ಭಗವದ್ಗೀತೆಯ ಬೆಳಕಿನಲ್ಲಿ (ಮುಂದುವರಿದುದು)
ಯೋಯಂ ಯೋಗಸ್ತ್ವಯಾ ಪ್ರೋಕ್ತಾಃ ಸಾಮ್ಯೇನ ಮಧುಸೂದನ /
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ಸ್ಟಿತಿಂ ಸ್ಥಿರಾಮ್ //
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥೀ ಬಲವಧೃಢಮ್ /
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ // ಅ ೬ ಶ್ಲೋ ೩೩-೩೪
ಮನಸ್ಸು ಅತ್ಯಂತ ಚಂಚಲವಾದುದು , ಪುಂಡವಾದುದು , ಬಲಿಷ್ಟವಾದುದು , ಮನಸ್ಸನ್ನು ಬಿಗಿಹಿಡಿಯುವುದೆಂದರೆ , ಗಾಳಿಯನ್ನು ಬಟ್ಟೆಯಲ್ಲಿ ಬಿಗಿದು ಕಟ್ಟುವಷ್ಟೇ ಕಷ್ಟಸಾಧ್ಯವಾದ ಕೆಲಸ . ಹೀಗಿರುವಾಗ ನಿನ್ನ ಉಪದೇಶದಿಂದ ಪ್ರಾಪ್ತವಾಗುವ ಯೋಗವು ಹೇಗೆ ಸ್ಥಿರವಾಗಿ ನಿಲ್ಲಬಲ್ಲದು ? ಎಂದು ಅರ್ಜುನನು ಸಂಶಯಗ್ರಸ್ತನಾಗಿ ಕೃಷ್ಣನನ್ನು ಮೇಲಿನ ಶ್ಲೋಕಗಳಲ್ಲಿ ಪ್ರಶ್ನಿಸುವನು . ಮನಸ್ಸು ಚಂಚಲವಾದುದು ಎಂಬ ಅರ್ಜುನನ ಗ್ರಹಿಕೆಗೆ , ವಾಸ್ತವಾದಿಯಾದ ಕೃಷ್ಣನು , ಹೌದು ಎಂದೇ ಉತ್ತರಿಸುವನು .
ಅಸಂಶಯಂ ಮಹಾ ಬಾಹೋ ಮನೋದುರ್ನಿಗ್ರಹಂ ಚಲಮ್/
ಅಭ್ಯಾಸೇನತು ಕೌಂತೇಯ ವೈರಾಗ್ಯೇಣಚ ಗೃಹ್ಯತೇ // ಅ ೬ ಶ್ಲೋ ೩೫
ನಿಜ , ಮನಸ್ಸು ನಿಗ್ರಹಿಸಲು ಕಠಿಣವಾದುದು , ಚಂಚಲವಾದುದು , ಈ ಮಾತಿಗೆ ಸಂಶಯವಿಲ್ಲ .ಆದರೆ ವೈರಾಗ್ಯದಿಂದ , ಅಭ್ಯಾಸದಿಂದ ಅದನ್ನು ಬಿಗಿ ಹಿಡಿಯಬಹುದು . ಎಂಬ ಭರವಸೆ ವಾಸುದೇವನಿಂದ ಬರುತ್ತದೆ .
ಶನೈ ಶನೈರುಪರಮೇದ್ಬುದ್ಯಾ ಧೃತಿ ಗೃಹೀತಯಾ /
ಆತ್ಮ ಸಂಸ್ಥಂ ಮನಃ ಕೃತ್ವಾ ನ ಕಿಂಚಿದಪಿ ಚಿಂತಯೇತ್ //
ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ /
ತತಸ್ತತೋ ನಿಯಮ್ಯೇತದಾತ್ಮನ್ನೇವ ವಶಂ ನಯೇತ್ // ಅ೬ ಶ್ಲೋ ೨೫-೨೬
ಮೆಲ್ಲ ಮೆಲ್ಲ ನೆ ಧೃಢವಾದ ಬುದ್ದಿಯಿಂದ , ಅಸ್ಥಿರವಾದ , ಚಂಚಲವಾದ ಮನಸ್ಸು ಯಾವ ಯಾವ ದಾರಿಗಳಲ್ಲಿ ಮುನ್ನುಗ್ಗಲೆತ್ನಿಸುವುದೋ , ಅಲ್ಲಿಯೇ ಅದನ್ನು ಕಟ್ಟಿ ವಶ ಮಾಡಿಕೊಳ್ಳುತ್ತಾ , ಆತ್ಮನಲ್ಲಿ ಸ್ಥಿರ ಮಾಡಿ , ಶಾಂತಿಯನ್ನು ದೊರಕಿಸಿಕೊಳ್ಳಬೇಕೆಂದು , ಮನೋನಿಗ್ರಹದ ಉಪಾಯಗಳನ್ನು ಸೂಚಿಸಲಾಗಿದೆ .
ಭಗವದ್ಗೀತೆ ಪ್ರಾರಂಭವಾಗಿದ್ದೇ - ಒಂದು ಉದ್ವಿಜ್ಝ ಮನಃಸ್ಥಿತಿಯಲ್ಲಿ ,ಸಮರ ಭೂಮಿಯಲ್ಲಿ ,ತನ್ನವರನ್ನೇ ನಾಶಪಡಿಸಬೇಕಾದ ಕ್ರೌರ್ಯಕ್ಕೆ ಹೇಸಿ ,ಕಿಂ ಕರ್ತವ್ಯಮೂಢನಾಗಿ , ಗಲಬಿಲಿಯ ಸ್ಥಿತಿಯಲ್ಲಿ ಗೊಂದಲಗೊಂಡಿದ್ದ ಅರ್ಜುನನ ಮನಸ್ಸನ್ನು , ಶಾಂತ ಧೃಢ ಸ್ಥಿತಿಗೆ ತರುವ ಉದ್ಯ್ಮಮದಲ್ಲಿ ,ತತ್ವಜ್ಝಾನದ ಮಹಾಪೂರವನ್ನೇ ಕೃಷ್ಣ ಹರಿಸಬೇಕಾಗಿ ಬಂತು . ಸಹಜವಾಗಿಯೇ ಮನಸ್ಸಿನ ವಿವಿಧ ಮುಖಗಳ ಪರಿಚಯ ,ಇಲ್ಲಿಂದಲೇ ಗೀತೆಯಲ್ಲಿ ತೊಡಗುತ್ತದೆ . ಉದ್ವಿಜ್ಝತೆಯಿಂದ, ಶಾಂತಿಯ ನಡುವಣ ಮನಸ್ಸಿನ ಎಲ್ಲ ಸ್ತರಗಳೂ , ವಿವಿಧ ರೂಪದಲ್ಲಿ ಇಲ್ಲಿ ತೆರೆದುಕೊಳ್ಳುತ್ತವೆ .
ಪ್ರತಿಯೊಂದು ಮನಸ್ಸಿಗೂ ಒಂದು ಸಹಜ ಸ್ವಭಾವವಿರುತ್ತದೆ , ಎಂದು ಗೀತೆ ಪ್ರತಿಪಾದಿಸುತ್ತದೆ . ಪ್ರತಿಯೊಬ್ಬ ವ್ಯಕ್ತಿ ಕೂಡಾ , ಅವನ ಮನಸ್ಸು ಹೇಗೋ, ಅವನು ಹಾಗೆ .ಮನಸ್ಸಿನ ಮೇಲೆ ಪರಿಸರದ ಪ್ರಭಾವಕ್ಕಿಂತ , ಸಹಜ ಸ್ವಭಾವದ ಪ್ರಭಾವವೇ ಹೆಚ್ಚು ಪರಿಣಾಮಕಾರಿ . ಅರಮನೆಯ ಸಮಸ್ತ ಭೋಗಗಳೂ ; ಸುಂದರಳಾದ ಮೋಹದ ಮಡದಿ , ಮುದ್ದು ಮಗು , ಇವಾವೂ ಸಿದ್ದಾರ್ಥನನ್ನು ತಡೆದು ನಿಲ್ಲಿಸಲು ಸಮರ್ಥವಾಗಲಿಲ್ಲ .ಅವನ ಸಹಜ ಸ್ವಭಾವವೇ ವಿಜಯಿಯಾಗಿ ,ಅವನು ಬುದ್ದನಾದ . ಅಪರೂಪದ ಪ್ರಸಂಗಗಳಲ್ಲಾದರೂ ಕೇವಲ ಮೂರು ನಾಲ್ಕು ವರ್ಷಕ್ಕೆಲ್ಲಾ , ಬೆರಳು ಕಚ್ಚುವ ರೀತಿಯಲ್ಲಿ ಸಂಗೀತ ಸಾಧನೆಯನ್ನು ಮೆರೆಯುವ ಮಕ್ಕಳು ,ಈ ಮನಸ್ಸಿನ ಸಹಜ ಸಾಮರ್ಥ್ಯಕ್ಕೆ ಒಂದು ಉದಾಹರಣೆ . ಒಂದೇ ಪರಿಸರದಲ್ಲಿ ಅದೇ ತಂದೆ ತಾಯಿಗಳ ಮಕ್ಕಳು ,ಪೂರ್ತೀ ವಿಭಿನ್ನ ರೀತಿಯ ಗುಣ , ಸ್ವಭಾವಗಳನ್ನು ಹೊಂದಿರುವುದು ಎಲ್ಲರ ಗಮನಕ್ಕೆ ಬರುವ ಸಾಮಾನ್ಯ ವಿಚಾರ . ಇದು ಮನಸ್ಸಿನ ಸ್ವಭಾವಸಿದ್ದ ಗುಣವನ್ನು ರುಜುವಾತು ಪಡಿಸುತ್ತದೆ . ಮನಸ್ಸಿನ ಈ ಗುಣವನ್ನು ಅರಿತ ಕೃಷ್ಣ ಅರ್ಜುನನಿಗೆ ಚುಚ್ಚಿ ನುಡಿಯುತ್ತಾನೆ ," ನಾನು ಯುದ್ದ ಮಾದುವುದಿಲ್ಲ , ಎಂಬ ನಿನ್ನ ಮಾತೇ ಸುಳ್ಳು ; ತೋರಿಕೆಯದು , ನಿಜಕ್ಕೂ ನೀನು ಯುದ್ದ ಮಾಡಿಯೇ ತೀರುತ್ತೀಯೆ ,ಯುದ್ದ ಮಾಡುವುದೇ ನಿನ್ನ ಸಹಜ ಸ್ವಭಾವ,, .
ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ /
ಮಿಥ್ಯೈವ ವ್ಯವಸಾಯಸ್ತೇ ಪ್ರಕೃತಿಸ್ತ್ವಾಮ್ ನ್ಬಿಯೋಕ್ಷತಿ //
ಸ್ವಭಾವಜೇನ ಕೌಂತೇಯ ನಿಬದ್ದಃ ಸ್ವೇನ ಕರ್ಮಣಾ /
ಕರ್ತುಂ ನೇಚ್ಚಸಿಯನ್ಮೋಹಾತ್ ಕರಿಷ್ಯಸ್ಯವಶೋಪಿ ತತ್ // ಅ ೧೮ ಶ್ಲೊ ೫೯-೬೦
ಅರ್ಜುನನ ಸ್ವಭಾವವನ್ನು , ಪೂರ್ತಿ ಅರಿತ ಕೃಷ್ಣ , ಧೃಢ ಕಂಠದಿಂದ ಹೇಳುವ ಮಾತುಗಳು ಮೇಲಿನ ಶ್ಲೋಕದವು .ಕುಮಾರ ವ್ಯಾಸನು , ಅರ್ಜುನನ ಈ ಕ್ಷಾತ್ರ ಸ್ವಭಾವವನ್ನು ಜನಮೇಜಯನಿಗೆ ಸೂತ ಪುರಾಣಿಕರ ಬಾಯಲ್ಲಿ ಇನ್ನೊಂದು ರೀತಿಯಲ್ಲಿ ಹೇಳಿಸುತ್ತಾನೆ .

- Login or register to post comments
- 214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: