ಬದಲಾಗುತ್ತಿರುವ ಸಂಸತ್ತಿನ ನಡವಳಿಕೆಗಳು
ಭಾರತದ ಸ್ವಾತಂತ್ರ್ಯಾನಂತರದ ಈ ಅರವತ್ತು ವರ್ಷಗಳಲ್ಲಿ , ಸಕಲ ಕ್ಷೇತ್ರಗಳಲ್ಲೂ ಆಗುತ್ತಿರುವ, ಆಗಿರುವ ಬದಲಾವಣೆಗಳು ಅಲೋಚಿಸುವ ಮನಸ್ಸುಗಳನ್ನು , ದಂಗುಬಡಿಸುವ ರೀತಿಯಲ್ಲಿ ಜರುಗಿವೆ .
ಕಳೆದ ಆರು ದಶಕಗಳಲ್ಲಿ ,ಪ್ರಾಕೃತಿಕವಾದ ಈ ಸಮೃದ್ದ ಭೂಮಿಯ , ಸಸ್ಯ ಸಂಪತ್ತು, ಖನಿಜ ಸಂಪತ್ತು,ಜೈವಿಕ ವೈವಿಢ್ಯದ ಅಪಾರ ತಳಿಗಳು ಮುಂತಾದ ಮೂಲ ಆಕರಗಳನ್ನು ಶರವೇಗದಿಂದ ನಾಶಾಪಡಿಸುತ್ತಿದ್ದೇವೆ .
ಇನ್ನು ಮನುಷ್ಯನ ಮನಸ್ಸಿನ ಸ್ಠಿತಿಗತಿಗಳಿಗೆ ಬಂದರೆ , ಎಲ್ಲ ವಿಧವಾದ ಮೌಲ್ಯಗಳು, ನೈತಿಕ ನಡವಳಿಕೆಗಳು, ಮಾನವ ಸಂಬಂಧಗಳು ನಿರ್ನಾಮವಾಗಿ ಹೋಗುತ್ತಿವೆ .
ಈ ರೀತಿಯ ದುಷ್ಟ ಬದಲಾವಣೆಗಳಿಗೆ ಪ್ರೇರಕವೂ, ಪೂರಕವೂ ಆಗಿರುವ ರಾಜಕೀಯ ಸ್ಠಿತ್ಯಂತರಗಳ ಬಗ್ಗೆ , ಗಮನ ಹರಿಸಿದರೆ ಅತ್ಯಂತ ನಿರಾಶಾದಾಯಕ ವಾತಾವರಣ ಎದುರಾಗುತ್ತದೆ .
ಐವತ್ತು, ಅರವತ್ತರ ದಶಕಗಳಲ್ಲಿ , ಕೇಂದ್ರದ ಲೋಕಸಭೆ, ರಾಜ್ಯಗಳ ವಿಧಾನಸಭೆಗಳ ಕಲಾಪಗಳನ್ನು ಗಮನಿಸಿದವರಿಗೆ , ಇಂದಿನ ಸ್ಠಿತಿ ವಿಷಾದ ಮೂಡೀಸುತ್ತದೆ.
ಭಾರತೀಯ ಪ್ರಜಾಸತ್ತೆ ನಿಂತಿರುವುದೇ ಆಡಳಿತ ಪಕ್ಷ ಮತ್ತು ಅದಕ್ಕೆ ನಿಯಂತ್ರಕ ರೀತಿಯಲ್ಲಿ ವಿರೋಧ ಪಕ್ಷಗಳ ಸಂಯುಕ್ತ ಪದ್ದತಿಗಳ ಆಧಾರದ ಮೇಲೆ ಎರಡಕ್ಕೂ ಅಪಾರ ಜವಾಬ್ದಾರಿ ಸಾಂವಿಧಾನಿಕ ಕರ್ತವ್ಯಗಳೀದ್ದೇ ಇವೆ.
ಅಂದು ರಾಮಮನೋಹರ ಲೋಹಿಯಾ, ಮಹಾವೀರತ್ಯಾಗಿ, ಅಟಲ್ ಬಿಹಾರಿ ವಾಜಪೇಯಿ, ನೆಹರೂ, ಜಯಪ್ರಕಾಶನಾರಾಯಣ , ಮೊರಾರ್ಜಿದೇಸಾಯಿ ಮುಂತಾದ ಸಂಸದೀಯ ಪಟುಗಳು ಕಾರ್ಯ ನಿರ್ವಹಿಸುತ್ತಿದ್ದ ರೀತಿ ; ಸಂಸತ್ತಿನಲ್ಲಿ ಮಂಡಿಸುತ್ತಿದ್ದ ವಿಷಯಗಳು , ಅಧ್ಯಯನ ಯೋಗ್ಯವಾಗಿರುತ್ತಿದ್ದವು . ವಿರೋಧಪಕ್ಷಗಳ ನಾಯಕರುಗಳ ಮಾತನ್ನು ಆಡಳಿತ ಪಕ್ಷ ಗಂಭೀರವಾಗಿ ,ಸಹನೆಯಿಂದ ಆಲಿಸುತ್ತಿತ್ತು. ಆಡಳಿತ ಪಕ್ಷದವರ ಉತ್ತರಗಳನ್ನು ಸಹ ವಿರೋಧಪಕ್ಷಗಳು ಪೂರ್ವಾಗ್ರಹವಿಲ್ಲದೆ, ವಿಮರ್ಶಾತ್ಮಕವಾಗಿ ಸ್ವೀಕರಿಸುತ್ತಿದ್ದವ . ಆದರೆ ಇಂದು ವಿರೋಧದ ಜಾಗದಲ್ಲಿ ಪರಸ್ಪರ ದ್ವೇಷ, ಅಸಹನೆ ,ಮನೆ ಮಾಡಿದೆ .
ಸಂಸತ್ತಿನಲ್ಲಿ ವಿಷಯತಜ್ಝ ಸದಸ್ಯರ ಕೊರತೆಯಿಂದಾಗಿ; ಕ್ರಿಮನಲ್ ಹಿನ್ನೆಲೆಯ ಸದಸ್ಯರಿಂದಾಗಿ , ತೋಳ್ಬಲದ, ಪ್ರತಿಗಾಮಿ ನಡವಳಿಕೆಯ,ಅಥವಾ ವಿವೇಚನಾ ಹೀನ ನಾಯಕನಿಷ್ತೆಯ, ಹೌದಪ್ಪಗಳ ಸಂತೆಯಾಗಿ ಘನತೆವೆತ್ತ ಸಂಸತ್ತು ಪರಿವರ್ತನೆಗೊಳ್ಳುತ್ತಿರುವುದು ಗಾಬರಿಗೊಳಿಸುವ ವಿದ್ಯಮಾನವಾಗಿದೆ.
ಕಳೆದ ಸಂಸತ್ತಿನಲ್ಲಿ ಜಾರ್ಜ್ ಫರ್ನಾಂಡಿಸ್ ರ ವಿರುದ್ದವಾಗಿ ಲೋಕಸಭೆಯ ಕಲಾಪಗಳನ್ನು ವರ್ಷಾನುಗಟ್ಟಲೆ ಬಹಿಷ್ಕರಿಸಿ ಕೆಟ್ಟ ಸಂಪ್ರದಾಯವನ್ನು ಹಾಕಿದ ಪರಿಣಾಮವಾಗಿ; ಅದರ ವಿಷವೃಕ್ಷದ ಮೊಳೆತ ಬೀಜದ ಅಗಾಧ ಬೆಳವಣಿಗೆ ಎನ್ನುವಂತೆ ಇಂದಿನ ಅಢಿವೇಶನಗಳು ನಿರಂತರ ಬೇಜವಾಬ್ದಾರಿ , ಅಸಾಂವಿಧನಿಕ ನಡವಳಿಕೆಗಳಿಂದಾಗಿ ಗೊಂದಲದ ಗೂಡಾಗಿ, ಸಂಸದೀಯ ಪ್ರಜಾತಂತ್ರದ ತತ್ವಗಳನ್ನೇ ಅಪನಂಬಿಕೆಯಿಂದ ನೋಡುವ ಸ್ಠಿತಿ ನಿರ್ಮಾಣವಗಿದೆ .
ಭಾರತೀಯ ಜನತಂತ್ರದಲ್ಲಿ ಮಂತ್ರಿಮಂಡಲ ಪ್ರಮಾಣವಚನವನ್ನು ಸ್ವೀಕರಿಸುವುದು - ’ಯಾವುದೇ ರೀತಿಯ ಅನುರಾಗ ,ಕ್ರೋಧ, ಭಯ, ಪಕ್ಷಪಾತಗಳಿಲ್ಲದೆ,ಭಾರತದ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ ಎಂಬ ಶಪಠದ ಮೂಲಕ. ಆದರೆ ದೇಶದ ನಾಯಕರು ದೇಶಕ್ಕೆ ಕೊಡುವ ಈ ವಚನವನ್ನು ಕೊಟ್ಟ ದಿವಸವೇ ಮರೆತುಬಿಡುತ್ತಾರೆ .
ಕಾಗ್ರೆಸ್ಸಿನ ಮಂತ್ರಿಗಳು ಮೊದಲು ಕಾಂಗ್ರೆಸ್ ಕಾರ್ಯಕರ್ತರು ನಂತರ ಮಂತ್ರಿಗಳು;ಬಿಜೆಪಿಯವರು ಮೊದಲು ಸಂಘಪರಿವಾರದ ಕಾರ್ಯಕರ್ತರು , ನಂತರ ಮಂತ್ರಿಗಳು; ಕಮ್ಯೂನಿಷ್ತರು ಮೊದಲು ಆ ಪಕ್ಷದ ಕಾರ್ಯಕರ್ತರು. ನಂತರದ ಮಂತ್ರಿಗಳು .ಈ ವಿಕೃತ ಮನೋಭಾವವೇ ದೆಹಲಿಯ ಸಿಕ್ಕರ ಮಾರಣಹೋಮ. ಗುಜರಾತಿನ ಮುಗ್ಢರ ಕಗ್ಗೊಲೆ. ನಂದಿಗ್ರಾಮದ ದಾರುಣ ಹತ್ಯೆಗಳು ಇಂತಹ ಘಟನೆಗಳ ಮೂಲ ಬೀಜಗಳು .
ಅಧಿಕಾರಕ್ಕೆ ಬಂದ ಕೂಡಲೇ ನಾಯಕನಾದವನು ಯಾವ ಪಕ್ಷದ ನಿಷ್ಟನೂ ಆಗಿರದೆ ; ದೇಶನಿಷ್ಟನೂ.ಪ್ರಜಾನಿಷ್ಟನೂ,ಸಂವಿಧಾನ ನಿಷ್ಟನೂ ಆಗುವುದೇ ಅವರು ಕಲಿಯಬೇಕಾದ ಮೊದಲ ಪಾಠ.
ಇಂದಿನ ಜನ ನಾಯಕರ ಸ್ವಜನ ಪಕ್ಷಪಾತ, ಸ್ವಾರ್ಠ ರಾಜಕೀಯ, ಅಧಿಕಾರದ ಅಸಹ್ಯ ಆಕಾಂಕ್ಷೆ ಗಳೇ ಈ ನಾಡಿನ ಸಂಪನ್ಮೂಲಗಳ ನಾಶಕ್ಕೆ, ಪರಿಸರ ನಾಶಕ್ಕೆ, ಜನರ ದುರಂತಕ್ಕೆ ಮುಖ್ಹ್ಯ ಕಾರಣಗಳು .ಭಾರತೀಯರು ಎಚ್ಚರಗೊಳ್ಳದಿದ್ದರೆ ಇಲ್ಲಿನ ಕೆಟ್ಟ ರಾಜಕಾರಣದಿಂದಾಗಿ ಅನಿಷ್ತ ಪರಂಪರೆಗಳು ಎದುರಾಗುತ್ತವೆ.

- Login or register to post comments
- 280 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: