ಎಮ್ಮೆಶಿರ್ಲ ಜಲಪಾತದ ವೈಭವ
ಕಳೆದ ತಿಂಗಳು ಆದಿತ್ಯವಾರ ೧೧ರಂದು ಯಲ್ಲಾಪುರ ಬಸ್ಸು ನಿಲ್ದಾಣದಲ್ಲಿ ಮುಂಜಾನೆ ೬.೪೫ಕ್ಕೆ ನಾನು ಮತ್ತು ಗೆಳೆಯ ರಾಕೇಶ್ ಹೊಳ್ಳ ಹಾಜರ್. ಮುಂಜಾನೆ ೭ಕ್ಕೆ ವಜ್ರಳ್ಳಿಗೆ ಹೊರಡಬೇಕಿದ್ದ ಬಸ್ಸಿನ ಪತ್ತೆ ಗಂಟೆ ೮ ಆದರೂ ಇಲ್ಲ! ಅದಿರಲಿ, ಬೇರೆ ಹಳ್ಳಿಗಳಿಗೂ ೭ ಗಂಟೆಗೆ ಹೊರಡಬೇಕಿದ್ದ ಇನ್ನೂ ೪ ಬಸ್ಸುಗಳ ಸುಳಿವೂ ಇಲ್ಲ! ಕಡೆಗೂ ೮.೩೦ಕ್ಕೆ ಆಯಾ ಹಳ್ಳಿಗಳಿಗೆ ತೆರಳುವ ಬಸ್ಸುಗಳು ಸಾಲಿನಲ್ಲಿ ಡಿಪೊದಿಂದ ಆಗಮಿಸಿದವು. ನಮಗೆ ಬೇಕಾದ ಮಲವಳ್ಳಿ ಬಸ್ಸಲ್ಲಿ ಕುಳಿತು ಯಲ್ಲಾಪುರ - ಕೈಗಾ ರಸ್ತೆಯಲ್ಲಿರುವ ವಜ್ರಳ್ಳಿಯಲ್ಲಿಳಿದಾಗ ಸಮಯ ೯.೩೦.
ಅಲ್ಲಿಂದ ನಮ್ಮನ್ನು ಚಂದ್ರು ಎಂಬ ಗ್ರಾಮ ಪಂಚಾಯತ್ ಸದಸ್ಯ ೭ ಕಿಮಿ ದೂರವಿರುವ ೬ ಮನೆಗಳುಳ್ಳ ಕಂಚೀಮನೆ ಎಂಬಲ್ಲಿಗೆ ತನ್ನ ದ್ವಿಚಕ್ರ ವಾಹನದಲ್ಲಿ ತಲುಪಿಸಲು ಒಪ್ಪಿದರು. ನನ್ನನ್ನು ಕಂಚೀಮನೆಯಲ್ಲಿ ಬಿಟ್ಟು ಚಂದ್ರು, ರಾಕೇಶ್ ನನ್ನು ಕರೆತರಲು ವಜ್ರಳ್ಳಿಗೆ ಮರಳಿದರು. ರಾಕೇಶ್ ಬರೋವರೆಗೆ ಸಮಯ ಕಳೆಯಬೇಕಿತ್ತಲ್ಲ, ಅದಕ್ಕಾಗಿ ಅಲ್ಲೇ ತನ್ನ ಮನೆಯಿಂದ ಇಣುಕಿ ನೋಡುತ್ತಿದ್ದ ನಾಗರಾಜನನ್ನು 'ಬಾ' ಎಂದು ಸನ್ನೆ ಮಾಡಿ ಕರೆದೆ. ಏಳನೇ ತರಗತಿಯಲ್ಲಿ ಓದುವ ನಾಗರಾಜ ನನ್ನಿಂದ ಸ್ವಲ್ಪ ದೂರ ನಿಂತೇ ಮಾತನಾಡತೊಡಗಿದ. ಸಮೀಪಕ್ಕೆ ಬಾ ಎಂದರೆ, 'ಇಲ್ಲ, ನಾ ನಿಮ್ಮನ್ನ ಕಿಟ್ಟಕ್ಕಾಗ' ಎಂದ. ಅಜ್ಜಿ ತೀರಿಕೊಂಡಿದ್ದರಿಂದ ತಾನು ನಿಮ್ಮನ್ನು ಮುಟ್ಟುವಂತಿಲ್ಲ ಅದಕ್ಕಾಗಿ ದೂರ ನಿಂತಿದ್ದೇನೆ ಎಂದು ವಿವರಿಸಿದ. ನಂತರ ಆತನ ಚಿಕ್ಕಪ್ಪ ಬಂದು ಸ್ವಲ್ಪ ಸಮಯ ಹರಟಿದರು. ಆ ದಿನ ಪೊಲಿಯೋ ಲಸಿಕೆ ಹಾಕಿಕೊಳ್ಳುವ ದಿನವಾಗಿದ್ದರಿಂದ ಕಂಚೀಮನೆ ಮತ್ತು ಅಲ್ಲೇ ಸಮೀಪದ ಕಂಚಗುಳಿಯ ಎಲ್ಲಾ ಮನೆಯವರು ೩ ಕಿಮಿ ದೂರದ ಹೊನ್ನೆಗದ್ದೆ ಎಂಬಲ್ಲಿಗೆ ತಮ್ಮ ಮಕ್ಕಳನ್ನು ಕರೆದೊಯ್ಯುವ ತಯಾರಿಯಲ್ಲಿದ್ದರು. ಇದೇ ಕಾರಣದಿಂದ ನಮಗೆ ಮಾರ್ಗದರ್ಶಕರಾಗಿ ಬರಲು ಯಾರೂ ಇರಲಿಲ್ಲ.
ಅರ್ಧ ಗಂಟೆಯ ಬಳಿಕ ಚಂದ್ರು, ರಾಕೇಶನೊಂದಿಗೆ ಆಗಮಿಸಿದರು. ಜಲಪಾತಕ್ಕೆ ದಾರಿ ತೋರಿಸಲು ಯಾರೂ ಇರಲಿಲ್ಲವಾದ್ದರಿಂದ, ಕಂಚೀಮನೆಯ ಸೋಮಕ್ಕ ಎಂಬವರು ಚಂದ್ರುವಿನಲ್ಲಿ ಹೊನ್ನೆಗದ್ದೆಯಿಂದ ಒಬ್ಬನನ್ನು ಕಳಿಸುವಂತೆ ಕೇಳಿಕೊಂಡರು. ನಾವಿಬ್ಬರು ಒಂದು ತಾಸು ಕಾದದ್ದೇ ಬಂತು. ಯಾರೂ ಬರಲಿಲ್ಲ. ಕಡೆಗೆ ಸೋಮಕ್ಕನಲ್ಲಿ ಜಲಪಾತದ ಹಾದಿಯನ್ನು ಕೇಳಿ, ಆಕೆಗೆ ವಿದಾಯ ಹೇಳಿ, ನಾವಿಬ್ಬರೇ ಹುಡುಕಿಕೊಂಡು ಮುನ್ನಡೆದೆವು. ಅದಾಗಲೇ ಸಮಯ ೧೨.೦೦ ಆಗಿತ್ತು.
ನಂತರ ಎಲ್ಲೆಲ್ಲಿ ದಾರಿ ತಪ್ಪುವ ಅವಕಾಶವಿತ್ತೊ ಅಲ್ಲೆಲ್ಲಾ ದಾರಿ ತಪ್ಪಿದೆವು. ಮೊದಲನೇ ಬಾರಿ ದಾರಿ ತಪ್ಪಿದಾಗ ಒಂದು ಮನೆಗೆ ಹೋಗಿ ಮುಟ್ಟಿದೆವು. ಆಲ್ಲೊಂದು ಮುದುಕಿ ಮಾತ್ರ ಇತ್ತು. ಆಕೆ 'ಹಾಗೆ ಹೋಗಿ' ಎಂದಳು. ಹಾಗೆ ಹೋದಾಗ ಆ ದಾರಿ ಮತ್ತೊಂದು ಮನೆಯಲ್ಲಿ ಕೊನೆಗೊಂಡಿತು. ಇಲ್ಲಿರುವ ಭಟ್ಟರೊಬ್ಬರು ಸರಿಯಾದ ದಾರಿಯನ್ನು ಹೇಳಿದರು. ಬಲ ತಿರುವೊಂದನ್ನು ತಗೊಂಡು, ಸುಮಾರು ೨ ಕಿಮಿ ನಂತರ ಸಿಗುವ ಸಿದ್ಧಿಗಳ ಹಳ್ಳಿಗೆ ಹೋಗುವ ಬಲ ತಿರುವೊಂದನ್ನು ತಗೊಳ್ಳದೆ ಹಾಗೇ ಕೇವಲ ೧೫-೨೦ ಹೆಜ್ಜೆ ಮುನ್ನಡೆದಾಗ ಎಡಕ್ಕೆ ಸಿಗುವ ಕಣಿವೆಗೆ ಇಳಿಯುವ ಕಾಲುದಾರಿಯಲ್ಲಿ ತೆರಳಿ ಎಂದು ಆಸರೆ (ನೀರು, ಸಕ್ಕರೆ) ನೀಡಿ ಬೀಳ್ಕೊಟ್ಟರು.
ಸುಮಾರು ಎಂಟು ಅಡಿ ಅಗಲದ, ಎರಡೂ ಬದಿಯಲ್ಲಿ ದಟ್ಟ ಕಾಡಿನಿಂದ ಆವೃತವಾಗಿರುವ ಮತ್ತು ತರಗಲೆಳೆಗಳಿಂದ ಮುಚ್ಚಿಹೋಗಿರುವ ನಿಶ್ಯಬ್ದ ದಾರಿಯಿದು. ಅರ್ಧ ಗಂಟೆಯ ಬಳಿಕ ಮತ್ತೊಂದು ತಪ್ಪು ತಿರುವು ತಗೊಂಡೆವು. ಈ ದಾರಿಯನ್ನು ಹೊಸದಾಗಿ ಮಾಡಿದಂತಿದ್ದರಿಂದ, ದಾರಿ ತಪ್ಪಿದ್ದೇವೆ ಎಂದು ಬೇಗನೇ ಅರಿತು, ಮರಳಿ ಸರಿಯಾದ ದಾರಿಗೆ ಬಂದು ಮತ್ತೆ ಆ ನಿಶ್ಯಬ್ದ ರಸ್ತೆಯಲ್ಲಿ ಮುನ್ನಡೆದೆವು. ಸ್ವಲ್ಪ ಸಮಯದ ನಂತರ ಒಬ್ಬಂಟಿ ಸಿದ್ಧಿ ಹೆಂಗಸೊಬ್ಬಳು ಎಲೆ ಆಡಿಕೆ ಜಗಿಯುತ್ತಾ, ಬರಿಗಾಲಲ್ಲಿ ವೇಗವಾಗಿ ನಡೆಯುತ್ತಾ ಬರುವುದು ಕಾಣಿಸಿತು. ಆಚೀಚೆ ದಟ್ಟ ಕಾಡಿರುವ ದಾರಿ ಮತ್ತು ಭಯ ಹುಟ್ಟಿಸುವ ಕಾಡಿನ ಮೌನ ಇವೆರಡರ ಮಧ್ಯೆ ನಾವಿಬ್ಬರೂ ಅಳುಕುತ್ತ ಹೆಜ್ಜೆ ಇಡುತ್ತಿರುವಾಗ ಈಕೆ ಒಬ್ಬಂಟಿಯಾಗಿ ಬರುತ್ತಿರುವುದನ್ನು ಕಂಡು ಆಶ್ಚರ್ಯದಿಂದ ಹಾಗೇ ನಿಂತುಬಿಟ್ಟೆವು. ಮನುಷ್ಯರನ್ನು ಕಾಣದೇ ಒಂದು ತಾಸಿಗೂ ಹೆಚ್ಚಾಗಿದ್ದರಿಂದ ಈಕೆ ಬರುವ ದೃಶ್ಯ ಆ ಕ್ಷಣದಲ್ಲಿ ಬಹಳ ಸುಂದರವಾಗಿ ಕಂಡಿತು. ನಾವು ಆಶ್ಚರ್ಯಚಕಿತರಾಗಿ ನಿಂತಿರುವುದನ್ನು ನೋಡಿ ಆಕೆಯೂ ನಮ್ಮನ್ನು ಸಮೀಪಿಸಿದಂತೆ ತನ್ನ ವೇಗವನ್ನು ನಿಧಾನಗೊಳಿಸಿ ತಿಳಿಯಾದ ಕೆಂಪಾದ ನಗುವೊಂದನ್ನು ನೀಡಿದಳು. ನಾವು ದಾರಿ ಕೇಳಿದ್ದ ಭಟ್ಟರ ಮನೆಗೇ ಈಕೆ ಕೆಲಸಕ್ಕೆಂದು ಹೊರಟಿದ್ದಳು. ಶಿರ್ಲಕ್ಕೆ ದಾರಿಯನ್ನು ಅಸ್ಪಷ್ಟವಾಗಿ ವಿವರಿಸಿ, ತಡವಾಯಿತೆಂದು, ಮತ್ತದೇ ವೇಗದಲ್ಲಿ ಮುನ್ನಡೆದಳು. ನಾವು ಆಕೆ ಕಣ್ಮರೆಯಾಗುವವರೆಗೂ ನೋಡುತ್ತಾ ನಿಂತೆವು ಯಾಕೆಂದರೆ ಮತ್ತೆ ಮನುಷ್ಯ ದರ್ಶನವಾಗುವುದು ಸಂಜೆ ಗುಳ್ಳಾಪುರ ತಲುಪಿದ ನಂತರವೇ ಎಂದು ಅದಾಗಲೇ ನಮಗೆ ಮನದಟ್ಟಾಗಿಹೋಗಿತ್ತು.
ಸ್ವಲ್ಪವೇ ಮುಂದೆ ಹೋದಾಗ ಆ ಹೆಂಗಸು ಬಂದಿದ್ದ ಕಾಲುದಾರಿ ಬಲಕ್ಕೆ ಕಾಣಿಸಿತು. ಇದೇ ಇರಬೇಕು ಭಟ್ಟರು ಹೇಳಿದ ಸಿದ್ಧಿಗಳ ಹಳ್ಳಿಗೆ ತೆರಳುವ ಬಲ ತಿರುವು ಎಂದುಕೊಂಡು ಅದನ್ನು ತಗೊಳ್ಳದೆ ಸ್ವಲ್ಪ ಮುನ್ನಡೆದಾಗ ಎಡಕ್ಕೆ ಕಾಲುದಾರಿ ಕಾಣಿಸಿತು. ಅಂತೂ ದಾರಿ ಸಿಕ್ಕಿತಲ್ಲಪ್ಪಾ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟು ನಿಧಾನವಾಗಿ ಕಣಿವೆಯಲ್ಲಿರುವ ಕಾಡಿನೊಳಗೆ ಇಳಿಯಲಾರಂಭಿಸಿದೆವು. ಆ ಇಳಿಜಾರು ಮುಗಿದ ಕೂಡಲೇ ಹಾದಿ ಮತ್ತೆ ಕವಲೊಡೆಯಿತು. ಬಲಕ್ಕೋ ಅಥವಾ ಎಡಕ್ಕೋ ಎಂದು ಯೋಚಿಸುತ್ತಾ ಕಡೆಗೆ ಎಡಕ್ಕೆ ತೆರಳಿದೆವು. ಆ ಹಾದಿ ನೇರವಾಗಿ ಹಳ್ಳಕ್ಕೆ ತೆರಳಿತು. ಜಲಪಾತದ ಮೇಲ್ಭಾಗದಲ್ಲಿ ನಾವಿರಬಹುದೆಂದು ಹಳ್ಳದ ಹರಿವು ಸ್ಪಷ್ಟವಾಗಿ ತಿಳಿಸುತ್ತಿತ್ತು. ಹಳ್ಳಗುಂಟ ಸ್ವಲ್ಪ ಮುನ್ನಡೆದೆವು. ಆದರೆ ನಂತರ ಸಿಗುವ ವಿಶಾಲವಾದ ಮತ್ತು ಆಳವಾದ ಗುಂಡಿಗಳನ್ನು ದಾಟಿ ಸಾಗುವುದು ಅಸಾಧ್ಯವೆನಿಸಿದಾಗ ಹಾಗೆ ಹಾದಿ ಕವೊಲೊಡೆಯುವಲ್ಲಿ ಹಿಂತಿರುಗಿ ಬಲಕ್ಕೆ ತೆರಳಿದೆವು.
ಈ ಹಾದಿ ಕೂಡಾ ಅಸ್ಪಷ್ಟವಾಗಿತ್ತು. ಜಲಪಾತದ ಸದ್ದೇ ಕೇಳಿಸುತ್ತಿರಲಿಲ್ಲ. ಆದರೆ ಆ ಹಾದಿಯಲ್ಲಿ ತೆರಳುವುದನ್ನು ಬಿಟ್ಟರೆ ನಮ್ಮಲ್ಲಿ ಬೇರೆ ವಿಧಾನವಿರಲಿಲ್ಲ. ಸುಮಾರು ೫ ನಿಮಿಷದ ಏರು ಹಾದಿಯನ್ನು ಕ್ರಮಿಸಿದ ಬಳಿಕ ಮತ್ತೊಂದು ಇಳಿಜಾರು ಸಿಕ್ಕಿತು. ಆಗ ಅಲ್ಲೆಲ್ಲೋ ಅದ್ಯಾವುದೋ ಕಾಡು ಪ್ರಾಣಿಯ ಭಯಂಕರ ಚೀತ್ಕಾರದ ಸದ್ದು. ನಾವಿಬ್ಬರೂ ಹಾಗೇ ನಿಂತುಬಿಟ್ಟೆವು. ಅನತಿ ದೂರದಲ್ಲಿ ಗಿಡಗಳು ಮತ್ತು ಕುರುಚಲು ಸಸ್ಯಗಳು ಅಲುಗಾಡುತ್ತಾ ಇರುವುದು ಮತ್ತು ಆ ಪ್ರಾಣಿ ಮಾಡುವ ಕರ್ಕಶ ಸದ್ದು ಕೇಳುಸುತ್ತಿತ್ತು. ಆದರೆ ಏನೂ ಕಾಣಿಸುತ್ತಿರಲಿಲ್ಲ. ಭಯಭೀತರಾಗಿ ಹಾಗೆ ನಿಂತುಬಿಟ್ಟೆವು. ಇಬ್ಬರ ಬಾಯಲ್ಲೂ ಮಾತಿಲ್ಲ. ಕಣ್ಣಲ್ಲಿ ಕೆಟ್ಟ ಹೆದರಿಕೆ. ಒಂದೈದು ನಿಮಿಷದ ಬಳಿಕ ಮತ್ತೆಲ್ಲಾ ಶಾಂತ ಮೊದಲಿನಂತೆ. ಕಾಡು ಹಂದಿಯಿರಬೇಕು ಎಂದುಕೊಂಡು ಇಳಿಜಾರಿನ ಹಾದಿಯಲ್ಲಿ ಮುನ್ನಡೆದೆವು. ಹೆದರಿಕೆ ಇನ್ನೂ ಕಡಿಮೆಯಾಗಿರಲಿಲ್ಲ. ಕಾಡು ದಟ್ಟವಾಗಿತ್ತು. ಹಾದಿ ಅಸ್ಪಷ್ಟ.
ಈ ಎರಡನೇ ಇಳಿಜಾರು ನೇರವಾಗಿ ಎಮ್ಮೆಶಿರ್ಲ ಜಲಪಾತದ ಶಿರಭಾಗದ ಮೇಲೆ ಬಲಕ್ಕೆ ಬಂದು ಕೊನೆಗೊಳ್ಳುತ್ತದೆ. ಇಲ್ಲೊಂದು ಹೊರಚಾಚಿರುವ ಬಂಡೆಯ ಮೇಲೆ ನಿಂತರೆ ಜಲಪಾತದ ಸುಂದರ ದೃಶ್ಯ ಲಭ್ಯ. ನೀರಿನ ಹರಿವು ಕಡಿಮೆಯಿತ್ತು. ಆದರೂ ವೈಯ್ಯಾರದಿಂದ ನಿಧಾನವಾಗಿ ೧೨೦ ಆಡಿ ಆಳಕ್ಕೆ ಇಳಿಯುವ ಶಿರ್ಲದ ಚೆಲುವು ಮರೆಯಲಸಾಧ್ಯ. ಬಹಳ ಹಿಂದೆ ಮೇಯಲು ಬಂದ ಎಮ್ಮೆಯೊಂದು ಬಿದ್ದು ಸತ್ತ ಕಾರಣ ಜಲಪಾತಕ್ಕೆ ಎಮ್ಮೆಶಿರ್ಲ ಎಂದು ಹೆಸರು. ಆ ಬಂಡೆಯ ಮೇಲೆ ಸ್ವಲ್ಪ ಕಾಲ ಕುಳಿತು ಚೆಲುವನ್ನು ಅಸ್ವಾದಿಸಿ ನಂತರ ಕೆಳಗೆ ಇಳಿಯುವ ಸಾಹಸ ಕಾರ್ಯಕ್ಕೆ ಮುಂದಾದೆವು. ಜಲಪಾತದ ಬಲಕ್ಕಿರುವ ಗುಡ್ಡ ಇಲ್ಲಿ ಕೊನೆಗೊಳ್ಳುತ್ತದೆ. ಈ ಗುಡ್ಡದ ಬದಿಯಲ್ಲೇ ನಿಧಾನವಾಗಿ ಕೆಳಗಿಳಿಯಬೇಕು. ಯಾವಾಗಲೂ ಚಿಗರೆಯಂತೆ ಮುಂದೆ ಓಡುವ ರಾಕೇಶ್ ಕೂಡಾ ಸ್ವಲ್ಪ ಹಿಂಜರಿಯುತ್ತಾ ಅಲ್ಲಲ್ಲಿ ಕೂತುಕೊಂಡು ಕೆಳಗಿಳಿಯುತ್ತಿದ್ದ. ನನ್ನ ಪರಿಸ್ಥಿತಿ ಶೋಚನೀಯ. ಕೆಳಗಿಳಿಯಬೇಕೆಂಬ ಛಲ. ಆದರೆ ಅಪಾಯಕರ ಇಳಿಜಾರಿನ ಹಾದಿ. ಕೆಲವೊಂದು ಕಡೆ ಹಿಡಿದುಕೊಳ್ಳಲು ಯಾವುದೇ ಆಧಾರಗಳಿಲ್ಲ. ಆದರೂ ಕೂತುಕೊಂಡೇ ನಿಧಾನವಾಗಿ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಅಲ್ಲಲ್ಲಿ ವಿರಮಿಸುತ್ತಾ ಸುಮಾರು ೪೦ ನಿಮಿಷಗಳ ಬಳಿಕ ಕೆಳಗೆ ತಲುಪಿದೆ. ಇಂತಹ 'ಥ್ರಿಲ್ಲಿಂಗ್' ಇಳಿಜಾರು ಎಲ್ಲೂ ಅನುಭವಿಸಿರಲಿಲ್ಲ. ಸ್ವಲ್ಪ ಆಯ ತಪ್ಪಿದರೆ ನೇರವಾಗಿ ಗುಡ್ಡದ ಬದಿಯಲ್ಲೇ ಉರುಳಿ ಶಿರ್ಲದ ಎರಡನೇ ಹಂತದ ಬದಿಗೆ ೭೦-೧೦೦ ಅಡಿ ಉರುಳಿ ಬೀಳುವ ರಿಸ್ಕ್. ನಾನು ಜಲಪಾತದ ಬುಡ ತಲುಪಿದಾಗ ಸಮಯ ೨.೪೫.
ಎಮ್ಮೆಶಿರ್ಲದ ವೈಭವವನ್ನು ಈಗ ಸಂಪೂರ್ಣವಾಗಿ ವೀಕ್ಷಿಸುವ ಅವಕಾಶ ನಮ್ಮದಾಗಿತ್ತು. ಎರಡು ಕವಲುಗಳಲ್ಲಿ ೧೨೦ ಅಡಿ ಎತ್ತರದಿಂದ ಕೆಳಗೆ ಇರುವ ವಿಶಾಲ ನೀರಿನ ರಾಶಿಗೆ ಧುಮುಕುವ ಎಮ್ಮೆಶಿರ್ಲ ಹಾಗೆ ಮುಂದೆ ಮತ್ತೆರಡು ಹಂತಗಳನ್ನು ಹೊಂದಿದೆ. ಸುಮಾರು ೩೦ ಮತ್ತು ೫೦ ಅಡಿ ಎತ್ತರವಿರಬಹುದು ಈ ಎರಡು ಹಂತಗಳು. ಜಲಪಾತದ ತಳದಲ್ಲೇ ಇರುವ ವಿಶಾಲ ಕೆರೆಯಂತಹ ಜಲರಾಶಿ ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎನ್ನಬಹುದು. ರಾಕೇಶ್ ಆ ಕಡೆಯಿಂದ ಈ ಕಡೆಗೆ ಮತ್ತೆ ಈ ಕಡೆಯಿಂದ ಆ ಕಡೆಗೆ ಈಜಾಡುವುದರಲ್ಲೇ ಕಾಲಹರಣ ಮಾಡಿದರೆ ನಾನು ಫೋಟೊ ತೆಗೆಯುವುದರಲ್ಲಿ ವ್ಯಸ್ತನಾದೆ. ನಂತರ ಸುಮಾರು ೪೦ ನಿಮಿಷ ಹಾಗೇ ಕುಳಿತು ಶಿರ್ಲದ ಚೆಲುವನ್ನು ಅಸ್ವಾದಿಸುತ್ತಾ ನಂತರ ಸರಿಯಾಗಿ ೪ ಗಂಟೆಗೆ ನಿಧಾನವಾಗಿ ಮೇಲೇರಲಾರಂಭಿಸಿದೆವು. ಕಣಿವೆಯ ಮೇಲೆ ಬಂದಾಗ ೪.೪೫ ಆಗಿತ್ತು.
ಧಾರವಾಡದ ನನ್ನ ಗೆಳೆಯರು ಆ ದಾರಿ ಯಲ್ಲಾಪುರ-ಅಂಕೋಲ ರಸ್ತೆಯಲ್ಲಿರುವ ಗುಳ್ಳಾಪುರ ಎಂಬಲ್ಲಿಗೆ ಸೇರುತ್ತದೆ ಎಂದು ಮಾಹಿತಿ ನೀಡಿದ್ದರಿಂದ ನಾವು ಕಂಚೀಮನೆಗೆ ಹಿಂತಿರುಗದೆ ಗುಳ್ಳಾಪುರದೆಡೆಗೆ ಮುನ್ನಡೆದೆವು. ಸಂಪೂರ್ಣವಾಗಿ ದಣಿದಿದ್ದ ನನಗೆ ಈ ದಾರಿ ಬಹಳ ಹಿಡಿಸಿತು. ಎಲ್ಲೂ ಏರುದಾರಿ ಇರಲಿಲ್ಲ. ಪೂರ್ತಿ ಇಳಿಜಾರಿನ ದಾರಿ. ಅದೂ ಕೂಡಾ ಹದವಾದ ಇಳಿಜಾರು. ದಟ್ಟವಾದ ಕಾಡಾಗಿರಲಿಲ್ಲ ಆದರೆ ಜನವಸತಿಯ ಪ್ರದೇಶವೂ ಆಗಿರಲಿಲ್ಲ. ಕೆಲವೊಮ್ಮೆ ಎರಡೂ ಕಡೆ ಇಳಿಜಾರಿರುವ ಗುಡ್ಡದ ಮೇಲೆ ಹಾದಿ ಸಾಗಿದರೆ ನಂತರ ಎರಡೂ ಕಡೆ ಏರಿರುವ ಕಣಿವೆಯಲ್ಲಿ ಹಾದಿ ಸಾಗುತ್ತಿತ್ತು. ನಂತರ ಕೆಲವೊಮ್ಮೆ ಗುಡ್ದದ ಬದಿಯಲ್ಲೇ ಹಾವಿನಂತೆ ಹಾದಿಯಿದ್ದರೆ ಕೆಲವು ಕಡೆ ಬಿದಿರು ಕಾಡಿನ ನಡುವೆ ನೇರ ಹಾದಿಯಿರುತ್ತಿತ್ತು. ಗುಳ್ಳಾಪುರದಲ್ಲಿ ಸಿದ್ಧಿಗಳು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಮೊದಲ ಬಾರಿಗೆ ಸಿದ್ಧಿಗಳನ್ನು ನೋಡುತ್ತಿದ್ದ ರಾಕೇಶ್ ಗೆ ಎಲ್ಲೋ ಆಫ್ರಿಕಾದ ಓಣಿ ಸಂದಿಗಳಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು! ೬.೩೦ ಕ್ಕೆ ಗುಳ್ಳಾಪುರ ತಲುಪಿದ ನಾವು ಅಲ್ಲಿಂದ ೮.೩೦ರ ಬಸ್ಸಿನಲ್ಲಿ ಸುಮಾರು ೯.೩೦ ಕ್ಕೆ ಅಂಕೋಲಾ ತಲುಪಿ ನಂತರ ಉಡುಪಿ ತಲುಪಿದಾಗ ಬೆಳಗ್ಗಿನ ಜಾವ ೨.೪೫. ಮತ್ತೊಂದು ಮರೆಯಲಾಗದ ಚಾರಣ.

- Login or register to post comments
- 485 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: