ಬಿಲ್ ಮತ್ತು ನನ್ನ ಭೇಟಿ
ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ ಯೋಚಿಸ್ತಿರುವಾಗಲೇ ಒಂದೇ ಉಸಿರಿನಲ್ಲಿ ಹೇಳಿದ್ದ. ಮುಂಬೈಗೆ ಬಿಲ್ ಗೇಟ್ಸ್ ಬಂದಿದ್ದಾನೆ. ಯಾರಾದ್ರೂ ಕನ್ನಡದವರ ಪರಿಚಯ ಮಾಡಿಸು ಅಂತಿದ್ದಾನೆ. ನಿನ್ನ ಬಗ್ಗೆ ಹೇಳ್ತಿದ್ದೀನಿ. ತಕ್ಷಣ ಬಂದು ಅವನನ್ನು ನಿಮ್ಮ ಮನೆಗೆ ಕರ್ಕೊಂಡು ಹೋಗು, ಎಂದ ಸತೀಶ.
ನನಗೆ ತಲೆ ಬುಡ ಅರ್ಥ ಆಗ್ತಿಲ್ಲ. ಯಾರೀ ಬಿಲ್ ಗೇಟ್ಸ್, ಇವನ್ಯಾಕೆ ಕನ್ನಡದವರ ಮನೆಗೆ ಬರ್ಬೇಕು. ಇವನಿಗೆ ಕೆಂಪು ತೊಗಲಿನವರು ಇಲ್ಯಾರೂ ಸಿಗ್ಲಿಲ್ವಾ, ಅಂತ ಯೋಚಿಸುತ್ತಲೇ ಏರ್‍ಪೋರ್ಟಿಗೆ ಓಡಿದ್ದೆ ( ಮನೆ ಹತ್ರಾನೇ ಇರೋದು ).
ಏರ್ ಪೋರ್ಟಿಗೆ ಹೋಗುತ್ತಲೇ ನನಗೆ ಶಾಕ್ ಆಯ್ತು. ಅಯ್ಯೋ ಈತನನ್ನು ಟೀವಿಲಿ, ಪತ್ರಿಕೇಲಿ ಬಹಳ ಸಲ ನೋಡಿದ್ದೀನಿ. ಇವನು ಮೈಕ್ರೋಸಾಫ್ಟ್ ಜನಕ ಅಲ್ವಾ? ನನ್ನ ಮೈಯ್ಯನ್ನು ಒಮ್ಮೆ ಚಿವುಟಿಕೊಂಡೆ. ಹೂಂ! ಅವನನ್ನೇ ನೋಡ್ತಿರೋದು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸತೀಶ ಬಿಲ್ ಗೇಟ್ಸ್‍ನನ್ನು ಪರಿಚಯಿಸಿದ್ದ. ಬಿಲ್ ಮೊದಲು ಹೇಳಿದ್ದೇನು ಅಂದ್ರೆ, ನಡೀರಿ ಸರ್, ನಿಮ್ಮ ಮನೆಗೆ. ಒಂದು ಒಳ್ಳೇ ಕಾಫೀ ಕೊಡಿಸಿ.
ಅಲೇ ಇದೇನಿದು ಇಷ್ಟು ನಿರರ್ಗಳವಾಗಿ ಕನ್ನಡ ಮಾತಾಡ್ತಿದ್ದಾನೆ. ಮೂಗಿನ ಮೇಲೆ ಬೆರಳು ಇಟ್ಕೊಳ್ತಿದ್ದಂತೆಯೇ (ಒಳಗಲ್ಲ), ಬಿಲ್ ಏನ್ ಸಾರ್ ನೀವು, ಅಷ್ಟೂ ಗೊತ್ತಾಗೋಲ್ವೇ? ನನ್ನ ಕಂಪನೀಲಿ ಎಷ್ಟೊಂದು ಕನ್ನಡದವರು ಇದ್ದಾರೆ. ಈಗ ಕರ್ನಾಟಕದಲ್ಲಿ ಕನ್ನಡ ಮಾತನಾಡೋವ್ರು ಕಡಿಮೆ ಆಗಿದ್ದಾರೇಂತ ಕನ್ನಡ ಪರ ಚಳುವಳಿ ಆರಂಭಿಸಿದ್ದಾರೆ. ಯು.ಎಸ್. ನಲ್ಲಿ ಬಹಳ ಜೋರಾಗಿ ಕನ್ನಡ ಪರ ಹೋರಾಟ ಮತ್ತು ಕನ್ನಡ ಕಲಿಸಲು ತರಗತಿಗಳು ಶುರುವಾಗಿವೆ. ನಾನೂ ಕನ್ನಡ ಕಲ್ತಿದ್ದೀನಿ. ನಿಮ್ಮ ಪಂಪು, ರನ್ನು, ರ್‍ಯಾಗ್ ಎಲ್ಲ ಹೆಸರುಗಳನ್ನೂ ತಿಳ್ಕೊಂಡಿದ್ದೀನಿ.
ಎಲಾ ಇವನಾ, ಬಲೇ ಘಾಟಿ ಮನುಷ್ಯ. ಪಂಪ, ರನ್ನ, ರಾಘವಾಂಕರ ಹೆಸರುಗಳು ಸರಿಯಾಗಿ ಹೇಳಕ್ಕೆ ಬರ್ದೇ ಇದ್ರೂ ಕನ್ನಡ ಚೆನ್ನಾಗಿ ಮಾತಾಡ್ತಾನೆ. ಸರಿ ಅಂತ ಮನೆಗೆ ಕರೆದುಕೊಂಡು ಹೊರಟೆ. ಟ್ಯಾಕ್ಸಿಯಲ್ಲಿ ಹೋಗೋಕ್ಕೆ ಇಲ್ಲಿಯ ಸರ್ದಾರ್ಜಿ ಡ್ರೈವರ್ ಗಳು ಸ್ವಲ್ಪ ಸರಿ ಇಲ್ಲ ಅಂತ ಯೋಚಿಸ್ತಿದ್ದಾಗ,
ಅರ್ರೇ ಯಾಕೆ ಯೋಚ್ನೆ ಮಾಡ್ತೀರ ಸರ್, ಆಟೋ ಭೈಯ್ಯಾ ಇದ್ದಾನಲ್ಲ ಕರೀರಿ, ಅನ್ನೋದೇ.
ಸರಿ, ಮನೆಗೆ ಕರ್ಕೊಂಡು ಹೋಗಿ ಕಾಫೀ ಕೊಟ್ಟ ನಂತರ, ಮಕ್ಕಳು ಅವನನ್ನೇ ಗಮನಿಸ್ತಿರೋದು ಅವನಿಗೆ ಗೋಚರವಾಯ್ತು. ಯಾಕೆ ಹಾಗೆ ನೋಡ್ತೀರ. ನನ್ನಲ್ಲಿ ಏನು ಹುಡುಕ್ತಿದ್ದೀರ? ಅಂತ ಕೇಳಿದ ಬಿಲ್.
ಸ್ವಲ್ಪ ಧೈರ್ಯ ಮಾಡಿದ ಮಗಳು, ಅಲ್ಲ ನಿಮ್ಮ ಹತ್ರ ಲ್ಯಾಪ್ ಟಾಪ್ ಅಥವಾ ಪಾಮ್ ಟಾಪ್ ಕಾಣಿಸ್ತಾನೇ ಇಲ್ಲ.
ಇಲ್ಲಮ್ಮ ಪುಟ್ಟಿ, ನಾನೀಗ ಕಂಪ್ಯೂಟರ್ ಉಪಯೋಗಿಸೋದು ಬಿಟ್ಟು ಬಿಟ್ಟಿದ್ದೀನಿ. ಈಗೇನಿದ್ರೂ ಬರೀ ಅಧ್ಯಾತ್ಮ ಚಿಂತನೆ. ಇವತ್ತು ಇಲ್ಲಿಯ ಭಾರತೀಯ ವಿದ್ಯಾ ಭವನದಲ್ಲಿ ಒಂದು ಉಪನ್ಯಾಸ ಕೊಡ್ಬೇಕು ಅದಕ್ಕೇ ಬಂದೆ. ನನಗೆ ಕನ್ನಡದವರು, ಅವರ ಮನೆ ಕಾಫೀ ತುಂಬಾ ಇಷ್ಟ. ಅದಕ್ಕೇ ನಿಮ್ಮ ಮನೆಗೆ ಬಂದೆ. ಸರಿ ಹೊರಟೆ ಅಂತ ಹೊರಟೇ ಬಿಟ್ಟ.
ಪಕ್ಕದಲ್ಲಿ ಹೆಂಡತಿ ತಿವಿದಾಗಲೇ ಎಚ್ಚರವಾಗಿದ್ದು, ಅಯ್ಯೋ ಇದು ಕನಸು ಅಂತ.

- Login or register to post comments
- 871 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಎಷ್ಟು ಡಾಲರ್ ಭೇಟಿ?
ಬಿಲ್ ಗೇಟ್ಸ್ ಅವರ ಸಂಪಾದನೆ ಪ್ರತಿ ಸೆಕೆಂಡಿಗೆ 300 ಡಾಲರ್ ಎಂದು ಎಲ್ಲೋ ಓದಿದ ನೆನಪು. ಅಂದರೆ ನಿಮ್ಮ ಭೇಟಿಗಾಗಿ ಅವರು ಕಳಕೊಂಡ ಹಣ ಎಷ್ಟಿರಬಹುದು?
ಸಿಗೋಣ,
ಪವನಜ
-----------
Think globally, Act locally
ಪವನಜ -> ಬಿಲ್ ಗೇಟ್ಸ್
ನಿಮ್ಮನ್ನೆ ಬಿಲ್ ಗೇಟ್ಸ್ ಆಗಿ ಕಂಡಿದ್ದರಂತೆೆ, ಶ್ರೀನಿವಾಸ್ ರವರು. ನೀವು ಏನೆಂದುಕೊಳ್ಳುತ್ತೀರೋ ಅಂತ ಈ ಕನಸಿನಲ್ಲಿ ಬಂದ 'ಪವನಜ' ಹೋಗಿ ಬರೆಯುವಾಗ ಬಿಲ್ ಗೇಟ್ಸ್ ಮಾಡಿಬಿಟ್ಟರಂತೆ.
--
"ಹೊಸ ಚಿಗುರು, ಹಳೆ ಬೇರು"
ಒಳ್ಳೆಯದೋ ಕೆಟ್ಟದೋ?
ನೀವು ಬಿಲ್ ಗೇಟ್ಸ್ ಮತ್ತು ಮೈಕ್ರೋಸಾಫ್ಟ್‌ನ್ನು ಯಾವಾಗಲೂ m$ ಎಂದೆಲ್ಲ ಬಯ್ಯುವವರು. ಹಾಗಿರುವಾಗ ನನ್ನನ್ನು ಬಿಲ್ ಗೇಟ್ಸ್‌ಗೆ ಹೋಲಿಸುವುದು ಯಾವ ಅರ್ಥದಲ್ಲಿ? ಒಳ್ಳೆಯ ಅರ್ಥದಲ್ಲೋ ಕೆಟ್ಟ ಅರ್ಥದಲ್ಲೋ?
ಸಿಗೋಣ,
ಪವನಜ
-----------
Think globally, Act locally
ಒಳ್ಳೆಯ ದೃಷ್ಟಿಯಲ್ಲಿ
ಕೆಟ್ಟ ದೃಷ್ಟಿಯಲಿ ನಿಮ್ಮನ್ನು ಬಿಲ್ ಗೇಟ್ಸ್ ಜೊತೆ ಹೋಲಿಸೋಕ್ಕೆ ಆಗತ್ತಾ ಸಾರ್! ಅದೂ ನಿಮ್ಮ ಬೀಸಣಿಗೆಯ ಒಂದು ಗರಿ ನಾನಾಗಿ. ವಿಷಯ ಹೀಗಿದೆ ಸಾರ್,
ಮೊನ್ನೆ ಹರಿಯವರೊಂದಿಗೆ ಚಾಟ್ ಮಾಡ್ತಿರುವಾಗ ನಿಮ್ಮ ಬಗ್ಗೆ ಪ್ರಸ್ತಾಪವಾಯಿತು (ಗೂಗ್ಲ್ ಅರ್ಥ್ ಲೇಖನದ ಬಗ್ಗೆ). ನಾನು ಅವರನ್ನು ಕೇಳಿದೆ, ಅದು ಹೇಗೆ ಪವನಜ ಅವರು ಇಷ್ಟು ಆಕ್ಟಿವ್ ಆಗಿರ್ತಾರೆ, ಒಂದೇ ಸಮನೆ ಅವರು ಬರೆಯುತ್ತಿರುತ್ತಾರೆ, ಯಾವಾಗಲೂ ಮನೆಯಲ್ಲೇ ಇರ್ತಾರಾ ಅಂತ. ಅದಕ್ಕೆ ಅವರು ಹೇಳಿದ್ದು, ನೀವು ಎಲ್ಲ ಕಡೆಗೂ ಲ್ಯಾಪ್ ಟಾಫ್ ತೆಗೆದುಕೊಂಡು ಹೋಗ್ತೀರಿ, ಹೋದಲ್ಲೆಲ್ಲಾ ಕೆಲಸ ಮಾಡ್ತಿರ್ತೀರಿ ಅಂತ. ಆಗ ನನ್ನ ತಲೆಗೆ ಹೊಳೆದದ್ದು ಕಂಪ್ಯೂಟರ್ ಬಗ್ಗೆ ಇಷ್ಟು ಅಟ್ಯಾಚ್‍ಮೆಂಟ್ ಇಟ್ಕೊಂಡಿರೋವ್ರಿಗೆ ಅದರ ಬಗ್ಗೆ ವೈರಾಗ್ಯ ಬಂದು ಅಧ್ಯಾತ್ಮದ ಕಡೆ ಒಲವು ಬಂದ್ರೆ ಹೇಗಿರತ್ತೆ. ಅದನ್ನೇ ನಾನು ಕನಸಿನಲ್ಲಿ ಹೀಗೆ ಕಂಡೆ.
===
ತವಿಶ್ರೀನಿವಾಸ
ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ)
ಹಾಂ...
ಹಾಗಿದ್ದರೆ ಹೊಸ ಝೆನ್ ಕತೆ ಹೀಗಿರಬಹುದಾ..?
ಒಬ್ಬ ಝೆನ್ ಗುರು ಇದ್ದ. ಅವನ ಬಳಿ ಒಬ್ಬ ಸಾಫ಼್ಟ್‍ವೇರ್ ಎಂಜಿನಿಯರ್ ಬಂದ. "ಗುರುವೇ ನನಗೆ ಮನಶ್ಯಾಂತಿ ಬೇಕಾಗಿದೆ.. ದಾರಿ ತೋರು.." ಎಂದ.
ಗುರು ಅದಕ್ಕೆ "ನಾಳೆ ನಿನ್ನ ಲ್ಯಾಪ್‍ಟಾಪ್‍ನಲ್ಲಿ ವಿಂಡೋಸ್ ಲೋಡ್ ಮಾಡಿಕೊಂಡು ಬಾ.. ಮನಶ್ಯಾಂತಿ ತೋರಿಸುತ್ತೀನಿ" ಅಂದ.
ಮಾರನೇ ದಿನ ಎಂಜಿನಿಯರ್ ಲ್ಯಾಪ್‍ಟಾಪ್‍ನಲ್ಲಿ ವಿಂಡೋಸ್ ಲೋಡ್ ಮಾಡಿಕೊಂಡು ಹೋದ. ಗುರು ಏನೂ ಮಾತಾಡದೆ ನೂರು ಪುಟಗಳ ಒಂದು ಗ್ರಂಥವನ್ನು ಅವನ ಕೈಗಿತ್ತು "ಇದೆಲ್ಲವನ್ನೂ ಟೈಪಿಸು" ಎಂದ.
ಎಂಜಿನಿಯರ್ ಅದೆಲ್ಲವನ್ನೂ ಮುಗಿಸಿದ. ಆದರೂ ಆತನಿಗೆ ಮನಶ್ಯಾಂತಿ ಸಿಗಲಿಲ್ಲ.
ಮತ್ತೆ ಗುರುವನ್ನು ಕಂಡ. ಆಗ ಗುರು ಅವನಿಗೆ " ಇದೆಲ್ಲಾ ಟೈಪಿಸುವಾಗ ಎಷ್ಟು ಬಾರಿ ಸಿಸ್ಟಮ್ ರಿಬೂಟ್ ಮಾಡಿದೆ?" ಎಂದು ಕೇಳಿದ.
ಶಿಷ್ಯ ಬುದ್ದಿವಂತ. ಅವನು ಅದೆಲ್ಲವನ್ನೂ ಲೆಕ್ಕದಲ್ಲಿಟ್ಟುಕೊಂಡಿದ್ದ. "ಒಟ್ಟು ಹತ್ತು ಬಾರಿ ರಿಬೂಟ್ ಮತ್ತು ಎರಡು ಬಾರಿ ರಿಲೋಡ್" ಎಂದ.
"ಹಾಗಿದ್ದರೆ ನಿನ್ನ ಲ್ಯಾಪ್‍ಟಾಪ್ ಅನ್ನು ಎಸೆದುಬಿಡು" ಎಂದು ಗುರು ಹೇಳಿದ.
ಶಿಷ್ಯನಿಗೆ ಮನಶ್ಯಾಂತಿ ಸಿಕ್ಕಿತು ..
ನಿಷ್ಟುರವಾದ ಉತ್ತರ, ಕ್ಷಮಿಸಬೇಕು
ನನಗಂತೂ ನೀವು ಬರೆದಿರುವ ಝೆನ್ ಕಥೆಯ mockery (ತಮಾಶೆಗಾದರೂ) ಒಂದಷ್ಟೂ sensible ಆಗಿ ಕಾಣಲಿಲ್ಲ.
ಗಲೀಜು 'ಗಲೀಜಾಗಿದೆ' ಎಂದು ವಿವರಿಸಿ ಹೇಳುವುದರಲ್ಲಿ ಪ್ರಯೋಜನವಿಲ್ಲ. ಮಾಲಿನ್ಯ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬುದನ್ನು ತಿಳಿದಿದ್ದೂ ಗಾಡಿ ಓಡಿಸಿಕೊಂಡು ಬೆಂಗಳೂರೆಲ್ಲ ತಿರುಗಾಡುವುದಿಲ್ಲವೇ ನಾವುಗಳು? ಅಂತದ್ದೇ ಪರಿಸ್ಥಿತಿ ವಿಂಡೋಸ್ ಬಳಸುವವರದ್ದು. ಓಡಾಡುವುದು ನಿಲ್ಲಿಸಲಾಗದು, ಮಾಲಿನ್ಯ ಸಹಿಸಲಾಗದು... ಬೇರೆ ಚಾರವೇ ಇಲ್ಲ!
ಒಟ್ಟಿನಲ್ಲಿ ನೀವು ಸಂಪದ ರೆಗ್ಯೂಲರ್ ಆಗಿ ಓದುತ್ತಾ ಬಂದಿರುವುದಂತೂ ಗೋಚರವಾಗ್ತಿದೆ
(ಝೆನ್ ಓದಿ ಓದಿ ಇದನ್ನು ಬರೆಯೋ ಇನ್ಸ್ಪಿರೇಶನ್ ಬಂತಲ್ಲ! ಅದೇ ಇದರ ಪ್ರೂಫ್)
--
"ಹೊಸ ಚಿಗುರು, ಹಳೆ ಬೇರು"
ಅಗಣಿತ
ನನ್ನ ಪ್ರಕಾರ ಅವರು ಅಧ್ಯಾತ್ಮದೆಡೆಗೆ ತಿರುಗಿದ್ದಾರೆ. ಅದೂ ಅಲ್ಲದೇ ಕನ್ನಡದಲ್ಲಿ ಮಾತನಾಡುವ ಹಂಬಲ ಮತ್ತು ಕನ್ನಡದವರ ಮನೆಯ ಕಾಫಿ ಬೇಕಿದ್ದರಿಂದ ಬಹುಶ: ನಾನೇ ಅವರಿಗೆ ಛಾರ್ಜ್ ಮಾದ್ಬೇಕಿತ್ತೇನೋ?
ಆದರೂ ಅವರ ಭೇಟಿ ಅಗಣಿತ.
---
ತವಿಶ್ರೀನಿವಾಸ