ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕಾರಂತರ ಜೀವಂತ ಪಾತ್ರಗಳು ೨ (ಮುಂದುವರಿದುದು)

December 2, 2007 - 8:26am — csomsekraiah

( ’ಸಂಕಲನ’ ದ ೩೬ನೇ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )
ಕಾರಂತರ ನಿಸರ್ಗ ಪ್ರೀತಿಯ ಪರಾಕಾಷ್ಟೆಯೇ ; ನಿಸರ್ಗದ ನೇರ ಅಭಿವ್ಯಕ್ತಿಯಾದ ಸ್ತ್ರೀಕುಲದಮೇಲಣ ಅಭಿಮಾನದ ಪರಾಕಾಷ್ಟೆ .ನಿಸರ್ಗವನ್ನು ತಾವು ಆರಾಧಿಸುವೊಷ್ಟೇ ತನ್ಮಯತೆಯಿಂದ , ಹೆಣ್ಣು ಜೀವಗಳನ್ನೂ ಅವರು ಗೌರವಿಸುತ್ತಾರೆ .ದೇವರು ಎಲ್ಲ ಕಡೆ ತಾನಿರಲು ಸಾಧ್ಯವಾಗದುದಕ್ಕಾಗಿಯೇ ಮಾತೆಯರನ್ನು ಸೃಷ್ಟಿಸಿದ , ಎಂಬ ಉಕ್ತಿಯನ್ನು ಸಮರ್ಥಿಸುವ ಶೈಲಿಯಲ್ಲಿಯೇ ಕಾರಂತರು ಹೆಣ್ಣನ್ನು ಅಭಿಮಾನದಿಂದ ಚಿತ್ರಿಸುತ್ತಾರೆ . ಅವರು ಕಟೆದು ನಿಲ್ಲಿಸಿದ ಅನೇಕ ಸ್ತ್ರೀ ಜೀವಗಳು , ಅವರು ಮಕ್ಕಳಿಂದ ಮುದುಕಿಯರವರೆಗೆ ; ಸಾಮಾನ್ಯರಿಂದ ವಿಶೇಷ ಮನಸ್ಸಿನವರ ವರೆಗೆ , ಕುಟುಂಬಕ್ಕಾಗಿ , ಸಮಾಜಕ್ಕಾಗಿ ಜೀವ ತೇದವರು . ಓದುಗನಲ್ಲಿ ವಿಚಾರವನ್ನು ಪ್ರಚೋದಿಸುತ್ತಲೇ ಹೋಗುವವರು . ಹಾಗೆಂದು ಹೆಣ್ಣು ಮಕ್ಕಳನ್ನು ಅವರು ಅತಿಮಾನುಷವಾಗಿಯೇನೂ ಚಿತ್ರಿಸುವುದಿಲ್ಲ . ಈ ಭೂಮಿಯ ಮೇಲಣ ರಕ್ತ ಮಾಂಸಗಳಿಂದ ಕೂಡಿದ , ಎಲ್ಲ ಜೀವಿಗಳ ರೀತಿಯಲ್ಲಿಯೇ ಹೆಣ್ಣಿನ ಚಿತ್ರಣವೂ ಬರುತ್ತದಾದರೂ , ಪುರುಷರು ಕಟ್ಟಿರುವ ಸಮಾಜದ ನೆಲೆಯಲ್ಲಿ , ಹೆಣ್ಣಿನ ಸ್ಥಾನ , ಆಕೆಯ ದರ್ಜೆ ಇವೆಲ್ಲಾ ಕಾರಂತರ ಪರಿಶೀಲನೆಗೆ ಒಳಪಡುವ ವಿಷಯಗಳು . ಈ ಲೋಕದ ಸಹ ಮಾನವಿಯರಾಗಿ , ಹೆಣ್ಣಿನ ದೌರ್ಬಲ್ಯಗಳನ್ನು ತೋರಿಸುವುದರಲ್ಲಿ ಸಹ ಕಾರಂತರು ಹಿಂದೆ ಬೀಳುವುದಿಲ್ಲವಾದರೂ (’ ಹೆತ್ತಳಾ ತಾಯಿ’ಯ ಕುಸುಮೆ , ’ಬತ್ತದ ತೊರೆ’ ಯ ಅಂಜಲಿ , ’ಅಳಿದ ಮೇಲೆ ’ ಯ ಕಮಲಮ್ಮ , ’ಇದ್ದರೂ ಚಿಂತೆ’ ಯ ಸಾವಿತ್ರಮ್ಮ ) ಪುರುಷ ಪ್ರಪಂಚದ ಬೇಜವಾಬ್ದಾರಿಯ ಎದುರಿನಲ್ಲಿ , ಮಹಿಳೆಯ ಓರೆ ಕೋರೆಗಳು ಸಹನೀಯವೆನಿಸುತ್ತವೆ . ಮತ್ತು ಅನೇಕ ಬಾರಿ ಪರಿಸ್ಥಿತಿಯ ಶಿಶುಗಳಾಗಿ ಅಥವಾ ಸ್ವಾರ್ಥಿಗಳ ಕೈಯ್ಯ ಕೈದುವಾಗಿ , ಅವರು ಬಳಸಲ್ಪಡುತ್ತಾರೆ ಎನ್ನುವುದನ್ನು ಕಾರಂತರು ನೆನಪಿಸುತ್ತಾರೆ .

ಯಾವ ಯಾವುದೋ ಕಾರಣಕ್ಕೆ ಅಥವಾ ಸ್ವಾರ್ಥಿಗಳ ಕೈ ಮೇಲಾದ ಸಂದರ್ಭಗಳಲ್ಲಿ , ಈ ಪ್ರಪಂಚದ ಕೆಲವು ಮುಗ್ಧ ಸಮಾಜಗಳ ಮೇಲೆ ಬುದ್ದಿವಂತ ಸಮಾಜಗಳು , ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಹೇರಿ , ಅವರನ್ನು ಗುಲಾಮಗಿರಿಗೆ ದೂಡಿರುವುದೂ ; ಅಮಾನವೀಯವಾಗಿ ಶೋಷಣೆಗೆ ಒಳಪಡಿಸಿರುವುದೂ , ಜಗತ್ತಿನ ವಿದ್ಯಮಾನಗಳಲ್ಲಿ ನಡೆದಿರುವಂಥದೇ . ಅದರಲ್ಲೂ ಹೆಣ್ಣು ಕುಲದ ಶೋಷಣೆಗೆ ಕೊನೆ ಮೊದಲಿಲ್ಲ . ಅವರು ಬಲಾಢ್ಯ ಸಮಾಜದ ರಕ್ಷಣೆಯಲ್ಲಿರಲಿ ಅಥವಾ ಆ ಸಮಾಜದ ಭೋಗ ಲಾಲಸೆಗೆ ಈಡಾಗಿರಲಿ , ಅವರದೇ ಆದ ದನಿ ಎಂಬುದನ್ನು ಈ ಸಮಾಜ ಯಾವ ಕಾಲಕ್ಕೂ ಸರಿಯಾಗಿ ಆಲಿಸಿದ್ದೇ ಇಲ್ಲ . ಪುರುಷ ಸಮಾಜ ನಯ ವಂಚನೆಯಿಂದ , ಹೆಣ್ಣು ಕುಲವನ್ನು ಶೋಷಿಸುವುದರಲ್ಲಿ ನಿಸ್ಸೀಮವಾದುದು . ಸಮಾಜದ ಕಟ್ಟು ಕಟ್ಟಳೆಗಳ ಹೆಸರಿನಲ್ಲಿ ದೇವ ದಾಸಿಯರನ್ನಾಗಿಸುವುದು ಅಥವಾ ವೇಶ್ಯೆಯರದೇ ಒಂದು ಕುಲವನ್ನು ನಿರ್ಮಿಸಿ , ಆ ಪಂಜರದಿಂದ ಹೊರ ಬರುವ ದಾರಿಗಳನ್ನೇ ಭದ್ರವಾಗಿ ಮುಚ್ಚಿಬಿಡೂವುದು . ಅಸಹಾಯಕ ಸ್ಥಿತಿಗೆ ಸಿಲುಕಿದ ಮುಗ್ಧೆಯರ ಬಾಳನ್ನು, ಮತ್ತೆಂದೂ ತಲೆ ಎತ್ತದಂತೆ ಹೊಸಕಿ ಹಾಕುವುದು . ಇತ್ಯಾದಿ ರಾಕ್ಷಸ ಮಾರ್ಗಗಳನ್ನು ಯಜಮಾನ ಸಂಸ್ಕೃತಿಯ ಸಮಾಜ , ಸಾಮಾಜಿಕ ಕಟ್ಟಳೆಗಳೆಂಬಂತೆ ಜಾರಿಗೆ ತಂದುದು ಇತಿಹಾಸ .

ಈ ದೃಷ್ಟಿಯಿಂದ ’ಬತ್ತದ ತೊರೆ’ ಪರಿಶೀಲನಾರ್ಹವಾದ ಕಾದಂಬರಿ.ಗುಲಾಮಗಿರಿಗೆ ದೂಡಿದವರು ಹಾಯಾಗಿರಬಹುದು , ಆದರೆ ದೂಡಿಸಿಕೊಂಡವರ ಪರಿಸ್ಥಿತಿ ಎಷ್ಟೊಂದು ಕಳವಳಕಾರಿ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲು ಈ ಸಮಾಜ ವಿಫಲವಾಗುತ್ತದೆ . ಅದನ್ನು ನ್ತೋರಿಸಲು ಮಾತ್ರ ಮಾನವೀಯ ಗುಣದ ಮಹಾನುಭಾವರೇ ಬರಬೇಕು .

ಕಾರಂತರ ಅನೇಕ ಕಾದಂಬರಿಗಳು ವೇಶ್ಯೆಯರ ಕುಲದಲ್ಲಿ ಹುಟ್ಟಿ , ಆ ಬಾಳಿಗೆ ಹೇಸಿ ,ಹೊರ ಬರಲು ಪ್ರಯತ್ನಿಸುವ ಅಸಹಾಯಕ ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ಚಿತ್ರಿಸಲೆಂದೇ ಮೀಸಲಾಗಿವೆ . ಕಾರಂತರು ಮನಃಪೂರ್ವಕವಾಗಿ ತೊಡಗಿಕೊಂಡ ಕ್ಷೇತ್ರಗಳಲ್ಲಿ ಇದು ಮುಖ್ಯವಾದುದು . ’ ಮೈಮನಗಳ ಸುಳಿಯಲ್ಲಿ’ ’ಬತ್ತದ ತೊರೆ’ ’ ಉಕ್ಕಿದನೊರೆ’ ಇವಲ್ಲದೆ ಬೇರೆ ಬೇರೆ ಕಾದಂಬರಿಗಳಲ್ಲಿಯೂ ಈ ವಿಷಯದ ಮೇಲೆ ಕಾರಂತರು ಬೆಳಕು ಚೆಲ್ಲುತ್ತಾರಾದರೂ , ಆ ರೀತಿಯ ಸಾಮಾಜಿಕ ಪಂಜರಗಳಿಂದ ಹೊರ ಬರಲು ತುಡಿಯುತ್ತಿರುವ ಜೀವಗಳ ಕಳವಳಕಾರಿ ಮನಃಸ್ಥಿತಿಗಳನ್ನು, ಈ ಮೂರೂ ಕಾದಂಬರಿಗಳಲ್ಲಿ ಅತ್ಯಂತ ಮನೋಜ್ಝವಾಗಿ ಅವರು ಪ್ರತಿ ಬಿಂಬಿಸುತ್ತಾರೆ .ಆಢ್ಯ ಸಮಾಜದ ಉಕ್ಕಿನ ಪಂಜರಗಳಲ್ಲಿ , ನತದೃಷ್ಟರಾಗಿ ಬಂದಿಗಳಾಗಿರುವ ಈ ಜೀವಗಳು , ಅಸೀಮ ಸಾಹಸದಿಂದ ಅವುಗಳಿಂದ ಹೊರ ಬಿದ್ದರೆ ,ಈ ನಾಗರಿಕ ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿ ಮಾತ್ರ ಅತ್ಯಂತ ಅಮಾನವೀಯವಾದುದು ; ಅನಾಗರಿಕತೆಯಿಂದ ಕೂಡಿದುದು .

’ ಉಕ್ಕಿದ ನೊರೆ’ ಯ ಗುಲಾಬಿಯಂತಹವರಿಗೆ ಸಾಮಾಜಿಕ ಅಭದ್ರತೆಯ ಭಯ ಕಾಡಿದರೂ , ಒಂದು ರೀತಿಯ ಮುಗ್ಧ ಮನೋಭಾವದ , ಆದರೆ ತನ್ನರಿವಿಗೇ ಬಾರದ ರೀತಿಯಲ್ಲಿ ಮನೋ ಧೃಢತೆಯನ್ನು ಹೊಂದಿರುವ , ಶರಭಯ್ಯನಂತಹವರು ಆಸರೆಗೆ ಒದಗಬಹುದಾದರೂ ಎಲ್ಲರಿಗೂ ಅಂತಹ ಅದೃಷ್ಟ ದೊರೆಯಲಾರದೆಂಬುದನ್ನು ’ ಬತ್ತದ ತೊರೆ’ ಯ ವಿನತೆಯ ಮೂಲಕ ಕಾರಂತರು ತೋರಿಸಿ ಕೊಡುತ್ತಾರೆ . ವಿನತೆ ವೇಶ್ಯೆಯರ ಕುಲದ ಹೆಣ್ಣು ಮಗಳಾದರೂ ,ಆ ರೀತಿಯ ಜೀವನಕ್ಕೆ ಪ್ರಚೋದಿಸುವ ವಾತಾವರಣಕ್ಕೆ ಹೇಸಿ ಮನೆಯನ್ನೇ ತೊರೆಯುತ್ತಾಳೆ. ಆದರೆ ಅವಳ ಅಂತರಂಗವನ್ನು ಗ್ರಹಿಸಲಾರದ ಅಪಾತ್ರ ಗಂಡಿನ ಕೈಗೆ ಸಿಕ್ಕಿ ಒದ್ದಾಡುವ ನತದೃಷ್ಟೆಯಾಗುತ್ತಾಳೆ . ಅವಳ ಮಾನಸಿಕ ಸಂಸ್ಕಾರಕ್ಕೆ ಒಂದಿಷ್ಟೂ ಹೊಂದಿಕೆಯಾಗದ ,ಅವಳ ಇಡೀ ಜೀವನವನ್ನು ತನ್ನ ಮೂರ್ಖತನದಿಂದಾಗಿ , ದುರಂತದ ಕೊನೆ ಇಲ್ಲದ ಪ್ರಪಾತಕ್ಕೆ ದೂಡಿ , ತಾನೂ ನಾಶವಾಗುವ , ಶ್ರೀಧರಗಾಂವ್ ಕರನದು , ಗಂಡಿನ ಅಹಂಕಾರ ಎಷ್ಟೊಂದು ವಿನಾಶಕಾರಿ ಎನ್ನುವುದಕ್ಕೆ ಪುರಾವೆಯನ್ನೊದಗಿಸುವ ಪಾತ್ರ .

ಸೌಶೀಲ್ಯವೆನ್ನುವುದು ಯಾವ ಕುಲದ ಸ್ವತ್ತೂ ಅಲ್ಲವೆನ್ನುವುದನ್ನು, ಅದು ಕೇವಲ ಒಂದು ಸ್ವಭಾವ ; ಒಂದು ಮನಃಸ್ಥಿತಿ ಎನ್ನುವುದನ್ನು,ವಿನತೆಯು ತನ್ನ ಸ್ವಭಾವದ ಮೂಲಕ ಸಾರಿ ಸಾರಿ ಹೇಳುತ್ತಾಳೆ. ಅದನ್ನೇ ಸಾಮಾಜಿಕ ಸಭ್ಯ ಕುಟುಂಬಗಳಿಂದ ಬಂದ , ಮಂಜುಳ ಮತ್ತು ಅಂಜಲಿಯರು ,ತಮಗೊದಗಿದ ಸನ್ನಿವೇಶಗಳಲ್ಲಿ ನಡೆದುಕೊಳ್ಳುವ ವಿಭಿನ್ನ ರೀತಿಗಳು , ಪರಿಣಾಮಕಾರಿಯಾಗಿ ಸಮರ್ಥಿಸುತ್ತವೆ .

’ಬತ್ತದ ತೊರೆ’ ಅನೇಕ ಕಾರಣಗಳಿಗಾಗಿ ಗಮನಾರ್ಹವಾದುದು . ಇಲ್ಲಿನ ವಿಷಯ ಹೆಣ್ಣು,ಗಂಡುಗಳ ನಡುವಣ ಪ್ರೇಮ, ಕಾಮ,ಆಸೆ, ನಿರಾಸೆ, ಸಾಧನೆ, ಸೋಲು ಇವುಗಳನ್ನು ಪ್ರಧಾನವಾಗಿ ಚಿತ್ರಿಸುತ್ತಾ ,ಇಡೀ ಮನುಷ್ಯ ಕುಲ,ತನ್ನ ಅಜ್ಝಾನ ಅಹಂನಿಂದಾಗಿ , ಅಥವಾ ತನಗರಿವಿಲ್ಲದೆಯೇ, ಸನ್ನಿವೇಶದ ದಾಳವಾಗಿ, ಅಂತೂ ದುರಂತದತ್ತಲೇ ನಡೆಯುವ ಅಸಹಾಯಕತೆಯನ್ನು ಚಿತ್ರಿಸುತ್ತದೆ . ಇಲ್ಲಿ ಮರುಗುವುದು ಯಾರಿಗಾಗಿ? ಹೊಸ ಹೊಸ ಅನುಭವಗಳಿಗೆ , ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ,ಯಾವುದನ್ನೂ , ಕೊನೆಗೆ ಬಾಳನ್ನೂ ಸಹ , ಗಂಭೀರವಾಗಿ ಸ್ವೀಕರಿಸದ ಮನೋಹರ, ತನ್ನನ್ನು ನಂಬಿದವರನ್ನು ಮೋಸಗೊಳಿಸುತ್ತಾ ; ತಾನೂ ಮೋಸ ಹೋಗುತ್ತಾ ,ತನ್ನನ್ನೇ ಆಶಾ ಕಿರಣವೆಂದು ನಂಬಿದ ತನ್ನ ಮನೆಯವರನ್ನೂ ಅಲಕ್ಷಿಸಿ ,ಮಂಜುಳೆಯಂತಹ ಅಮಾಯಕ ಹುಡುಗಿಯನ್ನು ನಂಬಿಸಿ, ನಡು ನೀರಲ್ಲಿ ಕೈ ಬಿಟ್ಟು ; ತಾನೂ ಸಹ ಅಂಥದೇ ಸುಳಿಗಳಿಗೆ ಸಿಲುಕಿ ಒದ್ದಾಡಿ,ಅಂತಿಮವಾಗಿ ಬದುಕನ್ನು ಗಂಭೀರವಾಗಿ ಪರಿಗಣಿಸದ ಕಾರಣಕ್ಕಾಗಿಯೇ, ದುರಂತದ ಸಾವನ್ನು ಕಾಣುವುದನ್ನು ಕಂಡಾಗ , ಮನುಷ್ಯ ಕುಲದ ,ಶಾಪಗ್ರಸ್ಠ ಸ್ಠಿತಿಯ ಪರಿಣಾಮಕಾರಿ ಚಿತ್ರವನ್ನೇ ಅಲ್ಲಿ ಕಾಣುತ್ತೇವೆ .ಮಂಜುಳೆ, ವಿನತೆಯರ ಆಕಸ್ಮಿಕ ಪುನರ್ಮಿಲನ ,ಅಷ್ಟು ಹೊತ್ತಿಗೆ ಆ ಜೀವಗಳಲ್ಲಿ ಮೂಡಿದ ಪಕ್ವತೆ,ಇವಿಷ್ಟೇ ಮನುಷ್ಯಕುಲದ ಪುಣ್ಯ ಎನ್ನುವುದನ್ನು ಕಾರಂತರು ಪರಿಣಾಮಕಾರಿಯಾಗಿ ಬಿಂಬಿಸುತ್ತಾರೆ .

ಕಾದಂಬರಿಯ ಉದ್ದಕ್ಕೂ ವಿನತೆಯ ಪಾತ್ರ ಜೀವದುಂಬಿಯೇ ಓಡಾಡುತ್ತದೆ . ಅದೊಂದು ಜೀವಂತ ಪಾತ್ರ ; ಹಾಗೆಯೇ ಮಂಜುಳೆಯದೂ ಸಹ . ಮಂಜುಳೆ ಪುರುಷ ಸಮಾಜದಿಂದ ಮೋಸ ಹೋಗುತ್ತಲೇ ,ಪರಿಪಕ್ವಗೊಳ್ಳೂವ ಜೀವ .ಜೀವನದ ಅನುಭವಗಳಿಂದ ಹಣ್ಣಾದ ಮಂಜುಳೆಯ ಮನಸ್ಸು , ತಾನು ಕಷ್ಟ ಅನುಭವಿಸುವಂತೆ ಮಾಡಿದವರನ್ನೂ ಕ್ಷಮಿಸುವಂಥ ಕ್ಷಮಾಶೀಲೆ . ತನ್ನ ಬಾಳನ್ನೇ ದಿಕ್ಕುಗಾಣದಂತೆ ಪಥಭ್ರಷ್ಟಗೊಳಿಸಿದ ಮನೋಹರನ ಕೊನೆಯ ಕ್ಷಣಗಳಲ್ಲಿ , ಅವನಿಗಾಗಿ ಕಣ್ಣೀರು ಸುರಿಸುವ ರೀತಿ , ಸ್ತ್ರೀ ಎನ್ನುವುದು ಎಂತಹ ಮಹಾನುಭಾವವಾದ ಜೀವ , ಎನ್ನುವುದರ ಪ್ರತ್ಯಕ್ಷ ಉದಾಹರಣೆ . ಕಾರಂತರು ಇಂಥಲ್ಲಿಯೇ ಹೆಣ್ಣಿನ ಉದಾತ್ತತೆಗೆ ಒಂದು ಗೌರವದ ಸ್ಥಾನವನ್ನು ಕಲ್ಪಿಸುತ್ತಾರೆ .ವಿನತೆಯ ಬಾಳನ್ನು ದಿಕ್ಕುಗೆಡಿಸಿದ ವಿಚಾರಗಳಲ್ಲಿ ,ತನ್ನ ಪಾತ್ರವೂ ಇತ್ತೇನೋ? ಎನ್ನುವ ಆತಂಕದಲ್ಲಿ ಒದ್ದಾಡುತ್ತಿದ್ದ ಮಂಜುಳೆ, ಅನಿರೀಕ್ಷಿತವಾಗಿ- ತಾನಾರೆಂಬುದೂ ಸಹ ತಿಳಿಯದೆ ತನ್ನಾಶ್ರಯಕ್ಕೆ ಬರುವ ವಿನತೆಯನ್ನು,ತನ್ನೆಲ್ಲಾ ತಪ್ಪುಗಳೂ ಸಹ ಕರಗಿ ಆವಿಯಾಗುವಷ್ಟು, ಅಪ್ಪಿ ಕಣ್ಣೀರು ಸುರಿಸುತ್ತಾಳೆ .ಈ ಇಬ್ಬರು ಗೆಳತಿಯರ ಕಣ್ಣೀರು , ಅವರನ್ನು ವಂಚಿಸಿದ, ಎಲ್ಲರ ತಪ್ಪುಗಳನ್ನೆಲ್ಲಾ ತೊಳೆಯುವಷ್ಟು ಭಾವ ಶುದ್ದಿಯುಳ್ಳದ್ದು .ಇಂಥಲ್ಲಿ ಕಾರಂತರ ಮಾಂತ್ರಿಕ ಲೇಖನಿಯು , ಮಾನವೀಯತೆ ಎಂಬುದು ಎಂದೂ ಬತ್ತದ ,ಬರಿದಾಗದ; ಪಕ್ವತೆಯಲ್ಲಿ ಪರಿಶುದ್ದಿ ಹೊಂದಬಲ್ಲ , ಒಂದು ಆಶಾಕಿರಣವೆಂಬುದನ್ನು ಮನಗಾಣಿಸುವಲ್ಲಿ ಸಫಲವಾಗುತ್ತದೆ .

  • ವಿಮರ್ಶೆ
~.~
  • Login or register to post comments
  • 314 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂತರ ಜೀವಂತ ಪಾತ್ರಗಳು ೨
  • ಕಾರಂತರ ಜೀವಂತ ಪಾತ್ರಗಳು ೨ (ಮತ್ತೂ ಮುಂದುವರೆದುದು)
  • ಕಾರಂತರ ಜೀವಂತ ಪಾತ್ರಗಳು -೫ (೨)
  • ಕಾರಂತರ ಜೀವಂತ ಪಾತ್ರಗಳು ೬ (೧)
  • ಕಾರಂತರ ಜೀವಂತ ಪಾತ್ರಗಳು
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator