ಧರ್ಮಾಂಧತೆಯ ಬಗ್ಗೆ
ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ.
ಇತ್ತೀಚೆಗೆ ವಿಜಯಕರ್ನಾಟಕದಲ್ಲಿ, ಹಿಂದೆ ಮುಸ್ಲಿಮರು ಮಾಡಿದ್ದ ಕೃತ್ಯಗಳ ಚರ್ಚೆ, ಆ ಕೋಮಿನ ವಿಚಾರಧಾರೆಯ ಬಗ್ಗೆಯ ಮೌಲಿಕ ನಿರ್ಧಾರಗಳನ್ನು ಮೊದಲೇ ತೆಗೆದುಕೊಂಡು ಬರೆದಿರುವಂತಹ ಹಲವು ಲೇಖನಗಳು ಮೇಲಿಂದ ಮೇಲೆ ಬರುತ್ತಿರುವಂತೆ ತೋರುತ್ತದೆ, ಅಥವ ಅವುಗಳು ಬಂದಾಗ ಜನರು ಇಷ್ಟಪಟ್ಟು ಓದುವುದೇ ಕಾರಣವೇನೋ, ಹಲವು ಜನರ ಬಾಯಿಯಲ್ಲಿ ಈ ವಿಷಯ ಕೇಳಬರುತ್ತಲೇ ಇದೆ. ದು:ಖಕರ ಸಂಗತಿಯೆಂದರೆ, ಹತ್ತಿರವಾಗಿರುವ ಹಲವು ಜನರು ಈ ವಾದಕ್ಕೆ ಮಾರು ಹೋಗಿ, ನೈಸ್ ವನ್ ಅಂತಾನೋ, ಸರಿಯಾಗಿಯೇ ಹೇಳ್ತಾನೆ ಅಂತಾನೋ ಹೊಗಳಿ ಗರ್ವದಿಂದ ತಮ್ಮ ನಿಲುವನ್ನೇ ಬದಲಿಸಿಕೊಳ್ಳುತ್ತಿರುವುದು, ಅದಕ್ಕಿಂತಲೂ ಹೆಚ್ಚಾಗಿ ಇತರರಿಗೂ ಬಲವಂತವಾಗಿ ಈ ಲೇಖನಗಳನ್ನು ಉಣಿಸುತ್ತಿರುವುದು.
ನನ್ನ ಯೋಚನೆಗಳು ಚರಿತ್ರೆಯ ಸತ್ಯಾಸತ್ಯತೆಗಳ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ, ಅದರ interpretation ಬಗ್ಗೆ. ಚರಿತ್ರೆಯಲ್ಲಿ ಹಿಂದೂ-ಮುಸ್ಲಿಂ ಸಂಬಂಧಗಳ ಬಗ್ಗೆ ಇವರು ಹೇಳುವ ಮಾತಿಗೆ ನನ್ನಲ್ಲಿ ಸಹಮತವೂ ಇದೆ. ಆದರೆ, ವಾದದ ಹುರುಪಿನಲ್ಲಿ ಮರೆತದ್ದೋ ಅಥವ ಬೇಕೆಂದೇ ಬಿಟ್ಟಿದ್ದೋ, ಹಲವು ವಿಚಾರಗಳು ಮಂಡನೆಗೆ ಬಂದಿಲ್ಲವೆಂದು ನನ್ನ ಅನಿಸಿಕೆ. ಮುಸ್ಲಿಮರ ಶೋಷಣೆ ಎಷ್ಟು ನಿಜವೋ, ಭಾರತದಿಂದ ಎದ್ದು ಬಂದ ಇತರ ಹಲವು ಮತಗಳು, ವರ್ಗಗಳು ಶೋಷಣೆ (ಅಂದಿನ ಕಾಲಕ್ಕೆ ತಕ್ಕಂತೆ ಇತರ ಗುಂಪುಗಳ ಮೇಲೆ) ನಡೆಸಿರುವುದು ಅಷ್ಟೇ ಸತ್ಯ. ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ತಮ್ಮ ಧರ್ಮವನ್ನು ಇಲ್ಲಿ ಸ್ಥಾಪಿಸುವುದು ಹೇರಿಕೆಯಾದರೆ, ಭಾರತೀಯ ಮೂಲದ ಅಶೋಕನ ಭೌದ್ಧ ಮತದ ರಾಜಕಾರಣವೂ ಹೇರಿಕೆಯೆ. ಥೈಲಾಂಡ್, ಕಾಂಬೋಡಿಯ, ಮಲಯ ಇನ್ನಿತರ ರಾಷ್ಟ್ರಗಳಲ್ಲಿ ಹಿಂದೂ ಮತಸ್ಥಾಪನೆಯೂ ಹೇರಿಕೆಯೆ. ಕಾಲದಿಂದ ಕಾಲಕ್ಕೆ, ಜೈನ, ಶೈವ, ವೈಷ್ಣವ ಮತಗಳ ದೌರ್ಜನ್ಯ, ಅಷ್ಟೇ ಯಾಕೆ, ಚರಿತ್ರೆಯಲ್ಲಿ ಯಾವುದೇ ದೇಶ ಪ್ರದೇಶವನ್ನು ನೋಡಿದರೂ ನಡೆದು ಬಂದಿರುವುದು ಇದೇ. ಮಾಡುವ ವಿಧಾನ ಬೇರೆ ಬೇರೆ, ಆದರೆ ಎಲ್ಲವು ದೌರ್ಜನ್ಯವೇ.
ಮುಸ್ಲಿಮರು ಮಾಡಿರುವ ಪ್ರತಿಯೊಂದು ಕುಕೃತ್ಯಕ್ಕೂ, ಅದಕ್ಕೆ ಸಮಾ-ಸಮ ಬ್ರಾಹ್ಮಣ, ಕ್ಷತ್ರಿಯ, ಒಕ್ಕಲಿಗ ಲಿಂಗಾಯತ, ಕ್ರಿಶ್ಚಿಯನ್ ಇತ್ಯಾದಿ ಜನರು ಪ್ರತಿನಿತ್ಯ ಒಬ್ಬರ ಮೇಲೊಬ್ಬರು ಮಾಡುವ ಕುಕೃತ್ಯಗಳ ಪಟ್ಟಿಯನ್ನು ಕೊಡ್ತಾನೇ ಬರಬಹುದು. ಎಲ್ಲಾ ಜನರ ಚಟಗಳು, ವಿಕೃತಗಳು ಒಂದೇ ತರ ಸ್ವಾಮಿ. ಚರಿತ್ರೆಯ ತುಂಬಾ ಈತರಹದ ವಿಷಯಗಳು ಇವೆ ಅಲ್ಲವೆ. ಇದು ಸರಿಯೋ ತಪ್ಪೋ, ತಪ್ಪೇ ಆದರೆ ಶಿಕ್ಷೆಯೇನು, ಪಶ್ಚಾತಾಪವೇನು ಇದು ಬೇರೆಯೇ ವಿಷಯ. ಒಟ್ಟಿನಲ್ಲಿ ನೋಡುವುದಾದರೆ, ನನಗೆ ಇಲ್ಲೆಲ್ಲ ಕಾಣುವುದು ಒಂದೇ ಚಿತ್ರ: ಸಬಲರು ನಿರ್ಬಲರನ್ನು, ಧ್ವನಿರಹಿತರನ್ನು ಶೋಷಿಸುತ್ತಿರುವುದು.
ಇಂದಿನ ವಿಷಯಕ್ಕೆ ಬರೋಣ. ರಾಮಜನ್ಮ ಭೂಮಿಯನ್ನು ಬಿಟ್ಟು ರಾಮನ ದೇವಾಲಯವನ್ನು ಎತ್ತಂಗಡಿ ಮಾಡಿ ಬೇರೆಕಡೆ ಕಟ್ಟುವುದು ಉಚಿತವಲ್ಲವಾದರೆ, ಮಾಸ್ತಿಕಟ್ಟೆಯಲ್ಲಿರುವ ನಮ್ಮ ಕುಲದೈವ, ನರಸಿಂಹಸ್ವಾಮಿಯ ದೇವಸ್ಥಾನವನ್ನು ಮುಳುಗಡೆ ಮಾಡಿರುವುದೂ ಘೋರ ಅಪರಾಧ. ಪ್ರತಿಯೊಂದು ಅಣೇಕಟ್ಟು ಕಟ್ಟಬೇಕಾದರೂ ಲೆಕ್ಕವಿಲ್ಲದಷ್ಟು ದೇವಸ್ಥಾನಗಳು, ದೇವರಗುಡ್ಡಗಳು ಮುಳುಗಡೆಯಾಗಿ ಹೋಗುವುದೂ ಅಕ್ಷಮ್ಯ. ಇವೆಲ್ಲ 'ಅಭಿವೃದ್ಧಿ ಕಾರ್ಯಗಳು' ನಡೆಯಬೇಕಾದರೆ ನಮ್ಮನ್ನೇನು ಕೇಳಿ, ಒಪ್ಪಿಗೆ ತೆಗೆದುಕೊಂಡು ಮುಂದೆ ಹೋಗ್ತಾರ, ಅಥವಾ ಹಾಗೇ ಕೇಳಿಕೊಂಡೇ ಕೆಲಸ ಮುಂದೆ ಹೋಗಬೇಕಾ? ಒಂದು ಅಣೇಕಟ್ಟಿನ ಬಾಳ್ವೆ ೧೦೦ - ೨೦೦ ವರ್ಷಗಳಿದ್ದರೆ ನಿಮ್ಮ ಜಾಗಗಳನ್ನು ನಿಮಗೆ ವಾಪಸ್ ಕೊಡ್ತೀವಿ ಅಂತ ಎಲ್ಲಾದರು ಬರೆದು ಕೊಟ್ಟಿದ್ದಾರ? ಧರ್ಮವನ್ನೂ, 'ಅಭಿವೃದ್ಧಿ ಕಾರ್ಯಗಳನ್ನು' ಹೋಲಿಸಬೇಡ ಅನ್ನುತ್ತೀರಿ. ಯಾಕೆ ಬೇಡ? ಪ್ರಗತಿ ಅಭಿವೃದ್ಧಿಗಳೇ ಇಂದಿನ ಧರ್ಮವಲ್ಲವೇ? ಅದರಿಂದ ನಮ್ಮ ಸಂಸ್ಕೃತಿಯೂ ಗೊತ್ತಾಗದಂತೆ ಬದಲಾಗುತ್ತಿಲ್ಲವೇ, ನಮ್ಮನ್ನು ಕೇಳಿಯೇ ಈ ಬದಲಾವಣೆಯೇ.. ಇದರಲ್ಲಿ ಬಲವಂತವಾದ ಹೇರಿಕೆಯಿಲ್ಲವೇ? ದಬ್ಬಾಳಿಕೆಯಿಲ್ಲವೇ?
ಈ ವಾದವನ್ನು ಒಪ್ಪುವುದು ಕೆಲವರಿಗೆ ಕಷ್ಟವಾಗುತ್ತದೆ. ಏಕೆಂದೆರೆ, ದೇಶದ ಅಭಿವೃದ್ಧಿಯಾಗಬೇಕು, ಅಣೇಕಟ್ಟು ಕಟ್ಟಿಯೇ ಅದು ಸಾಧ್ಯ ಅಂತ ನಂಬಿಕೆ ಇರತ್ತಲ್ಲ (ಧರ್ಮಸಂಸ್ಥಾಪನೆಯಾಗಬೇಕಾದದ್ದು ಇತರರನ್ನು ತುಳಿದೇ ಎಂಬಂತೆ), ಹಾಗಾಗಿ ಕೆಲವರಿಗೆ ಕಷ್ಟವಾದರೂ ಬಿಟ್ಟುಕೊಡಬೇಕಾದದ್ದು, ತ್ಯಾಗ ಮಾಡಬೇಕಾದದ್ದು (ದೇಶದ ಉನ್ನತಿಯ ಹೆಸರಿನಲ್ಲಿ) ಧರ್ಮ ಅನ್ನುವುದು ಸೂಕ್ತ ಅವರಿಗೆ. ಒಟ್ಟಿನಲ್ಲಿ ನಮಗೆ ಸರಿದೂಗುವ ಯೋಚನೆಗಳೇಸರಿ, ಬಾಕಿಯೆಲ್ಲವೂ ತಪ್ಪೇ, ಬದಲಾಯಿಸಬೇಕಾದದ್ದೇ. ಹಿಂದೆ, ರಾಜ ಒಪ್ಪಿದ್ದೇ ಬಹುಮತ. ಅವನು ಹೇಳಿದ್ದೇ ಸರಿ, ಅವ ಮಾಡಿದ್ದೇನೂ ಅಂದಿನ ಕಾಲಕ್ಕೆ ಲ ದುಷ್ಕೃತ್ಯಗಳೇ ಅಲ್ಲ. ಹಾಗೆಯೇ, ಹನುಮಂತ, ಅಂತಾ ಚೆನ್ನಾಗಿರುವ ಅಶೋಕವನಕ್ಕೆ ಬೆಂಕಿ ಹಚ್ಚಿ ನಾಶಮಾಡುವುದೂ ಸರಿ, ರಾಮ ವಾಲಿಯನ್ನು ಮೋಸದಿಂದ ಕೊಲ್ಲುವುದೂ ಸರಿ, ಕೆರೆ ಕಟ್ಟುವುದಕ್ಕೆ ಹೆಣ್ಣನ್ನು ಬಲಿಕೊಡುವುದೂ ಸರಿ, ಜಾನಪದ ದೇವರುಗಳನ್ನು ವೈದಿಕ ದೇವರುಗಳನ್ನಾಗಿ ಪರಿವರ್ತಿಸಿ ಬ್ರಾಹ್ಮಣರು ಅದನ್ನು ಪೂಜಿಸುವುದೂ ಸರಿ, ಮೊಹಮ್ಮದ್ ಹೇಳಿದ್ದನ್ನೆಲ್ಲಾ ಚಾಚೂತಪ್ಪದೆ ನಿರ್ವಹಿಸುವುದೂ, ಬೇರೆ ಎಲ್ಲರನ್ನು ಕಾಫಿರ್ ಎಂದು ಕರೆಯುವುದೂ ಸರಿ.
ಸಬಲರಿಂದ ದುರ್ಬಲರ ಶೋಷಣೆಯು ಆಗುತ್ತಲೇ ಇದೆ. ಭಾರತದಲ್ಲಿ ಅದು ಜಾತಿ/ವರ್ಗಗಳಲ್ಲಿ ಹಂಚಿಹೋಗಿದೆ. ಇತ್ತೀಚೆಗೆ ಇದರಲ್ಲಿ ಬಹಳ ಪ್ರಗತಿಯನ್ನು ನಾವು ಸಾಧಿಸಿದ್ದೇವೆ ನಿಜ. ಆದರೆ, ಈ ಪ್ರಗತಿ ಹೇಗಾಯಿತು ಎಂದು ಯೋಚಿಸಿ. ಬ್ರಿಟಿಷರು ಭಾರತೀರನ್ನು ಕಂಡು, ಥೂ ಬಡ್ಡೇತವ, ಹಿಂಗೆಲ್ಲ ನಿಮ್ಮ ಜನರನ್ನೇ, ನಿಮ್ಮ ಹೆಣ್ಣು ಮಕ್ಳನ್ನೇ ಗೋಳುಹೊಯ್ಕಬೇಡಿ ಅಂತ ಹೇಳಿದಾಗ ನಾವೇನು ಅವರ ಮಾತುಗಳನ್ನ ಕೇಳಿದ್ವ? ಕೆಂಗಣ್ಣಿನಿಂದ ಇವನ್ಯಾವೂರ ಬಿಳಿಜಿರಲೆ ಅಂತ ದುರುಗುಟ್ಟಿ ನೋಡಿರಲಿಲ್ಲವಾ? ಇವೆಲ್ಲ ಅಪರಾಧ ಅಂತ ಹೇಳಿ ಕಾನೂನನ್ನು ಬಲವಂತವಾಗಿ 'ಹೇರಿ'ದರೂ ಕದ್ದು ಮುಚ್ಚಿ ಎಲ್ಲವನ್ನೂ ನಡೆಸಿಕೊಂಡು ಬರಲಿಲ್ವ.. ಬದಲಾವಣೆಯಾದದ್ದು ಯಾವಾಗ? ನಮ್ಮ ಮನಸ್ಸಿಗೆ ತಾನಾಗಿಯೇ ಅರಿವಾದಾಗ, ಹೌದು ಗುರು, ಈ ಪದ್ಧತಿಗಳಲ್ಲಿ ಇಷ್ಟೋಂದು ಶೋಷಣೆ ಇದೆ, ಇದನ್ನು ಬಿಟ್ಟು ನಮ್ಮ ಸಮಾಜವನ್ನು ಸರಿಮಾಡಿಕೊಳ್ಳೋಣ ಅಂತ ಅನ್ನಿಸಿದಾಗಲೇ.. ಈ ಬದಲಾವಣೆಯೇ ನಿಧಾನಕ್ಕೆ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.
ಸಾಮಾಜಿಕ ಪಿಡುಗುಗಳು, ಹಿಂದಿನಿಂದಲೂ ಬಂದಿರುವ ನಂಬಿಕೆಗಳು ಧೋರಣೆಗಳು ಸುಲಭವಾಗಿ ಬದಲಾಗುವಂಥಾದ್ದಲ್ಲ. ಅವುಗಳನ್ನು ಇತರ ಸಮಾಜಗಳು ಚರ್ಚಿಸಿ, ನಮ್ಮ ತಪ್ಪನ್ನು ಗುರುತಿಸಿ ಇತ್ತಿ ಹಿಡಿದು ತೋರಿಸಿದರೆ ಬದಲಾವಣೆ ಬರುವುದಿಲ್ಲ, ಬದಲಿಗೆ ಸಿಟ್ಟು ಬರುತ್ತದೆ. ಅಸಹನೆ ಹೆಚ್ಚುತ್ತದೆ. ಒಂದು ಸಮಾಜಕ್ಕೆ, ತನ್ನ ಪರಿಸ್ಥಿತಿ, ತನ್ನ ನಡುವಳಿಕೆ, ಬೆಳವಣಿಗೆ ಇವುಗಳ ಬಗ್ಗೆ ತಾನಾಗಿಯೇ ಕಾಳಜಿ ಬರಬೇಕು. ತನ್ನಷ್ಟಕ್ಕೆ ತಾನೆ ತನ್ನನ್ನೇ ಪರಿಶೀಲಿಸಿಕೊಳ್ಳುವ ಅಗತ್ಯ ಅದಕ್ಕೆ ಕಾಣಬೇಕು. ಆಗ ಅದರಲ್ಲಿ ಸುಧಾರಣೆ ಸಾಧ್ಯ. ಅಲ್ಲಿಯವರೆಗೆ? ಹೀಗೆ ಮೂಲಭೂತವಾದ, ಭಯೋತ್ಪಾದನೆ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದೇ ಎಂದರೆ, ದುರಾದೃಷ್ಟವಶಾತ್, ನನ್ನ ಉತ್ತರ ಹೌದು. ನಮ್ಮ, ಅವರ ಒಳಿತಿಗಾಗಿಯೇ ನಾವುಗಳು ಸುಮ್ಮನಿರುವುದೇ ಸೂಕ್ತ. ಬೇರಾವುದೇ ಮಾನವೀಯ ಮಾರ್ಗ ನನಗೆ ತೋಚುತ್ತಿಲ್ಲ. ಇದೇ ನಮ್ಮ ಕಾಲದ ವಿಪರ್ಯಾಸ ಅನ್ನಿಸುತ್ತಿದೆ.
ಸಾವಿರಾರು ವರ್ಷಗಳಿಂದ ಬಂದಿದ್ದ ಪದ್ಧತಿಗಳನ್ನು ಈಗಷ್ಟೇ ಬಿಟ್ಟು ನಾವು ಹೊರಬರುತ್ತಿದ್ದೇವೆ. ಇತರರೂ ಈಗಲೇ, ಈ ಕ್ಷಣಕ್ಕೇ ಹಾಗೆಯೇ ಯೋಚಿಸಿ ಬದಲಾಯಿಸಿಕೊಳ್ಳಲಿ ಎನ್ನುವ ವಾದ ಅಮೇರಿಕಾದ ದೊಡ್ಡಣ್ಣನ ಧೋರಣೆಯಂತೆಯೇ ದರ್ಪದ್ದಾಗುತ್ತದೆ. ಬಲದಿಂದ ಬದಲಾಯಿಸಲು ಹೊರಟಾರೆ ಅವರಂತೆಯೇ ನಾವು ಆಗುತ್ತೇವೆ. ಅದೇ ಸರಿ ಅನ್ನುವುದಾದರೆ ಸರಿ, ನಿಮ್ಮಿಷ್ಟ.

- Login or register to post comments
- 986 hits
- Email this page





RSS:
ಪ್ರತಿಕ್ರಿಯೆಗಳು
Re: ಧರ್ಮಾಂಧತೆಯ ಬಗ್ಗೆ
ಮಾನ್ಯರೇ ನಿಮ್ಮ ಲೇಖನದ ತಿರುಳನ್ನು ನಾನು ಗ್ರಹಿಸಿದೆ. ಇದು ಆರೋಗ್ಯಕರವಾದ ವಿಚಾರವೇ. ಆದರೆ ನನಗೊಂದು ವಿಷಯ ಅರ್ಥವಾಗುವುದಿಲ್ಲ.
ಹಿಂದುಗಳನ್ನು, ಅವರ ಒಳಜಗಳ ಕಿತ್ತಾಟಗಳನ್ನು ಖಂಡಿಸುವಾಗ ಬಳಕೆಯಾಗುವ ಬುದ್ಧಿವಾದದ ಮಾತುಗಳು, ಕೆಲವೊಮ್ಮೆ ಬೈಯ್ಗುಳಗಳು ಬೇರೆ
ಧರ್ಮೀಯರ ಕ್ರೌರ್ಯವನ್ನು ಖಂಡಿಸುವಾಗ ಯಾಕೆ ಮೃದುವಾಗುತ್ತವೆ? ದೌರ್ಜನ್ಯ ಯಾರು ಮಾಡಿದರೂ ದೌರ್ಜನ್ಯವೇ ಅಲ್ಲವೇ? ಹಿಂದುಗಳಲ್ಲೇ ಒಳಜಗಳ
ದೌರ್ಜನ್ಯವಿತ್ತು ಎಂದು ನೀವು ಸಾಬೀತು ಪಡಿಸಿದರೆ ಅದರಿಂದ ಮುಸ್ಲಿಂರ ದಬ್ಬಾಳಿಕೆ ಸಮರ್ಥನೀಯ ಎಂದು ತಿಳಿಯಬೇಕೆ?
ಬ್ರಿಟೀಷರು ಹಿಂದುಗಳ ಬೆನ್ನ ಕೆಳಗೆ ಬಾರಿಸಿ ಬಡ್ಡೆತ್ತವಾ ತಿದ್ದಿಕೊಳ್ರಲೇ ಅಂತ ಗದುಮಿದ್ದಕ್ಕೇ ಭಾರತದಲ್ಲಿ ಸತಿ ಪದ್ಧತಿಯಂತಹ ಅನಿಷ್ಟದ ನಿವಾರಣೆಯಾಯಿತು ಅಂತ ಹೇಳುವಾಗ ನಿಮಗೆ ಭಾರತ ಸರ್ಕಾರವೇಕೆ ಹಾಗೆಯೇ ಬುದ್ಧಿ ಹೀನ ಮುಲ್ಲಾಗಳ ಅರ್ಥಹೀನ ಪ್ರಲಾಪಗಳಿಗೆ ತಡೆಯೊಡ್ಡಬಾರದು? ಒಂದೇ ದೇಶವನ್ನು ಒಪ್ಪಿಕೊಂಡು ಬಾಳುವ ನಡೆಸುವ ಸರ್ವರೂ ಸಮಾನರು ಎಂದು ತಿಳಿದರೂ ಸರ್ಕಾರವಿರಲಿ, ಜನರೇ ಏಕೆ ಸತ್ಯವನ್ನು ಸತ್ಯವೆನ್ನಲು ಅಂಜುದೇಕೆ? ಇಂತಹ ಅಂಜಿಕೆಯನ್ನು ಬಿತ್ತಿರುವುದು ತಪ್ಪಲ್ಲವಾ? ನಮ್ಮ ಸಹಿಷ್ಣುತೆ, ನಮ್ಮ ಔದಾರ್ಯ, ನಮ್ಮ ಆತ್ಮನಿರೀಕ್ಷಣೆ, ನಮ್ಮ ಕಲಿಕೆಗಳು ನಮ್ಮ
ಬಲಹೀನತೆಗಳಾಗಬಾರದು ಅಲ್ಲವೇ? ಇವುಗಳು ನಮ್ಮ ಆತ್ಮವಿಶ್ವಾಸವನ್ನು ಪೊಳ್ಳು ಮಾಡಬಾರದಲ್ಲವೇ?
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
Re: ಧರ್ಮಾಂಧತೆಯ ಬಗ್ಗೆ
ಯೂನೀಕ್‍ಸುಪ್ರಿ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಧರ್ಮಾಂಧತೆಯ ಬಗ್ಗೆ
ಬಹಳ ಒಳ್ಳೆಯ ಚಿಂತನೆಯಿದು. ನಮ್ಮ ಮನೆಯ ಹುಳುಕು ನಮಗೇ ಚೆನ್ನಾಗಿ ಗೊತ್ತಿರುವಂತೆ ತಮ್ಮ ತಮ್ಮ ಧರ್ಮದ ಹುಳುಕುಗಳು ಆಯಾ ಧರ್ಮದವರಿಗೇ ತಿಳಿಯಬೇಕು. ಬೇರೆಯ ಧರ್ಮವನ್ನು ಹಳಿಯುವ ಮುನ್ನ ನಮ್ಮ ಧರ್ಮ, ನಮ್ಮ ಸಂಪ್ರದಾಯ 'ಎಲ್ಲ ಸರಿ' ಅನಿಸುತ್ತದೆಯೇ ಅವಲೋಕಿಸಿ ನೋಡಿದರೆ ಎಷ್ಟೋ ಬದಲಾವಣೆಯಾಗಿರುತ್ತದೆ.
ಬಾಲಗಂಗಾಧರ ತಿಲಕ್ ರವರು ಕ್ರೈಸ್ತರ ಮನೆಯಲ್ಲಿ ಚಹ ಕುಡಿದರೆಂದು ಅವರಿಗೆ ಅವರ ಸಮುದಾಯ 'ಬಹಿಷ್ಕಾರ' ಹಾಕಿತ್ತಂತೆ. ತಂದೆಯ ಶ್ರಾದ್ಧ ಮಾಡಲು ಯಾರೊಬ್ಬರೂ ಇವರ ಮನೆಗೆ ಕಾಲಿಡಲಿಲ್ಲವಂತೆ. ಈಗಿನ ಜಗತ್ತಿನಲ್ಲಿ 'ಹೀಗೊಬ್ಬರ ಮನೆಯಲ್ಲಿ ಚಹ ಕುಡಿದರು' ಎಂಬ ವಿಷಯವಾಗಿ 'ಬಹಿಷ್ಕಾರ' (ಅಂತ ಏನಾದ್ರೂ ಯಾರಿಗಾದ್ರೂ ಹಾಕೋಕ್ಕಾಗಿ) ಹಾಕಿದರೆ ಎಷ್ಟು ತಮಾಷೆ ಎನಿಸಿಬಿಡುತ್ತದ. ಈ ತರಹ ನಡೆಸಿಕೊಂಡು ಹೋಗುತ್ತಿದ್ದ ಜನ ಎಷ್ಟು ತಲೆಕೆಟ್ಟ ಜನ ಅನ್ನಿಸಿಬಿಡುತ್ತದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ
"ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ"!!!! ( ಕಡವಳ ಕನ್ನಡದಲ್ಲಿ God )
Q. "God" ಅಂತ ಒಂದು ಇದೆ, ಇಲ್ಲ? ಇದ್ದರೆ ಅದನ್ನು sense ಮಾಡೋದು ಹೇಗೆ?
A. ಅಧಿಕಪ್ರಸಂಗಿ!! ಏನ್ ನಿಂಗೆ extra brain ಇದೆ.!! ಸುಮ್ನೆ ಇದೇ ಅಂತ ನಂಬಿಕೋ!! ನಿಂಗೆ ತಾಕತ್ತಿದ್ರೆ ಅದು ಇಲ್ಲ ಅಂತ ತೋರಿಸು.!!
Q. "GOD ಇದು ಹೀಗೆ ಇದೆ. ಅದು ಹಾಗೆ ಇದೆ" ಅಂತ ಜಗಳ ಯಾಕೆ?
A. ತಲಹರಟೆ!!ನಮ್ಮ ಭವ್ಯ ಸಂಸ್ಕೃತಿ, ನಮ್ಮ ಧರ್ಮ, ನಮ್ಮ ಹಿರಿಯರು, ನಮ್ಮ ಗ್ರಂಥ!! ನಿಂಗೆ ಅದರ ಮೇಲೇ ಕೊಂಚವೂ ಗೌರವವಿಲ್ಲ. ನಮ್ಮ ಜಾತಿಯಲ್ಲಿ ಯಾಕಾದ್ರೂ ಹುಟ್ಟಿದಿಯೋ, ನೀನು ಈ ದೇಸದಾಗೆ ಇರಕ್ಕೆ ನಾಲಾಯಕ್ಕು.
Q. ಸರಿ ಜಗಳವಿರಲಿ, ಹೀಗೆ ಒಂದು ಗುಂಪು ಇನ್ನೊಂದನ್ನು ತೀರಿಸಿದ ಮೇಲೆ, ನಾವು ಶಾಂತಿ, ನೆಮ್ಮದಿಯಿಂದ ಇದ್ದೇ ಇರ್ತೇವೆ ಅಂತ ಏನು guarantee?
A. ಲೋ ಲೂಸ್... ನಿಂದು pseudo-secular ವಾದ. ಮರ್ಯಾದೆಯಾಗಿ ನಿನ್ನ ಕೆಲಸ ನೀನು ನೋಡಿಕೋ, ನಮ್ಮ ಸುದ್ದಿ ಬಂದ್ರೆ ಅಷ್ಟೇ.
ಸರಿಯಪ್ಪ, ನಿಮ್ಮ ಸುದ್ದಿಗೆ ಬರಲ್ಲ. ಏನಾರ ಮಾಡಿಕೊಂಡು ಹಾಳಾದರೂ ಆಗಿ, ಉದ್ದಾರ ಆದರೂ ಆಗಿ.!!

======
Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ
ಆfriಕಾದ ಯಾವುದೋ ಒಂದು ದೇಶ- ಕೋಲುಗಳನ್ನೆಲ್ಲಾ ರಾಶಿ ಹಾಕಿ, ಕೆಟ್ಟದಾಗಿ ಕಿರುಚುತ್ತಾ, ಕಡಿಮೆ ಬಟ್ಟೆ ಧರಿಸಿ, ಪೂಜೆ ಮಾಡುತ್ತಿದ್ದ driಶ್ಯ ಟಿ.ವಿ.ಯಲ್ಲಿ ಬಂತು. ನಮ್ಮವರೆಲ್ಲ ಅದನ್ನು ನೋಡಿ ನಗುತ್ತಿದ್ದರು. ತಮಾಶೆ ದ್ರ್‍ಅಶ್ಯ ನಗಬೇಕಾದ್ದೇ. ಅದೇ ನಮ್ಮ ಭಟ್ಟ್ರು ಅರೆ ಬರೆ ಬಟ್ಟೆಯಲ್ಲಿ ಕಲ್ಲಿಗೆ ಪೂಜೆ ಮಾಡುವಾಗ ಭಕ್ತಿ ಉಕ್ಕಿ ಹರಿಯುತ್ತದೆ ಯಾಕೆ?
ನಿಮ್ಮ ಹುಡುಗ ದೇವಸ್ಥಾನಕ್ಕೆ ಅಪ್ರದಕ್ಷಿಣೆ ಹಾಕಿದಾಗ ಸುರುವಿಗೆ ಬುಧ್ಧಿ ಹೇಳುವಿರಿ,ನಂತರವೂ ಹಠ ಮಾಡಿದರೆ ಎರಡೇಟು ಬಿಗಿದು ದರದರ ಎಳೆದುಕೊಂಡು ಪ್ರದಕ್ಷಿಣೆ ಬರುವಿರಿ. ಅವನಿಷ್ಟಕ್ಕೆ ಬಿಡದೆ ನಿಮ್ಮ ಅಧಿಕಾರ ತೋರಿಸಿದಿರಿ ಅಲ್ವಾ?
ಮುಸಲ್ಮಾನರು/ಬ್ರಿಟಿಷರು ನಮ್ಮ ದೇಶದ ಮೇಲೆ ದಾಳಿಮಾಡಿದಾಗ ನಮ್ಮವರ ಆಚರಣೆಗಳು ಅವರಿಗೆ ತಮಾಷೆಯಾಗಿ/ತಪ್ಪಾಗಿ ಕಂಡಿರಬಹುದು.ತಮ್ಮ ಕೈಯಲ್ಲಿ ಆಡಳಿತ ಇರುವುದರಿಂದ ಮತಾಂತರ, ಬಲಾತ್ಕಾರ, ಕೊಲೆ ಎಲ್ಲಾ ಮಾಡಿದರು.
ಹಿಂದುಗಳಿಗೊಂದು ಕಾನೂನು ಅವರಿಗೊಂದು ಕಾನೂನು ಮಾಡಿದರು. ೨೧ನೇ ಶತಮಾನದಲ್ಲಿ "ಪ್ರಜಾ ಪ್ರಭುತ್ವ"ದ ದೇಶದಲ್ಲಿ ಅಲ್ಪ ಬಹುಮತವಿದ್ದಾಗಲೇ ತಮಗೆ ಬೇಕಾದ ಕಾನೂನು,ತಿದ್ದುಪಡಿಗಳನ್ನು ತರುತ್ತಿಲ್ಲವೇ?
ಹಿಂದೆ ಏನಾಗಿತ್ತೋ ಬಿಟ್ಟಿತ್ತೋ-ಆಗಿನ ಕಾಲಕ್ಕೆ ಸಂಬಧಿಸಿದ್ದು.ಓದಿ ತಿಳಿದುಕೊಂಡರೆ ಸಾಕು.ಈವಾಗ ನಮ್ಮ ನಮ್ಮ ಜಾತಿ ಧರ್ಮಗಳಲ್ಲಿರುವ ತಪ್ಪು ಆಚರಣೆಗಳನ್ನು ತಿದ್ದಿ ಹೊಂದಿಕೊಂಡು ಬಾಳೋಣ.
ಧರ್ಮಾಂಧತೆಯ ಬಗ್ಗೆ
ಶ್ಯಾಮ್ ಕಶ್ಯಪ್, ಕಳೆದ ವಾರ ಪ್ರಕಟವಾದ ನಿಮ್ಮ ಲೇಖನ ನನ್ನ ತುಂಬಾ ಆಕರ್ಷಿಸಿತ್ತು. ಪ್ರತಿಕ್ರಿಯಿಸಲು ವಿಷಯಗಳು ಬಯಳಷ್ಟಿತ್ತಾದರೂ, ಕೆಲಸದೊತ್ತಡದಲ್ಲಿ ಹಾಗು ನೀವು ಊಹಿಸಬಹುದಾದ ಹಾಗೆ ಗುಣಾಗುಣಗಳ ಬಗ್ಗೆ ಖಚಿತ ನಿಲುವು ಹೊಂದಿರದ ಕೆಲವು ಪತ್ರಿಕಾ ವರದಿಗಳಿಂದ ಬೇಸರವಾಗಿದ್ದರಿಂದ ಬರೆಯಲಾಗಿರಲಿಲ್ಲ.
ನಿಮ್ಮ ಲೇಖನದಲ್ಲಿ ಮಾತನಾಡಲು ಅನೇಕ ವಿಷಯಗಳಿವೆಯಾದರೂ ನಾನು ಎರಡಕ್ಕೆ ಸೀಮಿತಗೊಳಿಸಿಕೊಳ್ಳುತ್ತೇನೆ. ಒಂದು ಚಿಕ್ಕ ಪ್ರತಿಕ್ರಿಯೆ ಮತ್ತೊಂದು ಸ್ವಲ್ಪ ಉದ್ದವಾಗಿದೆ. ವಿಷಯವೇ ಇಲ್ಲದ ಉದ್ದ ಕಾಮಿಂಟಿದು ಎಂದೆನಿಸಿದರೆ ದಯವಿಟ್ಟು ಕ್ಷಮಿಸಿ.
೧. ದುರ್ಬಲರ ಮೇಲೆ ಸಬರಲ ಸವಾರಿ - uniquesupri ಅವರಿಗೆ ಅನಿಸಿದಂತೆ ಈ ಲೇಖನ ಇತರ ಧರ್ಮೀಯರು ಭಾರತದಲ್ಲಿ ಎಸಗಿದ ಕುಕೃತ್ಯಗಳನ್ನು ಸಮರ್ಥಿಸುವ ನಿಲುವಿನ ಧಾಟಿಯಲ್ಲಿದೆ ಎಂದು ಮೊದಲ ಓದಿನಲ್ಲಿ ಅನಿಸಿತ್ತು. ಆದರೆ ನಿಮ್ಮ ಸಮಜಾಯಿಷಿಯು ಚರ್ಚೆಯನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುವಲ್ಲಿ ಸಹಾಯಕವಾಯಿತು. ನಿಮ್ಮ ಲೇಖನದ ಒಳ್ಳೆಯ ಆಶಯಗಳಲ್ಲಿ "ದುಮೇಸಸ" ಕೂಡ ಒಂದಾಗಿತ್ತು ಎಂದು ನಂಬಿ ಟಿಪ್ಪಣಿ ಬರೆಯುತ್ತಿದ್ದೇನೆ. ಇದು ಯಾವ ಕಾಲಕ್ಕೂ ಹೊಸತಲ್ಲ. ಇದಕ್ಕೆ ಪೂರಕವಾಗಿ ನಾನು ಇದೇ ಧಾಟಿಯಲ್ಲಿ ಜಾತಿಯು ಧರ್ಮಾಧಾರಿತವೇ, ಸಾಮಾಜಿಕವೇ ಎಂಬ ಎಳೆಯಲ್ಲಿ ನಮ್ಮ ದೇಶದಲ್ಲಿ ಇರುವುದು 'ಒಬ್ಬರು ಮಾಡುವ ಕೆಲಸದ ಮೇಲೆ ಮತ್ತೊಬ್ಬರಿಗೆ ತಿರಸ್ಕಾರ, ಜಿಗುಪ್ಸೆ, ಉಡಾಫೆ.." ಎಂಬುದಾಗಿ ಬರೆದಿದ್ದೆ. ಇದನ್ನು ಹೋಗಲಾಡಿಸಲು ನಾವು, ನೀವು ಮಾಡಬಹುದಾದ ಉದಾತ್ತ ಕೆಲಸವೆಂದರೆ ನಮ್ಮಲ್ಲಿರುವ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳುವುದು ಮತ್ತು ನಾವುಗಳೇ ಸಮಸ್ತ ಜ್ಞಾನದ ಒಡೆಯರು ಎಂದು ಅಹಂಕಾರದಿಂದ ಮೆರೆಯದಿರುವುದು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ನಿಯಮವನ್ನು ಅನುಸರಿಸಿ ಬಾಳೋಣ. ನಿಮ್ಮ ಲೇಖನಕ್ಕೆ ದನಿಗೂಡಿಸಬೇಕು ಎಂಬ ಆಶಯದಿಂದ ಬರೆದ ಚಿಕ್ಕ ಟಿಪ್ಪಣಿ ಇದು.
೨. ಒಂದು ಸಮಾಜದ ಆಂತರಿಕ ಅವಶ್ಯಕತೆಗಳಿಂದಾಗುವ ಹೊರಳುಗಳು - ಇದರ ಬಗ್ಗೆ ಮಾತನಾಡುವುದಕ್ಕೆ ಬಹಳಷ್ಟು ವಿಷಯಗಳು ಇದೆಯೆಂದು ಭಾಸವಾಯಿತು.
ನೀವು ನಂಬಿದ ತತ್ವಗಳು ಸರಿಯಾದ ದಿಕ್ಕಿನಲ್ಲಿ ಇದೆ. ಮೇಲುನೋಟಕ್ಕೆ ಹರಿ ಹೇಳಿದ ಹಾಗೆ ಇದು ಒಳ್ಳೆಯ ಚಿಂತನೆಯಾದರೂ, ಒಂದು ಅತ್ಯಂತ ಪ್ರಮುಖ ಅಂಶದ ಬಗ್ಗೆ ನೀವು ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸದಿರುವುದನ್ನು ಎಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಸುಮ್ಮನಿದ್ದುಬಿಡೋಣ ಎಂದು ನೀವು ಹೇಳಿರುವಿರಾದರೂ, ಬಹುಶಃ ಇದರ ಬಗ್ಗೆ ಬರೆಯಬೇಕೆಂದು ನೀವು ಅಂದುಕೊಂಡಿದ್ದಿರಬಹುದು, ಆದರೆ ನಿಮ್ಮ ಲೇಖನದಲ್ಲಿ ಅದರ ಬಗ್ಗೆ ಸಮರ್ಪಕವಾದ ಮಾತುಗಳು ಹೊರಬಂದಿಲ್ಲ. ನನ್ನ ಕಾಮೆಂಟುನ್ನು ನಿಮ್ಮ ಲೇಖನಕ್ಕೆ ಪೂರಕವಾಗಬಹುದಾದ ಕಾಮೆಂಟ್ ಎಂದು ಭಾವಿಸಿರಿ. ನನ್ನ "ಬೇರಾವುದೇ ಮಾನವೀಯ ಮಾರ್ಗ ನನಗೆ ತೋಚುತ್ತಿಲ್ಲ" ಎಂಬ ನಿಮ್ಮ ಮಾತಿಗೆ ಉತ್ತರ ಸಿಗಲಿ ಎಂಬ ಆಶಯದಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಇದರಿಂದ ಓದುಗರಿಗೆ ಒಳ್ಳೆಯ ಓದು ಸಿಕ್ಕರೆ ಅಷ್ಟು ಸಾಕು ನನಗೆ.
ಈಗ ನೋಡಿ, ಯಾವಾಗಲೂ ಹೊರಳುಗಳನ್ನು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುತ್ತಾ ಬಂದಿರುವ ಹಿಂದು ಧರ್ಮ ಸುಮಾರು ೧೮ ಶತಮಾನದಿಂದ ಆರಂಭವಾಗಿ ಬಹುಮುಖ್ಯವಾಗಿ ೧೯-೨೦ನೆಯ ಶತಮಾನದಲ್ಲಿ ಸುಧಾರಣೆಗಳನ್ನು ಕಂಡಿದೆ. ಭಾರತೀಯ ಸಂಸ್ಕೃತಿ ಹಾಳಾಗುತ್ತಿದೆ ಎಂದು ಹಲುಬುವವರು ಹಿಂದು ಧರ್ಮದ ಸುಧಾರಣೆ ಹಾಗೆಯೇ ಭಾರತದಲ್ಲಿ ಎಷ್ಟೆಲ್ಲ ಸಾಮಾಜಿಕ ಸುಧಾರಣೆಗಳಾಗಿವೆ ಎಂಬುದನ್ನು ಗಮನಿಸುವುದಿಲ್ಲ. ಈ ಕಾಮೆಂಟಿನಲ್ಲಿ "ಹಿಂದಿನ ಬ್ರಾಹ್ಮಣ್ಯದ" ಬಗ್ಗೆ ಪ್ರಸ್ತಾಪ ಮಾಡಲೇ ಬೇಕು ಎನಿಸಿತು. ಒಬ್ಬ ಬ್ರಾಹ್ಮಣ ಇಂತಹ ಸಮಯದಲ್ಲಿಯೇ ಎದ್ದು, ಕೆರೆಯ ಇಂತಹುದೇ ದಿಕ್ಕಿನಲ್ಲಿ, ಇಂತಹುದೇ ಭಂಗಿಯಲ್ಲಿ, ಕಣ್ಣುಗಳನ್ನು ಇಂತಹುದೇ ದೃಷ್ಟಯತ್ತ ಇರಿಸಿ ಶೌಕಕರ್ಮ ಮಾಡಬೇಕು.. ವೇದಗಳನ್ನು ಇಂತಹವರಿಗೇ ಹೇಳಿಕೊಡಬೇಕು. ಇಂತಹವರಿಗೇ ಅಕ್ಷರಾಭ್ಯಾಸ ಮಾಡಿಸಬೇಕು, ಇಂತಹವರಿಗೆ ಕೆರೆಯ ನೀರನ್ನು ಮುಟ್ಟಲು ಬಿಡಬಾರದು. ಇಂತಹವರೊಡನೆ ಇಷ್ಟು ಗಜ ದೂರವಿದ್ದುಕೊಂಡು ಮಾತನಾಡಬೇಕು.....ಎಂಬೆಲ್ಲ ತಲೆಬುಡವಿಲ್ಲದ ನಿಯಮಗಳು ಪಾಲಿಸಲಾಗಿತ್ತು. ಸನಾತನ ವೈದಿಕ ಧರ್ಮದಲ್ಲಿ ಇಂತಹ ಕಟ್ಟುನಿಟ್ಟುಗಳು ಇರಲಿಲ್ಲವೆಂಬ ವಾದವನ್ನು ಒಪ್ಪಬಹುದಾದರೂ, ಕಾಲಕ್ರಮೇಣದಲ್ಲಿ ಇಂತಹ ಕೆಲವು ತಲೆಗೆಟ್ಟ ರೂಢಿಗಳು ಜಾರಿಯಲ್ಲಿತ್ತು ಎಂಬುದರಲ್ಲಿ ಸತ್ಯವಿಲ್ಲದಿಲ್ಲ.
ಕೆಲವು ಅಂಶಗಳನ್ನು ಗಮನಿಸಿ.
೧. ರಾಜಾರಾಮ್ ಮೋಹನ್ ರಾಯ್ ಅವರಂತಹ ಸಮಾಜ ಸುಧಾರಕರು, ದಯಾನಂದ ಸರಸ್ವತಿಯವರ ವಿಮರ್ಶೆ, ಮುಂತಾದ ಹಿಂದುಗಳು ಹಿಂದುಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವೆಡೆ ಹಿಂದು ಸಮಾಜವನ್ನು ಒಯ್ದಿತಾದರೂ, ೧೯-೨೦ ಶತಮಾನದಲ್ಲಿ ಹಿಂದುಗಳಲ್ಲಿ ಆದ ಸಾಮಾಜಿಕ ಸುಧಾರಣೆಗೆ ಮತ್ತು ಈಗಲೂ ಆಗುತ್ತಿರುವುದಕ್ಕೆ ಕೇವಲ ಹಿಂದುಗಳು ಕಾರಣರಲ್ಲ.
೨. ಹಿಂದು ಧರ್ಮದ ವಿಮರ್ಶೆ, ಟೀಕೆಗಳನ್ನು ಕೇವಲ ಹಿಂದುಗಳು ಮಾಡಿಲ್ಲ. ಹಾಗೆಯೇ ಹಿಂದು ಧರ್ಮದ ವರ್ಗವಾದ ಬ್ರಾಹ್ಮಣ್ಯದ ವಿಮರ್ಶೆಯನ್ನು ಕೇವಲ ಬ್ರಾಹ್ಮಣರು ಮಾಡಿಲ್ಲ. ಈಗಿನ ಸಮಾಜಕ್ಕೆ ಪ್ರಸ್ತುತವಲ್ಲದ ಮನುಸ್ಮೃತಿಯ ಎಷ್ಟೋ ಅಂಶಗಳನ್ನು ಹಿಂದುಗಳು ಈಗ ಆಚರಿಸುತ್ತಿಲ್ಲದಿರುವುದಕ್ಕೆ ಕೇವಲ ಹಿಂದುಗಳು ಕಾರಣರಲ್ಲ.
೩. ಜಾತಿ ವ್ಯವಸ್ಥೆಯು ದಟ್ಟವಾಗಿದ್ದ ಕಾಲದಲ್ಲಿ, ಹೊಲೆಯರು, ಮಾದಿಗರು, ದಂಡೀರ್ ಮುಂತಾದವರನ್ನು ಸಮಾಜದಲ್ಲಿ ಮೇಲೆತ್ತುವ ಕೆಲಸವನ್ನು ಕೇವಲ ಅವರವರ ಜಾತಿಯವರಷ್ಟೇ ಮಾಡಿಲ್ಲ. ಮೇಲು ಜಾತಿಯವರೆನಿಸಿದ್ದ, ಬ್ರಾಹ್ಮಣರಲ್ಲಿಯೂ ಸಮಾಜ ಸುಧಾರಕರು ಇದ್ದರು. ನಾವು ಕೆಳಗಿನವರು ಎಂಬ ಕೀಳರಿಮೆಯನ್ನು ಹಿಂದುಳಿದವರಿಂದ ಹೋಗಲಾಡಿಸುವಲ್ಲಿ ಬ್ರಾಹ್ಮರೂ ಕೆಲಸಮಾಡಿದ್ದಾರೆ.
೪. ಹಿಂದುಗಳಲ್ಲದವರು ಹಿಂದು ಧರ್ಮದ ಸಾಮಾಜಿಕ ಸುಧಾರಣೆಗೆ ಗುರುತರ ಕೆಲಸ ಮಾಡಿದ್ದಾರೆ. ಬ್ರಾಹ್ಮಣರಲ್ಲದವರೂ ವೈದಿಕ ಧರ್ಮದ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ.
ಸಮಾಜ ಸುಧಾರಣೆ ಎಂಬುದು ಹೊಡೆದಾಟ ಬಡಿದಾಟದಿಂದ ಆಗುವಂಥದ್ದಲ್ಲ ಎಂಬುದನ್ನು ನೀವು ಈಗಾಗಲೇ ಇದರ ಬಗ್ಗೆ ನಿಮ್ಮ ಲೇಖನದಲ್ಲಿ ಸಮರ್ಪಕವಾಗಿ ಬರೆದಿದ್ದೀರಿ. ನೀವು ಪ್ರಸ್ತಾಪಿಸಿದಂತೆ, "ಒಂದು ಸಮಾಜದ ಬೆಳವಣಿಗೆಯ ಬಗ್ಗೆ ಆಯಾ ಸಮಾಜಕ್ಕೆ ಕಾಳಜಿ ಇರಬೇಕಾದ್ದೆ", ಆದರೆ ಈ ನಿಟ್ಟಿನಲ್ಲಿ ಸಹಾಯವಾಗುವ ಹಾಗೆ ಆಯಾ ಸಮಾಜಕ್ಕೆ ಹೊರತಾದವರೂ ಮಾಡಬಹುದು, ಮಾಡುತ್ತಿದ್ದಾರೆ. ಕೆಲವು ವ್ಯಕ್ತಿಗಳಿಂದ, ಸಂಸ್ಥೆಗಳಿಂದ ಅಂತಹ ಕಾರ್ಯಗಳು ಹಿಂದೆಯೂ ನಮ್ಮ ದೇಶದಲ್ಲಿ ನಡೆದಿವೆ. ಹೊಡೆದಾಟದಿಂದಲ್ಲ ಬದಲಾಗಿ ವಿಮರ್ಶೆಗಳಿಂದ. ಆಗಲೇ ಹೇಳಿದ ಹಾಗೆ, ಬ್ರಾಹ್ಮಣ್ಯದ ಬಗ್ಗೆ ಎಂಥೆಂಥಹ ಕಟು ವಿಮರ್ಶೆಗಳು ಬ್ರಾಹ್ಮಣೇತರರಿಂದಲೂ, ಹಿಂದುವಲ್ಲದವರಿಂದಲೂ ಆಗಿವೆ, ಆಗುತ್ತಿವೆ. ಆದರೂ ಬ್ರಾಹ್ಮಣ ಸಮಾಜ ಮತ್ತು ಒಟ್ಟಾರೆ ಹಿಂದು ಸಮಾಜ ಇಂದಿಗೂ ಸಾಮಾಜಿಕವಾಗಿ ಬಲವಾಗಿಯೇ ಇದೆ. ಎಲ್ಲಿಯವರೆಗೆ ಸಮಾಜದಲ್ಲಿ ವ್ಯಕ್ತಿಗತವಲ್ಲದ, ಒಳ್ಳೆಯ ಆಶಯದ ಚರ್ಚೆಗಳು, ಟೀಕೆ, ವ್ಯಾಖ್ಯಾನಗಳು, ವಿಮರ್ಶೆಗಳು ಇರುತ್ತವೆಯೋ ಅಲ್ಲಿಯವರೆಗೂ ಸಮಾಜ ಗಟ್ಟಿಯಾಗುವತ್ತ ಸಾಗುತ್ತಲೇ ಇರುತ್ತದೆ. ಸಮಾಜ ಚಿಂತನಾಶೀಲವಾಗಿರುತ್ತದೆ. ಇನ್ನೊಂದು ಸಮಾಜದ ಬಗ್ಗೆ ಕಾಳಜಿಯಿರುವ ಯಾರಿಗೆ ಆದರೂ ಮತ್ತೊಂದು ಸಮಾಜವನ್ನು ಬಗ್ಗೆ ವಿಮರ್ಶಿಸುವ, ವ್ಯಾಖ್ಯಾನಿಸುವ ಸ್ವಾತಂತ್ರ್ಯವನ್ನು ಇದ್ದೇ ಇರುತ್ತದೆ. ಗಮನಿಸಿ ಸ್ವಾತಂತ್ರ್ಯ, ಸ್ವೇಚ್ಛೆಯಲ್ಲ.
ನಾನು ಹೇಳುವುದು "ಆಯಾ ಸಾಮಾಜಿಕ ಸುಧಾರಣಾ ಕಾರ್ಯಗಳು ಅವರವರಿಂದ ಮಾತ್ರವೇ ಆಗಬೇಕು ಎಂಬ ನಿಯಮವಿಲ್ಲ ಬದಲಾಗಿ ಸುಧಾರಣೆಗಳನ್ನು ಒಪ್ಪಿಕೊಳ್ಳುವ ಆಯ್ಕೆ, ಹೊಣೆ ಮತ್ತು ಸಮಜಾಯಿಷಿ ಆ ಸಮಾಜಕ್ಕೆ ಇರುತ್ತದೆ" ಅಷ್ಟೇ. ಹೊಡೆದಾಟ ಬಡಿದಾಟದ ಹೊರತಾಗಿಯೂ ಸಾಮಾಜಿಕ ಸುಧಾರಣೆ ಸಾಧ್ಯವಿದೆ. ಮತ್ತು ನಮ್ಮ ದೇಶದಲ್ಲಿ ಅದು ಆಗುತ್ತಿದೆ ಎಂಬುದರ ಹೆಮ್ಮೆ ನನಗಿದೆ. ಕೇವಲ ಹಿಂದು ಧರ್ಮದಲ್ಲಷ್ಟೇ ಅಲ್ಲ ಮುಸ್ಲಿಮರಲ್ಲಿಯೂ ಕೂಡ ಸಾಮಾಜಿಕ ಸುಧಾರಣೆಗಳಾಗಿವೆ. ಮುಸ್ಲಿಮರಲ್ಲಾಗುತ್ತಿರುವ ಹಾಗು ಮುಂದೆ ಆಗಬಹುದಾದ ಸಾಮಾಜಿಕ ಸುಧಾರಣೆಗೆ ಮುಸ್ಲಿಮರಷ್ಟೇ ಕಾರಣರಲ್ಲ ಮತ್ತು ಮುಸ್ಲಿಮರಷ್ಟೇ ಕಾರಣರಾಗಿರುವುದಿಲ್ಲ. ನಾವು, ನೀವು ಇಂದು ಸುಮ್ಮನಿದ್ದುಬಿಟ್ಟರೆ ಸಮಾಜವು ಇರುವಿದ್ದೆಡೆಯಿಂದ ಹೊರಬಂದು ಇನ್ನೋವೇಟೀವ್ ಆಗುವುದಕ್ಕೆ ಅನೇಕ ಶತಮಾನಗಳು ಬೇಕಾಗಬಹುದು.
------------ಇಲ್ಲಿಯವರೆಗೆ ಶ್ಯಾಮ್ ಕಶ್ಯಪರ ಲೇಖನಕ್ಕೆ ದನಿಗೂಡಿಸುವುದಾಯಿತು. ಈಗ ಕೊನೆಯ ಕೊಸರು.
ತಸ್ಲೀಮಾ ನಜ್ರೀನ್ ಅವರ ಪುಸ್ತಕಗಳನ್ನು ಬ್ಯಾನ್ ಮಾಡುವುದು, ಅವರಿಗೆ ಘೆರಾವ್ ಹಾಕುವುದು ಮುಂತಾದ ಕೆಲಸಗಳು ನಮ್ಮ ದೇಶದಲ್ಲಿ ನಡೆಯುತ್ತಿದೆಯಾದರೂ, ಒಟ್ಟಾರೆ ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ನಾನು ಯಾವಾಗಲೂ ಆಶಾವಾದಿ. ನಮ್ಮ ದೇಶದಲ್ಲಿ ಕೇವಲ ಕೋಮುವಾದವಿಲ್ಲ ಬದಲಿಗೆ ಸಾಮಾಜಿಕ ಸುಧಾರಣೆಯ ಬೆಳ್ಳಿರೇಖೆಯೂ ಇದೆ. ಕೋಮುವಾದ ಬಿರುಗಾಳಿಯಿಂದ ಕೂಡಿರುವ ಪ್ರವಾಹ ಏರಿಸುವ ಮಳೆಯಾದರೆ, ಸಾಮಾಜಿಕ ಸುಧಾರಣೆ ಪ್ರತಿವರ್ಷವೂ ತಪ್ಪದೆ ಬರುವ ವಸಂತನ ಹಾಗೆ ತನ್ನ ಕಂಪನ್ನು ಸೂಸುತ್ತಲೇ ಇದೆ.
@ಎಲ್ಲರಿಗೂ - ಮಾತು ಮುಗಿಸುವ ಮುನ್ನ
ಓದುಗರೊಬ್ಬರು ಭಟ್ಟರ ಪೂಜೆಯ ಬಗ್ಗೆ ಪ್ರಸ್ತಾಪಿಸಿದ್ದರಿಂದ ಇದು. ಹೊಟ್ಟೆಬಿಟ್ಟುಕೊಂಡು ಪೂಜಾರಿಗಳು ಮಾಡುವ ದೇವಸ್ಥಾನದಲ್ಲಿಯಷ್ಟೇ ಹಿಂದು ಧರ್ಮವಿಲ್ಲ. ಚಿದಂಬರ ರಹಸ್ಯ ಎಂದರೇನು ಎಂದು ಅವಲೋಕಿಸಿದರೆ ತಿಳಿಯುತ್ತದೆ. ಹಾಗೆಯೇ ಮತ್ತೊಂದು ಪ್ರಮುಖ ವಿಷಯ ಎಲ್ಲರೂ ಗಮನಿಸಬೇಕಾದ್ದು, ಉತ್ತರ ಭಾರತದ ಎಷ್ಟೋ ಕಡೆ, ಅರ್ಚಕರು ದಕ್ಷಿಣ ಭಾರತದಲ್ಲಿರುವಂತೆ ಅರೆ ಬರೆ ಬಟ್ಟೆಯಲ್ಲಿರುವುದಿಲ್ಲ.
ಹಿಂದು ಧರ್ಮ ಅಂದರೆ?
ಸುನಿಲ,
ಈ ಹಿಂದು ಪದವೇ ಪಾರಸಿ. ಅದರ ಅರ್ತವೇ 'ಸಿಂದು ಹೊಳೆ'.
ದರ್ಮ = religion ಅಂತ ಮಾಡಿದರೆ. ನೀನು ಹೇಳುವ 'ಹಿಂದು' ಇದು religion ಅಲ್ಲವೇ ಅಲ್ಲ. ಅದು ಹಲವಾರು religionಗಳ ಮೇಲೆ ಹಚ್ಚಿರುವ/ಹೇರಿಸಿರುವ ಒಂದು ಪದ. ಈ ಹೇರಿಕೆಯನ್ನು/ಹಣೆಪಟ್ಟಿಯನ್ನು ಬಡಗಣದವರು ಮಾಡಿರುವುದು. ಲಿಂಗಾಯತ, ಒಕ್ಕಲಿಗ, ಹಾರುವ, ಮಾದಿಗ, ಮುಂತಾದವು ಒಂದೊಂದು religionಗಳೇ. ಏಕೆಂದರೆ ಒಂದೊಂದು ಪಂಗಡವೂ 'ದೇವರು' ಎನ್ನುವುದಕ್ಕೆ ತಮ್ಮದೇ ಆದ definition ಇಟ್ಟುಕೊಂಡಿದ್ದಾರೆ. ಅದರಲ್ಲೂ ಲಿಂಗಾಯತರು "ವೇದ-ಉಪನಿಷತ್ತು"ಗಳ ಮೇಲೆ ನಿಂತ ಸಮಾಜ-ನಂಬಿಕೆ-ವರ್ಣಗಳನ್ನು ವಿರೋದಿಸಿ ತಮ್ಮದೇ ಆದ ಹೊಸ ಸಿದ್ದಾಂತ ಮಾಡಿಕೊಂಡವರು.
ಇನ್ನು
ದರ್ಮ = culture, way of life , ಅಂದರೆ ಹಿಂದು culture, tradition ಅಂತ ಮಾತಾಡಿದರೆ, ಹಿಂದು culture, tradion ಎನ್ನುವುದು ಇಲ್ಲವೇ ಇಲ್ಲ. ಇರುವುದು ಬರಿ ಕನ್ನಡ-ಲಿಂಗಾಯತ, ಕನ್ನಡ-ಒಕ್ಕಲಿಗ, ಕನ್ನಡ-ಹಾರುವ ಮುಂತಾದ culture, traiditionಗಳು. ಇವೂ ಒಂದಕ್ಕಿಂತ ಒಂದು ಬೇರೆ ಬೇರೆ.
ಹಿಂದು ಧರ್ಮ ಸುಮಾರು ೧೮ ಶತಮಾನದಿಂದ ಆರಂಭವಾಗಿ!
ನೀನು ಹೇಳಿದಂತೆ, ೧೮ನೇ ಶತಮಾನದಲ್ಲಿ, ನಮ್ಮ ನಾಡಲ್ಲಿದ್ದ ಎಲ್ಲ ನಂಬಿಕೆಗಳ ಮೇಲೂ 'ಹಿಂದು' ಎನ್ನುವ ಹಣೆಪಟ್ಟಿಕಟ್ಟಿದುದು. ಅಂದಿನಿಂದಲೇ 'ಹಿಂದು' ಎನ್ನುವ ಹೆಸರಲ್ಲಿ ಗುಂಪು ಕಟ್ಟಲು ಸುರುವಾದುದು. "ಹಿಂದ್. ಹಿಂದೂ, ಹಿಂದೀ" ಇವು ಮೂರೂ ಮೊಗಲರು/ಬ್ರಿಟೀಷರು ನಮ್ಮ ನಾಡಿಗೆ ಬಂದ ಮೇಲೇ ಹುಟ್ಟಿದವು ಅಂದರೆ ೧೬-೧೮ ಶತಮಾನದ ಆಸುಪಾಸು.
"ಹಿಂದ್ ನಾಡಿನಲ್ಲಿ, ಇದ್ದ ಹಿಂದುಗಳು, ಹಿಂದಿಯನ್ನು ಮಾತಾಡುತ್ತಾರೆ" ಎಂಬುದೇ ಮೊದಲ ಅರಿವು. ತರುವಾಯ ಅದೇ ಪದಗಳನ್ನು ತೆಂಕಣಕ್ಕೂ ಹೇಳಲು/ಹೇರಲು ಸುರು ಹಚ್ಚಿದರು.
ಟಿ: ಹಿಂದು ಧರ್ಮ ಅಂದರೆ?
ಮಹೇಶ, "ಹಿಂದು" ಪದದ ಸುತ್ತಲಿನ ವಿವರಣೆ ಈ ಎಳೆಯಲ್ಲಿ ಬೇಕಿರಲಿಲ್ಲ ಎಂಬುದು ನನ್ನ ಅಂಬೋಣ. ಭಾರತದ ಸುಪ್ರೀಂಕೋರ್ಟ್ ಕೂಡ ಹಿಂದು ಎಂಬುದು ಧರ್ಮವಲ್ಲ, ಜೀವನ ಕ್ರಮ ಅಂತ ತೀರ್ಪಿತ್ತಿದೆ. ನೀನು ಬಹುಶಃ ಇದನ್ನು ಹೇಳಬಯಸಿದ್ದಿ ಅಂತ ಕಾಣತ್ತೆ. ನಾನು ನನ್ನ ಕಾಮೆಂಟಿನಲ್ಲಿ ಸಮಾಜ ಮತ್ತು ಧರ್ಮ ಎಂಬುದನ್ನು ಕೆಲವು ಕಡೆ ಇಂಟರ್ಚೆಂಜಿಯಬಲ್ ಆಗಿ ಬಳಸಿದ್ದೇನೆ. ಹಿಂದು ಪದದ ಬಗ್ಗೆಯೇ ಮಾತಾಡೋಣ ಎನ್ನುವುದಾದರೆ ಬೇರೆ ಬ್ಲಾಗಿನಲ್ಲಿ ಮಾಡೋಣ.
ಜೀವನ ಕ್ರಮ ಅಂದರೆ?
ಸುನಿಲ,
ಜೀವನ ಕ್ರಮ ಅಂದರೆ ಏನು?
culture ಗೂ ಇದ್ದಕ್ಕೂ ಇರುವ ಬೇರೆತನಗಳೇನು?
ಹೇಳುವುದಾದರೆ ಹೇಳು. ನಿನ್ನ 'ಅಂಬೋಣ'ವೇ ತುಸು ಗೊಂದಲ. ಮೊದಲು ಈ ಗಲಿಬಿಲಿ ಸರೆಯಲಿ.
======
Re: ಧರ್ಮಾಂಧತೆಯ ಬಗ್ಗೆ
ಸುನಾಥ
ಶ್ಯಾಮ ಕಶ್ಯಪರವರ ಲೇಖನ ತುಂಬಾ ಚೆನ್ನಾಗಿದೆ. ಈಗ ನಡೆಯುತ್ತಿರುವದು ಧರ್ಮ ರಾಜಕೀಯ. ಆದರೆ ಅವರು ಒಂದು ಮಾತನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಿಂದೂಗಳ ಸಾಮಾಜಿಕ ಸುಧಾರಣೆಯು at least ಒತ್ತಾಯದಿಂದಾದರೂ ಆಗಿದೆ. ಸತಿ ಪದ್ಧತಿ, ದ್ವಿಪತ್ನೀ ಪ್ರತಿಬಂಧ ಇವು ಶಾಸನದ ಒತ್ತಾಯದಿಂದಾಗಿ ೯೯% ಆದರೂ ತಗ್ಗಿವೆ. ಆದರೆ ಧಾರ್ಮಿಕ ಸ್ವಾತಂತ್ರ್ಯದ ನೆವದಲ್ಲಿ ತಮ್ಮ ಸಮುದಾಯದಲ್ಲಿ ಸುಧಾರಣೆಯನ್ನು ತರಲು ನಿರಾಕರಿಸುತ್ತಿರುವ ಜನರಿಗೆ ರಾಜಕೀಯ ಕುಮ್ಮಕ್ಕು ಸಿಗುತ್ತಿರುವದು ಬೇಸರದ ಸಂಗತಿ. ಎರಡನೆಯದಾಗಿ ಭಾರತದ ಅಂತಾರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಾಗ, ಜಾತೀಯ ಆಧಾರದ ಮೇಲೆ ಕೆಲವೊಂದು ರಾಷ್ಟ್ರಗಳನ್ನು ಮೇಲೆತ್ತಿ ಕಟ್ಟುವ ಹುಚ್ಚತನ. ಈ ಎರಡು ಹುಣ್ಣುಗಳು ಇಡೀ ಭಾರತವನ್ನೇ ರೋಗಗ್ರಸ್ತವಾಗಿ ಮಾಡುತ್ತವೆ ಎನ್ನುವದನ್ನು ನೆನೆಯಬೇಕು.
Re: ಧರ್ಮಾಂಧತೆಯ ಬಗ್ಗೆ
ಕೊನೆಗೂ ಇಂದು ನನಗೆ ಆವರಣದ ಪ್ರತಿ ಸಿಕ್ಕಿತು. ಓದಿ ಮುಗಿದಾದ ಮೇಲೆ ಮಾಳವಿಕಾ ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ ನನಗೆ. ಅವರು (ಮಾಳವಿಕಾ) ಯಾವುದೇ ಮತದ ವಿರುದ್ಧವಾಗಲೀ ಅಥವಾ ಯಾವುದೇ ಮತದ ಮೇಲೆ ದ್ವೇಷದಿಮ್ದಾಅಗಲೀ ಬರೆದಿಲ್ಲ ಅನಿಸಿತು.
ನನ್ನ ಅನಿಸಿಕೆ ಪ್ರಕಾರ ಚರಿತ್ರೆಯ interpretation ಬರುವುದು ಚರಿತ್ರೆಯ ಕೊಂಡಿಗಳು ಸಿಕ್ಕದೇ ಹೋದಾಗ. ಎಲ್ಲಾ ಆಧಾರಗಳು ಸರಿಯಾಗಿವೆ, ಚರಿತ್ರೆ ಸತ್ಯ ಎಂದಾದರೆ ಯಾವ interpretation ಮಾಡಲು ಸಾಧ್ಯ? ಅಷ್ಟಕ್ಕೂ ಯಾವುದೇ ಕೋಮಿನ/ ಮತದ ಜನರು ಒಬ್ಬ ಕ್ರೂರಿ ರಾಜ ಅಥವಾ ಲೂಟಿ ಮಾಡಿದ ಸೇನಾಧಿಪತಿಯನ್ನು ತಮ್ಮ ನಾಯಕನೆಂದು ತಿಳಿಯುವುದಿಲ್ಲ ತಾನೆ. ಇತಿಹಾಸದ ಉದ್ದೇಶ ಸತ್ಯದ ದರ್ಶನ ಅಷ್ಟೆ.
ತಪ್ಪು ಶೋಷಣೆಗಳ ಬಗೆಗಾದರೆ ನಾವು ನಮ್ಮ ಧರ್ಮದಲ್ಲಿ ತಿದ್ದಿಕೊಳ್ಳಬೇಕಾದ ತಪ್ಪುಗಳನ್ನು ನೋಡುತ್ತಲೇ ನಮ್ಮ ಧರ್ಮದ ಬಗೆಗೆ ಹೊರಗಿನಿಂದ ಬಂದ ಟೀಕೆಗಳನ್ನೂ ಅದೇ ಮನಸ್ಸಿನಿಂದ ನೋಡಬೇಕು ಅಲ್ಲವೇ? ನಮ್ಮ ತಪ್ಪು ನಾವೇ ಸರಿ ಮಾಡಿಕೊಳ್ಳುತ್ತೇವೆ ಬೇರೆಯವರು ಇದರಲ್ಲಿ ತಲೆ ಹಾಕಬಾರದು ಎಂದು ಹೇಳಿದರೆ ಅದು ಸಂಕುಚಿತ ಮನೋಭಾವ ಎನ್ನಿಸುತ್ತದೆ. ಒಂದು ಧರ್ಮಕ್ಕೆ ಸರಿಯಾಗಿ ಕಂಡುಬಂದ ಪರಿಹಾರದ ಬಗೆಗೆ ಯೋಚನೆ ಕೂಡ ಮಾಡುವುದುದಿಲ್ಲ ಎಂದರೂ ಆಷ್ಟೇ. ನನ್ನ ಅಭಿಪ್ರಾಯದಲ್ಲಿ ಯಾವುದೇ ಸಮಾಜದ ವ್ಯಕ್ತಿಗೆ ವಿದ್ಯೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ ಸಿಕ್ಕರೆ ಸಾಕು. ಆಗಿಹೋದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂಬ ನಂಬಿಕೆ ನನಗಂತೂ ಇದೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಧರ್ಮಾಂಧತೆಯ ಬಗ್ಗೆ
@ಸುನಿಲ್,
ಕೆಲವು ಸಮಯದ ಹಿಂದೆ ನಾನೂ ಈ arguement ಒಪ್ಪಿಕೊಂಡಿದ್ದೆ. ಆದರೆ, ಗಾಂಧಿ ಹುಟ್ಟಿದ ಗುಜರಾಥಿನ ಇಂದಿನ ಪರಿಸ್ಥಿತಿ, ಭಾರತ, ಮಿಡಲ್ ಈಸ್ಟ್, ಅಮೇರಿಕದಲ್ಲಿನ ಆತಂಕಕಾರಿ ಬೆಳವಣಿಗೆಗಳ ಸ್ವಂತ ಅನುಭವ ಇವೆಲ್ಲವೂ ಸೇರಿ, ನಾನು ನನ್ನ
ಇನ್ನು ಹಿಂದುತ್ವವು ಧರ್ಮವೋ ಸಂಸ್ಕ್ುತಿಯೋ ಎಂಬುದನ್ನು ನಾನಿನ್ನು ಕಂಡುಕೊಂಡಿಲ್ಲ. ಆದರೆ, ನಾನು ಹಿಂದುಗಳು ಅಂತ ಒಟ್ಟಾರೆ ಎಲ್ಲಾದರು ಪ್ರಸ್ತಾಪಿಸಿದ್ದರೆ, ಅದು ಭಾರತ ಉಪಖಂಡದಲ್ಲಿರುವ ಜನರನ್ನು ಉದ್ದೇಶಿಸುದ್ದು ಅಷ್ಟೆ.
@ಸುನಾತ್,
ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮಗಳ ಸಣ್ಣತನವನ್ನು ಪೋಷಿಸಿ, ಬಳಸಿಕೊಳ್ಳುವುದು ರಾಜಕಾರಣಿಗಳ ಜಾಯಮಾನವೇ.
@ಶ್ರೀನಿಧಿ,
ಚರಿತ್ರೆ, ಅದರ ಉದ್ದೇಶಿತ ಬಳಕೆ ಮತ್ತು ಚರಿತ್ರ್ಗೆ ಬೇಕಾದ ಆಧಾರಗಳು, ಇವುಗಳ ವಿಷಯದಲ್ಲಿ ನನಗೂ ನಿಮಗೂ ಮೂಲಭೂತ ವ್ಯತ್ಯಾಸಗಳಿವೆ ಅನ್ನಿಸುತ್ತದೆ. ಅದರ ಚರ್ಚೆ ಇಲ್ಲಿಗೆ ಸಂಬಂಧಪಡುವುದಿಲ್ಲವೆಂದು ತಿಳಿದು ಸುಮ್ಮನಾಗುವೆ. ಇದರ ಬಗ್ಗೆ ಒಮ್ಮೇ ಬೇಕಿದ್ದರೆ ಸೇರಿ ಮಾತಾಡುವ.. ಏನಂತೀರ?
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ