`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ ೧೧.೦೦ ಕ್ಕೆ ನಡೆಯಲಿದೆ.
ನಮ್ಮ ನಡುವೆ ಇರುವ ಸಭ್ಯ ಸಾಹಿತಿಗಳಲ್ಲಿ ನಿಸಾರರು ಅಗ್ರಗಣ್ಯರು. ೭೧ ಹರಯದ ನಿಸಾರರು ಊರು ದೇವನಹಳ್ಳಿ. ಓದಿದ್ದು ಭೂಗರ್ಭಶಾಸ್ತ್ರ. ಅಧ್ಯಾಪನದ ಎಲ್ಲ ಮಜಲುಗಳನ್ನು ಏರಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ನಿಸಾರರನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು ಕುವೆಂಪು ಅವರು. ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ ಮುಂತಾದವರ ಪ್ರೀತಿಯಲ್ಲಿ ತಮ್ಮ ಸಾಹಿತ್ಯ ಬದುಕನ್ನು ಅರಳಿಸಿಕೊಂಡ ನಿಸಾರ್, ತಮ್ಮ ವಿಡಂಬನಾತ್ಮಕ ಕವನ `ಕುರಿಗಳು ಸಾರ್....`ನಿಂದ ಕನ್ನಡಿಗರಿಗೆ ಹತ್ತಿರವಾದರು.
ನಿಸಾರ್ ಅವರು ನವ್ಯಕಾಲದ ಕವಿಗಳಾದರೂ, ಅವರನ್ನು ಹಾಗೆ `ಬ್ರಾಂಡ್` ಮಾಡುವುದು ಸರಿಯಾಗಲಾರದೇನೋ! `ನಿತ್ಯೋತ್ಸವ`ದಂತಹ ಅರ್ಥವತ್ತಾದ ಹಾಗೂ ಸುಶ್ರಾವ್ಯವಾದ ಗೀತೆಯ ಮೂಲಕ ಕನ್ನಡ ಸುಗಮ ಸಂಗೀತಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟವರು. ನಿಸಾರರನ್ನು ಪಂಥಗಳಲ್ಲಿ ಕಟ್ಟಿಹಾಕುವುದನ್ನು ಬಿಟ್ಟು ಅವರನ್ನೊಬ್ಬ ಸಹೃದಯ ಕವಿ ಎಂದು ಕರೆದರೆ ಸಾಕಾಗುತ್ತದೆ.
ನಿಸಾರರ `ನಿಮ್ಮೊಡನಿದ್ದು ನಿಮ್ಮಂತಾಗದೆ....` ಕವನವನ್ನು ಎಲ್ಲ ಕನ್ನಡಿಗರು ಓದಬೇಕು. ನಿಸಾರರನ್ನು ನಮ್ಮೊಡನೆ ಒಬ್ಬರನ್ನಾಗಿಸಿಕೊಳ್ಳಬೇಕು.
ಪುಸ್ತಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ತನ್ನ `ಥಟ್ ಅಂತ ಹೇಳಿ` ಕಾರ್ಯಕ್ರಮದ ಮೂಲಕ ಅಳಿಲು ಸೇವೆಯನ್ನು ಮಾಡುತ್ತಿದೆ ಬೆಂಗಳೂರು ದೂರದರ್ಶನ. ಹಾಗಾಗಿ ತನ್ನ ೭೫೦ ನೆಯ ಕಾರ್ಯಕ್ರಮಕ್ಕೆ ಕವಿ-ಸಾಹಿತಿಯನ್ನೇ ಕರೆಸಬೇಕು ಎಂದು ತೀರ್ಮಾನಿಸಿ, ನಿಸಾರರನ್ನು ಕರೆಸಿದೆ. ಬನ್ನಿ. ನಮ್ಮ ಪ್ರೀತಿಯ ಪ್ರೊಫೆಸರ್ ಸಾಹೇಬರ ಜೊತೆಯಲ್ಲಿ ಒಂದರ್ಧ ಗಂಟೆ ಕಳೆಯೋಣ.
- ನಾ.ಸೋಮೇಶ್ವರ

- Login or register to post comments
- 717 hits
- Email this page





RSS:
ಪ್ರತಿಕ್ರಿಯೆಗಳು
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಚಂದ್ರಶೇಖರ್ ಕಂಬಾರರು,ಅದಕ್ಕಿಂತ ಮುಂಚೆ ಕವಿತಾ ಲಂಕೇಶ್ ಮತ್ತು ಪ್ರಕಾಶ್ ಬೆಳವಾಡಿ ಬಂದಿದ್ದಾಗಲೂ ನಿಮ್ಮ ಕಾರ್ಯಕ್ರಮವನ್ನು ನೋಡಿದ್ದೆ..ನಿಸಾರ್ ಅಹ್ಮದ್ ಈಗಾಗಲೇ ನಮ್ಮವರಾಗಿದ್ಡಾರೆ..ಕಾರ್ಯಕ್ರಮವನ್ನು ನೋಡುತ್ತೇನೆ. ಧನ್ಯವಾದ.
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ನಿಸಾರ್ ಅಹ್ಮದ್ ಅವರ ನವಿರಾದ ಕನ್ನಡದ ಮಾತುಗಳನ್ನ ಕೇಳುತ್ತಿದ್ದರೆ ಸುಗಮ ಸ೦ಗೀತವನ್ನ ಆಲಿಸಿದಷ್ಟೇ ಅಪ್ಯಾಯವಾಗಿರುತ್ತದೆ. ಈ 'ನಿತ್ಯೊತ್ಸವ'ದ ಕವಿ ನಿಜಕ್ಕೂ ಕನ್ನಡದ ವರ ಕವಿ.
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಅದೆಲ್ಲ ಸರಿ; ಆದರೆ ಈ ’ ಥಟ್ಟಂತ ಹೇಳಿ ’ ಕಾರ್ಯಕ್ರಮ ’ ಜನಪ್ರಿಯ ’ ಆದದ್ದು ಯಾವಾಗ?
ಒಂದೆರಡು ಬಾರಿ ಈ ಕಾರ್ಯಕ್ರಮ ನೋಡಿದ ನನಗಂತೂ ಇದರಲ್ಲಿ ಇನ್ನೂ ಅನೇಕ improvements ಬೇಕು ಅನ್ನಿಸಿತ್ತು.
Technically ಇದು ತುಂಬ ಹಿಂದುಳಿದ ಕಾರ್ಯಕ್ರಮ. ನನಗಂತೂ ಪ್ರಿಯವಲ್ಲ.
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ದೂರದರ್ಶನದ ಸರಕಾರಿ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಾರ್ಯಕ್ರಮವನ್ನು ವಿಮರ್ಶಿಸುವುದು ನ್ಯಾಯ.
ದೂರದರ್ಶನದ ಕಾರ್ಯಕ್ರಮಗಳಲ್ಲಿ ಇದು ಒಂದು ಒಳ್ಳೆಯ ಕಾರ್ಯಕ್ರಮ ಎಂದು ಧಾರಾಳವಾಗಿ ಹೇಳಬಹುದು.
*ಅಶೋಕ್
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ನಾನು ಕಾರ್ಯಕ್ರಮವನ್ನು ವಿಮರ್ಶಿಸಿದ್ದಲ್ಲ;
ನನಗೆ ಅದು ಇಷ್ಟ ಆಗಲಿಲ್ಲ ಎಂದು ತಿಳಿಸಿದೆ- ಅಷ್ಟೇ.
ದೂರದರ್ಶನವಾದರೇನು- ಖಾಸಗಿ ಚಾನೆಲ್ ಆದರೇನು - ನಾವು ನೋಡುವುದು ನಮಗಿಷ್ಟವಾದ ಕಾರ್ಯಕ್ರಮಗಳನ್ನು ಮಾತ್ರ ತಾನೆ?
ದೂರದರ್ಶನ ಸರಕಾರದ್ದೆಂಬ ಕಾರಣಕ್ಕಾಗಿ ಇಷ್ಟ ಇಲ್ಲದ ಕಾರ್ಯಕ್ರಮಗಳನ್ನೂ ನೋಡಬೇಕೇ?
ಕ್ವಿಜ್ ಎಂದರೆ ತುಂಬ ಚುರುಕಾಗಿರಬೇಕು. ಇದು ಸ್ಲೋ ಮೋಶನ್ ನಲ್ಲಿ ಚಲಿಸುತ್ತೆ. - ಅಲ್ಲವೇ?
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಇದು ಚುರುಕಾದ ಜನರಿಗೆ ಮಾಡಿದ ಕಾರ್ಯಕ್ರಮವಲ್ಲ. ಜನ ಸಾಮಾನ್ಯರಿಗೋಸ್ಕರ ಮಾಡಿದುದು.
ಆದ್ರೂ ಇದ್ರಿಂದ ಒಸಿ ವಿಶ್ಯಗಳು ಗೊತ್ತಾಗುತ್ತವೆ. ಗೆದ್ದವರಿಗೆ ಹೊತ್ತಗೆಗಳನ್ನು ಕೊಡುವುದು ಈ ಕಾರ್ಯಕ್ರಮದ ಹೆಗ್ಗಳಿಕೆ.
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಉದಯ ಟೀವಿಯೋರು ಹಿಂಗೆ ಒಂದು "ಕರ್ನಾಟಕದ ಮೇರು ಬಾಲಪ್ರತಿಭೆ" ಅನ್ನೊ ಕ್ವಿಜ್ಜು ಸುರು ಮಾಡವ್ರೆ.
ಹಿಂದೆ 'ಸಿದ್ದಾರ್ಥ ಬಸು' ಕ್ಚಿಜ್ಜುಗಳನ್ನು, ಡೆರಿಕೋ ಬ್ರೇನ್, ಕ್ವಿಜ್ಜುಗಳು ಏಸ್ಟು ಚಂದಾಗಿ ಇರ್ತಿದ್ವು!!
- ಮಾಯ್ಸ !!
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಹಿಂದೆ 'ಸಿದ್ದಾರ್ಥ ಬಸು' ಕ್ಚಿಜ್ಜುಗಳು, ಡೆರಿಕೋ ಬ್ರೇನ್ ಕ್ವಿಜ್ಜುಗಳು ಏಸ್ಟು ಚಂದಾಗಿ ಇರ್ತಿದ್ವು!!
- ಮಾಯ್ಸ !!
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ನಮಸ್ಕಾರ,
ನಾನು ಥಟ್ ಅಂತ ಹೇಳಿ ಕಾರ್ಯಕ್ರಮದ ಅಭಮಾನಿ. ಈ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತೇನೆ. ಈ ಕಾರ್ಯಕ್ರಮದ ಬಗ್ಗೆ ನಿಸಾರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.
ಈ ಹಿಂದೆ ನೀವು ಡಾ. ಕಂಬಾರ, ಸುದೀಪ್ ಮತ್ತಿತರ ಗಣ್ಯರನ್ನು ಅಥಿತಿಯಾಗಿ ಕರೆಸಿದಾಗಲೂ ನಾನು ನೋಡಿದ್ದೆ. ಈ ರೀತಿ ಗಣ್ಯರನ್ನು ಕರೆಸಿದಾಗ ನಿಮ್ಮ ಕಾರ್ಯಕ್ರಮದ ವಿಧಾನವನ್ನು ಬದಲಿಸಿ ಅದನ್ನು ಒಂದು ಸಂದರ್ಶನ ಕಾರ್ಯಕ್ರಮವನ್ನಾಗಿಸುವುದು ನನಗೆ ಹಿಡಿಸುತ್ತಿಲ್ಲ. ಗಣ್ಯರನ್ನು ಕರೆಸಿ, ಆದರೆ ಕ್ವಿಝ್ ವಿಧಾನವನ್ನು ಬಿಡಬೇಡಿ. ಒಬ್ಬ ಗಣ್ಯರನ್ನಲ್ಲ, ಮೂರು ಮಂದಿ ಗಣ್ಯರನ್ನು ಕರೆಸಿ ಅವರೊಂದಿಗೆ ಕ್ವಿಝ್ ನಡೆಸಿ. ಆಗ ಇನ್ನೂ ಚೆನ್ನಾಗಿರುತ್ತದೆ. ನಾವು ಗಣ್ಯ ಸಾಹಿತಿ ಎಂದು ಅಭಿಮಾನ ಪಡುವ ಎಷ್ಟೋ ಮಂದಿಗೆ ಕೆಲವೊಮ್ಮೆ ಸಾಮಾನ್ಯ ಮಾಹಿತಿಗಳೂ ತಿಳಿದಿರುವುದಿಲ್ಲ. ಇಂಥವರನ್ನು ಕ್ವಿಝ್‌ಗೆ ಒಳಪಡಿಸುವುದು ತುಂಬ ಕತೂಹಲಕರವಾಗಿರುತ್ತದೆ.
ನಿಮ್ಮ ಕಾರ್ಯಕ್ರಮ ೧೦೦೦ ಕಂತನ್ನು ತಲುಪಿದಾಗ ನನ್ನ ಸಲಹೆಯನ್ನು ಅಳವಡಿಸಿಕೊಳ್ಳುತ್ತೀರೆಂದು ನಂಬಿದ್ದೇನೆ.
ಸಿಗೋಣ,
ಪವನಜ
-----------
Vishva Kannada
Think globally, Act locally
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ಪವನಜ ಅವರಿಗೆ ನಮಸ್ಕಾರಗಳು.
ಥಟ್ ಅಂತ ಹೇಳಿ ಕಾರ್ಯಕ್ರಮದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದುದಕ್ಕೆ ಧನ್ಯವಾದಗಳು. ವಿಶೇಷ ಕಾರ್ಯಕ್ರಮವನ್ನು ಕ್ವಿಜ್ ರೂಪದಲ್ಲಿಯೇ ನಡೆಸಬಹುದು. ಈ ಹಿಂದೆ ಜಗ್ಗೇಶ್, ಸಿಹಿಕಹಿ ಚಂದ್ರು, ಬಿ.ಜಯಶ್ರೀ, ರಾಜೇಶ್ ಕೃಷ್ಣನ್, ರಾಜೂ ಅನಂತಸ್ವಾಮಿ, ಮಂಜುಳ ಗುರುರಾಜ್ ಮುಂತಾದವರನ್ನು ಕರೆಸಿದಾಗ ಕ್ವಿಜ್ ರೂಪದಲ್ಲಿಯೇ ಕಾರ್ಯಕ್ರಮವನ್ನು ರೂಪಿಸಿದೆವು. ಗಣ್ಯರು ಒಪ್ಪಿದಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಚಂದ್ರಶೇಖರ ಕಂಬಾರ, ನಿಸ್ಸಾರ್ ಅಹಮದ್ ರಂತಹ ಹಿರಿಯರನ್ನು ಕರೆಯಿಸಿದಾಗ, ಅವರಿಂದ ನಮ್ಮ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಪಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ. ಜೊತೆಗೆ ಜನಸಾಮಾನ್ಯರಿಗೆ ಪರಿಚಯವಿಲ್ಲದ ಅವರ ಹಿರಿಮೆಯನ್ನು ತೋರುವ ಪ್ರಯತ್ನವನ್ನು ಮಾಡಲಾಗುತ್ತದೆ. ನೀವು ನೀಡಿದ ಸಲಹೆಯನ್ನು ೧೦೦೦ ನೆಯ ಕಂತಿನಲ್ಲಿ ತರಲು ಖಂಡಿತಾ ಪ್ರಯತ್ನಿಸುತ್ತೇವೆ.
ನಾ.ಸೋಮೇಶ್ವರ
ಉ: `ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!
ನಿಸಾರರೊಡನೆ ಸಾರವತ್ತಾದ ಘಳಿಗೆಗೆಳು.........
ಥಟ್ ಅಂತ ಹೇಳಿ-೭೫೦ ನೆಯ ಕಂತಿಗಾಗಿ ಫ್ರೊ.ನಿಸಾರ್ ಅಹಮದ್ ಅವರನ್ನು ಕರೆಯಿಸಬೇಕು ಎಂದು ಬೆಂಗಳೂರು ದೂರದರ್ಶನಧ ನಿರ್ದೇಶಕಾರದ ದಾ.ಮಹೇಶ್ ಜೋಷಿ, ಕಾರ್ಯಕ್ರಮದ ನಿರ್ಮಾಪಕರಾದ ಶ್ರೀಮತಿ ಎಚ್.ಎನ್.ಆರತಿ ಹಾಗೂ ತಂಡದ ಉಳಿದ ಸದಸ್ಯರು ಸಹಮತದಿಂದ ನಿರ್ಣಯಿಸಿದಾಗ......ಕಾರ್ಯಕ್ರಮದ ಮುದ್ರಣದ ಕಾಲವನ್ನು ಎಲ್ಲರೂ ಎದುರುನೋಡಲಾರಂಬಿಸಿದೆವು.
ದಿ. ೦೨.೦೬.೦೭, ಶನಿವಾರ ಸಂಜೆ ಸುಮಾರು ೫.೦೦ ಗಂಟೆಗೆ ನಿಸಾರರು ಕೇಂದ್ರಕ್ಕೆ ಬಂದಾಗ, ಕೇಂದ್ರದ ಉಪನಿರ್ದೇಶಕರಾದ ಶ್ರೀರಾಮಚಂದ್ರ, ಶ್ರೀಮತಿ ಎಚ್.ಎನ್.ಆರತಿ, ನಾನು ಹಾಗೂ ತಂಡದ ಉಳಿದ ಸದಸ್ಯರು ಸ್ವಾಗತಿಸಿದೆವು. ನನ್ನನ್ನು ನೋಡುತ್ತಿರುವಂತೆಯೇ ನೀವು ಕನ್ನಡದ ಪ್ರೊಫೆಸರೋ ಇಲ್ಲ ಇಂಗ್ಲೀಷಿನ ಪ್ರೊಫೆಸರೋ ಎಂದು ಕೇಳಿದರು. ಆಗ ನಾನು, ಎರಡೂ ಅಲ್ಲ ಸಾರ್, ನಾನು ಇಂಜಕ್ಷನ್ ಕೊಡೋ ಡಾಕ್ಟರ್ ಅಂದೆ. ಅವರಿಗೆ ಪರಮಾಶ್ಚರ್ಯವಾಯಿತು. ನಂತರ ನಾನು ಸರ್ಕಾರಿ ಕಾಲೇಜಿನಲ್ಲಿ ಓದಿದ್ದು, ಎರಡು ವರ್ಷ ಭೂಗರ್ಭಶಾಸ್ತ್ರವನ್ನು ಅಧ್ಯಯನವನ್ನು ಮಾಡಿದ್ದು, ಅಂದಿನ ದಿನಗಳಲ್ಲಿ ದಾಖಲೆ ಎನ್ನಬಹುದಾದ ೯೯ (೧೦೦ಕ್ಕೆ) ಅಂಕಗಳನ್ನು ಗಳಿಸಿದ್ದು, ಅವರನ್ನು ಗಣ್ಯ ಅತಿಥಿಯಾಗಿ ಕನ್ನಡ ಸಂಘಕ್ಕೆ ಆಹ್ವಾನಿಸಿದ್ದು, ಅಲ್ಲಿ ಅವರು ಥಮ್ಮ ಕವನಗಳನ್ನು ಓದಿದ್ಧು, ನಂತರ ಸಂವಾದವನ್ನು ನದೆಸಿದ್ದು ಎಲ್ಲವನ್ನೂ ಹೇಳಿದೆ. ಶ್ರೀಕಲಾದರ್ಶಿ (ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು) ಅವರೊಡನೆ ಸಕ್ರಿಯವಾಗಿದ್ದುದನ್ನು ವಿವರಿಸಿದೆ. ಹಳೆಯ ನೆನಪುಗಳು ಬಂದು ಭಾವಪೂರ್ಣರಾದರು.
ಅರ್ಧ ಕಪ್ ಚಹದ ನಂತರ, ಮೇಕಪ್ ಮುಗಿಸಿಕೊಂಡು ಸ್ಟುಡಿಯೋ ಪ್ರವೇಶಿಸಿದರು. ವಿಶೇಷ ಕಾರ್ಯಕ್ರಮಕ್ಕಾಗಿ ಸರಳವಾದ ಹೊಸ ಸೆಟ್ ಹಾಕಲಾಗಿತ್ತು. ಇಬ್ಬರೂ ನಮ್ಮ ಬೂಟುಗಳನ್ನು ಕಳಚಿ ಸೆಟ್ ಮೇಲೆ ಕುಳಿತೆವು. ಬೆಳಕನ್ನು ಹೊಂದಿಸುತ್ತಿರುವಾಗ ನಮ್ಮ ಕಾರ್ಯಕ್ರಮದ ಬಗ್ಗೆ ವಿಚಾರಿಸಿದರು. ಇದುವರೆಗೂ ಸುಮಾರು ೧೨,೦೦೦ ಪ್ರಶ್ನೆ, ಸುಮಾರು ೮,೦೦೦ ಕನ್ನಡ ಪುಸ್ತಕಗಳನ್ನು ಕೊಟ್ಟಿರುವುದರ ಬಗ್ಗೆ ವಿವರಿಸಿದೆ. ಆಗ ಅವರು ತಮ್ಮ ಆಶ್ಚರ್ಯ ಹಾಗೂ ಸಂತೋಷವನ್ನು ವ್ಯಕ್ತಪಡಿಸಿದರು. ಎಲ್ಲ ಪ್ರಶ್ನೆಗಳನ್ನು ಪುಸ್ತಕರೂಪದಲ್ಲಿ ತರಲು ಸಲಹೆ ನೀಡಿದರು.
ಕಾರ್ಯಕ್ರಮವನ್ನು ನಿಸಾರರ `ಜೋಗದ ಸಿರಿ ಬೆಳಕಿನಲ್ಲಿ.....` ಕವನವನ್ನು ತೋರಿಸುವುದರ ಮೂಲಕ ಆರಂಬಿಸಿದೆವು. ಆ ಕವನದಲ್ಲಿ ಚಿತ್ರೀಕರಿಸಿದ್ದ ಕನ್ನಡ ಕವಿಗಳ ಚಿತ್ರಮಾಲಿಕೆಯಿಂದ ಕಾರ್ಯಕ್ರಮ ಆರಂಭವಾದದ್ದು, ಕಾರ್ಯಕ್ರಮಕ್ಕೆ ಒಂದಷ್ಟು ಕನ್ನಡತನದ ಕಳೆಯನ್ನು ತಂದುಕೊಟ್ಟಿತು.
ಮುಸ್ಲೀಮರಾಗಿರುವ ನಿಸಾರರು ಕನ್ನಡದ ಬಗ್ಗೆ ಒಲವನ್ನು ಗಳಿಸಿಕೊಂಡ ಪರಿ ಹೇಗೆ ಎಂಬ ಕುತೂಹಲವು ನನಗಿತ್ತು. ಇದಕ್ಕೆ ಕಾರಣ, ನಿಸಾರರ ತಂದೆಯಾದ ಶ್ರೀಕೆ.ಎಸ್.ಹೈದರ್ ಅವರು. ಅಂದಿನ ದಿನಗಳಲ್ಲಿ ಎಲ್ಲ ಮುಸ್ಲೀಮರೂ ತಮ್ಮ ಮಕ್ಕಳನ್ನು ಉರ್ದೂ ಶಾಲೆಗೆ ಕಳುಹಿಸುತ್ತಿದ್ದರೆ, ಹೈದರ್ ಸಾಹೇಬರು ನಿಸಾರರನ್ನು ಕನ್ನಡ ಶಾಲೆಗೆ ಕಳುಹಿಸಿದರು. ಕನ್ನಡ ನಾಡಿನಲ್ಲಿ ಕನ್ನಡಿಗರೊಡನೆ ಬಾಳಿ ಬದುಕಬೇಕಾದ ಅವಶ್ಯಕತೆಯನ್ನು ಕಂಡಿದ್ದ ಅವರು, ತಮ್ಮ ಮಗನನ್ನು ಕನ್ನಡ ಶಾಲೆಗೆ ಕಳುಹಿಸಿ, ತಮ್ಮ ಕನ್ನಡ ಋಣವನ್ನು ತೀರಿಸಿಕೊಂಡಿದ್ದರು.
ನಿಸಾರರ ಬಾಲ್ಯದಲ್ಲಿ ಅಜ್ಞಾತ ಜಾನಪದ ಕವಿಯ `ಧರಣಿ ಮಂದಲದೊಳಗೆ....` ಹಾಗೂ ಕುವೆಂಪು ಅವರ `ಕಿಂದರಿ ಜೋಗಿ` ಕವನಗಳು ಅಪಾರ ಪರಿಣಾಮವನ್ನು ಬೀರಿದವು. ಜೊತೆಗೆ `ಅರೇಬಿಯನ್ ಕಥೆಗಳು` ತಮ್ಮ ಅದ್ಭುತ ಮಾಂತ್ರಿಕ-ಮಾಯಾಜಾಲದ ಕತೆಗಳು ಆಕರ್ಶಿಸಿದ್ದವು. ಯಾರೋ ಶ್ರೀಮಂತರ ಮನೆಯಲ್ಲಿದ್ದ `ಬುಕ್ ಆಫ್ ನಾಲೆಡ್ಜ್` ಪುಸ್ತಕದಲ್ಲಿ ಮೊದಲ ಬಾರಿಗೆ ನಯಾಗರ ಜಲಪಾತದ ಚಿತ್ರವನ್ನು ನೋಡಿದಾಗ `ಜಲಪಾತ` ಎಂಬ ತಮ್ಮ ಮೊತ್ತ ಮೊದಲ ಕವನವನ್ನು ಬರೆದರು. ಆಗ ನಿಸಾರರು ಫೊರ್ತ್ ಫಾರಮ್ (ಎಂಟನೆಯ ತರಗತಿ) ನಲ್ಲಿದ್ದರು.
ನಿಸಾರರು ಭೂಗರ್ಭಶಾಸ್ತ್ರಕ್ಕೆ ಸಂದ ಬಗೆಯೂ ಕುತೂಹಲಕರವಾಗಿದೆ. ಲೆಕ್ಕದಲ್ಲಿ ಸ್ವಲ್ಪ ದಡ್ಡರಾಗಿದ್ದ (ನಾನು ಪೂರ್ತಿ ದಡ್ಡ) ಅವರು ಹೆಚ್ಚು ಅಂಕಗಳನ್ನು ಗಳಿಸದ ಕಾರಣ ಪಿ.ಸಿ.ಎಂ ಸಿಗಲಿಲ್ಲ. ಚಿಕ್ಕಪ್ಪನವರ ಸಲಹೆಯ ಮೇರೆಗೆ ಸಿ.ಬಿ.ಜಿ (ಕೆಮಿಸ್ಟ್ರಿ, ಬಾಟನಿ, ಜಿಯಾಲಜಿ) ಅಧ್ಯಯನವನ್ನು ಮಾಡಿದರು. ಮೈಸೂರು ಮೈನ್ಸ್ ಅಂಡ್ ಜಿಯಾಲಜಿ ಸಂಸ್ಥೆಯಲ್ಲಿ ಅಸಿಸ್ಟಂಟ್ ಜಿಯಾಲಜಿಸ್ಟ್ ಆಗಿ ಗುಲ್ಬರ್ಗದಲ್ಲಿ ಕೆಲಸ ಮಾಡುವಾಗ, ಸುತ್ತಮುತ್ತಲಿನ ಸುಣ್ಣ, ಮಣ್ಣಿನ ಬದುಕು ಬೇಸರವನ್ನು ತರಿಸಿತು. ದಸರಾ ಕವಿಸಮ್ಮೇಳನದಲ್ಲಿ ಕುವೆಂಪು ಅವರ ಕಣ್ಣಿಗೆ ಬಿದ್ದ ನಿಸಾರರ ಬದುಕಿನಲ್ಲಿ ಒಂದು ದೊಡ್ಡ ತಿರುವು. ಅಧ್ಯಾಪನ ಕ್ಸೇತ್ರವನ್ನು ಪ್ರವೇಶಿಸಿದರು. ನಂತರ ತಿರುಗಿ ನೋಡಲಿಲ್ಲ. ಒಬ್ಬ ಸಹೃದಯ ಕವಿ ಕನ್ನಡಕ್ಕೆ ದಕ್ಕಿದರು.
ನಿಸಾರರಿಗೆ ಕ್ರಿಕೆಟ್ ಹಾಗೂ ಫ್ತುಟ್‍ಬಾಲ್ ಕ್ರೀಡೆಗಳೆಂದರೆ ಪಂಚಪ್ರಾಣ. ಈಗಲೂ ವರ್ಲ್ದ್ ಕಪ್ ಫುಟ್ಬಾಲ್ ಮಧ್ಯರಾತ್ರಿಯಲ್ಲಿದ್ದರೂ ಸರಿ, ಬೆಳಗಿನ ಜಾವ ಮೂರು ಗಂಟೆಯಲ್ಲಿದ್ದರೂ ಸರಿ, ಎದ್ದು ನೋಡುತ್ತಾರೆ. ಅವರು ಎಮ್.ಎಸ್‍ಸಿ ಓದುವಾಗ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ವಾಸ. ಅಂದಿನ ದಿನಗಳಲ್ಲಿ ರಾಜ್ಯ, ರಾಷ್ತ್ರೀಯ ಹಾಗೂ ಅಂತಾರಾಷ್ತ್ರೀಯ ಕ್ರಿಕೆಟ್ ಮ್ಯಾಚುಗಳು ನಡೆಯುತ್ತಿದ್ಧುದು ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿ. ಹಾಗಾಗಿ ನಿಸಾರರು ಅಲ್ಲಿಗೆ ಹಾಜರ್! ಕೈಯಲ್ಲಿ ಸ್ಫಟಿಕಶಾಸ್ತ್ರದ ರೆಕಾರ್ಡ್ ಇಲ್ಲವೇ ಹಳೆಯ ಎಕ್ಸರ್‍ಸೈಸ್ ಪುಸ್ತಕ. ಸ್ಫಟಿಕಗಳ ಚಿತ್ರ ಬಿಡಿಸುತ್ತಾ ಮ್ಯಾಚ್ ನೋಡುವುದು....ಇಲ್ಲವೇ ಹಠಾತ್ತನೆ ಕವನದ ಸಾಲು ಮಿಂಚಿನಂತೆ ಹೊಳೆದಾಗ, ಅಲ್ಲಿಯೇ ಅದನ್ನು ಬರೆಯುವುದು.....ಈ ವಿಷಯವನ್ನು ಎತ್ತಿದಾಗ ನಿಸಾರರಿಗೆ ಆಶ್ಚರ್ಯ! ಕಾಲಗರ್ಭದಲ್ಲಿ ಹೂತುಹೋಗಿದ್ದ ಈ ಘಟನೆಯನ್ನು ನೆನಪಿಸಿಕೊಂಡರು. ಯಾರಿಗೂ ಗೊತ್ತಿಲ್ಲದ, ಎಲ್ಲಿಯೂ ದಾಖಲಾಗದ ಈ ಮಾಹಿತಿ ನಿಮಗೆಲ್ಲಿ ದೊರೆಯಿತು ಎಂದು ಕೇಳಿದರು. ಇದನ್ನು ನನಗೆ ಹೇಳಿದವರು ನನ್ನ ಗುರುಗಳಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರು. ಅವರು ನಿಸಾರರ ಜೂನಿಯರ್!
ಶ್ರೀಸಂಪಟೂರರ ಶ್ರೀಮತಿಯರಾದ ರಾಜಲಕ್ಸ್ಮಿ ಅವರು ನಿಸಾರರ ಪ್ರಥಮ ವಿದ್ಯಾರ್ಥಿನಿ...ಚಿತ್ರದುರ್ಗದಲ್ಲಿ. ತರಗತಿಯಲ್ಲಿ ಟೇಬಲ್ಲಿನ ಮೇಲೆ ಕುಳಿತು ಕುವೆಂಪು ಅವರ `ನಾನೇ ವೀಣೆ..ನೀನೆ ತಂತಿ..`ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ ಶ್ರೀಮತಿ ರಾಜಲಕ್ಷಿ! ಈ ಬಗ್ಗೆ ನಿಸಾರರನ್ನು ವಿಚಾರಿಸಿದಾಗ, ತಾವು ಹರಯದ ದಿನಗಳಲ್ಲಿ ರಫಿ, ತಲತ್ ಮೆಹಮೂದ್, ಲತಾ ಅವರ ಹಾಡುಗಳಿಂದ ಪ್ರಭಾವಿತರಾಗಿದ್ದುದಾಗಿಯೂ, ಅದರ ಫಲವಾಗಿ ಬೇಂದ್ರೆ, ಕುವೆಂಪು, ಪುತಿನ ಅವರ ಹಾಡುಗಳನ್ನು ಹಾಡುತ್ತಿದ್ದುದಾಗಿಯೂ ಹೇಳಿದರು. ಸಾರ್ವಜನಿಕರ ಮುಂದೆ ಹಾಡುವಷ್ಟು ಪ್ರಬುದ್ದ ಕಂಠ ತಮಗಿಲ್ಲ ಎಂದರು.
ನಂತರ ಅವರ ವಿಡಂಬನಾತ್ಮಕ ಗೀತೆಗಳ (ಕುರಿಗಳು ಸಾರ್, ಅಮ್ಮ, ಆಚಾರ ಮತ್ತು ನಾನು) ಜೊತೆಯಲ್ಲಿ ಬರುವ ವಿಚಾರದ ಬಗ್ಗೆ ಮಾತನಾಡಿದೆವು. ಚಿಲಿಯ ಮಹಾನ್ ಕವಿ ಪ್ಯಾಬ್ಲೊ ನೆರುಡ ಅವರ ಗೀತೆಗಳನ್ನು `ಬರೀ ಮರ್ಯಾದಸ್ತರೇ` ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ ಬಗ್ಗೆ, ಕವಿ ಇಕ್ಬಾಲ್ ಮೊಹಮದ್ ಅವರ `ಸಾರೆ ಜಹಾಮ್ ಸೆ ಅಚ್ಚ ಹಿಂದೂಸ್ಥಾನ್ ಹಮಾರ`ಗೀತೆಯನ್ನು ಕನ್ನಡಕ್ಕೆ ತಂದ ಬಗ್ಗೆ ಮಾತನಾಡಿದೆವು. ನಿಸಾರರು ಇಡೀ ಗೀತೆಯನ್ನು ವಾಚಿಸಿದರು.
`ನಿಮ್ಮೊಡನಿದ್ದು ನಿಮ್ಮಂತಾಗದೆ` ಎಂಬ ಕವನ ನನ್ನ ಕುತೂಹಲವನ್ನು ಕೆರಳಿಸಿತ್ತು. ಈ ಬಗ್ಗೆ ವಿಚಾರಿಸಿದಾಗ, ಎಂದೊ ತಮ್ಮ ಮನಸಿಗಾದ ನೋವು ಈ ರೀತಿ ಕವನ ರೂಪದಲ್ಲಿ ಬಂದಿತು ಎಂದರು. ಆ ನೋವನ್ನು ಯಾರು ಮಾಡಿದರು ಎಂಬುದನ್ನು ಹೇಳಲು ನಿರಾಕರಿಸಿದರು.
`ಥಟ್ ಅಂತ ಹೇಳಿ` ಕಾರ್ಯಕ್ರಮ ೧೦೦೦ ಕಂತುಗಳನ್ನು ಮೀರಿ ಸಾಗಲಿ ಎಂದರು. ಕನ್ನಡದ ಜೊತೆಗೆ ಜಗದ ಅರಿವನ್ನು ನೀಡಲಿ ಎಂದು ಆಶಿಸಿದರು. ನಾವು ಅವರಿಗೆ ಕೊಟ್ಟ ಗ್ರಂಥ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಿದರು. ನನ್ನ ಎರಡು ಪುಸ್ತಕ `ಹುಲಿಯ ಬೆನ್ನೇರಿ` ಹಾಗೂ `ಹುಲಿಯ ಜೊತೆಜೊತೆಯಲ್ಲಿ`ಕುತೂಹಲದಿಂದ ನೋಡಿದರು. ಒತ್ತಡ ನಿರ್ವಹಣೆಯ ಈ ಪುಸ್ತಕಗಳನ್ನು ಓದಿ ಪತ್ರ ಬರೆಯುವುದಾಗಿ ಹೇಳಿದರು.
ಕೇಳಲು ನನ್ನಲ್ಲಿ ಸಾಕಷ್ಟು ಪ್ರಶ್ನೆಗಳಿದ್ದವು. ಹೇಳಲು ನಿಸಾರರು ಸಿದ್ದವಿದ್ದರು. ಆದರೆ ಶ್ರೀಮತಿ ಆರತಿಯವರು ಸಮಯ ಮುಗಿದಿರುವುದನ್ನು ಇಯರ್ ಫೊನಿನಲ್ಲಿ ಸೂಚಿಸಿದರು.....
೭೫೦ ರ ಹಂತವನ್ನು ತಲುಪಿದ್ದ ಸಂತಸವನ್ನು ಹಂಚಿಕೊಳ್ಳಲು ನಿಸಾರರು ಕೇಕ್ ಕತ್ತರಿಸಿದರು....ಕೇಕಿನ ಸವಿಯೊಡನೆ....೭೫೦ರ ಗಡಿ ಮುಟ್ಟಿದ ಸಂತೋಷದೊಡನೆ...ನಿಸಾರರೊಡನೆ ಕಳೆದ ಸಾರವತ್ತಾದ ಘಳಿಗೆಗಳೊಡನೆ.....ಅಂದಿನ ಕಾರ್ಯಕ್ರಮ ಮುಗಿಸಿದೆವು.
ಸವಿನೆನಪುಗಳು...ಸವಿದಷ್ಟು ಹಸಿರು....
- ನಾಸೋಮೇಶ್ವರ