ಬೆಂಡೇಕಾಯಿ ಫಿಶ್ ಕರಿ!
ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವರಿದ ಭಾಗವೋ ಎಂಬಂತೆ ನಾಲಿಗೆ ಇದ್ದಕ್ಕಿದ್ದಂತೆ ಬೆಂಡೇಕಾಯಿ ಫಿಶ್ ಕರಿಯ ರುಚಿಯನ್ನು ನೆನಪಿಸಿ ಲೊಚಗುಟ್ಟಿತು. ಇವತ್ತು ಮನೆಯಲ್ಲಿ ಇದನ್ನು ಮಾಡಬೇಕು ಅಂದುಕೊಂಡು ನಾಲಿಗೆಯನ್ನು ಸಂತೈಸಿದೆ.
ಹೆಸರು ವಿಚಿತ್ರವಾಗಿದೆಯಲ್ಲ? `ಬೆಂಡೇಕಾಯಿ ಫಿಶ್ ಕರಿ!' ಬೆಂಡೇಕಾಯಿ ಎಂಬ ವೆಜ್ಜೂ ಫಿಶ್ ಎಂಬ ನಾನ್ವೆಜ್ಜೂ ಸೇರಿ ಆಗುವ ವಿಚಿತ್ರ `ಆಶೆ' (ಪದಾರ್ಥ) ಇದಿರಬೇಕು ಎಂದುಕೊಳ್ಳುತ್ತಿದ್ದೀರಾ? ನಿಲ್ಲಿ. ಇಲ್ಲಿ ಬೆಂಡೇಕಾಯಿಯೇ ಪ್ರಧಾನ. ಫಿಶ್ ಗಿಶ್ ಏನೂ ಇಲ್ಲ.
ಬೆಂಗಳೂರಿನಲ್ಲಿರುವ ಗುಜರಾತಿಗಳು ಈ ರೀತಿಯ ಪದಾರ್ಥವೊಂದನ್ನು ಮಾಡುತ್ತಾರೆ ಎನ್ನುತ್ತಾ, ನಮ್ಮ ಸಂಬಂಧಿಕರೊಬ್ಬರು ಒಂದು ದಿನ ಮಾಡಿ ಬಡಿಸಿದ್ದೇ ಈ ಒಂದು ಹೊಸ ಪದಾರ್ಥ ಚಿಂತಾಮಣಿಗೆ ಕಾರಣ! ಏನಿಲ್ಲ, ಎಳೆಯ, ಸಣ್ಣ ಸಣ್ಣ ಬೆಂಡೇಕಾಯಿಗಳನ್ನು ಅದರ ಬಾಲದಿಂದ ಬುಡದ ಚೊಟ್ಟಿನವರೆಗೆ ಮಧ್ಯಭಾಗದಲ್ಲಿ ಸೀಳಬೇಕು. ಸೀಳುವುದೆಂದರೆ ಪೂರ್ತಿ ಅಲ್ಲ, ಚೊಟ್ಟಿನವರೆಗೆ ಮಾತ್ರ. ಚೊಟ್ಟು ಹಾಗೇ ಇರಲಿ. ನಂತರ ಮೆಣಸಿನಪುಡಿ, ಹುಳಿಪುಡಿ, ಉಪ್ಪು ಹದವಾಗಿ ಸೇರಿದ ಮಿಶ್ರಣವನ್ನು ಬೆಂಡೇಕಾಯಿಯ ಬಾಲದಿಂದ ಬುಡದವರೆಗೆ -ಅಥವಾ ವೈಸ್ ವರ್ಸಾ- ತೆಳ್ಳಗೆ ತುಂಬಿ (ಹುಳಿಪುಡಿ ಇರದಿದ್ದರೆ ಡ್ರೈ ಮಾಡುವಾಗ ನಿಂಬೇಹಣ್ಣಿನ ರಸ ಹಾಕಿದರೂ ಸಾಕು). ಬಾಣಲೆಗೆ ಸ್ವಲ್ಪ ಕಡಲೇಕಾಯಿ ಎಣ್ಣೆ ಸುರಿದು ಈ ಬೆಂಡೇಕಾಯಿಗಳನ್ನು ಹಾಕಿ ಡ್ರೈ ಮಾಡಿ. ಬೆಂಡೇಕಾಯಿ ಬಾಡಿ ಬಸವಳಿವವರೆಗೆ, ಹಸಿರು ಬಣ್ಣ ನಸುಗಪ್ಪು ಬಣ್ಣಕ್ಕೆ ತಿರುಗುವವರೆಗೆ ಡ್ರೈ ಮಾಡಬೇಕು. ಆನಂತರ ಅನ್ನಕ್ಕೆ ಕಲಸಿಕೊಂಡಾದರೂ ತಿನ್ನಿ, ಊಟದ ಮಧ್ಯೆಯಾದರೂ ತಿನ್ನಿ, ಬರೀ ಬಾಯಲ್ಲೇ ತಿನ್ನಿ. ಆಹಾ! ಎಂಥ ಮಧುರ ರುಚಿಯಿದೂ!
ಈ ವಿಶಿಷ್ಟ ಪದಾರ್ಥಕ್ಕೆ ಹೆಸರೇನು ಎಂಬುದು ನಮಗೆ ಗೊತ್ತಿಲ್ಲ. ಅದಕ್ಕೊಂದು ಹೊಸ ಹೆಸರಿನ ತಲಾಷ್ನಲ್ಲಿದ್ದಾಗ ಒಂದು ದಿನ ನನ್ನ ಸಹೋದರ ಮನೆಗೆ ಬಂದ (ಅವನು ಪುರೋಹಿತ, ಅಪ್ಪಟ ಸಸ್ಯಹಾರಿ ಬ್ರಾಹ್ಮಣ. ನಾವೂ ಬ್ರಾಹ್ಮಣರೇ. ಸಸ್ಯಾಹಾರಿಗಳಲ್ಲಿ `ಅಪ್ಪಟ'ರು ಹೌದೋ ಅಲ್ಲವೋ ನನಗೆ ಗೊತ್ತಿಲ್ಲ!). ಅವನಿಗೆ ಈ ಬೆಂಡೇಕಾಯಿಯ ವಿಶಿಷ್ಟ ಪದಾರ್ಥ ಮಾಡಿ ಬಡಿಸಿದ್ದಾಯಿತು. ಬೆಂದ ಬೆಂಡೇಕಾಯಿಯನ್ನು ನೋಡುತ್ತಲೇ `ಅಯ್ಯೋ, ಮೀನಾ?!' ಎನ್ನುತ್ತಾ ಗಾಬರಿಯಾದ ಅವನಿಗೆ ವಾಸ್ತವಾಂಶ ತಿಳಿಸಿದಾಗ ನಿರುಮ್ಮಳನಾಗಿ ಅದಕ್ಕೊಂದು ಹೆಸರನ್ನೂ ಸೂಚಿಸಿಯೇಬಿಟ್ಟ: `ಬೆಂಡೇಕಾಯಿ ಫಿಶ್ ಕರಿ!' (ಅವನಿಗೆ ಫಿಶ್ ಕರಿ ಗೊತ್ತಾ ಅಂತ ಕೇಳಬೇಡಿ. ನಾನೂ ಕೇಳಿಲ್ಲ!)
ನಂತರ ಈ ಹೆಸರೇ ಅದಕ್ಕೆ ಗಟ್ಟಿಯಾಯಿತು. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅವರಿಗೆ ಗಾಬರಿ, ಮುಜುಗರವಾಗುವುದು ಬೇಡ ಅಂತ `ಇದು ಬೆಂಡೇಕಾಯಿಯದು, ಬೇರೇನಲ್ಲ' ಅಂತ ಮೊದಲೇ ಹೇಳಿ, ನಂತರ ಅದಕ್ಕೆ ನಾವಿಟ್ಟ ಹೆಸರನ್ನು ಹೇಳಿ ಸಂಭ್ರಮಿಸುತ್ತೇವೆ!
ಮಹೇಶರ ಚಿತ್ರಾನ್ನದ ಜೊತೆಗೇ ಈ ಬೆಂಡೇಕಾಯಿ ಫಿಶ್ ಕರಿಯನ್ನೂ ಒಮ್ಮೆ ಮಾಡಿ ನೋಡಿ. ಬ್ರಹ್ಮಚಾರಿಗಳಿಗಂತೂ ಇದು ದಿಢೀರ್ ಪದಾರ್ಥ.

- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಬೆಂಡೇಕಾಯಿ ಫಿಶ್ ಕರಿ!
ಅಯ್ಯೋ ಈ ಬ್ರಾಹ್ಮಣರ ಗೋಳು ನೋಡಿ, ಬೆಂಡೇಕಾಯಿಯನ್ನು ಮೀನು ಅಂತ ತಿನ್ನೋದು, ಕುಂಬಳ ಕಾಯಿಯನ್ನು ಆಡು ಅಂತ ತಿನ್ನೋದು, ಪಡವಲಕಾಯನ್ನು ಹಾವು ಅಂತ ತಿನ್ನೋದು
..
ಏನೇ ಆದ್ರು "ಬ್ರಾಹ್ಮಣೋ ಭೋಜನಪ್ರಿಯಃ" ಅನ್ನೋ ಮಾತಿಗೆ ನಾವಿಬ್ಬರೂ ಸಾಕ್ಷಿ
ಹಿಂಗೆ ಎಗ್ಗಮಗ್ಗ ನಾಲಗೆಗಾಗಿ ತಿಂದೇ, "ಡೊಳ್ಳು ಹೊಟ್ಟೆಯ ಭಟ್ಟರಾಗಿರೋದು", ಈ ಹೊಟ್ಟೆ ಒಂದ ತರಹ ನಮ್ಮ ನಾಮತಿಲಕಗಳಂತೆ ವಿಪ್ರರ ಲಾಂಛನವಾಯಿದೆ.
ಸಕ್ಕತ್!! ಮಾಡಿ ಮುಕ್ಕೋಣವಾಗಲಿ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಬೆಂಡೇಕಾಯಿ ಫಿಶ್ ಕರಿ!
ಅಭಾಜಿಸಂ ಜಿಂದಾಬಾದ್, ಜಿಪುಣರ ಸಂಘ ಜಿಂದಾಬಾದ್..
ಏನಿದು ಹೊಳೆಯಿತಾ.. ಯಾವುದೋ ಸಿನಿಮಾದಲ್ಲಿ "ದೊಡ್ಡಣ್ಣ" ಕೋಳಿಯನ್ನು ನೇತು ಹಾಕಿ, ಅದನ್ನು ನೋಡುತ್ತಾ, ಮೊಸರನ್ನು ತಿನ್ನುತ್ತಾ ಕೋಳಿಯನ್ನು ತಿಂದಷ್ಟೇ ಮಜಾ ತೊಗೊತಾ ಇರ್ತಾನೆ. ಅಭಾಜಿಸಂ - ಅಖಿಲ ಭಾರತ ಜಿಪುಣರ ಸಂಘ.
ಸುರೇಶರೆ, ಸಖತ್ತಾಗಿದೆ ಈ ರೆಸಿಪಿ. ನಾನೇ ಅಡಿಗೆ ಮಾಡಿ ತಿನ್ನುವ ಸನ್ನಿವೇಶಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿದ್ದುದರಿಂದಲೋ ಏನೋ ಇಂತಹ ಹೊಸ ಹೊಸ ರೆಸಿಪಿಗಳನ್ನು ಅಷ್ಟು ಪ್ರಯತ್ನಿಸಿಲ್ಲ. ಮಾಡಿಕೊಟ್ಟರೆ ಏನೆಲ್ಲ ತಿಂದರೂ ನಾನೇ ಮಾಡುವಾಗ ಏನಿದ್ದರೂ ಅನ್ನ, ಸಾರು.... ರೊಟ್ಟಿ, ಕಾಯಿ-ಬೆಲ್ಲ ಇವುಗಳಿಗೇ ಸೀಮಿತ. ಬಹುಶಃ ನಾನು ಕಲಿತು ಮಾಡಿದ್ದ ಹೊಸ ಪದಾರ್ಥವೆಂದರೆ ಈಗ್ಗೆ ನಾಲ್ಕು ವರ್ಷದ ಕೆಳಗೆ ಮಾಡಿದ್ದ "ಕ್ಯಾರೆಟ್ ಪಾಯಸ" ಒಂದೇ ಇರಬೇಕು.
ಈ ನಡುವೆಯಂತೂ ಯಾರೂ ಅಡಿಗೆ ಮಾಡಿಲ್ಲದಿದ್ದರೆ ನಾನು ಅವಲಕ್ಕಿ-ಹಾಲು-ಸಕ್ಕರೇನ
ತಿನ್ತೀನಿ. ಈ ಎರಡೀಶರ (ಸುರೇಶ, ಮಹೇಶ) ಹೊಸ ಪ್ರಯೋಗಗಳಿಂದ ಸ್ವಲ್ಪ ಸ್ವಲ್ಪವೇ ನನಗೂ ಬೇರೆಯದನ್ನು ಮೊಗಚುವ ಉತ್ಸಾಹವೇರುತ್ತಿದೆ.
ಉ: ಬೆಂಡೇಕಾಯಿ ಫಿಶ್ ಕರಿ!
ಎಲ್ಲೋ ಓಕೆ
"ಅಭಾಜಿಸಂ ಜಿಂದಾಬಾದ್, ಜಿಪುಣರ ಸಂಘ ಜಿಂದಾಬಾದ್.." ಇದು ಯಾಕೆ?
ನಾವು ಜಿಪುಣರು ಅಂತ ಅಲ್ಲಣ್ಣ ಅಡುಗೆ ಮಾಡಿ ಉಣ್ಣೋದು. ನಮಗೆ ಅಡುಗೆ ಬರುತ್ತದೆ + ನಮಗೆ ನಮ್ಮ ಅಡುಗೆ ಇಷ್ಟ + ದಿನಾ ಹೋಟೆಲ್ಲಿ ಒಂದ ಹೊತ್ತು ತಿಂದೇ ತಿನ್ತೀವಿ.
ಇಷ್ಟಾದ್ರು ನನಗೆ ತಿಂಗಳಿಗೆ ಕಡಮೆ ಅಂದ್ರು ೩೦೦೦ ತಿನ್ನೋದಕ್ಕೆ ಹೋಗುವುದು. ಕಂಪೆನಿ ಕೊಡು ಪುಲ್ ಕೂಪನ್ ಖಾಲಿ!
ಮನೆಯಲ್ಲಿ ಅಮ್ಮಳ ಕೈಯಲ್ಲಿ ಜಬರ್ದಸ್ತಾಗಿ ಮಾಡಿಸಿಕೊಂಡು ತಿನ್ನೋರಿಗೇನು ಗೊತ್ತು ನಮ್ಮ ಪಾಡು. ರಾತ್ರಿ ೧೦ ಗಂಟೆ ಆಪೀಸಿಂದ ಹಸಿದುಕೊಂಡು ಯಾವ ಹೋಟೆಲಿಗೆ ಹೋಗುದು? ಇನ್ನು ಮನೆಗೆ ಬಂದ್ರೆ ಅಲ್ಲಿ ನಾವೇ ಮಾಡಿಕೊಳ್ಳಬೇಕು.
ಇದರ ಜೊತೆ ದಿನಾ ಮನೆಗುಡಿಸೋದು, ಪಾತ್ರೆ ತೊಳೆಯೋದು, ಬಚ್ಚಲಮನೆ ತಿಕ್ಕೋದು, ಬಟ್ಟೆ ಒಗೆಯೋದು, ಸ್ನಾನ ಮಾಡೋದು
ಇವೆಲ್ಲವನ್ನೂ ನಾವೇ ಮಾಡಿಕೊಳ್ಳಬೇಕಲ್ಲ. !! 
ಜಿಪುಣ ಯಾರು ಅಂತ ಹೇಳಬೇಕಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಬೆಂಡೇಕಾಯಿ ಫಿಶ್ ಕರಿ!
ಇದರ ಜೊತೆ ದಿನಾ ಮನೆಗುಡಿಸೋದು, ಪಾತ್ರೆ ತೊಳೆಯೋದು, ಬಚ್ಚಲಮನೆ ತಿಕ್ಕೋದು, ಬಟ್ಟೆ ಒಗೆಯೋದು, ಸ್ನಾನ ಮಾಡೋದು ಇವೆಲ್ಲವನ್ನೂ ನಾವೇ ಮಾಡಿಕೊಳ್ಳಬೇಕಲ್ಲ. !!
ಯಾಕ್ರೀ? ನೀವಿರೋದು ಬೆಂಗಳೂರಲ್ಲವಾ? ಅಲ್ಲ್ಲಿ ಕೊನೆಯದೊಂದನ್ನು ಬಿಟ್ಟು
ಬೇರೆಲ್ಲಕ್ಕೂ ಆಳುಗಳಿಟ್ಟುಕೊಳ್ಳುವುದೇ ರೂಢಿ ಅಲ್ಲ್ವೇನ್ರೀ?
-ಹಂಸಾನಂದಿ
ಉ: ಬೆಂಡೇಕಾಯಿ ಫಿಶ್ ಕರಿ!
ನೀವು ಯಾವ ಕಾಲದಲ್ಲಿ ಇದ್ದೀರ ಸಾರ್!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !