ಕಾಯಕ ಯೋಗಿಗೆ ನೂರು ವರ್ಷ
ತುಮಕೂರಿನ ಸಿದ್ಧಗಂಗೆಯೆಂದೊಡನೆ ಗಂಗೆಯನ್ನು ಕಂಡಷ್ಟೇ ಪವಿತ್ರ ಭಾವನೆ, ಸಿದ್ಧೇಶ್ವರನ ಮೇಲಿನ ಭಕ್ತಿಭಾವ ಮನಸ್ಸನ್ನು ಆವರಿಸುತ್ತದೆ. ಶ್ರೀ ಗೋಸಲ ಸಿದ್ಧೇಶ್ವರರ ತಪೋನಿಷ್ಠೆಯ ಸಿದ್ಧಿರೂಪವಾಗಿ ಗಂಗೆಯು ಉದ್ಭವಿಸಿದಳು. ಬರಗಾಲದಲ್ಲೂ ಇಲ್ಲಿ ಗಂಗೆ ನಿರಾಂತಂಕವಾಗಿ ಹರಿಯುತ್ತಿರುತ್ತಾಳೆ. ಆದ್ದರಿಂದ ಈ ಸ್ಥಳಕ್ಕೆ ಸಿದ್ಧಗಂಗೆ ಎಂಬ ಹೆಸರು ಬಂತು. ಮುಂದೆ ತ್ರಿವಿಧ ದಾಸೋಹಿ, ಬ್ಸವತತ್ವದ ಸಾಕಾರಮೂರ್ತಿ, ಆಧುನಿಕ ಬಸವಣ್ಣ, ಶರಣ ಕಾಯಕಯೋಗಿ ಡಾ|| ಶಿವಕುಮಾರ ಸ್ವಾಮೀಜಿಗಳ ಶ್ರಮವೆತ್ತ ದುಡಿಮೆ, ತ್ಯಾಗಮಯ ಸೇವೆಗಳಿಂದ ಸಿದ್ಧಗಂಗೆ ಇಂದು ಜಗತ್ಪ್ರಸಿದ್ಧವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳಿಗೆ ೧೯೦೮ರ ಏಪ್ರಿಲ್ ೧ ರಂದು ಜನಿಸಿದ ಶಿವಕುಮಾರರು ಬದುಕಿನಲ್ಲಿ ಗೆಲುವನ್ನೇ ಸೋಲಿಸಿದರು. ೧೯೩೦ರ ಮಾರ್ಚ್ ೩ರಂದು ಉದ್ಧಾನ ಶಿವಯೋಗಿಗಳಿಂದ ಪೀಠವನ್ನು ವಹಿಸಿಕೊಂಡ ಸ್ವಾಮೀಜಿಗಳು ಆರಂಭದಿಂದಲೇ ಸಮಾಜದ ಉದ್ಧಾರಕ್ಕಾಗಿ ಯೋಜನೆಗಳನ್ನು ರೂಪಿಸಿದರು. ೧೯೪೧ರಲ್ಲಿ ಮೊದಲನೆಯದಾಗಿ ಶಾಲೆಯೊಂದನ್ನು ಪ್ರಾರಂಭಿಸುವ ಮೂಲಕ ಅಕ್ಷರದಾಸೋಹಕ್ಕೆ ಅಡಿಯಿಟ್ಟರು. ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ. ಕೂಡಲ ಸಂಗಮನ ಪೂಜಿಸಿದ ಫಲ ನಿಮ್ಮದಯ್ಯಾ ಎಂಬ ವಚನವನ್ನು ಮನಸಾ ಪಾಲಿಸಿದ ಶ್ರೀಗಳು, ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಉದಾಸೀನ ತೋರಲೇ ಇಲ್ಲ. ಇದರ ಫಲವಾಗಿ ಇಂದು ೯,೦೦೦ಕ್ಕೂ ಹೆಚ್ಚು ಮಕ್ಕಳು ಮಠದ ಅಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಲ್ಲಿ ಶೇ.೩೦ರಷ್ಟು ಮಕ್ಕಳು ಅನಾಥರು. ಇಂತಹ ಅನಾಥ ಮಕ್ಕಳಿಗೆ ಊಟ, ವಸತಿ, ಎಲ್ಲವನ್ನೂ ಮಠವೇ ಒದಗಿಸುತ್ತದೆ. ಕೇವಲ ಪಠ್ಯಾಧಾರಿತ ವಿದ್ಯೆಯಲ್ಲದೆ, ಆಧ್ಯಾತ್ಮಿಕ ಶಿಕ್ಷಣ ಕೂಡ ಸೇರಿ ಮಕ್ಕಳನ್ನು ಬೌದ್ಧಿಕವಾಗಿ ಮೇಲಕ್ಕೆತ್ತಿವೆ. ಕೇವಲ ತಮ್ಮ ಜಾತಿ, ವರ್ಗ, ಜನಾಂಗಕ್ಕೆ ಮಾತ್ರ ತಮ್ಮ ಸೇವೆಯನ್ನು ಸೀಮಿತತೊಳಿಸುವ ಮಠ-ಪೀಠಗಳಿರುವ ಇಂದಿನ ದಿನಗಳಲ್ಲಿ ಸಿದ್ಧಗಂಗಾ ಮಠವು ಯಾವುದೇ ಲೌಕಿಕ ನಿರ್ಬಂಧನೆಗಳಿಲ್ಲದೆ ಎಲ್ಲರಿಗೂ ಸಮಾನ ಹಸ್ತ ಚಾಚಿ ಇವನಾರವ, ಇವನಾರವ ಎನಬೇಡ, ಇವ ನಮ್ಮವ ಇವ ನಮ್ಮವ ಎನ್ನುತಿರು ಎಂದು ಲೋಕಕ್ಕೆ ಸಾರಿ ಹೇಳುತ್ತಿದೆ. ದೇಶದ ದೀಪಗಳಾದ ಮಕ್ಕಳಿಗೆ ಅಗತ್ಯವಿರುವ ಅನ್ನ, ಅಕ್ಷರ ಮತ್ತು ಧರ್ಮಬೋಧೆಗಳನ್ನು ಕೊಟ್ಟು, ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿ ಎಂದು ಕರೆಸಿಕೊಂದಿದ್ದಾರೆ. ಆತ್ಮಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಶ್ರೀಗಳ ದೇಹ ದಿನಕ್ಕೆ ಕೇವಲ ಮೂರು ಗಂಟೆ ಮಾತ್ರ ನಿದ್ರಿಸುತ್ತದೆ. ವಯಸ್ಸು ನೂರಾದರೂ ದೇಹ ಶಕ್ತಿ ಕುಂದಿಲ್ಲ. ನಡೆಯಲು ನೆರವು ಬೇಕಿಲ್ಲ. ಕಣ್ಣು ಕನ್ನಡಕ ಕೇಲುವುದಿಲ್ಲ. ನಾಲ್ಕು ಪುಟದ ಭಾಷಣವಿದ್ದರೂ ನಾಲಿಗೆ ತೊಡರುವುದಿಲ್ಲ. ಮುಖಕಮಲ ಹೂವಿನಂತೆ ಕಂಗೊಳಿಸುತ್ತಿರುತ್ತದೆ. ಇದು ಯಾವುದೋ ಪವಾಡವಲ್ಲ. ಅದ್ಭುತ, ಅಪರಿಮಿತ ಆತ್ಮಶಕ್ತಿಯ ಪ್ರಭಾವ. ಗುರುವಿಗೆ ತನುವನು, ಲಿಂಗಕ್ಕೆ ಮನವನು, ಲೋಕಕ್ಕೆ ಬದುಕನು ಅರ್ಪಿಸಿ ಶಿವಸುತನು ತಾನಾದಾಗ ಉದ್ಭವಿಸುವ ಭಗವತ್‌ಶಕ್ತಿ. ಇಂತಹ ಶ್ರೀಗಳು ತಮ್ಮ ನಿಸ್ವಾರ್ಥ ಬದುಕಿನಿಂದ 'ಕರ್ನಾಟಕ ರತ್ನ'ಕ್ಕೇ ಗೌರವ ತಂದಿದ್ದಾರೆ. ರಾಷ್ಟ್ರಪತಿ ಕಲಾಂರವರಿಗೆ ೩೬,೦೦೦ ದಿನಗಳನ್ನು ಕಳೆದಿರುವ ಶ್ರೀಗಳು ೩೬ ಸಹಸ್ರ ರತ್ನಗಳ ಸಂಯೋಗದಂತೆ ಕಂಡಿದ್ದಾರೆ. -ಬಾಲು ಪ್ರಸಾದ್.ಆರ್.

- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ದನಿಗೂಡು: ಕಾಯಕ ಯೋಗಿಗೆ ನೂರು ವರ್ಷ
ಇದಕ್ಕೆ ಪೂರಕವಾಗಿ ಈದಿನದ ಪ್ರಜಾವಾಣಿಯ ಒಂದು ವರದಿಯನ್ನು ಓದಿ.