ನಿಮ್ಮಿ (ಕಥೆ)
ಆಕೆಯ ಹೆಸರು ನಿರ್ಮಲ. ಆದರೆ ಎಲ್ಲರೂ ಕರೆಯುವುದು ನಿಮ್ಮಿ ಎಂದು. ಮನೆ ಎಂದು ಹೇಳುಕೊಳ್ಳುವಂತಹ ಮನೆಯೇನೂ ಆಕೆಗೆ ಇಲ್ಲ. ಕೊಳೆಗೇರಿಯಲ್ಲೊಂದು ಚಿಕ್ಕ ಗುಡಿಸಲು. ಅಲ್ಲಿ ಅಮ್ಮನ ಜೊತೆ ಸಂಸಾರ. ಅಮ್ಮ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಿಮ್ಮಿ ಅಮ್ಮನ ಜೊತೆ ಕೆಲವೊಮ್ಮೆ ಆ ಮನೆಗೆಳಿಗೆ ಹೋಗುವುದೂ ಇದೆ. ಅಮ್ಮ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಬೀದಿಯ ಬದಿಯಲ್ಲಿರುವ ಕಸದ ತೊಟ್ಟಿ ಜಾಲಾಡುತ್ತಿರುತ್ತಾಳೆ. ಪ್ಲಾಸ್ಟಿಕ್, ಡಬ್ಬ, ಕಾಗದ, ಇತ್ಯಾದಿಗಳೆಲ್ಲ ಸಂಗ್ರಹಿಸಿ ಪಕ್ಕದ ಬೀದಿಯ ಖಾನ್ ಸಾಹೇಬನಿಗೆ ಕೊಟ್ಟರೆ ಕೈಗೆ ಸ್ವಲ್ಪ ಚಿಲ್ಲರೆ ಕಾಸು ಬೀಳುವುದು. ಒಂದು ಹೊತ್ತಿನ ಹೊಟ್ಟೆಯ ಸಮಸ್ಯೆ ಪರಿಹಾರವಾದಂತೆ. ಕಸದ ತೊಟ್ಟಿಯಲ್ಲೇ ಅಕೆಗೆ ಕೆಲವೊಮ್ಮೆ ಉಪಯುಕ್ತ ಸಾಮಾನು ಸಿಕಿದ್ದೂ ಇದೆ. ಉದಾಹರಣೆಗೆ ಕಳೆದ ತಿಂಗಳು ಸಿಕ್ಕಿದ ಪೆನ್ನು. ಶಾಲೆಗೆ ಸರಿಯಾಗಿ ಹೋಗದಿದ್ದರೂ ಅಲ್ಪ ಸ್ವಲ್ಪ ಬರೆಯಲು ಆಕೆಗೆ ಗೊತ್ತಿದೆ. ಆ ಪೆನ್ನು ಈಗಲೂ ನಿಮ್ಮಿಯ ಬಳಿ ಇದೆ.
ತನ್ನ ಪ್ರಾಯದ ಮಕ್ಕಳು ಸಮವಸ್ತ್ರ ಚಿಮ್ಮಿಸಿಕೊಂಡು ಶಾಲೆಗೆ ಹೋಗುವಾಗ ತಾನೂ ಶಾಲೆಗೆ ಹೋಗಬೇಕೆಂದು ನಿಮ್ಮಿ ಆಸೆಪಟ್ಟಿದ್ದೂ ಉಂಟು. ಆದರೆ ಏನು ಮಾಡುವುದು? ಆಸೆಪಟ್ಟಿದ್ದೆಲ್ಲ ಸಿಗಬೇಕಲ್ಲ? ಹೊಟ್ಟೆ ತುಂಬಿಸಲೇ ಸಾಕಷ್ಟು ಹಣವಿಲ್ಲದಿರುವಾಗ ಇನ್ನು ಪುಸ್ತಕಕ್ಕೆಲ್ಲಿಂದ ತರುವುದು?
ಅದೊಂದು ದಿನ. ನಿಮ್ಮಿ ಎಂದಿನಂತೆ ಕಸದ ತೊಟ್ಟಿಯನ್ನು ಸಮೀಪಿಸುತ್ತಿದ್ದಾಳೆ. ಆಗ ಒಂದು ಕಪ್ಪು ಬಣ್ಣದ ಮೋಟಾರು ಸೈಕಲು ಝುಮ್ ಎಂದು ಬಂತು. ಕಸದ ತೊಟ್ಟಿಯ ಪಕ್ಕ ನಿಂತಿತು. ಅದನ್ನು ನಡೆಸುತ್ತಿದ್ದಾತ ಏನೋ ಒಂದು ಪೊಟ್ಟಣವನ್ನು ತೊಟ್ಟಿಗೆ ಎಸೆದು ಮೋಟಾರು ಸೈಕಲ್ಲನ್ನು ಪುನಃ ಝುಮ್ ಎಂದು ಓಡಿಸಿಕೊಂಡು ಹೋದ. ಇಂತಹ ದೃಶ್ಯ ನಿಮ್ಮಿಗೇನೂ ಹೊಸತಲ್ಲ. ನಿಮ್ಮಿ ಎಂದಿನಂತೆ ತೊಟ್ಟಿಯನ್ನು ಸಮೀಪಿಸಿದಳು. ತೊಟ್ಟಿಯ ಮೇಲೆ ಈಗಷ್ಟೆ ಬೈಕಿನಲ್ಲಿ ಬಂದಾತ ಎಸೆದ ಪೊಟ್ಟಣ ಇತ್ತು. ಕಂದು ಬಣ್ಣದ ಕಾಗದದ ಪೊಟ್ಟಣ. ಸಮಾನ್ಯವಾಗಿ ಅಂಗಡಿಗಳಲ್ಲಿ ಸಾಮಾನು ಕಟ್ಟಿ ಕೊಡುವಂತಹದು. ನಿಮ್ಮಿ ಅದನ್ನು ಎತ್ತಿಕೊಂಡು ಬಿಡಿಸಿ ನೋಡಿದಳು. ಕೆಲವು ಹರಿದು ಚಿಂದಿ ಮಾಡಿದ ಕಾಗದದ ತುಣುಕುಗಳು, ಬ್ರೆಡ್ಡಿನ ಅಂಚಿನ ತುಣುಕುಗಳು ಸಿಕ್ಕವು. ಅವುಗಳ ಜೊತೆಗೆ ಒಂದು ಫ್ಲಾಪಿಯೂ ಇತ್ತು. ನಿಮ್ಮಿ ಬ್ರೆಡ್ಡಿನ ತುಣುಕುಗಳನ್ನು ತಿಂದು, ಕಾಗದದ ಪೊಟ್ಟಣ ಎಸೆದು, ಫ್ಲಾಪಿಯನ್ನು ತೆಗೆದುಕೊಂಡಳು.
ಒಮ್ಮೆ ಅಮ್ಮನ ಜೊತೆಗೆ ಹೋದಾಗ ಒಂದು ಮನೆಯಲ್ಲಿ ಕಂಪ್ಯೂಟರ್ ನೋಡಿದ್ದಳು. ಆ ಮನೆಯಲ್ಲೊಬ್ಬ ಕಾಲೇಜಿಗೆ ಹೋಗುವ ಹುಡುಗನಿದ್ದ. ಆತ ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿದ್ದ. ಅದನ್ನು ನಿಮ್ಮಿ ನೋಡಿದ್ದಳು. ಅಲ್ಲಿ ಮೇಜಿನ ಮೇಲೆ ಇದ್ದ ಕೆಲವು ಫ್ಲಾಪಿಗಳನ್ನೂ, ಅವುಗಳನ್ನು ಕಂಪ್ಯೂಟರಿಗೆ ತುರುಕಿಸುವುದನ್ನೂ ಆಕೆ ಗಮನಿಸಿದ್ದಳು. ಆಕೆಗೆ ಈಗ ಕಸದ ತೊಟ್ಟಿಯಲ್ಲಿ ಸಿಕ್ಕ ಫ್ಲಾಪಿ ಕಂಪ್ಯೂಟರಿನಲ್ಲಿ ಬಳಕೆಯಾಗುವಂತಹುದು ಎಂದು ಮನವರಿಕೆಯಾಗಿತ್ತು. ಇದನ್ನು ತೆಗೆದುಕೊಂಡು ಹೋಗಿ ಆ ಹುಡುಗನಿಗೆ ಕೊಟ್ಟರೆ ಏನಾದರೂ ಹಣ ಸಿಗಬಹುದೇ ಎಂಬ ಆಸೆ ಸಹಜವಾಗಿಯೇ ಮೂಡಿತು. ನಿಮ್ಮಿ ಫ್ಲಾಪಿಯನ್ನು ಹಿಡಿದುಕೊಂಡು ಅಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಹೋದಳು. ಆ ಹುಡುಗನಿಗೆ ಎಲ್ಲ ವಿವರಿಸಿ ಫ್ಲಾಪಿ ಕೊಟ್ಟಳು. ಅವಳು ಅಂದುಕೊಂಡಂತೆ ಆತ ಹಣವನ್ನೇನೂ ಕೊಡಲಿಲ್ಲ. ಫ್ಲಾಪಿಯನ್ನೂ ಉಡಾಫೆಯಿಂದಲೇ ಕಂಪ್ಯೂಟರಿಗೆ ತುರುಕಿಸಿದ.
ಆತ ಫ್ಲಾಪಿಯನ್ನು ಕಂಪ್ಯೂಟರಿಗೆ ಹಾಕಿ ಕೀಬೋರ್ಡಿನಲ್ಲಿ ಏನೇನೋ ಕುಟ್ಟತೊಟಗಿದ. ಮೌಸ್ ಹಿಡಿದು ಏನೇನೋ ಮಾಡಿದ. ನಿಮ್ಮಿಗೆ ಏನೂ ಅರ್ಥವಾಗಲಿಲ್ಲ. ತನಗೆ ಈತ ಹಣ ಕೊಡುತ್ತಾನೋ ಇಲ್ಲವೋ ಎಂದೇ ಆಕೆಗೆ ಚಿಂತೆ. ಆತನಂತೂ ಕಂಪ್ಯೂಟರಿನಲ್ಲೇ ಮಗ್ನನಾಗಿ ಬಿಟ್ಟ. ನಿಮ್ಮಿ ತನಗೆ ಏನಾದರೂ ಸಿಗಬಹುದೇನೋ ಎಂಬ ಆಸೆಯಲ್ಲಿ ನಿಂತೇ ಇದ್ದಳು. ಕಂಪ್ಯೂಟರಿನ ಪರದೆಯಲ್ಲಿ ಏನೇನೋ ಚಿತ್ರಗಳು ಮೂಡಿಬರುತ್ತಿದ್ದವು. ಕೊನೆಗೊಮ್ಮೆ ಆತ ಬಾಯಿಬಿಟ್ಟ. "ನಿಮ್ಮೀ, ನೀನು ತಂದಿರುವ ಫ್ಲಾಪಿಯಲ್ಲಿ ಏನೇನೋ ಇದೆ ಗೊತ್ತಾ? ಅದನ್ನು ಎಸೆದು ಹೋದವನನ್ನು ನೀನು ಗುರುತು ಹಿಡಿಯಬಲ್ಲೆಯಾ?". ನಿಮ್ಮಿಗೆ ಸರಿಯಾಗಿ ಅರ್ಥವಾಗಲಿಲ್ಲ. ಆತ ಇನ್ನೊಮ್ಮೆ ಕಂಡರೆ ಗುರುತು ಹಿಡಿಯಬಲ್ಲೆ ಎಂದಳು. ಆದರೆ ಅದು ಯಾಕೆ ಎಂದು ಕೇಳಲು ಅವಳಿಗೆ ಧೈರ್ಯವಾಗಲಿಲ್ಲ.
ಆತ ಫೋನ್ ಎತ್ತಿಕೊಂಡು ಮಾತನಾಡತೊಡಗಿದಾಗ ನಿಮ್ಮಿ ಇನ್ನು ತನಗೆ ಏನೂ ದೊರೆಯಲಾರದು ಎಂದು ಅಲ್ಲಿಂದ ಕಾಲು ಕೀಳತೊಡಗಿದಳು. ಆದರೆ ಆತ ಆಕೆಗೆ ಅಲ್ಲೇ ನಿಲ್ಲಲು ಹೇಳಿದ. ಸ್ವಲ್ಪ ಹೊತ್ತಿನಲ್ಲಿ ಕೆಲವು ಪೋಲೀಸರು ಬಂದರು. ನಿಮ್ಮಿಗೆ ಭಯವಾಗತೊಡಗಿತು. ಆದರೆ ಪೋಲೀಸಿನವರು ಆಕೆಗೆ ಧೈರ್ಯ ತುಂಬಿದರು. ಆ ಬೈಕಿನಲ್ಲಿ ಬಂದ ವ್ಯಕ್ತಿ ಮತ್ತು ಬೈಕು ಮತ್ತೆ ಕಂಡರೆ ಗುರುತು ಹಿಡಿಯ ಬಲ್ಲೆಯಾ ಎಂದು ವಿಚಾರಿಸಿದರು. ಬೈಕಿನ ಬಲದ ಬದಿಯಲ್ಲಿದ್ದ ಡಬ್ಬದ ಮೇಲಿದ್ದ ಹಕ್ಕಿಯ ಚಿತ್ರ ನಿಮ್ಮಿಯ ನೆನಪಿಗೆ ಬಂತು. ಅದನ್ನೇ ವಿವರಿಸಿದಳು. ಪೋಲೀಸರಿಗೆ ಖುಷಿಯಾಯಿತು.
ಪೋಲೀಸರೇನೋ ಹೋದರು. ನಿಮ್ಮಿಗೆ ಮಾತ್ರ ಏನೂ ಅರ್ಥವಾಗಲಿಲ್ಲ. ಅಮ್ಮನಿಗೆ ಕೇಳಿದಳು. ಅಮ್ಮನಿಗೂ ಪೂರ್ತಿ ಅರ್ಥವಾಗಿರಲಿಲ್ಲ. ಆ ಹುಡುಗ ಮತ್ತು ಪೋಲೀಸರ ಮಾತಿನಿಂದ ಆಕೆಗೆ ತಿಳಿದು ಬಂದುದೇನೆಂದರೆ ಬೈಕಿನಲ್ಲಿ ಬಂದ ವ್ಯಕ್ತಿ ಒಬ್ಬ ಕೆಟ್ಟ ವ್ಯಕ್ತಿ. ಪೋಲೀಸರಿಗೆ ಬೇಕಾದವ. ಆತ ಏನೋ ಕಿತಾಪತಿ ನಡೆಸಲು ದೊಡ್ಡದೊಂದು ಯೋಜನೆ ಹಾಕಿದ್ದ. ಅದರ ವಿವರಗಳು ಫ್ಲಾಪಿಯಲ್ಲಿದ್ದವು. ಅಂತೂ ನಿಮ್ಮಿಗೆ ಎಣಿಸಿದಂತೆ ಹಣ ಸಿಗಲಿಲ್ಲ. ಆದರೆ ತಾನು ಫ್ಲಾಪಿ ತಂದುದು ಪೋಲೀಸರಿಗೆ ಸಹಾಯವಾಯಿತು ಎಂಬ ಅಂಶ ಮಾತ್ರ ಆಕೆಗೆ ಏನೋ ಒಂದು ಚಿಕ್ಕ ತೃಪ್ತಿ ನೀಡಿತು.
ಇದು ನಡೆದು ಸುಮಾರು ಒಂದು ವಾರ ಕಳೆದಿತ್ತು. ಒಂದು ದಿನ ಅದೇ ಮನೆಯವರು ನಿಮ್ಮಿಯನ್ನು ಕರೆದು ತರಲು ಆಕೆಯ ಅಮ್ಮನಿಗೆ ಹೇಳಿದರು. ನಿಮ್ಮಿ ಬಂದಾಗ "ಬಾ ನಡೆ, ನಮ್ಮ ಜೊತೆ. ಪೋಲೀಸ್ ಸ್ಟೇಶನ್ನಿಗೆ ಹೋಗಬೇಕು" ಎಂದಾಗ ಆಕೆಗೆ ಸ್ವಲ್ಪ ಭಯವಾಯಿತು. ಆದರೂ ಅವರನ್ನು ಒಮ್ಮೆ ನೋಡಿ ಮಾತನಾಡಿ ಅನುಭವವಿದ್ದುದರಿಂದ ಪೋಲೀಸ್ ಸ್ಟೇಶನ್ನಿಗೆ ಮನೆಯವರು ಮತ್ತು ಅಮ್ಮನ ಜೊತೆಗೆ ಹೋದಳು. ಸ್ಟೇಶನ್ನಿನಲ್ಲಿ ಆಕೆಯನ್ನು ತುಂಬ ಹೊಗಳಿ ಅವಳಿಗೆ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟರು. ಜೊತೆಗೆ ಶಾಲೆಗೆ ಉಚಿತವಾಗಿ ಸೇರ್ಪಡೆ. ನಿಮ್ಮಿಯಿಂದಾಗಿ ಒಬ್ಬ ಕುಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕೇಡಿ ಸಿಕ್ಕಿಬಿದ್ದಿದ್ದ. ನಿಮ್ಮಿಗೆ ಇನ್ನು ಮುಂದೆ ತಾನೂ ಇತರ ಮಕ್ಕಳಂತೆ ಶಾಲೆಗೆ ಹೋಬಹುದು, ಹೊಟ್ಟೆ ತುಂಬ ತಿನ್ನಬಹುದು ಎಂದು ಖುಷಿಯಾಯಿತು.
-ಯು. ಬಿ. ಪವನಜ
(ಹ್ಹೆ ಹ್ಹೆ, ನನಗೆ ಕಥೆ ಬರೆಯಲೂ ಗೊತ್ತಿದೆ ಎಂದರೆ ನೀವು ಈಗ ನಂಬಲೇ ಬೇಕು
)

- Login or register to post comments
- 1610 hits
- Email this page





RSS:
ಪ್ರತಿಕ್ರಿಯೆಗಳು
ಹೊ ಹೋ ನಂಬ್ತೀವಿ
ಕಥೆಯ ಮನೆ ಕಟ್ಟಲು ಪ್ಲಾಟಿನ (plot) ಸೈಟು ತಗೊಂಡು ಪ್ಲಾನು ಹಾಕಿದ್ದೀರಿ. ಮನೆ ಕಟ್ಟಿ. ನೀವು ಕಟ್ಟುವ ಕಥೆಯ ಮನೆಗಳು ಚೆನ್ನಾಗಿರುತ್ತವೆ ಅನ್ನಿಸುತ್ತೆ, ಈ ಪ್ಲಾನು ನೋಡಿದರೆ. ಬರೀರೀ ಸಾರ್.
ಬಹುಮುಖಿ
ಸಾರ್, ತುಂಬಾ ಚೆನ್ನಾಗಿ ಬರೆದಿದ್ದೀರ. ನಿಮ್ಮನ್ನು ಬಹುಮುಖಿ ಎಂದು ಕರೆದರೆ ತಪ್ಪಾಗಲಾರದು. ಕೊನೆಯವರೆವಿಗೆ ಸಸ್ಪೆನ್ಸ್ ಚೆನ್ನಾಗಿ ಕಾಪಾಡಿದ್ದೀರಿ.
ಈ ವಾರದ ಸುಧಾ ವಾರಪತ್ರಿಕೆಯಲ್ಲಿ ಬಂದಿರುವ ಗೂಗಲ್ ಅರ್ಥ್ ಲೇಖನ ಓದಿದ ಮೇಲೆ ನಾನು ನಿಮ್ಮ ಬೀಸಣಿಗೆಯ ಒಂದು ರೆಕ್ಕೆಯಾಗಿದ್ದೀನಿ.
ವಿಶ್ವಕನ್ನಡವನ್ನು ಎಬ್ಬಿಸಿ ಸಾರ್, ಬಹಳ ಕಾಲದಿಂದ ಮಲಗಿದೆ.
---
ತವಿಶ್ರೀನಿವಾಸ
ಭುಜಂಗಯ್ಯನ ದಶಾವತಾರ
ಭುಜಂಗಯ್ಯನಂತೆ ದಶಾವತಾರ ಇವರದು
--
"ಹೊಸ ಚಿಗುರು, ಹಳೆ ಬೇರು"
ಧನ್ಯವಾದಗಳು
ಧನ್ಯವಾದಗಳು.
ವಿಶ್ವಕನ್ನಡವನ್ನು ಯುನಿಕೋಡ್‌ಗೆ ಬದಲಿಸಿ ನಂತರ ಹೊಸರೂಪದಲ್ಲಿ ಕೊಡುವ ಯತ್ನ ಸಾಗಿದೆ. ಅದಕ್ಕಾಗಿ ಕೆಲಸ ಮಾಡುತ್ತಿರುವವರು ಇಲ್ಲೇ
ಇದ್ದಾರೆ!
ಸಿಗೋಣ,
ಪವನಜ
-----------
Think globally, Act locally
ಒಳ್ಳೆಯ
ಒಳ್ಳೆಯ ಕತೆ. ಕನ್ನಡದ ಕತೆಗಾರರು ಆಧುನಿಕತೆಗೆ ಸ್ಪಂದಿಸಬೇಕಾದ ಅಗತ್ಯವಿರುವಾಗ ನೀವು ಕತೆಗಾರರಾಗಿರುವುದು ಚೆನ್ನಾಗಿಯೇ ಇದೆ. ಅಧುನಿಕ ಅವಿಷ್ಕಾರಗಳನ್ನೊಳಗೊಂಡ, ಆಧುನಿಕತೆ ಮತ್ತು ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳನ್ನೊಳಗೊಂಡ ಇನ್ನಷ್ಟು ಚೆಂದದ ಕತೆಗಳು ನಿಮ್ಮಿಂದ ಬರಲಿ
ಮೊದ್ಮಣಿ
ಇದಕ್ಕೆ ಪ್ರಶಸ್ತಿಯೂ ಬಂದಿತ್ತು!
ಅಕ್ಷರ ಫೌಂಡೇಶನ್ ಮತ್ತು ಪ್ರಜಾವಾಣಿ ಸಂಯುಕ್ತವಾಗಿ ನಡೆಸಿದ ಮಕ್ಕಳ ಕಥಾಸ್ಪರ್ಧೆಯಲ್ಲಿ ಈ ಕಥೆಗೆ ಮೂರನೆಯ ಬಹುಮಾನ ಬಂದಿತ್ತು! ನಾನು ಇದುತನಕ ಬರೆದಿದ್ದು ಇದು ಒಂದೇ ಕಥೆ ಎಂದರೆ ನಂಬುತ್ತೀರಾ?
ಸಿಗೋಣ,
ಪವನಜ
-----------
Think globally, Act locally
ಒಳ್ಳೆಯದೇ ಆಯಿತು.;)
ಹಾಗಿದ್ದರೆ ತುಂಬಾ ಒಳ್ಳೆಯದೇ.. ಇನ್ನಷ್ಟು ಕತೆ... ಇನ್ನಷ್ಟು ರೋಚಕತೆ, ಮತ್ತೊಂದಿಷ್ಟು ಚಿಂತನೆ.. ಹರಿದು ಬರಲಿ ನಿಮ್ಮ ಲೇಖನಿಯಿಂದ..
ಮೊದ್ಮಣಿ
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ
> ಹರಿದು ಬರಲಿ ನಿಮ್ಮ ಲೇಖನಿಯಿಂದ...
ನಾನು ಲೇಖನಿ ಬಳಸಿ ಬರೆದ ಲೇಖನವಲ್ಲ ಇದು. ನಾನು ಲೇಖನಿ ಬಳಸಿ ಬರೆದ ಲೇಖನ ಸದ್ಯ ಯಾವುದೂ ಇಲ್ಲ. ಸಾಮಾನ್ಯವಾಗಿ ನಾನು ಲೇಖನಗಳನ್ನು ನೇರವಾಗಿ ಗಣಕದಲ್ಲೇ ಬೆರಳಚ್ಚು ಮಾಡುತ್ತೇನೆ. ಆಧುನಿಕ ಕುಮಾರವ್ಯಾಸರು ನಾವು -
"ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ"
"ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ"
ಅಡಿಗರನ್ನೇ ತಿರುಚುವುದಾದರೆ-
"ಕುಟ್ಟುವೆವು ನಾವು ಕೀಲಿಮಣೆಯೊಂದನು"
ಸಿಗೋಣ,
ಪವನಜ
-----------
Think globally, Act locally
ವಾಹ್! ವಾಹ್!
ವಾಹ್ ವಾಹ್ ಚೆನ್ನಾಗಿ ಹೇಳಿದ್ರಿ ಸರ್. ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀವು ಬಂದಿದ್ರಿ.
ಸಾರ್ ಜಾಸ್ತಿ ಕುಟ್ತಿದ್ರೆ ಕೈ ನೋವು ಬರೋಲ್ವಾ?
ನೀವು ಈವರೆಗೆ ಬರೆದಿರೋದನ್ನೆಲ್ಲವನ್ನೂ ನಮಗೆ ಕರುಣಿಸಿ ಸರ್.
===
ತವಿಶ್ರೀನಿವಾಸ
ಖಡ್ಗಕ್ಕಿಂತ ಹರಿತ
ಹಾಗಿದ್ದರೆ ಖಡ್ಗಕ್ಕಿಂತ ಕೀಲಿಮಣೆ ಹರಿತ ಎನ್ನಬಹುದೇ
ಕನಸ್ಸಿನಲ್ಲಿ ಬರುವುದು ಏನು?
>ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀವು ಬಂದಿದ್ರಿ.
ಏನ್ ಸಾರ್, ನಾನು ನಿಮ್ಮನ್ನು ಕನಸ್ಸಿನಲ್ಲೂ ಕಾಡುವ ಭೂತವಾದೆನೆ?
ಸಿಗೋಣ,
ಪವನಜ
-----------
Think globally, Act locally
ಸುಂದರವದನ
ನನ್ನ ಕನಸಿನಲಿ ಬಂದ ಸುಂದರ ವದನವನ್ನು ಭೂತ ಅನ್ನೋಕ್ಕಾಗತ್ಯೇ?
---
ತವಿಶ್ರೀನಿವಾಸ
ಶಿಶು ಸಾಹಿತ್ಯ ?
ಕನ್ನಡದಲ್ಲಿ ತಂತ್ರಜ್ಞಾನ ಸಂಬಂಧೀ ಬರೆಹಗಳನ್ನು ಓದಲು ಸಾಧ್ಯವಾಗುವಂತೆ ಬರೆಯುವ ವಿಧಾನವನ್ನು ಪರಿಚಯಿಸಿದ ಪವನಜ ಕತೆ ಬರೆದಿರುವುದು ಆಶ್ಚರ್ಯ ಹುಟ್ಟಿಸಲಿಲ್ಲ. ಆದರೆ ಅದನ್ನು ಶಿಶು ಸಾಹಿತ್ಯ ಎನ್ನುವ ಮೂಲಕ ನಮ್ಮನ್ನೆಲ್ಲಾ ದೊಡ್ಡವರನ್ನಾಗಿಸಿದ್ದು ಮಾತ್ರ ಅಧಿಕ ಪ್ರಸಂಗ. ಯಾಕೇ...ನಮ್ಮನ್ನು ಮಕ್ಕಳು ಅಂದ್ಕೊಂಡಿದೀರಾ...?
ಈ ಜಗಳವನ್ನು ಬದಿಗಿರಿಸುತ್ತೇನೆ. ಪವನಜರ ಈ ಪ್ರಯತ್ನ ಇಷ್ಟವಾಯಿತು. ಮಕ್ಕಳಿಗಾಗಿ ಈಗ ಯಾರೂ ಬರೆಯುತ್ತಿಲ್ಲ. ನವೋದಯ ಕಾಲದ ಅತಿರಥ ಮಹಾರಥರೆಲ್ಲರೂ ಮಕ್ಕಳಿಗಾಗಿ ಒಂದಷ್ಟು ಬರೆದರು. ನವ್ಯದ ಹೊತ್ತಿಗೆ ಈ ಗುಣ ಮಾಯವಾಯಿತು. ಸುಮತೀಂದ್ರ ನಾಡಿಗ್, ಎಚ್.ಎಸ್. ವೆಂಕಟೇಶಮೂರ್ತಿಯವರಂಥ ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ನವ್ಯ ಯುಗದ ಪ್ರಮುಖರು ಮಕ್ಕಳಿಗೆ ಬೇಕಾದ ಸಾಹಿತ್ಯದ ಬಗ್ಗೆ ಚಿಂತಿಸಲೇ ಇಲ್ಲ. ಇದರ ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಾ ಇದ್ದೇವೆ. ಕನ್ನಡ ಉಳಿಸಲು ಹೋರಾಟ ನಡೆಸಬೇಕಾಗಿದೆ!
ಕನ್ನಡ ಸಾಹಿತ್ಯದ ಜತೆಗೆ ನಮ್ಮ ತಲೆಮಾರಿನವರಿಗೆ ಸಂಬಂಧ ಕಲ್ಪಿಸಿದ್ದು ನವೋದಯ ಕಾಲದ ಬರೆಹಗಳು. ಆಮೇಲಿನ ಬರೆಹಗಾರರು ತಮ್ಮ ಓರಗೆಯವರಿಗಾಗಿ ಬರೆದರೇ ಹೊರತು ತಮಗಿಂತ ಕಿರಿಯರಿಗಲ್ಲ. ಇದು ಈಗಲೂ ಮುಂದುವರಿಯುತ್ತಿದೆ.
ಅನುಪಮಾ ನಿರಂಜನ
ನಾನು ಸಣ್ಣವನಿದ್ದಾಗ ಅನುಪಮಾ ನಿರಂಜನರವರ 'ದಿನಕ್ಕೊಂದು ಕಥೆ' ಓದಿದ ಜ್ಞಾಪಕ. ಕಥೆಗಳು ಬಹಳ ಚೆನ್ನಾಗಿರುತ್ತಿದ್ದವು. ಅಣ್ಣನ ಜೊತೆ ಗುದ್ದಾಡಿ ಪುಸ್ತಕ ಓದಲು ಪಡೆಯಬೇಕಿತ್ತು. ಇವಲ್ಲದೇ ಪ್ರತಿ ವಾರವೂ 'ಬಾಲವನದಲ್ಲಿ ಕಾರಂತಜ್ಜ' ತಪ್ಪದೇ ಓದುತ್ತಿದ್ದ ನೆನಪು. ಕಾರಂತಜ್ಜರಿಗೆ ಹಲವು ಬಾರಿ ಪತ್ರ ಬರೆದದ್ದೂ ಉಂಟು, ಆದರೆಂದೂ ಉತ್ತರವೇ ಬರಲಿಲ್ಲವೆಂಬ ಬೇಜಾರು ಇವತ್ತಿಗೂ ಇದೆ.
'ಚಂಪಕ'ವೆಂಬ ಮಾಸಿಕ (?) ತಪ್ಪು ತಪ್ಪು ಕನ್ನಡದಲ್ಲಿ ಪ್ರಕಟವಾಗುತ್ತಿತ್ತು. ಸಿ ಬಿ ಎಸ್ ಸಿ ಸ್ಕೂಲಿನಲ್ಲಿ ಅದರ ಆಂಗ್ಲ ಆವೃತ್ತಿ ತರಿಸುತ್ತಿದ್ದರಿಂದ ಇದೂ ಕೆಲವು ಕಾಪಿಗಳಂತೆ ಬರುತ್ತಿತ್ತು.
'ಬಾಲಮಂಗಳ'ವೆಂಬ ಕಾರ್ಟೂನ್ ಪತ್ರಿಕೆ ಬಹಳ ಚೆನ್ನಾಗಿರುತ್ತಿತ್ತು. 'ಡಿಂಗ'ವೆಂಬ ಇಲಿಯೂ ಅಲ್ಲದ ಮನುಷ್ಯನೂ ಅಲ್ಲದ ವಿಚಿತ್ರ ಸೂಪರ್ಮ್ಯಾನ್(ಸೂಪರ್ ಇಲಿ-ಮ್ಯಾನ್?) ಅದರಲ್ಲಿ ಬಹುದೊಡ್ಡ ಆಕರ್ಷಣೆ.
ಇನ್ನು ಚಂದಮಾಮದ ಬಗ್ಗೆ ಹೇಳಬೇಕೆ? ಅದಂತೂ ಎಲ್ಲರೂ ಓದಿರುವಂತಹ ಪುಸ್ತಕ, ಬಹುಶಃ.
ಅಮರ ಚಿತ್ರ ಕಥೆ ಕೂಡ ಕನ್ನಡದಲ್ಲಿ ಓದಿದ ಜ್ಞಾಪಕ. ನನ್ನ ಬಳಿಯೇ ೨೦ಕ್ಕೂ ಹೆಚ್ಚು ಪುಸ್ತಕಗಳು ಇದ್ದವು. 'ನೀನು ದೊಡ್ಡವನಾಗಿದ್ದೀ. ಯಾರಿಗಾದರೂ ಸಣ್ಣಮಕ್ಕಳಿಗೆ ಕೊಡು' ಎಂದು ಕಾಲೇಜಿನಲ್ಲಿದ್ದಾಗ ಅಮ್ಮ ಅಕ್ಕನ ಮಗಳಿಗೆಂದು ಅವುಗಳನ್ನ ರವಾನಿಸಿಯಾದ ಮೇಲೆ ಅವುಗಳ ಮುಖ ನೋಡಿಲ್ಲ.
'ಇದು ನಮ್ಮ ಭಾರತ' ಎಂಬ 'ಕ್ಲಾಸಿಕ್' ಪುಸ್ತಕಗಳನ್ನೂ ಓದಿದ ನೆನಪು. ಈ ಪುಸ್ತಕಗಳು ಬಹುಶಃ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗುತ್ತಿದ್ದವು. ಭಾರತದ ಸಂಸ್ಕೃತಿಯ ಬಗ್ಗೆ ಹಲವು ಲೇಖನಗಳು ಮಕ್ಕಳಿಗಾಗಿಯೇ ಬರುತ್ತಿದ್ದವು. ಅಂತಹ ಪುಸ್ತಕಗಳು ಈಗ ಪ್ರಕಟವಾದರೆ ಕನ್ನಡ ಎಷ್ಟೋ ಬೆಳೆಯುವುದರಲ್ಲಿ ಸಂದೇಹವಿಲ್ಲ.
ಇನ್ನು, ಮೈಸೂರು ವಿಶ್ವವಿದ್ಯಾಲಯದವರು ಪುಟಾಣಿಗಳಿಗೆ ಒಂದು ವಿಜ್ಞಾನ ಕುರಿತ ಪತ್ರಿಕೆ ಪ್ರಕಟಿಸುತ್ತಿದ್ದರು. (ಅದರ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ಮೈಸೂರಿನ ಆಯುರ್ವೇದ ಕಾಲೇಜಿನ ಎದುರು ಇದ್ದ ಗ್ರಂಥಾಲಯಕ್ಕೆ ಸಾಧ್ಯವಾದಾಗಲೆಲ್ಲ ಲಗ್ಗೆ ಇಟ್ಟು ಓದುತ್ತಿದ್ದೆ, ಶಾಲೆಯಲ್ಲಿದ್ದಾಗ) ಆ ಪುಸ್ತಕದಲ್ಲಿ ಎಷ್ಟೋ ವೈಜ್ಞಾನಿಕ ಮಾಹಿತಿ ನನ್ನ ಚಿಂತನಾ ಕ್ರಮವನ್ನೇ ಬದಲಿಸಿದ್ದವೆಂದು ಹೇಳಿದರೆ ಸುಳ್ಳಾಗದು. ಯಾರೋ ಪುಣ್ಯಾತ್ಮರು ಪ್ರಕಟಿಸುತ್ತಿದ್ದ ಪುಸ್ತಕಗಳು... ನನಗೆ ಪ್ಯಾಪೆಮಾಷೆ ಮಾಡುವುದನ್ನೂ, ಪ್ಲಾಸ್ಟರ್ ಆಫ್ ಪ್ಯಾರಿಸ್ ಉಪಯೋಗಿಸುವುದನ್ನು, ಕೊನೆಗೆ ಗಾಳಿಯಂತ್ರವನ್ನುಪಯೋಗಿಸಿ ಹವಾಮಾನ ಕಂಡು ಹಿಡಿಯುವುದನ್ನು, ಆಟದ ಪುಟ್ಟ ದೋಣಿಯನ್ನು ಸುಟ್ಟ ಪೇಪರಿನಿಂದ ಮುಂದೆ ತಳ್ಳುವುದನ್ನೂ ತಿಳಿಸಿಕೊಟ್ಟು ಶಾಲೆಯ ದಿನಗಳನ್ನು Memorable ಮಾಡಿದ ಪುಸ್ತಕವದು!
ಇನ್ನು ಮಕ್ಕಳ ಕಥೆಗಳಿಗೆ ವಾಪಸ್ ಬಂದರೆ, ಪಳಕಳ ಲಕ್ಷ್ಮೀನಾರಾಯಣ ಭಟ್ಟರು (ಹೆಸರು ಸರಿಯೇ?) ಎಂಬುವರ ಕಥೆಗಳನ್ನೂ ಓದಿದ ನೆನಪು.
ಒಟ್ಟಾರೆ ಕನ್ನಡದಲ್ಲಿ ಮಕ್ಕಳಿಗಾಗಿ (ಒಳ್ಳೆಯ) ಪುಸ್ತಕಗಳು ಮತ್ತು ಲೇಖನಗಳು ಈಗ ಕಡಿಮೆಯೆ. ಹಿಂದೆ ಕಡಿಮೆ ಇದ್ದವು ಎಂಬುದನ್ನು ನಾನೊಪ್ಪುವುದಿಲ್ಲ. (ಐದು ಹತ್ತು ವರ್ಷಗಳ ಹಿಂದೆಯೇ ಎಷ್ಟೊಂದು ಇದ್ದವು ಎಂಬುದನ್ನು ಮೇಲೆ ಪಟ್ಟಿ ಮಾಡಿದ್ದೇನಷ್ಟೆ!)
--
"ಹೊಸ ಚಿಗುರು, ಹಳೆ ಬೇರು"
definition
ಯಾರಾದರೂ, ಶಿಶು ಸಾಹಿತ್ಯ, ಹಿರಿಯರ ಸಾಹಿತ್ಯ, ಮಹಿಳಾ ಸಾಹಿತ್ಯ, ವಯಸ್ಸಾದವರ ಸಾಹಿತ್ಯ ಎಂದು ವರ್ಗೀಕರಣ ಮಾಡಲು ಸಾಧ್ಯವೇ? ಹಾಗೇ ಮಾಡುವುದೇ ಆದರೆ ಅವುಗಳ ವ್ಯುತ್ಪತ್ತಿ (definition) ಏನು?
ಏನಿದು?
ನಾನೇನೋ ಬರ್ದ್ರೆ ನೀವೇನೋ ಬರ್ದಿದ್ದೀರಲ್ರೀ! ನಿಮ್ಮ ಕಾಮೆಂಟ್ ಬೇರೊಂದು ಕಡೆ ಹಾಕಬೇಕ್ಕಿತ್ತೇನೊ, ನೋಡಿ.
--
"ಹೊಸ ಚಿಗುರು, ಹಳೆ ಬೇರು"
ನಿಜ, ಆದರೆ ...
ಇಸ್ಮಾಯಿಲ್ ರವರ ವಾದವನ್ನು ಒಪ್ಪುತ್ತೇನೆ. ನವೋದಯ ಕಾಲದಲ್ಲಿ ಬಂದಷ್ಟು ಮಕ್ಕಳ ಸಾಹಿತ್ಯ ಬಹುಶಃ ನಂತರದ ಕಾಲಘಟ್ಟಗಳಲ್ಲಿ ಬಂದಿಲ್ಲ. 'ಇದರ ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಾ ಇದ್ದೇವೆ' ಎಂಬ ಅನುಮಾನ ನನಗೂ ಇದೆ. ಆದರೆ ಇದು ಇಷ್ಟು ಸರಳವಾದ ವಿಷಯವಲ್ಲ ಎನ್ನಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಪಂಥ(Ideology ಎಂಬ ಅರ್ಥದಲ್ಲಿ)ಕ್ಕೆ ಬದ್ಧನಾಗಿ ಬರೆಯುವ ಸಾಹಿತಿಯೊಬ್ಬನಿಂದ ಅದಕ್ಕೆ ಹೊರತಾದ, ಅದರ ಮೂಲ ಆಶಯಕ್ಕೆ ಹೊಂದಿಕೆಯಾಗದ ಕ್ಷೇತ್ರದಲ್ಲಿ ಬರವಣಿಗೆಯನ್ನು ಅಪೇಕ್ಷಿಸುವುದೇ ತಪ್ಪು ಎಂಬುದು ನನ್ನ ಅಭಿಪ್ರಾಯ. ನವ್ಯದ ಸಂದರ್ಭದಲ್ಲಿ ಬಂದ ಬರಹಗಳನ್ನು ಗಮನಿಸಿದರೆ, ನಾನು ಹೇಳಲೆತ್ನಿಸುತ್ತಿರುವುದು ತಿಳಿಯುತ್ತದೆ. ಆತನೇ ಇಷ್ಟಪಟ್ಟು ಬರೆದರೆ ಮಾತ್ರ ಅದರಲ್ಲಿ ಸತ್ವ ಉಳಿದೀತು, ಯಾವುದೋ ಹೊರ ಒತ್ತಡ ಅಥವಾ ಒತ್ತಾಯಕ್ಕೆ ಮಣಿದು ಬರೆದರಲ್ಲ. ನವ್ಯಕಾಲದ ಲೇಖಕರಿಗೆ ಶಿಶುಸಾಹಿತ್ಯ ರಚಿಸಲು ಸಾಧ್ಯವೇ ಇರಲಿಲ್ಲ ಅನ್ನಿಸುತ್ತದೆ.
ಈಗ ಏಳುವ ಪ್ರಶ್ನೆ, ಇಂತಹ ನಿರ್ದಿಷ್ಟ ಪಂಥಗಳಿಂದ ಹೊರಗುಳಿದವರು ಬರೆಯಬಹುದಿತ್ತಲ್ಲ ಎಂಬುದು. ಆ ಕೆಲಸ ಆಗಿಲ್ಲ. ಕಾಲ ಇನ್ನೂ ಮಿಂಚಿಲ್ಲ.
ಐಡಿಯಾಲಜಿ ಮತ್ತು
ಬರೆವಣಿಗೆಯ ಹಿಂದಿರುವ ಐಡಿಯಾಲಜಿ ಶಿಶುಸಾಹಿತ್ಯ ರಚನೆಗೆ ಅಡ್ಡಿಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ನಿರಂಜನರಿಗೂ ಒಂದು ಐಡಿಯಾಲಜಿ ಇತ್ತು. ಆದರೆ ಅವರು ಕಿರಿಯರ ವಿಶ್ವಕೋಶವನ್ನು ಸಂಪಾದಿಸುವಂಥ ಸಾಹಸಕ್ಕೆ ಕೈ ಹಾಕಿದರು. ಯಶಸ್ವಿಯೂ ಆದರು. ಪಂಜೆ ಮಂಗೇಶರಾಯರು ಬ್ರಿಟಿಶ್ ಆಡಳಿತವನ್ನು ನಾಗರಹಾವೇ... ಪದ್ಯದಲ್ಲಿ ಬಹಳ ಚೆನ್ನಾಗಿ ವ್ಯಕ್ತ ಪಡಿಸಿದ್ದಾರೆ. ಸೋವಿಯತ್ ಯೂನಿಯನ್ ಇದ್ದ ಕಾಲದಲ್ಲಿ ಬಂದ ಅನೇಕ ಮಕ್ಕಳ ಪುಸ್ತಕಗಳೂ ಐಡಿಯಾಲಜಿಯ ಅನಿವಾರ್ಯತೆಯಿಂದ ಹುಟ್ಟಿದವು. ಇವುಗಳಲ್ಲಿ ಹೆಚ್ಚಿನವು ಐಡಿಯಾಲಜಿಯನ್ನು ಮೀರಿ ನಿಂತ ಶಿಶು ಸಾಹಿತ್ಯ.
ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ
ಶಿಶು ಸಾಹಿತ್ಯದ ಬಗಗೆ ಕುತೂಹಲದ ಚರ್ಚೆ ಆರಂಭವಾಗಿದೆ. ಸಂತೋಷ. ಈ ವಿಷಯಕ್ಕೆ ಇನ್ನೊಂದು ಮಗ್ಗುಲು ಇದೆ. ಭಾರತದಲ್ಲಿ ಎಂದೂ, ಯಾವ ಕಾಲದಲ್ಲೂ ಶಿಶು ಸಾಹಿತ್ಯ ಇರಲೇ ಇಲ್ಲ. ಸಂಸ್ಕೃತ, ಹಳೆಗನ್ನಡ ಎಲ್ಲೂ ಮಕ್ಕಳಿಗಾಗಿ ಎಂದು ಪ್ರತ್ಯೇಕವಾಗಿ ಬರೆಯುವ ಅಭ್ಯಾಸ ಇರಲಿಲ್ಲ. ನಾನೇ ಮಗುವಾಗಿದ್ದ ಕಾಲ ನೆನೆಪಿಸಿಕೊಂಡರೆ ನನಗೆ ದೊಡ್ಡ ಕತೆ ಪುಸ್ತಕಗಳನ್ನು ಓದುವ ಆಸಕ್ತಿ ಇತ್ತೇ ಹೊರತು ಮಕ್ಕಳಿಗಾಗಿ ಎಂದು ಬರೆದ ಕತೆಗಳು ಅಷ್ಟು ಇಷ್ಟವಾಗುತ್ತಿರಲಿಲ್ಲ. ಮಕ್ಕಳು ವಯಸ್ಸಿನಲ್ಲಿ ಚಿಕ್ಕವರೇ ಹೊರತು ಮನೋಧರ್ಮದಲ್ಲಿ ಅಲ್ಲ. ಮತ್ತೆ ನನ್ನ ನೆನಪನ್ನೇ ನಂಬಿ ಹೇಳುವುದಾದರೆ ಎಲ್ಲ ಮಕ್ಕಳಿಗೂ ತಾವು ಬೇಗ ದೊಡ್ಡವರಾಗಬೇಕು ಎಂಬ ಆಸೆ ಇರುತ್ತದೆ. ನಾವೆಲ್ಲ ಹುಡುಗುರಾಗಿದ್ದಾಗ ದೊಡ್ಡವರು ಓದುತ್ತಿದ್ದ, ಹೇಳುತ್ತಿದ್ದ ಕತೆಗಳನ್ನೇ ಕೇಳುತ್ತಿದ್ದೆವು-ರಾಮಾಯಣ, ಮಹಾಭಾರತ ಇತ್ಯಾದಿ. ಮಕ್ಕಳಿಗೇ ಪ್ರತ್ಯೇಕ ಸಾಹಿತ್ಯ ಎಂಬುದು ಬಹುಶಃ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಮೂಡಿದ ವಿಚಾರ. ಬೆಳೆದು ಬಲಿತ ಮನಸ್ಸು ಮಗುತನವನ್ನು ನೆಪಿಸಿಕೊಂಡು, ಆರೋಪಿಸಿಕೊಂಡು, ಕಲ್ಪಿಸಿಕೊಂಡು, ಅಂಥ ಮನಸ್ಸಿಗೆ ಎಂದು ಕೃತಕವಾಗಿ ಬರೆದ ಸಾಹಿತ್ಯ. ಸಂಸ್ಕೃತದ ಪಂಚ ತಂತ್ರ ಕೂಡ ಮಕ್ಕಳಿಗಾಗಿ ಎಂದು ರಚಿತವಾದ ಕೃತಿಯಲ್ಲ. ಜಾನಪದ ಕತೆಗಳು ಕೂಡ ಕೇವಲ ಮಕ್ಕಳಿಗಾಗಿ ಇರುವ ಕತೆಗಳಲ್ಲ. ಮಕ್ಕಳಿಗೆ ಪ್ರಬುದ್ಧವಾದ ಮನಸ್ಸು ಇರುವುದಿಲ್ಲ ಎಂಬ ತಪ್ಪು ಕಲ್ಪನೆಯಿಂದ ಮಕ್ಕಳ ಸಾಹಿತ್ಯ ಎಂಬ ಪ್ರಕಾರವನ್ನು ಕಲ್ಪಿಸಿಕೊಂಡು ಒದ್ದಾಡುತ್ತಿದ್ದೇವೆ ಅನ್ನಿಸುತ್ತದೆ. ಈ ಬಗ್ಗೆ ನನ್ನ ಕಣ್ಣು ತೆರೆಸಿದವರು ಶ್ರೀ ಕೆ.ವಿ. ಸುಬ್ಬಣ್ಣನವರು. ಅವರೊಡನೆ ಮಾತಾಡುವವರೆಗೆ ಅಯ್ಯೋ ಕನ್ನಡದಲ್ಲಿ ಶಿಶು ಸಾಹಿತ್ಯ ಇಲ್ಲವಲ್ಲ ಎಂದು ನಾನೂ ಕೊರಗುತ್ತಿದ್ದೆ. ನಿಜವಾಗಿ ಶುಶುಸಾಶಿತ್ಯವೆಂದರೆ ಮಕ್ಕಳು ಬರೆದ ಕೃತಿಗಳೇ ಹೊರತು ಮಕ್ಕಳಿಗಾಗಿ ದೊಡ್ಡವರು ತಿಣುಕಿ ಬರೆದ ಕೃತಿಗಳಲ್ಲ.
ಈ ಮಾತುಗಳಿಗೂ ಪವನಜ ಅವರ ಕತೆಗೂ ಸಂಬಂಧವಿಲ್ಲ.ಶಿಶುಸಾಹಿತ್ಯದ ಬಗಗೆ ಸಂಪದದಲ್ಲಿ ಇಂದು ನೋಡಿದ ಮಾತುಗಳು ಇವನ್ನು ಪ್ರೇರಿಸಿವೆ.
ಇನ್ನಷ್ಟು ವಿವರ
ಓಎಲ್ಎನ್ ರ ಅಭಿಪ್ರಾಯವನ್ನು ಒಪ್ಪಲು ಮನಸ್ಸಾಗುತ್ತಿದೆ !!
ನಿನ್ನೆ ಇಸ್ಮಾಯಿಲ್ ರವರ ಉತ್ತರ ಓದಿದ ಮೇಲೆ ಈ ಬಗ್ಗೆ ಇನ್ನಷ್ಟು ಯೋಚಿಸುತ್ತಿದ್ದೆ. ಕಾವ್ಯ ಇರುವುದು ಓದುವುದಕ್ಕೆ, ಹಾಡುವುದಕ್ಕಲ್ಲ ಎನ್ನುತ್ತಿದ್ದ ರಾಮಚಂದ್ರ ಶರ್ಮರಾಗಲಿ, ಕೆ.ಎಸ್. ನರಸಿಂಹಸ್ವಾಮಿಯವರನ್ನು ಲೇವಡಿಮಾಡಲೆಂದೇ 'ಪುಷ್ಪಕವಿಯ ಪರಾಕು' ಬರೆದ ಅಡಿಗರಾಗಲಿ, ಲಕ್ಷೀನಾರಾಯಣ ಭಟ್ಟರನ್ನು ಕ್ಯಾಸೆಟ್ ಭಟ್ಟರೆಂದು ಗೇಲಿ ಮಾಡುತ್ತಿದ್ದ ಲಂಕೇಶರಾಗಲಿ ಮಕ್ಕಳಿಗಾಗಿ ಏನನ್ನೂ ಬರೆದಿದ್ದು ನನಗೆ ತಿಳಿದಿಲ್ಲ. ನವ್ಯರ ಮನೋಧರ್ಮ ಹೀಗಿರುವಾಗ ಶಿಶುಸಾಹಿತ್ಯವನ್ನು ಅವರಿಂದ ನಿರೀಕ್ಷಿಸುವುದು ಹೇಗೆ ಎಂದೆಲ್ಲಾ ಗೊಂದಲದಲ್ಲಿದ್ದೆ. ಇಸ್ಮಾಯಿಲ್ ರವರು ನೆನಪಿಸಿರುವ ನಿರಂಜನ, ಗೋವಿಂದ ಪೈ ಇವರೆಲ್ಲ ನವೋದಯ / ಪ್ರಗತಿಪರ ಎಂದು ಗುರುತಿಸುವ ಐಡಿಯಾಲಜಿಯಲ್ಲಿ ನಂಬಿಕೆಯಿಟ್ಟು ಬರೆದವರು. ಈ ಐಡಿಯಾಲಜಿಗಳ ಅಶಯವನ್ನು ಗಮನಿಸಿದರೆ ಅದು ಆಶ್ಚರ್ಯವಲ್ಲ ಎಂದುಕೊಳ್ಳುತ್ತ ನಾನು ಚಿಕ್ಕಂದಿನಲ್ಲಿ ಓದುತ್ತಿದ್ದ ಪುಸ್ತಕಗಳನ್ನು ನೆನಪಿಸಿಕೊಳ್ಳತೊಡಗಿದೆ. ಆದಷ್ಟು ಬೇಗ ದೊಡ್ಡವನಾಗಬೇಕೆಂಬ ಆಸೆ ನನಗೂ ಇತ್ತು. ಮಕ್ಕಳ ವಿಭಾಗದ ಕಥೆ, ಪದ್ಯಗಳನ್ನು ಓದುತ್ತಲೇ 'ದೊಡ್ಡವರ' ಧಾರಾವಾಹಿಗಳನ್ನು ಓದುತ್ತಿದ್ದಾಗಿನ ಥ್ರಿಲ್ ನೆನಪಿದೆ.
ಬಹುಶಃ ನಾವು ತಲೆಕೆಡಿಸಿಕೊಳ್ಳಬೇಕಾದದ್ದು ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ. ಏನನ್ನು ಓದಬೇಕು ಎಂಬುದರ ಬಗ್ಗೆಯಲ್ಲ ಅನ್ನಿಸುತ್ತಿದೆ.
ಈ ವಿಷಯದಲ್ಲಿ ಓಎಲ್ಎನ್ ರಿಂದ ಇನ್ನಷ್ಟು ವಿವರ ನಿರೀಕ್ಷಿಸುತ್ತಿದ್ದೇನೆ.
ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು
ಪ್ರಶಾಂತ ಪಂಡಿತರ ಪತ್ರಕ್ಕೆ ಧನ್ಯವಾದಗಳು. ಶಿಶು ಸಾಹಿತ್ಯ ಎನ್ನುವುದು ಕನ್ನಡದಲ್ಲಿ ಬಾಲಿಶ ಸಾಹಿತ್ಯವಾಗಿರುವುದೇ ಹೆಚ್ಚು. ಸಮರ್ಥವಾದ, ಸದೃಢವಾದ ಬರವಣಿಗೆಯನ್ನು ಮಾಡಲಾರದವರು ಬೇಕಾಬಿಟ್ಟಿ ಬರೆದು ನಮ್ಮದು ಶಿಶು ಸಾಹಿತ್ಯ, ನಮಗೆ ಮನ್ನಣೆ ನೀಡಿ, ನಮಗೆ ಗೌರವಕೊಡಿ ಎಂದು ಯಾಚಿಸುವ ಉಪಾಯವಾಗಿಬಿಟ್ಟಿದೆ.
ಮಕ್ಕಳಿಗಾಗಿ ದೊಡ್ಡವರು ಬರೆಯುವಾಗ ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಮಕ್ಕಳು ಕೂಡ ಪ್ರಬುದ್ಧರೇ. ಅವರಿಗಾಗಿ ಬರೆಯುವ ಬರವಣಿಗೆ ನೀರು ಮಜ್ಜಿಗೆಯಂತಿರಬಾರದು, ಗಟ್ಟಿಮೊಸರಿನಂತೆ ಇರಬೇಕು. ಹೊಯ್ಸಳ, ರಾಜರತ್ನಂ, ಕುವೆಂಪು ಮೊದಲಾದವರು ಮಕ್ಕಳಿಗಾಗಿ ಬರೆದಾಗ ಕೂಡ ವಿಷಯ, ಛಂದಸ್ಸು, ಪದಗಳ ಆಯ್ಕೆಯಲ್ಲಿ ಪ್ರಬುದ್ಧ ಸಾಹಿತ್ಯ ರಚನೆಯಲ್ಲಿ ಕೊಡುವಷ್ಟೇ ಗಮನಕೊಟ್ಟಿರುವುದನ್ನು ಗಮನಿಸಬೇಕು. ಮಕ್ಕಳನ್ನು ಗಂಭೀರವಾಗಿ ಸೀರಿಯಸ್ಸಾಗಿ ತೆಗೆದುಕೊಂಡಿದ್ದೇವೆ ಎಂಬುದು ಮಕ್ಕಳಿಗೂ ತಿಳಿಯುವಂತಿರಬೇಕು. ಅಂದರೆ ಯಾವುದೇ ಬಗೆಯ ಉಡಾಫೆ ಇರಬಾರದು. ಸುಳ್ಳು ಇರಬಾರದು. ಕಲ್ಪನೆಯ ವಿಸ್ತಾರಕ್ಕೆ ಅವಕಾಶ ಇರಬೇಕು. ಎ. ಅರ್. ಕೃಷ್ಣಶಾಸ್ತ್ರಿಗಳು ವಚನಭಾರತ ಎಂದು ಮಕ್ಕಳಿಗಾಗಿ ಮಹಾಭಾರತವನ್ನು ನಿರೂಪಿಸಿರುವುದನ್ನು ಒಮ್ಮೆ ನೋಡಬಹುದು. ಹಾಗೆಯೇ ಕಥಾಸರಿತ್ಸಾಗರವನ್ನು ಕಥಾಮೃತ ಎಂದು ಮಾಡಿದ್ದಾರೆ. ಬಹಳ ಶ್ರಮದಿಂದ ಆ ಕೆಲಸ ಅವರು ಮಾಡಿದ್ದಾರೆ.
ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸುವುದಕ್ಕೆ ಮುನ್ನ ದೊಡ್ಡವರಲ್ಲಿ ಆ ಅಭ್ಯಾಸ ಇರಬೇಕು. ಮನೆಯಲ್ಲಿ ಪುಸ್ತಕಗಳು ಕಾಣುತ್ತಿರಬೇಕು, ದೊಡ್ಡವರು ಓದುತ್ತಿರುವುದು, ಆ ಓದಿನಿಂದ ಖುಷಿ ಪಡೆಯುತ್ತಿರುವುದು ಮಕ್ಕಳಿಗೆ ಗಮನಕ್ಕೆ ಬರುವಂತಿರಬೇಕು. ದೊಡ್ಡವರಿಗೆ ಓದಿನಿಂದ ಖುಷಿ ಪಡೆಯಲು ಆಗದಿದ್ದರೆ ಬರೀ ಮಾತಿನಿಂದ ಮಕ್ಕಳು ಓದುವಂತೆ ಮಾಡಲು ಸಾಧ್ಯವಿಲ್ಲ. ಮಕ್ಕಳು ನಮ್ಮ ಮಾತುಗಳನ್ನಷ್ಟೇ ಕೇಳುವುದಿಲ್ಲ, ನಮ್ಮ ವರ್ತನೆಯನ್ನೂ ಗಮನಿಸುತ್ತಾರೆ, ಅದನ್ನೇ ಮುಖ್ಯವಾಗಿ ಮನದಟ್ಟು ಮಾಡಿಕೊಳ್ಳುತ್ತಾರೆ. ದೊಡ್ಡವರಿಗೇ ಕನ್ನಡದ ಬಗ್ಗೆ, ಓದಿನ ಬಗ್ಗೆ ನಂಬಿಕೆ ಹೊರಟುಹೋಗಿದೆ. ಓದುವುದು ಎಂದರೆ ಪರೀಕ್ಷೆಗಾಗಿ ಎಂದಷ್ಟೇ ತಿಳಿಯುವ ಮನೋಭಾವವಿದೆ. ದೊಡ್ಡವರು ತಮ್ಮೊಳಗಿನ ಮಗುತನವನ್ನು ಕಾಪಾಡಿಕೊಳ್ಳದೆ ಮಕ್ಕಳ ಮಗುತನವನ್ನು ಕೊಲ್ಲುವುದರಲ್ಲಿ ತೊಡಗಿದ್ದೇವೆ. ನಿಜವಾಗಿ ಮಕ್ಕಳ ಶತ್ರುಗಳೆಂದರೆ ತಂದೆ ತಾಯಂದಿರೇ, ತಂದೆತಾಯಂದಿರಲ್ಲಿರುವ ಅತಿ ಹೆಚ್ಚು ದುಡ್ಡು ಅತಿ ಸುಲಭವಾಗಿ ಅತಿ ಬೇಗ ಮಾಡಬೇಕೆಂಬ ಆಸೆಯೇ, ತಮ್ಮ ಮಕ್ಕಳು ಉಳಿದೆಲ್ಲ ಮಕ್ಕಳನ್ನು ಇಕ್ಕಿ ಮೆಟ್ಟಬೇಕೆಂಬ ಆಕಾಂಕ್ಷೆಯೇ.
ಮಕ್ಕಳ ಸಾಹಿತ್ಯ ಹಾಗಿರಲಿ, ಮಕ್ಕಳ ಬಗ್ಗೆ ನಮಗೆ, ದೊಡ್ಡವರಿಗೆ ನಿಜವಾಗಿ ಪ್ರೀತಿ ಇದೆಯೇ ಎಂಬ ಪ್ರೆಶ್ನೆ ಕೇಳಿಕೊಳ್ಳೋಣ. ಮಕ್ಕಳಿಗೆ ಎಂಥ ಆದರ್ಶವನ್ನು, ಮೇಲುಪಂಕ್ತಿಯನ್ನು ಹಾಕಿಕೊಡುತ್ತಿದ್ದೇವೆ ನೋಡಿಕೊಳ್ಳೋಣ. ಪ್ರಶ್ನೆ ಮಕ್ಕಳಿಗಿಂತ ಹೆಚ್ಚಾಗಿ ದೊಡ್ಡವರಾದ ನಮಗೇ ಅನ್ವಯಿಸಿಕೊಳ್ಳಬೇಕಾದದ್ದು.
ಕಥೆ ಚೆನ್ನಾಗಿದೆ. ಶಿಶುಸಾಹಿತ್ಯದ ಬಗ್ಗ್ಗೆ ನನ್ನ ಟಿಪ್ಪಣಿ
ಪವನಜರೆ,
ನೀವು ಕಥೆಗಾರರಲ್ಲ ಎಂದು ನಾನೆಂದಿಗೂ ಹೇಳಿರಲಿಲ್ಲ, ಹೇಳುವುದೂ ಇಲ್ಲ. ಚೆನ್ನಾದ ನಿರೂಪಣೆ ಬಂದಿದೆ. ಬಹುಮುಖ ಪ್ರತಿಭೆ ನಿಮ್ಮದು.
ಹೀಗೆಯೇ ಬರೆಯುತ್ತಿರಿ.
ಶಿಶುಸಾಹಿತ್ಯದ ಬಗ್ಗೆ ಚರ್ಚೆ ಮೂಡಿದೆ. ಶಿಶುಸಾಹಿತ್ಯವೆಂದರೇನು ಎಂಬುದು ಬಹಳ ಒಳ್ಳೆಯ ಪ್ರಶ್ನೆ. ಈಗ ಲೇಖಕನ ಮೂಲೋದ್ದೇಶ ಮಕ್ಕಳಿಗೆ ಬರೆಯಬೇಕೆಂದಿದ್ದರೆ ಅದು ಶಿಶುಸಾಹಿತ್ಯವಾಗುವುದೇ? ಈಗ ಹ್ಯಾರಿ ಪಾಟರ್ ನ ಎಲ್ಲ ಪುಸ್ತಕಗಳನ್ನೂ ಇಷ್ಟದಿಂದಲೇ ಓದಿದ್ದೇನೆ. ನಾನೇನು ಶಿಶುವಲ್ಲ! ಆದರೂ ಜೆ.ಕೆ.ರೌಲಿಂಗ್ ಅವರ ಕಥೆಗಳನ್ನು ಶಿಶುಸಾಹಿತ್ಯವೆನ್ನಲೇ ಬೇಕು. ಹಾಗೆ ನಿಮ್ಮ ಕಥೆಯೂ ಶಿಶುಸಾಹಿತ್ಯವಾಗಿರಬೇಕು.
ಆದರೆ ಇನ್ನೊಂದು ಪ್ರಶ್ನೆ ಮನಸ್ಸಿಗೆ ಬಂದಿದೆ. ಈಗಿನ ಮಕ್ಕಳಲ್ಲಿ ಓದುವುದು ಬಹಳ ಕಡಿಮೆಯಾದಂತೆ ಕಂಡಿದೆ. ನನ್ನ ಸುತ್ತಲು ಇರುವ ಮಕ್ಕಳಲ್ಲಿ (ಎಂಟನೆ ವಯಸ್ಸಿನಿಂದ ಹದಿನೈದರ ವರೆಗಿನ ಮಕ್ಕಳು) ಓದುವ ಅಭ್ಯಾಸವೇ ಇಲ್ಲ. ಕನ್ನಡ ಇವರಿಗೆ ಬರುವುದಿಲ್ಲ. ಹೋದರೆ ಹೋಗಲಿ ಇಂಗ್ಲಿಷನ್ನಾದರೂ ಚೆನ್ನಾಗಿ ಬಲ್ಲರೇ? ಊಹೂ! ಅಗಸನ ಕತ್ತೆಗಳ ಹಾಗೆ (ನ ಘರ್ ಕಾ ನ ಘಾಟ್ ಕಾ) ನಮ್ಮ ಮಕ್ಕಳು ನಮ್ಮ ಸಂಸ್ಕೃತಿಯನ್ನೂ ರೂಢಿಸಿಕೊಳ್ಳದೆ ಆಂಗ್ಲಸಂಸ್ಕೃತಿಯನ್ನೂ ರೂಢಿಸಿಕೊಳ್ಳದೆ ತ್ರಿಶಂಕುಗಳಾಗಿದ್ದಾರೆ. ಈ ಪರಿಸ್ಥಿತಿಯನ್ನು ತಿದ್ದುವುದು ಹೇಗೆ? ನನಗೆ ಮಕ್ಕಳಲ್ಲಿ ನಂಬಿಕೆಯಿದೆ. ಆದರೆ ಅವರ ತಂದೆತಾಯಿಯರದೇ ತೊಂದರೆ!
ನಾನು ಪ್ರತಿಯೊಂದು ಸಮಾರಂಭದಲ್ಲೂ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡಲು ಬಯಸುವವನು. ಓದದೇ ಇರುವವರೂ ಸಹ ಎಂದಾದರು ಪುಸ್ತಕಕ್ಕೆ ಕೈಹಾಕಬಹುದು ಎಂಬ ಆಸೆ ನನ್ನದು. ಸಹೃದಯರ ಗೋಷ್ಠಿಯಿದು. ಇಲ್ಲಿ ಯಾರು ಓದುವ ಹವ್ಯಾಸವನ್ನು ಹೇಗೆ ಪ್ರೋತ್ಸಾಹಿಸುತ್ತಾರೆ ಎಂದು ತಿಳಿಯುವ ಕುತೂಹಲವಿದೆ. ಈ ದಿಕ್ಕಿನಲ್ಲಿ ಯೋಚಿಸಿರುವವರು ದಯವಿಟ್ಟು ಉತ್ತರಿಸಿರಿ. ಹೊಸ ಉಪಾಯ ಹೊಳೆದೀತು!
ನಾನೂ ಪುಸ್ತಕ ಕೊಡುವವನು
ನಾನೂ ಸಾಮಾನ್ಯವಾಗಿ ಪುಸ್ತಕಗಳನ್ನೇ ಉಡುಗೊರೆ ಕೊಡುವವನು. ಚಿಕ್ಕ ಮಕ್ಕಳ ಹುಟ್ಟುಹಬ್ಬಕ್ಕೆ ನವಕರ್ನಾಟಕದವರ ಮುದ್ದುಕನ್ನೆಡ, ಕಂದಾ ಓದುವೆಯಾ, ಅಕ್ಷರಕಲಿ ಮತ್ತು ಅಮರ ಚಿತ್ರಕಥೆಗಳಲ್ಲಿ ಯಾವುದಾದರು. ಮದುವೆಯಲ್ಲಿ ಅನುಪಮ ನಿರಂಜನರ ದಾಂಪತ್ಯ ದೀಪಿಕೆ.
ನಾನು ಮುಂಬಯಿಯಲ್ಲಿ ಭಾಭಾ ಪರಮಾಣು ಕೇಂದ್ರದ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದಾಗ ಎಲ್ಲ ಕನ್ನಡ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಪುಸ್ತಕಗಳನ್ನೇ ಕೊಡಿಸಿದ್ದೆ. ಒಂದು ವಿಜ್ಞಾನ ವಿಚಾರ ಸಂಕಿರಣದ ಸಂದರ್ಭದಲ್ಲಂತೂ ಭಾಷಣಗಾರರಿಗೆ ಕೊಡಲೆಂದೇ ಬೆಂಗಳೂರಿನಿಂದ ವಿಶೇಷವಾಗಿ ಕನ್ನಡ ವಿಜ್ಞಾನ ಪದಕೋಶಗಳನ್ನು ತರಿಸಿದ್ದೆ.
ಸಿಗೋಣ,
ಪವನಜ
-----------
Think globally, Act locally
ಜಾನಪದ ಶಿಶು ಪ್ರಾಸಗಳಿಲ್ಲವೇ?
ಶಿಶು ಸಾಹಿತ್ಯ ಎಂಬುದು ಭಾರತದಲ್ಲಿ ಇತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಚಿಕ್ಕವಳಿರುವಾಗಲೂ ನನಗೆ ದೊಡ್ಡವರ ಪುಸ್ತಕಗಳ ಬಗ್ಗೆಯೇ ಹೆಚ್ಚು ಆಸಕ್ತಿ ಇತ್ತು. ಭಾರತದಲ್ಲಿ ಎಂದು ಶಿಶು ಸಾಹಿತ್ಯ ಇರಲೇ ಇಲ್ಲ-ಈ ಹೇಳಿಕೆ ಒಪ್ಪುವುದು ಕಷ್ಟ ಏಕೆಂದರೆ ಜಾನಪದದಲ್ಲಿ ಇರುವ ಶಿಶು ಪ್ರಾಸಗಳೆಲ್ಲಾ ಶಿಶು ಸಾಹಿತ್ಯವಲ್ಲವೇ? ದೊಡ್ಡವರು ಹೇಳಬೇಕು.
ಜಾನಪದ ಮತ್ತು ಶಿಶುಪ್ರಾಸ
ನಿಮ್ಮ ಪ್ರಶ್ನೆ ಕುತೂಹಲಕರವಾಗಿದೆ. ಜಾನಪದ ಎಂದು ಕರೆಯುತ್ತೇವಲ್ಲ ಅದು ಜನರ ಸಹಜ ಭಾಷಿಕ ಬಳಕೆಯ ನಿದರ್ಶನಗಳು. ಅದನ್ನು ಕಲಿತ ನಾವು "ಸಾಹಿತ್ಯ" ಎನ್ನುತ್ತೇವೆಯೆ ಹೊರತು ಜಾನಪದರು ಹಾಗೆ ಭಾವಿಸರು. ನಾವು ಶಿಶು ಪ್ರಾಸಗಳೆಂದು ಕರೆಯುವ ರಚನೆಗಳು ಮಕ್ಕಳು ಭಾಷೆಯ ಬಳಕೆಯನ್ನು ಕಲಿಯುವುದಕ್ಕೆ ನೆರವು ನೀಡುವ, ಭಾಷೆಯ ಬಗ್ಗೆ ಮಕ್ಕಳ ಕುತೂಹಲ ಕೆರಳಿಸುವ ಸಲುವಾಗಿ ಮೂಡಿಕೊಂಡ ಭಾಷೆಯೊಂದರ ಸಹಜ ರಚನೆಗಳೇ ಹೊರತು ನಾವು ಈಗ ಚರ್ಚಿಸುತ್ತಿರುವ ಅರ್ಥದ ಉದ್ದೇಶಪೂರ್ವಕ ಶಿಶು "ಸಾಹಿತ್ಯ"ವಲ್ಲ.