ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

“ಕಬ್ಬಿಗರ ಕಾವಂ” ಆಂಡಯ್ಯ

August 28, 2007 - 4:41pm — Khavi

“ಕಬ್ಬಿಗರ ಕಾವಂ” ಆಂಡಯ್ಯ

 

ಆಂಡಯ್ಯನ ಬಗ್ಗೆ:

 

"ಕನ್ನಡದೊಳ್ಪಿನ ನುಡಿಯಂ!

ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!!

ರನ್ನದ ಕನ್ನಡಿಯಂ ನಲ!

ವಿನ್ನೋಡಿದವಂಗೆ ಕುಂದದೇನಾದಪುದೇ?

ಎಂದು ದಿಟ್ಟತನದಲಿ, ಸಕ್ಕದವನ್ನು (ಸಂಸ್ಕೃತ ಒರೆಗಳನ್ನು ಬಳಸದೆಯೆ) ಮೆಟ್ಟಿನಿಂತು ಬರಿ ಸಿರಿಗನ್ನಡದಲ್ಲೆ ಮಾಕಬ್ಬವನ್ನು ಬರೆವೆನೆಂದು ಪಣತೊಟ್ಟು ಅದರಂತೆ ನಡೆದು "ಕಾವನ ಗೆಲ್ಲ"ವನ್ನು ನೆಗೞ್ಚಿದ, ಜೊತೆಗೆ ಕನ್ನಡದ ಪೆಂಪನ್ನು ಎಣ್ದೆಸೆಗೂ ಪಸರಿಸಿದ ಕನ್ನಡದ ಹೆಮ್ಮೆಯ ಕಬ್ಬಿಗ, ದಿಮ್ಮಿದರರಸ, ನುಡಿಯೊಳ್ ಕಡುಜಾಣ , ಅಚ್ಚಗನ್ನಡದ ಬೊಮ್ಮನೇ ಆಂಡಯ್ಯ. ಇದು ಸೊತಂತಿರವಾದ ಅಂದರೆ ಹಿಂದಿನ ಯಾವ ಕಬ್ಬದ ಮೇಲೆ ನಿಂಲ್ಲದೆ ಬರಿ ಕಲುಪನೆಯಿಂದ ಮೂಡಿದ ಕಬ್ಬವೆನ್ನುದೊಂದು ಹಿರಿಮೆ ಕೂಡ

 

"ಕಬ್ಬಿಗರ ಕಾವಂ" ವನ್ನು ನೆಗಳ್ಚಿದ ಕಬ್ಬಿಗ ಆಂಡಯ್ಯನು. ಇವನು ತನ್ನ ಅಜ್ಜನನ್ನು "ಲೆಕ್ಕಿಗರ ಪಿರಿಯನೆನಿಪಾಂಡಯ್ಯನು" ಎಂದಿರುವದರಿಂದ ಇವನ ತಾತನ ಹೆಸರೂ ಆಂಡಯ್ಯನೆಂದು ಬಲ್ಲವರು ಬಗೆದಿದ್ದಾರೆ. "ಈ ಹಿರಿಯ ಆಂಡಯ್ಯನು ಒಳ್ಳೆಯ ಸಜ್ಜನನೂ, ಸರಳನೂ" ಎಂದು ತನ್ನ ತಾತನನ್ನು ಹೊಗಳಿದ್ದಾನೆ. ತನ್ನ ಮನೆತನದವರನ್ನು "ದಿಮ್ಮಿದರಕ್ಕರಕ್ಕಱಿವರೊಳ್" ಅಂದರೆ ಬಿದ್ಯೆಯೋಳ್ ಬಲ್ಲಿದರು, "ನುಡಿಯೊಳ್ ಕಡುಜಾಣಾರಂದದೊಳ್! ಪೊಮ್ಮಿದರ್" ಮಾತಿನೊಳು ಬಲುಜಾಣರೂ, ಅಂದದಲ್ಲಿ ಹೆಚ್ಚಿದರೂ ಎಂದಿದ್ದಾನೆ. ಇಂತಹ ಮನೆತದನಲ್ಲಿ ತಮ್ಮ ಸಿರಿತನವನ್ನು "ಪಿರಿಯರ್ಗೆಡೆಕೊಟ್ಟು" ಬಾಳುತಿರಲು, ಆಂಡಯ್ಯ (ಲೆಕ್ಕಿಗರ ಪಿರಿಯ) ನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯನಾದವನೂ "ಗರುವಿಕೆಯನಾಂತ"ನಾದ (ಅಂದರೆ ಗೌರವಿತನಾದ) ಸಾಂತನ ಮಗನು ತಾನು "ಲೆಕ್ಕಿಗರರಸ" ಆಂಡಯ್ಯನು ಎಂದು ಹೇಳಿಕೊಂಡಿದ್ದಾನೆ. ಅವನ ಅವ್ವೆಯ ಹೆಸರು ಬಲ್ಲವ್ವೆ.

 

ಇವನು ತನ್ನಲ್ಲಿ ಜಿನಬಕುತಿ ಉಂಟೆಂದು, ಅದಕ್ಕೆ ಅವನಿಗೆ ಸಹಜ ಸಿರಿ ಒಲಿದುಬಂತೆಂದುಲಿದಿರುವದರಿಂದ ಇವನು ಜಿನನೆನ್ನುವರು. ಇದಕ್ಕೆ ಪುರಾವೆಯಾಗಿ, ಇವನ ಹೆಸರು ಆಂಡಯ್ಯ ಅಂದರೆ ಅಂಡಕ್ಕೆ ಅಯ್ಯ = ಬೊಮ್ಮಯ್ಯ ಎಂದಿರುವುದು. ಈಗಲೂ ಕೂಡ ಜಿನರಲ್ಲಿ ಬೊಮ್ಮಯ್ಯ, ಬರುಮಪ್ಪ ಎಂದು ಕೂಡ ಹೆಸರುಗಳು ಇರುವವು.

 

ಇಲ್ಲಿವರೆವಿಗೂ ಬಂದ ಪಳೆಗನ್ನಡ ಕಬ್ಬಿಗರೊಬ್ಬರು ಈತನನ್ನು ನೆನೆದಿಲ್ಲವಾದರಿಂದ ಇವನ ಬಗ್ಗೆ ಇನ್ನು ಹೆಚ್ಚು ಅರಿಯಲು ಹೊರಕುರುಹು ಸಿಗುವದಿಲ್ಲ. ಆದ್ದರಿಂದ ಒಳಕುರುಹು ಅಂದರೆ ಇವನ ಕಬ್ಬದಲ್ಲಿ ದೊರೆಯುವುದನ್ನೆ ಬಗೆದು ನೋಡಬೇಕಾಗಿದೆ. ಇವನ ಕಾಲವನ್ನು ನಿಕ್ಕುವವಾಗಿ ಹೇಳಲಾಗದಿದ್ದರೂ, ತನ್ನ ನೆಗಳ್ಚಿನಲ್ಲಿ ಹಳೆಯ ಕಬ್ಬಿಗರಾದ ನೇಮಿನಾಥಪುರಾಣ ಬರೆದ ಕಣ್ಣಮಯ್ಯ (ಕರ್ಣಪಾರ್ಯನೆಂದೂ ಕರೆಯುವರು), ಗಧಾಯುದ್ಧ ಬರೆದ ರನ್ನ (೧೦ನೆಯ ನೂರೇಡಳತೆ), ಜನ್ನ (೧೨ನೆಯ ನೂರೇಡಳತೆ, ಕೇಶಿರಾಜನ ಸೋದರ ಮಾವ), ಗಜಗ (ಈತನ ಬಗ್ಗೆ ತಿಳಿದಿಲ್ಲ) ಮತ್ತು ಬಿನ್ನಣದ ಅಗ್ಗಳರನ್ನು (೧೩ನೆಯ ನೂರೇಡಳತೆಯ ಮೊದಲು)  ಕಬ್ಬದ ಮೊದಲಲ್ಲಿ ನೆನೆದಿರುವನು. ಅಲ್ಲದೆ ಕೇಶಿರಾಜನ ತಂದೆಯಾದ ಮಲ್ಲಿಕಾರ್ಜುನನು ತನ್ನ "ಸೂಕ್ತಿಸುಧಾರ್ಣವ"ದಲ್ಲಿ ಇವನ ಪದ್ಯಗಳನ್ನು ಮಾದರಿಯಾಗಿ ತೆಗೆದುಕೊಂಡಿರುವದರಿಂದ ಇವನು ೧೩ನೆಯ ನೂರೇಡಳತೆಯ ಮೊದಲಲ್ಲಿದ್ದನೆಂದು ತಿಳಿಯಬಹುದು.

 

ಹಿಂದಿನವರಂತೆ ಇವನು ಕಬ್ಬದ ಕೊನೆಯಲ್ಲಿ ತನ್ನ ಗುರು, ಬಿರುದುಗಳನ್ನು ತಿಳಿಸಿಲ್ಲ. ಕನ್ನಡದ ನಾಡಿನ ಬಗ್ಗೆ ಬಣ್ಣಿಸಿದುರಿಂದಲೂ, ಮತ್ತು ೩೪೮ರಲ್ಲಿ "ಗೋಸಣೆ ಮೀಱುವನ್ನಮಿದು ರಾಯನ ನಾಳ್ಕೊಳೊಳಿರ್ಕೆ" ಎಂದಿರುವದರಿಂದಲೂ  ದೊರೆಗಳನ್ನು ರಾಯ ಏಂದು ಕರೆಯುವ ಕನ್ನಡದೇಶವೇ ಇವನು ಬಾಳ್ದ ತಾಣವಾಗಿರ್ಪುದು ಎಂದು ದಿಮ್ಮಿದರರಾದ ರಾಮಾನುಜಯ್ಯಂಗಾರ್ಯರು, ಮತ್ತು ನರಸಿಂಹಾಚಾರರು ನುಡಿದಿದ್ದಾರೆ.

 

ಇವನ ಅಚ್ಚಕನ್ನಡದೊಲವು:

 

"ಸೊಗಯಿಪ ಸಕ್ಕದಂಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ!

ಬಗೆಗೊಳೆ ಪೇೞಲಾಱರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ!

ಬ್ಬಿಗರದು ಮಾತನಾಡಿದವೊಲಂದವನಾೞ್ದಿರೆ ಬಲ್ಪು ನೆ!

       ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ!!"

 

ಸಕ್ಕದವಿಲ್ಲದೆ (ಸಂಸ್ಕೃತ ಪದಗಳಿಲ್ಲದೆ) ಅಚ್ಚಕನ್ನಡದಲ್ಲಿ ಕಬ್ಬನೆಗೞ್ಚಲಾರರು ಎಂದು ಕಬ್ಬಿಗರ ಮೇಲೆ ಅಪವಾದ ಬಂದಾಗ, ಹಿಂದಿನವರಾದ "ಪೆಂಪನಾಳ್ದ" (ಹೆಸರುಮಾಡಿದ, ಪ್ರಸಿದ್ಧರಾದ) ಪಂಪ, ರನ್ನ ಮೊದಲಾದವರು ಸಕ್ಕದದ ನೆರವಿಲ್ಲದೆ ಕನ್ನಡದೊಳ್ ಕಬ್ಬವನ್ನು ನೆಗಳ್ಚಬಲ್ಲರಾದರೂ, ತನ್ನಂತೆ ಎದೆಮುಟ್ಟುವಂತೆ, ಮನಸೂರೆಗೊಳ್ಳುವಂತೆ, ಸೊಗಯಿಸುವ ಕಬ್ಬ ಬರೆಯುವವರಾರಿಲ್ಲವೆಂದು,

 

      "ಎಂದು ತಮತಮಗೆ ಬಲ್ಲವ!

       ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ!!

       ನ್ನೆಂದಚ್ಚಗನ್ನಡಂ ಬಿಗಿ!

       ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ!!

 

ಅದಕ್ಕಾಗಿಯೇ ಅವರ ಬಯಕೆಯನ್ನು ಸಲಿಸಲು, ಕಬ್ಬಿಗರ ಮೇಲೆ ಬಂದ ಅಪವಾದವನ್ನು ಹೋಗಲಾಡಿಸಲು ಪಣತೊಟ್ಟು ತಾನು "ಕಬ್ಬಿಗರ ಕಾವ" ಎಂಬ ಮಾಕಬ್ಬವನ್ನು ಬರೆಯಲೊರೆದೆನು ಎಂದು  ಹೇಳಿಕೊಂಡಿರುವನು.

 

ಕನ್ನಡದೊಲವಿನ ಈ ನೆಗೞ್ಚು "ಕನ್ನಡದೊಳ್ಪಿನ ನುಡಿಯಂ! ಮುನ್ನಿದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!" ಎಂದು ಇದೊಂದು ಕನ್ನಡದ ಉಳಿವಿಗೆ ಮಾದರಿಯೆಂದು ಬಗೆವನು.

 

      "ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿಂ!

       ಬಾಸಣಮಾಗೆ ಪೇೞ್ದನೊಲವಿಂ ನೆಱೆ ಕಬ್ಬಿಗರೊಪ್ಪೆ ನಾಡೆಯುಂ!!

       ಗೋಸಣೆ ಮೀಱುವನ್ನಮಿದು ರಾಯನ ನಾೞ್ಕಳೊಳಿರ್ಕೆ ನಿಚ್ಚಮುಂ!

       ದೇಸೆಯ ಗೊತ್ತು ಜಾಣ್ಣುಡಿಯ ತಾಯ್ವನೆ ನುಣ್ಬುರುಳೇೞ್ಗೆಯೆಂಬಿನಂ!!  (೩೪೮)

ದೋಸ (ದೋಷ)ದ ಮಾತು ಹೊದ್ದು, ಬಲ್ಲವರು ಅಗ್ಗ ಎಂದು ಬಗೆದ ಕನ್ನಡ ಬಾಸಣ(ಭಾಷಣ, ಮಾತು, ನುಡಿ)ದಲ್ಲಿ ಒಲವಿನಿಂ ಪೇೞ್ದ ಈ ಕಬ್ಬ, ನಾಡೊಳು ನೆರೆದ (ಒಟ್ಟಾದ, ಎಲ್ಲ) ಕಬ್ಬಿಗರು ಒಪ್ಪುವಂತೆ, ರಾಯನ (ಕನ್ನಡದ ದೊರೆಯ) ನಾಡುಗಳಲೆಲ್ಲಾ ಮೀರಿ(ಎದ್ದು) ನಿಲ್ಲುವುದಿದು ನಿಚ್ಚಳವು ಎಂದು ಮತ್ತೆ ಮತ್ತೆ ಒತ್ತಿ ಗೋಸಣೆ (ಘೋಷಣೆ) ಮಾಡುವನು. ವಿಲಾಸೆಯ ಗೊತ್ತು, ಜಾಣ್ಣುಡಿಯ ತಾಯಮನೆಯಾಗಿ, ನುಣುಪಾದ ಹೊಳೆವ ಮುತ್ತಿನಂತಾಗಿ (ಒಳ್ಳೆಯ ಆಶೆಯನಿಟ್ಟುಕೊಂಡು) ಮೆರೆವುದೆಂಬೆ ಎಂದು ಸಾರುವನು.

 

ಇಲ್ಲಿ ಅಗ್ಗ ಎಂದರೆ ಹಿರಿದಾದ ಎಂದೂ ಆಗುವುದರಿಂದ  “ಬಲ್ಲವರ ದೋಸ (ದೋಷ)ದ ಮಾತು ಹೊದ್ದು, ಅಗ್ಗವಾದ (ಹಿರಿದಾದ,) ಕನ್ನಡದಲ್ಲಿ ಒಲವಿನಿಂ ಪೇಳ್ದ” ಎಂದೂ ತೋರುವುದು.

 

 

ತನ್ನ ಕಬ್ಬದ ಪಿರಿಮೆಗರಿಮೆಗಳ ಹೊಗಳಿಕೆ:

 

ಕಬ್ಬಿರಕಾವವು ಗದ್ಯ ಪದ್ಯ ಕೂಡಿದ ಒಂದು ಚಂಪೂ ಕಬ್ಬವಾಗಿದೆ. ಇದರ ರಚನೆ ಹಾಗು ಕಬ್ಬದ ಒಳಪುಗಳ ಬಗ್ಗೆ ಆಮೇಲೆ ಬರೆಯುವೆ.

 

ತನ್ನ ಅಚ್ಚಕನ್ನಡ ಕಬ್ಬಕ್ಕೆ ಇವನಿಗೆ ಎಲ್ಲಿಲ್ಲಿದ ಒಲವು, ಪಿರಿಮೆ, ಕೂರ್ಮೆ. ಮುಂಚಿನ ಕಬ್ಬಿಗರ ಕಬ್ಬಗಳ ಬಲಾಬಲಕ್ಕೆ ಸಮ ತನ್ನ ಕಬ್ಬೆಂದು ಪೇಳುವನು.

 

      "ಒಪ್ಪಂಬೂಸಿದವೋಲ್ ತೆಱಂಬೊಳೆವ ಕೊಂಕುಂ ಪಾಲೊಳೊಂದಿ!

       ಲೊಪ್ಪಂಬೆತ್ತಿನಿದಾದ ಬರ್ದುನುಡಿಯುಂ ತಳ್ತೋಜೆಯುಂ ನಿಲ್ವಿನಂ!!

       ತಪ್ಪೊಂದುಂ ತಲೆದೊರದಂತೆ ಪಲರೆಲ್ಲರ್ ತಿರ್ದಿದೀಕಬ್ಬಮೆಂ!

       ತಪ್ಪಂಗಂ ಪೊಸಮುತ್ತಿನೆಕ್ಕಸರದಂತೆಂದುಂ ಕೊರಲ್ಗೊಳ್ಳದೇ?"

 

ಅಂದರೆ ಒಪ್ಪವಾಗಿಟ್ಟ ಒಡವೆಯಂತೆ ಹೊಳೆವ ತೆರದಿ ಕೊಂಕು, ಇನಿದಾದ "ಬರ್ದುನುಡಿಯುಂ" ಜಾಣ್ಮೆಯ ನುಡಿಯುಳ್ಳ (ಪ್ರೌಢಿಮೆಯುಳ್ಳ), "ತಳೆದು+ಓಜೆಯಂ" ಗಾಢವಾದ ಪದಪುಂಜರೂಪಗಳನ್ನೊಳಗೊಂಡು "ನಿಲ್ವಿನಂ" ನಿಲ್ಲುವಂತೆಯೂ, ಹಲವಾರು ಸಲ ಎಲ್ಲವನ್ನು ತಿದ್ದಿ ಒಂದಿನಿತು ತಪ್ಪು ತಲೆದೋರದಂತೆ ಇದೆ ಎಂದಲ್ಲದೆ... ಎಂಥವನಿಗೂ ಕೂಡ ಹೊಸ ಮುತ್ತಿನ ಎಕ್ಕಸರದಂತೆ ಕೊರಳೊಳು (ಕಂಠದಲ್ಲಿ ಎಂದು ತಿಳಿಯುವುದು) ಮೆರೆಯದೆ? ಎಂದಿದ್ದಾನೆ.

 

ಅಲ್ಲದೆ

      "ಪುರುಳುಂ ಲಕ್ಕಣಮುಂ ಮೆ!

       ಯ್ಸಿರಿಯುಂ ತಳ್ತೆಸೆವ ಪೇೞ್ದ ಕಬ್ಬಮದೆಂತುಂ!

       ಪುರುಳುಂ ಲಕ್ಕಣಮುಂ ಮೆ!

       ಯ್ಸಿರಿಯುಂ ತಳ್ತೆಸೆವ ರನ್ನದಂತೆರ್ದೆವುಗದೇ?!!"

ಅಂದರೆ ಬಲು ಬೆಲೆಯುಳ್ಳ, ಬಲು ಸೊಗವುಳ್ಳ, ಕಾಂತಿಯಿಂದ ತುಂಬಿರುವ ರನ್ನದಂತೆ, ತನ್ನ ಕಬ್ಬವೂ ಬಲು ಒಳತಿರುಳು ತುಂಬಿದ, ಬಲು ಸೊಗಸಿನದ್ದೂ, ಸೊಬಗಿನದ್ದೂ ಎಂದುಲಿವನು. ಆದುದರಿಂದಲೆ ಇದು ಎಲ್ಲರಿಗೂ ಮೆಚ್ಚಂತೆ.

 

ತನ್ನ ಸಿಂಗರ ಕಬ್ಬನೆಗೞ್ಚುವ ಬಲದ  (ಶೃಂಗಾರ ಕಾವ್ಯ ರಚನಾ ಸಾಮರ್ಥ್ಯ) ಮೇಲೆ ಇವನಿಗೆ ತುಂಬಾ ಬಲುಮೆ.

      "ಸೊಗಯಿಸುವ ಕಬ್ಬಮಂ ಕ!

       ಬ್ಬಿಗರಲ್ಲದೆ ಮೆಚ್ಚರುೞಿದರೇನಱುವರೆ? ತುಂ!!

       ಬಿಗಳಲ್ಲದೆ ಪೂವೊಳ್ ಮಗ!

       ಮಗಿಸುವ ಕಂಪಂ ಕಡಂದುಱೀನಱುಪುದೇ?"

ಅಂದರೆ ಹೂವೊಳು ಮಗಮಗಿಸುವ ಸವಿಗಂಪನ್ನು ದುಂಬಿಗಳಲ್ಲದೆ, ಕಣಜದ ಹುಳ ಅರಿಯುವುದೆ?, ಅಂತೆಯೆ   ಸೊಗಸೂಸುವ ತನ್ನ ಕಬ್ಬವನ್ನು ಕಬ್ಬಿಗರಲ್ಲದೆ, ಮಿಕ್ಕವರು, ಬೇರೆಯವರು ಮೆಚ್ಚಬಲ್ಲರೆ? ಎಂದು ಕೇಳುವನು.

 

ಇದಕ್ಕೆ ಸೊಬಗಿನ ಸುಗ್ಗೆ ಎಂಬ ಹೆಸರು ಬರಲು ಕಾರಣವನ್ನು ಹೀಗೆ ಹೇಳಿದ್ದಾನೆ.

      "ಪುರುಳುಂ ಲಕ್ಕಣಮುಂ ಮೆ!

       ಯ್ಸಿರಿಯುಂ ಮೆಯ್ವೆತ್ತು ಸೋಲಿಪುದಱಿಂದೊಲ್ದ!!

       ಕ್ಕರಿಗರಿದನೋದಿ ಪೊಸತಾ!

       ಗಿರೆ ಸೊಬಗಿನ ಸುಗ್ಗಿಯೆಂಬ ಪೆಸರಂ ಕೊಟ್ಟರ್ !!

 

ಅಂದರೆ ಒಳತಿರುಳು ತುಂಬಿದ, ಬಲು ಸೊಗಸಿನ (ಲಕ್ಷಣವಾದ), ಸೊಬಗಿನ ಐಸಿರಿಯನ್ನು ಮೈವೆತ್ತ ಈ ಕಬ್ಬಕ್ಕೆ ಸೋತು, ಒಲಿದು ಓದಿ ಹೊಸಬಗೆಯ ಈ ಕಬ್ಬಕ್ಕೆ ಬಲ್ಲವರು ಮೆಚ್ಚಿ ಸೊಬಗಿನ ಸುಗ್ಗೆ ಎಂದು ಹೆಸರು ಕೊಟ್ಟರಂತೆ.

     

      "ಮತ್ತಂ ಸಕ್ಕದಮಱಿವರ್!

       ಬಿತ್ತರದಿಂ ಮದನವಿಜಯಮೆಂದೊಲವೆರ್ದೆಯಂ!!

       ಪತ್ತಿರೆ ಪೆಸರಿಟ್ಟರಿದ!

       ಕ್ಕತ್ತಳವೆನಿಪುದೆನೆ ಮಿಸುಪ ಪೆಸರೆಸೆವಿನೆಗಂ!!"

 

ಸಕ್ಕದಬಲ್ಲರು ಇದನ್ನೊದಿ, ಸಕ್ಕದದಿ ಮಾತ್ರವೇ (ಕಲ್ಪನೆಯಿಂದ ಬರೆಯುವುದು ಸಕ್ಕದದಲ್ಲಿ ಮಾತ್ರ) ಕಾಣುವ ಈ ತೆರದ ಕಬ್ಬವು ಕನ್ನಡದಲಿ ಬರೆದುದಕ್ಕೆ, ಮೆಚ್ಚಿ, ಒಲವಿಂದ ಎದೆತುಂಬಿ ಹರಸಿ ಈ ಕಬ್ಬ "ಮದನ ವಿಜಯ" ಎಂದು ಕರೆದರೆ ಅದು ಅತ್ತಳವೇ (ಅತಿಶಯವೇ) ಎಂದು ಕೇಳುವನು  

 

ಇದಕ್ಕೆ"ಕಾವನ ಗೆಲ್ಲ" ಎಂದೂ ಕೂಡ ಕರೆವರು......

(ಮುಂದುವರಿಯುವುದು...)

- ವಿನಾಯಕ. ಖವಾಸಿ

 

 

ಒರೆಗಳ ತಿಳಿವು:

ಕಬ್ಬ : ಕಾವ್ಯ (ಮಾಕಬ್ಬ : ಮಹಾಕಾವ್ಯ)

ಎಣ್ದೆಸೆಗೂ : ಎಂಟು ದಿಕ್ಕುಗಳಿಗೂ

ಸಕ್ಕದ : ಸಂಸ್ಕೃತ

ಸೊತಂತಿರ : ಸ್ವತಂತ್ರವಾದ

ಕಲುಪನೆ : ಕಲ್ಪನೆ

ದಿಮ್ಮಿದರ : ವಿದ್ದ್ಯೆಯಲ್ಲಿ ಬಲ್ಲವರು, ಜ್ಞಾನಿಗಳು, ಪ್ರೌಢರು

ನೆಗೞ್ಚು : ರಚಿಸು

ಲೆಕ್ಕಿಗ : ಗಣಿತಜ್ಞ, ಇಲ್ಲಿ ವಿದ್ವಾಂಸ ಅಂತು ತಿಳಿಯುವುದು,  ಕುಲಕರ್ಣಿ, ಶಾನುಭೋಗರು ಎಂದೂ ಹೇಳುವರು

ಗರುವಿಕೆ : ಗೌರವಿತ

ಗೋಸಣೆ : ಘೋಷಣೆ

ನಾಳ್ಕೊಳು : ದೇಶದಲ್ಲಿ, ನಾಡಿನಲ್ಲಿ,

ದೋಸ : ದೋಷ

ಬಲ್ಲವರು : ಜಾಣರು, ಗೆಳೆಯರೂ ಎನ್ನಬಹುದು

ಬಾಸಣ : ಭಾಷಣ, ಮಾತು, ನುಡಿ

ಮೀರಿ : ಎದ್ದು ನಿಲ್ಲು

ಗೋಸಣೆ  : ಘೋಷಣೆ.

ನುಣ್ಬುರುಳೇೞ್ಗೆ : ನುಣುಪಾದ ಹೊಳೆವ ಮುತ್ತ, ಒಳ್ಳೆಯ ಆಶೆಯನಿಟ್ಟುಕೊಂಡು ಎಂದು ತಿಳಿಯಬೇಕು

ತೆಱಂಬೊಳೆ : ತೆರನಾಗಿ ಹೊಳೆಯುವುದು, ಅಂತೆ ಹೊಳೆಯುವುದು

ಬರ್ದುನುಡಿ :  ಪ್ರೌಢೋಕ್ತಿ,

ತಳ್ತೋಜೆಯುಂ : ಗಾಢವಾದ ಪದನ್ಯಾಸವುಳ್ಳ ಪ್ರೌಢಿಮೆಯಿಂದ ಕೂಡಿದ

ನಿಲ್ವಿನಂ : ನಿಂತಿರಲು

ಎಕ್ಕಸರ : ಏಕಾವಳಿ, ಒಂದೇದಾರದಲ್ಲಿ ಪೋಣಿಸಿದ ಮಾಲೆ

ಪುರುಳುಂ  : ಬೆಲೆಯುಳ್ಳ, ಒಳತಿರುಳು ತುಂಬಿದ, ಅರ್ಥಗಾಂಭೀರ್ಯವುಳ್ಳ

ಲಕ್ಕಣಮುಂ : ಲಕ್ಷಣವಾದ, ಸೊಗಸಾದ, ಉತ್ತಮವಾದ ಕಾವ್ಯ ಲಕ್ಷಣವುಳ್ಳ

ತಳ್ತೆಸೆವ : ಮನಮೋಹಕವಾದ

ಕಡಂದುೞು : ಕಣಜದ ಹುಳು

ಅತ್ತಳವೆನಿಪು : ಅತಿಶವೆನಿಸು

 

 

ನೆರವಾದ ಹೊತ್ತಿಗೆಗಳು:

1) “ಕಬ್ಬಿಗರ ಕಾವಂ” – ಮಂ|| ಆ|| ರಾಮಾನುಜಯ್ಯಂಗಾರರು ಮತ್ತು ಮಂ|| ಆಜಿ|| ನರಸಿಂಹಾಚಾರ್ಯರು, 1930

2) “ಅಚ್ಚಗನ್ನಡ ನುಡಿಕೋಶ” – ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು, 1993

 

  • ನಾಟಕ
~.~
  • Login or register to post comments
  • 541 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2007 - 4:59pm — mahesha

ಉ: “ಕಬ್ಬಿಗರ ಕಾವಂ” ಆಂಡಯ್ಯ

mahesha's picture

ಭಲಾ !! ಬಾರೆ ನಮ್ ಆಂಡಯ್ಯನ ಕತೆ ಓದೋಣ, ಭಲಾರೆ!! Smiling ( ಮಾತಾಡ್ ಮಾತಾಡು ಮಲ್ಲಿಗೆಯ ಒಂದು ಹಾಡು ಹೀಗಿದೆ )

ಬಲು ಚನ್ನಾಗಿದೆ!!

"ಸೊಬಗಿನ ಸುಗ್ಗಿ" ನಾನು ಓದಿ ತೀರಿಸಿಲ್ಲ. ಆದ್ರೆ ಆಂಡಯ್ಯ ಸೊಬಗನ್ನು ಚನ್ನಾಗಿ ತುಂಬಿರುವನು.

ಆಂಡಯ್ಯ ಆ ಅಚ್ಚಗನ್ನಡ ಕಬ್ಬವನ್ನು ನೆಗೞ್ಚಲು ಕೊಟ್ಟು ಓಸುಗರ ಚನ್ನಾಗಿದೆ. ಕನ್ನಡದಲ್ಲೊಂದು ಅಚ್ಚಗನ್ನಡದ ಕಬ್ಬವಿಲ್ಲ ಎಂಬ ಕೊರತೆ/ಅಪವಾದವನ್ನು ನೀಗಿಸಲು ಬರೆದನು. ಅಂದ್ರೆ ಅವನ ನುಡಿಯೊಲುಮೆ ಎನಿತ್ತ ನೋಡಿ.

ಆಂಡಯ್ಯ = ಆಂಡ + ಅಯ್ಯ. ( ಆಣ್ ?)
ಆಂಡ( ಆಂಡವ ) = ಕಾಯುವವನು. ದಿಟವಾಗಲೂ ಅವನ 'ಕಬ್ಬಿಗರ ಕಾವನ್' ಕನ್ನಡವನ್ನು ಕಾವುದು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 5:05pm — Khavi

ಉ: “ಕಬ್ಬಿಗರ ಕಾವಂ” ಆಂಡಯ್ಯ

Khavi's picture

ಮಹೇಶ
ನಂನಿ

ನೀವು ಹೇಳಿದ್ದು ಸರಿಯೇ...
ಆದರೆ ಅದು ಸಮಾಸ ಒರೆಯಂತೆ. ಅಂಡಕ್ಕೆ ಅಯ್ಯ = ವಿಶ್ವಕ್ಕೆ ತಂದೆ = ವಿಶ್ವವನ್ನು ಹುಟ್ಟಿಸಿದವನು = ಬೊಮ್ಮ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 8:35pm — ವೈಭವ

ಉ: “ಕಬ್ಬಿಗರ ಕಾವಂ” ಆಂಡಯ್ಯ

ವೈಭವ's picture

ಆಂಡ = ಆಳುವವ (ತಮಿಳಿನಲ್ಲಿ) = ಅರಸ , ಆಂಡಯ್ಯ ಆಳುವವರಿಗೆ ಅಯ್ಯ ಅಂದ್ರೆ ರಾಜರುಗಳಿಗೆ ರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 1:49am — hamsanandi

ಉ: “ಕಬ್ಬಿಗರ ಕಾವಂ” ಆಂಡಯ್ಯ

hamsanandi's picture

ಖವಿ ಅವರೆ, ಬರಹ ಚೆನ್ನಾಗಿದೆ

ವೈಭವರೆ,

ಆಂಡ-> ಆಳುವವ ಅನ್ನುವ ಪ್ರಯೋಗ ನಾನು ತಮಿಳಿನಲ್ಲಿ ಅರಿಯೆ. ನಿಮ್ಮ ಮಾತಿಗೆ ಮೂಲ ಎಲ್ಲಿಯದು?

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 12:19pm — ವೈಭವ

ಉ: “ಕಬ್ಬಿಗರ ಕಾವಂ” ಆಂಡಯ್ಯ

ವೈಭವ's picture

ಬಿ.ಎ. ರಾಮಾನುಜಯ್ಯಂಗಾರ್ಯರಿಂದ ಬರೆಯಲ್ಪಟ್ಟ "ಕಬ್ಬಿಗರ ಕಾವಂ" ಎಂಬ ಕಬ್ಬಿಗರ ಕಾವದ ಬಗೆಗಿನ ಟಿಪ್ಪಣಿಗಳೊಳಗೊಂಡ ಹೊತ್ತಗೆಯ ಪುಟ ೨೦ ರಲ್ಲಿ ಹೀಗೆ ಹೇಳಿದ್ದಾರೆ:-
"....ಆಂಡಯ್ಯ ಶಬ್ದಕ್ಕೆ ಆಂಡ+ಅಯ್ಯ(ತಮಿಳು ಬಾಶೆಯನ್ನನುಸರಿಸಿ) ಆಳಿದ ಸ್ವಾಮಿ ಎಂದರ್ಥವಾಗುತ್ತದೆ. ಈಗಲೂ ಆಂಡವನ್ ಎಂಬುದಕ್ಕೆ ತಮಿಳಿನಲ್ಲಿ ಸ್ವಾಮಿ ಎಂಬ ಅರ್ಥದಲ್ಲಿ ಪ್ರಯೋಗವಿದೆ...."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 6:44pm — Sunil Jayaprakash

ಉ: “ಕಬ್ಬಿಗರ ಕಾವಂ” ಆಂಡಯ್ಯ

Sunil Jayaprakash's picture

ವಿನಾಯಕ ಕಬ್ಬಿಗರ ಕಾವದ ಬಗ್ಗೆ ತಿಳಿಸಿಕೊಟ್ಟಿದ್ದು ತುಂಬಾ ನಲಿವೆನಿಸಿತು. "ಕಬ್ಬಿಗರ ಕಾವನ್" ಹಲವು ಕೋನಗಳಿಂದ ನನಗೆ ಇಷ್ಟವಾಯಿತು. "ಕನ್ನಡಕ್ಕೆ ತಗುಲಿದ್ದ ಅಪವಾದವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ಬರೆದ ಕಾವ್ಯ" ಎಂಬ ಅಂಶವನ್ನು ಬಿಟ್ಟು ನೋಡಿದರೂ ಇದರಲ್ಲಿದ್ದ ತುಂಬಾ ವಿಷಯಗಳು ನನ್ನನ್ನು ಸೆಳೆದಿತ್ತು.

೧. ಮೊಟ್ಟಮೊದಲು, ಈ ಕಾವ್ಯದಲ್ಲಿ ನನಗೆ ತುಂಬಾ ಇಷ್ಟವಾದದ್ದು ಇದರ ಬರುವ ಪಾತ್ರಗಳ ಹೆಸರು. ನನೆವಿಲ್ಲಬಲ್ಲಹ, ಕರ್ವುವಿಲ್ಲ ..ಹೀಗೆ. ಒಂದು ಕಡೆ, ನಾಯಕನನ್ನು (ಮನ್ಮಥನನ್ನು) "ನನ್ನಿ" ಎಂದು ಕರೆಯಲಾಗಿದೆ. ನಾನು ಈಗಾಗಲೇ "ನನ್ನಿ ಮಾವ" ಆಗಿಬಟ್ಟಿರುವುದರಿಂದ ಇದು ತುಸು ಹೆಮ್ಮೆಯ ವಿಷಯವೇ ಸರಿ Eye-wink
೩. ಮನ್ಮಥನ ಸೈನ್ಯದ ವಿವರಣೆ "ಔಟ್ ಆಫ್ ದ ಬಾಕ್ಸ್ ಥಿಂಕಿಂಕ್" ಅಂತ ಏನು ಹೇಳ್ತಾರೆ ಹಾಗಿದೆ. ಓದಿಯೇ ಅನುಭವಿಸಬೇಕು. ಇದು ಯಾವ ರಸವನ್ನು ಸ್ಫುರಿಸುತ್ತದೆ ಎಂದು ತಿಳಿದಿಲ್ಲ Sticking out tongue
೪. ಕಾವ್ಯದ ಕೊನೆಯಲ್ಲಿ ಬರುವ "ದೃಷ್ಮಿ ಪ್ರಣಯ" ಕಾವ್ಯಕ್ಕೆ ಬೇಕಾದ ಒಂದು ಹಿಡಿತವನ್ನು ನಿರೂಪಿಸುತ್ತಲೇ, ರಸಿಕರಿಗೆ ಒಳ್ಳೆಯ ಓದನ್ನು ಉಣಬಡಿಸುತ್ತದೆ.

ನಾವು ಕಬ್ಬಿಗರ ಕಾವದಿಂದ ತೆಗೆದುಕೊಳ್ಳಬಹುದಾದ ಒಂದು ಮುಖ್ಯ ಅಂಶವೆಂದರೆ, ಕನ್ನಡದ ತುಡಿತವೆಂಬುದನ್ನು ಒಂದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿಸದೆ(ನಾಟಕ, ಸಿನಿಮಾ, ಸಾಹಿತ್ಯ..) ನಾವು ಏನನ್ನು ಇಷ್ಟಪಡುತ್ತೇವೆಯೋ ಅದೆಲ್ಲದರ ಅನುಭವವನ್ನು ಕನ್ನಡದಲ್ಲಿ ಹೇಳುವಂತಾಗಬೇಕು ಎಂಬುದು. ಕಬ್ಬಿಗರ ಕಾವ, ಕನ್ನಡವನ್ನು ಕಾಪಾಡಿದ ಕಾವ್ಯ, ಆದರೆ ಅದು "ಶೃಂಗಾರ" ಮತ್ತು "ದೈವಭಕ್ತಿ"ಗಳ ಮೂಲಕ ಇದನ್ನು ಸಾಧ್ಯವಾಗಿಸಿದೆ. (ನೆನಪಿಸಿಕೊಳ್ಳಿ, ಮನ್ಮಥ ಜಿನ ಸನ್ಯಾಸಿಗಳನ್ನು ಹೊಡೆಯಲು ಹೋದಾಗ ಏನಾಗುತ್ತದೆ ಎಂಬುದನ್ನು).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 2, 2007 - 12:42pm — cmariejoseph

ಉ: “ಕಬ್ಬಿಗರ ಕಾವಂ” ಆಂಡಯ್ಯ

cmariejoseph's picture

ಸಂಸ್ಕೃತವನ್ನು ತೊರೆದು ಕನ್ನಡ ಉಳಿಯಲಾರದೆಂಬ ವಿದ್ವಾಂಸರ ಅಭಿಪ್ರಾಯವನ್ನು ಖಂಡಿಸಿ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಆಂಡಯ್ಯ ಈ ಕೃತಿಯನ್ನು ಕಟ್ಟಿದ್ದಾನೆ. ತನ್ನ ಕೃತಿಗೆ 'ಕಾವನ ಗೆಲ್ಲಂ' (ಕಾವ>ಕಾಮ=ಕಾಮದೇವ, ಕಾಮಣ್ಣ)ಎಂದು ಕರೆದನಾದರೂ ಜನರ ಬಾಯಲ್ಲಿ ಕಬ್ಬಿಗರ ಕಾವಂ (ಸಂಸ್ಕೃತದ ಸಹಾಯವಿಲ್ಲದೆ ಅಚ್ಚ ಕನ್ನಡದಲ್ಲಿ ಬರೆದು ಕವಿಗಳನ್ನು ಉಳಿಸಿದವನು) ಎಂಬುದೇ ಶಾಶ್ವತವಾಗಿ ಉಳಿಯಿತು. (ವಿದ್ವಾಂಸರು ಅದನ್ನು ಸೊಬಗಿನ ಸುಗ್ಗಿ ಎಂದರೆ ಸಂಸ್ಕೃತ ಪಂಡಿತರು ಮನ್ಮಥವಿಜಯ ಎಂದರಂತೆ).
ಎಲ್ಲ ದೇವರುಗಳ ಮುಂದೆ ಪ್ರೀತಿಪ್ರೇಮವೇ ಗೆಲ್ಲುತ್ತದೆಂಬ ಮಹದಾಶಯ ಆಂಡಯ್ಯನದು. ಆಂಡಯ್ಯನ ಈ ಆರ್ಯೇತರ ಕೃತಿಯಲ್ಲಿನ ಹೀರೋ ಕರ್ವುವಿಲ್ಲ ಪ್ರೇಮದ ಪ್ರತಿನಿಧಿ. (ಕರ್ವುವಿಲ್ಲ = ಕಬ್ಬನ್ನೇ ಬಿಲ್ಲು ಮಾಡಿಕೊಂಡವನು), ಪ್ರೇಮಪರವಾದ ಅವನ ಪರಿವಾರವೂ ದೊಡ್ಡದು. ತನ್ನ ಗುಂಪಿನವನಾದ ಚಂದ್ರನನ್ನು ಶಿವನು ಅಪಹರಿಸಿದನೆಂದು ತಿಳಿದು ಅವನನ್ನು ಬಿಡಿಸಿಕೊಳ್ಳಲು ಕರ್ವುವಿಲ್ಲ ಕಳುಹಿಸಿದ ತಂಗಾಳಿಯ ದೌತ್ಯ ವಿಫಲವಾಗುತ್ತದೆ. ಚಂದ್ರನ ಬಿಡುಗಡೆಗಾಗಿ ಹೋರಿದ ಕರ್ವುವಿಲ್ಲ ವೀರಭದ್ರನಂಥ ಭೀಷಣನನ್ನೂ ಮಣಿಸುತ್ತಾನಲ್ಲದೆ ಪರಶಿವನನ್ನೂ ಎದುರಿಸಿ ಅವನನ್ನು ಅರ್ಧ ಹೆಣ್ಣು ಅರ್ಧ ಗಂಡಾಗುವಂತೆ ಮಾಡುತ್ತಾನೆ. ಅಂದರೆ ಹೆಣ್ಣಿನ ಮನಸ್ಸನ್ನೂ ಹೆಣ್ಣಿನ ಸಮಸ್ಯೆಯನ್ನೂ ಶಿವನು ಅರಿಯುವಂತೆ ಮಾಡುತ್ತಾನೆ. ಆದರೆ ಅಗೋಚರ ಶಕ್ತಿಯಾದ ಶಿವ ತಾನು ಸತಿಯನ್ನು ಕಳೆದುಕೊಂಡು ಅನುಭವಿಸಿದ ಪರಿತಾಪವನ್ನು ಈತನೂ ಅನುಭವಿಸಲಿ ಎಂದು ರತಿಯನ್ನು ಬೇರೆ ಮಾಡಿ ಹೀರೋನ ತಲೆಕೆಡಿಸುತ್ತಾನೆ. ಅಪ್ಸರೆಯಿಂದ ತನ್ನ ಪೂರ್ವ ವೃತ್ತಾಂತವನ್ನು ಅರಿತ ಮೇಲೆ ಕರ್ವುವಿಲ್ಲ ಶಾಪವಿಮೋಚನೆ ಹೊಂದಿ ತನ್ನ ಸತಿ ಇಚ್ಚೆಗಾರ್ತಿಯನ್ನು ಕೂಡಿಕೊಳ್ಳುತ್ತಾನೆ. ಶಿವ-ಮನ್ಮಥರ ಈ ಕೃತಿಯಲ್ಲಿ ಅಳವಟ್ಟ ಸಮಕಾಲೀನ ಘಟನೆಗಳನ್ನು ಆಲೋಕಿಸಿದರೆ ಕ್ರಿಸ್ತಶಕ ಸುಮಾರು ೧೧೮೦-೧೨೧೭ರ ಅವಧಿಯಲ್ಲಿ ಆಳಿದ ಹಾನುಗಲ್ಲು ಶಾಖೆಯ ಕದಂಬ ದೊರೆ ಕಾಮದೇವನನ್ನು ಮನ್ಮಥನಿಗೆ ಹೋಲಿಸಿದಂತೆ ತೋರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 3, 2007 - 3:06pm — Khavi

ಉ: “ಕಬ್ಬಿಗರ ಕಾವಂ” ಆಂಡಯ್ಯ

Khavi's picture

ನಲವು ಜೋಸೆಫರವರೆ,

ಮುಂದುವರಿದು ಕತೆಯನ್ನು ಹೇಳಬೇಕೆಂದಿದ್ದೆ. ಅಷ್ಟರಲ್ಲಿ ನೀವೇ ಹೇಳಿದಿರಿ. ನಂನಿ

Quote:
ಶಿವ-ಮನ್ಮಥರ ಈ ಕೃತಿಯಲ್ಲಿ ಅಳವಟ್ಟ ಸಮಕಾಲೀನ ಘಟನೆಗಳನ್ನು ಆಲೋಕಿಸಿದರೆ ಕ್ರಿಸ್ತಶಕ ಸುಮಾರು ೧೧೮೦-೧೨೧೭ರ ಅವಧಿಯಲ್ಲಿ ಆಳಿದ ಹಾನುಗಲ್ಲು ಶಾಖೆಯ ಕದಂಬ ದೊರೆ ಕಾಮದೇವನನ್ನು ಮನ್ಮಥನಿಗೆ ಹೋಲಿಸಿದಂತೆ ತೋರುತ್ತದೆ.

ಇದು ನನಗೆ ಗೊತ್ತಿರಲಿಲ್ಲ. ತಿಳಿಸಿದಕ್ಕೆ ತುಂಬ ನೆರವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂಥರಾ ಪ್ರೀತಿ...
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
  • ಕುಂಟನಿ ಎಂಬ ವಿಸ್ಮಯ
  • "ಪ್ರೀತಿಸಿದ ಹುಡುಗಿ"
  • ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು
Syndicate content

ಲೇಖಕರು

Khavi's picture

ಪೂರ್ಣ ಹೆಸರು
ವಿನಾಯಕ ಖವಾಸಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಯಾರ ಮುಡಿಗೆ ಸೌಂದರ್ಯ ಕಿರೀಟ...
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!
  • ‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!
  • ‘ಸಂತೆ’ ಎಂಬ ವ್ಯಾವಹಾರಿಕ ಚೌಕಾಶಿಯ ‘ನಾಟಕ’!

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator