್ಯವಹಾರಕ್ಕೂ ಮೊದಲೇ ವ್ಯವಹಾರ ಜ್ಞಾನವಿಲ್ಲದ ನನ್ನಿಂದ ಸಾಕಷ್ಟು ಇಸಕೊಂಡು ಈಗ ನ್ಯಾಯ ತೀರ್ಮಾನವಾಗಲಿ ಎಂದು ಜಗಳಕ್ಕೆ ನಿಂತಿದ್ದ.

'ಬುದ್ದೀ ಒಂದು ಮಾತು ಕೇಳಿ. ಈಗ ದೇಶವೆಲ್ಲಾ ವ್ಯವಹಾರ ಮಾಡ್ತಾ ಅದೆ. ಕೂಲಿ ಮಾಡ್ದೋರಿಗೆ ಕೂಲಿ ಕೊಡಿ ಇಲ್ಲಾಂದ್ರೆ ದೇಶ ನಡಿಯಾಕಿಲ್ಲ ' ಎಂದು ಬೆದರಿಕೆ ಹಾಕುತ್ತಿದ್ದ. ಅವನು ಮಗನ ಮದುವೆಗೆ ಅಂತ ಇಸಕೊಂಡಿದ್ದು. ಮಗಳ ಸೀಮಂತಕ್ಕೆ ಮಟನ್ ತಗೊಳ್ಳಕ್ಕೆ ಅಂತ ಕಿತ್ತುಕೊಂಡದು, ಸಿದ್ಧರಾಮಯ್ಯನವರನ್ನ ನೋಡ್ಲಿಕ್ಕೆ ಅಂತ ಖಾದಿ ಅಂಗಿ ಶಾಲು ತಗಳ್ಳಕ್ಕೆ ಅಂತ ಇಸಕೊಂಡಿದ್ದು. ಹೆಂಡತಿ ಬೆಂಡೋಲೆ ಅಡ ಇಟ್ಟಲ್ಲಿಂದ ಬಿಡಿಸಿಕೊಳ್ಳಕ್ಕೆ ಅಂತ ತಗೊಂಡಿದ್ದು ಎಲ್ಲವನ್ನೂ ನೆನಪು ಮಾಡುತ್ತಾ ಹೋದರೆ ಛೆ ಅದೆಲ್ಲಾ ಲೆಕ್ಕಕ್ಕೆ ತಗೋತಾರಾ ಬುದ್ದೀ ಅಂತ ನನ್ನನ್ನ ಯಾಮಾರಿಸಲು ನೋಡುತ್ತಿದ್ದ.

ನಾನೂ ಒಬ್ಬ ಬ್ಯಾರಿಯಂತೆ ಎಲ್ಲವನ್ನೂ ಲೆಕ್ಕ ಹಾಕುತ್ತಾ ಕವಿಯಂತೆ ಮರೆತು ಹೋಗುತ್ತಾ ಜಗಳದ ಸುಖದಲ್ಲಿ ಮೈಮರೆತು ಆಮಿತಾತ ಎಂಬ ನನ್ನ ಪ್ರೀತಿಯ ಅಜ್ಜಿ ತೀರಿ ಹೋಗಿದ್ದನ್ನ ಮರೆತು ಬಿಟ್ಟಿದ್ದೆ. ಆಮೇಲೆ ನೆನಸಿಕೊಂಡು ಗೌಡ್ರೇ ನಮ್ಮ ವ್ಯವಹಾರ ನಾಳೆ ಮಾತಾಡೋಣ. ಈಗ ನನಗೆ ಕಥೆ ಬರೆಯಲು ಇದೆ ಎಂದು ತಪ್ಪಿಸಿಕೊಂಡಿದ್ದೆ.

`ಆಯ್ತು ಬುದ್ದಿ ನಾಳೆ ಬೆಳಕು ಹರಿಯುವ ಹೊತ್ಗೆ ಬರ್ತೀನಿ ವ್ಯವಹಾರ ಮುಗಿಸಿಬಿಡೋಣ' ಅಂತ ಬಸ್ ಚಾರ್ಜಿಗೆ ಕಾಸು ಇಸಕೊಂಡು ಆತ ಹೊರಟು ಹೋಗಿದ್ದ.

ಈ ದಲ್ಲಾಳಿ ಹಳ್ಳಿಯವ ಯಾವಾಗಲೋ ಒಮ್ಮೆ ಟೀವಿಯಲ್ಲಿ ನನ್ನನ್ನು ನೋಡಿದ್ದ. ಅದ್ಯಾಕೆ ಬುದ್ದಿ ನಮ್ಮನೆ ಟೀವಿಯಲ್ಲಿ ನೀವು ಬಂದಿದ್ರಿ ಅಂತ ಅಚ್ಚರಿ ಪಟ್ಟು ಕೇಳಿದ್ದ. ಅವನಿಗೆ ನಾನು ಕತೆ ಬರೆವ ವಿಷಯ ಪೇಪರಲ್ಲಿ ಬರುವ ವಿಷಯ ಎಲ್ಲ ವಿವರಿಸಿ ಹೇಳಿದ್ದೆ. ಓ ನೀವೂ ನಮ್ಮ ಹಾ ಮಾ ನಾಯಕರಿದ್ದಂಗೆ ದೇಜಗೌ ಇದ್ದಂಗೆ. ನಿಮ್ಮನ್ನ ನೋಡಿದ್ರೆ ಸಾಬರ ಥರ ಇಲ್ವೇ ಇಲ್ಲ ಬುದ್ದಿ. ನಮ್ಮಂಗೇ ಎಂದು ಆಗಾಗ ನನಗೆ ಗೌರವವನ್ನೂ ಕೊಡುತ್ತಿದ್ ದ.ನಾನೂ ಯಾಕೆ ಈ ಗೌರವವನ್ನ ಸುಮ್ಮನೇ ಬಿಡುವುದು ಎಂದು ಆಗಾಗ ಅದನ್ನೂ ತಗೊಳ್ಳುತ್ತಿದ್ದೆ.

ದಲ್ಲಾಳಿ ಹೊರಟು ಹೋದ ಮೇಲೆ ಮಕ್ಕಳ ಹತ್ತಿರ ತೀರಿ ಹೋದ ಆಮಿತಾತನ ಕತೆ ಹೇಳುತ್ತಾ ಕುಳಿತಿದ್ದೆ. ನಾವು ಸಣ್ಣವರಾಗಿರುವಾಗ ಈ ಆಮಿತಾತ ಎಂಬ ಅಜ್ಜಿಗೆ ಕಾಡಿನಿಂದ ಗಿಳಿಗಳನ್ನು ಹಿಡಿದು ತಂದು ಕೊಡುತ್ತಿದ್ದುದು, ಬೆಕ್ಕುಗಳು ಅವುಗಳನ್ನು ಹಿಡಿದು ತಿನ್ನುತ್ತಿದ್ದುದು. ಆಮೇಲೆ ನಾವು ಪುನಃ ಹೊಸ ಗಿಳಿಗಳನ್ನು ತಂದು ಕೊಡುತ್ತಿದ್ದುದು, ಅವುಗಳನ್ನ ಪುನಃ ಬೆಕ್ಕುಗಳು ತಿನ್ನುತ್ತಿದ್ದುದು, ನಾವು ಪುನಃ ತಂದು ಕೊಡುತ್ತಿದ್ದುದು.. ಮಕ್ಕಳು ಈ ಗಿಳಿ ಮತ್ತು ಬೆಕ್ಕುಗಳ ಪುನಃ ಪುನಃ ಪುನರಾವರ್ತನೆ ಕತೆ ಕೇಳಿ ಬೇಜಾರಾಗಿ ಎದ್ದು ಹೋಗಿದ್ದರು. ಈ ಅಜ್ಜಿಯ ಇನ್ನೂ ರೋಚಕ ಕತೆಗಳನ್ನು ಮಕ್ಕಳಿಗೆ ಹೇಳಲಾಗದೆ ನಾನೂ ಒಂದು ತರಹದ ಅಸಹಾಯಕತೆಂದ ಒದ್ದಾಡುತ್ತಿರುವಾಗ ಊರಿನಿಂದ ನನ್ನ ತಾಯಿ ಫೋನ್ ಮಾಡಿ 'ಯಾಕೆ ಆಮಿತಾತಳ ಮೃತ ದೇಹವನ್ನು ನೋಡಲು ಬರಲಿಲ್ಲ' ಎಂದು ಬೇಜಾರು ಮಾಡಿಕೊಂಡರು. ಆಮೇಲೆ 'ಬರದಿದ್ದುದು ಒಳ್ಳೆಯದೇ ಆಯಿತು ಬಿಡು ನಿನಗೆ ಬೇಜಾರಾಗುತ್ತಿತ್ತು' ಅಂದರು.

ಯಾಕೆ ಎಂದು ಕೇಳಿದೆ 'ಅಂತ್ಯಸಂಸ್ಕಾರ ಅಷ್ಟೇನೂ ಚೆನ್ನಾಗಿರಲಿಲ್ಲ. ಮೆರವಣಿಗೆ ಇರಲಿಲ್ಲ. ತರಾರಿಯಲ್ಲಿ ಮಣ್ಣಲ್ಲಿ ಮರೆಮಾಡಿದರು' ಅಂದರು.

'ಹಾಗೆ ಯಾಕಂತೆ' ಎಂದು ಕೇಳಿದೆ.

ಈ ಆಮಿತಾತನ ಸಾಕು ಮಗನೊಬ್ಬ ಸೌದಿ ಅರೇಬಿಯಾದಲ್ಲಿದ್ದಾನೆ. ಆತ ಇಸ್ಲಾಮಿನ ಇನ್ನೊಂದು ಪಂಥದ ಅನುಯಾಯಾಗಿದ್ದಾನೆ. ಆ ಪಂಥವನ್ನು ಶುರುಮಾಡಿದವರು ಅರೆಬಿಯಾದ ರಾಜ ಮನೆತನದವರು. ಆ ಪಂಥದ ಪ್ರಕಾರ ಸಾವಿನಲ್ಲಿ ಬಡವರೂ ಅರಸರೂ ಒಂದಾಗತ್ತಾರೆ. ಅಲ್ಲಿ ಅರಸರು ತೀರಿಹೋದರೂ ಬಡವರು ತೀರಿಹೋದರೂ ಅಂತ್ಯಸಂಸ್ಕಾರ ಸರಳವಾಗಿರುತ್ತದೆ. ಶೋಕಾಚರಣೆ ಇರುವುದಿಲ್ಲ. ಮೊನ್ನೆ ಅರೇಬಿಯಾದ ಮಹಾರಾಜ ತೀರಿ ಹೋದಾಗಲೂ ಅಂತ್ಯ ಸಂಸ್ಕಾರ ಸರಳವಾಗಿತ್ತಂತೆ. ಆಮಿತಾತಾಳ ಸಾಕು ಮಗ ಅರೇಬಿಯಾದಿಂದ ಫೋನ್ ಮಾಡಿ ಹೇಳಿದನಂತೆ. ಅದಕ್ಕೇ ಹೀಗೆ ಮಾಡಿದರು. ಪಾಪ ನಮ್ಮ ಆಮಿತಾತ ಎಂಬ ಅಜ್ಜಿಗೆ ಸಾವಿನಲ್ಲೂ ಸುಖ ಇರಲಿಲ್ಲ ಎಂದು ಬೇಜಾರು ಮಾಡಿಕೊಂಡಳು.

ಈ ಆಮಿತಾತ ತೀರಿಹೋಗುವ ದಿನದವರೆಗೂ ತನಗೆ ಕಾಫಿತೋಟವೊ೦ದರ ಅರ್ಧಪಾಲು ಸಿಗುವುದು ಎಂದು ನಂಬಿಕೊಂಡು ಬದುಕಿದ್ದಳು.ನೂರಾರು ವರ್ಷಗಳ ಹಿಂದೆ ಬ್ರಿಟಿಶ್ ದೊರೆಯೊಬ್ಬ ಆಕೆಗೆ ಈ ಆಸೆ ಕೊಟ್ಟು ಕೊಡಗಿಗೆ ಕರೆದು ಕೊಂಡು ಬಂದನಂತೆ. ಆ ತೋಟ ಹಲವು ಸಾಹುಕಾರರ ಕೈದಾಟಿದ್ದರೂ ಆ ಪಾಲು ತನಗೆ ಸಿಗುವುದು ಎಂದು ಆಕೆ ನಂಬಿದ್ದಳು.ಅದರಲ್ಲಿ ಒಂದು ಪಾಲು ನನಗೂ ನೀಡುವುದಾಗಿ ಆಕೆ ಆಸೆ ಕೊಟ್ಟಿದ್ದಳು. ಇಂದು ಆಮಿತಾತ ತೀರಿಹೋಗುವವರೆಗೆ ನನಗೂ ಆ ನಂಬಿಕೆ ಇತ್ತು. ಇನ್ನು ಇಲ್ಲ.

ನಾಳೆ ಬೆಳಕು ಹರಿಯುವ ಹೊತ್ತು ಹಳ್ಳಿಂದ ಜಮೀನು ದಲ್ಲಾಳಿ ಬರುತ್ತಾನೆ.ಇನ್ನು ಆತನೇ ಗತಿ.

ಶುಭಂ.ಮ೦ಗಳಂ

  • ಪ್ರಬಂಧ
~.~
  • Login or register to post comments
  • 510 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 21, 2007 - 12:11am — droupadhi

ಏನು ಬಹಳ ಬೆರಳಚ್ಚಿನ ತಪ್ಪುಗಳಿರುವ ಹಾಗಿದೆ......

droupadhi's picture

droupadi

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 5:47pm — hpn

ಉ:

hpn's picture

ಹೌದಲ್ವ? ಅದಕ್ಕೇ ಯಾರೂ ಕಾಮೆಂಟ್ ಹಾಕಿಲ್ಲ ಅನ್ಸತ್ತೆ. ರಶೀಧ್ - ಓದ್ತಾ ಇದೀರಾ? ಲೇಖನ ಸರಿ ಮಾಡ್ರಿ! Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯವಹಾರ
  • ನಾನು ನನ್ನ ಪ್ರಿಯೆ
  • ಇಂದಿನ ಸುದ್ದಿ...!
  • ಪಾತ್ರೆಯ ಕನಸು
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
Syndicate content

ಲೇಖಕರು

rasheed's picture

ಪರಿಚಯ

i do not know myself

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
  • ಪರಂಪರೆ-ಪ್ರವಾಹ-ಪ್ರತಿರೋಧ
  • ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
  • ’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”
  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 7:46am
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು-47 ಭಾರತ:ಹುಚ್ಚರೇ ಹೆಚ್ಚು!
    October 13, 2008 - 7:45am
  • venkatesh
    ಉ: ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ?
    October 13, 2008 - 7:10am
  • kannadakanda
    ಉ: ಸಪ್ತಸ್ವರಗಳು
    October 13, 2008 - 7:05am
  • kannadakanda
    ಉ: ಸಪ್ತಸ್ವರಗಳು
    October 13, 2008 - 7:02am
  • Paramesh H
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 7:02am
  • jp.nevara
    ಉ: ನಮ್ಮ ಬಾಳು
    October 13, 2008 - 6:27am
  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator