ಉರಿಯ ನಾಲಗೆಯ ಕುರ್ತುಕೋಟಿ

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.

ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ ತೆಗೆದು ಮತ್ತೆ ಓದತೊಡಗಿದೆ. ಅವರ ಬೇರೆ ಬೇರೆ ಪ್ರಬಂಧ ಟಿಪ್ಪಣಿಗಳು ಮತ್ತೆ ನನ್ನ ಮನಸ್ಸನ್ನು ಆವರಿಸಿತು-ಓದುತ್ತಾ ಹೋದಂತೆ ಬೇಂದ್ರೆಯವರ ಪದ್ಯದ ಸಾಲುಗಳು ಹೇಗೆ ಕುರ್ತುಕೋಟಿಯವರಿಗೇ ಸಲ್ಲುತ್ತದೆ ಅನ್ನಿಸಿತು. ಧರ್ಮದ ಹೆಸರಿನಲ್ಲಿ ನಡೆದಿರುವ ಹಿಂಸೆಯನ್ನು ಅವರು ತಣ್ಣಗೆ ಖಂಡಿಸುವ ರೀತಿ ನೋಡಿದರೆ ಈ ಮಾತು ಅರ್ಥವಾಗುತ್ತದೆ.
ತಮ್ಮ ಪ್ರಬಂಧವೊಂದರಲ್ಲಿ "ಪುರಾಣಕತೆಗಳನ್ನು ಭಾವನಾವಿಫುಲತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಮಾಡಿದರೆ ಅವು ಮರೆತು ಹೋಗುತ್ತವೆ ಅಥವಾ ಮರೆತುಹೋದಷ್ಟೂ ಒಳ್ಳೆಯದೇ. ನಮ್ಮ ನಂಬಿಕೆಗೆ ಕುತ್ತು ಬಂದರೆ ಅದರಿಂದುಂಟಾಗುವ ದಿಗ್ಭ್ರಮೆಯಲ್ಲಿ ನಾವು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಹಿಂದುಮುಂದು ನೋಡುವುದಿಲ್ಲ. ನಮ್ಮ ಪುರಾಣಗಳಿಗೆ ವೀರಾವೇಶದ ರಕ್ಷಣೆ ಬೇಕಾಗಿಲ್ಲ... ಅವುಗಳನ್ನು ಇತಿಹಾಸಗಳೆಂದು ಭ್ರಮಿಸಿದರೆ ಮತ್ತೊಂದು ರಕ್ತಪಾತಕ್ಕೆ ಎಡೆಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಹೀಗೆನ್ನುವ ಕುರ್ತುಕೋಟಿಯವರು ನಿಜವಾಗಿಯೂ -ನೀರಿನೊಲು ತಣ್ಣಗಿದ್ದವರು-ನಿಜವನ್ನು ಉರಿಯ ನಾಲಗೆಯಿ೦ದ ನುಡಿದವರು. ನೀರು-ಉರಿಯನ್ನು ಒಟ್ಟಿಗೆ ದಕ್ಕಿಸಿಕೊಂಡವರು. ತಾನು ದಕ್ಕಿಸಿಕೊಂಡದ್ದನ್ನು ನಿರಾಳದಿಂದ ಹಂಚಿಕೊಂಡವರು.
ಕುರ್ತುಕೋಟಿಯವರು ವಿಮರ್ಶಕರು, ನಾಟಕಕಾರರು, ಪ್ರಬಂಧಕಾರರು ಎಲ್ಲಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಟೀಕಾಕಾರರು. ಅವರ ನಾನಾ ಪುಸ್ತಕಗಳಲ್ಲಿ ನಾನು ಓದಿರುವುದು ಕೆಲವೇ ಕೆಲವು. ನಾಟಕಗಳ ಬಗೆಗಿನ ಅವರ ಪುಸ್ತಕ - ವಿಮರ್ಶೆಯ ವಿನಯ. ಅವರ ಪ್ರಬಂಧಗಳ ಪುಸ್ತಕ ರಾಜಸ್ಪರ್ಶ ಹಾಗು ನನಗೆ ಪ್ರಿಯವಾದ ಉರಿಯ ನಾಲಗೆ. ಐತಿಹ್ಯ ಮಾಲೆಯ ಕತೆಗಳು ಎ೦ಬ ಪುಸ್ತಕಕ್ಕೆ ಅವರು ಬರೆದಿರುವ ಹಿನ್ನುಡಿ. ಅದರಲ್ಲಿ ಇತಿಹಾಸ-ಪುರಾಣ-ಐತಿಹ್ಯಗಳ ಸಂಬಂಧ, ವ್ಯತ್ಯಾಸ ಹಾಗು ಕೊಡುಕೊಳ್ಳುವಿಕೆಯನ್ನು ಮನದಟ್ಟಾಗುವಂತೆ ನಮ್ಮ ಮುಂದಿಡುತ್ತಾರೆ. ತಮ್ಮ ಸಂಸ್ಕೃತ ಪಾಂಡಿತ್ಯವನ್ನು ಮೆರೆಯದೆ, ಅದರ ಪೂರ್ಣ ಪ್ರಯೋಜನವನ್ನು ಪಡಕೊಂಡು, ತಮ್ಮ ಜಾಣ್ಮೆಯ ಮೂಲಕ ಪಾಕವಿಳಿಸಿ ನಿರಾಡಂಬರವಾಗಿ, ಗೆಳೆತನದ ಉತ್ಸಾಹದಲ್ಲಿ ತಮ್ಮ ಆಳವಾದ ಚಿಂತನೆಯನ್ನು ಹಂಚಿಬಿಡುತ್ತಾರೆ ಕುರ್ತುಕೋಟಿಯವರು. `ವೊ ಘರ್` ಎಂಬ ಹಿಂದಿ ಚಿತ್ರವಾದ `ಆ ಮನಿ` ಎ೦ಬ ದೀರ್ಘನಾಟಕವನ್ನು ಬಹಳ ಹಿಂದೆ ಕೈಗೆತ್ತಿಕೊಂಡು ಪೂರ್ತಿ ಓದಲಾರದೆ ಕೈಬಿಟ್ಟಿದ್ದೆ. ನನಗೆ ಆಗ ವ್ಯವಧಾನ ಇಲ್ಲದಿದ್ದುದರ ಬಗ್ಗೆ ಈಗ ಮನಸ್ಸು ಕಸಿವಿಸಿಗೊಳ್ಳುತ್ತದೆ.
ಅಬಾರಿಜಿನಿಗಳು ಭೂಮಿಯನ್ನು, ತಮ್ಮ ಭೂತವನ್ನು ಪರಿಭಾವಿಸುವುದರ ಬಗೆಗಿನ ಆಸ್ಟ್ರೇಲಿಯಾದ ಜೇಮ್ಸ್ ಕೋವನ್‌ನ ಪ್ರಬಂಧವೊಂದನ್ನು ಕುರ್ತುಕೋಟಿ ಅವಲೋಕನ ಮಾಡಿದ್ದಾರೆ. ಅಬಾರಿಜಿನಿಗಳ ಕಾಲ, ಭೂಮಿ, ಪೂರ್ವಿಕರ ಬಗ್ಗೆಗಿನ ನಂಬಿಕೆಗಳನ್ನು ಅರ್ಥಮಾಡಿಕೊಳ್ಳುತ್ತಲೇ ಅದರ ಬಗೆಗಿನ ಆಳವಾದ ಹೊಳಹುಗಳನ್ನು ನಮಗೆ ಕೊಡುತ್ತಾರೆ. ಆನ್ಸೆಸ್ಟರ್ಸ್‌ರನ್ನು ದೇವತೆಗಳು ಎಂದು ಕುರ್ತುಕೋಟಿಯವರು ಅರ್ಥೈಸುವುದು, ಡ್ರೀಮ್‌ಟೈಮ್ - ದೇವತೆಗಳ ಕನಸು - ಎಂಬ ಅವರ ಅನುವಾದ ಎಷ್ಟು ಸಮಂಜಸ ಎ೦ಬ ಪ್ರಶ್ನೆ ಕೇಳಬಹುದಾದರೂ, ಆ ವಿಷಯದಲ್ಲಿ ಅವರು ತೋರಿರುವ ಆಸ್ಥೆ ಮಾತ್ರ ಅದ್ವಿತೀಯವಾದುದು.
ಮತ್ತೊಂದು ಕಡೆ - ನಾವು ಉಪಯೋಗಿಸುವ ಪದಗಳಿಗೂ ಅವುಗಳ ಅರ್ಥಕ್ಕೂ ಇರುವ ನಂಟನ್ನು ಕುರ್ತುಕೋಟಿಯವರು ಚರ್ಚಿಸುತ್ತಾ ಕೆಲವು ಪದಗಳ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ಅವರು ಪದಗಳ ಮೂಲಕ, ಪದಗಳ ಅರ್ಥಾರೋಪದ ಮೂಲಕ ಸಮಾಜವನ್ನು, ಜನ ಜೀವನವನ್ನು ಅವಲೋಕಿಸುವ ಪರಿಯಂತೂ ತುಂಬಾ ಪರಿಣಾಮಕಾರಿ. ಪದಗಳಿಗೆ ನಾವು ಆರೋಪಿಸುವ ಅರ್ಥ ಕಾಲಾನುಕಾಲಕ್ಕೆ ಬದಲಾಗುವುದನ್ನು ಗಮನಿಸುವ ಮೂಲಕ ಸಮಾಜದ ಪ್ರಗತಿಗೋ, ಪುರೋಗಾಮಿತ್ವಕ್ಕೋ ಕನ್ನಡಿ ಹಿಡಿಯುತ್ತಾರೆ. ಅವರ ಒ೦ದು ಟಿಪ್ಪಣಿಯಲ್ಲಿ `ಸ್ವಾತಂತ್ರ್ಯ` ಎ೦ಬ ಪದಕ್ಕೆ ಬದಲಾಗುತ್ತಾ ಬಂದ ಅರ್ಥವನ್ನು ವಿಶ್ಲೇಷಿಸುತ್ತಾರೆ. ಬ್ರಿಟೀಶರಿಂದ, ಬಡತನದಿಂದ, ಹಸಿವಿನಿಂದ ಹೀಗೆ ಬೇರೆ ಬೇರೆ ವಿಷಯಕ್ಕೆ ಅನ್ವಯಿಸುತ್ತಾ `ಸ್ವಾತಂತ್ರ್ಯ` ಪದಕ್ಕೆ ಅರ್ಥ ನಿಜವಾಗುವುದು ಬಿಟ್ಟು ಸಾಂಕೇತಿಕವಾಗುವುದನ್ನು ಅವರು ನಿಚ್ಚಳವಾಗಿ ಗುರುತಿಸುತ್ತಾರೆ.
ಕಾಲವನ್ನು ಕೂಡ ಅವರು ಸಾಕಷ್ಟು ಸಲ ವ್ಯಖ್ಯಾನಿಸಿದ್ದಾರೆ. ರಾಮಾಯಣದ ಶಬರಿಯ ಬಗ್ಗೆ ಬರೆಯುತ್ತಾ, ಸಮಕಾಲೀನ ದೃಷ್ಟಿಯಲ್ಲಿ ಕಾಯುವಿಕೆಯನ್ನು ನಿರರ್ಥಕ ಎಂದು ಕಾಣುವುದಕ್ಕೂ, ಶಬರಿ ರಾಮನನ್ನು ಕಂಡಾಗ ತನ್ನ ಬದುಕು ಸಾರ್ಥಕವಾಯಿತು ಎಂದುಕೊಂಡರೂ ಕಾಯುವುದು ನಿರರ್ಥಕ ಎಂ ಭಾವ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಾರೆ. ಅದಕ್ಕೆ ಅವರು ಸಾಮ್ಯುಯಲ್ ಬೆಕೆಟ್‌ನ `ವೈಟಿಂಗ ಫಾರ್ ಗಾಡೋ` ದಲ್ಲಿ ಕಾಲದ ಚಿತ್ರಣವನ್ನು ಪಕ್ಕದಲ್ಲಿಟ್ಟು ತೂಗಿನೋಡುತ್ತಾರೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಕುರ್ತುಕೋಟಿಯವರು ಅದು ಲೀಲಾಜಾಲವಾಗಿ ಮಾಡಬಹುದಾಗಿದ್ದ ಕೆಲಸ. ಅದು ಅವರ ಪಾಂಡಿತ್ಯದ ಹರಹನ್ನು ಜಾಹೀರುಮಾಡುತ್ತದೆ.
ಐತಿಹ್ಯಮಾಲೆಯ ಕತೆಗಳು ಪುಸ್ತಕದ ಹಿನ್ನುಡಿಯಲ್ಲಿ, ಪುರಾಣಕ್ಕೂ, ಇತಿಹಾಸಕ್ಕೂ, ಐತಿಹ್ಯಕ್ಕೂ ವ್ಯತ್ಯಾಸಗಳನ್ನು ಸೊಗಸಾಗಿ ವಿವರಿಸುತ್ತಾರೆ. ಹೇಗೆ ಗುರು-ಶಿಷ್ಯ ಪರಂಪರೆಯಲ್ಲಿ ವಿದ್ಯಾಭಾಸ ಮಾತು-ಕತೆಯಲ್ಲೇ ನಡೆದುದರಿಂದ ವಿದ್ಯೆ ಗುಪ್ತವಾಗಿ ಉಳಿಯಿತು, ಸಾರ್ವಜನಿಕವಾಗಲಿಲ್ಲ ಎಂದು ತೋರಿಸಿಕೊಡುತ್ತಾರೆ. ಐತಿಹ್ಯಗಳು ಆ ಪರಿಸ್ಥಿತಿ ಬದಲಾದ ಬಗೆಯನ್ನು ಹೇಗೆ ದಾಖಲಿಸುತ್ತದೆ ಎಂದು ಕತೆಗಳ ಮೂಲಕ ವಿವರಿಸುತ್ತಾರೆ. ಗುಪ್ತವಾಗಿದ್ದ ವಿದ್ಯೆಗಳನ್ನು ಅವೈದಿಕರು, ಬ್ರಾಹ್ಮಣೇತರರು ಬರೆದಿಟ್ಟು, ಪ್ರಚಾರ ಮಾಡಿ, ಸಾರ್ವಜನಿಕ ಮಾಡಿದ್ದರಿಂದ ಅದನ್ನು ಯಾರೂ ಬೇಕಾದರೂ ಓದಬಹುದಾದ, ಅರಗಿಸಿಕೊಳ್ಳಬಹುದಾದ ಪರಿಸ್ಥಿತಿ ಹುಟ್ಟಿಕೊಂಡಿದ್ದನ್ನು ಎತ್ತಿ ತೋರಿಸುತ್ತಾರೆ.
ನಾಟಕದ ಬಗ್ಗೆಗಿನ ಅವರ ಆಳವಾದ ಚಿ೦ತನೆಯ ಹೊಳಹು ನನ್ನನ್ನು ಸ್ವತಃ ತಟ್ಟಿದ್ದು ಮೈಸೂರಿನ ನಾಟಕೋತ್ಸವವೊಂದರಲ್ಲಿ. ಸಂಸ್ಕೃತ ನಾಟಕವೊಂದರ ಮಲೆಯಾಳಿ ಅವತರಣಿಕೆಯನ್ನು, ನಾಟಕದ ನಂತರದ ಚರ್ಚೆಯಲ್ಲಿ ಕುರ್ತುಕೋಟಿ ನಮಗಾಗಿ ಅರ್ಥೈಸಿದ್ದು ಈಗಲೂ ಮೈ ಝುಮ್ಮೆನ್ನಿಸುವ ಅನುಭವವಾಗಿ ಉಳಿದಿದೆ.
ಸದಾ ಎಲೆ ಅಡಿಕೆ ಮೆಲ್ಲುತ್ತಾ, ನಗುನಗುತ್ತಲೇ ಇದ್ದವರು ಕುರ್ತುಕೋಟಿಯವರು. ಸದಾ ನಗುಮುಖದ ನಿರಾಡಂಬರ ವ್ಯಕ್ತಿತ್ವದವರು. ಆಗಿಹೋದ ಸಾಹಿತಿಗಳು ಕಲಾಕಾರರನ್ನು ಮರೆತುಬಿಡುವ, ಅಥವಾ ಸಾಂಕೇತಿಕವಾಗಿ ಪೂಜಿಸುವ ನಮ್ಮ ಪ್ರವೃತ್ತಿಯನ್ನ ತಮ್ಮ ನಿಧನದ ಎರಡು ದಿನಗಳ ಮುಂಚೆಯಷ್ಟೆ ಸಾರ್ವಜನಿಕ ಸಭೆಯೊಂದರಲ್ಲಿ ನೆನಪಿಸಿಕೊಟ್ಟು ತೆರಳಿದ್ದಾರೆ ಉರಿಯ ನಾಲಗೆಯ ಕೀರ್ತಿನಾಥ ಕುರ್ತುಕೋಟಿಯವರು.
೦೮-೦೬-೨೦೦೩

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture

ಧನ್ಯವಾದ.. ಬಹಳ ಚೆನ್ನು ವಿಚಾರ..

ದಯವಿಟ್ಟು....

ನುಡಿಯಲೆಳೆಸಿದರೆ = ನುಡಿಯಲು ಎಳೆಸಿದರೆ ,[ಎಳೆಸಿದರೆ ಎಂದರೆ?]
ನೀರಿನೊಲು = ನೀರಿನ ಒಲು [ ಒಲು ಅಂದರೆ ? ]
ತಣ್ಣಗಿದ್ದವನದನು = ತಣ್ಣಗೆ ಇದ್ದವನು ಅದನು....

ಈ ಮೂರನ್ನು ತುಸು ಬಿಡಿಸಿ ಹೇಳಿ, ತಿಳಿಯಲಿಲ್ಲ!

ನನ್ನಿ!

=======================================

ಸಂಗನಗೌಡ's picture

[ ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು. ]

ಅದು ಎಳೆಸಿದರೆ ಅಲ್ಲ, ಎಳಸಿದರೆ ಆಗಬೇಕು.

ಎಳಸಿದರೆ ಅಂದರೆ ಪ್ರಯತ್ನಪಟ್ಟರೆ, ನೋಡಿ, 'ಪ್ರಯತ್ನ'ಕ್ಕೆ ಕನ್ನಡ ಪದ ಸಿಕ್ಕಿತು.

ಈ ಸಾಲುಗಳ ಒಟ್ಟಾರೆ ಅರ್ಥ ಹೀಗಿರಬಹುದು,

ತೊಗಲು ನಾಲಿಗೆ ಯಾವಾಗಲೂ ಸುಳ್ಳು ಹೇಳಲೇ ಎಳಸುವದು, ಅಂತಹ ನಾಲಿಗೆ ಅಪರೂಪಕ್ಕೆ ನಿಜ ಹೇಳಲು ನೋಡಿದರೆ, ಪ್ರಾಣವನ್ನೇ ಅಂಗೈಲಿ ಹಿಡಿದು ಅಂದರೆ ಗಟ್ಟಿ ಮನಸ್ಸು ಮಾಡಿ, ಹೇಳಿ ಬಿಡಬೇಕು.

ಇಲ್ಲದಿರೆ ನೀರಿನೊಲು ತಣ್ಣಗಿದ್ದವನು, ಅಂದರೆ ನೀರಿನಂತೆ ತಣ್ಣಗಿದ್ದವನು, ಯಾರಿಗೆ ನೋವಾದರೆ ನನಗೇನು ಎಂಬಂಥ ಬಿಂದಾಸ್ ಮನಸ್ಯಾ, ಅದನ್ನು, ಅಂದರೆ ನಿಜವನ್ನು, ಉರಿಯ ನಾಲಗೆಯಿಂದ (ಅಂದರೆ ಕೇಳುವವರಿಗೆ ನೋವಾದರೂ ಸರಿ) ಹೇಳಬೇಕು.

 

ಕೀರ್ತಿನಾಥರ ಸಾವಿಗೆ ಬಗ್ಗೆ ತಿಳಿದು ಬೇಸರವಾಯಿತು.

mahesha's picture

ನನ್ನಿ ಸಂಗನಗೌಡರೆ.....

ಒಲು ಅಂದರೆ current ಅಂತ ಕೂಡ ತಿಳಿವಿದೆ. ಅದಕ್ಕೆ ತುಸು ಗಲಿಬಿಲಿ ಆಯ್ತು.

ಆದರೆ ನೀರಿನೋಲ್ (ಓಲ್) ಅಂದರೆ ನೀರಿನಂತೆ ಅಂತ ಅಲ್ವಾ?( ಗೊಂದಲ :? )

'ಎಳಸು' ಇದರ ಬಗ್ಗೆ ತುಸು ಹೆಚ್ಚು ಹೇಳಿರಿ. ಇದು burrow ನಿಘಂಟಲ್ಲಿ ಸಿಕ್ಕಲಿಲ್ಲ.

ಬಳಸು/to use => ಬಳಕೆ/uage
ಎಳಸು/to try => ಎಳಕೆ/try(noun)?

=======================================

ಸಂಗನಗೌಡ's picture

ಅದು ಬುರೋವ್ ಪದಕಣಜದಲ್ಲಿ ಇದೆ, ನೋಡಿ. ಆದರೆ ಬರಹದ ಪದಕಣಜದಲ್ಲಿ ಇಲ್ಲ.

mahesha's picture

ನನ್ನಿ!

ಬಹಳ ಒಳ್ಳೆಯ ಒರೆ.

Ka. eḷasu to desire, long for, take pleasure in;

ಅಲ್ಲಿ "ನುಡಿಯಲೆಳಸು" ಅಂದರೆ "ಹೇಳಲು ಬಯಸು" ಅಂತ ಕೂಡ ತಗೋ ಬೋದು!

ಸಂಗನಗೌಡರು ಬಹಳ ಸಮಂತು ಆಗಿ ಬಿಡಿಸಿದ್ದಾರೆ.

=======================================

ಸಂಗನಗೌಡ's picture

ನನ್ನಿ ಮಹೇಶರೇ,

ಆ ಒರೆಗೆ ಅವರು ಕೊಟ್ಟಿರುವ ಬಿಡಿಕೆ ಯಾಕೋ ಅಷ್ಟು ಸರಿ ಕಾಣಲಿಲ್ಲ. ಬಯಕೆಗೂ ಎಳಸುವಿಕೆಗೂ ಬಹಳ ಬೇರೆತನ ಇದೆ.

ಎಳಸುವದೆಂದರೆ ಅದರ ಕಡೆ ಸತತ ತುಡಿತವಿರುತ್ತದೆ. "ಬಯಸಿದ್ದನ್ನು ಪಡೆಯಲು ಏನಾದರೂ ಮಾಡುತ್ತೇವೆ", ಅದನ್ನೇ ಎಳಸುವದು ಅನ್ನುವದು. 'ಪ್ರಯತ್ನ ಪಡು' ಅಂದರೆ ಅದೇ ಅಲ್ಲವೇ? long for ಅನ್ನುವ ಬಿಡಿಕೆ ಬಹಳ ಹತ್ತಿರದ ಬಿಡಿಕೆಯಾದರೂ, ಎಳಸು = ಪ್ರಯತ್ನಪಡು ಆಗದೇ??

ಎಲ್ಲ ಸರಿಯಾಗಿರುವದನ್ನು ಕೆಡಿಸಲೆಳಸಬೇಡ

ಮೇಲಿನ ಸಾಲಿನಲ್ಲಿ ಎಳಸು ಸರಿಯಾಗಿ ಹೊಂದಿದೆಯಲ್ಲವೇ? ಮತ್ತು 'ಪ್ರಯತ್ನ ಪಡಬೇಡ' ಅಂದರೂ ಆಗುವದಲ್ಲವೇ? ಅಲ್ಲಿಗೆ 'ಎಳಸು' = 'ಪ್ರಯತ್ನ ಪಡು' ಆದೀತೇ?

mahesha's picture

ಸಂಗನ!!

'ಎಳಸು' ಅನ್ನೋದಕ್ಕೆ ನೀವು ವೇಳೋ(ಹೇಳೋ) 'ಅರಿತ' ಇದೆ ಅಂತ ನಾನು ಒಪ್ತೇನೆ. ಅಂದರೆ "ಪ್ರಯತ್ನ ಪಡು", "ಜತುನ ಗಯ್ಯಿ" ಇದಕ್ಕೆ 'ಎಳಸು' ಬಳಕೆ ಒಪ್ಪಬಹುದು.

ನಿಮ್ಮ ಮಾತು ಸರಿ ಅಲ್ಲಿ!!

.
.
.
.

ನಾನು ಹೇಳಿದುದು.. ಆ ಪಾಟದ ಸಾಲಲ್ಲಿ...

Ka eḷasu to desire, long for, take pleasure in;

"ನುಡಿಯಲೆಳಸು" ಗೆ ' to desire' ಅಂತ ತಗೊಂಡರೆ, "ಹೇಳಲು ಬಯಸು" ಅಂತ ಕೂಡ ಆಗುವುದು.

ಅಂದರೆ "ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕು"

ತೊಗಲಿನ ನಾಲಗೆ ದಿಟವನ್ನು ಹೇಳಲು ಬಯಸಿದರೆ, ಹಂಬಲಸಿದರೆ, ಎಳಸಿದರೆ, ತಾನು(ಹೇಳುವವನು) ಅಂಗೈಯಲ್ಲಿ ಉಸಿರು ಹಿಡಿಯಬೇಕು. ( ಅಂಗೈಯಲ್ಲಿ ಉಸಿರು/ಪ್ರಾಣ ಹಿಡಿ, ಅಂದರೆ ಬಹಳ risk ಅಲ್ಲಿ ಇರು/ತಗೋ )

=======================================

anivaasi's picture

ನನ್ನ ಬೆರಳಚ್ಚಿನ ತಪ್ಪು. ಎಳೆಸಿದರೆ ಅಲ್ಲ ಎಳಸಿದರೆ ಇರಬೇಕು. ತಪ್ಪು ತೋರಿಸಿದ್ದಕ್ಕೆ ನಾನು ಋಣಿ.

೧) ನನಗೂ ಎಳಸು ಎಂದರೆ to desire, long for, take pleasure in ಎಂದು ಅನಿಸುವುದು. ಕಾರಣ ಪ್ರಯತ್ನಪಡು ಎಂಬುದಕ್ಕೆ ಕಾರ್ಯರೂಪಕ್ಕಿಳಿಸುವ/ಕ್ರಿಯೆಯ ಸೋಂಕಿದೆ. ಆದರೆ ಎಳಸಿಗೆ ಬರೇ ಬಯಕೆ/ಆಸೆ ಎಂಬ ಅರ್ಥ ಹತ್ತಿರವೇನೋ.

೨) ಇನ್ನು ಕುರ್ತುಕೋಟಿಯವರು ಅದೇ ಪ್ರಬಂಧದಲ್ಲಿ ತೊಗಲ ನಾಲಗೆ - ಸಾಮಾನ್ಯವಾದ ನಾಲಗೆ- ಸತ್ಯವನ್ನು ಹೇಳಬಯಸಿದರೆ ಪ್ರಾಣಕ್ಕೆ ಸಂಚಕಾರವಿದೆ ಎನ್ನುತ್ತಾರೆ. "ಸತ್ಯ ತಾನಾಗಿ ಅಪಾಯಕಾರಿಯಲ್ಲ. ಆದರೆ ಅದನ್ನು ಹೇಳುವುದು ಅಪಾಯಕರ" ಎಂದು ಹೇಳಿ "ನಿಸ್ಪೃಹತೆಯಿಂದ, ತಾಳ್ಮೆಯಿಂದ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವವನ ಮಾತಿಗೆ ಅಂಥ ಅಧಿಕಾರ ಪ್ರಾಪ್ತವಾಗುತ್ತದೆ. ತಣ್ಣಗಿನ ವ್ಯಕ್ತಿತ್ವ ಮತ್ತು ಉರಿಯನಾಲಗೆ ಇವೆರಡರ ನಡುವಿನ ವಿರೋಧ ಅರ್ಥಪೂರ್ಣವಾಗಿದೆ" ಎಂದು ಹೇಳುತ್ತಾರೆ. ತೊಗಲ ನಾಲಗೆಯಲ್ಲಿ - ತೊಗಲು ಎನ್ನುವುದು ನಾಲಗೆಯ ಸಾಮಾನ್ಯವಾದ, ವಾಸ್ತವ ಸ್ವರೂಪವನ್ನು ವಿವರಿಸಿದಂತೆ ಕಾಣುತ್ತದೆ. ಆದರೆ ಉರಿಯ ನಾಲಗೆ ಎನ್ನುವಾಗ "ಉರಿ" ಗುಣವಾಚಕ ಹತ್ತು ಹಲವಾರು ಅರ್ಥಗಳನ್ನು ಸ್ಪುರಿಸುತ್ತದೆ. ಇಲ್ಲಿ ಉರಿ ಹೇಳಲೇ ಬೇಕಾದ ಸ್ಥಿತಿ, passionate ಆಗಿರುವುದು ಮತ್ತು ಅದೆಲ್ಲ ಲಕ್ಷಣಗಳು ಆಡಿದ ಮಾತಿನಲ್ಲೂ ಕಾಣುವ ಗುಣದ ಬಗ್ಗೆ ಹೇಳುತ್ತಿದೆಯೇನೋ ಅನ್ನಿಸುತ್ತದೆ. "ಕವಿಗೂ ಅರ್ಥವಾಗದಿರುವದು ಕವಿತೆಯ ಭಾಷೆಗೆ ಅರ್ಥವಾಗಿರುತ್ತದೆ" ಎಂದು ಬೇರೆ ಅವರು ಹೇಳುತ್ತಾರೆ!

೩) ಸಂಗನಗೌಡರೆ, ಕೀರ್ತಿನಾಥ ಕುರ್ತುಕೋಟಿಯವರು ೨೦೦೩ರಲ್ಲೇ ತೀರಿಕೊಂಡರು. ಆಗ ನಾನು ಒಂದು ರೀಡಿಯೋ ಕಾರ್ಯಕ್ರಮಕ್ಕಾಗಿ ತಯಾರಿಸಿದ ಪಠ್ಯ ಇದು. ಕಡೆಯಲ್ಲಿ ಕೊಟ್ಟಿರುವ ದಿನಾಂಕವನ್ನು ಮೊದಲಿಗೇ ಹಾಕಿದರೆ ಒಳ್ಳೆಯದು ಎಂದು ಕಾಣುತ್ತದೆ.

ಸಂಗನಗೌಡ's picture

sorry,ತಮ್ಮ ಹೆಸರು ಗೊತ್ತಾಗಲಿಲ್ಲ.

ಬಯಕೆ ಮತ್ತು ಎಳಸುವಿಕೆಗೆ ಇರುವ exact difference ತಿಳಿಸುವಿರಾ?

anivaasi's picture

ನಾನೊಬ್ಬ ಅನಿವಾಸಿ. ಅನಿವಾಸಿ ಎಂದೇ ಕರೆಯಬಹುದು :)

ಎಳಸುವಿಕೆಗೆ ಬಯಕೆ/ಅಸೆ ಹತ್ತಿರದ ಅರ್ಥ ಅಂದಿದ್ದೆ. ಮತ್ತೆ exact difference ಕಷ್ಟ.

exact ಅರ್ಥ ಹುಡುಕುವ ಬಗ್ಗೆ ಈ ಬರಹ ಓದಿ, ಅನಿಸಿಕೆ ಹೇಳಿ.

ವೈಭವ's picture

ಹುಡುಕು ಪದ: ಎಳಸು


1. bud (ನಾ) 1) ಹೂಮೊಗ್ಗು, ಎಲೆಮೊಗ್ಗು 2) ಕುಡಿ, ಮುಗುಳು, ಅಂಕುರ, ಮೊಳಕೆ 3) ಎಳಸು, ಪ್ರೌಢನಲ್ಲದ ವ್ಯಕ್ತಿ

2. callow (ಗು) 1) ಅಪಕ್ವ, ಎಳಸು, ಅನುಭವವಿಲ್ಲದ 2) (ಹಕ್ಕಿ) ಗರಿಹುಟ್ಟದ, ತುಪ್ಪುಳು ತುಂಬಿದ 3) ತಗ್ಗಿನಲ್ಲಿ ರುವ, ನೀರು ನುಗ್ಗುವ ಹುಲ್ಲು ಮೈದಾನ

ಆದರೆ ಇವು ಈ ಸಾಲುಗಳಿಗೆ ಹೊಂದುವುದಿಲ್ಲ.

ಹಾಗೆಯೆ 'ಎರಸು' ಅನ್ನೊ ಪದ ಕೂಡ ಇದೆ. ಇದರ ಅರ್ಥ 'ಆಕರ್ಷಿತನಾದೆ' ಅಂತಿರಬಹುದು. ಕಲ್ಲರಳಿ ಹೂವಾಗಿ ಚಿತ್ರದ ಹಾಡಿನಲ್ಲಿ " ನಿನ್ನ ಅಂದಕ್ಕೆ ಎರಸಾದೆ ನಾ...." ಅಂತಿದೆ.

ಸಂಗನಗೌಡ's picture

ಹೌದು,

ಎಳೆ - ಅಂದರೆ ಕನ್ನಡದಲ್ಲಿ ಎರಡು ಅರ್ಥಗಳಿವೆ.

1) to drag - ಕೆಲಸ ಪದ

2) ಅಪಕ್ವವಾದುದು. ಎಳೆ ನಿಂಬೇಕಾಯಿ ಅಂತಾರಲ್ಲವೇ.

ಎಳಸು = ಎಳೆ.

ನಮ್ ಕಡೆ, ಎಳಸು ಅಂದರೆ ಮಾಡಲು ನೋಡುವದು ಅಂತಲೇ ಅರ್ಥವಿದೆ. 'ಎಳೀದು' ಅಂದರೆ ಎಳಸು.

ಅದೇ ಎಳೆಸು ಅಂದರೆ ಎಳೆಸುವದು- to make some one drag.

ಎಳಸು ಅಂದರೆ ಬಳಸು,ಬಯಸು ಗಳಂತೆ ಒಂದು ಕೆಲಸ ಪದ.

mahesha's picture

ಸಂಗನ

burrow ಹೀಗೆ ಹೇಳತೈತಿ.

Ka. er̤e thread; er̤tu the string or cord of the warp of the texture of a cot. ಇದು ಎೞೆ( ಎಳೆ ಅಲ್ಲ ). ನೀವು ಹೇಳಿದ to drag ಎೞೆ ಇರಬಹುದು.

Ka. eḷ, eḷa, eḷe tenderness, youth, weakness, moderation; eḷa-nīr water of an unripe coconut; eḷaku young age; eḷatu, eḷadu, eḷedu that is tender, young; eḷetana tenderness, youth. ( ಇಲ್ಲಿ ಎಳಸು ಇಲ್ಲ )
*ನಾವು ಎಳತು, ಇಲ್ಲ ಎಳೆದು ಅಂತ ಬಳಸೋದು, ಎಳಸು ಅಂತ ನಾನು ಬೆಂಗಳೂರಲ್ಲೇ ಕೇಳಿದ್ದು.

Ka. eḷe rafter

Burrow ಅಲ್ಲಿ 'ಎಳಸು'ಗೆ ನೀವು ಕೊಟ್ಟ to desire, long for, ಬಿಟ್ಟು ಬೇರೆ ತಿಳಿವೇ ಇಲ್ಲ.

'ಎಳತು' ಅನ್ನು ಈ ಬೆಂಗಳೂರು ಕಡೆ ಎಳಸು ಮಾಡಿಕೊಂಡಿರಬೇಕು.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

ಸಂಗನಗೌಡ's picture

Quote:
ನಾವು ಎಳತು, ಇಲ್ಲ ಎಳೆದು ಅಂತ ಬಳಸೋದು,

ಮಹೇಶ್, 

ಅದು 'ಎಳೇದು' ಅಂದುಕೋತೀನಿ. ಹೌದು, ನೀವು ಹೇಳೋದು ಸರಿ ಅನಿಸುತ್ತೆ. ಅಲ್ಲಿಗೆ ಎಳೆ ಎಂಬುದಕ್ಕೆ ಒಟ್ಟು 3 ತಿಳಿವು.

೧) ದಾರ, string

೨) drag

3) ಅಪಕ್ವವಾದುದು.

ಮತ್ತು ಎಳಸು = to long for, to try for ಅನ್ನಬಹುದು.

mahesha's picture

ಸಂಗನ ನೀವು ಸರಿ..
-ಮಹೇಶ(ಶ್ ಅಲ್ಲ)

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

ವೈಭವ's picture

'ಎರಸಾದೆ' ಅಂದ್ರೆ ಸರಿಯಾದ ಅರ್ಥ ಏನು?  ನಾನು 'ಬರೋ'ನ 'ಗಂಟಿ'ನಲ್ಲಿ ಹುಡುಕಿದೆ ಸಿಕ್ಲಿಲ್ಲ....ಗೊತ್ತಿದ್ರೆ ತಿಳಿಸಿ

mahesha's picture

ಅಲ್ಲೂ ಸಿಕ್ಕಲಿಲ್ಲ.
ಕನ್ನಡ ಕಸ್ತೂರಿಯಲ್ಲೂ ಸಿಕ್ಕಲಿಲ್ಲ!

====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ

ವೈಭವ's picture

ಹಂಸಲೇಖರನ್ನೆ ಕೇಳ್ಬೇಕು ಅನ್ಸುತ್ತೆ.  !!!:)

hpn's picture

ಇವತ್ತು ಬಿ ಜಿ ಎಲ್ ರವರ 'ಕಾಲೇಜು ರಂಗ' ಪುಸ್ತಕಕ್ಕೆ ಕುರ್ತಕೋಟಿಯವರು ಬರೆದಿರುವ ಮುನ್ನುಡಿ ಓದುತ್ತಿದ್ದಾಗ ಅಲ್ಲೂ ಇದೇ ಸಾಲುಗಲಿದ್ದವು. ಬಿ ಜಿ ಎಲ್ ರವರ 'ಹಾಸ್ಯ'ವನ್ನು ವರ್ಣಿಸುತ್ತ ಕೀರ್ತಿನಾಥರು ಬೇಂದ್ರೆಯವರ ಇದೇ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಎಲ್ಲೋ ಓದಿರುವೆನಲ್ಲ ಎಂದು ಆಲೋಚಿಸಿದಾಗ ಈ ಲೇಖನದ ನೆನಪಾಯಿತು.

ತೊಗಲ ನಾಲಗೆ ನಿಜವ ನುಡಿಯಲೆಳಸಿದರೆ ತಾನಂಗೈಲಿ ಪ್ರಾಣಗಳ ಹಿಡಿಯಬೇಕು |
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನ್ನು ಉರಿಯ ನಾಲಗೆಯಿಂದ ನುಡಿಯಬೇಕು ||

ನೀವು ಉರಿವ ನಾಲಗೆ ಕುರ್ತಕೋಟಿಯವರದ್ದೆಂದರೆ ಕುರ್ತಕೋಟಿಯವರು ಬಿ ಜಿ ಎಲ್ ರವರು ಹೀಗೆ ಎಂದು ಬರೆದಿದ್ದಾರೆ :)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"