ತಪ್ಪು-ಒಪ್ಪು
ಹಳೆಗನ್ನಡ
ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ
**********
ಹೊಸಗನ್ನಡ
ಇದು ತಪ್ಪು ಇದು ಒಪ್ಪು
ಎಂದಿಶ್ಟೊಂದು ತಿಳಿದವರು ಹೇಳುತ್ತಾರೆ
ಆದರೆ ತಪ್ಪಿನಲ್ಲೇ ಒಪ್ಪು, ಒಪ್ಪಿನಲ್ಲೇ ತಪ್ಪು ಹೊಂದಿಕೊಂಡಿರುವಾಗ
ತಪ್ಪು ಮತ್ತು ಒಪ್ಪುಗಳನ್ನ ಈ ರೀತಿ ಬೇರೆ ಮಾಡುವುದು ಸರಿಯೇ?

- Login or register to post comments
- 669 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ತಪ್ಪು-ಒಪ್ಪು
ಎಲ್ಲಿಂದ ಹೆಕ್ಕಿ ತೆಗಿದ್ರಿ?? ಸಕ್ಕತ್ತಾಗಿದೆ....
ಉ: ತಪ್ಪು-ಒಪ್ಪು
ನನ್ನ ತಲೆಯೊಳಗಿಂದ
ಆದರೆ 'ತೊಡರ್ಚು' ಪದವನ್ನ ಕವಿರಾಜಮಾರ್ಗದಿಂದ ಪಡೆದೆ.
ಸಿರಿವಿಜಯನ ಕಲಿತದ್ದು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ನನ್ನ ತಲೆಯೊಳಗಿಂದ
ಆದರೆ 'ತೊಡರ್ಚು' ಪದವನ್ನ ಕವಿರಾಜಮಾರ್ಗದಿಂದ ಪಡೆದೆ. ಸಿರಿವಿಜಯನ ಪ್ರಬಾವ ನನ್ನ ಮೇಲೆ ವಸಿ ಆಗಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಇದ೦ ಸಂಸ್ಕೃತವಲ್ಲವೇ?
______
ಬೊಳುಂಬು
ಉ: ತಪ್ಪು-ಒಪ್ಪು
ಒಳ್ಳೆಯ ಕೇಳ್ಮೆ, ನನ್ನಿ.
'ಇದಂ' ಸಕ್ಕದದಲ್ಲೂ ಇದೆ ಅನ್ಸುತ್ತೆ. ನನಗೆ ಸಕ್ಕದ ಅಶ್ಟೊಂದು ಗೊತ್ತಿಲ್ಲ. ಗೊತ್ತಿರುವವರು ಹೇಳಿ.
ಆದರೆ ನಾನು ಕನ್ನಡದ 'ಇದು'ವನ್ನ 'ಇದಂ' ಮಾಡಿದ್ದೇನೆ. ಆದರೆ ಅದು "ಇದುಂ" ಆಗಬೇಕಿತ್ತೇನೊ ಅಂತ ಈಗ ಅನ್ನಿಸುತ್ತಿದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಬೊಳುಂಬು,
ಸಕ್ಕದದ 'ಇದಂ' ಕನ್ನಡದ 'ಇದು' ವಿನಿಂದಲೇ ಆಗಿರುವುದಕ್ಕೆ ನನಗೆ ಪುರಾವೆಗಳು ಸಿಕ್ಕವು
ಎಮನೊ, ಬರೊ ದ್ರಾವಿಡ ಎಟಿಮಲಾಜಿಕಲ್ ನುಡಿಗಂಟು ನೋಡಿ
Ka. i- proximate demonstrative base; iva/īta, ivaḷ/īke, ivar/ivargaḷ, idu/itu/ittu, ivu this man, this woman, these persons, this thing, these things; adj
http://dsal.uchicago.edu/cgi-bin/philologic/search3advanced?dbname=burro...
ಸಕ್ಕದದ ಪ್ರಾಕ್ಟಿಕಲ್ ನುಡಿಗಂಟು( ಎಟಿಮಲಾಜಿಕಲ್ ಅಲ್ಲ)
idam [ i-d-ám ] n. (nm. ac. sg.: nm. m. ayam, f. iyam) this; the following (sts. refers to what immediately precedes); all this=the whole world (often with sárvam, vísvam, sakalam); w. prns.=here; just; ad. here; hither; now; herewith; just; thus.
http://dsal.uchicago.edu/cgi-bin/romadict.pl?page=40&table=macdonell&dis...
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
"ಸಕ್ಕದದ 'ಇದಂ' ಕನ್ನಡದ 'ಇದು' ವಿನಿಂದಲೇ ಆಗಿರುವುದಕ್ಕೆ ನನಗೆ ಪುರಾವೆಗಳು ಸಿಕ್ಕವು Smiling"
ಸಂಸ್ಕೃತದ ಇದಂ ಕನ್ನಡದ ಇದರಿಂದ ಬಂದಿದೆ ಅನ್ನೋ ಸಂಶೋಧನೆ ಅದ್ಭುತ . ಆದರೆ ಅದಂ ಸಂಸ್ಕೃತದಲ್ಲಿದೆಯೇ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ತಪ್ಪು-ಒಪ್ಪು
"ಅದಂ" ಹುಡುಕಿದೆ ಸಿಗಲಿಲ್ಲ, ಮನ್ನಿಸಿ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಅದಂ = ಅದನ್ನು. ಇದಂ = ಇದನ್ನು (ಕನ್ನಡ)
ಅಯಂ = ಇದಂ = ಇದು (ಸಂಸೃತ)
-ಹಂಸಾನಂದಿ
ಉ: ತಪ್ಪು-ಒಪ್ಪು
ಓ ಹಂಸನಂದಿಗಳ್ ಮುನ್ನವೇ ಅರುಹಿರ್ಪರ್...
ನನ್ನಿಗಳ್
ಉ: ತಪ್ಪು-ಒಪ್ಪು
ಇದಂ = ಇದು ಸಂಸ್ಕೃತದಲ್ಲಿ
ಇದಂ(ನ್) = ಇದನ್ನು ಕನ್ನಡದಲ್ಲಿ...
ಈಗ ಸಕ್ಕದದ ಇದಂ != ಕನ್ನಡದ ಇದು...
ಮತ್ತು
ಇದಂ ಮಿತ್ರ != ಇದು ಗೆಳೆಯ
ಇದಂ ಮಿತ್ತ = ಈ ಗೆಳೆಯ...
ಜಲಮಿದಂ = ಈ ನೀರು != ನೀರೀ
ಉ: ತಪ್ಪು-ಒಪ್ಪು
ಇಲ್ಲಿ ಕೆಲವು ಗೊಂದಲ
ತಪ್ಪಿದಂ ಒಪ್ಪಿದಂ
ಎಂತಿನಿದು ಪೇಳ್ವರ್( ಇಲ್ಲ ೞ ಅಲ್ಲ ಅನಿಸ್ತದೆ ) ಬಲ್ಲಿದರ್( ಬಲ್ಲರ್ ಇದೂ ನಡೆಯುವುದು)
ತಪ್ಪುಂ ಎಂಬುದು ಸರಿಯಿಲ್ಲ ಅನಿಸ್ತದೆ.
ಬಲ್ಲಿದರ್ ಅಂದ್ರೆ ತಿಳಿದರು ಅಂದ ಅಲ್ವ?ಇಲ್ಲವೇ ತಿಳಿದವರು ಅಂತಲೋ?
ಉ: ತಪ್ಪು-ಒಪ್ಪು
ಅಣ್ಣ.
"ತಡೆಯದೆ ಪೇೞ್ದೊಡಂತದಂತೆ ಪ್ರಾಸಂ .."
ಇದು ಕವಿರಾಜಮಾರ್ಗದ ಬಿಡಿ-೨, ೪೬ ನೇ ಪದ್ಯದಲ್ಲಿ ಬರುತ್ತೆ. ಇಲ್ಲೂ ಕೂಡ ಪೇೞ್ ಅಂತಾನೆ ಬಳಸಿರುವುದು.
ಪೇೞ್ - ಒಪ್ಪು
ಪೇಳ್ - ತಪ್ಪು
ಬಲ್ಲ+ಇದರ್= ಗೊತ್ತು+ಇದರ್= ಗೊತ್ತು+ಇರ್ದರ್= ಗೊತ್ತಿರುವವರ್.
ಬಲ್ಲರ್ ಸರಿಯಲ್ಲ ಅನ್ಸುತ್ತೆ. ಬಲ್+ಅರ್ , ಇಲ್ಲಿ ಅರ್ ಅಂದ್ರೇನು? ಕೆಳಗೆ ನೋಡಿ
ಮಾದರಿ
ಕೂರ್ಪನ್ x ಕೂರನ್ ( ಪ್ರೀತಿಪಾತ್ರನಾದವನು x ಪ್ರೀತಿಪಾತ್ರನಲ್ಲದವನು)
ಕೂರ್ಪರ್ x ಕೂರರ್ ( ಪ್ರೀತಿಪಾತ್ರವಾದವರು x ಪ್ರೀತಿಪಾತ್ರವಲ್ಲದವರ್)
ಕೂರ್+ಅರ್ , ಇಲ್ಲಿ 'ಅರ್' ಅಲ್ಲಗಳೆ(negative) ಪ್ರತ್ಯಯ. ಬಲ್ಲರ್ = ತಿಳಿದಿಲ್ಲದವರು ಅಂತ ಆಗುತ್ತೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಬಲ್ಲರ್ ಸರಿಯಿದೆ. ನಿಮಗಿದು ಗೊತ್ತಿರಬಹುದು. ಅನ್, ಅಳ್, ಅದು, ಅರ್, ಅಯ್, ಇರ್, ಎನ್, ಎಮ್ ಇದ್ದಾನೆ, ಇದ್ದಾಳೆ.............ಇದ್ದೇನೆ, ಇದ್ದೇವೆಗೆ ಸಂಕುಚಿತ ರೂಪಗಳು. ಹಾಗಾಗಿ ಬಲ್ಲ+ಅನ್=ಬಲ್ಲನ್, ಬಲ್ಲ+ಅರ್=ಬಲ್ಲರ್ ಸರಿ ರೂಪ.
ಗಮನಿಸಿ ರನ್ನನ ಗದಾಯುದ್ಧದ ಪದ್ಯ
ಪರಿಣತವಯಸರೆಮಿರ್ಕ-
ಣ್ಗುರುಡರೆಮೆಮಗಿಂಬುಕಯ್ವುದುಚಿತಂ ನಿನ್ನೀ||
ಗುರು ನುಡಿದ ನುಡಿಗೊಡಂಬಡು
ಗುರುವಚನಮಲಂಘ್ಹನೀಯಮೆಂಬುದು ಮಗನೇ||
ವೃದ್ಧ ಧೃತರಾಷ್ಟ್ರ ಮತ್ತು ಗಾಂಧಾರಿಯರು ದುರ್ಯೋಧನನನ್ನುೞಿದು ತಮ್ಮೆಲ್ಲ ಮಕ್ಕಳನ್ನು ಕಳೆದುಕೊಂಡಾಗ ದುರ್ಯೋಧನನಿಗೆ ಹೇೞುವ ಮಾತುಗಳಿವು
ಪರಿಣತವಯಸರೆಮ್=ತುಂಬಿದ ವಯಸ್ಸಿನವರಿದ್ದೇವೆ. ಇರ್ಕಣ್ಗುರುಡರೆಮ್= ಎರಡೂ ಕಣ್ಣುಗಳಿಲ್ಲದ ಕುರುಡರಿದ್ದೇವೆ. ಇತ್ಯಾದಿ ಇಲ್ಲಿ ಇದ್ದೇವೆ ಎಂಬರ್ಥದಲ್ಲಿರುವ ಎಮ್ ರೂಪ ನೋಡಿ.
ಉ: ತಪ್ಪು-ಒಪ್ಪು
ಹಾಗಾದರೆ,
ಬಲ್ಲನ್, ಬಲ್ಲವನ್(=ಬಲ್ಲವಂ, ಇದು ಕ.ರಾ.ಮ ದಲ್ಲಿ ಬಳಕೆಯಾಗಿದೆ) ಇವುಗಳ ಬೇರೆತನವೇನು?
ಬಲ್ಲರ್, ಬಲ್ಲಿದರ್ - ಇವುಗಳ ಬೇರೆತನವೇನು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಮಿಶ್ರಿಕೋಟಿಗಳೇ,
ಇದು (ಕನ್ನಡ) ಎಂಬುದಕ್ಕೆ ಸಮಾನಾರ್ಥಕ ಸಕ್ಕದಪದ - "ಇದಂ" ಇದ್ದಂತೆ,
ಅದು (ಕನ್ನಡ) ಎಂಬುದಕ್ಕೆ ಸಕ್ಕದದಲ್ಲಿ ಪದವಿದೆ (ಸಮಾನವಲ್ಲದಿದ್ದರೂ ಹತ್ತಿರದ ಅರ್ಥ) -> "ಅದಸ್"
ಯಾವುದರಿಂದ ಯಾವುದು ಎಂಬುದು ಮತ್ತೆ ಅವರವರ ಕಲ್ಪನೆಗೆ ಬಿಟ್ಟದ್ದು!
ಹುತ್ತವ ಬಡಿದರೆ ಹಾವು ಸಾಯ್ವುದೆ?
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ತಪ್ಪು-ಒಪ್ಪು
ಬೆನಕರೆ, ನನಗೆ ಈ ಶ್ಲೋಕ ನೆನಪಿಗೆ ಬಂತು.
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೆ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ
ಇಲ್ಲಿ "ಪೂರ್ಣಮದಃ" ಎಂಬುದರಲ್ಲಿ ಇರುವುದು ಅದಸ್ ಅಲ್ಲವೇ ?
ಉ: ತಪ್ಪು-ಒಪ್ಪು
ಸುನೀಲಣ್ಣ,
ಇದರ ಅರಿತನೂ ವಸಿ ಬಿಡಿಸಿ ಹೇಳಪ್ಪ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ಇಲ್ಲಿ ಹೇಳಿದ್ದಾರೆ
http://thatskannada.oneindia.in/column/vichitranna/250406infinity.html
______
ಬೊಳುಂಬು
ಉ: ತಪ್ಪು-ಒಪ್ಪು
ಸುನಿಲರೇ,
ಹೌದು; ಸರಿಯಾಗಿದೆ. ಇದು ಅದೇ "ಅದಸ್".
ಪೂರ್ಣವದು ಪೂರ್ಣವಿದು ಪೂರ್ಣದಿಂ ಪೂರ್ಣ ಪುಟ್ಟುವುದು!
ಪೂರ್ಣಕೆ ಪೂರ್ಣವಂ ತರಲ್ ಪೂರ್ಣ ತಾನುಳಿಯುವುದು!
ಶ್ರೀವತ್ಸ ಜೋಷಿಯವರು "ಅನಂತ"ವನ್ನು ಪೂರ್ಣವೆಂದಿದ್ದು ನನಗೇಕೋ ಇನ್ನೂ ಸರಿಯೆನಿಸುತ್ತಿಲ್ಲ.
ಬಹುಶಃ ಈ ಪೂರ್ಣ ಅನಂತವಲ್ಲ; ಶೂನ್ಯ! ಏಕೆಂದರೆ ದಶಮಾನ ಸಂಖ್ಯೆಗಳಲ್ಲಿ "ಪರಿಪೂರ್ಣ"ವಾದುದು ಒಂಭತ್ತನ್ನೂ ಮೀರಿದ ಶೂನ್ಯ!
ಬಹುಶಃ ಗಣಿತದಲ್ಲಿ ಹೀಗೆನ್ನಬಹುದು:
ಸೊನ್ನೆಯದು ಸೊನ್ನೆಯಿದು ಸೊನ್ನೆಯಿಂದಲೆ ಸೊನ್ನೆ ಹುಟ್ಟುವುದು!
ಸೊನ್ನೆಗೆ ಸೊನ್ನೆಯಂ ತರಲ್ ಸೊನ್ನೆ ತಾನುಳಿಯುವುದು!!
ಏಕೋ, ಸಿರಿಭೂವಲಯದ ಧೂಳು ಕೊಡವಬೇಕೆನಿಸುತ್ತಿದೆ!!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ತಪ್ಪು-ಒಪ್ಪು
ಬೆನಕ,
ನಿಮ್ಮ ತರ್ಜಮೆ ಬಲೇ ಚಾಂಗಾಗಿದೆ.
______
ಬೊಳುಂಬು
ಉ: ತಪ್ಪು-ಒಪ್ಪು
ಬೆನಕ,
ಸಕ್ಕತ್, ನೀವು ಹೇಳಿರುವ ಹಾಗೆ ನಾನು ಉಂಕಿಸಿದ್ದೆ. ಪೂರ್ಣ != ಅನಂತ ಮತ್ತು ಅನಂತ != ಪೂರ್ಣ
ಕುಮುದೇಂದು ಮುನಿ ವಿರಚಿತ 'ಸಿರಿಬೂವಲಯ' ಓದಿದ ಮೇಲೆ ಇದು ಇನ್ನಶ್ಟು ಸರಿ ಎನಿಸಿತು.
ಅದರಲ್ಲಿ ಕನ್ನಡದ ಅಂಕಿಗಳು (೧,೨,೩...೯) '೦'(ಸೊನ್ನೆಯಿಂದಲೇ) ಹೇಗೆ ಬಂದಿದೆ ಅಂತ ತೋರಿಸಿದ್ದಾರೆ.
ಸಿರಿಬೂವಲಯದ ಸ್ಲೋಕ ಹೀಗಿದೆ.
"ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ
ಉನ್ನತವಾದಂಕಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು"
ಬೆನಕರೂ ಹೇಳಿದಾ ಹಾಗೆ ಸೊನ್ನೆಯೊಂದೇ 'ಪೂರ್ಣ'. ಮಿಕ್ಕಲ್ಲೆವೂ ಅಪೂರ್ಣ. (ನೋಡುವುದಕ್ಕೂ)
ತುಂಬಾ ನನ್ನಿಗಳು ಬೆನಕರಿಗೆ ಈ ವಿಸ್ಯವನ್ನು ಮನದಟ್ಟು ಮಾಡಿಸಿದ್ದಕ್ಕೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ತಪ್ಪು-ಒಪ್ಪು
ತರಾಸುರವರ ಒಂದು ಕಥೆಯ ಹೆಸರು "೦-೦=೦"
ಉ: ತಪ್ಪು-ಒಪ್ಪು
ಇಲ್ಲಿ ಇದಂ ಎಂದರೆ ಇದ(ನ್)=ಇದನ್ನು ಇದನ್ನು ತಪ್ಪು ಇದನ್ನು ಒಪ್ಪು ಬಲ್ಲಿದರು ಹೇೞುತ್ತಾರೆ (ಹೇೞುವರು=ಪೇೞ್ವರ್). ತಪ್ಪಿನಲ್ಲಿ ಒಪ್ಪು, ಒಪ್ಪಿನಲ್ಲಿ ತಪ್ಪು ಸೇರಿ ಹೋಗಿರುವಾಗ ತಪ್ಪೊಪ್ಪುಗಳನ್ನು ಬೇಱೆ ಬೇಱೆ ಮಾಡುವುದು ಸರಿಯೇ?
ಉ: ತಪ್ಪು-ಒಪ್ಪು
ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ (ಬೇರೆ ಅಲ್ಲ ಬೇಱೆ ಸರಿ)
ಇಲ್ಲೊಂದು ತಪ್ಪೊಪ್ಪು.
ಒಪ್ಪಾದ ರೂಪ ಈ ಕೆೞಗಿನದು
ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳುಂ ಬೇಱೆ ಮಾೞ್ಪುದು ಸಯ್ತೇ
ಉ: ತಪ್ಪು-ಒಪ್ಪು
ಇನ್ನೊಂದು ಒಪ್ಪು
ತಪ್ಪುಮಿದಂ ಒಪ್ಪುಮಿದಂ
ಎಂತಿನಿತು ಪೇೞ್ವರ್ ಬಲ್ಲಿದರ್
ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು
ತಪ್ಪೊಪ್ಪುಗಳಂ ಬೇಱೆ ಮಾೞ್ಪುದು ಸಯ್ತೇ (ತಪ್ಪೊಪ್ಪುಗಳುಂ ಬದಲಾಗಿ ತಪ್ಪೊಪ್ಪುಗಳಂ)
ಉ: ತಪ್ಪು-ಒಪ್ಪು
ತಮಗೆ ನನ್ನಿಗಳು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು