ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು (ಇನ್ನೂ ಮುಂದುವರಿದುದು )
ತ್ರಿಗುಣಗಳೇ ಜಗತ್ತಿನ ಮೂಲ ಸ್ವಭಾವಗಳೆಂದು ಗುರುತಿಸಲ್ಪಟ್ಟ ನಂತರ, ಈ ಮೂರು ಗುಣಗಳಾಚೆಗಿನದೇ ಪರತತ್ವವೆಂದು ಗೀತೆ ಪ್ರತಿಪಾದಿಸುತ್ತದೆ .
ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಸ್ಯತಿ /
ಗುಣೇಭ್ಯಶ್ಚ ಪರಂವೇತ್ತಿ ಮದ್ಭಾವಂ ಸೋಧಿಗಚ್ಚತಿ // (ಭಗವದ್ಗೀತೆ ಅ ೧೪ , ಶ್ಲೋ ೧೯)
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹ ಸಮುದ್ಭವಂ /
ಜನ್ಮ ಮೃತ್ಯು ಜರಾ ದುಃಖೈರ್ವಿಮುಕ್ತೋಮೃತಮಶ್ನುತೇ //( ಭಗವದ್ಗೀತೆ ಅ ೧೪ ಶ್ಲೋ ೨೦)
ದೇಹದಲ್ಲೇ ಉತ್ಪನ್ನವಾಗುವ , ಈ ಮೂರು ಗುಣಗಳಾಚೆಗೆ ನಡೆದು ಜನನ , ಮರಣ , ಮುಪ್ಪು , ಸಂಕಟಗಳಿಂದ ಮುಕ್ತನಾದ ಆತ್ಮನು , ಅಮೃತ ಪದವನ್ನು ಪಡೆಯುವನು .
ಇಂಥ ಅವಸ್ಠೆಗೆ ಮುಟ್ಟುವ ಪೂರ್ವದಲ್ಲಿ , ಈ ಮನಸ್ಸು ಅನುಭವಿಸುವ , ಆಶಿಸುವ , ಪತಿತವಾಗುವ , ಹಾಗೆಯೇ ಉದ್ದಾರದ ಮಾರ್ಗಗಳನ್ನು ಕಂಡುಕೊಳ್ಳುವ ರೀತಿಗಳನ್ನು, ಭಗವದ್ಗೀತೆಯಷ್ಟು ಪರಿಣಾಮಕಾರಿಯಾಗಿ ಮಂಡಿಸಿರುವ ತಾತ್ವಿಕ ಗ್ರಂಥ , ತುಂಬಾ ಅಪರೂಪ . ಈ ಅವಸ್ಥೆಗೆ ಮುಟ್ಟಿದ ನಂತರದ ಸ್ಥಿತಿಯನ್ನೂ ಸಹ , ಅಷ್ಟೇ ಪರಿಣಾಮಕಾರಿಯಾಗಿ ಗೀತೆ ಚಿತ್ರಿಸುತ್ತದೆ .
ಧ್ಯಾಯತೋ ವಿಷಯಾನ್ ಪೂಂಸಃ ಸಂಗಸ್ತೇಷೂಪಜಾಯತೇ /
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಭಿಜಾಯತೇ //
ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ /
ಸ್ಮೃತಿ ಭ್ರಂಶಾದ್ಬುದ್ದಿನಾಶೋ ಬುದ್ದಿ ನಾಶಾತ್ಪ್ರಣಶ್ಯತಿ // (ಭಗವದ್ಗೀತೆ ಅ ೨ , ಶ್ಲೋ ೬೨-೬೩
ವಿಷಯಗಳನ್ನೇ ಧ್ಯಾನಿಸುವವನಿಗೆ ವಿಷಯಾಸಕ್ತಿಯುಂಟಾಗುತ್ತದೆ . ಆಸಕ್ತಿಯು ಕಾಮಕ್ಕೆ ಮೂಲವಾಗುತ್ತದೆ , ಕಾಮವು ತಡೆ ಹಿಡಿದರೆ ಕ್ರೋಧವು ; ಕ್ರೋಧದಿಂದ ಎಚ್ಚರ ತಪ್ಪುವಿಕೆ , ಎಚ್ಚರ ತಪ್ಪುವಿಕೆಯಿಂದ ಬುದ್ದಿ ನಾಶ , ಬುದ್ದಿ ನಾಶವಾದ ವ್ಯಕ್ತಿ ಕೇಡಿಗೀಡಾಗುತ್ತಾನೆ .
ಇದು ಮನಸ್ಸಿನ ಪತನದ ಒಂದು ಪ್ರಭಾವಿ ಚಿತ್ರಣ . ಆಧುನಿಕ ಮನಶ್ಶಾಸ್ತ್ರಜ್ಝರು, ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಎರಡು ಸ್ತರಗಳಿರುತ್ತವೆಂದು ಪ್ರತಿಪಾದಿಸುತ್ತಾರೆ . ಒಂದು ಜಗತ್ತಿನ ವ್ಯಾಪಾರದಲ್ಲಿ ನಿರತವಾದ ತೋರ ಮನಸ್ಸೆಂದೂ ;ಇನ್ನೊಂದು ಇಂದ್ರಿಯಗಳ ಗ್ರಹಿಕೆಗೆ ಜವನಿಕೆಯಾದ ಆಳ ಮನಸ್ಸೆಂದೂ , ಈ ಆಳ ಮನಸ್ಸೆಂಬುದು ತೋರ ಮನಸ್ಸು ರೂಢಿಸಿಕೊಂಡ , ನಾಗರಿಕ ಶಿಷ್ಟಾಚರಗಳಿಗೆ ಹೊರತಾದ ,ಪ್ರಾಕೃತಿಕ ಸ್ವಭಾವದ ; ಎಲ್ಲ ಮೃಗೀಯ ಭಾವನೆಗಳಿಂದ ಕೂಡಿರುವ ಮತ್ತು ವಿಕಾಸದ ಹಂತದಲ್ಲಿ ,ಜೀವಿ ಮೆಟ್ಟಿ ಬಂದ ಮೆಟ್ಟಿಲುಗಳ , ಅನುಭವಗಳ ಮುದ್ರಣಗಳಿಂದ ಕೂಡಿದ , ಸಂಕೀರ್ಣ ಸ್ವಭಾವದ ವಿಭಾಗವೆಂದೂ ಮನಸ್ಸನ್ನು ವಿಭಾಜಿಸುತ್ತಾರೆ .
ತೋರ ಮನಸ್ಸಿನಲ್ಲಿ ಅದುಮಲ್ಪಟ್ಟ ಕಾಮನೆಗಳೇ, ವ್ಯಕ್ತಿಯ ಅರಿವಿಗೆ ಬಾರದಂತೆ ಆಳ ಮನಸ್ಸಿನಲ್ಲಿ ಹುದುಗಿರುತ್ತವೆಂದೂ ,ಆದರೆ ಅವು ನಾಶವಾಗಿರುವುದಿಲ್ಲವೆಂದು ಪ್ರತಿಪಾದಿಸುತ್ತಾರೆ .ಸಂದರ್ಭ ಒದಗಿದಾಗ ಸ್ವಪ್ನಾದಿಗಳಲ್ಲಿ ವಿಕೃತ ರೂಪ ಧರಿಸಿ, ಅಥವಾ ಬೇರಾವುದೋ ಅಸಹಜ ರೂಪದಲ್ಲಿ ಅವು ಹೊರ ಬರಲು ತುಡಿಯುತ್ತಿರುತ್ತವೆ .
ಈ ಆಳ ಮನಸ್ಸು ಮತ್ತು ತೋರ ಮನಸ್ಸಿನ ನಡುವಣ ಘರ್ಷಣೆಯೇ , ಅನೇಕ ಮನೋ ರೋಗಗಳೀಗೆ ; ಮನೋದೈಹಿಕ ಬೇನೆಗಳಿಗೆ ಕಾರಣವಾಗಿರುತ್ತದೆ .
ಆಧುನಿಕ ಮನಶ್ಶಾಸ್ತ್ರಜ್ಝರ ಅಭಿಪ್ರಾಯದಲ್ಲಿ , ಅದುಮಿಟ್ಟ ಕಾಮ ಭಯಂಕರ ಶತ್ರು ; ಅದು ಹುಚ್ಚಿನಲ್ಲಿ ಬುದ್ದಿ ಮಾಂದ್ಯದಲ್ಲಿ ಪರಿಣಮಿಸಬಹುದು .
ಗೀತೆಯ ಮೇಲಣ ಶ್ಲೋಕಗಳು ಆಧುನಿಕ ಅಭಿಪ್ರಾಯಗಳನ್ನೇ ಪ್ರತಿಪಾದಿಸುತ್ತವೆ .
ಇಂದ್ರಿಯಾಣಂ ಹಿ ಚರತಾಂ ಯನ್ಮನೋನು ವಿಧೀಯತೇ /
ತದಸ್ಯ ಹರತಿ ಪ್ರಜ್ಝಾಂ ವಾಯುರ್ನಾವಮಿವಾಂಭಸಿ // ಭಗವದ್ಗೀತೆ ಅ ೨ ಶ್ಲೋ ೬೭
ಮನಸ್ಸು ಚಂಚಲವಾದ ಇಂದ್ರಿಯಗಳ ಹಿಂದೆ ಹರಿಯತೊಡಗಿದರೆ , ಬಿರಗಾಳಿಯು ಸಾಗರದಲ್ಲಿ ನಾವೆಯನ್ನು ಎಳೆದೊಯ್ಯುವಂತೆ ,ಮನಷ್ಯನ ಬುದ್ದಿಯನ್ನು ದೆಶೆಗೆಡಿಸಿ ಎಳೆದೊಯ್ಯುವುಇದು .
ಈ ರೀತಿಯ ಪತನ ಮುಖಿಯಾದ ಮನಸ್ಸಿನ ಚಿತ್ರಣವನ್ನು ಕೊಟ್ಟಿರುವಂತೆಯೇ, ಧೃಢ ಮನಸ್ಸಿನ ಚಿತ್ರಣವನ್ನೂ ಸಹ ಗೀತೆ ಸಮರ್ಥವಾಗಿ ಚಿತ್ರಿಸುತ್ತದೆ .
ಅಪೂರ್ಯಮಾಣಮಚಲ ಪ್ರತಿಷ್ಟಂ /
ಸಮುದ್ರಮಾಪಃ ಪವಿಶಂತಿ ಯದ್ವತ್ /
ತದ್ವತ್ ಕಾಮಾಯಂ ಪ್ರವಿಶಂತಿ ಸರ್ವೇ /
ಸ ಶಾಂತಿಮಾಪ್ನೋತಿ ನ ಕಾಮ ಕಾಮಿ //
ಎಲ್ಲ ಕಡೆಗಳಿಂದಲೂ ಹರಿದು ಬರುವ ನೀರಿನಿಂದ ತುಂಬಲ್ಪಡುತ್ತಿದ್ದರೂ ,ಅಚಲವು ಸ್ಥಿರವೂ ಆಗಿರುವ ಸಮುದ್ರವನ್ನು ಸಕಲ ಪ್ರವಾಹಗಳೂ ಬಂದು ಸೇರುವಂತೆ ; ಎಲ್ಲ ಕಾಮನೆಗಳು ಬಂದು ಧುಮುಕಿದರೂ ,ಯಾವನ ಮನಸ್ಸು ಸ್ಥಿರವೋ ? ಅವನು ಶಾಂತಿಯನ್ನು ಪಡೇಯುವನು . ಕಾಮನೆಗಳ ಬೆನ್ನು ಬಿದ್ದವನಿಗೆ ಶಾಂತಿಯು ನಿಲುಕಲಾರದು .
ಈ ರೀತಿಯ ಧೃಢ ಮನಸ್ಸನ್ನು ಸಂಪಾದಿಸಲು , ಬೇಕಾದ ಸಾಧನ ಸಲಕರಣೆಗಳನ್ನು ,ಸಾಧನೆಗಳನ್ನು ಅಷ್ಟೇ ಪರಿಣಮಕಾರಿಯಾದ ರೀತಿಯಲ್ಲಿ , ಗೀತೆಯು ೫ ಮತ್ತು ೬ನೆಯ ಅಧ್ಯಾಯಗಳಲ್ಲಿ ವಿವರಿಸುತ್ತದೆ . ಈ ದೃಷ್ಟಿಯಿಂದ ಭಗವದ್ಗೀತೆ ಬರಿಯ ಮನಶ್ಶಾಸ್ತ್ರೀಯ ಗ್ರಂಥ ಮಾತ್ರವಾಗಿರದೆ , ಮನೋಚಿಕಿತ್ಸಕ ಗ್ರಂಥವೂ ಆಗಿದೆ .
ಅಪಾರ ವೇಗ ಮತ್ತು ಸ್ಪರ್ಧಾಪೂರ್ಣವಾದ , ಈ ಆಧುನಿಕ ಯುಗದಲ್ಲಿ ಜೀವಿಸುವ ಮನುಷ್ಯನ ಮನಸ್ಸು ,ಅಂದಿನ ಅರ್ಜುನನಿಗಿಂತ ಹೆಚ್ಚು ತಳಮಳಭರಿತವಾಗಿದೆ , ಗೀತೆಯ ತತ್ವಗಳು ಅವುಗಳ ಅನುಸರಣೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಗಳನ್ನು ನೀಡಬಲ್ಲದು . ಈ ಲೇಖನವನ್ನು ಮುಗಿಸುವ ಮುನ್ನ , ಗೀತೆ ಶಾಂತ ಮನಸ್ಸಿನ ಚಿತ್ರಣವನ್ನು ನೀಡಿರುವುದನ್ನು ಗಮನಿಸಿ :
ಅದ್ವೇಷ್ಟಾ ಸರ್ವ ಭೂತಾನಾಂ ಮೈತ್ರಃ ಕರುಣ ಏವಚ /
ನಿರ್ಮಮೋ ನಿರಹಂಕಾರಃ ಸಮ ದುಃಖ ಸುಖ ಕ್ಷಮೀ //
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ಧೃಢ ನಿಶ್ಚಯಃ /
ಮಯ್ಯರ್ಪಿತ ಮನೋ ಬುದ್ದಿರ್ಯೋ ಮದ್ಭಕ್ತಃ ಸಮೇ ಪ್ರಿಯ //
ಯಸ್ಮನ್ನೋ ದ್ವಿಜತೇ ಲೋಕೋ ಲೋಕಾನ್ನೋದ್ವಿಜತೇಚಯಃ /
ಹರ್ಷಾಮರ್ಷ ಭಯೋದ್ವೇಗೈ ರ್ಮುಕ್ತೋ ಯಃ ಸಚಮೇ ಪ್ರಿಯಃ //
ಯಾವನು ದ್ವೇಷವಿಲ್ಲದವನು , ಪ್ರಾಣಿಗಳೆಲ್ಲರ ಮಿತ್ರನು , ಕೃಪಾ ಪೂರ್ಣನು , ಮಮತ್ವವಿಲ್ಲದ ನಿರಹಂಕಾರಿಯು ; ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವವನು ,ಕ್ಷಮಾಗುಣ ಪೂರ್ಣನು .
ಸರ್ವದಾ ಸಂತುಷ್ಟನು , ಯೋಗಿ , ಸಂಯಮಿ , ಧೃಢ ನಿಶ್ಚಯಿ , ಮನಸ್ಸು ಬುದ್ದಿಗಳನ್ನು ನನಗೆ ಅರ್ಪಿಸಿರುವವನು , ಅವನು ನನಗೆ ಪ್ರಿಯನು .
ಯಾವನಿಂದ ಜನರಿಗೆ ಆತಂಕವಿಲ್ಲ ; ಯಾವನು ಜನರಿಂದ ಆತಂಕ ಪಡೂವುದಿಲ್ಲ ,ಯಾವನು ಹರ್ಷ, ಕ್ರೋಧ , ಭಯ , ಉದ್ವೇಗಗಳಿಂದ ಮುಕ್ತನು ,ಅವನು ನನಗೆ ಪ್ರಿಯನು .

- Login or register to post comments
- 305 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: