ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)
ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ನನ್ನ ಸುತ್ತಲು ಬಳಕೆಯಾಗುತ್ತಿರುವ ನನಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.ಅನುವಾದ ಪ್ರಯತ್ನದ ಎರಡನೇ ಕಂತು ಸುದೀರ್ಘ ಬಿಡುವಿನ ನಂತರ ಈಗ ನಿಮ್ಮ ಮುಂದಿದೆ. ಇದರ ಮೊದಲ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ. - ಹರಿ ಪ್ರಸಾದ್ ನಾಡಿಗ್
ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಎರಡನೇ ಕಂತು)
(ಮೊದಲ ಕಂತಿನಿಂದ ಮುಂದುವರೆದ ಭಾಗ...)
ಹೀಗೆ ನಿಮಗೆ ಬಂದ ಡಾಕ್ಯುಮೆಂಟಿನ ಬಗ್ಗೆ "ಇದು ನನಗೊಬ್ಬನಿಗೇ ಆದದ್ದು" ಎಂದು ನೀವು ಆಲೋಚಿಸಿದರೆ, ಅದನ್ನು ಸ್ವತಃ ನಿಭಾಯಿಸಲು ಪ್ರಯತ್ನಿಸೋದು ಸಹಜ. ಆದರೆ ಅದೊಂದು ಕ್ರಮಬದ್ಧವಾದ ಮಾರಕ ಅಭ್ಯಾಸ ಎಂದು ನೀವದನ್ನು ಗುರುತಿಸಿದಾಗ ಒಂದು ಹೊಸ ದೃಷ್ಟಿಕೋನ ಅನಿವಾರ್ಯವಾಗುತ್ತದೆ. ಆ ಫೈಲನ್ನು ನಿಮ್ಮ ತಂತ್ರಾಂಶ ಓದುವಂತೆ ಮಾಡುವುದು ಹಳೆಯ ಖಾಯಿಲೆಯ ಸೂಚನೆಗಳಿಗೆ ಚಿಕಿತ್ಸೆ ಕೊಟ್ಟಂತೆ. ಈ ಖಾಯಿಲೆಯನ್ನು ಗುಣ ಮಾಡಲು ನಾವು ವರ್ಡ್ ಡಾಕ್ಯುಮೆಂಟುಗಳನ್ನು ಬಳಸಬೇಡಿ ಎಂದು ಜನರ ಮನವೊಪ್ಪಿಸಬೇಕು.
ಕಳೆದ ಒಂದು ವರ್ಷದಲ್ಲಿ ನನಗೆ ಬಂದ ವರ್ಡ್ ಆಟ್ಟಾಚ್ಮೆಂಟುಗಳಿಗೆ ಉತ್ತರಿಸುತ್ತ ವರ್ಡ್ ಫೈಲು ಬಳಸುವುದು ಕೆಟ್ಟ ಅಭ್ಯಾಸ ಎಂದು ಸೌಜನ್ಯದ ಸಂದೇಶ ಕಳುಹಿಸುವ ಅಭ್ಯಾಸ ಮಾಡಿಕೊಂಡಿದ್ದೇನೆ ಮತ್ತು ನನಗೆ ಕಳುಹಿಸಿದ್ದನ್ನು ರಹಸ್ಯವಲ್ಲದ ಫಾರ್ಮ್ಯಾಟಿನಲ್ಲಿ ಪುನಃ ಕಳುಹಿಸಿ ಎಂದು ಕೇಳಲಾರಂಭಿಸಿದ್ದೇನೆ. ಹೀಗೆ ಮಾಡುವುದು ಓದಲು ಸಾಧ್ಯವಾಗದ, ಸ್ಪಷ್ಟವಾಗಿಲ್ಲದ ASCII ವಾಕ್ಯಗಳನ್ನು ಓದುವುದಕ್ಕಿಂದ ತುಂಬಾ ಕಡಿಮೆ ಕೆಲಸ. ಸಾಮಾನ್ಯವಾಗಿ ಜನ ಈ ವಿಷಯ ಅರ್ಥಮಾಡಿಕೊಳ್ಳುತ್ತಾರೆಂಬುದನ್ನು ಗಮನಿಸಿದ್ದೇನೆ, ಹಲವರು ಮತ್ತೆ ಬೇರೆಯವರಿಗೆ ವರ್ಡ್ ಫೈಲುಗಳನ್ನು ಕಳುಹಿಸುವುದಿಲ್ಲವೆಂದೂ ಹೇಳುತ್ತಾರೆ.
ನಾವೆಲ್ಲರೂ ಒಟ್ಟಾಗಿ ಈ ಕೆಲಸವನ್ನು ಮಾಡಿದಲ್ಲಿ ಹೆಚ್ಚಿನ ಪ್ರಭಾವ ಬೀರಬಲ್ಲೆವು. ಸೌಜನ್ಯದ ಒಂದು ಕೋರಿಕೆಯನ್ನು ಉದಾಸೀನ ಮಾಡಿದ ಜನರಿಗೆ ಇಂತಹ ಹಲವು ಸೌಜನ್ಯದ ಕೋರಿಕೆಗಳು ತಲುಪಿದಲ್ಲಿ ಅವರುಗಳು ತಮ್ಮ ಅಭ್ಯಾಸವನ್ನು ಬದಲಾಯಿಸಬಹುದು. ನಮಗೆ ವರ್ಡ್ ಫೈಲುಗಳನ್ನು ಕಳುಹಿಸುವ ಎಲ್ಲರಲ್ಲೂ ಈ ವಿಷಯವನ್ನು ರೂಢಿಯಂತೆ ಎತ್ತತೊಡಗಿದರೆ "ವರ್ಡ್ ಫೈಲುಗಳನ್ನ ಕಳುಹಿಸಬೇಡಿ" ಎಂಬುದನ್ನ ಅಂತರ್ಜಾಲದ ಶಿಷ್ಟಾಚಾರವನ್ನಾಗಿ ಮಾಡಬಹುದು.
ಈ ಪ್ರಯತ್ನವನ್ನು ಸಫಲಗೊಳಿಸಲು ನೀವೊಂದು ತಯಾರಿಸಿದ ಉತ್ತರವೊಂದನ್ನು ಬರೆದಿಟ್ಟುಕೊಳ್ಳಬೇಕಾಗಬಹುದು. ಅನಿವಾರ್ಯವಾದಾಗಲೆಲ್ಲ ಕೂಡಲೆ ಕಳುಹಿಸಬಹುದು. ನಾನು ಎರಡು ಉದಾಹರಣೆಗಳನ್ನು ಸೇರಿಸಿರುವೆ: ಇತ್ತೀಚೆಗೆ ನಾ ಬಳಸುತ್ತಿರುವ ಆವೃತ್ತಿಯೊಂದು, ಮತ್ತೊಂದು ವರ್ಡ್ ಬಳಸುವವರಿಗೆ ಇತರ ಫಾರ್ಮ್ಯಾಟುಗಳಿಗೆ ಪರಿವರ್ತಿಸುವುದು ಹೇಗೆ ಎಂಬುದನ್ನು ತಿಳಿಸುವ ಹೊಸ ಆವೃತ್ತಿ. ಇವುಗಳೊಂದಿಗೆ ಓದುಗರು ಕಳುಹಿಸಿಕೊಟ್ಟ ಹಲವು ಸಲಹೆಗಳನ್ನೂ ಸೇರಿಸಿರುವೆ.
ಈ ಉತ್ತರಗಳನ್ನು ನೀವು ಹಾಗೆಯೇ ಬಳಸಬಹುದು ಅಥವ ನಿಮ್ಮ ಆಯ್ಕೆಗೆ ತಕ್ಕಂತೆ ವೈಯಕ್ತಿಕಗೊಳಿಸಬಹುದು - ಅಥವ ನಿಮ್ಮದೇ ಒಂದು ಹೊಸತನ್ನ ಕೂಡ ಬರೆದುಕೊಳ್ಳಬಹುದು. ನಿಮ್ಮ ಐಡಿಯಗಳು ಹಾಗೂ ವ್ಯಕ್ತಿತ್ವಕ್ಕೆ ಸರಿಹೊಂದುವಂತೆ ಇದನ್ನು ಖಂಡಿತ ಹೊಸದಾಗಿ ಬರೆದುಕೊಳ್ಳಬಹುದು. ನೀವು ಕಳುಹಿಸುವ ಉತ್ತರಗಳು ವೈಯಕ್ತಿಕವಾಗಿದ್ದು ಒಂದೇ ರೀತಿ ಇರದಿದ್ದಲ್ಲಿ ಚಳುವಳಿ ಇನ್ನೂ ಹೆಚ್ಚಿನ ಪರಿಣಾಮ ಬೀರಬಲ್ಲುದು.
ಉತ್ತರಗಳು ವರ್ಡ್ ಫೈಲುಗಳನ್ನು ಕಳುಹಿಸುವ ವ್ಯಕ್ತಿಗಳಿಗೆ ಕಳುಹಿಸಲು ಮೀಸಲಾದದ್ದು. ಆದರೆ ಯಾವುದಾದರೂ ಸಂಸ್ಥೆ ನಿಮಗೆ ವರ್ಡ್ ಫಾರ್ಮ್ಯಾಟ್ ಬಳಕೆಯನ್ನು ಹೇರಿದರೆ ಅಂಥವರಿಗೆ ಬೇರೆಯ ರೀತಿಯ ಉತ್ತರ ಬರೆಯಬೇಕಾಗಬಹುದು. ಅಲ್ಲಿ, ವ್ಯಕ್ತಿಯೊಬ್ಬನ ಚಟುವಟಿಕೆಯ ಮೇಲೆ ಪ್ರಭಾವ ಬೀರದಂತಹ ನ್ಯಾಯದ ಮಹತ್ವದ ಬಗ್ಗೆ ಗಮನ ಸೆಳೆಯಬಹುದು.
ಕೆಲಸ ನೇಮಕಾತಿ ಮಾಡುವ ಸಿಬ್ಬಂಧಿ ರೆಸ್ಯೂಮುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಕೇಳಬಹುದು. ಅಚ್ಚರಿಯೆಂದರೆ, ಕೆಲವರು ಮುಕ್ತ ತಂತ್ರಾಂಶದ ಕೆಲಸಗಳಿಗೆ ಯಾರನ್ನಾದರೂ ಹುಡುಕುವಾಗ ಕೂಡ ಈ ಕೆಲಸ ಮಾಡುತ್ತಾರೆ. (ಹೀಗೆ ಮುಕ್ತ ತಂತ್ರಾಂಶದ ಕೆಲಸಗಳಿಗೆ ಹೀಗೆ ಮಾಡುತ್ತಿರುವವರು ಕೆಲಸಕ್ಕೆ ಯೋಗ್ಯರನ್ನು ಪಡೆಯುವ ಸಂಭವ ಕಡಿಮೆ) ಈ ಅಭ್ಯಾಸ ಬದಲಾಗುವತ್ತ ಸಹಾಯ ಮಾಡಲು ನೀವು ನಿಮ್ಮ ರೆಸ್ಯೂಮಿನ ಇತರ ಫಾರ್ಮ್ಯಾಟುಗಳಿಗೆ ನೀಡಿರುವ ಲಿಂಕುಗಳ ಕೆಳಗೆ ಈ ಪುಟಕ್ಕೊಂದು ಲಿಂಕ್ ನೀಡಬಹುದು. ವರ್ಡ್ ಫಾರ್ಮ್ಯಾಟನ್ನು ಹುಡುಕಿಕೊಂಡು ಯಾರಾದರೂ ಬಂದರೆ ಬಹುಶಃ ಈ ಪುಟವನ್ನು ಓದಿಕೊಳ್ಳುವರು.
ನಾವಿರುವಷ್ಟು ಜನ, ಬರಿಯ ಒಂದು ಮಾತು ಬಾಯ್ಬಿಟ್ಟು ಕೇಳುವುದರಿಂದಲೆ ಬದಲಾವಣೆಯನ್ನು ತರಬಹುದು.
ನೀವು ಮೈಕ್ರೊಸಾಫ್ಟಿನ ವರ್ಡ್ ಫಾರ್ಮ್ಯಾಟಿನಲ್ಲೊಂದು ಅಟ್ಟಾಚ್ಮೆಂಟ್ ಕಳುಹಿಸಿದ್ದೀರಿ. ವರ್ಡ್ ಫಾರ್ಮ್ಯಾಟು ಒಂದು ರಹಸ್ಯ ಹಾಗೂ ಮೈಕ್ರೊಸಾಫ್ಟಿನ ಒಡೆತನದ ಫಾರ್ಮ್ಯಾಟು - ನನಗದು ಓದಲಾಗುತ್ತಿಲ್ಲ. ನೀವು ಕಳುಹಿಸಿದ ಫೈಲನ್ನೇ ಬರಿಯ ಟೆಕ್ಸ್ಟ್ ಫಾರ್ಮ್ಯಾಟು ಅಥವ ಎಚ್ ಟಿ ಎಮ್ ಎಲ್ ಅಥವ ಪಿ ಡಿ ಎಫ್ ನಲ್ಲಿ ಕಳುಹಿಸಿದರೆ ನನಗೆ ಓದಲಾಗುವುದು.
ಜನರಿಗೆ ಡಾಕ್ಯುಮೆಂಟುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸುವುದು ಕೆಟ್ಟ ಪ್ರಭಾವ ಬೀರುತ್ತದೆ, ಏಕೆಂದರೆ ಈ ಅಭ್ಯಾಸ ಜನರಿಗೆ ಮೈಕ್ರೊಸಾಫ್ಟಿನ ತಂತ್ರಾಂಶಗಳನ್ನು ಬಳಸುವಂತೆ ಒತ್ತಡ ಹೇರುತ್ತದೆ. ಒಟ್ಟಿನಲ್ಲಿ, ನೀವು ಮೈಕ್ರೊಸಾಫ್ಟಿನ ಏಕಸ್ವಾಮ್ಯತೆಯ ಮನೆಯನ್ನು ಸ್ವತಃ ಎತ್ತಿಹಿಡಿಯುವ ಸ್ಥಂಭವಾಗಿಬಿಡುತ್ತೀರಿ. ಈ ಒಂದು ಸಮಸ್ಯೆಯು ಗ್ನು/ಲಿನಕ್ಸ್ ವಿಸ್ತಾರವಾಗಿ ಅಳವಡಿಕೆಯಾಗುವುದನ್ನು ತಡೆಗಟ್ಟಿದೆ. ಇತರರೊಂದಿಗೆ ಸಂವಹನ ನಡೆಸುವಾಗ ವರ್ಡ್ ಫೈಲನ್ನು ಬಳಕೆಯನ್ನ ಒಮ್ಮೆ ದಯವಿಟ್ಟು ಪುನಃಪರಿಶೀಲಿಸಿ ನೋಡುತ್ತೀರ ತಾನೆ?
ನೀವು ಮೈಕ್ರೊಸಾಫ್ಟಿನ ವರ್ಡ್ ಫಾರ್ಮ್ಯಾಟಿನಲ್ಲೊಂದು ಅಟ್ಟಾಚ್ಮೆಂಟ್ ಕಳುಹಿಸಿದ್ದೀರಿ. ವರ್ಡ್ ಫಾರ್ಮ್ಯಾಟು ಒಂದು ರಹಸ್ಯ ಹಾಗೂ ಮೈಕ್ರೊಸಾಫ್ಟಿನ ಒಡೆತನದ ಫಾರ್ಮ್ಯಾಟು - ನನಗದು ಓದಲು ಕಷ್ಟವಾಗುತ್ತಿದೆ. ನೀವು ಕಳುಹಿಸಿದ ಫೈಲನ್ನೇ ಬರಿಯ ಟೆಕ್ಸ್ಟ್ ಫಾರ್ಮ್ಯಾಟು ಅಥವ ಎಚ್ ಟಿ ಎಮ್ ಎಲ್ ಅಥವ ಪಿ ಡಿ ಎಫ್ ನಲ್ಲಿ ಕಳುಹಿಸಿದರೆ ನನಗೆ ಓದಲಾಗುವುದು.
ವರ್ಡ್ ಫಾರ್ಮ್ಯಾಟಿನಲ್ಲಿ ಡಾಕ್ಯುಮೆಂಟುಗಳನ್ನು ಹಂಚಿಕೊಳ್ಳುವುದು ನಿಮಗೆ ಮತ್ತು ಇತರರಿಗೆ ತೊಂದರೆಯೆ. ವೀಕ್ಷಿಸುತ್ತಿರುವವರು ವರ್ಡ್ ನ ಯಾವುದಾದರೂ ಬೇರೆ ವರ್ಶನ್ ಬಳಸುತ್ತಿದ್ದಲ್ಲಿ ಅವರಿಗೆ ನೀವು ಕಳುಹಿಸಿದ ಡಾಕ್ಯುಮೆಂಟು ಹೇಗೆ ಕಾಣುತ್ತದೆ ಎಂದು ಖರೆ ಹೇಳಬರುವುದಿಲ್ಲ; ಅವರಿಗೆ ಓದಲಾಗದೆಯೂ ಇರಬಹುದು.
ವರ್ಡ್ ಅಟ್ಟಾಚ್ಮೆಂಟುಗಳನ್ನಂತು ಪಡೆಯುವುದು ಕೆಡುಕು ಎಕೆಂದರೆ ಅವುಗಳು ವೈರಸ್ಸುಗಳನ್ನು ಹೊತ್ತು ತರುತ್ತವೆ (http://en.wikipedia.org/wiki/Macro_virus ನೋಡಿ). ವರ್ಡ್ ಅಟ್ಟಾಂಚ್ಮೆಂಟುಗಳನ್ನು ಕಳುಹಿಸುವುದೂ ನಿಮಗೆ ಕೆಟ್ಟದ್ದು ಏಕೆಂದರೆ ವರ್ಡ್ ಡಾಕ್ಯುಮೆಂಟ್ ಒಂದರಲ್ಲಿ ಅದರ ಕರ್ತೃವಿನ ಬಗ್ಗೆ ಅಡಗಿಸಿದ ಮಾಹಿತಿಯಿರುತ್ತದೆ. ಲೇಖಕರ (ಬಹುಶಃ ನಿಮ್ಮ) ಚಟುವಟಿಕೆಗಳ ನಿಗಾ ವಹಿಸುತ್ತಿರುವವರಿಗೆ ಹೊಂಚುಹಾಕಲು ಇದು ಸುಲಭದ ಹಾದಿ. ನೀವು ಅಳಿಸಿಹಾಕಿದೆನೆಂದುಕೊಂಡ ಮಾಹಿತಿ ಕೂಡ ನಿಮ್ಮನ್ನು ಪೇಚಿಗೆ ಸಿಕ್ಕಿಹಾಕಿಸುವಷ್ಟರ ಮಟ್ಟಿಗೆ ಹಾಗೆಯೇ ಉಳಿದಿರಬಹುದು.
ಆದರೆ ಇದೆಲ್ಲದಕ್ಕೂ ಮಿಗಿಲಾಗಿ, ಜನರಿಗೆ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋದು ಅವರ ಮೇಲೆ ಮೈಕ್ರೊಸಾಫ್ಟಿನ ತಂತ್ರಾಂಶಗಳನ್ನು ಬಳಸುವಂತೆ ಒತ್ತಡ ಹೇರುತ್ತದೆ. ಅಲ್ಲದೆ ಅವರಿಗೆ ಇನ್ಯಾವುದೇ ಪರ್ಯಾಯ ಅಯ್ಕೆ ದೂರವಿಡುವಲ್ಲಿ ಸಹಾಯ ಮಾಡಿರುತ್ತದೆ. ಪರಿಣಾಮ, ನೀವು ಮೈಕ್ರೊಸಾಫ್ಟಿನ ಏಕಸ್ವಾಮ್ಯತೆಯನ್ನು ಭದ್ರಗೊಳಿಸುವ ಸ್ಥಂಭವಾಗಿಬಿಡುತ್ತೀರಿ. ಈ ಒತ್ತಡ ಮುಕ್ತ ತಂತ್ರಾಂಶ ವಿಸ್ತಾರವಾಗಿ ಅಳವಡಿಕೆಯಾಗುವುದನ್ನು ತಡೆಗಟ್ಟಿದೆ. ಇತರರೊಂದಿಗೆ ಸಂವಹನ ನಡೆಸುವಾಗ ವರ್ಡ್ ಫಾರ್ಮ್ಯಾಟ್ ಬಳಕೆಯನ್ನ ಒಮ್ಮೆ ದಯವಿಟ್ಟು ಪುನಃಪರಿಶೀಲಿಸಿ ನೋಡುತ್ತೀರ ತಾನೆ?
ಫೈಲನ್ನು ವರ್ಡ್ ನಿಂದ ಎಚ್ ಟಿ ಎಮ್ ಎಲ್ (HTML) ಗೆ ಪರಿವರ್ತಿಸುವುದು ಬಹಳ ಸುಲಭ. ಡಾಕ್ಯುಮೆಂಟ್ ತೆರೆದು, File ಎಂಬುದರ ಮೇಲೆ ಕ್ಲಿಕ್ ಮಾಡಿ, Save As ಎಂಬುದನ್ನು ಕ್ಲಿಕ್ಕಿಸಿ. Save As ಎನ್ನುವ ಬಾಕ್ಸಿನ ಕೆಳಭಾಗದಲ್ಲಿ HTML Document ಅಥವ Web Page ಎಂಬುದನ್ನು ಆಯ್ಕೆಮಾಡಿ. ತದನಂತರ ಫೈಲನ್ನು Save ಮಾಡಿ. ಹೊಸ HTML ಡಾಕ್ಯುಮೆಂಟನ್ನು ನೀವೀಗ ವರ್ಡ್ ಡಾಕ್ಯುಮೆಂಟ್ ಬದಲಾಗಿ ಅಟ್ಟಾಚ್ಮೆಂಟ್ ರೂಪದಲ್ಲಿ ಕಳುಹಿಸಬಹುದು. ವರ್ಡ್ ತಂತ್ರಾಂಶ ಯದ್ವಾತದ್ವಾ ಬದಲಾಗುತ್ತಿರುತ್ತದೆ -- ನಿಮಗೇನಾದರೂ ಸ್ವಲ್ಪ ಭಿನ್ನವಾದ ಮೆನುಗಳ ಹೆಸರುಗಳು ಕಂಡುಬಂದಲ್ಲಿ, ದಯವಿಟ್ಟು ಅವುಗಳನ್ನು ಪ್ರಯತ್ನಿಸಿ.
ಬರಿಯ ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸುವುದೂ ಹೆಚ್ಚು ಕಡಿಮೆ ಹಾಗೆಯೇ -- HTML Document ಬದಲು, Save As Type ಎಂಬಲ್ಲಿ Text Only ಅಥವ Text Document ಎಂಬುದನ್ನು ಆಯ್ಕೆಮಾಡಿಕೊಳ್ಳಿ.
ನಿಮ್ಮ ಕಂಪ್ಯೂಟರಿನಲ್ಲಿ ಪಿ ಡಿ ಎಫ್ (PDF) ಫಾರ್ಮ್ಯಾಟಿಗೆ ಪರಿವರ್ತಿಸುವ ಪ್ರೋಗ್ರಾಮ್ ಕೂಡ ಇರಬಹುದು. File => Print ಎಂಬುದನ್ನು ಸೆಲೆಕ್ಟ್ ಮಾಡಿ. ಲಭ್ಯವಿರುವ ಪ್ರಿಂಟರುಗಳ ಪಟ್ಟಿಯಲ್ಲಿ ವಿಹರಿಸಿ ಪಿ ಡಿ ಎಫ್ ಕನ್ವರ್ಟರ್ ಎಂಬುದಿದ್ದರೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ. Print ಬಟನ್ನಿನ ಮೇಲೆ ಕ್ಲಿಕ್ಕಿಸಿ ತದನಂತರ ಅದು ಕೇಳಿದಾಗ ಪಿ ಡಿ ಎಫ್ ಫೈಲಿಗೊಂದು ಹೆಸರನ್ನು ಎಂಟರ್ ಮಾಡಿ.
ಇಲ್ಲಿ ಮತ್ತೊಂದು ಹೊಸ ವಿಧಾನವುಂಟು, ಸಲಹೆ ನೀಡಿದವರು ಬಾಬ್ ಚಾಸೆಲ್. ಇದನ್ನು ನಿರ್ದಿಷ್ಟ ಉದಾಹರಣೆಗೆ ನೀವು ಬದಲಾಯಿಸಿಕೊಳ್ಳಬೇಕಾಗಿಬರಬಹುದು, ಅಲ್ಲದೆ ನಿಮಗೆ ಡಾಕ್ಯುಮೆಂಟಿನಲ್ಲಿರುವ ಕಂಟೆಂಟನ್ನು ಹೊರತೆಗೆದು ಎಷ್ಟಿದೆ ಎಂಬುದನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತದೆ ಎಂದುಕೊಂಡದ್ದು.
ನೀವು ಇತ್ತೀಚೆಗೆ ಕಳಿಸಿದ ಸಂದೇಶದಲ್ಲಿ ಕಂಟೆಂಟ್ ಬರೇ 27,133 bytes ಇದ್ರೂ ನೀವ್ಯಾಕೆ ನನಗೆ 876,377 bytes ಕಳುಹಿಸೋದಕ್ಕೆ ಹೋಗಿದ್ದು? ನನಗೆ ಬಿಡಿಸಲಾಗದ ಒಗಟಾಗಿದೆ.
ನಿರ್ದಿಷ್ಟವಲ್ಲದ, ಹಿಗ್ಗಾಮುಗ್ಗಿ ಊದುಕೊಂಡಂತಿರುವ ಮೈಕ್ರೊಸಾಫ್ಟಿನ ರಹಸ್ಯದ .doc ಫಾರ್ಮ್ಯಾಟಿನಲ್ಲಿ ನನಗೆ ಐದು ಫೈಲುಗಳನ್ನ ಕಳುಹಿಸಿದ್ದೀರಿ. ಅಂತರ್ರಾಷ್ಟ್ರೀಯವಾದ, ಸಾರ್ವಜನಿಕ ಮತ್ತೂ ಹೆಚ್ಚು ಕ್ಷಮತೆಯುಳ್ಳ ಪ್ಲೇಯ್ನ್ ಟೆಕ್ಸ್ಟ್ ಫಾರ್ಮ್ಯಾಟಿನಲ್ಲಿ ಕಳುಹಿಸಬಹುದಿತ್ತಲ್ವ.
ಮೈಕ್ರೊಸಾಫ್ಟು (ಇತ್ತೀಚೆಗೆ ಕೀನ್ಯ ಮತ್ತು ಬ್ರಾಸಿಲ್ ನಲ್ಲಿ ಮಾಡಿದಂತೆ) ಸ್ಥಳೀಯ ಪೋಲಿಸರ ಮೂಲಕ ವಿದಾರ್ಥಿಗಳು ತಂತ್ರಾಂಶದ ಆಕರ ಅಧ್ಯಯನ ಮಾಡಲಾಗದಂತೆ, ನವ ಉದ್ಯಮಿಗಳು ಹೊಸ ಕಂಪೆನಿಗಳನ್ನು ಹುಟ್ಟು ಹಾಕದಂತೆ, ಹಾಗೂ ನುರಿತರು ತಮ್ಮ ಸೇವೆಯನ್ನು ನೀಡಲಾಗದಂತೆ ಹೊಸ ಕಾನೂನುಗಳನ್ನು ಜಾರಿಗೆ ತರಬಲ್ಲದು. ಅವರಿಗೆ ನಿಮ್ಮ ಬೆಂಬಲ ದಯವಿಟ್ಟು ನೀಡಬೇಡಿ.
ಜಾನ್ ಡಿ. ರಾಮ್ಸ್ಡೆಲ್ ರವರು ಜನರಿಗೆ ಮೈಕ್ರೊಸಾಫ್ಟಿನ ವರ್ಡ್ ಹಾಗೂ ಪವರ್ ಪಾಯಿಂಟ್ ಅಟಾಚ್ಮೆಂಟುಗಳನ್ನು ವಿರೋಧಿಸಲು ಈ ಕೆಳಗಿನಂತೆ ಪುಟ್ಟ ವಾಕ್ಯದೊಂದಿಗೆ ತಮ್ಮ ಮೇಯ್ಲುಗಳಲ್ಲಿ ಸಹಿ ಹಾಕುವ ಸಲಹೆ ನೀಡುತ್ತಾರೆ:
ದಯವಿಟ್ಟು ನನಗೆ ವರ್ಡ್ ಅಥವ ಪವರ್ ಪಾಯಿಂಟ್ ಅಟ್ಟಾಚ್ಮೆಂಟುಗಳನ್ನು ಕಳುಹಿಸುವುದನ್ನು ತಪ್ಪಿಸಿ.
http://www.gnu.org/philosophy/no-word-attachments.html ನೋಡಿ.
ವರ್ಡ್ ಡಾಕ್ಯುಮೆಂಟ್ ಒಂದನ್ನು ಅಟ್ಟಾಚ್ಮೆಂಟಾಗಿ ಕಳುಹಿಸಿದ ಇ-ಮೇಯ್ಲೊಂದಕ್ಕೆ ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರು ಬರೆದ ಉತ್ತರ ನೋಡಿ.
ವಾಶಿಂಗ್ಟನ್ ಡಿ.ಸಿ. ಗಾಲಾಡೆಟ್ ವಿಶ್ವವಿದ್ಯಾನಿಲಯದ ಕೆವಿನ್ ಕೋಲ್ ರವರು ವರ್ಡ್ ಅಟ್ಟಾಂಚ್ಮೆಂಟೊಂದು ತಮಗೆ ಬಂದಾಗಲೆಲ್ಲ ಹೀಗೊಂದು ಉತ್ತರ ಕಳುಹಿಸುತ್ತಾರೆ.
ಫಾದರ್ ಮಾರ್ತಿನ್ ಸಿಲ್ವೆಸ್ಟರ್ ರವರು ಸುದೀರ್ಘ ಉತ್ತರವೊಂದನ್ನು ಬರೆದಿದ್ದಾರೆ. ಪಡೆದುಕೊಂಡವರಿಗೆ ಓದಲಾಗದ ವರ್ಡ್ ಅಟ್ಟಾಂಚ್ಮೆಂಟುಗಳನ್ನು ಕಳುಹಿಸುವುದು ಎಷ್ಟು ಅಗೌರವ ನಡುವಳಿಕೆ ಎಂಬುದಕ್ಕೆ ಇನ್ನಷ್ಟು ಆಧಾರ ಒದಗಿಸುತ್ತದೆ ಇವರ ಉತ್ತರ.
ಸ್ಟಾಲ್ಮನ್ ರ ಆಯ್ದ ಪ್ರಬಂಧಗಳ ಪುಸ್ತಕ ಓದಲು ಲಭ್ಯವಿದೆ. ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾಗೂ ಅದರ ಹಾರ್ಡ್ ಕಾಪಿ ಕೊಳ್ಳಲು ಬೇಕಾದ ವಿವರಗಳಿಗೆ ಈ ಪುಟ ನೋಡಿ.
ಅನುವಾದ: ಹರಿ ಪ್ರಸಾದ್ ನಾಡಿಗ್
Copyright © 2002 Richard M. Stallman

- Printer-friendly version
- Login or register to post comments
- 1706 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)
ನಾವು ಕಳುಹಿಸುವ ಇ-ಮೇಲ್‍ಗಳಲ್ಲಿ ವರ್ಡ್ ಡೊಕ್ಯುಮೆಂಟ್ ಕಳುಹಿಸದೆ ಇರಬಹುದು. ಆದರೆ ಬಂದ ಇ-ಮೇಲ್‍ಗಳನ್ನು ವರ್ಡ್ ಡೊಕ್ಯುಮೆಂಟ್ ಇದೆ ಎಂಬ ಕಾರಣಕ್ಕೆ ನೋಡದೆ ಇರುವುದು ತುಸು ಅತಿಯಾದೀತು- ಅದೂ ನಮ್ಮಲ್ಲಿ ಎಂಎಸ್ ವರ್ಡ್ ತಂತ್ರಾಂಶ ಇದ್ದರೆ.
ಉ:
ಅತಿ ಯಾಕಾಯ್ತು? ಲೇಖನ ಪೂರ್ಣ ಓದಿದ್ರೋ ಅಥವ ಸುಮ್ಮನೆ ಕಾಮೆಂಟ್ ಸೇರಿಸಿಬಿಟ್ಟಿರೊ. ವರ್ಡ್ ಫೈಲುಗಳಲ್ಲಿ ಬರೋ ವರ್ಮುಗಳ, ವೈರಸ್ಸುಗಳ ಪರಿಚಯ ಇಷ್ಟೊಂದು tech savvy ಆಗಿರುವ ನಿಮಗಿನ್ನೂ ಆಗಿಲ್ಲ ಅಂತ ಕಾಣುತ್ತೆ. ಜೊತೆಗೆ ಮೇಲಿನ ಲೇಖನ ಮೊದಲ ಕಂತನ್ನೂ ಸೇರಿಸಿ ಸಂಪೂರ್ಣವಾಗಿ ಓದಿ.
ಉ:
ಮುಕ್ತ ತಂತ್ರಾಂಶದ ಪ್ರತಿಪಾದಕರು ಹಾಗೆ ಮಾಡುವುದು ಸರಿ ಇರಬಹುದು. ನನ್ನಂತಹ ಎಕ್ಸ್‌ಪಿ ಕಾರ್ಯನಿರ್ವಹಣಾ ವ್ಯವಸ್ಥೆ ಬಳಸುವವರು ಹಾಗೆ ಮಾಡುವುದು ಅತಿಯಾಗದೇ? ಓದದೇ ಪ್ರತಿಕ್ರಿಯಿಸುವ ಅಗತ್ಯ ನನಗಿಲ್ಲ.
ಉ:
ನನಗೂ ಅಶೋಕ ಕುಮಾರ್ ಅವರು ಹೇಳಿದ್ದು ಸರಿ ಅನ್ನಿಸುತ್ತೆ.
ಉ:
ಕಛೇರಿಯಲ್ಲಿ ವರ್ಡ್ ಫೈಲ್ ಕಡ್ಡಾಯವಾಗಿದ್ದರೆ ಅದು ನಿಮ್ಮ ಗ್ರಹಚಾರ. ಆದರೆ ಅತಿಯಾಯ್ತು ಎನ್ನುವುದಕ್ಕೆ ನಾ ಏನು ಹೇಳಲಿ? ಇದು ರಹಸ್ಯದ ಫಾರ್ಮ್ಯಾಟು, ಮೈಕ್ರೊಸಾಫ್ಟಿಗೆ ಪರೋಕ್ಷವಾಗಿ ಇನ್ನಷ್ಟು ಬೇರೂರುವಂತೆ ನೀವೂ ಕೈಜೋಡಿಸಿರುತ್ತೀರಿ, ಮಿಗಿಲಾಗಿ ಅದು ಎಷ್ಟು ಸ್ವಾತಂತ್ರ್ಯ ಕಸಿದುಕೊಳ್ಳುವ ಕಂಪೆನಿಯೊಂದರ ಅಪಾಯಕಾರಿ ಸಂಚು ಎಂಬ ನಿಜವಿಷಯ ತಿಳಿಸಿದರೆ - ತೊಂದರೆಯಿಲ್ಲ ಅದೇ ಇರಲಿ ಎನ್ನುವವರಿಗೆ ಏನು ಹೇಳಲಾಗುವುದು?
ವರ್ಡ್ ಫೈಲ್ ಯಾಕೆ ಬಳಸುವುದು ಒಳ್ಳೆಯದಲ್ಲ ಎಂಬುದರ ಬಗ್ಗೆ ಲೇಖನದಲ್ಲಿ ಮಾಹಿತಿಯಿದೆ. ಆದ್ದರಿಂದಲೇ ಲೇಖನವನ್ನು ಮತ್ತೊಮ್ಮೆ ಓದಿ ನೋಡಿ ಎಂದದ್ದು. ನಿಮಗೆ ಬೇಡಿ ತೊಡಿಸಿ ಗಲೀಜು ತಿನ್ನಿಸುತ್ತಿದ್ದಾರ್ರಪ್ಪ, ಬಿಟ್ಟು ಹೊರಬರೋದು ಒಳಿತು ಎಂದರೆ - ಬೇಡ ನನಗಿದೆ ಚೆನ್ನಾಗಿದೆ ಎಂದರೆ ಏನು ಹೇಳುತ್ತೇವೆ ಹೇಳಿ? ನನಗಂತೂ ಇಂತಹ ಕಾಮೆಂಟುಗಳನ್ನು ಓದಿ ನಗು ಬರುತ್ತದೆ ಅಷ್ಟೆ. ಆದರೆ ನಮ್ಮಲ್ಲಿ ಹಲವರಿಗೆ ತಂತ್ರಾಂಶಗಳಲ್ಲಿನ ಸ್ವಾತಂತ್ರ್ಯದ ಪರಿಚಯವಾಗಲಿ, ಅದರ ನಿಜವಾದ ಪ್ರಾಕ್ಟಿಕಲ್ ಅನುಭವವಾಗಲಿ ಇಲ್ಲದಿರುವುದರಿಂದ ಕೆಲ ಮಟ್ಟಿಗೆ ಹಲವರು ತೆಗೆದುಕೊಳ್ಳುವ ಧೋರಣೆಯೂ ಅರ್ಥವಾಗುತ್ತದೆ. ಇನ್ನು ಕೆಲವು ವರ್ಷಗಳನ್ನು ಗಣಕ ಜಗತ್ತಿನಲ್ಲಿ ಕಳೆಯಿರಿ, ಆಗ ನಿಮಗಿದರ ಮೌಲ್ಯ ತಿಳಿಯುತ್ತದೆ. ಇದರ ಬಗ್ಗೆಯೊಮ್ಮೆ ವಿವರವಾಗಿ ಬರೆಯುವೆ.
(ಇಲ್ಲಿ ಮುಕ್ತ ತಂತ್ರಾಂಶ ಪ್ರತಿಪಾದಕರು ಅಥವ ಮೈಕ್ರೊಸಾಫ್ಟು ಬಳಕೆದಾರರು ಎಂಬ ಭೇದವಿಲ್ಲವಿಲ್ಲವೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಎಕ್ಸ್ ಪಿ ಬಳಕೆದಾರರಾದ ಮಾತ್ರಕ್ಕೆ ನಿಮಗೇನು ವಿಶೇಷವಾಗಿ treat ಮಾಡೋದಿಲ್ಲ, ವರ್ಡ್ ಫೈಲುಗಳ ವಿಷಯದಲ್ಲಿ ಮೈಕ್ರೊಸಾಫ್ಟಿನವರು. ನೀವು ಬರೆದ ಡಾಕ್ಯುಮೆಂಟು ಕೂಡ ರಹಸ್ಯ ಫಾರ್ಮ್ಯಾಟಿನಲ್ಲೇ save ಮಾಡಲಾಗುತ್ತದೆ ಮತ್ತು ಹಾಗೆಯೇ ಇರಿಸಲಾಗುತ್ತದೆ. ನಿಮಗೆ ಬೇಡವೆಂದರೂ ಬರೆದವರ ಬಗ್ಗೆ ಮಾಹಿತಿಯನ್ನು ಅದರೊಂದಿಗೆ ಕೂಡಿಸಿಕೊಳ್ಳುತ್ತದೆ. ಇಂತಹವನ್ನೆಲ್ಲ ಅದು ಶೇಖರಿಸಿಡುವುದರಿಂದ ನೀವು ಬರೆದದ್ದಕ್ಕಿಂತ ಎಷ್ಟೋ ಜಾಸ್ತಿ ಗಾತ್ರದ್ದಾಗಿರುತ್ತದೆ ಫೈಲು. ನೀವು ಕಟ್ಟಿಸುತ್ತಿರುವ ಮನೆ ಹೇಗಿರಬೇಕೆಂಬುದನ್ನೂ ನಿಶ್ಚಯಿಸಲಾಗದಂತಹ ಪರಿಸ್ಥಿತಿ ಇದು - ನಿತ್ಯ ಜೀವನದಲ್ಲಿ, ಕಛೇರಿ ಕೆಲಸದಲ್ಲಿ ನಿಮಗೆ ಗೊತ್ತಾಗೋದಿಲ್ಲ. ಮ್ಯಾಟ್ರಿಕ್ಸ್ ನೋಡಿದ್ದೀರಾ? DRM ಬಗ್ಗೆ ಕೇಳಿದ್ದೀರಾ?)
ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)
ನಮ್ಮ ಆಪೀಸಲ್ಲಿ ಕಡ್ಡಾಯವಾಗಿ MS officeಅಲ್ಲೇ ಎಲ್ಲ ಕಡತ ಮಾಡಬೇಕು...
ಬೇರೆಯದಲ್ಲಿ ಮಾಡುವ ಅನುವಿಲ್ಲ.
ನನಗೆ open office ಹಿಡಿಸಲಿಲ್ಲ.
ಇದು ವರೆಗೂ ನನಗೆ ಯಾರೊಬ್ಬರು open office ನಮೂನೆಯ ಕಡತ ಕಳಿಸೇ ಇಲ್ಲ.!!
MS office ನಮ್ಮ outlook ಜೊತೆ ಚೆನ್ನಾಗಿ ಕೆಲಸ ಮಾಡುತ್ತೆ!!
======================================================
ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)
ಅಲ್ರೀ, ನೀವು open office ಆಗ್ಲಿ M S Office ಆಗಲಿ ಉಪಯೋಗಿಸದೆ ಮುಕ್ಕಾಲು ಭಾಗ ವ್ಯವಹಾರ ಮಾಡಬಹುದು ಗೊತ್ತೆ ? ಮಾಮೂಲಿ ಈ-ಮೈಲ್ಸ್ (ವಿ-ಅಂಚೆ?) ಕಳಿಸುವಾಗ plain text ನಲ್ಲಿ ಕಳಿಸಿ, ಸ್ವಲ್ಪ ಬಣ್ಣ, ಅಚ್ಚು-ಕಟ್ಟು ಬೇಕಾದಲ್ಲಿ HTML ಉಪಯೋಗಿಸಿ, ನಿಮ್ಮ ಮೈಕ್ರೋಸಾಫ್ಟು ಮಾಡಲ್ಲ ಅಂತಾದ್ಯೆ ?
ನೀವು ಮೈಕ್ರೋಸಾಫ್ಟು ಉಪ್ಯೋಗ್ಸಿದ್ರೆ ಯಾರಿಗು ಬೇಜಾರಿಲ್ಲ, ನಿಮ್ಮದೇ ದುಡ್ಡು, ನಿಮ್ಮದೇ ಡಾಕು. ಆದರೆ ಒಂದು ೩-೪ ವರ್ಷಗಳ ನಂತರ ಆ ಪುಟಗಳನ್ನ ನೋಡ್ಬೇಕಂದ್ರೆ ಏನಾಗತ್ತೆ ಗೊತ್ತೆ. ಮೈಕ್ರೋಸಾಫ್ಟು ಆಫಿಸ್ಸು ೨೦೧೦ರಲ್ಲಿ ಆಫೀಸ್ ೨೦೦೭ರದ್ದು ತೆರೆಯೋದಿಲ್ಲ್ರಿ.
ಅದು ಮೈಕ್ರೋಸಾಫ್ಟ್ ಟ್ರಾಕ್ ರೆಕಾರ್ಡ್. ನಿಮ್ಮ ಒಳ್ಳೆದಕ್ಕೆ ಹೇಳಿದ್ದು ರಿಚರ್ಡ್ ಸ್ಟಾಲ್ಮಾನ್ ಒಳ್ಳೆ ಮಾತನ್ನ
ಉ: ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)
ನಾನು ಹೇಳಿರುವುದು ಇ-ಮೇಲ್ ಜತೆ ಒಳ ಬರುವ ವರ್ಡ್ ಕದತಗಳ ಬಗೆಗೆ.ಕಳುಹಿಸುವುದರ ಬಗ್ಗೆ ಅಲ್ಲ. ಬಂದ ಕಡತವನ್ನು ಓದದೇ ,ನಿಮ್ಮ ಕಡತದಿಂದ ಹಾಗಾಯಿತುಹೀಗಾಯಿತು ಎನ್ನುವ ಬೊಗಳೆ standard reply ಕಳುಹಿಸುವ ಬಗ್ಗೆ. ಇದು ಅಸೌಜನ್ಯವಾಗದೇ ಎನ್ನುವುದು ನಾನೆ ಎತ್ತಿದ ಪ್ರಶ್ನೆ. ಮುಕ್ತ ತಂತ್ರಾಶದ ಬಗ್ಗೆ ನನ್ನ ವಿರೋಧವಿಲ್ಲ.
ಉ:
"ಅಸೌಜನ್ಯ" ಯಾಕಾಗತ್ತೆ? ಸೌಜನ್ಯದಿಂದ ಬರೆದದ್ದು ಅಸೌಜನ್ಯ ಹ್ಯಾಗಾಗುತ್ತದೆ? ಅಶೋಕ್ ಕುಮಾರ್ ರವರು ಹೀಗೊಮ್ಮೆ ಈ ತರಹ ವರ್ಡ್ ಫೈಲು ಕಳುಹಿಸಿದವರಿಗೆ ಉತ್ತರ ಬರೆಯುವ ಸ್ಟಾಲ್ಮನ್ನರಂತಹ ಚಿಂತಕರ ಸಲಹೆಯನ್ನು "ಬೊಗಳೆ ರಿಪ್ಲೈ" ಎಂದಿದ್ದರು ಎಂಬುದು ಇಲ್ಲಿ ಆರ್ಕೈವ್ ಆಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಸ್ವಲ್ಪ ಆಲೋಚಿಸಿ ಕಾಮೆಂಟು ಬರೆಯಿರಿ. ವಿಷಯ ತಿಳಿಯದೆ "ಬೊಗಳೆ" ಎನ್ನುವಷ್ಟರ ಮಟ್ಟಿಗೆ ಹೋಗಬೇಡಿ. ವಿಷಯದ ಗಾಢತೆಯ ಬಗ್ಗೆ ನಿಮಗೆ ಅರಿವಿದ್ದಹಾಗಿಲ್ಲ.
ಸ್ಟಾಲ್ಮನ್ನರ ಮೇಲಿನ ಚಿಂತನೆ ಹಾಗೂ ಪ್ರಾಮುಖ್ಯತೆಯ ಕುರಿತು ಒಮ್ಮೆ ಸುದೀರ್ಘವಾಗಿ ಬರೆಯುವೆ. ಸ್ವಾತಂತ್ರ್ಯವೆನ್ನುವುದು ತಂತ್ರಾಂಶದಲ್ಲಿ ಎಷ್ಟೋ ಜನರಿಗೆ ಇನ್ನೂ ಕಂಡಿರದ, ನೋಡಿ ಗೊತ್ತಿಲ್ಲದ ವಸ್ತು. ಸ್ವಾತಂತ್ರ್ಯಕ್ಕೆ ಹೋರಾಡುವುದು, ಕೈ ಜೋಡಿಸುವುದು "ಅಸೌಜನ್ಯ" ಎನಿಸಿದರೆ ಅದಕ್ಕಿಂತ ಗಾಬರಿ ತರುವಂತಹ ಧೋರಣೆ ಇನ್ನೊಂದಿಲ್ಲ. ನೀವು ಸಂಪೂರ್ಣವಾಗಿ ಅರಿಯದೆ ಈ ಧೋರಣೆ ತಳೆದಿದ್ದಿರಬಹುದು.
ಉ:
ನಾಡಿಗ್ ಲೇಖನ>>ಈ ಪ್ರಯತ್ನವನ್ನು ಸಫಲಗೊಳಿಸಲು ನೀವೊಂದು ತಯಾರಿಸಿದ ಉತ್ತರವೊಂದನ್ನು ಬರೆದಿಟ್ಟುಕೊಳ್ಳಬೇಕಾಗಬಹುದು.
--------
ಎಂದು ಬರೆದು ನೀವು ನೀಡಿರುವ ಸಂದೇಶಗಳಲ್ಲಿ ಅಲೆಕ್ಸಾಂಡರ್ ಪಪಾಡೊಪೌಲೊಸ್ ಕಳುಹಿಸಿದ ಉತ್ತರವನ್ನೂ ಉಲ್ಲೇಖಿಸಿದ್ದೀರಾ.
ಈ ಕೆಳಗಿನ ರೀತಿಯ ಸಿದ್ಧ ಮರುಸಂದೇಶ ಕಳುಹಿಸಿದರೆ, ಅದು ಕಲ್ಪಿತವಾದ ಹೇಳಿಕೆ ಅಲ್ಲವೇ?
*ಮೈಕ್ರೊಸಾಫ್ಟಿನ ತಪ್ಪು ನೀತಿಗಳಿಗೆ ಅದರ ಬಳಕೆದಾರ ಹೊಣೆಯೇ?ನಮಗೆ ಲಾಭ ತರುವ ಸಂದೇಶ ಬಂದಾಗ(ಉದಾ: ಕೆಲಸದ ನೇಮಕಾತಿ ಸಂದೇಶ) ಹೀಗೆ ಮಾಡಲು ಸಾಧ್ಯವಾಗದು ಎಂದು ನನಗನಿಸುತ್ತದೆ. ಈ ವಾದವನ್ನು ಇನ್ನೂ ಮುಂದುವರಿಸಲು ನಾನು ಬಯಸುವುದಿಲ್ಲ. ರಿಚಾರ್ಡ್ ಸ್ಟಾಲ್ಮನ್ನರ ಬಗ್ಗೆ ನಾನು ಉಲ್ಲೇಖಿಸಿಯೆ ಇಲ್ಲವಲ್ಲ?
-----------------------
ನಾಡಿಗ್ ಲೇಖನ>>ವರ್ಡ್ ಡಾಕ್ಯುಮೆಂಟ್ ಒಂದನ್ನು ಅಟ್ಟಾಚ್ಮೆಂಟಾಗಿ ಕಳುಹಿಸಿದ ಇ-ಮೇಯ್ಲೊಂದಕ್ಕೆ ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರು ಬರೆದ ಉತ್ತರ ನೋಡಿ.
PS: I hope you realize that I have nothing against you as a person. I just can't use the
document you sent me, and I tried to explain why the implicit assumption that I would be able to read it, was mistaken.
PPS: When I tried to open the document you sent to me, my word processor crashed, obviously unable to properly interpret the .doc format. My word processor was handling 4 other documents at the time. Two of them were assignments, and all changes I had not saved were lost. On aggregate, about two hours of my work were lost because the OpenOffice.org developers were unable to overcome the barriers Microsoft put in place, and render the document properly. I believe they are the last to blame for this failure.
PPPS: For further reasons why .doc should not be the format of choice when exchanging information electronically, I invite you to read http://www.gnu.org/philosophy/no-word-attachments.html It may be long, but it certainly exposes the compromises both you, as the sender, and I, as the receiver, are making by exchanging Microsoft Word documents.
ಉ:
ಸ್ವಾಮಿ ಇದು ನಾನು ಬರೆದ ಲೇಖನವಲ್ಲ. ಸ್ಟಾಲ್ಮನ್ ೨೦೦೨ರಲ್ಲಿ ಬರೆದಿರುವುದನ್ನ ನೇರ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಅವರ ಚಿಂತನೆಗಳು. ನೀವು ಪೂರ್ಣ ಓದಿಲ್ಲ ಎಂಬುದಕ್ಕೆ ಮತ್ತೊಂದು ಪುರಾವೆ ಇದು.
ಮೇಲೆ ನೀವು ಮಾತನಾಡುತ್ತಿರುವುದು ಈ ಲೇಖನದ ವ್ಯಾಪ್ತಿಗೆ ಒಳಪಡುವುದಿಲ್ಲ - ಅದು ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರ ಅಭಿಪ್ರಾಯವಾಯ್ತು. ಸ್ಟಾಲ್ಮನ್ "ಹೀಗೊಬ್ಬರು ಈ ರೀತಿ ಮೇಯ್ಲ್ ಮಾಡುತ್ತಿದ್ದಾರೆ, ನೋಡಿ" ಎಂದಾಕ್ಷಣ ಅವರು ತೋರಿಸಿದ ಪುಟದಲ್ಲಿದ್ದದ್ದು ಎಲ್ಲ "ಅವರು ಹೇಳಿದ್ದು" ಆದ್ದರಿಂದ "ಅವರ ಹೇಳಿಕೆ ಅತಿಯಾಯ್ತು" ಎಂದು ಹೇಳುವುದು ಸರಿಯಾಗುವುದಿಲ್ಲ. ದೂರದ್ದೆಲ್ಲೋ ಇರೋದನ್ನ ತಂದು ಇದರೊಂದಿಗೆ ಕಟ್ಟಿಹಾಕಿ ಅದನ್ನು ಈ ಲೇಖನದಲ್ಲಿ ಪ್ರಸ್ತುತವಾದ ಧೋರಣೆಯೆಂದು ಉಲ್ಲೇಖಿಸಿ ಅತಿಯಾಯ್ತು ಅನ್ನುವುದು ಎಷ್ಟು ಪ್ರಸ್ತುತ?
ಉ:
*ನಾನು ಓದಿಲ್ಲ ಎಂದು ಹೀಗೇಕೆ ಮತ್ತೆ ಮತ್ತೆ ವೃಥಾ ಆರೋಪ ಮಾಡುತ್ತಿದ್ದೀರೋ ನನಗೆ ಅರ್ಥವಾಗುತ್ತಿಲ್ಲ.ನೀವು ಸಂಪದದಲ್ಲಿ ಬರೆದು ಹಾಕಿದ್ದೀರಿ ಎಂಬ ಕಾರಣಕ್ಕೆ ನಾಡಿಗ್ ಲೇಖನ ಎಂದು ಉದ್ಧರಿಸಿದ್ದೇನೆ.
*ನಾನು ಸ್ಟಾಲ್ಮನ್ ಅವರನ್ನು ಟೀಕಿಸಿಯೇ ಇಲ್ಲ ಎನ್ನುವುದು ನನ್ನ ಪ್ರತಿಕ್ರಿಯೆಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ಹಾಗೆಂದು ನೀವೇ ಆರೋಪಿಸುತ್ತಿದ್ದೀರಿ. ನಾನು ಅದನ್ನು ಅಲ್ಲಗಳೆಯುತ್ತಿದ್ದೇನೆ.
---------------------------------------------------------------------
ನಾಡಿಗ್>>ಮೇಲೆ ನೀವು ಮಾತನಾಡುತ್ತಿರುವುದು ಈ ಲೇಖನದ ವ್ಯಾಪ್ತಿಗೆ ಒಳಪಡುವುದಿಲ್ಲ - ಅದು ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರ ಅಭಿಪ್ರಾಯವಾಯ್ತು
*ಯಾವುದು ಲೇಖನದ ವ್ಯಾಪ್ತಿ ಎನ್ನುವುದಕ್ಕೆ ನಿಮ್ಮ ವ್ಯಾಖ್ಯೆ ನನಗೆ ಗೊತ್ತಾಗುವುದು ಹೇಗೆ?ಅಲೆಕ್ಸಾಂಡರ್ ಪಪಾಡೋ ಪೌಲೋಸ್ರವರ ಅಭಿಪ್ರಾಯಕ್ಕೆ ನನ್ನ ಪ್ರತಿಕ್ರಿಯೆಯಾದರೆ, ರಿಚಾರ್ಡ್‌ರನ್ನು ಮಧ್ಯೆ ಎಳೆ ತರುತ್ತಿರುವುದೇಕೆ?
ಕೊನೆಯದಾಗಿ ನಾನು ಸ್ಪಷ್ಟವಾಗಿ ಹೇಳುವುದಿಷ್ಟೆ:
*ಸ್ಟಾಲ್ಮನ್ ಬಗ್ಗೆ ನಾನೆಲ್ಲೂ ಪ್ರಸ್ತಾಪಿಸಿಲ್ಲ.
*ನಾನು ಪ್ರಕಟಿಸಿರುವುದು ನನ್ನಂತಹ ಸಾಮಾನ್ಯ ವ್ಯಕ್ತಿ ಬಂದ ಇ-ಮೇಲ್‌ಗಳಿಗೆ ಲೇಖಕರ ಸಲಹೆಯಂತೆ ಪ್ರತಿಕ್ರಿಯಿಸುವುದು ಅತಿಯಾಗದೇ ಎಂಬ ಅಳುಕನ್ನು.
*ಮುಕ್ತ ತಂತ್ರಾಂಶಕ್ಕೆ ನನ್ನ ಬೆಂಬಲವೂ ಇದೆ.ಹಲವಾರು ಲೇಖನಗಳನ್ನೂ ಬರೆದಿದ್ದೇನೆ. ಸಾಧ್ಯವದಷ್ಟೂ ಅವನ್ನು ಬಳಸುವ ಪ್ರಯತ್ನ ನಡೆಸಿದ್ದೇನೆ.
*ಲೇಖನವನ್ನು ನಾನು ಓದಿದ್ದೇನೆ.
ಉ:
ಅದನ್ನೇ ಅಲ್ಲವೆ ನಾನೂ ಹೇಳುತ್ತಿರುವುದು? ಅಲೆಕ್ಸಾಂಡರರು ಬರೆದ ಬಗ್ಗೆ ನಿಮ್ಮ ಪ್ರತಿಕ್ರಿಯೆಯಾದರೆ ಇಲ್ಲಿ ಸ್ಟಾಲ್ಮನ್ನರ ಲೇಖನಕ್ಕೆ ಪ್ರತಿಕ್ರಿಯೆಯಂತೆ ಬರೆದಿದ್ದೀರಿ. ಸ್ಟಾಲ್ಮನ್ನರ ಧೋರಣೆ ಅತಿಯಾಯ್ತು ಎನ್ನುವಂತಿರುವ ನಿಮ್ಮ ಕಾಮೆಂಟು ಇವೆಲ್ಲವನ್ನೂ ಎಣಿಸದೆ ಶೀಫ್ರ ಕಾಮೆಂಟು ಬರೆಯಬೇಕೆಂದು ಬರೆದ ಬೇಜವಾಬ್ದಾರಿ ಕಾಮೆಂಟು ಎಂದು ತಿಳಿಯೋಣವೆ?
ಉ:
ನಾಡಿಗ್>>ಮೇಲೆ ನೀವು ಮಾತನಾಡುತ್ತಿರುವುದು ಈ ಲೇಖನದ ವ್ಯಾಪ್ತಿಗೆ ಒಳಪಡುವುದಿಲ್ಲ - ಅದು ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರ ಅಭಿಪ್ರಾಯವಾಯ್ತು
ನನ್ನ ಪ್ರತಿಕ್ರಿಯೆಯಿಂದ>>ಅಲೆಕ್ಸಾಂಡರ್ ಪಪಾಡೋ ಪೌಲೋಸ್ರವರ ಅಭಿಪ್ರಾಯಕ್ಕೆ ನನ್ನ ಪ್ರತಿಕ್ರಿಯೆಯಾದರೆ, ರಿಚಾರ್ಡ್‌ರನ್ನು ಮಧ್ಯೆ ಎಳೆ ತರುತ್ತಿರುವುದೇಕೆ?...
ನನ್ನ ಪ್ರತಿಕ್ರಿಯೆಯಿಂದ>>...ನಾನು ಪ್ರಕಟಿಸಿರುವುದು ನನ್ನಂತಹ ಸಾಮಾನ್ಯ ವ್ಯಕ್ತಿ ಬಂದ ಇ-ಮೇಲ್‌ಗಳಿಗೆ ಲೇಖಕರ ಸಲಹೆಯಂತೆ ಪ್ರತಿಕ್ರಿಯಿಸುವುದು ಅತಿಯಾಗದೇ ಎಂಬ ಅಳುಕನ್ನು.
ಉ:
ಪಂಚತಂತ್ರದಲ್ಲಿ ಒಂದು ಗುಬ್ಬಚ್ಚಿ ಮತ್ತು ಕೋತಿಗಳ ಕಥೆ ಇದೆ, ಮಿಂಚು ಹುಳದಿಂದ ಬೆಂಕಿ ಬರಸುವ ಬಗ್ಗೆ... ಗೋತ್ತಾ?