ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಕಳೆದ ಭಾನುವಾರ ಶಂಕರ ಜಯಂತಿಯಂದು, ಶಂಕರಾಚಾರ್ಯರ "ವಿವೇಕಚೂಡಾಮಣಿ" ಎಂಬ ಒಂದು ಗ್ರಂಥವನ್ನು ಓದುತ್ತಿದ್ದೆ. ತಿಳಿದುಕೊಳ್ಳಲು ಅನೇಕ ವಿಷಯಗಳು ಆ ಗ್ರಂಥದಲ್ಲಿ ಇದೆಯಾದರೂ, ಒಂದು ಪದ್ಯವು ಮಾತ್ರ ನನ್ನ ಗಮನವನ್ನು ತುಂಬಾ ಸೆಳೆಯಿತು. ತೀವ್ರ ಚಿಂತನೆಗೊಳಪಡಿಸಿದ ಆ ಪದ್ಯ ಮತ್ತು ಆ ಪದ್ಯವನ್ನು ಸರಳವಾಗಿ ಅರ್ಥಮಾಡಿಕೊಂಡ ಬಗೆಯನ್ನು ಇಲ್ಲಿ ಹಾಕುತ್ತಿದ್ದೇನೆ. ನಿಮ್ಮ ಅನಿಸಿಕೆ ತಿಳಿಸಿ.
ಆಶಾಂ ಛಿಂದಿ ವಿಷೋಪಮೇಷು ವಿಷಯವೇಷ್ವೇಷೈವ ಮೃತ್ಯೋಃ ಸೃತಿಸ್ತ್ಯಕ್ತ್ವಾ ಜಾತಿಕುಲಾಶ್ರಮೇಷ್ವಭಿಮತಂ ಮುಂಚಾತಿದೂರಾತ್ ಕ್ರಿಯಾಃ |
ದೇಹಾದಾವಸತಿ ತ್ಯಜಾತ್ಮಧಿಷಣಂ ಪ್ರಜ್ಞಾಂ ಕುರುಷ್ವಾತ್ಮನಿ ತ್ವಂ ದ್ರಷ್ಟಾಸ್ಯಮಲೋಸಿ ನಿರ್ದ್ವಯಪರಂ ಬ್ರಹ್ಮಾಸಿ ಯದ್ವಸ್ತುತಃ || ೩೭೬ ||
ಸಂಸ್ಕೃತ ತಾತ್ಪರ್ಯ - ವಿಷ ಉಪಮೇಷು ವಿಷಯೇಷು ಆಶಾಂ ಛಿಂದಿ, ಏಷಾ ಏವ ಮೃತ್ಯೋಃ ಸೃತಿಃ. (ತ್ವಂ) ಜಾತಿ-ಕುಲಾಶ್ರಮೇಷು ಅಭಿಮತಂ ತ್ಯಕ್ತ್ವಾ ಅಸತಿ ದೇಹಾದೌ ಕ್ರಿಯಾಃ ಅತಿದೂರಾತ್ ಮುಂಚ. (ತ್ವಂ) ಆತ್ಮ-ಧಿಷಣಂ ತ್ಯಜ. ಆತ್ಮನಿ (ತ್ವಂ) ಪ್ರಜ್ಞಾಂ ಕುರುಷು. ಯತ್ ವಸ್ತುತಃ ತ್ವಂ ದ್ರಷ್ಟಾ ಅಸಿ, ಅಮಲಃ ಅಸಿ, ನಿರ್ದ್ವಯಪರಂ ಬ್ರಹ್ಮಾಸಿ.
ಸರಳ ಅರ್ಥ(???) - ನಂಜಿನಂತಹ ವಿಷಯಗಳಲ್ಲಿ ಆಸೆಯನ್ನು ಕಿತ್ತುಹಾಕು. ಈ ಆಸೆಯೇ ಸಾವಿಗೆ ದಾರಿ. (ನೀನು) ಜಾತಿ-ಕುಲ-ಆಶ್ರಮ ಇವುಗಳ ಮೇಲಿನ ಅಭಿಮಾನವನ್ನು ಬಿಟ್ಟು, ಸುಳ್ಳಾದ ದೇಹ ಕರ್ಮಗಳನ್ನು ದೂರಗೊಳಿಸಿಕೊ. ಆತ್ಮನಲ್ಲಿ ತಿಳಿವಳಿಕೆಯನ್ನು(ಪ್ರಜ್ಞೆಯನ್ನು) ಬೆಳೆಸಿಕೊ. ಏಕೆಂದರೆ ದಿಟವಾಗಿ ಹೇಳಬೇಕೆಂದರೆ, (ನಿನಗೆ) ನೀನು ಸಾಕ್ಷಿಯಾಗಿದ್ದೀಯೆ, ನೀನು ಪರಿಶುದ್ಧನಾಗಿರುವೆ(ಅಮಲಃ), ಭೇದವೆಣಿಸದ(ನಿರ್ದ್ವಯಪರಂ) ಬ್ರಹ್ಮನೂ ಆಗಿರುವೆ.
ಇಲ್ಲಿ "ಆತ್ಮಧಿಷಣಂ" ಎಂದರೇನು ಅಷ್ಟಾಗಿ ಹೊಳೆಯಲಿಲ್ಲ. ಯಾರಿಗಾದರೂ ಗೊತ್ತಾದ್ದರೆ ಎಲ್ಲರಿಗೂ ತಿಳಿಸಿಕೊಡಿ. "ಧಿಷಣ" ಎಂಬುದನ್ನು ಪರಮಾತ್ಮ ಎಂಬ ಅರ್ಥದಲ್ಲಿ ಪಾರಿಭಾಷಿಕವಾಗಿ ಬಳಸಿರಬಹುದು. "ಆತ್ಮಧಿಷಣಂ ತ್ಯಜ" ಎಂದರೆ "ಆತ್ಮ-ಪರಮಾತ್ಮ ಎಂಬ ಭೇದವನ್ನು ಬಿಡು" ಎಂದಿರಬಹುದು.
ಇಲ್ಲಿ ನನ್ನನ್ನು ತುಂಬಾ ಸೆಳೆದದ್ದು ಜಾತಿ-ಕುಲ-ಆಶ್ರಮ ಇವುಗಳ ಮೇಲಿನ ಅಭಿಮಾನವನ್ನು ಬಿಡು ಎಂಬುದು. ಇಲ್ಲಿ ಆಶ್ರಮ ಎಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಅಲ್ಲ ಅನಿಸುತ್ತೆ. ಆಯಾ ಮುನಿಗಳು ನಡೆಸಿಕೊಂಡು ಬರುತ್ತಿದ್ದ ಶಿಷ್ಯ ಪರಂಪರೆ ಇರಬಹುದು(ಉದಾ - ಗೋತ್ರ ಮುಂತಾದವು). ಅಂದ ಹಾಗೆ ಈ ಪದ್ಯ ಬರುವದು ಶಿಷ್ಯನಿಗೆ "ವೈರಾಗ್ಯದ ನಿರೂಪಣೆ" (ಪದ್ಯ ೩೭೧-೩೭೬) ಮಾಡುವಾಗ. ಮುಕ್ತಿಯ ಬಗ್ಗೆ ಹೇಳುವಾಗ ಶಂಕರಾಚಾರ್ಯರು, ಜ್ಞಾನವೇ ಇಲ್ಲದೆ ಬರೇ ವೈರಾಗ್ಯದಿಂದ ಮುಕ್ತಿ ಸಿಗುವುದಿಲ್ಲ ಎಂದು ಬಾಯ್ಬಿಟ್ಟು (ಎಕ್ಸ್‌ಪ್ಲಿಸಿಟ್ ಆಗಿ) ಹೇಳಿದ್ದಾರೆ. ಅಂದರೆ ನಿಜಕ್ಕೂ ಯೋಚಿಸಿದರೆ, ನಾವುಗಳು ನಿತ್ಯಸುಖಿಗಳಾಗಬೇಕೆಂದರೆ ( = ಮುಕ್ತಿ ) ಜಾತಿ-ಕುಲ-ಆಶ್ರಮ ಇವುಗಳ ಮೇಲಿನ ಅಭಿಮಾನವನ್ನು ಬಿಟ್ಟು ತಿಳಿವಳಿಕೆ ಬೆಳೆಸಿಕೊಂಡು (=ಚುರುಕಾಗಿದ್ದುಕೊಂಡು=ಜ್ಞಾನವನ್ನು ಸಂಪಾದಿಸಿ), ಜಾತಿ-ಅಭಿಮಾನಕ್ಕೆ ಹೊರತಾದವುಗಳಿಂದ ಆನಂದವನ್ನು ಅನುಭವಿಸಬೇಕು.

- Login or register to post comments
- 727 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಸುನಿಲರೇ,
ಶಂಕರಾಚಾರ್ಯರ ಒಂದೊಂದು ಪದವೂ ಗೂಢಾರ್ಥಗರ್ಭಿತವಾಗಿ ಜ್ಞಾನವೃಕ್ಷದ ಬೀಜವೆಂದೇ ಎಲ್ಲರ ಮತ. ಅಂತಹ ಪದವೊಂದಕ್ಕೆ ಅರ್ಥವನ್ನು ಬರೆಯುವ ದುಸ್ಸಾಹಸವನ್ನು ಮಾಡುತ್ತಿಲ್ಲ; ಬದಲಿಗೆ ನನಗೆ ತಿಳಿದದ್ದನ್ನು ಹಂಚಿಕೊಳ್ಳುತ್ತಿದ್ದೇನೆ.
ಆತ್ಮಧಿಷಣಂ = ಆತ್ಮನಃ ಧಿಷಣಂ -> ಆತ್ಮನ ಬಗೆಗಿನ "ವಿಚಾರ ಪ್ರಜ್ಞೆ" ಅಥವಾ ಆತ್ಮವಿಚಾರವಿವೇಕ. ಇಲ್ಲಿ 'ಧಿಷಣಂ' ಎಂಬ ಪದದ ವಿಶೇಷವೇನೆಂದರೆ ಇದರ ವ್ಯುತ್ಪತ್ತಿ ಮೂಲ ಕ್ರಿಯಾಧಾತುವಲ್ಲ! ಈ ಪದವನ್ನು ವಿವರಿಸಲೋಸುಗವೇ 'ಧಿಷ್'(=ಪ್ರಜ್ಞಾಪೂರ್ವಕವಾಗಿ "ತಿಳಿ") ಧಾತುವನ್ನು ಕಂಡುಹಿಡಿದಿರಬಹುದೆಂದು ಯಾಸ್ಕನ ನಿರುಕ್ತ ನಿಘಂಟು ಹೇಳುತ್ತದೆಯಂತೆ!!
ಧಿಷಣವೆಂದರೆ:
೧.ವಿಚಾರ ಪ್ರಜ್ಞೆ .
"ವಿರಿಂಚೋ ಧಿಷಣಾಃ" - ಬ್ರಹ್ಮನೇ (ನಿನ್ನ) ವೈಚಾರಿಕ ಬುದ್ಧಿ [ಶ್ರೀಮದ್ಭಾಗವತ]
೨.ಅರಿವು
ಧೀಕಾರರೂಪಾ ಧಿಷಣಾ....-ಪ್ರಜ್ಞಾಪೂರ್ವಕವಾಗಿ ತಿಳಿಯಲ್ಪಡುವವಳು(ಗಾಯತ್ರೀ ಸಹಸ್ರನಾಮ)
೩.ಬುದ್ಧಿಮತ್ತೆ
ಭಾರತೀ ಮದ್ಧಿಷಣ....- ಸರಸ್ವತಿಯೇ ನನ್ನ ಬುದ್ಧಿಮತ್ತೆ(ಮುತ್ತುಸ್ವಾಮಿ ದೀಕ್ಷಿತರ ದೇವಮನೋಹರಿ ರಾಗದ ಕೃತಿ)
ಇವೆಲ್ಲವುಗಳಿಂದ - ಆತ್ಮಧಿಷಣವೆಂದರೆ 'ಆತ್ಮವನ್ನು ಬೇರೆಯೆಂದು ವಿಚಾರಮಾಡುವ ಬುದ್ಧಿವಂತಿಕೆ' ಎಂದು ಅರ್ಥಮಾಡಿಕೊಳ್ಳಬಹುದೆನಿಸುತ್ತದೆ. ಆಚಾರ್ಯರ ಅದ್ವೈತ ಪ್ರವಾಹದೊಂದು ಹನಿಯನ್ನು ಸಂಪದಕ್ಕೆ ಹರಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
@ಬೆನಕರೆ,
"ಧಿಷಣ" ಪದದ ವಿವರಣೆ ನೀಡಿದ್ದು ತುಂಬಾ ನೆರವಿಗೆ ಬಂತು. ಈ "ಆತ್ಮಧಿಷಣ" ~= 'ಆತ್ಮವನ್ನು ಬೇರೆಯೆಂದು ವಿಚಾರಮಾಡುವ ಬುದ್ಧಿವಂತಿಕೆ' ಎಂಬ ವಿಚಾರ ಮತ್ತು ವಿವರಣೆ ತುಂಬಾ ನೆಚ್ಚುಗೆಯಾಯಿತು. ಇದನ್ನು ಎಲ್ಲರಿಗೂ ತಿಳಿಸಿಕೊಟ್ಟದ್ದಕ್ಕಾಗಿ ತುಂಬಾ ನನ್ನಿ. ಹೀಗೆಯೇ ನಿಮ್ಮಲ್ಲಿರುವ ಜ್ಞಾನವನ್ನು ನಮ್ಮೆಲ್ಲರೊಡನೆ ಹಂಚಿಕೊಳ್ಳುತ್ತಿರಿ ಎಂದು ಕೇಳಿಕೊಳ್ಳುವೆ.
@ವೈಭವ,
ನಿಜಹೇಳಬೇಕೆಂದರೆ ಈ ವಾಕ್ಯದ ಪೂರ್ಣ ಇಂಟರ್ಪ್ರಿಟೇಷನ್ ನನ್ನಿಂದ ಈಗ ನಿಜಕ್ಕೂ ಸಾಧ್ಯವಿಲ್ಲ
"ಅನುಭವಕ್ಕೆ" ಬಂದ ಅಥವಾ "ಅನುಭವಕ್ಕೆ ಬಂದಿರದಿದ್ದರೂ ಕಲ್ಪನೆಗೆ ನಿಲುಕುವ" ಕೆಲವನ್ನು ವಿವರಿಸಬಹುದು. ಮಿಕ್ಕವುಗಳನ್ನು ವಿವರಿಸುವದು ಕಷ್ಟ. ಅಂದ ಹಾಗೆ ಕುತೂಹಲವಿದ್ದಾಗ, ಕೆಲವೊಮ್ಮೆ ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ ಶಿವಾನಂದಲಹರೀ, ಸೌಂದರ್ಯಲಹರೀ ಮುಂತಾದವುಗಳ ಬಗ್ಗೆ ಉಪನ್ಯಾಸಗಳು ನಡೆಯುತ್ತಿರುತ್ತವೆ. ಬಿಡುವಿದ್ದಾಗ ಅವುಗಳಲ್ಲಿ ಭಾಗವಹಿಸಿ. ಏನಾದರೂ ಉತ್ತರ ಸಿಗಬಹುದು 
ಅಂದಹಾಗೆ ನಮ್ಮೆಲ್ಲರಿಗೂ ಕಿವಿಮಾತು, ಉಪನ್ಯಾಸಗಳಿಗೆ ಮುಂಚೆ ಇವುಗಳನ್ನು ನಾವುಗಳೇ ಓದಿ, ನಮಗೆ ಅರ್ಥವಾಗುವಷ್ಟನ್ನು ಅರ್ಥಮಾಡಿಕೊಂಡು ನಂತರ ಪಾಲ್ಗೊಳ್ಳುವದು ಉತ್ತಮ, ಆಗ ಗ್ರಂಥಗಳ ಆಳ ಅರಿವಿಗೆ ಬರುತ್ತದೆ ಮತ್ತು ಹೆಚ್ಚು ನಾಟುತ್ತದೆ.
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಬೆನಕ, ಇಂದು ನನಗೆ ಮುತ್ತುಸ್ವಾಮಿ ದೀಕ್ಷಿತರ ದೇವಮನೋಹರಿ ರಾಗದಲ್ಲಿರುವ "ಭಾರತಿ ಮದ್ಧಿಷಣ" ಹಾಡು ಕೇಳಲು ಸಿಕ್ಕಿತು. ಆಸಕ್ತಿಯುಳ್ಳವರು ನೇರವಾಗಿ ಸಂಗೀತಪ್ರಿಯ.ಆರ್ಗಿನಿಂದ ಕೇಳಬಹುದು. ಭಾರತಿ ಮದ್ಧಿಷಣಜಾಢ್ಯಾಪಹೇ
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಸುನಿಲ್,
ಶಂಕರಾಚಾರ್ಯರ ನುಡಿಗಳನ್ನು ಸರಳಗೊಳಿಸದ್ದಕ್ಕೆ ನನ್ನಿ,
ನನಗೆ ಈ ವಾಕ್ಯದ ಬಗ್ಗೆ ಕೆಲವು ಅನುಮಾನಗಳಿವೆ.
"......ಸುಳ್ಳಾದ ದೇಹ ಕರ್ಮಗಳನ್ನು ದೂರಗೊಳಿಸಿಕೊ..."
ಇದರ ನಿಜವಾದ ಆಶಯವೇನು....? ದೇಹದ ಮೇಲೆ ಅತಿಯಾದ ಆಸೆ ಬೇಡ ಅಂತಲೇ? ಅಥವ ದೇಹದ ಮೇಲೆ ಒಲುಮೆ ಬೇಡ ಅಂತಲೆ?...ವ್ಯಾಮೋಹ ಬೇಡ ಒಪ್ಪಬಹುದು. ಆದರೆ ದೇಹದ ಮೆಲೆ ಒಲುಮೆ ಬೇಡ ಅನ್ನುವುದನ್ನು ನನ್ನಿಂದ ಒಪ್ಪಲಾಗದು.
ನನ್ನ ಅರಿವಿನ ಪ್ರಕಾರ ನಮ್ಮ ಕಾಯ ನಮ್ಮ ನಿಜವಾದ ಆಸ್ತಿ, ವಿವೇಕಾನಂದರ ಎಲ್ಲೊ ಹೇಳಿರುವ ಹಾಗೆ ನಮ್ಮ ಕಾಯ ಚೆನ್ನಾಗಿದ್ದರೆ ನಮ್ಮ ಆತ್ಮವು ಹಸನಾಗುತ್ತದೆ.
ಪ್ರತಿಯೊಬ್ಬರು ಅವರವರ ಕಾಯ ಚೆನ್ನಾಗಿಡುವುದು ಅವರವರ ಹೊಣೆಯಲ್ಲವೆ?
ಕರ್ಮಗಳನ್ನು ದೂರಗೊಳಿಸಿಕೊ ಎಂದರೇನು? ...ತಲೆಗಿಳಿಲಿಲ್ಲ(ಸರಿಯಾಗಿ ಅರ್ಥ ಆಗಲಿಲ್ಲ)... ಸ್ವಲ್ಪ ಬಿಡಿಸಿ ಹೇಳಿ
-ವೈಭವ
------------
ಈ ನಾನು ಆ ನೀನು ಒಂದೇ ತಾನಿನ ತಾನು - ದ.ರಾ.ಬೇಂದ್ರೆ
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಸೂತ್ರ ರೂಪದಲ್ಲಿ, ರೂಪಕ-ಅಲಂಕಾರ ಇತ್ಯಾದಿ ಕಾವ್ಯಸೌನ್ದರ್ಯದಲ್ಲಿ ಅವಿತಿರುವ ಆಚಾರ್ಯ ಶಂಕರರ ವಿಚಾರಗಳನ್ನು ಗ್ರಹಿಸಲು ಕ್ರಮವಾದ, ದೀರ್ಘವಾದ ಅದ್ಯಯನ ಬೇಕಾಗುತ್ತದೆ. ಯಾವವಿಚಾರವನ್ನು ಕುರಿತು ಹೇಳುತ್ತಿದ್ದಾರೋ ಆ ವಿಚಾರದ ಹಿನ್ನೆಲೆ ಆವಿಚಾರವನ್ನು ಮಾಡುವಾಗ ಉಪಯೋಗಿಸುವ ಪದಗಳ ಆಸಂದರ್ಭಕ್ಕೆ ಒಗ್ಗುವ ಅರ್ಥ, ಯಾಕಾಗಿ ಒಂದಾನೊಂದು ವಿಚಾರವನ್ನು ಹೇಳಬೇಕಾಗಿ ಬಂತು ಎನ್ನುವ ಪೂರ್ವಪಕ್ಷ ಅಥವಾ ಎತ್ತಲ್ಪಟ್ಟ ಆಕ್ಷೇಪಗಳು ಇವುಗಳ ಅರಿವಿಲ್ಲದೆ ಕೇವಲ ಪದ್ಯಗಳನ್ನೋದಿ ಅರ್ಥಮಾಡಿಕೊಳ್ಳಲು ಹೊರಡುವುದು ಅಪಾಯಕಾರಿ. ಸರಳವಾಗಿ ಹೇಳಬೇಕೆಂದರೆ ಸಂಪ್ರದಾಯದ ಅರಿವಿಲ್ಲದೆ, ಗುರುವಿನ ಮಾರ್ಗದರ್ಶನವಿಲ್ಲದೆ ವೇದಾಂತವನ್ನು ಓದಲು ಹೊರಟರೆ ಅಚಾರ್ಯ ಶಂಕರರೇ ಹೇಳಿರುವಂತೆ ' ಶಬ್ದಜಾಲಂ-ಮಹಾರಣ್ಯಂ-ಚಿತ್ತವಿಭ್ರಮಕಾರಕಂ' ನಿಮ್ಮ ಸಂಶಯಗಳಿಗೆ ಸರಳವಾಗಿ ಉತ್ತರ ಹೇಳಬಯಸುತ್ತೇನೆ, ಹೆಚ್ಚಿನ ಸಂಶಯಗಳಿಗೆ ನೀವು ದೀರ್ಘವಾದ ಅಧ್ಯಯನ ಕೈಗೊಳ್ಳಬೇಕಾಗುತ್ತದೆ, ಎಚ್ಚರಿಸುತ್ತಿದ್ದೇನೆ ನೀವು ಸನ್ಯಾಸದ ಕಡೆಗೆ ವಾಲಲೂಬಹುದು.
ಸುಳ್ಳಾದ ದೇಹಕರ್ಮಗಲನ್ನು ದೂರಗೊಳಿಸಿಕೋ ..... ಇದು ನಿತ್ಯಾನಿತ್ಯವಿವೇಕವಿರಲಿ ಎಂದು ಎಚ್ಚರಿಸುವ ವಾಕ್ಯ. ಆಚಾರ್ಯರ 'ಬಹ್ಮಸತ್ಯ-ಜಗನ್ಮಿಥ್ಯ'ಎಂಬ ಮಾತನ್ನು ಕೇಳಿದ್ದೀರ ಅತ್ಯಂತ ವಿವಾದಾತ್ಮಕವಾಗಿಸಿದ್ದಾರೆ ಈ ಮಾತನ್ನು. ನಮ್ಮ ಕಣ್ಣೆದುರಿಗೆ ಕಾಣುತ್ತಿರುವ ಜೀವ-ಜಗತ್ತು-ವೈವಿಧ್ಯ ಸುಳ್ಳೇ ? ನಾನು ಹೇಳುತ್ತಿರುವುದು-ನೀವು ಕೇಳುತ್ತಿರುವುದು ಸುಳ್ಳೆ ? ಇದಲ್ಲ ಸತ್ಯ-ಮಿಥ್ಯಗಳ ಅರ್ಥ. ಇಲ್ಲಿ ಸತ್ಯವೆಂದರೆ ತ್ರಿಕಾಲಾಬಾಧಿತವಾದದ್ದು ಮಾತ್ರಾ ಸತ್ಯ ಉಳಿದದ್ದೆಲ್ಲಾ ಮಿಥ್ಯ. ನಾವು ವ್ಯಾವಹಾರಿಕ ಪ್ರಪಂಚದಲ್ಲಿ ಕಾಣುತ್ತಿರುವ ಎಲ್ಲವೂ ಮಿಥ್ಯವಲ್ಲವೇ. ಹೀಗಾಗಿ ದೇಹಾಭಿಮಾನವನ್ನು ಅತಿಯಾಗಿಸಿಕೊಂಡರೆ, ಅದರ ಪಾಲನೆ-ಪೋಷಣೆ-ಅಲಂಕಾರಾದಿಗಳಿಗೆ ಹಣವನ್ನೂ ಹಣಗಳಿಸಲು ಸಮಯವನ್ನೂ ವ್ಯ್ರರ್ಥಮಾಡುತ್ತಿರುತ್ತೇವೆ ನಶ್ವರವಾದ ಇದು ಯಾವಕ್ಷಣದಲ್ಲೂ ನಾಶವಾದೀತು, ಹಾಗೆ ಸಾಧನೆಗೆ ಕಾರಣವಾದ ಸಾಧನವನ್ನು ಹಿತ-ಮಿತವಾಗಿ ಬಳಸಿ ವ್ಯ್ರರ್ಥ ಕರ್ಮ-ಕಲಾಪಗಳಿಂದ ದೂರವಿರಿಸಿ ಕೇವಲ ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಕೊಂಡೊಯ್ಯಿರಿ. ಆತ್ಮ ಸಾಕ್ಷಾತ್ಕಾರವೆಂದರೆ ಸತ್ತ ನಂತರ ದೊರೆಯುವ ಯಾವುದೋ ಲೋಕಾಂತರವಲ್ಲ. ಇಲ್ಲೇ-ಈಗಲೇ, ಯಾವ ಬಾಹ್ಯ ವಸ್ತು-ವಿಚಾರ-ವ್ಯಕ್ತಿ-ವಿಷಯಗಳಮೇಲೆ ಅವಲಂಬಿಸದೆ ಕೇವಲ ತನ್ನೊಳಗೇ ಅನುಭವಿಸಬಹುದಾದ ನಿರ್ಮಲವಾದ ಆನಂದದ ಮನಸ್ಥಿತಿ. ಸದ್ಯೋ ಮುಕ್ತಿ.
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ನಿಮ್ಮ ಮರುಲಿಗೆ ನನ್ನಿ
"...ಹೀಗಾಗಿ ದೇಹಾಭಿಮಾನವನ್ನು ಅತಿಯಾಗಿಸಿಕೊಂಡರೆ,..."
ಅದನ್ನೆ ನಾನು ಹೇಳಿದ್ದು ಯಾವುದೇ ಅತೀ ಆದರೆ ಸರಿಯಲ್ಲ ಅಂದು. ಆದರೆ ನಾವು ನಮ್ಮ ಕಾಯಕ್ಕೆ/ದೇಹಕ್ಕೆ ಎರಡು ಬಗೆಯುವುದು (ಬಲವಂತವಾಗಿ ದಂಡಿಸಿ) ಸರಿಯೇ? ನಮ್ಮ ಕಾಯವನ್ನು ನಾವು ಒಳ್ಳೆ ಪದುಳವಾಗಿ ಇಟ್ಟುಕೊಂಡಿರಬೇಕಲ್ಲವೇ?
ನಾವು ಏನೇ ಗುರಿ ತಲುಪಲು ಕಾಯ ಒಳ್ಳೆ ಪದುಳವಾಗಿರುವುದು ಬೇಕೇ ಬೇಕು. ಆದರೆ ತನ್ನ ಕಾಯಕ್ಕೋಸುಗರ ಬೇರೆಯವರಿಗೆ 'ಎರಡು' ಬಗೆಯಬಾರದು. ಸರಿಯೇ?
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಚರ್ವಾಕ ನಾಗರೀಕತೆಗೆ ಶರಣಾಗಿರುವ ಆಧುನಿಕ ಯುಗದಲ್ಲಿ
ಶ್ರಿ ಶ೦ಕರರ ನುಡಿಮುತ್ತುಗಳನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದ.
ಶ್ರಿ ರಮಣ ಮಹರ್ಷಿಗಳು "ವಿವೇಕ ಚೂಡಾ ಮಣಿ"ಗೆ ಮುನ್ನುಡಿ ಬರೆದಿದ್ದಾರೆ.
ಮುನ್ನುಡಿಯನ್ನು "ರಮಣ ಮಹರ್ಷಿಗಳೊ೦ದಿಗೆ ಮಾತುಕತೆ" ಪುಸ್ತಕದಲ್ಲಿ
ಓದ ಬಹುದು.
(http://www.sriramanamaharshi.org/
Allpub.html-Talks with Sri Ramana
Maharshi )
******************************೮
ಜಗತ್ತಿನ ಪ್ರತಿಯೊ೦ದು ಜೀವಿಯೂ ದು:ಖ ಸ್ಪರ್ಶವೇ ಇಲ್ಲದ ಸುಖವನ್ನು
ಹೊ೦ದಲು ಬಯಸುತ್ತದೆ. ತನ್ನ ನೈಜ ಸ್ವಭಾವವಲ್ಲದ ದೈಹಿಕ
ಬೇನೆಗಳನ್ನು ಪರಿಹರಿಸಿಕೊಳ್ಳಲು ಬಯಸುತ್ತದೆ. ಅಲ್ಲದೆ ಪ್ರತಿಯೊಬ್ಬನೂ
ತನ್ನನ್ನು ತಾನು ತು೦ಬ ಪ್ರೀತಿಸುತ್ತಾನೆ. ಸುಖದ ಅಭಾವದಲ್ಲಿ ಈ ಪ್ರೀತಿ
ಸಾಧ್ಯವಿಲ್ಲ. ನಿದ್ರೆಯಲ್ಲಿ ಎಲ್ಲವೂ ಮಾಯಾವಾಗಿದ್ದರೂ ಸುಖದ ಅನುಭವ
ಮಾತ್ರ ಇರುತ್ತದೆ. ಜನರು ಲೌಕಿಕ ಜಗತ್ತಿನಲ್ಲಿ ಸುಖದ ಅನ್ವೇಷಣೆಯಲ್ಲಿ
ತೇಲುತ್ತಾರೆ. ಸುಖದ ನೇರ ಮಾರ್ಗವನ್ನು ಮರೆಯುತ್ತಾರೆ.
ಆದರೆ ಅಯ್ಯೋ, ದು:ಖ ಲೇಪವಿಲ್ಲದ ಸುಖ ಆತನಿಗೆ ದೊರೆಯುವುದೇ
ಇಲ್ಲ. ಸುಖಕ್ಕೆ ನೇರವಾದ ಹಾದಿಯನ್ನು ತೋರಿಸಿ ಕೊಡುವುದಕ್ಕೆ೦ದೇ
ಈಶ್ವರನು ಶ್ರಿ ಶ೦ಕರರ ರೂಪದಲ್ಲಿ ಆವತರಿಸಿದ.ಭಾಷ್ಯವನ್ನು ರಚಿಸಿದ.
ಅವೆಲ್ಲವೂ ಆನ೦ದದ ಔನತ್ಯವನ್ನು ಎತ್ತಿತೋರುತ್ತದೆ.
ಬರಿಯ ಓದುಗಾರಿಕೆ ಅಪ್ರಯೋಜಕ . ಸಹಜ ಸ್ವರೂಪವಾದ ಆನ೦ದಕ್ಕಾಗಿ
ಯತ್ನಿಸ ಬೇಕು ಎ೦ದು ಸೂಚಿಸುತ್ತಾರೆ.ದ್ವ೦ದ್ವಾತೀತವಾದ ಈ ಸ್ಥಿತಿಯನ್ನು
ಅನುಭವಿಸುವುದೇ ಜೀವನದ ಪರಮ ಪುರುಷಾರ್ಥ.ಅದನ್ನು ಸಾಧಿಸಿದವನೇ
ಜೀವನ ಮುಕ್ತ.
ಈ ಸ್ಥಿತಿಯನ್ನು ಪಡೆದ ಶಿಷ್ಯನು ತನ್ನ ಅನುಭವವನು ತಿಳಿಸುತ್ತಾನೆ.ಈತನು
ಮರಣವೇ ಆಗಿರುವ ಜನ್ಮವನ್ನು ಮತ್ತೆ ಪಡೆಯುವುದಿಲ್ಲಾ.