ಕಾರಂತರ ಜೀವಂತ ಪಾತ್ರಗಳು ೨ (ಮತ್ತೂ ಮುಂದುವರೆದುದು)
’ಮೈ ಮನಗಳ ಸುಳಿಯಲ್ಲಿ’ ಕಾರಂತರಂತಹವರು ಮಾತ್ರವೇ ರಚಿಸಬಹುದಾದ ರಚನೆ . ಇಲ್ಲಿನ ವಸ್ತು ಮತ್ತಾರಿಂದ ರಚನೆಯಾಗಿದ್ದರೂ ,ಇಷ್ಟೊಂದು ಶುಚಿಯಾಗಿ ರಚನೆಯಾಗಲು ಸಾಧ್ಯವಿರುತ್ತಿರಲಿಲ್ಲ .ಹೇಳಲೇಬಹುದಾದ ಎಲ್ಲ ವಿವರಗಳನ್ನೂ ಬಿಚ್ಚಿಡುತ್ತಲೇ ಹೋಗುವ ಕಾರಂತರು,ಎಲ್ಲಿಯೂ ಔಚಿತ್ಯದ ಎಲ್ಲೆಯನ್ನು ಮೀರುವುದೇ ಇಲ್ಲ . ಅನೇಕ ಲೇಖಕರು ತಮ್ಮ ಕೃತಿಗಳಲ್ಲಿ , ಉಚಿತಾನುಚಿತದ ಪರಿವೆ ಇಲ್ಲದೆ , ರಂಜನೆಯನ್ನೇ ಮಾದರಿಯಾಗಿಟ್ಟುಕೊಂಡು ರೋಚಕ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವಾಗಲೇ ’ ಮೈ ಮನಗಳ ಸುಳಿಯಲ್ಲಿ’ ನಂತಹ ಉತ್ತೇಜಕ ಸನ್ನಿವೇಶಗಳನ್ನೂ ಸಹ, ಉದ್ವೇಗಕಾರಿಯಲ್ಲದ ರೀತಿಯಲ್ಲಿ , ಸಂಯಮದಿಂದ ಮತ್ತು ಸಹಾನುಭೂತಿಯಿಂದ , ನಿರೂಪಿಸುವ ಕಾರಂತರ ಕಲೆಗಾರಿಕೆ ಬೆರಗುಗೊಳಿಸುವಂಥದು . ಇಲ್ಲಿನ ಸ್ತ್ರೀಪಾತ್ರಗಳ ಅಸಹಾಯಕತೆಯನ್ನು ಕಂಡು ಮನುಷ್ಯನ ವಿಧಿಯ ಬಗ್ಗೆ ವಿಷಾದ ಮೂಡುತ್ತದೆ .ಆ ಜೀವಗಳ ಗಂಭೀರ ಭಾವಗಳು , ಗೌರವ ಉಕ್ಕಿಸುತ್ತವೆಯೇ ಹೊರತು ಲಘು ಭಾವನೆಗಳು ಮೊಳೆದೋರದಂತೆ ಎಚ್ಚರ ವಹಿಸಲಾಗಿದೆ . ಇಲ್ಲಿ ಕಾರಂತರ ಕಲೆಗಾರಿಕೆ ಎದ್ದು ಕಾಣುವಂತೆಯೇ ಗೌರವಾರ್ಹವೂ ಆಗಿದೆ .
’ಕನ್ಯಾಬಲಿಯನ್ನು ಬರೆದು ನಲವತ್ತು ವರ್ಷಗಳ ನಂತರ ಬರೆದ ಕಾದಂಬರಿ ’ಮೈ ಮನಗಳ ಸುಳಿಯಲ್ಲಿ’ . ಅದನ್ನು ಬರೆಯುವ ಕಾಲಕ್ಕೆ ಕಾರಂತರೇ ತಿಳಿಸುವಂತೆ ,ಅವರ ಅನೇಕ ಪೂರ್ವಾಗ್ರಹಗಳು , ತಪ್ಪು ಗ್ರಹಿಕೆಗಳು ಮಾಗಿ ಪಕ್ವವಾಗಿದ್ದವು . ಹೆಣ್ಣಿನ ವ್ಯಕ್ತಿತ್ವವನ್ನು ನೋಡುವ ನೋಟದಲ್ಲಿ , ಅದರಲ್ಲೂ ಸಾಮಾಜಿಕ ಕಟ್ಟಳೆಗಳ ಹೊರಗಣ ಬದುಕನ್ನು ಬದುಕಬೇಕಾಗಿಬರುವ , ಸ್ತ್ರೀಯರ ವಿಚಾರದಲ್ಲಿ ತಿರಸ್ಕಾರದ ಬದಲಾಗಿ , ಸಹಾನುಭೂತಿಪರವಾದ ಮತ್ತು ವಾಸ್ತವಾಂಶಗಳನ್ನಾಧರಿಸಿದ , ಒಳ ನೋಟಗಳು ಅವರಲ್ಲಿ ಬೆಳೆದು , ಹೆಣ್ಣು ಗಂಡುಗಳ ಇಡೀ ಬದುಕೆಂಬುದು ಮನುಷ್ಯನ ಯಾವುದೇ ತರ್ಕಕ್ಕೆ ನಿಲುಕದ ಮಾಯೆಯೆಂಬುದು ಅರಿವಿಗೆ ಬಂದಿತ್ತು . ಕಾಮ ಬಾಳಿನ ಒಂದು ನಿಗೂಢ ಸಮಸ್ಯೆ . ಅದು ಮನುಷ್ಯನ ಎಲ್ಲ ನಿಯಮಗಳಾಚೆಗಿನ ಕಟು ವಾಸ್ತವ ಎಂಬ ಅರಿವು ಮತ್ತು ಅದರ ಸೋಲು ಗೆಲುವುಗಳು ಪ್ರಕೃತಿಗೆ ಸಂಬಂಧಪಟ್ಟವೇ ಹೊರತು ,ಈ ವಿಷಯದಲ್ಲಿ ಮನುಷ್ಯ ಅಸಹಾಯಕ ,ಎಂಬ ದೃಷ್ಟಿ ಕೋನದ ಮೂಲಕ ಇಡೀ ಕಾದಂಬರಿಯನ್ನು ಜೀವಂತಗೊಳಿಸುತ್ತಾ ಹೋಗುತ್ತಾರೆ . ಕಾದಂಬರಿಯ ಹೆಸರೇ ಧ್ವನಿಪೂರ್ಣವಾಗಿದ್ದು ,ಮನೋಜೀವಿಯಾದ ಮನುಷ್ಯನನ್ನು ಅವನದೇ ಆದ ಆಡಿಸುವ; ಕಾಡಿಸುವ ದೇಹವನ್ನು ಮತ್ತು ಮನಸ್ಸು ದೇಹಗಳ ವಿಚಿತ್ರ ಹೊಂದಿಕೆ ವಿಘಟನೆಗಳನ್ನು , ಒಬ್ಬ ಮನಶ್ಶಾಸ್ತ್ರಜ್ಝ ಮತ್ತು ಸಮಾಜ ಶಾಸ್ತ್ರಜ್ಝನ ದೃಷ್ಟಿಯಿಂದ ವಿವೇಚಿಸುತ್ತಾ , ದಾಂಪತ್ಯದಿಂದ ಹೊರತಾದ ಬಂಧನಗಳನ್ನು , ನಿರ್ವಿಕಾರ ಮನಸ್ಸಿನಿಂದ ಹರವಿಡುತ್ತಾರೆ .
ಕಾದಂಬರಿಯ ಕೇಂದ್ರ ಪಾತ್ರವಾದ ಮಂಜುಳೆ , ಕಾದಂಬರಿ ತೊಡಗುವ ವೇಳೆಗೆ , ಇಲ್ಲವಾಗಿರುತ್ತಾಳೆ . ಅವಳ ಸಾಕು ಮಗಳು ಶಾರಿಯ ಜೀವನ ಚಿತ್ರಣದೊಂದಿಗೆ ಆರಂಭವಾಗುವ ಕಾದಂಬರಿಯ ನಿಜವಾದ ಉದ್ದೇಶ , ಮಂಜುಳೆಯ ಬದುಕನ್ನು ತೆರೆದಿಡುವುದೇ ಆಗಿರುತ್ತದೆ .ಇಲ್ಲಿ ಇಹ ಲೋಕವನ್ನು ತ್ಯಜಿಸಿದ ಮಂಜುಳೆಯ ಪಾತ್ರ ಒಂದು ರೀತಿಯ ಅಲೌಕಿಕವೆನಿಸುವಂತೆ ,ಆದರೆ ಅಲೌಕಿಕವಲ್ಲದ ; ಆದರ್ಶವೆನಿಸುವಂತೆ , ಆದರೆ ಆದರ್ಶವೂ ಅಲ್ಲದ , ವಿಚಿತ್ರ ಭಿತ್ತಿಯೊಂದರ ಮೇಲೆ ರಚಿತವಾದ ಒಂದು ಕಲಾಕೃತಿ .
ಮಂಜುಳೆಯ ಮರಣಾನಂತರ , ಅವಳಿದ್ದಾಗ ಅವಳನ್ನು ಬೆರಗಿನಿಂದ ನೋಡಿದ ಗುಡಿಗಾರ ಚಂದು ಕಟ್ಟಿ ಕೊಡುವ ಚಿತ್ರದ ಮೂಲಕವೇ , ಓದುಗನ ಭಾವ ಪ್ರಪಂಚಕ್ಕೆ ಲಗ್ಗೆ ಇಡುವ ಕಾರಂತರು ,ಮತ್ತೆ ಮಂಜುಳೆಯನ್ನು ಎದುರಿಗೆ ತಂದು ನಿಲ್ಲಿಸುವುದು ಅರ್ಧ ಕಾದಂಬರಿ ಮುಗಿದ ಮೇಲೆಯೇ ! . ಅಲ್ಲಿಯ ವರೆಗೆ ಅವಳ ಸಾಕು ಮಗಳು ಶಾರಿಯ ಜೀವನದ ಏರು ಪೇರುಗಳನ್ನು ಚಿತ್ರಿಸುತ್ತಾ , ವೇಶ್ಯೆಯಾಗಿಯೂ ನಂಬಿಕೆಯ ಪ್ರತಿಮೂರ್ತಿಯಾಗಿ , ಸರ್ವಸ್ವವನ್ನೂ ಕಳೆದುಕೊಳ್ಳುವ ಅವಳ ಮೊದ್ದು ಪಾತ್ರವನ್ನು ಬಿಚ್ಚಿಡುತ್ತಾ ಹೋಗುತ್ತಾರೆ . ಶಾರಿಗೆ ಅಂತಿಮ ಆಸರೆಯಾಗಿ ಕಾಣಿಸುವುದು , ಅವಳ ಮಗಳು ಚಂದ್ರಿ .ಆದರೆ ಚಂದ್ರಿ ತನ್ನ ಕುಲದ ಕಸುಬಿನ ಬಗ್ಗೆ ತಳೆಯುವ ಅಸಹ್ಯ ಭಾವನೆ ,ಹೊಸ ಕಾಲಕ್ಕೆ ತಕ್ಕುದಾಗಿರುತ್ತದೆ . ಅವಳು ತೆಗೆದುಕೊಳ್ಳುವ ’ಪ್ರಾಣವನ್ನಾದರೂ ತೆಗೆದುಕೊಂಡೇನು , ಕುಲವೃತ್ತಿ ಮಾಡುವವಳಲ್ಲ’ ಎಂಬ ನಿರ್ಧಾರ , ಹೊಸದೊಂದು ವಾತಾವರಣವನ್ನು ಸೃಷ್ಟಿಸುತ್ತದೆ . ತಾನು ಕಾಣದ , ಕೇಳಿ ಬಲ್ಲ ತನ್ನ ಅಜ್ಜಿಯ ಜೀವನ ತನಗೇನಾದರೂ ಸಂದೇಶ ನೀಡೀತೆ ? ಎಂಬ ಅವಳ ಆಲೋಚನೆ ಹುಸಿಯಾಗಲಿಲ್ಲ .ಅವಳ ಅಜ್ಜಿ ಬರೆದಿಟ್ಟು ಹೋಗಿದ್ದ , ಆತ್ಮ ಕಥನದ ರೀತಿಯ ಬರವಣಿಗೆ , ಅವಳನ್ನು ವಿಸ್ಮಿತೆಯನ್ನಾಗಿ ಮಾಡುತ್ತದೆ . ಜೊತೆಗೆ ಓದುಗನನ್ನೂ ಸಹ .
ಇಲ್ಲಿಂದ ತೊಡಗುವ ಮಂಜುಳೆಯ ಇತಿವೃತ್ತ , ಕಾದಂಬರಿಯ ಕೊನೆಯವರೆಗೆ ಬೆರಗು ಮೂಡಿಸುತ್ತಲೇ ಹೋಗುತ್ತದೆ .ಇಲ್ಲಿ ಮಂಜುಳೆ ಕೇವಲ ವೇಶ್ಯೆಯಲ್ಲ ; ಅವಳು ಕೇವಲ ಮೈ ಅಲ್ಲ ,ಅಲ್ಲಿ ಸಂಸ್ಕಾರಪೂರಿತವಾದ , ಆದರೆ ದೇಹದ ಪ್ರಲೋಭನೆಗೆ ಹೊರತಲ್ಲದ ಮನಸ್ಸು ಒಂದಿದೆ .ಅದರ ಕಾರಣವಾಗಿಯೇ ’ ಮೈ ಮನಗಳ ಸುಳಿಯಲ್ಲಿ’ ಸಿಲುಕಿ ಒದ್ದಾಡುವ ಅಸಹಾಯಕ ಜೀವವಾಗಿ ಮಂಜುಳೆ ಮನುಷ್ಯನ ಅಸಹಾಯಕತೆಯ ಪ್ರತಿಮೆಯಾಗಿ , ಮನಸ್ಸನ್ನು ಸ್ಪರ್ಶಿಸುತ್ತಾಳೆ . ಅವಳು ಒಬ್ಬ ಕಲಾವಿದೆ ,ರಾಧಾಕೃಷ್ನಬುವಾರಂತಹ ಪ್ರಬುದ್ದರಿಂದ ಸಂಗೀತ ಕಲಿತವಳು ; ಶಾರೀರ ಸಂಪತ್ತನ್ನು ಹೊಂದಿದ ಗಾಯಕಿ . ಶರೀರ ಸಂಪತ್ತಿನ ಮೇಲೆ ಕಣ್ಣಿಟ್ಟವರಿಗೆ ಅವಳ ಶಾರೀರ ಕಾಣದು . ಅವರ ಅರಸಿಕತೆ ಅವಳಲ್ಲಿ ತರುವುದು ನೋವು , ನಿರಾಸೆಗಳನ್ನು . ಈ ನೋವು ನಿರಾಸೆಗಳನ್ನು ಮೀರಿ ಬದುಕೆಂಬುದು ಒಂದು ಇದೆ .ಅದು ಯಾರ ಭಾವಾವೇಗಗಳನ್ನೂ ಲೆಕ್ಕಿಸದೆ ಸದಾ ಉರುಳುತ್ತಲೇ ಇರುವ ಬಂಡಿ . ಆ ಬಂಡಿಯ ಚಕ್ರದಡಿಯಲ್ಲಿ ಸಿಲುಕಿ ಒದ್ದಾಡುವ ಎಲ್ಲ ಮಾನವರ ಪಾಡಿನಂತೆಯೇ ಮಂಜುಳೆಯದೂ ಸಹ .
ಒಂದು ದಿನ ಅವಳು ವಯೋವೃದ್ದರಾದ ಪಮ್ಮ,ದುಗ್ಗಿಯರನ್ನು ಕಾಣುತ್ತಾಳೆ .ಆ ಎರಡೂ ಜೀವಗಳು ಬಾಳಿನ ದಾರಿಯಲ್ಲಿ ಬಹುದೂರ ಪಯಣಿಸಿ , ಹಣ್ಣಾದ ಜೀವಗಳು . ಕುರುಡಿ ಹೆಂಡತಿ ವಯಸ್ಸಾದ ದುಗ್ಗಿಯನ್ನು ,ಅಷ್ಟೇ ವಯಸ್ಸಾದ ಪಮ್ಮ ಅನುನಯಿಸುವ ರೀತಿಗೆ ಮಂಜುಳೆ ಅವಾಕ್ಕಾಗಿ ಹೋಗುತ್ತಾಳೆ .ಅವರು ತುತ್ತು ಅನ್ನಕ್ಕಾಗಿ ಪರರ ಮನೆಯ ಬಾಗಿಲಲ್ಲಿ ನಿಲ್ಲುವ ಅವಸ್ಠೆಯವರು ಅವರು .ಆದರೆ ಅಲ್ಲಿನ ಪರಸ್ಪರರ ಒಲುಮೆ, ಅನ್ಯೋನ್ಯತೆಗಳು ಮನುಷ್ಯನ ಮಾತಿಗೆ ಸಿಗಲಾರದಂತಹ ಭಾವಗಳು .ಅವಳ ಮನಸ್ಸು ಚೀರಿ ಹೇಳುತ್ತದೆ ,ತಾನು ಬಯಸಿದ್ದು ಇಂಥ ಬಾಳನ್ನು ಎಂದು .ಆದರೆ ಪಮ್ಮ ದುಗ್ಗಿಯರಂತಹ ನಿರ್ಗತಿಕರಿಗೆ ಸಹಜ ಸಂಪತ್ತಾದ ಅಂತಹ ಬಾಳು , ಅವಳ ಪಾಲಿಗೆ ಮುಗಿಲ ಮಲ್ಲಿಗೆ !.
ಮಂಜುಳೆಯ ಬಾಳಿನಲ್ಲಿ ಬರುವ , ಕಂಡೂರ ವಾಸುದೇವ ಪೈ , ಕೊಕ್ಕರಣೆಯ ಶೀನ , ಸುಬ್ರಾಯ ಉಳ್ಳೂರ ,ಮೇಕೆಮನೆ ಸುಬ್ರಾಯ ,ನಂಜಪ್ಪ , ಲಕ್ಷ್ಮಣ ತೀರ್ಠಸ್ವಾಮಿ ಎಲ್ಲವೂ ವಿಭಿನ್ನ ಪಾತ್ರಗಳು .ಇದ್ದುದರಲ್ಲಿ ಅವಳಲ್ಲಿನ ಕಲಾವಿದೆಯನ್ನು ಗುರುತಿಸುವಲ್ಲಿ ,ಸುಬ್ರಾಯ ಉಳ್ಳೂರ ಒಂದಿಷ್ಟು ಸಹೃದಯಿ .ನಂಜಪ್ಪ ಕಾರಂತರೇ ಹೇಳುವಂತೆ , ಗೂಳಿಯ ರೀತಿಯ ಆಕ್ರಮಣಕಾರಿ .ಅವನಿಗೆ ಮಂಜುಳೆಯೊಳಗಿನ ಕಲಾವಿದೆಯ ಕಿರು ನೋಟ ಸಹ ದೊರೆಯುವುದಿಲ್ಲ . ಅಲ್ಲಿ ಮನಸ್ಸೇ ಇಲ್ಲ , ಇದೆ ಎಂದುಕೊಂಡದ್ದೂ ಸಹ ಭ್ರಮೆ ಎಂಬುದು ಮಂಜುಳೆಗೆ ಅರಿವಾಗಲು ಬಹಳ ಸಮಯ ಬೇಕಾಗಲೇ ಇಲ್ಲ .ಅವನು ಕಬ್ಬಿನ ತೋಟಕ್ಕೆ ನುಗ್ಗಿದ ಕೊಬ್ಬಿದ ಟಗರು ; ಕಬ್ಬಿನೊಳಗಣ ಮಾಧುರ್ಯದ ಜ್ಝಾನವೇ ಅವನಿಗಿಲ್ಲ .ಕಬ್ಬಿನ ಗರಿಯನ್ನು ತಿಂದು ಕಬ್ಬನ್ನು ವಿರೂಪಗೊಳಿಸುವ ಸ್ವಭಾವವಷ್ಟೇ ಅವನದು . ಲಕ್ಷ್ಮಣತೀರ್ಠಸ್ವಾಮಿ , ಮನುಷ್ಯ ಸ್ವಾಭಾವಕ್ಕೇ ವಿರುದ್ದವಾದ ಸಂಕಲೆಗಳಿಂದ ಬಂಧಿತನಾದ ಮಠವೊಂದರ ಸ್ವಾಮಿ .ಅದರಿಂದ ಹೊರ ಬರಲು ಅವನು ನಡೆಸುವ ಪರದಾಟ ಕರುಣಾಜನಕ . ಸಹಜವಲ್ಲದ , ಬಲವಂತದ ವೈರಾಗ್ಯ ಎಂಥ ಹೃದಯಹೀನವಾದದ್ದು ಎಂಬ ವಿವರಣೆಯನ್ನು ,ಕಾರಂತರ ಶೈಲಿಯಲ್ಲಿಯೇ ಗ್ರಹಿಸಬೇಕು .ಅವನು ಮಂಜುಳೆಯ ಎದುರಿನಲ್ಲಿ ಮಗುವೂ ಆಗುತ್ತಾನೆ ,ಪ್ರೇಮಿಯೂ ಆಗುತ್ತಾನೆ .
ಜೀವಿಗಳ ನಡುವೆ ಅಪಾರ ಆಕರ್ಷಣೆಯನ್ನು ಹೊಂದಿರುವ ,ಕ್ಷಣಿಕವಾದರೂ ಮರು ಸಂಭ್ರಮಗಳ ಪ್ರಲೋಭನೆಯಿಂದ ಕೂಡಿರುವ , ಸೃಷ್ಟಿಯ ದಾರಿಯನ್ನು ಸುಗಮಗೊಳಿಸಿರುವ , ಒಂದು ದೃಷ್ಟಿಯಲ್ಲಿ ಜೀವ ಸಂಕುಲಗಳ ಭಾವಜಗತ್ತನ್ನೇ ಆಳುತ್ತಿರುವ , ಈ ಕಾಮವೆಂಬುದು ಈ ಅಪಾರ ಸೃಷ್ಟಿಯ ಯಾವ ತರ್ಕಬದ್ದ ಮಹತ್ವಪೂರ್ಣ ವಿಭಾಗದ ಅನ್ವೇಷಣೆ ? ಯಾವ ಬೃಹನ್ಮನಸ್ಸಿನ ಮನೋಹರ ಕಲ್ಪಕ ಶಕ್ತಿ ?ಇಂಠದೊಂದು ಭೋರ್ಗರೆತದ ಮೊರೆತವನ್ನು ರೂಪಿಸಿ , ಜಾರಿಗೊಳಿಸಿದ ಆ ಅದ್ಭುತ ವಿಶಿಷ್ಟ ಶಕ್ತಿಯ ಅಢ್ಯಯನವೇ ಮಾನವನ ಮನಸ್ಸಿನ ಶಕ್ತಿಗೆ ಸವಾಲಾದ ಅಧ್ಯಯನ .
ಹೀಗೆ ಈ ಪ್ರಕೃತಿಯೆಂಬ ಮಾಯಾಲೋಕ ಸೃಷ್ಟಿಸಿಕೊಂಡಿರುವ , ಅಸೀಮ ತಲ್ಲಣವಾದ ಕಾಮದ ಒಳ ಹೊರಗನ್ನು ಮಾನವೀಯ ನೆಲೆಯಲ್ಲಿ ವಿಸ್ಮಯಪೂರ್ವಕವಾಗಿ ಗ್ರಹಿಸುತ್ತಾ, ಅದನ್ನು ಉದ್ವೇಗ , ಉತ್ಪ್ರೇಕ್ಷೆಗಳಿಲ್ಲದಂತೆ ವಿವರಿಸುವ ಶಕ್ತಿ ಕಾರಂತರ ಮಾಗಿದ ಮನಸ್ಸಿಗೆ ಸಾಧ್ಯವಾದಂತೆ ಅನ್ಯತ್ರ ಸಾಧ್ಯವಿಲ್ಲ .

- Login or register to post comments
- 371 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: