ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಕನ್ನಡ ಹೇಗೆ ನಿತ್ಯನೂತನ ಎನ್ನುವುದನ್ನು ಸಾರುತ್ತದೆ ಈ ಭರತೇಶ ವೈಭವದ ಎರಡನೆಯ ಕಲ್ಪು. ಈ ವರ್ಷ ಕನ್ನಡದ ಚಿಪ್ಪಿನಿಂದ ಹೊರಬಂದ ಅನೇಕ ಹಾಡುಗಳಲ್ಲಿ ಸಾಹಿತ್ಯ, ಸಂಗೀತ, ವೀಡಿಯೋ ಎಲ್ಲ ಕಾರಣಗಳಿಗಾಗಿ ಎದ್ದು ನಿಲ್ಲುವ ಒಂದು ಹಾಡೆಂದರೆ "ಗೆಳೆಯ ಸಿನಿಮಾದ - ಈ ಸಂಜೆ ಯಾಕಾಗಿದೆ" ಹಾಡು. ಯಾರಾದರೂ ಇನ್ನೂ ಈ ಹಾಡನ್ನು ಕೇಳಿಲ್ಲವಾದರೆ(ಜೊತೆಗೆ ನೋಡಿಲ್ಲವಾದರೆ
) ಇದರ ಒಂದು ಹೈಡೆಫಿನಿಶನ್ ವೀಡಿಯೋ ನೋಡಿ.
ಕೊಸರು - ಇದನ್ನು ನೋಡಲು ಡಿವೆಕ್ಸ್ ಪ್ಲಗಿನ್ ಇನ್ಸ್ಟಾಲ್ ಮಾಡಬೇಕು.
ಇದೇ ಗೆಳೆಯ ಸಿನಿಮಾದ ಮತ್ತೊಂದು ಪಡ್ಡೆಹುಡುಗರ ಹಾಡು,"ಚಾಂಗು ಭಳಾ ಚಾಂಗು ಭಳಾ ಚಾಂಗುರೇ". ಸಾಹಿತ್ಯ - ವಿ.ನಾಗೇಂದ್ರ ಪ್ರಸಾದ್, ಸಂಗೀತ - ಮನೋ ಮೂರ್ತಿ, ಹಾಡಿದವರು - ಶಂಕರ್ ಮಹಾದೇವನ್
ಹಾಡಿನ ಸಾಹಿತ್ಯ ಹೀಗೆ ನೆಗಳ್ಚತ್ತೆ
೧. ಚಾಂಗು ಭಳಾ ಚಾಂಗು ಭಳಾ ಚಾಂಗುರೇ,
೨. ಝಣ ಝಣ ಚಿಲ್ಲರೆ, ಜೇಬಿನಲ್ಲಿ ಇದ್ದರೆ,
೩. ನೋಡು ಮಗಾ, ಊರು ತುಂಬಾ ಜಾತರೇ(ಜಾತ್ರೆ),
೪. ಝಣಝಣರೆ ಕುಣಿಯುತಿರೆ, ಓ ಎಲ್ಲ ಇಲ್ಲಿ ನಮ್ಮೋರೆ.
ವೀಡಿಯೋ ಕ್ವಾಲಿಟಿ ಕಮ್ಮಿ ಇದ್ದರೂ ಪರವಾಗಿಲ್ಲ ಎನ್ನುವುದಾದರೆ ಇಲ್ಲಿಂದ ನೋಡಬಹುದು ಅಥವಾ ಕನ್ನಡಆಡಿಯೋ.ಕಾಂನಿಂದ ಕೇಳಬಹುದು.
ಸರಿ ಭರತೇಶ ವೈಭವಕ್ಕೂ "ಅಶಾಸ್ತ್ರೀಯವಾದ ಪಡ್ಡೆಹುಡುಗರ ಈ ಹಾಡಿಗೂ ;)" ಎತ್ತಣಿಂದೆತ್ತ ಸಂಬಂಧವಯ್ಯಾ ಎಂದುಕೊಳ್ಳುತ್ತಿದ್ದರೆ, ಮುಂದೆ ಓದಿ. ಭರತೇಶ ವೈಭವದ ಕರ್ತೃ ರತ್ನಾಕರವರ್ಣಿ, ವಿಜಯನಗರದ ವೈಭೋಗವನ್ನು ವರ್ಣಿಸುತ್ತಾ, "ದಶಮಿಪ್ರಸ್ಧಾನ" ಎಂಬ ಸಂಧಿಗೆ ನಮ್ಮನ್ನು ಕರೆದೊಯ್ಯುತ್ತಾನೆ. ಆ ಒಂದು ದಿನ ಏನಾಗುತ್ತದೆಯೆಂದರೆ, ಬನ್ನಿಮರದಲ್ಲಿ ಚಕ್ರಿಗೆ(ಇವನನ್ನು ಒಬ್ಬ ವಿಜಯನಗರದ ಅರಸನಿಗೆ ಹೋಲುವಂತೆ ಸಮೀಕರಿಸಲಾಗಿದ) ಚಕ್ರರತ್ನ ತೋರುತ್ತದೆ. ಚಕ್ರರತ್ನ ಶೋಭಿಸುವುದು, ಒಂದು ರೀತಿ ರಾಜನಿಗೆ ಚರ್ಕವರ್ತಿಯಾಗಲು ಆದೇಶವಿತ್ತಂತೆ!!!! ಚಕ್ರರತ್ನದ ಆದೇಶದಂತೆ, ಚಕ್ರಿ ಸೈನ್ಯವನ್ನು ಒಟ್ಟುಗೂಡಿಸಲಾರಂಭಿಸುತ್ತಾನೆ. ಆರ್ಯಾಖಂಡ, ಹಾಗೆಯ ಐದು ಮ್ಲೇಚ್ಛಗಳಲ್ಲಿರುವ ಕೆಲಸಕ್ಕೆ ಬಾರದ ರಾಜರನ್ನು ಕೈವಶಮಾಡಿಕೊಳ್ಳಲು, ತನ್ನಲ್ಲಿದ್ದ ಆನೆ, ತೇಜಿ(ಕುದುರೆ), ಬಣ್ಣಬಣ್ಣದ ರಥ, ವೀರಭಟರನ್ನೆಲ್ಲ ಒಟ್ಟುಗೂಡಿಸುತ್ತಾನೆ. ಈ ಒಟ್ಟಸೈನ್ಯವನ್ನು ಕೂಡಿಕೊಂಡವನಾಗಿ ಆ ಭರತರಾಜೇಂದ್ರ ತನ್ನ ಪಡೆಯನ್ನು ಮುನ್ನಡೆಸುತ್ತಿರುವುದನ್ನು ವರ್ಣಿಸುತ್ತಾ ಕವಿ ಹೀಗೆ ಹೇಳುತ್ತಾನೆ.
ದಶಮಿಪ್ರಸ್ಥಾನ ಸಂಧಿ
ಪಡೆಯನೆಲ್ಲವ ಕೂಡಿ ಭರತರಾಜೇಂದ್ರನು
ತೊಡೆಸನ್ನೆಯಿಂದ ಹಸ್ತಿಯನು
ನಡೆಸಿದನೆಲ್ಲರು ಜಯ ಜಯ ಚಾಂಗೆಂದು
ಕಡಲಂತೆ ಕೂಗಿ ಬೊಬ್ಬಿರಿಯೆ || ೮ ||
ಛಟಿಫಟಿ ಸುರುಬುರು ಬುಸ್ಸು ಬುಸ್ಸೆಂದು ಚೀ
ರ್ಚಿಟಿ ಠೊಪ್ಪು ಠೊಪ್ಪು ಡಪ್ಪೆಂದು
ಪೆಟಲು ಕೋಟಾಕೋಟಿ ಸುಟ್ಟವು ವೀರರಾ
ರ್ಭಟಿಸಿದರೊಂದೆ ಲಗ್ಗೆಯೊಳು || ೯ ||
ಸರಿ ಈಗ ಯೋಚಿಸಿ - ಚಾಂಗು ಎಂದರೇನು ? ಇದನ್ನು ತಿಳಿದುಕೊಂಡ ಮೇಲೆ ಗೆಳೆಯ ಸಿನಿಮಾದ ಹಾಡು(ವೀಡಿಯೋ ಮತ್ತು ಆಡಿಯೋ) ವಿಶೇಷವಾದ ಗಮನ ಸೆಳೆಯಬಹುದು.
ಚಾಂಗು ಎನ್ನುವುದು ಒಂದು ಹುರಿದುಂಬಿಸುವ ಮಾತು, ಪ್ರೋತ್ಸಾಹವಚನ, ಭಲ, ಭಲಾ ಎನ್ನುವ ಹಾಗೆ. ಚಾಂಗು ಜಾಗುರೆ - ಒಂದು ಹೊಗಳುತ್ತಾ ಹುರಿದುಂಬಿಸುವಂತಹ ನುಡಿ. ಕೊಂಡಾಟದ ನುಡಿ, ಭಲೆ, ಭಾಪು, ಭಲರೆ ಹೀಗೆ.
ನೆರವು - ಪಂಡಿತ ಕವಲೀಯವರ ಕಸ್ತೂರೀ ಕೋಶ ಹಾಗು ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡ ನುಡಿಕೋಶ.
ಭರತೇಶ ವೈಭವದಲ್ಲಿ ಅಡಕವಾಗಿರುವ ಭಾವನೆಗಳನ್ನು ಪ್ರಸ್ತುತ ಕನ್ನಡಸಿನಿಮಾದ ವಿದ್ಯಮಾನಗಳಿಗೆ ಸರಿದೂಗಿಸಿಕೊಡುವಲ್ಲಿ ಸಹಕರಿಸಿದ ಗೆಳೆಯ ಸಿನಿಮಾದ ಎಲ್ಲರಿಗೂ ನನ್ನ ಹೆನ್ನನ್ನಿ.

- Login or register to post comments
- 765 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ನಾಗೇಂದ್ರ ಪ್ರಸಾದ ಕೆಲವು ಶಬ್ಧಗಳನ್ನು ಸೇರಿಸಿ, ಅರ್ಥವಿಲ್ಲದ ಹಾಡನ್ನು ಬರೆಯುತ್ತಿರುತ್ತಾರೆ ಅಂದುಕೊಂಡಿದ್ದೆ.ಅದಕ್ಕೂ ಅರ್ಥವಿದೆ ಎಂದು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದ..
’ಹೆನ್ನನ್ನಿ’ ಎಂದರೇನು?
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಹೆರ್ + ಮರ = ಹೆಮ್ಮರ = ಹಿರಿದಾದ ಮರ
ಹೆರ್ + ನನ್ನಿ = ಹೆನ್ನನ್ನಿ = ಹಿರಿದಾದ ನನ್ನಿ.. = ತುಂಬಾ ತಾಂಕ್ಸು!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಹೆರ್ ಅಂತ ಮೂಲ ಪದ ಇದೆಯ?
ದೊಡ್ಡ ಥ್ಯಾಂಕ್ಸ್ ಆಗಬೇಕಲ್ಲ?!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
http://dsal.uchicago.edu/cgi-bin/philologic/getobject.pl?c.1:1:1829.burr...
Ka. / ಕನ್ನಡ
per, pēr (before vowels) largeness, tallness, greatness; large, tall, great;
hērā̆ḷa greatness, largeness, abundance;
percu, peccu, heccu, eccu to become more extensive or greater in bulk, quantity, or number, increase, thrive, grow, swell, become lofty or proud; n. increase, growth, largeness, swelling, flood, extension, eminence, riches, excess, surplus, exaggeration, pride, daring;
percisu, peccisu to cause to increase, multiply, etc.;
percuge, peccuge increase, etc.;
perme increase, greatness, excellency, grandeur, honour, pride;
piri extensiveness, largeness, abundance, frequency, greatness, advanced age;
pedda largeness, bigness, greatness;
peddi a great or old person, elder, senior;
pempu largeness, abundance, eminence, sublimity;
peggaṇa, heggaṇa bandicoot;
(Gowda) higgu to swell with joy, be elated.
ತುಳು/Tu.
peri, periya large, great, high, superior;
perguḍè bandicoot;
permè haughtiness;
percuni, pērcuni to rise, increase;
perjuni to increase; heccuni to increase, augment;
heccāvuni to increase (tr.), enlarge, exalt, promote;
hecca more, better, high, superior, excessive, superfluous, copious;
heccalmè, heccaḷa, heccaḷmè exaltation, greatness, brag, boast;
hecci, heccigè, heccelů increase, promotion, excess, eminence;
hedda great, large, spacious, chief, principal;
hemma abundant, many;
hemme pride, insolence.
ಪೆರ್ + ಮರ = ಪೆರ್ಮರ => ಹೆಮ್ಮರ
ಪೆರ್ + ಮೆ = ಪೆರ್ಮೆ => ಹೆಮ್ಮೆ
ಪೆರ್+ಬಾಗಿಲು = ಪೆರ್ಬಾಗಿಲು => ಹೆಬ್ಬಾಗಿಲು
ಪೆರ್ + ಪಾವು = ಪೆರ್ಬಾವು => ಹೆಬ್ಬಾವು
ಪೆರ್ + ಪುಲಿ = ಪೆರ್ಬುಲಿ => ಹೆಬ್ಬುಲಿ
ಪೆರ್ + ಪಾರ(ಪಾರುವ) = ಪೆರ್ಬಾರ(ರುವ) = ಹೆಬ್ಬಾರ
ಹೀಗೆ ಹೆಗ್ಗುರುತು, ಹೆಗ್ಗಡೆ ಮುಂತಾದವು ಬಂದವೆಯಂತೆ.!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಪೆರ್ + ಪಾವು = ಪೆರ್ಬಾವು => ಹೆಬ್ಬಾವು
ಪೆರ್ + ಪುಲಿ = ಪೆರ್ಬುಲಿ => ಹೆಬ್ಬುಲಿ
ಪೆರ್ + ಪಾರ(ಪಾರುವ) = ಪೆರ್ಬಾರ(ರುವ) = ಹೆಬ್ಬಾರ
ಇವು
ಪೆರ್ + ಪಾವು = ಪೆರ್ವಾವು => ಹೆಬ್ಬಾವು ( ಮುವ್ವತ್ತು = ಮೂರ್+ಪತ್ತುತೆರ )
ಪೆರ್ + ಪುಲಿ = ಪೆರ್ವುಲಿ => ಹೆಬ್ಬುಲಿ
ಹೀಗೂ ಇರಬೋದು!
ಓರ್ + ಪ = ಓರ್ವ => ಒಬ್ಬ
ಈರ್ + ಪ = ಈರ್ವ => ಇಬ್ಬ
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಪೆರ್ ಅಂದ್ರೆ ದೊಡ್ಡದು ಎಂದು ಹುರುಳಿದ್ದರೂ, ಅದು ಹೆಚ್ಚು( ಪೆರ್ಚು ಇದೊಂದು ವರಬು/verb ಕೂಡ)/ತುಂಬಾ ಎಂಬ ತಿರುಳಲ್ಲೂ ಬಳಕೆಯಾಗಿದೆ..
ಹೆಚ್ಚಳ, ಹೆಚ್ಚುವರಿ, ಹೆಚ್ಚುಗಾರಿಕೆ, ಹೇರಳ, .. ಮುಂತಾದವು!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಸರಿ ಮಹೇಶರೆ,
ಹೆರ್ ಅನ್ನೋ ಮೂಲ ಪದ ಇಲ್ಲ ಅಂತ ತೋರಿಸಿದ್ದಕ್ಕೆ ಥ್ಯಾಂಕ್ಸ್. ನೀವು ಕೊಟ್ಟಲ್ಲೆಲ್ಲೂ ಹೆರ್ ಇಲ್ಲ.
ಪೆರ್ ಇದೆ ಅಂತ ಗೊತ್ತಿತ್ತು. ಹಾಗೆ ಪೆರ್ಚು ಇದೆ ಆದರೆ ಹೆರ್ಚು ಇಲ್ಲ, ಅದು ಹೆಚ್ಚು ಆಗತ್ತೆ ಅಲ್ಲವೆ?
ಹೆರ್+ಮರ ನಾನು ಇಲ್ಲೇ ಮೊದಲು ನೋಡಿದ್ದು...
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಹೆರ್ ಅಲ್ಲ ಪೆರ್ ಸರಿಯೇ!
ಹೆಮ್ಮರ ಹೇಗೆ ಬಿಡಿಸೋದು ನೀವು?
ಪೆರ್ + ನನ್ನಿ = ಪೆರ್ನನ್ನಿ => ಹೆನ್ನನ್ನಿ( ಹೊಸಗನ್ನಡದ ಮಾರ್ಪಂತೆ )
ಆದರೆ ಪೆರ್ಚು => ಹೆಚ್ಚು ಆದಾಗ ಏನೇನಾಗಿದೆ ಅಂತ ಗಮನಿಸಿದರೆ..
ಪೆರ್‍ನನ್ನಿ => ಹೆನ್ನನ್ನಿ ಹೇಗಾಯ್ತು, ಹೇಗಾಗುವುದು ಎಂದು ತಿಳಿಯುವುದು.!
ಆದ್ರೆ ಹೊಸಗನ್ನಡದಲ್ಲಿ ’ಹೆರ್’ ಅನ್ನೊ ಮುನ್ನೊಟ್ಟು( =prefix) ಇದೆ ಅಂತ ಅಂದುಕೊಳ್ಳಲು/ಇಟ್ಟುಕೊಳ್ಳಲು ಯಾವ ಅಡ್ಡಿಯೂ ಇಲ್ಲ.! ( ಹೊಸತೊರೆಗಳನ್ನು ಮಾಡಲೆಳಸುವವರಿಗೆ.. )
ಹೆರ್ ಸೇರಿಸಿ ದೊಡ್ಡದು ಎಂದು ಹೇಳಬೋದು.
ಹೆಬ್ಬೆಂಗಳೂರು = ದೊಡ್ಡ ಬೆಂಗಳೂರು
ಹೆಬ್ಬಯಕೆ
ಹೆಗ್ಗವಿ = ದೊಡ್ಡ ಕವಿ
ಹೆದ್ದಾರಿ
ಹೆಗ್ಗಾವಲು
ಹೆಬ್ಬಯಲು
ಹೆಬ್ಬೊಳೆ = ದೊಡ್ಡ ಹೊಳೆ
ಹೀಗೆ!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಚಾಂಗು ಮಗ ಚಾಂಗು ಮಗ ಚಾಗುರೇ, ಲೇ ಸುನೀಲ!!
ರತ್ನಾಕರವರ್ಣೀ ಭರತೇಶ ವೈಭವ ಬರೆದುದು, ನಾಗೇಂದ್ರ ಪ್ರಸಾದ್ ಚಾಂಗು ಮಗ ಬರೆದುದೆರಡೂ ಲೇಸಾಯ್ತು!
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಚಾಂಗು - ಎಂಬುದು ಪ್ರಾಕೃತ(?) ದಿಂದ ಬಂದಿರುವ ಅಥವಾ ಪ್ರಾಕೃತದಿಂದ ಮಾರ್ಪಟ್ಟ ಪದವಿರಬಹುದೇ?
ಗಮನಿಸಿ - ಮರಾಠಿಯ ಚಾಂಗ್ಲಾ - ಛಾನ್ ಇವೆರಡೂ ’ಚೆನ್ನ’ ವನ್ನು ಸೂಚಿಸುತ್ತವೆ.
-ಹಂಸಾನಂದಿ
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
pluginಗೆ ಕೊಂಡಿ ನೀಡು
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
"ಚಾ೦ಗ್ " ದೇವ ಅ೦ತಾ ಮರಾಠಿ ಯಲ್ಲಿ ಒಬ್ಬ ಸ೦ತ ಯಿದ್ದರು.
ಜ್ಞಾನೇಶ್ವರಿಗಳ ಜೊತೆಗೆ ವಾದದಲ್ಲಿ ಸೋತು ಶರಣಾದರು. ಬಹುಶ: ಅವರು ಕನ್ನಡದವರಿರಬಹುದು ..
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಮುರಳಿ, ಅದೇನು ವಾದ ಎಂಬುದಾಗಿ ಸ್ವಲ್ಪ ವಿವರಿಸಲು ನಿನಗೆ ಸಮಯವಿದ್ದರೆ ತಿಳಿಯುವ ಕುತೂಹಲ ನನ್ನದು.
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
೧.
ಅವರು ಜ್ಞಾನೇಶ್ವರಿ ಅಲ್ಲ ;
ಅವರು ಸಂತ ಜ್ಞಾನೇಶ್ವರರು ;
ಅವರು ಬರೆದ ಆಧ್ಯಾತ್ಮಿಕ ಗ್ರಂಥ "ಜ್ಞಾನೇಶ್ವರಿ " ; ಮರಾಠಿಯ ಮೊದಲ ಪುಸ್ತಕ ಇರಬೇಕು ;
ಇದೂ ಈ ಭಾಗದಲ್ಲಿ ಕನ್ನಡ ಕಣ್ಮರೆ ಆಗಲು ಕಾರಣ ಆಯ್ತು ;
’ಭಕ್ತ ಕುಂಬಾರ’ ಸಿನಿಮಾದಲ್ಲಿ ಸಂತ ಜ್ಞಾನೇಶ್ವರ ಮತ್ತು ಚಾಂಗದೇವರ ಬಗ್ಗೆ ಬಂದಿದೆ ;
೨. ಮರಾಠಿಗರ ಛಾನ್ - ಅಂದರೆ ಚೆನ್ನ
ಇದೂ ಚನ್ನದಿಂದಲೇ ಬಂದಿರುವ ಶಬ್ದ ಇರಬಹುದು .
ಮರಾಠಿಯ ಶಬ್ದಗಳಲ್ಲಿ ಬೇರೆ ಭಾಶೆಯ ಶಬ್ದಕ್ಕೆ ಸಮಾನವಾಗಿ ಅದೇ ಶಬ್ದ , ಕಡೆಯ ಅಕ್ಷರಕ್ಕಿಂತ ಹಿಂದಿನ ಅಕ್ಷರ ದೀರ್ಘವಾಗಿ ಬದಲಾವಣೆ ಹೊಂದಿ ಇರುತ್ತದೆ . ಅಥವಾ ಕಡೇ ಪಕ್ಷ ಹೆಚ್ಚುಒತ್ತು ಹೊಂದಿರುತ್ತದೆ ,.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಜ್ಞಾನೇಶ್ವರರ ಬಗ್ಗೆ ಕನ್ನಡದಲ್ಲ್ಲಿ "ಭಕ್ತ ಜ್ಞಾನದೇವ" ಅಂತ ಸಿನೇಮಾ ಇದೆ.
ಅದರ ಕೊನೆಗೆ ಒಬ್ಬರು ಹುಲಿ ಮೇಲೆ ಬಂದು ಜ್ಞಾನದೇವರಿಗೆ ಸವಾಲು ಹಾಕುತ್ತಾರೆ. ಅದಕ್ಕೆ ಜ್ಞಾನದೇವರು ತಾವು ಕುಳಿತಿದ್ದ ಗೋಡೆಯ ಮೇಲೆ ಬಂದು ಅವರನ್ನು ವಾದದಲ್ಲಿ ಸೋಲಿಸುತ್ತಾರೆ. ಅವರೇನಾ ಈ ಚಾಂಗದೇವರು?
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಹೌದು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ನನ್ನಿ.
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
"...ಝಣಝಣರೆ ಕುಣಿಯುತಿರೆ, ಓ ಎಲ್ಲ ಇಲ್ಲಿ ನಮ್ಮೋರೆ..."
ಅದನ್ನ ನಾನು
"..ತನನರೆ ಕುಣಿಯು ದೊರೆ, ..." ಅಂತ ಅನ್ಕೊಂಡಿದ್ದೆ
ಇರಲಿ. ಚಾಂಗು ಅರಿತ ತಿಳಿಸ್ಕೊಟ್ಟಿದ್ದಕ್ಕೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
"ಚಾಂಗು" ಪದ, ಭರತೇಶ ವೈಭವದ ಮತ್ತೆರೆಡು ಕಡೆ ಸಿಕ್ಕಿತು. ಈ ಪದ್ಯಗಳು ಬರುವ ಹೊತ್ತಿಗಾಗಲೇ ಅಣ್ಣ-ತಮ್ಮಂದಿರಿಗೆ (ಅಂದರೆ ಭರತನಿಗೂ ಮತ್ತು ಭುಜಬಲಿಗೂ) ಕಾಳಗವೇರ್ಪಡುತ್ತದೆ ಎಂಬ ಸುಳಿವು ಸಿಕ್ಕಿರುತ್ತದೆ. ಈ ಜಗಳವನ್ನು ತಪ್ಪಿಸಬೇಕೆಂದು ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳದ, ಭುಜಬಲಿ(=ಬಾಹುಬಲಿ)ಯು
ಬಂದು ತನ್ನರಮನೆಯಿದಿರಲ್ಲಿ ನೆರೆದಿಹ
ಮಂದಿಯ ನೋಡುತಂಗಜನು
ವಂದಿಗಳ್ಚಾಂಗು ಭಲಾ ಜೀವುರೆನಲು ಮಾ
ಕಂದನೆಂಬಾನೆಯೇರಿದನು || ೨೫ ||
...ಬಂದು, ತನ್ನ ಅರಮನೆಯ ಇದಿರಲ್ಲಿ ನೆರೆದಿಹ ಮಂದಿಯ ನೋಡುತ, ಅಂಗಜನು, ಮಂದಿಗಳು "ಚಾಂಗು ಭಲಾ ಜೀವುರೆ", ಎನಲು ಮಾಕಂದ ಎಂಬ ಆನೆ ಏರಿದನು. ಇಲ್ಲಿಗೆ ಮದನ-ಸನ್ನಾಹ ಎಂಬ ಸಂಧಿ ಮುಗಿಯುತ್ತದೆ. ಮುಂದೆ "ರಾಜೇಂದ್ರಗುಣವಾಕ್ಯ" ಎಂಬ ಸಂಧಿ ಆರಂಭವಾಗುತ್ತದೆ, ಅಲ್ಲಿ ಭರತನು "ಯುದ್ಧಭೂಮಿ"ಗೆ ಬರಲು
ಹತ್ತಿರಕೆಯ್ತಂದು ಚಾಂಗು ಭಲಾಯೆನ
ಲೆತ್ತಿದ ಶಿಬಿಕೆಯಿಂದಿಳಿದು
ಹತ್ತೆಂಟು ಮಾರೆನೆ ಸ್ಮರನಿದಿರೊಳು ನಿಂದ
ನುತ್ತುಂಗಚರಿತನಾ ಚಕ್ರಿ || ೧೫ ||
ಹತ್ತಿರಕೆ ಎಯ್ತಂದು "ಚಾಂಗು ಭಲಾ" ಎನಲು ಎತ್ತಿದ ಶಿಬಿಕೆಯಿಂದಿಳಿದು, ಹತ್ತೆಂಟು ಮಾರೆನೆ ಸ್ಮರನ ಇದಿರೊಳು ನಿಂತನು, ಉತ್ತುಂಗ ಚರಿತನು, ಆ ಚಕ್ರಿ.
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
"ಚಾಂಗು ಭಲಾ " ಎ೦ಬ ಪ್ರಯೋಗ ತೆಲುಗಿನಲ್ಲೂ ಇದೆ. ಅನ್ನಮ ಕೀರ್ತನೆಗಳಲ್ಲಿ "ಚಕ್ಕನಿ ತಲ್ಲಿಕಿ ಚಾ೦ಗು ಭಲಾ...ಚಕ್ಕೇರ ಮೋವಿಕಿ ಚಾ೦ಗು ಭಲಾ " ಎ೦ದಿದೆ. "ಚಾ೦ಗುರೇ ಬ೦ಗಾರು ರಾಜಾ" ಅ೦ತ ತೆಲುಗು ಸಿನೆಮಾಪದ್ಯವೂ ಉ೦ಟು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಭರತೇಶ ವೈಭವ ಮತ್ತು ಗೆಳೆಯ ಸಿನಿಮಾ - ಕಲ್ಪು ೨
ಶ್ರೀಕ್ರಷ್ಣಪಾಂಡವೀಯುಲು ಚಿತ್ರದ ಹಾಡು, ನಮ್ಮ ಉದಯ ಕುಮಾರ್ ಅಭಿನಯಿಸಿದ್ದು.