Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

"ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

May 30, 2007 - 2:04pm — ismail

'ಸಂಪದ'ದಲ್ಲಿ ಇತ್ತೀಚೆಗೆ ಅನಂತಮೂರ್ತಿಯವರು ಆವರಣದ ಬಗ್ಗೆ ಏನು ಹೇಳಿದರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಸಮಯದಲ್ಲಿ ಅನಂತಮೂರ್ತಿಯವರೇ ತಯಾರಿಸಿದ ಭಾಷಣದ ಸಾರಾಂಶರೂಪವನ್ನು ನಿಮ್ಮೆಲ್ಲರ ಮುಂದಿಡಬಯಸುತ್ತೇವೆ.

ನನಗೆ ಈ ಆವರಣವನ್ನು ಕುರಿತು ಒಂದು ಸಭೆ ಮಾಡುವುದೇ ಇಷ್ಟವಿರಲಿಲ್ಲ. ಇದಕ್ಕೆ ಬಹಳ ಮುಖ್ಯವಾದ ಕಾರಣ ಸಾಹಿತ್ಯ ಚರ್ಚೆಗೆ ಯೋಗ್ಯವಾದ ಒಳ್ಳೆಯ ಪುಸ್ತಕ ಇದು ಅಲ್ಲ ಎಂಬುದು. ಒಂದು ಕಾಲದಲ್ಲಿ ಭೈರಪ್ಪ ಮತ್ತು ನಾನು ಆಗೀಗ ಭೇಟಿಯಾಗುತ್ತಿದ್ದೆವು. ಚದುರಂಗರೂ ಇರುತ್ತಿದ್ದರು. ಆಗ ಅವರ ಪುಸ್ತಕಗಳನ್ನು ನಾನು ಓದುತ್ತಿದ್ದೆ. ಓದಿ ಚೆನ್ನಾಗಿಲ್ಲ ಅನ್ನಿಸಿದರೆ ಅದನ್ನು ಅವರಿಗೂ ಹೇಳುತ್ತಿದ್ದೆ. ಇಂಥ ಸಂದರ್ಭಗಳಲ್ಲಿ ಭೈರಪ್ಪನವರೂ `ನನಗೂ ಅಷ್ಟೊಂದು ಚೆನ್ನಾಗಿಲ್ಲ ಅನ್ನಿಸುತ್ತೆ' ಎನ್ನುತ್ತಿದ್ದ ಸ್ನೇಹದ ಕಾಲ ಒಂದಿತ್ತು. ನನಗೆ `ಗೃಹಭಂಗ' ಒಂದೇ ಅವರ ಒಳ್ಳೆಯ ಕೃತಿ. (ಯಾಕೆಂದರೆ ಭೈರಪ್ಪನವರ ವಕೀಲಿಪ್ರಜ್ಞೆ ಇಲ್ಲ ಕೆಲಸ ಮಾಡಿಲ್ಲ) ಅದೆಷ್ಟು ಒಳ್ಳೆಯ ಕೃತಿ ಅನ್ನಿಸಿತ್ತು ಅಂದರೆ ನಾನು ನ್ಯಾಷನಲ್ ಬುಕ್ ಟ್ರಸ್ಟ್‌ನ ಸದಸ್ಯನಾದಾಗ-ಗೋಕಾಕ್ ಮತ್ತು ಹರಿದಾಸಭಟ್ಟರೂ ಸದಸ್ಯರಾಗಿದ್ದರು-ಕೆಲವು ಕೃತಿಗಳನ್ನು ಭಾರತದ ಎಲ್ಲಾ ಹದಿನಾಲ್ಕು ಭಾಷೆಗಳಿಗೂ ಅನುವಾದಿಸಬೇಕೆಂದು ತೀರ್ಮಾನಿಸಿದಾಗ ಹರಿದಾಸಭಟ್ಟರು ನನ್ನ ಪುಸ್ತಕದ ಹೆಸರು ಹೇಳಿದರು. ನಾವೇ ಸದಸ್ಯರಾಗಿದ್ದು ನಮ್ಮ ನಮ್ಮ ಪುಸ್ತಕಗಳನ್ನು ನಾವು ನ್ಯಾಷನಲ್ ಬುಕ್ ಟ್ರಸ್ಟ್‌ಗೆ ಕೊಡಬಾರದು. ಬೇರೆ ಪುಸ್ತಕಗಳನ್ನು ಕೊಡಬೇಕು ಎಂದು ಕೊಂಡು ಭೈರಪ್ಪನವರ `ಗೃಹಭಂಗ'ವನ್ನು ನಾನು ಸೂಚಿಸಿದೆ. ಹಾಗೆಯೇ ಮೊಕಾಶಿಯವರ `ಗಂಗವ್ವ ಗಂಗಾಮಾಯಿ'ಯನ್ನೂ ಶಾಂತಿನಾಥರ ಮುಕ್ತಿಯನ್ನೂ ಆರಿಸಿದೆವು.

ಆಮೇಲೆ ಅವರ `ಪರ್ವ' ಬಂತು. ಅದನ್ನು ಓದಿದಾಗ ನನಗೆ ಏನನ್ನಿಸಿತು ಅಂದರೆ-`ನೋಡಿ ವೇದವ್ಯಾಸರ ಭಾರತವನ್ನು ಅವರು ರಿಯಲಿಸ್ಟಿಕ್ ಮಾಡಿ ಬರೆದಿದ್ದಾರೆ. ಈ ಭೈರಪ್ಪನವರ ಭಾರತ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದೆ ನಡೆದಿರಬಹುದೋ ಏನೋ.. ಆದರೆ ವೇದವ್ಯಾಸರ ಭಾರತ ಇವತ್ತೂ ನಡಿಯುತ್ತಿದೆ' ಎಂದೆ. ಯಾಕೆಂದರೆ ಯಾವುದು ಪುರಾಣವಾಗಿ ಹೇಳಿದೆಯೋ ಅದು ಇವತ್ತೂ ನಡೆಯುತ್ತಿದೆ. ಯಾವುದನ್ನು ವಾಸ್ತವವೆಂಬಂತೆ ಬರೆದಿದ್ದಾರೋ ಅದು ಚಾರಿತ್ರಿಕವಾದ ಯಾವೊತ್ತೋ ಒಂದು ಕಾಲಮಾತ್ರದ ಕೃತಿಯಾಗಿದೆ. ಇದರಿಂದ ನನ್ನ ಸ್ನೇಹಿತರೂ ಆದ ಅವರ ಕೆಲ ಪ್ರಜ್ಞಾವಂತ ಅಭಿಮಾನಿಗಳಿಗೆ ನನ್ನ ಮೇಲೆ ಸಿಟ್ಟೂ ಬಂದಿತ್ತು.

ನಾನು ಕೆಲವು ವೈಯಕ್ತಿಕ ವಿಷಯಗಳನ್ನು ಇಲ್ಲಿ ಹೇಳಲೇಬೇಕು; ಇಲ್ಲದಿದ್ದರೆ ಬೇರೆಯವರು ಇದನ್ನು ಎಳೆದು ತಂದೇ ತರುತ್ತಾರೆ. ನಾನು ಸಾಹಿತ್ಯ ಅಕಾಡೆಮಿಯ ಚುನಾವಣೆಗೆ ನಿಂತೆ. ಆಗ ಭೈರಪ್ಪ ದಿಟ್ಟವಾಗಿಯೇ ವಿಮಾನದಲ್ಲಿ ಸಂಚರಿಸಿ ನನ್ನ ವಿರುದ್ಧ ಪ್ರಚಾರ ಮಾಡಿದರು. ಹೀಗೆ ಮಾಡುವುದಕ್ಕೆ ಅವರಿಗೆ ಎಲ್ಲಾ ಹಕ್ಕೂ ಇತ್ತು. ಕನ್ನಡದವರು ನನ್ನ ವಿರುದ್ಧ ಓಟು ಹಾಕಿದರು. ಮರಾಠಿ ಲೇಖಕರೊಬ್ಬರು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಮರಾಠಿ ಲೇಖಕರು ನನಗೆ ಓಟು ಹಾಕಿದರು. . ಇದರಿಂದ ನನ್ನಲ್ಲಿ ಯಾವ ಕಹಿಯೂ ಉಂಟಾಗಲಿಲ್ಲ. ಇದು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದ ಕ್ರಮ ಎಂದೇ ನಾನು ಈಗಲೂ ತಿಳಿದಿದ್ದೇನೆ.

ನಾನು ಕೇಳಿದಂತೆ ಅವರ ಆತ್ಮ ಚರಿತ್ರೆಯಲ್ಲಿ ಏನೋ ಹೇಳಿಕೊಂಡಿದ್ದಾರಂತೆ:. ಅವರು ದಾಟು ಬರೆದಾಗ ದಲಿತರು ಅವರ ಮನೆ ಮೇಲೆ ಕಲ್ಲುಹೊಡೆದರಂತೆ. ಅದರ ಹಿಂದೆ ನನ್ನ ಮಾತನ್ನು ಕೇಳುತ್ತಿದ್ದ ಆಲನಹಳ್ಳಿ ಕೃಷ್ಣ ಮತ್ತು ನನ್ನ ಕೈವಾಡ ಇತ್ತುಎಂದು ಗುಮಾನಿಯಾಗುವಂತೆ ಅವರು ಬರೆದಿದ್ದಾರೆ ಎಂದು ಕೇಳಿದ್ದೇನೆ. ಇದನ್ನವರು ಬರೆಯಬಾರದಿತ್ತು. ಏಕೆಂದರೆ ಇದು ಸುಳ್ಳು. ಎಷ್ಟು ಸುಳ್ಳು ಎಂದರೆ ಇದು ಅಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದರೆ, ಇರಬಹುದೇನೋ ಎಂಬ ಅನುಮಾನ ಶುರುವಾಗಿಬಿಡುತ್ತೆ. ಆದ್ದರಿಂದ ಈ ವರೆಗೆ ಈ ಬಗ್ಗೆ ನಾನು ಏನೂ ಹೇಳಿಲ್ಲ.

ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ. ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ, ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ, ಕುವೆಂಪು ಅಲ್ಲ, ಬೇಂದ್ರೆ ಅಲ್ಲ, ನಾವ್ಯಾರೂ ಅಲ್ಲ.

ಎಷ್ಟು ಪ್ರಸಿದ್ಧರು ಹೇಳುವೆ: ಮೊನ್ನೆ ನಾನು ಕೊಲ್ಕತ್ತಾಕ್ಕೆ ಹೋಗುತ್ತಿದ್ದೆ. ನನ್ನ ಪಕ್ಕ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಕೆಲಸ ಮಾಡುವ ಕನ್ನಡ ಬರುವ ಒಬ್ಬರಿದ್ದರು. ನನ್ನ ಹತ್ತಿರ ಮಾತನಾಡುತ್ತಾ ಅವರು ಬಹು ಮೆಚ್ಚುಗೆಯಲ್ಲಿ ಹೀಗೆ ಹೇಳಿದರು: `ನಾನು ಮತ್ತು ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರು ಒಟ್ಟಿಗೇ ನ್ಯೂಯಾರ್ಕ್‌ಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ `ಆವರಣ' ಓದಲಿಕ್ಕೆ ಶುರಮಾಡಿದ ನಾರಾಯಣ ಮೂರ್ತಿಯವರು ನ್ಯೂಯಾರ್ಕ್‌ನಲ್ಲಿ ಅದನ್ನು ಮುಗಿಸಿದರು'. ನಾರಾಯಣ ಮೂರ್ತಿಗಳಿಗೆ ಭೈರಪ್ಪನವರ `ಆವರಣ' ಇಷ್ಟ ಆಗಿದ್ದೂ ಕೂಡಾ ನನಗೊಂದು ಮೆಟಫರ್. ಅಂದರೆ ಯಾವ ಶಕ್ತಿಯ ವಿರುದ್ಧ ನಾವು ಇವತ್ತು ನಿಲ್ಲಬೇಕೋ ಆ ಶಕ್ತಿಗಳು ಹೀಗೆ ಸಂಘಟಿತಗೊಂಡು ಮೆಟಫರ್‌ಗಳಾಗಿ ನನಗೆ ಕಾಣುತ್ತವೆ. ಕರ್ನಾಟಕ ಗುಜರಾತಿನಂತೆ ಆಗಬೇಕೆಂಬುದು ಆವರಣದ ಹಿಂದಿರುವ ಸಂಸ್ಕೃತಿ ರಾಜಕೀಯ. ಗುಜರಾತು ಈಗ ಬಂಡವಾಳಹೂಡಿ ಬೆಳೆಸುವವರ ಸ್ವರ್ಗ; ಬಡ ಮುಸ್ಲಿಮರ ನರಕ.

ಗ್ಲೋಬಲೈಸ್ ಮಾಡುವ ಮೂಲಕ ದೇಶೀಯವಾದ ಭಾರತೀಯ ಸಂಸ್ಕೃತಿ ಅಂತ ನಾವೇನನ್ನು ಗುರುತಿಸುತ್ತೇವೋ ಅದನ್ನು ಸರ್ವನಾಶ ಮಾಡುವುದು ಇದರ ಹಿಂದಿರುವ ಹುನ್ನಾರ. ಹಾಗೆ ಸರ್ವನಾಶ ಮಾಡುತ್ತಿರುವವರ ಮುಸ್ಲಿಮರ ವಿರೋಧ ಯಾವ ಸಾಂಸ್ಕೃತಿಕ ಕಾರಣಕ್ಕಾಗಿ ಎಂಬುದು ನನಗೆ ಅರ್ಥವೇ ಆಗುವುದಿಲ್ಲ. ಆವರಣದ ಹಿಂದಿರುವ ಪ್ರೇರಣೆಗಳನ್ನು ಮೆಚ್ಚುವ ಉದ್ಯಮಿಗಳ ಹಿಂದುತ್ವರಾಜಕೀಯ ಕೂಡ ಇಸ್ಲಾಂ ವಿರುದ್ಧ ಕ್ರೂಸೇಡ್ ಸಾರಿದ ಬುಷ್ ಜೊತೆಗಿನ ಒಳ ಒಪ್ಪಂದವಿದ್ದೀತು ಎನ್ನಬಹುದೆ? ಟಾಟಾ ಮತ್ತು ನಾರಾಯಣ ಮೂರ್ತಿಗಳು ಗುಜರಾತಿನ ಮೋದಿಗೆ ಎಷ್ಟು ಪ್ರಿಯರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಟೆಲಿವಿಷನ್ ಛಾನೆಲ್ ಗಳು ತೋರಿಸಿವೆ.

ಭೈರಪ್ಪನವರ ಬಗ್ಗೆ ನಿಷ್ಠರವಾದ ಮಾತಿನ ವಿಮರ್ಶೆಗೆ ತೊಡಗಿರುವ ನನಗೆ ಮತ್ತೊಂದು ವಿಷಯ ನೆನಪಾಗುತ್ತಿದೆ. ಭೈರಪ್ಪನವರೂ ನಾನು ಒಡನಾಡುತ್ತ ಇದ್ದ ಮೈಸೂರಿನ ದಿನಗಳಲ್ಲಿ ಕುಮಾರ ಗಂಧರ್ವರ ಸಂಗೀತವನ್ನು ನನಗೆ ಪರಿಚಯ ಮಾಡಿಕೊಟ್ಟ ಮೊದಲಿಗರು ಭೈರಪ್ಪನವರು. ನಾನು ಬೆನ್ನು ನೋವಿನಿಂದ ಹಾಸಿಗೆ ಹಿಡಿದಿದ್ದಾಗ ಅದನ್ನು ಬಲ್ಲವರಾದ ಭೈರಪ್ಪನವರು ಅದಕ್ಕೇನು ಚಿಕಿತ್ಸೆ ಮಾಡಬೇಕು ಎಂದು ಮನೆಗೇ ಬಂದು ಹೇಳುತ್ತಿದ್ದರು. ನನ್ನ ಹಳ್ಳಿಗೆ ಹೋದರೆ ಅಲ್ಲಿ ಪುಟ್ಟಣ್ಣಯ್ಯ ಅಂತ ಇದ್ದರು. ಅವರ ಜೊತೆ ನಮ್ಮ ತಾಯಿಯನ್ನು ಭೇಟಿ ಮಾಡಿ ಕಾಫಿ ಕುಡಿದು ಬರುತ್ತಿದ್ದರು. ನಾನು ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾತನಾಡುತ್ತೇನೆ. ಯಾಕೆಂದರೆ ನನಗೆ ಗೋವಿಂದಯ್ಯನ ತರಹ ಭೈರಪ್ಪನವರ ಬಗ್ಗೆ ಕೇವಲ ಕೋಪದಲ್ಲಿ ಮಾತನಾಡಲಿಕ್ಕೆ ಆಗುವುದಿಲ್ಲ.

ಭೈರಪ್ಪ ನನ್ನ ಜತೆಯ ಬರೆಹಗಾರ. ಆದರೆ ನನಗೆ ಸಾಹಿತ್ಯ ಲೋಕದಲ್ಲಿ ಮುಖ್ಯ ಅನ್ನಿಸಿದವರು ಅವರಲ್ಲ. ಅವರೆಷ್ಟೇ ಜನಪ್ರಿಯ ಆಗಿರಲಿ, ಅವರೊಬ್ಬರು ಡಿಬೇಟರ್. ಜನರ ಮೆಚ್ಚುಗೆಗೆ ಬರುವ ಹಾಗೆಯೇ ಅವರು ಕಾದಂಬರಿಗಳನ್ನು ಬರೆಯುವುದು. ಒಬ್ಬ ಒಳ್ಳೆಯ ಲೇಖಕ ಬರೀತಾ ಇದ್ದಾಗ ತನ್ನ ಅಭಿಪ್ರಾಯಗಳಿಗೆ ವಿರೋಧವಾಗಿ ಹೋಗುವ ಮುಕ್ತಮನಸ್ಸು ಅವನಿಗಿದ್ದರೆ ಮಾತ್ರ ಅವನು ನನ್ನ ಪಾಲಿಗೆ ಸೃಜನಶೀಲ ಲೇಖಕ. ಒಬ್ಬ ಸಾಮಾನ್ಯ ಲೇಖಕ ಜನಪ್ರಿಯವಾಗಲೆಂದು ಅವನೇನು ನಂಬಿದ್ದಾನೋ ಅದನ್ನು ಜನರೂ ಒಪ್ಪುವ ಹಾಗೆ-ಆಕ್ರಮಣ ಮಾಡುವ ಹಾಗೆ- ಬರೆಯುತ್ತಾನೆ.

ಭೈರಪ್ಪನವರು ಹಿಂದೂ ಸಂಸ್ಕೃತಿಯನ್ನು ಪ್ರಶ್ನೆ ಮಾಡುವಂಥ ಪುಸ್ತಕಗಳನ್ನೂ ಬರೆದಿದ್ದಾರೆ. ನಿಜ. ಅವರದ್ದೊಂದು ಕೃತಿ ಇದೆಯಲ್ಲಾ `ವಂಶವೃಕ್ಷ' ಅಂತಹ ಬರವಣಿಗೆಗೆ ಒಳ್ಳೆಯ ಉದಾಹರಣೆ. ಅವರು ಇಂತಹವನ್ನು ಬರೆಯುವಾಗ ಹೇಗೆ ಬರೆಯುತ್ತಾರೆಂದರೆ ಪ್ರಶ್ನೆಗಳನ್ನು ಎತ್ತಬೇಕು; ಆದರೆ ಅವರ ಮನಸ್ಸಿನಲ್ಲಿ ಅವರಿಗೇ ಇಷ್ಟವಿರುವ ಉತ್ತರ ಸಿಗುವ ಹಾಗೆ ಅದಕ್ಕೊಂದು ಬೆಳವಣಿಗೆಯನ್ನು ಕಟ್ಟಬೇಕು- ಹಾಗೆ. ಡಿಬೇಟರ್ ಕಟ್ಟುವ ಹಾಗೆ. ತನ್ನ ವಿರೋಧಿಯ ವಾದವನ್ನು ಡಿಬೇಟರ್ ಸ್ವೀಕರಿಸಿದಂತೆ ತೋರುವಹಾಗೆ. ಪ್ರಶ್ನೆಗಳನ್ನು ಎತ್ತಿದಹಾಗೆ ಕಾಣಬೇಕು; ಆದರೆ ನಮಗೆ ನೆಮ್ಮದಿಯಾಗುವ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಉತ್ತರ ಸಿಗಬೇಕು. ಮಾಂಸದ ರುಚಿಯೂ ಬೇಕು; ಮಡಿಯೂ ಉಳಿಯಬೇಕು ಎನ್ನುವವರು ವೆಜಿಟಬಲ್ ಬಿರಿಯಾನಿ ತಿನ್ನುವ ಹಾಗೆ. ? ಮಾತುಗಳಿಗೆಲ್ಲ ವಿನಾಯಿತಿಯೆಂದರೆ ಓದುಗರಿಗೆ ಮುಖಮಾಡದೆ ಸಾಗುವ ಅವರ ಗೃಹಭಂಗ ಮಾತ್ರ.

ಜನಪ್ರಿಯರಾದ ಭೈರಪ್ಪ ತನ್ನನ್ನು ತಾನೇ ಮೀರಬಲ್ಲ ಲೇಖಕ ಅಲ್ಲ ಎಂದು ನಾನು ತಿಳಿದಿರುವುದಕ್ಕೆ ಕಾರಣ ಹೇಳುತ್ತೇನೆ. ಅವರಲ್ಲಿ ಕಾವ್ಯ ಅನ್ನೋದು ಏನೂ ಇಲ್ಲ. ಈ ಮಹಾದೇವನದ್ದು ಬರೇ ಪೊಯೆಟ್ರಿ. ನನಗೆ ಇಷ್ಟವಾದ ಲೇಖಕರನ್ನು(ಇವರಲ್ಲಿ ಕೆಲವರು ನನ್ನನ್ನು ಟೀಕಿಸುತ್ತ ಇದ್ದವರು) ನೆನಪಿಸಿಕೊಳ್ಳುತ್ತೇನೆ. ಉದಾಹರಣೆಗೆ ಲಂಕೇಶರು. ಅವರು ತಮ್ಮ್ನ ಎಲ್ಲಾ ಅಭಿಪ್ರಾಯಗಳನ್ನು ಇಟ್ಟುಕೊಂಡು ಕೆಲವು ಕಥೆಗಳಲ್ಲಿ ತಮ್ಮ್ನ ಅಭಿಪ್ರಾಯಗಳನ್ನೇ ತಾವೇ ಮೀರಿ ತಮ್ಮ ಸಂದಿಗ್ಧಗಳಿಗೆ ಉತ್ತರವೇ ಇಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ತೇಜಸ್ವಿ, ಕಂಬಾರ, ಮಹದೇವ, ಯಶವಂತ ಚಿತ್ತಾಲ, ಆಲನಹಳ್ಳಿ, ರಾವ್ ಬಹದ್ದೂರ್, ಚದುರಂಗ, ನನ್ನ ಹತ್ತಿರ ಸತತವಾಗಿ ಜಗಳವಾಡಿದ ಶಂಕರ ಮೊಕಾಶಿ ಪುಣೇಕರ- ಎಲ್ಲರೂ. ಮೊಕಾಶಿ ಟ್ರೆಡಿಷನಲಿಸ್ಟ್ ಸನಾತನಿ ಅಂತಾನೆ ನಮ್ಮ ಜಗಳ. ಆದರೆ ನನಗೆ ನನ್ನ ಬಗ್ಗೆ ಅನುಮಾನ ಹುಟ್ಟಿಸುತ್ತಿದ್ದವರು ಅವರು. ಕಾರಂತ, ಮಾಸ್ತಿ, ಕುವೆಂಪು, ಗೊರೂರು- ಇವರೆಲ್ಲಾ ಬಿಡಿ, ಬಹಳ ದೊಡ್ಡ ಲೇಖಕರು. ಅವರೆಲ್ಲರಲ್ಲೂ ಕಾವ್ಯ ಇದೆ. ಕನ್ನಡದ ಚಂಪೂ ಸಂಪ್ರದಾಯ ಹೊಸ ಬಗೆಯಲ್ಲಿ ಮುಂದುವರಿದಂತೆ ಕಾಣುತ್ತದೆ. ಆದರೆ ಭೈರಪ್ಪನವರಲ್ಲಿ ಅದಿಲ್ಲ.

ಕೆಲವು ಕಾದಂಬರಿಗಳು ಕಂಡದ್ದನ್ನು ಎದುರಾಗುವ ಯಾತ್ರೆ; ಹಲವು ಜನಪ್ರಿಯ ಕಾದಂಬರಿಗಳು ಪೂರ್ವ ನಿಶ್ಚಿತವಾದ ಪ್ರೀಪೈಡ್ ಟೂರ್. ಗೃಹಭಂಗ ಹೊರತಾಗಿ ಭೈರಪ್ಪನವರ ಇತರ ಕೃತಿಗಳು ಎರಡನೇ ಬಗೆಯ ಬರವಣಿಗೆಗಳು.

***

ಭೈರಪ್ಪನವರಿಗಿಂತ ಆಡ್ವಾಣಿಯವರೇಹೆಚ್ಚು ಮುಕ್ತ ಮನಸ್ಸಿನವರೇನೊ? ಅವರು ನಿತ್ಯ ಜನಸಂಪರ್ಕದ ರಾಜಕಾರಣಿಯಾದ್ದರಿಂದ ಭೈರಪ್ಪನವರಿಗೆ ಸಾಧ್ಯವಿಲ್ಲದೇ ಇರುವುದು ಅವರಿಗೆ ಸಾಧ್ಯವಿದೆ. ಇದೊಂದು ಆಶ್ಚರ್ಯ. ಆಡ್ವಾಣಿಯವರು ಜಿನ್ನಾ ಬಗ್ಗೆ ಪಾಕಿಸ್ಥಾನದಲ್ಲಿ ಮಾತನಾಡಿದ್ದರು. ಪಾಕಿಸ್ಥಾನ ಆದ ಮೇಲೆ `ಇನ್ನು ಮುಂದೆ ಹಿಂದೂ ಮುಸ್ಲಿಂ ಅಂತೆಲ್ಲಾ ಮಾಡುವುದು ಬೇಡ ಇಲ್ಲಿ ಯಾರೂ ಮುಸ್ಲಿಮರಿಲ್ಲ, ಹಿಂದೂಗಳಿಲ್ಲ. ಇದು ಪಾಕಿಸ್ಥಾನ' ಅಂತ ಜಿನ್ನಾ ಭಾಷಣ ಮಾಡಿದ್ದು ನಿಜ. ಇದನ್ನು ಹೇಳಬೇಕೆಂದು ಆಡ್ವಾಣಿಯವರಿಗೆ ಅನ್ನಿಸಿತು. ಅದನ್ನು ಹೇಳಿ ಅವರು ಬಹಳ ಟೀಕೆಗಳಿಗೆ ಗುರಿಯಾಗಿಬಿಟ್ಟರು. ಆಡ್ವಾಣಿಯವರಿಗೆ ತಮ್ಮ ರಾಜಕಾರಣದಲ್ಲೂ ತೆರೆಯಬಹುದಾದ ಒಂದು ಒಳನೋಟ ನಮ್ಮ ಭೈರಪ್ಪನವರಿಗೆ ಸಾಧ್ಯವಿಲ್ಲವಲ್ಲ-- ಇದು ಬಹಳ ದೊಡ್ಡ ದುರಂತ ಅಂತ ನನ್ನಗನ್ನಿಸುತ್ತೆ. ಕೆಟ್ಟ ರಾಜಕಾರಣ ಮಾಡುವವನೂ ಜನರ ಜತೆಯೇ ರಾಜಕಾರಣ ಮಾಡಬೇಕಾಗಿರುವುದರಿಂದ ಎಲ್ಲೋ ಒಂದು ಕಡೆ ತೆರೆದುಕೊಳ್ಳುತ್ತಾನೆ.

ಪಾಕಿಸ್ಥಾನೀ ಬರೆಹಗಾರರು ಅನೇಕ ಕಥೆಗಳನ್ನು ಹೇಳುತ್ತಾರೆ. ಇವು ಅವರ ಮೌಖಿಕ ಜಾನಪದ. ಅಲ್ಲಾನ ಬಗ್ಗೆಯೇ ಒಂದು ಕತೆ ಇದೆ. ನಮಗೊಂದು ಮುಸ್ಲಿಂ ದೇಶ ಬೇಕು ಎಂದು ಭಾರತ ತೊರೆದು ಹೋದವರು ಅಲ್ಲಿ ಎರಡನೇ ದರ್ಜೆಯ ನಾಗರಿಕರಾದರು. ಅಲ್ಲೇ ಇದ್ದ ಪಂಜಾಬಿಗಳದೇ ಮೇಲುಗೈ ಆಯಿತು. ಉರ್ದು ಮಾತಾಡುವವರ ಕೊಲೆಗಳೂ ನಡೆಯ ತೊಡಗಿದವು. ಹೀಗೆ ಕೊಲೆಯಾದ ಒಬ್ಬ ಅಲ್ಲಾನ ಹತ್ತಿರ ಹೋಗುತ್ತಾನೆ. ಅಲ್ಲಿ ಅವನು ದೇವರನ್ನುದ್ದೇಶಿಸಿ ಉರ್ದುವಿನಲ್ಲಿ `ನಾನು ನಿನ್ನನ್ನು ನಂಬಿ ನಮಗೊಂದು ಪಾಕಿಸ್ಥಾನ ಬೇಕು ಎಂದು ಬಂದವನು. ಆದರೆ ನನ್ನನ್ನೇ ಕೊಂದುಬಿಟ್ಟರು ನಿನ್ನ ಜನ' ಎಂದು ದೂರುತ್ತಾನೆ. ಆಗ ಅಲ್ಲಾ ಗೇಬ್ರಿಯಲ್‌ನನ್ನು ಕರೆದು `ಅವನೇನು ಹೇಳುತ್ತಿದ್ದಾನೆ?' ಎಂದು ಪಂಜಾಬಿಯಲ್ಲಿ ಕೇಳಿದನಂತೆ!ಇದು ಪಾಕಿಸ್ತಾನಿಗಳೇ ಹೇಳುವ ಕತೆ. ಇದರರ್ಥ ಎಲ್ಲರಿಗೂ ತಮ್ಮನ್ನು ತಾವು ವಿಮರ್ಶಿಸಿಕೊಳ್ಳುವ ಒಳ ನೋಟ ಇರುತ್ತದೆ ಎಂದು. ಆದ್ದರಿಂದ ನನ್ನ ಬಹಳ ದೊಡ್ಡ ಆಸೆ ಏನಂದರೆ ನಾವು ಏನಾದರೂ ಮಾಡಿ ಪಾಕಿಸ್ಥಾನದ ಜತೆ ಸ್ನೇಹದಿಂದ ಇದ್ದು ಈ ಹಿಂದೂ ಮುಸ್ಲಿಂ ದ್ವೇಷವನ್ನು ಕೊನೆಗೊಳಿಸಬೇಕು.ನನಗೆ ಪಾಕಿಸ್ತಾನೀ ಲೇಖಕ ಸ್ನೇಹಿತರಿದ್ದಾರೆ. ಅವರೂ ನಮ್ಮ ಹಾಗಿನ ಮನುಷ್ಯರೇ. ಮನುಷ್ಯನನ್ನು ಒಟ್ಟಾರೆಯಾಗಿ ನೋಡಿ ಈ ಮನುಷ್ಯ ಇಷ್ಟೇ ಹೀಗೇ ಎಂದು ಹೇಳುವುದು, ಒಂದು ಧರ್ಮ ಇಷ್ಟೇ ಹೀಗೇ ಎಂದು ಹೇಳುವುದು, ಆ ಧರ್ಮ ಕಾಲಾನುಕ್ರಮದಲ್ಲಿ ಪಡೆಯುವ ರೂಪವನ್ನು ಗಮನಿಸದೇ ಇರುವುದು ದಡ್ಡತನ.ಇಸ್ಲಾಂ ಬೇರೆ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ವರ್ಣರಂಜಿತವಾಗಿಲ್ಲ. ಇಲ್ಲಿ ದೇಶೀ ಸಂಸ್ಕೃತಿಗಳ ಜತೆಗೆ ಒಡನಾಡಿ ಅದು ಪಡೆದುಕೊಂಡಿರುವ ಸ್ವರೂಪ ಭಿನ್ನವಾದುದು. ಒಬ್ಬ ಕಬೀರ್ ಹುಟ್ಟಿಗೂ ಇಸ್ಲಾಂ ಮತ್ತು ಅದ್ವೈತದ ನಡುವಿನ ಸಂವಾದ ಕಾರಣವಾಯಿತು. ಇಂಥ ಯಾವುದಕ್ಕೂ ಅವಕಾಶವಿಲ್ಲದಂತೆ ಇದೊಂದು ರೀತಿಯ ಶಾಪ ಎಂಬಂತೆ ಔರಂಗಜೇಬನನ್ನು ಎತ್ತಿಕೊಂಡು ಮಾತಾಡುವುದು, ಎರಡು ಮತಗಳಲ್ಲೂ ಹುಟ್ಟಿದ ಭಕ್ತಿಪಂಥವನ್ನು ಕಡೆಗಣಿಸುವುದು ಕರ್ನಾಟಕವನ್ನು ಗುಜರಾತ್ ಗೊಳಿಸುವ ದ್ವೇಷದ ರಾಜಕಾರಣ. ಯಾರಾದರೂ ಚರಿತ್ರಕಾರರು ಈ ಕುರಿತು ಪ್ರತಿಕ್ರಿಯಿಸಬೇಕು. ಭೈರಪ್ಪನವರು ಔರಂಗಜೇಬ್‌ನನ್ನು ಬೈದರು ಅಂತ ನಾನು ಔರಂಗಜೇಬ್‌ನನ್ನು ಹೊಗಳುವುದಕ್ಕೆ ಆರಂಭಿಸಿದರೆ ನಾನೂ ಒಬ್ಬ ಡಿಬೇಟರ್ ಆಗಿಬಿಡುತ್ತೇನೆ ಅಷ್ಟೇ. ಅಕ್ಬರನ ಆಸ್ಥಾನದಲ್ಲಿ ಇದ್ದ ಹಿಂದೂಗಳಿಗಿಂತ ಹೆಚ್ಚಿನ ಸಂಖ್ಯೆಯ ಹಿಂದೂಗಳು ಔರಂಗಜೇಬನ ಆಸ್ಥಾನದಲ್ಲಿದ್ದರು ಎಂದು ಹೇಳುವವರಿದ್ದಾರೆ. ಅವನು ಅಷ್ಟು ದೇವಸ್ಥಾನಗಳನ್ನು ಕೆಡವಿದ ಅಂದರೆ ಇನ್ನಾರೋ ಮತ್ತಷ್ಟು ದಾಖಲೆಗಳನ್ನು ತಂದು ಅವನು ಇಷ್ಟು ದೇವಸ್ಥಾನಗಳನ್ನು ಕಟ್ಟಿಸಿದ ಎನ್ನಲು ಸಾಧ್ಯವಿದೆ. ನನಗೇ ಗೊತ್ತಿರುವ ಹಾಗೆ ನಮ್ಮ ತೀರ್ಥಹಳ್ಳಿಯ ದೇವಸ್ಥಾನಗಳೆಲ್ಲವನ್ನೂ ಮತ್ತೆ ಕಟ್ಟಿಸಿದವರು ಮೀರ್ಜಾ ಇಸ್ಮಾಯಿಲ್ ಸಾಹೇಬರು.ಬ್ರಿಟಿಷರು ಇಲ್ಲಿ ಬಂದರು; ನಮ್ಮನ್ನು ಆಳಿದರು; ಇದು ನಮ್ಮ ದೇಶ ಅಲ್ಲ ಅಂತ ಬಿಟ್ಟು ಹೋದರು. ಆದರೆ ಈಗ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಮರು ಬಂದರು, ಆಳಿದರು ಇಲ್ಲೇ ಬದುಕಿದರು. ಇದು ನಮ್ಮ ದೇಶವೇ ಅಂದು ಕೊಂಡರು. ನಮ್ಮ ಸಂಸ್ಕೃತಿ ಜತೆಗೆ ಬೆರೆತರು. ಗಾಂಧೀಜಿಯನ್ನು ಒಬ್ಬ ಅಮೆರಿಕನ್ ಬಂದು ನಿನ್ನ ಅಜೆಂಡಾ ಏನು ಎಂದು ಕೇಳಿದಾಗ ಅವರು ಮೂರು ವಿಷಯಗಳನ್ನು ಹೇಳಿದರು. ಆ ಅಮೇರಿಕನ್ ಬ್ರಿಟಿಷರನ್ನು ಓಡಿಸುವುದು ನನ್ನ ಅಜೆಂಡಾ ಎಂದು ಗಾಂಧಿ ಹೇಳುತ್ತಾರೆಂದು ಭಾವಿಸಿದ್ದ. ಆದರೆ ಗಾಂಧೀ ಹೇಳಿದ್ದು ಒಂದು: ಅಸ್ಪೃಶ್ಯತೆಯ ನಿವಾರಣೆ, ಎರಡು: ಹಿಂದೂ ಮುಸ್ಲಿಂ ಸ್ನೇಹ, ಮೂರನೆಯ ಅಜೆಂಡಾ ಖಾದಿ. ಇದರಲ್ಲಿ ಎಷ್ಟು ಸ್ವಾರಸ್ಯ ಇದೆ ಎಂದರೆ ಈ ಮೂರು ಅಜೆಂಡಾ ಕಾರ್ಯರೂಪಕ್ಕೆ ಬಂದರೆ ಬ್ರಿಟಿಷರು ಹೋಗಬೇಕು ಅಂತ ಹೇಳಲೇ ಬೇಕಾಗಿರಲಿಲ್ಲ. ಅವರಿಗಿಲ್ಲಿ ಇರುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ.ರಾಜರನ್ನು ಅವರ ಅಧಿಕಾರ ದಾಹವನ್ನೂ ಕುರಿತು ಬರೆಯುವುದರ ಬಗ್ಗೆ ಒಂದು ಮಾತು. ಅಂತಾ ಕೊಲೆಗಡುಕನಾದ ಮ್ಯಾಕ್‌ಬೆತ್‌ನನ್ನು ಷೇಕ್ಸ್‌ಪಿಯರ್ ಒಬ್ಬ ಮನುಷ್ಯನನ್ನಾಗಿ ನೋಡುತ್ತಾನೆ. ಟಾಲ್‌ಸ್ಟಾಯ್ ನೆಪೋಲಿಯನ್ ಮೇಲೆ ಬರೀತಾ ಅಂತಾ ದೊಡ್ಡ ನೆಪೋಲಿಯನ್‌ಗೆ-ಇಡೀ ಯೂರೋಪನ್ನು ನಡುಗಿಸಿದ ನೆಪೋಲಿಯನ್‌ಗೆ- ಒಂದು ದಿನ ತನಗೆ ಪ್ರಿಯವಾದ ನಶ್ಯ ಸಿಗದೆ ಯುದ್ಧವೇ ಕೆಟ್ಟು ಹೋಗುವ ಸ್ಥಿತಿಯನ್ನು ವರ್ಣಿಸುತ್ತಾನೆ. ನೆಪೋಲಿಯನ್ ನಂತಹವನನ್ನೂ ಕೇವಲ ಮನುಷ್ಯನನ್ನಾಗಿ ನೋಡಲು ಟಾಲ್‌ಸ್ಟಾಯ್‌ಗೆ ಸಾಧ್ಯವಾಯಿತು.ಔರಂಗಜೇಬ್ ಸಾಯುವಾಗ ಬಹಳ ಪಾಪ ಭಾವದಿಂದ ಇದ್ದನಂತೆ. ಅವನು ತಮ್ಮಂದಿರನ್ನು ಕೊಂದ; ಏನೇನೋ ಮಾಡಿದ. ಇದೆಲ್ಲಾ ಅವನನ್ನು ಇಳಿವಯಸ್ಸಿನಲ್ಲಿ ಕಾಡಿರಬಹುದೇನೋ.ಭೈರಪ್ಪನವರಿಗೆ ಅರ್ಥವಾಗದೇ ಇರುವ ಒಂದು ವಿಷಯವಿದೆ. ಈ ದೇಶದಲ್ಲಿ ಜನಗಳು ಒಂದು ಬಲವಾದ ಯಾವ ಸರಕಾರವಿದ್ದರೂ ಒಪ್ಪಿಕೊಂಡೇ ಬಂದಿದ್ದಾರೆ. ನಾನು ಹಿಂದೆ ಈ ಬಗ್ಗೆ ಬರೆದಿದ್ದೇನೆ `ರಾಜ ಭೀತಿ, ರಾಜನಿಲ್ಲದ ಭೀತಿ' ಎನ್ನು ನನ್ನ ಒಂದು ಪ್ರಬಂಧದಲ್ಲಿ. ದೆಹಲಿಯಲ್ಲಿ ಯಾರೋ ಒಬ್ಬ ಅಧಿಕಾರದ ಜಾಗದಲ್ಲಿ ಬಂದು ಕೂತ ಅಂದರೆ ಜನ ನಿಟ್ಟುಸಿರುಡುತ್ತಾರೆ-ಒಬ್ಬ ಇದಾನಲ್ಲ ಅಲ್ಲಿ, ಬೀದಿ ಪುಂಡರ ಕಾಟವಾದರೂ ತಪ್ಪಬಹುದಲ್ಲ ಎಂದು. ಮೊಗಲರು ಇಂಥಾ ಕಾಲದಲ್ಲಿ ರಾಜತ್ವವನ್ನು ನಡೆಸಿದರು. ನಡೆಸಿದಾಗ ತಪ್ಪು ಮಾಡಿದರು, ದುಷ್ಟತನ ಮಾಡಿದರು, ಒಳ್ಳೆಯದು ಮಾಡಿದರು,. ನಮ್ಮ ದೇವೇಗೌಡರು, ನಮ್ಮ ಇಂದಿರಾಗಾಂಧಿ ಎಲ್ಲರಿದ್ದ ಹಾಗೇನೇ ಅವರು. ಜನಸಾಮಾನ್ಯರಿಗೆ ಸ್ಕೂಲಿಗೆ ಹೋದ ಹುಡುಗ ಹಿಂದಕ್ಕೆ ಬಂದರೆ ಸಾಕು. ಬಸ್ ಓಡಾಡಿದರೆ ಸಾಕು, ರೈಲು ಚಲಿಸಿದರೆ ಸಾಕು. ಹಾಗೆಯೇ ಜನರು ಮೊಗಲರನ್ನೂ ಒಪ್ಪಿಕೊಂಡಿದ್ದರು. ಇದರ ಬಗ್ಗೆ ಬರೆಯುವುದಕ್ಕೆ ಎಂಥಾ ವಿಷನ್ ಇರಬೇಕು! ಯಾಕೆ ಒಂದು ವ್ಯವಸ್ಥೆಯನ್ನು ಜನ ಒಪ್ಪಿಕೊಳ್ಳುತ್ತಾರೆ? ಔರಂಗಜೇಬನಂಥವನು ಬಹಳ ನಿಷ್ಠುರವಾಗಿ ಒಂದು ವ್ಯವಸ್ಥೆಯನ್ನು ತರುವುದಕ್ಕೆ ನೋಡಿದಾಗಲೂ ಅದನ್ನು ಯಾಕೆ ಬಹುಮಂದಿ ಹಿಂದೂಗಳೂ ಒಪ್ಪಿಕೊಂಡಿರಬಹುದು? ಎಲ್ಲ ಪ್ರಭುತ್ವದ ಹಿಂದಿರುವ ದುರಂತ ಸತ್ಯ ಇದು. ಮರಾಠರೇನು ಕಡಿಮೆ ದುಷ್ಟರೆ? ದೇವಸ್ಥಾನಗಳನ್ನು ಕೆಡಹುವುದು ಅಂದರೆ... ನನಗೆ ಯಾರೋ ಹೇಳಿದ್ದರು-- ಉಡುಪಿಯಲ್ಲಿ ನಮ್ಮ ಮಠದ ಎದುರುಗಡೆ ಇರುವ ದೇವಸ್ಥಾನ ಜೈನರದ್ದಾಗಿದ್ದಂತೆ. ಇದನ್ನೆಲ್ಲಾ ಸಿಟ್ಟಿನಲ್ಲಿ ನೋಡಬಾರದು. ನಮ್ಮ ಕಾಲದಲ್ಲೇ ನೋಡಿ. ಒಂದು ಆನೆ ಗಣಪತಿಯಾಗಿಬಿಟ್ಟಿತು. ಉತ್ತರ ಪ್ರದೇಶದಲ್ಲಿ ಆನೆ ಗಣಪತಿಯಾಯಿತು. ಯಾಕೆಂದರೆ ಅದು ಆನೆಯ ಒಳಗೇ ಇರುವ ಶಕ್ತಿ-ಗಣಪತಿಯಾಗುವ ಶಕ್ತಿ.ನಾನು ಗಣಹೋಮ ಮಾಡುವುದನ್ನು ನೋಡಿದ್ದೀನಿ. ಗಣಹೋಮ ಮಾಡುವಾಗ ಅವನಿಗೆ ಕಬ್ಬಿನ ಜಲ್ಲೆಯನ್ನೇ ಕೊಡಬೇಕಂತೆ. ಯಾಕೆಂದರೆ ಅವನು ಗಣಪತಿಯೂ ಹೌದು. ಆನೆಯೂ ಹೌದು. ಆನೆಯಾಗಿದ್ದೇ ಗಣಪತಿ. ಹಾಗೆಯೇ ಅಡುಗೆ ಮನೆಯ ಬೆಂಕಿಯಾಗಿದ್ದೇ ಅವನು ಅಗ್ನಿ.ಭೈರಪ್ಪನವರಿಗೆ ಹಿಂದೂ ಧರ್ಮದ ಈ ಒಳಗೊಳ್ಳುವ ಗುಣ ಗೊತ್ತಿರುವಂತೆ ಕಾಣುವುದಿಲ್ಲ. ಅವರಿಗೆ ಕಾದಂಬರಿಯಲ್ಲಿ 'ಅದೃಷ್ಟ'ವಾದದ್ದಕ್ಕೆ, ಅಯೋಜಿತವಾದದಕ್ಕೆ ಎದುರಾಗೋದು ಗೊತ್ತಿಲ್ಲ. ಅಥವಾ ಬೇಕಿಲ್ಲ. ಸುಮ್ಮನೇ ಕಟ್ಟುತ್ತಾ ಕಟ್ಟುತ್ತಾ ಹೋಗುತ್ತಾರೆ. ನಮ್ಮಲ್ಲಿ ಒಂದು ಮಾತಿದೆ `ಬೆರಳು ತೋರಿಸಿ ಅಂಗೈ ನುಂಗು' ಅಂತ. ಒಳ್ಳೆಯ ಅರ್ಥದಲ್ಲಿ ಈ ಮಾತನ್ನು ಗ್ರಹಿಸುವುದಾದರೆ, ಮರಳಿನ ಕಣದಲ್ಲಿ ಇಡೀ ವಿಶ್ವವನ್ನು ಕಾಣುವ ಕಾವ್ಯದ ಧ್ವನಿ ಶಕ್ತಿ ಇದುನನಗೊಂದು ಭರವಸೆ ಇದೆ. ಆವರಣದ ಪ್ರಚಾರಕ್ಕೆಂದು ನಮ್ಮ ಕೆಲವು ಮಾಧ್ಯಮಗಳು ಸಂಘಟಣೆಗಳು ಏನೇ ಮಾಡಲಿ. ಉತ್ತರ ಪ್ರದೇಶದಲ್ಲಿ ಹೇಗೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೋ ಹಾಗೆ ಇಲ್ಲಿಯೂ ಕೈಬಿಟ್ಟರೆ....ಅದು ಭರವಸೆ.ನಾನು ಯಾರೋ ಕೇಳಿದಾಗ ಹೇಳಿದೆ. `ಈ ಪೇಟೆ ಬ್ರಾಹ್ಮಣರು ಬಿಜೆಪಿಯನ್ನು ಕೈಬಿಟ್ಟರೆ ನನಗೆ ಅದೇನು ಆಶ್ಚರ್ಯ ಹುಟ್ಟಿಸುವುದಿಲ್ಲ. ಅದು ಅನುಕೂಲದ ರಾಜಕೀಯ. ಆದರೆ ಹಳ್ಳಿ ಬ್ರಾಹ್ಮಣರು ಜಾತಿ ಗರ್ವವನ್ನು ಕಳೆದುಕೊಂಡು ಒಬ್ಬ ದಲಿತ ಮಹಿಳೆಯನ್ನು ತಮ್ಮ ನಾಯಕಿ ಎಂದು ಭಾವಿಸಿಕೊಂಡರೆ ಆಗ ಹಿಂದೂ ಧರ್ಮ ಚೈತನ್ಯ ಶಾಲಿಯಾಯಿತು ಎಂದೇ ತಿಳಿಯುತ್ತೇನೆ..ಪಾಕಿಸ್ತಾನದಲ್ಲಿ ಇನ್ನೊಂದು ಜಾನಪದ ಕಥೆಯಿದೆ. ಆ ಕತೆ ಹೀಗಿದೆ: ಜಿನ್ನಾ ನೆಹರೂಗೆ ಒಂದು ಕಾಗದ ಬರೆದನಂತೆ. ಬೊಂಬಾಯಿಯಲ್ಲಿ ನನ್ನದೊಂದು ಮನೆ ಇದೆ. ಅದನ್ನು ಯಾರಿಗೋ ಕೊಟ್ಟುಬಿಡುತ್ತೀರಿ ಅಂತ ಕೇಳಿದೆ. ಕೆಡವುತ್ತೀರಿ ಅಂತ ಕೇಳಿದೆ. ಡಿಯರ್ ಜವಹರ್ ಡೋಂಟ್ ಡು ಇಟ್. ಬಿಕಾಸ್ ವೆನ್ ಐ ರಿಟೈರ್ ಐ ವಾಂಟ್ ಟು ಕಮ್ ಅಂಡ್ ಸ್ಟೇ ದೇರ್. (ಪ್ರ್ರಿಯ ಜವಾಹರ್ ನನ್ನ ಮುಂಬಯಿ ಮನೆ ಮಾರಬೇಡ; ನಿವೃತ್ತನಾದಮೇಲೆ ನಾನು ಆ ಮನೆಯಲ್ಲಿ ವಾಸ ಮಾಡಬೇಕೆಂದಿದ್ದೇನೆ.)ಅದು ನನ್ನ ಒಂದು ರೂಪಕ. ಪಾಕಿಸ್ತಾನಿ ಜಿನ್ನಾಗಳು ದಣಿದು ನಿವೃತ್ತವಾಗಿ ಮುಂಬೈಯಲ್ಲಿ ಬಂದು ಉಳಿದ ಕಾಲವನ್ನು ಕಳೆಯುವುದು. ಅದರ ಮೂಲಕ ನಾವೆಲ್ಲಾ ಒಂದು ನಾಗರೀಕತೆಯಾಗುವುದು. ಎಂದೆಂದಿಗೂ ಆಗಿದ್ದಂತೆ; ಈಗಲೂ ಆಗಬಹುದಾಗುವಂತೆ.. ಆದರೆ ಬೈರಪ್ಪನವರ ರೀತಿಯೇ ಯೋಚಿಸುವವರು ಮಸ್ಲಿಮರಲ್ಲೂ ಹಿಂದೂಗಳಲ್ಲೂ ಹೆಚ್ಚಾದರೆ ಈ ಬಗೆಯ ಕನಸು ಕಾಣುವುದೂ ಸಾಧ್ಯವಿಲ್ಲ. ಆ ರೀತಿ ಯೋಚನೆ ಮಾಡುವವರು ಜನಪ್ರಿಯ ಆದಾಗ ಸ್ವಲ್ಪ ಭಯವಾಗುತ್ತೆ. ಕನಸುಗಳೇ ಇಲ್ಲದ ಸಮಾಜ ಒಂದು ನರಕವೇ ಸರಿ.ಆವರಣದ ರಚನೆಯ ಹಿಂದಿರುವ ಒಂದು ತಮಾಷೆ ಏನೆಂದರೆ ಭೈರಪ್ಪನವರು ಬಳಸುವ ಡಿಬೇಟರ್ ತಂತ್ರ. ಇದನ್ನೆಲ್ಲಾ ಹೇಳುವುದಕ್ಕೆ ಒಬ್ಬ ಒಕ್ಕಲಿಗರ ಹುಡುಗಿಯೇ ಆಗಬೇಕು. ಇಲ್ಲಿರುವ ರಾಜಕಾರಣದ ಭರವಸೆ ಏನಪ್ಪಾ ಅಂದರೆ ಒಕ್ಕಲಿಗರು, ಲಿಂಗಾಯತರು. ಬ್ರಾಹ್ಮಣರು ಎಲ್ಲಾ ಒಟ್ಟಾಗುತ್ತಾರೆ ಅಂತ. ಅದು ಬಜೆಪಿ ವರ್ಸೆಸ್ ಸೆಕ್ಯುಲರ್ ಜೆಡಿ ಹೋಪ್; ಅಥವಾ ಬಿಜೆಪಿ ಪ್ಲಸ್ ಸೆಕ್ಯುಲರ್ ಜೆಡಿ ಹೋಪ್.ನನಗೆ ಬಹಳ ತಮಾಷೆ ಅನ್ನಿಸಿದ್ದನ್ನು ಹೇಳುತ್ತೇನೆ. ಗಂಡ-ಹೆಂಡತಿ ಬಹಳ ದಿವಸದ ನಂತರ ಆವರಣದಲ್ಲಿ ಅಕ್ಕ-ಪಕ್ಕ ಮಲಗಿದಾಗ ಮಾತಾಡ್ತಾರೆ. ಒಕ್ಕಲಿಗ ಹೆಂಡತಿ ಮುಸ್ಲಿಂ ಗಂಡನಿಗೆ ಎಷ್ಟು ದೇವಸ್ಥಾನಗಳನ್ನು ಮುಸ್ಲಿಮರು ಒಡೆಸಿದರು ಅಂತ ಸುಮಾರು ೩೦ ಹೆಸರುಗಳನ್ನು ಇರಬಹುದು- ನನ್ನ ಎಣಿಕೆಯಲ್ಲಿ ತಪ್ಪಿದ್ದರೆ ಕ್ಷಮಿಸಿ- ಹೇಳುತ್ತಾಳೆ. ಗಂಡನ ಪಕ್ಕದಲ್ಲಿ ಮಲಗಿಕೊಂಡು ಅವಳು ಮಾತಾಡುವುದು ಇದು. ಟಿಪ್ಪಣಿ ಸಹಿತ. ಇದು ಭೈರಪ್ಪನವರ ಕಾದಂಬರಿಯಲ್ಲಿ ಮಾತ್ರ ಸಾಧ್ಯ. ಯಾವ ಹಾಸಿಗೆಯ ಮೇಲೂ ಇದು ನಡೆಯಲ್ಲ ಅಂತ ಹೇಳಿ ನನ್ನ ಮಾತು ಮುಗಿಸುತ್ತೇನೆ.ಯು.ಆರ್.ಅನಂತಮೂರ್ತಿ

  • ಸಂಗ್ರಹ
Ornamental seperator
  • Login or register to post comments
  • 1018 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2007 - 4:15pm — uniquesupri

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

uniquesupri's picture

>>>>ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ. ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ, ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ, ಕುವೆಂಪು ಅಲ್ಲ, ಬೇಂದ್ರೆ ಅಲ್ಲ, ನಾವ್ಯಾರೂ ಅಲ್ಲ.

ನನಗೆ ಅನಂತಮೂರ್ತಿಯವರ ಸಮಸ್ಯೆಯೇನು ಎಂಬುದು ತಿಳಿಯಿತು. ಧನ್ಯವಾದಗಳು...

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ
May 30, 2007 - 5:35pm — aithalsandy

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

aithalsandy's picture

1. ಗುಜರಾತ್, ಮೋದಿ ರಾದ್ಧಾಂತ ಬಿಟ್ಟರೆ ಬಹುಶಃ ಭಾರತದ ನo1 ರಾಜ್ಯ. ಯಾರಾದ್ರೂ ತಲೆಗೆ ಕೋವಿ ಇಟ್ಟು ಕೇಳಿದ್ರೆ ನನಗೆ ಗುಜುರಾತು ಕೇರಳ/ಬಂಗಾಳಕ್ಕಿಂತ ಇಷ್ಟ.

2. ಜಾಗತಿಕ ಆಟದಲ್ಲಿ ನಾವು ಬಹಳ ಹುಷಾರಿನಿಂದ ಆಡಬೇಕು ಅಂತ ಎಡವಟ್ಟರಿಗೆ ಯಾಕೆ ಅರ್ಥ ಆಗೋಲ್ಲ?

3. ಮಧ್ಯಕಾಲೀನ ಯುಗದಲ್ಲಿ ಭಾರತದ "value system" ವಿಶ್ವದ ಬೇರೆ ಕಡೆಗಳಿಗಿಂತ ವಿಭಿನ್ನವಾಗಿತ್ತು. ಭಾರತದ ಮುಸ್ಲಿಮ್ ರಾಜರನ್ನು ಹೊಗಳುವುದು ಕೇವೇಲ ರೋಮಂಟಿಕ್ ಆಗಿ ಕಾಣುತ್ತೆ ಹೊರತು ಭಾರತದ ಸಂದರ್ಭದಲ್ಲಿ ಯಾವುದೇ ಮಹತ್ವ ಇಲ್ಲ. ಔರಂಗಜೆಬ್ ಕೊನೇ ಕಾಲದಲ್ಲಿ ಪಾಪದ ಭಾವದಿಂದ ಇದ್ದ, ಜಾಸ್ತಿ ಹಿಂದೂಗಳು ಅವನ ಆಸ್ಥಾನದಲ್ಲಿ ಇದ್ದರು ಅನ್ನೋದು ಅವನು ಮಾಡಿದ ದುಷ್ಟತನಕ್ಕೆ ಪರಿಹಾರ ಅಲ್ಲ. ಭಾರತೀಯ ಎಡವಟ್ಟರ ಚರಿತ್ರೆಗಿಂತ ಸೋವಿಯತ್ ಹೆಚ್ಚು ನಿರ್ವಿಕಾರ ಭಾವದಿಂದ ಭಾರತದ ಚರಿತ್ರೆಯನ್ನು ಬರೆದರು ಅಂತ ಅರುಣ್ ಶೌರಿಯವರು ಒಂದು ಕಡೆ ಹೇಳ್ತಾರೆ.

4. ಈ ಪಾಕಿಸ್ತಾನದ ಜೊತೆಗೆ ಹೆಂಗಾದ್ರೂ ಸರಿ ಜಗಳ ಮಾಡಬಾರದು ಅನ್ನೋದು ಯಾಕೋ ಜಾಸ್ತಿ ಆಯಿತು ಅನ್ಸುತ್ತೆ. ಈಗ ಇರುವ ಪಾಕಿಸ್ತಾನ ಯಾವುದೇ ಮಧ್ಯ ಕಾಲೀನ ಅರಾಬ್ ದೇಶಕ್ಕಿಂತ ಚೆನ್ನಾಗೇನೂ ಇಲ್ಲ. ಹೇಗೆ ವಿಶ್ವದ ಅನೇಕ ನಾಗರೀಕತೆಗಳು ಈ semitic ಧರ್ಮದ ಕೈಗೆ ಸಿಕ್ಕು ಮಣ್ಣು ಪಾಲಾಯ್ತು ಅನ್ನೋದು ಸೂರ್ಯನಷ್ಟೇ ಸತ್ಯ. ಗ್ರೀಕರ ಸೃಜನಶೀಲತೆ ಶಿಲುಬೆ ಏರಿದ್ದು, ಅರಬರು ನಮ್ಮ ಸೋದರರಂತೆ ಇದ್ದ ಪರ್ಷಿಯನ್ನರನ್ನ ಹುರಿದು ಮುಕ್ಕಿದ್ದು ನಮ್ಮ ಕಣ್ಣ ಮುಂದಿದೆ. ಎಡವಟ್ಟರು utopian ಐಡಿಯಾಗಳನ್ನ ಯಾವಾಗ ಬಿಡ್ತಾರೋ ?. ಸಹಿಷ್ಣುತೆಯ ದೃಷ್ಟಿಯಿಂದ "ಮಾತ್ರ" ಔರಂಗಜೇಬನೀಗೋ ಇಲ್ಲಿ ಜಾಗ ಇದೆ ಅಂತ ಹೇಳಬಹುದು. (ಹಾಗೆ ಹೇಳೋದರಿಂದ ಏನು ಮಾಡಿದ್ರೂ ನೆಡೆಯುತ್ತೆ ಅನ್ನೋ ಭಾವನೆ ಬರೋ ಸಾಧ್ಯತೆ ಇದೆ). ಇನ್ನೂ ಕಬೀರ, ಭಾರತದ ವರ್ನರಂಜಿತ ಮುಸ್ಲಿಮ ಅಧ್ಯಾಯ ಈ ನೆಲದ ಗುಣವನ್ನು ತೋರಿಸುತ್ತೆ. ಈ ನೆಲ ಎಷ್ಟು inclusive ದೇಶ ಅಂದ್ರೆ ಯಹೂದಿಗಳು ವಿಶ್ವದಲ್ಲಿ ನೆಮ್ಮದಿಯಿಂದ ಬದುಕ್ಕಿದ್ದು ಇಲ್ಲಿ ಮಾತ್ರ.

ಕೊನೆಯ ಪರ್ಷಿಯನ್ನ್ ರಾಜ ಯಾಜ್‌ಗೆರ್ಡ್ 3 ಏನು ಹೇಳ್ತಾನೇ ನೋಡಿ,
http://www.kavehroom.com/Yazdgerd_en.html

ಸಂದೀಪ್ ಐತಾಳ

  • Login or register to post comments
  • link
  • Email this ಪ್ರತಿಕ್ರಿಯೆ
May 30, 2007 - 6:22pm — mahesha

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

mahesha's picture

ಇಸ್ಮಯಿಲ್,

ಈ ಬರಹಕ್ಕೆ ನಲ್ಮೆ, ನನ್ನಿ!! ಇದು ಯಾವುದಾದರೂ ಪೇಪರಲ್ಲಿ ಬಂದಿತ್ತೇ?

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 10:55am — ಸಂಗನಗೌಡ

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

ಸಂಗನಗೌಡ's picture

ಅನಂತಮೂರ್ತಿಯವರು ದಿಟವಾಗಿ ಹೇಳಿದ್ದೇನು ಎಂಬುದನ್ನು ತಿಳಿಬೇಕಾಗಿತ್ತು. ನನ್ನಿ ಇಸ್ಮಾಯಿಲ್ ಅವರೇ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 4:22pm — ಶಿವ

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

ಶಿವ's picture

ಧನ್ಯವಾದಗಳು ಇಸ್ಮಾಯಿಲ್.ಈ ಬರಹವನ್ನು ಓದಿದಾಗ, 'ಇನ್ನು ಮುಂದೆ ವರದಿಗಾರರು ಇರುವ ಸಭೆಯಲ್ಲಿ ಭಾಗವಹಿಸೊಲ್ಲ' -ಎಂದು ಅನಂತಮೂರ್ತಿಯವರು ಯಾಕೆ ಹೇಳಿದರು ಎಂದು ಅರ್ಥವಾಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 8:38pm — mahesha

ಉ: "ಆವರಣ"ದ ಬಗ್ಗೆ ಯು.ಆರ್.ಅನಂತಮೂರ್ತಿ ಮಾಡಿದ ಭಾಷಣದ ಸಾರಾಂಶ

mahesha's picture

ಇಲ್ಲಿ ಅನಂತ ಮೂರ್ತಿ ಮಾಡಿದ ಭಾಷಣವನ್ನು ಕೇಳಿರಿ
http://thatskannada.oneindia.in/column/sham/310507ura_speech_on_avarana.html

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಂತಮೂರ್ತಿಯವರು ಮಾತನಾಡಬಾರದೆ?
  • ಇದೇ ನಮ್ಮ ನಾಡು... ಇವೇ ನಮ್ಮ ನುಡಿಗಳು...?!!
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • ಕನಸು
  • ಶ್ವೇತಕೇತು ಸೋತರೇ ಖುಶಿ!
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator